“ಅಧ್ಯಾತ್ಮರಾಮಾಯಣ”ದಂತೆಯೇ ಈ ಕೃತಿಯಲ್ಲಿ ಕೂಡ ಮಂಥರೆ, ಕೈಕೇಯಿ ಮೊದಲಾದವರಿಗೆ ನಿರ್ದೋಷತೆಯ ಪರವಾನಗಿ ಸಿಗುತ್ತದೆ. ಇಲ್ಲಿಯೂ ಅದು ಸರಸ್ವತಿಯ ಲೀಲೆ. ರಾಮನು ವನವಾಸದಲ್ಲಿರುವಾಗ ಶಿವಾಲಯವೊಂದರಲ್ಲಿ ಶಿವಪೂಜೆ ಮಾಡುತ್ತಿರುತ್ತಾನೆ. ಈ ಮಟ್ಟಕ್ಕೆ ಶಿವ-ಕೇಶವಸಾಮರಸ್ಯ ಸಂದಿರುವುದು ನಿಜಕ್ಕೂ ಸ್ತವನೀಯ. ಸೀತಾಪಹರಣವಂತೂ ಎಲ್ಲ ರೀತಿಯಿಂದಲೂ ಒಂದು ಲೀಲೆ; ಅಪಹೃತೆಯಾಗುವುದು ಮಾಯಾಸೀತೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂತಿದ್ದರೂ ಲಕ್ಷ್ಮಣರೇಖೆ ಇದ್ದೇ ಇರುತ್ತದೆ. ರಾವಣನಿಂದ ಮೊದಲ್ಗೊಂಡು ಇಲ್ಲಿ ಬರುವ ಸಂನ್ಯಾಸಿಗಳೆಲ್ಲ ಅದ್ವೈತಸಂಪ್ರದಾಯಾನುಸಾರವಾಗಿ ಶಿಖಾ-ಯಜ್ಞೋಪವೀತವಿಲ್ಲದ ಏಕದಂಡಿಗಳು. ಇಲ್ಲಿಯ ಸುಗ್ರೀವ-ವಿಭೀಷಣರು ಕೂಡ ಮತ್ತಷ್ಟು ನಿಃಸ್ಪೃಹರಾಗುತ್ತಾರೆ. ಮೊದಲು ರಾಜನಾಗಲು ಒಪ್ಪದ ವಿಭೀಷಣ ರಾಮನ ಒತ್ತಾಯದ ಬಳಿಕ ಲಂಕಾಧಿಪತಿಯಾಗುತ್ತಾನೆ ಮತ್ತು ಚಿರಂಜೀವಿತ್ವವನ್ನೂ ಗಳಿಸುತ್ತಾನೆ.
“ಭುಷುಂಡೀರಾಮಯಣ”ದಲ್ಲಿ ಕೂಡ “ರಾಮಗೀತೆ”ಯೊಂದಿದೆ. ಇದು ಹದಿನೆಂಟು ಅಧ್ಯಾಯಗಳನ್ನು ಒಳಗೊಂಡು “ಭಗವದ್ಗೀತೆ”ಯನ್ನು ಹೆಜ್ಜೆಹೆಜ್ಜೆಗೂ ಅನುಕರಿಸುತ್ತದೆ. ರಾಮನ ವಿಭೂತಿರೂಪಗಳೂ ವಿಶ್ವರೂಪವೂ ಇಲ್ಲಿ ಸೇರಿಕೊಂಡಿವೆ. ಅದ್ವೈತತತ್ತ್ವವನ್ನು ಸರ್ವತ್ರ ಸಾರುತ್ತಿದ್ದರೂ ಇದು ಆಗಮಗಳ ಚತುರ್ವ್ಯೂಹಗಳ ಪ್ರಸ್ತಾವವನ್ನೂ ಒಳಗೊಂಡಿದೆ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧರು ಕ್ರಮವಾಗಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರೇ ಆಗಿದ್ದಾರೆ. ಆದರೆ ಇದು ದ್ವೈತ-ವಿಶಿಷ್ಟಾದ್ವೈತಗಳ ಹಾದಿಯಲ್ಲಿ ಸಾಗದೆ ಅದ್ವೈತನಿಷ್ಠೆಯುಳ್ಳ ಭಾಗವತಸಂಪ್ರದಾಯದಂತೆ ನಡೆದಿದೆ. ಕಾಲಪುರುಷನ ಕಣ್ಣಿಗೆ ಸೀತಾರಾಮರು ಅರ್ಧನಾರೀಶ್ವರರಾಗಿ ತೋರಿದರೆ ಲಕ್ಷ್ಮಣನಿಗೆ ರಾಮನು ವಿಶ್ವರೂಪವನ್ನೇ ಕಾಣಿಸುತ್ತಾನೆ. ಅಂತೂ “ಭುಷುಂಡೀರಾಮಾಯಣ”ವು ತನ್ನ ತತ್ತ್ವಭಾಗದಲ್ಲಿ ಲೋಕಮಾನಿತವಾದ ಅದ್ವೈತದೃಷ್ಟಿಗೆ ಎಲ್ಲಿಯೂ ಚ್ಯುತಿಯನ್ನು ತರುವುದಿಲ್ಲ; “ಭಾಗವತ”ವನ್ನು ಎಷ್ಟೇ ಹುರುಪಿನಿಂದ ಅನುಸರಿಸಿದರೂ ಅದರಂತೆ ಭಾಷೆಯಲ್ಲಿ ಸ್ವೈರವೃತ್ತಿಯನ್ನು ಹಿಡಿಯದೆ ಪಾಣಿನಿಯ ಶಿಸ್ತನ್ನು ಮರೆಯುವುದಿಲ್ಲ. ಈ ಕೃತಿ ಬಹುಶಃ ಜಯದೇವ-ಲೀಲಾಶುಕರ ಬಳಿಕ, ತುಳಸೀದಾಸರಿಗಿಂತ ಮುನ್ನ ಹುಟ್ಟಿರಬಹುದು. ಒಟ್ಟಿನಲ್ಲಿ ಹಲವು ಕಾರಣಗಳಿಂದ ಇದು ಕೌತುಕದ ವಸ್ತುವಾಗಿದೆ.
* * *
ಅರ್ವಾಚೀನಕಾಲದ ರಾಮಕಥಾಕೃತಿಗಳ ಪೈಕಿ “ಆನಂದರಾಮಾಯಣ”ವೇ ವಿಸ್ತೃತವಾದುದು ಮತ್ತು ಇತ್ತೀಚಿನದು. ಇದರಲ್ಲಿ ಒಂಬತ್ತು ಕಾಂಡಗಳೂ ನೂರ ಒಂಬತ್ತು ಸರ್ಗಗಳೂ ಇವೆ. ಹನ್ನೆರಡು ಸಾವಿರದ ಇನ್ನೂರ ಐವತ್ತೆರಡು ಶ್ಲೋಕಗಳಷ್ಟು ಗಾತ್ರವುಳ್ಳ ಈ ಕೃತಿ ಸ್ಪಷ್ಟವಾಗಿಯೇ “ವಾಲ್ಮೀಕಿರಾಮಾಯಣ”ದ ಅರ್ಧದಷ್ಟಿದೆ. ಇಡಿಯ ರಚನೆ ಶಿವ-ಪಾರ್ವತಿಯರ ಸಂವಾದವೆಂಬಂತೆ ರೂಪಿತವಾಗಿದೆ. ಮೊದಲ ಕಾಂಡಗಳಲ್ಲಿ ರಾಮಕಥೆ ವಿಸ್ತರಿಸಿಕೊಂಡಿದ್ದರೂ ಅದಕ್ಕೆ ಲೇಖಕನು ತನ್ನದೇ ಆದ ಪರಿಷ್ಕರಣಗಳನ್ನು ಮಾಡಿಕೊಂಡಿದ್ದಾನೆ. ಅಂಥ ಕೆಲವು ವಿಶಿಷ್ಟವ್ಯತ್ಯಾಸಗಳನ್ನು ಸ್ಥೂಲವಾಗಿ ಗಮನಿಸಬಹುದು.
ರಾವಣನು ಶ್ರೀರಾಮನ ಹುಟ್ಟಿದೆ ಎಡೆಯಾಗದಂತೆ ಮಾಡಲು ಕೌಸಲ್ಯಾ-ದಶರಥರ ವಿವಾಹವನ್ನೇ ತಡೆಯಲು ನೋಡುತ್ತಾನೆ. ಅಷ್ಟೇಕೆ, ಕೌಸಲ್ಯೆಯನ್ನು ಅಪಹರಿಸಿಯೂ ಬಿಡುತ್ತಾನೆ. ಆದರೆ ದೈವಲೀಲೆಯಿಂದ ಕೌಸಲ್ಯಾ-ದಶರಥರಿಗೆ ವಿವಾಹವಾಗುತ್ತದೆ. ಇದೊಂದು ರೋಚಕಪ್ರಸಂಗ. ದಶರಥನ ಶ್ರವಣಕುಮಾರನ ಸಾವಿಗಾಗಿ ಅಶ್ವಮೇಧದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡ ಉಲ್ಲೇಖವುಂಟು. ಬಳಿಕ ಯಜ್ಞಪುರುಷನಿತ್ತ ಪಾಯಸವನ್ನು ಹಂಚಿಕೊಳ್ಳುವಾಗ ಕೈಕೇಯಿಯ ಭಾಗವನ್ನು ಹಕ್ಕಿಯೊಂದು ಲಪಟಾಯಿಸಿ, ಅದು ಕಡೆಗೆ ಅಂಜನೆಗೆ ದಕ್ಕುವಂತಾಗಿ, ತನ್ಮೂಲಕ ಹನೂಮಂತ ಹುಟ್ಟುತ್ತಾನೆ. ಹೀಗೆ ರಾಮಾದಿಗಳಿಗೆ ಹನೂಮಂತನೊಡನೆ ಸೋದರಸಂಬಂಧವುಂಟು. ರಾಮನ ಬಾಲಲೀಲೆ ಸಾಕಷ್ಟು ವಿಸ್ತೃತವಾಗಿ ನಿರೂಪಿತವಾಗುತ್ತದೆ. ಅದೇ ರೀತಿ ಕೈಕೇಯಿ ದಶರಥನಿಗೆ ದೇವಾಸುರಸಂಗ್ರಾಮದಲ್ಲಿ ಕೊಟ್ಟ ನೆರವೂ ವಿವರವಾಗಿ ಬರುತ್ತದೆ. ಇಲ್ಲಿಯೇ ದಶರಥನ ರಥಚಕ್ರದ ಕಡಾಣಿ ಜಾರಿಹೋದಾಗ ಅದನ್ನು ಕೈಕೇಯಿ ತನ್ನ ಎಡಗೈಯನ್ನು ಸಿಕ್ಕಿಸುವ ಮೂಲಕ ಕಾಪಾಡಿದ ಒಕ್ಕಣೆ ಇದೆ. ಇದು ಸಾಧ್ಯವಾದದ್ದು ಅವಳಿಗೆ ಬಾಲ್ಯದಲ್ಲಿ ಮುನಿಯೊಬ್ಬನಿತ್ತ ವರದಿಂದ ಎಂಬ ಮಾತೂ ಬರುತ್ತದೆ. ಅಷ್ಟೇ ಅಲ್ಲ, ಆ ಮುನಿಯನ್ನು ಕಪ್ಪು ಬಣ್ಣದವನೆಂದು ಮೊದಲು ಕೈಕೇಯಿ ಗೇಲಿ ಮಾಡಿದ ಕಾರಣ ಲೋಕದೃಷ್ಟಿಯಲ್ಲಿ ಅವಳು ಕಳಂಕಿತೆಯಾಗಲೆಂಬ ಶಾಪದ ಸಂಗತಿಯೂ ವಿವೃತವಾಗಿದೆ.
ದುಂದುಭಿಯೆಂಬ ಗಂಧರ್ವಿಯು ಮಂಥರೆಯಾದಳೆಂಬ ಒಕ್ಕಣೆಯುಂಟು. ದೇವಕಾರ್ಯವನ್ನು ಸಾಧಿಸಿಕೊಟ್ಟ ಕಾರಣ ಅವಳು ಮುಂದೆ ಕುಬ್ಜೆಯಾಗಿ ಹುಟ್ಟಿ ಕೃಷ್ಣನ ಅನುಗ್ರಹವನ್ನು ಗಳಿಸಿದಳೆಂದೂ ಕಥೆ ಬೆಳೆದಿದೆ. ಸೀತಾಸ್ವಯಂವರಕ್ಕೆ ರಾವಣನು ಬಂದನೆಂಬ ಕಥೆ ಇಲ್ಲಿಯೇ ಇರುವುದು. ಲಕ್ಷ್ಮಿಯು ಪದ್ಮಾಕ್ಷಮಹಾರಾಜನ ಪುತ್ರಿ ವೇದವತಿಯಾಗಿ ಹುಟ್ಟಿದ್ದಳೆಂದೂ ಅನಂತರ ಸೀತೆಯಾಗಿ ಜನಿಸಿದಳೆಂದೂ ತಿಳಿಯುತ್ತದೆ. ಇವಳು ಬಾಲ್ಯದಲ್ಲಿ ಶಿವಧನುವಿನೊಡನೆ ಆಟವಾಡುತ್ತಿದ್ದ ಉಲ್ಲೇಖವೂ ಇದೆ. ಉಮಾದೇವಿಯೇ ಮಾಯಾಸೀತೆಯಾಗಿ ವರ್ತಿಸಿದಳೆಂಬ ಸಂಗತಿಯಿಲ್ಲಿದೆ. ರಾವಣನು ಆತ್ಮಲಿಂಗವನ್ನೂ ಪಾರ್ವತಿಯನ್ನೂ ತನ್ನ ಸ್ವತ್ತಾಗಿ ಶಿವನ ಅನುಗ್ರಹದಿಂದ ಗಳಿಸಿದಾಗ ಅವನನ್ನು ಮರುಳುಗೊಳಿಸಿ ಪಾರ್ವತಿಯು ತಪ್ಪಿಸಿಕೊಂಡ ಕಥೆಯೂ ಆಗಲೇ ಅವನು ಮಯಾಸುರನ ಮಗಳಾದ ಮಂಡೋದರಿಯನ್ನು ಕೈಹಿಡಿದ ಕಥೆಯೂ ಇಲ್ಲಿ ಬರುತ್ತವೆ. ಈಗಲೂ “ಭೂಕೈಲಾಸ” ನಾಟಕ-ಚಲನಚಿತ್ರಗಳಲ್ಲಿ ಈ ಪ್ರಸಂಗ ಬಳಕೆಯಾಗುವುದು ಸ್ಮರಣೀಯ.
“ಆನಂದರಾಮಾಯಣ”ವು ರಾಮಕಥೆಯ ಎಷ್ಟೋ ಘಟನೆಗಳ ತಿಥಿಗಳನ್ನು ಉಲ್ಲೇಖಿಸುತ್ತದೆ. ಇಂಥ ವಿವರಗಳಲ್ಲಿ ಆಸಕ್ತರಾದವರಿಗೆ ಇದೊಂದು ನಚ್ಚಬಹುದಾದ ಆಕರ. ಇದೇ ರೀತಿಯಲ್ಲಿ ಯಾವ ಯಾವ ಘಟನೆಗಳಾದಾಗ ಮುಖ್ಯವ್ಯಕ್ತಿಗಳಿಗೆ ಎಷ್ಟೆಷ್ಟು ವಯಸ್ಸಾಗಿತ್ತೆಂಬ ದಾಖಲೆಯನ್ನೂ ನಾವಿಲ್ಲಿ ಕಾಣಬಹುದು. ವಾಲ್ಮೀಕಿಯ ಮೂಲದಲ್ಲಿ ಇರುವಂತೆ ಕಾಕಾಸುರನು ಸೀತೆಯ ಎದೆಯನ್ನು ತಿವಿಯುವುದಿಲ್ಲ; ಹೆಬ್ಬೆರಳನ್ನು ಕಚ್ಚುತ್ತಾನೆ. ಇದು ಈ ಕೃತಿಯ ಮಡಿವಂತಿಕೆಗೊಂದು ನಿದರ್ಶನ. ಶೂರ್ಪಣಖೆಯ ಮಗ ಸಾಂಬ. ದುರುದ್ದೇಶದಿಂದ ತಪಸ್ಸು ಮಾಡುತ್ತಿದ್ದ ಈತನನ್ನು ಲಕ್ಷ್ಮಣ ಅಯತ್ನಿತವಾಗಿ ಕೊಂದು ಲೋಕೋಪಕಾರ ಮಾಡುತ್ತಾನೆ. ಈ ಘಟನೆಯೇ ರಾಮಾದಿಗಳ ಮೇಲೆ ಶೂರ್ಪಣಖೆ ಕೆರಳಲು ಕಾರಣವಾಗುತ್ತದೆ. ಸೀತೆ ಸತ್ತ್ವ-ರಜಸ್ಸು-ತಮಸ್ಸುಗಳ ರೂಪದಿಂದ ಮುಬ್ಬಗೆಯಲ್ಲಿ ಇರುತ್ತಾಳೆ. ಅವಳ ತಮೋರೂಪವಷ್ಟೇ ಅಪಹೃತವಾಗುತ್ತದೆ. ರಜೋರೂಪವು ಅಗ್ನಿದೇವನ ಆಶ್ರಯದಲ್ಲಿರುತ್ತದೆ. ಸತ್ತ್ವರೂಪ ಮಾತ್ರ ರಾಮನೊಡನೆ ಅನಪಾಯಿಯಾಗಿ ನಿಲ್ಲುತ್ತದೆ.
ಅಶೋಕವನದಲ್ಲಿ ಅವಳು ರಾಕ್ಷಸಾನ್ನವನ್ನು ಸ್ವೀಕರಿಸುವುದಿಲ್ಲವೆಂದು ನಿರಾಹಾರದೀಕ್ಷೆಯಲ್ಲಿ ಇರುವಾಗ ಇಂದ್ರನೇ ಗುಟ್ಟಾಗಿ ಬಂದು ದಿವ್ಯಪಾಯಸವನ್ನು ಕೊಟ್ಟಿರುತ್ತಾನೆ. ಅದರ ತುಣುಕೊಂದು ತ್ರಿಜಟೆಗೆ ಪ್ರಸಾದವಾಗಿ ಸಿಗುತ್ತದೆ. ಸೀತಾಪಹರಣದ ಬಳಿಕ ಒಂಟಿಯಾದ ರಾಮನು ನಿತ್ಯಾಗ್ನಿಹೋತ್ರ ಮಾಡುವಾಗ ದರ್ಭಕೂರ್ಚದಲ್ಲಿ ಸೀತೆಯನ್ನು ಆವಾಹಿಸಿ ಅದನ್ನು ಪಕ್ಕದಲ್ಲಿರಿಸಿಕೊಂಡು ಕರ್ಮಗಳನ್ನು ನಡಸುತ್ತಿದ್ದನೆಂದು ಕೃತಿ ಒಕ್ಕಣಿಸಿವುದಲ್ಲದೆ ಅದನ್ನು “ಕುಶಭಾರ್ಯಾ” ಎಂದೂ ಹೆಸರಿಸುತ್ತದೆ. ಹೀಗೆಯೇ ಪತ್ನೀವಿಹೀನನಾದ ರಾಮನ ಸಂಯಮವನ್ನು ಪರಿಕ್ಷಿಸಲು ವೇಷಾಂತರದಲ್ಲಿ ಪಾರ್ವತಿ ಅವನ ಏಕಪತ್ನೀತ್ವದ ದೀಕ್ಷೆಗೆ ಮೆಚ್ಚುತ್ತಾಳೆ. ಸುಗ್ರೀವನಲ್ಲಿ ನಂಬಿಕೆಯನ್ನು ಉಂಟುಮಾಡಲು ರಾಮನು ಏಳು ತಾಲವೃಕ್ಷಗಳನ್ನು ಛೇದಿಸುವನಷ್ಟೆ. ಅವುಗಳ ಬುಡದಲ್ಲಿ ಆದಿಶೇಷನ ಅಂಶವುಳ್ಳ ಸರ್ಪವೊಂದು ಇತ್ತೆಂದೂ ಅದು ವಾಲಿಯ ಆಗ್ರಹದ ಕಾರಣ ಹಾಗೆ ಸೆರೆಯಾಗಿತ್ತೆಂದೂ “ಆನಂದರಾಮಾಯಣ” ಹೇಳುತ್ತದೆ. ತಾಲವೃಕ್ಷಗಳ ಪತನದ ಬಳಿಕ ಆ ಸರ್ಪಕ್ಕೆ ಬಂಧವಿಮೋಚನೆಯಾಗಿ, ಅದು ಪಾತಾಳಕ್ಕೆ ತೆರಳುತ್ತದೆ. ತಾಲವೃಕ್ಷಗಳ ಛೇದಕನೇ ವಾಲಿಗೆ ಮೃತ್ಯುವಾಗಲೆಂದು ಈ ಸರ್ಪ ಶಪಿಸಿದ ಸಂಗತಿಯೂ ಇಲ್ಲಿದೆ. ಇಂದಿಗೂ ಹೊಯ್ಸಳರ ಹಲವು ರಾಮಕಥಾಶಿಲ್ಪಗಳಲ್ಲಿ ಸಪ್ತತಾಲಗಳ ಬುಡದಲ್ಲಿರುವ ಸರ್ಪದ ಚಿತ್ರಣವನ್ನು ಕಾಣಬಹುದು.
ವಾಲಿಯ ಕೊರಳಿನಲ್ಲಿದ್ದ ಕಾಂಚನಮಾಲೆ ಮತ್ತದು ಶತ್ರುಗಳ ಶಕ್ತಿಯನ್ನು ಸೆಳೆಯುವ ಉಲ್ಲೇಖ ಇಲ್ಲಿದೆ. ಈ ಪ್ರಕರಣ ಸಹಜವಾಗಿಯೇ ರಾಮನು ಮರೆಯಿಂದ ಮಾಡಿದ ವಾಲಿವಧೆಯನ್ನು ಸಮರ್ಥಿಸುತ್ತದೆ. ಹನೂಮಂತನು ಸೀತಾನ್ವೇಷಣಕ್ಕೆ ಹೊರಟಾಗ ಅವನಿಗೆ ಉಂಗುರವನ್ನು ಕೊಡುವುದಲ್ಲದೆ ಕಾಕಾಸುರವೃತ್ತಾಂತವನ್ನು ರಾಮನೇ ಹೇಳುತ್ತಾನೆ. ಅವನಿಗೆ ಸಮುದ್ರಲಂಘನದ ಕಾಲದಲ್ಲಿ ಸುರಸೆ ಎದುರಾಗುವುದಿಲ್ಲ. ಲಂಕೆಯಲ್ಲಿ ವಿಭೀಷಣನು ರಾಮನಾಪ ಜಪಿಸುತ್ತಿರುವುದೂ ಅವನಿಗೆ ತಿಳಿಯುತ್ತದೆ. ಅಶೋಕವನದಲ್ಲಿ ಶಿಂಶಪಾವೃಕ್ಷದ ಮೇಲೆ ಕುಳಿತು ಅವಕಾಶಕ್ಕಾಗಿ ಕಾಯುತ್ತಿರುವಾಗ ಸೀತಾ-ರಾವಣರ ಸಂವಾದವನ್ನು ಹನೂಮಂತ ಗಮನಿಸುವನಷ್ಟೆ. ಆಗ “ಭವಿತ್ರೀ ರಂಭೋರು ತ್ರಿದಶವದನಗ್ಲಾನಿರಧುನಾ” ಎಂಬ ಪದ್ಯ ಪ್ರಸ್ತಾವಗೊಳ್ಳುತ್ತದೆ. ಇದೊಂದು “ವರ್ಣಚ್ಯುತಕ” ಎಂಬ ಪ್ರಕಾರದ ಪ್ರಹೇಲಿಕಾರೂಪದ ಚಿತ್ರಕವಿತೆ. ವಸ್ತುತಃ ಇದು ಅಪ್ಪಯ್ಯದೀಕ್ಷಿತರ “ಕುವಲಯಾನಂದ”ದಲ್ಲಿ ಮೊದಲು ಉಲ್ಲೇಖಗೊಂಡಿದೆ. ಸೀತೆ ತನ್ನ ಜನ್ಮಕಾರಣ ಮತ್ತು ಶಕ್ತಿಸ್ವರೂಪಗಳನ್ನು ಹೇಳುವ ಮೂಲಕ ರಾವಣನಿಗೆ ಎಚ್ಚರಿಕೆಯನ್ನೂ ನೀಡುತ್ತಾಳೆ. ಮುಂದೆ ಹನೂಮಂತನೊಡನೆ ಮಾತನಾಡುವಾಗ ಮಾಯಾಮೃಗದ ಪ್ರಸಂಗದಲ್ಲಿ ತಾನು ಲಕ್ಷ್ಮಣನನ್ನು ಹಳಿದದ್ದು ತಪ್ಪಾಯಿತೆಂದೂ ವ್ಯಥಿಸುತ್ತಾಳೆ. ಇದು ನಿಜಕ್ಕೂ ರಸಮಯವಾದ ನಿರೂಪಣೆ.
ಹನೂಮಂತನ ಬಾಲಕ್ಕೆ ಬೆಂಕಿಯಿಡುವ ಹುಮ್ಮಸ್ಸಿನಲ್ಲಿ ಕೊನೆಯಿಲ್ಲದೆ ಬೆಳೆಯುತ್ತಿದ್ದ ಆ ಬಾಲಕ್ಕೆ ಸುತ್ತಲು ಬಟ್ಟೆ ಸಾಕಾಗದೆ ಲಂಕೆಯ ಗಂಡು-ಹೆಣ್ಣುಗಳೆಲ್ಲ ತಮ್ಮ ತಮ್ಮ ಉಟ್ಟ ಬಟ್ಟೆಗಳನ್ನೇ ಕೊಟ್ಟು ಬೆತ್ತಲಾದರೆಂದೂ ಅದಕ್ಕೆ ಎಣ್ಣೆ-ತುಪ್ಪ ಸುರಿದು ಸುರಿದು ಹಲವು ದಿನ ತಮ್ಮ ಮಕ್ಕಳು-ಮರಿಗಳಿಗೆಲ್ಲ ಊಟಕ್ಕೆ ತುಪ್ಪವಿಲ್ಲದೆ ಒದ್ದಾಡಿದರೆಂದೂ ಎಷ್ಟೋ ರಾತ್ರಿ ದೀಪಗಳಿಗೆ ಎಣ್ಣೆಯಿಲ್ಲದೆ ಕತ್ತಲಿನಲ್ಲಿ ಒದ್ದಾಡಿದರೆಂದೂ ಆ ಬಾಲದ ಬೆಂಕಿಯಲ್ಲಿ ರಾವಣನ ಮೀಸೆಗಳೇ ಸುಟ್ಟುಹೋದವೆಂದೂ ವೈನೋದಿಕಪ್ರಸಂಗವಿದೆ. ಇದು ಈಗಲೂ ನಮ್ಮ ಹರಿಕಥೆ, ಬಯಲಾಟ, ಮಕ್ಕಳ ಕಥೆಗಳಲ್ಲಿ ಉಳಿದಿರುವುದನ್ನು ನೆನೆಯಬಹುದು. ಸೀತೆಯು ರಾಮನ ಮುದ್ರಾಂಗುಲೀಯವನ್ನು ಮತ್ತೆ ಹಿಂದಿರುಗಿಸಿದ್ದಳೆಂದೂ ಅದನ್ನು ಹಿಡಿದು ಮರಳುತ್ತಿದ್ದ ಹನೂಮಂತನು ನೀರು ಕುಡಿಯಲು ಆಶ್ರಮವೊಂದಕ್ಕೆ ಹೋದಾಗ ಅಲ್ಲಿಯ ನೀರಿನ ಕೊಡದಲ್ಲಿ ಉಂಗುರ ಜಾರಿತೆಂದೂ ಕಥೆಯಿದೆ. ಒಡನೆಯೇ ಆ ಕೊಡವನ್ನು ಜಾಲಾಡಿದಾಗ ಅಲ್ಲಿ ಎಷ್ಟೋ ಮಂದಿ ರಾಮರ ಮುದ್ರಾಂಗುಲೀಯಕಗಳು ಕಾಣಿಸುತ್ತವೆ. ಇದು ರಾಮಕಥೆಯು ಪ್ರತಿಯೊಂದು ಚತುರ್ಯುಗದ ಆವರ್ತದಲ್ಲಿಯೂ ನಡೆಯುವುದೆಂಬುದರ ಧ್ವನಿ. ಇದನ್ನು ತಿಳಿದ ಹನುಮನು ಕೇವಲ ತಾನೊಬ್ಬ ಮಾತ್ರ ಲಂಕಾಯಾತ್ರೆ-ಸೀತಾಸಾಂತ್ವನದಂಥ ಘನಕಾರ್ಯಗಳನ್ನು ಮಾಡಿದವನಲ್ಲ; ಅದೆಷ್ಟೋ ಮಂದಿ ಹಿಂದಿನ ಯುಗಗಳ ಹನೂಮಂತರು ಈ ಸಾಹಸಗಳನ್ನು ಮಾಡಿದ್ದರೆಂದು ಆರಿತುಕೊಂಡು ಹೆಮ್ಮೆಯನ್ನು ಬಿಡುತ್ತಾನೆ. ಇದೆಲ್ಲ ರಾಮನ ಲೀಲೆಯೆಂಬ ಒಕ್ಕಣೆಯೂ ಇಲ್ಲಿದೆ.
ರಾಮೇಶ್ವರ, ನವಪಾಷಾಣಗಳಂಥ ಕ್ಷೇತ್ರಗಳ ಪ್ರಸಂಗ “ಆನಂದರಾಮಾಯಣ”ದಲ್ಲಿ ವಿಸ್ತಾರವಾಗಿಯೇ ಬಂದಿದೆ. ಕಾಶಿಗೆ ಹೋಗಿ ಶಿವನಿಂದ ಲಿಂಗವನ್ನು ಹನೂಮಂತನು ತರಬೇಕಿರುತ್ತದೆ. ಅವನು ತರುವಷ್ಟರಲ್ಲಿ ಮುಹೂರ್ತ ಮಿಂಚಿಹೋಗುತ್ತಿರುವ ಕಾರಣ ರಾಮನು ಸೈಕತಲಿಂಗವನ್ನೇ ಮಾಡಿ ಪ್ರತಿಷ್ಠಿಸುತ್ತಾನೆ. ಮರಳಿ ಬಂದ ಹನುಮನು ಮುನಿದು ತನ್ನ ಬಾಲದಿಂದ ಆ ಸೈಕತಲಿಂಗವನ್ನು ಕಿತ್ತು ಆದರೆ ಎಡೆಯಲ್ಲಿ ತಾನು ತಂದ ಎರಡು ಲಿಂಗಗಳನ್ನು ಪ್ರತಿಷ್ಠಿಸಲು ಯತ್ನಿಸಿ ತನ್ನ ಬಾಲವನ್ನೇ ಕಳೆದುಕೊಂಡು ಹೀನಾಯಗೊಳ್ಳುತ್ತಾನೆ. ಅನಂತರ ಬುದ್ಧಿ ತಂದುಕೊಂಡು ತನ್ನ ಬಾಲವನ್ನು ಮರಳಿ ಗಳಿಸಿದ್ದಲ್ಲದೆ ತಾನು ತಂದ ಶಿವಲಿಂಗಗಳ ಪ್ರತಿಷ್ಠೆಯನ್ನೂ ಮಾಡಿ ಶಿವ-ರಾಮರ ಅನುಗ್ರಹ ಪಡೆಯುವನು. ಈಗಲೂ ರಾಮೇಶ್ವರದಲ್ಲಿ ಬಾಲವಿಲ್ಲದ ಹನುಮನಿದ್ದಾನೆ ಮತ್ತು ಆತನು ಪ್ರತಿಷ್ಠಿಸಿದ ಲಿಂಗಕ್ಕೆ ಪೂಜೆಯಾದ ಬಳಿಕವೇ ರಾಮೇಶ್ವರನಿಗೆ ಪೂಜೆ ಸಲ್ಲುವುದೆಂಬ ಸ್ಥಳಪುರಾಣವೂ ಇಲ್ಲಿ ಒಕ್ಕಣೆಯಾಗಿದೆ. ಈ ಪ್ರಕರಣದಲ್ಲಿಯೇ ವಿವಿಧರೀತಿಯ ಶಿವಲೀಲೆಗಳ ಹಾಗೂ ಹನ್ನೆರಡು ಜ್ಯೋತಿರ್ಲಿಂಗಗಳ ಕಥನವೂ ಬರುತ್ತದೆ. ಹೀಗೆಯೇ ರಾಮನ ಕ್ರೋಧಕ್ಕಂಜಿದ ಸಮುದ್ರ ಈಗಲೂ ಅಲೆಗಳಿಲ್ಲದೆ ನವಪಾಷಾಣದಲ್ಲಿ ಸೌಮ್ಯವಾಗಿರುವುದರ ಪ್ರಸ್ತಾವವೂ ಗಮನಾರ್ಹ. ಇವೆಲ್ಲ ಇಂದೂ ನಮ್ಮ ಜನರಲ್ಲಿ ನೆಲೆನಿಂತ ಕಥೆಗಳು.
ಸಮುದ್ರಕ್ಕೆ ಸೇತುವೆ ಕಟ್ಟುವಾಗ ಶಿಲೆಗಳು ಮುಳುಗದಿರಲೆಂದು ಅವುಗಳ ಮೇಲೆ ರಾಮನಾಮವನ್ನು ಬರೆದ ಕಥೆಯೂ ಆನಂದರಾಮಾಯಣದ್ದೇ. ಅಂಗದನು ರಾಯಭಾರಕ್ಕೆಂದು ಹೋದಾಗ ಅವನಿಗೆ ತಕ್ಕ ಆಸನವನ್ನು ರಾವಣನೀಯುವುದಿಲ್ಲ. ಆಗ ಅವನಿಗೆ ಮುಖಭಂಗವಾಗುವಂತೆ ತನ್ನ ಬಾಲವನ್ನೇ ಬೆಳೆಸಿದ ಅಂಗದನು ಲಂಕೇಶನ ಸಿಂಹಾಸನಕ್ಕಿಂತ ಎತ್ತರವಾದ ಆ ವಾಲಾಸನದ ಮೇಲೆ ಕುಳಿತು ವಿವೇಕವನ್ನು ಹೇಳುತ್ತಾನೆ. ಇದಂತೂ ಹನುಮನ ಕೆಲಸವೆಂಬಂತೆ ಬಹಳಷ್ಟು ರೂಪಕ-ಚಲನಚಿತ್ರಗಳಲ್ಲಿ ನಿರೂಪಿತವಾಗಿದೆ. “ತೊರವೆ ರಾಮಾಯಣ”, ಹತ್ತು ಹಲವು ಯಕ್ಷಗಾನಗಳು, ನಾಟಕ-ಚಲನಚಿತ್ರಗಳೆಲ್ಲ ಬಳಸಿಕೊಂಡಿರುವ ಐರಾವಣ-ಮೈರಾವಣರ ಪ್ರಕರಣಗಳು ಇಲ್ಲಿ ಸಾಕಷ್ಟು ವಿಸ್ತಾರವನ್ನು ಗಳಿಸಿವೆ. ಇಲ್ಲಿಯೇ ಹನೂಮಂತನಿಗಿದ್ದ ಮತ್ಸ್ಯಹನುಮನೆಂಬ ಮಗನ ಉಲ್ಲೇಖವೂ ರೋಚಕ. “ಆನಂದರಾಮಾಯಣ”ವು ಇಂದ್ರಜಿತ್ತನ ಪತ್ನಿ ಸುಲೋಚನೆಯ ಪಾತಿಪ್ರತ್ಯವನ್ನು ಕುರಿತೂ ವಿಸ್ತರಿಸಿದೆ. ಇವೆಲ್ಲ ರಸಸ್ಥಾನಗಳಾಗಬಲ್ಲ ಮಾನುಷಸಂಕ್ಷೋಭೆಯನ್ನೂ ಧರ್ಮ-ಕರ್ಮಸಂದಿಗ್ಧತೆಯನ್ನೂ ಒಳಗೊಂಡಿರುವುದು ಮನನೀಯ. ರಾವಣನ ಲಂಕಾಯಾಗ, ಅವನ ಹೊಕ್ಕುಳಿನಲ್ಲಿದ್ದ ಅಮೃತಕಲಶದಂಥ ಕಥೆಗಳು ಇಲ್ಲಿಯೂ ಇವೆ. ಲಂಕೆಗೆ ಯಾರೂ ಸುಮ್ಮನೆ ನುಗ್ಗಬಾರದೆಂಬ ಇಂಗಿತದಿಂದ ವಿಭೀಷಣನು ಬೇಡಿದಾಗ ರಾಮನು ತನ್ನ ಸೇತುವೆಯನ್ನು ಯುದ್ಧಾನಂತರ ಬಿಲ್ಲಿನ ತುದಿಯಿಂದ ಮುರಿಯುತ್ತಾನೆ. ಆ ಸ್ಥಳವೇ ಧನುಷ್ಕೋಟಿಯೆಂದು ಪ್ರಸಿದ್ಧವಾಗುತ್ತದೆ.
ಶ್ರೀರಾಮಪಟ್ಟಾಭಿಷೇಕ ಮತ್ತು ಲಕ್ಷ್ಮಣನ ಯೌವರಾಜ್ಯಗಳ ಬಳಿಕ ರಾವಣಾಸುರನ ವೃತ್ತಾಂತವು ವಿವೃತವಾಗುತ್ತದೆ. ಇಲ್ಲಿ ಅವನ ದಿಗ್ವಿಜಯ, ಅವನಿಗಂಟಿದ ಶಾಪ, ದಕ್ಕಿದ ಶಿವಾನುಗ್ರಹ ಮುಂತಾದ ವಿವರಗಳಿವೆ. ಈ ಕಥನದೊಡನೆ ಆನಂದರಾಮಾಯಣದ ಸಾರಕಾಂಡವೆಂಬ ಮೊದಲ ಭಾಗ ಮುಗಿಯುತ್ತದೆ. ಮುಂದಿನದಾದ ಯಾತ್ರಾಕಾಂಡದಲ್ಲಿಂದ ಮೊದಲ್ಗೊಂಡು ಮಿಕ್ಕೆಲ್ಲ ಕಾಂಡಗಳಲ್ಲಿ ಮೂಲದ ವಾಲ್ಮೀಕಿರಾಮಾಯಣದಲ್ಲಿಲ್ಲದ ಎಷ್ಟೆಷ್ಟೋ ವಿಷಯಗಳು ಸಾಲುಗಟ್ಟಿ ಬರುತ್ತವೆ. ಈ ಎಲ್ಲ ಭಾಗಗಳನ್ನು ರಾಮದಾಸನೆಂಬಾತ ತನ್ನ ಶಿಷ್ಯ ವಿಷ್ಣುದಾಸನಿಗೆ ನಿರೂಪಿಸಿದಂತೆ ರಚನೆ ಸಾಗುತ್ತದೆ. ಈ ಕಾಂಡವು ತನ್ನ ಹೆಸರಿಂದಲೇ ತಿಳಿಯುವಂತೆ ರಾಮ-ಸೀತೆಯರ ತೀರ್ಥಯಾತ್ರೆಯ ವಿವರಗಳನ್ನು ಒಳಗೊಂಡಿದೆ. ಇಲ್ಲಿ ಭಾರತದ ವಿವಿಧತೀರ್ಥ-ಕ್ಷೇತ್ರಗಳ ವರ್ಣನೆ ಬಂದಿದೆಯಾದರೂ ದಕ್ಷಿಣಭಾರತದ, ವಿಶೇಷತಃ ತಮಿಳುನಾಡಿನ ಕ್ಷೇತ್ರಗಳೇ ವಿವರವಾಗಿ ವರ್ಣಿತವಾಗಿರುವುದು ಗಮನಾರ್ಹ..
ಮುಂದಿನದು “ಯಾಗಕಾಂಡ”. ಇದು ರಾಮನ ಅಶ್ವಮೇಧವನ್ನು ಕೇಂದ್ರದಲ್ಲಿರಿಸಿಕೊಂಡಿದೆ. ಅಯೋಧ್ಯೆ ಮತ್ತು ಸರಯೂನದಿಗಳ ಮಾಹಾತ್ಮ್ಯವೂ ಇಲ್ಲಿ ಬಂದಿದೆ. ಇದನ್ನೆಲ್ಲ ಶಿವನ ಅಪೇಕ್ಷೆಯಂತೆ ರಾಮನೇ ಹೇಳಿದನೆಂದು ಒಕ್ಕಣೆಯುಂಟು. ಕುಂಭೋದರನು ಹೇಳಿದ ಶ್ರೀರಾಮನ ಸಹಸ್ರನಾಮಸ್ತೋತ್ರ ಇಲ್ಲಿಯೇ ಬಂದಿರುವುದು ಪರಿಶೀಲನೀಯ. ವಾಲ್ಮೀಕಿರಾಮಾಯಣದಲ್ಲಿ ರಾಮನು ಸೀತಾಪರಿತ್ಯಾಗದ ಬಳಿಕವೇ ಯಾಗಗಳಿಗೆ ಕೈಹಾಕಿದರೆ ಇಲ್ಲಿ ಅದು ಮುನ್ನವೇ ಆರಂಭವಾಗಿರುವುದು ಗಮನಾರ್ಹ.
ನಾಲ್ಕನೆಯದಾದ “ವಿಲಾಸಕಾಂಡ”ವು ರಾಮ-ಸೀತೆಯರ ವಿಲಾಸ-ವಿಹಾರಗಳನ್ನು ಒಳಗೊಂಡಿದೆ. ಭಾಗವತದ ಗೋಪೀಗೀತದ ಛಂದಸ್ಸಿನಲ್ಲಿಯೇ ರಾಮನು ಸೀತೆಯ ಸರ್ವಾಂಗವರ್ಣನೆ ಮಾಡುತ್ತಾನೆ. ಶಿವನು ರಾಮನನ್ನು “ರಘುವೀರಸ್ತವರಾಜ”ವೆಂಬ ಸ್ತೋತ್ರದ ಮೂಲಕ ನುತಿಸುತ್ತಾನೆ. ಸೀತಾ-ರಾಮರ ವಿಲಾಸದ ಬಳಿಕ ರಾಮನು ಆಕೆಯ ಅಪೇಕ್ಷೆಯ ಮೇರೆಗೆ ರಾಮಾಯಣದ ತತ್ತ್ವವನ್ನು ನಿರೂಪಿಸುತ್ತಾನೆ. ಇಲ್ಲಿ ರಾಮಾಯಣನ ಮುಖ್ಯಪಾತ್ರಗಳೂ ಘಟನೆಗಳೂ ವೇದಾಂತತತ್ತ್ವದ ವಿವಿಧಪ್ರಕ್ರಿಯೆಗಳಾಗಿ, ಸಾಧನಮೌಲ್ಯಗಳಾಗಿ ಮೈದಳೆದಿವೆ. ಅನಂತರ ರಾಮನ ಸುಪ್ರಭಾತಸೇವೆ, ದಿನಚರ್ಯೆ, ಜೀವನಾದರ್ಶ (ಒಂದೇ ಮಾತು, ಒಬ್ಬಳೇ ಪತ್ನಿ, ಒಂದೇ ಬಾಣ: ಇದು ಬಹುಶಃ ತ್ಯಾಗರಾಜರ “ಒಕ ಮಾಟ, ಒಕ ಬಾಣಂ ಒಕ ಪತ್ನಿ” ಎಂಬ ಸೊಲ್ಲಿಗೆ ಮೂಲ). ಅಷ್ಟೇ ಅಲ್ಲ, ಈ ಮಾತು “ಆನಂದರಾಮಾಯಣ”ದಲ್ಲಿ ಪಲ್ಲವಿಯಂತೆ ಹಲವು ಬಾರಿ ಮರುಕಳಿಸುತ್ತದೆ. ಇದೇ ಸಂದರ್ಭದಲ್ಲಿ ಅನೇಕಸ್ತ್ರೀಯರು (ಅಪ್ಸರೆಯರು, ವೇಶ್ಯೆಯರು, ಸಾಮಾನ್ಯವನಿತೆಯರು ಇತ್ಯಾದಿ) ರಾಮನ ಪ್ರೇಮಕ್ಕಾಗಿ ವಿವಿಧಸಂದರ್ಭಗಳಲ್ಲಿ ಹಾತೊರೆದು ಬರುತ್ತಾರೆ. ಅವರಿಗೆಲ್ಲ ಕೃಷ್ಣಾವತಾರದಲ್ಲಿ ಪತ್ನೀತ್ವವು ಲಭಿಸುವುದೆಂಬ ಭರವಸೆಯನ್ನು ರಾಮ ನೀಡುತ್ತಾನೆ.
ಐದನೆಯದಾದ “ಜನ್ಮಕಾಂಡ”ದಲ್ಲಿ ಲವ-ಕುಶರ ಹುಟ್ಟೂ ಸೇರಿದಂತೆ ಅನೇಕಸಂದರ್ಭಗಳಿವೆ. ಚೊಚ್ಚಲ ಹೆರಿಗೆಗೆಂದು ಮಗಳನ್ನು ತವರಿಗೆ ಕರೆದೊಯ್ಯಲು ಜನಕಮಹಾರಾಜ ಬಂದಿರುತ್ತಾನೆ. ಅಷ್ಟರಲ್ಲಿಯೇ ಅಗಸನು ಮಾಡಿದ ಆಕ್ಷೇಪ ರಾಮನ ಕಿವಿಗೆ ಸಾಕ್ಷಾತ್ತಾಗಿ ಬಿದ್ದ ಕಾರಣ ಅವನು ತನ್ನ ಮಾವ ಜನಕನ ಮೂಲಕವಾಗಿಯೇ ಸೀತೆಯನ್ನು ವಾಲ್ಮೀಕಿಮುನಿಗಳ ಅಶ್ರಮದ ಬಳಿ ಬಿಟ್ಟುಬರಬೇಕೆಂದೂ ಮಗಳೊಡನೆ ಅವನು ಕೂಡ ಕೆಲವು ಕಾಲ ಅಲ್ಲಿಯೇ ನೆಲಸಬೇಕೆಂದೂ ಕೋರುತ್ತಾನೆ. ಎಲ್ಲರೂ ಇದಕ್ಕೆ ಒಪ್ಪಿ, ಸೀತೆಯು ತನ್ನ ತಂದೆ-ತಾಯಂದಿರೊಟ್ಟಿಗೆ ಆಶ್ರಮದ ಹತ್ತಿರದಲ್ಲೊಂದು ಅರಮನೆಯಲ್ಲಿ ಉಳಿಯುತ್ತಾಳೆ. ಜನಪದಲೋಕದಲ್ಲಿ ಕೆಲವೆಡೆ ಪ್ರಚಾರದಲ್ಲಿರುವ “ಚಿತ್ರಪಟರಾಮಾಯಣ”ವೆಂಬ ಕಥಾನಕವನ್ನೂ ಈ ಕೃತಿಯ ಕವಿ ಹದವಿಲ್ಲದೆ ಬಳಸಿಕೊಂಡಿದ್ದಾನೆ. ಆ ಪ್ರಕಾರ ಕೈಕೇಯಿ ಗರ್ಭಿಣಿ ಸೀತೆಯ ಬಳಿಗೆ ಬಂದು ರಾವಣನ ಚಿತ್ರವನ್ನು ಬರೆದು ತೋರಿಸುವಂತೆ ಕೇಳುತ್ತಾಳೆ. ಚಿಕ್ಕತ್ತೆಯ ಮಾತನ್ನು ತಳ್ಳಿಹಾಕಲಾರದೆ ತಾನು ಕೇವಲ ರಾವಣನ ತುದಿಗಾಲನ್ನು ಮಾತ್ರ ಕಂಡಿದ್ದಾಗಿ ತಿಳಿಸಿ ಅದನ್ನೇ ಚಿತ್ರಿಸಿಕೊಡುತ್ತಾಳೆ. ಕೈಕೇಯಿ ಆ ಬಳಿಕ ಅದನ್ನು ಪೂರೈಸಿ ರಾಮನಿಗೆ ಗುಟ್ಟಾಗಿ ತಲಪಿಸಿ ಸೀತೆಯ ಶೀಲವನ್ನು ಶಂಕೆಗೆ ಗುರಿಪಡಿಸುತ್ತಾಳೆ. ಬಳಿಕ ಅಣ್ಣನ ಆಣತಿಯಂತೆ ಲಕ್ಷ್ಮಣನೇ ಸೀತೆಯನ್ನು ಕಾಡಿಗೆ ಕೊಂಡೊಯ್ಯುತ್ತಾನೆ. ಅವಳ ಕೈಗಳನ್ನೂ ಕಡಿದು ತರಬೇಕೆಂದು ಆಜ್ಞೆಯಾಗಿರುವುದಾದರೂ ಆ ಹೊತ್ತಿಗೆ ಅಲ್ಲಿಗೆ ಬಂದ ವಿಶ್ವಕರ್ಮನಿಂದ ಕೃತಕಬಾಹುಗಳು ನಿರ್ಮಿತವಾಗಿ ಸಮಸ್ಯೆ ತೀರುತ್ತದೆ. ಒಟ್ಟಿನಲ್ಲಿ “ಚಿತ್ರಪಟರಾಮಾಯಣ”ದಲ್ಲಿ ಸೀತೆಗೊಬ್ಬ ನಾದಿನಿ ಇದ್ದು ಅವಳಿಂದ ಅನರ್ಥವಾದರೆ ಇಲ್ಲಿ ಕೈಕೇಯಿಯೇ ಅನರ್ಥಕ್ಕೆ ಮತ್ತೆ ಕಾರಣವಾಗುತ್ತಾಳೆ. ಆಕೆಗೆ ಈ ಘಟನೆಯಿಂದ ಮನನೊಂದ ರಾಮನು ಮತ್ತೆ ಕಾಡಿಗೆ ಹೋದಲ್ಲಿ ಭರತನಿಗೇ ರಾಜ್ಯ ದಕ್ಕುವುದೆಂಬ ನಿರೀಕ್ಷೆ!