ಈ ಭಾರತಕಥಾನಕದಲ್ಲಿ ಮೂಡಿ ಬಂದಿರುವ ಸ್ನೇಹದ ಚಿತ್ರಣ ಅತ್ಯಂತ ಅಮೂಲ್ಯವಾದದ್ದು. ಪರಸ್ಪರ ದ್ವೇಷ, ಅಸೂಯೆ, ಮತ್ಸರದ ಪ್ರಪಂಚದಲ್ಲಿಯೂ, ಸ್ನೇಹ, ಪ್ರೀತಿಗಳು ಮೊಳೆತು ಬೆಳೆಯುವ ಪ್ರಕ್ರಿಯೆ, ಒಳಿತುಕೆಡಕುಗಳ, ಸತ್ವ ರಜೋ ತಮೋಗುಣಗಳ ಸಮ್ಮಿಳನವಿಲ್ಲದೆ ಜೀವನವಿರದೆಂಬುದನ್ನು ಅಭಿವ್ಯಕ್ತಿಸುತ್ತದೆ. “ಮಮ ಪ್ರಾಣಾ ಹಿ ಪಾಂಡವಾಃ” ಎನ್ನುವ ಕೃಷ್ಣ ಮತ್ತು ಕೃಷ್ಣಾರ್ಜುನರ ಸ್ನೇಹ, ಮತ್ತೊಂದೆಡೆ ಕುಲಹೀನನೆಂದು ಜಗವೆಲ್ಲ ತಿರಸ್ಕರಿಸುತ್ತಿದ್ದ ಅಸಮಾನ ಪರಾಕ್ರಮಿ ಕರ್ಣನನ್ನು ತನ್ನ ಅಂತರಂಗದ ಮಿತ್ರನನ್ನಾಗಿ ಮಾಡಿಕೊಂಡು ಸ್ನೇಹದ ಹೊಳೆ ಹರಿಸುವ ದುರ್ಯೋಧನನ ಸ್ನೇಹ. ಅದೇ ದುರ್ಯೋಧನನ, ಪಾಂಡವರಿಗೆ ಮುಳ್ಳುಮೊನೆಯಷ್ಟು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲವೆನ್ನುವ ಹಠ. ಪ್ರೀತಿ-ದ್ವೇಷ ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳಾಗಿವೆಯೆಂಬುದನ್ನೂ ಮತ್ತು ಸ್ನೇಹ, ಪ್ರೀತಿಗೆ ರಕ್ತ ಸಂಬಂಧವಾಗಲೀ, ಒಂದೇ ಕುಟುಂಬದವರಾಗಲೀ ಆಗಬೇಕಿಲ್ಲವೆಂಬುದನ್ನೂ ಸಹ ಈ ಸ್ನೇಹದ ಚಿತ್ರಣ ಸಾರುತ್ತದೆ. ಹದಿಹರೆಯದವರಾಗಿ-ವಿಭಿನ್ನ ಮನೋಧರ್ಮದವರೂ ಆಗಿದ್ದು-ಒಬ್ಬರೊಡನೊಬ್ಬರು ಸೇರುವ ಪಾಂಡವ ಕೌರವರ ನಡುವೆ ಸ್ನೇಹ ಮೊಳೆಯುವುದೇ ಇಲ್ಲ. ಪಾಂಡವರು ಪರಸ್ಪರ ಪ್ರೀತಿಸುವಂತೆಯೇ, ಕೌರವರೂ ನೂರುಜನ ಪರಸ್ಪರ ಪ್ರೀತಿಸುತ್ತಾರೆ. ಆದರೂ ಪಾಂಡವ ಕೌರವರಿಗೇಕೆ ಸ್ನೇಹ ಸಾಧ್ಯವಾಗುವುದಿಲ್ಲ? ಅಭಿಮನ್ಯು, ಉತ್ತರರ ಸ್ನೇಹ, ಯುದ್ಧದ ಅಗ್ನಿಗಾಹುತಿಯಾಗುತ್ತದೆ. ಅಭಿಮನ್ಯು ತನ್ನ ವಯಸ್ಸಿನವರೇ ಆದ, ತನ್ನ ಸಹೋದರ ಸಂಬಂಧಿಗಳೂ ಆಗಬೇಕಾದ, ನೂರುಜನ ಕೌರವ ಕುಮಾರರನ್ನು ಕೊಂದು ತಾನೂ ವೀರ ಮರಣವನ್ನು ಪಡೆಯುತ್ತಾನೆ. ಕರ್ಣನ ಮಗ ವೃಷಸೇನನೂ ಮೃತನಾಗುತ್ತಾನೆ. ಕೃಷ್ಣನ ಸ್ನೇಹಹಸ್ತವಂತೂ ಅವನನ್ನು ಭಜಿಸುವ, ಪ್ರೀತಿಸುವವರಿಗೆಲ್ಲಾ ಸದಾ ಸಿದ್ಧವಿರುತ್ತದೆ. ಸ್ನೇಹವಿರುವೆಡೆ, ಕುಮಾರವ್ಯಾಸನಲ್ಲಿ ಸ್ಪರ್ಶಕ್ಕೂ ಅತ್ಯಂತ ಮಹತ್ವವಿದೆ. ಸ್ನೇಹದಿಂದ ಅಪ್ಪಿಕೊಳ್ಳುವುದು ತಲೆನೇವರಿಸುವುದು- ಇವು ಜೀವನದಲ್ಲಿ ನೂರು ಮಾತು ನೀಡಲಾರದ ಸಾಂತ್ವನವನ್ನು ಸ್ಪರ್ಶ ನೀಡುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಅಭಿಮನ್ಯು, ವೃಷಸೇನ, ಉತ್ತರ, ಲಕ್ಷಣ ಮುಂತಾದ ಹದಿಹರೆಯದ ಮಕ್ಕಳ ಚಿತ್ರಣ ಚೇತೋಹಾರಿಯೂ, ಕರುಣಾಜನಕವೂ ಆಗಿ ಕರುಳು ಮಿಡಿಯುತ್ತದೆ. ಈ ಹುಡುಗರ ಮೂಲಕ, ಆ ಕಾಲದ ಹದಿಹರೆಯದವರಲ್ಲಿ ಮನೆಮಾಡಿದ್ದ ತಮ್ಮ ಅಪ್ಪಂದಿರ ಶೌರ್ಯ, ಕೆಚ್ಚು, ಯುದ್ಧ ಕೌಶಲ್ಯಗಳನ್ನು ಪರಿಚಯಿಸುತ್ತಾನೆ ಕುಮಾರವ್ಯಾಸ. ತನ್ನನ್ನು ಸುತ್ತುಗಟ್ಟಿ ನಿಂತ ಷಡ್ರಥರನ್ನು ಎದುರಿಸಿ ಸಿಂಹದ ಮರಿಯಂತೆ ಹೋರಾಡುವ ಅಭಿಮನ್ಯುಈ ಹದಿಹರೆಯದವರ ತಂಡದ ಮಕುಟಮಣಿ. ಆದರೆ, ಇವನಿಗೂ, ಕೌರವ ಕುಮಾರರಿಗೂ ಸಂಪರ್ಕವೇ ಇರದೆ, ಸ್ನೇಹವಾಗಲೀ, ವಿಚಾರವಿನಿಮಯವಾಗಲೀ ಸಾಧ್ಯವೇ ಆಗುವುದಿಲ್ಲ. ಉತ್ತರ ಕುಮಾರ ಬಡಾಯಿ ಕೊಚ್ಚಿಕೊಳ್ಳುವ ಯುವಕನಾಗಿ, ರಣರಂಗವನ್ನು ನೋಡುತ್ತಲೇ ಹೇಡಿಯಂತೆ ವರ್ತಿಸಿದರೂ, ಅರ್ಜುನನ ಶಿಕ್ಷಣ ಮತ್ತು ಯುದ್ಧದ ಪ್ರಾಯೋಗಿಕ ಕಮ್ಮಟದಲ್ಲಿ ಅವನೂ ಕೂಡ ಕಲಿಯಾಗುತ್ತಾನೆ. ತಿಳಿಹಾಸ್ಯರಸ ನೀಡುವ ಉತ್ತರಕುಮಾರನ ಮೊದಮೊದಲ ಚಿತ್ರಣ, ನಂತರ ವೀರರಸದಿಂದ ತುಂಬಿಕೊಂಡು, ಗಟ್ಟಿಗೊಳ್ಳುತ್ತದೆ. ಎಲ್ಲ ವಯೋಧರ್ಮದ, ಎಲ್ಲ ಮನೋಧರ್ಮದ ವ್ಯಕ್ತಿಗಳ ವ್ಯಕ್ತಿತ್ವಗಳನ್ನಳೆಯುವ ನಿಕಷವಿದ್ದಂತೆ “ಯುದ್ಧ”. ಯುದ್ಧ ವ್ಯಕ್ತಿತ್ವವನ್ನು ರೂಪಿಸುವ ಮೂಸೆಯೂ ಹೌದು. ಆ ಮೂಸೆಯಲ್ಲಿ ಹೊಕ್ಕರೆ ಹೋರು ಅಥವಾ ಮಡಿ ಎರಡೇ ಆಯ್ಕೆಗಳು. ಎಲ್ಲೋ ಕೆಲವರಿಗೆ ಮಾತ್ರ ‘ಹಿಂದಿರುಗುವ’ ಅವಕಾಶ. ಹಿಂದಿರುಗಿ ಹೋಗುವವರನ್ನು ಮತ್ತೆ ತನ್ನ ಪರಿಧಿಗಳೆದುಕೊಂಡು ನಿಷ್ಕರುಣೆಯಿಂದ ಕೊಲ್ಲುವ ಯಂತ್ರ ಯುದ್ಧ. ಭೀಷ್ಮನಂತಹ ವಯೋವೃದ್ಧನಿಂದ ಮೊದಲಾಗಿ ಅಭಿಮನ್ಯು, ವೃಷಸೇನ, ಲಕ್ಷಣ, ಉತ್ತರ ಮುಂತಾದ ಹದಿಹರೆಯದವರೆಗೂ ಎಲ್ಲ ವಯೋಧರ್ಮ, ಮನೋಧರ್ಮದವರ ಕೂಡುದಾಣ ಕುರುಕ್ಷೇತ್ರದ ರಣರಂಗ. ಯುದ್ಧ ಮುಗಿದ ಮೇಲೆ ತಮ್ಮ ಮಕ್ಕಳ ಶವಗಳನ್ನು ನೋಡಲು ಗಾಂಧಾರಿ, ಕುಂತಿ ಇವರುಗಳು ಬಂದರೂ, ಯುದ್ಧ ನಡೆಯುತ್ತಿರುವಾಗ ತನ್ನ ಪ್ರತಿಜ್ಞಾವಿಧಿ ಪೂರೈಸಿಕೊಳ್ಳಲೆಂದು ರಣರಂಗಕ್ಕೆ ಬಂದವಳು ಅಗ್ನಿಕನ್ಯೆ ದ್ರೌಪದಿಯೊಬ್ಬಳೇ.
ಯುದ್ಧ ಮುಕ್ತಾಯವಾದ ಸಮಯದಲ್ಲಿ ಪಾಂಡವರ ಪಕ್ಷದಲ್ಲಿಯಾಗಲೀ ಕೌರವರ ಪಕ್ಷದಲ್ಲಿಯಾಗಲೀ ಅರಸುಮಕ್ಕಳುಗಳು ಯಾರೂ ಉಳಿದೇ ಇರುವುದಿಲ್ಲ. ಕೌರವರ ಮಕ್ಕಳೆಲ್ಲರೂ, ಅಭಿಮನ್ಯು, ಉತ್ತರ, ವೃಷಸೇನ ಎಲ್ಲರೂ ರಣರಂಗದಲ್ಲಿ ಮಡಿದರೆ, ದ್ರೌಪದಿಯ ಐದು ಮಕ್ಕಳೂ ನಿದ್ರಿಸುತ್ತಿರುವಾಗ, ರಾತ್ರಿಯಲ್ಲಿ ಅಶ್ವತ್ಥಾಮನಿಂದ ಹತರಾಗುತ್ತಾರೆ. ಈ ಅರಸು ಮಕ್ಕಳಲ್ಲದೇ ಯುದ್ಧದಲ್ಲಿ ಹತರಾಗಿರಬಹುದಾದ ಯುವಕರೆಷ್ಟೋ. ಅರಸೊತ್ತಿಗೆಗೆ ಅಧಿಕಾರಿಗಳಾಗಬೇಕಾದ ಮಕ್ಕಳೆಲ್ಲರೂ ರಣದ ಮಾರಿಗೆ ಬಲಿಯಾದಾಗ ಸ್ನೇಹ ಪ್ರೀತಿ ಅಭಿವ್ಯಕ್ತಿಸಲು (ಆ ಮಾತೆಯರು) ಮಾತೃ ಹೃದಯಗಳು ಯಾರನ್ನೂ ಹುಡುಕಬೇಕು. ಆ ಮಾತೃ ಹೃದಯಗಳು, ಸುತ್ತ ನಡೆಯುತ್ತಿದ್ದ ಚರ್ಚೆಗಳನ್ನು ಕೇಳುತ್ತಾ ಹೇಗೆ ದುಃಖಿಸಿರಬಹುದು . . .
ಅರಸು ವಂಶದ ಕುವರರೆಲ್ಲರು ಬ
ವರದೊಳಗಳಿದಿರಲು ನಂತರ
ಪುರವ ಪಾಲಿಸಲಿರುವರಾರೀ ವಂಶದಲ್ಲೆನುತ |
ಸುರರು ನರರುಗಳಲ್ಲಹರ್ನಿಶಿ
ಸರಣಿಯಂದದಿ ಚರ್ಚೆ ನಡೆದಿರೆ
ಹರಿಯೆ ತಾಯಿಯರಶ್ರುನದಿ ಸುತಶವಗಳನೆ ತಬ್ಬಿ || (ಶಾಂತಕುಮಾರಿ)
[ಟಿಪ್ಪಣಿ: ಛಂದೋನಿಯಮಪಾಲನೆಯ ಸಲುವಾಗಿ ಮೂಲ ಆಶಯಕ್ಕೆ ಚ್ಯುತಿಯಾಗದಂತೆ ಪದ್ಯವನ್ನು ತಿದ್ದಲಾಗಿದೆ]
ಮಹಾಭಾರತ ಕಥಾನಕದಲ್ಲಿನ ನಿರೂಪಣಾ ವಿನ್ಯಾಸ
ವ್ಯಾಸಮಹರ್ಷಿವಿರಚಿತ ಮೂಲ ‘ಮಹಾಭಾರತ’ವನ್ನು ನಾನು (ಮೂಲದಲ್ಲಿ) ಓದಿಲ್ಲವಾಗಿ ಅದರಲ್ಲಿನ ಕಥಾನಕದ ನಿರೂಪಣಾವಿನ್ಯಾಸ ಅಥವಾ ತಂತ್ರದ ಬಗೆಗೆ ನನಗೆ ತಿಳಿದಿಲ್ಲ. ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಕಥಾನಕದ ನಿರೂಪಣೆಯು ತಂತ್ರದ ದೃಷ್ಟಿಯಿಂದ ಹಲವು ಭಾಗಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಜನಮೇಜಯ ರಾಜನಿಗೆ, ವೈಶಂಪಾಯನನು ಹೇಳುವ ಮಹಾಭಾರತದ ಕಥೆ, ಮುನಿದ್ವೈಪಾಯನರು ಅಭಿವರ್ಣಿಸಿದ ಮಹಾಭಾರತದ ಕಥಾಮೃತ. ವೈಶಂಪಾಯನನಿಗೆ ಎರಡನೆಯ ನಿರೂಪಕನ ಸ್ಥಾನ. ಸರ್ಪಯಜ್ಞದ ಪಾಪಪರಿಹಾರದೊಂದಿಗೇ ಜನಮೇಜಯನಿಗೆ ಅವನ ಪಿತೃಪಿತಾಮಹರ ಜೀವನವನ್ನು – ಇತಿಹಾಸವನ್ನು ಪರಿಚಯಿಸುವ ಆಶಯ ಕೂಡ ಕಥಾನಕದಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿ ಪರಂಪರೆ, ಸಂಸ್ಕೃತಿಗಳನ್ನು ಮಹಾಕಾವ್ಯದ ರೂಪದಲ್ಲಿ ಹಿಡಿದಿಡುವ ಕಾರ್ಯಗೌರವ ಕೂಡ ದೊರಕುತ್ತದೆ. ಒಂದು ದೇಶದ ಇತಿಹಾಸದಲ್ಲಿ, ನಿರ್ದಿಷ್ಟ ಕಾಲಘಟ್ಟದಲ್ಲಿ ನಡೆಯಬೇಕಾದ ಕೆಲಸವಿದು ಎನಿಸುತ್ತದೆ. ‘ರಾಮಾಯಣ’, ‘ಮಹಾಭಾರತ’ ಗಳಂತಹ, ಬೆಳೆಯುವ ಕಾವ್ಯಗಳೆನಿಸಿಕೊಳ್ಳುವ, ಆದಿಮಹಾಕಾವ್ಯಗಳು (ಮೂಲಮಹಾಕಾವ್ಯಗಳು) ಒಂದೊಂದು ಯುಗದಲ್ಲಿಯೂ ಪ್ರತಿಭಾಶೀಲವ್ಯಕ್ತಿಗಳನ್ನು ಪ್ರಚೋದಿಸಿ, ವಿಭಿನ್ನರೀತಿಯಲ್ಲಿ ಸ್ಪೂರ್ತಿನೀಡಿ, ಯುಗ ಪ್ರಜ್ಞೆಗೆ ಅನುಸಾರವಾಗಿ ಸ್ಪಂದಿಸುವಂತೆ ಮಾಡಬಲ್ಲ ಶಕ್ತ ಕಾವ್ಯಗಳು. ಕುಮಾರವ್ಯಾಸ ತನ್ನ ಯುಗ ಪ್ರಜ್ಞೆಗನುಸಾರ ಸ್ಪಂದಿಸಿ, ಕಾವ್ಯವನ್ನು ಕಂಡರಿಸಿದ್ದಾನೆ.
ಶಂತನು, ಮತ್ಸ್ಯಗಂಧಿ, ಭೀಷ್ಮರ ಜೀವನದ ಸಂಕ್ಷಿಪ್ತ ವರ್ಣನೆಯೊಂದಿಗೆ ಆರಂಭವಾಗುವ ಮಹಾವೃಕ್ಷದಂತಹ ಕಥಾನಕ ಹಲವಾರು ಪರ್ವಗಳಲ್ಲಿ ಕವಲೊಡೆದು, ಒಂದೊಂದು ಕವಲೂ ಶಕ್ತವಾಗಿ ಸುಪುಷ್ಟವಾಗಿ, ವಿಸ್ತಾರವಾಗಿ ಹರಡಿಕೊಂಡು ಧರ್ಮರಾಯನ ಪಟ್ಟಾಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ. ಆದಿಪರ್ವ, ಸಭಾಪರ್ವ, ಅರಣ್ಯಪರ್ವ, ವಿರಾಟಪರ್ವ, ಉದ್ಯೋಗಪರ್ವ, ಭೀಷ್ಮಪರ್ವ, ದ್ರೋಣಪರ್ವ, ಕರ್ಣಪರ್ವ, ಶಲ್ಯಪರ್ವ, ಗದಾಪರ್ವ ಹೀಗೆ ಕಥಾನಕವನ್ನು ಹತ್ತು ಪರ್ವಗಳಿಗೆ ಸೀಮಿತಗೊಳಿಸಿಕೊಳ್ಳುತ್ತಾನೆ. ಧೃತರಾಷ್ಟ್ರ, ಪಾಂಡು ಇಬ್ಬರಿಗೂ ಮದುವೆಯಾದರೂ ಮಕ್ಕಳಾಗದೇ ಗಾಂಧಾರಿ ವೇದವ್ಯಾಸ ಮುನಿ ಕೊಟ್ಟ ಮಂತ್ರ ಪಿಂಡಕದಿಂದ ಗರ್ಭ ಧರಿಸುತ್ತಾಳೆ. ಆ ವೇಳೆಗಾಗಲೇ ಪಾಂಡು ಮೃಗ-ಮಿಥುನದಲ್ಲಿದ್ದ ಮುನಿ ದಂಪತಿಗಳನ್ನು ತಿಳಿಯದೇ ಕೊಂದು ಶಾಪಗ್ರಸ್ತನಾಗಿದ್ದರಿಂದ ನೊಂದು ಪತ್ನಿಯರೊಡನೆ ಕಾಡಿಗೆ ಹೋಗಿರುತ್ತಾನೆ. ಕೌರವರ ಜನನದ ಮೊದಲೇ ಕುಂತಿ ಮಂತ್ರಗಳ ಮಹಿಮೆಯಿಂದ ಧರ್ಮರಾಜನನ್ನು ಪಡೆದು ಸಾಮ್ರಾಜ್ಯಕ್ಕೆ ಅವನೇ ಉತ್ತರಾಧಿಕಾರಿಯಾಗಬೇಕಾಗಿದ್ದರೂ, ಹದಿನಾರು ವರ್ಷಕಾಲ ಪಾಂಡವರು ಕಾಡಿನಲ್ಲಿಯೇ ಬೆಳೆಯುತ್ತಾರೆ. ಪಾಂಡುವಿನ ಮರಣದ ನಂತರ ಹಸ್ತಿನಾಪುರಕ್ಕೆ ಬರುವ ಪಾಂಡವರ ವಯಸ್ಸನ್ನು ನಿಖರವಾಗಿ ತಿಳಿಸುತ್ತಾನೆ. ಈ ನಿಖರ ವಯಸ್ಸಿನ ಸೂಚನೆ, ಅಷ್ಟೂ ವರ್ಷಗಳೂ ಬೇರೆ ಬೇರೆಯಾಗಿ ಬೆಳೆದು ವಿಭಿನ್ನ ಮನೋಧರ್ಮದವರಾಗಿದ್ದುದರಿಂದ, ಹಗೆತನದ ಕಾರಣವನ್ನು ತಿಳಿಸುತ್ತದೆ. ಚಿಕ್ಕ ವಯಸ್ಸಿನಲ್ಲಿನ ಸ್ನೇಹಪ್ರೀತಿಯ ಒಡನಾಟವಿಲ್ಲದೆ, ಹದಿಹರೆಯದಲ್ಲಿ ಧುತ್ತೆಂದು ಪ್ರತಿಸ್ಪರ್ಧಿಗಳಂತೆ ಪಾಂಡವರು ಬಂದಾಗ ಮೈತ್ರಿ ಕಷ್ಟಸಾಧ್ಯವೆಂಬುದನ್ನು ವ್ಯಕ್ತಪಡಿಸಿ ಕುಮಾರವ್ಯಾಸ ನೀಡುವ ವಯಸ್ಸಿನ ನಿಖರತೆ ಒಂದು ವಿಶಿಷ್ಟ ತಂತ್ರವಾಗುತ್ತದೆ. ಪಾಂಡವರು ಅರಗಿನರಮನೆಗೆ ಹೋದಾಗ ಧರ್ಮರಾಜಂಗೆ ವರುಷ ಇಪ್ಪತ್ತೊಂಬತ್ತಾಯಿತೆಂದು ಹೇಳಿ, ಪಾಂಡವ ಕೌರವರು ಹದಿಮೂರು ವರ್ಷ ಒಟ್ಟಿಗೇ ವಿದ್ಯಾಭ್ಯಾಸ ಮಾಡಿದುದನ್ನೂ ತಿಳಿಸುತ್ತಾನೆ. ದ್ರೌಪದಿ ಸ್ವಯಂವರದ ವೇಳೆಗೆ ಧರ್ಮಸುತಂಗೆ ‘ಮೂವತ್ತಾರು ಸಮವಾಯ್ತು’ ಎಂದು ಲೆಕ್ಕ ಹೇಳುತ್ತಾನೆ. (ಆದಿಪರ್ವ 17.33). ಸ್ವಯಂವರದ ನಂತರ ಒಂದು ವರ್ಷ ಪಾಂಚಾಲರಾಜನ ಅರಮನೆಯಲ್ಲಿದ್ದು, ನಂತರ ಭೀಷ್ಮಾಧಿಗಳ ಬಯಕೆಯಂತೆ ಹಸ್ತಿನಾಪುರಕ್ಕೆ ಮರಳಿ ಬಂದು, ಕೌರವರ ಜೊತೆ ಅರಮನೆಯಲ್ಲಿದ್ದು, ಬೇಟೆ, ವೈಹಾಳಿ, ಆಟ, ಜೂಜುಗಳಲ್ಲಿ ‘ವರುಷ ಪಂಚಕ’ ವ ಕಳೆಯುತ್ತಾರೆ. ಇಂದ್ರಪ್ರಸ್ಥನಗರಕ್ಕೆ ಧರ್ಮಜ ಬರುವವೇಳೆಗೆ ಅವನಿಗೆ ನಲವತ್ತೊಂದು ವರ್ಷ. ಅರ್ಜುನನ ತೀರ್ಥಯಾತ್ರೆ, ಸುಭದ್ರಾ ವಿವಾಹ, ಅಭಿಮನ್ಯು ಜನನ, ಖಾಂಡವ ದಹನ, ದ್ರೌಪದಿಗೆ ಮಕ್ಕಳ ಜನನ, ರಾಜಸೂಯ ಯಾಗ, ಸಭಾಭವನದ ನಿರ್ಮಾಣಕ್ಕೆ ಮಯ ತೆಗೆದು ಕೊಳ್ಳುವ ಕಾಲ ಹದಿನಾಲ್ಕು ತಿಂಗಳು. ಹೀಗೇ ಸುಮಾರು ಆರೇಳು ವರ್ಷದ ಲೆಕ್ಕವಿಡಬಹುದೇನೋ ಯಾಗದ ನಂತರ ಸ್ವಲ್ಪ ದಿನಗಳಲ್ಲಿಯೇ ಕಪಟ ದ್ಯೂತವಾದ ಮೇಲೆ, ಅರಣ್ಯವಾಸ, ಅಜ್ಞಾತವಾಸಗಳ 13 ವರ್ಷಗಳ ನಿಖರ ಲೆಕ್ಕ ಸಿಗುತ್ತದೆ. ಕುರುಕ್ಷೇತ್ರದ ಯುದ್ಧಾರಂಭವಾಗುವ ವೇಳೆಗೆ, ಧರ್ಮರಾಯನಿಗಾಗಲೇ ಸುಮಾರು ಅರವತ್ತರ ಹತ್ತಿರದ ಪ್ರಾಯವೆಂದು ಲೆಕ್ಕಹಾಕಬಹುದು. ಮೊದಮೊದಲು ಅನೇಕ ಬಾರಿ ಕರಾರುವಕ್ಕಾಗಿ ವಯಸ್ಸಿನ ಲೆಕ್ಕ ನೀಡುವ ಕುಮಾರವ್ಯಾಸ ನಂತರ ಲೆಕ್ಕದ ಬಗೆಗೆ ಗಮನವಿರಿಸಿಲ್ಲ. ಈ ವಯಸ್ಸಿನ ಲೆಕ್ಕದ ಹಿನ್ನಲೆಯಲ್ಲಿ ಪರಿಶೀಲಿಸುವಾಗ, ಧರ್ಮರಾಯ, ಅರ್ಜುನರ ನಡುವೆ ‘ಕರ್ಣ ಪರ್ವ’ದಲ್ಲಿ ಮೂಡುವ ತೀವ್ರ ಭಿನ್ನಾಭಿಪ್ರಾಯ, ಒಮ್ಮೊಮ್ಮೆ ಅರ್ಜುನ-ಭೀಮರ ನಡುವೆ ಮೂಡುವ ಭಿನ್ನಾಭಿಪ್ರಾಯ, ವಿರಸ, ಕೋಪಗಳು ಅರ್ಥವಾಗುತ್ತವೆ. ನಡುಪ್ರಾಯ ಕಳೆದು, ವರುಷ ವರುಷಗಳು ಕಾಡಿನಲ್ಲಿ ಕಳೆದು, ಒತ್ತಡಗಳಿಂದ, ತತ್ತರಿಸುತ್ತಿರುವವರ ದು:ಖ ನಿರಾಶೆಗಳು ಅವು. ಕುಮಾರವ್ಯಾಸ ಅನುಸರಿಸುವ ನಿರೂಪಣಾ ತಂತ್ರವನ್ನು ಎರಡು ವಿಧವಾಗಿ ವಿಂಗಡಿಸಬಹುದು. ಕೆಲವು ಘಟನೆಗಳನ್ನು ತಾನೇ ನೇರ ನಿರೂಪಿಸುತ್ತಾನೆ. ಮತ್ತೆ ಕೆಲವನ್ನು ಕಥಾನಕದ ಪಾತ್ರಗಳ ಮೂಲಕ ನಿರೂಪಿಸಿಸುತ್ತಾನೆ.
ಸಭಾಪರ್ವದಲ್ಲಿ ನಡೆಯುವ ದುರ್ಯೋಧನನ ಪರಿಭವ, ದ್ರೌಪದಿ ಮತ್ತವಳ ಸಖಿಯರ ವ್ಯಂಗ್ಯ ಪರಿಹಾಸವನ್ನು ಕವಿ ತಾನು ನೇರ, ಘಟನೆ ನಡೆದ ತಕ್ಷಣ ನಿರೂಪಿಸದೇ, ಪರಿಭವಕ್ಕೊಳಗಾದ ದುರ್ಯೋಧನನಿಂದಲೇ ತನ್ನ ಕುರುಡು ತಂದೆಗೆ ಹೇಳಿಸಿರುವುದು ಹೆಚ್ಚು ಪರಿಣಾಮಕಾರಿಯಾಗಿದೆ. ದುರ್ಯೋಧನನ ಮನಸ್ಸಿನ ಮೇಲಾಗಿರುವ ತೀವ್ರ ಪರಿಣಾಮದ ಅರಿವು ನಮಗಾಗುವುದಲ್ಲದೆ, ಆ ಅಪಮಾನವನ್ನು ಕಾಲ ಸ್ವಲ್ಪವೂ ಕಡಿಮೆ ಮಾಡಿಲ್ಲದಿರುವುದು ತಿಳಿಯುತ್ತದೆ. ಹಾಗೂ ಧೃತರಾಷ್ಟ್ರನ ಮನಸ್ಸನ್ನು ದುರ್ಯೋಧನನ ಅಳಲು ಹೇಗೆ ಕರಗಿಸುತ್ತದೆಂಬುದನ್ನೂ ತಿಳಿಸುತ್ತದೆ. ಆ ಸಭಾಭವನದ ಅದ್ಭುತ ರಚನಾ ಕೌಶಲವನ್ನೂ ಸಹ ನಾವು ದುರ್ಯೋಧನನಿಂದಲೇ ಕೇಳುತ್ತೇವೆ.
ಮತ್ಸ್ಯಯಂತ್ರ ಭೇದಿಸಿ ದ್ರೌಪದಿಯನ್ನು ತಮ್ಮ ಗುಡಿಸಲಿಗೆ ಕರೆದುಕೊಂಡು ಬಂದ ಪಾಂಡವರನ್ನು ಹಿಂಬಾಲಿಸಿ ಬಂದ ದೃಷ್ಟದ್ಯುಮ್ನ, ಅವರಿಗೆ ತಿಳಿಯದಂತೆ ಗುಡಿಸಿಲಿನಾಚೆ ಕಾದಿದ್ದು, ಅವರ ಮಾತುಕತೆಗಳಿಂದ ಪಾಂಡವರು ಇವರು, ಕಪಟ ವಿಪ್ರರಲ್ಲ ಎಂದು ಸಂತಸಗೊಂಡು, ತನ್ನ ತಂದೆಗೆ ಪಾಂಡವರ ಕುರುಹು ತಿಳಿಸುವ ಪ್ರಸಂಗವೂ ನಿರೂಪಣಾ ತಂತ್ರದ ದೃಷ್ಟಿಯಿಂದ ಯಶಸ್ವಿಯಾಗಿದೆ (ಪಾಂಡವರ ಕುರುಹು ಬಯಲಾಗುವ ತಂತ್ರ).
ವನವಾಸಕ್ಕೆ ತೆರಳಿದ ಪಾಂಡವರು ಅಲ್ಲಿ ಹೇಗೆ ವಾಸಿಸುತ್ತಿದ್ದಾರೆಂಬುದನ್ನು, ವಿದುರ ನೋಡಿ ಬರುತ್ತಾನೆ. ಪಾಂಡವರು ವನವಾಸದಲ್ಲಿ ಜೀವಿಸುತ್ತಿರುವ ಪರಿಯನ್ನು, ಅವರನ್ನು ಕಂಡು ಬಂದ ವಿದುರ ವಿವರಿಸುತ್ತಾನೆ. ಇದರಿಂದಾಗಿ, ಪಾಂಡವರು ಅರಣ್ಯದಲ್ಲಿದ್ದರೂ ಅವರ ಧೈರ್ಯಶೌರ್ಯಗಳು ಎಳ್ಳುಕಾಳಿನಷ್ಟು ಕಡಿಮೆಯಾಗದ್ದು ತಿಳಿದು ಧೃತರಾಷ್ಟ್ರನಿಗೆ ಮನಸ್ಸಿನಲ್ಲಿ ಒಂದು ರೀತಿಯ ಭಯ ಉಂಟಾಗುತ್ತದೆ. ಅರ್ಜುನನ ನಿವಾತಕವಚರನ್ನು ಕೊಂದು ಬರುವುದನ್ನು ಅರ್ಜುನನಿಂದಲೇ ಹೇಳಿಸಿದ್ದಾನೆ. ಅವನ ಸ್ಥೈರ್ಯ ಸಾಹಸಗಳು ಪಾಂಡವರಲ್ಲಿ ಧೈರ್ಯ, ಆತ್ಮ ಸ್ಥೈರ್ಯವನ್ನು ತುಂಬುತ್ತದೆ.
ಕರ್ಣ ಪರುಶುರಾಮನಿಂದ ಶಾಪಗ್ರಸ್ತನಾಗಿರುವ ಸಂಗತಿ, ಅವನು ಯುದ್ಧಕ್ಕೆ ಸೇನಾಧಿಪತಿಯಾಗಿ ಆಯ್ಕೆಯಾದ ನಂತರ, ಕರ್ಣನಿಂದಲೇ ತಿಳಿಯುವಂತೆ ಯೋಜಿಸಿದ್ದಾನೆ. ಸತತವಾಗಿ ಪರಾಕ್ರಮದ, ಶೌರ್ಯದ ಅವಶ್ಯಕತೆಯಿರುವ ಸಮಯದಲ್ಲಿ, ಈ ಶಾಪ ತಿಳಿದುಬಂದು ಕರ್ಣನಂತಹ ಅಪ್ರತಿಮವೀರನ ದಯನೀಯ ಸ್ಥಿತಿಯನ್ನು ಮತ್ತಷ್ಟು ಪ್ರಭಾವಶಾಲಿಯಾಗಿ ನಿರೂಪಿಸುತ್ತದೆ. ಹೀಗೆ ಕಥಾನಕದ ನಿರೂಪಣೆಯಲ್ಲಿ ಕುಮಾರವ್ಯಾಸ ಅನೇಕ ಭಾಗಗಳನ್ನು ನೇರ ನಿರೂಪಿಸುವ, ಹಲವು ಭಾಗಗಳನ್ನು, ಘಟನೆಗಳನ್ನು ತನ್ನ ಪಾತ್ರದ ಮೂಲಕ ನಿರೂಪಣೆ ಮಾಡಿಸುವ ತಂತ್ರ ವಿನ್ಯಾಸವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದಾನೆ. ಕಥಾನಕದಲ್ಲಿ, ವರ್ತಮಾನದಲ್ಲಿ ನಡೆದು, ನಾಟಕೀಯ ಆಂಶವಿರುವ ಘಟನೆಗಳನ್ನು ಕವಿ ತಾನೇ ನೇರ ನಿರೂಪಿಸುತ್ತಾನೆ. ಜೂಜಿನ ಪ್ರಸಂಗ, ದ್ರೌಪದೀ ವಸ್ತ್ರಾಪಹರಣ, ವಿವಾಹಗಳು, ಯುದ್ಧಗಳು ಇಂತಹವುಗಳನ್ನು ಹೆಸರಿಸಬಹುದು.
ತಿಣಿಕಿದನು ಫಣಿರಾಯ ರಾಮಾ-
ಯಣದ ಕವಿಗಳ ಭಾರದಲಿ ತಿಂ-
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ | (ಆದಿಪರ್ವ 1.17)
ಎಂದು ಹೇಳಿ ‘ಮಹಾಭಾರತ’ ವನ್ನು ತನ್ನ ಕಾವ್ಯದ ವಸ್ತುವಾಗಿ ಆರಿಸಿಕೊಂಡರೂ, ರಾಮಾಯಣದ ಉಲ್ಲೇಖ ಅನೇಕ ಬಾರಿ ಬರುತ್ತದೆ. ತನ್ನ ಸಮಕಾಲೀನ ಅನುಭವವನ್ನು ಅಭಿವ್ಯಕ್ತಿಸಲು ಪುರಾಣ ಇತಿಹಾಸಗಳ ಮಿಶ್ರಣವಾದ “ಮಹಾಭಾರತ” ಸೂಕ್ತ ಮಾಧ್ಯಮ ವೆಂದೆನಿಸಿರಬಹುದು ಕವಿಗೆ. ಘಟನೆಗಳನ್ನು ವಿವರಿಸುವ ಸರಿಯಾದ ಸಮಯ ಪ್ರಜ್ಞೆಯಿಂದಾಗಿ ಕುಮಾರವ್ಯಾಸನ ನಿರೂಪಣಾ ವಿನ್ಯಾಸ ಅತ್ಯಂತ ಪ್ರಭಾವಶಾಲಿ ಎನಿಸುತ್ತದೆ. [ಕೆಲವು ಉದಾಹರಣೆಗಳನ್ನು ಮಾತ್ರ ಕೊಟ್ಟಿದ್ದೇನೆ.]
This is the sixteenth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.