ಭೂಮಿಕೆ
ಆಧುನಿಕ ಕನ್ನಡ ಕಂಡಿರುವ ಒಳ್ಳೆಯ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರು. ಅವರು ತಮ್ಮ ಪ್ರಕೃತಿಭವ್ಯ ಪ್ರತಿಭಾಪ್ರಭಾವದಿಂದ ರಸಭಾಸ್ವರ ಕಾವ್ಯಗಳನ್ನು ಸೃಜಿಸಿ ನಮ್ಮ ನುಡಿಯ ಕಳೆಯೇರಿಸಿದರು. ಕನ್ನಡದ ಮಟ್ಟಿಗೆ ಮಾತ್ರವಲ್ಲದೆ ಅಖಿಲಭಾರತಸ್ತರದಲ್ಲಿ, ಅಷ್ಟೇಕೆ ಇಡಿಯ ವಿಶ್ವದ ವ್ಯಾಪ್ತಿಯಲ್ಲಿ ಯಾವ ಕಾಲದ ಯಾವ ಕವಿಗೂ ಸೆಡ್ಡುಹೊಡೆಯಬಲ್ಲ ಸತ್ತ್ವ ಅವರದು. ಮುಕ್ತಕದಿಂದ ಮೊದಲುಮಾಡಿ ಮಹಾಕಾವ್ಯದವರೆಗೆ, ಭಾವಗೀತದಿಂದ ನಾಡ ಗೀತದವರೆಗೆ ಕವಿತೆಯ ಎಲ್ಲ ಪ್ರಕಾರಗಳನ್ನೂ ಅವರು ಶ್ರೀಮಂತಗೊಳಿಸಿದ್ದಾರೆ. ಕಲ್ಪನೆ ಮತ್ತು ಅಭಿವ್ಯಕ್ತಿಗಳಲ್ಲಿ ತಮ್ಮದಾದ ಛಾಪನ್ನು ಮೂಡಿಸುವ ಕುವೆಂಪು ಪ್ರಕೃತಿಯೇ ಮೈವೆತ್ತು ನುಡಿಯುವಂತೆ ಸರ್ವಸ್ಪರ್ಶಿಯಾಗಿ ಕವನಿಸುತ್ತಾರೆ; ನಿಜಕ್ಕೂ ಅವರದು ನಿಸರ್ಗಸರ್ಗ. ಪುಟ್ಟಪ್ಪನವರ ಕಾವ್ಯದ ಪ್ರಮುಖ ಲಕ್ಷಣಗಳು ಓಘ ಮತ್ತು ಓಜಸ್ಸು. ಅವರ ಅತ್ಯುತ್ತಮ ರಚನೆಗಳನ್ನು ಆಸ್ವಾದಿಸುವಾಗ - ಕಣ್ಣು ಕೋರೈಸುವ ಕಾಂತಿಯಿಂದ ಕೂಡಿ ರಭಸವಾಗಿ ಬೀಸಿ ಬರುವ ಸುಂಟರಗಾಳಿಯು ನಮ್ಮನ್ನು ಎತ್ತಲೋ ಎತ್ತರಕ್ಕೆ ಹಾರಿಸಿಕೊಂಡು ಹೋದಂತೆ ಅನುಭವವಾಗುತ್ತದೆ. ಇದು ಅವರೇ ವಿವರಿಸುವ ಭವ್ಯತಾನುಭೂತಿ ಎಂಬುದನ್ನು ಮುಂದೆ ಗಮನಿಸಬಹುದು.
ಇಂಥ ಪಟುಹಸ್ತನಾದ ಕವಿ ಕಾವ್ಯವನ್ನು ಕುರಿತ ತನ್ನ ಹೊಳಹುಗಳನ್ನು ಹಂಚಿಕೊಂಡಿರುವುದು ನಮ್ಮ ಸುಕೃತ. ಕುವೆಂಪು ಅವರ ದೃಷ್ಟಿಯ ಕಾವ್ಯಮೀಮಾಂಸೆ ಅವರು ಸೃಜಿಸಿದ ಕವಿತೆಗಳಂತೆಯೇ ವಿಶಿಷ್ಟವಾಗಿದೆ. ಈ ವಿದ್ಯೆಯನ್ನು ಕುರಿತು ಅವರು ವ್ಯವಸ್ಥಿತವಾಗಿ ಅಧ್ಯಯನ-ಸಂಶೋಧನೆಗಳನ್ನು ನಡಸಿ ಗ್ರಂಥರಚನೆ ಮಾಡದಿದ್ದರೂ ಕಾಲಕಾಲಕ್ಕೆ ಅವರು ಬರೆದ ಪ್ರಬಂಧಗಳು ಗಣನೀಯವಾದ ಒಳನೋಟಗಳನ್ನು ಒದಗಿಸಿವೆ. ಇದಕ್ಕೆ ಕಾರಣ ಅವರ ಕವಿಸಹಜವಾದ ಹೃದಯಧರ್ಮ ಮತ್ತು ನುಡಿಜಾಡುಗಳೇ. ಕುವೆಂಪು ಅವರ ಈ ನಿಟ್ಟಿನ ಬರೆಹಗಳನ್ನು ಕುರಿತು ಸಾಕಷ್ಟು ಅಧ್ಯಯನಗಳು ನಡೆದಿದ್ದರೂ ಅವುಗಳಲ್ಲಿ ಗೂಢವಾಗಿಯೂ ಗಾಢವಾಗಿಯೂ ಕಾಣುವ ಗುಣಗಳ ವಿವೇಚನೆ ಸಮರ್ಪಕವಾಗಿ ಸಾಗಿದಂತಿಲ್ಲ. ಸಾಹಿತ್ಯೇತರ ಮಾನದಂಡಗಳ ಬಳಕೆಯೇ ಹೆಚ್ಚಾಗಿ ಆಗಿದೆ ಎನ್ನಬೇಕು. ಪುಟ್ಟಪ್ಪನವರೇ ಮೆಚ್ಚಿ ನಚ್ಚಿದ್ದ ಭಾರತೀಯ ಸಾಹಿತ್ಯ ಮತ್ತು ಅಧ್ಯಾತ್ಮಗಳ ಹಿನ್ನೆಲೆಯಲ್ಲಿ ಆಲೋಚಿಸುವುದು ನಡೆದೇ ಇಲ್ಲವೆಂಬಷ್ಟು ವಿರಳ. ಸದ್ಯದ ಬರೆಹ ಈ ದಿಕ್ಕಿನಲ್ಲೊಂದು ಸಣ್ಣದಾದ ಪ್ರಯತ್ನ. ಇಲ್ಲಿ ‘ಜೈ-ವಿಮರ್ಶೆ’, ‘ಬೈ-ವಿಮರ್ಶೆ’ಗಳ ಹಾದಿ ಹಿಡಿಯದೆ ಕುವೆಂಪು ಅವರ ಮಾತುಗಳನ್ನೇ ಆಧರಿಸಿ ಕಾವ್ಯಮೀಮಾಂಸೆಯ ಚಿಂತನೆಗಳನ್ನು ವಿಶ್ಲೇಷಿಸಲಾಗಿದೆ. ಜೊತೆಗೆ ಅವರ ಕೆಲವು ಅನ್ಯೋನ್ಯ ವ್ಯಾಘಾತಕ ಅಭಿಪ್ರಾಯಗಳನ್ನೂ ವಿವೇಕವಿಶ್ರಾಂತವಾದ ವಿಚಾರಗಳನ್ನೂ ಅತಿರಂಜಿತ ಉದ್ಗಾರಗಳನ್ನೂ ವಸ್ತುನಿಷ್ಠವಾಗಿ ಕಾಣುವ ಪ್ರಯತ್ನವೂ ಇಲ್ಲಿದೆ.
ಒಟ್ಟುನೋಟ
ನವೋದಯದ ಬೆಳಕು ಕನ್ನಡನಾಡಿನ ಎಲ್ಲೆಡೆ ಹರಡುತ್ತಿದ್ದ ಕಾಲದಲ್ಲಿ ತಮ್ಮ ಸಾಹಿತ್ಯಕೃಷಿಯನ್ನು ಆರಂಭಿಸಿದ ಕುವೆಂಪು ಆ ಕಾಲದ ಸತ್ಪ್ರಭಾವಕ್ಕೆ ಒಳಗಾದರು. ಇದರಲ್ಲಿ ಮುಖ್ಯವಾದುದು ಪೂರ್ವ-ಪಶ್ಚಿಮಗಳ, ಹಳತು-ಹೊಸತುಗಳ ನಡುವೆ ಸಮನ್ವಯವನ್ನು ಕಂಡುಕೊಳ್ಳುವ ಹದ. ಬಿ.ಎಂ.ಶ್ರೀ. ಅವರು ಕನ್ನಡದಲ್ಲಿ ನಡೆಯಬೇಕಿದ್ದ ವಿಮರ್ಶೆಯ ಕೆಲಸವನ್ನು ಕುರಿತು ಆಡಿದ ಮಾತುಗಳಲ್ಲಿ ಈ ಹದವನ್ನು ಕಾಣುತ್ತೇವೆ: “ಎರಡು ಮೂರು ಸಾಹಿತ್ಯಗಳನ್ನಾದರೂ ಚೆನ್ನಾಗಿ ಬಲ್ಲ, ವಿಶಾಲ ರುಚಿಗಳಾದ, ಪೂರ್ವದ ಮತ್ತು ನೂತನ ಕಾಲದ ಅಂತಸ್ಸಾರವನ್ನು ಅನುಭವಕ್ಕೆ ತಂದುಕೊಂಡ ವಿದ್ವಾಂಸರು ಈ ವಿಮರ್ಶೆಯ ಕಾರ್ಯವನ್ನು ಕೈಕೊಳ್ಳತಕ್ಕದ್ದು.”[1] ತಮ್ಮ ಗುರುಗಳ ಈ ನಿರ್ದೇಶನವನ್ನು ಕುವೆಂಪು ಚೆನ್ನಾಗಿ ಪಾಲಿಸಿದರು. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿತ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳು ಹಾಗೂ ರಾಮಕೃಷ್ಣ ಆಶ್ರಮದ ಪರಿಸರದಿಂದ ದೊರೆತ ಬಂಗಾಳಿ-ಸಂಸ್ಕೃತಗಳ ಪರಿಚಯ ಅವರ ದೃಷ್ಟಿಕೋನವನ್ನು ವಿಶಾಲವಾಗಿಸಿದುವು. ಮಲೆನಾಡಿನ ಮಡಿಲಿನಲ್ಲಿ ಕಳೆದ ತಮ್ಮ ಬಾಲ್ಯದಿಂದ ದಕ್ಕಿದ್ದ ಪ್ರಕೃತಿಪ್ರೀತಿಯ ಜೊತೆಗೆ ಮುಂದೆ ಲಭಿಸಿದ ಬಿ.ಎಂ.ಶ್ರೀ., ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರೀ ಮೊದಲಾದ ಆದರ್ಶ ಅಧ್ಯಾಪಕರ ಸಂಸರ್ಗ ಅವರ ವ್ಯಕ್ತಿತ್ವವನ್ನು ರೂಪಿಸಿತು.
೧೯೧೮ರಲ್ಲಿ ಮೈಸೂರಿಗೆ ಕಾಲಿಟ್ಟ ಕುವೆಂಪು ಕೇವಲ ನಾಲ್ಕೇ ವರ್ಷಗಳಲ್ಲಿ ಇಂಗ್ಲಿಷ್ ಭಾಷೆಯನ್ನೂ ಅದರಲ್ಲಿ ರಚಿತವಾದ ಕಾವ್ಯಗಳನ್ನೂ ಆಳವಾಗಿ ಅಭ್ಯಸಿಸಿ ತಾವೇ ಸ್ವತಂತ್ರವಾಗಿ ಕವನಿಸಬಲ್ಲಷ್ಟು ಶಕ್ತಿ ಗಳಿಸಿದರು. (೧೯೨೨ರಲ್ಲಿ ಅವರ ಮೊದಲ ಇಂಗ್ಲಿಷ್ ಕವನಸಂಕಲನ ‘ಬಿಗಿನರ್ಸ್ ಮ್ಯೂಸ್’ ಪ್ರಕಟವಾಯಿತು.) ಕನ್ನಡದ ಕಲಿಕೆಯಂತೂ ಬಿರುಸಾಗಿ ಸಾಗಿತ್ತು. ಸಂಸ್ಕೃತದ ಸಂಸ್ಕಾರವೂ ಅವರಲ್ಲಿ ಪಡಿಮೂಡತೊಡಗಿತ್ತು. ವೆಂಕಣ್ಣಯ್ಯನವರು ೧೯೨೭ರಲ್ಲಿ ರವೀಂದ್ರನಾಥ ಠಾಕೂರರ ‘ಪ್ರಾಚೀನ ಸಾಹಿತ್ಯ’ ಕೃತಿಯನ್ನು ಕನ್ನಡಿಸಿದ ಮೇಲೆ ಬಂಗಾಳಿಯಲ್ಲಿ ನಡೆದ ಸಾಹಿತ್ಯಚಿಂತನೆಯ ರುಚಿ ಕುವೆಂಪು ಅವರಿಗೆ ಹತ್ತಿತು. ಕಾವ್ಯಮೀಮಾಂಸೆಯ ಬಗೆಗೆ ಅವರಲ್ಲಿ ಮೂಡಿದ ಅಭಿಪ್ರಾಯಗಳನ್ನು ಈ ಹಂತದಿಂದ ನಾವು ಸ್ಪಷ್ಟವಾಗಿ ಗುರುತಿಸಬಹುದು. ‘ಪ್ರಕೃತಿಸೌಂದರ್ಯ’ ಎಂಬ ವಿಷಯದ ಬಗೆಗೆ ೧೧.೮.೧೯೨೫ ರಂದು ಮಹಾರಾಜಾ ಕಾಲೇಜಿನಲ್ಲಿ ಅವರು ಮಾಡಿದ ಭಾಷಣ ಈ ನಿಟ್ಟಿನ ಮೊದಲ ಹೆಜ್ಜೆಯೆಂದು ವಿದ್ವಾಂಸರು ಭಾವಿಸುತ್ತಾರೆ. ಇದು ಮುಂದೆ ೧೯೨೬ರಲ್ಲಿ ಧಾರವಾಡದ ‘ಜಯ ಕರ್ಣಾಟಕ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಜಿ. ಎಸ್. ಶಿವರುದ್ರಪ್ಪನವರು ‘ರನ್ನನ ವೀರಕೌರವ’ (೧೯೨೭) ಎಂಬುದೇ ಕುವೆಂಪು ಅವರ ಮೊದಲ ವಿಮರ್ಶಾತ್ಮಕ ಲೇಖನವೆಂದು ಅಭಿಪ್ರಾಯ ಪಡುತ್ತಾರೆ.[2] ಏನೇ ಆಗಲಿ, ಕಲಿಕೆಯನ್ನು ಆರಂಭಿಸಿದ ಕೆಲವೇ ವರ್ಷಗಳಲ್ಲಿ ಅವರು ಹಲವು ಮೂಲಗಳಿಂದ ವಿದ್ಯೆಯನ್ನು ಆರ್ಜಿಸಿ ಅದನ್ನು ತಮ್ಮ ಪ್ರತಿಭೆಗೆ ಉಪೋದ್ಬಲಕವಾಗಿ ಬೆಸೆದುಕೊಳ್ಳುತ್ತಿದ್ದರು ಎಂದು ಧಾರಾಳವಾಗಿ ಹೇಳಬಹುದು.
ಅವರ ಚಿಂತನೆಯ ಮೂಲಸ್ರೋತಗಳನ್ನೂ ಪ್ರಧಾನ ಲಕ್ಷಣಗಳನ್ನೂ ಮೊದಲಿಗೆ ಸಂಗ್ರಹವಾಗಿ ಗುರುತಿಸಿ ಬಳಿಕ ವಿಸ್ತರಿಸಿ ಚರ್ಚಿಸಬಹುದು.
ಉಪನಿಷತ್ತುಗಳಲ್ಲಿ ಸಾಕಾರಗೊಂಡ ಅದ್ವೈತತತ್ತ್ವ ಮತ್ತು ಪಾಶ್ಚಾತ್ತ್ಯ ರೊಮ್ಯಾಂಟಿಕ್ ಕವಿಗಳ ರಚನೆಗಳು ಕುವೆಂಪು ಅವರನ್ನು ಪ್ರಭಾವಿಸಿವೆ. ಸಚ್ಚಿದಾನಂದ, ಋತ, ಋಷಿ, ವಿಭೂತಿ, ಯೋಗ, ತಪಸ್ಸು, ಭೂಮಾ, ಉಪಾಸನೆ ಮುಂತಾದ ಪರಂಪರಾಗತ ತತ್ತ್ವಗಳನ್ನು ಅವರು ಅನುಸಂಧಾನಿಸಿ ತಮ್ಮ ಕಾವ್ಯದೃಷ್ಟಿಯೊಡನೆ ಕಸಿಮಾಡಿಕೊಂಡರು. ಭಗವದ್ಗೀತೆ, ನಾಸದೀಯಸೂಕ್ತ, ಈಶ, ತೈತ್ತಿರೀಯ, ಛಾಂದೋಗ್ಯ, ಶ್ವೇತಾಶ್ವತರ ಮುಂತಾದ ಆರ್ಷಗ್ರಂಥಗಳು ಅವರಿಗೆ ಬೆಳಕಿತ್ತವು. ಇವುಗಳೊಟ್ಟಿಗೆ ಶ್ರೀರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರವಿಂದ ಮುಂತಾದ ಅಧ್ಯಾತ್ಮಸಾಧಕರ ಬರೆಹಗಳೂ ಒದಗಿಬಂದುವು. ಇಂಗ್ಲಿಷ್ ಕವಿಗಳ ಪೈಕಿ ಮುಖ್ಯವಾಗಿ ವರ್ಡ್ಸ್ವರ್ತ್, ಶೆಲ್ಲಿ ಮತ್ತು ಮಿಲ್ಟನ್ ಅಚ್ಚುಮೆಚ್ಚಾದರು. ಪಾಶ್ಚಾತ್ತ್ಯರ ಆದಿಕವಿ ಹೋಮರ್ ಮತ್ತು ಜಗದ್ವಿಖ್ಯಾತ ಶೇಕ್ಸ್ಪಿಯರ್ ಕೆಲವು ಕಾರಣಗಳಿಗೆ ಇಷ್ಟವಾದರು, ಕೆಲವು ಕಾರಣಗಳಿಗೆ ಆಗಲಿಲ್ಲ. ಭಾರತೀಯ ಕವಿಗಳ ಪೈಕಿ ವಾಲ್ಮೀಕಿ, ಕಾಳಿದಾಸ, ಬಾಣಭಟ್ಟ, ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ ಮತ್ತು ನಾಗವರ್ಮರು ಹೃದಯಕ್ಕೆ ಹತ್ತಿರವಾದರು. ಪಾಶ್ಚಾತ್ತ್ಯ ಕಾವ್ಯಚಿಂತಕರಲ್ಲಿ ಕ್ರೋಚೆ ಹಾಗೂ ಲಾಂಗೈನಸ್ ಹಿಡಿಸಿದರು. ಆಧುನಿಕರ ಪೈಕಿ ಎ. ಸಿ. ಬ್ರಾಡ್ಲೆ, ಐ. ಎ. ರಿಚರ್ಡ್ಸ್, ಮನೋವಿಜ್ಞಾನಿ ಸಿ. ಜೆ. ಯುಂಗ್ ಮುಂತಾದವರ ಬರೆಹಗಳನ್ನು ಕುವೆಂಪು ಓದಿಕೊಂಡರು. ಸಂಸ್ಕೃತದ ಆಲಂಕಾರಿಕರ ಪೈಕಿ ಆನಂದವರ್ಧನ, ಅಭಿನವಗುಪ್ತ, ಕುಂತಕ ಮತ್ತು ಮಮ್ಮಟರನ್ನು ಪ್ರಧಾನವಾಗಿ ಆಧರಿಸಿದರು. ಕಾವ್ಯಾನುಭವವನ್ನು ವಿವೇಚಿಸಲು ಬೇಕಾದ ಪರಿಕರಗಳ ಪೈಕಿ ರಸ-ಧ್ವನಿ-ಔಚಿತ್ಯ-ವಕ್ರೋಕ್ತಿಗಳನ್ನು ಗಟ್ಟಿಯಾಗಿ ನಚ್ಚಿಕೊಂಡರು. ಇನ್ನು ಕವಿತೆಗೆ ಕಾರಣವಾದ ಪ್ರತಿಭೆ, ವ್ಯುತ್ಪತ್ತಿ ಮತ್ತು ಅಭ್ಯಾಸಗಳನ್ನೂ ಅದನ್ನು ಆಸ್ವಾದಿಸುವ ಸಹೃದಯನ ಪರಿಕಲ್ಪನೆಯನ್ನೂ ಹೃದ್ಗತ ಮಾಡಿಕೊಂಡರು. ಪಾಶ್ಚಾತ್ತ್ಯರಿಂದ ಕವಿ ಮತ್ತು ಪರಂಪರೆಗಳ ಸಂಬಂಧ, ಕ್ರಿಯೇಟಿವ್ ಇಮ್ಯಾಜಿನೇಶನ್, ಇಮೇಜ್, ಸಿಂಬಲ್, ಸಬ್ಲಿಮಿಟಿ, ಪಾತ್ರಗಳ ವಿವೇಚನೆ, ಐತಿಹಾಸಿಕ ದೃಷ್ಟಿಕೋನ, ತೌಲನಿಕ ಅಧ್ಯಯನ, ಮಹೋಪಮೆ ಮುಂತಾದ ತಂತ್ರ-ತತ್ತ್ವಗಳನ್ನು ನಮ್ಮ ಭಾಷಾಪರಿವೇಷಕ್ಕೆ ಸರಿಹೊಂದುವಂತೆ ಗ್ರಹಿಸಿದರು.
ತಮ್ಮ ಮೇಲೆ ಇಷ್ಟೆಲ್ಲ ಪ್ರಭಾವಗಳಿದ್ದರೂ ಕುವೆಂಪು ತಮಗೇ ಸಲ್ಲುವ ಅದೊಂದು ಬಗೆಯ ಅಗಸ್ತ್ಯಶಕ್ತಿಯಿಂದ ಎಲ್ಲವನ್ನೂ ನಿಶ್ಶೇಷವಾಗಿ ಜೀರ್ಣಿಸಿಕೊಂಡು ಅವುಗಳಿಗೆ ಹೊಸವುಟ್ಟನ್ನು ಕೊಡುತ್ತಾರೆ.
ಕಾವ್ಯಮೀಮಾಂಸೆಗೆ ಸಂಬಂಧಿಸಿದಂತೆ ಅವರು ಕೆಲವು ಹಳೆಯ ಪ್ರಮೇಯಗಳನ್ನು ಹೊಸಬಗೆಯಲ್ಲಿ ವಿವರಿಸಿದ್ದಾರೆ; ಅವುಗಳ ವ್ಯಾಪ್ತಿಯನ್ನು ಹಿಗ್ಗಿಸಿದ್ದಾರೆ. ಶಮ ಎಂಬ ಭಾವ, ಪ್ರತಿಭೆ, ಉಪಮೆ, ರೂಪಕ ಮುಂತಾದುವು ಉದಾಹರಣೆಗಳು. ತಾವು ವಿವಿಧ ಮೂಲಗಳಿಂದ ಗ್ರಹಿಸಿದ ವಿಚಾರಗಳನ್ನು ವಿನೂತನವಾಗಿ ರೂಪಿಸಿ ಕೆಲವು ತತ್ತ್ವಗಳನ್ನು ನಿರೂಪಿಸಿದ್ದಾರೆ. ಪ್ರತಿಕೃತಿ, ಪ್ರತಿಮಾ, ಭಾಷೆ - ಲೋಕೋಪಯೋಗಿ ಹಾಗೂ ಭಾವೋಪಯೋಗಿ, ಭವ್ಯತೆ ಮುಂತಾದುವು ಉದಾಹರಣೆಗಳು. ಪರಿಚಿತ-ಅಪರಿಚಿತ, ಮೂರ್ತ-ಅಮೂರ್ತ, ಸ್ಪಷ್ಟತೆ-ಅಸ್ಪಷ್ಟತೆ ಮೊದಲಾದುವುಗಳ ಸೂಕ್ಷ್ಮ ಭೇದಗಳನ್ನೂ ಪರಸ್ಪರ ಸಂಬದ್ಧತೆಯನ್ನೂ ಸ್ವೋಪಜ್ಞವಾಗಿ ವಿವರಿಸಿದ್ದಾರೆ.
ಕುವೆಂಪು ವಿಮರ್ಶೆಯನ್ನು ಸಂಶೋಧನಾತ್ಮಕ, ವರ್ಣನಾತ್ಮಕ ಮತ್ತು ದರ್ಶನಾತ್ಮಕ ಎಂದು ಮುಬ್ಬಗೆಯಾಗಿ ಗಣಿಸಿ ಅವುಗಳಲ್ಲಿ ದರ್ಶನಾತ್ಮಕ ವಿಮರ್ಶೆಯೇ ಶ್ರೇಷ್ಠವೆಂದು ಸಾರುತ್ತಾರೆ.[3] ಇದರ ಮೂಲ ಅವರ ಆಧ್ಯಾತ್ಮಿಕ ದೃಷ್ಟಿಕೋನದಲ್ಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಸಂವಾದಿಯಾಗಿ ‘ಪೂರ್ಣದೃಷ್ಟಿ’, ‘ದರ್ಶನಧ್ವನಿ’ ಮುಂತಾದ ಸ್ವೋಪಜ್ಞ ಸಂಗತಿಗಳನ್ನವರು ವಿವರಿಸುತ್ತಾರೆ. ಇವುಗಳ ಸಾರಾಸಾರತೆಯನ್ನು ಮುಂದೆ ಚರ್ಚಿಸಬಹುದು.
ಕುವೆಂಪು ಪ್ರಾಯೋಗಿಕ ವಿಮರ್ಶೆಯನ್ನು ಸೊಗಸಾಗಿ ನಡಸಿದ್ದಾರೆ. ಸಾವಿರ ವರ್ಷಗಳಿಗೂ ಮಿಕ್ಕ ಇತಿಹಾಸವುಳ್ಳ ಕನ್ನಡಕಾವ್ಯದ ಒಳತಿರುಳನ್ನು ತಮ್ಮ ವಿಮರ್ಶೆಗಳ ಮೂಲಕ ಪರಿಚಯಿಸಿಕೊಟ್ಟಿದ್ದಾರೆ. ಒಬ್ಬ ಶ್ರೇಷ್ಠ ಕವಿಯ ಸಹೃದಯತೆಯ ಸೊಬಗು ಇಲ್ಲಿ ಕಾಣಸಿಗುತ್ತದೆ; ಭಾವಯಿತ್ರೀ ಪ್ರತಿಭೆಯ ಅನಾವರಣವಾಗುತ್ತದೆ. ಪುಟ್ಟಪ್ಪನವರು ಕಾವ್ಯಮೀಮಾಂಸೆಗೆ ಸಂಬಂಧಿಸಿದ ಪ್ರಬಂಧಗಳಲ್ಲಿ ತಾವು ಎತ್ತಿಹಿಡಿದ ಮೌಲ್ಯಗಳನ್ನೇ ವಿಮರ್ಶಾತ್ಮಕ ಲೇಖನಗಳಲ್ಲಿ ಬಳಸಿಕೊಂಡಿದ್ದಾರೆ; ಈ ಮೂಲಕ ತತ್ತ್ವ-ಪ್ರಯೋಗಗಳಲ್ಲಿ ಬಿರುಕಿಲ್ಲದ ಬೆಸುಗೆಯನ್ನು ಸಾಧಿಸಿದ್ದಾರೆ. ಅಷ್ಟೇ ಅಲ್ಲದೆ ಈ ಎಲ್ಲ ತತ್ತ್ವಗಳಿಗೆ ಉತ್ತಮ ನಿದರ್ಶನಗಳಾಗಬಲ್ಲ ಕಾವ್ಯಗಳನ್ನು ಸ್ವಯಂ ರಚಿಸಿದ್ದಾರೆ. ಅವರು ಪ್ರತಿಪಾದಿಸಿದ ಕಾವ್ಯಸೂತ್ರಗಳು ಹೆಚ್ಚಾಗಿ ತಮ್ಮ ಅಥವಾ ತಮ್ಮ ರೀತಿಯ ಕಾವ್ಯಗಳಿಗೇ ಅನ್ವಯಿಸುತ್ತವೆ ಎಂದು ತರ್ಕಿಸಿದರೆ ತಪ್ಪಾಗದು. (ಹಾಗೆಂದ ಮಾತ್ರಕ್ಕೆ ಅವು ಅನ್ಯಕಾವ್ಯಗಳಿಗೆ ಅನನ್ವೇಯವೆಂದಲ್ಲ.) ಪ್ರಾಯೋಗಿಕ ವಿಮರ್ಶೆಗೇ ಮರಳುವುದಾದರೆ, ಅವರು ಅಧ್ಯಯನಕ್ಕೆ ತೆಗೆದುಕೊಂಡ ಕಾವ್ಯದ ಒಟ್ಟಂದದ ಸ್ವರೂಪವನ್ನು ವಿವರಿಸಿ, ಸಮೃದ್ಧವಾದ ಉದ್ಧೃತಿಗಳ ಮೂಲಕ ಅದರ ರಾಚನಿಕ ರೂಪವನ್ನೂ ತೆರೆದಿಡುತ್ತಾರೆ. ಒಟ್ಟಿನಲ್ಲಿ ಕವಿಯ ವೈಶಿಷ್ಟ್ಯ ತಿಳಿಯಬೇಕು, ಸಾಹಿತ್ಯಪರಂಪರೆಯಲ್ಲಿ ಆತನ ಸ್ಥಾನ ಎಲ್ಲಿಯದೆಂದು ವೇದ್ಯವಾಗಬೇಕು - ಇದು ಅವರ ಆಶಯ. ಕಾವ್ಯಾಸ್ವಾದವನ್ನು ಇನ್ನಷ್ಟು ಆಳವಾಗಿಸುವ ಸೃಷ್ಟಿಶೀಲ ಸ್ಫುರಣೆಗಳನ್ನು ಒದಗಿಸುವ ಮೂಲಕ ಸಹೃದಯಶಿಕ್ಷಣವನ್ನೂ ಆನುಷಂಗಿಕವಾಗಿ ನಿರ್ವಹಿಸುತ್ತಾರೆ. ಕುವೆಂಪು ಇಲ್ಲಿ ಸಾಹಿತ್ಯೇತರ ಮೌಲ್ಯಗಳನ್ನು ಬಳಸದಿರುವುದನ್ನು ಮೇಲ್ನೋಟಕ್ಕೇ ಗಮನಿಸಬಹುದು. ಅವರ ಕಾವ್ಯಗಳನ್ನು ಸಮಾಜಶಾಸ್ತ್ರೀಯ ಸಿದ್ಧಾಂತಗಳ ಪರಮಲಕ್ಷ್ಯಗಳಂತೆ ಕಾಣುವ ಜನರು ಕುವೆಂಪು ಅವರ ಈ ನಿಟ್ಟಿನ ನಿಲವನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು.
ತಮ್ಮ ಕವಿತೆಗಳಲ್ಲಿ ಹಲವೆಡೆ ವಿಮರ್ಶೆ ಮತ್ತು ವಿಮರ್ಶಕರನ್ನು ಕುವೆಂಪು ತೆಗಳಿದಂತೆ ತೋರುತ್ತದೆ. ಇದು ಅವರ ಕಾಲದಲ್ಲಿ ತಮ್ಮ ಕಾವ್ಯಗಳಿಗೆ ಬಂದ ವಿಮರ್ಶೆಗಳನ್ನೂ ಅವನ್ನು ಬರೆದ ವಿಮರ್ಶಕರನ್ನೂ ಕುರಿತಿವೆಯೆಂದು ಅನುಮಾನಿಸಬಹುದು. ಇತರ ಪ್ರಬಂಧಗಳಲ್ಲಿ ವಿಮರ್ಶವಿದ್ಯೆಯನ್ನು ಕೊಂಡಾಡಿದ ಲೇಖಕ ತನ್ನದೇ ಕಾವ್ಯದಲ್ಲಿ ಅದನ್ನು ನಿಂದಿಸಿ ನಿರಾಕರಿಸುವುದಿಲ್ಲವಷ್ಟೆ.
ಅವರು ತೌಲನಿಕ ಕಾವ್ಯಮೀಮಾಂಸೆಯನ್ನು ಚಿಕ್ಕದಾಗಿಯಾದರೂ ಚೊಕ್ಕವಾಗಿ ನಡಸಿದ್ದಾರೆ. ತಮ್ಮ ಹಲವು ಬರೆಹಗಳಲ್ಲಿ ರನ್ನ, ಲಕ್ಷ್ಮೀಶ, ನಾಗವರ್ಮ, ಜನ್ನ ಮುಂತಾದ ಕನ್ನಡ ಕವಿಗಳ ರಚನೆಗಳನ್ನು ಚರ್ಚಿಸುತ್ತ ವಾಲ್ಮೀಕಿ, ವ್ಯಾಸ, ಕಾಳಿದಾಸ, ಬಾಣ, ಮಿಲ್ಟನ್, ಮ್ಯಾಥ್ಯೂ ಅರ್ನಾಲ್ಡ್ ಮುಂತಾದ ಇತರ ಭಾಷೆಗಳ ಕವಿಗಳ ಪ್ರಸ್ತಾವವನ್ನು ತೌಲನಿಕವಾಗಿ ಮಾಡುತ್ತಾರೆ. ಪುಟ್ಟಪ್ಪನವರು ಹಲವು ವರ್ಷಗಳ ಕಾಲ ತೌಲನಿಕ ಕಾವ್ಯಮೀಮಾಂಸೆಯನ್ನೇ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು ಎಂಬುದನ್ನಿಲ್ಲಿ ನೆನೆಯಬಹುದು. ಅವರು ತರಗತಿಗಳಲ್ಲಿ ಕಲಿಸುತ್ತಿದ್ದ ಬಗೆಯನ್ನೂ ಅಲ್ಲಿಯ ವಿಚಾರಗಳನ್ನೂ ಸಂಗ್ರಹಿಸಿ ಡಾ|| ಎಸ್. ಎಂ. ವೃಷಭೇಂದ್ರಸ್ವಾಮಿ ಅವರು ‘ತರಗತಿಗಳಲ್ಲಿ ಕುವೆಂಪು’ ಎಂಬ ಒಳ್ಳೆಯ ಪುಸ್ತಕವನ್ನೇ ಹೊರತಂದಿದ್ದಾರೆ.
ಕುವೆಂಪು ಅವರ ಚಿಂತನೆಗಳು ಹೆಚ್ಚಾಗಿ ಸಹಜಕವಿಯ ಹೊಳಹುಗಳು; ಶಾಸ್ತ್ರಕಾರನ ನಿರ್ದುಷ್ಟ ಪ್ರತಿಪಾದನೆಗಳಲ್ಲ. ಹೀಗಾಗಿ ಅವುಗಳಲ್ಲಿ ಕೆಲವು ಲೋಪ-ದೋಷಗಳು ಕಂಡುಬರುತ್ತವೆ. ಅವರ ವೈಯಕ್ತಿಕ ರುಚಿ-ಧೋರಣೆಗಳೂ ಇಲ್ಲಿ ಕೆಲಸ ಮಾಡಿವೆ. ಕಾವ್ಯದ ಅನನ್ಯಪರತಂತ್ರತೆಯನ್ನು ವಿವರಿಸುವಾಗ ಕವಿತೆಯನ್ನು ಅತಿಲೋಕವಿಶಿಷ್ಟವೆಂದು ಬಗೆಯುತ್ತಾರೆ. ಕವಿಗೆ ನಿಯಾಮಕರು ಯಾರೂ ಇಲ್ಲ, ಆತನ ಸ್ಥಾನವೇನಿದ್ದರೂ ಸೃಷ್ಟಿಕರ್ತನಾದ ಬ್ರಹ್ಮನ ಜೊತೆಗೆ ಎಂಬ ರೀತಿಯ ಅಭಿಪ್ರಾಯಗಳನ್ನು ಕವಿತೆಗಳಲ್ಲಿಯೂ ಪ್ರಬಂಧಗಳಲ್ಲಿಯೂ ವ್ಯಕ್ತಪಡಿಸುತ್ತಾರೆ. ಶೇಕ್ಸ್ಪಿಯರ್, ಟ್ರಾಜಿಡಿ, ಸಿನೆಮಾ ಮಾಧ್ಯಮ, ‘ಪತಿತ’ ಪಾತ್ರಗಳ ಉದ್ಧರಣ ಮುಂತಾದ ವಿಷಯಗಳನ್ನು ಕುರಿತ ಅವರ ಚಿಂತನೆಗಳು ಯುಕ್ತಿಯುಕ್ತವಾಗಿರದೆ ರಮ್ಯ ಮನೋವೃತ್ತಿಯ ದ್ಯೋತಕಗಳಂತಿವೆ. ಅಧ್ಯಾತ್ಮವೆಂದು ಅವರು ಹಲವೊಮ್ಮೆ ಕರ್ಮಸಿದ್ಧಾಂತವನ್ನು ಅನ್ಯನಿರಪೇಕ್ಷವಾಗಿ ನಚ್ಚುವುದರಿಂದ ಆ ದಿಶೆಯಲ್ಲಿ ರೂಪುಗೊಂಡ ಅವರ ನಿಲವುಗಳು ವಾಸ್ತವಾಂಗೀಕರ, ಸಾಮರಸ್ಯ, ಸಮನ್ವಯಗಳನ್ನು ಕಾಣಿಸದೆ, ವಿಚಾರವಂತಿಕೆಯ ಮುಸುಕಿನ ಹಿಂದಿರುವ ಮುಗ್ಧಮನಸ್ಸಿನ ಹಂಬಲ, ಅಭೀಪ್ಸೆಗಳನ್ನು ತೋರ್ಪಡಿಸುತ್ತವೆ. ಇದಕ್ಕೆ ‘ಶ್ರೀರಾಮಾಯಣದರ್ಶನಂ’ ಕಾವ್ಯದ ‘ದರ್ಶನ’ವೇ ನಿದರ್ಶನ.
[1] ಶ್ರೀಸಾಹಿತ್ಯ, ಪು. ೩೪೧
[2] ಕುವೆಂಪು ಪುನರಾಲೋಕನ, ಪು. ೧೬೧
[3] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೭೩೫
To be continued.