ಸೀಮಿತವಾದ ನಯ-ನೀತಿಗಳ ಚೌಕಟ್ಟನ್ನು ಮೀರಿದ ರಸ-ಭಾವಗಳನ್ನು ನಮ್ಮ ಅಭಿನಿವೇಶಗಳ ಮೂಸೆಯಲ್ಲಿ ತುರುಕಿ ಕರಗಿಸುವ ಯತ್ನವೆಂದೂ ಫಲಕಾರಿಯಾಗದು. ಹೀಗಾಗಿಯೇ ರಾಮಾಯಣದಂಥ ಆರ್ಷಕಾವ್ಯದ ಎಷ್ಟೋ “ಮುಜುಗರ” ತರಿಸುವ ಸಂದರ್ಭಗಳು ಅರ್ವಾಚೀನಕಥಾನಕಗಳಲ್ಲಿ ಅದೆಷ್ಟೇ ಜಾಣ್ಮೆಯಿಂದ ರೂಪಿತವಾಗಿದ್ದರೂ ನಮ್ಮೀ ಕಾಲಕ್ಕೆ ಪ್ರಹಸನದಂತೆ ತೋರುತ್ತವೆ. ಉದಾಹರಣೆಗೆ: ಮುದ್ದಿನ ಹೆಂಡತಿಗಾಗಿ ಮುದ್ದಿನ ಮಗನನ್ನು ಉಪೇಕ್ಷಿಸುವ ಇಕ್ಕಟ್ಟಿಗೆ ತುತ್ತಾಗುವ ದಶರಥನು ಸ್ವಭಾವದಿಂದ ಒಳ್ಳೆಯವನಾದರೂ ಸಂದರ್ಭಗಳಿಂದ ಹದಗೆಡುವ ಮಾನುಷದ ಪ್ರತೀಕವಾಗಿ ಆಧುನಿಕರಿಗೆ ಕಂಡರೆ, ಮಧ್ಯಕಾಲೀನರಿಗೆ ಇದೊಂದು ಅನನ್ವಯವಾಗಿ ತೋರಿ ತನ್ಮೂಲಕ ದಶರಥ-ಕೈಕೇಯಿಯರನ್ನು “ನಿರ್ದೋಷಿ”ಗಳಾಗಿಸಲು ಅಸುರಾವೇಶ, ಪೂರ್ವಶಾಪ, ದೈವಲೀಲೆ, ರಾಕ್ಷಸಮಾಯೆಗಳಂಥ ತಂತ್ರಗಳನ್ನು ಕಲ್ಪಿಸುವ ಅವಕಾಶವೀಯುತ್ತದೆ. ವನವಾಸಕ್ಕೆ ಬಂದ ರಾಮನು ಲಕ್ಷ್ಮಣನೊಡನೆ ಸಂಕಟಪಡುತ್ತ ದಶರಥ-ಕೈಕೇಯಿಯರನ್ನು ಹಳಿಯುವುದು ಆಧುನಿಕಮನಸ್ಸಿಗೆ ಮನುಷ್ಯಸಹಜವಾಗಿ ತೋರಿದರೆ ಮಧ್ಯಕಾಲೀನಮನಸ್ಸಿಗೆ ಅದು ಮನೋವ್ಯಭಿಚಾರವೆನಿಸುತ್ತದೆ. ಸೀತೆಯನ್ನು ರಾವಣನು ಮೈಮುಟ್ಟಿ ಹೊತ್ತೊಯ್ದರೆ ಇದೇ ಮನಸ್ಸಿಗೆ ಕಸಿವಿಸಿಯಾಗಿ ಅದಕ್ಕೆ ಪ್ರತ್ಯಾಮ್ನಾಯವನ್ನು ಹುಡುಕುತ್ತದೆ; ರಾವಣನು ಸೀತೆ ನಿಂತ ಭೂಮಿಯನ್ನೇ ಕಿತ್ತು ಎತ್ತಿಕೊಂಡು ಬರುವಂತೆ ಮಾಡುತ್ತದೆ. ವಾಲಿಯನ್ನು ಮರೆಯಿಂದ ರಾಮನು ಕೊಂದದ್ದನ್ನು ಸಮರ್ಥಿಸಲು ಕಾಂಚನಮಾಲೆಯಂಥ ಹೊಸ ಹತ್ಯಾರವನ್ನು ಸೃಷ್ಟಿಸುತ್ತದೆ. ಸೀತಾಗ್ನಿಪರೀಕ್ಷೆಗೆ ಕಾರಣವಾಗುವ ರಾಮನ ಮನೋವೃತ್ತಿಯನ್ನು ಸಮರ್ಥಿಸಲು ಈ ಮುನ್ನ ಅಗ್ನಿಯಲ್ಲಿ ಸುರಕ್ಷಿತಳಾಗಿದ್ದ ಸಾತ್ತ್ವಿಕಸೀತೆಯನ್ನು ಇದೀಗ ರಾವಣನ ಸೆರೆಯಿಂದ ಮುಕ್ತಳಾದ ತಾಮಸಸೀತೆಗೆ ಬದಲಾಗಿ ವಿನಿಮಯಿಸಿಕೊಳ್ಳುವ ಸಂದರ್ಭವಾಗಿ ವ್ಯಾಖ್ಯಾನಿಸುತ್ತದೆ. ಚೋದ್ಯವೆಂದರೆ ಇಂಥ ಕೆಲವು ಶೀರ್ಷಾಸನಗಳನ್ನು ಸಂಸ್ಕೃತಕವಿಗಳಾದ ಭಾಸ, ಭವಭೂತಿ, ಮುರಾರಿ, ರಾಜಶೇಖರರಂಥವರೂ ಹಾಕಿದ್ದಾರೆ, ಮಧ್ಯಕಾಲದ ದೇಶಭಾಷಾಕವಿಗಳಾದ ಕಂಬ, ನರಹರಿ, ತುಲಸೀದಾಸರಂಥವರೂ ಸಮೃದ್ಧವಾಗಿ ಮಾಡಿದ್ದಾರೆ! ಇದು ಹೋಗಲೆಂದರೆ ಅತ್ಯಾಧುನಿಕರಾದ ಕುವೆಂಪು, ವಿಶ್ವನಾಥ, ಮೈಥಿಲೀಶರಣಗುಪ್ತರಂಥವರೂ ಇದಕ್ಕೆ ಹೊರತಾಗಿಲ್ಲ. ಅಷ್ಟೇಕೆ, ಗಾಂಧಿಯಂಥ ರಾಜಕಾರಣಿಗಳೇ ಮೂಲರಾಮಾಯಣದ ನೈಜತೆಯನ್ನು ಒಪ್ಪದಂಥವರಾಗಿದ್ದಾರೆ.
ಹೀಗೆ ರಾಮ ಮತ್ತವನ ಪರಿವಾರವನ್ನು “ನಿರ್ದೋಷೀಕರಿಸುವ” ಪ್ರಯತ್ನ ಸಾವಿರಕ್ಕೂ ಮಿಕ್ಕು ವರ್ಷಗಳಿಂದ ಸಾಗುತ್ತಲೇ ಬಂದಂತೆ ಈಚಿನ ಒಂದು ಶತಾಬ್ದಿಯಿಂದ ಸಕಲದೋಷಗಳಿಗೂ ರಾಮನನ್ನು ಹೊಣೆಯಾಗಿಸುವ ಮತ್ತೊಂದು ವ್ಯವಸ್ಥಿತಷಡ್ಯಂತ್ರವೂ ಸಾಗುತ್ತಿದೆ. ಇದು ಕೂಡ ಸಾಮಾಜಿಕ-ಸಾಹಿತ್ಯಕ-ಸಾಂಸ್ಕೃತಿಕವಲಯಗಳಲ್ಲಿ ವ್ಯಾಪಿಸಿಕೊಂಡಿರುವುದು ಸರ್ವವೇದ್ಯ. ಈ ಎರಡು ದೃಷ್ಟಿಕೋನಗಳೂ ಆಳದಲ್ಲಿ ಜೀವನನಿಷ್ಠವಾಗದಿರುವುದೇ—ಅಧ್ಯಾತ್ಮನಿಷ್ಠವಾಗದಿರುವುದೇ—ಇಂಥ ಸಮಸ್ಯೆಗೆ ಕಾರಣ. ಅಧಿಭೂತದೃಷ್ಟಿ ಅಧ್ಯಾತ್ಮವನ್ನು (ಆದರ್ಶವನ್ನು) ಆತ್ಯಂತಿಕವಾಗಿ ನಿರಾಕರಿಸಿದರೆ ಅಧಿದೈವದೃಷ್ಟಿ ಅಧಿಭೂತವನ್ನು (ವಾಸ್ತವವನ್ನು) ಉಪೇಕ್ಷಿಸುತ್ತದೆ. ವಸ್ತುತಃ ಅಧ್ಯಾತ್ಮದಿಂದಲೇ ಅಧಿಭೂತ-ಅಧಿದೈವಗಳೆರಡಕ್ಕೂ ಅರ್ಥಪೂರ್ಣತೆ ಬರುವುದು. ಇದನ್ನೊಲ್ಲದ ದೃಕ್ಪಥಗಳು ತಮ್ಮದೇ ಆದ ರೀತಿಯಲ್ಲಿ ರಾಮಕಥಾಶ್ರಿತವಾದ ಕಲಾಕೃತಿಯನ್ನು ವ್ಯಾಖ್ಯಾನಿಸಲು ಹೊರಟಿರುವುದು ಬಿಕ್ಕಟ್ಟನ್ನುಂಟುಮಾಡಿದೆ. ಅಧಿಭೂತಪಾರಮ್ಯವೇ ಆಧುನಿಕರ ನಾಸ್ತಿಕವಾದ. ಇದು ಸಾಮಾಜಿಕನ್ಯಾಯದ ಹೆಸರಿನಲ್ಲಿ ರಾಮನನ್ನೂ ಆತನ ವಲಯವು ಪ್ರತಿನಿಧಿಸುವ ಆದರ್ಶವನ್ನೂ ಧಿಕ್ಕರಿಸುವ ಮತ್ತು ವಿಡಂಬಿಸುವ ಕುಹಕಕ್ಕೆ ಮುಂದಾಗುತ್ತದೆ. ಅಧಿದೈವಪಾರಮ್ಯವೇ ಮಧ್ಯಕಾಲೀನರ ದೈವವಾದ. ಇದು ಅವತಾರಪುರುಷನ “ಪರಿಪೂರ್ಣತೆ”ಯ ಹೆಸರಿನಲ್ಲಿ ರಾಮನ ಮತ್ತವನ ವಲಯದ ಮಾನುಷಸೌಂದರ್ಯವನ್ನು ಉಪೇಕ್ಷಿಸಿ ಇದನ್ನೆಲ್ಲ ಅವಾಸ್ತವಗಳ ಮೂಲಕ ಪ್ರಕಾರಾಂತರವಾಗಿ ವಿವರಿಸುತ್ತದೆ. ಉಭಯತ್ರ ಕಾಣುವುದು ವಾಲ್ಮೀಕಿ ಕಾಣಿಸಿದ್ದನ್ನು ಕಾಣಬಾರದೆಂಬ ಛಲ; ತಮ್ಮ ಕಾಣ್ಕೆಯೇ ಮೇಲೆಂಬ ಹಠ. ಇಂತಿದ್ದರೂ ವಾಲ್ಮೀಕಿಯ ದರ್ಶನವನ್ನು ಉಳಿಸುವಲ್ಲಿ ಅಧಿದೈವವಾದಿಗಳೇ ಅಧಿಭೂತವಾದಿಗಳಿಗಿಂತ ಮೇಲಾಗಿದ್ದಾರೆ. ಇದಕ್ಕೆ ಕಾರಣ ಇವರಿಗಿರುವ ನಮ್ರತೆ ಮತ್ತು ಪ್ರೀತಿ. ಈ ಉತ್ತಮಮೌಲ್ಯಗಳು ರಾಮನನ್ನು ದ್ವೇಷಿಸುವ “ವಿಚಾರವಾದಿ”ಗಳಿಗೂ ಸೆಮೆಟಿಕ್ ಮತಾಗ್ರಹಿಗಳಿಗೂ ಇಲ್ಲ. ಹೀಗಾಗಿಯೇ ಈ ದೃಷ್ಟಿಯಿಂದ ಮಾಡುವ ವಿಕೃತಿಗಳಲ್ಲಿ ಮಹನೀಯತೆಯಿಲ್ಲದಿದ್ದರೂ ಸಹನೀಯತೆ ಇರುತ್ತದೆ. ಅಷ್ಟೇ ಅಲ್ಲ, ಇದು ತನ್ನ ಅರಿವಿಲ್ಲದಂತೆಯೇ ಅಧಿಕಾರಿಭೇದವನ್ನು ಅನುಲಕ್ಷಿಸಿದ ಲೋಕಹಿತಕ್ಕೂ ಅವಕಾಶ ನೀಡಿದೆ.
* * *
ವಾಲ್ಮೀಕಿಮುನಿಗಳ ಮೂಲದಿಂದಾಚೆಗೆ ಸಾಕಷ್ಟು ವಿಸ್ತೃತವಾಗಿ ನಿರೂಪಿತವಾದ ರಾಮಕಥೆಗಳ ಪೈಕಿ ತುಂಬ ಪ್ರಾಚೀನ ಮತ್ತು ಅರ್ಥಪೂರ್ಣವಾದದ್ದು ಮಹಾಭಾರತದ ರಾಮೋಪಾಖ್ಯಾನ. ಇಲ್ಲಿ ಅಲೌಕಿಕಸಂಗತಿಗಳು ವಾಲ್ಮೀಕಿರಮಾಯಣಕ್ಕಿಂತ ಕಡಮೆಯಾಗಿರುವುದು ಗಮನಾರ್ಹ. ಕೇವಲ ದಿಕ್ಸೂಚಿಯಾಗಿ ಹೇಳುವುದಾದರೆ, ರಾಮೋಪಾಖ್ಯಾನದಲ್ಲಿ ಪುತ್ರಕಾಮೇಷ್ಟಿಯ ಪ್ರಸ್ತಾವವೇ ಇಲ್ಲ, ಸೀತೆಯು ಭೂಮಿಜಾತೆಯೆಂಬ ಉಲ್ಲೇಖವೂ ಇಲ್ಲ. ಅಂತೆಯೇ ರಾಮ-ಸೀತೆಯರ ಮದುವೆಯ ವಿವರವಲ್ಲದೆ ಮಿಕ್ಕ ರಾಮಾನುಜರ ಪತ್ನಿಯರ ಪ್ರಸ್ತಾವವೂ ಇಲ್ಲ. ಬಾಲಕಾಂಡದ ಎಷ್ಟೋ ಉಪಾಖ್ಯಾನಗಳ ಸುಳಿವೇ ಇಲ್ಲ. ಅಷ್ಟೇಕೆ, ವಿಶ್ವಾಮಿತ್ರರ ಯಜ್ಞರಕ್ಷೆಯ ವೃತ್ತಾಂತವು ಇಲ್ಲಿಲ್ಲ. ಇದೇ ರೀತಿ ಯುದ್ಧಕಾಂಡದ ಎಷ್ಟೆಷ್ಟೋ ಅತಿಮಾನುಷಘಟನೆಗಳು ಮರೆಯಾಗಿವೆ. ಸಂಜೀವನಿಯ ಪ್ರಕರಣವೇ ಇಲ್ಲ. ಸೀತಾಗ್ನಿಪರೀಕ್ಷೆಯ ಸಂದರ್ಭವೂ ಕಾಣುವುದಿಲ್ಲ. ದೇವತೆಗಳೇ ಬಂದು ಆಕೆಯ ಸಚ್ಚರಿತಕ್ಕೆ ಸಾಕ್ಷಿ ನುಡಿಯುತ್ತಾರೆ. ಅಷ್ಟೇಕೆ, ಇಡಿಯ ಉತ್ತರಕಾಂಡವೇ ಕಣ್ಮರೆಯಾಗಿದೆ. ಅಲ್ಲಿ ಬರುವ ರಾವಣನ ಕಥೆ ಈ ಉಪಾಖ್ಯಾನದ ಮೊದಲಿಗೇ ಹಿತ-ಮಿತವಾಗಿ ಸಂಗ್ರಹಗೊಂಡಿದೆ. ಮೂಲದಲ್ಲಿ ಪುನರುಕ್ತವಾಗುವ ಹಲವು ಹತ್ತು ಘಟನೆಗಳು ಇಲ್ಲಿ ಹದವರಿತು ಒಂದೊಂದೇ ಬಾರಿ ಬಂದಿವೆ. ಉದಾಹರಣೆಗೆ: ವಾಲಿ-ಸುಗ್ರೀವರ ಮೊದಲ ದ್ವಂದ್ವಯುದ್ಧದಲ್ಲಿಯೇ ರಾಮನಿಂದ ವಾಲಿವಧೆಯಾಗುತ್ತದೆ. ಇಂಥ ಅಡಕ-ಔಚಿತ್ಯಗಳನ್ನು ಗಮನಿಸಿಯೇ ರಾಮೋಪಾಖ್ಯಾನವನ್ನು ವಾಲ್ಮೀಕಿಮುನಿಯ ರಾಮಾಯಣಕ್ಕಿಂತ ಪ್ರಾಚೀನವಾದ ರಾಮಕಥಾನಕವೆಂದು ಹಲವರು ವಿದ್ವಾಂಸರು ಪರಿಗಣಿಸುತ್ತಾರೆ.
* * *
ಆದರೆ ಮುಂದಿನ ರಾಮಕಥಾನಕಗಳು ಈ ಬಗೆಯ ಜಾಡನ್ನು ಹಿಡಿಯಲಿಲ್ಲ. ಇಂಥವುಗಳ ಪೈಕಿ “ಪದ್ಮಪುರಾಣ”ದ ಪಾತಾಲಖಂಡದಲ್ಲಿ ಕಾಣುವ “ಶೇಷರಾಮಾಯಣ”ವೂ ಒಂದು. ಈ ಕೃತಿ ಶೇಷ ಮತ್ತು ವಾತ್ಸ್ಯಾಯನರ ನಡುವೆ ಸಾಗಿದ ಸಂವಾದವೆಂಬಂತೆ ರೂಪುಗೊಂಡಿದೆ. ಇಲ್ಲಿರುವುದು ಉತ್ತರಕಾಂಡದ ಕೆಲವು ಘಟನೆಗಳು ಮಾತ್ರ. ಅದರಲ್ಲಿಯೂ ಸೀತಾಪರಿತ್ಯಾಗ, ರಾಮನ ಅಶ್ವಮೇಧ ಮತ್ತು ಲವ-ಕುಶರ ಕಾಳಗಗಳನ್ನು ಗಣಿಸಿದೆ. ಹೀಗೆ ಮಾಡುವಾಗಲೂ ಯಜ್ಞಾಶ್ವವು ದೇಶವನ್ನೆಲ್ಲ ಸುತ್ತಿದ ವಿವರಗಳೂ ಅದನ್ನು ಕಟ್ಟಿದವರ ಜೊತೆಯಲ್ಲಿ ಶತ್ರುಘ್ನನು ಸೆಣಸಿದ ಪರಿಗಳೂ ವಿಸ್ತೃತವಾಗಿ ಬಂದಿವೆಯಲ್ಲದೆ ಮಿಕ್ಕ ವಿವರಗಳು ಹೆಚ್ಚಾಗಿಲ್ಲ. ಇದನ್ನು ಪರಿಶೀಲಿಸಿದಾಗ ಜೈಮಿನಿಮುನಿಪ್ರಣೀತವೆಂದು ಪ್ರಸಿದ್ಧವಾಗಿರುವ, ಪಾಂಡವರ ಅಶ್ವಮೇಧವನ್ನಷ್ಟೇ ಕೇಂದ್ರೀಕರಿಸಿದ “ಜೈಮಿನಿಭಾರತ”ದಂತೆಯೇ “ಶೇಷರಾಮಾಯಣ”ವೂ ಸಾಗಿದೆಯೆಂದು ತಿಳಿಯದಿರದು. ಬಹುಶಃ ಈ ಕೃತಿಗೆ “ಜೈಮಿನಿಭಾರತ”ವೇ ಸ್ಫೂರ್ತಿಯಾಗಿರಬೇಕು.
ಈ ಕೃತಿಯ ಮೊದಲಿಗೆ ಭರತನು ರಾಮನ ಆಗಮನಕ್ಕಾಗಿ ಹಾತೊರೆದು ಕಾದ ವಿವರಗಳು ಮನೋಹರವಾಗಿವೆ. ಅನಂತರ ರಾಮಾಗಮನ, ಬಂಧುಮಿಲನ ಮತ್ತು ಪಟ್ಟಾಭಿಷೇಕಗಳಾಗುತ್ತವೆ. ಇವೆಲ್ಲ ವಿವರಗಳೂ ತುಂಬ ಹೃದಯಂಗಮವಾಗಿವೆ. “ಪದ್ಮಪುರಾಣ”ವು ಅನೇಕಸುಕವಿಗಳಿಂದ ಪ್ರೇರಿತವಾದ ಕಾರಣ ಸಹಜವಾಗಿಯೇ ಅಲ್ಲಲ್ಲಿ ಭಾವಸ್ಫೂರ್ತಿ-ಉಕ್ತಿಚಮತ್ಕೃತಿಗಳಿಗೆ ಅವಕಾಶವಾಗಿದೆ. ಶ್ರೀರಾಮನನ್ನು ಕಾಣಲು ಬಂದ ಅಗಸ್ತ್ಯಮುನಿಗಳ ಮಾತಿನಿಂದ ರಾವಣಾದಿಗಳ ಪೂರ್ವವೃತ್ತಾಂತವೂ ಅಶ್ವಮೇಧಕ್ಕೆ ಸೂಚನೆಯೂ ಸಿಗುತ್ತವೆ. ಇವುಗಳ ನಡುವೆಯೇ ರಾಜಧರ್ಮ, ಯುದ್ಧಧರ್ಮ, ರಾಮರಾಜ್ಯದ ಸೊಗಸು ಮುಂತಾದ ಅಂಶಗಳೂ ಹೊಂದಿಕೊಂಡಿವೆ. ಯಾಗಾಶ್ವದ ಸಂಚಾರ ಮೊದಲಾದ ಬಳಿಕ ಕಾಂಚಿ, ಅಹಿಚ್ಛತ್ರ, ನೀಲಾಚಲ ಮುಂತಾದ ಕ್ಷೇತ್ರಗಳ ವರ್ಣನೆ, ಅಲ್ಲಿಯ ಹಲಕೆಲವು ಕಥೆ-ಉಪಕಥೆಗಳು ಬರುತ್ತವೆ. ಚ್ಯವನಮಹರ್ಷಿಯ ಆಶ್ರಮಗಮನದ ಜೊತೆಗೆ ಆತನ ಹುಟ್ಟು-ಹಿರಿಮೆಗಳೆಲ್ಲ ಪ್ರಸ್ತುತವಾಗುತ್ತವೆ. ಈ ನಡುವೆ ಶಾಲಗ್ರಾಮದ ಮಹಿಮೆ, ಗಂಡಕೀಮಾಹಾತ್ಮ್ಯ, ಗಂಗಾಸಾಗರಸಂಗಮಸ್ನಾನ, ನೀಲಾಚಲಮಾಹಾತ್ಮ್ಯ, ಗೋಸೇವಾಪುಣ್ಯಫಲ, ನರಕದಲ್ಲಿರುವ ಪ್ರಾಣಿಗಳ ವಿಮೋಚನೆ ಮುಂತಾದ ಹತ್ತಾರು ಪುರಾಣಪ್ರಿಯಾಂಶಗಳು ಎಡತಾಕುತ್ತವೆ. ಪುಷ್ಕಲ-ಸುಬಾಹುಗಳಂಥ ವೀರರು ಅಶ್ವವನ್ನು ಕಟ್ಟಿದ್ದ ಕಾರಣ ಅವರನ್ನು ಜಯಿಸುವ ವಿವರಗಳೂ ಈ ನಡುವೆ ಬರುತ್ತವೆ. ಲೋಮಶಮಹರ್ಷಿಯ ದರ್ಶನ, ಆರಣ್ಯಕಮುನಿಯ ಮಾಹಾತ್ಮ್ಯ, ಯೋಗಿನೀದರ್ಶನ ಮತ್ತು ಸಂಮೋಹನಾಸ್ತ್ರಪ್ರಾಪ್ತಿ, ವಿದ್ಯುನ್ಮಾಲಿಯೆಂಬ ರಕ್ಕಸನು ಅಶ್ವವನ್ನು ಅಪಹರಿಸಿದಾಗ ಅವನನ್ನು ಗೆದ್ದ ಬಗೆ, ದೇವಪುರದ ವೀರಮಣಿ ಮತ್ತವನ ಮಗ ರುಕ್ಮಾಂಗದರು ಯಾಗಾಶ್ವವನ್ನು ಕಟ್ಟಿದಾಗ ಅವರ ಬೆಂಬಲಕ್ಕೆ ಶಿವ ಮತ್ತವನ ಪರಿವಾರವೆಲ್ಲ ನಿಲ್ಲುವುದು, ಹನೂಮಂತನ ಆಗಮನ, ರಾಮ-ಶಿವರ ಅಭೇದದರ್ಶನ ಹಾಗೂ ವೀರಮಣಿಯ ಶರಣಾಗತಿ, ಹೇಮಕೂಟಕ್ಕೆ ಯಾಗಾಶ್ವದ ಗಮನ ಮತ್ತದು ಅಲ್ಲಿಯೇ ಸ್ತಂಭಿತವಾಗುವುದು, ಶೌನಕಮುನಿದರ್ಶನ ಹಾಗೂ ಅಶ್ವಕ್ಕೆ ಬಂಧವಿಮೋಚನೆ, ಕುಂಡಲಪುರಗಮನ ಮತ್ತು ಚಂಪಕಪ್ರಭುವಿನ ಸೋಲು, ಕಟ್ಟಕಡೆಗೆ ವಾಲ್ಮೀಕಿಮುನಿಗಳ ಅಶ್ರಮದಲ್ಲಿ ಲವನಿಂದ ಅಶ್ವಬಂಧನದವರೆಗೆ ಕಥೆಯು ಕುದುರೆಯ ಹಾಗೆಯೇ ದಾಪಿಡುತ್ತದೆ.
ಇಲ್ಲಿಂದ ಮುಂದೆ ಲೋಕಾಪವಾದ, ಸೀತಾಪರಿತ್ಯಾಗದಿಂದ ಮೊದಲ್ಗೊಂಡು ಲವ-ಕುಶರ ಜನನದವರೆಗಿನ ಪೂರ್ವಕಥೆ ವಿವೃತವಾಗುತ್ತದೆ. ಸೀತೆಯ ಮೇಲೆ ಅಗಸನು ಅಪವಾದವನ್ನು ಹಾಕಿದ ಹಿನ್ನೆಲೆಯೂ ಬರುತ್ತದೆ. ಆ ಪ್ರಕಾರ ಮದುವೆಗೆ ಮುನ್ನ ಅದೊಂದು ದಿನ ಸೀತೆ ಜನಕಮಹಾರಾಜನ ಉದ್ಯಾನದಲ್ಲಿ ವಿಹರಿಸುತ್ತಿದ್ದಾಗ ವಾಲ್ಮೀಕಿಮುನಿಗಳ ಆಶ್ರಮದಿಂದ ಬಂದ ಜೋಡಿ ಗಿಳಿಗಳ ಪರಿಚಯವಾಗುತ್ತವೆ. ಅವು ಮುನಿಯು ಬರೆದ ಕಾವ್ಯವನ್ನು ಆಲಿಸಿದ ಕಾರಣ ಸೀತೆಯ ಮದುವೆ ರಾಮನೊಡನೆ ಆಗುವುದನ್ನು ಅರುಹುತ್ತವೆ. ಆದರೆ ಕುತೂಹಲ ಕೆರಳಿದ ಸೀತೆ ತನ್ನ ವಿವಾಹವಾಗುವವರೆಗೆ ಅವನ್ನು ಬಂಧನದಲ್ಲಿರಿಸಿ ಸತ್ಯಾಸತ್ಯಗಳನ್ನು ಪರೀಕ್ಷಿಸಲೆಳಸುವಳು. ಆಗ ಬಂಧನವನ್ನೊಲ್ಲದ ಹೆಣ್ಣುಗಿಳಿ ಪತಿವಿಯೋಗದಿಂದ ಅಸುನೀಗುತ್ತದೆ. ಗರ್ಭಿಣಿಯಾದ ತನ್ನ ಪ್ರಿಯಪತ್ನಿಯು ಸತ್ತ ಸಂಕಟದಲ್ಲಿ ಗಂಡುಗಿಳಿ ಸೀತೆಯ ಮೇಲೆ ಸೇಡನ್ನು ತೀರಿಸಿಕೊಳ್ಳಲು ತಾನು ಆತ್ಮಹತ್ಯೆ ಮಾಡಿಕೊಂಡು ಅಯೋಧ್ಯೆಯಲ್ಲಿ ಅಗಸನಾಗಿ ಜನಿಸುವುದು. ಇದು ನಿಜಕ್ಕೂ ಧ್ವನಿಪೂರ್ಣವಾದ ಉಪಕಥೆ. ಇತ್ತ ಲವ-ಕುಶರು ರಾಮನ ಸಹೋದರರನ್ನೂ ಸಕಲಪರಿವಾರವನ್ನೂ ಸೋಲಿಸಿ ಹನೂಮದಾದಿಗಳನ್ನು ಸೆರೆಹಿಡಿದು ಸೀತೆಯ ಬಳಿ ಎಳೆದು ತಂದಾಗಲೇ ಎಲ್ಲರಿಗೂ ವಾಸ್ತವ ತಿಳಿಯುತ್ತದೆ. ಅನಂತರ ವಾಲ್ಮೀಕಿಮುನಿಗಳ ಆಣತಿಯಂತೆ ರಾಮನು ಸೀತೆಯನ್ನು ಯಾವುದೇ ಶಪಥ-ಪರೀಕ್ಷೆಗಳಿಲ್ಲದೆ ಸ್ವೀಕರಿಸಿ ಯಾಗವನ್ನು ಮುಗಿಸುತ್ತಾನೆ. ಯಜ್ಞಪಶುವೂ ದಿವ್ಯವಾದ ರೂಪವನ್ನು ಗಳಿಸುತ್ತದೆ. ಎಲ್ಲರೂ ಸುಖ-ಶಾಂತಿಗಳಿಂದ ಕೂಡಿ ಬಾಳುತ್ತಾರೆ. ಹೀಗೆ ಸಮಸ್ತವೂ ಮಂಗಳಾಂತವಾಗುತ್ತದೆ. ಈ ಕಥಾನಕವು ಅಪ್ಪಟ ಪುರಾಣಗಳ ವೀರಾದ್ಭುತ-ಭಕ್ತಿಮಾಹಾತ್ಮ್ಯ ಮತ್ತು ತೀರ್ಥ-ಕ್ಷೇತ್ರಗಳ ಮಹಿಮೆಗಳನ್ನೂ ಹರಿ-ಹರಸಾಮರಸ್ಯವನ್ನೂ ಒಳಗೊಂಡಿದ್ದರೂ ಮಾನುಷಭಾವನೆಗಳಿಗೆ ಸ್ವಲ್ಪ ಅವಕಾಶ ನೀಡಿದ ಕಾರಣ ರಸಿಕರಿಗೂ ಸ್ವಲ್ಪ ಮೆಚ್ಚಾಗಬಹುದು. ಕನ್ನಡದಲ್ಲಿ ಮುದ್ದಣನ “ರಾಮಾಶ್ವಮೇಧ” ಮತ್ತು ಸೋಸಲೆ ಅಯ್ಯಾಶಾಸ್ತ್ರಿಗಳ “ಶೇಷರಾಮಾಯಣ”ಗಳು ಕ್ರಮವಾಗಿ ಹಳಗನ್ನಡಗದ್ಯ ಮತ್ತು ನಡುಗನ್ನಡಷಟ್ಪದಿಗಳ ರಚನೆಗಳಾಗಿ ಜನಪ್ರೀತಿಯನ್ನು ಗಳಿಸಿರುವುದು ಇದಕ್ಕೊಂದು ನಿದರ್ಶನ. ಅಲ್ಲದೆ ವೀರಮಣಿಕಾಳಗ, ಲವ-ಕುಶರ ಕಾಳಗ ಮುಂತಾದ ಹಲಕೆಲವು ಯಕ್ಷಗಾನಗಳು ಇದೇ ಕಥನವನ್ನು ಆಶ್ರಯಿಸಿರುವುದೂ ಈ ಮಾತಿಗೆ ಪೂರಕ.
* * *
ಅರ್ವಾಚಿನವಾದ ಸ್ವತಂತ್ರರೂಪದ ರಾಮಕಥಾಕೃತಿಗಳ ಪೈಕಿ ತುಂಬ ಚಿಕ್ಕದಾದ “ಅದ್ಭುತರಾಮಾಯಣ”ದಲ್ಲಿ ರಾಮಕಥೆಗಿಂತ ಶಾಕ್ತತತ್ತ್ವಗಳೂ ವೇದಾಂತವಿಚಾರಗಳೂ ಮುಖ್ಯವಾಗಿವೆ. ಎಲ್ಲರೂ ಬಲ್ಲಂತೆ ಶೈವ-ವೈಷ್ಣವಮತಗಳಲ್ಲಿ ಕಾಣುವ ಭೇದ-ಅಭೇದ-ಭೇದಾಭೇದಗಳ ಮುಬ್ಬಗೆಯ ಎಳೆಗಳನ್ನು ಒಪ್ಪದ ಶಾಕ್ತಮತವು ಅದ್ವೈತವೊಂದನ್ನೇ ತನ್ನ ದರ್ಶನದೀಪ್ತಿಗಾಗಿ ಅಂಗೀಕರಿಸಿದೆ. ಇದರ ಪ್ರತಿಪಾದನೆಗೇ “ಅದ್ಭುತರಾಮಾಯಣ” ಮೀಸಲಾಗಿದೆ. ಇದನ್ನು ಕೂಡ ರಚಿಸಿದ್ದು ವಾಲ್ಮೀಕಿಯೆಂದೇ ಸಂಪ್ರದಾಯದ ಶ್ರದ್ಧೆ. ಹೇಳಿ ಕೇಳಿ ಶಾಕ್ತತತ್ತ್ವವನ್ನು ಈ ಕೃತಿ ನೆಮ್ಮುವ ಕಾರಣ ಇಲ್ಲಿ ರಾಮನಿಗಿಂತ ಸೀತೆಗೇ ಹೆಚ್ಚಿನ ಪ್ರಾಮುಖ್ಯ. ಇನ್ನು ಸೀತೆಯಾದರೋ ಸಾಕ್ಷಾತ್ ಪರದೇವತೆ, ಜಗನ್ಮಾಯೆ, ಜಗನ್ಮಾತೆ. ಅಂದರೆ, ಎಲ್ಲ ದೇವಿಯರ ಸಮಾಹಾರ. ಈ ಕಾರಣದಿಂದಲೇ ಸೀತೆಗೂ ಲಲಿತಾತ್ರಿಪುರಸುಂದರಿಗೂ ಭೇದವಿಲ್ಲ. ಇಲ್ಲಿಯ ಸೀತೆ ವಾಲ್ಮೀಕಿರಾಮಾಯಣದ ಸೀತೆಯಂತೆ ಅಬಲೆಯಲ್ಲ; ಮಹಾಪ್ರಬಲೆ. ರಾವಣನು ಸತ್ತ ಬಳಿಕವೂ ಅವನ ಸಹೋದರವರ್ಗಕ್ಕೆ ಸೇರಿದ್ದ ಶತಕಂಠ-ಸಹಸ್ರಕಂಠರಾವಣರು ಲೋಕಕಂಟಕರಾಗಿಯೇ ಉಳಿದಿರುತ್ತಾರೆ. ಅವರನ್ನು ಸದೆಬಡಿಯಲು ರಾಮನಿಗೂ ಸಾಧ್ಯವಿಲ್ಲ: “ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ.” ಆಗ ಸೀತೆ ಕರಾಳೆಯಾದ ಕಾಳಿಯಾಗಿ ಈ ಎಲ್ಲ ದುಷ್ಟರನ್ನೂ ಸಂಹರಿಸುತ್ತಾಳೆ. ಬಳಿಕ ವಿಶ್ವರೂಪವನ್ನು ಕಂಡ ಅರ್ಜುನನಂತೆ ರಾಮನು ತನ್ನ ಸತಿಗೇ ಶರಣಾಗಿ ಸೀತಾಸಹಸ್ರನಾಮವೇ ಮುಂತಾದ ಸ್ತೋತ್ರಗಳನ್ನು ಹೇಳಿ ಧನ್ಯನಾಗುತ್ತಾನೆ. ಈ ಸ್ತುತಿಯ ಎಷ್ಟೋ ನಾಮಾವಳಿಗಳು ಲಲಿತಾಸಹಸ್ರನಾಮವನ್ನು ನೆನಪಿಗೆ ತರುತ್ತವೆ.
ಇಂದಿನ ಮಹಿಳಾವಿಮೋಚನೋದ್ಯಮದಲ್ಲಿ ಈ ಪರಿಯ ಸೀತಾಚಿತ್ರಣಕ್ಕೆ ಹೆಚ್ಚಿನ ಬೆಲೆ ಬರಬಹುದು! ಅಮೀಶ್ ತ್ರಿಪಾಠಿಯಂಥ ಅಗ್ಗದ ಲೇಖಕರಿಗೂ ಸೀತೆಯನ್ನು ಯೋಧೆಯಂತೆ ನಿರೂಪಿಸುವಲ್ಲಿ “ಅದ್ಭುತರಾಮಾಯಣ”ದ ಸ್ಫೂರ್ತಿ ದೊರಕಿದೆಯೆಂದು ಊಹಿಸಬಹುದು. ದಿಟವೇ, ಸೀತಾದೇವಿಯ ಈ ಪರಿಯ ಚಿತ್ರಣ ಸ್ವಾಗತಾರ್ಹವೇ. ಆದರೆ ನಮಗೆ ಈಗಾಗಲೇ ದುರ್ಗಾಪರಮೇಶ್ವರಿಯ ರುದ್ರಭೀಕರವಾದ ಶಕ್ತಿಯುತರೂಪವಿರುವಾಗ, ಅವಳಿಂದಾದ ಅನೇಕದೈತ್ಯಸಂಹಾರದ ಕಥೆಗಳಿರುವಾಗ ಸೌಮ್ಯಕೋಮಲೆಯಾದ ಸೀತೆಯನ್ನು ಮತ್ತೊಬ್ಬ ದುರ್ಗೆಯನ್ನಾಗಿ ರೂಪಿಸಿ ನಾವು ಪಡೆಯಬಹುದಾದರೂ ಏನನ್ನು? ತತ್ತ್ವದೃಷ್ಟಿಯಿಂದ ಸೀತೆ, ಸಾವಿತ್ರಿ, ಸರಸ್ವತಿ, ಕಾತ್ಯಾಯನಿ, ಚಂಡಿ-ಚಾಮುಂಡಿಯರೆಲ್ಲ ಒಂದೇ ಶಕ್ತಿತತ್ತ್ವದ ಅಸಂಖ್ಯಮುಖಗಳೆಂದು ಒಪ್ಪಿಯೇ ಇರುವಾಗ ಅದನ್ನು ಹೀಗೆಲ್ಲ ಬಾಲಿಶಕಥೆಗಳ ಮೂಲಕ ವಾಚ್ಯವಾಗಿಸಬೇಕೇ? ಸಿದ್ಧವಿರುವ ಸಮಥಸುಂದರವಾದ ವೈವಿಧ್ಯಕ್ಕೆ ಎರವಾಗಿ ಎಲ್ಲವನ್ನೂ ರಸಶೂನ್ಯವಾಗಿಸಬೇಕೇ?