ಕರ್ಣ ಶಿಶುವಾಗಿದ್ದಾಗಿನಿಂದಲೂ ಮನ ಸೆಳೆವ, ಮನಸ್ಸನ್ನು ಕರಗಿಸುವಂತಹ ಪಾತ್ರ. ಈ ಮಗುವಿನ ಮುಗ್ಧಮನೋಹರ ಚಿತ್ರಣವನ್ನು ಮರೆಯುವವರಾರು?
ಹೊಳೆ ಹೊಳೆದು, ಹೊಡಮರಳಿ ನಡು ಹೊ-
ಸ್ತಿಲಲಿ ಮಂಡಿಸಿ ಬೀದಿ ಬೀದಿ
ಗಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ |
ಲಲಿತರತ್ನದ ಬಾಲದೊಡಿಗೆಯ
ಕಳಚಿ ಹಾಯ್ಕುವ ಹೆಸರು ಜಗದಲಿ
ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ || (ಆದಿಪರ್ವ 3.27)
ಲೋಕವೆಲ್ಲಾ ಸೂತಪುತ್ರನೆಂದು ಹೀಗಳೆಯುತ್ತಿದ್ದಾಗ, ದುರ್ಯೋಧನ ಕರ್ಣನನ್ನು ಸ್ನೇಹದಿಂದ ಆದರಿಸಿ ರಾಜನ ಸ್ಥಾನಮಾನವನ್ನು ಕೊಟ್ಟಿದ್ದರಿಂದಾಗಿ, ಸ್ವಭಾವತಃ ಋತಮಾರ್ಗದಲ್ಲಿಯೇ ನಡೆಯುವ ಕರ್ಣ, ಕೌರವನ ಹಲವಾರು ಕುಕೃತ್ಯಗಳಲ್ಲಿ ಭಾಗಿಯಾಗಬೇಕದದ್ದು ಅವನ ದೌರ್ಭಾಗ್ಯ. ಸ್ನೇಹಋಣದಿಂದಾಗಿಯೆಂದರೂ, ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಕುಮಾರವ್ಯಾಸನ ಕರ್ಣ, ತನ್ನ ಪಾತ್ರದ ಘನತೆಗೆ ಉಚಿತವಲ್ಲದ ಮಾತುಗಳನ್ನಾಡುತ್ತಾನೆ.
ಚಪಳೆ ಫಡ ಹೋಗಿವಳು ಹಲಬರ-
ನುಪಚರಿಸುವದನರಿಯಲಾದುದು
ದೃಪದನಂದನೆ ನಡೆ ವಿಳಾಸಿನಿಯರ ವಿಧಾನದಲಿ | (ಸಭಾಪರ್ವ 14.82)
ಎನ್ನುತ್ತಾನೆ ಕರ್ಣ. ಉಳಿದಂತೆ ಕರ್ಣ ಅಸಮಾನಪರಾಕ್ರಮಿ, ಮಹಾಧರ್ಮಿಷ್ಠ, ದಾನಶೂರ ಆದರೆ ವಿಧಿವಂಚಿತ. ವಿಧಿವಿಳಾಸಕ್ಕೆ ಸಿಲುಕಿ ಹುಟ್ಟಿದಂದೇ ತಾಯಿಯಿಂದ ತ್ಯಜಿಸಲ್ಪಟ್ಟು, ಯುದ್ಧ ಆರಂಭವಾದಾಗ ತಾಯಿಯನ್ನು ಗುರುತಿಸಿ, ಅವಳಿಂದಲೇ ತನ್ನ ಸಾವಿನ ದೀಕ್ಷೆ ಪಡೆದವ, ಸಾರ್ವಭೌಮನಾಗಬೇಕಿದ್ದವನು ಹೀನಕುಲದವನೆಂದು ಎಲ್ಲರಿಂದಲೂ ಅಪಮಾನಗೊಂಡವ, ತಾಯಿಗೆ ಕೊಟ್ಟ ವಚನ, ಗುರುವಿನ ಶಾಪ, ಕೃಷ್ಣನಿಂದ ತಿಳಿದ ತನ್ನ ಜನ್ಮರಹಸ್ಯ ಇವುಗಳು ಹೆಡೆಮುರಿ ಕಟ್ಟಿ ಬಿಗಿಯುತ್ತಿರುವಾಗಲೂ ಕರ್ಣ ತನ್ನತನವನ್ನು ಕಳೆದುಕೊಳ್ಳುವುದಿಲ್ಲ. ಕೃಷ್ಣ, ಸಾರ್ವಭೌಮತ್ವದ ಆಮಿಷ ತೋರಿದರೂ, ದುರ್ಯೋಧನನ್ನು ಬಿಟ್ಟು ಹೋಗಿ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ. ಸಾವಿನ ಸಮಯದಲ್ಲಿ ಸಹ ತನ್ನ ದಾನ ಮಾಡುವ ವ್ರತಕ್ಕೆ ಭಂಗ ತಂದು ಕೊಳ್ಳದವ. ಕರ್ಣನ ಎದೆಯಲ್ಲಿ ಅಮೃತ ಕಳಸವಿದೆಯೆಂಬ ನಂಬಿಕೆಯಿತ್ತು. ಸೂರ್ಯ ಪುತ್ರನಾದ ಕರ್ಣ, ಹುಟ್ಟುವಾಗಲೇ ಕರ್ಣ ಕುಂಡಲಗಳೊಡನೆ ಹುಟ್ಟಿದ್ದನೆಂಬ ಪ್ರತೀತಿಯೂ ಇತ್ತು. ಕುರುಕ್ಷೇತ್ರದ ಮಹಾಯುದ್ಧದಲ್ಲಿ ಕರ್ಣಾರ್ಜುನರಿಗೆ ಘನ ಘೋರ ಕಾಳಗ ನಡೆಯುತ್ತಿರುವಾಗ, ಯಾವುದೇ ಬಾಣ ಪ್ರಯೋಗಕ್ಕೂ ಕರ್ಣನ ಪ್ರಾಣ ಹೋಗದಿರಲು, ಕೃಷ್ಣ ವಿಪ್ರವೇಷದಲ್ಲಿ, ರಥದಿಂದಿಳಿದು ಬರುತ್ತಾನೆ. ಕರ್ಣ ಬಳಿಬಂದ ವಿಪ್ರನನ್ನು ಗೌರವಿಸಿ, “ತಾನು ಈಗ ಏನನ್ನು ನೀಡುವ ಸ್ಥಿತಿಯಲ್ಲಿಲ್ಲ ಎಂದು ಹೇಳುತ್ತಾನೆ. ಕಪಟವಿಪ್ರ, ಕರ್ಣನ ಕಿವಿಯಲ್ಲಿ ಪ್ರಕಾಶಮಾನವಾಗಿ ತೂಗುತ್ತಿರುವ ಕುಂಡಲಗಳನ್ನು ಬೇಡುತ್ತಾನೆ. ಕರ್ಣ ಕುಂಡಲಗಳನ್ನೇನೋ ಕಿವಿಯಿಂದ ಬಿಡಿಸಿ ತೆಗೆಯುತ್ತಾನೆ. ಆದರೆ ಅವನ್ನು ವಿಪ್ರನಿಗೆ ಧಾರೆಯೆರೆದು ಕೊಡಲು ಆ ರಣರಂಗದಲ್ಲಿ ನೀರು ಎಲ್ಲಿ ಸಿಗಬೇಕು? ಕೃಷ್ಣ “ನಿನ್ನಯ ಹೃದಯದೊಳಗಿರ್ದಮಲ ಗಂಗಾಜಲವ ತೆಗೆದೆನಗೆ ಹದುಳದಿಂದೆರೆ ಧಾರೆಯನು” “ಇದರಿಂದ ನಿನಗೆ ಮುಕ್ತಿ ಸಿಗುತ್ತದೆ” (ಕರ್ಣಪರ್ವ 27.17) ಎನ್ನುತ್ತಾನೆ. ಕರ್ಣನಿಗೆ ಈ ಕಪಟವಿಪ್ರ ಕೃಷ್ಣನೆಂದು ತಿಳಿಯುತ್ತಾದಾದರೂ, ಮಗುವಾಗಿ ಬೀದಿಯಲ್ಲಿ ಕುಳಿತು ಲಲಿತರತ್ನದ ಬಾಲದೊಡಿಗೆಯ ಕಳಚಿ ಎಸೆದಷ್ಟೇ ಸಹಜವಾಗಿ, ಆ ರುದ್ರರಣರಂಗದಲ್ಲಿಯೂ
ಸರಳ ತೆಗೆದನು ಸರಸಿಜಪ್ರಿಯ-
ವರಸುತನು ತನ್ನುರವ ಬಗಿದನು
ಘರಿ ಘರಿಲು ಘರಿಲೆನಲು ತೆಗೆದನು ನಿರ್ಮಲೋದಕವ |
ಪರಮ ಸಂತೋಷದಲಿ ಧಾರೆಯ-
ನೆರೆದು ಕುಂಡಲ ವೀಯೆ ಮಿಗೆ ಪು-
ಷ್ಕರದ ಜನ ಜಯವೆನಲು ಮುರರಿಪುವೊಲಿದು ಕೈಗೊಂಡ || (ಕರ್ಣಪರ್ವ 27.18)
ಪರಮ ಕರುಣಾಸಿಂಧು ಕರ್ಣಂ-
ಗಿರದೆ ನಿಜಮೂರ್ತಿಯನು ತೋರಿದ-
ನುರುರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ | (ಕರ್ಣಪರ್ವ 27.19)
ಎನ್ನುತ್ತಾನೆ ಕವಿ. ಆದರೆ ಓದುವರಿಗಂತೂ ಕೃಷ್ಣನ ಮೇಲೆ ಅತಿಶಯ ಕೋಪಬರುತ್ತದೆ. ಈ ಮುರರಿಪುವಿಗೆ ಕರ್ಣನ ಕುಂಡಲಗಳ ಅವಶ್ಯಕತೆಯಾದರೂ ಏನಿದ್ದಿತು? ಎಲ್ಲರೂ ತನ್ನವರೆಂದು ಹೇಳುತ್ತಲೇ, ಒಬ್ಬರಿಗೆ ಒಳಿತು ಮಾಡಲು, ಇನ್ನೊಬ್ಬರಿಗೆ ಅನ್ಯಾಯಮಾಡುವ ಇದೆಂತಹ ಸಂಕೀರ್ಣ ನೀತಿ? ಕರ್ಣನ ಪರಾಕ್ರಮವನ್ನೂ, ಅವನ ಅವಸಾನವನ್ನು ಕಂಡ ಹನುಮಂತ
ಅರರೆ ಭಾಪುರೆ ಕರ್ಣ ಮಝ ಭಾ-
ಪುರೆ ಭಟಾಗ್ರಣಿ ನಿನ್ನ ಸರಿದೊರೆ-
ಯೆರಡು ಯುಗದಲಿ ಕಾಣಿನೆಂದಳಲುತ್ತಾನೆ. || (ಕರ್ಣಪರ್ವ 27.21)
ಹನುಮಂತ ಚಿರಂಜೀವಿಯೆಂಬ ನಂಬಿಕೆ ಇರುವುದರಿಂದಾಗಿ, ಅವನು ತ್ರೇತಾ ಮತ್ತು ದ್ವಾಪರ ಎರಡೂ ಯುಗಗಳ ಯುಗಪ್ರಜ್ಞೆಯಾಗುತ್ತಾನೆ. ಭಾರತದ ಕಥಾನಕದಲ್ಲಿ ಹನುಮಂತ ಕೇವಲ ಅರ್ಜುನನ ರಥದಲ್ಲಿ ಕಪಿಧ್ವಜ ಎನಿಸಿ, ಸಂಕೇತ ಮಾತ್ರವಾಗಿಲ್ಲ. ಭೀಮ ಸೌಗಂಧಿಕಾಪುಷ್ಪ ತರಲು ಹೋದಾಗ ಅಲ್ಲಿ ಹನುಮಂತ ಭೀಮನಿಗೆ ತನ್ನ ಪ್ರವರ ಹೇಳಿ ತಾನು ಹಿಂದಣ ಯುಗದ ಓಲೆಕಾರ – ರಾಮದೇವನೋಲೆಕಾರ - ನೆನ್ನುತ್ತಾನೆ. ಹಿಂದಣ ಯುಗದ ಸಂದೇಶವಾಹಕನೆನ್ನಬಹುದು. ಹನುಮಂತನನ್ನು ಕವಿ, ಹಿಂದಣ ಯುಗಧರ್ಮವನ್ನು ತಿಳಿಸಿ, ಇಂದಿನ ಯುಗಧರ್ಮವನ್ನು ವಿಮರ್ಶಿಸುವ, ಎರಡೂ ಯುಗಪ್ರಜ್ಞೆಯ, ಯುಗಸತ್ಯದ ಸಾಕ್ಷಿ ಹಾಗೂ ಪ್ರತೀಕವಾಗಿಸಿದ್ದಾನೆ. ಕೃತ ಮತ್ತು ತ್ರೇತಾಯುಗವನ್ನು ಹೋಲಿಸುತ್ತಾ ಹನುಮಂತ ಹೀಗೆ ಹೇಳುತ್ತಾನೆ. ಆ ಯುಗದ ಮನುಜರ ಸತ್ವ, ಆಯು ಸಾಮರ್ಥ್ಯ ತರುವಾಯದ ಯುಗದಲ್ಲಿಲ್ಲವೆನ್ನುತ್ತಾನೆ.
ಕೃತಯುಗದವರು ತ್ರೇತೆಯವರಿಂ-
ದತಿ ಪರಾಕ್ರಮ ಯುಕ್ತರವರದು-
ಭುತದ ಬಲವೀ ತ್ರೇತೆಯವರ, ದ್ವಾಪರ ಸ್ಥಿತಿಗೆ |
ವಿತತ ಸತ್ವರು ಕಲಿಯುಗದ ದು-
ರ್ಮತಿ ಮನುಷ್ಯವ್ರಾತ ಹೀನಾ-
ಕೃತಿ ಕಣಾ ಯುಗಧರ್ಮ ಕೃತ ಮೊದಲಾಗಿ ಕಲಿಯುಗಕೆ || (ಅರಣ್ಯಪರ್ವ 10.33)
ಎಂದು ಯುಗದಿಂದ, ಯುಗಕ್ಕೆ, ಮನುಷ್ಯನಲ್ಲಿ ಸತ್ಯದ ಇಳಿಮುಖತೆಯನ್ನು ತಿಳಿಸುತ್ತಾನೆ. ಹನುಮಂತನ ಮೂಲಕ ಕವಿ ತನ್ನ ಯುಗದ ವಿಮರ್ಶೆಯನ್ನೂ ಮಾಡಿಸುತ್ತಾನೆ.
ಹೀನ ಸತ್ವರು ಸತ್ಯಧರ್ಮ ವಿ-
ಹೀನರರ್ಥ ಪರಾಯಣರು ಕುಜ-
ನಾನುರಕ್ತರು ವರ್ಣಧರ್ಮಾಶ್ರಮ ವಿದೂಷಕರು |
ದಾನಿಗಳು ದುಷ್ಪಾತ್ರದಲಿ ಗುಣ-
ಮೌನಿಗಳು ಗರ್ವಿಕರು ಮಿಥ್ಯಾ-
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ || (ಅರಣ್ಯಪರ್ವ 10.34)
ಕಲಿಯುಗದ ವಿಮರ್ಶೆಯೇನೋ ಸರಿ, ಆದರೆ ಇದು ದ್ವಾಪರ ಯುಗದಲ್ಲಿ ಹನುಮಂತ ಭೀಮನಿಗೆ ಹೇಳಿದ ಕಾಲಜ್ಞಾನವೆಂದು ಕೊಳ್ಳಬೇಕಷ್ಟೆ. ಹನುಮಂತ ಚಿರಂಜೀವಿಯಾದರೂ, ಭೀಮ ಚಿರಂಜೀವಿ ಎನಿಸಿಲ್ಲವಲ್ಲ. ಆದ್ದರಿಂದ ಈ ಭಾಗವನ್ನು ಹನುಮಂತ ಕಾಣುವ ಕಲಿಯುಗದ ಭವಿಷ್ಯದರ್ಶನ ಎಂದುಕೊಳ್ಳುವುದು ಸೂಕ್ತ. ಅರ್ಜುನನ ರಥದಲ್ಲಿ ಧ್ವಜ ಚಿನ್ನೆಯಾಗಿ ನೆಲಸಿರುವ ಹನುಮ ಕುರುಕ್ಷೇತ್ರದ ಮಹಾಯುದ್ಧಕ್ಕೆ ಸಾಕ್ಷಿ ಪ್ರಜ್ಞೆಮಾತ್ರವಾಗಿರದೆ ಕರ್ಣನಂತಹ ವೀರರಿಂದ ಪಂಥಾಹ್ವಾನಕ್ಕೆ ಕರೆಯಲ್ಪಡುತ್ತಾನೆ. “ನಾವು ಲಂಕೆಯರಕ್ಕಸರಲ್ಲ” ಎಂದು ಮೂದಲಿಸಿಕೊಳ್ಳುತ್ತಾನೆ. ಆದರೂ ಅವನು ಕರ್ಣನ ಪರಾಕ್ರಮವನ್ನು ಮುಕ್ತವಾಗಿ ಪ್ರಶಂಸಿಸುತ್ತಾನೆ. ಲಂಕೆಯ ಘಾತಕರ ಚಾಪಳವ ಕಂಡಂತಹ ಹನುಮ ಕರ್ಣನ ಬಗೆಗೆ ಹೇಳುತ್ತಾನೆ.
ಈತನತಿಶಯ ಬಾಣರಚನಾ-
ಜಾತಿಯಿದು ಭೀಷ್ಮಾದಿ ಸುಭಟ-
ವ್ರಾತ ಕೆಲ್ಲಿಯದೆಂದು ತಲೆದೂಗಿದನು ಹನುಮ || (ಕರ್ಣಪರ್ವ 24.56)
ಎರಡೂ ಯುಗಗಳ ಕೊಂಡಿಯಂತಿರುವ ಹನುಮ, ಯುದ್ಧ ಮುಗಿದು ಅರ್ಜುನನ ರಥ, ಕೃಷ್ಣ ಇಳಿದ ನಂತರ ಛಟಛಟ ಸಿಡಿದು ಉರಿದಾಗ, ತನ್ನ ನಿಜನಿವಾಸಕ್ಕೆ ನೆಗೆದನೆನ್ನುತ್ತಾನೆ ಕವಿ. ಇಲ್ಲಿಯ ಹನುಮಂತ ಚಿರಂಜೀವಿತ್ವ ಮತ್ತು ಯುಗಪ್ರಜ್ಞೆಯನ್ನು ಪ್ರತಿನಿಧಿಸುವುದು ಈ ಎರಡು ಅಂಶಗಳಲ್ಲಿ ಗ್ರೀಕ್ ಪುರಾಣದ ಡೈರೀಸಿಯಸ್‍ನನ್ನು ಹೋಲುತ್ತಾನೆ. ಕುಮಾರವ್ಯಾಸ ತನ್ನ ಕಥಾನಕದಲ್ಲಿ ರಾಮಾಯಣ ಮತ್ತು ರಾಮಾಯಣದ ಪಾತ್ರಗಳನ್ನು ಹೆಚ್ಚಾಗಿ ಉಲ್ಲೇಖಿಸುತ್ತಾನೆ.
ಕುಮಾರವ್ಯಾಸನ ಮಹಾಕಾವ್ಯದಲ್ಲಿ ಲೌಕಿಕದಲ್ಲಿ ಅಲೌಕಿಕದ ಛವಿ, ಲೌಕಿಕ ಅಲೌಕಿಕ ಎರಡಕ್ಕೂ ಸುತ್ತಿಕೊಂಡಿರುವ ಕಲ್ಪನೆ-ಪ್ರತಿಭೆಗಳ ಹೊನ್ನ ಪ್ರಭಾವಳಿ ಇವುಗಳಿಂದಾಗಿ ಪಾತ್ರಗಳಲ್ಲಿ ಕಾವ್ಯದ ಆತ್ಮ ಪಾತ್ರಗಳಲ್ಲಿ ವ್ಯಕ್ತಗೊಂಡು, ಪಾತ್ರಗಳು ಅರಳುತ್ತವೆ. ಕವಿಗೆ ಭಾರತ ಕಥಾನಕ ಕೃಷ್ಣಚರಿತವಾದರೂ, ಆ ಪಾತ್ರವನ್ನು ದೈವೀಕರಿಸಿ ಅವನೇ ಎಲ್ಲವನ್ನೂ ನಿಯಂತ್ರಿಸುವ ಪರಮಾತ್ಮ ನೆನಿಸುವಂತೆ ಚಿತ್ರಿಸಿದ್ದಾನಾದರೂ ಕುಮಾರವ್ಯಾಸ ಕೃಷ್ಣನಿಗೆ ಮಾನವ ರೂಪವನ್ನು, ಮಾನವ ಸಹಜವಾದ ನಡೆನುಡಿಗಳನ್ನು ಕೊಟ್ಟು, ದೈವಿಕ ಛವಿ ಶಕ್ತಿಗಳನ್ನೂ ನೀಡಿದ್ದಾನೆ. ಸಂಧಿಯಾಚಿಸಲು ದುರ್ಯೋಧನನ ಸಭೆಗೆ ಬರುವ ಮೊದಲೇ ಕೃಷ್ಣನಿಗೆ ದುರ್ಯೋಧನ ಸಂಧಿಗೆ ಒಪ್ಪುವುದಿಲ್ಲವೆಂದು ತಿಳಿದಿರುತ್ತದೆ. ಅಲ್ಲದೆ ಸಂಧಿ ಮಾಡಿಸುವುದು ಅವನ ಉದ್ದೇಶವೂ ಅಲ್ಲ. ಸಂಧಿ ಮುರಿಯಲೆಂದೇ ತಾನು ಹೋಗುತ್ತಿರುವುದರಿಂದ ತನ್ನ ರಥದಲ್ಲಿ ಆಯುಧಗಳನ್ನು ತುಂಬಿಸುವಂತೆ ಸಾತ್ಯಕಿಗೆ ಹೇಳುತ್ತಾನೆ. ಸುದರ್ಶನ ಚಕ್ರವನ್ನೂ ರಥದಲ್ಲಿಡಲು ಆಜ್ಞಾಪಿಸುತ್ತಾನೆ. ಮಾನವನಾಗಿದ್ದುಕೊಂಡು ಅತಿಮಾನುಷ ನಡೆ ನುಡಿಗಳು ಇಲ್ಲಿ ಕೃಷ್ಣನ ವೈಶಿಷ್ಟ್ಯ. ಭಕ್ತರಿಗಿರುವಂತೆಯೇ ಶತ್ರುಗಳಿಗೂ ಕೃಷ್ಣಪ್ರಜ್ಞೆಯ ಅರಿವಿರುತ್ತದೆ. ಅವನು ಸಕಲ ಚರಾಚರಗಳಲ್ಲಿಯೂ ಇರುವಂಥ ಚೇತನ. ತುಂಬಿದ ಸಭೆಯಲ್ಲಿ ವಿಶ್ವರೂಪ ತೋರಿದವ, ದುರ್ಯೋಧನನೊಬ್ಬನಿಗೆ ಆ ದಿವ್ಯರೂಪ ಕಾಣಿಸದಂತೆ ಮಾಡುತ್ತಾನೆ. ಆ ರೂಪವನ್ನು ಕಂಡು ಸಾಕ್ಷಾತ್ಕರಿಸಿ ಕೊಂಡಿದ್ದರೆ ದುರ್ಯೋಧನ ಯುದ್ಧ ಮಾಡುತ್ತಿದ್ದನೇ? ಆ ದಿವ್ಯಮಂಗಳರೂಪ ತನಗೆ ಕಾಣದಿದ್ದರೂ ದುರ್ಯೋಧನನ ಅಂತರಂಗದಲ್ಲಿ ಕೃಷ್ಣ ಪ್ರಜ್ಞೆಯ ಅರಿವಿದೆ. ಜೊತೆಗೆ ತನ್ನ ನಿಲುವಿನಲ್ಲಿ ನಿಶ್ಚಲತೆ ಕೂಡ. ಕರ್ಣನಿಗೂ ಕೃಷ್ಣನ ಮಹಿಮೆಯ ಅರಿವಿದೆ. ಘಟೋತ್ಕಚ ಕೌರವ ಸೇನೆಯನ್ನು ಬಗ್ಗು ಬಡಿಯುತ್ತಿರುವಾಗ “ಮಾಧವನ ಸೂತ್ರದ ಯಂತ್ರವಿದು ಲಯಕಾಲ ನಿಮಗೆ” ನ್ನುತ್ತಾನೆ. ತನ್ನ ಸಾವಿನ ಸಮಯದಲ್ಲಿ ಕೃಷ್ಣ ದರ್ಶನ ತನ್ನ ಸುಕೃತ ಫಲವೆನ್ನುವ ಕರ್ಣ
ಇಳೆಯ ಮೇಲೆನಗಲ್ಲದಾರಿಗೆ
ಫಲಿಸುವುದು ತಾ ಧನ್ಯನೆನುತೆವೆ
ಹಳಚದಸುರಾಂತಕನನೀಕ್ಷಿಸುತಿರ್ದನಾ ಕರ್ಣ || (ಕರ್ಣಪರ್ವ 27.09)
ಕರ್ಣನ ಕೃಷ್ಣ ಪ್ರಜ್ಞೆ, ಕೃಷ್ಣ ಸಾಕ್ಷಾತ್ಕಾರಗಳನ್ನು ಕುಮಾರವ್ಯಾಸ ಹೀಗೆ ವರ್ಣಿಸುತ್ತಾನೆ.
ಒಳಗೆ ಹೃದಯಾಂಬುಜದ ಮಧ್ಯ-
ಸ್ಥಳದೊಳಗೆ ಮುರವೈರಿಯನು ಹೊರ-
ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ |
ಹೊಳೆವ ಹರಿಯನು ಕಂಡನಿದು ಹೊರ-
ಗೊಳಗೆ ಹರಿ ತಾನೆಂಬ ಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ || (ಕರ್ಣಪರ್ವ 27.10)
ಯಾವಾಗಲೂ ಕೃಷ್ಣನ ಜೊತೆಯಲ್ಲಿಯೇ ಇರುತ್ತಿದ್ದ ಅರ್ಜುನನಿಗಿಂತಲೂ ಕರ್ಣನೇ ಕೃಷ್ಣ ತತ್ವವನ್ನು ಸಂಪೂರ್ಣವಾಗಿ ಗ್ರಹಿಸಿದ್ದನೆನಿಸುತ್ತದೆ.
ಕುಮಾರವ್ಯಾಸನ ಈ ಸಮರ್ಥ ಪಾತ್ರಗಳಲ್ಲಿ ಲೌಕಿಕ, ಆಧ್ಯಾತ್ಮಿಕ, ಅದ್ಭುತ ಪರಾಕ್ರಮ ಈ ಮೂರೂ ಗುಣಗಳು ಸಂಗಮಗೊಂಡು, ಪಾತ್ರಗಳು ಅನನ್ಯಛವಿಯಿಂದ ಪ್ರಕಾಶಿಸುತ್ತವೆ. ರಾಜಸೂಯ ಯಾಗದ ಸಂದರ್ಭದಲ್ಲಿ ಭೀಷ್ಮ ಕೃಷ್ಣನ ಶ್ರೇಷ್ಠತೆಯನ್ನೂ, ದೈವತ್ವವನ್ನೂ ಹಾಡಿ ಹೊಗಳುತ್ತಾನೆ. ಅನೇಕ ಸನ್ನಿವೇಶಗಳಲ್ಲಿ ತಾನು ಸಾಕ್ಷಾತ್ಕರಿಸಿಕೊಂಡಿರುವ ಕೃಷ್ಣ ಪ್ರಜ್ಞೆಯನ್ನು ಅಭಿವ್ಯಕ್ತಿಸುತ್ತಾನೆ. ವಿದುರನಂತೂ ಕೃಷ್ಣನ ಪರಿಮಾಪ್ತ ವಿನೀತ ಭಕ್ತ, ದ್ರೌಪದಿಗಂತೂ, ನೆನೆದಾಗ ಬರುವ, ಇದ್ದಲ್ಲಿಂದಲೇ ಸಹಾಯ ಮಾಡುವ ಅಂತರಂಗದ ಆಪ್ತದೈವ, ಸಖ ಎಲ್ಲವೂ ಕೂಡ. ರಾಕ್ಷಸ ಎಂದು ಪರಿಗಣಿಸಲ್ಪಡುವ ಘಟೋತ್ಕಚನಿಗೂ ಕೂಡ ಕೃಷ್ಣನ ಚೈತನ್ಯದ ಅರಿವುಂಟು. ದುರ್ಯೋಧನ “ಕೃಷ್ಣ ನಿಮಗಿನ್ನೊಡಲ ಬಳಿನೆಳಲವಸಹಿತ ಬಾ” ಎಂದು ಘಟೋತ್ಕಚನಿಗೆ ಹೇಳಿದಾಗ “. . . ಹರಿಯಂತಿರಲಿ, ಚೈತನ್ಯಾತ್ಮನಾತನ ಮಾತೇಕೆ?” ಎನ್ನುತ್ತಾನೆ ಘಟೋತ್ಕಚ. ಕೃಷ್ಣ ಪಾಂಡವರ ಪ್ರಾಣ, ಆತ್ಮ, ಕಾನೂನು ಸಲಹಾಕಾರ, ಯುದ್ಧತಂತ್ರಗಳ ನಿರ್ದೇಶಕ. ಅಂತೆಯೇ ಕವಿ ಕೃಷ್ಣನನ್ನು “ಭುವನದ ಗೂಡು ಕೃಷ್ಣನ ದೇಹವಿದು” ಎನ್ನುತ್ತಾನೆ. ಕೃಷ್ಣನ ಪಾತ್ರ ದೈವತ್ವದ ನೆಲೆಯಲ್ಲಿ ನಿಂತು, ಹಲವಾರು ಬಾರಿ ಅತಿಮಾನುಷ ಎನ್ನುವಂತೆ ನಡೆದುಕೊಂಡು, ಅಲೌಕಿಕತೆ ಯಿಂದ ಮೆರೆದರೂ, ಲೌಕಿಕದ ಪರಿಧಿಯಲ್ಲಿಯೇ ಸುಳಿದಾಡುತ್ತಾ, ದೈವ ಹಾಗೂ ಮಾನವ ಶಕ್ತಿ, ಗುಣಗಳ ಸಂಗಮವಾಗಿ ವಿಶಿಷ್ಟ ಛವಿಯಿಂದ ಕಂಗೊಳಿಸುತ್ತದೆ. ಕುಮಾರವ್ಯಾಸನಂತೂ ಕೃಷ್ಣನ ಪಾತ್ರ ಸುಳಿದರೆ ಸಾಕು ಭಕ್ತಿಯ ಆವೇಶದಿಂದ ನೂರು ನಾಲಿಗೆಗಳಾಗಿ ವರ್ಣಿಸತೊಡಗುತ್ತಾನೆ. ಹಾಗೆಂದು ಕವಿ ಕೃಷ್ಣನ ಪಾತ್ರವನ್ನು ಪ್ರಯತ್ನ ಪೂರ್ವಕ ವೈಭವೀಕರಿಸುತ್ತಾನೆ ಎಂದಲ್ಲ. ಇಲ್ಲಿ ನಾವು ಕಾಣುವುದು ಭಕ್ತ, ಭಾಗವತ ಕವಿಯ ಪ್ರಾಮಾಣಿಕ ಕಾಣ್ಕೆ. ಆ ಕಾಣ್ಕೆಯಂತೆ, ಕೃಷ್ಣ ಸಕಲ ಚರಾಚರದಲ್ಲಿ ಕಾರ್ಯನಿರತವಾಗಿರುವ ಪರತತ್ವ, ವಿಶ್ವಾತ್ಮ, ಸರ್ವಜ್ಞ, ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ ಕರ್ತ. ಇಂತಹ ಕೃಷ್ಣ, ತನ್ನ ಪ್ರತಿಜ್ಞೆಯನ್ನು ಮರೆತು ಭೀಷ್ಮನನ್ನು ಸಂಹರಿಸಲು ಚಕ್ರಹಿಡಿಯುತ್ತಾನೆ. ತನ್ನನ್ನು ನಂಬಿದವರನ್ನು ಕಾಪಾಡಲೆಂದು - ಪ್ರತಿಜ್ಞೆ ಮರೆತು ಚಕ್ರ ಹಿಡಿದೆನಲ್ಲಾ ಎಂದು ನಾಚುತ್ತಾನೆ. ಹೀಗೆ ದೈವತ್ವದೊಂದಿಗೆ ಹಾಸುಹೊಕ್ಕಾಗಿರುವ ಮಾನವ ಸಹಜ ನಡವಳಿಕೆಗಳಿಂದಾಗಿ ಕೃಷ್ಣನ ಅಲೌಕಿಕತೆ ಕಡಿಮೆಯಾಗುತ್ತದೆ. ಕೃಷ್ಣನನ್ನು ಸ್ತುತಿಸುವಷ್ಟೇ ನಿಷ್ಟೆ ಭಕ್ತಿಗಳಿಂದ, ಕುಮಾರವ್ಯಾಸ ಶಿವನನ್ನೂ ಸ್ತುತಿಸುತ್ತಾನೆ (ಅರಣ್ಯಪರ್ವ, ಕಿರಾತಾರ್ಜುನೀಯ ಪ್ರಸಂಗ) ಹರಿಹರರಲ್ಲಿ ಭೇದ ಬೇಡವೆಂದು ಸಾರುತ್ತಾ, ಸಗುಣ-ನಿರ್ಗುಣ, ಆಕಾರ-ನಿರಾಕಾರ, ಎರಡೂ ಮಾರ್ಗದಲ್ಲಿ ರಚಿಸಿರುವ ಶಿವಸ್ತುತಿ ಪದ್ಯಗಳು ಅತ್ಯಂತ ಸುಂದರವಾಗಿವೆ. ದೈವಗಳ ಬಗೆಗೆ ಇಷ್ಟೊಂದು ಸಂಖ್ಯೆಯ ಸ್ತುತಿ ಪದ್ಯಗಳು ಬೇಕಿದ್ದವೇ ಎಂದು, ಇಂದು ನಮಗೆ ಅನಿಸಬಹುದಾದರೂ, ಕುಮಾರವ್ಯಾಸನ ಮೂಲ ಮನೋಧರ್ಮ ಭಕ್ತನದು ಹಾಗಾಗಿ ಅವನಿಗದು ಅತ್ಯವಶ್ಯಕ. ಆದರೂ ಈ ಭಕ್ತಕವಿಯ ಭಕ್ತಿಯನ್ನು ಮೀರಿಸುತ್ತಾ, ಕವಿ ಪ್ರತಿಭೆ ಉಳಿದೆಲ್ಲ ರಸಗಳನ್ನೂ ಉಕ್ಕಿಸಿ ಹರಿಸುತ್ತದೆ.
This is the fifteenth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.