ವೈದಿಕಪರಂಪರೆಯು ಬಗೆಬಗೆಯ ರಾಮಾಯಣಗಳನ್ನು ರೂಪಿಸಿಕೊಂಡಿರುವುದರ ಮೂಲವನ್ನು ಮಹಾಭಾರತದ ವನಪರ್ವದಲ್ಲಿ ಬರುವ ರಾಮೋಪಾಖ್ಯಾನದಲ್ಲಿಯೇ ಕಾಣಬಹುದು. ಪುರಾಣಗಳಲ್ಲಿ, ಆಗಮಗಳಲ್ಲಿ, ಅಧ್ಯಾತ್ಮಗ್ರಂಥಗಳಲ್ಲಿ ವಿಭಿನ್ನಭಾಷೆಗಳ ಕವಿಗಳ ಕಾವ್ಯ-ನಾಟಕಗಳಲ್ಲಿ ಚಿತ್ರ-ವಿಚಿತ್ರವಾದ ಬೆಳೆವಣಿಗೆಯಾಗಿದೆಯಾದರೂ ಇವುಗಳೆಲ್ಲ ಒಂದು ವಿಲಕ್ಷಣಪಾಕವನ್ನು ಪಡೆದಿರುವುದು ವಾಲ್ಮೀಕಿಕೃತವೆಂದೇ ತಮ್ಮನ್ನು ಗುರುತಿಸಿಕೊಳ್ಳುವ “ಅದ್ಭುತರಾಮಾಯಣ”, “ಅಧ್ಯಾತ್ಮರಾಮಾಯಣ”, “ಆನಂದರಾಮಾಯಣ” ಮತ್ತು “ಭುಷುಂಡೀರಾಮಾಯಣ”ಗಳಂಥ ಗ್ರಂಥಗಳಲ್ಲಿ. ದಿಟವೇ, “ಯೋಗವಾಸಿಷ್ಠ”ವು ಇದೇ ಸಾಲಿಗೆ ಬರುವಂಥದ್ದು. ಆದರೆ ಅಲ್ಲಿ ರಾಮಕಥಾಭಾಗಕ್ಕಿಂತ ತತ್ತ್ವಭಾಗವೇ ಎಣೆಮೀರಿ ವಿಸ್ತರಿಸಿಕೊಂಡ ಕಾರಣ ಅದನ್ನಿಲ್ಲಿ ಲೆಕ್ಕಿಸಲಾಗುವುದಿಲ್ಲ. ಪ್ರಾಯಶಃ ರಾಮಸಂಬಂಧವನ್ನೂ ವಾಲ್ಮೀಕಿಯ ಹೆಸರನ್ನೂ ಅಂಟಿಸಿಕೊಂಡ ಗ್ರಂಥಗಳ ಪೈಕಿ ತತ್ತ್ವಸ್ವಾರಸ್ಯ ಮತ್ತು ಕಾವ್ಯಸೌಂದರ್ಯಗಳ ದೃಷ್ಟಿಯಿಂದ “ಯೋಗವಾಸಿಷ್ಠ”ವೇ ಸರ್ವೋಚ್ಚ. ಇದರ ಗಾತ್ರವೂ ಎಲ್ಲಕ್ಕಿಂತ ಮಿಗಿಲು.
ಬೌದ್ಧ ಮತ್ತು ಜೈನರ ಪರಂಪರೆಗಳಲ್ಲಿ ಕೂಡ ರಾಮಕಥೆ ಹರಿದುಬಂದಿದ್ದರೂ ಅದು ಮುಖ್ಯವಾಹಿನಿಯಲ್ಲಿ ಸೇರಿಹೋಗಿಲ್ಲ. ಜೊತೆಗೆ ಬೌದ್ಧರ “ದಶರಥಜಾತಕ” ತುಂಬ ಅಲ್ಪಗಾತ್ರದ ಕೃತಿ; ಮತ್ತಿದರ ಸ್ವಾರಸ್ಯವೂ ಬಲು ಕಡಮೆ. ಜೈನಪರಂಪರೆಯಲ್ಲೇನೋ ವಿಮಲಸೂರಿಯ “ಪಉಮಚರಿಯ” ಕೃತಿಯಿಂದ ಮೊದಲ್ಗೊಂಡು ಬೇರೆ ಬೇರೆ ಪುರಾಣ-ಕಾವ್ಯಗಳಲ್ಲಿ ರಾಮಕಥೆ ಬೆಳೆದಿದ್ದರೂ ಗಾಢವಾದ ಜೈನಮತವಾಸನೆಯು ಮೂಲದ ರಾಮಕಥೆಯ ಸೊಗಸುಗಳನ್ನೆಷ್ಟನ್ನೋ ಸಪ್ಪೆಗೊಳಿಸಿದೆ. ಜೊತೆಗೆ, ಜನಸಾಮಾನ್ಯರಿಗೆ ರಂಜನೆಯಾಗಬಲ್ಲ ಇನ್ನೆಷ್ಟೋ ಸಂದರ್ಭ-ಸ್ವಾರಸ್ಯಗಳನ್ನು ಮತವಿಚಾರದ ನಿರೂಪಣೆಗಾಗಿ ಬಲಿಗೊಟ್ಟ ಕಾರಣ ಸ್ವತಃ ಜೈನರಿಗೇ ಇವು ಅರೋಚಕವೆನಿಸಿವೆ. ಒಂದಂತೂ ನಿಜ, ಬೌದ್ಧ ಮತ್ತು ಜೈನಪರಂಪರೆಗಳ ರಾಮಕಥಾನಕಗಳು ವಾಲ್ಮೀಕಿಪ್ರತಿಭೆಯ ವಿಕೃತಿಯೇ ಹೊರತು ಆ ಸಂಸ್ಕೃತಿಗೆ ಮೂಲವೆನಿಸಬಲ್ಲ ಪ್ರಕೃತಿಯಲ್ಲ. ಇವು ಯಶಸ್ವಿಯಾದ, ಜನಾದರಣೆ ಗಳಿಸಿದ ಯಾವುದೇ ಸುಂದರಸಂಗತಿಯನ್ನು ತಮ್ಮ ತಮ್ಮ ಮತಪ್ರಚಾರಕ್ಕೆ ಬಳಸಿಕೊಳ್ಳುವ ಸಂಘಟಿತಮತಗಳ ಜಾಣ್ಮೆಗೂ ಸಾಕ್ಷಿ.
“ಅದ್ಭುತರಾಮಾಯಣ”, “ಅಧ್ಯಾತ್ಮರಾಮಾಯಣ”, “ಆನಂದರಾಮಾಯಣ” ಮತ್ತು “ಭುಷುಂಡೀರಾಮಾಯಣ”ಗಳೇ ವಾಲ್ಮೀಕಿರಾಮಾಯಣಕ್ಕಿಂತ ಮಿಗಿಲಾಗಿ ದೇಶಭಾಷೆಗಳ ರಾಮಕಥಾಕಾವ್ಯಗಳನ್ನು ಪ್ರಭಾವಿಸಿವೆಯೆಂದರೆ ಆಶ್ಚರ್ಯವಾಗಬಹುದು. ಸಂಸ್ಕೃತದ ಹೆಚ್ಚಿನ ಮಹಾಕವಿಗಳೆಲ್ಲ ತಮ್ಮ ರಾಮಕಥಾಶ್ರಿತವಾದ ಕಾವ್ಯ-ನಾಟಕಗಳನ್ನು ರಚಿಸಿದ ಬಳಿಕ ಮೇಲೆ ಕಾಣಿಸಿದ ರಾಮಾಯಣಗಳು ಹರಳುಗಟ್ಟಿರುವುದು ಸಂಭವನೀಯ. ಈ ಕಾರಣದಿಂದಲೇ ಭಾಸ, ಕಾಳಿದಾಸ, ಭವಭೂತಿ, ದಿಙ್ನಾಗರಂಥ ಕವಿಗಳ ಕೃತಿಗಳಲ್ಲಿ ಕಾಣಸಿಗದ ವಿವರಗಳು ದೇಶಭಾಷೆಗಳ ರಾಮಕಥಾಕಾವ್ಯಗಳಲ್ಲಿ ತೋರಿಕೊಳ್ಳುತ್ತವೆ. ನಾವೆಲ್ಲ ಬಲ್ಲಂತೆ ದೇಶಭಾಷೆಗಳಲ್ಲಿ ಸಾಹಿತ್ಯಸೃಷ್ಟಿ ಸಾವಿರಾರು ವರ್ಷಗಳಿಗೆ ಮುನ್ನವೇ ಮೊದಲಾದರೂ ಯಾವ ಭಾಷೆಯಲ್ಲಿಯೂ ರಾಮಕಥೆ ಸಾವಿರ ವರ್ಷಗಳಿಗೂ ಹಿಂದಿನ ಕಾವ್ಯಗಳಲ್ಲಿ ಉಪಲಭ್ಯವಿಲ್ಲದಿರುವುದು ಗಮನಾರ್ಹ.
ತಮಿಳಿನ “ಕಂಬರಾಮಾಯಣ” ಮತ್ತು ಕನ್ನಡದ “ಭುವನೈಕರಾಮಾಭ್ಯುದಯ” (ಪೊನ್ನನ ಅನುಪಲಬ್ಧಕೃತಿ) ಸುಮಾರು ಸಾವಿರ ವರ್ಷಗಳ ಮುನ್ನ ರಚಿತವಾದವು. ತೆಲುಗಿನ ಭಾಸ್ಕರಾದಿಗಳ ರಾಮಾಯಣ ಇವುಗಳಿಗಿಂತ ಹಲವು ಶತಮಾನಗಳಷ್ಟು ಅರ್ವಾಚೀನ. ನಾಗಚಂದ್ರನ “ರಾಮಚಂದ್ರಚರಿತಪುರಾಣ”ವಂತೂ ಅಪ್ಪಟವಾಗಿ ಜೈನಕೃತಿ. ಇನ್ನುಳಿದಂತೆ ಒರಿಯಾ, ಬಂಗಾಳಿ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಬಂದ ರಾಮಾಯಣಗಳೆಲ್ಲ ಮತ್ತೂ ಈಚಿನವು; ಯಾವುವೂ ಆರೇಳು ನೂರು ವರ್ಷಗಳ ಹಿಂದೆ ಹೋಗುವುದಿಲ್ಲ. ಕನ್ನಡ, ತೆಲುಗು, ಮಲಯಾಳ ಭಾಷೆಗಳ ಇನ್ನಿತರ ರಾಮಕಾವ್ಯಗಳೂ ಹೆಚ್ಚು-ಕಡಮೆ ಈ ಕಾಲಮಾನವನ್ನೇ ಅನುಸರಿಸುತ್ತವೆ. ಒಟ್ಟಿನಲ್ಲಿ ನಿರಪವಾದವೆಂಬಂತೆ ಇವೆಲ್ಲ ರಾಮಾಯಣದ ಮತೀಯ-ತತ್ತ್ವೀಯ-ಔಪಾಸನೀಯಮುಖಗಳು ಬಲಿತ ಬಳಿಕವೇ ರಚಿತವಾಗಿವೆಯೆಂಬುದು ಸತ್ಯ. ಇಂಥ ಆಧಾರ ಇವುಗಳಿಗೆ ದಕ್ಕಿರುವುದು ಮೇಲೆ ಕಾಣಿಸಿದ ರಾಮಾಯಣಗಳಿಂದ. ಬಹುಶಃ “ಕಂಬರಾಮಾಯಣ”ವೊಂದು ಶ್ರೀವೈಷ್ಣವಪರಂಪರೆಯ ಕೆಲವು ಅಂಶಗಳನ್ನು ಹೆಣೆದುಕೊಂಡು ಬೆಳೆದಿದೆ ಎಂಬ ಅಪವಾದವನ್ನುಳಿದರೆ ಮಿಕ್ಕೆಲ್ಲ ಪ್ರಸಿದ್ಧವಾದ ಪ್ರಾಂತೀಯಭಾಷಾರಾಮಾಯಣಗಳೂ ಸ್ಥೂಲಾದ್ವೈತದ ವಿಶಾಲದೃಷ್ಟಿಕೋನವನ್ನೇ ನೆಮ್ಮಿ ನಡೆದಿವೆ. ಇವುಗಳ ಪೈಕಿ ತುಲಸೀದಾಸರ “ರಾಮಚರಿತಮಾನಸ” ಜಗದ್ವಿಖ್ಯಾತ. ಇದು ಪ್ರಧಾನವಾಗಿ “ಅಧ್ಯಾತ್ಮರಾಮಾಯಣ” ಮತ್ತು “ಆನಂದರಾಮಾಯಣ”ಗಳ ಪ್ರಭಾವದಿಂದ ರೂಪುಗೊಂಡ ಕೃತಿ. ಇದನ್ನೂ ವೈಷ್ಣವಮತಗಳು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಈಗಲೂ ಬಗೆಬಗೆಯ ವ್ಯಾಖ್ಯಾಶೀರ್ಷಾಸನಗಳನ್ನು ಹಾಕುತ್ತಿರುವುದು ದೃಷ್ಟಚರ. ಕೇರಳದಲ್ಲಿ ಇಂದಿಗೂ ಪಾರಾಯಣಗ್ರಂಥವಾಗಿರುವ ಎಳುತ್ತಚ್ಚಾನ್ ಕವಿಯ “ಅಧ್ಯಾತ್ಮರಾಮಾಯಣ” ತನ್ನ ಹೆಸರಿನಿಂದಲೇ ಪೂರ್ವೋಕ್ತಕೃತಿಗೆ ಋಣಿಯೆಂದು ತಿಳಿಸಿದೆ. ಒರಿಸ್ಸಾದ ಸರಳದಾಸನ ರಾಮಾಯಣವೂ ಬಲುಮಟ್ಟಿಗೆ ಇದೇ ಜಾಡಿನದು. ಬಂಗಾಳದ ಕೃತ್ತಿವಾಸನ ರಾಮಾಯಣ ಅದ್ವೈತದಲ್ಲಿಯೇ ಆತ್ಯಂತಿಕವಾದ ತಾತ್ಪರ್ಯವುಳ್ಳ ಶಾಕ್ತಮತದ ಪ್ರಭಾವದಿಂದ ಬೆಳೆದಿದೆ. ಹೀಗೆ ಮತ್ತಷ್ಟು ಉದಾಹರಣೆಗಳನ್ನು ಬೆಳೆಸಬಹುದಾದರೂ ತೀರ್ಮಾನವೇನೂ ವ್ಯತ್ಯಾಸವಾಗದ ಕಾರಣ ಇಲ್ಲಿಗೆ ವಿರಮಿಸಬಹುದು.
ಇದೆಲ್ಲವನ್ನೂ ಗಮನಿಸಿದಾಗ ನಮ್ಮ ದೇಶದ ಜನಮಾನಸದಲ್ಲಿ ಸಾಕ್ಷಾತ್ತಾಗಿ ವಾಲ್ಮೀಕಿಮುನಿಗಳ ರಾಮಾಯಣವು ಹೊಕ್ಕು ನೆಲಸಿರುವುದಕ್ಕಿಂತ ಹೆಚ್ಚಾಗಿ ಅದು “ಅದ್ಭುತರಾಮಾಯಣ”, “ಅಧ್ಯಾತ್ಮರಾಮಾಯಣ” ಮತ್ತು “ಆನಂದರಾಮಾಯಣ”ಗಳಂಥ ಸಂಸ್ಕೃತಗ್ರಂಥಗಳ ಮೂಲಕ ಹಾಯ್ದುಬಂದು ಸ್ಥಿರಗೊಂಡಿದೆಯೆಂದು ನಿಶ್ಚಯಿಸಬಹುದು. ಗೀತ, ನೃತ್ಯ, ನಾಟಕ, ಚಿತ್ರ, ಶಿಲ್ಪ, ಚಲನಚಿತ್ರ ಮತ್ತು ದೂರದರ್ಶನಗಳ ಮಟ್ಟಿಗೂ ಇದು ಅನ್ವಯಿಸುವ ತಥ್ಯ. ಈ ಮೊದಲೇ ನಾವು ಗಮನಿಸಿದಂತೆ ಅದ್ಭುತ-ಅಧ್ಯಾತ್ಮ-ಆನಂದರಾಮಾಯಣಗಳು ಮತ, ಉಪಾಸನೆ, ಜಾನಪದ ಮತ್ತು ದರ್ಶನಗಳಂಥ ಹತ್ತಾರು ಎಳೆಗಳನ್ನು ಸೇರಿಸಿಕೊಂಡು ರಾಮಕಥೆಗೆ ಬೆಸೆದುಕೊಂಡ ಕಾರಣ ಇವುಗಳ ಸಾಹಿತ್ಯಕಮೌಲ್ಯ ಹೇಗೇ ಇದ್ದರೂ ಸಾಂಸ್ಕೃತಿಕಮೌಲ್ಯ ಸಾಂದ್ರವಾಗಿದೆ, ಮತ್ತಿದು ಜನರಿಂದ ಹುಟ್ಟಿ ಜನರಲ್ಲಿ ಬೆಳೆದು ಜನರಿಗಾಗಿಯೇ ಮುಡಿಪಾಗಿದೆ. ಈ ಕಾರಣದಿಂದಲೇ ಇವುಗಳಿಂದ ಪ್ರಭಾವಿತವಾದ ದೇಶಭಾಷೆಗಳ ಕಾವ್ಯ-ನಾಟಕಗಳು ಹಾಗೂ ಕಲಾಕೃತಿಗಳು ನಮ್ಮ ಜನತೆಯನ್ನು ಗಾಢವಾಗಿ ಆವರಿಸಿವೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿರುವ ತತ್ತ್ವವು ಸಂಕುಚಿತವಾಗಿಲ್ಲದೆ, ವಿಶ್ವಜನೀನವಾದ ಸಮನ್ವಯದೃಷ್ಟಿಯಿಂದ ಕೂಡಿರುವುದು ನಿಜಕ್ಕೂ ನೆಮ್ಮದಿಯ ಸಂಗತಿ.
ಇದನ್ನು ಮನಗಂಡಾಗ ಯಾವುದೇ ಸಮಾಜದ ಅಧಿಕಸಂಖ್ಯೆಯ ಜನತೆ ಅಧಿದೈವವನ್ನೇ ತನ್ನ ಅಂತರಂಗದ ಉಪಶಾಂತಿಗೆ ನೆಮ್ಮುವುದೆಂದು ಸ್ಪಷ್ಟವಾಗುತ್ತದೆ. ಅದು ಅಧಿಭೂತದ ಬರ್ಬರವಾಸ್ತವದಲ್ಲಿ ನಿಂತಿದ್ದರೂ ಅಂತರಂಗದ ಅಧ್ಯಾತ್ಮವನ್ನು ಪ್ರತ್ಯಭಿಜ್ಞಾನ ಮಾಡಿಕೊಳ್ಳಲು ಅಶಕ್ತವಾಗಿದ್ದರೂ ಅಧಿದೈವ ಮತ್ತು ಅಧಿಯಜ್ಞಗಳ ಮೂಲಕ ಅನುದಿನದ ಜಂಜಾಟಗಳಿಗೆ ತಾತ್ಕಾಲಿಕದ್ದಾದರೂ ತಾಳಿಕೊಳ್ಳಬಲ್ಲಂಥ ಸಮಾಧಾನವನ್ನು ಪಡೆದು ಬದುಕನ್ನು ಸಾಗಿಸುತ್ತದೆ. ಇದು ಸ್ವಲ್ಪದ ಸಿದ್ಧಿಯಲ್ಲ. ಆದರೆ ಇದು ಸ್ವಯಂಪೂರ್ಣವಲ್ಲದ ಕಾರಣ ಹೇಳಲಾಗದ ಕೊರತೆಯೊಂದು ಅಂತರಂಗದೊಳಗೆ ಮುಲುಗುತ್ತಲೇ ಇರುತ್ತದೆ. ಈ ಕೊರಗನ್ನು ತೀರಿಸಿಕೊಳ್ಳುವುದಕ್ಕೆ ಪಾರಮಾರ್ಥಿಕವಾಗಿ ಕೇವಲಾದ್ವೈತತತ್ತ್ವವೊಂದೇ ಪರಿಹಾರ. ಆದರೆ ಇದು ಎಲ್ಲರಿಗೂ ಇರಲಿ, ಕೆಲವೇ ಮಂದಿಗೂ ದುಷ್ಕರವಾಗುವ ಅಸಿಧಾರಾವ್ರತ. ಹೀಗಾಗಿ ವ್ಯಾವಹಾರಿಕಜಗತ್ತಿನಲ್ಲಿ ಒಂದು ಮಟ್ಟಿಗಾದರೂ ಇಂಥ ಕೊರತೆಯನ್ನು ನೀಗಿಸುವಲ್ಲಿ ನೆರವಾಗಬಲ್ಲದ್ದು ಬ್ರಹ್ಮಾಸ್ವಾದವೆನಿಸಿದ ಅಧ್ಯಾತ್ಮಕ್ಕೆ ಅನುಜವರೇಣ್ಯನಾದ ರಸಾಸ್ವಾದ. ಇದನ್ನೇ ಇಂದ್ರಿಯಗ್ರಾಹ್ಯವಾದ ಜಗತ್ತಿನ ಮಟ್ಟಿಗೆ ಅಧ್ಯಾತ್ಮವೆನ್ನಬಹುದು, ಬ್ರಹ್ಮೋಪಾಸನೆಯೆಂದೂ ಹೇಳಬಹುದು. ಇದು ನಮ್ಮವೇ ಆದ ಭಾವಗಳ ತಟಸ್ಥದರ್ಶನದಲ್ಲಿದೆ, ತನ್ಮೂಲಕ ಒದಗಿಬರುವ ರಸರೂಪದ ಆಸ್ವಾದನೆಯಲ್ಲಿದೆ.
ಮೂಲತಃ ಆದಿಕವಿ ವಾಲ್ಮೀಕಿಮುನಿಗಳು ಹವಣಿಸಿಕೊಟ್ಟದ್ದೇ ಇದನ್ನು! ಅವರು ಮನಗಾಣಿಸಿರುವ ರಾಮಕಥೆಯು ಪ್ರಧಾನವಾಗಿ ಜ್ಞಾತುಮೇವಂವಿಧಂ ನರಮ್ ಎಂಬ ಜಿಜ್ಞಾಸೆಯಿಂದ ಹೊರಟು ಆತ್ಮಾನಂ ಮಾನುಷಂ ಮನ್ಯೇ ಎಂದು ಭಾವಿಸಿಕೊಂಡ ಕಾವ್ಯನಾಯಕನ ಜೀವನಸ್ವಾರಸ್ಯ. ಇಲ್ಲಿ ಅಲೌಕಿಕ ಮತ್ತು ಅತಿಮಾನುಷಸ್ತರಗಳು ಅಲ್ಲಲ್ಲಿ ಅಷ್ಟಿಷ್ಟು ಇಣಿಕಿದರೂ ಅವುಗಳ ಪ್ರಮೇಯ ಅಲ್ಪಮಾತ್ರದ್ದು. ಅಂತೆಯೇ ಇಲ್ಲಿ ಅದ್ಭುತಗಳಿಗೆ, ಪವಾಡಗಳಿಗೆ ಅವಕಾಶ ಕೊಡುವುದಕ್ಕಿಂತ ಹೆಚ್ಚಾಗಿ ಮಾನವಜೀವನದ ಕಷ್ಟ-ಸುಖಗಳಿಗೆ ಮಿಗಿಲಾದ ಅವಧಾರಣೆ ಸಂದಿದೆ. ನಾಗರಕತೆಯ ಭೌತಿಕಸಮೃದ್ಧಿಯ ಚಿಲ್ಲರೆ ಚಮತ್ಕಾರಗಳನ್ನು ಚಿತ್ರಿಸುವುದಕ್ಕಿಂತ ಹೆಚ್ಚಾಗಿ ನೈಸರ್ಗಿಕವಾದ ಜೀವಸಮೃದ್ಧಿಯನ್ನು ಕಾಣಿಸುವ ಆಸ್ಥೆ ಮೆರೆದಿದೆ. ಹೀಗಾಗಿಯೇ ಯುದ್ಧಕಾಂಡದ ಅತಿಲೋಕವಿಸ್ಮಯಗಳಿಗಿಂತ ಅಯೋಧ್ಯಾಕಾಂಡದ ಮನುಷ್ಯಸಹಜವಾದ ಸಂದಿಗ್ಧಗಳು ಮಿಗಿಲಾದ ಮಹತ್ತ್ವವನ್ನು ಹೊಂದುತ್ತವೆ; ಬಾಲಕಾಂಡ-ಉತ್ತರಕಾಂಡಗಳ ಬಗೆಬಗೆಯ ಚಿತ್ರಾದ್ಭುತಕಥೆಗಳಿಗಿಂತ ಹೆಚ್ಚಾಗಿ ನರಲೋಕ, ವಾನರಲೋಕ ಮತ್ತು ರಾಕ್ಷಸಲೋಕಗಳ ಭಾವತುಮುಲಗಳು ಮನಸ್ಸನ್ನು ಸೆಳೆಯುತ್ತವೆ; ಅಯೋಧ್ಯೆ-ಲಂಕೆಗಳ ಶ್ರೀಮಂತಿಕೆಗಿಂತ ಹೇಮಂತ, ವಸಂತ, ವರ್ಷಾ ಮತ್ತು ಶರದೃತುಗಳ ಪ್ರಕೃತಿಸೌಂದರ್ಯವೇ ಹೃದಯಂಗಮವಾಗುತ್ತದೆ. ಹೀಗಾಗಿ ಆದಿಕವಿಗಳ ಅವಧಾರಣೆ ಹೆಚ್ಚಾಗಿರುವುದು ಪ್ರಕೃತಿಗೆ ನಿಕಟವಾಗಿ ಬದುಕುವುದರೊಟ್ಟಿಗೆ ಅಂತರಂಗಪ್ರಕೃತಿಗೆ ಮತ್ತೂ ನಿಕಟವಾಗಿ ಬದುಕಬೇಕೆಂಬ ಅಂಶದಲ್ಲಿ. ಇದು ಪರವರ್ತಿರಾಮಾಯಣಗಳಲ್ಲಿ ತುಂಬ ವಿರಳವಾದ ಕಾಣ್ಕೆ. ಆದರೆ ಅವುಗಳೇ ಹೆಚ್ಚಿನ ಜನತೆಗೆ ಆಪ್ಯಾಯನವೆನಿಸಿರುವುದು ಮಾರ್ಮಿಕವಿಡಂಬನೆ: ಗತಾನುಗತಿಕೋ ಲೋಕೋ ನ ಲೋಕಃ ಪಾರಮಾರ್ಥಿಕಃ.
ಇದಕ್ಕೆ ಕಾರಣ ತುಂಬ ಸ್ಪಷ್ಟ. ಸಾಮಾನ್ಯಮಾನವಮನಸ್ಸು ನಿರಪವಾದವೆಂಬಂತೆ ಅರ್ಥ-ಕಾಮಸಂತ್ರಸ್ತ ಮತ್ತು ಫಲಕೃಪಣ. ಸದಾ ಯೋಗ-ಕ್ಷೇಮಕಾತರ್ಯವನ್ನು ಹೊಂದಿದ ಜನತೆಗೆ ಮತ್ತಾವುದನ್ನೋ ಪಡೆಯಬೇಕೆಂಬ ನಿರಂತರವಾದ ಹಪಹಪಿಕೆಯಲ್ಲದೆ ಇರುವುದನ್ನೇ ಅರಿಯಬೇಕೆಂಬ ವಿವೇಕವಿರುವುದಿಲ್ಲ. ಇದು ಸಾಕ್ಷಾತ್ತಾಗಿ ರಾಮಾಯಣದಿಂದಲೂ ಸ್ಪಷ್ಟವಾಗುವ ಸತ್ಯ. ರಾವಣನಿಗಾದರೂ ಇದ್ದದ್ದು ಇಂಥದ್ದೇ ಹಳಹಳಿಕೆ. ಅವನಿಗೆ ಎಣೆಯಿಲ್ಲದ ಬಲವಿದ್ದ ಕಾರಣ ಅವನ ಆಶೆ ಲೋಕಸಂತ್ರಾಸಕವಾಗುವುದರಲ್ಲಿ ಸಫಲವಾಯಿತು. ಆದರೆ ನಮ್ಮ ಬಡಪಾಯಿಗಳಾದ ಶ್ರೀಸಾಮಾನ್ಯರಿಗೆ ಹೊಟ್ಟೆಯಲ್ಲೆಷ್ಟು ಬಯಕೆಯಿದ್ದರೂ ರಟ್ಟೆಯಲ್ಲಷ್ಟು ಬಲವಿಲ್ಲದ ಕಾರಣ ಆ ಮಟ್ಟಿನ ಲೋಕೋಪಪ್ಲವ ಆಗುತ್ತಿಲ್ಲವೆಂಬುದೇ ಭರವಸೆಯ ಸಂಗತಿ. ಇದೇನೂ ಸಂತಸದ ಸಂಗತಿಯಲ್ಲ; ಬರಿಯ ಸಮಾಧಾನದ ಸ್ಥಿತಿ.
* * *
ವಾಲ್ಮೀಕಿಮಹರ್ಷಿಗಳ ಮೂಲಕೃತಿಯ ವಿವಿಧವ್ಯಾಖ್ಯಾನಗಳು, ಪುರಾಣ-ಇತಿಹಾಸಗಳ ರಾಮಾಖ್ಯಾನಗಳು, ಸಂಸ್ಕೃತದ ಪ್ರಾಚೀನಕವಿಗಳ ಕಾವ್ಯ-ನಾಟಕಗಳು ಮತ್ತು ಜನಪದಜೀವನದ ಕಲ್ಪನೆ-ಐತಿಹ್ಯಗಳೆಲ್ಲ ಅರ್ವಾಚೀನರಾಮಾಯಣಗಳ ಮೇಲೆ ಪ್ರಭಾವ ಬೀರಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲಿ ವಿಷ್ಣುವಿನ ಅವತಾರವೆಂದು ಮೂಲವೇ ಒಕ್ಕಣಿಸುವ ರಾಮತತ್ತ್ವದ ಜೊತೆಗೆ ಶೈವ ಮತ್ತು ಶಾಕ್ತಸಂಪ್ರದಾಯಗಳೂ ಸೇರಿರುವುದು ಮೇಲ್ನೋಟಕ್ಕೇ ತೋರುತ್ತದೆ. ಆದರೆ ಇವೆಲ್ಲ ದೇವತಾತಾರತಮ್ಯವಿಲ್ಲದ ಅದ್ವೈತದೃಷ್ಟಿಗೆ ಅನುಗುಣವಾಗಿರುವುದೊಂದು ಸಮಾಧಾನಕರವಾದ ಅಂಶ. ಏನಿದ್ದರೂ ಗೋವಿಂದರಾಜ, ಪೆರಿಯವಾಚ್ಚಾನ್ ಪಿಳ್ಳೆ ಮುಂತಾದವರ ಶ್ರೀವೈಷ್ಣವದೃಷ್ಟಿಕೋನವುಳ್ಳ ವ್ಯಾಖ್ಯಾನಗಳು ಹಾಗೂ ಮಧ್ವಾಚಾರ್ಯರ “ಮಹಾಭಾರತತಾತ್ಪರ್ಯನಿರ್ಣಯ”ದಂಥ ಸದ್ವೈಷ್ಣವದೃಷ್ಟಿಯ ನಿರೂಪಣೆ ಇದಕ್ಕೆ ಅಪವಾದ. ಆದರೆ ಇಂಥ ಸಂಕುಚಿತದೃಷ್ಟಿಯನ್ನು ಅಖಿಲಭಾರತವ್ಯಾಪಿಯಾದ ರಾಮಾಯಣಮನೋಧರ್ಮ ಮುಖ್ಯವೆಂದು ಗಣಿಸದಿರುವುದು ಗಮನಾರ್ಹ. ಈ ಕಾರಣದಿಂದಲೇ ಇಂದಿಗೂ ಜನಮಾನಸದಲ್ಲಿ ದೇಶಭಾಷೆಗಳ ಬರೆಹಗಳ ಮೂಲಕ, ಗೀತ-ನೃತ್ಯ-ರೂಪಕ-ಚಲನಚಿತ್ರಗಳ ಮೂಲಕ ನೆಲೆಗೊಂಡ ರಾಮಕಥೆ ಶೈವ-ವೈಷ್ಣವ-ಶಾಕ್ತಮತಗಳ ಸಾಮರಸ್ಯವುಳ್ಳ ಅದ್ವೈತದೃಷ್ಟಿಯದೇ. ಆದುದರಿಂದ ಅರ್ವಾಚೀನರಾಮಾಯಣಗಳ ಉದ್ದೇಶ ಒಳ್ಳೆಯದೆಂದು ನಾವು ತೀರ್ಮಾನಿಸಬಹುದು. ಆದರೆ ರಸದೃಷ್ಟಿ, ಪಾತ್ರಪ್ರೌಢಿಮೆ ಮತ್ತು ಈ ಮೂಲಕ ಧ್ವನಿತವಾಗುವ ನೈಜವಾದ ಜೀವನದರ್ಶನಗಳು ಅಲ್ಲಿ ಸೊರಗಿವೆಯೆಂಬುದು ಸ್ವಲ್ಪ ಖೇದಕರ ಅಂಶ.
ಇಂತಿದ್ದರೂ ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಮ್ ಎಂಬ ಗೀತಾವಾಕ್ಯದಂತೆ ಈ ಎಲ್ಲ ಅರ್ವಾಚೀನರಾಮಕಥೆಗಳು ಭಕ್ತ-ಭಾವುಕರ ಮುಗ್ಧಮನಸ್ಸುಗಳಿಗೆ ನೋವಾಗದಂತೆ ಮೂಲದ ಎಷ್ಟೋ “ಅಹಿತಕರ” ಅಂಶಗಳನ್ನು ಸೌಮ್ಯಗೊಳಿಸಿರುವುದು ಸ್ಮರಣೀಯ. ಆದರೆ ಈ ಬಗೆಯ ಮೃದೂಕರಣದಲ್ಲಿ ತನ್ನದೇ ಆದ ತೊಡಕಿರುವುದು ವಿಜ್ಞವೇದ್ಯ. ಏಕೆಂದರೆ ವೈಶ್ವಿಕವಾದ ಮಾನವಜೀವನದ ಭಾವಸಂಘರ್ಷಗಳು ರಾಗ-ದ್ವೇಷಗಳ ಮೂಲದಲ್ಲಿರುವ ಕಾರಣ ಯಾವ ಮಹಾಕವಿಯೇ ಆಗಲಿ, ಸಾಹಿತ್ಯನಿರ್ಮಿತಿಗೆ ತೊಡಗಿದಾಗ ಇವುಗಳ ಶೋಧನೆಗೆ ಕೈಯಿಕ್ಕುವುದು ಅನಿವಾರ್ಯ. ಅರ್ಥ-ಕಾಮಗಳ ಅಬ್ಬರವನ್ನು ಧರ್ಮದ ಬೆಳಕಿನಲ್ಲಿ ಕಂಡಾಗಲೇ ಒಳಿತು-ಕೆಡಕುಗಳ ಅರಿವಾಗುವುದು. ಧರ್ಮದ ಕಾಂತಿಯಿಲ್ಲದೆ ಇವುಗಳ ಹೋರಾಟವನ್ನು ಕಾಣಲು ಹೊರಟರೆ ನಮಗೆ ದಕ್ಕುವುದು ನೋಟವಲ್ಲ, ಕಾಟ ಮಾತ್ರ. ಧರ್ಮವು ಎಲ್ಲವನ್ನೂ ತಾಳಿಸಿ, ಬಾಳಿಸುವ ಪ್ರಜ್ಞೆಯೆಂದರಿಯದೆ ಕೇವಲ ದೇಶ-ಕಾಲಗಳಿಗಷ್ಟೇ ಸೀಮಿತವಾದ ಕೆಲವೊಂದು ಸ್ಥೂಲಮೌಲ್ಯ/ಮೌಲ್ಯಾಭಾಸಗಳಿಗೆ ಜೋತುಬಿದ್ದು ಯಾವುದೇ ಮಹಾಕಥೆಯನ್ನಾಗಲಿ “ಸಂಸ್ಕರಿಸಿ”, “ಹಿತಗೊಳಿಸಿ” ಕೊಡುವ ಚಾಪಲ್ಯ ಅದೆಷ್ಟು ಕಾಳಜಿಯಿಂದ ಕೂಡಿದ್ದರೂ ಅರ್ಥಪೂರ್ಣವೆನಿಸದು. ಏಕೆಂದರೆ ಪೂರ್ವೋಕ್ತವಾದ ಸ್ಥೂಲಮೌಲ್ಯಗಳು ಬರಿಯ ಧರ್ಮಾಭಾಸಗಳು, ಸೀಮಿತನೀತಿಗಳು. ಇವು ಮತ್ತೆ ಮತ್ತೆ ಮಾರ್ಪಡುತ್ತಿರುತ್ತವೆ. ಈ ಮಾರ್ಪಾಟಿಗೆ ದೇಶ-ಕಾಲಗಳಲ್ಲದೆ ಜೀವಿಕಾಪದ್ಧತಿಗಳ ವ್ಯತ್ಯಾಸಗಳೂ ಕಾರಣ; ನಿರಂತರವಾಗಿ ಬೆಳೆಯುತ್ತಿರುವ ಮಾಹಿತಿಯ ಜಗತ್ತಿನ ಅರಿವೂ ಕಾರಣ. ಇಷ್ಟೇ ಅಲ್ಲದೆ ಇಂಥ ಸ್ಥೂಲಮೌಲ್ಯಗಳು ಕೇವಲಾನುಭವದಲ್ಲಿ ನೆಲೆಗೊಳ್ಳದೆ ನಂಬಿಕೆ-ಹಾರೈಕೆಗಳಂಥ ಅಭಿನಿವೇಶಗಳಲ್ಲಿ ಬೇರೂರಿದ ಕಾರಣ ಇವೆಲ್ಲ ದೇಶ-ಕಾಲಗಳ ಹರಿವಿನಲ್ಲಿ ಎಷ್ಟೋ ಬಾರಿ ಅಪ್ರಸ್ತುತವಾಗುತ್ತವೆ, ಹಾಸ್ಯಾಸ್ಪದವಾಗುತ್ತವೆ, ಕೆಲವೊಮ್ಮೆ ಅಪಾಯಕಾರಿಯೂ ಆಗುತ್ತವೆ.