ಕಾವ್ಯ
“ಕವಿಯ ರಸಾನುಭವದ ಅನುಭಾವವೇ ಕಾವ್ಯ”[1] - ಇದು ಪುಟ್ಟಪ್ಪನವರ ಕಾವ್ಯಲಕ್ಷಣ. ಅನುಭಾವಕ್ಕೆ ‘ಪ್ರದರ್ಶನ’ವೆಂದು ಅರ್ಥ ಮಾಡುವ ಅವರು ಕಾವ್ಯಕ್ರಿಯೆಯ ಕೇಂದ್ರದಲ್ಲಿ ರಸವನ್ನಿರಿಸಿರುವುದು ಸಮುಚಿತವಾಗಿದೆ.
ಕಾವ್ಯವಿರುವುದು ಹೃದಯದಾರಿದ್ರ್ಯವನ್ನು ಪರಿಹರಿಸಲು ಎಂದು ಕುವೆಂಪು ಪ್ರತಿಪಾದಿಸುತ್ತಾರೆ:
“ಲೋಕದಲಿ ದುಃಖವಿರೆ
ಆ ದುಃಖದೊಳಗರ್ಧ ಹೃದಯದಾರಿದ್ರ್ಯದಿಂ
ಬಂದಿಹುದು! ಆ ಹೀನ ದೀನ ದಾರಿದ್ರ್ಯಮಂ
ಪರಿಹರಿಸಿ ‘ದರ್ಶನ’ವ ದಯೆಗೈಯೆ ಕಲೆಯಿಹುದು.”[2]
ಇದು ಬಹಳ ಬೆಲೆಯುಳ್ಳ ಕಾಣ್ಕೆ. ನಾವು ಕಾವ್ಯದಲ್ಲಿ ಸಾಧಾರಣೀಕೃತವಾದ ನಮ್ಮವೇ ಭಾವಗಳನ್ನು ಅವೈಯಕ್ತಿಕ ಸ್ತರದಲ್ಲಿ ಆಸ್ವಾದಿಸುವುದರಿಂದ ಅಲ್ಲಿ ವೈಯಕ್ತಿಕ ರಾಗ-ದ್ವೇಷಗಳ ಮೇಲಾಟವಿರುವುದಿಲ್ಲ. ಈ ಸಂಸ್ಕಾರ ಬಲಗೊಂಡಂತೆಲ್ಲ ಸಹಮಾನವರ ಬಗೆಗೆ ನಮ್ಮಲ್ಲಿ ಸಹಾನುಭೂತಿ ಮೂಡುತ್ತದೆ; ಅದರಿಂದ ಲೋಕಮೈತ್ರಿ ಹೆಚ್ಚುತ್ತದೆ. ಮೈತ್ರಿಯಿದ್ದಲ್ಲಿ ಕಷ್ಟ-ನಷ್ಟಗಳಿಂದ ಒದಗುವ ದುಃಖವೂ ದುರ್ಭರವೆನಿಸದು. ಈ ಪ್ರಕ್ರಿಯೆಯನ್ನು ಡಿ.ವಿ.ಜಿ. ‘ಅಪ್ರತ್ಯಕ್ಷ ಹೃದಯಪರಿವರ್ತನೆ’ ಎಂದು ಹೆಸರಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಕುವೆಂಪು “ಅನುಭವಿಸಿ ಹೇಳಿದುದೆಲ್ಲ ಸಾಹಿತ್ಯ. ಉಳಿದುದೆಲ್ಲ ವರದಿ”[3] ಎಂಬ ಸಾರೋಕ್ತಿಯನ್ನು ಸಾರಿದ್ದಾರೆ. ಅವರ ವಾಙ್ಮಯದಲ್ಲಿ ಇಂಥ ಅರ್ಥಪೂರ್ಣ ಸದುಕ್ತಿಗಳು ಸಾವಿರಾರು.
ಕಾವ್ಯದ ಬಗೆಗೆ ಅಪಾರ ಆದರವಿರುವ ಪುಟ್ಟಪ್ಪನವರು ಒಂದೆಡೆ ಹೀಗೆ ಹೇಳಿದ್ದಾರೆ: “...ಸದ್ಯಃಪರವಾದ ನಿರ್ವೃತಿಗೆ ಕಾರಣವಾಗುವ ಕಾವ್ಯಕಲೆಯನ್ನು ‘ಸಾಮಾನ್ಯನ ಯೋಗ’ ಎಂದು ಕರೆದರೆ ತಪ್ಪೇನು?”[4] ಈ ಮಾತು ಅವರ ಗುರುಗಳಿಗೂ ಗುರುಪಂಕ್ತಿಯಲ್ಲಿದ್ದ ಆಚಾರ್ಯ ಎಂ. ಹಿರಿಯಣ್ಣನವರದು.[5] ಇದು ಅಧ್ಯಾತ್ಮದ ಹಿನ್ನೆಲೆಯಲ್ಲಿಯೇ ಕಾವ್ಯವನ್ನು ಕಾಣುವ ಕುವೆಂಪು ಅವರ ಮನಸ್ಸಿಗೆ ಹಿಡಿಸಿರುವುದರಲ್ಲಿ ಅಚ್ಚರಿಯಿಲ್ಲ.
ಅತ್ಯಂತ ಸಂವೇದನಶೀಲನಾದ ಕವಿಯ ಅನುಭವ ಬಹಳ ಸಂಕೀರ್ಣವಾದುದು. ಅದನ್ನು ಕಾವ್ಯವಾಗಿ ರಚಿಸಿದಾಗ ಎಷ್ಟೋ ಅನುಭವಗಳು ಮೊದಲು ತಮಗಿದ್ದ ಪ್ರತ್ಯಗ್ರ ಸ್ವರೂಪವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಎಷ್ಟಾದರೂ ಭಾಷೆ ‘ಒರಟು ಯಾನ’ ಅಲ್ಲವೇ! ಆದರೇನು ಮಾಡುವುದು, ಕವಿ ತನ್ನ ಅನುಭವವನ್ನು ನಿವೇದಿಸದಿರಲಾರ. ಇಂಥ ‘ಉಭಯಸಂಕಟ’ವನ್ನು ಪುಟ್ಟಪ್ಪನವರು ಬಲುಚೆಲುವಾಗಿ ಚಿತ್ರಿಸಿದ್ದಾರೆ:
“ಹೇಳಿದರೆ ಹಾಳಾಗುವುದೊ ಈ ಅನುಭವದ ಸವಿಯು;
ಹೇಳದಿರೆ ತಾಳಲಾರನೊ ಕವಿಯು!
... ... ... ... ...
ಒಲುಮೆಯಪ್ಪುಗೆಯಂತೆ ಎನಲು ಸಾಧಾರಣ;
ಯೋಗಿಯ ಸಮಾಧಿ ಎನೆ ಅತಿ ಅಪೂರ್ವ;
ಕವಿಯ ರಸರತಿ ಎನಲು ಕವಿಗೊರ್ವನಿಗೆ ವೇದ್ಯ;
ಮೃತ್ಯುಮಾಧುರ್ಯಮೆನೆ ಬದುಕಿಹರಿಗರಿದಯ್ಯ!”[6]
ಕಾವ್ಯವು ಲೋಕಕ್ಕೆ ಎಷ್ಟು ಋಣಿ ಎಂಬ ಪ್ರಶ್ನೆಯನ್ನು ಉತ್ತರಿಸುತ್ತ ಒಂದೆಡೆ ಹೀಗೆನ್ನುತ್ತಾರೆ: “ವಿಷಯ, ಭಾವ, ಚಿತ್ರ ಇತ್ಯಾದಿಗಳಿಗೆ ಕವಿಕೃತಿಯಾದ ಕಾವ್ಯವು ಲೋಕವೃತ್ತಕ್ಕೆ ಬಹುಮಟ್ಟಿಗೆ ಋಣಿ, ಚಿತ್ರಕಾರನ ಚಿತ್ರ ಬಣ್ಣಗಳಿಗೆ ಬಹುಮಟ್ಟಿಗೆ ಋಣಿಯಾಗಿರುವಂತೆ. ಆದರೆ ಬರಿಯ ಬಣ್ಣಗಳಿಂದ ಎಂದಿಗೂ ಚಿತ್ರ ಸೃಷ್ಟಿಯಾಗದು - ವರ್ಣಶಿಲ್ಪಿಯ ಪ್ರತಿಭೆ, ಭಾವ, ಕಲ್ಪನೆಗಳು ಆ ಬಣ್ಣಗಳ ಕೈಂಕರ್ಯವನ್ನು ಸ್ವೀಕರಿಸದಿದ್ದರೆ; ಅಂದರೆ ಚಿತ್ರವು ವರ್ಣಗಳಿಗೆ ಋಣಿಯಾದರೂ, ವರ್ಣಗಳಿಂದಲೆ ಅದು ಅಭಿವ್ಯಕ್ತವಾಗಿದ್ದರೂ ಚಿತ್ರಪ್ರಪಂಚವು ವರ್ಣಪ್ರಪಂಚಕ್ಕೆ ಮೀರಿದುದು ... ಅದರಂತೆ ಲೋಕವೃತ್ತದಿಂದಲೇ ಕಾವ್ಯ ಸೃಷ್ಟಿಯಾದರೂ ... ಅವೆರಡೂ ಬೇರೆ ಬೇರೆಯ ಭೂಮಿಕೆಗಳಿಗೆ ಸೇರುತ್ತವೆ.”[7] ಲೋಕ-ಕಾವ್ಯಗಳಿಗೆ ಇರುವ ಸಂಬಂಧವನ್ನೂ ಅವುಗಳ ಪ್ರತ್ಯೇಕತೆಯನ್ನೂ ಈ ವಿವರಣೆ ಚೆನ್ನಾಗಿ ತೋರಿಸಿದೆ. ಜಗದನುಭವದ ಸಂಸ್ಕಾರದಿಂದ ಕವಿಪ್ರಜ್ಞೆ ನವಸುಂದರ ಕವಿತೆಯನ್ನು ಸೃಜಿಸಿದಾಗ ಅದು ಪ್ರತಿಭೆಯೆಂಬ ಹೆಸರನ್ನು ಪಡೆಯುತ್ತದೆ.[8] ಲೋಕವು ಕಾವ್ಯದಲ್ಲಿ ಯಥಾವತ್ತಾಗಿ ಕಾಣದಿರುವುದಕ್ಕೆ ಈ ಪ್ರತಿಭೆಯೇ ಪ್ರಮುಖ ಕಾರಣ. ಆದುದರಿಂದ ಭರತ, ಅಭಿನವಗುಪ್ತ ಮೊದಲಾದ ನಮ್ಮ ಶಾಸ್ತ್ರಕಾರರು ಕಲೆಯನ್ನು ಜಗತ್ತಿನ ಅನುಕರಣ ಎನ್ನದೆ ‘ಅನುಕೀರ್ತನ’ ಎಂದರು.[9]
ಕವಿತೆಯ ಕಾರಣಗಳು
ಭಾರತೀಯ ಆಲಂಕಾರಿಕರು ಪ್ರತಿಭೆ, ವ್ಯುತ್ಪತ್ತಿ ಮತ್ತು ಅಭ್ಯಾಸಗಳನ್ನು ಕಾವ್ಯದ ಕಾರಕಗಳೆಂದು ಪ್ರತಿಪಾದಿಸಿದ್ದಾರೆ. ಕುವೆಂಪು ಇವನ್ನು ಆದರಿಸಿ ಆಧರಿಸಿರುವುದನ್ನು ಮುನ್ನವೇ ಕಂಡಿದ್ದೇವೆ. ಅವರ ಈ ನಿಟ್ಟಿನ ಕೆಲವು ವ್ಯಾಖ್ಯೆಗಳನ್ನೀಗ ಪರಿಶೀಲಿಸಬಹುದು.
“ಪ್ರತಿಭೆಯಲ್ಲಿ ಆಲೋಚನೆ, ಕಲ್ಪನೆ, ಭಾವಗಳು ಐಕ್ಯವಾಗಿವೆ, ಅಖಂಡವಾಗಿವೆ. ಬುದ್ಧಿಭಾವಗಳ ವಿದ್ಯುದಾಲಂಗಿನವೆ ಪ್ರತಿಭೆ”[10] ಎಂಬುದು ಕುವೆಂಪು ಅವರಿತ್ತ ಅದ್ಭುತವಾದ ಲಕ್ಷಣ. ಇದು ಪ್ರತಿಭೆಯ ಆಕೃತಿಯನ್ನೂ ಕಾರ್ಯವಿಧಾನವನ್ನೂ ನಮ್ಮ ಕಣ್ಣುಗಳಿಗೆ ಕಟ್ಟಿಕೊಡುತ್ತದೆ. ಶುದ್ಧಕಲೆಯ ಅನಿವಾರ್ಯ ಕಾರಣವಾದ ಪ್ರತಿಭೆಯಲ್ಲಿ ಭಾವವಲ್ಲದೆ ಬುದ್ಧಿಕಾರ್ಯವೂ ಇರುವುದೆಂದು ಗುರುತಿಸಿಕೊಳ್ಳುವುದೇ ಕಷ್ಟ. ಇದರಲ್ಲಿ ಹೊಸತನ್ನು ಸೃಜಿಸುವ ಆಯಾಮ ಕಲ್ಪನೆಯದ್ದಾದರೆ ಅದನ್ನು ವಾಗರ್ಥಗಳಿಂದ ವ್ಯಂಜಿಸುವ ಹಾಗೂ ಅದರ ಸಾಂಗತ್ಯವನ್ನು ಕಾಪಾಡಿಕೊಳ್ಳುವ ಆಯಾಮ ಆಲೋಚನೆಯದು. ಕಲ್ಪಿಸಿಕೊಳ್ಳಲೂ ಅಭಿವ್ಯಂಜಿಸಲೂ ಬೇಕಾದ ಮೂಲದ್ರವ್ಯವೇ ಭಾವ. ಹೀಗೆ ಪ್ರತಿಭೆಯಲ್ಲಿ ಮೂರು ಘಟಕಗಳಿವೆಯೆಂದು ಪುಟ್ಟಪ್ಪನವರು ಗಮನಿಸಿರುವುದು ಯುಕ್ತವಾಗಿದೆ. ಇಲ್ಲಿ ಸ್ಮೃತಿಯನ್ನೂ ಸೇರಿಸಿಕೊಳ್ಳಬಹುದು. ಇನ್ನು ‘ವಿದ್ಯುದಾಲಿಂಗನ’ ಎಂಬ ಮಾತಿನಲ್ಲಿ ಪ್ರತಿಭೆಯ ವಿನೂತನತೆ, ಸಾದ್ಯಸ್ಕ ಸ್ವರೂಪ, ಒಳಹೊಳಹು ಹೊರಹೊಮ್ಮುವಾಗ ಮೂಡುವ ಸೆಳಕು, ಸಾಮಾನ್ಯವಾಗಿ ವಿಭಿನ್ನವೆಂದು ಗೃಹೀತವಾದ ಭಾವ-ಬುದ್ಧಿಗಳು ಒಂದಾಗುವ ಹಂತದ ಅಪೂರ್ವತೆ - ಎಲ್ಲವೂ ಅಡಕವಾಗಿದೆ. ಇದು ಕುವೆಂಪು ಅವರಷ್ಟೇ ಕೊಡಬಲ್ಲ ವ್ಯಾಖ್ಯೆ. ಮಹಿಮಭಟ್ಟನೆಂಬ ಆಲಂಕಾರಿಕನು ಪ್ರತಿಭೆಯನ್ನು ಮುಕ್ಕಣ್ಣನ ಉರಿಗಣ್ಣಿನೊಡನೆ ಒಪ್ಪವಿಟ್ಟಿರುವುದನ್ನು ನೆನೆದರೆ,[11] ಇಲ್ಲಿಯ ವಿದ್ಯುನ್ನಿದರ್ಶನದ ಸಾರ್ಥಕ್ಯ ಸ್ಫುರಿಸುತ್ತದೆ.
ಅವರೇ ಮತ್ತೊಂದೆಡೆ ಪ್ರತಿಭೆಯನ್ನು ಹೀಗೆ ಲಕ್ಷಣೀಕರಿಸಿದ್ದಾರೆ: “ಪ್ರತಿಭೆ ಶಕ್ತಿರೂಪವಾದ ಕಾಂತಿ. ಅದರ ಕ್ರಿಯಾರೂಪವೇ ಕಲ್ಪನೆ. ಬುದ್ಧಿ ಭಾವಗಳಿಗೆ ಜೋಡಣೆ ಕೊಡುವುದು ಪ್ರತಿಭೆಯೇ.”[12] ಕಲ್ಪನೆಯನ್ನು ಪ್ರತಿಭೆಯ ಕ್ರಿಯಾರೂಪವೆಂದು ಗುರುತಿಸಿರುವುದು ಪುಟ್ಟಪ್ಪನವರ ಅನುಭವವಿಶ್ಲೇಷಣಪಾಟವಕ್ಕೆ ಸಾಕ್ಷಿ.
ಪ್ರತಿಭೆಯ ಪಾರಮ್ಯವನ್ನು ಅರಿತ ಬಳಿಕ “ಪ್ರತಿಭೆಯಿಂದ ಹೊರಸೂಸದ ಕವಿತೆ ಪದ್ಯವಲ್ಲ; ಹುಚ್ಚುಹಿಡಿದ ಗದ್ಯ”[13] ಎಂಬ ಕುವೆಂಪು ಅವರ ಮಾರ್ಮಿಕವಾದ ಮಾತು ಮನಮುಟ್ಟುತ್ತದೆ.
ವ್ಯುತ್ಪತ್ತಿಯ ಆವಶ್ಯಕತೆಯ ಬಗೆಗೆ ಪುಟ್ಟಪ್ಪನವರು ತೋರಿರುವ ಕಾಳಜಿಯನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಇದನ್ನು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ, ತರಗತಿಗಳಲ್ಲಿ ಪಾಠ ಮಾಡುವಾಗ ಅವರು ಒಕ್ಕಣಿಸುತ್ತಾರೆ. ಇಷ್ಟಾಗಿಯೂ ವ್ಯುತ್ಪತ್ತಿಮಾತ್ರದಿಂದಲೇ ಕವಿತಾರಚನೆ ಸಾಧ್ಯವಾಗದು; ವ್ಯುತ್ಪತ್ತಿಯನ್ನು ಗಳಿಸುವುದೇನಿದ್ದರೂ ಅದನ್ನು ಆದ್ಯಂತ ಅರಗಿಸಿಕೊಂಡು ಕಲಾರಚನೆಗೆ ತೊಡಗಿದಾಗ ಮರೆಯುವುದಕ್ಕಾಗಿಯೇ ಎನ್ನುತ್ತಾರೆ-
“ಕವಿಗೆ ಕರ್ಣಂ ಪ್ರಮಾಣಂ
ವ್ಯಾಕರಣಮಲ್ತು;
ವ್ಯಾಕರಣಮೇಕೆಂಬೆಯೇಂ?
ಮರೆವುದಕೆ ಕಲ್ತು!”[14]
ಇಲ್ಲಿ ವ್ಯುತ್ಪತ್ತಿಯ ಉಪಲಕ್ಷಣವಾಗಿ ವ್ಯಾಕರಣವನ್ನು ಹೆಸರಿಸಲಾಗಿದೆ. ವ್ಯಾಕರಣವು ಭಾಷೆಗೆ ಕಟ್ಟು-ಕಟ್ಟಲೆಗಳನ್ನು ವಿಧಿಸಿ ಅದನ್ನೊಂದು ಶಿಸ್ತಿಗೆ ಒಳಪಡಿಸುತ್ತದೆ. ಈ ಬಗೆಯ ಶಿಸ್ತು ಕವಿಗೂ ಬೇಕು; ಎಷ್ಟು, ಎಲ್ಲಿ, ಹೇಗೆ ಎಂಬುದು ಮುಖ್ಯ. ಹಠ ತೊಟ್ಟಂತೆ ಪದಪದಕ್ಕೂ ನಿಯಮಗಳ ಬಗೆಗೇ ಆಲೋಚಿಸುತ್ತಿದ್ದರೆ ಕವಿತೆಯು ನೆಲ ಬಿಟ್ಟು ಮೇಲೆ ಹಾರುವುದಿರಲಿ, ಏಳುವುದೇ ಇಲ್ಲ. ಸಿಪಾಯಿಯ ಶಿಸ್ತು ನರ್ತಕನಿಗೆ ಬೇಕಿಲ್ಲವಷ್ಟೆ. ಕವಿಪಕ್ಷಪಾತಿಯಾದ ಪುಟ್ಟಪ್ಪನವರು ವ್ಯುತ್ಪತ್ತಿಯನ್ನು ಪೂರ್ಣವಾಗಿ ಗಾಳಿಗೆ ತೂರದೆ ‘ಕಲಿತು ಮರೆಯಲು’ ಎಂಬ ಸುವರ್ಣಮಧ್ಯಮ ಮಾರ್ಗವನ್ನು ಸೂಚಿಸಿರುವುದು ಶ್ಲಾಘ್ಯವಾಗಿದೆ. ಹೀಗಲ್ಲದೆ ‘ಕೇಶಿರಾಜ’ ಎಂಬ ಕವಿತೆಯಲ್ಲಿ ವೈಯಾಕರಣರನ್ನೂ ಶಬ್ದಶಾಸ್ತ್ರವನ್ನೂ ಅವರು ಲಘುಧಾಟಿಯಲ್ಲಿ ಛೇಡಿಸಿದ್ದಾರೆ.[15] ಶುದ್ಧಕವಿತೆಯಾಗಿ ಅದು ಸೊಗಸಾಗಿದೆ.
ಈ ಭಾವವನ್ನೇ ವಿಸ್ತರಿಸುತ್ತ ನಿಘಂಟುಗಳಲ್ಲಿರುವ ಶಬ್ದಗಳಿಗೂ ಕಾವ್ಯದಲ್ಲಿ ಪ್ರಯುಕ್ತವಾದ ಅವೇ ಶಬ್ದಗಳಿಗೂ ಇರುವ ವ್ಯತ್ಯಾಸವನ್ನು ಕಾವ್ಯಾತ್ಮಕವಾಗಿ ವಿವರಿಸುತ್ತಾರೆ: “ನಿಘಂಟುಗಳಲ್ಲಿ ನಿರ್ಜೀವವಾಗಿ ಕಲ್ಲಿನ ಗೊಂಬೆಗಳಂತೆ ಅಕಾರಾದಿಯ ಅನುಕೂಲಸೂತ್ರದ ಆಜ್ಞೆಗೆ ಅಧೀನವಾಗಿ ಕವಾಯತಿಗೆ ಒಳಗೊಂಡಂತಿರುವ ಶಬ್ದಶ್ರೇಣಿ ಕವಿಪ್ರತಿಭೆಯ ಭಾವವಿದ್ಯುತ್ತಿನ ಐಂದ್ರಜಾಲಕ್ಕೆ ಸಿಕ್ಕಿ ಜಾಗ್ರತವಾಗಿ ಚಿನ್ಮಯವಾಗುತ್ತವೆ. ಕಾವ್ಯೋಚಿತ ಸ್ಥಾನದಲ್ಲಿ ನಿಂತಾಗಲಂತೂ ಆ ಯಃಕಶ್ಚಿತವಾದಂತಿದ್ದ ಪದವಿಗ್ರಹಗಳಲ್ಲಿ ದೇವತಾಚೈತನ್ಯಸಂಚಾರವಾಗುತ್ತದೆ. ಆಗ ಅವು ಸರಸ್ವತಿಯ ಸಾಕ್ಷಾತ್ ಚರಣಚಿಹ್ನೆಗಳಾಗಿ ಪ್ರೋಜ್ವಲಿಸುತ್ತವೆ.”[16]
[1] ತರಗತಿಗಳಲ್ಲಿ ಕುವೆಂಪು, ಪು. ೨೨
[2] ಕುವೆಂಪು ಸಮಗ್ರ ಕಾವ್ಯ, ಸಂ. ೧ (ಪಕ್ಷಿಕಾಶಿ), ಪು. ೬೪೮
[3] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೪೬
[4] ದಾರ್ಶನಿಕ ಕಾವ್ಯಮೀಮಾಂಸೆ, ಪು. ೨೪೪
[5] “Art, indeed, may be defined as the layman’s yoga.” (Popular Essays in Indian Philosophy, p. 84)
[6] ಕುವೆಂಪು ಸಮಗ್ರ ಕಾವ್ಯ, ಸಂ. ೧ (ಪಕ್ಷಿಕಾಶಿ), ಪು. ೬೨೯
[7] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೪೨
[8] “ಪ್ರಜ್ಞಾ ನವನವೋನ್ಮೇಷಶಾಲಿನೀ ಪ್ರತಿಭಾ ಮತಾ” - ಭಟ್ಟತೌತ
[9] ನೋಡಿ: ನಾಟ್ಯಶಾಸ್ತ್ರ, ೧.೧೦೭ ಮತ್ತು ಅದರ ಮೇಲಣ ಅಭಿನವಭಾರತೀವ್ಯಾಖ್ಯೆ
[10] ಕುವೆಂಪು ಸಮಗ್ರ ಕಾವ್ಯ, ಸಂ. ೧ (ಕಲಾಸುಂದರಿಯ ಮುನ್ನುಡಿ), ಪು. ೧೮೧
[11] “ಸಾ ಹಿ ಚಕ್ಷುರ್ಭಗವತಸ್ತೃತೀಯಮಿತಿ ಗೀಯತೇ | ಯೇನ ಸಾಕ್ಷಾತ್ಕರೋತ್ಯೇಷ ಭಾವಾಂಸ್ತ್ರೈಲೋಕ್ಯವರ್ತಿನಃ ||” (ವ್ಯಕ್ತಿವಿವೇಕ, ೨.೧೧೮)
[12] ತರಗತಿಗಳಲ್ಲಿ ಕುವೆಂಪು, ಪು. ೨೭
[13] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೧
[14] ಕುವೆಂಪು ಸಮಗ್ರ ಕಾವ್ಯ, ಸಂ. ೨ (ಮಂತ್ರಾಕ್ಷತೆ), ಪು. ೨೬೯
[15] ಕುವೆಂಪು ಸಮಗ್ರ ಕಾವ್ಯ, ಸಂ. ೧ (ನವಿಲು), ಪು. ೩೩೦-೩೩
[16] ಕುವೆಂಪು ಒಲವು ನಿಲವು, ಪು. ೫೬.
ಇದಕ್ಕೆ ಸಂವಾದಿಯಾದ ಮಾತನ್ನು ಸಂಸ್ಕೃತಕವಿ ನೀಲಕಂಠದೀಕ್ಷಿತ ‘ಶಿವಲೀಲಾರ್ಣವ’ ಎಂಬ ತನ್ನ ಕಾವ್ಯದಲ್ಲಿ ಆಡಿದ್ದಾನೆ: “ಯಾನೇವ ಶಬ್ದಾನ್ ವಯಮಾಲಪಾಮೋ ಯಾನೇವ ಚಾರ್ಥಾನ್ ವಯಮುಲ್ಲಿಖಾಮಃ | ತೈರೇವ ವಿನ್ಯಾಸವಿಶೇಷಭವ್ಯೈಃ ಸಂಮೋಯಂತೇ ಕವಯೋ ಜಗಂತಿ ||” (೧.೧೩)
To be continued.