ವಿಮರ್ಶೆ
ಕಾವ್ಯಮೀಮಾಂಸೆಯ ಕೆಲವು ಮೂಲಭೂತ ಪ್ರಮೇಯಗಳನ್ನು ಮೇಲ್ಕಾಣಿಸಿದಂತೆ ನಿರೂಪಿಸಿರುವ ಕುವೆಂಪು ಅವುಗಳನ್ನು ಅನ್ವಯಿಸಿ ಪ್ರಾಯೋಗಿಕವಾಗಿಯೂ ತೌಲನಿಕವಾಗಿಯೂ ಕಾವ್ಯಗಳನ್ನು ವಿಮರ್ಶಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ “ವಿಮರ್ಶೆ ಎಂದರೆ ಕವಿಪ್ರತಿಭೆಯಿಂದ ಹೊರಹೊಮ್ಮುವ ಸುಂದರ ಭಾವಮಯ ಕಾವ್ಯಕ್ಷೇತ್ರಗಳಲ್ಲಿ ಸೂಕ್ಷ್ಮಮತಿಯಾದ ಸಹೃದಯನು ಕೈಕೊಳ್ಳುವ ವಿಹಾರಯಾತ್ರೆ ಅಥವಾ ಸಾಹಸಯಾತ್ರೆಯ ಕಥನಕಾರ್ಯ ... ಸಹಾನುಭೂತಿಯಿಲ್ಲದಿದ್ದರೆ ರಸಕೃತಿಗಳ ಆಸ್ವಾದನೆ ಅಗಮ್ಯ.”[1] ಸಹಾನುಭೂತಿ ಎಂಬ ಮಾತಿನಲ್ಲಿ ಕವಿಯ ಅನುಭವವನ್ನು ತನ್ನದನ್ನಾಗಿ ಮಾಡಿಕೊಳ್ಳಲು ರಸಿಕನಿಗೆ ಇರಬೇಕಾದ ಸಮಾನಹೃದಯತ್ವ ಹಾಗೂ ಕವಿಯ ಮಾತಿನಲ್ಲಿ ಶಂಕೆಯಿಲ್ಲದ ವಿಶ್ವಾಸ - ಎರಡೂ ಭಾವಗಳು ಅಡಕವಾಗಿವೆ. ಮೊದಲನೆಯದು ‘ಸಹೃದಯತೆ’ಗೂ ಎರಡನೆಯದು ಕೋಲ್‌ರಿಜ್ ಹೇಳುವ ‘willing suspension of disbelief’ ಎಂಬುದಕ್ಕೂ ಸಂವಾದಿ.
ವಿಮರ್ಶಕನು ಸಹಾನುಭೂತಿಯಿಂದ ಕವಿಯೊಡನೆ ಹೃದಯಸಂವಾದವನ್ನು ಸಾಧಿಸಿದರೆ ಅವನ ಕಾರ್ಯ ಸಾರ್ಥಕವಾಗುತ್ತದೆ; ಇಲ್ಲದಿದ್ದರೆ ವಿಫಲವಾಗುತ್ತದೆ. ಈ ಭಾವವನ್ನು ಪುಟ್ಟಪ್ಪನವರು ‘ಶ್ರೀರಾಮಾಯಣದರ್ಶನಂ’ ಕಾವ್ಯದಲ್ಲಿ ಉಪಮೆಯಾಗಿ ಮೂಡಿಸಿದ್ದಾರೆ. ಹನುಮಂತನು ಸಾಗರವನ್ನು ಲಂಘಿಸಲು ಮೊದಲಾದಾಗ ಅವನು ಹಾರಿದ ರಭಸಕ್ಕೆ ಮಹೇಂದ್ರಪರ್ವತದ ಗಿಡ-ಮರ-ಬಂಡೆಗಳು ಅವನೊಡನೆ ಮೇಲೇರುತ್ತವೆ; ಸ್ವಲ್ಪ ಸಮಯದ ಬಳಿಕ ಅವನನ್ನು ಹಿಂಬಾಲಿಸಲಾಗದೆ ಕೆಳಗಿಳಿಯುತ್ತವೆ. ಕೆಲವು ಅವನಿಗೇ ಅಂಟುಕೊಂಡು ಆಕಾಶಗಾಮಿಗಳಾಗುತ್ತವೆ. ಮೊದಲವು ಬರಿಯ ಬುದ್ಧಿಯನ್ನು ನೆಮ್ಮುವ ವಿಮರ್ಶಕರಂತೆ, ಮೇಲಿನವು ಸಹೃದಯರಂತೆ ಎಂದು ಕುವೆಂಪು ಕಲ್ಪಿಸುತ್ತಾರೆ:
“ನೆಗೆದ ಹನುಮನ ಕೂಡೆ ಬಂಡೆಗಿಡಮರಬಳ್ಳಿಗಳ್
ಪಾರಿದುವಿನಿತು ಗೆಂಟರ್ಗೆ. ಮತ್ತಮಂಬುಧಿಗೆ
ಗಮನಗೆಟ್ಟುರುಳಿದುವು, ಕವಿಕಲ್ಪನೆಯ ಕೂಡೆ
ಏರಲೆಳಸಿಯುಮೇರಲಾರದ ವಿಮರ್ಶಕನ
ಕಾಣ್ಮೆಯಿಲ್ಲದೆ ಬರಿಯ ಜಾಣ್ಮೆಯೋಲ್. ಆದೊಡಂ
ಪಲವಾತನಾ ಗಮನವೇಗಮಹಿಮೆಗೆ ಸಿಲ್ಕಿ,
ತಮ್ಮತನಮಂ ಮರುತ್ಸುತನ ತನುವಿಗರ್ಪಿಸುತೆ,
ರಾಮದೂತನ ಮೆಯ್ಯನಪ್ಪುತಂಟುತೆ ನಭೋ-
ಯಾತ್ರಿಗಳಾದುವೈ, ಕವೀಶ್ವರಾವೇಶಮಂ
ಕೊಂಕು ಬಿಂಕವನುಳಿದು ನೆಮ್ಮುವ ರಸಾಸ್ವಾದಿ
ಸಹೃದಯವಿನಯದಂತೆ.”[2]
ಇಂಥ ವಿಮರ್ಶೆ ‘ಪೂರ್ಣದೃಷ್ಟಿ’ಯಿಂದ ಕೂಡಿರಬೇಕೆಂದು ಕುವೆಂಪು ಒತ್ತಿಹೇಳುತ್ತಾರೆ. ಕಾವ್ಯದ ಅವಯವಗಳನ್ನು ತುಂಡುತುಂಡು ಮಾಡಿ ವಿಶ್ಲೇಷಿಸದೆ ಅವುಗಳನ್ನು ಕೂಡಿದ ಮಟ್ಟಿಗೂ ಒಟ್ಟಾಗಿ ಕಾಣಬೇಕೆಂಬುದು ಅವರ ಕಳಕಳಿ. ವಿಮರ್ಶೆಯಲ್ಲಿ ಬಿಡಿಗಿಂತ ಇಡಿಯನ್ನು ನಚ್ಚಬೇಕೆಂದು ಹೇಳುತ್ತ ದೃಷ್ಟಾಂತವೊಂದನ್ನು ನೀಡಿ ವಿಚಾರವನ್ನು ಸಿಂಗರಗೊಳಿಸುತ್ತಾರೆ: “ಆನೆಯನ್ನು ಕಟ್ಟಲು ತಯಾರುಮಾಡಿದ ಕಣ್ಣಿಯೂ ಸೂತ್ರಸಮ್ಮೇಳನ; ರತ್ನಕಂಬಳಿಯೂ ಸೂತ್ರಸಮ್ಮೇಳನ ... ಮೊದಲನೆಯದು ಹಗ್ಗಗಳ ಬಲ್ಮೆಯ ಕಟ್ಟು; ಎರಡನೆಯದು ಅವುಗಳ ಒಲ್ಮೆಯ ಗುಟ್ಟು.”[3]
ಇಲ್ಲಿಯೇ “ಉತ್ತಮವಾದುದನ್ನು ಬೆರಳಿಟ್ಟು ತೋರುವುದು ಹೇಗೆ ವಿಮರ್ಶೆಯೋ ಹಾಗೆಯೇ ಅನುತ್ತಮವಾದುದನ್ನು ಮುಚ್ಚುವುದೂ ಒಂದು ತೆರನಾದ ವಿಮರ್ಶೆಯೆ. ರಸವೂ ಅರಸವೂ ಮಿಶ್ರವಾಗಿದ್ದರೆ ಸಾಮಾನ್ಯನಿಗೆ ಅದನ್ನು ಬೇರೆಗೈಯುವುದು ಕಷ್ಟವಾಗುತ್ತದೆ ... ಆದ್ದರಿಂದ ಯುಕ್ತವಾದ ಸಂಗ್ರಹಕಾರ್ಯವೂ ವಿಮರ್ಶೆಯೇ”[4] ಎಂಬ ಮಹತ್ತ್ವದ ಮಾತನ್ನಾಡಿದ್ದಾರೆ. ಗದಾಯುದ್ಧಸಂಗ್ರಹ, ಹರಿಶ್ಚಂದ್ರಕಾವ್ಯಸಂಗ್ರಹ, ವಿವಿಧ ಕವಿಗಳ ವಾಚಿಕೆಗಳೇ ಮೊದಲಾದ ಕೃತಿಗಳ ಮೌಲ್ಯ ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗುತ್ತದೆ. ಇದೇ ಸಾಲಿಗೆ ಸೇರುವಂಥದ್ದು ಕಾವ್ಯಮೀಮಾಂಸೆಗೆ ಸಂಬಂಧಿಸಿದ ಪುಟ್ಟಪ್ಪನವರ ಪ್ರಬಂಧಗಳ ಪ್ರಾತಿನಿಧಿಕ ಸಂಕಲನ, ‘ದಾರ್ಶನಿಕ ಕಾವ್ಯಮೀಮಾಂಸೆ’ (ಸಂ. ಹಾ. ಮಾ. ನಾಯಕ).
ಒಳ್ಳೆಯ ವಿಮರ್ಶಕ ಅರೋಚಕಿಯೂ ಆಗದೆ, ಸತೃಣಾಭ್ಯವಹಾರಿಯೂ ಆಗದೆ ರಸಜ್ಞನಾಗಿರಬೇಕೆಂದು ಕುವೆಂಪು ವಿವರಿಸಿದ್ದಾರೆ. ಸಂಸ್ಕೃತ ಆಲಂಕಾರಿಕ ವಾಮನನು ಮೊದಲ ಬಾರಿಗೆ ಈ ತತ್ತ್ವಗಳನ್ನು ಕವಿಗಳಿಗೆ ಅನ್ವಯಿಸಿ ಪ್ರತಿಪಾದಿಸಿದ;[5] ಕುವೆಂಪು ಅವನ್ನು ವಿಮರ್ಶಕರಿಗೂ ಅನ್ವಯಿಸಿದ್ದಾರೆ: “...ಯಾವ ರುಚಿ, ಅಳತೆ, ಸ್ವಚ್ಛತೆಗಳನ್ನು ಲಕ್ಷಿಸದೆ ಸೇವನ ಮಾಡುವ ಸತೃಣಾಭ್ಯವಹಾರಿಗಳಿಗೆ ಎಲ್ಲವೂ ಅಷ್ಟೇ ರುಚಿಕರ. ಅಲ್ಲದೆ, ಯಾವುದರ ಸವಿಯನ್ನೂ ಗ್ರಹಿಸಲು ಅನರ್ಹರಾದ ಅರೋಚಿಗಳಿಂದಲೂ ಒಂದು ನಿಷ್ಕೃಷ್ಟ ವಿಮರ್ಶೆ ಹೊಂದಲಾರೆವು. ಇಬ್ಬರೂ ಒಂದೇ. ಈ ಬಗೆಯ ಎರಡೂ ವಿಮರ್ಶೆಗಳು ಹಾಳುಬಾವಿಗೆ ತಳ್ಳುತ್ತವೆ. ಈ ಎರಡು ಅಂತ್ಯಗಳಿಗೆ ಹೋಗದೆ, ಮಧ್ಯಮಾರ್ಗವನ್ನನುಸರಿಸಬೇಕು.”[6]
ಇಲ್ಲಿಯೇ ಹಿರಿದಾದ ಕೃತಿಗಳನ್ನು ವಿವೇಚಿಸತೊಡಗಿದಾಗ ಪಾಂಡಿತ್ಯದೊಡನೆ ಸರ್ಜನಶೀಲತೆಯೂ ಬೇಕಾಗುತ್ತದೆಂದು ಹೇಳುತ್ತಾರೆ: “ಕವಿತಾಶಕ್ತಿಯನ್ನು ಒಳಗೊಂಡ ವಿಮರ್ಶಕ ಅಥವಾ ಕವಿವಿಮರ್ಶಕನಿಂದಲೇ (creative critic) ಮಹಾಕಾವ್ಯಗಳನ್ನು ಹೊಕ್ಕು ಹುಡುಕುವುದು ಸಾಧ್ಯ.” ಈ ನಿಲವಿಗೆ ನಿದರ್ಶನವಾಗಿ ತಾವೇ ಕಾದಂಬರಿಯಂಥ ಕಾವ್ಯವನ್ನು ಹಲವು ಆಯಾಮಗಳಲ್ಲಿ ವಿಮರ್ಶಿಸಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿರುವುದನ್ನು ಮುಂದೆ ಪರಿಶೀಲಿಸಬಹುದು.
ಹೀಗಿದ್ದರೂ ಓದುಗರು ವಿಮರ್ಶಕರನ್ನೇ ಕಣ್ಣುಮುಚ್ಚಿ ನಚ್ಚಿಕೊಳ್ಳಬಾರದು; ಉದ್ದಿಷ್ಟ ಕೃತಿಯನ್ನು ರಸದೃಷ್ಟಿಯಿಂದ ಗಮನವಿರಿಸಿ ಗಟ್ಟಿಯಾಗಿ ಓದಿಕೊಳ್ಳಬೇಕು; ಉತ್ತಮ ಕೃತಿ ತನ್ನನ್ನು ಆಸ್ವಾದಿಸಲು ಬೇಕಾದ ತಿಳಿವನ್ನು ತಾನೇ ಬೀಜರೂಪದಲ್ಲಿ ಒದಗಿಸುತ್ತದೆ; ಒಳ್ಳೆಯ ವಿಮರ್ಶಕನಾದರೂ ಸಾಹಿತ್ಯದ ಮೂಲಸೂತ್ರಗಳನ್ನು ಮನದಟ್ಟಾಗಿಸಿ ಓದುಗರೇ ಕಾವ್ಯಗಳನ್ನು ಆಸ್ವಾದಿಸುವಂತೆ ತಯಾರು ಮಾಡುತ್ತಾನೆ ಎಂದು ಅಭಿಪ್ರಾಯಪಡುತ್ತಾರೆ. ಈ ಸಂದರ್ಭದಲ್ಲಿ ಅವರಾಡುವ ಒಂದು ಮಾತು ಎಲ್ಲರಿಗೂ ಅನುಸಂಧೇಯ: “No analysis or criticism of a book can ever be an adequate substitute for our personal mastery of the book itself.”[7]
ಇಂಥದ್ದೇ ಅವರ ಮತ್ತೊಂದು ಮಾತು ಹೀಗಿದೆ: “No great book can be light reading, though it may be easy reading sometimes.”[8] ಇವನ್ನವರು ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳನ್ನುದ್ದೇಶಿಸಿ ಆಡಿದರೆಂದು ಮನಸ್ಸಿಗೆ ತಂದುಕೊಂಡರೆ, ಬೋಧಕರಾಗಿ ಕುವೆಂಪು ಅವರಿಗಿದ್ದ ಬಾಧ್ಯತೆಯೂ ಆಗ ಅವರು ತೋರುತ್ತಿದ್ದ ಮಾರ್ಗ ಹಾಗೂ ಕೊಡುತ್ತಿದ್ದ ಎಚ್ಚರಿಕೆಗಳೂ ವಿಶಿಷ್ಟವಾದುವೆಂದು ತಿಳಿಯುತ್ತದೆ.
ಇಂಥ ಎಚ್ಚರಿಕೆಗಳಲ್ಲಿ ಮುಖ್ಯವಾದುದು, ಹಿಂದಿನ ಸಾಹಿತ್ಯವನ್ನು ಇಂದಿನ ದೃಷ್ಟಿಕೋನದಿಂದ ನೋಡಬಾರದೆಂಬುದು: “ನಮ್ಮ ಹಿಂದಿನ ಮಹಾಕವಿಗಳನ್ನು ಇಂದಿನ ದೃಷ್ಟಿಯಿಂದ ಅಳೆದು ಟೀಕಿಸುವುದಕ್ಕೆ ಹೋಗುವುದು ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮಾರ್ಕ್ಸಿಸಂ ಸಿದ್ಧಾಂತ ಅಲ್ಲಿಲ್ಲ ಎಂದು ಟೀಕಿಸುವುದರಲ್ಲಿ ಅರ್ಥವಿಲ್ಲ; ಪ್ರಯೋಜನವೂ ಇಲ್ಲ. ಈ ರೀತಿಯ ಕೆಲವು ನವ್ಯರ ವಿಮರ್ಶೆ ಬಹಳ ಅವಿವೇಕವಾದದ್ದು ಅಂತ ತೋರುತ್ತದೆ ನನಗೆ.”[9] ಕಾವ್ಯವಿರುವುದು ಆಸ್ವಾದಕ್ಕೆ. ಅದು ಉತ್ತಮ ಕೃತಿಯಾಗಿದ್ದರೆ ಎಲ್ಲ ಕಾಲಕ್ಕೂ ಆಸ್ವಾದ್ಯವೆನಿಸುತ್ತದೆ. ಆದರೂ ಉತ್ತಮ ಕೃತಿಗಳಲ್ಲಿ ಕೆಲವು ಭಾಗಗಳೂ ಅಷ್ಟಾಗಿ ಉತ್ತಮವಲ್ಲದ ಕೃತಿಗಳಲ್ಲಿ ಹಲವು ಭಾಗಗಳೂ ಕಾಲಬಾಹ್ಯವಾಗಿ ತೋರಬಹುದು; ಪ್ರಾಚೀನ ಕವಿಗಳ ರುಚಿ-ರೀತಿಗಳು ವಿರಸವೆನಿಸಬಹುದು. ಇಲ್ಲಿ ಎಚ್ಚರದಿಂದಿರಬೇಕು. ನಮ್ಮ ಕಾಲದ ಸಂಸ್ಕಾರವನ್ನು ನಾವು ತೊರೆಯಲಾಗುವುದಿಲ್ಲ; ಈಗಿನ ದೃಷ್ಟಿಕೋನವನ್ನೂ ಒಮ್ಮೆಲೇ ಬಿಡಲಾಗುವುದಿಲ್ಲ. ಹೀಗಿದ್ದಾಗ ಹಿಂದೆ ಕಂಡಂತೆ ಕವಿಯೊಡನೆ ಸಹಾನುಭೂತಿ ಸಾಧಿಸಿದರೆ ಆಸ್ವಾದ್ಯ ಅಂಶಗಳು ಯಾವುವೆಂದು ತಾನಾಗಿ ತಿಳಿಯುತ್ತದೆ. ಈಗಿನ ದೃಷ್ಟಿಕೋನ ಸಾಹಿತ್ಯೇತರ ವಿಷಯಗಳಲ್ಲಿಯೇ ಹೆಚ್ಚಾಗಿ ತಲೆದೋರುವುದು. ಆಗೆಲ್ಲ ಕವಿಯು ತನ್ನ ಕಾಲಕ್ಕೆ ಬದ್ಧನೆಂಬುದನ್ನು ಮರೆಯಬಾರದು. ಈ ಮಾನದಂಡಗಳು ಐತಿಹಾಸಿಕ, ಸಾಮಾಜಿಕ, ಮತೀಯ, ರಾಜಕೀಯ ಮುಂತಾದ ಅಧ್ಯಯನಗಳಿಗೆ ಒದಗಿಬರುವಂತೆ ಸಾಹಿತ್ಯಾಸ್ವಾದಕ್ಕಲ್ಲ. ಹೀಗಾಗಿ ಅವನ್ನು ಕೈಬಿಡುವುದು ಒಳಿತು. ಬಳಸಲೇ ಬೇಕು ಎಂದಾದಾಗ ಇಂದು-ಹಿಂದೆಗಳ ವಿವೇಕವನ್ನು ನಚ್ಚಿ ಸಾಗಬೇಕು.
ಪ್ರಾಯೋಗಿಕ ವಿಮರ್ಶೆ
ಪಂಪ, ರನ್ನ, ಜನ್ನ, ಲಕ್ಷ್ಮೀಶ, ನಾಗವರ್ಮ, ಕುಮಾರವ್ಯಾಸ ಮುಂತಾದ ಕವಿಗಳ ರಚನೆಗಳನ್ನು ಕುವೆಂಪು ಬಲುಸೊಗಸಾಗಿ ವಿಮರ್ಶಿಸಿದ್ದಾರೆ. ಅನ್ಯಸಾಹಿತಿಗಳ ಕೃತಿಗಳಲ್ಲಿ ಸ್ವಯಂ ಪ್ರತಿಭಾವಂತ ಕವಿಯೊಬ್ಬನು ಕಾಣಬಲ್ಲ ಸೂಕ್ಷ್ಮತೆಗಳಿಗೆ ಈ ಬರೆಹಗಳು ಒಳ್ಳೆಯ ಉದಾಹರಣೆಗಳಾಗಿವೆ. ಇದರ ಕೆಲವು ಮಾದರಿಗಳನ್ನು ಪರಿಶೀಲಿಸಬಹುದು. ನಾಗವರ್ಮನ ‘ಕರ್ಣಾಟಕಕಾದಂಬರೀ’ ಚಂಪೂಕಾವ್ಯವನ್ನು ‘ಮಹಾಶ್ವೇತೆಯ ತಪಸ್ಸು’ ಮತ್ತು ‘ಸರೋವರದ ಸಿರಿಗನ್ನಡಿಯಲ್ಲಿ’ ಎಂಬ ಲೇಖನಗಳಲ್ಲಿ ಪುಟ್ಟಪ್ಪನವರು ಸಮಿದ್ಧ ಬುದ್ಧಿಯಿಂದ ವಿಮರ್ಶಿಸಿದ್ದಾರೆ. ಬಾಣಭಟ್ಟ ಸಂಸ್ಕೃತದಲ್ಲಿ ಬರೆದ ಗದ್ಯಕಾವ್ಯವನ್ನು ನಾಗವರ್ಮ ಕನ್ನಡದಲ್ಲಿ ಚಂಪುವಾಗಿ ಪುನಾರಚಿಸಿದ್ದಾನೆ. ಮೂಲವೂ ಪರಿವರ್ತಿತ ಕಾವ್ಯವೂ ಆಯಾ ನುಡಿಗಳನ್ನು ಅನನ್ಯವಾಗಿ ಬೆಳಗಿವೆ. ಇವನ್ನು ಕುರಿತ ಕುವೆಂಪು ಅವರ ಏಕವಾಕ್ಯವಿಮರ್ಶೆ ಹೀಗಿದೆ: “ಕಾವ್ಯದುದ್ದಕ್ಕೂ ಪ್ರೇಮದ ಜಯಡಿಂಡಿಮಕ್ಕಿಂತಲೂ ಅದನ್ನು ಮೀರಿ ನಮಗೆ ಕೇಳಿಬರುತ್ತದೆ - ತಪಸ್ಸಿನ ವೀಣಾಧ್ವನಿ. ಕಟ್ಟಕಡೆಯಲ್ಲಿಯೂ ಕಾವ್ಯಕೈಲಾಸದ ನೆತ್ತಿಯ ಮೇಲೆ ಶೃಂಗಾರದ ದಿಗ್ವಿಜಯದ ಧ್ವಜವೇನೋ ಹಾರಾಡುತ್ತದೆ. ಆದರೆ ಕಣ್ಣಿಟ್ಟು ನೋಡುವವರಿಗೆ ಗೊತ್ತಾಗುತ್ತದೆ - ಆ ಧ್ವಜವಸ್ತ್ರ ವಲ್ಕಲದ್ದು; ಅದರ ಬಣ್ಣ ಕಾವಿ!”[10] ಇದನ್ನು ಕೇಳಿ ಇತರ ಕವಿಗಳು ‘ನಮ್ಮನ್ನು ಕುರಿತು ಇಷ್ಟು ಸೊಗಸಾದ ವಿಮರ್ಶೆ ಬರಲಿಲ್ಲವಲ್ಲಾ!’ ಎಂದು ಕರುಬಿದರೆ ಅಚ್ಚರಿಯಿಲ್ಲ. ಬಾಣನು ಉದ್ದಾಮ, ವಿಶೃಂಖಲ; ಅವನ ವಾಕ್ಯಸರಣಿ ಸಮಾಸನಿಬಿಡ, ಜಟಿಲ; ಅವನು ಮಾಡುವ ವರ್ಣನೆಗಳು ವಿಸ್ತೃತ, ಸಂಕೀರ್ಣ. ಈ ಕಾರಣಗಳಿಂದ ಕಾದಂಬರಿಯ ಹೃದಯವನ್ನೂ ಅದನ್ನು ರಚಿಸಿದ ಕವಿಯ ದಿಟವಾದ ಮನಸ್ಸನ್ನೂ ಅರಿಯುವುದು ಕಷ್ಟ. ಅದನ್ನು ಕಾಣಿಸಿದ ಶ್ರೇಯಸ್ಸು ಕುವೆಂಪು ಅವರದು. ಮಹಾಶ್ವೇತೆಯಂಥ ಸ್ಫಟಿಕವಿಶದವೂ ಭಸಿತಪವಿತ್ರವೂ ಆದ ಪಾತ್ರವನ್ನು ಬಗೆಗಣ್ಣಿನಿಂದ ಕಂಡು ಧನ್ಯತೆಯನ್ನು ಅನುಭವಿಸಿದ ಹೊರತು ಈ ಬಗೆಯ ವಿಮರ್ಶೆಯನ್ನು ಮಾಡಲಾಗುವುದಿಲ್ಲ.
ಆ ಕಾವ್ಯದಲ್ಲಿ ಬರುವ ಅಚ್ಛೋದಸರೋವರ “ಧರ್ಮದೇವತೆಯ ಸಲಿಲಾಕ್ಷಿಯಂತೆಯೂ ಕರ್ಮದೇವತೆಗೆ ಸರಸ್ಸಾಕ್ಷಿಯಂತೆಯೂ ಸೇವೆ ಸಲ್ಲಿಸುತ್ತದೆ” ಎಂದು ಉತ್ಪ್ರೇಕ್ಷಿಸುವ ಕುವೆಂಪು ವಿಮರ್ಶೆಯನ್ನೇ ಕಾವ್ಯವಾಗಿಸಿದ್ದಾರೆ. ಇಲ್ಲಿಯೇ ‘ಎಲೆ ತಾರಾಗಂ ಹರಂ...’ ಎಂದು ಮೊದಲಾಗುವ ಪದ್ಯದ ಅದ್ಭುತ ರಸಸಮೀಕ್ಷೆಯಿದೆ.[11] ಪ್ರಾಚೀನ ಪದ್ಯಗಳ ಸಾಲಂಕೃತ ಸೌಂದರ್ಯವನ್ನು ಹೇಗೆ ಆಸ್ವಾದಿಸಬೇಕೆಂಬ ಪಾಠವೇ ಇಲ್ಲಿದೆ. ಅಚ್ಛೋದಸರೋವರದ ಜೊತೆಗೆ ಪಂಪ-ರನ್ನರ ಕಾವ್ಯಗಳಲ್ಲಿ ಬರುವ ವೈಶಂಪಾಯನವೆಂಬ ಮತ್ತೊಂದು ಸರೋವರವನ್ನೂ ವಿವೇಚಿಸಿದ್ದಾರೆ. “ಅಚ್ಛೋದ-ವೈಶಂಪಾಯನ ಸರೋವರಗಳ ಸ್ಥಾನಗಳನ್ನು ಪಲ್ಲಟಗೊಳಿಸಿದರೆ ಶಕಾರ-ವಿಕಾರವಾಗುತ್ತದೆ”[12] ಎಂದು ಪುಟ್ಟಪ್ಪನವರು ಒಳನೋಟದ ಮಾತನ್ನಾಡಿದ್ದಾರೆ. ‘ಶಕಾರ-ವಿಕಾರ’ ಎಂಬ ಹಚ್ಚಹೊಸ ಪದಪುಂಜ ‘ಮೃಚ್ಛಕಟಿಕ’ದ ಓದಿನ ಸಂಸ್ಕಾರವಿರುವವರ ಮುಂದೆ ಧ್ವನಿಪರಂಪರೆಯನ್ನೇ ತೆರೆದಿಡುತ್ತದೆ. ಭಾರತೀಯ ಸಾಹಿತ್ಯವನ್ನು ಚೆನ್ನಾಗಿ ತಿಳಿದ ಸಂವೇದನಶೀಲ ಮನಸ್ಸು ಮೂಡಿಸಬಹುದಾದ ಹೊಳಹುಗಳಿಗೆ ಇದೊಂದು ಮೇಲ್ಪಂಕ್ತಿಯ ಮಾದರಿ. ಇಲ್ಲಿಯೇ ‘ಇದು ಪಾತಾಳ’, ‘ಅದಟಿನ ವಿಕ್ರಮಾರ್ಜುನ’ ಮುಂತಾದ ಪದ್ಯಗಳ ವಿಸ್ತೃತ-ಸುಂದರ ವಿಮರ್ಶೆಯಿದೆ.[13]
ಪಂಪನೊಂದಿಗೆ ಹೋಲಿಸುತ್ತ ಕುಮಾರವ್ಯಾಸನ ಬಗೆಗೆ ಕುವೆಂಪು ಆಡಿರುವ ಕೆಲವು ಮಾತುಗಳು ಪ್ರಾವಾಹಿಕ ಧೋರಣೆಯಿಂದ ನಮ್ಮನ್ನು ಎಳೆದುಕೊಂಡು ಹೋಗುತ್ತವೆ; ಅದೊಂದು ಬಗೆಯ ವಾಚ್ಯೇತರ ಉನ್ನತಿಯನ್ನೂ ಕಾಂತಿಯನ್ನೂ ತುಂಬಿಕೊಟ್ಟು ಆ ಕೂಡಲೇ ‘ಗದುಗಿನ ಭಾರತ’ವನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ: “ಹಳಗನ್ನಡ ಕವಿ ಪಂಪ ಕಲಿತವರಿಗೆ ಕಲ್ಪತರು, ನಡುಗನ್ನಡದ ಕವಿ ನಾರಣಪ್ಪ ಕಲಿಯದವರಿಗೂ ಕಾಮಧೇನು ... ಶೈಲಿಯ ನುಣ್ಪು, ಧ್ವನಿಸೂಕ್ಷ್ಮತೆ, ವ್ಯವಹಾರಭೂಮಿಕೆಯಲ್ಲಿ ನಡೆಯುವ ನಾಗರಿಕ ವ್ಯಾಪಾರನಿರೂಪಣೆಯಲ್ಲಿ ಮೈದೋರುವ ನಯರುಚಿಯ ಸಂಸ್ಕೃತಿ, ಪ್ರಕೃತಿಪ್ರಪಂಚದ ವಿವರಪರಿಜ್ಞಾನ, ಪ್ರಕೃತಿಸೌಂದರ್ಯದಲ್ಲಿ ಗಾಢಮೋಹ, ಅದರ ಬಣ್ಣನೆಯಲ್ಲಿ ಅನುರಕ್ತಿ, ಅದರ ಶತಸಹಸ್ರ ಮುಖವಾದ ವೈವಿಧ್ಯದ ಒಂದೊಂದು ವಿವರದಲ್ಲಿಯೂ ಅಕ್ಕರೆಯಿಂದುಣ್ಮುವ ಆಸಕ್ತಿ - ಇತ್ಯಾದಿ ಕಲಾದೃಷ್ಟಿಯಿಂದ ಪಂಪನಿಗೆ ದ್ವಿತೀಯನಾಗಿದ್ದರೂ ಭಾವತೀಕ್ಷ್ಣತೆಯಲ್ಲಿ, ರಸಾವೇಶದಲ್ಲಿ, ಪ್ರತಿಭಾಪ್ರವಾಹದ ದುರ್ದಮ್ಯ ವೇಗದಲ್ಲಿ, ಸಂಸ್ಕೃತಿಗೆ ತುಸು ದೂರವಾದರೂ ಪ್ರಕೃತಿಸಹಜವಾದ ಪಾರ್ವತಾರಣ್ಯಕ ರುಂದ್ರರೂಕ್ಷತಾಶಕ್ತಿಯಲ್ಲಿ, ಸರ್ವವನ್ನೂ ಸರ್ವರನ್ನೂ ಸರ್ವಕಾಲದಲ್ಲಿಯೂ ಸರ್ವಭಾವದಲ್ಲಿಯೂ ಭಗವದ್ಭಕ್ತಿಯ ಶ್ರೀಮಂತ ಕಾಂತಿಯ ಕಣ್ಣಿನಿಂದಲೆ ಕಾಣುವ ‘ವಿರಾಡ್‌ದರ್ಶನ’ದಲ್ಲಿ, ಲೌಕಿಕ ಆಗಮಿಕ ಐಹಿಕ ಆಮುಷ್ಮಿಕ ಎಂದು ಕವಲೊಡೆಯದೆ ಹಂಚದೆ ಅವಿಭಕ್ತವಾಗಿ ಆಕಾಶೋನ್ನತವಾಗಿ ಬ್ರಾಹ್ಮಭೂಮವಾಗಿ ಪರಮಪುರುಷಾರ್ಥಸಂಸ್ಪರ್ಶಿಯಾಗಿ ಬದುಕಿಗೆ ಬೆಳಕಿತ್ತು ಬಾಳನ್ನು ಹುರಿದುಂಬಿಸುವ ಆತ್ಮಶ್ರೀಯ ದಿವ್ಯಾಗ್ನಿಯಲ್ಲಿ ಆದಿಕವಿ ಪಂಪನಿಗೂ ಅದ್ವಿತೀಯನಾಗಿ ಆತನನ್ನೂ ದ್ವಿತೀಯನನ್ನಾಗಿ ಮಾಡುವ ಯೋಗಿಕವಿ ಪೂಜ್ಯ ನಾರಣಪ್ಪ ... ಪದವಿಷ್ಣುಪದಗಳಿಂದ ಭಾವಭಾಗೀರಥಿಯನ್ನು ಸೃಜಿಸಿ ನೆಲಕ್ಕೆ ಕರೆತರುವ ಕಲಾಬ್ರಹ್ಮನವನು.”[14] ಇವು ಅಂಧಾಭಿಮಾನದ ಬರಿಯ ಹೊಗಳಿಕೆಯ ಮಾತುಗಳಲ್ಲ; ಮುಚ್ಚುಮರೆಗಳಿಲ್ಲದ ಮೆಚ್ಚಿಕೆ, ದೊಡ್ಡದರ ಸಹೇತುಕ ಸ್ತುತಿ.
ಇದೇ ಬಗೆಯ ಪರಿಣಾಮವನ್ನು ಮೂಡಿಸುವ ಮತ್ತೊಂದು ಲೇಖನ ‘ಶಕ್ತಿಕವಿ ರನ್ನ.’[15] ವರ್ಚೋವಿಶಿಷ್ಟವಾದ ಅದರ ಭಾಷಿಕ ಸಾಮರ್ಥ್ಯ ಅಸಾಧಾರಣ. ಈ ಬರೆಹಗಳ ಮೂಲಕ ಕನ್ನಡದ ಪ್ರಮುಖ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ ಮತ್ತು ನಾಗವರ್ಮರನ್ನು ಪ್ರಾತಿನಿಧಿಕವಾಗಿ ಆರಿಸಿಕೊಂಡು ಕುವೆಂಪು ಎಲ್ಲ ಕಾಲಕ್ಕೂ ಮಾದರಿಯಾಗಬಲ್ಲ ವಿಮರ್ಶೆಯನ್ನು ಮಾಡಿದ್ದಾರೆ. ಈ ನಿಟ್ಟಿನ ಅವರ ಇನ್ನೂ ಕೆಲವು ಉಜ್ಜ್ವಲ ಉಕ್ತಿಗಳನ್ನು ಉಲ್ಲೇಖಮಾತ್ರವಾಗಿ ಸಂಗ್ರಹಿಸಬಹುದು: “ರನ್ನನಲ್ಲಿ ಅಂತಹ ಶಕ್ತಿಗುಣವೊಂದಿಲ್ಲದಿದ್ದರೆ, ಅವನದು ಪಂಪಸೂರ್ಯಕಾಂತಿಯನ್ನು ಪ್ರತಿಬಿಂಬಿಸುವ ಚಂದ್ರಕೀರ್ತಿ ಮಾತ್ರವಾಗುತ್ತಿತ್ತು”; “ಕನ್ನಡ ಸಾಹಿತ್ಯರಂಗದಲ್ಲಿ ದ್ರೌಪದಿಯ ಶ್ರೀಮುಡಿಗೆ ಕೈಯಿಟ್ಟ ನಾಲ್ವರು ಸಮರ್ಥರಲ್ಲಿ ಇಬ್ಬರು ಮಹಾ ಕಲಿಗಳು, ಇನ್ನಿಬ್ಬರು ಮಹಾಕವಿಗಳು: ಭೀಮ, ದುಃಶಾಸನ, ಪಂಪ, ನಾರಣಪ್ಪ”; “ನಾಗವರ್ಮನ ಕಾದಂಬರೀಕಾವ್ಯದಲ್ಲಿ ಶೃಂಗಾರವೂ ತಪೋಮಯವಾಗಿದೆ, ತಪಸ್ಸೂ ಶೃಂಗಾರಪೂರ್ಣವಾಗಿದೆ.”[16]
ಆದಿಕಾವ್ಯ ರಾಮಾಯಣವನ್ನು ಕುರಿತೂ ಪುಟ್ಟಪ್ಪನವರು ಒಳ್ಳೆಯ ವಿಮರ್ಶೆ ಮಾಡಿದ್ದಾರೆ: “ಅದು ಏಕಕವಿಕೃತಿಯೂ ಆಗಿದೆ; ಬಹುಕಾಲದ ಸಂಸ್ಕೃತಿಯ ಬಹು ದೊಡ್ಡ ಜನಾಂಗದ ಮನಃಕೃತಿಯೂ ಆಗಿದೆ. ಮೊದಲನೆಯ ಕಾರಣಕ್ಕಾಗಿ ಅದು ಭಾವಗೀತೆಯಂತಿದ್ದರೆ ಎರಡನೆಯ ಕಾರಣಕ್ಕಾಗಿ ಪುರಾಣದಂತಿದೆ. ಆದ್ದರಿಂದಲೇ ಅದಕ್ಕೆ ಮಹಾಕಾವ್ಯ ಎಂಬ ಬಿರುದು ಸರ್ವಾಂಗಸುಂದರವಾಗಿ ಒಪ್ಪುತ್ತದೆ. ಏಕಾಗ್ರತೆ, ಏಕಮುಖತೆ, ಐಕ್ಯತೆ, ರಾಗತೀಕ್ಷ್ಣತೆ, ಆದರ್ಶಪ್ರಿಯತೆ, ರಸಾವೇಶ ಇವುಗಳ ದೃಷ್ಟಿಯಿಂದ ಅದೊಂದು ಭಾವಗೀತೆ. ವಿಪುಲತೆ, ಬಹುಳತೆ, ವಿವಿಧತೆ, ದೇವತ್ವ, ದೈತ್ಯತ್ವ, ಮಹತ್ತ್ವ ಇವುಗಳ ದೃಷ್ಟಿಯಿಂದ ಅದೊಂದು ಪುರಾಣ. ಕವಿಕೋಕಿಲ ವಾಲ್ಮೀಕಿಯ ಹೈಮಾಚಲಸಂಗೀತದಲ್ಲಿ ಸರೋವರದ ಸೌಂದರ್ಯವಿದೆ; ಸರಿತ್ಪತಿಯ ಗಾಂಭೀರ್ಯವಿದೆ.”[17] ಭೂಮಕಾವ್ಯವೊಂದು ಹೇಗೆ ಬಹ್ವಾಯಾಮಗಳಲ್ಲಿ ವಿಶಿಷ್ಟವೆನಿಸುತ್ತದೆ ಎಂಬುದನ್ನು ಈ ಮಾತುಗಳು ಸೊಗಸಾಗಿ ನಿರೂಪಿಸಿವೆ; ಸಾಹಿತ್ಯ-ಸಂಸ್ಕೃತಿಗಳನ್ನು ಸಮನಾಗಿ ಬೆಳಗುವ ಕೃತಿಗಳನ್ನು ಹೇಗೆ ಕಾಣಬೇಕು ಎಂಬ ದೃಷ್ಟಿಯನ್ನೂ ಒದಗಿಸಿವೆ. ಇಂಥ ಕಾವ್ಯಗಳು ಪಾತ್ರ-ಸನ್ನಿವೇಶಗಳ ಮೂಲಕ ಅನೇಕ ಪ್ರತಿಮೆಗಳನ್ನು ಸೃಜಿಸಿರುತ್ತವೆ; ಅವಕ್ಕೆ ಭಂಗವೊದಗುವಂತೆ ಮಾಡುವುದು ಅಪಾಯಕರ ಎಂಬ ಎಚ್ಚರಿಕೆಯನ್ನು ಕೊಡಲು ಅವರು ಮರೆಯುವುದಿಲ್ಲ: “ಬಾಹ್ಯಜಗತ್ತಿನ ಭೌಗೋಲಿಕ ಸತ್ಯಕ್ಕಿಂತಲೂ ಸುಸ್ಥಿರವಾಗಿ ... ಸಂಸ್ಥಾಪಿತವಾಗಿರುವ ಪ್ರತಿಮಾರೂಪದ ಸತ್ಯಗಳಿಗೆ ಭಂಗವೊದಗಿದಾಗ, ವಿಕಾರವುಂಟಾದಾಗ ಅಥವಾ ಕಾವ್ಯಸತ್ತೆಯಲ್ಲಿ ಋತಪಲ್ಲಟ ಸಂಭವಿಸಿದಾಗ [ಅನುಚಿತವಾಗುತ್ತದೆ].”[18]
ತೌಲನಿಕ ವಿಮರ್ಶೆಯ ತೆಕ್ಕೆಗೆ ಬರುವ ಕೆಲವು ಮಾತುಗಳನ್ನು ಹಿಂದೆಯೇ ಅವಲೋಕಿಸಿದ್ದೇವೆ. ಈ ಬಗೆಯ ಇನ್ನಷ್ಟು ಸೂಚನೆಗಳು ‘ರನ್ನನ ವೀರಕೌರವ’, ‘ಸೀತಾವನವಾಸ’ ಮುಂತಾದ ಪ್ರಬಂಧಗಳಲ್ಲಿ ಸಿಗುತ್ತವೆ. ಮೊದಲ ಬರೆಹದಲ್ಲಿ ರನ್ನನು ಚಿತ್ರಿಸಿರುವ ದುರ್ಯೋಧನನನ್ನು ವಿವೇಚಿಸುತ್ತ ಆನುಷಂಗಿಕವಾಗಿ ಮಿಲ್ಟನ್ ಕವಿಯ ‘ಪ್ಯಾರಡೈಸ್ ಲಾಸ್ಟ್’ ಕಾವ್ಯದಲ್ಲಿ ಬರುವ ಸೇಟನ್ನನ ಪಾತ್ರವನ್ನು ಸ್ಮರಿಸುತ್ತಾರೆ; ಅಲ್ಲಿಯ ಕೆಲವು ಪಂಕ್ತಿಗಳನ್ನೂ ಉಲ್ಲೇಖಿಸುತ್ತಾರೆ. ಎರಡನೆಯ ಬರೆಹದಲ್ಲಿ ಶ್ರೀರಾಮನಿಗೂ ಲವ-ಕುಶರಿಗೂ ನಡೆಯುವ ಕಾಳಗ ಲಕ್ಷ್ಮೀಶನ ಕಾವ್ಯದಲ್ಲಿ ಸಾಕಷ್ಟು ಪುಷ್ಟಿಯನ್ನು ಪಡೆದಿಲ್ಲವೆಂದು ಹೇಳುತ್ತ, ಅದೇ ಬಗೆಯ ಸನ್ನಿವೇಶವನ್ನು ಮ್ಯಾಥ್ಯೂ ಅರ್ನಾಲ್ಡ್ ತನ್ನ ‘ಸೊಹ್ರಾಬ್ ಮತ್ತು ರುಸ್ತುಮ್’ ಕಾವ್ಯದಲ್ಲಿ ಹೇಗೆ ನಿರ್ವಹಿಸಿದ್ದಾನೆಂದು ಸೋದಾಹರಣವಾಗಿ ನಿರೂಪಿಸಿದ್ದಾರೆ.[19]
ಕುವಿಮರ್ಶೆಯನ್ನು ಕುರಿತು
ತಮ್ಮ ಕೆಲವು ಕವಿತೆಗಳಲ್ಲಿ ಪುಟ್ಟಪ್ಪನವರು ವಿಮರ್ಶಕರನ್ನು ತೆಗಳಿದ್ದಾರೆ ಹಾಗೂ ಆ ತೆಗಳುವಿಕೆ ತಮ್ಮ ಕಾವ್ಯಕ್ಕೆ ಬಂದ ಕುವಿಮರ್ಶೆಗಳಿಗೆ ಕೊಟ್ಟ ಕಾವ್ಯಾತ್ಮಕ ಪ್ರತಿಕ್ರಿಯೆಯೆಂದು ಹಿಂದೆಯೇ ಗಮನಿಸಿದ್ದೇವೆ. ಅವುಗಳ ಪೈಕಿ ಅತ್ಯಂತ ಪರಿಣಾಮಕಾರಿ ಉಕ್ತಿಯನ್ನೀಗ ಕಾಣೋಣ:
“ನೀನೇರಬಲ್ಲೆಯಾ ನಾನೇರುವೆತ್ತರಕೆ?
ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ?
ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ?
ಇಲ್ಲ? ನಡೆ, ದೂರ ಸರಿ! ಹೌದು? ಬಾ, ಹತ್ತಿರಕೆ!”[20]
ವಿಮರ್ಶೆಯನ್ನು ಕುರಿತು ಎಷ್ಟೆಲ್ಲ ಒಳ್ಳೆಯ ಮಾತುಗಳನ್ನಾಡಿದ್ದರೂ ಮೇಲಣ ಉಕ್ತಿಗೆ ಆಸ್ಪದವಾಗಿದೆ. ಈ ಬಗೆಯ ದ್ವೈಧಕ್ಕೆ ಕಾರಣವೇನು? ಕುವೆಂಪು ಅವರನ್ನು ಕುರಿತ ಮೊದಲ ವಿಮರ್ಶೆಯೇ ಅಪಸ್ವರದಿಂದ ಕೂಡಿತ್ತು, ಅನಂತರ ಬಂದ ಬಲುಪಾಲು ವಿಮರ್ಶೆಗಳೂ ಇದೇ ಜಾಡಿನವಾಗಿದ್ದವು, ಈ ಬಗೆಗೆ ಕವಿಗೆ ಸಹಜವಾಗಿಯೇ ಬೇಸರವಿತ್ತೆಂದು ಜಿ. ಎಸ್. ಶಿವರುದ್ರಪ್ಪನವರು ಸಾಕಷ್ಟು ದಾಖಲೆಗಳೊಂದಿಗೆ ವಿವರಿಸಿದ್ದಾರೆ.[21] ತನ್ನ ಸಮಕಾಲಿಕರಿಂದ ಸೈಯೆನಿಸಿಕೊಳ್ಳದಿದ್ದರೆ ಎಂಥ ಪ್ರತಿಭಾಶಾಲಿಯೂ ಸ್ವಲ್ಪವಾದರೂ ಬೇಗುದಿಗೊಳಗಾಗುತ್ತಾನೆ. ವಿದ್ವಾಂಸರೂ ಸಹೃದಯರೂ ಎನಿಸಿಕೊಂಡವರು ತಮ್ಮ ನಡುವಿರುವ ವಿಶಿಷ್ಟ ಪ್ರತಿಭೆಗೆ ಸೂಕ್ತವಾಗಿ ಸ್ಪಂದಿಸುವುದು ಕರ್ತವ್ಯವೇ ಆಗುತ್ತದೆ. ಈ ನಿಟ್ಟಿನಿಂದ ನೋಡಿದರೆ, ಕುವೆಂಪು ಅವರ ಗುರುವರ್ಗ ಅವರಿಗೆ ತೋರಿದ ಆದರವನ್ನು ಅವರ ತಲೆಮಾರಿನವರೇ ಆದ ಸಾಹಿತ್ಯವಿದರು ತೋರಲಿಲ್ಲವೆಂದು ತಿಳಿಯುತ್ತದೆ. ಅನಂತರ ಬಂದು ಅವರ ಶಿಷ್ಯವರ್ಗ ಎಷ್ಟೇ ಕೊಂಡಾಡಿದರೂ ವಸ್ತುನಿಷ್ಠವೂ ಪ್ರಬುದ್ಧವೂ ಆದ ವಿಮರ್ಶೆಗಳು ಗಣನೀಯ ಪ್ರಮಾಣದಲ್ಲಿ ಬರಲೇ ಇಲ್ಲ. ಇನ್ನು ನವ್ಯವೇ ಮುಂತಾದ ಚಳುವಳಿಗಳು ಪ್ರಾರಂಭವಾದ ಮೇಲೆ ಉಪೇಕ್ಷೆ-ಉಪಾಲಂಭಗಳೇ ಮೆರೆದವು. ಇವುಗಳಿಂದ ಕುವೆಂಪು ಬೇಸರಪಟ್ಟದ್ದು ಅಚ್ಚರಿಯಲ್ಲ. ಕವಿತೆಯ ಮೂಲಕ ಅವರಿದಕ್ಕೆ ಸ್ಪಂದಿಸಿದುದೂ ಕವಿಸಹಜ. ಆದರೂ ಎಂದಿಗೂ ವಿಚಾರವನ್ನು ವಿಚಾರದಿಂದಲೇ ಎದುರಿಸುವುದು ಒಳಿತು. ಒಟ್ಟಿನಲ್ಲಿ ಪುಟ್ಟಪ್ಪನವರು ಅನುತ್ತೇಜಕ ವಾತಾವರಣದಿಂದ ಎದೆಗುಂದದೆ ತಮ್ಮ ಸಾಹಿತ್ಯಕೃಷಿಯನ್ನು ಮುಂದುವರಿಸಿ ಅದ್ಭುತವಾದ ಕೃತಿಗಳನ್ನು ರಚಿಸುದುದು ನಮ್ಮ ಭಾಗ್ಯ.
ತಮ್ಮ ಶೈಲಿಯನ್ನು ಕುರಿತೂ ಇದೇ ಬಗೆಯ ಮಾತುಗಳು ಕೇಳಿಬಂದಾಗ ಅವಕ್ಕೆ ಕವಿತೆಯ ಮೂಲಕವೇ ಪುಟ್ಟಪ್ಪನವರು ಪ್ರತಿಕ್ರಿಯೆ ನೀಡಿದ್ದಾರೆ. (ಕೆಲವು ಸಂದರ್ಶನಗಳಲ್ಲಿಯೂ ಈ ಬಗೆಗೆ ಹೇಳಿಕೊಂಡಿದ್ದಾರೆ.) ‘ಸಂಸ್ಕೃತಭೂಯಿಷ್ಠ’ ಎಂಬ ಒಂದೇ ಮಾತಿನಿಂದ ಹಲವು ವಿಮರ್ಶಕರು ಅವರ ಶೈಲಿಯನ್ನು ಲಘುವಾಗಿ ಕಂಡಿದ್ದಾರೆ.[22] ಇದಕ್ಕೆ ಕುವೆಂಪು ಅವರ ಉತ್ತರ ಹೀಗೆ:
“ನನ್ನ ಭಾವದ ಧೀರ ಭಾರಕ್ಕೆ ವೇಗಕ್ಕೆ
ಚಟುಲ ರಣತೇಜಿ ಈ ಭೀಮಸುಂದರ ಶೈಲಿ;
ಹತ್ತದನು ನೀನೆಲವೊ ನೆತ್ತರಿದ್ದರೆ ಮೈಲಿ!
ಬಡಕಲಾದವಗೆ ನಾಗಾಲೋಟದಿಂ ಪಕ್ಕೆ
ನಿರಿನಿಟಿಲು ಮುರಿದಪ್ಪುದಸ್ಥಿಚೂರ್ಣದ ಥೈಲಿ.
ಕೈಲಾಗದೆಯೆ ಹತ್ತಿ ಮೈ ನೊಂದರೇಂ ತಪ್ಪೆ
ಕುದುರೆ? ಮೈ ಕೊಬ್ಬೆಂದು ದೂಷಿಸುವೆ! ಬಿಡು, ಬೆಪ್ಪೆ,
ನಿನಗಲ್ಲವೀ ತೇಜಿ - ಈ ದೈತ್ಯ ಕವಿಶೈಲಿ!
ನಿನ್ನ ಭಾವದ ಮೆಯ್ಯ ಪುಷ್ಟಿಗೊಳಿಸೈ ಮೊದಲು;
ತೋರ್ಪುದಾಗೆನ್ನ ಶೈಲಿಯ ಮಹಿಮೆ. ಭೂರ್ಭುವನ-
ಸ್ವರ್ಗಂಗಳಂ ಯಾತ್ರೆಗೈಯುವೆನ್ನಯ ಕವನ
ಬಯಲು ಸೀಮೆಯ ದೃಶ್ಯಕಾರ್ಪಣ್ಯತೆಗೆ ಬದಲು
ಮಲೆನಾಡಿನಡವಿ ಮೈಸಿರಿಯ ವಿನ್ಯಾಸಮಂ
ನೋಂತಿದೆ, ತೊರೆದು ನಪುಂಸಕರ ಸಂನ್ಯಾಸಮಂ!”[23]
ಸ್ವಸಮರ್ಥನೆಯ ಈ ಮಾತುಗಳು ಆತ್ಮವಿಶ್ವಾಸವನ್ನು ಉಜ್ಜ್ವಲವಾಗಿ ವ್ಯಂಜಿಸಿವೆ. ಮೇಲ್ಮಟ್ಟದ ಸಾಹಿತ್ಯವನ್ನು ಸೃಜಿಸದ ಕವಿಗಳು ಇಂಥ ಮಾತುಗಳನ್ನಾಡಿದರೆ ಅವು ಸಹ್ಯವೆನಿಸವು. ಆದರೆ ರಾಮಾಯಣದರ್ಶನವೂ ಸೇರಿದಂತೆ ಹತ್ತಾರು ಅತ್ಯುತ್ತಮ ಕೃತಿಗಳನ್ನು ತಾವೊಗ್ಗಿಸಿಕೊಂಡ ಶೈಲಿಯಲ್ಲಿ ರಚಿಸಿ ರಸಿಕರ ಮನಸ್ಸನ್ನು ಸೂರೆಗೊಂಡ ಪುಟ್ಟಪ್ಪನವರು ಆಡಿದಾಗ ಅವು ಭೂಷಣಗಳಾಗುವುವೇ ಹೊರತು ದೂಷ್ಯಗಳಲ್ಲ. ವೈಚಾರಿಕ ಸ್ತರದಲ್ಲಿ ಪರಿಶೀಲಿಸಿದರೆ, ಯಾವ ಶೈಲಿಯೂ ತನ್ನಂತೆಯೇ ಸರಿಯೂ ಅಲ್ಲ ತಪ್ಪೂ ಅಲ್ಲ. ಕವಿಯು ತನ್ನ ಮನೋಧರ್ಮಕ್ಕೆ ಅನುಗುಣವಾಗಿ ಒಂದು ಬಗೆಯ ಶೈಲಿಯನ್ನು ಕಾಲಕ್ರಮದಲ್ಲಿ ಪಳಗಿಸಿಕೊಳ್ಳುತ್ತಾನೆ. ಅದನ್ನು ಬಳಸಿಕೊಂಡು ರಚಿಸಿದ ಕೃತಿಗಳು ರಸ್ಯವಾಗಿವೆಯೇ ಇಲ್ಲವೇ ಎಂಬುದರ ಮೇಲೆಯೇ ಶೈಲಿಯ ಸಾಫಲ್ಯ-ವೈಫಲ್ಯಗಳು ನಿಂತಿವೆ. ಈ ನಿಟ್ಟಿನಿಂದ ನೋಡಿದಾಗ ಕುವೆಂಪು ಅವರು ಸ್ಪರ್ಧೆಗೇ ಸಿಲುಕದೆ ಗೆದ್ದಿದ್ದಾರೆಂಬುದು ಸ್ಪಷ್ಟ. ನಿಜಕ್ಕೂ ಅವರು ತಮ್ಮ ಪ್ರತಿಭೆಯ ಬಲದಿಂದ ಕಾವ್ಯಭಾಷೆಯ ಎಲ್ಲೆಯನ್ನೇ ವಿಸ್ತರಿಸಿ ಉಪಕರಿಸಿದ್ದಾರೆ. ಹೀಗಿದ್ದರೂ ಕೆಲವೊಮ್ಮೆ ಅವರ ಶೈಲಿ ‘ಅತಿ’ಯಾಗಿ ಕಾಣುತ್ತದೆ; ಅವರು ಸಾಮಾನ್ಯದ ಸಂಗತಿಗಳಿಗೂ ಭಾರಿ ಶಬ್ದಗಳನ್ನು ಬಳಸುತ್ತಾರೆಂದು ತೋರುತ್ತದೆ; ಪದಗಳನ್ನು ದುಂದು ಮಾಡುವಂತೆ ಭಾಸವಾಗುತ್ತದೆ. ಏನು ಮಾಡುವುದು, ಯಾವ ಸ್ವಭಾವಲಕ್ಷಣ ಉತ್ತಮ ದಶೆಯಲ್ಲಿ ಗುಣವಾಗುವುದೋ ಅದೇ ಸಾಮಾನ್ಯ ಮತ್ತು ಅಧಮ ದಶೆಗಳಲ್ಲಿ ದೋಷವಾಗುವುದು. ಇದು ಪುಟ್ಟಪ್ಪನವರಿಗೆ ಮಾತ್ರವಲ್ಲ, ಎಲ್ಲ ಕವಿಗಳಿಗೂ ಅನ್ವಯಿಸುತ್ತದೆ; ಶೈಲಿಗೆ ಮಾತ್ರವಲ್ಲ, ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ.
ವಿಮರ್ಶೆಯಲ್ಲಿ ತೊಡಕುಗಳು
ವಿಮರ್ಶೆಯಲ್ಲಿ ತತ್ತ್ವದೃಷ್ಟಿಯಿದ್ದರೆ ಒಳಿತೆಂದು ಸಾರುವ ಕುವೆಂಪು ‘ದಾರ್ಶನಿಕ ವಿಮರ್ಶೆ’ ಎಂಬ ನೂತನ ಪರಿಭಾಷೆಯನ್ನು ಸೃಜಿಸಿದ್ದಾರೆಂದು ಈಗಾಗಲೇ ಗಮನಿಸಿದ್ದೇವೆ. ಚೋದ್ಯವೆಂದರೆ ಈ ಬಗೆಯ ವಿಮರ್ಶೆಯ ಸ್ವರೂಪವನ್ನು ಅವರು ಸ್ಪಷ್ಟವಾಗಿ ವಿವರಿಸಿಲ್ಲ. ಧ್ಯಾನ, ತಪಸ್ಸು, ಯೋಗ ಮೊದಲಾದ ಆಧ್ಯಾತ್ಮಿಕ ಸಾಧನೆಗಳಿಂದ ಅದು ಸಿದ್ಧಿಸುವುದು ಎಂದಷ್ಟೇ ಹೇಳಿದ್ದಾರೆ.[24] ಈ ನೆಲೆಯಿಂದ ಗಮನಿಸಿ ‘ದರ್ಶನಧ್ವನಿ’ ಎಂಬ ಮತ್ತೊಂದು ಪರಿಭಾಷೆಯನ್ನು ಟಂಕಿಸಿದ್ದಾರೆ. ಇದು ಕಾವ್ಯವೊಂದರ ಅಂಗಿರಸಕ್ಕೆ ಅನುಗುಣವಾದ ಪ್ರಬಂಧಧ್ವನಿಯಲ್ಲದೆ ಬೇರೆಯಲ್ಲ. ನಿರ್ದಿಷ್ಟವಲ್ಲದ ಈ ಬಗೆಯ ಪರಿಭಾಷೆಗಳನ್ನು ಬೆಳಸುವುದು ವಿತಥ.
ಇದೇ ಸಾಲಿಗೆ ಸೇರುವಂಥದ್ದು ಅವರು ಬಳಸುವ ಮಹಾಛಂದಸ್ಸೇ ಮೊದಲಾದ ಮಾತುಗಳು. ಸರಳರಗಳೆಯ ನಿಯತ ಗತಿಗೆ ಭಂಗವುಂಟುಮಾಡಿದಾಗ ತೋರುವ ‘ಹೊಸ’ ಬಂಧವೇ ಮಹಾಛಂದಸ್ಸು. ಉತ್ತರರೂಪಕ್ಕಿಂತ ಪೂರ್ವರೂಪವೇ ಚೆನ್ನೆಂದು ಎಲ್ಲ ಪ್ರಾಜ್ಞರೂ ಬಲ್ಲರು. ಇನ್ನು ಮಹಾಕಾವ್ಯವೊಂದಕ್ಕೆ ಮಹಾಕವಿ, ಮಹಾಛಂದಸ್ಸು ಮತ್ತು ಮಹೋಪಮೆ ಆವಶ್ಯಕವೆಂದು ಕುವೆಂಪು ಹೇಳುವುದು ಯುಕ್ತವಲ್ಲ. ಪ್ರತಿಭಾಶಾಲಿಯ ರಸಬಂಧುರ ನಿರ್ಮಿತಿಗೆ ಸಹಕರಿಸುವ ಎಲ್ಲ ಪರಿಕರಗಳಿಗೂ ಮಹತ್ತ್ವ ಸಿದ್ಧಿಸುತ್ತದೆ. ಅದನ್ನು ಸಹೃದಯರೇ ಗುರುತಿಸಿ ಗೌರವಿಸುತ್ತಾರೆ. ಈ ಸಂದರ್ಭಗಳಲ್ಲಿ ಕುವೆಂಪು ‘ಮಹಾ’ಶಬ್ದವನ್ನು ಕೇವಲ ಗುಣವಾಚಕವಾಗಿ ಬಳಸುತ್ತಿದ್ದಾರೋ ಪಾರಿಭಾಷಿಕವಾಗಿಯೋ ಎಂದು ತಿಳಿಯದೆ ಗೊಂದಲವಾಗುತ್ತದೆ. ತಾತ್ಪರ್ಯ - ಉಪಕರಣಗಳಿಂದ ಮಹತ್ತ್ವ ಬರುವುದಿಲ್ಲ; ಕೃತಿಯ ಅಂತಃಸತ್ತ್ವದಿಂದ ಬರುತ್ತದೆ. “ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ.”
ದರ್ಶನವನ್ನು ‘ಪೂರ್ಣದೃಷ್ಟಿ’ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ. “ಖಂಡದೃಷ್ಟಿಗೆ ಅನ್ಯಾಯವೆಂದೂ ಅಧರ್ಮವೆಂದೂ ವ್ಯರ್ಥವೆಂದೂ ತೋರುವ ವ್ಯಾಪಾರಗಳು ಪೂರ್ಣದೃಷ್ಟಿಗೆ ಅಷ್ಟರಲ್ಲಿಯೇ ಕೊನೆಗಾಣದೆ, ಅನ್ಯಾಯವು ಪರಮ ನ್ಯಾಯದ ಕಡೆಗೂ ಅಧರ್ಮವು ಪರಮ ಧರ್ಮದ ಕಡೆಗೂ ವ್ಯರ್ಥವು ಪರಮ ಪ್ರಯೋಜನದ ಕಡೆಗೂ ನಷ್ಟವು ಪರಮ ಲಾಭದ ಕಡೆಗೂ ಚಲಿಸುತ್ತಿರುವುದು ಗೋಚರಿಸುತ್ತದೆ”[25] ಎಂಬುದು ಅವರ ವಿವರಣೆ. ಇಂಥ ಪೂರ್ಣದೃಷ್ಟಿ ಭಾರತೀಯರಿಗೆ ಸಹಜವೆಂದು ಸಾರುತ್ತಾರೆ. ಅವರ ಪ್ರಕಾರ ದುಃಖಾಂತ ಕೃತಿಗಳು ಅಸಮಗ್ರ; ಭಾರತೀಯ ಮನಸ್ಸು ಎಲ್ಲವನ್ನೂ ಸುಖಾಂತಗೊಳಿಸುತ್ತದೆ; ಅದು ಹಠಾತ್ತಾಗಿ ಜರುಗಿದ ವಿದ್ಯಮಾನಗಳಿಗೆ ಜನ್ಮಾಂತರದ ಪಾಪ, ಶಾಪ, ದೈವಕೃಪೆ, ಅಸುರಾವೇಶ ಮೊದಲಾದ ಕಾರಣಗಳನ್ನು ಕಲ್ಪಿಸುತ್ತದೆ; ಎಲ್ಲಿಯೂ ಯಾರಲ್ಲಿಯೂ ಆತ್ಯಂತಿಕ ಪತನವನ್ನು ಕಾಣುವುದಿಲ್ಲ.[26] ಈ ನಿಲವು ಅವರನ್ನು ಪತಿತ ಪಾತ್ರಗಳನ್ನು ಉದ್ಧರಿಸುವ ಹವಣಿಗೂ ಸಿನೆಮಾ ಮಾಧ್ಯಮವನ್ನು ಅಗ್ಗವಾಗಿ ಕಾಣುವುದಕ್ಕೂ ದುರಂತ ನಾಟಕಗಳನ್ನು ಬರೆದ ಶೇಕ್ಸ್ಪಿಯರನ ವಿಷಯದಲ್ಲಿ ಲಘುವಾಗಿ ಮಾತನಾಡುವುದಕ್ಕೂ ಪ್ರೇರಿಸಿದೆ.
‘ಪತಿತಪಾವನ’ ಮನೋಧರ್ಮವನ್ನು ‘ಶ್ರೀರಾಮಾಯಣದರ್ಶನಂ’ ಕಾವ್ಯದಲ್ಲಿಯ ಮಂಥರೆಯನ್ನು ಕುರಿತ ಮಾತುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು;
“ಓ ಪತಿತೆ,
ಓ ಕುಬ್ಜೆ, ಓ ಮಂಥರೆಯೆ ಮರುಗುವೆನ್ ನಿನಗೆ
ಕವಿಸಹಜ ಕರುಣೆಯಿಂ. ಲೋಕಕ್ರೋಧಮದಹಸ್ತಿ-
ಪದದಲನರೋಷದಾವಾಗ್ನಿಗಾಹುತಿಯಾಗಿ
ಬಿಳ್ದ ನಿನ್ನಾ ಭಸ್ಮರಾಶಿಯಂ ತೊಳೆವುದಿದೊ
ಕಣ್ಗಂಗೆ, ಕವ್ಯಮಹಿಮಾಸಿಂಧುತೀರ್ಥಕ್ಕೆ!”[27]
ಅವರ ಇನ್ನೂ ಕೆಲವು ಆಗ್ರಹದ ಮಾತುಗಳು ಹೀಗಿವೆ: “ನಮ್ಮ ಹೆಂಡದಂಗಡಿಗೂ ಸಿನಿಮಾಗಳಿಗೂ ಏನೂ ವ್ಯತ್ಯಾಸವಿಲ್ಲ ... ಆ ಸಿನಿಮಾಗಳಲ್ಲಿ ಶುದ್ಧ ರಸಾನುಭವವನ್ನು ಅನುಭವಿಸುವವರು ೧೦೦ಕ್ಕೆ ಒಬ್ಬರೂ ಇಲ್ಲ.”[28] “ಷೇಕ್ಸ್ಪಿಯರನ ಭಾವನೆಗೆ ನೆಲ ಬಿಟ್ಟೇಳಲಾರದ ಕುಕ್ಕುಟ ಗತಿಯಿದೆ”; “ಅವನಿಗಿಂತ ಹೆಚ್ಚಾಗಿ, ನಮ್ಮ ಹರಿಕಥೆ ಕೇಳುವ ಮುದುಕಿಯೂ ಹೇಳುತ್ತಾಳೆ.”[29]
(‘ತರಗತಿಗಳಲ್ಲಿ ಕುವೆಂಪು’ ಕೃತಿಯಿಂದ ಆಯ್ದ ಉದ್ಧೃತಿಗಳ ಬಲದಿಂದ ಪುಟ್ಟಪ್ಪನವರ ನಿಲವುಗಳನ್ನು ಗ್ರಹಿಸಿ ವಿಮರ್ಶಿಸುವಾಗ ಒಂದು ಎಚ್ಚರ ಆವಶ್ಯಕವಾಗುತ್ತದೆ. ಅಧ್ಯಾಪಕರು ಪಾಠ ಮಾಡುವಾಗ ಎಷ್ಟೋ ವೇಳೆ ಆಯಾ ವಿಷಯಗಳನ್ನು ಸ್ಪಷ್ಟಪಡಿಸಲು ತತ್‌ಕ್ಷಣಕ್ಕೆ ತೋರಿದ ಯುಕ್ತಿಗಳನ್ನೂ ಉದಾಹರಣೆಗಳನ್ನೂ ನೀಡಿರುತ್ತಾರೆ. ಇವನ್ನು ಅವರ ನಿಶ್ಚಿತ ಅಭಿಪ್ರಾಯಗಳೆಂದು ಹೇಳಲು ಆಗುವುದಿಲ್ಲ. ಅಲ್ಲದೆ ಪ್ರಸ್ತುತ ಕೃತಿಯಲ್ಲಿ ಸಂಕಲನಗೊಂಡ ವಿಚಾರಗಳು ಪುಟ್ಟಪ್ಪನವರು ತಮ್ಮ ಕೆಲವೇ ಪ್ರಿಯಶಿಷ್ಯರನ್ನುದ್ದೇಶಿಸಿ ತರಗತಿಯ ಆಪ್ತವಲಯದಲ್ಲಿ ಮಾತನಾಡುವಾಗ ರೂಪುಗೊಂಡವು. ಈ ಕಾರಣದಿಂದಲೂ ಅವುಗಳ ಸಾಂದರ್ಭಿಕತೆ ಏರ್ಪಡುತ್ತದೆ; ಮೊನಚು ಹೆಚ್ಚುತ್ತದೆ. ಇಷ್ಟು ಪ್ರತಿಬಂಧಕಗಳಿದ್ದರೂ ಇಲ್ಲಿಯ ಅಭಿಪ್ರಾಯಗಳನ್ನು ಗಂಭೀರವಾಗಿ ಸ್ವೀಕರಿಸಿರುವುದಕ್ಕೆ ಕಾರಣ, ಅವು ಕುವೆಂಪು ಅವರ ಅಧಿಕೃತ, ಪ್ರಕಾಶಿತ ಪುಸ್ತಕಗಳಲ್ಲಿ ಪ್ರಕಟವಾಗಿರುವ ಆಲೋಚನೆಗಳಿಗೆ ವಿರುದ್ಧವಾಗಿಲ್ಲ. ಅವರ ಆತ್ಮಚರಿತ್ರೆಯೂ ಸೇರಿದಂತೆ ಇಡಿಯ ಕೃತಿಶ್ರೇಣಿಯೇ ಇದಕ್ಕೆ ಸಾಕ್ಷಿ. ಇಷ್ಟೇ ಅಲ್ಲದೆ ಇಲ್ಲಿಯ ತೊಡಕಿನ ವಿಷಯಗಳನ್ನು ಕೈಬಿಟ್ಟರೆ ಒಳ್ಳೆಯ ವಿಷಯಗಳನ್ನೂ ಉಪೇಕ್ಷಿಸಬೇಕಾದೀತು. ಅದರಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು.)
ಇಲ್ಲಿಯ ತೊಡಕುಗಳನ್ನು ಅರಿಯಲು ಯತ್ನಿಸೋಣ.
ಜಗತ್ತು ಒಳಿತು-ಕೆಡುಕುಗಳ ಮಿಶ್ರಣ. ಇವಕ್ಕೆ ಮೂಲ ಪ್ರಕೃತಿಸಿದ್ಧವಾದ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಗುಣಗಳು. ಇವನ್ನು ಮೀರಬೇಕೆಂಬುದು ವೇದಾಂತದ ಉಪದೇಶ.[30] ಎಚ್ಚರ-ಕನಸ್ಸು-ನಿದ್ರೆಗಳೆಂಬ ಅವಸ್ಥೆಗಳನ್ನು ಅಧ್ಯಾರೋಪ-ಅಪವಾದ ಎಂಬ ಕ್ರಮದ ಸಹಾಯದಿಂದ ಅರಿತು ಆ ಮೂಲಕ ಗುಣಾತೀತವಾದ ಸ್ವಸ್ವರೂಪವನ್ನು ತಿಳಿಯಬೇಕೆಂದು ಜ್ಞಾನಿಗಳು ಹೇಳುತ್ತಾರೆ. ಇದು ಎಷ್ಟು ಅನಿವಾರ್ಯವಾದರೂ ಕಷ್ಟಸಾಧ್ಯವಾದ ಕೆಲಸ. ಆ ದಿಶೆಯಲ್ಲಿ ಕ್ರಮಿಸುವಾಗ ಎಲ್ಲರೂ ಆಶ್ರಯಿಸಬಹುದಾದ ಸುಗಮ ಸೋಪಾನ ಸತ್ತ್ವೋತ್ಕರ್ಷದ್ದು. ಇದು ಸಾಧ್ಯವಾಗುವ ಬಗೆಗಳಲ್ಲಿ ಅತ್ಯಂತ ರಮಣೀಯವಾದುದು ರಸಾನುಭವ. ಕಾವ್ಯ ಮೊದಲಾದ ಕಲೆಗಳನ್ನು ಆಸ್ವಾದಿಸುವಾಗ ‘ವಿಗಲಿತವೇದ್ಯಾಂತರ’ ಸ್ಥಿತಿಯಲ್ಲಿ ಕಾಮ-ಕರ್ಮಗಳಿಂದ ಮುಕ್ತವಾದ ಅಂತರಂಗ ಸತ್ತ್ವೋನ್ನತವಾಗಿ ಬೆಳಗುತ್ತದೆ.[31] ಆಗ ಒಳಿತು-ಕೆಡುಕುಗಳನ್ನು ಮೀರಿದ ನಿರ್ವೃತಿ ಲಭಿಸುತ್ತದೆ. ಇದು ಕಲೆಯಿಂದ ನಮಗಾಗುವ ಉಪಕಾರ.
ಲೋಕದ ವಾಸ್ತವವನ್ನು ಸಹಜವೆಂದು ಒಪ್ಪಿಕೊಳ್ಳದೆ ಅಲ್ಲಿ ಎಲ್ಲಕ್ಕೂ ಕಾರ್ಯ-ಕಾರಣಗಳ ಸುಸಂಬದ್ಧತೆಯನ್ನು ಹುಡುಕುವುದು ಭೌತೇತರ ವಿಷಯಗಳಲ್ಲಿ ಯುಕ್ತವೆನಿಸದು. ಕೆಡುಕಿಗೋ ದುಃಖಕ್ಕೋ ಕಾಣದ ಕಾರಣವನ್ನು ಹುಡುಕುವ ಹವಣು ಸತ್ಯಶೋಧನೆ ಎನಿಸದೆ ಎಲ್ಲೆಡೆ ಒಳಿತೇ ಇರಲೆಂದು ಆಶಿಸುವ ಮನೋಭಾವವನ್ನು ದ್ಯೋತಿಸುತ್ತದೆ. ಈ ಮನೋಭಾವವು ನೆಮ್ಮದಿಯ ನೆಲೆಯ ಆಶೀರೂಪದ್ದಲ್ಲ; ಹಂಬಲವನ್ನು ತುಂಬಿಸಿಕೊಳ್ಳುವ ಹಪಹಪಿಕೆಯದು; ಅಥವಾ ಜಗದ್ದುಃಖಕ್ಕೆ ಭೇಷಜವನ್ನು ಒದಿಗಿಸುತ್ತೇನೆಂದು ಉಜ್ಜುಗಿಸುವ ಪ್ರವಾದಿಯದು. ಕಾವ್ಯದ ಮಟ್ಟಿಗೆ ನೋಡುವುದಾದರೆ, ರಸವು ಸುಖ-ದುಃಖಾತ್ಮಕವಲ್ಲ; ಆನಂದಾತ್ಮಕ. ಹೀಗಾಗಿ ರಸವನ್ನು ಸೃಜಿಸಲು ಯತ್ನಿಸಿ ಸಫಲವಾದರೆ ಸುಖ-ದುಃಖಗಳನ್ನು ಆ ಮಟ್ಟಿಗೆ ಮೀರಿದಂತೆಯೇ ಆಗುತ್ತದೆ. ಈ ಉದ್ಯಮ ವಾಸ್ತವದೂರವಲ್ಲ. ಹೀಗಾಗಿಯೇ ಸುಖಾಂತ ಕೃತಿಗಳನ್ನು ಎತ್ತಿಹಿಡಿದು ತದ್ಭಿನ್ನವಾದುವನ್ನು ತೆಗಳುವ ಕುವೆಂಪು ಎಡವಿದ್ದಾರೆ. ಭಾರತೀಯ ಮನಸ್ಸು ಎಲ್ಲಕ್ಕೂ ಕಾರಣವನ್ನು ಕಲ್ಪಿಸಿ ಸುಖಾಂತಗೊಳಿಸುತ್ತದೆ ಎಂದು ಹೇಳುವ ಅವರಿಗೆ ರಾಮಾಯಣ ಮತ್ತು ಮಹಾಭಾರತಗಳೇ ಈ ಮಾತಿಗೆ ಅಪವಾದಗಳೆಂದು ತೋರಲಿಲ್ಲ! ದುರಂತ ನಾಟಕಗಳನ್ನು ಬರೆದನೆಂದು ಶೇಕ್ಸ್ಪಿಯರಿನ ಮೇಲೆ ಆಗ್ರಹ ತೋರುವ ಅವರಿಗೆ ಮಹಾಭಾರತವೇ ಮಿಗಿಲಾದ ‘ಟ್ರಾಜಿಡಿ’ ಎಂದು ಅರಿವಾಗಲಿಲ್ಲ! ಹೀಗಿದ್ದರೂ ಪಶ್ಚಿಮದಲ್ಲಿ ಬಳಕೆಗೆ ಬಂದ ‘ದುರಂತ’ ಕೃತಿಗಳಿಗೂ ನಮ್ಮಲ್ಲಿ ನೆಲೆಗೊಂಡಿರುವ ‘ಮಂಗಳಾಂತ’ (‘ಸುಖಾಂತ’ವಲ್ಲ) ಕೃತಿಗಳಿಗೂ ಭೇದವಿದೆ.
ಸಿನೆಮಾದ ವಿರುದ್ಧ ಅವರಾಡಿರುವ ಮಾತುಗಳೂ ಇವೇ ಕಾರಣಗಳಿಗೆ ದೋಷಗ್ರಸ್ತವಾಗಿವೆ. ಸ್ವಯಂ ನಾಟಕಕಾರರಾಗಿ ಕಾದಂಬರಿಯನ್ನು ‘ಕರತಲ ರಂಗಭೂಮಿ’ ಎಂದು ಕೊಂಡಾಡಿದ ಅವರಿಗೆ ರಂಗದ ಮೇಲೆ ಕಾಣುವ ದೃಶ್ಯಗಳನ್ನೇ ಕ್ಯಾಮೆರಾ ಕಣ್ಣಿನಿಂದ ಇನ್ನಷ್ಟು ತಾಂತ್ರಿಕ ಪರಿಷ್ಕಾರದೊಡನೆ ಕಂಡರೆ ಸಿನೆಮಾ ಆಗುವುದು ಎಂಬ ಸರಳ ಸತ್ಯದ ಅರಿವಾಗಲಿಲ್ಲ. ಹೀಗಿದ್ದರೂ ಆ ಕಾಲಕ್ಕೆ ನಮ್ಮ ನಾಡಿನಲ್ಲಿ ಸಿನೆಮಾ ಮಾಧ್ಯಮ ಪ್ರವರ್ಧಮಾನಕ್ಕೆ ಬಂದಿರಲಿಲ್ಲ; ಕುವೆಂಪು ಅವರಿಗೆ ಲಭ್ಯವಿದ್ದ ಮಾದರಿಗಳೇ ಕೆಲವು ಉತ್ತಮವಲ್ಲದ ಚಿತ್ರಗಳು ಎಂಬುದನ್ನು ನೆನಪಿನಲ್ಲಿಡಬೇಕು.
ಪತಿತೋದ್ಧಾರಕ್ಕೆ ಮುಂದಾಗುವ ಅವರ ಪ್ರವೃತ್ತಿ ನೀತಿಮೂಲದ್ದು. ಈ ಮನೋಭಾವದಿಂದ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ತಾರೆ-ಮಂದೋದರಿಯರು ತಮ್ಮ ಗಂಡಂದಿರು ಗತಿಸಿದ ಕೂಡಲೇ ಸಹಗಮನ ಮಾಡುವಂತೆ ಕವಿ ಕಲ್ಪಿಸಿದ್ದಾರೆ. ಇಲ್ಲಿ ಎಂ. ಹಿರಿಯಣ್ಣನವರ ಮಾತು ನಿರ್ಣಾಯಕವಾಗಿದೆ: “Art should not have a moral aim, but most necessarily have a moral view”[32] - ಕಲೆಗೆ ನೈತಿಕ ದೃಷ್ಟಿ ಇರಬೇಕೇ ಹೊರತು ನೈತಿಕ ಲಕ್ಷ್ಯ ಇರಕೂಡದು. ಪತಿತೋದ್ಧರಣದ ದೃಷ್ಟಿಯಿಂದ ಸೃಷ್ಟವಾದ ಪಾತ್ರಗಳು ಕಾವ್ಯದಲ್ಲಿ ಚೆನ್ನಾಗಿಯೇ ಕಾಣಬಹುದು; ಅವು ಒಳ್ಳೆಯ ಕಲೆಗಾಗಿಯೇ ದುಡಿಯಬಹುದು. ಆಗಲೂ ಈ ದೃಷ್ಟಿ ಸರಿಯೆನಿಸುವುದಿಲ್ಲ. ಎಷ್ಟು ಪಾತ್ರಗಳಿಗೆ ‘ನ್ಯಾಯ’ ಒದಗಿಸಲು ಸಾಧ್ಯ? ಆತ್ಯಂತಿಕ ಸಾಮರಸ್ಯವಿರುವುದು ಆಧ್ಯಾತ್ಮಿಕ ಸ್ತರದಲ್ಲಿ ಮಾತ್ರ.
ಉಪಸಂಹಾರ
ಕಾವ್ಯಮೀಮಾಂಸೆಯನ್ನು ಕುರಿತ ಕುವೆಂಪು ಅವರ ಆಲೋಚನೆಗಳು ಹೆಚ್ಚಿನ ಮಟ್ಟಿಗೆ ಉಪಾದೇಯವಾಗಿವೆ. ಈ ಚಿಂತನೆಗಳು ಇಂದೂ ವ್ಯಾಪಕವಾದ ವಿದ್ವದನುಸಂಧಾನವನ್ನು ಪಡೆಯದಿರುವುದು ನಿಜಕ್ಕೂ ವಿಷಾದದ ವಿಷಯ. ಸದ್ಯದ ಲೇಖನದಲ್ಲಿ ಗಮನಿಸಿದಂತೆ ಪುಟ್ಟಪ್ಪನವರ ಆಲೋಚನೆಗಳಲ್ಲಿ ಹೊಸ ಹೊಳಹುಗಳಿವೆ, ಹಳೆಯ ಸಂಗತಿಗಳ ವಿಸ್ತರಣ-ಪುನಾರೂಪಣಗಳಿವೆ, ತತ್ತ್ವ-ಪ್ರಯೋಗ ಎಂಬ ಎರಡೂ ಆಯಾಮಗಳ ಪ್ರಾತಿನಿಧ್ಯವಿದೆ ಮತ್ತು ಕಾವ್ಯಾತ್ಮಕವಾದ ಪರಮರಮಣೀಯ ವಾಕ್ಯವಿನ್ಯಾಸವಿದೆ. ಇಷ್ಟು ಗುಣಗಳು ತುಂಬಿದ್ದರೂ ಈ ಬರೆಹಗಳಲ್ಲಿ ಪ್ರತಿಪಾದಿತವಾದ ತತ್ತ್ವಗಳನ್ನು ವಿದ್ವಾಂಸರು ಹೆಚ್ಚಾಗಿ ಬಳಸಿಕೊಳ್ಳದಿದ್ದುದಕ್ಕೆ ಕಾರಣ ಕನ್ನಡ ಭಾಷೆಯ ಈಚಿನ ಇತಿಹಾಸದಲ್ಲಿದೆ. ಹಿಂದೆಯೇ ಕಂಡಂತೆ ಕುವೆಂಪು ಅವರ ಗುರುವರ್ಗ-ಶಿಷ್ಯವರ್ಗಗಳ ವಿದ್ವಾಂಸರು ಅವರನ್ನು ಮಚ್ಚಿಕೊಂಡರಲ್ಲದೆ ಹೊರಗಿನವರಲ್ಲ. ಗುರುಗಳಿಗೆ ಸಹಜವಾದ ಅಭಿಮಾನವೂ ಶಿಷ್ಯರಿಗೆ ಸಹಜವಾದ ಗೌರವವೂ ಎಷ್ಟೋ ಬಾರಿ ಪ್ರೋತ್ಸಾಹ-ಆರಾಧನೆಗಳನ್ನು ತೋರಿದರೂ ವಸ್ತುನಿಷ್ಠ ವಿಮರ್ಶೆಯನ್ನು ಮಾಡುವುದಿಲ್ಲ. ಇನ್ನು ಸಮಕಾಲಿಕರು ವಿವಿಧ ಕಾರಣಗಳಿಗೆ ಭಯಾಸೂಯೆಗಳನ್ನು ಪಟ್ಟು ಈ ಕೆಲಸವನ್ನು ಕೈಗೊಳ್ಳಲಿಲ್ಲ. ಪರಿಣಾಮವಾಗಿ ಸರಿಯಾದ ಮೇಲ್ಪಂಕ್ತಿಯಿಲ್ಲದೆ ಅಗ್ಗದ ಮಾತುಗಳಿಗೆ ಆಸ್ಪದವಾಯಿತು. ನವೋದಯದ ಕಾಲ ಮುಗಿದು ನವ್ಯರು ಪ್ರತಿಷ್ಠಿತರಾಗುವ ಹೊತ್ತಿಗೆ ಪುಟ್ಟಪ್ಪನವರು ತಮ್ಮ ಹೆಚ್ಚಿನ ಉತ್ತಮ ಕೃತಿಗಳನ್ನು ರಚಿಸಿ ಮುಗಿಸಿದ್ದರು. ಕಾಲದ ಅಂತರದಿಂದ, ಗಣನೀಯ ಪ್ರಮಾಣದ ಕೃತಿಗಳ ಉಪಲಬ್ಧಿಯಿಂದ ಆಗಿನ ಅವಧಿ ಒಳ್ಳೆಯ ವಿಮರ್ಶೆಗೆ ಸಮುಚಿತವಾಗಿದ್ದಿತು. ಆದರೆ ಆಗಿನ ಸಾಹಿತ್ಯಕ ವಾತಾವರಣ ಅದನ್ನು ಆಗುಮಾಡಿಸಲಿಲ್ಲ. ರಸದೃಷ್ಟಿಯನ್ನು ಕೀಳಾಗಿ ಕಾಣುತ್ತಿದ್ದ ನವ್ಯಪಂಥದವರು ಸಾಮಾಜಿಕ ಮಾನದಂಡಗಳಿಂದ ಸಾಹಿತ್ಯಕೃತಿಗಳನ್ನು ವಿಶ್ಲೇಷಿಸತೊಡಗಿ ಕುವೆಂಪು ಅವರ ಕಾದಂಬರಿಗಳೇ ಅವರ ಕವಿತೆಗಳಿಗಿಂತ ಶ್ರೇಷ್ಠ ಎಂದು ಕೊಂಡಾಡಲು ಉಪಕ್ರಮಿಸಿದರು. (ಕಾದಂಬರಿಗಳೇನೋ ಚೆನ್ನಾಗಿವೆ; ಆದರೆ ಅವುಗಳ ಸೊಗಸಿಗೆ ಕಾರಣಗಳು ಬೇರೆ. ಏನೇ ಆದರೂ ಕುವೆಂಪು ಅವರ ಪ್ರತಿಭೆಯ ಉತ್ಕೃಷ್ಟ ಉದಾಹರಣೆಗಳು ಕವಿತೆಗಳೇ.) ಮುಂದೆ ಬಂದ ದಲಿತ-ಬಂಡಾಯವೇ ಮುಂತಾದ ಅಪ್ಪಟ ಚಳುವಳಿಗಳು ಪುಟ್ಟಪ್ಪನವರ ಬೇರೆಲ್ಲ ಬರೆಹಗಳನ್ನು ಉಪೇಕ್ಷಿಸಿ ವೈಚಾರಿಕ ಕಾವ್ಯ-ಲೇಖನಗಳನ್ನು ಎತ್ತಿಹಿಡಿದವು. (ಇದಕ್ಕೆ ಒಂದು ಮಟ್ಟಿಗೆ ಪುಟ್ಟಪ್ಪನವರೂ ಕಾರಣರಾದರು.) ಒಟ್ಟಿನಲ್ಲಿ ಶುದ್ಧವಾದ ಕವಿತೆ ಹಾಗೂ ಕಾವ್ಯಮೀಮಾಂಸೆಯ ಚಿಂತನೆಗಳು ಹಿಂದೆ ಸರಿದವು. ಇಂದಿಗೂ ಈ ಬಗೆಯ ಬರೆಹಗಳನ್ನು ಓದಿ, ಆಸ್ವಾದಿಸಿ, ಅವುಗಳ ಸಾಹಿತ್ಯಕ ಮೌಲ್ಯವನ್ನು ವಿಶ್ಲೇಷಿಸುವ ವಿದ್ವಾಂಸರು ವಿರಳವಾಗಿದ್ದಾರೆ. ಈಗ ಕುವೆಂಪು ಸಮಾಜಚಿಂತಕರಾಗಿ ಮುನ್ನೆಲೆಗೆ ಬಂದಿರುವಂತೆ ಕವಿಯಾಗಿ ಅಲ್ಲ. ನಾವು ಅವರನ್ನು ಕವಿಯಾಗಿ ಕಾಣದಿದ್ದರೆ ಅವರಿಂದ ಪಡೆಯಬಹುದಾದ ಪ್ರಯೋಜನಗಳಿಂದ ಸಂಪೂರ್ಣವಾಗಿ ವಂಚಿತರಾಗುತ್ತೇವೆ. ಇನ್ನಾದರೂ ಪರಿಸ್ಥಿತಿ ಬದಲಾಗಲೆಂದು ಆಶಿಸೋಣ.
ಪುಟ್ಟಪ್ಪನವರು ಭಾರತೀಯ ಕಾವ್ಯಮೀಮಾಂಸೆಯ ಮೂಲಭೂತ ಪ್ರಮೇಯಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸದಿದ್ದರೂ ತಮ್ಮ ಗುರುಗಳ ಮೂಲಕ, ಪ್ರಾಮಾಣಿಕ ಅನುವಾದಗಳ ಹಾಗೂ ಪೂರಕ ಗ್ರಂಥಗಳ ಮೂಲಕ ಸರಿಯಾದ ತಿಳಿವನ್ನು ಪಡೆದರು. ಪಾಶ್ಚಾತ್ತ್ಯ ವಿದ್ವಾಂಸರ ಆಲೋಚನೆಗಳನ್ನು ಪ್ರಾತಿನಿಧಿಕವಾಗಿ ಓದಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಕವಿಯಾಗಿ ತಮಗಿದ್ದ ಅಧಿಕೃತ ಅನುಭವವನ್ನು ಗಟ್ಟಿಯಾಗಿ ನಚ್ಚಿದರು. ಇವೆಲ್ಲದರ ಪರಿಣಾಮವಾಗಿ ಆಕೃತಿಗೊಂಡ ಅವರ ಆಲೋಚನೆಗಳು ಎಲ್ಲೆಡೆಯ ಮಾನುಷ ಸಂವೇದನೆಗೂ ಅದಕ್ಕೆ ನಿಷ್ಠವಾಗಿ ಸಾಹಿತ್ಯವನ್ನು ವಿವೇಚಿಸುವ ಭಾರತೀಯ ಅಲಂಕಾರಶಾಸ್ತ್ರದ ಪ್ರಮುಖ ಪ್ರಮೇಯಗಳಿಗೂ ಅವಿರುದ್ಧವಾಗಿವೆ. ಹೀಗೆ ಕುವೆಂಪು ಅವರ ಸ್ವೋಪಜ್ಞ ಆಲೋಚನೆಗಳೂ ಅನ್ಯಾನ್ಯ ಮೂಲಗಳಿಂದ ಗ್ರಹಿಸಿದ ವಿಚಾರಗಳನ್ನು ಪರ್ಯಾಲೋಚಿಸಿ ಅವರು ಮೂಡಿಸಿದ ಅಭಿಪ್ರಾಯಗಳೂ ನಮ್ಮ ನಾಡಿನ ಚಿರಂತನ ಕಾವ್ಯಚಿಂತನೆಗೆ ಸಂವಾದಿಯಾಗಿರುವುದು ಆ ವಿದ್ಯೆಯ ಸತ್ಯನಿಷ್ಠ, ಸರ್ವಾಭಿಜ್ಞೇಯ ಸ್ವರೂಪವನ್ನು ತೋರ್ಪಡಿಸುತ್ತಿದೆ.
ಸರಸ್ವತ್ಯಾಸ್ತತ್ತ್ವಂ ಕವಿಸಹೃದಯಾಖ್ಯಂ ವಿಜಯತೇ
* * *
ಗ್ರಂಥಋಣ
- ಕುವೆಂಪು ಸಮಗ್ರ ಗದ್ಯ (ಸಂ. ೧). ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ೨೦೧೩
- ಕುವೆಂಪು ಸಮಗ್ರ ಗದ್ಯ (ಸಂ. ೨). ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ೨೦೧೭
- ಕುವೆಂಪು ಸಮಗ್ರ ಕಾವ್ಯ (ಸಂ. ೧). ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ೨೦೧೭
- ಕುವೆಂಪು ಸಮಗ್ರ ಕಾವ್ಯ (ಸಂ. ೨). ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ೨೦೧೭
- ಕುವೆಂಪು ಸಮಗ್ರ ಕಾವ್ಯ (ಸಂ. ೩). ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ೨೦೧೭
- ದಾರ್ಶನಿಕ ಕಾವ್ಯಮೀಮಾಂಸೆ (ಸಂ. ಹಾ. ಮಾ. ನಾಯಕ). ಬೆಂಗಳೂರು: ಕರ್ನಾಟಕ ಸರ್ಕಾರ (ಪ್ರಥಮ ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆ), ೧೯೮೩
- ತರಗತಿಗಳಲ್ಲಿ ಕುವೆಂಪು. ಡಾ|| ಎಸ್. ಎಂ. ವೃಷಭೇಂದ್ರಸ್ವಾಮಿ. ಮೈಸೂರು: ಪುಸ್ತಕ ಪ್ರಕಾಶನ, ೨೦೧೧
- ಕುವೆಂಪು ಒಲವು ನಿಲವು. ಪುಸ್ತಕಮನೆ ಹರಿಹರಪ್ರಿಯ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೮
- ಕುವೆಂಪು ಪುನರಾಲೋಕನ (ಜಿ. ಎಸ್. ಶಿವರುದ್ರಪ್ಪ ಸಾಹಿತ್ಯಮಾಲೆ - ೯). ಜಿ. ಎಸ್. ಶಿವರುದ್ರಪ್ಪ. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೨೦೦೯
- ಕುವೆಂಪುಗೆ ಪುಟ್ಟ ಕನ್ನಡಿ. ಕೆ. ವಿ. ಸುಬ್ಬಣ್ಣ. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೨೦೦೬
- ಕುವೆಂಪು ಸಾಹಿತ್ಯ ಸಂವಾದ. ಸಿ. ಪಿ. ಕೆ. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ, ೨೦೧೨
- ಬಾ ಕುವೆಂಪು ದರ್ಶನಕೆ. ನರಹಳ್ಳಿ ಬಾಲಸುಬ್ರಹ್ಮಣ್ಯ. ಬೆಂಗಳೂರು: ಅಭಿನವ, ೨೦೨೨
- ಕನ್ನಡ ನವೋದಯ ಕವಿಗಳ ಕಾವ್ಯಮೀಮಾಂಸೆ. ಡಾ|| ಚಂದ್ರಿಕಾ ಹೆಗಡೆ. ಬೆಂಗಳೂರು: ಯುನಿಫಿ ಮೀಡಿಯಾ, ೨೦೧೦
- ಪ್ರೊ|| ಎಲ್. ಎಸ್. ಶೇಷಗಿರಿ ರಾವ್ ಸಮಗ್ರ ವಿಮರ್ಶಾ ಸಾಹಿತ್ಯ (ಸಂ. ೧). ಎಲ್. ಎಸ್. ಶೇಷಗಿರಿ ರಾವ್. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೨೦೧೦
- ಶ್ರೀ ಕುವೆಂಪು (ಸಂ. ಡಾ|| ಜಿ. ಎಸ್. ಶಿವರುದ್ರಪ್ಪ). ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ೧೯೯೧
- ಶ್ರೀ ಸಾಹಿತ್ಯ. ಬಿ. ಎಂ. ಶ್ರೀಕಂಠಯ್ಯ. ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ೧೯೮೩
- ಸಂಸ್ಕೃತಕವಿಗಳ ಕಾವ್ಯಮೀಮಾಂಸೆ. ಶತಾವಧಾನಿ ಡಾ|| ಆರ್. ಗಣೇಶ್. ಹುಬ್ಬಳ್ಳಿ: ಸಾಹಿತ್ಯ ಪ್ರಕಾಶನ, ೨೦೨೨
- ಪರೋಕ್ಷ. ಶತಾವಧಾನಿ ಡಾ|| ಆರ್. ಗಣೇಶ್. ಬೆಂಗಳೂರು: ವಸಂತ ಪ್ರಕಾಶನ, ೨೦೨೦
- Principles of Literary Criticism. Richards, I. A. London: Kegan Paul, Trench, Trubner & Co Ltd., 1930
- Modern Man in Search of a Soul. Jung, C. J. London: Kegan Paul, Trench, Trubner & Co Ltd., 1933
- The Power of Myth. Campbell, Joseph. New York: Anchor Books, 1988
- Art Experience. Hiriyanna, M. Bengaluru: Prekshaa Pratishtana & Wise Words, 2018
- Popular Essays in Indian Philosophy. Hiriyanna, M. Bengaluru: Prekshaa Pratishtana & Wise Words, 2018
- On the Meaning of the Mahābhārata. Sukthankar, V. S. Bombay: Asiatic Society of Bombay, 1998
[1] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೨೪
[2] ಕುವೆಂಪು ಸಮಗ್ರ ಕಾವ್ಯ (ಸಂ. ೩), ಶ್ರೀರಾಮಾಯಣದರ್ಶನಂ, ಸಾಗರೋಲ್ಲಂಘನಂ, ೧೧೭-೧೨೭ ಸಾಲುಗಳು
[3] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೮೬
[4] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೨೫
[5] ನೋಡಿ: ಕಾವ್ಯಾಲಂಕಾರಸೂತ್ರವೃತ್ತಿ, ೧.೨.೧
[6] ತರಗತಿಗಳಲ್ಲಿ ಕುವೆಂಪು, ಪು. ೧೧
[7] ತರಗತಿಗಳಲ್ಲಿ ಕುವೆಂಪು, ಪು. ೧೮
[8] ತರಗತಿಗಳಲ್ಲಿ ಕುವೆಂಪು, ಪು. ೬೩
[9] ಕುವೆಂಪು ಸಮಗ್ರ ಗದ್ಯ, ಸಂ. ೨, ಪು. ೪೭೫
[10] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೧೬೪
[11] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೧೯-೨೧
[12] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೧೬
[13] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೨೨-೨೪
[14] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೨೮-೨೯, ೨೩೧
[15] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೭೨-೭೮
[16] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೭೩, ೩೯೭, ೧೫೫
[17] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೩೮೩
[18] ದಾರ್ಶನಿಕ ಕಾವ್ಯಮೀಮಾಂಸೆ, ಪು. ೨೧
ಇದೇ ಬಗೆಯ ಎಚ್ಚರಿಕೆಯನ್ನು ಆನಂದವರ್ಧನನು ಸಾವಿರ ವರ್ಷಗಳಿಗೂ ಮುನ್ನ ನೀಡಿದ್ದಾನೆ: “ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ | ಕಥಾಶ್ರಯಾ ನ ತೈರ್ಯೋಜ್ಯಾ ಸ್ವೇಚ್ಛಾ ರಸವಿರೋಧಿನೀ ||” (ಧ್ವನ್ಯಾಲೋಕ, ೩.೧೪ ಪರಿಕರಶ್ಲೋಕ)
[19] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೬೦೮, ೮೨
[20] ಕುವೆಂಪು ಸಮಗ್ರ ಕಾವ್ಯ, ಸಂ. ೧ (ಕೃತ್ತಿಕೆ), ಪು. ೪೬೪
[21] ಕುವೆಂಪು ಪುನರಾಲೋಕನ, ಪು. ೧೫೭-೫೮
[22] ಈ ನಿಲವಿನ ಅಸಮರ್ಪಕತೆಯನ್ನು ತೋರ್ಪಡಿಸಿ ಪುಟ್ಟಪ್ಪನವರ ಮೇಲೆ ಧನಾತ್ಮಕವಾಗಿ ಆಗಿರುವ ಸಂಸ್ಕೃತದ ಪ್ರಭಾವವನ್ನು ಕುರಿತು ಶತಾವಧಾನಿ ಡಾ|| ಆರ್. ಗಣೇಶ್ ಅವರು ಬೋಧಪ್ರದ ಲೇಖನವೊಂದನ್ನು ಬರೆದಿದ್ದಾರೆ. ನೋಡಿ: ಪರೋಕ್ಷ, ಪು. ೩೪-೪೧
[23] ಕುವೆಂಪು ಸಮಗ್ರ ಕಾವ್ಯ, ಸಂ. ೧ (ಕೃತ್ತಿಕೆ), ಪು. ೪೬೨
[24] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೭-೨೯
[25] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೫೧
[26] ನೋಡಿ: ತರಗತಿಗಳಲ್ಲಿ ಕುವೆಂಪು, ಪು. ೪೭-೫೭
[27] ಕುವೆಂಪು ಸಮಗ್ರ ಕಾವ್ಯ (ಸಂ. ೩), ಶ್ರೀರಾಮಾಯಣದರ್ಶನಂ, ಅಗ್ನಿಯಾತ್ರೆ, ೮೧-೮೬ ಸಾಲುಗಳು
ಈ ಬಗೆಯ ಮನೋಭಾವವು ತಪ್ಪೆಂದು ಕುವೆಂಪು ಅವರೇ ಬರೆಹವೊಂದರಲ್ಲಿ ಹೇಳಿದ್ದಾರೆ: “ಪತಿತ ಪಾತ್ರಗಳಿಗೆಲ್ಲ ಒಂದೇ ಸಮನಾಗಿ ಅನುಕಂಪ ತೋರಿಸುವುದು ಸಾಧ್ಯವೆ? ಯುಕ್ತವೆ? ಕಾಲು ಜಾರಿ ಕುಸಿಯುವ್ ವ್ಯಕ್ತಿ ‘ಮಹನುಭಾವಲಕ್ಷಣ’ಗಳನ್ನು ಹೊಂದಿದವನಾಗಿದ್ದು, ತನ್ನಲ್ಲಿರುವ ಯಾವುದೋ ಒಂದು ಕುಂದಿನಿಂದ ಅಥವಾ ವಜ್ರನಿಯತಿಗೆ ಅನಿವಾರ್ಯವಾಗಿ ಆಹುತಿಯಾಗಿ ದುರಂತತೆಯನ್ನು ಪಡೆದರೆ ಆತನಿಗೆ ನಾವು ಅನುಕಂಪೆ ತೋರಿಸಬಹುದು. ಆದರೆ ತಾನೇ ಇಚ್ಛಿಸಿ ಅಧಃಪತನಕ್ಕೆ ಇಳಿಯುತ್ತಿರುವಾಗ, ತನ್ನ ಅಧಃಪತನವನ್ನು ಅರಿತಿದ್ದೂ ಅದನ್ನು ತಡೆಯಲು ಪ್ರಯತ್ನಿಸದೆ, ಅತ್ತಲೇ ರುಚಿವೇಗದಿಂದ ಸಂತೋಷದಿಂದ ಜಾರುತ್ತಿರುವಾಗ, ನಾವು ಅನುಕಂಪ ತೋರಿಸಲಾದೀತೆ? ತೋರುವುದು ಯುಕ್ತವೆ?” (ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೪೧೦). ಹೀಗಿದ್ದರೂ ಅವರು ಹೆಚ್ಚಾಗಿ ಪತಿತಪಾವಕವಾದ ರಮ್ಯಮನೋವೃತ್ತಿಯನ್ನೇ ತೋರ್ಪಡಿಸಿದ್ದರೆ. ಇದು ಅವರ ಆಲೋಚನೆಗಳ ಏರಿಳತಕ್ಕೊಂದು ನಿದರ್ಶನ.
[28] ತರಗತಿಗಳಲ್ಲಿ ಕುವೆಂಪು, ಪು. ೪೬
[29] ತರಗತಿಗಳಲ್ಲಿ ಕುವೆಂಪು, ಪು. ೪೯, ೫೫
[30] “ನಿಸ್ತ್ರೈಗುಣ್ಯೋ ಭವಾರ್ಜುನ” ಎಂಬುದು ಗೀತೆಯಲ್ಲಿ (೨.೪೫) ಭಗವಂತನ ಉಪದೇಶ
[31] ಹೋಲಿಸಿ: “ಸತ್ತ್ವೋದ್ರೇಕಾದಖಂಡಸ್ವಪ್ರಕಾಶಾನಂದಚಿನ್ಮಯಃ | ವೇದ್ಯಾಂತರಸ್ಪರ್ಶಶೂನ್ಯೋ ಬ್ರಹ್ಮಾಸ್ವಾದಸಹೋದರಃ ||” (ಸಾಹಿತ್ಯದರ್ಪಣ, ೩.೨)
[32] Art Experience, p. 77
Concluded.