ಕವಿ
ಆಧುನಿಕ ಕವಿಗೆ ತನ್ನ ಮತ್ತು ಇತರ ನೆಲೆಗಳ ಸಂಪ್ರದಾಯದ ಅರಿವು, ಮತಾಚಾರಗಳಲ್ಲಿ ಸೀಮಿತತೆಯನ್ನು ಮೀರುವ ದೃಷ್ಟಿ, ದರ್ಶನಶಾಸ್ತ್ರ ಮತ್ತು ಮನಃಶಾಸ್ತ್ರದ ಪರಿಜ್ಞಾನ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳ ತಿಳಿವು, ವಿಜ್ಞಾನದ ಆವಿಷ್ಕಾರಗಳ ಬಗೆಗೆ ಆಸ್ಥೆ ಮತ್ತು ರಾಷ್ಟ್ರವನ್ನು ಕುರಿತು ಒಲವುಗಳು ಇರಬೇಕೆಂದು ಕುವೆಂಪು ಹಲವು ಬರೆಹಗಳಲ್ಲಿ ಪ್ರತಿಪಾದಿಸುತ್ತಾರೆ.[1] ಇದು ಬಹಳ ಆರೋಗ್ಯಕರವಾದ ನಿಲವು. ಇಂಥದ್ದೇ ನಿಲವನ್ನು ಸಾವಿರ ವರ್ಷಗಳಿಗೂ ಮುನ್ನ ಕಾಶ್ಮೀರದಲ್ಲಿದ್ದ ಕವಿ-ಆಲಂಕಾರಿಕ ಕ್ಷೇಮೇಂದ್ರ ವ್ಯಕ್ತಪಡಿಸಿದ್ದಾನೆ. ಅವನು ಇನ್ನೂ ಮುಂದೆ ಹೋಗಿ ಕವಿಯಾಗಬಯಸುವವನು ಗಮನಿಸಿಕೊಳ್ಳಬೇಕಾದ ನೂರು ವಿಷಯಗಳ ಪಟ್ಟಿಯನ್ನೇ ನೀಡಿದ್ದಾನೆ.[2]
ಪುಟ್ಟಪ್ಪನವರು ಒಳ್ಳೆಯ ಕವಿಗೂ ಬರಿಯ ಪದ್ಯನಿರ್ಮಾತೃವಿಗೂ ಇರುವ ಭೇದವನ್ನು ದೃಷ್ಟಾಂತದ ಮೂಲಕ ಮನಮುಟ್ಟುವಂತೆ ತೋರ್ಪಡಿಸಿದ್ದಾರೆ: “ಕವಿಯ ಗಮ್ಯಸ್ಥಾನ ಕಲೆಯ ರಸಾನಂದ; ಪದ್ಯರಚಕನದು ಕಮ್ಮಾರ-ಪ್ರಯೋಜನ. ಕವಿತೆ ನೃತ್ಯದಂತೆ; ಪದ್ಯರಚನೆ ಪ್ರಯಾಣದಂತೆ. ನೃತ್ಯ ಮಾಡುವಾಗ ನಟನು ಬೇಕಾದಷ್ಟು ಶಕ್ತಿಯನ್ನು ಉಪಯೋಗಿಸುವವನಾದರೂ, ಹೆಜ್ಜೆಗಳನ್ನು ಅನೇಕ ಸಾರಿ ಎತ್ತಿ ಇಡುವವನಾದರೂ ಇದ್ದಲ್ಲಿಯೆ ಇರುತ್ತಾನೆ. ಅವನು ಯಾವುದಾದರೂ ಗೊತ್ತಾದ ಸ್ಥಳವನ್ನು ಸೇರಲೆಳಸುವ ಪ್ರಯಾಣಿಕನಲ್ಲ. ಆನಂದವೇ ನೃತ್ಯದ ಲಕ್ಷ್ಯ. ಪ್ರಯಾಣಿಕನಾದರೋ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಲಾಭಕ್ಕಾಗಿಯೇ ಇಡುತ್ತಾನೆ.”[3] ಕಲಾನಿರ್ಮಾಣವೂ ಸೇರಿದಂತೆ ಮಾನವನ ಎಲ್ಲ ಬಗೆಯ ತೊಡಗಿಕೊಳ್ಳುವಿಕೆಯಲ್ಲಿಯೂ ಎರಡು ಆಯಾಮಗಳು ಇರುತ್ತವೆ: ಒಂದು ಅವ್ಯಾಜ ಮತ್ತೊಂದು ಪ್ರಯೋಜನಯೋಜಿತ. ಇಲ್ಲಿ ಕುವೆಂಪು ಹೇಳಿರುವಂತೆ ಕವಿಯದು ಅವ್ಯಾಜ ಆಸಕ್ತಿ; ಪದ್ಯರಚಕನದು ಪ್ರಯೋಜನಲಾಭದೃಷ್ಟಿಯದು. ಕವಿ ಪದ್ಯರಚಕನೂ ಆಗಬಲ್ಲ; ಆದರೆ ಎಲ್ಲ ಪದ್ಯರಚಕರೂ ಕವಿಗಳಲ್ಲ. ಪದ್ಯರಚಕ ಎಂಬಲ್ಲಿ ಕೌಶಲಪ್ರಧಾನವಾದ ರಚನೆಗಳಲ್ಲಿ ಹೆಚ್ಚಿನ ತಾತ್ಪರ್ಯವುಳ್ಳವನು ಎಂಬ ಅಭಿಪ್ರಾಯವಿದೆ. ಕವಿಯಾದರೋ ರಸಕ್ಕೆ ನಿಷ್ಠವಾಗಿ ದಿಟವಾದ ಕಲೆಯನ್ನು ಸೃಜಿಸಲೆಳಸುವವನು. ಈ ಹಿನ್ನೆಲೆಯಲ್ಲಿ ಕುವೆಂಪು ಪದ್ಯರಚಕನಿಗಿಂತ ಕವಿ ಮಿಗಿಲಾದವನೆಂದು ನಿರೂಪಿಸಿರುವುದು ಅತ್ಯಂತ ಯುಕ್ತ.
ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಸ್ತ್ರೀಯರಿಗೆ ಸಮುಚಿತ ಸ್ಥಾನ ದೊರೆತಿಲ್ಲ; ಅಲ್ಲಿ ಚಿತ್ರಿತವಾದ ಸ್ತ್ರೀಪಾತ್ರಗಳು ಗಂಡಸರಿಂದ ಸೃಷ್ಟವಾದುವು; ಹೆಣ್ಣಿನ ನಿಜವಾದ ಸ್ವಭಾವ-ವರ್ತನೆಗಳೂ ಆಶೆ-ಆಕಾಂಕ್ಷೆಗಳೂ ಅಲ್ಲಿ ಕಂಡರಣೆಗೊಂಡಿಲ್ಲ; ಕವಯಿತ್ರಿಯರು ಹೆಚ್ಚು ಮಂದಿ ಇರಲೇ ಇಲ್ಲ - ಎಂಬೀ ಬಗೆಯ ಆಕ್ಷೇಪಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಇದಕ್ಕೆ ಪುಟ್ಟಪ್ಪನವರ ಉತ್ತರ ಹೀಗಿದೆ: “ಕಾವ್ಯಗಳನ್ನೆಲ್ಲ ಗಂಡಸರು ಬರೆದಿದ್ದಾರೆ; ಅಲ್ಲಿ ಬರುವ ಹಿರಿಯ ಹೆಣ್ಣುಗಳೆಲ್ಲ ಅವರ ಕೈಗಾರಿಕೆ; ಸೀತೆ, ಸಾವಿತ್ರಿ, ದಮಯಂತಿ, ಮಹಾಶ್ವೇತೆಯರೆಲ್ಲ ಪುರುಷಹೃದಯದ ಆಶಾಸೂಚಿಗಳೇ ಹೊರತು ಸ್ತ್ರೀಹೃದಯದ ವಿಷಯಸೂಚಿಗಳಲ್ಲ. ಸ್ತ್ರೀಯರೇ ಕಾವ್ಯಗಳನ್ನು ಬರೆದಿದ್ದ ಪಕ್ಷದಲ್ಲಿ ಅಥವಾ ಬರೆಯುವ ಪಕ್ಷದಲ್ಲಿ ಕಥಾನಾಯಿಕೆಯರ ರೀತಿ ಬೇರೆಯಾಗುತ್ತಿತ್ತು ... ಇಂತಹ ಟೀಕೆಯಲ್ಲಿ ಸ್ವಲ್ಪ ಮಟ್ಟಿಗೆ ಸತ್ಯವಿರಬಹುದಾದರೂ ಶ್ರೇಯಸ್ಸಿನ ದೃಷ್ಟಿಯಿಂದ ಅದು ಅಪ್ರಕೃತ.”[4] ಇದು ನಿಜಕ್ಕೂ ಪ್ರಬುದ್ಧವಾದ ನಿಲವು. ಭಾವಗಳು ಲಿಂಗಾತೀತವೆಂದ ಮೇಲೆ ಅವುಗಳನ್ನು ಉಪಾದಾನಸಾಮಗ್ರಿಯಾಗಿ ಹೊಂದಿದ ಕಾವ್ಯದ ಉದ್ದೇಶ-ಪರಿಣಾಮಗಳ ವಿಷಯದಲ್ಲಿ ಸ್ತ್ರೀಪುರುಷಪ್ರಸ್ತಾವ ಗೌಣವಾಗುತ್ತದೆ. ಇದನ್ನೇ ಕುವೆಂಪು “ಶ್ರೇಯಸ್ಸಿನ ದೃಷ್ಟಿಯಿಂದ ಅಪ್ರಕೃತ” ಎಂದಿರುವುದು. ಕಾವ್ಯದಲ್ಲಿ ರಸವೇ ಶ್ರೇಯಸ್ಸು. ರಸದ ಅಳತೆಯಲ್ಲಿ ಉತ್ತಮ ಕವಿಯ ಹಾಗೂ ಉತ್ತಮ ಕವಯಿತ್ರಿಯ ರಚನೆಗಳಲ್ಲಿ ಯಾವ ಭೇದವೂ ಇಲ್ಲ. ಇನ್ನು ರಚನಾಕ್ರಮದಲ್ಲಿರಬಹುದಾದ ವ್ಯತ್ಯಾಸಗಳನ್ನು ಯಾರೂ ಅಲ್ಲಗಳೆಯರು. ಇದು ಮನೋಧರ್ಮದಿಂದ ಒಡಮೂಡುವ ಶೈಲಿಗೆ ಸಂಬಂಧಿಸಿದ ಸಂಗತಿಯಲ್ಲದೆ ಲಿಂಗಕ್ಕೆ ಸಂಬಂಧಿಸಿದುದಲ್ಲ.
ಕುವೆಂಪು ಕವಿಯನ್ನು ಬಿಡಿಯಾದ ವ್ಯಕ್ತಿಯಾಗಿ ಮಾತ್ರ ಕಾಣದೆ ಪರಂಪರೆಯೊಂದರ ಪ್ರಮುಖ ಪ್ರತಿನಿಧಿಯಾಗಿಯೂ ಗಣಿಸುತ್ತಾರೆ. ಮನೋವಿಜ್ಞಾನಿ ಸಿ. ಜೆ. ಯುಂಗ್‌ನ ಕಾಣ್ಕೆಯ ಬೆಳಕಿನಲ್ಲಿ ಕವಿಗೆ ವ್ಯಷ್ಟಿಮನಸ್ಸಿರುವಂತೆ ಆತನ ಸಮಾಜಕ್ಕೆ ಸಮಷ್ಟಿಮನಸ್ಸೊಂದು ಇರುತ್ತದೆ ಎಂದು ವಿವರಿಸುತ್ತಾರೆ. ಇದನ್ನು ಈಟಿಯ ಪ್ರತೀಕವನ್ನು ಬಳಸಿ ಮನಮುಟ್ಟುವಂತೆ ವಿಶದೀಕರಿಸುತ್ತಾರೆ. ಆ ಪ್ರಕಾರ ಸಮಾಜದ ಸಮಷ್ಟಿಮನಸ್ಸು ಈಟಿಯಾದರೆ ಕವಿಯ ವ್ಯಷ್ಟಿಮನಸ್ಸು ಅದರ ಮೊನೆ. “ಈಟಿಯೆಲ್ಲವೂ ಅದರ ಮೊನೆಯಲ್ಲ; ಮೊನೆಯಿಲ್ಲದಿದ್ದರೆ ಈಟಿಯಾಗುವುದೂ ಇಲ್ಲ. ಮೊನೆ ಮಾತ್ರಕ್ಕೆ ಗುರಿ ಭೇದಿಸುವ ಶಕ್ತಿ ಬರುವುದಿಲ್ಲ. ಅದಕ್ಕೆ ಈಟಿಯ ಗಾತ್ರದ ಸಹಾಯ ಬೇಕು. ಹಾಗೆಯೇ ಮೊನೆಯಿಲ್ಲದಿದ್ದರೆ ಈಟಿಯ ಗಾತ್ರದಿಂದೇನು ಪ್ರಯೋಜನ? ಈಟಿಯಲ್ಲಿ ಮೊನೆಗೆ ಮುಖ್ಯ ಪಾತ್ರ ಸಿಕ್ಕಿರುವುದು ಅದರ ಪ್ರಧಾನ ಗಾತ್ರದಿಂದಲ್ಲ, ಅದರ ಕರ್ತವ್ಯಮಹಿಮೆಯಿಂದ ... ಜನಮನಸ್ಸು ಕವಿಮನಸ್ಸಿಗೆ ಬೆಂಬಲವಾಗಿರುತ್ತದೆ, ಈಟಿಯ ಮೈ ಅದರ ಮೊನೆಗೆ ಬೆಂಬಲವಾಗಿರುವಂತೆ. ಕವಿಮನಸ್ಸೂ ಜನಮನಸ್ಸಿನ ಪ್ರಗತಿಗೆ ದಾರಿ ಮಾಡಿಕೊಡುತ್ತದೆ, ಈಟಿಯ ಮೊನೆಯಂತೆ.”[5] ಈ ವಿವರಣೆಯು ಪಶ್ಚಿಮದಲ್ಲಿ ಶತಮಾನಗಳುದ್ದಕ್ಕೂ ಬೆಳೆಯುತ್ತ ಬಂದಿರುವ ಕವಿ ಮತ್ತು ಪರಂಪರೆಗಳ ಸಂಬಂಧವನ್ನು ಕುರಿತ ಚರ್ಚೆಯನ್ನು ನಿಲುಗಡೆಗೆ ತರಬಲ್ಲುದು. ಇಲ್ಲಿಯ ಆಲೋಚನೆ ಪ್ರಬುದ್ಧವಾಗಿದೆ, ದೃಷ್ಟಾಂತದ ಮೂಲಕ ವಿವರಿಸುವ ಪರಿ ಕವಿಸಹಜವಾಗಿದೆ, ಅದನ್ನು ಬಿಂದುಮಾತ್ರವಾಗಿ ಪ್ರಸ್ತಾವಿಸದೆ ಸಾವಯವ ಚಿತ್ರವಾಗಿ ಬೆಳೆಸಿರುವುದು ಚಿಂತನೆಯ ಸಮಗ್ರತೆಯನ್ನೂ ಕಲ್ಪನೆಯ ಸಾಂಗತ್ಯವನ್ನೂ ತೋರಿಸುತ್ತಿದೆ.
ಇದೇ ಭಾವವನ್ನವರು ಭಂಗ್ಯಂತರದಿಂದ ಬಣ್ಣಿಸುವುದನ್ನು ಇಲ್ಲಿಯೇ ಗಮನಿಸಬಹುದು. ವಿದ್ಯಾರ್ಥಿಕವಿಸಮ್ಮೇಳನದ ಅಧ್ಯಕ್ಷರಾಗಿ ಕುವೆಂಪು ಮಾಡಿದ ಭಾಷಣವೊಂದರಲ್ಲಿ ಹಳತು-ಹೊಸತುಗಳ ಪರಸ್ಪರತೆಯತ್ತ ಗಮನ ಸೆಳೆದಿದ್ದಾರೆ; ಉದಯೋನ್ಮುಖ ಕವಿಗಳು ಅನುಸರಿಸಬೇಕಾದ ಮಾರ್ಗವನ್ನೂ ತೋರಿಸಿದ್ದಾರೆ: “ಹೊಸತೆಂದರೆ ಏನು? ಹಳೆಯದರ ನಿಷೇಧವಲ್ಲ, ಹಳತಿಲ್ಲದ ಹೊಸತು ಸೃಷ್ಟಿಯಲ್ಲಿ ಎಲ್ಲಾದರೂ ಉಂಟೆ? ... ನಾವು ಹಳೆಯದನ್ನು ಹಳಿದು ಕ್ಷಣಕಾಲವೂ ಬದುಕಲಾರೆವು ... ತರುಣ ಕವಿಯೆ! ವಿನಯದಿಂದ ಶಿಷ್ಯನಂತೆ ಮುಂದೆ ಹೋಗು, ಹೆಮ್ಮೆಯಿಂದ ಆಚಾರ್ಯನಂತೆ ನಟಿಸಿ ದುಡುಕದಿರು.”[6] “ಹೊಸತೆಂಬುದು ಹಳೆಯದನ್ನು ತ್ಯಜಿಸಿ ನಿಲ್ಲುವುದೆಂದು ಯಾರೂ ತಿಳಿಯಬಾರದು ... ಸನಾತನದ ಸಾರವನ್ನು ಹೀರಿಕೊಂಡೇ ನೂತನ ಬೆಳೆಯಬೇಕು. ವರ್ತಮಾನಕಾಲ ಭೂತಕಾಲದ ನೆಲೆಗಟ್ಟಿನ ಮೇಲೆ ನಿಂತಿದೆ. ಇಂದು ನಿನ್ನೆಗೆ ಋಣಿ, ನಾಳೆ ಇಂದಿಗೆ ಋಣಿ. ಒಂದನ್ನೊಂದು ಎಂದಿಗೂ ತ್ಯಜಿಸಲಾರವು. ಹಾಗೆಯೇ ಇಂದಿನ ಸಾಹಿತ್ಯ ಹಿಂದಿನ ಸಾಹಿತ್ಯದ ಪ್ರೇರಣೆಯನ್ನು ಎಷ್ಟು ಮಾತ್ರಕ್ಕೂ ಅಲ್ಲಗಳೆಯುವುದಿಲ್ಲ.”[7]
ಇನ್ನೊಂದೆಡೆ ಯಾವ ದೇಶದ ಕವಿಗೇ ಆಗಲಿ, ತನ್ನ ನೆಲದ ಪ್ರಾಚೀನ ಸಂಸ್ಕೃತಿಯ ಪರಿಜ್ಞಾನ ಆವಶ್ಯಕವೆಂದು ನುಡಿದಿದ್ದಾರೆ. ಇಲ್ಲಿಯೇ “ಭಾರತೀಯನಾದ ಕವಿಗೆ ವೇದ, ಉಪನಿಷತ್ತು, ಭಗವದ್ಗೀತೆ, ಷಡ್ದರ್ಶನಗಳು, ರಾಮಾಯಣ ಮಹಾಭಾರತಾದಿ ಮಹಾಕಾವ್ಯಗಳು, ಪುರಾಣಗಳು - ಇತ್ಯಾದಿ ಭಾರತೀಯ ದರ್ಶನ ಸಾಹಿತ್ಯಗಳು ಆತನ ಸಂಸ್ಕಾರಕೋಶವನ್ನು ಸಿದ್ಧಗೊಳಿಸುವ ಭಿತ್ತಿಯಾಗಿ ಪರಿಣಮಿಸುತ್ತವೆ” ಎಂಬ ಬೆಲೆಯುಳ್ಳ ಮಾತುಗಳನ್ನಾಡಿದ್ದಾರೆ.[8]
ಪರಂಪರೆಯಿಂದ ಸಿಡಿದೇಳಬೇಕೆಂದು ಹಿರಿಗೊರಲಿನಲ್ಲಿ ಘೋಷಣೆಗಳನ್ನೂ ಭಾಷಣಗಳನ್ನೂ ಮಾಡುವ ನವ್ಯ, ಬಂಡಾಯ ಮುಂತಾದ ಚಳುವಳಿಗಾರರ ನಿಲವು ಕುವೆಂಪು ಅವರದಕ್ಕಿಂತ ತೀರ ಭಿನ್ನವಾದುದು. ಚೋದ್ಯವೆಂದರೆ ಇಂಥ ಚಳುವಳಿಗಾರರು ಪುಟ್ಟಪ್ಪನವರನ್ನು ತಮ್ಮ ತಮ್ಮ ಕ್ರಾಂತಿಗಳ ಮುಂಚೂಣಿಯಲ್ಲಿ ತಾವೇ ನಿಲ್ಲಿಸಿಕೊಂಡಿದ್ದಾರೆ! ಸ್ವಯಂ ಕುವೆಂಪು ಅವರೇ ನವ್ಯರನ್ನು ಕುರಿತು ಕಟುವಾದ ಆಕ್ಷೇಪಗಳನ್ನು ಮಾಡಿದ್ದರೆಂದು ನೆನೆದಾಗ ಈ ಸಂದರ್ಭ ಮತ್ತಷ್ಟು ವಿಕಟವಾಗಿ ತೋರುತ್ತದೆ. ಈ ನಿಟ್ಟಿನ ಅವರ ಮಾತುಗಳನ್ನೇ ಪರಿಕಿಸಬಹುದು: “ನಮ್ಮ ಸಂಸ್ಕೃತಿಯ ಆಳವಿಲ್ಲದ ಅಪಕ್ವಾನುಭವದ ತರುಣರು ಕಾಫ್ಕ, ಕಾಮು, ಸಾರ್ತ್ರೆ, ಕಿರ್ಕೆಗಾರ್ಡ್ ಎಂದೆಲ್ಲ ಹೆಸರು ಹೇಳಿ ಬೆರಗುಗೊಳಿಸಲು ಯತ್ನಿಸುತ್ತಿದ್ದಾರೆ. ಅವಿವೇಕದಿಂದಲೋ ಅಸೂಯೆಯಿಂದಲೋ ಅಜ್ಞಾನದಿಂದಲೋ ನಮ್ಮಲ್ಲಿರುವ ಉತ್ತಮತೆಯನ್ನು ನಿರ್ಲಕ್ಷಿಸಿ, ತಿರಸ್ಕರಿಸಿ ವಿದೇಶೀಯ ಬೇಗಡೆಗೆ ಮಾರುಹೋಗಿದ್ದಾರೆ.”[9] ಒಮ್ಮೆ ತರಗತಿಯಲ್ಲಿ ನವ್ಯರ ಪ್ರಸ್ತಾವ ಬಂದಾಗ ಆವಿಷ್ಟರೆಂಬಂತೆ ವಾಚಾಮಗೋಚರವಾಗಿ ತೆಗಳತೊಡಗಿದ ಕುವೆಂಪು ಸರಿಯಾದ ಬೈಗುಳಗಳು ತತ್‌ಕ್ಷಣಕ್ಕೆ ಸಿಗದೆ ಒದ್ದಾಡಿದ್ದನ್ನು ಕೆ. ವಿ. ಸುಬ್ಬಣ್ಣ ನೆನೆದಿದ್ದಾರೆ.[10]
ಇಲ್ಲಿ ಮತ್ತೊಂದು ವಿಷಯವನ್ನು ಮುಕ್ತವಾಗಿ ಚರ್ಚಿಸಬೇಕಿದೆ. ಮೇಲೆ ಕಂಡಂತೆ ಹಳತು-ಹೊಸತುಗಳ ನಡುವೆ ಸೊಗಸಾದ ಸಮನ್ವಯವನ್ನು ಕಲ್ಪಿಸಿ, ಅವಿಚಾರಿತವಾಗಿ ಪರಂಪರೆಯಲ್ಲಿ ಬಿರುಕು ಮೂಡಿಸುವ ಯೋಜನೆಗಳನ್ನು ಖಂಡಿಸಿದ ಕುವೆಂಪು ಇವಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ತಾವೇ ಮಂಡಿಸಿದ್ದಾರೆ. ವಿಚಾರಕ್ರಾಂತಿ, ನಿರಂಕುಶಮತಿ ಮೊದಲಾದ ಪರಿಕಲ್ಪನೆಗಳನ್ನು ಕಟ್ಟುವ ಹುರುಪಿನಲ್ಲಿ ಅವರು ಕೆಲವೆಡೆ ಸಂಪ್ರದಾಯವೆಲ್ಲವೂ ಕಂದಾಚಾರ ಎಂಬ ರೀತಿಯ ಬೀಸುಮಾತುಗಳನ್ನು ಆಡಿದ್ದಾರೆ. ನಾವು ಮೊದಲೇ ಕಂಡಂತೆ ಕುವೆಂಪು ಅವರದು ಪ್ರಧಾನವಾಗಿ ಕವಿಮನಸ್ಸು; ಅದರಲ್ಲಿ ಆವೇಶಗಳೂ ಏರಿಳಿತಗಳೂ ಸಹಜ. ಇವುಗಳ ಜೊತೆ ಆಗ್ರಹ-ಅಭಿನಿವೇಶಗಳೂ ಸೇರಿಕೊಂಡಾಗ ತೊಡಕು ತಲೆಯೆತ್ತುತ್ತದೆ. ಪುಟ್ಟಪ್ಪನವರ ಜೀವಿತದ ಉತ್ತರಾರ್ಧದಲ್ಲಿ ಇಂಥ ಆಗ್ರಹ ಮೇರೆ ಮೀರಿ ಮೂಡಿದುದೊಂದು ವಿಪರ್ಯಾಸ. ಈ ಹಂತದ ಅವರ ಇನ್ನಿತರ ಕಾವ್ಯಮೀಮಾಂಸಾತ್ಮಕ ಆಲೋಚನೆಗಳೂ ಹಳಿತಪ್ಪಿರುವುದನ್ನು ಗುರುತಿಸಬಹುದು. ಈ ಬಗೆಯ ಪ್ರಸಂಗಗಳಲ್ಲಿ ಕವಿಯಾಗಿ, ವಿಮರ್ಶಕರಾಗಿ, ಸಮಾಜಸುಧಾರಕರಾಗಿ ಅವರು ನಡಸಿದ ಕೆಲಸಗಳನ್ನು ಪ್ರತ್ಯೇಕವಾಗಿ ವಿಭಜಿಸಿ ಬೆಲೆಕಟ್ಟುವುದು ಯುಕ್ತ. ಒಬ್ಬ ವ್ಯಕ್ತಿಯ ಎಲ್ಲ ಕೆಲಸಗಳಲ್ಲಿಯೂ ಆತನ ವ್ಯಕ್ತಿತ್ವ ಅಚ್ಚೊತ್ತಿರುತ್ತದೆ, ನಿಜ; ಆದರೆ ಪರಸ್ಪರ ಋಣಾತ್ಮಕವಾಗಿ ಪರಿಣಮಿಸುವ ಕೃತ್ಯಗಳನ್ನು ಗಮನಿಸುವಾಗ ಎಲ್ಲವನ್ನೂ ಸಾರಾಸಗಟಾಗಿ ತೆಗೆದುಹಾಕದೆ ಒಂದೊಂದನ್ನೂ ಅದರ ನೆಲೆಯಲ್ಲಿಯೇ ವಿವೇಚಿಸುವುದು ಲೇಸು.
ಇದೇ ಸಾಲಿಗೆ ಕವಿಯನ್ನು ಕುರಿತ ಅವರ ಅತ್ಯುಕ್ತಿ-ಅತಿಶಯೋಕ್ತಿಗಳೂ ಸೇರುತ್ತವೆ. ಒಂದು ಕಡೆ ಕವಿಯನ್ನು ಪರಂಪರೆಯ ಬೆಂಬಲವಿಲ್ಲದೆ ಬಾಳಲಾಗದವನೆಂದೂ ಪರಂಪರೆಯ ಉತ್ತಮ ಪ್ರತಿನಿಧಿಯೆಂದೂ ಗಣಿಸುವ ಕುವೆಂಪು ಬೇರೆಯ ಸಂದರ್ಭಗಳಲ್ಲಿ ಆತನನ್ನು ರಸಋಷಿ ಎಂದು, ಕವನಗಳೇ ಮಂತ್ರಗಳೆಂದು ಕೊಂಡಾಡಿದ್ದಾರೆ.[11] ಇನ್ನೂ ಮುಂದೆ ಸಾಗಿ, “ಕವಿಗರಸುಗಿರಸುಗಳ ಋಣವಿಲ್ಲ! ಅವನಗ್ನಿಮುಖಿ! ಪ್ರಳಯಶಿಖಿ!”[12] ಎಂದು ಉದ್ಗರಿಸಿದ್ದಾರೆ. ಇಂಥ ಉದ್ಗಾರಗಳು ನೂರಾರಿವೆ.[13] ಇವು ಕಾವ್ಯದ ಸಾಲುಗಳಾಗಿ ಚೆಲುವಾಗಿ ಕಂಡರೂ ವೈಚಾರಿಕ ವಾದಗಳಲ್ಲಿ ಬಳಕೆಯಾದಾಗ ಅಪಾಯಕರವಾಗುತ್ತವೆ. ಪ್ರತಿಯೊಂದು ವೃತ್ತಿ, ಸಮುದಾಯ, ಜನವರ್ಗದವರೂ ತಮ್ಮ ತಮ್ಮ ಕೆಲಸಗಳ ಬಗೆಗೆ ಹೆಮ್ಮೆ ಪಡುತ್ತಾರೆ, ಅವನ್ನು ಹೊಗಳಿಕೊಳ್ಳುತ್ತಾರೆ. ಇಂಥ ಅಭಿಮಾನ ಸಹಜ, ಸಹ್ಯ, ಕೆಲವೊಮ್ಮೆ ಸ್ವಾಗತಾರ್ಹ ಕೂಡ. ಆದರೆ ಅಭಿಮಾನವು ಅಹಂಕಾರದ ಮಟ್ಟಕ್ಕೆ ಮುಟ್ಟಿದಾಗ, ಮತ್ತೊಬ್ಬರ ಅಭಿಮಾನಕ್ಕೆ ಪೆಟ್ಟು ಕೊಡುವಂತೆ ಆದಾಗ ಕ್ಷಮ್ಯವೆನಿಸದು. ಕ್ರೀಡಾಳುವಿನ ಕಾಯಪಟುತ್ವದಂತೆ, ವಿಜ್ಞಾನಿಯ ಬುದ್ಧಿಬಲದಂತೆ ತನ್ನ ಕಲ್ಪನಾಶಕ್ತಿಯೂ ಅಭಿವ್ಯಕ್ತಿಸಾಮರ್ಥ್ಯವೂ ವಿಶಿಷ್ಟವಾದರೂ ಸಾಮಾನ್ಯವಾದ ಗುಣವೆಂದು ಕವಿಯು ಮನಗಾಣಬೇಕು. ಈ ಸಂಗತಿಯನ್ನು ತಾತ್ತ್ವಿಕ ಸ್ತರದಲ್ಲಿ ಆಲೋಚಿಸಿದರೆ ಹೆಚ್ಚಿನ ಬೆಳಕು ಲಭಿಸೀತು - ಸ್ವಧರ್ಮಕ್ಕೆ ಅನುಗುಣವಾದ ಕರ್ಮವನ್ನು ನಡಸಲು ಯಾವೆಲ್ಲ ಮಾನಸಿಕ, ವಾಚಿಕ, ದೈಹಿಕ ಗುಣಗಳು ಸಹಕರಿಸುವುವೋ ಅವನ್ನು ಸಾಧ್ಯವಾದಷ್ಟು ಊರ್ಜಿತವಾಗಿಸಿಕೊಂಡು ಸ್ವಪರಹಿತವನ್ನು ಸಾಧಿಸಲೆಳಸಬೇಕು. ಇದು ಶ್ರೇಯಃಸಾಧನದ ಮಾರ್ಗ. ಸ್ವಧರ್ಮದ ಅಭಿಜ್ಞಾನ-ಅನುಸಂಧಾನಗಳಲ್ಲಿ, ಸ್ವಾಭಾವಿಕ ಹಾಗೂ ಆರ್ಜಿತ ಶಕ್ತಿಗಳಲ್ಲಿ ಮೇಲು-ಕೀಳುಗಳಿರುತ್ತವೆಯೇ ಹೊರತು ವರ್ಗ-ವೃತ್ತಿಗಳಲ್ಲಲ್ಲ. ಜಗತ್ತಿಗೆ ಎಲ್ಲರೂ ಬೇಕು, ಎಲ್ಲವೂ ಬೇಕು. ಕವಿಕರ್ಮವನ್ನು ಕುರಿತ ಕುವೆಂಪು ಅವರ ಅವಾಸ್ತವಿಕ ಆಲೋಚನೆಗಳಿಗೆ ಅವರ ರಮ್ಯ ಮನೋಧರ್ಮವು ಮಾತ್ರವಲ್ಲದೆ ತಾರುಣ್ಯದಲ್ಲಿ ಅವರು ಆರಾಧಿಸಿ ಓದಿಕೊಂಡ ಪಾಶ್ಚಾತ್ತ್ಯ ರೊಮ್ಯಾಂಟಿಕ್ ಕವಿಗಳ ಪ್ರಭಾವವೂ ಕಾರಣವೆನ್ನಬೇಕು. “ಕವಿಗಳೇ ಜಗತ್ತಿನ ಅನಧಿಕೃತ ಶಾಸಕರು” ಎಂದು ಸಾರಿದ್ದ ಶೆಲ್ಲಿಯ ಪ್ರಬಂಧವೊಂದನ್ನು ಅವರು ೧೯೩೦ರಷ್ಟು ಹಿಂದೆಯೇ “ಕವಿತೆಯ ಸಮರ್ಥನೆ” ಎಂಬ ಹೆಸರಿನಲ್ಲಿ ಅನುವಾದಿಸಿದ್ದರೆಂಬ ತಥ್ಯ ಮೇಲಣ ನಿಗಮನವನ್ನು ಪೋಷಿಸುತ್ತದೆ.
[1] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೭, ೪೦-೪೬
[2] ನೋಡಿ: ಕವಿಕಂಠಾಭರಣ, ೨.೩-೨೨
[3] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೦
[4] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೭೧
[5] ಕುವೆಂಪು ಸಮಗ್ರ ಗದ್ಯ, ಸಂ ೧, ಪು. ೪೦-೪೧
[6] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೭, ೮
[7] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೯
[8] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೪೨೯
[9] ಕುವೆಂಪು ಸಮಗ್ರ ಗದ್ಯ, ಸಂ. ೨, ಪು. ೪೫೫
[10] ಕುವೆಂಪುಗೆ ಪುಟ್ಟ ಕನ್ನಡಿ, ಪು. ೪೭
[11] ಕುವೆಂಪು ಸಮಗ್ರ ಕಾವ್ಯ, ಸಂ. ೧ (ಕೃತ್ತಿಕೆ), ಪು. ೪೬೦
[12] ಕುವೆಂಪು ಸಮಗ್ರ ಕಾವ್ಯ, ಸಂ. ೧ (ಪಾಂಚಜನ್ಯ), ಪು. ೧೪೧
[13] ಕುವೆಂಪು ಹಲವೆಡೆ ವಿನಯದ ಸೋಗಿನಲ್ಲಿ ತಮ್ಮನ್ನು ತಾವೇ ವೈಭವಕರಿಸಿಕೊಂಡಿದ್ದಾರೆ. ಈ ಭಾವದ ಪರಾಕಾಷ್ಠೆಯನ್ನು ಅವರದೇ ಹೆಸರಿನ ಕವಿತೆಯ ಕೆಲವು ಸಾಲುಗಳಲ್ಲಿ ಕಾಣಬಹುದು:
ವಿಧಿಯ ಮನಸು ಕಡೆದ ಕನಸು
ಕಾಣ್ಬ ಕಣಸೆ, ಕಾಣ್: ಕುವೆಂಪು!
ಭಕ್ತಿಯಡಿಯ ಹುಡಿ - ಕುವೆಂಪು!
ಗುರುಹಸ್ತದ ಕಿಡಿ - ಕುವೆಂಪು!
ನುಡಿರಾಣಿಯ ಗುಡಿ - ಕುವೆಂಪು!
ಸಿರಿಗನ್ನಡ ಮುಡಿ - ಕುವೆಂಪು!
ನೋಡಿ: ಕುವೆಂಪು ಸಮಗ್ರ ಕಾವ್ಯ, ಸಂ. ೨ (ಕದರಡಕೆ), ಪು. ೩೭೮
To be continued.