ಲವನು ಹುಟ್ಟಿದ ವಾರ್ತೆಯನ್ನರಿತ ರಾಮ ತಾನೇ ಗುಟ್ಟಾಗಿ ವಾಲ್ಮೀಕಿಮುನಿಗಳ ಆಶ್ರಮಕ್ಕೆ ಹೋಗಿ ಮಗುವಿಗೆ ಜಾತಕರ್ಮಾದಿಗಳನ್ನು ಮಾಡುತ್ತಾನೆ. ಲವ ಆ ಬಳಿಕ ದರ್ಭೆಯ ಕೂರ್ಚದಿಂದ ನಿರ್ಮಿತವಾದ ಮಗುವಾಗಿ ಜನಿಸುತ್ತಾನೆ. ಇತ್ತ ರಾಮನು ನೂರು ಅಶ್ವಮೇಧಗಳನ್ನು ಮಾಡುತ್ತಾನೆ. ಇಲ್ಲೇ ಒಂದೆಡೆ ಪ್ರಸಿದ್ಧವಾದ “ರಾಮರಕ್ಷಾ ಸ್ತೋತ್ರ” ದಾಖಲೆಗೊಂಡಿದೆ. ಈ ಸ್ತುತಿಯು ಬಲಿದ್ವೀಪದಲ್ಲಿ ಕೂಡ ಪ್ರಚಾರದಲ್ಲಿದ್ದುದು ಗಮನಾರ್ಹ. ವಾಲ್ಮೀಕಿಯ ಮಾತಿನಂತೆ ಸೀತೆ ಶತಪತ್ರಕಮಲಗಳಿಂದ ಪೂಜಿಸುವ ವ್ರತವೊಂದನ್ನು ಕೈಗೊಂಡಿರುತ್ತಾಳೆ. ಅದಕ್ಕೆ ಬೇಕಿರುವ ಹೂಗಳನ್ನು ಲವನು ಅಯೋಧ್ಯೆಯ ಅರಮನೆಯ ಕೊಳದಿಂದ ಕದ್ದು ತರುತ್ತಿರುತ್ತಾನೆ. ಇದು ಅವನಿಗೂ ಅಲ್ಲಿಯ ಕಾಪಿನವರಿಗೂ ತಿಕ್ಕಾಟವನ್ನು ತರುವುದಲ್ಲದೆ ಸುದ್ದಿ ರಾಮನ ವರೆಗೂ ಹೋಗುತ್ತದೆ. ಸ್ವಯಂ ರಾಮನೇ ಬಂದಾಗ ಲವನು ಆತನು ಅನ್ಯಾಯವಾಗಿ ಪತ್ನಿಯನ್ನು ತೊರೆದವನೆಂದು ದೂರಿ ತೆರಳುತ್ತಾನೆ. ವಸ್ತುತಃ ರಾಮನನ್ನು ಕಾಣಲು ಲವನು ಈ ತಗಾದೆಯನ್ನೊಂದು ಅವಕಾಶವಾಗಿ ಬಳಸಿಕೊಂಡಿರುತ್ತಾನೆ. ಬಳಿಕ ಯಾಗವನ್ನು ಕಾಣಲು ವಾಲ್ಮೀಕಿಮುನಿಗಳು ತಮ್ಮ ಶಿಷ್ಯರಾದ ಲವ-ಕುಶರೊಡನೆ ಬರುತ್ತಾರೆ; ರಾಮಾಯಣಗಾನವೂ ಸಾಗುತ್ತದೆ. ಅನಂತರ ಸಂಚಾರಕ್ಕೆ ಹೊರಟ ಯಾಗಾಶ್ವವನ್ನು ಇವರಿಬ್ಬರೂ ಕಟ್ಟಿ ಎಲ್ಲರೊಡನೆ ಸೆಣಸಿ ಗೆಲ್ಲುತ್ತಾರೆ. ಅಗ ರಾಮನು ವಾಲ್ಮೀಕಿಮುನಿಗಳನ್ನು ಮತ್ತೆ ಬರಮಾಡಿಕೊಂಡಾಗ ಅವರು ಲವ-ಕುಶರ ಮೂಲಕ ಉತ್ತರಕಾಂಡವನ್ನು ಹಾಡಿಸಿ ಎಲ್ಲವನ್ನೂ ಸ್ಪಷ್ಟಗೊಳಿಸುತ್ತಾರೆ. ಅನಂತರ ಸೀತೆಯ ಪಾತಿವ್ರತ್ಯನಿರೂಪಣೆಗಾಗಿ ಆಕೆಯ ಭೂಪ್ರವೇಶಕ್ಕೆ ನಿಂತಾಗ ರಾಮನು ಭೂದೇವಿಯನ್ನೇ ಒಡಂಬಡಿಸಿ ಪತ್ನಿಯನ್ನು ಉಳಿಸಿಕೊಳ್ಳುತ್ತಾನೆ; ಎಲ್ಲ ಸುಖಾಂತವಾಗುತ್ತದೆ. ಆದರೆ ಸೀತಾಪರಿತ್ಯಾಗದ ಇಡಿಯ ಈ ಪ್ರಸಂಗದಲ್ಲಿ “ಆನಂದರಾಮಾಯ”ಣದ ಲೇಖಕನು ವಿರುದ್ಧಕಥನಗಳನ್ನೂ ಅನೌಚಿತ್ಯಗಳನ್ನೂ ತಂದು ತುಂಬಿ ಎಲ್ಲವನ್ನೂ ಅಸ್ತವ್ಯಸ್ತವಾಗಿಸಿದ್ದಾನೆ.
ಆರನೆಯದಾದ ವಿವಾಹಕಾಂಡವು ತನ್ನ ಹೆಸರಿನಿಂದಲೇ ತಿಳಿಸುವಂತೆ ಪ್ರಧಾನವಾಗಿ ಲವ-ಕುಶರ ಮದುವೆಯ ಕಥೆಗಳನ್ನೊಳಗೊಂಡಿದೆ. ಸ್ವಯಂವರದಲ್ಲಿ ರಾಜಪುತ್ರಿಯರಾದ ಚಂಪಕೆ ಮತ್ತು ಸುಲೋಚನೆಯರು ಕುಶ-ಲವರನ್ನು ವರಿಸುತ್ತಾರೆ. ಈ ಭಾಗದ ಎಷ್ಟೋ ಪದ್ಯಗಳು ಕಾಳಿದಾಸನ ರಘುವಂಶ-ಕುಮಾರಸಂಭವಗಳನ್ನು ಉಪಜೀವಿಸಿದೆ. ಇದೇ ರೀತಿ ಕುಮುದ್ವತಿಯು ಕುಶನನ್ನು ವರಿಸಿದ ಸಂಗತಿ ರಘುವಂಶವನ್ನೇ ಆಶ್ರಯಿಸಿದೆ. ಬಳಿಕ ರಾಮನ ತಮ್ಮಂದಿರ ಮಕ್ಕಳೆಲ್ಲರ ಮದುವೆಯ ವಿವರಗಳೂ ಬಂದಿದೆ. ಇದರ ನಡುವೆಯೇ ರಾಮನು ಅಗಸ್ತ್ಯರನ್ನು ಕಂಡು ಬಂದ ವೃತ್ತಾಂತ ವಾಲ್ಮೀಕಿರಾಮಾಯಣದ ಉತ್ತರಕಾಂಡವನ್ನೇ ಅನುಸರಿಸಿದೆ.
ಏಳನೆಯದಾದ “ರಾಜ್ಯಕಾಂಡ”ದಲ್ಲಿ ರಾಮನ ರಾಜ್ಯಭಾರದ ವಿವರಗಳ ಜೊತೆಗೆ ಹತ್ತಾರು ಕಥಾಂತರಗಳೂ ಇವೆ. ಮೊದಲಿಗೆ “ಶ್ರೀರಾಮಸಹಸ್ರನಾಮಸ್ತೋತ್ರ”ವಿದೆ. ಬಳಿಕ ರಾಮ-ಕಷ್ಣರನ್ನು ಹೋಲಿಸಿನೋಡುವ ಪ್ರಕರಣವೂ ಇದೆ. ಸಹಜವಾಗಿಯೇ ರಾಮನು ಕೃಷ್ಣನಿಗಿಂತ ಕಡಮೆ ಎಂಬ ಬಾಲಿಶವಾದವನ್ನು ಲೇಖಕನು ಮುಂದಿಟ್ಟಿದ್ದಾನೆ. ಬಳಿಕ ತಿಪ್ಪೆ ಸಾರಿಸುವಂತೆ ಆಕಾಶವಾಣಿಯ ಮೂಲಕ ಇಂಥ ಭೇದಬುದ್ಧಿ ಸಲ್ಲದೆಂಬ ಎಚ್ಚರಿಕೆಯೂ ಬರುತ್ತದೆ. ಕಾಕಾಸುರನನ್ನು ಕನಿಕರಿಸಿ ಅನುಗ್ರಹಿಸುವ ಕಥೆಯಲ್ಲಿ ಕಾಗೆಗಳಿಗೆ ಶಕುನಾಧಿಕಾರ-ಪಿಂಡಭೋಜನಾಧಿಕಾರಗಳು ದಕ್ಕುವ ವಿವರಗಳಿರುವುದು ಗಮನಾರ್ಹ. ಇದೇ ರೀತಿ ಕುಂಭಕರ್ಣನ ವಧೆಯಿಂದ ನಿರಾಶ್ರಿತಳಾದ ನಿದ್ರಾದೇವಿಗೆ ಪುನರ್ವಸತಿಯನ್ನು ಕಲ್ಪಿಸುವ ಸಂದರ್ಭವೂ ರೋಚಕ. ಅನಂತರ ಶತಕಂಠರಾವಣನ ವೃತ್ತಾಂತವೂ ಅವನನ್ನು ಸೀತೆ ತನ್ನ ಉಗ್ರರೂಪದಿಂದ ಕೊಲ್ಲುವ ಕಥೆಯೂ ಬರುತ್ತದೆ. ಇದು ಸ್ಪಷ್ಟವಾಗಿ “ಅದ್ಭುತರಾಮಾಯಣ”ದ ಪ್ರಭಾವ. ಬಳಿಕ ರಾಮ-ಸೀತೆಯರು ಲಂಕೆಗೆ ಹೋಗಿ ಅಶೋಕವನವನ್ನೂ ಸರಮೆ, ತ್ರಿಜಟೆ, ವಿಭೀಷಣಾದಿಗಳನ್ನೂ ಕಂಡು ಹರ್ಷಿಸಿ ಮರಳುತ್ತಾರೆ. ರಾಮನು ಲಂಕೆಗೆಲ್ಲ ರಕ್ಷಾಯಂತ್ರಗಳನ್ನು ಕೊಟ್ಟು ಹರಸುತ್ತಾನೆ.
ಚ್ಯವನಾದಿಮುನಿಗಳ ಪ್ರಾರ್ಥನೆಯಂತೆ ಲವಣಾಸುರನನ್ನು ಇಲ್ಲವಾಗಿಸಲು ಶತ್ರುಘ್ನನನ್ನು ರಾಮನು ಕಳುಹಿಸಿ ಕೊಡುತ್ತಾನೆ. ಲವಣವಧೆಯ ವಿವರಗಳೆಲ್ಲ ಅಧ್ಯಾತ್ಮರಾಮಾಯಣವನ್ನು ಹೋಲುತ್ತವೆ. ಸೀತಾರಾಮರು ಇಲ್ಲಿಂದ ಮುಂದೆ ದಿಗ್ವಿಜಯಯಾತ್ರೆಯನ್ನು ಮಾಡುತ್ತಾರೆ. ವಿಭಿನ್ನದ್ವೀಪಗಳನ್ನೂ ವರ್ಷಗಳನ್ನೂ ರಾಮನು ಗೆಲ್ಲುತ್ತಾನೆ. ಅನಂತರ ವಾಲ್ಮೀಕಿರಾಮಾಯಣದ ಉತ್ತರಕಾಂಡದಲ್ಲಿದ್ದಂತೆ ನಾಯಿಯೊಂದು ಬ್ರಾಹ್ಮಣನಿಂದ ಪೆಟ್ಟುತಿಂದ ಕಾರಣ ನೊಂದು ನ್ಯಾಯಕ್ಕಾಗಿ ರಾಮನ ಬಳಿ ಬರುವ ಪ್ರಸಂಗವಿದೆ. ಅಲ್ಲಿದ್ದಂತೆಯೇ ಶಂಬೂಕಪ್ರಕರಣ ಇಲ್ಲಿಯೂ ಇದೆಯಾದರೂ ಶಂಬೂಕನ ತಪಸ್ಸಿನಿಂದ ಕೇವಲ ಬ್ರಾಹ್ಮಣಪುತ್ರನೊಬ್ಬನು ಸತ್ತಿದ್ದಲ್ಲದೆ ಇತರವರ್ಣಗಳ ಇನ್ನೂ ನಾಲ್ವರು ಮೃತರಾಗಿದ್ದರೆಂದೂ ಅವರು ರಾಮರಾಜ್ಯದ ವಿಭಿನ್ನಪ್ರಾಂತಗಳವರೆಂದೂ ಒಕ್ಕಣೆ ಇಲ್ಲಿದೆ. ರಾಮನು ಶಂಬೂಕನಿಗೆ ಸದ್ಗತಿ ನೀಡುವುದಲ್ಲದೆ ಸಕಲವರ್ಣಗಳವರೂ ರಾಮನಾಮದ ಜಪದಿಂದಲೇ ಸದ್ಗತಿ ಗಳಿಸಲು ಸಾಧ್ಯವೆಂದು ಅನುಗ್ರಸುತ್ತಾನೆ. ಇವೆಲ್ಲ ತನ್ನ ಕಾಲದ ಸಮಾಜಸಂವೇದನೆಯಿಂದ ಪ್ರಭಾವಿತನಾದ ಲೇಖಕನು ತನಗೆ ತಿಳಿದ ಮಟ್ಟಿಗೆ ಮೂಲಕಥೆಯ ಅನ್ಯಾಯವನ್ನು ಸರಿಪಡಿಸುವ ಮುಗ್ಧಯತ್ನಗಳು. ಆದರೆ ಇವುಗಳ ಹಿಂದಿನ ಸದ್ಭಾವವನ್ನು ಅಲ್ಲಗೆಳೆಯುವಂತಿಲ್ಲ. ಇಲ್ಲೇ ಒಂದೆಡೆ ಹದ್ದು-ಗೂಬೆಗಳು ಗೂಡಿನ ಅಧಿಕಾರಕ್ಕಾಗಿ ನಡಸುವ ವಿವಾದ ರಾಮನ ಮುಂದೆ ವಿಚಾರಣೆಗೆ ಬರುತದೆ. ಎಲ್ಲವನ್ನೂ ಆಲಿಸಿದ ರಾಮ ತೀರ್ಪನ್ನು ಹದ್ದಿನ ಪರವಾಗಿ ನೀಡಿದರೂ ಗೂಬೆಯನ್ನು ಕನಿಕರಿಸಿ ಅನುಗ್ರಹಿಸುತ್ತಾನೆ. ಬಳಿಕ ಬೇಟೆಗೆಂದು ಹೊರಟ ರಾಮನು ದುಂದುಭಿಯ ದುಷ್ಟತೆಯ ಕಾರಣ ಗುಹೆಯೊಂದರಲ್ಲಿ ಸೆರೆಯಾಗಿದ್ದ ನಾಲ್ವರು ತಪಸ್ವಿನಿಯರನ್ನು ಬಿಡುಗಡೆ ಮಾಡಿದ್ದಲ್ಲದೆ ಅವರಿಗೆ ವಿಷ್ಣುಸಾಯುಜ್ಯವನ್ನು ನೀಡುತ್ತಾನೆ. ಅದೇ ರಕ್ಕಸನಿಂದ ಇದೇ ರೀತಿ ಸೆರೆಯಾಗಿದ್ದ ಹದಿನಾರು ಸಾವಿರ ಮಂದಿ ಸ್ತ್ರೀಯರನ್ನು ವಿಮೋಚಿಸಿದ್ದಲ್ಲದೆ ಎಲ್ಲರಿಗೂ ಕೃಷ್ಣಾವತಾರದಲ್ಲಿ ತಾನೇ ಅವರ ಪತಿಯಾಗುವುದಾಗಿ ಭರವಸೆ ನೀಡುವನು. ಇದಂತೂ ಕಷ್ಣಕಥೆಯಲ್ಲಿ ಪ್ರಸಿದ್ಧವಾಗಿರುವ ನರಕಾಸುರಪ್ರಸಂಗದ ಅನುಕರಣೆ. ಹೀಗೆಯೇ ಕೃಷ್ಣನು ಕಾಳಿಂದಿಯನ್ನು ಮದುವೆಯಾದದ್ದು ರಾಮಾವತಾರದಲ್ಲಿ ಆವನು ಇವಳಿಗಿತ್ತ ಅನುಗ್ರಹದ ಕಾರಣದಿಂದಲೇ ಎಂಬ ಕಥೆಯೂ ಬರುತ್ತದೆ. ಇಲ್ಲೆಲ್ಲ ಆನಂದರಾಮಾಯಣಕಾರನಿಗೆ ಕೃಷ್ಣಕಥೆಯನ್ನೆಲ್ಲ ರಾಮಕಥೆಯಲ್ಲಿ ಅಡಗಿಸಬೇಕೆಂಬ ಹುಚ್ಚು ಬಯಕೆಯೇ ಮುಂದಾಗಿರುವುದು ಸ್ಪಷ್ಟ. ರಾಮಭಕ್ತಿಯನ್ನಿರಲಿ, ಭಕ್ತಿಸಾಮಾನ್ಯವನ್ನೂ ಸರಿಯಾಗಿ ಕೇವಲಾದ್ವೈತದ ಹಿನ್ನೆಲೆಯಲ್ಲಿ ಗ್ರಹಿಸದ ಕಾರಣದಿಂದಲೇ ಇಂಥ ಹಾಸ್ಯಾಸ್ಪದ ಹೆಮ್ಮೆಗಳು ಹುಟ್ಟುವುದು ಸುವೇದ್ಯ.
ಇದಿಷ್ಟೂ ರಾಜ್ಯಕಾಂಡದ ಪೂರ್ವಾರ್ಧದ ವಿವರವಾದರೆ ಉತ್ತರಭಾಗದಲ್ಲಿ ಇನ್ನೆಷ್ಟೋ ವಿನೂತನವೂ ವಿಚಿತ್ರವೂ ಆದ ಸಂಗತಿಗಳಿವೆ. ಅವುಗಳಲ್ಲೊಂದು ರಾಮನು ಯುದ್ಧಕಾಲದಲ್ಲಿ ರಾವಣನು ಮಾಡಿದ್ದ ಅಟ್ಟಹಾಸವನ್ನು ನೆನೆದು ಇನ್ನು ಮುಂದೆ ತನ್ನ ರಾಜ್ಯದಲ್ಲಿ ಯಾರೂ ನಗಬಾರದೆಂದು ಶಾಸನ ಮಾಡಿದ್ದು! ಇದು ಜಗತ್ತಿಗೆಲ್ಲ ಕಷ್ಟವಾಗಿ ಪರಿಣಮಿಸಿ ಕಡೆಗೆ ಬ್ರಹ್ಮನೇ ಬಂದು ರಾಮನಿಗೆ ಅವನ ಶಾಸನದ ಅವಿವೇಕವನ್ನು ನಯವಾಗಿ ತಿಳಿಸುತ್ತಾನೆ. ರಾಮನನ್ನು ಎಷ್ಟೆಲ್ಲ ಕೊಂಡಾಡಿ, ಕಷ್ಣನನ್ನೂ ಅವನ ಮುಂದೆ ಅಲ್ಪವೆನಿಸಿದ “ಆನಂದರಾಮಾಯಣ”ದ ಕರ್ತೃವಿಗೆ ಇಂಥ ಹಾಸ್ಯಾಸ್ಪದಸ್ಥಿತಿಗೆ ತನ್ನ ದೇವರನ್ನು ಇಳಿಸಬಾರದೆಂದು ಅದೇಕೋ ತಿಳಿಯಲಿಲ್ಲ! ಜಾನಪದರೊಪ್ಪಿದ ರಾಮಕಥೆಗಳಲ್ಲಿ ಇಂಥ ಸಲುಗೆ-ಅನನ್ವಯಗಳನ್ನು ಸುಳಿಯುವುದುಂಟು. ಬಹುಶಃ ಅವುಗಳಿಂದ ಈ ಲೇಖಕನು ಪ್ರಭಾವಿತನಾಗಿರಬೇಕು. ಮುಂದೆ ಜಯ-ವಿಜಯರ ಶಾಪಕಥೆ ಬರುತ್ತದೆ. ಇದಕ್ಕಾಗಲಿ, ರಾಮಾಯಣಕ್ಕಾಗಲಿ ಸಂಬಂಧಿಸದಂತೆ ಅಶ್ವಿನೀದೇವತೆಗಳೂ ಮಾನವರಾಗಿ ಭೂಮಿಗೆ ಬೀಳುವ ಸಂಗತಿಯನ್ನು ಈ ಕೃತಿ ಏಕೆ ತಂದಿರುವುದೋ ರಾಮನೇ ಬಲ್ಲ! ಜಯ-ವಿಜಯರಿಗೆ ಸನಕ-ಸನಂದನಾದಿಗಳೇ ಶಾಪ ಕೊಟ್ಟಂತೆ ಹಿಂದಿನ ರಾಮಾಯಣಗಳಿರುವಾಗ ಅವನ್ನು ಬಿಟ್ಟು ಅಶ್ವಿನಿಗಳಿಂದ ಈ ಕೆಲಸ ಮಾಡಿಸಿ ಅವರಿಗೂ ಜಯ-ವಿಜಯರಿಂದ ಶಾಪ ಕೊಡಿಸಿರುವ ಔಚಿತ್ಯವಾದರೂ ಏನೋ! ವಿವೇಕಿಗಳಿಗೆ ಅರ್ಥವಾಗುವುದಿಲ್ಲ.
ಮುಂದೆ ವಾಲ್ಮೀಕಿಕೃತವೆನ್ನಲಾದ “ಶ್ರೀರಾಮವರ್ಣಮಾಲಾಸ್ತೋತ್ರ” ಬರುತ್ತದೆ. ಇದನ್ನು ಹಿಂಬಾಲಿಸಿ ಬಾಣಭಟ್ಟನ ಶೈಲಿಯಲ್ಲಿ ಪರಿಸಂಖ್ಯಾಲಂಕಾರಗಳು ತುಂಬಿದ ವಾಗ್ಧೋರಣೆಯಿಂದ ಕವಿಯು ರಾಮರಾಜ್ಯದ ವರ್ಣನೆ ಮಾಡುತ್ತಾನೆ. ಅನಂತರ ಕುಶನಿಗೆ ರಾಮನು ರಾಜನೀತಿಯನ್ನು ಉಪದೇಶಿಸುವ ಭಾಗ ಬಂದಿದೆ. ಇದನ್ನು ಹಿಂಬಾಲಿಸಿ ಅಂಗದ-ಸುಗ್ರೀವ-ತಾರಾದಿಗಳು ಮಾಡುವ ನೀತಿಯೂ ಬರುತ್ತದೆ. ಕುಶನಿಗೆ ಹೇಮಳೆಂಬುವಳೊಡನೆ ಮತ್ತೊಂದು ಮದುವೆಯಾಗುತ್ತದೆ. ಇಲ್ಲಿಯೇ ರಾಮನಿಗೆ ಅಗಸ್ತ್ಯನಿತ್ತ ಆಭರಣದ ಕಥೆಯೂ ದಂಡಕಾರಣ್ಯವು ಹೇಗೆ ಹುಟ್ಟಿತೆಂಬ ಕಥೆಯೂ ಬಂದಿವೆ. ಬಳಿಕ ರಾಮರಾಜ್ಯದ ವರ್ಣನೆ, ರಾಮನ ಮುದ್ರಾಂಗುಲೀಯಕದ ವರ್ಣನೆ ಬಂದಿವೆ. ರಾಮನು ವಿಪ್ರರಿಗೆ ದಾನವಾಗಿ ನೀಡಿದ ಅಗ್ರಹಾರ ಮತ್ತದಕ್ಕೆ ಬಂದ ದುಷ್ಟರ ಬಾಧೆ ಇತ್ಯಾದಿ ಕಥೆಗಳೂ ಇಲ್ಲಿವೆ. ಅನಂತರ ಎಲ್ಲ ಸಮಸ್ಯೆಗಳೂ ರಾಮ-ಹನುಮರಿಂದ ಪರಿಹೃತವಾಗುತ್ತವೆನ್ನಿ. ಇದಕ್ಕಂಟಿಯೇ ಮತ್ತೆ ರಾಮನ ದಿನಚರಿ ವಿವೃತವಾಗಿದೆ. ಇದರ ನಡುವೆಯೇ ಅವನು ಸೀತೆಗೆ ರಾಜರು ಹೆಚ್ಚು ಸಂತಾನವನ್ನು ಹೊಂದಿರಬಾರದೆಂಬ ನೀತಿಯನ್ನೂ ಅರುಹಿ ನಿರೂಪಿಸುತ್ತಾನೆ. ವಿಪ್ರವಧೆಯನ್ನೆಷ್ಟೋ ಮಾಡಿದ ಕಾರಣ ಲಂಕೆಯಲ್ಲಿ ರಾವಣನ ಹೆಣ ಇನ್ನೂ ಉರಿದಿರುತ್ತದೆ. ಅದಕ್ಕೆ ಹನೂಮಂತ ಮತ್ತಷ್ಟು ಕಟ್ಟಿಗೆ ಒಟ್ಟಿ ಅವನ ಪಾಪವನ್ನೆಲ್ಲ ಸುಡುತ್ತಾನೆ. ಕಡೆಗೆ ರಾಮನೇ ರಾವಣನ ಪ್ರೇತಕ್ಕೆ ಸದ್ಗತಿ ನೀಡುತ್ತಾನೆ.
“ಆನಂದರಾಮಾಯಣ”ದ ಕರ್ತೃವಿಗೆ ರಾಮನನ್ನು ಎಷ್ಟೆಷ್ಟು ರೀತಿಯಲ್ಲಿ ಎಷ್ಟೆಷ್ಟು ಬಾರಿ ಹೊಗಳಿದರೂ ಸಾಲದು. ಇದೀಗ ರಾಮನ ಮೂಲಕವೇ ಆತನ ಮಹಿಮೆಯನ್ನು ಸಾರಿಸುತ್ತಾನೆ. ಆ ಪ್ರಕಾರ ಎಲ್ಲ ಅವತಾರಗಳ ಪೈಕಿ ರಾಮನೇ ಪೂರ್ಣಾವತಾರಿ. ಅವನ ಪ್ರತಿಯೊಂದು ಚರ್ಯೆಯೂ ಲೋಕಶಿಕ್ಷಕ. ಬಳಿಕ ತುಲಸೀಮಾಹಾತ್ಯ, ದ್ವಾದಶೀಮಾಹಾತ್ಮ್ಯ, “ರಾಮಪಂಚದಶಾಕ್ಷರಮಂತ್ರ” (ಪಾಲಯ ಮಾಂ ರಾಘವ ದೀನಂ ಪಾಲಯ ಮಾಂ ದೀನಮ್), ಯಾವುದೇ ಬರೆವಣಿಗೆಗೆ ಮುನ್ನ “ಶ್ರೀರಾಮ” ಎಂದು ಬರೆಯುವ ಸಂಪ್ರದಾಯ ಇತ್ಯಾದಿ ಹಲವು ವಿಷಯಗಳು ಪ್ರಸ್ತುತವಾಗಿವೆ. ಈ ಕಾಂಡದ ಕಡೆಯಲ್ಲಿ ಸುಮಂತ್ರನ ಸಾವು, ಆತನನ್ನು ಯಮಭಟರು ಇನ್ನೂ ಸ್ವಲ್ಪ ಆಯುಷ್ಯವಿರುವಾಗಲೇ ಕೊಂಡೊಯ್ದುದಕ್ಕಾಗಿ ಯಮನೊಡನೆ ರಾಮನು ಮಾಡುವ ಸೆಣಸಾಟ, ಇವರಿಬ್ಬರ ಮಧ್ಯಸ್ತಿಕೆಗಾಗಿ ಸೂರ್ಯನ ಆಗಮನ, ಮತ್ತೆ ಸುಮಂತ್ರ ಬದುಕಿ ಹತ್ತು ದಿನಗಳ ಆಯುಷ್ಯಾವಧಿ ಮುಗಿದ ಬಳಿಕ ಸಾಯುವುದು ಮುಂತಾದ ವಿಚಿತ್ರವಿಚಾರಗಳನ್ನೆಲ್ಲ ಕವಿ ಉತ್ಸಾಹದಿಂದ ಬಣ್ಣಿಸಿದ್ದಾನೆ. ಕಡೆಗೆ ರಾಮನು ತನ್ನ ಪ್ರಜೆಗಳನ್ನೆಲ್ಲ ಶಿವನಾಮ ಜಪಿಸಲು, ಶಿವಪೂಜೆ ಮಾಡಲು, ಹನೂಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಹೇಳುತ್ತಾನೆ. ಈ ಉದಾರತೆಯೇ “ಆನಂದರಾಮಾಯಣ”ದ ಹೆಚ್ಚಳ.
ಎಂಟನೆಯದಾದ “ಮನೋಹರಕಾಂಡ”ದಲ್ಲಿ ವಾಲ್ಮೀಕಿರಾಮಾಯಣದ ಮೊದಲ ಸರ್ಗವೇ “ಲಘುರಾಮಾಯಣ” ಎಂಬ ಹೆಸರಿನಿಂದ ಉದ್ಧೃತವಾಗಿದೆ. ರಾಮನು ಮತ್ತೆ ತನ್ನ ಪ್ರಜೆಗಳಿಗೆ ರಾತ್ರಿದೂತರ ಮೂಲಕ ತತ್ತ್ವಸಂಕೇತಗಳನ್ನು ಬಳಸಿ ವೇದಾಂತವನ್ನು ಅರುಹುತ್ತಾನೆ. ಕೌಸಲ್ಯೆ, ಸುಮಿತ್ರೆ, ಕೈಕೇಯಿಯರು ರಾಮನಿಂದ ತತ್ತ್ವೋಪದೇಶವನ್ನು ಪಡೆಯುತ್ತಾರೆ. ಕೌಸಲ್ಯೆಗೆ ಹಸುಗಳ ಕೂಗಿನ ಅನುಕರಣೆಯಾದ “ಹಂಮಾ” (ಅಹಂ ಮಾ, ಅರ್ಥಾತ್ ಅಹಂಕಾರ ಬೇಡ), ಕೈಕೇಯಿಗೆ ಮೇಕೆಗಳ ಕೂಗಿನ ಅನುಕರಣೆಯಾದ “ಮೇ ಮೇ” (ನನಗೆ, ನನಗೆ ಎಂಬ ಸ್ವಾರ್ಥದ ಪರಿತ್ಯಾಗ) ಹಾಗೂ ಸುಮಿತ್ರೆಗೆ “ನಾನು ಯಾರು?” ಎಂಬ ಪ್ರಶ್ನೆಯ ಮನನ ಇತ್ಯಾದಿ ಸ್ವಾರಸ್ಯಕರಾಂಶಗಳು ರಾಮನಿಂದ ಉಪದಿಷ್ಟವಾಗುತ್ತವೆ. ಇವುಗಳ ಮೂಲಕ ಅವರೆಲ್ಲ ಜೀವನ್ಮುಕ್ತರಾಗುತ್ತಾರೆ.
ಅನಂತರ ವಿಸ್ತಾರವಾಗಿ ರಾಮನನ್ನು ಆರಾಧಿಸುವ ಪ್ರಕಾರಗಳು, ಕೇಶವ-ನಾರಾಯಣ-ಮಾಧವ ಮುಂತಾದ ದ್ವಾದಶನಾಮಗಳು, ವಿಷ್ಣುವಿನ ದಶಾವತಾರಗಳು, ವಾಸುದೇವ-ಸಂಕರ್ಷಣ ಮುಂತಾದ ಚತುರ್ವ್ಯೂಹಗಳು, ಬಗೆಬಗೆಯಾದ ರಾಮಮಂತ್ರಗಳು, ರಾಮಪಂಚಾಯತನ, ರಾಮನವಾಯತನ ಮೊದಲಾದ ಎಂಟು ಬಗೆಯ ಅರ್ಚಾಮೂರ್ತಿಗಳು, ವಿಧವಿಧವಾದ ಶ್ರೀರಾಮಯಂತ್ರಗಳು, ರಾಮಕೋಟಿಯನ್ನು ಬರೆಯುವ ಕ್ರಮ, ರಾಮನನ್ನು ಜಪಿಸುವ ಬಗೆ, ರಾಮಮುದ್ರೆ, ರಾಮಗಾಯತ್ರಿ, ಬಗೆಬಗೆಯ ರಾಮಾಯಣಗಳ ಪರಿಚಯ, ರಾಮಾರಾಧನೆಯ ತಿಥಿ-ನಕ್ಷತ್ರಾದಿಗಳು, ಉತ್ಸವವಿಶೇಷಗಳು, ರಾಮನವಮಿಯ ಮಹತ್ತ್ವ, ಚೈತ್ರಮಾಸದ ಹಿರಿಮೆ, ರಾ-ಮ ಎಂಬ ಎರಡು ಅಕ್ಷರಗಳ ಮಾಹಾತ್ಮ್ಯ, ಅವುಗಳ ನಿರುಕ್ತಿ-ವ್ಯಾಖ್ಯಾನ, ಸೀತೆ-ದುರ್ಗೆ ಮತ್ತು ರಾಮ-ಶಿವರ ಸಮಾಹಾರ, “ರಾಮಕವಚ”, “ಸೀತಾಕವಚ”, “ಲಕ್ಷ್ಮಣಕವಚ”, “ಹನೂಮತ್ಕವಚ” ಮುಂತಾದ ಸ್ತುತಿಗಳು, ವೇದ-ಪುರಾಣ-ಆಗಮ-ಇತಿಹಾಸಗಳನ್ನೆಲ್ಲ ರಾಮನ ಪರವಾಗಿ ಸಮನ್ವಯಿಸುವ ಕ್ರಮ, ರಾಮಾಯಣಪಾರಾಯಣದ ವಿಧಾನ ಮುಂತಾದ ಅಸಂಖ್ಯವಿಚಾರಗಳು ಬರುತ್ತವೆ. ಮತ್ತೆ ಎಲ್ಲ ಕಾಂಡಗಳ ಸಾರ ನಿರೂಪಿತವಾಗುತ್ತದೆ. ಈ ಕಾಂಡವು ಮುಂದಿನ ಯುಗದಲ್ಲಿ ನಡೆಯುವ ಅರ್ಜುನ-ಹನೂಮಂತರ ವಿವಾದವನ್ನೊಳಗೊಂಡ “ಶರಸೇತುಬಂಧನ” ಪ್ರಕರಣದಿಂದ ಮುಗಿಯುತ್ತದೆ. ಈ ಕಥಾನಕವು ಯಕ್ಷಗಾನಾದಿಗಳಲ್ಲಿ ಇಂದಿಗೂ ವಿಶ್ರುತ.
ಕಡೆಯದಾದ “ಪೂರ್ಣಕಾಂಡ”ವು ಹಸ್ತಿನಾವತಿಯ ಉಟ್ಟು-ಹಿನ್ನೆಲೆಗಳನ್ನೂ ಅದರ ರಾಜನ ಮೇಲೆ ವಾನರಸೇನೆಯ ಜೊತೆಗೆ ದಂಡೆತ್ತಿದುದನ್ನೂ ತಿಳಿಸುತ್ತದೆ. ಕಡೆಗೆ ಅಲ್ಲಿಯ ಸೋಮವಂಶೀಯರಾಜರು ರಾಮನಿಗೆ ಶರಣಾಗುತ್ತಾರೆ. ಅನಂತರ ರಾಮನು ತನ್ನ ಆಯುರ್ದಾಯ ಮುಗಿದುದನ್ನರಿತು ಮಹಾಪ್ರಸ್ಥಾನಕ್ಕೆ ಸಿದ್ಧನಾಗುತ್ತಾನೆ. ತನ್ನ ಅನುಚರರನ್ನೆಲ್ಲ ಹರಸಿ, ಚಿರಂಜೀವಿಗಳನ್ನು ಇಲ್ಲಿಯೇ ಉಳಿಸಿ, ಲವ-ಕುಶರೂ ಸೇರಿದಂತೆ ಎಲ್ಲ ಮಕ್ಕಳಿಗೂ ರಾಜ್ಯವನ್ನು ಹಂಚಿ ಅಯೋಧ್ಯಾಪ್ರಜೆಗಳೊಡನೆ ವೈಕುಂಠಕ್ಕೇರುತ್ತಾನೆ. ಈ ಜನಗಳಿಗೆಲ್ಲ ಬ್ರಹ್ಮನು ಸಾಂತಾನಿಕ ಎಂಬ ಹೊಸ ಲೋಕವನ್ನೇ ನಿರ್ಮಿಸುತ್ತಾನೆ. ವಾನರರೂ ಸೇರಿದಂತೆ ಎಷ್ಟೋ ಮಂದಿ ರಾಮನ ಅನುಜೀವಿಗಳು ಅವನಿಗೆ ಕೃಷ್ಣಾವತಾರದಲ್ಲಿ ಸಹಕಾರಿಗಳಾಗಿ ಜನಿಸಲು ಸಜ್ಜಾಗುತ್ತಾರೆ. ರಾಮನ ವಂಶ ಮುಂದುವರಿದು ಅಗ್ನಿವರ್ಣನಲ್ಲಿ ಕೊನೆಯಾಗುತ್ತದೆ. ಇದು ಸ್ಪಷ್ಟವಾಗಿ ರಘುವಂಶಮಹಾಕಾವ್ಯದ ಅನುಕರಣೆ. ಈ ಕೃತಿ ಕಟ್ಟಕಡೆಗೆ ಅನುಕ್ರಮಣಿಕೆಯಿಂದ ಸಮಾಪ್ತಿಯಾಗುತ್ತದೆ. ಅಂತೂ “ಆನಂದರಾಮಾಯಣ”ವನ್ನು ಅದೊಂದು ಬಗೆಯಿಂದ ರಾಮಾಯಣವಿಶ್ವಕೋಶವೆಂದೂ ರಾಮಾರಾಧನಸರ್ವಸ್ವವೆಂದೂ ಗುರುತಿಸಬಹುದು.
* * *
ಇದು ವೈದಿಕಪರಂಪರೆಯಲ್ಲಿ ಬೆಳೆದುಬಂದ ರಾಮಕಥೆಯ ಕೆಲವೊಂದು ಧಾರೆಗಳ ಪರಿಚಯವಿಮರ್ಶೆ. ಇದಾದರೂ ಕೇವಲ ಸಂಸ್ಕೃತಭಾಷೆಯಲ್ಲಿ ಬಂದಿರುವ ಕೆಲವು ಕೃತಿಗಳ ವಿಹಂಗಮವೀಕ್ಷಣೆ. ಈ ಕೃತಿಗಳಾದರೂ ಮಧ್ಯಕಾಲದ ನಿರ್ಮಾಣಗಳು. ಇನ್ನು ಆಧುನಿಕಕಾಲದ ಕಾವ್ಯ-ನಾಟಕ-ಶೋಧಕೃತಿಗಳ ಪರಿಚಯವಾಗಲಿ, ದೇಶಭಾಷೆಗಳಲ್ಲಿ ಬೆಳೆದುಬಂದಿರುವ ತತ್ಸದೃಶಗ್ರಂಥಗಳ ಹಾಗೂ ಅನುವಾದಗಳ ವಿಮರ್ಶೆಯಾಗಲಿ ಇಲ್ಲಿ ಪ್ರಸ್ತುತವಾಗಿಲ್ಲ. ಇವನ್ನೆಲ್ಲ ಬಹುಕಾಲದಿಂದ ಅನೇಕವಿದ್ವಾಂಸರು ನಡಸುತ್ತಲೇ ಬಂದಿದ್ದಾರೆ. ಹೀಗಿದ್ದರೂ ಹೊಸತೊಂದು ನಿಟ್ಟಿನಿಂದ ಪೂರ್ವೋಕ್ತವಾದ ಕೆಲವು ಕೃತಿಗಳ ಸಂಕ್ಷಿಪ್ತವಿಮರ್ಶೆ ಇಲ್ಲಿ ನಡೆದಿದೆ. ಈ ಪ್ರಯತ್ನಕ್ಕೆ ಆಧಾರಶ್ರುತಿಯಾದ ಆನಂದವರ್ಧನನ ಒಂದು ಮಾತಿಲ್ಲಿ ಸ್ಮರಣೀಯ: “ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ | ಕಥಾಶ್ರಯಾ ನ ತೈರ್ಯೋಜ್ಯಾ ಸ್ವೇಚ್ಛಾ ರಸವಿರೋಧಿನೀ ||” ಇದರ ತಾತ್ಪರ್ಯವಿಷ್ಟೇ: ಮಹಾಕೃತಿಗಳಾದ ರಾಮಾಯಣ-ಮಹಾಭಾರತಗಳಂಥವು ಈಗಾಗಲೇ ಋಷಿಕವಿಗಳ ಪ್ರತಿಭಾದರ್ಶನದಿಂದ ತಮ್ಮ ರೂಪ-ಸ್ವರೂಪಗಳನ್ನು ಗಟ್ಟಿಗೊಳಿಸಿಕೊಂಡಿವೆ. ಹೀಗಾಗಿ ಅವುಗಳ ಸ್ವಾರಸ್ಯ-ಮಹತ್ತ್ವಗಳು ಸ್ವಯಂಸಿದ್ಧವಾಗಿವೆ. ಇಂಥ ಸಾಹಿತ್ಯಸಂಸ್ಕೃತಿಯನ್ನು ಮುಂದಿನವರು ಯಾರೇ ಆಗಲಿ ಬಳಸಿಕೊಳ್ಳುವಾಗ ಎಚ್ಚರದಲ್ಲಿರಬೇಕು. ಇವುಗಳ ಜೀವನಾಡಿಯನ್ನರಿಯದೆ ತಮ್ಮಿಚ್ಛೆಗೆ ಬಂದಂತೆ ಹುಚ್ಚುಹುಚ್ಚಾಗಿ ಕಥೆ-ಕಲ್ಪನೆಗಳನ್ನೂ ಪಾತ್ರ-ವರ್ಣನೆಗಳನ್ನೂ ಬೆಳೆಸುವುದು ಅನುಚಿತ. ಇದು ಸರ್ವಥಾ ಆ ಮಹಾಕೃತಿಗಳಿಗೆ ಮಾಡುವ ಅಪಚಾರವೇ ಸರಿ.
ವಸ್ತುತಃ ರಾಮಾಯಣದ ಸಾಹಿತ್ಯಸಂಸ್ಕೃತಿಗೆ ಮಧ್ಯಕಾಲದ ಕೃತಿಗಳಿಂದ ಅಧ್ಯಾತ್ಮಸ್ತರದಲ್ಲಿ ಅಷ್ಟಿಷ್ಟು ಹಾನಿಯಾಗಿದೆಯಾದರೂ ಇದು ಸೋದ್ದಿಷ್ಟವಲ್ಲ, ಅಗೌರವದಿಂದ ಪ್ರೇರಿತವಾಗಿಲ್ಲ. ಮುಗ್ಧಭಕ್ತಿ, ಮತೋತ್ಸಾಹ ಮತ್ತು ಶ್ರದ್ಧಾಜಾಡ್ಯಗಳೇ ಇವುಗಳಿಗೆ ಕಾರಣವಲ್ಲದೆ ಅಹಂಕಾರ, ಅನ್ಯಾಯ, ಮತ್ತು ಅಪಚಾರಬುದ್ಧಿಗಳಲ್ಲ. ಇಂಥ ಹಾನಿಯೇನಿದ್ದರೂ ಆಧುನಿಕಕಾಲದ ದುರ್ಬುದ್ಧಿಜೀವಿಗಳಿಂದ ಆಗಿರುವುದು, ಆಗುತ್ತಿರುವುದು. ಇಲ್ಲಿ ಸ್ವದೇಶೀಯರೂ ಇದ್ದಾರೆ, ವಿದೇಶೀಯರೂ ಇದ್ದಾರೆ. ಆದರೆ ಹಳಬರು ಅಧಿದೈವವನ್ನು ಮಾತ್ರ ಸಮೃದ್ಧವಾಗಿ ಬೆಳೆಯಗೊಟ್ಟು ತನ್ಮೂಲಕ ಸಾಮಾನ್ಯಜನರ ಮನಸ್ಸಿನಲ್ಲಿ ರಾಮಾಯಣವನ್ನು ಕುರಿತು ಶ್ರದ್ಧಾಸಕ್ತಿಗಳನ್ನು ಉಳಿಸಿದ್ದಾರೆ, ಬೆಳೆಸಿದ್ದಾರೆ. ಇಂತಾದರೂ ತಾರ್ಕಿಕಬುದ್ಧಿ ಮತ್ತು ಸಮಾನತೆಗಳೇ ಆಧಾರಶ್ರುತಿಗಳಾಗಿರುವ ಆಧುನಿಕಕಾಲದಲ್ಲಿ ರಾಮಾಯಣವನ್ನು ಮತ್ತೂ ಅರ್ಥಪೂರ್ಣವಾಗಿ ಉಳಿಸಿಕೊಳ್ಳಲು ರಸಪಾರಮ್ಯದ ದೃಷ್ಟಿಯೇ ಉಪಾದೇಯ. ಇದನ್ನೇ ಆನಂದವರ್ಧನ ಸಾವಿರದ ನೂರು ವರ್ಷಗಳಿಗೂ ಮುನ್ನ ಎಚ್ಚರಿಸಿದ್ದು. ಇಂಥ ಎಚ್ಚರವುಳ್ಳ ಸಾಹಿತಿ-ಸಹೃದಯರಿಗೇ ರಾಮಾಯಣವು ಒದಗಿಬರಬಲ್ಲ ಆಧಾರ: “ಪರಂ ಕವೀನಾಮ್ ಆಧಾರಮ್.”