ಆ ರಥದ ಸ್ವರೂಪದ ವಿವರಣೆಯನ್ನು ಓದಿದ ಮೇಲೆ ರಥ ಎಂದರೆ ಹೇಗಿರಬಹುದೆಂಬ ಬೃಹತ್ ಕಲ್ಪನೆ ನಮ್ಮ ಮುಂದೆ ಸುಳಿಯುತ್ತದೆ.
ಅರಸ ಕೇಳೈಹತ್ತು ಸಾವಿರ-
ತುರಗನಿಕರದ ಲಳಿಯ ದಿವ್ಯಾಂ-
ಬರದ ಸಿಂಧದ ಸಾಲ ಸತ್ತಿಗೆಗಳ ಪತಾಕೆಗಳ |
ಖರರುಚಿಯ ಮಾರಾಂಕವೋ ಸುರ-
ಗಿರಿಯ ಸೋದರವೋ ಮೃಗಾಂಕನ
ಮರುದಲೆಯೊ ಮೇಣೆನಲು ರಥ ಹೊಳೆದುದಂಬರದಿ || (ಅರಣ್ಯ ಪರ್ವ 7.12)
ಇಂತಹ ದಿವ್ಯರಥವನ್ನು ಏರಿದ ಅರ್ಜುನನನ್ನು ಮಾತಲಿ “ಧೃಢವಾಗು” ಎಂದು ಹೇಳಿ ಕುದುರೆಗಳನ್ನು ಚಪ್ಪರಿಸುತ್ತಾನಂತೆ – ವಿಮಾನ ಮೇಲೇರುವಾಗ ಬೆಲ್ಟ್‍ಗಳನ್ನು ಕಟ್ಟಿಕೊಳ್ಳಿ ಎನ್ನುವಂತೆ – ರಥ ಮೇಲೇರುತ್ತಿದ್ದಂತೆ ಅರ್ಜುನನಿವ ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಈ ಭೂಮಿಗೆ ಅಂಟಿಕೊಂಡಿರುವ ಎಲ್ಲ ಮರ್ತ್ಯರಿಗೆ ಮೂಡುವಂತಹವು. “ಈ ಲೋಕಂಗಳಳತೆಯ ಸೂರಿಯನ ರಥಗತಿಯನೆಸೆವಾ, ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆಂದು” (ಅರಣ್ಯ ಪರ್ವ 7.20) ಮಾತಲಿಯನ್ನು ಕೇಳುತ್ತಾನೆ. ಕುಮಾರವ್ಯಾಸ ಅರ್ಜುನನನ್ನು ಕುತೂಹಲ ಮೂರ್ತಿಯನ್ನಾಗಿ ಮಾಡಿ ಬ್ರಹ್ಮಾಂಡವೆಷ್ಟಗಲ, ಉರುತರ ಗ್ರಹರಾಶಿ, ಧ್ರುವನಿರವು ಮೇಲೆನಿತೆನಿತು ಯೋಜನ, ಇನ್ನೂ ಮುಂತಾದ ಅನೇಕ ಪ್ರಶ್ನೆಗಳನ್ನು ಕೇಳಿಸಿ, ಮಾತಲಿ ಯಿಂದ ಭೂಗೋಳ, ಖಗೋಳಶಾಸ್ತ್ರ, ನಕ್ಷತ್ರ ಮಂಡಲ, ಹದಿನಾಲ್ಕು ಲೋಕಗಳು, ರಾಶಿ ವಿಂಗಡಣೆ ಸೂರ್ಯರಥ ಮುಂತಾಗಿ ಭುವನ ಕೋಶವನ್ನೇ ನಮ್ಮ ಮುಂದೆ ತೆರೆದಿಡಿಸುತ್ತಾನೆ, ಈ ಕವಿ. ಅವನು ವಿವರಿಸುವ ಈ ಬ್ರಹ್ಮಾಂಡದ ಲೆಕ್ಕ ತಲೆಧಿಮ್ಮೆನಿಸುತ್ತದೆ (ಅರಣ್ಯ ಪರ್ವದ ಪದ್ಯಗಳು 7.54-58 ಇತ್ಯಾದಿ). ಎಲ್ಲ ವಿವರಗಳೂ ಕುಮಾರವ್ಯಾಸನಿಗೆ ಲಭ್ಯವಿದ್ದಿರಬಹುದು. ಆದರೆ ಆ ವಿವರಗಳನ್ನು ವಿಹಿತ ಸನ್ನಿವೇಶದಲ್ಲಿ ತನ್ನ ಕಾವ್ಯದ ಪಾತ್ರಕ್ಕೆ ಅಳವಡಿಸಿ ಆ ಪಾತ್ರದ ಅನುಭವವನ್ನಾಗಿ ಮಾಡುವುದು ಕುಮಾರವ್ಯಾಸನ ಪ್ರತಿಭೆಯ ವೈಶಿಷ್ಟವೆನ್ನಬಹುದು. ಗದುಗನ್ನೇ ಬಿಟ್ಟು ಹೋಗಿದ್ದಿರಲಾರ ಈ ಕವಿ ಆದರೆ ಎಲ್ಲವನ್ನೂ ಕಣ್ಣಿಂದ ಕಂಡಂತೆ ವರ್ಣಿಸುವ ಚಮತ್ಕಾರ ರವಿ ಕಾಣದ್ದನ್ನು ಕವಿ ಕಂಡ ಎಂಬುದನ್ನು ನಿಜಮಾಡುತ್ತದೆ. ಕಾಲದ ಬಗೆಗೆ ಕುಮಾರವ್ಯಾಸ ನೀಡುವ ಲೆಕ್ಕ ಬೆರಗುಗೊಳಿಸುತ್ತದೆ. “ಕಾಲವೆಂಬುದು ರವಿಯ ಗಾಲಿಯ ಕಾಲಗತಿಯೈ” (ಅರಣ್ಯ ಪರ್ವ 7.72) ಎಂದೂ ಹೇಳುತ್ತಾನೆ. ಊರ್ವಶೀ ಪ್ರಸಂಗ ಭೂಲೋಕದವರಿಗೂ, ಅಮರಾವತಿಯವರಿಗೂ ನಡೆನುಡಿಯಲ್ಲಿರುವ ನೈತಿಕ ಮೌಲ್ಯಗಳಲ್ಲಿನ ಅಂತರವನ್ನು ಅಭಿವ್ಯಕ್ತಿಸುತ್ತದೆ. ಊರ್ವಶಿ, ವಾವೆಯಲ್ಲಿ (ವಾರಿಗೆಯಲ್ಲಿ) ತನಗೆ ಮಾತೃ ಸಮಾನವೆಂದು ಅವಳೊಡನೆ ಲೈಂಗಿಕ ಸಂಬಂಧಕ್ಕೆ ನಿರಾಕರಿಸಿ ಅರ್ಜುನ ಅವಳ ಶಾಪಕ್ಕೆ ಗುರಿಯಾಗುತ್ತಾನೆ. ಇಂದ್ರಲೋಕದ ಉತ್ಸವಗಳಲ್ಲಿಯೂ, ಭೂಲೋಕದ ಉತ್ಸವಗಳ ‘ಗಜಬಜ’ವನ್ನೇ ತಂದು ತುಂಬುತ್ತಾನೆ. ಅಲ್ಲಿಯದನ್ನಿಲ್ಲಿಗೆ, ಇಲ್ಲಿಯ ವ್ಯವಹಾರವನ್ನಲ್ಲಿಗೆ ಬದಲಾಯಿಸಿಬಿಡಬಲ್ಲ ಕುಶಲಿ ಈ ಕವಿ. ಇಂದ್ರನಾಸ್ಥಾನಕ್ಕೆ ಪ್ರವೇಶಿಸಲು ನೂಕುನುಗ್ಗಲು, ಅಲ್ಲಿ ಕಾವಲಿರುವವರು (ಬಾಗಿಲು ಕಾಯುವವರು) ಹೀಗೆ ಹೇಳುತ್ತಾರಂತೆ. “ನೂಕು ಬಾಗಿಲ ಚಾಚು ಬಣಗು ದಿವೌಕಸರ ನೀಲಿಸ್ವಲ್ಪ ಪುಣ್ಯರನೇಕೆ ಹೊಗಿಸದೆ” (ಅರಣ್ಯ ಪರ್ವ 7.87) ಇತ್ಯಾದಿ . . . ಕಡಿಮೆ ಪುಣ್ಯದವರಿಗೆ (less previlaged) ಅಲ್ಲಿಯೂ ಒಳಗೆ ಪ್ರವೇಶವಿಲ್ಲವೆಂಬುದು ಸಿದ್ಧವಾಗುತ್ತದೆ. ಅಪ್ಸರೆಯರ ಬೆಡಗನ್ನೂ, ಸೌಂದರ್ಯವನ್ನೂ ವರ್ಣಿಸುವಾಗ ಕವಿಯ ಕೈ ಉದ್ದವಾಗುತ್ತದೆ. ಅರ್ಜುನನ ಅಭಿಸಾರಿಕೆಯಾಗಿ ಬರಲು ಊರ್ವಶಿ ನಡೆಸುವ ತಯಾರಿ, ಯಾವ ಆಧುನಿಕ ತಾರಾಮಣಿಯ ತಯಾರಿಗಿಂತ ಕಡಿಮೆಯೇನಿಲ್ಲ. (ಪೋಪ್ ಕವಿಯ ‘ಬೆಲಿಂಡಾಳ ಅಲಂಕಾರ’ ದ ನೆನಪಾಗುತ್ತದೆ) “ಬಂದಳೂರ್ವಶಿ ಬಳ್ಳಿ ಮಿಂಚಿನ ಮಂದಿಯಲಿ ಮುರಿದಿಳಿವ ಮರಿಮುಗಿಲಂದದಲಿ” (ಅರಣ್ಯ ಪರ್ವ 8.13) ಎನ್ನುತ್ತಾನೆ ಕವಿ. ಊರ್ವಶಿಯ ಇಚ್ಚೆಗೆ ಅರ್ಜುನ ಒಪ್ಪದಿದ್ದಾಗ “ಮಾನಿನಿಯರಿಚ್ಛೆಯನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ, ಕುರಿ ಕಣಾ” (ಅರಣ್ಯ ಪರ್ವ 8.28) ಎಂದು ಅರ್ಜುನನನ್ನು ನಪುಂಸಕನಾಗೆಂದು ಶಪಿಸುತ್ತಾಳೆ. “ಸುರಭವನ ವಧುಗಳು ನಾಗರಿಗರಿವರೆತ್ತ, ಭಾರತ ಭೂಗತರು ತಾವೆತ್ತ” (ಅರಣ್ಯ ಪರ್ವ 8.44) ಎಂದು ಕೊಳ್ಳುವ ಅರ್ಜುನನ ನುಡಿಗಳಲ್ಲಿ, ಸುರಲೋಕಕ್ಕೂ, ಮರ್ತ್ಯಲೋಕಕ್ಕೂ, ನಡೆ ನುಡಿಗಳಲ್ಲಿ ಕಂಡು ಬರುವ ನೈತಿಕ ಮೌಲ್ಯದ ಅಂತರ ವ್ಯಕ್ತಗೊಳ್ಳತ್ತದೆ. ಈ ಭೂಮಿಯ ಮೇಲಿನ ಸಂಬಂಧಗಳಲ್ಲಿನ ತೊಡಕನ್ನೂ, ಅನುಬಂಧಗಳಲ್ಲಿನ ನೈತಿಕ ಹಿರಿಮೆ, ಜಟಿಲತೆಗಳನ್ನು ಎತ್ತಿ ಹಿಡಿಯುತ್ತಾನೆ ಕುಮಾರವ್ಯಾಸ.
ಕಠಿಣ ತಪಸ್ಸಿಗೆ ಪರಿಹಾರವೆಂಬಂತೆ ಅರ್ಜುನ ಐದು ವರ್ಷಗಳು, ಇಂದ್ರಭವನದ ಸಿರಿಯನ್ನನುಭವಿಸುತ್ತಿದ್ದರೆ, ಧರ್ಮರಾಜಾದಿಗಳು ಅರ್ಜುನನ ಇರವು ಎಲ್ಲಿ ಎಂಬುದನ್ನು ತಿಳಿಯದೆ ಚಿಂತಾಕ್ರಾಂತರಾಗುತ್ತಾರೆ. ಕುಮಾರವ್ಯಾಸನಲ್ಲಿ ಸಿಗುವ ಈ ಸಮಯದ ವಿವರಗಳಿಂದ ಅರ್ಜುನ ನಿಜವಾಗಿ ವನವಾಸ ಮಾಡಿದುದು, ಉಳಿದವರಿಗೆ ಹೋಲಿಸಿದರೆ ಬಹಳ ಕಡಿಮೆ ಅವಧಿ. ಇಂದ್ರನಿಂದ ಕಳುಹಿಸಲ್ಪಟ್ಟ ಲೋಮಶನ ಮಹರ್ಷಿಯಿಂದ ಅರ್ಜುನನ ಕ್ಷೇಮ ಸಮಾಚಾರ ಉಳಿದ ಪಾಂಡವರಿಗೆ ತಿಳಿಯುತ್ತದಲ್ಲದೆ ಆ ಮಹರ್ಷಿಯಿಂದ, ನಳ, ವೃತ್ರ, ಚವನ, ಅಗಸ್ತ್ಯ, ಜಮದಗ್ನಿ ಮುಂತಾದವರ ಅನೇಕ ಉಪಾಖ್ಯಾನಗಳೂ ತಿಳಿದು ಬರುತ್ತವೆ. ಇವುಗಳನ್ನೆಲ್ಲಾ ಅತ್ಯಂತ ಸಂಕ್ಷಿಪ್ತವಾಗಿ ನಿರೂಪಿಸುವ ಕುಮಾರವ್ಯಾಸ, ಅದೇಕೋ ದಮಯಂತಿ, ಲೋಪಾಮುದ್ರೆ, ಸುಕನ್ಯ ಮುಂತಾದವರ ಹೆಸರನ್ನು ಕೂಡ ತಿಳಿಸದಿರುವುದು ಆಶ್ಚರ್ಯವೆನಿಸುತ್ತದೆ (ಸ್ವರ್ಗದ ಸುಂದರಿಯರ ಹೆಸರಿನ ಪಟ್ಟಿಯನ್ನೇ ಕೊಡುತ್ತಾನೆ) ಈ ಕಥಾನಕಗಳು ಎಲ್ಲರಿಗೂ ತಿಳಿದಿದ್ದವೆಂದು ಹೆಸರುಗಳನ್ನು ಕೂಡ ತಿಳಿಸಿಲ್ಲವೇ?
ಸೌಗಂಧಿಕಾ ಪುಪ್ಪವನ್ನು ತಂದ ಬಳಿಕ ಭೀಮ ಮಹೀತಳಕ್ಕಿಳಿದು ಪಾರ್ಥನನ್ನು ಕಂಡು, ಅವನೊಡನೆ ಧರ್ಮರಾಜಾದಿಗಳ ಬಳಿಗೆ ಬರುತ್ತಾನೆ. ಪಾರ್ಥ ಅಮರಾವತಿಯಲ್ಲಿನ ತನ್ನ ಅನುಭವಗಳನ್ನೂ, ನಿವಾತಕವಚರೊಡನೆ ಯುದ್ಧಮಾಡಿ ತಾನು ಅವರನ್ನು ಸಂಹರಿಸಿದುದನ್ನೂ ಅರ್ಜುನ ತನ್ನ ಸೋದರರಿಗೆ ವಿವರಿಸುತ್ತಾನೆ. ಈ ಪ್ರಸಂಗ ಕಥನ ತಂತ್ರದ ದೃಷ್ಟಿಯಿಂದ ಬಹಳ ಸಮರ್ಥವಾಗಿದೆ. ಅರ್ಜುನನಲ್ಲದೆ ಅದನ್ನು ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಅನುಭವಿಸಿರುವವನೂ, ಹೋರಾಡಿ ಬಂದಿರುವನೂ ಅವನೇ. ಅಲ್ಲದೇ ಸೋದರರ ಮತ್ತು ಪತ್ನಿಯ ಎದುರು ತನ್ನ ಸಾಹಸಗಳನ್ನು - ಪಾಶುಪತಾಸ್ತ್ರ ಸಂಪಾದನೆ, ಶಿವನೊಡನೆ ಯುದ್ಧ ಮೊದಲಾಗಿ - ಹೇಳಿಕೊಳ್ಳುವುದು ಅವನಿಗೆ ಹೆಮ್ಮೆಯ ಸಂಗತಿ. ಕೇಳುವವರಿಗೆ ಸಂತಸ, ಅಭಿಮಾನ, ಮೆಚ್ಚುಗೆಗಳ ಸಂಗತಿ. ಅಲ್ಲದೆ ಕಾಡಿನಲ್ಲಿ ಯಾವುದೇ ಮನರಂಜನೆಯಿರದೆ ವಾಸಿಸುತ್ತಿದ್ದು, ಆಗಾಗ್ಗೆ ಮುನಿಗಳಿಂದ ಕಥೆ, ವೇದಾಂತಗಳನ್ನು ಕೇಳುತ್ತಿದ್ದ ಪಾಂಡವರಿಗೆ ಇದೊಂದು ಆಸಕ್ತಿಯ, ಮನೋರಂಜನೆಯ (ಕಾಲ ಕಳೆಯುವಂತಹ) ಸಂಗತಿ. ಇದಕ್ಕಿಂತಲೂ ಹೆಚ್ಚಾದ ಉದ್ದೇಶವೂ ಇದೆ ಪಾರ್ಥನಿಂದ ಈ ಸಾಹಸವನ್ನೆಲ್ಲಾ ವರ್ಣಿಸಿಸಿರುವುದರಲ್ಲಿ. ಅರ್ಜುನನ ಸಾಹಸ ಕಥನದಿಂದಾಗಿ, ಕಾಡಿನಲ್ಲಿ ನಿರ್ವೀರ್ಯರಂತೆ ಕಾಲ ಕಳೆಯುತ್ತಿದ್ದ ಪಾಂಡವರಲ್ಲಿ, ತಾವು ಶತ್ರುಗಳೊಡನೆ ಹೋರಾಡಿ ಗೆಲ್ಲಬಲ್ಲೆವೆಂಬ ಆತ್ಮಸ್ಥೈರ್ಯ ತುಂಬುತ್ತದೆ. ಹಗೆಗಳನ್ನು ನಿರ್ನಾಮ ಮಾಡುವ ಕನಸು ಕಾಣಲು ಅನುವು ಮಾಡಿಕೊಡುತ್ತವೆ; ಭೀಮಾರ್ಜುನರ ಸಾಹಸಗಳು. ಇಂತಹ ಪೌರುಷಕ್ಕೆ ಧರ್ಮರಾಯನ ಧರ್ಮಪ್ರಜ್ಞೆ, ಋತಪ್ರಜ್ಞೆ ಶ್ರೀರಕ್ಷೆಯಾಗಿ ನಿಲ್ಲುತ್ತವೆಂಬುದು ಭೀಮ ಮಹೋರಗನ ಫಣಿ ಬಂಧನದ, ಹಾಗೂ ಯಕ್ಷಪ್ರಶ್ನೆಯ ಸಂದರ್ಭಗಳಲ್ಲಿ ನಿರೂಪಿಸಲ್ಪಡುತ್ತದೆ. ಈ ಮಹೋರಗ ಬೇರಾರೂ ಅಲ್ಲ. ನಹುಷಮಹಾರಾಜ. ತಾನು ಇಂದ್ರ ಪದವಿಯಲ್ಲಿದ್ದು, ವಿಪ್ರರ ಅಪಮಾನ ಮಾಡಿದುದು, ಶಚೀದೇವಿಯನ್ನು ಬಯಸಿದುದರಿಂದ ತನಗೀಗತಿ ಬಂದಿತೆಂದು ವಿವರಿಸುತ್ತಾನೆ. ಧರ್ಮಜನ ವರವಾಗ್ದರ್ಪಣದಿಂದ ಈ ಸರ್ಪಗತಿಗೆ ವಿಶಾಪವೆಂದೂ ಉಸುರುತ್ತಾನೆ. ಯಮಧರ್ಮನೇ ತನ್ನ ಮಗ ಧರ್ಮಜನ ಧರ್ಮಪ್ರಜ್ಞೆಯನ್ನು ಪರೀಕ್ಷಿಸುವ, ಅವನ ಧರ್ಮ ಪ್ರಜ್ಞೆಯನ್ನು ಮೆಚ್ಚಿ ಹರಸುವ ಸನ್ನಿವೇಶವೇ ಯಕ್ಷಪ್ರಶ್ನೆಯ ಕಥಾವಸ್ತು. ಕೊಳದ ಬಳಿ ಸತ್ತು ಬಿದ್ದಿರುವ ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸಿಕೊಡುವೆ ಬೇಡು ಎಂದಾಗ, ಧರ್ಮರಾಯ, ಸಹದೇವನನ್ನುಳಿಸಿಕೊಂಡು, ಕುಂತಿಯ ಮಗನಾಗಿ ನಾನೊಬ್ಬನಿದ್ದೇನೆ, ಮಾದ್ರಿಯ ಮಗನಾಗಿ ಸಹದೇವನುಳಿಯಲಿ ಎನ್ನುತ್ತಾನೆ. ಧರ್ಮಜನ ಇಂತಹ ನಿಷ್ಠುರ ಧರ್ಮಪ್ರಜ್ಞೆ ಪಾಂಡವರ ಪೌರುಷದ ಶ್ರೀರಕ್ಷೆ. ಪೌರುಷದೊಡನೆ, ಸಾತ್ತ್ವಿಕ ಶಕ್ತಿಯ ಮಿಲನದಿಂದಲೇ ವಿಜಯ ಸಾಧ್ಯ ಎಂಬುದನ್ನೂ ಈ ಪ್ರಸಂಗ ಸೂಚಿಸುತ್ತದೆ.
ಮಾರ್ಕಂಡೇಯ ಮುನಿಯಿಂದ ಬ್ರಹ್ಮಾಂಡದುದ್ಭವವನ್ನು ತಿಳಿಸುತ್ತಾ “ಇನ ಶಶಿ ಕಿರಣವಿಲ್ಲದ ಮಹಾಂಧಕಾರ” (ಅರಣ್ಯ ಪರ್ವ 14.22) ವೆನ್ನುವಾಗ ಈ ಅಂಧಕಾರ, ವಿಜ್ಞಾನ ತಿಳಿಸುವ ಆದಿಮ ಅಂಧಕಾರವೇ ಅಲ್ಲವೇ ಎನಿಸುತ್ತದೆ. ಬ್ರಹ್ಮಗರ್ವಭಂಗ, ವಿಷ್ಣುವಿನ ನಾಭಿಯಲ್ಲಿ ಬ್ರಹ್ಮ ಜನನವೇ ಮುಂತಾದ ಅನೇಕ ಪೌರಾಣಿಕ ಸಂಗತಿಗಳನ್ನು, ಕ್ರೋಢೀಕರಿಸಿ ಆಸಕ್ತಿ ಹುಟ್ಟುವಂತೆ ವರ್ಣಿಸುತ್ತಾನೆ ಕುಮಾರವ್ಯಾಸ. ಅಂತೆಯೇ ಪ್ರಚಲಿತವಿರುವ ನಾಲ್ಕು ಯುಗಧರ್ಮಗಳನ್ನು ತಿಳಿಸುತ್ತಾನೆ. ಆದಿಯಲಿ ಕೃತಯುಗ ಹರಿಶ್ಚಂದ್ರಾದಿಗಳು ಸೂರ್ಯಾನ್ವಯಕೆ ಬುಧನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ . . .” (ಅರಣ್ಯ ಪರ್ವ 14.36) ಅಂತಹ ಅರಸರು ಆಳುತ್ತಿದ್ದಾಗ ವೇದಬೋಧಿತಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ ಬೆಳಗಿತು.
ಆ ಯುಗದ ತರುವಾಯಲಾ ತ್ರೇ-
ತಾಯುಗವಲೇ ಬಳಿಕ ಧರ್ಮದ
ಲಾಯದಲಿ ಕಟ್ಟಿದರಧರ್ಮವನೊಂದು ಪಾದದಲಿ |
ರಾಯ ಕೇಳೈ ದ್ವಾಪರದಲಿ ಧೃ
ಢಾಯದಲಿ ತಾಧರ್ಮವೆರಡಡಿ
ಬೀಯವಾದುದು, ನಿಂದುದೆನಿಸಿತು ನಿನ್ನ ದೆಸೆಯಿಂದ || (ಅರಣ್ಯ ಪರ್ವ 14.37)
ಕಲಿಯ ರಾಜ್ಯದಲೊಂದು ಪಾದದ
ಸಲುಗೆ ಧರ್ಮಕ್ಕಹುದು ಗಡ ವೆ-
ಗ್ಗಳೆಯವದರೊಳಸತ್ಯ ಧರ್ಮದ್ರೋಹ ಮಾತ್ಸರ್ಯ |
ಕಳವು ಹಿಂಸೆಯನೀತಿ ಲೋಭ-
ಸ್ಖಲಿತವಾರಡಿ ಠಕ್ಕು ವಂಚನೆ
ಹಳಿವು ಹಾದರಗವತೆಯೆಂಬಿವರುಬ್ಬು ಹಿರಿದೆಂದ || (ಅರಣ್ಯ ಪರ್ವ 14.38)
ನಂತರ ಆಶ್ರಮ ಧರ್ಮಗಳನ್ನು ವಿವರಿಸಿ, ಧರ್ಮವ್ಯಾಧನ ಆಖ್ಯಾನವನ್ನು ನಿರೂಪಿಸುತ್ತಾನೆ. ಧರ್ಮವ್ಯಾಧನ ಪ್ರಸಂಗದಿಂದ ವ್ಯಕ್ತಿಯ ವೃತ್ತಿಗೂ ಆತನ ಪ್ರವೃತ್ತಿಗೂ ಯಾವುದೇ ಸಂಬಂಧವಿಲ್ಲವೆನ್ನುವುದನ್ನೂ, ಕಸುಬು ಯಾವುದೇ ಆದರೂ ಅಧ್ಯಾತ್ಮ ಜ್ಞಾನ ಸಂಪಾದನೆಗಾಗಲೀ, ಆತ್ಮ ಜ್ಞಾನ ಪಡೆಯಲಾಗಲೀ ಅಡ್ಡಿಯಾಗುವುದಿಲ್ಲವೆಂಬ ತತ್ವವನ್ನು ನಿರೂಪಿಸುತ್ತಾನೆ ಕವಿ. ಆಶ್ರಮ ವ್ಯವಸ್ಥೆಯನ್ನು ವಿವರಿಸಿದ ತರುಣದಲ್ಲಿಯೇ, ಆಧ್ಯಾತ್ಮಜ್ಞಾನ, ಆತ್ಮಜ್ಞಾನಗಳ ಅರಿವು ಯಾವುದೊಂದು ಜಾತಿಯ ಸೊತ್ತಲ್ಲವೆಂಬುದನ್ನೂ ಸ್ಪಷ್ಟವಾಗಿ ತಿಳಿಸುತ್ತಾನೆ. ಭಿಕ್ಷೆ ಕೇಳಲು ಬಂದ ಬ್ರಾಹ್ಮಣ, ತನಗೆ ಭಿಕ್ಷೆ ನೀಡಲು ತಡಮಾಡಿದ ಹೆಣ್ಣನ್ನು ಕೋಪದಿಂದ ನೋಡಿದಾಗ ಆಕೆ, ನಾನೇನು “ಕುಜಾಗ್ರದ ವಿಹಗ” (ಅರಣ್ಯ ಪರ್ವ 15.04) ನಲ್ಲ ಎನ್ನುತ್ತಾಳೆ. ಈ ಬ್ರಾಹ್ಮಣ ವೇದಾಭ್ಯಾಸ ಮಾಡುತ್ತಿದ್ದಾಗ, ತನ್ನ ತಲೆಯ ಮೇಲೆ ಹಿಕ್ಕೆ ಹಾಕಿದ ಹಕ್ಕಿಯೊಂದನ್ನು ಮುನಿದು ನೋಡಿದಾಗ ಆ ಹಕ್ಕಿ ಸತ್ತು ಕೆಳಕ್ಕೆ ಬಿದ್ದಿರುತ್ತದೆ. ಈ ಸಂಗತಿ ಈ ಹೆಣ್ಣಿಗೆ ಹೇಗೆ ತಿಳಿಯಿತೆಂಬುದು ಬ್ರಾಹ್ಮಣನಿಗೆ ಅಚ್ಚರಿಯುಂಟುಮಾಡುತ್ತದೆ. ಆ ಹೆಂಗಸಿನ ಅಪರೋಕ್ಷ ಜ್ಞಾನದಿಂದ ನಮಗೂ ಆಶ್ಚರ್ಯವಾಗುತ್ತದೆ. ಆಕೆಯ ಆದೇಶದ ಮೇರೆಗೆ ಆ ಬ್ರಾಹ್ಮಣ ಧರ್ಮವ್ಯಾಧನಿಂದ ಉಪದೇಶ ಕೇಳಲು ಬರುತ್ತಾನೆ. ಆ ವ್ಯಾಧ ತನ್ನ ವೃತ್ತಿ ಧರ್ಮವನ್ನು ಬ್ರಾಹ್ಮಣನಿಗೆ ವಿವರಿಸಿದುದಲ್ಲದೆ ಸದ್ಧರ್ಮಗತಿ ಯಾವುದೆಂಬುದನ್ನೂ ವಿವರಿಸುತ್ತಾನೆ. ನಂತರ ಧರ್ಮವ್ಯಾಧ ಹೀಗೆ ಹೇಳುತ್ತಾನೆ.
ನೀವು ಜಾತಿಯೊಳಧಿಕತರರಿಂ-
ದಾವು ಜಾತಿವಿಹೀನರಾಗಿಯೆ
ಭಾವಶುದ್ಧಿಯಲೇ ಸ್ವಧರ್ಮಾಚಾರಮಾರ್ಗದಲಿ |
ಆವುದೂಣೆಯವಿಲ್ಲವೀ ದ್ವಿಜ-
ದೇವಗುರು ಪರಿಚರ್ಯದಲಿ ಸಂ-
ಭಾವಿರತು ನಾವಾದೆವೆಮ್ಮನು ನೋಡಿ ನಡೆಯೆಂದ || (ಅರಣ್ಯ ಪರ್ವ 15.17)
‘ಭಾವಶುದ್ಧಿ’ ಎನ್ನುವ ಪದ ಕುಮಾರವ್ಯಾಸ ಬಹಳ ಪ್ರೀತಿಯಿಂದ ಅನೇಕ ಬಾರಿ ಉಪಯೋಗಿಸುವಪದ, ಬಹುಶ: ಜಾತಿ ಪದ್ಧತಿಯಲ್ಲಿ ನುಸುಳಿದ್ಧ ಮೇಲು ಕೀಲುಗಳೆಂಬ ವಿಭೇದಗಳನ್ನು, ವ್ಯಾಧನೊಬ್ಬ ವೇದಾಭ್ಯಾಸ ಮಾಡಿದ ಗುರು ಸ್ಥಾನದಲ್ಲಿ ನಿಂತು ಉಪದೇಶಿಸುವ ಚಿತ್ರಣ ಕಡಿಮೆ ಮಾಡಿರಲೂ ಬಹುದು. ಅಥವಾ ಹೆಚ್ಚಿಸಿಯೂ ಇರಬಹುದು. ‘ಅರಣ್ಯ ಪರ್ವ’ ಕೂಡ ವೈವಿಧ್ಯಮಯ ಪ್ರಸಂಗಗಳನ್ನೊಳಗೊಂಡು, ವಿವಿಧ ರಸಭಾವಗಳನ್ನುಕ್ಕಿಸುತ್ತಾ, ಒಂದೊಂದು ಘಟನೆಯೂ ಕಾವ್ಯದ ಮುಖ್ಯ ಕ್ರಿಯೆಗೆ ಒತ್ತಾಸೆಯಾಗಿ ನಿಲ್ಲುತ್ತವೆ.
ಅರಣ್ಯ ಪರ್ವದ ನಂತರದ ವಿರಾಟ ಪರ್ವದಲ್ಲಿ, ಕೀಚಕ ವಧೆ ಕಥಾನಕದ ಶೀಘ್ರ ತಿರುವಿಗೆ ಚಾಲನೆ ಕೊಡುತ್ತದೆ. ಭೀಮನಿಂದಲ್ಲದೆ ಮತ್ತಾರಿಂದಲೂ ಕೀಚಕನನ್ನು ಹಾಗೆ ಕೊಲ್ಲಲ್ಲು ಸಾಧ್ಯವಿಲ್ಲವೆಂದೂ, ಪಾಂಡವರು ವಿರಾಟ ನಗರಿಯಲ್ಲಿಯೇ ಇರಬೇಕೆಂದೂ, ಅವರನ್ನು ಅವಧಿಗೆ ಮುನ್ನವೇ ಅಜ್ಞಾತವಾಸದಿಂದ ಹೊರಗೆ ಬರುವಂತೆ ಮಾಡುವ ಉದ್ದೇಶ ದಿಂದ ದುರ್ಯೋಧನ ವಿರಾಟರಾಯನ ಗೋವುಗಳನ್ನು ಹಿಡಿಯುತ್ತಾನೆ. ವಿರಾಟನ ಅರಮನೆಯಲ್ಲಿದ್ದರೆ, ಪಾಂಡವರು ಗೋವುಗಳನ್ನು ಬಿಡಿಸಿಕೊಳ್ಳಲು ಬಂದೇ ಬರುತ್ತಾರೆ. ಆಗ ಅವರನ್ನು ಗುರುತಿಸಿ, ಮತ್ತೆ ವನವಾಸಕ್ಕೆ ಕಳುಹಿಸ ಬಹುದೆಂಬ ಹಂಚಿಕೆ ಕೌರವನದು. ವಿರಾಟ ನಗರಿಯಲ್ಲಿಯೇ ಪಾಂಡವರು ಇರುವ ಮತ್ತೊಂದು ಸುಳಿವು ಕೊಡುವ ಸಂಗತಿ, ವಿರಾಟ ರಾಜನ ರಾಜ್ಯದಲ್ಲಿ ಆಗ ಇದ್ದ ಸುಭಿಕ್ಷ ಮತ್ತು ಸಮೃದ್ಧಿ.
". . . . ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ, ಸವೆಯವು ಬೆಳೆದ ಬೆಳಸುಗಳು |
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ ||" (ವಿರಾಟ ಪರ್ವ 4.12)
ಈ ಸಂಗತಿ ನಿಜವಿರಬಹುದು, ಆದರೆ ಯಾವ ವ್ಯಕ್ತಿ ಇರುವೆಡೆ ಸುಭಿಕ್ಷವಿರುತ್ತದೆಯೋ, ಆ ವ್ಯಕ್ತಿಯೇ ಕಾಡು ಮೇಡುಗಳಲ್ಲಿ ಅಲೆಯುತ್ತಾ, ರಾಜ್ಯ ಕಳೆದುಕೊಂಡು, ಗುರುತು ಮರೆಸಿಕೊಂಡಿರಬೇಕಾದ ಪರಿಸ್ಥಿತಿ ಬಂದಿದೆಯೆಂದರೆ ಇದಕ್ಕಿಂತ ವಿಪರ್ಯಾಸ ಬೇಕೇ ಎನಿಸುತ್ತದೆ.
This is the twelfth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.