೨. ಜನಸಾಮಾನ್ಯರ ಊಹೆ, ಹಾರೈಕೆ ಮತ್ತು ನಂಬಿಕೆಗಳು ಕವಿಗಳ ಕಲ್ಪನೆಯಷ್ಟು ನಯ-ನವುರುಗಳಿಂದಲೂ ಕೂಡಿರುವುದಿಲ್ಲ, ಪಂಡಿತ-ಮತಾಚಾರ್ಯರ ಜಿದ್ದಿನ ಅಭಿನಿವೇಶ-ತರ್ಕಪರಿಷ್ಕಾರಗಳಿಂದಲೂ ಕೂಡಿರುವುದಿಲ್ಲ. ಇವೇನಿದ್ದರೂ ಭಾವುಕವಾದ ಅಕ್ಕರೆಯ ಮನಸ್ಸಿನ ಆತಂಕ, ಬರ್ಬರವಾಸ್ತವಗಳನ್ನು ಆದರ್ಶದೊಡನೆ ಬೆಸೆಯುವಾಗ ತಲೆದೋರುವ ಗೊಂದಲ ಮತ್ತು ಪ್ರಾಂಜಲವಾದ ಅಭಿಮಾನಗಳಿಂದ ಸಮೃದ್ಧವಾಗಿರುತ್ತವೆ. ಅಲ್ಲದೆ ಇಲ್ಲಿ ಅದ್ಭುತಗಳಿಗೆ, ಅಸಮಸಾಹಸಗಳಿಗೆ ಅಗ್ರತಾಂಬೂಲವಿರುತ್ತದೆ. ಇದೊಂದು ಬಗೆಯಲ್ಲಿ ಕವಿಗಳ ಕಲ್ಪನೆ ಮತ್ತು ಮತಾಚಾರ್ಯರ ಶ್ರದ್ಧಾಗ್ರಹಗಳೆರಡೂ ವಿಲಕ್ಷಣವಾಗಿ ಬೆರೆತ ಪಾಕವೆನ್ನಬೇಕು. ಹೀಗಾಗಿಯೇ ಈ ವಲಯದಲ್ಲಿ ಮೇಲ್ನೋಟಕ್ಕೆ ಅನನ್ವಯಗಳೆನ್ನಬಹುದಾದ ಮೂಲಕಥೆಯ ಎಷ್ಟೋ ಘಟನೆಗಳನ್ನು ಲೋಕಸಾಮಾನ್ಯದ ಅರಿವಿಗೆ ಸಮರ್ಪಕವನಿಸುವ ಮಟ್ಟಿಗೆ ತಿದ್ದುವ, ತೀಡುವ ಕಾತರವನ್ನು ಕಾಣುತ್ತೇವೆ. ಇಂಥ “ಸಮನ್ವಯ”ದಲ್ಲಿ ಅತಿಮಾನುಷಸಂದರ್ಭಗಳು ಯಥೇಚ್ಛವಾಗಿ ಬರುತ್ತವೆ. ಇವುಗಳ ತರ್ಕರಾಹಿತ್ಯವನ್ನು ಸಾಮಾನ್ಯಮನಸ್ಸು ವಿರೋಧಿಸದೆ ಒಪ್ಪಿಕೊಳ್ಳುತ್ತದೆ. ಅತಿಮಾನುಷದಲ್ಲಿ ತರ್ಕ ಬೇಕಿಲ್ಲವಷ್ಟೆ. ಮಾತ್ರವಲ್ಲ, ತರ್ಕಾತೀತತೆಯೇ ಅತಿಮಾನಷತೆ ತಾನೆ! ಹೀಗೆ ಅತಿಮಾನುಷದ ಅನನ್ವಯವನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಮುಗ್ಧಜನಮನಸ್ಸು ಮೂಲವು ಮಾನುಷದಲ್ಲಿ ಕಾಣಿಸುವ ಅನನ್ವಯವನ್ನು ಅದೇಕೆ ಒಪ್ಪಿಕೊಳ್ಳುವುದಿಲ್ಲವೋ! ಬಹುಶಃ ಇಂಥ ವಿಚಿತ್ರವರ್ತನೆಯು ಮಾನುಷದ ಅನನ್ವಯಕ್ಕೇ ನಿದರ್ಶನವೆಂದು ಭಾವಿಸಿ ನಾವು ಸಮಾಧಾನ ತಂದುಕೊಳ್ಳಬೇಕು; ಇದು ವಾಲ್ಮೀಕಿಯಂಥ ರಸಸಿದ್ಧಕವಿಯೇ ಸಾಕ್ಷಾತ್ಕರಿಸಿಕೊಂಡ ದರ್ಶನದ ವಿಜಯವೆಂದು ಹೆಮ್ಮೆಪಡಬೇಕು!
ಇದರೊಟ್ಟಿಗೆ ಹಸಿಹಸಿಯಾದ ಲೋಕಸಂಗತಿಗಳೂ ರಾಮಕಥೆಯಲ್ಲಿ ನಿಃಸಂಕೋಚವಾಗಿ ಹೆಜ್ಜೆಯಿಡುತ್ತವೆ. ಉದಾಹರಣೆಗೆ: ಸೀತೆಗೊಬ್ಬಳು ನಾದಿನಿ, ಅವಳಿಗೆ ತನ್ನ ಅತ್ತಿಗೆಯ ಮೇಲೆ ಅಸೂಯೆ, ಈ ಮೂಲಕವೇ ಸೀತಾಪರಿತ್ಯಾಗಕ್ಕೆ ನಾಂದಿ. ಇದು ನಮ್ಮ ಜಗತ್ತಿನಲ್ಲಿ ಕಾಣುವ ಅತ್ತಿಗೆ-ನಾದಿನಿಯರ ಅಪ್ಪಟ ತಗಾದೆಯ ಪ್ರತಿಬಿಂಬ. ನಾದಿನಿಯಿಲ್ಲದಿದ್ದಾಗ ಆ ಸ್ಥಳವನ್ನು ಅತ್ತೆ ಆಕ್ರಮಿಸಿತ್ತಾಳೆ; ಕೈಕೇಯಿಯೇ ಸೊಸೆಯ ವಿರುದ್ಧ ಮೆಣಸು ಮಸೆಯುತ್ತಾಳೆ. ಇದೇ ಜಾಡಿಗೆ ಬರುವಂಥದ್ದು ಸ್ಥಳಪುರಾಣದಂಥ ಐತಿಹ್ಯವಾರ್ತೆ. ಉದಾಹರಣೆಗೆ: ಕೋಲಾರದ ಬಳಿಯ ಆವನಿಯ ಕೆರೆಯಲ್ಲಿ ಸೀತೆ ಲವ-ಕುಶರ ತೊಟ್ಟಿಲುಬಟ್ಟೆಗಳನ್ನು ಒಗೆದದ್ದು, ಬಾಣಾವರಕ್ಕೆ ಬಂದಾಗ ಲಕ್ಷ್ಮಣ ಅವಿಧೇಯನಾಗಿ ರಾಮನ ಧನುರ್ಬಾಣಗಳನ್ನು ಹೊರುವುದಿಲ್ಲ ಎಂದದ್ದು, ರಾಮನು ತನ್ನ ಬಾಣದಿಂದಲೇ ಅಂಬುತೀರ್ಥ, ಶರಾವತಿ, ನಾಮದ ಚಿಲುಮೆ ಮುಂತಾದುವನ್ನು ಹುಟ್ಟಿಸಿದ್ದು ಇತ್ಯಾದಿ.
ಇಂಥ ಅನೇಕಸಂದರ್ಭಗಳಲ್ಲಿ ತಾವು ಜೀರ್ಣಿಸಿಕೊಳ್ಳಲಾಗದ ಮೂಲಕಥೆಯ ಘಟನೆ ಮತ್ತು ಪಾತ್ರವರ್ತನೆಗಳಿಗೆ ಸಮರ್ಥನೆ ಬೇಕೆನಿಸಿದಾಗ ಜನಸಾಮಾನ್ಯರ ನಂಬಿಕೆ-ಹಾರೈಕೆಗಳೂ ಇಂಥ ಸಮರ್ಥನೆಗಳನ್ನು ರಂಜನೀಯವೆನಿಸುವಂತೆ ರೂಪಿಸುವಲ್ಲಿ ಅವರ ಕಲ್ಪನೆಗಳೂ ದುಡಿದಿರುವುದನ್ನು ವಿವೇಕಿಗಳು ಗಮನಿಸಬಹುದು. ಈ ಅಂಶಗಳು ಕೆಲವೊಮ್ಮೆ ಕವಿ-ಮತಾಚಾರ್ಯರಿಂದ ಪ್ರೇರಿತವಾಗಿಯೋ ಎರವಲಾಗಿಯೋ ಬಂದಿರಬಹುದು; ಅಥವಾ ಅವರಿಗೇ ಇವು ಪ್ರೇರಕವೂ ಆಗಬಹುದು. ಹೀಗೆ ಇದೊಂದು ತುಂಬ ಸಂಕೀರ್ಣವಾದ ಸಂರಚನೆ.
೩. ಭಕ್ತ-ಮತಾಚಾರ್ಯರ ಶ್ರದ್ಧೆ ಮತ್ತು ಅಭಿನಿವೇಶಗಳು ಜನಸಾಮಾನ್ಯರ ಹವಣಿಕೆಯಷ್ಟು ಸರಳವಾಗಿಯೂ ಕವಿಗಳ ಕಲ್ಪನೆಯಷ್ಟು ಸುಂದರವಾಗಿಯೂ ಇರುವುದಿಲ್ಲ. ಇಲ್ಲಿರುವುದೆಲ್ಲ ಹೆಚ್ಚಾಗಿ ತಮ್ಮ ನಂಬಿಕೆಗೊಂದು “ಶಾಸ್ತ್ರೀಯ”ಸಮರ್ಥನೆಯನ್ನೀಯುವ ತುಡಿತ ಮತ್ತು ಮೂಲಕೃತಿಯ ಸಣ್ಣ-ಪುಟ್ಟ ಸಂಗತಿಗಳಲ್ಲಿಯೂ ಅಸಾಮಾನ್ಯವಾದ ಮತತತ್ತ್ವವನ್ನು ಕಾಣಿಸಬೇಕೆಂಬ ತವಕ. ಹೇಗೆ ಕಾವ್ಯಮೀಮಾಂಸಕರು ಮಹಾಕವಿಯ ಪ್ರತಿಯೊಂದು ಮಾತಿನಲ್ಲಿಯೂ ರಸ-ಧ್ವನಿ-ವಕ್ರತೆಗಳ ವಿಲಾಸವನ್ನು ಕಾಣಿಸಬೇಕೆಂದು ಆಶಿಸುವರೋ ಹಾಗೆಯೇ ಮತಮೀಮಾಂಸಕರು ಮಹರ್ಷಿಯೊಬ್ಬನ ಒಂದೊಂದು ನುಡಿಯಲ್ಲಿಯೂ ಭಕ್ತಿ-ಜ್ಞಾನ-ಕರ್ಮಗಳ, ಪುರಾಣ-ಆಗಮ-ಇತಿಹಾಸಗಳ ಸೂಕ್ಷ್ಮತೆಗಳನ್ನು ಎತ್ತಿತೋರಿಸಬೇಕೆಂಬ ಹುರುಡಿನಿಂದ ಕೂಡಿರುತ್ತಾರೆ. ಆದರೆ ಔಚಿತ್ಯದ ಅಂಕೆಯಿಲ್ಲದ ಕಾವ್ಯಮೀಮಾಂಸಕನ ಉತ್ಸಾಹವೂ ವಿವೇಕದ ಕಡಿವಾಣವಿಲ್ಲದ ಮತಮೀಮಾಂಸಕನ ಕಾತರವೂ ವಿಪರೀತಫಲಗಳನ್ನು ಉಂಟುಮಾಡುತ್ತವೆ. ಇದಕ್ಕೆ ಮೂಲಕಾರಣ ರಸನಿಷ್ಠೆ ಮತ್ತು ಅಧ್ಯಾತ್ಮನಿಷ್ಠೆಗಳ ಕೊರತೆ. ಈ ಪರಿಪಾಕವಿಲ್ಲದ ಕಾವ್ಯಮೀಮಾಂಸಕನು ಸಾಹಿತ್ಯವನ್ನು ಅಗ್ಗದ ಚಮತ್ಕಾರಗಳ ಮೂಟೆಯನ್ನಾಗಿಸಿದರೆ ಮತಮೀಮಾಂಸಕನು ಮತಗ್ರಂಥವನ್ನು ವಿಚಾರಸಹವಲ್ಲದ ಆಗ್ರಹಗಳ ಮೊತ್ತವನ್ನಾಗಿಸುತ್ತಾನೆ.
ಈ ವರ್ಗದಲ್ಲಿ ರಾಮಕಥೆಯು ತನ್ನ “ಅನನ್ವಿತ”ವಾದ ಪಾತ್ರವರ್ತನೆ ಮತ್ತು ಘಟನೆಗಳಿಗೆ ಶಾಪ, ಅನುಗ್ರಹ, ದೈವಾವೇಶ, ಅಸುರಾವೇಶ, ಕಲ್ಪಾಂತರವೃತ್ತಾಂತ, ವಿವಿಧಶಾಸ್ತ್ರಸೂಕ್ಷ್ಮಗಳ ಅನ್ವಯ ಮುಂತಾದ ಹತ್ತಾರು “ಸಮನ್ವಯಸೂತ್ರ”ಗಳನ್ನು ಕಂಡುಕೊಳ್ಳುತ್ತದೆ. ಈ ಕೆಲವು ಅಂಶಗಳು ಜಾನಪದರ ಕೆಲವೊಂದು ಯುಕ್ತಿಗಳೇ ಆದರೂ ಇಲ್ಲಿ “ಸೊಫೆಸ್ಟಿಕೇಷನ್” ಹೆಚ್ಚು! ಅಲ್ಲವೇ ಮತ್ತೆ, ಮಡಿ-ಹುಡಿಗಳ ಹಾರಾಟ ಹೆಚ್ಚಾಗಿರುವಲ್ಲಿ ಇವೆಲ್ಲ ಇಲ್ಲದಿದ್ದರೆ ಹೇಗೆ? ವಸ್ತುತಃ ಕರ್ಮಕಾಂಡವಾಗಲಿ, ಮತಶ್ರದ್ಧೆಯಾಗಲಿ ಆದಿಮಾನವನ ಭಯ-ಮೋಹ-ಶೋಕಗಳ ಕಂಬಳಿಹುಳು ಕಟ್ಟಿಕೊಂಡ ಗೂಡೇ ತಾನೆ! ಇದರಿಂದಲೇ ಹೊಮ್ಮಿದ ಕಲೆ-ಅಧ್ಯಾತ್ಮಗಳ ಚಿಟ್ಟೆ ಆನಂದದ ಬಾನಿನತ್ತ ನೆಗೆಯುವುದು ಮತ್ತೊಂದು ವಿಸ್ಮಯದ ವಾರ್ತೆ.
ಶ್ರೀರಾಮ ಮಹಾವಿಷ್ಣುವಿನ ಅವತಾರವಾದ ಬಳಿಕ ಸರ್ವೋತ್ತಮನಾದ ಶ್ರೀಹರಿಗೆ ಶರಣಾಗದವರಾದರೂ ಯಾರು? ಅಕಸ್ಮಾತ್ ಎಲ್ಲಿಯಾದರೂ ಶಿವಪಾರಮ್ಯ ಕಂಡುಬಂದರೆ ಅದನ್ನು ಪ್ರಕ್ಷೇಪವೆಂದೋ ಪ್ರಾತಿಭಾಸಿಕವೆಂದೋ ಪ್ರಕಾರಾಂತರವಾಗಿ ನಿರೂಪಿಸಬೇಕಷ್ಟೆ. ಇದೇ ತೆರನಾದದ್ದು ವಾಲಿಯನ್ನು ಮರೆಯಲ್ಲಿ ಕೊಂದ ತಪ್ಪು, ಲಕ್ಷ್ಮಣನು ಅವಿವಾಹಿತನೆಂದು ಶೂರ್ಪಣಖೆಗೆ ಹೇಳಿದ ಸುಳ್ಳು ಇತ್ಯಾದಿಗಳ ನಿರ್ವಾಹ. ಇಲ್ಲೆಲ್ಲ ವಾಲ್ಮೀಕಿರಾಮಾಯಣದ ಪ್ರಸಿದ್ಧವ್ಯಾಖ್ಯಾನಗಳಾದ “ಕತಕ”, "ಭೂಷಣ", “ತೀರ್ಥೀಯ”, “ಧರ್ಮಾಕೂತ” ಮುಂತಾದುವೆಲ್ಲ ಹೆಣಗಿರುವ ಪರಿಯನ್ನು ಓದಿಯೇ ಅರಿಯಬೇಕು. ಲಕ್ಷ್ಮೀಸ್ವರೂಪಿಣಿಯಾದ ಸೀತೆಯನ್ನು ರಾವಣ ಹೇಗೆ ತಾನೆ ಕದ್ದೊಯ್ದಾನು? ಒಂದೋ ಹಿಂದೆ ಜಯನಾಗಿದ್ದ ಅವನ ಶಾಪವಿಮೋಚನೆಗಾಗಿ ಈ ಕೆಲಸವಾಗಬೇಕು, ಇಲ್ಲವೇ ಲೋಕಹಿತಕ್ಕಾಗಿ ದೇವತೆಗಳೇ ಇಂಥ ಘಟನೆಯನ್ನು ಹೆಣೆದಿರಬೇಕು. ಇಂತಿದ್ದರೂ ಸೀತೆಯನ್ನು ಮುಟ್ಟುವುದೆಂದರೆ ಏನು? ನಾಟಕಕ್ಕಾಗಿಯಾದರೂ ಆದಿಲಕ್ಷ್ಮಿಯಾದ ಆಕೆ ಅಸುರನ ಮೈ ಸೋಂಕಿಸಿಕೊಳ್ಳುವಳೇ? ಅವನ ಮನೆಯಲ್ಲಿ ಸೆರೆಯಾಗುವಳೇ? ಹೀಗಾಗಿ ಸೀತೆಗೆ ಬದಲಾಗಿ ಮತ್ತೋರ್ವ ಮಾಯಾಸೀತೆ ಈ ಮೈಲಿಗೆಯನ್ನು ಮಾಡಿಸಿಕೊಳ್ಳಲು ಸಿದ್ಧಳಾಗಬೇಕು. ಇದೇ ತರ್ಕ ಅಗ್ನಿಪರೀಕ್ಷೆಗೂ ಅನ್ವಯ, ಪರಿತ್ಯಾಗಕ್ಕೂ ಅನ್ವಯ. ಹಾಗಲ್ಲವಾದರೆ ಅನಪಾಯಿದಂಪತಿಗಳ ನಡುವೆ ವೈಷಮ್ಯವೆಂದರೆ ಏನು? ವಿಚ್ಛೇದವೆಂದರೆ ಹೇಗೆ?
ಇಂಥವೆಲ್ಲ ಮುಖ್ಯಸಂಗತಿಗಳಾದರೆ ಯಜ್ಞಪುರುಷನಿತ್ತ ಪಾಯಸದ ಹಂಚಿಕೆ ಹೇಗಾಯಿತು? ಯಾಗರಕ್ಷಣೆಗೆ ಹೊರಟ ರಾಮನ ವಯಸ್ಸೆಷ್ಟಾಗಿತ್ತು? ಸೀತಾರಾಮರ ವಯಸ್ಸುಗಳ ಅಂತರವೆಷ್ಟು? ವಿವಿಧಘಟನೆಗಳ ತಿಥಿ-ನಕ್ಷತ್ರಗಳು ಯಾವುವು? ಮೊದಲಾದ ಕೊನೆಯಿಲ್ಲದ ಮತ್ತೆಷ್ಟೋ ಸಂಗತಿಗಳಿಗೆ ಸಮಾಧಾನ ಹೇಳುವ ಭಾರ ಪಾಪದ ವ್ಯಾಖ್ಯಾತೃ-ಮತಾಚಾರ್ಯರ ಮೇಲೆ ಬೀಳುತ್ತದೆ. ಮತಶ್ರದ್ಧೆಗಳನ್ನು ಕಾಡುವ ಇಂಥ ಅಸಂಖ್ಯಪ್ರಶ್ನೆಗಳು ಈಚಿನ ಕಾಲದಲ್ಲಿ ರಾಮಾಯಣದಲ್ಲಿ ವಿಜ್ಞಾನ-ತಂತ್ರಜ್ಞಾನಗಳನ್ನು ಹುಡುಕಾಡುವ ಅತ್ಯುತ್ಸಾಹಿಗಳಿಗೆ ಬೇರೊಂದು ರೂಪದಲ್ಲಿ ದುಃಸ್ವಪ್ನಗಳಾಗುತ್ತವೆ. ಪಾಯಸವು ಕೃತಕಗರ್ಭಧಾರಣೆಯ ರಹಸ್ಯವೇ? ದಿವ್ಯಾಸ್ತ್ರಗಳು ಅಣ್ವಸ್ತ್ರಗಳೇ? ಪುಷ್ಪಕವಿಮಾನವು ಹಾರಾಡುವ ತಟ್ಟೆಯೇ? ರಾವಣನ ಹತ್ತು ತಲೆಗಳು ಜೈವಿಕತಂತ್ರಜ್ಞಾನದ ವಿಷಮಫಲವೇ? ಇತ್ಯಾದಿ ಕುತೂಹಲಗಳು ರಾಮಕಥೆಯಲ್ಲಿ ಅಧಿಭೂತವನ್ನು ಅಂಕೆಮೀರಿ ಅನ್ವೇಷಿಸುವ ತಿಳಿಗೇಡಿತನ, ಅಧಿದೈವವನ್ನು ಅಳತೆಯಿಲ್ಲದೆ ಅರಸುವ ಮತಶ್ರದ್ಧೆಗಳ ಕೋಲಾಹಲ. ವಸ್ತುತಃ ರಾಮಕಥೆಯ ಪ್ರಧಾನಸ್ವಾರಸ್ಯ ಅದರ ಅಧ್ಯಾತ್ಮದಲ್ಲಿದೆ, ಮತ್ತಿದು ರಸವೇ ಆಗಿದೆಯೆಂಬುದು ವಾಲ್ಮೀಕಿದರ್ಶನ. ಆದರೆ ಇದನ್ನು ಆತನ ಸಜಾತೀಯರೆನಿಸಿಕೊಂಡ ಎಷ್ಟೋ ಮಂದಿ ಮುಂದಿನ ಕವಿಗಳೇ ಅರಿಯಲಿಲ್ಲವೆಂದ ಬಳಿಕ ಮಿಕ್ಕವರಲ್ಲಿ ಇಂಥದ್ದನ್ನು ನಿರೀಕ್ಷಿಸುವುದು ನಮ್ಮ ತಿಳಿಗೇಡಿತನ!
ಈ ವಿಭಾಗದಲ್ಲಿ ಬರುವ ಮತ್ತೊಂದು ಆಯಾಮವೆಂದರೆ ಪರಮಾತ್ಮನಾದ ರಾಮನನ್ನು ಆರಾಧಿಸುವ ಕ್ರಮ. ಒಮ್ಮೆ ಶ್ರೀರಾಮನು ಅವತಾರಪುರುಷನೆನಿಸಿದ ಬಳಿಕ ಈ ಅವತಾರವೇ ವಿಷ್ಣುವಿನ ಮಿಕ್ಕೆಲ್ಲ ಅವತಾರಗಳಿಗಿಂತ ಮಿಗಿಲೆಂದು ನಿರೂಪಿಸುವ ಬಾಧ್ಯತೆ ಉಂಟಾಗುತ್ತದೆ. ಅದನ್ನಂಟಿಯೇ ಅರ್ಚನೆ-ಆರಾಧನೆಗಳ ವಿಧಾನಗಳೂ ರೂಪುಗೊಳ್ಳುತ್ತವೆ. ಹೀಗಾಗಿಯೇ ಮಂತ್ರ, ಮೂರ್ತಿ, ಯಂತ್ರ, ಸ್ತೋತ್ರ ಮುಂತಾದ ಎಷ್ಟೋ ಸಾಧನಗಳಿಂದ ರಾಮನ ಪೂಜೆ ಸಾಗುತ್ತದೆ. ಸರಳವಾದ ರಾಮತಾರಕಮಂತ್ರದಿಂದ ಮೊದಲಾಗಿ ರಾಮಗಾಯತ್ರಿಯವರೆಗೆ ಹತ್ತಾರು ಮಂತ್ರಗಳಿವೆ. ರಾಮಪಾಂಚಾಯತನ, ರಾಮನವಾಯತನಗಳಂಥ ಮೂರ್ತಿಗಳೂ ಇವೆ. ಹೀಗೆಯೇ ಬಗೆಬಗೆಯ ಯಂತ್ರಗಳೂ ಸ್ತೋತ್ರಗಳೂ ಬೆಳೆದಿವೆ. ಒಬ್ಬ ರಾಮನ ಸ್ತೋತ್ರವಲ್ಲದೆ ರಾಮಾಯಣದ ಎಲ್ಲ ಮುಖ್ಯಪಾತ್ರಗಳ ಸ್ತೋತ್ರಗಳು, ಏಕಶ್ಲೋಕಿರಾಮಾಯಣದಿಂದ ಮೊದಲ್ಗೊಂಡು ಸಮಗ್ರರಾಮಾಯಣದ ಪಾರಾಯಣದ ಮಟ್ಟಕ್ಕೆ ವಿಸ್ತರಿಸಿಕೊಳ್ಳುವ ಅನೇಕ ಸ್ತುತಿಕ್ರಮಗಳಿವೆ. ಇನ್ನು ಪಾರಾಯಣದಲ್ಲಿಯೇ ಅಖಂಡ, ಸಪ್ತಾಹ, ನವಾಹಗಳಂಥ ಎಷ್ಟೋ ಬಗೆಗಳಿವೆ. ಇವಕ್ಕೆಲ್ಲ ಬೇಕಾದ ಅಂಗನ್ಯಾಸ-ಕರನ್ಯಾಸಗಳೂ ಧ್ಯಾನ-ಸಂಕಲ್ಪಗಳೂ ಶಕ್ತಿ-ಬೀಜ-ಕೀಲಕಾದಿಗಳೂ ಕಲ್ಪಿತವಾಗಿವೆ. ಶ್ರೀರಾಮನ ಅಷ್ಟೋತ್ತರಶತನಾಮ, ಸಹಸ್ರನಾಮಗಳಂಥ ಸ್ತವಗಳಲ್ಲದೆ “ರಾಮಕವಚ”, “ಸೀತಾಕವಚ”, “ಹನೂಮತ್ಕವಚ”, ಮುಂತಾದುವೆಷ್ಟೋ ಬಳಕೆಯಲ್ಲಿವೆ. ಶ್ರೀರಾಮಪಟ್ಟಾಭಷೇಕ, ಶ್ರೀರಾಮೋತ್ಸವಗಳಂಥ ವಿಸ್ತೃತವಾದ ಪೂಜಾಪ್ರಕಲ್ಪಗಳೂ ಇವೆ. ರಾಮತಾರಕಹೋಮ, ಪಟ್ಟಾಭಿಷೇಕಹೋಮಗಳಂಥ ಅಗ್ನಿಮುಖವಾದ ಆರಾಧನೆಗಳೂ ಸಾಕಷ್ಟಿವೆ.
ಇವೆಲ್ಲ ಕರ್ಮ-ಉಪಾಸನೆಗಳ ಆಯಾಮದವಾದರೆ ತತ್ತ್ವಚಿಂತನಕ್ರಮದ ಮತ್ತೊಂದು ಮಜಲೂ ಇದೆ. ಇಲ್ಲಿ ಶ್ರೀರಾಮನು ಸಗುಣಬ್ರಹ್ಮವಷ್ಟೇ ಅಲ್ಲದೆ ನಿರ್ಗುಣವೂ ನಿಷ್ಕಲವೂ ಆದ ಪರಬ್ರಹ್ಮದ ಪ್ರತೀಕವಾಗುತ್ತಾನೆ. ಹೀಗಾಗಿ ಬೇರೆ ಬೇರೆ ದರ್ಶನಗಳ ಅಧಿಕರಣಗಳಿಂದ ಪುಷ್ಟವಾದ ವೇದಾಂತವೇ ರಾಮಾರಾಧನೆಗೆ ಒದಗಿಬರುತ್ತದೆ. “ರಾಮಗೀತೆ”, “ರಾಮರಹಸ್ಯೋಪನಿಷತ್ತು” “ರಾಮಪೂರ್ವತಾಪನ್ಯುಪನಿಷತ್ತು”, “ರಾಮೋತ್ತರತಾಪನ್ಯುಪನಿಷತ್ತು”, “ಅಧ್ಯಾತ್ಮರಾಮಾಯಣ” ಮುಂತಾದುವೆಲ್ಲ ಈ ಜಾಡಿಗೆ ಬರುವಂಥವು. ಇದರ ಸರ್ವೋಚ್ಚರೂಪವನ್ನು “ಯೋಗವಾಸಿಷ್ಠ”ದಲ್ಲಿ ಕಾಣುತ್ತೇವೆ. ಒಮ್ಮೆ ವೇದಾಂತವು ತಲೆದೋರಿತೆಂದರೆ ಅಲ್ಲಿ ದ್ವೈತಾದ್ವೈತಗಳೇ ಮುಂತಾದ ಪ್ರಭೇದಗಳ ಚುಂಚೂಪ್ರವೇಶವಾಗದಿದ್ದರೆ ಹೇಗೆ? ಹೀಗಾಗಿ ರಾಮನು ಅದ್ವೈತತತ್ತ್ವದ ಕೇವಲಜ್ಞಾನಕ್ಕೆ ಹೇಗೆ ಆಕರವೋ ದ್ವೈತ-ವಿಶಿಷ್ಟಾದ್ವೈತಗಳ ಭಕ್ತಿ-ಪ್ರಪತ್ತಿಗಳಿಗೂ ಆಸರೆಯಾಗುತ್ತಾನೆ.
ವಿಷ್ಣು, ವಾಯು, ಅಗ್ನಿ, ಕೂರ್ಮ, ಪಾದ್ಮ, ಸ್ಕಾಂದ, ಬ್ರಾಹ್ಮ, ಗಾರುಡ, ನಾರದ, ಭಾಗವತ, ಹರಿವಂಶ, ಬ್ರಹ್ಮವೈವರ್ತ ಮುಂತಾದ ಪುರಾಣಗಳಲ್ಲಿ ಮತ್ತು ಶಿವ, ವಹ್ನಿ, ಸೌರ, ನೃಸಿಂಹ, ಕಾಲಿಕಾ, ಬೃಹದ್ಧರ್ಮ, ವಿಷ್ಣುಧರ್ಮೋತ್ತರ, ದೇವೀಭಾಗವತಗಳಂಥ ಉಪಪುರಾಣಗಳಲ್ಲಿ ರಾಮಕಥೆ ಬಗೆಬಗೆಯಾಗಿ ಬಂದಿದೆಯಷ್ಟೆ. ಇಲ್ಲಿಯ ಎಷ್ಟೋ ಅಂಶಗಳು ಭಕ್ತ-ಮತಾಚಾರ್ಯರಿಗೆ ಒದಗಿಬರುತ್ತವೆ. ಇವಲ್ಲದೆ ಪಾಂಚರಾತ್ರ ಆಗಮಗಳ “ಅಗಸ್ತ್ಯಸಂಹಿತೆ” ಮತ್ತು “ರಾಘವೀಯಸಂಹಿತೆ”ಗಳೂ “ಕಲಿರಾಘವ” ಮತ್ತು “ಬೃಹದ್ರಾಘವ”ಗಳೂ ವಿಶಿಷ್ಟಾದ್ವೈತಕ್ಕೆ ಯಥೇಚ್ಛವಾದ ಸಾಮಗ್ರಿಯನ್ನು ತುಂಬಿಕೊಟ್ಟಿವೆ. ಇನ್ನು ದ್ವೈತಕ್ಕೆ ಬಂದರೆ ಮಧ್ವಾಚಾರ್ಯರೇ ಬರೆದ “ಮಹಾಭಾರತತಾತ್ಪರ್ಯನಿರ್ಣಯ”ದ ರಾಮಾಯಣಭಾಗ ಇದ್ದೇ ಇದೆ. ಇವುಗಳೆಲ್ಲ ಒಟ್ಟಾಗಿ ರಾಮಾಯಣವನ್ನು ಒಂದು ದರ್ಶನಗ್ರಂಥವಾಗಿ ರೂಪಿಸುವಲ್ಲಿ ಸಾಕಷ್ಟು ಹೆಣಗಿವೆ. ಇಂಥ ಪ್ರಯತ್ನಗಳನ್ನು ಆಧುನಿಕಯುಗದಲ್ಲಿಯೂ ನಾವು ಕಾಣಬಹುದು. ರಾಮಾಯಣದ ಅಂತರರ್ಥವನ್ನು ವೀಣೆಯ ಜೊತೆಗೂ ಷಟ್ಚಕ್ರಗಳೊಟ್ಟಿಗೂ ಕಾಣಿಸುವ ಎಡತೊರೆ ಸುಬ್ಬರಾಯಶರ್ಮರ ಕೃತಿಯಿಂದ ಮೊದಲ್ಗೊಂಡು ವ್ಯಾಕರಣದ ಮಾಹೇಶ್ವರಸೂತ್ರಗಳಲ್ಲಿ ರಾಮನ ಕಥೆ-ಮಹಿಮೆಗಳನ್ನೇ ಹಿಂಡಿ ಹಿಸುಕಿ ತೋರಿಸುವ ಚಿತ್ರಕೂಟದ ರಾಮಭದ್ರಾಚಾರ್ಯಸ್ವಾಮಿಗಳ ಬರೆಹಗಳವರೆಗೆ ನೂರಾರು ಪ್ರಯತ್ನಗಳು ಈಗಲೂ ಚಾಲನೆಯಲ್ಲಿವೆ.
ಹೀಗೆ ಬಗೆಬಗೆಯ ದರ್ಶನಗಳ ಬಣ್ಣ-ವಾಸನೆಗಳು ರಾಮಕಥೆಯನ್ನು ಅಡರಿಕೊಂಡಿದ್ದರೂ ಇತಿಹಾಸ-ಪುರಾಣಗಳಲ್ಲಿ, ಅರ್ವಾಚೀನವಾದ ಎಷ್ಟೆಷ್ಟೋ ಬಗೆಯ ಗೀತೆ-ಉಪನಿಷತ್ತುಗಳಲ್ಲಿ ಮತ್ತು “ಅಧ್ಯಾತ್ಮರಾಮಾಯಣ”-“ಆನಂದರಾಮಾಯಣ”ಗಳಂಥ ವಾಲ್ಮೀಕಿಪ್ರಣೀತವೆಂದು ಸಾರಿಕೊಳ್ಳುವ ಕೃತಿಗಳಲ್ಲಿ ಎದ್ದುಕಾಣುವುದು ಅದ್ವೈತವೇ. ಆದರೆ “ಯೋಗವಾಸಿಷ್ಠ”ವೂ ಸೇರಿದಂತೆ ಇವೆಲ್ಲ ಸ್ಥೂಲಾದ್ವೈತವೆಂದು ಹೇಳಬಹುದಾದ ಜಾಡಿಗೆ ಬರುತ್ತವೆ. ಹಾಗೆಂದ ಮಾತ್ರಕ್ಕೆ ಇಂಥ ರಚನೆಗಳ ತತ್ತ್ವಪ್ರಯೋಜನ ವ್ಯರ್ಥವೆಂದಲ್ಲ. ಲೋಕಸಾಮಾನ್ಯಕ್ಕೆ ತತ್ತ್ವಾಭಿಮುಖತೆಯನ್ನು ರಾಮಕಥೆಯಂಥ ರೋಚಕಮಾಧ್ಯಮದ ಮೂಲಕ ಒದಗಿಸುವಲ್ಲಿ ಇವುಗಳೆಲ್ಲ ಪ್ರಾಂಜಲವಾಗಿ ದುಡಿದಿವೆ. ಅಷ್ಟೇ ಅಲ್ಲದೆ ಸಾಮಾನ್ಯಧರ್ಮಗಳನ್ನು ಸಾಧಿಸುವಲ್ಲಿ, ಸರ್ವದೇವತಾಸಮನ್ವಯವನ್ನು ಮನಗಾಣಿಸುವಲ್ಲಿ, ಅಂಗೀಕಾರಬುದ್ಧಿ ಮತ್ತು ಜೀವನಶ್ರದ್ಧೆಗಳನ್ನು ಬೆಳೆಸುವಲ್ಲಿ ಇವುಗಳ ಯೋಗದಾನ ದೊಡ್ಡದು. ಆದರೆ ಪಾರಮಾರ್ಥಿಕವಾದ ತತ್ತ್ವನಿಶ್ಚಯಕ್ಕೆ ಗೌಡಪಾದ-ಶಂಕರ-ಸುರೇಶ್ವರರೇ ಶರಣ್ಯರು.
ಈ ವಿಭಾಗದಲ್ಲಿ ರಾಮಕ್ಷೇತ್ರಗಳ ಯಾತ್ರೆಯೂ ಒಂದು ಅಂಗ. ಬ್ರಹ್ಮ, ಸ್ಕಾಂದ, ಪಾದ್ಮ ಮುಂತಾದ ಪುರಾಣಗಳಲ್ಲಿ ಕಾಣಸಿಗುವ ಅವೆಷ್ಟೋ ಕ್ಷೇತ್ರಮಾಹಾತ್ಮ್ಯಗಳು ರಾಮಕಥೆಯನ್ನು ಆಶ್ರಯಿಸಿವೆ. ಅಯೋಧ್ಯೆ, ಮಿಥಿಲೆ, ಚಿತ್ರಕೂಟ, ನಂದಿಗ್ರಾಮ, ಭರದ್ವಾಜಾಶ್ರಮ, ಪಂಚವಟಿ, ಕಿಷ್ಕಿಂಧೆ, ದರ್ಭಶಯನ, ರಾಮೇಶ್ವರ ಮುಂತಾದ ರಾಮಕಥೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲದೆ, ಕಾಶಿ, ಗಯೆ, ಮಥುರಾ, ಬದರಿ, ಕೇದಾರಗಳಂಥವೂ ಇವುಗಳ ತೆಕ್ಕೆಗೆ ಬಂದಿವೆ. ಇದೇ ಜಾಡನ್ನು ತೀರ್ಥಗಳಲ್ಲಿಯೂ ಕಾಣಬಹುದು. ತಮಸಾ, ಸರಯೂ, ಗಂಗಾ, ಯಮುನಾ, ಗೋದಾವರೀ ಮುಂತಾದ ನದಿಗಳು ರಾಮಭಕ್ತರ ಆರಾಧನೆಗೆ ಪಾತ್ರವಾಗಿವೆ, ರಾಮನ ಆರಾಧನೆಗೂ ಒದಗಿಬಂದಿವೆ.
ಇದನ್ನೆಲ್ಲ ಗಮನಿಸಿದಾಗ ಈ ಮೂರು ಪ್ರಕಾರಗಳ ಪೈಕಿ ಮೂರನೆಯದಾದ ಭಕ್ತ-ಮತಾಚಾರ್ಯರ ಶ್ರದ್ಧೆ ಮತ್ತು ಅಭಿನಿವೇಶಗಳೇ ಅನೇಕಪ್ರಕಾರವಾದ ವ್ಯಾಪ್ತಿಯನ್ನು ಹೊಂದಿವೆಯೆಂದು ತಿಳಿಯುತ್ತದೆ. ಆದರೆ ಲೋಕಸಾಮಾನ್ಯದ ಊಹೆ, ಹಾರೈಕೆ ಮತ್ತು ನಂಬಿಕೆಗಳು ಇವುಗಳ ಜೊತೆ ಬೆರೆತು ಪರಸ್ಪರ ಪ್ರಭಾವಿಸಿಕೊಂಡು ಭಾರತ ಮತ್ತು ಬೃಹದ್ಭಾರತಗಳ ಸಾಂಸ್ಕೃತಿಕಜೀವನವನ್ನು ರೂಪಿಸುವಲ್ಲಿ ಪ್ರಧಾನಪಾತ್ರ ವಹಿಸಿವೆಯೆಂದರೆ ತಪ್ಪಾಗದು.