ಈವರೆಗೆ ವಿವೇಚಿತವಾದ ಮೂರೂ ವೃತ್ತಗಳು ಕನ್ನಡಕ್ಕೇಕೆ ಹೆಚ್ಚಾಗಿ ಒದಗಲಿಲ್ಲ ಎಂಬ ಪ್ರಶ್ನೆ ಹುಟ್ಟಬಹುದು. ಕನ್ನಡಕ್ಕಿರುವ ಆದಿಪ್ರಾಸದ ನಿರ್ಬಂಧದ ಕಾರಣ ಉಪಜಾತಿ ಬರಲು ಸಾಧ್ಯವಿಲ್ಲ. ಏಕೆಂದರೆ ಗಜಪ್ರಾಸ ಮತ್ತು ಸಿಂಹಪ್ರಾಸಗಳ ಮಿಶ್ರಣಕ್ಕೆ ಕನ್ನಡದಲ್ಲಿ ಅವಕಾಶವಿಲ್ಲ. ಇನ್ನುಳಿದ ಎರಡು ವೃತ್ತಗಳಲ್ಲಿ ಇಂಥ ತೊಡಕಿಲ್ಲದಿದ್ದರೂ ಅವು ತಮ್ಮ ತಮ್ಮ ಪಾದಾಂತಗಳಲ್ಲಿ ಎರಡು ಗುರುಗಳನ್ನು ಹೊಂದಿದ ಕಾರಣ ಆದಿಪ್ರಾಸವನ್ನು ಹೊಂದಿಸುವಲ್ಲಿ ಸಾಕಷ್ಟು ಕಷ್ಟವೀಯುತ್ತವೆ. ಇದು ಖಂಡಪ್ರಾಸ ಮತ್ತು ಖಂಡೇತರ ಪ್ರಾಸಗಳೆರಡಕ್ಕೂ ಸಮಾನವಾಗಿ ಕ್ಲೇಶಕರ. ಎರಡು ಗುರುಗಳು ಪಾದದ ಕಡೆಗೆ ಬರುವ ಯಾವುದೇ ವರ್ಣವೃತ್ತದ ವಿಷಯದಲ್ಲಿಯೂ ಕನ್ನಡದ ಮಟ್ಟಿಗೆ ಇದು ಸತ್ಯ. ಹೀಗಾಗಿಯೇ ಶಾಲಿನಿ, ಪ್ರಹರ್ಷಿಣಿ, ವಸಂತತಿಲಕಾ, ಮಾಲಿನಿ, ಮಂದಾಕ್ರಾಂತಾ ಮುಂತಾದ ವೃತ್ತಗಳು ನಮ್ಮಲ್ಲಿ ವಿರಳ. ಇವೆಲ್ಲ ಗುರುಪ್ರಚುರ ಅಥವಾ ಯತಿಪ್ರಬಲ ಎಂಬ ಅಂಶವೂ ಸ್ಮರಣೀಯ. ಹಳಗನ್ನಡದ ಮಟ್ಟಿಗೆ ಗುರ್ವಾಧಿಕ್ಯ ಹೆಚ್ಚಿನ ತೊಂದರೆ ಕೊಡದಿದ್ದರೂ ಪ್ರತಿಯೊಂದು ಪದ್ಯದ ಪ್ರತಿಯೊಂದು ಪಾದಕ್ಕೂ ಅನಿವಾರ್ಯವಾದ ಪ್ರಾಸದ ನಿರ್ವಾಹ ಸಾಕಷ್ಟು ತ್ರಾಸದಾಯಕ. ಹೀಗಿಲ್ಲದ ಶಾರ್ದೂಲವಿಕ್ರೀಡಿತ ಮತ್ತು ಮತ್ತೇಭವಿಕ್ರೀಡಿತಗಳು ತಮ್ಮಲ್ಲಿರುವ ಗುರ್ವಾಧಿಕ್ಯದ ಹೊರತಾಗಿಯೂ ಹಳಗನ್ನಡದಲ್ಲಿ ಸಾಕಷ್ಟು ವ್ಯಾಪ್ತಿಯನ್ನು ಹೊಂದಿವೆ. ಇದನ್ನು ಸೋದರಭಾಷೆಯಾದ ತೆಲುಗಿನೊಡನೆ ಹೋಲಿಸಿಯೂ ಮನಗಾಣಬಹುದು.
ಭಾರತದ ಯಾವುದೇ ಅಭಿಜಾತಭಾಷೆಯಲ್ಲಿ ಒಂದು ಅಸಮಸ್ತಪದದೊಳಗೆ ನಾಲ್ಕು ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಗುರುಗಳಾಗಲಿ ಲಘುಗಳಾಗಲಿ ಅವ್ಯವಹಿತವಾಗಿ ಬರುವ ಸಹಜ ಸಂಭವ ಕಡಮೆ. ಇಂಥ ವಿನ್ಯಾಸಗಳೇ ಹೆಚ್ಚಿರುವ ಛಂದೋಬಂಧಗಳನ್ನು ವ್ಯಾಪಕವಾಗಿ ಬಳಸಿಕೊಂಡು ಎಲ್ಲ ಬಗೆಯ ರಸ-ಭಾವಗಳಿಗೆ ಆಗರವಾದ ಕಥನವನ್ನು ನಿರೂಪಿಸುವುದು ಈ ಕಾರಣದಿಂದಲೇ ಕಷ್ಟ. ದಾಕ್ಷಿಣಾತ್ಯ ಭಾಷೆಗಳ ಪದ್ಯಸಂಪ್ರದಾಯದಲ್ಲಿ ಅನಿವಾರ್ಯವಾದ ಆದಿಪ್ರಾಸವನ್ನು ನಿರ್ವಹಿಸುತ್ತ ಇಂಥ ಛಂದೋಬಂಧಗಳಲ್ಲಿ ಸುದೀರ್ಘವಾದ ಕಾವ್ಯವನ್ನು ರಚಿಸುವುದು ಮತ್ತೂ ಕಷ್ಟ. ಇವೆಲ್ಲ ವಿದ್ವಜ್ಜನರಿಗಿರಲಿ, ಸಾಮಾನ್ಯ ಸಾಹಿತ್ಯರಸಿಕರಿಗೂ ತಿಳಿದ ಸಂಗತಿಗಳೇ. ವೃತ್ತದ ಒಂದು ಸಾಲಿನಲ್ಲಿ ಅವ್ಯವಹಿತವಾಗಿ ತೋರಿಕೊಳ್ಳುವ ಗುರ್ವಾಧಿಕ್ಯವನ್ನೋ ಲಘ್ವಾಧಿಕ್ಯವನ್ನೋ ಎಲ್ಲರೂ ಗಮನಿಸುತ್ತಾರೆ. ಆದರೆ ಇಂಥ ವಿನ್ಯಾಸಗಳು ಆಯಾ ಪಾದಗಳ ಆದಿ ಮತ್ತು ಅಂತ್ಯಗಳಲ್ಲಿ ಒತ್ತರಗೊಂಡಾಗ ಅವು ಆದಿಪ್ರಾಸದ ಕಟ್ಟಲೆಯ ಕಾರಣ ತಮ್ಮ ಆಚೀಚಿನ ಸಾಲುಗಳಿಗೂ ವಿಸ್ತರಿಸಿಕೊಂಡಂತಾಗುತ್ತವೆ. ಇದನ್ನು ಹೆಚ್ಚಿನ ಜನರು ಗಮನಿಸುವುದಿಲ್ಲ. ಈಗ ವಿವೇಚಿತವಾಗುತ್ತಿರುವ ಇಂದ್ರವಜ್ರಾವೃತ್ತವನ್ನೇ ಉದಾಹರಣೆಯಾಗಿ ನೋಡುವುದಾದರೆ - ಮೇಲ್ನೋಟಕ್ಕಿಲ್ಲಿ ಒಂದೇ ಕಡೆ ಎರಡು ಗುರುಗಳಿಗಿಂತ ಹೆಚ್ಚಿನ ವಿನ್ಯಾಸ ಎಲ್ಲಿಯೂ ಇಲ್ಲ. ಆದರೆ ಮೊದಲ ಪಾದದ ಅಂತ್ಯ ಮತ್ತು ಎರಡನೆಯ ಪಾದದ ಆದಿ ಎಂಬಂತೆ ಗಮನಿಸಿದಾಗ ಅವ್ಯವಹಿತವಾಗಿ ನಾಲ್ಕು ಗುರುಗಳು ಅಂಟಿಬರುವುದನ್ನು ಮನಗಾಣಬಹುದು:
– – u – – u u – u [– –
– –] u – – u u – u [– –
– –] u – – u u – u [– –
– –] u – – u u – u – – ||
ಈ ಸಮಸ್ಯೆ ಶಾಲಿನಿ, ಪ್ರಹರ್ಷಿಣಿ, ವಸಂತತಿಲಕಾ ಮುಂತಾದ ಹತ್ತಾರು ವೃತ್ತಗಳಲ್ಲಿದೆ. ಇವೆಲ್ಲ ಸಂಕ್ಷಿಪ್ತ ಅಥವಾ ಮಧ್ಯಮಗಾತ್ರದ ಬಂಧಗಳು. ಆದುದರಿಂದ ಪಾದವೊಂದರ ಪ್ರಾಸವನ್ನು ಹೇಗೋ ನಿರ್ವಹಿಸಿ ಮುಂದೆ ಸಾಗಿದರೆ ಎರಡು ಮೂರು ಪದಗಳಷ್ಟು ದೂರ ಕ್ರಮಿಸುವುದರ ಒಳಗೇ ಮುಂದಿನ ಪಾದ ಸುಂಕದ ಕಟ್ಟೆಯಂತೆ ಎದುರಾಗುತ್ತದೆ. ಅಲ್ಲಿ ಆದಿಪ್ರಾಸದ ತೆರಿಗೆಯನ್ನು ತೆರಲೇಬೇಕು! ಹೀಗೆ ಪದ್ಯದ ಪಾಡೆಲ್ಲ ನಡೆಯುವುದೆಂದರೆ ಅದು ನಾಲ್ಕು ಸಾಲುಗಳ ಹೊಸೆತವಷ್ಟೇ ಆಗಿರುವುದಲ್ಲದೆ ಕವಿತೆಯಾಗಿರಲಾರದು. ಈ ಎಲ್ಲ ಕಾರಣಗಳಿಂದಲೇ ಮೇಲ್ನೋಟಕ್ಕೆ ವಿಕಟಗತಿಯಿಲ್ಲದ, ಗುರು-ಲಘುಗಳ ಪ್ರಾಚುರ್ಯದಲ್ಲಿ ಸಂತುಲನವುಳ್ಳ ಹ್ರಸ್ವ ಮತ್ತು ಮಧ್ಯಮಗಾತ್ರದ ಛಂದೋಬಂಧಗಳು ಕನ್ನಡದ ಪಾಲಿಗೆ ಸುಲಭವಾಗಿ ನುಂಗಲಾಗದ ತುತ್ತುಗಳಾಗಿವೆ. ಈ ಸಮಸ್ಯೆ ಆದಿಪ್ರಾಸದಂಥ ನಿಯಮವನ್ನುಳ್ಳ ಮಿಕ್ಕೆಲ್ಲ ದಾಕ್ಷಿಣಾತ್ಯ ಭಾಷೆಗಳಿಗೂ ಸಮಾನವಾಗಿ ಅನ್ವಿತವಾಗುತ್ತವೆ.[1] ಮಾತ್ರವಲ್ಲ, ಇಂಥ ಸಮಸ್ಯೆಯನ್ನು ಅಂತ್ಯಪ್ರಾಸದ ನಿರ್ಬಂಧವನ್ನುಳ್ಳ ಹಿಂದಿ, ಮರಾಠಿ, ಬಂಗಾಳಿ, ಗುಜರಾತಿಗಳಂಥ ಭಾಷೆಗಳಲ್ಲಿಯೂ ಕಾಣಬಹುದು. ಆದುದರಿಂದ ಇದು ದಾಕ್ಷಿಣಾತ್ಯಭಾಷೆಗಳ ಮೇಲೆ ಸಂಸ್ಕೃತವು ನಡಸುತ್ತಿರುವ ‘ದಬ್ಬಾಳಿಕೆಯ ವಿರುದ್ಧ ಎದ್ದಿರುವ ‘ದಂಗೆ’ ಎಂದೆಲ್ಲ ಸತ್ಯ-ಸಾಹಿತ್ಯಗಳಿಗೆ ದೂರವಾದ ಧೂರ್ತ ಸಿದ್ಧಾಂತಾಭಾಸಗಳನ್ನು ಹೊಸೆಯಲು ಆಸ್ಪದವಿಲ್ಲ.
ಪಾದಾಂತ ಮತ್ತು ಪಾದಾದಿಗಳಲ್ಲಿ ಗುರುಗಳ ಹೆಚ್ಚಳವಿದ್ದರೂ ಸಾಕಷ್ಟು ಉದ್ದವಾದ ಪಾದಗಳನ್ನು ಹೊಂದಿದ ಕಾರಣ ಸಾಲೊಂದರಲ್ಲಿ ಹಲವಾರು ಪದಗಳ ಅಳವಡಿಕೆಗೆ ಅನುಕೂಲವುಳ್ಳ ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರೆ, ಮಹಾಸ್ರಗ್ಧರೆಗಳಂಥ ವೃತ್ತಗಳನ್ನು ಹಳಗನ್ನಡವಷ್ಟೇ ಅಲ್ಲದೆ ತೆಲುಗಿನಂಥ ಸೋದರಭಾಷೆ ಕೂಡ ಬಳಸಿ ಗೆದ್ದಿರುವ ಸಮೃದ್ಧವಾದ ಉದಾಹರಣೆ ನಮ್ಮ ಮುಂದೆ ಇದೆ. ಈ ಕಾರಣದಿಂದಲೇ ಹಳಗನ್ನಡದ ಕವಿಗಳು ಮಾಲಿನಿ, ಪೃಥ್ವಿ, ಅನವದ್ಯ, ಖಚರಪ್ಲುತ ಮೊದಲಾದ ವೃತ್ತಗಳನ್ನೂ ವೈವಿಧ್ಯಕ್ಕೆಂಬಂತೆ ಬಳಸಿ ಬಲ್ಮೆಯನ್ನು ಗಳಿಸಿದ್ದಾರೆ. ಈ ಛಂದಸ್ಸುಗಳ ವಿನ್ಯಾಸವನ್ನು ಬಲ್ಲವರಿಗೆ ಸದ್ಯದ ನಿಗಮನ ಯುಕ್ತವಾಗಿ ತೋರದಿರದು.
ಕನ್ನಡದಲ್ಲಿ ಇಲ್ಲವೆಂಬಷ್ಟು ವಿರಳವಾದ ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳ ಒಂದೊಂದು ಮಾದರಿಯನ್ನು ಆಸಕ್ತರ ಅವಗಾಹನೆಗಾಗಿ ನೀಡಲಾಗಿದೆ:
ಆಗಳ್ ಜಸಂ ಕೆಯ್ದುವನಿಕ್ಕಿ ವೀರ-
ಶ್ರೀಗಾಣ್ಮನಯ್ ಪಾಣ್ಬತನಕ್ಕೆಳಪ್ಪಯ್ |
ಪೋಗೇಕೆ ನೀಂ ಮೆಯ್ಗರೆದಿರ್ಪೆಯೆಂದಾ
ಭೋಗೀಶ್ವರಂಗಂದು ವಿನಮ್ರನಾದಂ || (ಕಾವ್ಯಾವಲೋಕನ, ೧.೧೭೫)
ಅವರ್ಣವಾದಕ್ಕೆಡೆಯಾಗದೊಳ್ಪಿಂ-
ದವರ್ಣಿಕಾಮರ್ ಗುಣವೃದ್ಧಿಧಾಮರ್ |
ದಿವಾಕರರ್ ವ್ಯಾಕೃತಿನಾಮಿಗಳ್ವೋಲ್
ದಿವಕ್ಕೆ ಪನ್ನಿರ್ವರೆ ಮುಖ್ಯರಾದರ್ || (ಕಾವ್ಯಾವಲೋಕನ, ೧.೧೩)
ಇವೇ ವೃತ್ತಗಳ ಸಂಸ್ಕೃತ ಉದಾಹರಣೆಗಳು ಹೀಗಿವೆ:
ತಸ್ಯಾಮತಿಕ್ಷುದ್ರಸಭಾಸರಸ್ಯಾ-
ಮಕ್ರೂರದಂಷ್ಟ್ರಾವಲಿನಾ ಮುಖೇನ |
ಜಗ್ರಾಹ ವೀರಃ ಸ ವಿವಿಚ್ಯ ಶುದ್ಧಾಂ
ವಾಣೀಂ ಮೃಣಾಲೀಮಿವ ರಾಜಹಂಸಃ || (ರಾಮಚರಿತ, ೨೭.೫೭)
ಯಶಶ್ಚ ತೇಜಶ್ಚ ತವಾಚ್ಯುತೇಂದ್ರ
ಪ್ರತೀಪಭೂಮೀಪತಿದುರ್ಯಶಶ್ಚ |
ಗುಣತ್ರಯೀಸರ್ಗವಿಧೌ ನಿಧಾನಂ
ಭವಿಷ್ಯತಾಂ ವಿಶ್ವಸೃಜಾಂ ಚಕಾಸ್ತಿ || (ವರದಾಂಬಿಕಾಪರಿಣಯಚಂಪೂ, ೯೫)
ವಂಶಸ್ಥ, ಇಂದ್ರವಂಶ, ಕರಂಬಜಾತಿ ಇತ್ಯಾದಿ
ವೈದಿಕ ಜಗತೀಛಂದಸ್ಸಿನ ಬೆಳೆವಣಿಗೆಯಾದ ವಂಶಸ್ಥವು ತುಂಬ ಪ್ರಸಿದ್ಧ ಮತ್ತು ಪ್ರಾಚೀನ. ಆರ್ಷಘೋಷವಿರುವ ವೃತ್ತಗಳ ಪೈಕಿ ಇದೇ ಹೆಚ್ಚಿನ ಬಾಗು-ಬಳಕುಗಳನ್ನು ಹೊಂದಿದೆ. ಎಚ್. ಡಿ. ವೇಲಣಕರ್ ಅವರು ಸೂಚಿಸಿರುವಂತೆ ತ್ರಿಷ್ಟುಪ್ಪಿನ ಪಾದಗಳ ಉಪಾಂತ್ಯವರ್ಣದ ಸ್ಥಾನದಲ್ಲಿ ಲಘುವೊಂದನ್ನು ಇರಿಸಿ ವೈದಿಕಕವಿಗಳು ಜಗತಿಯನ್ನು ರೂಪಿಸಿಕೊಂಡಿದ್ದಾರೆ (ಜಯದಾಮನ್, ಪು. ೭). ಇದರ ಅನ್ವಯವನ್ನು ವಂಶಸ್ಥ-ಇಂದ್ರವಂಶಗಳಲ್ಲಿಯೂ ನಾವು ಕಾಣಬಹುದು. ಇವು ಕ್ರಮವಾಗಿ ಉಪೇಂದ್ರವಜ್ರಾ ಮತ್ತು ಇಂದ್ರವಜ್ರಾ ವೃತ್ತಗಳ ಉಪಾಂತ್ಯವರ್ಣದ ಸ್ಥಾನದಲ್ಲಿ ಲಘುವೊಂದನ್ನು ಇರಿಸುವ ಮೂಲಕ ಜನಿಸಿವೆ:
ಉಪೇಂದ್ರವಜ್ರಾ:
u – u – – u u – u – –
ವಂಶಸ್ಥ:
u – u – – u u – u – [u] –
ಇಂದ್ರವಜ್ರಾ:
– – u – – u u – u – –
ಇಂದ್ರವಂಶ:
– – u – – u u – u – [u] –
ಗಣಿತದ ಎಣಿಕೆಗೆ ಸೇರ್ಪಡೆ-ಬೇರ್ಪಡೆಗಳ ಈ ಬಗೆಯ ಸಮೀಕರಣಗಳು ಸರಿಯಾಗಬಹುದು. ಆದರೆ ನೂತನ ಛಂದೋಬಂಧಗಳನ್ನು ಆವಿಷ್ಕರಿಸಿಕೊಳ್ಳುವ ಹಾದಿ ಇಷ್ಟು ಸರಳವಲ್ಲ. ಅದು ಆಕಸ್ಮಿಕವಾಗದಿದ್ದಲ್ಲಿ ಸಾಕಷ್ಟು ಪರ್ಯಾಲೋಚನೆ, ಅಭ್ಯಾಸ ಮತ್ತು ಪರಿಷ್ಕಾರಗಳ ಅಗ್ನಿದಿವ್ಯಗಳನ್ನು ಹಾದುಹೋಗಬೇಕು. ಇದಕ್ಕೆಲ್ಲ ಆಧಾರಶ್ರುತಿಯಾಗಿ ಛಂದೋಗತಿಯ ಗಾಢಸಂವೇದನೆ ಅತ್ಯವಶ್ಯ. ಹೊಸತಾದ ಒಂದು ಬಂಧದ ಆವಿಷ್ಕಾರ ಈಗಿರುವ ಛಂದಸ್ಸುಗಳ ಕುಂದು-ಕೊರತೆಗಳ ಅರಿವಿನಿಂದಲೇ ಪ್ರೇರಿತವಾಗಿರುತ್ತದೆ.
ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳಲ್ಲಿರುವ ಕೊರತೆ ಯಾವುದೆಂದು ಆಲೋಚಿಸಿದಾಗ ವಂಶಸ್ಥಾದಿಗಳು ಅದನ್ನು ತುಂಬಿಕೊಡಲು ಹೇಗೆ ರೂಪುಗೊಂಡವು ಎಂಬುದು ಸ್ಪಷ್ಟವಾಗುತ್ತದೆ. ಅದು ಮುಖ್ಯವಾಗಿ ಆ ಎರಡು ವೃತ್ತಗಳ ಪಾದಾಂತ್ಯದ ಎರಡು ಗುರುಗಳ ತುಯ್ತದಲ್ಲಿದೆ. ಲಯಾನ್ವಿತತೆಯನ್ನು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ಹೊಂದಿದ ಯಾವುದೇ ಬಂಧದಲ್ಲಿ ಪಾದಾಂತ್ಯದ ಛಂದೋವಿನ್ಯಾಸವು ಆ ಬಂಧಕ್ಕೆ ಸಲ್ಲುವ ಒಂದು ಪೂರ್ಣಗಣವನ್ನು (ಇದು ಗುರುಯುಗ್ಮರೂಪದ ಊನಗಣವೂ ಆಗಿರಬಹುದು; ಆಗ ಅದು ಪ್ರಾಯಿಕವಾಗಿ ಪಂಚಮಾತ್ರಾಗಣಗಳಿಂದ ಘಟಿತವಾದ ಪಾದದ ಕಡೆಯಲ್ಲಿ ಬರುವ ನಾಲ್ಕು ಮಾತ್ರೆಗಳ ಊನಗಣವಾಗಿರುತ್ತದೆ) ಪ್ರತಿನಿಧಿಸುವಂಥ ಎರಡು ಗುರುಗಳಾಗಿ ರೂಪಿತವಾಗಿದ್ದರೆ ಅಲ್ಲಿಯ ಛಂದೋಗತಿ ತನ್ನ ಪರ್ಯವಸಾನದಲ್ಲಿ ತೀವ್ರವಾದ ತುಯ್ತವನ್ನು ಬಿಂಬಿಸುತ್ತದೆ.
ಇದಕ್ಕೆ ಕೆಲವು ಉದಾಹರಣೆಗಳನ್ನು ಪರಿಶೀಲಿಸಬಹುದು:
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್ |
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾ ಪಾರೇ ಪಾಹಿ ಮುರಾರೇ || (ಮೋಹಮುದ್ಗರ, ೧೨)
ಈ ಪದ್ಯದ ಮೊದಲೆರಡು ಸಾಲುಗಳ ಕೊನೆಯಲ್ಲಿ ಕಾಣದ ತುಯ್ತ ಕಡೆಯ ಎರಡು ಸಾಲುಗಳಲ್ಲಿರುವುದು ಗತಿಪ್ರಜ್ಞಾಶಾಲಿಗಳಿಗೆ ಸುವೇದ್ಯ.
ಇದು ಏಕರೂಪದ ಮಾತ್ರಾಗಣಗಳ ಉದಾಹರಣೆಯಾದರೆ ಮುಂದಿನದು ಮಿಶ್ರರೂಪದ ಮಾತ್ರಾಗಣಗಳ ಉದಾಹರಣೆ:
ಆವ ಸುವ್ರತಭಂಗವೋ ಮೇ-
ಣಾವ ದೈವದ್ರೋಹವೋ ತಾ-
ನಾವ ಶಿವಭಕ್ತಾಪರಾಧಿಯೊ ಪೂರ್ವಜನ್ಮದಲಿ || (ಕರ್ಣಾಟಭಾರತಕಥಾಮಂಜರಿ, ೩.೬.೩೮)
ಸ್ವೇದಜಲದಲಿ ಮಿಂದು ಪುನರಪಿ
ಖೇದಪಂಕದೊಳದ್ದು ಬಹಳವಿ-
ಷಾದರಜದಲಿ ಹೊರಳಿ ಭಯರಸನದಿಯೊಳೀಸಾಡಿ || (ಕರ್ಣಾಟಭಾರತಕಥಾಮಂಜರಿ, ೩.೬.೫೨)
ಮೊದಲ ಪದ್ಯಾರ್ಧದಲ್ಲಿ ಆದಿಮ ಪಾದಗಳೆರಡರ ಕೊನೆಗಿರುವ ಗುರುಯುಗ್ಮ ಎಂಥ ಲಯತೀವ್ರತೆಯನ್ನು ತಂದಿದೆಯೆಂಬುದನ್ನು ಮನಗಾಣಲು ಎರಡನೆಯ ಪದ್ಯಾರ್ಧದ ಇವೇ ಸ್ಥಾನಗಳೊಡನೆ ಅವನ್ನು ಹೋಲಿಸಿ ನೋಡಬಹುದು.
ಇನ್ನು ಲಯಾನ್ವಿತವಾದ ವರ್ಣವೃತ್ತಗಳ ಎರಡು ಮಾದರಿಗಳನ್ನು ನೋಡೋಣ:
ಬ್ರಹ್ಮಮುರಾರಿಸುರಾರ್ಚಿತಲಿಂಗಂ
ನಿರ್ಮಲಭಾಸಿತಶೋಭಿತಲಿಂಗಮ್ || (ಲಿಂಗಾಷ್ಟಕ, ೧)
ವಿದಿತಾಖಿಲಶಾಸ್ತ್ರಸುಧಾಜಲಧೇ
ಮಹಿತೋಪನಿಷತ್ಕಲಿತಾರ್ಥನಿಧೇ || (ತೋಟಕಾಷ್ಟಕ, ೧)
ಇವು ನಾಲ್ಕು ಮಾತ್ರೆಗಳ ಮಾನವುಳ್ಳ ನಾಲ್ಕು-ನಾಲ್ಕು ಘಟಕಗಳ ಪಾದಗಳು. ಮೊದಲನೆಯದು ದೋಧಕವೃತ್ತ. ಇಲ್ಲಿ ಮೂರು ಭ-ಗಣಗಳ ಬಳಿಕ ಒಂದು ಗುರುಯುಗ್ಮ ಬಂದಿದೆ. ಎರಡನೆಯದು ತೋಟಕವೃತ್ತ. ಇಲ್ಲಿ ನಾಲ್ಕು ಸ-ಗಣಗಳಿವೆ. ದೋಧಕದ ಪಾದಾಂತ್ಯವು ತಳೆದ ಲಯತೀವ್ರತೆ ತೋಟಕದಲ್ಲಿಲ್ಲ.[2]
ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳು ವಿಲೋಮಸಂಕೀರ್ಣಗತಿಯ ಲಯಾನ್ವಿತತೆಯನ್ನು ತಳೆದ ಕಾರಣ ಈ ಗತಿಗೆ ಅನುಸಾರವಾಗಿ ಪ್ರತಿಯೊಂದು ಆವರ್ತದ ಕೊನೆಗೆ ನಾಲ್ಕು ಮಾತ್ರೆಗಳ ಗಣವನ್ನು ಹೊಂದಿವೆ. ಪಾದಕ್ಕೆ ಎರಡು ಸಂಕೀರ್ಣಲಯದ ಘಟಕಗಳ ಲೆಕ್ಕದಂತೆ ವಿನ್ಯಸ್ತವಾದ ಗಣಗಳು ಚತುರಸ್ರತೆಯನ್ನು ತಂದಿವೆ. ಸಂಕೀರ್ಣಲಯಘಟಕದ ನಾಲ್ಕು ಮಾತ್ರೆಗಳು ಗುರುಯುಗ್ಮದ ರೂಪದಲ್ಲಿ ಪ್ರತಿಯೊಂದು ಪಾದದ ನಡುವೆ ಮತ್ತು ಕೊನೆಗೆ ಬಂದಿವೆ. ಹೀಗಾಗಿ ಇಲ್ಲಿರುವ ತುಯ್ತ ತೀವ್ರಸ್ವರೂಪದ್ದು. ಇಂಥ ಗತಿ ಅಂತರ್ಮುಖತೆ, ವಿಚಾರಪರತೆ, ಸಂಕೀರ್ಣತೆ ಮುಂತಾದ ಭಾವಗಳನ್ನು ಧ್ವನಿಸುವುದು ಕಷ್ಟ. ಈ ಬಗೆಯ ಭಾವಧ್ವನನಕ್ಕೆ ಬೇರೆಯೇ ಗತಿ ಯುಕ್ತ. ಅದನ್ನು ಪೂರ್ವೋಕ್ತ ವೃತ್ತಗಳಲ್ಲಿ ಅತ್ಯಲ್ಪ ವ್ಯತ್ಯಾಸವನ್ನು ತರುವ ಮೂಲಕ ಮಾಡುವುದಾದರೆ ಅದು ಪ್ರತಿಪಾದದ ಉಪಾಂತ್ಯವರ್ಣದ ಸ್ಥಾನದಲ್ಲಿ ಒಂದು ಲಘುವನ್ನು ಹೊಸತಾಗಿ ಸೇರಿಸುವುದೇ ಆಗಿದೆ.
ಹೀಗೆ ವಿಶಿಷ್ಟ ಕಾರಣದಿಂದ ನಿಷ್ಪನ್ನವಾದ ವೃತ್ತಗಳು ವಂಶಸ್ಥ ಮತ್ತು ಇಂದ್ರವಂಶ. ಇವೆರಡರ ಪೈಕಿ ಮೇಲೆ ಕಾಣಿಸಿದ ಉದ್ದೇಶವನ್ನು ಮಿಗಿಲಾಗಿ ಈಡೇರಿಸುವಂಥ ಗತಿಸೌಷ್ಠವನ್ನು ಗಳಿಸಿರುವುದು ವಂಶಸ್ಥವೇ. ಇದಕ್ಕೆ ಮುಖ್ಯಕಾರಣ ವಂಶಸ್ಥದ ಮೂಲಮಾತೃಕೆಯಾದ ಉಪೇಂದ್ರವಜ್ರಾವೃತ್ತದ ಮೊದಲ ಲಘು. ಇದು ಈ ಮುನ್ನ ಹೇಳಿದ ಸಂಕೀರ್ಣತೆಗೆ ಬೇಕಾದ ಬಾಗು-ಬಳುಕನ್ನು ಪೋಷಿಸಿದೆ. ಇಂದ್ರವಂಶದಲ್ಲಿ ಇಂಥ ವಿನ್ಯಾಸವಿಲ್ಲದ ಕಾರಣದಿಂದಲೇ ಅದಕ್ಕೆ ದಕ್ಕಿದ ಮಾರ್ಪಾಡು ಪರ್ಯಾಪ್ತ ಪ್ರಮಾಣದ್ದೆನಿಸದಾಯಿತು. ಹೀಗಾಗಿಯೇ ಸಂಸ್ಕೃತಕವಿಗಳು ಈ ವೃತ್ತವನ್ನು ಅಷ್ಟಾಗಿ ಆದರಿಸಲಿಲ್ಲ.
ಗುರು-ಲಘುಗಳ ಅಲ್ಪಸ್ವಲ್ಪದ ವಿನ್ಯಾಸವೈಚಿತ್ರ್ಯದಿಂದಲೇ ಹೆಚ್ಚಿನ ಗತಿವೈವಿಧ್ಯವನ್ನು ಹೊಂದಿರುವ ಉಪಜಾತಿ ಮತ್ತು ವಂಶಸ್ಥಗಳು ವಿಭಿನ್ನವಾದ ಎರಡು ವಿಶಿಷ್ಟ ಭಾವಸಮುದಾಯಗಳನ್ನು ಧ್ವನಿಸಬಲ್ಲ ಶಕ್ತಿಯನ್ನುಳ್ಳ ಬಂಧಗಳಾಗಿ ನೆಲೆಗೊಂಡ ಬಳಿಕ ಇವೆರಡರ ನಡುವೆ ಎಲ್ಲೋ ನಿಲ್ಲುವ ಛಂದಃಪ್ರಭೇದಗಳು ತಮ್ಮದಾದ ಛಾಪನ್ನು ಬೀರದೆ ಗೌಣವಾದದ್ದು ಸಾಹಿತ್ಯಚರಿತ್ರೆಯಲ್ಲಿ ಸ್ಪಷ್ಟವಾಗಿದೆ. ಈ ಗೌಣವೃತ್ತಗಳ ಸಾಲಿಗೆ ಇಂದ್ರವಂಶದಂತೆ ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳೂ ಸೇರಿಹೋದದ್ದು ಚೋದ್ಯ! ಎಷ್ಟೋ ಜನ್ಯರಾಗಗಳ ವಿಶಿಷ್ಟ ಮಾಧುರ್ಯದಲ್ಲಿ ಹಲವು ಜನಕರಾಗಗಳು ಕೊಚ್ಚಿಹೋದ ಪರಿಯನ್ನಿಲ್ಲಿ ನೆನೆಯಬಹುದು. (ಉಪಜಾತಿ ಮತ್ತು ವಂಶಸ್ಥಗಳ ಗತಿಭೇದ ಮತ್ತು ಅನ್ವಯಭೇದಗಳನ್ನು ಮನಗಾಣಲು ಕಾಳಿದಾಸನ ‘ಕುಮಾರಸಂಭವ’ ಕಾವ್ಯದ ಮೂರನೆಯ ಮತ್ತು ಐದನೆಯ ಸರ್ಗಗಳನ್ನು ತೌಲನಿಕವಾಗಿ ನೋಡಿದರೆ ಅನುಕೂಲವಾದೀತು. ಅಂತೆಯೇ ‘ರಘುವಂಶ’ದ ಆರನೆಯ ಮತ್ತು ಏಳನೆಯ ಸರ್ಗಗಳನ್ನು ‘ಕಿರಾತಾರ್ಜುನೀಯದ ಮೊದಲ ಮತ್ತು ನಾಲ್ಕನೆಯ ಸರ್ಗಗಳೊಟ್ಟಿಗೆ ಹೋಲಿಸಿ ನೋಡಬಹುದು.)
[1] ತೆಲುಗಿನಲ್ಲಿರುವ ಆದಿಪ್ರಾಸ ಮತ್ತು ಯತಿಮೈತ್ರಿಗಳ ನಿರ್ಬಂಧದಿಂದಲೇ ತುಂಬ ಸೊಗಸಾದ ರಥೋದ್ಧತಾ, ಪುಷ್ಪಿತಾಗ್ರಾ, ವಸಂತತಿಲಕಾ ಮುಂತಾದ ಕೆಲವು ಸಂಕ್ಷಿಪ್ತ ಮತ್ತು ಮಧ್ಯಮಗಾತ್ರದ ವೃತ್ತಗಳೂ ಹರಿಣಿ, ಶಿಖರಿಣಿ ಮೊದಲಾದ ವಿಕಟಗತಿಯ ಬಂಧಗಳೂ ಆ ನುಡಿಗೆ ವ್ಯಾಪಕವಾಗಿ ಬರಲಿಲ್ಲವೆಂದು ಕಾಳೂರಿ ಹನುಮಂತರಾವು ಎಂಬ ವಿದ್ವಾಂಸರು ಹಿಂದೆಯೇ ಒಕ್ಕಣಿಸಿದ್ದನ್ನಿಲ್ಲಿ ನೆನೆಯಬಹುದು (ಸಾಹಿತೀಜಗತಿ, ಪು. ೨೦೧).
[2] ಎಲ್ಲರೂ ಬಲ್ಲಂತೆ ಕಂದಪದ್ಯವು ಚತುಷ್ಕಲ ಗಣಗಳಿಂದ ಕೂಡಿದ ಮಾತ್ರಾಜಾತಿ. ಇಲ್ಲಿಯ ಪಾದಾಂತ್ಯಗಳಲ್ಲಿ ಗುರುಯುಗ್ಮ ಬಂದಾಗ ಮೇಲೆ ಕಾಣಿಸಿದಂಥ ತುಯ್ತ ಕೇಳಿಬರದು. ಇದಕ್ಕೆ ಕಾರಣವೇನೆಂಬ ಪ್ರಶ್ನೆ ಏಳಬಹುದು. ಕಂದಪದ್ಯದ ನಾಲ್ಕೂ ಪಾದಗಳು ವಿಷಮಸಂಖ್ಯೆಯ ಗಣಗಳಿಂದ ಕೂಡಿರುವ ಕಾರಣ ಅವು ಚತುರಸ್ರವಾಗದೆ ಉಳಿದಿವೆ. ಹೀಗಾಗಿ ಯಾವುದೇ ಲಯಪ್ರತೀತಿಗೆ ಅನಿವಾರ್ಯವಾದ ಚತುರಸ್ರತೆಯ ಅಭಾವವೇ ಇಲ್ಲಿ ತುಯ್ತ ಕಾಣದಂತೆ ಮಾಡಿದೆ. ಇದನ್ನು ಜಿಜ್ಞಾಸುಗಳು ಉದಾಹರಣೆಗಳಿಂದ ತಾವೇ ಸ್ಪಷ್ಟಮಾಡಿಕೊಳ್ಳಬಹುದು.
To be continued.