ಕುಮಾರವ್ಯಾಸನ ಯುದ್ಧವರ್ಣನೆಯಲ್ಲಿನ ಕಲ್ಪನಾಶಕ್ತಿ ಹಾಗೂ ಯುದ್ಧದ ಬಗೆಗೆ ಅವನ ಅಭಿಮತ
ಮಹಾಭಾರತದ, ಮಹಾಕಥಾನಕದಲ್ಲಿ ಕುರುಕ್ಷೇತ್ರದಲ್ಲಿ ಹದಿನೆಂಟು ದಿವಸ, ಹದಿನೆಂಟು ಅಕ್ಷೌಹಿಣಿ ಸೈನ್ಯದ ನಡುವೆ ನಡೆಯುವ ಮಹಾಯುದ್ಧವಲ್ಲದೆ, ಅನೇಕ ಸಣ್ಣ ಪುಟ್ಟ ಯುದ್ಧಗಳು, ಕಾಳಗಗಳ ವಿವರಣೆ, ವರ್ಣನೆಗಳು, ವೈವಿಧ್ಯಮಯವಾಗಿ ನಿರೂಪಿಸ್ಪಲ್ಪಟ್ಟಿವೆ. ಕುಮಾರವ್ಯಾಸನ ಯುದ್ಧದ ವರ್ಣನೆಗಳು ಕದನಕುತೂಹಲರಾಗವನ್ನು ವಿಸ್ತಾರಮಾಡಿದಂತೆ ನಿಧಾನವಾಗಿ ಆರಂಭಗೊಂಡು, ಧಪ ಧಪ ಧಪ ಸಾ ಎಂದು ಸುರಿಮಳೆಯಾಗಿ ಸುರಿದು ಮತ್ತೆ ಇಳಿಮುಖವಾಗಿ ಶಾಂತ ಮುಕ್ತಾಯ ಕಂಡಂತೆ, ಸಾವಿನ ಶಾಂತಿ, ವಿಷಾದ, ಖಿನ್ನತೆಗಳಲ್ಲಿ ಮುಕ್ತಾಯ ಕಾಣುತ್ತವೆ.
ಸೈನ್ಯದಲ್ಲಿನ ಸೈನಿಕರು (ಪದಾತಿಗಳು) ಅತಿರಥರು, ಮಹಾರಥರು, ಅಶ್ವಗಳು, ಗಜಗಳು, ರಥಗಳು ಈ ಲೆಕ್ಕವೇ ತಲೆಧಿಮ್ಮೆನಿಸುತ್ತದೆ. ಅಸ್ತ್ರಶಸ್ತ್ರಗಳ, ಪ್ರಯೋಗ, ಉಪಸಂಹಾರಗಳ ವಿವರಣೆ ನಿಬ್ಬೆರಗಾಗಿಸುತ್ತದೆ. ಯುದ್ಧರಂಗದಲ್ಲಿನ ಸಾವು, ನೋವು, ಛಿನ್ನಭಿನ್ನ ದೇಹಗಳು ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದಿರುವ ದೃಶ್ಯ, ಕರುಣೆ, ಭಯಾನಕ ಜುಗುಪ್ಸೆಗಳನ್ನುಂಟು ಮಾಡಿ ಯುದ್ಧದಿಂದುಂಟಾಗುವ ವಿನಾಶದ ಪರಿಕಲ್ಪನೆಯನ್ನು ಮೂಡಿಸುತ್ತದೆ. ಭೀಮ-ಬಕ, ಭೀಮ-ಹಿಡಿಂಬ, ಭೀಮ-ಕೀಚಕ, ಭೀಮ-ಜರಾಸಂಧ, ಅರ್ಜುನ-ಕಿರಾತ, ಇಂತಹ ದ್ವಂದ್ವ ಯುದ್ಧಗಳಲ್ಲದೆ, ಭೀಮ ಏಕಾಂಗಿಯಾಗಿ ಸುಶರ್ಮನ ಸೈನ್ಯದಿಂದ ವಿರಾಟನನ್ನು ಬಿಡಿಸಿಕೊಂಡು ಬರುವುದು, ಅರ್ಜುನ ಏಕಾಂಗಿಯಾಗಿ ಕುರುಸೈನ್ಯವನ್ನು ಸಮ್ಮೋಹಗೊಳಿಸುವುದು, ಅಭಿಮನ್ಯುವಿನಂತಹ ಹದಿಹರೆಯದ ಬಾಲಕ ಏಕಾಂಗಿಯಾಗಿ ಕೌರವ ಸೈನ್ಯದ ಮಹಾರಥಿಗಳನ್ನೆದುರಿಸುವುದು ಇವುಗಳಲ್ಲದೆ, ಮರ್ತ್ಯ-ರಾಕ್ಷಸರು, ಮರ್ತ್ಯರು-ಪಾತಾಳ ಲೋಕದವರು ಇವರುಗಳ ನಡುವೆ ನಡೆವ ಯುದ್ಧ ಹೀಗೆ ವಿಭಿನ್ನ ರೀತಿಯ ಯುದ್ಧಗಳಿದ್ದರೂ ಕುರುಕ್ಷೇತ್ರದ ಮಹಾಯುದ್ಧ ಈ ಎಲ್ಲ ಯುದ್ಧಗಳಿಗೂ ಕಲಶಪ್ರಾಯವಾದದ್ದು. ಭೀಷ್ಮ, ದ್ರೋಣ, ಕರ್ಣ ಹೀಗೆ ಒಬ್ಬೊಬ್ಬರ ಸೇನಾಧಿಪತ್ಯದಲ್ಲಿಯೂ ಒಂದೊಂದು ರೀತಿಯ ರುದ್ರಕಾಳಗ. ಮಹಾಭಾರತದ ಯುದ್ಧದಲ್ಲಿ, ಕೌರವ ಸೈನ್ಯದ ಸೇನಾಧಿಪತಿಗಳ ಹೆಸರಿನಲ್ಲಿಯೇ ಪರ್ವಗಳನ್ನು ಹೆಸರಿಸಲು ಕಾರಣವಾದರೂ ಏನಿರಬಹುದು? “ಭೀಷ್ಮ ಪರ್ವ”, “ದ್ರೋಣ ಪರ್ವ”, “ಕರ್ಣ ಪರ್ವ”, “ಶಲ್ಯ ಪರ್ವ” ಇತ್ಯಾದಿ - ಕಡೆಯದು ಮಾತ್ರ “ಗದಾ ಪರ್ವ”. ಪಾಂಡವರ ಇಡೀ ಸೈನ್ಯದ ಅನಭಿಷಿಕ್ತಸೇನಾಧಿಪತಿ, ಕೃಷ್ಣ ಮಾತ್ರನೆಂದೇ? ಕೌರವರ ಸಂಖ್ಯಾಬಲ ಹೆಚ್ಚಿದ್ದು, ಭೀಷ್ಮ ದ್ರೋಣರಂತಹ ಹಿರಿಯರು ಸೈನ್ಯಾಧಿಪತ್ಯ ವಹಿಸಿದರೆಂದೇ? ಸೇನಾಧಿಪತಿಗಳು ನಿವೃತ್ತರಾದಾಗ ಅಥವಾ ಮಡಿದಾಗ ಬೇರೆ ಸೇನಾಧಿಪತಿಯನ್ನು ವಿಧ್ಯುಕ್ತವಾಗಿ ಅಭಿಷೇಕಮಾಡಿ ನೇಮಿಸುವ ವಿಧಿ ನಿರೂಪಿತವಾಗಿದೆ. ಕುರುಕ್ಷೇತ್ರದ ಮಹಾಯುದ್ಧದಲ್ಲಿ ಸುಮಾರು ಭರತಖಂಡದ ರಾಜರ ಸಮೂಹವೆಲ್ಲಾ ಭಾಗವಹಿಸುವುದು ಕಂಡಾಗ ಧರ್ಮ ಯುದ್ಧದ ಪರಿಕಲ್ಪನೆ ಅರ್ಥವಾಗುವುದೇ ಕಷ್ಟವಾಗುತ್ತದೆ ಮತ್ತು ರಾಜರುಗಳಲ್ಲಿ (ಸೈನಿಕರಲ್ಲಿಯೂ ಕೂಡ) ಕೂಡ ಮನೆಮಾಡಿಕೊಂಡಿದ್ದ ಯುದ್ಧಪಿಪಾಸು ಮನೋಭಾವವೂ ವ್ಯಕ್ತವಾಗುತ್ತದೆ. ದೇಶಪ್ರೇಮ, ಧರ್ಮಪ್ರೇಮ, ಯುದ್ಧದಲ್ಲಿ ಮಡಿದವರಿಗೆ ವೀರಸ್ವರ್ಗ ಇವು ಬಹುಶ: ಅಫೀಮಿನಂತೆ ಕಾರ್ಯನಿರ್ವಹಿಸುತ್ತವೆಯೆನಿಸುತ್ತದೆ, ಯುದ್ಧೋತ್ಸಾಹಿಗಳನ್ನು, ಮೊದಲನೆಯ ಮತ್ತು ಎರಡನೆಯ ವಿಶ್ವ ಮಹಾಯುದ್ಧಗಳಲ್ಲಿ ಮಿತ್ರರಾಷ್ಟ್ರ, ಶತ್ರುರಾಷ್ಟ್ರಗಳ ಕೂಟವಾದಂತೆಯೇ ಇದ್ದಿರಬಹುದು ಕುರುಕ್ಷೇತ್ರದ ಮಹಾಯುದ್ಧದಲ್ಲಿ ಕೂಡ. ದುರ್ಯೋಧನನ ಪರವಾಗಿ ಹನ್ನೊಂದು ಅಕ್ಷೌಹಿಣಿ ಸೈನ್ಯ ಬಂದು ನಿಂತಿತೆಂದರೆ, ಅಷ್ಟೂ ಜನರು ‘ಅಧರ್ಮ’ದ ಪರವಾಗಿ ನಿಂತವರೇ ಎಂಬ ಶಂಕೆ ಮೂಡುತ್ತದೆ.
ಕುರುಕ್ಷೇತ್ರದ ಮಹಾಯುದ್ಧ ಮಾನವರು, ರಾಕ್ಷಸರು, ಪಾತಾಳಲೋಕದವರು, ದಿವಿಜರ ಸಹಾಯಹಸ್ತ, ಕೃಷ್ಣನ ನೇರ ಭಾಗವಹಿಸುವಿಕೆ, ಎಲ್ಲವನ್ನೂ ಒಳಗೊಂಡಿದೆ. ಧರ್ಮಯುದ್ಧ, ಮೋಸ ಕಪಟಗಳ ಯುದ್ಧ, ಅಧರ್ಮ ನಿಯಮ ಬಾಹಿರ ಯುದ್ಧ, ರಾತ್ರಿ ಕಾಳಗ ಎಲ್ಲವೂ ಇಲ್ಲಿ ಅಳವಡಿಸಲ್ಪಟ್ಟಿವೆ. ಹದಿಹರೆಯದ ಅಭಿಮನ್ಯುವಿನ ಪ್ರಚಂಡ ಪರಾಕ್ರಮದ ಹೊಡೆತಗಳನ್ನು ತಾಳಲಾರದೆ ಮಹಾಸೇನಾನಿಗಳಾದ ದ್ರೋಣ, ಕೃಪ ಕರ್ಣಾದಿಗಳು ಆ ಬಾಲಕನನ್ನು ಹಿಂಬದಿಯಿಂದ ಇರಿದು ಕೊಲ್ಲುತ್ತಾರೆ. ನಿರಾಯುಧನಾಗಿದ್ದ ಕರ್ಣನನ್ನು ಅರ್ಜುನ ಕೊಲ್ಲುತ್ತಾನೆ. ಗದಾಯುದ್ಧದ ನಿಯಮಕ್ಕೆ ವಿರುದ್ಧವಾಗಿ ನಾಭಿಯಿಂದ ಕೆಳಗೆ ಹೊಡೆದು ದುರ್ಯೋಧನನನ್ನು ಭೀಮ ಕೊಲ್ಲುತ್ತಾನೆ. ಮಗನ ಸಾವಿನ ಸುದ್ದಿ ಕೇಳಿ ಮೈಮರೆತು ಕುಳಿತಿದ್ದ ದ್ರೋಣರನ್ನು ಸಾಯಿಸುತ್ತಾರೆ. ರಾತ್ರಿವೇಳೆಯಲ್ಲಿ ಮಲಗಿ ನಿದ್ರಿಸುತ್ತಿರುವ ಉಪಪಾಂಡವರನ್ನು ಅಶ್ವತ್ಥಾಮ ಕೊಂದುಬರುತ್ತಾನೆ. ಯಾವುದೇ ಮಹಾಯುದ್ಧದಲ್ಲಿ ಇರಲೇಬೇಕಾದ ಪರಾಕ್ರಮ, ಶೌರ್ಯ, ಧೈರ್ಯ, ಸಾಹಸಗಳ ನಡುವೆ, ನುಸುಳಿಕೊಂಡು ಬರುವ ಕಪಟ, ವಂಚನೆ, ಕುಟಿಲತೆ, ಮರೆ ಎಲ್ಲವೂ ಕುರುಕ್ಷೇತ್ರದ ಯುದ್ಧದಲ್ಲಿಯೂ ಕಂಡುಬಂದು, ಎಲ್ಲ ಕಾಲದ, ಯುದ್ಧಗಳಲ್ಲಿಯೂ ಅಡಕಗೊಂಡಿರುವ ಸಾರ್ವಕಾಲಿಕ ಸತ್ಯವನ್ನು ಸಾರುತ್ತದೆ ಈ ಯುದ್ಧ. ಯುದ್ಧವೆನ್ನುವ ಮಹಾಪಿಶಾಚಿ ಮೈ ಹೊಕ್ಕಾಗ, ಎಂತಹ ಸಭ್ಯನೂ ಉಚಿತಾನುಚಿತಗಳನ್ನು ಮರೆಯುತ್ತಾನೆ. ನಾಗರೀಕವೆನಿಸಿಕೊಂಡದ್ದ ಸಮಾಜ ಬರ್ಬರ ಕೃತ್ಯಗಳಿಗೆಡೆಕೊಡುತ್ತದೆ, ಮಾನವೀಯತೆಯನ್ನು ಮೂಲೆಗೊತ್ತಿ ನೈತಿಕ ಮೌಲ್ಯಗಳಿಗೆ ತಿಲಾಂಜಲಿಕೊಡುತ್ತದೆ ಎನ್ನುವುದಕ್ಕೆ ಕುರಕ್ಷೇತ್ರದ ಯುದ್ಧದ ಘಟನೆಗಳು ಸಹ ಪುಷ್ಟಿ ನೀಡುತ್ತವೆ.
ಕುಮಾರವ್ಯಾಸ ವರ್ಣಿಸುವ ರಣರಂಗದ ವರ್ಣನೆ, ಅತಿಶಯೋಕ್ತಿ, ಅದ್ಭುತ, ಮಾಂತ್ರಿಕ ವಾಸ್ತವತೆಗಳ (Magic realism) ಮಜಲನ್ನು ತಲುಪುತ್ತದೆ.
“ಪ್ರಳಯ ಜಲ ನಿಧಿಯಂತೆ ದಳ ಬರ-
ಲಿಳೆ ಕುಸಿಯೆ ಕಮರಿಂಗೆ ಮೇಲುಸು-
ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ |
ಬಲ ಮಹಾಂಬುಧಿ ಬಲುದಡಲ ಮು-
ಕ್ಕುಳಿಸಿ ನಡೆದುದು . . . .”
ಎನ್ನುತ್ತಾನೆ ನಮ್ಮ ಕವಿ. “ಸುರಿವ ಗಜಮದಧಾರೆಯಲಿ ಹೊಸ ಶರಧಿಗಳು ಸಂಭವಿಸಿದವು” (ಭೀಷ್ಮ ಪರ್ವ 1.47) ಇಂತಹವು ಕವಿಯ ಅತಿಶಯೋಕ್ತಿಗೆ ಉದಾಹರಣೆಯಾಗುತ್ತವೆ. ಸಂಜಯನಿಗೆ ವೇದವ್ಯಾಸ ಮುನಿಯಿತ್ತ ದಿವ್ಯ ದೃಷ್ಟಿಯನ್ನು ಕವಿ ತನ್ನ ಪ್ರತಿಭಾಲೋಚನಕ್ಕಳವಡಿಸಿಕೊಂಡು ನಮಗೆ ಯುದ್ಧದ ಸಮಗ್ರ ವಿವರಣೆಯನ್ನು ನೀಡುತ್ತಾನೆ. ಯುದ್ಧಸಿದ್ಧತೆಗಳನ್ನು ಪಾಂಡವರ ಏಳು ಅಕ್ಷೌಹಿಣಿ ಸೈನ್ಯ, ಕೌರವರ ಹನ್ನೊಂದು ಅಕ್ಷೌಹಿಣಿ ಸೈನ್ಯಗಳ ಗಜಬಲ, ಅಶ್ವಬಲ, ಪದಾತಿಬಲ, ಅತಿರಥ ಮಹಾರಥರ ಸೈನ್ಯದಲ್ಲಿನ ಸ್ಥಾನ, ಕತ್ತಿಕಾಳಗ, ಧನುರ್ಯುದ್ಧ, ಗದಾಯುದ್ಧಗಳಲ್ಲಿ ಪರಿಣತರಾದವರು ಇವುಗಳನ್ನು ವಿವರಿಸುತ್ತಾನೆ. ರಾವುತರ ಕಾಳಗವನ್ನು ವರ್ಣಿಸುವಾಗ, ಆ ರಾವುತರು ಯಾವದೇಶಕ್ಕೆ ಸೇರಿದವರೆಂಬುದನ್ನು ತಿಳಿದಾಗ, ಅದೆಷ್ಟು ದೇಶಗಳ ರಾಜಮಹಾಜರು ಯುದ್ಧದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದ್ದರೆಂದು ಅಚ್ಚರಿಯಾಗುತ್ತದೆ. ರಾಯ ರಾವುತರು, ಛಲದಂಕ ರಾವುತರು, ಗುಜ್ಜರದೇಶದ ರಾವುತರು, ಮಾಳವದ ರಾವುತರು, ಹಮ್ಮೀರ ರಾವುತರು, ಕಾಶ್ಮೀರ ರಾವುತರು, ಗೌಳವದ ರಾವುತರು, ತಿಗುಳ ರಾವುತರು, ಕರ್ಣಾಟ ರಾವುತರು, ಸೇವಣರಾಯ ರಾವುತರು, ಲಾಳ ರಾವುತರು, ಗಾಳ, ಕೊಂಕ, ಕಳಿಂಗ, ನೇಪಾಳಗಳ ರಾವುತರು ಹೀಗೆ ವಿಭಿನ್ನದೇಶಗಳಿಗೆ ಸೇರಿದ ರಾವುತರ ಕಾಳಗ ಒಂದು ಪರಿಯಾದರೆ, ಎರಡೂ ಸೇನೆಗಳಲ್ಲಿನ ಆನೆಗಳ ಕಾಳಗದ ವೈಖರಿಯೇ ಬೇರೊಂದು ಬಗೆ. ಆನೆಗಳು ಒಂದರೊಡನೊಂದು ಕಾದಾಡುತ್ತಾ
ತಿರುಹಿ ಬಿಸುಟವು ಕಾಲುಗಾಹಿನ
ತುರುಗವನು ಮುಂಬಾರೆಕಾರರ
ಶಿರವನೈದಾರೇಳ ನಡಸಿದವಣಲ ಹೊಳಲಿನೊಳು |
ಅರರೆ ಪಚ್ಚೆಯಲೌಡಿ ಖಂಡೆಯ
ದುರವಣೆಯ ಹೊಯಿಲಿನೊಳು ರಿಪುಗಜ-
ವುರುಳಿದವು ತೆರಳಿದವು ಜೋದರ ಜೀವವಂಬರಕೆ ||
ಉಭಯ ದಳದ ದಂತಿವ್ರಾತ, ನರತುರಗರಥ ಎಲ್ಲವನ್ನೂ ಸವರಿದುವ೦ತೆ, ಶೌಕನೀ ನಿವಹ ಭಟರ ದಾಟೆಯಿಂದೊಗುವ ರಕುತಕೆ ಬಾಯ್ಗೊಳನೊಡ್ಡಿ ಕುಡಿದವಂತೆ.
ಇಂತಹ ಮಹಾಯುದ್ಧದ ವರ್ಣನೆಯಲ್ಲಿ ಭಟರ ಶೌರ್ಯದ ವೀರರಸ ಉಕ್ಕಿಹರಿದರೆ, ಯುದ್ಧದ ಪರಿಣಾಮವಾಗಿ ಉಂಟಾಗುವ ಸಾವು, ನೋವು, ಛಿದ್ರ ವಿಚ್ಛಿದ್ರ ದೇಹಗಳು, ರಕ್ತಪ್ರವಾಹಗಳು, ಕರುಣೆ, ಭೀಭತ್ಸ ರಸಗಳನ್ನು ಹರಿಸುತ್ತವೆ. “ಇತ್ತಲೀ ಸಂಗ್ರಾಮ ಮಹಿಯೊಳು ಮೃತ್ಯುವಿನ ಭಾಗ್ಯೋದಯವು ಕೈವರ್ತಿಸಿತು . . . ಉತ್ತರೋತ್ತರವಾಯ್ತು ಶಾಕನೀ ಡಾಕಿನೀ ಜನದ . . .” ಹಾಗೂ, ಹೆಣಗಳು ಸುರಿದಿದ್ದ ರಣರಂಗಕ್ಕೆ ಪೂತನೀವೃಂದ, ಉಲೂಕ, ಜಂಬುಕ, ಕಾಕ ಸಂದೋಹ ಬಂದು ಸೇರುತ್ತವೆ.
ತಳಿತ ತಲೆಯೋಡಿನೊಳು ಶೋಣಿತ-
ಜಲವ ಕಾಸಿದರೆಳೆಯ ಕರುಳನು
ಹಿಳಿದು ಹಿಂಡಿದರಿಕ್ಕಿದರು ಕುಸುರಿಗಳ ಮೂಳೆಗಳ |
ತೆಳುದೊಗಲ ಚಿಕ್ಕಳದ ಕೈ ಚ-
ಪ್ಪಳೆಯವರು ಹಂತಿಯಲಿ ಕುಡಿದರು
ಕೆಳೆಯರಿಗೆ ಸವಿದೋರಿ ಪೂತನಿಕರ ಗಡಣದಲಿ ||
ಹೀಗೆ ಸಂತೃಪ್ತಗೊಂಡ ಭೂತಗಣ ಪಾಂಡವ ಕೌರವ ನೃಪರನ್ನು ಹರಸಿ ಹಾಡುತ್ತದಂತೆ. ಕುಮಾರವ್ಯಾಸ ಇಷ್ಟಕ್ಕೇ ಬಿಡದೆ ಯುದ್ಧದ ಮತ್ತೂ ಭೀಕರ ದೃಶ್ಯವನ್ನು ನಮ್ಮ ಮುಂದಿಡುತ್ತಾನೆ.
ಸಿಡಿದ ಕಣ್ಣಾಲಿಗಳ ನಾಯಿದು
ಕುಡುಕುಗೊಂಡವು ಕಾಗೆಗಳ ಹಿ-
ಮ್ಮಡಿಯ ಹೊರಳಿಯ ನರವ ಸೆಳೆದವು ಜಂಬುಕಾದಿಗಳು |
ಅಡಗಕದುಕಿರಿದೊರಲಿ ಕರೆದವು
ಗಡಣವನು ಗೂಗೆಗಳು ರಕತದ
ಕಡಲಲೋಕುಳಿಯಾಡಿದವು ಬೇತಾಳಕಾಳಿಯರು ||
ರಣರಂಗದ ಇಂತಹ ಅನೇಕ ವಿವರಗಳು ಮನಸ್ಸಿಗೆ ಮಂಕು ಕವಿಸುತ್ತವೆ. ಅಭಿಮನ್ಯುವಿನ, ವೃಷಸೇನನ, ಕಾಲಾಂತಕರಂತಹ ಪರಾಕ್ರಮದ ವರ್ಣನೆ, ಅಭಿಮಾನ, ಮೆಚ್ಚುಗೆ, ವೀರರಸಗಳನ್ನುಕ್ಕಿಸಿದರೆ, ಇಂತಹ ಹದಿಹರೆಯದ ಮಕ್ಕಳ ಮರಣ ಓದುಗನನ್ನು ದು:ಖದ, ಕರುಣೆಯ ಸಾಗರಕ್ಕೆ ತಳ್ಳುತ್ತದೆ.
ತೋಳ ತಲೆಗಿಂಬಿನಲಿ ಕೈದುಗ-
ಳೋಳಿಗಳ ಹಾಸಿನಲಿ ತನ್ನಯ
ಕಾಲದೆಸೆಯಲಿ ಕೆಡೆದ ಕೌರವ ಸುತರು ನೂರ್ವರಲಿ |
ಬಾಲಕನು ಬಳಲಿದನು ಸಮರದ
ಲೀಲೆಯಲಿ ಕುಣಿ ಕುಣಿದು ಬಸವಳಿ-
ದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ (ದ್ರೋಣ ಪರ್ವ 6.61)
ಎನ್ನುವಾಗ ಅಭಿಮನ್ಯುವಿನ ಮರಣದೊಂದಿಗೇ ಮಡಿದ ಕೌರವಸುತರ ಬಗೆಗೂ ಕರುಣೆಯುಕ್ಕಿ, ಯುವಚೈತನ್ಯವನ್ನು ಹೀಗೆ ನುಂಗಿಬಿಡುವ ಯುದ್ಧ ಅದೆಂಥ ಅರ್ಥಹೀನವಾದದ್ದು ಎಂಬ ಚಿಂತನೆ ಮೂಡುತ್ತದೆ. ಈಸ್ಕೈಲಸ್ ಮಹಾಕವಿಯ “ಆಗಾಮೆಮ್ನನ್” ರುದ್ರನಾಟಕದಲ್ಲಿ ಮೇಳ ಹೇಳುವ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ. “ಯುದ್ಧವೆಂಬ ವ್ಯಾಪಾರಿ ಚಿನ್ನವನ್ನು ತೆಗೆದುಕೊಂಡು ಅದರ ಬದಲಿಗೆ ನಮಗೆ ಹಿಡಿಬೂದಿಯನ್ನು ಹಿಂದಿರುಗಿಸುತ್ತಾನೆ”. (ಯುದ್ಧಕ್ಕೆಂದು ಹೋದ ತರುಣರು ಮನೆಗೆ ಹಿಂದಿರುಗದೆ, ಅವರ ಬೂದಿ ತುಂಬಿದ ಕರಂಡಗಳು ಮನೆಗಳಿಗೆ ಬಂದಾಗ ಮೇಳ ಹೇಳುವ ಮಾತಿದು).
ಯುದ್ಧದ ಹಗಲುಗಳು ಈ ವೀರಾವೇಶದ ಹೊಡೆದಾಟ, ಬಡಿದಾಟಗಳಿಗೆ ಸೀಮಿತವಾಗಿದ್ದರೆ, ದಿನದ ಯುದ್ಧಾನಂತರದ ರಾತ್ರಿಯ ಚಟುವಟಿಕೆಗಳನ್ನು, ಅಷ್ಟೇ ಆಸ್ಥೆಯಿಂದ ವಿವರವಾಗಿ ಚಿತ್ರಿಸುತ್ತಾನೆ ಕುಮಾರವ್ಯಾಸ. ಗಾಯಗೊಂಡ ಸೈನಿಕರನ್ನು, ಕುದುರೆಗಳನ್ನು, ಆನೆಗಳನ್ನು ಉಪಚರಿಸಿ, ಗಾಯಗಳಿಗೆ ಮದ್ದೆರೆಯುವುದು, ಮುರಿದ ಶಸ್ತ್ರಗಳನ್ನು ಸರಿಪಡಿಸಿಕೊಳ್ಳುವುದು, ಇವು ಎರಡೂ ಸೇನೆಯಲ್ಲಿ ನಡೆಯುವ ಕಾರ್ಯಕ್ರಮಗಳು. ಖಡ್ಗಧಾರೆಗಳನ್ನು ಹರಿತಪಡಿಸುವ, ರಥಗಳ ಗಾಲಿ ಅಚ್ಚುಗಳನ್ನು ಸರಿಪಡಿಸುವ ಮತ್ತು ಇನ್ನಿತರ ಆಯುಧಗಳಿಗೆ ಸಂಬಂಧಪಟ್ಟ ಕೆಲಸಗಳನ್ನು ವೀರಭಟರು ನಿರ್ವಹಿಸಿದರೆ, ವೈದ್ಯ ಸುತತಿಯು ಗಾಯಗೊಂಡ ಸೈನಿಕರ ಹಾಗೂ ಪ್ರಾಣಿಗಳ ಚಿಕಿತ್ಸೆಯಲ್ಲಿ ನಿರತವಾಗಿರುತ್ತದೆ. ಈ ಮುಂದೆ ಉದ್ಧರಿಸುವ ನಾಲ್ಕು ಪದ್ಯಗಳಿಂದ, ಕುಮಾರವ್ಯಾಸನ ಕಾಲವಾಗಬಹುದು, ಮಹಾಭಾರತದ ನಿರ್ದಿಷ್ಟ ಕಾಲಘಟ್ಟವಾಗಬಹುದು, ವೈದ್ಯಕೀಯ, ಪಶುವೈದ್ಯಕೀಯ ವಿಜ್ಞಾನ ಎಷ್ಟೊಂದು ಮುಂದುವರಿದಿತ್ತೆಂದು ತಿಳಿದು ಬರುತ್ತದೆ.
ಹರಿದ ಕೊರಳನು ಬಿಗಿವ ಉರದೊಳು
ಮುರಿವ ಬಾಣವ ಕೀಳ್ವ ಹೊಟ್ಟೆಯ
ನಿರಿಗರುಳನೊಳಗಿಕ್ಕಿ ಹೊಲಿಸುವ ಮದ್ದುಗಳನಿಡಿವ |
ಉರಿವ ಸೇಕದ ನಸ್ಯದೊಳು ಹದ-
ನರಿವ ತುರುಗದ ವೈದ್ಯ ತತಿಯೆ-
ಚ್ಚರಿಕೆಯಲಿ ಸಂತೈಸಿದರು ವಾಜಿಗಳ ವೇದನೆಯ ||
ಒಡಲಿನೊಳು ಮುರಿದಿದ್ದ ಸಬಳವ
ನುಡಿಯಲೀಯದೆ ಕೀಳ್ವ ಮದ್ದನು
ಗಿಡಿವ ಜೇನಣಿಗೆಯೊಳು ಸಪ್ರಾಣಿಸುವ ದುವ್ರಣವ |
ತೊಡೆದು ಕಟ್ಟುವ ಹಸ್ತಿವೈದ್ಯರ
ಗಡಣವುಭಯದೊಳೆಸೆದವಂತ್ಯದ
ಕಡಲ ರಭಸಕೆ ತೊಡಕನಿಕ್ಕಿತು ಬಹಳ ಬಲಜಲಧಿ ||
ಬಾದಣಿಸಿದೇರುಗಳ ಬಾಯೊಳು
ಕಾದ ಬಾರಂಗಿಗಳನಳತೆಗೆ
ಕೋದು ವಾಮದೊಳೆಯ್ದೆ ಹಿಡಿದರು ತೈಲ ಧಾರೆಗಳ |
ಆದ ಮೈಗಂಡಿಯೊಳು ರಕುತವ
ಶೋಧಿಸುವ ಹಳದುಪ್ಪವನು ತೊಡೆ-
ದಾದರಿಸಿದುದು ವೈದ್ಯ ಸಂತತಿ ವೀರ ಭಟರುಗಳ ||
ಖಡುಗದಡವೊಯ್ಲುಗಳಲಡು ಮ-
ದ್ದಡಸಿದರು ಸೂಕರನ ತುಪ್ಪವ-
ತೊಡೆದರಿರಿದೇರಿನೊಳು ಬಿಟ್ಟರು ತೈಲಧಾರೆಗಳ |
ಕುಡಿಸಿದರು ಮಂತ್ರೋದಕವನೊಳ-
ಗಡಿಸಿ ಕರುಳನು ಮುಚ್ಚಿ ಮಂತ್ರಸಿ
ತೊಡೆದರಖಿಳೌಷಧಿಗಳನು ನೃಪಸೇನೆಯೆರಡರಲಿ ||
ಕುದುರೆಗಳಿಗೆ ಚಿಕಿತ್ಸೆಮಾಡುವ ವೈದ್ಯಸಮೂಹವೇ ಬೇರೆ, ಆನೆಗಳಿಗೆ ಚಿಕಿತ್ಸೆ ಮಾಡುವ ವೈದ್ಯಸಮೂಹವೇ ಬೇರೆಯೆಂದಾಗ ಪಶುವೈದ್ಯಶಾಸ್ತ್ರ ಎಷ್ಟು ಪರಿಣತಿಹೊಂದಿತ್ತೆಂಬುದು ಅರಿವಾಗುತ್ತದೆ. ಮನುಷ್ಯರನ್ನು ನೋಡಿಕೊಳ್ಳುವ ವೈದ್ಯರಲ್ಲಿಯೂ, ಶಸ್ತ್ರ ಚಿಕಿತ್ಸಕರಂತೆ ಗಾಯಗಳನ್ನು ಹೊಲಿದು ಮುಚ್ಚುವವರೇ ಬೇರೆ, ಮೇಲೆ ಮೇಲಾಗಿರುವ ಗಾಯಗಳಿಗೆ ಚಿಕಿತ್ಸೆಮಾಡುವವರೇ ಬೇರೆ. ಆನೆಗಳ ಸಪ್ರಾಣಿಸುವ ದುವ್ರಣ ಎಂದಾಗ, ಸೆಪ್ಟಿಕ್ ಆಗಿರುವ ಗಾಯಗಳನ್ನೆಬಹುದು. ರಕುತವ ಶೋಧಿಸುವುದು, ಮಂತ್ರೋದಕವನೊಳಗಡಿಸಿ ಕರುಳನು ಮುಚ್ಚುವುದು ಇಂಥ ಕ್ರಿಯೆಗಳು, ನವೀನಯುಗದ ಆಂಟಿಸೆಪ್ಟಿಕ್ ಔಷಧಿಗಳು, ಅರಿವಳಿಕೆಯ ವಿಧಾನಗಳನ್ನು ನೆನಪಿಸುವುದು. ರಣರಂಗದಲ್ಲಿದ್ದಿರಬಹುದಾದ ಚಲಿಸುವ ಚಿಕಿತ್ಸಾಗೃಹವೊಂದರ ಚಿತ್ರ ಕಣ್ಮುಂದೆ ಸುಳಿಯುತ್ತದೆ.
This is the thirteenth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.