ಕುಮಾರವ್ಯಾಸನಲ್ಲಿ ಕಂಡು ಬರುವ ಯುದ್ಧ ತಂತ್ರ (Stratergy of War)
ಕುರುಕ್ಷೇತ್ರದಲ್ಲಿನ ಮಹಾಯುದ್ಧದ ತಂತ್ರ ವಿನ್ಯಾಸಗಳು, ಯುದ್ಧದ ಯೋಜನೆಗಳು ವೈವಿಧ್ಯಮಯವಾಗಿವೆ. ಪದಾತಿಗಳು ಎದುರು ಎದುರು ಕಾದಿದರೆ, ರಥಿಕರು, ಅಶ್ವ, ಗಜ, ಸೈನಿಕರು ಎದುರೆದುರು ಹೋರಾಡುತ್ತಾರೆ. ಇವರೆಲ್ಲರೂ ಸೇನಾಧಿಪತಿಯ ಯುದ್ಧ ಯೋಜನೆಯಲ್ಲಿ ಸಿಕ್ಕು ನುಗ್ಗಾಗುವ ಬರಿ ಕಾಯಿಗಳು. ದ್ರೋಣ ಗರುಡ ವ್ಯೂಹ ರಚಿಸಿದರೆ – ಗರುಡ ಆಕಾರದಲ್ಲಿ ಸೈನ್ಯವನ್ನು ಅಣಿಮಾಡಿ ನಿಲ್ಲಿಸುವುದು - ಪ್ರತಿಯಾಗಿ ದೃಷ್ಟದ್ಯುಮ್ನ ಅರ್ಧ ಚಂದ್ರೋತ್ಕರ ವ್ಯೂಹ ರಚಿಸುತ್ತಾನೆ. “ಕಾಲನಬಳಗಕೌತಣವಾದಂತೆ” (ದ್ರೋಣ ಪರ್ವ 4.19) ರಂಜಿಸುವ ಪದ್ಮ ವ್ಯೂಹವನ್ನು ರಚಿಸುತ್ತಾನೆ ದ್ರೋಣ. ಮಕರ ವ್ಯೂಹ, ಶಕಟ ವ್ಯೂಹ, ಚಕ್ರ ವ್ಯೂಹ, ಹಂಸ ವ್ಯೂಹ, ಗರ್ಭ ವ್ಯೂಹ, ಸೂಚೀ ವ್ಯೂಹ ಹೀಗೆ ಯುದ್ಧದ ಈ ಯೋಜನೆಗಳು ಆಶ್ಚರ್ಯಕರವಾಗಿವೆ. ಘಟೋತ್ಕಚ ಯುದ್ಧ ಮಾಡುವ ಸಮಯ ರಾತ್ರಿಯಾದ್ದರಿಂದ, ಕವಿಗೆ ಇರುಳ ಯುದ್ಧವನ್ನು ವರ್ಣಿಸುವ, ಹಾಗೂ ರಾಕ್ಷಸರ ಮಾಯಾ ಯುದ್ಧವನ್ನು ವರ್ಣಿಸುವ ಸದವಕಾಶ. ರಾಕ್ಷಸ ಯುದ್ಧದ ವೈಶಿಷ್ಟ್ಯವೇ ಬೇರೆ
ಕೆಲರ ನುಂಗಿದನೊದೆದು ಕೊಂದನು
ಕೆಲವರನು ಹೊರಕೈಯ ಹೊಯಿಲಿನಲಿ
ಕೆಲಬರನು ಧನುವಿನಲಿ ಗದೆಯಲಿ ಹೊಯ್ದು | (ದ್ರೋಣ ಪರ್ವ 16.06)
ಕೊಲ್ಲುತ್ತಾನೆ ಘಟೋತ್ಕಚ.
ಮಾಯದಲಿ ಹುಲಿಯಾಗಿ ಘರ್ಜಿಸಿ
ಹಾಯಿದನು ಕಲಿ ಸಿಂಹವಾಗಿ ಗ-
ದಾಯುಧದಲಪ್ಪಳಿಸಿದನು ಭೈರವನ ರೂಪಾಗಿ | (ದ್ರೋಣ ಪರ್ವ 16.08)
ಆ ರಾಕ್ಷಸ ಭೀಮ ತತ್ವ ಹಾಗೂ ರಾಕ್ಷಸ ತತ್ವಗಳ ಫಲವಾಗಿ ಜನಿಸಿದ ಘಟೋತ್ಕಚ “ಬಿರುಗಾಳಿಯಾಗುತ್ತಾನೆ, ಕಾಳ್ಗಿಚ್ಚಾಗುತ್ತಾನೆ, ಸಿಡಿಲಾಗಿ ಎರಗುತ್ತಾನೆ, ಮಿಂಚಾಗಿ ಕಂಗಳೋಳಿರಿಕುತ್ತಾನೆ, ಹೊಗೆಯಾಗುತ್ತಾನೆ”. ಇಂತಹ ಘಟೋತ್ಕಚನ ಆಹತಿಗೆ ಸಿಕ್ಕಿದ ರಣರಂಗ
ಸುರಿದ ಕರುಳ್ಗಳ, ಸಿಡಿದ ಹಲುಗಳ
ಜರಿದ ತಲೆಗಳ ಹಾಯ್ದ ಮೂಳೆಯ
ಹರಿದ ನರವಿನ ಬಿಗಿದ ಹುಬ್ಬಿನ ಬಿಟ್ಟ ಕಣ್ಣುಗಳ |
ಮುರಿದ ಗೋಣಿನ ಬಸಿವ ತೊರಳೆಯ
ಹರಿವ ರಕುತದ ತಳಿತ ಖಂಡದ
ಬಿರಿದ ಬಸುರಿನ ರೌರವದ ರಣಭೂಮಿ ರಂಜಿಸಿತು || (ದ್ರೋಣ ಪರ್ವ 16.11)
ಎನ್ನುತ್ತಾನೆ ಕುಮಾರವ್ಯಾಸ.
ಇಷ್ಟೆಲ್ಲಾ ವಿವರಿಸುವ ಕವಿ ರಾತ್ರಿ ಯುದ್ಧವನ್ನು ಬಣ್ಣಿಸುವ ಸುಸಂಧಿಯನ್ನು ಬಿಟ್ಟು ಕೊಡುತ್ತಾನೆಯೇ ? ಇರುಳ ಯುದ್ಧ ನಡೆಯುವಾಗ ಯಾರು ಯಾವ ಪಕ್ಷಕ್ಕೆ ಸೇರಿದವರೆಂದು ತಿಳಿಯುವುದಿಲ್ಲ. ಆಗ ದ್ರೋಣ ಹೇಳುತ್ತಾನೆ.
ತೆಗೆಸು ಚೂಣಿಯ ಬಲವ ದೀವ-
ಟ್ಟಿಗರ ಕರೆ ತೈಲ ಪೂರ್ಣದ
ತೊಗಲ ಕುನಿಕಿಲ ಬಂಡಿ ಕವಿಯಲಿ ಕೋಟಿ ಸಂಖ್ಯೆಯಲಿ |
ಬಿಗಿದ ಮಳವೆಯನೆಣ್ಣೆಗೊಪ್ಪರಿ-
ಗೆಗಳೊಳದ್ದಲಿ ಗಳೆಗಳಲಿ ಸೀ-
ರೆಗಳ ಸುತ್ತಲಿಯೆಂದು ಕೈವೀಸಿದನು ಕಲಿದ್ರೋಣ || (ದ್ರೋಣ ಪರ್ವ 15.32)
ಕೋಟಿ ಸಂಖ್ಯೆಯಲ್ಲಿ ದೀಪ ಬೇಕಾಯಿತೇ? ಈ ಲೆಕ್ಕ ನೋಡಿ,
ಬೆಳಗಿದವು ಬೊಂಬಾಳ ದೀವಿಗೆ
ಬಲದೊಳಾನೆಗೆ ಹತ್ತು ರಥಿಕಾ-
ವಳಿಗೆ ನಾಲಕು ಹಯಕೆರಡು ಕಾಲಾಳಿಗೊಂದೊಂದು |
ಬಲಸಮುದ್ರದೊಳೊಗೆದ ವಡಬಾ-
ನಳನ ಝಳವೋ ಮೃತ್ಯುವಿನ ದೀ-
ವಳಿಗೆಯಿರುಳೋ ತಿಳಿಯಲರಿದೆನೆ ಚಿತ್ರವಾಯ್ತೆಂದ || (ದ್ರೋಣ ಪರ್ವ 15.33)
ಈ ವಿವರಗಳನ್ನೋದುವಾಗ ಅದೆಷ್ಟು ಸಂಖ್ಯೆಯಲ್ಲಿ ದೀಪ ಉರಿಸಿರಬಹುದು ಎಂದು ಲೆಕ್ಕ ಸಿಗುವುದಿಲ್ಲ. ಕೋಟಿ ಸಂಖ್ಯೆ ಎನ್ನುವುದು ಉತ್ಪ್ರೇಕ್ಷೆಯೂ ಆಗುವುದಿಲ್ಲ. ಎಸ್.ಎಲ್.ಭೈರಪ್ಪನವರ ‘ಪರ್ವ’ ಕಾದಂಬರಿಯ ಕೊನೆಯ ಭಾಗದಲ್ಲಿ, ಧೃತರಾಷ್ಟ್ರನ ಅರಮನೆಯಲ್ಲಿ ದೀಪಕ್ಕೂ ಎಣ್ಣೆ ಇರಲಿಲ್ಲವೆಂಬ ಚಿತ್ರಣವಿದೆ. ಕುಮಾರವ್ಯಾಸ ವರ್ಣಿಸುವಂತಹ ರಾತ್ರಿ ಯುದ್ಧಗಳಾದರೆ ಎಷ್ಟು ಇದ್ದರೆ ತಾನೇ ಸಾಕಾಗುತ್ತದೆ. ಯುದ್ಧವೆಂಬ ಮಹಾರಾಕ್ಷಸ ಜನರ ಬಳಕೆಗೆ ಅವಶ್ಯವಿರುವ ಸಾಮಗ್ರಿಗಳನ್ನು ತನ್ನ ಬಡಬಾಗ್ನಿಯಂತಹ ಹಸಿವಿಗೆ ಹೇಗೆ ಬಳಸಿಕೊಂಡು ಬಿಡುತ್ತಾನೆಂಬುದಕ್ಕೊಂದು ಚಿಕ್ಕ ಉದಾಹರಣೆಯಾಗುತ್ತದೆ.
ಕರ್ಣನ ಯುದ್ಧ ವೈಖರಿಯನ್ನು ಕುಮಾರವ್ಯಾಸ ಬಹಳ ವಿಸ್ತಾರವಾಗಿ ವರ್ಣಿಸುತ್ತಾನೆ. ಅವನ ಶಸ್ತ್ರಪ್ರಯೋಗವನ್ನು ವರ್ಣಿಸುವ ಶೈಲಿಯೇ ಬೇರೆ. ಅಸ್ತ್ರ ಪ್ರಯೋಗಗಳನ್ನು ವಿವರಿಸುವಾಗ ತನ್ನ ಕಲ್ಪನೆಯನ್ನು ವಿಸ್ತಾರಗೊಳಿಸಿ ಅಸ್ತ್ರಗಳ ಪರಿಣಾಮವನ್ನು ಯಥಾವತ್ ಎನ್ನುವಂತೆ ಚಿತ್ರಿಸುತ್ತಾನೆ. ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿ ಹೂಡಿದ ಎಂದು ಸುಮ್ಮನಾಗುವುದಿಲ್ಲ. ಆಗ್ನೇಯಾಸ್ತ್ರ ದಳ್ಳುರಿ ಬೀರುತ್ತಾ ಸೈನ್ಯದಲ್ಲಿ ಹರಡಿದಾಗ ಲೋಕವೇ ಬೇಯುತ್ತದೆ. ಸರಳ ಝಳಯೂಡಿಸುತ್ತದೆ ಎನ್ನುತ್ತಾನೆ, ಆಗ ಪಾರ್ಥ ವರುಣಾಸ್ತ್ರ ಹೂಡುತ್ತಾನೆ. ತಂಪಿನ ತುಂತುರ ತುಷಾರದಿಂದ ಉರಿ ಅಡಗುತ್ತದೆ. ನಂತರ ಮಂತ್ರ ಮಂಡಿತವಾದ ಮೇಘ ಮಾರ್ಗಣವ ಹೂಡುತ್ತಾನೆ ಅರ್ಜುನ. “ಹೊಗೆಯ ಹೊರಳಿಯ ವಿವಿಧ ವರ್ಣದ ಮುಗಿಲ ಪಾಳಯವೆತ್ತಿ ಹಗಲು ಕತ್ತಲೆ ಕವಿಯುತ್ತದೆ. ಕಲಿ ಕರ್ಣ ಜಗತ್ರಾಣಾಸ್ತ್ರವನ್ನು ಹೂಡುತ್ತಾನೆ (ವಾಯುವ್ಯಾಸ್ತ್ರ) ಬಿರುಗಾಳಿ ಬೀಸಿ ಮುಗಿಲು ಚದುರತ್ತವೆ. ಕರ್ಣ ಪರ್ವತಾಸ್ತ್ರ ಹೂಡಿದರೆ ಅರ್ಜುನ ಅದಕ್ಕೆ ಪ್ರತಿಯಾಗಿ ವಜ್ರದ ಸರಳುಗಳನ್ನು ಕಳಿಸುತ್ತಾನೆ. ಎಲ್ಲಕ್ಕಿಂತಲೂ ಘೋರವಾದದ್ದು ಕರ್ಣ ಹೂಡುವ ಉರಗಾಸ್ತ್ರ. ಈ ಉರಗಾಸ್ತ್ರ ವಿಷದ ಲೋಳೆ ಸುರಿಸುತ್ತಾ ಬಂದು ಹಾವಿನ ಮಳೆಯೇ ಸುರಿಯತೊಡಗಿದಾಗ ಅರ್ಜುನ ಗರುಡಾಸ್ತ್ರದಿಂದ ತನ್ನ ಸೈನ್ಯಕ್ಕೆ ಕೊಡೆ ಹಿಡಿಯುತ್ತಾನಂತೆ. ರಣರಂಗದಲ್ಲಿ ಅದೆಷ್ಟು ಹಾವುಗಳುದುರಿದವೋ, ಅವೆಷ್ಟನ್ನು ಹದ್ದುಗಳು ತುಂಡು ತುಂಡು ಮಾಡಿದವೋ ಹೇಳುವರಾರು. ಕರ್ಣ ಹೂಡಿದ ಉರಗಾಸ್ತ್ರದ ಪ್ರಭಾವವನ್ನು ವಿವರಿಸುವುದರಲ್ಲಿ ಕುಮಾರವ್ಯಾಸನ ಪ್ರತಿಭೆ ಕಲ್ಪನೆಗಳು ತಮ್ಮ ಪರಾಕಾಷ್ಠತೆಯನ್ನು ತಲುಪುತ್ತವೆ. ಉರಗಾಸ್ತ್ರದ ಪ್ರಭಾವ ಸ್ವರ್ಗ ಮರ್ತ್ಯಗಳನ್ನಾವರಿಸುತ್ತದೆ. ಅಸ್ತ್ರವನ್ನು ಬಿಡುಗಡೆಮಾಡಿದ ಕೂಡಲೇ ಬೆಳುನೊರೆಯ ಲಹರಿಯ ವಿಷದ ಲೋಳೆಗಳು ಉರವಣಿಸಿತಂತೆ, ಅಡಿಗಡಿಗೆ ಛಟಛಟಧ್ವನಿ ಮಸಗಿತು ಹೊರೆಯವರು ಮರನಾದರು. ರಥ ತುರುಗತತಿ ಲಟಕಟಿಸಿತು, ನಿಮಿಷದಲಿ ಉರಿ ಛಢಾಳಿಸಿ ಫೂತ್ಕೃತಿ ಹಬ್ಬಿತು, ವಿಷಧೂಮಾವಳಿ ಎಲ್ಲೆಡೆ ಹಬ್ಬಿತು. ಸಕಳ ಭುವನ ಜನ, ದೇವತತಿ ಬೆಂಡಾಯ್ತು, ಉರಿಯ ಜೀರ್ಕೊಳವೆಗಳಂತೆ ಫಣಿ ಫೂತ್ಕರಿಸಿದವಂತೆ. ಇಡೀ ಸೇನೆ, ಭಯಂಕರ ಭಾರಿಯ ವಿಷ ಪ್ರಭಾವಕ್ಕೊಳಗಾಯಿತಂತೆ. ಈ ಉರಗಾಸ್ತ್ರ ಒಂದು ರೀತಿಯ ವಿಷಾನಿಲ ವಿರಬಹುದು. ಒಂದು ರೀತಿ ತನಗೆ ತಾನೇ ಸಿಡಿಸಿಡದು ಅಕ್ಷಯವಾಗುವಂತಹ ಅಸ್ತ್ರದ ರೀತಿಯದ್ದಿರಬಹುದು. ಮತ್ತೆ ಮತ್ತೆ ಸ್ಫೋಟಿಸಬಲ್ಲ ಕ್ಷಮತೆಯಿರುವ ಅಸ್ತ್ರ ಇರಬಹುದು. ಏನೇ ಇದ್ದಿರಬಹುದು ಇದರ ಪ್ರಭಾವವನ್ನು ವರ್ಣಿಸುವುದರಲ್ಲಿನ ನಿಖರತೆ, ವಿಸ್ತಾರಗಳು ಆಶ್ಚರ್ಯ ಪಡಿಸುತ್ತವೆ.
ಕುಮಾರವ್ಯಾಸ ಕೇವಲ ಯುದ್ಧದಲ್ಲಿನ ಶಸ್ತ್ರಾಸ್ತ್ರಗಳ, ಯುದ್ಧರಂಗದ ಸಾವುನೋವುಗಳಿಗೆ ಮಾತ್ರ ತನ್ನ ಪರಿವೀಕ್ಷಣೆಯನ್ನು ಸೀಮಿತಗೊಳಿಸಿಕೊಂಡಿಲ್ಲ. ಇಂತಹ ಯುದ್ಧಗಳು, ಯುದ್ಧದಲ್ಲಿ ಭಾಗವಹಿಸುತ್ತರುವವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿ, ಅವರು ತಮ್ಮ ಮನಸ್ಸಿನ ಸಮತೋಲ ಕಳೆದು ಕೊಳ್ಳುವುದನ್ನೂ ಮನೋಜ್ಞವಾಗಿ ಚಿತ್ರಿಸುತ್ತಾನೆ. ಭೀಷ್ಮನ ಉಪಟಳ ತಾಳಲಾರದೆ ಕೃಷ್ಣ, ತಾನು ಮಾಡಿದ್ದ ಪ್ರತಿಜ್ಞೆಯನ್ನು ಮರೆತು ಚಕ್ರ ಹಿಡಿಯುತ್ತಾನೆ. ಅರ್ಜುನನಿಗೂ, ಧರ್ಮರಾಯನಿಗೂ, ಕರ್ಣನ ಅಪ್ರತಿಮ ಪಾರಾಕ್ರಮದಿಂದಾಗಿ, ಉಂಟಾಗುವ ಮನೋಕ್ಲೇಶ ಅತ್ಯಂತ ಮುಖ್ಯವಾದೊಂದು ಪ್ರಸಂಗವಾಗಿದೆ. ಮನುಷ್ಯರ ಮನಸ್ಸಿನ, ಹೃದಯದ, ಆಳದಲ್ಲಿ ಮನೆಮಾಡಿರುವ ಭಾವನೆಗಳನ್ನು ಕುಮಾರವ್ಯಾಸ ಎಳೆದು ಹೊರ ಹಾಕುವ ರೀತಿ ಮನೋವೈಜ್ಞಾನಿಕ ಸತ್ಯವೊಂದನ್ನು ವ್ಯಕ್ತಪಡಿಸುತ್ತದೆ. ಮನುಷ್ಯ ಸ್ವಭಾವದ ಬಗೆಗಿನ ಇಂತಹ ಒಳನೋಟಗಳು, ಕುಮಾರವ್ಯಾಸನನ್ನು ನಮಗೆ ಬಲು ಹತ್ತಿರದವನನ್ನಾಗಿ ಮಾಡುತ್ತವೆ. ಕರ್ಣ ತನ್ನ ಅಪ್ರತಿಮ ಶೌರ್ಯದಿಂದ ಪಾಂಡವ ಸೈನ್ಯವನ್ನು ನುಗ್ಗುನುರಿ ಮಾಡುತ್ತಾನೆ. ರಣರಂಗವೆಲ್ಲ ಕರ್ಣಮಯವಾದಂತೆ ತೋರಿ ಧರ್ಮರಾಯನನ್ನೊಳಗೊಂಡು ಎಲ್ಲರೂ ಕರ್ಣನಿಂದ ಭಂಗಗೊಳ್ಳುತ್ತಾರೆ. ಆಗ, ಯುದ್ಧದಲ್ಲಿ ಗೆಲ್ಲಬೇಕಾದರೆ ಗಾಂಡೀವವನ್ನು ಹರಿಗೆ ಕೊಟ್ಟು, ನೀನು ಸಾರಥಿಯಾಗೆಂದು ಅರ್ಜುನನಿಗೆ ಹೇಳುತ್ತಾನೆ ಧರ್ಮರಾಯ. ಅಣ್ಣನ ಮಾತನ್ನು ಕೇಳಿದ ಅರ್ಜುನನಿಗೆ ನಖಶಿಖಾಂತ ಕೋಪವೇರುತ್ತದೆ. ಧರ್ಮಜನ ಮಾತಿನಿಂದ ಅರ್ಜುನನ ಅಹಂಕಾರಕ್ಕೆ ಪೆಟ್ಟು ಬೀಳುತ್ತದೆ. ಕ್ರುದ್ಧನಾಗಿ ತನ್ನ ಅಣ್ಣ ಧರ್ಮಜನನ್ನೇ ಕೊಲ್ಲುವುದಾಗಿ ಮುಂದೆ ಬರುತ್ತಾನೆ. ಆಯುಧವನ್ನು ಝಳಪಿಸುತ್ತ ರೌದ್ರಭಾವದಲ್ಲಿ ಧರ್ಮಜನೆಡೆಗೆ ಬರುವ ಧನಂಜಯನನ್ನು ರಣರಂಗದಲ್ಲಿನ ಅಖಿಳ ಜನರೂ ನೋಡುತ್ತಾರೆ. ಕೃಷ್ಣ ಅವನನ್ನು ತಡೆದು ಸಮಾಧಾನ ಮಾಡುತ್ತಿದ್ದಾಗ ಧರ್ಮಜ “ಅರ್ಜುನನ್ನು ತಡೆಯಬೇಡ ಬಿಡು, ಈತನ ಖಡ್ಗಕ್ಕಿದೆ ತನ್ನೊಡಲು” ಎಂದಾಗ ಕೃಷ್ಣ ಅವನಿಗೂ ಸಮಾಧಾನ ಹೇಳುತ್ತಾನೆ. ಈ ಸನ್ನಿವೇಶ, ಎಂತಹ ಜ್ಞಾನಿಗಳಾದರೂ ಪರಸ್ಪರ ಎಷ್ಟೇ ಪ್ರೀತಿ ನಂಬಿಕೆಗಳಿದ್ದರೂ, ಮಾನವರ ಮೂಲ ಭೂತ ಪ್ರವೃತ್ತಿಗಳು ಹಲವು ಸಂದರ್ಭಗಳಲ್ಲಿ ಹೇಗೆ ಮೇಲುಗೈಪಡೆದು, ಶಕ್ತವಾಗಿ ಅತ್ಯಂತ ರಭಸದಿಂದ ಹೊರನುಗ್ಗುತ್ತವೆಂಬುದಕ್ಕೆ ನಿದರ್ಶನವಾಗಿದೆ. ಅಲ್ಲದೆ ಅಣ್ಣ ತಮ್ಮಂದಿರಿಬ್ಬರೂ ಯುದ್ಧದ ಬೇಗುದಿಯಿಂದಾಗಿ, ನಿದ್ರೆಯಿರದೆ, ಚಿಂತೆ, ದು:ಖ, ನಿರಾಶೆಗಳಿಂದ ಅತೀವ ಒತ್ತಡಕ್ಕೊಳಗಾಗಿದ್ದರು. ಒಂದು ರೀತಿಯಲ್ಲಿ ಆಸ್ಫೋಟಕ್ಕೆ ಸಿದ್ಧರಾಗಿದ್ದವರಂತೆ ಇದ್ದವರು. ಸಣ್ಣ ಕಿಡಿ ಸೋಕುತ್ತಲೇ ಆಸ್ಫೋಟಿಸಿದರು ಕೂಡ. ಧರ್ಮರಾಯ ಮತ್ತು ಅರ್ಜುನರ ಈ ಜಗಳ ತಮ್ಮ ಒತ್ತಡಗಳನ್ನು ಹೊರಹಾಕಿ, ಮಾನಸಿಕವಾಗಿ ಅದರಿಂದ ಬಿಡುಗಡೆ ಪಡೆಯಲು ಸಹಾಯ ಮಾಡುವ ಸೇಫ್ಟಿವಾಲ್ವ್ ಎನ್ನಬಹುದು. ಕುಮಾರವ್ಯಾಸ ಈ ಪ್ರಸಂಗವನ್ನು ಸಾಕಷ್ಟು ಲಂಬಿಸಿದ್ದಾನೆ. ಧರ್ಮರಾಜ ಮತ್ತು ಅರ್ಜುನ ಇವರ ಮಾನಸಿಕ ಸ್ಥಿತಿ, ಇಂತಹ ಪರಿಸ್ಥಿತಿಗೆ ಸಿಲುಕಿದ ಅನೇಕರ ಮಾನಸಿಕ ಪರಿಸ್ಥಿತಿಯೂ ಆಗುವುದರಿಂದ, ಸಾಮಾನ್ಯ ಮನುಷ್ಯರ ಮಾನಸಿಕ ಲೋಕದ ಕಾರ್ಯ ವೈಖರಿಯ ಪರಿಚಯವಾಗುವುದರಿಂದ ಈ ಪ್ರಸಂಗ ಮುಖ್ಯವಾಗುತ್ತದೆ. ಮನಸ್ಸು ಪ್ರಕ್ಷುಬ್ಧಗೊಂಡಾಗ, ಅಹಂಗೆ ಪೆಟ್ಟು ಬಿದ್ದಾಗ ಪ್ರೀತಿ ಗೌರವಗಳು ತಮ್ಮ ಸ್ಥಾನ ತೆರವು ಮಾಡುತ್ತವೆ ಎಂಬ ಸತ್ಯವನ್ನೂ ಈ ಪ್ರಸಂಗ ವ್ಯಕ್ತಪಡಿಸುತ್ತದೆ. ಅರ್ಜುನ, ಧರ್ಮರಾಜರ ‘ವಾಗ್ವಾದ’ವನ್ನು ಸಕಲ ರಾಜರ ಮುಂದೆಯೇ ನಡೆಸಿ ಕುಮಾರವ್ಯಾಸ ಈ ಇಬ್ಬರೂ ಸಹೋದರರ ಅಹಂಗಳಿಗೆ ಪೆಟ್ಟುಕೊಟ್ಟು, ಅವರ (ಅಂತರಂಗದ) ಸುಪ್ತಮನದಾಳಗಳಲ್ಲಿನ ಭಾವನೆಗಳನ್ನು ಹೊರಹಾಕಿದ್ದಾನೆ. ಇದು ಅರ್ಜುನ, ಧರ್ಮರಾಯರ ವ್ಯಕ್ತಿತ್ವಗಳ ಕಪ್ಪು ಭಾಗದ ಪ್ರದರ್ಶನವೆನ್ನಬಹುದು. ಸ್ವಲ್ಪ ಸಮಯದ ನಂತರ ಸಹೋದರರಿಬ್ಬರೂ ಪಶ್ಚಾತ್ತಾಪ ಪಡುತ್ತಾರೆ. ಅರ್ಜುನನಿಗೆ ಕೃಷ್ಣ ಹೇಳುವ ಮಾತುಗಳಲ್ಲಿ ಮನೋವೈಜ್ಞಾನಿಕ ಸತ್ಯದೊಂದಿಗೇ ತತ್ವಜ್ಞಾನವೂ ಮಿಳಿತವಾಗಿದೆ.
ಎಲವೊ ಖೂಳ ಕಿರೀಟಿ ಮತ್ತೆಯು
ತಿಳಿಯೆಲಾ ನೀನಾವ ಪರಿಯಲಿ
ಮುಳಿದು ರಾಯನ ನಿಂದೆ ನಿನಗೆಯು ತದ್ವಿಧಾನದಲಿ |
ಅಳಿವ ನೆನೆಯೋ ಸಾಕು ದೇಹವ
ನಳಿವುದೇ ಕೊಲೆಯಲ್ಲ ನಿನ್ನ-
ಗ್ಗಳಿಕೆಗಳ ನೀನಾಡಿ ನಿನ್ನನೆ ಕೊಂದುಕೊಳ್ಳೆಂದ || (ಕರ್ಣ ಪರ್ವ 17.35)
ಕೃಷ್ಣನ ಮಾತಿನ ಪ್ರಕಾರ ತನ್ನ ಹಿರಿಮೆಯನ್ನು, ಹೇಳಿಕೊಂಡು ಹೇಳಿಕೊಂಡು ಅಹಂಕಾರದಿಂದ ಬಿಡುಗಡೆ ಪಡೆಯುವುದೊಂದು ವಿಧ. ತನ್ನ ಹಿರಿಮೆಯನ್ನೂ ತಾನೇ ಹೇಳಿಕೊಳ್ಳುವುದು ತನ್ನನ್ನೇ ಕೊಂದು ಕೊಂಡಂತೆ ಕೂಡ. ದೇಹವನಳಿವುದೊಂದೇ ಕೊಲೆಯಲ್ಲ. ಸ್ವ-ಪ್ರಶಂಸೆಯ ಬಗೆಗಿನ ಈ ಮಾತುಗಳು ಚಿಂತನಾರ್ಹವಾಗಿವೆ. ಮನಸ್ಸಿನಲ್ಲುಧ್ಭವಿಸುವ ಕ್ರೋಧಕ್ಕೊಂದು ಹೊರದಾರಿ ಕೊಡದಿದ್ದರೆ, ಅದು ಹಗೆತನದ ವಿಷವೃಕ್ಷವಾಗಿ ಬೆಳೆದು, ಸಂಬಂಧಗಳನ್ನು ಹಾಳುಗೆಡವುತ್ತವೆಂಬ ಸತ್ಯವನ್ನು ಕುಮಾರವ್ಯಾಸ ಅರಿತಿದ್ದಾನೆ ಹಾಗೂ ಯುದ್ಧದ ಒತ್ತಡದ ಪರಿಹಾರಕ್ಕೂ ಈ ಹೊರಹಾಕುವಿಕೆ ಅವಶ್ಯ. ಹೀಗೆ ಪರಸ್ಪರ ಜಗಳವಾಡಿದ ಸೋದರರು ನಿರಾಳರಾಗುತ್ತಾರೆ. ಅರ್ಜುನ ತನ್ನಣ್ಣನ ಅಂಘ್ರಿಗಳನ್ನು ಹಿಡಿಯುತ್ತಾನೆ. “ಮುರಹರನ ಮಂತ್ರದಲಿ ಶೋಕಜ್ವರಕೆ ಬಿಡುಗಡೆಯಾಯ್ತು” ಎನ್ನುತ್ತಾನೆ ಕುಮಾರವ್ಯಾಸ. ಮಾನಸಿಕ ಒತ್ತಡಗಳನ್ನು ಮಾತುಗಳ ಮೂಲಕ ಹೊರಹಾಕುವುದೇ ಮುರಹರನ ಮಂತ್ರವೇ? ಮಹಾಯುದ್ಧವೊಂದರ ಎಲ್ಲ ಆಯಾಮಗಳನ್ನೂ ತೆರೆದಿಡುವ ಕುಮಾರವ್ಯಾಸನ ಸರ್ವಜ್ಞತೆ ನಿಜಕ್ಕೂ ಆಶ್ಚರ್ಯಗೊಳಿಸುತ್ತದೆ.
*****
ಪಾತ್ರ ಚಿತ್ರಣ:
ಬೃಹತ್ ಭಿತ್ತಿಯ ಮಹಾಭಾರತ ಕಥಾನಕ ಅಸಂಖ್ಯ ಪಾತ್ರಗಳು ತುಂಬಿ ತುಳುಕುವಂತಹ ಮಹಾಕಾವ್ಯ. ನಾನಿಲ್ಲಿ ಕೆಲವು ಪಾತ್ರಗಳ ಸ್ಥೂಲ ನೋಟಕ್ಕೆ ಮಾತ್ರ ನನ್ನ ಅನಿಸಿಕೆಗಳನ್ನು ಸೀಮಿತಗೊಳಿಸಿಕೊಳ್ಳುತ್ತೇನೆ. ಕುಮಾರವ್ಯಾಸನ ಕಥಾನಕದಲ್ಲಿ ಪ್ರತಿಯೊಂದು ಪಾತ್ರವೂ ಅತ್ಯಂತ ಸ್ಪಷ್ಟವಾಗಿ ಚಿತ್ರಿಸಲ್ಪಟ್ಟು ಅತ್ಯಂತ ಶಕ್ತ ಮತ್ತು ಜೀವರಸದಿಂದ ಪುಟಿಯುತ್ತಿರುವಂಥಹವು. ಯಾವ ಪಾತ್ರವೂ ಇಲ್ಲಿ ಬುದ್ಧಿಹೀನರಾಗಲೀ, ಪೆದ್ದರಾಗಲೀ ಅಲ್ಲ. ಶಕುನಿಯಂಥ ಪಾತ್ರದ ಮಾತುಗಳಲ್ಲಿ ಅದೆಂತಹ ಚಾಣಾಕ್ಷನೀತಿ ತುಂಬಿದೆ. ವಿದುರನಂತೂ ಲೋಕ ವ್ಯವಹಾರಗಳ ನೀತಿಕೋಶ. ಎಲ್ಲ ಪಾತ್ರಗಳೂ, ಆಕರ್ಷಣೆಯಿಂದಲೋ, ವಿಕರ್ಷಣೆಯಿಂದಲೋ, ಪ್ರೇಮದಿಂದಲೋ, ಹಗೆಯಿಂದಲೋ, ಕೃಷ್ಣನೆಂಬ ದೂರನಿಯಂತ್ರಕದಿಂದ ನಿಯಂತ್ರಿಸಲ್ಪಟ್ಟವರೇ. ಆದರೂ, ಈ ಕೃಷ್ಣಪ್ರಜ್ಞೆಯ ಅರಿವಿನಲ್ಲಿಯೂ, ತಮ್ಮ ತಮ್ಮ ನಿಲುವುಗಳನ್ನು ಬಿಟ್ಟು ಕೊಡದೆ ತಮ್ಮತನವನ್ನು ಕಡೆತನಕ ಕಾಯ್ದುಕೊಳ್ಳುವ ಪರಿಯನ್ನು ಕುಮಾರವ್ಯಾಸನ ಪ್ರತಿಭೆ ಅದ್ಭುತವಾಗಿ ಕಂಡರಿಸಿದೆ. ಗದಾಯುದ್ಧದಲ್ಲಿ ಭೀಮನಿಂದ ಹತನಾದಾಗಲೂ ಮರಣದ ಮುನ್ನ ದುರ್ಯೋಧನ ಕೃಷ್ಣನನ್ನು ಬೈಯದೆ ಬಿಡುವುದಿಲ್ಲ. ಆದರೂ “ಬಣಗುಗಳು ಭೀಮಾರ್ಜುನರು ಕಾರಣಿಕ” ಕೃಷ್ಣನೆಂಬ ಅರಿವಿದೆ.
This is the fourteenth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.