“ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್”
ಕನ್ನಡದ ಮಹಾಕವಿ ಕುಮಾರವ್ಯಾಸ ತಾನು ಮಹಾಭಾರತರಚನೆಗೆ ಮನಸ್ಸು ಮಾಡಿದುದಕ್ಕೆ ಕಾರಣ ರಾಮಾಯಣದಲ್ಲಿ ಕೈಯಿಕ್ಕಲು ಎಡೆಯೇ ಇಲ್ಲ, ಅದು ಜಗತ್ತನ್ನು ಹೊತ್ತ ಆದಿಶೇಷನಿಗೂ ಭಾರವಾಗುವಷ್ಟು ಬೆಳೆದಿದೆ ಎನ್ನುತ್ತಾನಷ್ಟೆ: “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ.” ಇದು ಆ ಕವಿಯ ಕಾಲದ ಕನ್ನಡ ರಾಮಾಯಣಗಳ ಮಟ್ಟಿಗೆ ಅಷ್ಟಾಗಿ ಅನ್ವಯಿಸದಿದ್ದರೂ ಸಂಸ್ಕೃತದಲ್ಲಿ ಬೆಳೆದುಬಂದ ರಾಮಾಯಣಸಾಹಿತ್ಯವನ್ನು ಗಮನಿಸಿದಾಗ ನಿಜಕ್ಕೂ ಹೌದೆನಿಸುತ್ತದೆ. ಹೀಗೆ ಬೆಳೆದುಬಂದ ರಾಮಾಯಣಪರಂಪರೆಯ ವ್ಯಾಪ್ತಿ-ವಿಸ್ತರಗಳನ್ನು ಕುರಿತು ಅನೇಕರು ಬಹುಕಾಲದಿಂದ ಸಂಶೋಧನೆಗಳನ್ನು ನಡಸಿ ಸಮೃದ್ಧವಾದ ಸಾಹಿತ್ಯವನ್ನೇ ಹೊರತಂದಿದ್ದಾರೆ. ಈ ಎಲ್ಲ ವಾಙ್ಮಯದ ಸೂಚೀಗ್ರಂಥಗಳೇ ಹಲವು ಸಂಪುಟಗಳಾಗುವಷ್ಟು ಬೆಳೆದಿವೆ. ಇಷ್ಟಾಗಿಯೂ ಈ ಬೆಳೆವಣಿಗೆ ನಿಂತಿಲ್ಲ, ನಿಲ್ಲುವಂತೆಯೂ ತೋರುವುದಿಲ್ಲ.
ಆದಿಕವಿ ವಾಲ್ಮೀಕಿಮಹರ್ಷಿಗಳ ರಾಮಾಯಣವೇ ಈ ಎಲ್ಲ ಸಾಹಿತ್ಯಗಂಗೆಯ ಗಂಗೋತ್ತರಿ ಎಂಬುದು ಸುನಿಶ್ಚಿತ. ಅಲ್ಲಿಂದ ಮುಂದೆ ವೈದಿಕ, ಜೈನ ಮತ್ತು ಬೌದ್ಧಪರಂಪರೆಗಳಲ್ಲಿ ಕವಲೊಡೆದ ರಾಮಕಥೆ ಶುದ್ಧಸಾಹಿತ್ಯದ ರೂಪದಿಂದ, ಮತ-ಶಾಸ್ತ್ರಗಳ ರೂಪದಿಂದ ಹಾಗೂ ಮೌಖಿಕವಾಙ್ಮಯದ ರೂಪದಿಂದ ತ್ರಿವೇಣಿಯಾಗಿ ಬೆಳೆದಿದೆ. ಶುದ್ಧಸಾಹಿತ್ಯವು ಗದ್ಯ, ಪದ್ಯ, ಚಂಪೂ ಮತ್ತು ರೂಪಕಗಳ ಪ್ರಕಾರಗಳಲ್ಲಿ ಕಾಳಿದಾಸ, ಭೋಜರಾಜ, ಭವಭೂತಿ ಮುಂತಾದ ಮಹಾಕವಿಗಳ ಆರೈಕೆಯಿಂದ ಬೆಳೆದಿದ್ದರೆ, ಮತ-ಶಾಸ್ತ್ರಗಳು ಪುರಾಣ, ವ್ಯಾಖ್ಯಾನ ಮತ್ತು ಸ್ತೋತ್ರಗಳ ಆಕೃತಿಯನ್ನು ತಾಳಿ ಮುಂದೆ ಸಾಗಿವೆ. ಮೌಖಿಕವಾಙ್ಮಯವಂತೂ ಜಾನಪದದ ಬಗೆಬಗೆಯ ಗೀತಗಳಾಗಿ, ಕಥೆಗಳಾಗಿ, ಐತಿಹ್ಯಗಳಾಗಿ ವ್ಯಾಪಿಸಿದೆ. ಶುದ್ಧಸಾಹಿತ್ಯವು ಸಂಸ್ಕೃತ ಮತ್ತು ದೇಶಭಾಷೆಗಳಲ್ಲೆಲ್ಲ ಕವಿಗಳ ಮೂಲಕ ಬೆಳೆದಿದ್ದರೆ ಮೌಖಿಕಸಾಹಿತ್ಯವು ಕೇವಲ ದೇಶಭಾಷೆಗಳಲ್ಲಿ ಪ್ರಚಾರವನ್ನು ಪಡೆದುಕೊಂಡಿದೆ. ದಿಟವೇ, ಅದೊಮ್ಮೆ ಸಂಸ್ಕೃತದಲ್ಲಿಯೂ ರಾಮಾಯಣದ ಮೌಖಿಕರೂಪ ಹತ್ತಾರು ಬಗೆಯಲ್ಲಿ ಬೆಳೆದಿದ್ದಿರಬೇಕು. ಇದಕ್ಕೆ ಲವ-ಕುಶರ ರಾಮಾಯಣಗಾನವೇ ಒಂದು ಸುಂದರಪ್ರತೀಕ. ಆದರೆ ಆ ಎಲ್ಲ ವಾಙ್ಮಯವೂ ಕಾಲಾಂತರದಲ್ಲಿ ಗ್ರಂಥಗತವಾದಂತೆ ತೋರುತ್ತದೆ. ಈ ಸಂದರ್ಭದಲ್ಲಿ ಪುರಾಣ-ಉಪಪುರಾಣ-ಸ್ಥಳಪುರಾಣ-ಚಾಟುಕವಿತೆ-ಆಗಮ-ಐತಿಹ್ಯಗಳಂಥ ಸಂಸ್ಕೃತಭಾಷೆಯ ಹತ್ತು ಹಲವು ಲಿಖಿತರೂಪಗಳನ್ನು ಮೂಲತಃ ಮೌಖಿಕವಾಗಿದ್ದ “ಸಂಸ್ಕೃತಜಾನಪದ” ಸಾಹಿತ್ಯವೆಂದೇ ಗ್ರಹಿಸಬಹುದು.
ಮತ-ಶಾಸ್ತ್ರಗಳ ಮಾಧ್ಯಮದ ಮೂಲಕ ಬೆಳೆದ ರಾಮಾಯಣವು ಪ್ರಧಾನವಾಗಿ ಸಂಸ್ಕೃತವನ್ನೇ ಆಶ್ರಯಿಸಿದೆ. ಇದಕ್ಕೆ ಅಭಿಜಾತಕವಿಗಳ ಕಾವ್ಯ-ನಾಟಕಗಳೂ ಜಾನಪದರ ಮೌಖಿಕರೂಪದ ಕಥೆ-ಐತಿಹ್ಯಗಳೂ ಹೆಚ್ಚಾದ ಯೋಗದಾನವಿತ್ತಿರುವುದು ಗಮನಾರ್ಹ. ದೇಶಭಾಷೆಗಳಲ್ಲಿ ಭಕ್ತಕವಿಗಳ ಮೂಲಕ ಹಾಡುಗಳ ರೂಪದಲ್ಲಿಯೂ ಲಘುಪ್ರಬಂಧಗಳ ರೂಪದಲ್ಲಿಯೂ ಮತಸಂಬಂಧಿಯಾದ ರಾಮಕಥೆ ತಲೆದೋರಿದ್ದರೂ ಇದರಲ್ಲಿ ವಸ್ತು-ವಿವರಗಳ ವೈವಿಧ್ಯ ಕಡಮೆ. ಅಷ್ಟೇ ಅಲ್ಲದೆ ರಾಮಾರಾಧನೆಯ ಅಂಗವಾಗಿ ಪೂಜಾಸಾಹಿತ್ಯವೆಂಬಂತೆ ಇವುಗಳು ರಾಷ್ಟ್ರಮಟ್ಟದಲ್ಲಿ ಬಳಕೆಗೊಂಡದ್ದೂ ಕಡಮೆ. ಹೀಗಾಗಿ ದೇಶೀಯವಾಙ್ಮಯದ ಇಂಥ ರಚನೆಗಳಿಗೆ “ಮಂತ್ರತ್ವ” ಬರಲಿಲ್ಲ.
ರಾಮಾಯಣವು ವಿದೇಶಗಳಲ್ಲಿ ಕೂಡ ಪಸರಿಸಿದ ಬಗೆ ಸುಪ್ರಸಿದ್ಧ. ವಿಶೇಷತಃ ಆಗ್ನೇಯ ಏಷ್ಯಾದ ಎಷ್ಟೋ ಭಾಗಗಳಲ್ಲಿ ಸಂಸ್ಕೃತವೂ ಸೇರಿದಂತೆ ಅಲ್ಲಿಯ ಸ್ಥಳೀಯಭಾಷೆಗಳು ರಾಮಕಥೆಯನ್ನು ಸಾಕಷ್ಟು ವಿಸ್ತರಿಸಿವೆ. ಇದೇ ರೀತಿ ಭಾರತ ಮತ್ತು ಬೃಹದ್ಭಾರತಗಳಲ್ಲಿ ಗೀತ-ನೃತ್ಯ-ಚಿತ್ರ-ಶಿಲ್ಪಗಳು ರಾಮಕಥೆಯನ್ನು ತಮ್ಮ ತಮ್ಮ ಮಾಧ್ಯಮಗಳ ಮೂಲಕ ಜನತೆಗೆ ಮುಟ್ಟಿಸಿದ ಪರಿಯೂ ಅವಿಸ್ಮರಣೀಯ.
ಹೀಗೆ ಅಸಂಖ್ಯಪ್ರಕಾರಗಳಲ್ಲಿ ಆದಿಕವಿಗಳ ದರ್ಶನ ಪ್ರತಿಫಲಿಸಿದೆಯಾದರೂ ಪ್ರತಿಯೊಂದು ಪ್ರಕಾರವೂ ತನ್ನದೇ ಆದ ಇತಿ-ಮಿತಿಗಳಿಂದ, ವೈಶಿಷ್ಟ್ಯ-ವೈಚಿತ್ರ್ಯಗಳಿಂದ ಕುತೂಹಲಕಾರಿಯಾಗಿದೆ. ಇಂಥ ವಾಙ್ಮಯವಿಸ್ತರದಲ್ಲಿ ವಾಲ್ಮೀಕಿಮುನಿಗಳ ಮೂಲಕೃತಿಯ ರೂಪ-ಸ್ವರೂಪಗಳು ಸಾಕಷ್ಟು ಮಾರ್ಪಟ್ಟಿರುವುದೂ ಸತ್ಯ. ಈ ಬಗೆಯ ಮಾರ್ಪಾಡನ್ನು ಪ್ರಧಾನವಾಗಿ ಮೂರು ಧಾರೆಗಳಲ್ಲಿ ಕಾಣಬಹುದು:
- ಕವಿ-ಕಲಾವಿದರ ಕಲ್ಪನೆ,
- ಜನಸಾಮಾನ್ಯರ ಊಹೆ, ಹಾರೈಕೆ ಮತ್ತು ನಂಬಿಕೆ,
- ಭಕ್ತ-ಮತಾಚಾರ್ಯರ ಶ್ರದ್ಧೆ ಮತ್ತು ಅಭಿನಿವೇಶ.
ಈ ಮೂರು ಧಾರೆಗಳೂ ಪರಸ್ಪರ ಪ್ರಭಾವಿಸಿಕೊಂಡಿರುವುದನ್ನೂ ನಾವು ಗಮನಿಸಬಹುದು. ಇಂತಿದ್ದರೂ ಇವುಗಳ ಸ್ವತಂತ್ರವಾದ ಮುಖ್ಯಲಕ್ಷಣಗಳನ್ನು ಹೀಗೆ ಸಂಗ್ರಹಿಸಬಹುದು:
೧. ಕವಿ-ಕಲಾವಿದರ ಕಲ್ಪನೆಗಳು ಪ್ರಧಾನವಾಗಿ ಸೌಂದರ್ಯವನ್ನೇ ಉದ್ದೇಶದಲ್ಲಿ ಇರಿಸಿಕೊಂಡಿರುತ್ತವೆ. ವಿಶೇಷತಃ ಎಲ್ಲ ಬಗೆಯ ಕಲಾವಿದರಿಗೆ ಸ್ಫೂರ್ತಿಯಾಗಬಲ್ಲ ಕವಿಗಳಂತೂ ಸೌಂದರ್ಯ-ಚಮತ್ಕಾರಗಳ ನಿಟ್ಟಿನಿಂದಲೇ ವಾಲ್ಮೀಕಿಯ ಕಥಾನಕವನ್ನು ಹದವರಿತು ಬಳಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿಯ ರಚನೆಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಆಯಾ ಕಾಲದ ಸಾಹಿತ್ಯರಸಿಕತೆಯನ್ನೋ ಕಲಾವೈಚಿತ್ರ್ಯಗಳನ್ನೋ ಗಮನದಲ್ಲಿರಿಸಿಕೊಂಡು ಬೆಳೆದಿರುತ್ತವೆ. ಮುಖ್ಯವಾಗಿ ಶ್ರವ್ಯಕಾವ್ಯಗಳಿಗಿಂತ ದೃಶ್ಯಕಾವ್ಯಗಳೇ ಮೂಲಕಥೆಯನ್ನು ಹೆಚ್ಚಾಗಿ ಮಾರ್ಪಡಿಸಿಕೊಂಡಿರುವುದನ್ನು ಸಂಸ್ಕೃತದಲ್ಲಿ ಗಮನಿಸಬಹುದು. ಇದು ನಿಜಕ್ಕೂ ಚೋದ್ಯ. ಬಹುಶಃ ದೃಶ್ಯಕಾವ್ಯದಲ್ಲಿ ಘಟನೆ-ಇತಿವೃತ್ತ-ಪಾತ್ರಚಿತ್ರಣಗಳ ಕಾರ್ಯ-ಕಾರಣಭಾವವನ್ನು ಚೆನ್ನಾಗಿ ಸಮನ್ವಯಿಸಬೇಕಾದ ಬಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಇದು ಅಲ್ಲಿಯ ಐದು ಬಗೆಯ ಸಂಧಿ-ಅವಸ್ಥೆ-ಅರ್ಥಪ್ರಕೃತಿಗಳ ನಿರ್ವಾಹಕ್ಕಾಗಿ ಬಂದ ಹೊಣೆಯೆನ್ನಬಹುದು. ಭಾಸನದೆನ್ನಲಾದ “ಪ್ರತಿಮಾನಾಟಕ”, ಭವಭೂತಿಯ “ಉತ್ತರರಾಮಚರಿತ”, ದಿಙ್ನಾಗನ “ಕುಂದಮಾಲಾ”, ಶಕ್ತಿಭದ್ರನ “ಆಶ್ಚರ್ಯಚೂಡಾಮಣಿ” ಮುಂತಾದುವೆಲ್ಲ ತಮ್ಮದೇ ಆದ ರೀತಿಯಲ್ಲಿ ಇತಿವೃತ್ತವನ್ನು ಕಟ್ಟಿಕೊಂಡಿವೆ. ಇನ್ನು ಭವಭೂತಿಯ “ಮಹಾವೀರಚರಿತ”ದ ಮಾದರಿಯನ್ನು ಆದರ್ಶವಾಗಿ ಸ್ವೀಕರಿಸಿದ “ಅನರ್ಘರಾಘವ”, “ಪ್ರಸನ್ನರಾಘವ”, “ಉದಾರರಾಘವ”, “ಬಾಲರಾಮಾಯಣ” ಮುಂತಾದ ಎಷ್ಟೋ ನಾಟಕಗಳು ರಾಮ-ರಾವಣರ ನಡುವಣ ಸೆಣಸಾಟಕ್ಕೆ ಸೀತಾಪಹರಣದಂಥ ಸ್ತ್ರೀಮಾತ್ರಕೇಂದ್ರಿತವಾದ ಘಟನೆಯೊಂದನ್ನೇ ನಚ್ಚದೆ ಅರ್ಥಶಾಸ್ತ್ರೀಯವಾದ ಮತ್ತೆಷ್ಟೋ ರಾಜಕೀಯಕಾರಣಗಳನ್ನು ಹೆಣೆಯುತ್ತವೆ. ಹೀಗೆ ಕಾಮೈಕಮೂಲವಾದ ಕೇಂದ್ರಸಂಘರ್ಷದಲ್ಲಿ ಅರ್ಥಸಂಘರ್ಷಗಳನ್ನೂ ಬೆಸೆದಿರುವುದು ಈ ಬಗೆಯ ಮಾರ್ಪಾಟಿನ ಹೆಗ್ಗುರುತುಗಳಲ್ಲೊಂದೆನ್ನಬಹುದು. ದಿಟವೇ, ಈ ಎಲ್ಲ ಕೃತಿಗಳಲ್ಲಿ ಶ್ರೀರಾಮನ ಧರ್ಮಸ್ವರೂಪವು ಸುರಕ್ಷಿತವಾಗಿಯೇ ಇದೆ. ಆದರೆ ಅದು ನೇಪಥ್ಯದಲ್ಲಿದ್ದು ಅರ್ಥನೀತಿಯೇ ಮುನ್ನೆಲೆಗೆ ಬಂದಿರುವುದು ದೃಷ್ಟಚರ. ಅಲ್ಲದೆ ಆತನ ಧಾರ್ಮಿಕವ್ಯಕ್ತಿತ್ವವು ವಿಭಿನ್ನಪಾತ್ರಗಳ ಹೇಳಿಕೆಗಳ ಮಟ್ಟದಲ್ಲಿ ಗೃಹೀತವಾಗಿ ಬರುವುದಲ್ಲದೆ ರಾಮನದೇ ಚರ್ಯೆಗಳ ಮೂಲಕ ವಿಶದವಾಗಿ ರಂಗದ ಮೇಲೆ ಅಭಿನೀತವಾಗುವುದಿಲ್ಲ. ಅಂದರೆ ಮಾಹಿತಿಯಂತೆ ವಿಚಾರಗಳು ಬರುವುವಲ್ಲದೆ ಅನುಭವದ್ರವ್ಯವಾಗಿ ರಸಪಾಕವನ್ನು ತಳೆಯುವುದಿಲ್ಲ.
ಇಂದು ಲಭ್ಯವಿಲ್ಲದ “ಕೃತ್ಯಾರಾವಣ”, “ಛಲಿತರಾಮ”, “ಜಾನಕೀರಾಘವ”, “ರಾಘವಾಭ್ಯುದಯ”, “ರಾಮಾನಂದ”, “ಮಾಯಾಪುಷ್ಪಕ”, “ಸ್ವಪ್ನದಶಾನನ”, “ಅಭಿಜ್ಞಾತಜಾನಕೀ”, “ಕನಕಜಾನಕೀ” ಮೊದಲಾದ ಎಷ್ಟೋ ರೂಪಕಗಳು ಇದೇ ಜಾಡಿನಲ್ಲಿ ಸಾಗಿದ್ದವೆಂಬಂತೆ ತೋರುತ್ತದೆ. ಬಹುಶಃ ಈ ಕಾರಣದಿಂದಲೇ ಇರಬೇಕು, ಇಂದು ಲಭ್ಯವಿರದ “ರಾಮಾಭ್ಯುದಯ”ದ ಕರ್ತೃ ಯಶೋವರ್ಮನು ತನ್ನ ಕೃತಿಯು ವಾಲ್ಮೀಕಿಯ ಹಾದಿಯನ್ನು ತೊರೆಯುವುದಿಲ್ಲವೆಂದು ಶಪಥಪೂರ್ವಕವಾಗಿ ಹೇಳುತ್ತಾನೆ: ಕಥಾಮಾರ್ಗೇ ನ ಚಾತಿಕ್ರಮಃ. ಇಂಥ ಎಲ್ಲ ರಾಮಕಥಾರೂಪಕಗಳ ಅರ್ಥಸಂಘರ್ಷದ ಒಂದು ವೈಚಿತ್ರ್ಯವನ್ನು ಇಲ್ಲಿಯೇ ನಾವು ಗಮನಿಸಬಹುದು: ಮರ್ಯಾದಾಪುರುಷೋತ್ತಮನಾದ ಶ್ರೀರಾಮ ತಾನಾಗಿ ಎಲ್ಲಿಯೂ ಯಾವುದೇ ಕುಟಿಲತಂತ್ರಗಳನ್ನು ಮಾಡುವುದಿಲ್ಲ. ಅದೇನಿದ್ದರೂ ರಾವಣನ ಅಥವಾ ಅವನ ಪರಿವಾರಕ್ಕೆ ಸೇರಿದ ಮಾಲ್ಯವಂತ, ವಿದ್ಯುಜ್ಜಿಹ್ವ, ಪ್ರಹಸ್ತ, ಶೂರ್ಪಣಖೆ ಮುಂತಾದವರ ಹೊಲಬು. ಅಷ್ಟೇಕೆ, ಈ ಎಲ್ಲ ಧೂರ್ತರ ಕೂಟತಂತ್ರಗಳನ್ನು ರಾಮನು ತನ್ನ ಪ್ರತಿತಂತ್ರದಿಂದಲೂ ಎದುರಿಸುವುದಿಲ್ಲ. ಆತ ವೀರೋಚಿತವಾದ ಋಜುಮಾರ್ಗದಿಂದಲೇ ನಡೆದು ಗೆಲವನ್ನು ಕಾಣುತ್ತಾನೆ. ಅವನಿಗಾಗಿ ಪ್ರತಿತಂತ್ರ ನಡಸುವವರಿದ್ದಲ್ಲಿ ಅವರು ಹಲಕೆಲವು ಋಷಿ-ಮುನಿಗಳು, ದೇವತೆಗಳು, ವಾನರಮುಖ್ಯರು ಹಾಗೂ ಶಬರಿ-ಜಟಾಯುಗಳಂಥ ರಾಮಭಕ್ತರು. ಇವರಾದರೂ ಇದನ್ನೆಲ್ಲ ನಡಸುವುದು ರಾಮನಿಗೆ ಅರಿವಾಗದಂತೆ!
ಶ್ರವ್ಯಕಾವ್ಯಗಳನ್ನು ಗಮನಿಸಿದಾಗ ಸಂಸ್ಕೃತಕವಿಗಳು ವಾಲ್ಮೀಕಿಯನ್ನೇ ಹೆಚ್ಚಿನ ಶ್ರದ್ಧೆಯಿಂದ ಅನುಸರಿಸಿದಂತೆ ತೋರುತ್ತದೆ. ಇದಕ್ಕೆ ಕಾಳಿದಾಸನ “ರಘುವಂಶ”ದ ರಾಮಕಥಾಭಾಗ (೧೦-೧೫ ಸರ್ಗಗಳು), ಕುಮಾರದಾಸನ “ಜಾನಕೀಹರಣ”, ಅಭಿನಂದನ “ರಾಮಚರಿತ”, ಭೋಜರಾಜನ “ಚಂಪೂರಾಮಾಯಣ”, ಕ್ಷೇಮೇಂದ್ರನ “ರಾಮಾಯಣಮಂಜರೀ”, ಮಲ್ಲಿನಾಥನ “ರಘುವೀರಚರಿತ”, ಚಕ್ರಕವಿಯ “ಜಾನಕೀಪರಿಣಯ” ಮುಂತಾದುವೇ ಸಾಕ್ಷಿ. ಇವುಗಳಲ್ಲಿ ಅಷ್ಟೋ ಇಷ್ಟೋ ಮೂಲಕಥಾತಿಕ್ರಮವಿದ್ದರೂ ಬಲುಮಟ್ಟಿಗೆ ವಾಲ್ಮೀಕಿಗಳೇ ಇವುಗಳ ಇತಿವೃತ್ತವನ್ನು ನಿರ್ದೇಶಿಸಿದ್ದಾರೆ. ಮುಖ್ಯವಾಗಿ ರಾಮ-ರಾವಣರ ನಡುವಣ ರಾಜಕೀಯಸಂಘರ್ಷಗಳನ್ನು ನಾವಿಲ್ಲಿ ಸ್ವಲ್ಪವೂ ಕಾಣುವುದಿಲ್ಲ. ಆದರೆ ಇಂಥ ತಂತ್ರ-ಪ್ರತಿತಂತ್ರಗಳಿಗೆ ಬದಲಾಗಿ ಬಗೆಬಗೆಯ ವರ್ಣನೆಗಳನ್ನು ನೋಡುತ್ತೇವೆ. ವರ್ಣನಾನಿಪುಣಃ ಕವಿಃ ಎಂಬ ಕವಿಲಕ್ಷಣವನ್ನು ತಮ್ಮ ಮಟ್ಟಿಗೆ ಸಾಧಿಸಿಕೊಳ್ಳಲು ಎಷ್ಟೋ ಕವಿಗಳು ಯತ್ನಿಸಿ ಬಗೆಬಗೆಯ ಶಬ್ದಾರ್ಥಾಲಂಕಾರಗಳಿಂದ, ಛಂದಸ್ಸುಗಳಿಂದ, ವಿಕಟಪದಗಳಿಂದ ರಾಮನ ಕಥೆಯನ್ನು ಸಿಂಗರಿಸಿ ನೋಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ “ಜಾನಕೀಹರಣ”, “ರಾಮಚರಿತ”, “ರಘುವೀರಚರಿತ” ಮುಂತಾದ ಕಾವ್ಯಗಳನ್ನು ಪರಿಶೀಲಿಸಬಹುದು.
ಇದನ್ನೆಲ್ಲ ಪರಿಶೀಲಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ: ನಮ್ಮ ಕವಿಗಳು ಮಹಾಭಾರತಕ್ಕಿಂತ ಹೆಚ್ಚಾಗಿ ರಾಮಾಯಣದಿಂದಲೇ ಪ್ರಭಾವಿತರಾಗಿದ್ದಾರೆ. ಈ ಎರಡು ಕಾವ್ಯಗಳ ಮುಖ್ಯಕಥೆಯನ್ನು ಗಮನಿಸಿಕೊಂಡರೆ, ಸಂಸ್ಕೃತದ ಮಟ್ಟಿಗಂತೂ ತುಂಬ ಅಲ್ಪಸಂಖ್ಯೆಯ ಕವಿಗಳು ಮಾತ್ರ ಮಹಾಭಾರತದ ಕೇಂದ್ರಕಥೆಯನ್ನು ತಮ್ಮ ಶ್ರವ್ಯ-ದೃಶ್ಯಕಾವ್ಯಗಳಿಗೆ ಇತಿವೃತ್ತವಾಗಿ ಬಳಸಿಕೊಂಡಿರುವುದು ವಿಶದವಾಗುತ್ತದೆ. ಆಶ್ಚರ್ಯವೇನೆಂದರೆ, ಮಹಾಭಾರತದ ನಳೋಪಾಖ್ಯಾನ, ಶಾಕುಂತಲೋಪಾಖ್ಯಾನ, ಯಯಾತಿಚರಿತೆ, ಸಾವಿತ್ರೀಚರಿತೆ ಮುಂತಾದುವೂ ಸುಭದ್ರಾಹರಣ, ಕೀಚಕವಧೆ, ಜರಾಸಂಧವಧೆ, ಶಿಶುಪಾಲವಧೆ, ಪಾಶುಪತಾಸ್ತ್ರಪ್ರಕರಣ ಮುಂತಾದ ಹಲಕೆಲವು ಘಟ್ಟಗಳೂ ಕವಿಗಳನ್ನು ಆಕರ್ಷಿಸಿರುವಂತೆ ಇಡಿಯ ಭಾರತಕಥೆ ಆಕರ್ಷಿಸಿಲ್ಲ. ದಿಟವೇ, ಅಮರಚಂದ್ರಸೂರಿಯ “ಬಾಲಭಾರತ”, ಅನಂತಕವಿಯ “ಚಂಪೂಭಾರತ”, ಕ್ಷೇಮೇಂದ್ರನ “ಭಾರತಮಂಜರಿ”, ಅಗಸ್ತ್ಯನ “ಬಾಲಭಾರತ”, ರಾಜಶೇಖರನ ಅಪೂರ್ಣರೂಪಕ “ಪ್ರಚಂಡಪಾಂಡವ” ಮೊದಲಾದ ಕಾವ್ಯ-ಚಂಪೂ-ನಾಟಕಗಳು ಇಡಿಯ ಭಾರತಕಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಇಂತಿದ್ದರೂ ರಾಮಕಥಾಕೃತಿಗಳಿಗೆ ಹೋಲಿಸಿದರೆ ಇವುಗಳ ಗುಣ-ಗಾತ್ರ-ಸಂಖ್ಯೆಗಳು ಕಡಮೆಯೇ.
ಇದಕ್ಕೆ ಕಾರಣ ಬಹುಶಃ ಹೀಗಿರಬಹುದು: ಸುಮಾರು ಎರಡು ಸಾವಿರ ವರ್ಷಗಳಿಗೂ ಮಿಗಿಲಾಗಿ ಸಂಸ್ಕೃತಕಾವ್ಯ ಬೃಹದಾಕಾರದ ಹಾಗೂ ಸಂಕೀರ್ಣವಾದ ಇತಿವೃತ್ತವನ್ನು ಸ್ವಯಂ ಸೃಷ್ಟಿಸುವ ಇಲ್ಲವೇ ಸಮರ್ಥವಾಗಿ ನಿರ್ವಹಿಸುವ ಬಾಧ್ಯತೆಗಿಂತ ಹೆಚ್ಚಾಗಿ ಸರಳವೂ ಸಂಕ್ಷಿಪ್ತವೂ ಆದ ಇತಿವೃತ್ತವನ್ನು ಆಶ್ರಯಿಸಿ ರೂಪುಗೊಳ್ಳುವಲ್ಲಿಯೇ ತನ್ನ ಸಾರ್ಥಕ್ಯವನ್ನು ಕಂಡಿದೆ. ಇದು ಇಡಿಗಿಂತ ಬಿಡಿಯಲ್ಲಿಯೇ ಹೆಚ್ಚಾದ ಅಭಿನಿವೇಶ. ಹೀಗಾಗಿಯೇ ಘಟನೆ ಮತ್ತು ಪಾತ್ರಗಳಿಗಿಂತ ವಿಪುಲವಾದ ವರ್ಣನೆಗಳು ಮತ್ತು ವಿಚಿತ್ರವಾದ ಶಬ್ದಾರ್ಥಾಲಂಕಾರಗಳ ಕಲ್ಪನೆಗಳು ಮುನ್ನೆಲೆಗೆ ಬಂದವು. ಇದಕ್ಕೆಲ್ಲ ರಾಮಕಥೆ ಒದಗಿಬರುವಂತೆ ಭಾರತಕಥೆ ಒದಗಿಬರುವುದಿಲ್ಲ. ಅಷ್ಟೇ ಅಲ್ಲದೆ ಮಹಾಭಾರತದ ಘಟನೆಗಳಾಗಲಿ, ಪಾತ್ರಗಳಾಗಲಿ ಸುಲಭವಾಗಿ ತಮ್ಮ ಮೌಲ್ಯಗಳನ್ನು ಬಿಟ್ಟುಕೊಡುವುದಿಲ್ಲ. ಆದುದರಿಂದಲೇ ಮೌಲ್ಯಗಳನ್ನು ಸರಳೀಕರಿಸಿ ನೋಡುವವರಿಗೆ ಇವು ಜೀರ್ಣಿಸಿಕೊಳ್ಳಲಾಗದ ಜಟಿಲಗ್ರಂಥಿಗಳು. ರಾಮಾಯಣವಾದರೋ ತನ್ನ ಕೆಲಮಟ್ಟಿನ ಸಂಕೀರ್ಣಮೌಲ್ಯಗಳ ಹೊರತಾಗಿ ಹೆಚ್ಚಿನ ಕಡೆಗಳಲ್ಲಿ ಸಿದ್ಧಮೌಲ್ಯಗಳನ್ನೇ ಸ್ಥಾಪಿಸುವ ಕಾರಣ ದರ್ಶನವಿಲ್ಲದೆ ವರ್ಣನೆಯಷ್ಟೇ ತಮ್ಮ ಶಕ್ತಿಯಾಗಿ ಉಳ್ಳ ಕವಿಗಳಿಗೆ ತುಂಬ ಆಪ್ಯಾಯನವಾಗಿ ಕಂಡಿದೆ.
ಪ್ರಾಯಶಃ ಈ ಬಗೆಯ ಬೆಳೆವಣಿಗೆಯಿಂದಲೇ ರಾಮಾಯಣದ ಅನೇಕರೀತಿಯ ಆವೃತ್ತಿಗಳೂ ಅಸಂಖ್ಯಪ್ರಕಾರದ ಕಾವ್ಯ-ರೂಪಕಗಳೂ ಹುಟ್ಟಿವೆ. ಆದರೆ ಮಹಾಭಾರತಕ್ಕೆ ಇಂಥ ಯೋಗ ದಕ್ಕಿಲ್ಲ. ಇದಕ್ಕೆ ಬದಲಾಗಿ ಬೇರೆಬೇರೆಯ ಪಾಠಾಂತರಗಳು ವಿಪುಲವಾಗಿ ಹೊಮ್ಮಿವೆ. ಅವು ಹಲಕೆಲವು ಶ್ಲೋಕಗಳ ಪ್ರಕ್ಷೇಪದಿಂದ ಮೊದಲ್ಗೊಂಡು ನೂರಾರು ಅಧ್ಯಾಯಗಳವರೆಗೆ ವಿಭಿನ್ನರೀತಿಯಲ್ಲಿ ವಿಸ್ತರಿಸಿಕೊಂಡಿವೆ. ಎಷ್ಟೋ ಕಡೆಗಳಲ್ಲಿ ಪ್ರಾಚೀನಪಾಠದ “ಭಯಾನಕಸತ್ಯ”ಗಳನ್ನು ಮೃದೂಕರಿಸುವ ಹತಾಶಯತ್ನಗಳನ್ನೂ ಮುಗ್ಧಪ್ರಯತ್ನಗಳನ್ನೂ ಈ ಪ್ರಕ್ಷೇಪ-ಪಾಠಾಂತರಗಳಲ್ಲಿ ನಾವು ಕಾಣುತ್ತೇವೆ. ಹೀಗೆ ಸಾಪೇಕ್ಷವಾಗಿ ಸರಳವೆನಿಸುವ ರಾಮಕಥೆಗೆ ಅಸಂಖ್ಯರೂಪದ ಕಲಾತ್ಮಕ-ಮತಾತ್ಮಕ ಆವೃತ್ತಿಗಳೂ ಸಂಕೀರ್ಣವಾದ ಭಾರತಕಥೆಗೆ ಇದೇ ಪ್ರಮಾಣದಲ್ಲಿ ಮತಾತ್ಮಕ ಮತ್ತು ಉಪದೇಶಾತ್ಮಕವಾದ ಪಾಠಾಂತರಗಳೂ ಹೊರಟಿವೆ. ಇದು ಭಾರತೀಯಮನಸ್ಸು ಕಳೆದ ಎರಡು-ಎರಡೂವರೆ ಸಹಸ್ರಮಾನಗಳಿಂದ ಹೇಗೆ ಮಾರ್ಪಟ್ಟಿದೆಯೆಂಬುದನ್ನು ಸೂಚಿಸುವ ಹೆಗ್ಗುರುತಾಗಬಹುದು.