{ದ್ರುತವಿಲಂಬಿತ} ದ್ರುತವಿಲಂಬಿತವನ್ನು ಸಂತುಲಿತಮಧ್ಯಾವರ್ತಗತಿಯ ಹಂದರದ ಮೇಲೆ ಹಬ್ಬಿದ ವೃತ್ತವಲ್ಲಿಗಳ ಜೊತೆಗೆ ಸೇರಿಸಿಕೊಳ್ಳುವುದು ಸ್ವಲ್ಪ ಚಿಂತ್ಯವೆನಿಸಬಹುದು. ಆದರೆ ಈ ಬಂಧದ ಹಾಸು-ಹೊಕ್ಕನ್ನು ಬಿಡಿಸಿ ನೋಡಿದರೆ ಈ ಸೇರ್ಪಡೆಯ ಔಚಿತ್ಯ ಸ್ಪಷ್ಟವಾಗುತ್ತದೆ.
ಮೊದಲಿಗೆ ದ್ರುತವಿಲಂಬಿತದ ಪ್ರಸ್ತಾರವನ್ನು ಪರಿಕಿಸೋಣ:
u u u – u u – u u – u –
ನ-ಭ-ಭ-ರ ಎಂಬುದು ಇಲ್ಲಿಯ ಗಣವಿನ್ಯಾಸ. ಇದರ ಸಾಲುಗಳ ಪೂರ್ವ ಮತ್ತು ಉತ್ತರಾರ್ಧಗಳನ್ನು ಬಿಡಿಸಿ ನೋಡಿದರೆ ೩+೪ ಮತ್ತು ೪+೫ ಎಂಬ ಮಾತ್ರಾಗಣಗಳ ಮೊತ್ತ ಕಂಡುಬರುತ್ತದೆ. ಅಂದರೆ, ಮೊದಲ ಭಾಗದಲ್ಲಿ ಮಿಶ್ರಲಯ ಮತ್ತು ಎರಡನೆಯ ಭಾಗದಲ್ಲಿ ಸಂಕೀರ್ಣಲಯ ಇದೆ ಎಂದಾಯಿತು. ನಾವು ಬಲ್ಲಂತೆ ಯಾವುದೇ ಒಂದು ಲಯಾನ್ವಿತ ಗತಿ ದೃಢವಾಗಿ ನೆಲೆ ನಿಲ್ಲಬೇಕೆಂದರೆ ಆ ಗತಿಯ ಎರಡು ಘಟಕಗಳಾದರೂ ಅವ್ಯವಹಿತವಾಗಿ ಬರಬೇಕು. ಇದಕ್ಕೆ ಮತ್ತಷ್ಟು ಪೂರ್ಣತೆ ಸಿಗಬೇಕೆಂದರೆ ಮತ್ತೆರಡು ಗಣಗಳು ಹೀಗೆಯೇ ಬರಬೇಕು; ಅಥವಾ ಎರಡು ಗಣಗಳ ಪೈಕಿ ಕೊನೆಯದು ಊನಗಣವಾದರೂ ಆಗಬೇಕು. ಇಲ್ಲವಾದರೆ ಲಯಸಮತೆಗೆ ಬೇಕಾದ ಚತುರಸ್ರತೆ ಸಿದ್ಧಿಸುವುದಿಲ್ಲ. ಈ ಎಣಿಕೆಯಂತೆ ನೋಡಿದರೆ ಇಲ್ಲಿ ಎರಡೂ ಗತಿಗಳು ಸ್ಥಿರವಾಗುವುದಿಲ್ಲ. ಹೀಗಾಗಿ ದ್ರುತವಿಲಂಬಿತದ ಮೂಲಗತಿ ಏನೆಂದು ತಿಳಿಯಲು ಬೇರೆಯೇ ಆದ ದಾರಿಯನ್ನು ಹುಡುಕಬೇಕು. ಅದು ಚತುಷ್ಕಲದ ದಿಕ್ಕನ್ನೇ ಆಶ್ರಯಿಸಬೇಕು.
ಹೀಗೆ ನೋಡಿದಾಗ ಇಲ್ಲಿಯ ಪ್ರತಿಯೊಂದು ಪಾದದ ನಡುವಿನ ಎರಡು ಭ-ಗಣಗಳು ಚತುಷ್ಕಲಗಳಾಗಿರುವುದು ಸ್ಪಷ್ಟವಾಗುತ್ತದೆ. ಇವುಗಳ ಆಚೀಚಿನ ಗಣಗಳ ವಿನ್ಯಾಸವನ್ನು ಒಟ್ಟಿಗೆ ನೋಡಿದಾಗ ಅವು ಶುದ್ಧವಾದ ಸಂತುಲಿತಮಧ್ಯಾವರ್ತಗತಿಯ ಒಂದು ಘಟಕವೆಂದು ತಿಳಿಯುತ್ತದೆ. ಅಖಂಡವಾದ ಸಂತುಲಿತಮಧ್ಯಾವರ್ತಗತಿಯ ನಡುವೆ ಎರಡು ಅಪ್ಪಟ ಚತುಷ್ಕಲಗಳು ಬರುವ ಮೂಲಕ ನಿರೀಕ್ಷಿತ ರೀತಿಯ ಲಯಾನ್ವಿತತೆಯನ್ನು ಮುರಿಯುವ ಯತ್ನ ಇಲ್ಲಿದೆ ಎಂದಾಯಿತು:
u u u [– u u – u u] – u –
(ಅಧೋರೇಖೆ ಇರುವ ಭಾಗ - ಸಂತುಲಿತಮಧ್ಯಾವರ್ತಗತಿ; ಆವರಣದೊಳಗಿನ ಭಾಗ - ಎರಡು ಭ-ಗಣಗಳು.)
ಇದೀಗ ದ್ರುತವಿಲಂಬಿತದ ಆರು ಮತ್ತು ಏಳನೆಯ ಅಕ್ಷರಗಳನ್ನು ಪರಸ್ಪರ ಮಾರ್ಪಡಿಸಿದರೆ ಎಂಥ ವಿನ್ಯಾಸ ಬರುವುದೆಂಬುದನ್ನು ಪರಿಕಿಸೋಣ:
u u u – u [u –] u u – u –
u u u – u [– u] u u – u –
u u u – u – | u u u – u –
ನ-ರ-ನ-ರ ಎಂಬುದು ಇಲ್ಲಿಯ ಗಣವಿನ್ಯಾಸ. ಇದು ಹೆಚ್ಚಿನ ಶಾಸ್ತ್ರಜ್ಞರು ಗುರುತಿಸದ ವೃತ್ತವಾದರೂ ಶುದ್ಧವಾದ ಸಂತುಲಿತಮಧ್ಯಾವರ್ತಗತಿಯನ್ನು ಪಾಲಿಸುವ ಲಯಾನ್ವಿತ ಬಂಧವೆಂಬುದರಲ್ಲಿ ಸಂದೇಹವಿಲ್ಲ. ಇದು ರಥೋದ್ಧತಾವೃತ್ತದಲ್ಲಿಯೂ ಇರುವ ಮೂಲಗತಿ. ಇಂಥ ಲಯಾನ್ವಿತತೆಯನ್ನು ಮುರಿಯುವ ಉದ್ದೇಶದಿಂದಲೇ ದ್ರುತವಿಲಂಬಿತದ ವಿನ್ಯಾಸ ಹುಟ್ಟಿದೆ ಎಂದರೆ ಅತಿಶಯವಲ್ಲ. ಈ ವೃತ್ತ ತನ್ನ ಹೆಸರಿಗೆ ತಕ್ಕಂತೆ ಪಾದದ ಪೂರ್ವಾರ್ಧದಲ್ಲಿ ಲಘುಬಾಹುಳ್ಯದ ಮೂಲಕ ದ್ರುತಗತಿಯನ್ನೂ ಉತ್ತರಾರ್ಧದಲ್ಲಿ ಗುರುಬಾಹುಳ್ಯದ ಮೂಲಕ ವಿಳಂಬಿತಗತಿಯನ್ನೂ ಹೊಂದಿದೆ. ಈ ಗತಿಸಂಕ್ರಮಣ ಶ್ರುತಿಕಟುವಾಗದಂತೆ ನಡುವಿನಲ್ಲಿ ಮಧ್ಯಮಗತಿಯ ಬೆಸುಗೆ ಚೆನ್ನಾಗಿ ನಿಂತಿದೆ. ಆದುದರಿಂದಲೇ ಇದು ಪರಿಣಾಮತಃ ಕೋಮಲವಾದ ಮಧ್ಯಗತಿಗೇ ಬರುತ್ತದೆ. ಇಂಥ ಮಧ್ಯಗತಿಯುಳ್ಳ ಬಂಧವಿದಾದ ಕಾರಣ ಯತಿಯ ಕ್ಲೇಶ ಇಲ್ಲಿಲ್ಲ. ನಿರ್ಯತಿ ವೃತ್ತಗಳ ಗುಂಪಿನಲ್ಲಿ ತುಂಬ ಆಕರ್ಷಕವಾದ ಗತಿಯನ್ನು ಹೊಂದಿರುವ ಚಿಕ್ಕ ಛಂದಸ್ಸಾಗಿ ಇದಕ್ಕೆ ಮಾನ್ಯತೆಯಿದೆ. ದ್ರುತವಿಲಂಬಿತದ ನಿರ್ಯತಿತ್ವ ಅದರ ವಿನಿಯೋಗದಲ್ಲಿ ಅಪಾರವಾದ ಗತಿವೈವಿಧ್ಯವನ್ನು ತಂದುಕೊಟ್ಟಿದೆ.
ಅದರ ಕೆಲವೊಂದು ವಿನ್ಯಾಸಗಳನ್ನು ಹೀಗೆ ಗುರುತಿಸಿಕೊಳ್ಳಬಹುದು:
ಜಯತಿ | ಗೋಕುಲ- | ಬಾಲಕ- | ಜೀವನೋ
ಮುರಲಿಕಾ- | ಮಧುರ- | ಸ್ವರಭಾ- | ಸ್ವರಃ |
ಯದು- | ವತಂಸ | ಇಹೈವ | ಕಲಿಂದಜಾ-
ತಟ- | ಮಹೀರುಹ- | ಮೂಲ- | ನಿಕೇತನಃ ||
ಈ ಪದ್ಯದ ಪ್ರತಿಯೊಂದು ಪಾದದಲ್ಲಿಯೂ ಬೇರೆ ಬೇರೆ ಬಗೆಯ ಪದಯತಿಗಳು ಬಂದಿವೆ. ಮೊದಲ ಸಾಲಿನಲ್ಲಿ ನ-ಭ-ಭ-ರ ಎಂಬ ದ್ರುತವಿಲಂಬಿತದ ಲಕ್ಷಣವೇ ಕಂಡಿದೆ. ಎರಡನೆಯ ಸಾಲಿನಲ್ಲಿ ನಡುವಿನ ಪದಗಳು ಸ-ಗಣಗಳಾಗಿವೆ. ಇವು ಮೂರನೆಯ ಸಾಲಿನಲ್ಲಿ ಜ-ಗಣಗಳ ರೂಪ ತಾಳಿವೆ. ಹೀಗೆ ಪ್ರತಿ ಬಾರಿಯೂ ನಡುವಿನ ನಾಲ್ಕು ಮಾತ್ರೆಗಳ ಪ್ರಮಾಣದ ಎರಡು ಘಟಕಗಳು ವಿವಿಧ ರೀತಿಯ ಗಣವಿನ್ಯಾಸವನ್ನು ತಾಳುವ ಮೂಲಕ ಗತಿವೈವಿಧ್ಯಕ್ಕೆ ನೆರವಾಗಿವೆ. ಇಲ್ಲಿಯ ವಿಶೇಷ ಎಂದರೆ - ಈ ಘಟಕಗಳು ಭ-ಗಣಗಳ ರೂಪ ತಾಳಿದಾಗ ವಿಲಂಬಗತಿಯನ್ನೂ ಸ-ಗಣಗಳ ರೂಪ ತಾಳಿದಾಗ ದ್ರುತಗತಿಯನ್ನೂ ಜ-ಗಣಗಳ ರೂಪ ತಾಳಿದಾಗ ಪ್ಲುತಗತಿಯನ್ನೂ ಹೊಂದುತ್ತವೆ. ಇಂಥ ಪ್ರಸ್ಫುಟವಾದ ವೈವಿಧ್ಯವಲ್ಲದೆ ಮತ್ತೆಷ್ಟೋ ಬಗೆಯ ಅಲ್ಪಸ್ಫುಟ ವೈವಿಧ್ಯಗಳನ್ನು ದ್ರುತವಿಲಂಬಿತವು ತಳೆಯುತ್ತದೆ. ಇದರ ಒಂದು ಸೂಚನೆಯನ್ನು ನಾಲ್ಕನೆಯ ಸಾಲಿನಲ್ಲಿ ಕಾಣಬಹುದು. ಹೀಗೆ ಗಣಸಾಮ್ಯವಿದ್ದೂ ಗತಿವೈವಿಧ್ಯವನ್ನು ಹೊಂದುವುದು ಈ ವೃತ್ತದ ವೈಶಿಷ್ಟ್ಯ. ಈ ಕಾರಣದಿಂದಲೇ ಸಂಸ್ಕೃತಕವಿಗಳು ಇದನ್ನು ಯಮಕಾಲಂಕಾರಕ್ಕೆ ಅತಿಶಯವಾಗಿ ಬಳಸಿದ್ದಾರೆ. ಇಲ್ಲಿ ಒತ್ತೊತ್ತಾಗಿ ಬರುವ ಗುರು-ಲಘುಗಳ ವಿಕಟತೆ ಇಲ್ಲದ ಕಾರಣ ಯಮಕದಂಥ ಶಬ್ದಾಲಂಕಾರಕ್ಕೆ ಇದು ಹೇಳಿಮಾಡಿಸಿದಂತಿದೆ.
ದ್ರುತವಿಲಂಬಿತದ ಕೆಲವೊಂದು ಉದಾಹರಣೆಗಳನ್ನು ಕಾಣಬಹುದು:
ಎನಗಪಾಯಮನಾವನೊಡರ್ಚುವಂ
ಮೊನೆಯೊಳೆನ್ನೊಳದಾವನಿದಿರ್ಚುವಂ |
ಜನನಿ ರಾಘವನಾಜ್ಞೆಯೆ ಕಾದುದೀ-
ತನನದಲ್ಲದೊಡೆಲ್ಲಿಯ ರಾವಣಂ || (ರಾಮಚಂದ್ರಚರಿತಪುರಾಣ, ೧೧.೧೧೧)
ಬಿಗಿದ ಬೆಳ್ಳಿಯ ನುಣ್ಮಣಿಯಂತೆ ವೊ-
ಲ್ಭಗಣಮೊಪ್ಪಿರೆ ಕಾಲವನೇಚರಂ |
ಜಗದ ಲೋಚನಮೀನಕೆ ಬೀಸಿದೀ
ನೆಗಳ್ದ ಕರ್ಬಲೆವೋಲ್ ತಮಮೊಪ್ಪುಗಂ || (ರಾಜಶೇಖರವಿಳಾಸ, ೧೧.೨೩)
ಜಲಧಿವಾರಿ ನಿಪೀತವತೋ ಭೃಶಂ
ವನಮುಚೋ ರುಧಿರಸ್ರವಲೋಹಿತಾಃ |
ಅತಿಭರಸ್ಫುರಿತೋದರನಿರ್ಗತಾ
ವಿಬಭುರಾಂತ್ರಲತಾ ಇವ ವಿದ್ಯುತಃ || (ಜಾನಕೀಹರಣ, ೧..೬೧)
ಪತತಿ ವೃಷ್ಟಿರಸೌ ಮಯಿ ನಾಧುನಾ
ದಿನಕರಾತಪಸೇವನಲಾಲಸಮ್ |
ಇತಿ ವಿಕಾಸಮಗಾದಿವ ಚಿಂತಯ-
ಚ್ಚಿರಮುದಾರಮುದಾಯುತಮಂಬುಜಮ್ || (ಹರವಿಜಯ, ೩.೬೩)
ಈ ಗತಿಯ ಹದವನ್ನರಿಯಲು ಮತ್ತೆರಡು ಲಯಾನ್ವಿತ ವೃತ್ತಗಳನ್ನು ಇದರೊಡನೆ ಹೋಲಿಸಿ ನೋಡಬಹುದು:
{ತೋಟಕ, ದೋಧಕ} ತೋಟಕವು ನಾಲ್ಕು ಸ-ಗಣಗಳ ಮಧ್ಯಾವರ್ತಗತಿಯ ಲಯಾನ್ವಿತ ವೃತ್ತ. ದೋಧಕವು ಸಾಲಿಗೆ ಮೂರು ಭ-ಗಣಗಳು ಹಾಗೂ ಎರಡು ಗುರುಗಳಿರುವ ಇದೇ ಮಧ್ಯಾವರ್ತಗತಿಯ ಲಯಾನ್ವಿತ ವೃತ್ತ. ಇವೆರಡೂ ತಮ್ಮ ಉತ್ಕಟವಾದ ಲಯಬದ್ಧತೆಯ ಕಾರಣ ಬಲುಬೇಗ ಏಕತಾನತೆಗೆ ತುತ್ತಾಗುತ್ತವೆ:
ತೋಟಕ
u u – u u – u u – u u –
ದೋಧಕ
– u u – u u – u u – –
ತೋಟಕದ ಉಪಾಂತ್ಯ ಲಘುವನ್ನು ಸಾಲಿನ ಮೊದಲಿಗೆ ತಂದಿರಿಸಿದರೆ ಅದು ದ್ರುತವಿಲಂಬಿತವನ್ನು ಉನ್ಮೀಲಿಸುತ್ತದೆ:
ತೋಟಕ
u u – u u – u u – u [u] –
ದ್ರುತವಿಲಂಬಿತ
[u] u u – u u – u u – u –
ದೋಧಕದ ಮೊದಲ ಗುರುವನ್ನು ಎರಡು ಲಘುಗಳನ್ನಾಗಿ ಒಡೆದು ಒಂದನ್ನು ಅಲ್ಲಿಯೇ ಉಳಿಸಿ ಮತ್ತೊಂದನ್ನು ಸಾಲಿನ ಉಪಾಂತ್ಯ ವರ್ಣದ ಸ್ಥಾನದಲ್ಲಿ ಇರಿಸಿದರೆ ಅದು ದ್ರುತವಿಲಂಬಿತವನ್ನೇ ಉನ್ಮೀಲಿಸುತ್ತದೆ:
ದೋಧಕ
[–] u u – u u – u u – –
ದ್ರುತವಿಲಂಬಿತ
[u] u u – u u – u u – [u] –
ಈ ಶೀರ್ಷಾಸನದ ಉದ್ದೇಶವಿಷ್ಟೇ: ವಿನಿಯೋಗಕ್ಕೆ ಒಳಪಟ್ಟ ದ್ರುತವಿಲಂಬಿತವು ಬಗೆಬಗೆಯ ವಿನ್ಯಾಸಗಳನ್ನು ತಾಳುವಾಗ ನಡುವಿನ ಎಂಟು ಮಾತ್ರೆಗಳು ಸ-ಗಣ, ಭ-ಗಣ ಮುಂತಾದ ರೂಪಗಳನ್ನು ಹೊಂದುವುದು ಸುವೇದ್ಯ. ಇದೇ ಗುರು-ಲಘುವಿನ್ಯಾಸದ ಗಣವ್ಯವಸ್ಥೆಯನ್ನೇ ತೋಟಕ-ದೋಧಕಗಳೂ ಹೊಂದಿವೆ. ಆದರೆ ಅವುಗಳ ಉತ್ಕಟ ಲಯಾನ್ವಿತತೆಯ ಕಾರಣ ಅಲ್ಲಿ ಉಂಟಾಗಿರುವ ಏಕತಾನತೆ ದ್ರುತವಿಲಂಬಿತದ ಆದಿ ಮತ್ತು ಅಂತ್ಯಗಳಲ್ಲಿ ಬಂದಿರುವ ನ-ಗಣ ಮತ್ತು ರ-ಗಣಗಳ ಮೂಲಕ ಇಲ್ಲವಾಗಿದೆ. ಅಂದರೆ, ಕೇವಲ ಆದ್ಯಂತಗಳಲ್ಲಿ ಒಂದೊಂದು ಮಾತ್ರೆಯ ನ್ಯೂನತೆ ಮತ್ತು ಅಧಿಕತೆ ಒಟ್ಟಂದದ ವೃತ್ತದ ಚತುರ್ಮಾತ್ರಾಗತಿಗೆ ಎಲ್ಲಿಲ್ಲದ ವೈವಿಧ್ಯ-ವೈಚಿತ್ರ್ಯಗಳನ್ನು ತಂದಿವೆ.
ಹೀಗೆ ಅಪ್ಪಟ ಲಯಾನ್ವಿತ ಬಂಧಗಳಲ್ಲಿ ಪ್ರತಿ ಹಂತದಲ್ಲಿಯೂ ಲಯರಾಹಿತ್ಯದ ಛಾಯೆಗಳನ್ನು ಕಾಣಿಸುವ ಮೂಲಕ ವರ್ಣವೃತ್ತಗಳಿಗೆ ಅನ್ಯಾದೃಶವಾದ ಸೊಗಸು ಸಂದಿದೆ.
ಸಂತುಲಿತಮಧ್ಯಾವರ್ತಗತಿಯ ವಿವರ್ತಗಳೇ ಆದ ರಥೋದ್ಧತಾ, ಪ್ರಿಯಂವದಾ, ಮಂಜುಭಾಷಿಣಿ, ದ್ರುತವಿಲಂಬಿತ ಮೊದಲಾದ ಅತಿಸುಂದರ ವೃತ್ತಗಳು ಕನ್ನಡಕ್ಕಿರಲಿ, ಯಾವುದೇ ಭಾರತೀಯ ಭಾಷೆಗೆ ಕೂಡ ಸೊಗಸಾಗಿ ಹೊಂದಿಕೊಳ್ಳಬಲ್ಲ ಬಂಧಗಳು. ಇವು ಹಳಗನ್ನಡಕ್ಕೆ ಮಾತ್ರವಲ್ಲದೆ ನಡುಗನ್ನಡ-ಹೊಸಗನ್ನಡಗಳಿಗೂ ಒಗ್ಗಿಬರುವ ಛಂದಸ್ಸುಗಳು. ಇಂತಿದ್ದರೂ ಇವು ಕವಿಗಳ ಅನಾದರಕ್ಕೆ ತುತ್ತಾದುದಕ್ಕೆ ಮುಖ್ಯಕಾರಣ ಆದಿಪ್ರಾಸದ ನಿರ್ಬಂಧವೆನ್ನಬಹುದು. ಕಂದದಂಥ ವೃತ್ತಕಲ್ಪವಾದ ಮಾತ್ರಾಬಂಧವು ನಿಡುಗಾಲದಿಂದ ಕನ್ನಡದಲ್ಲಿ ನೆಲೆನಿಂತ ಕಾರಣದಿಂದಲೇ ಇಂಥ ಚಿಕ್ಕ ಚಿಕ್ಕ ವೃತ್ತಗಳು ಪ್ರಾಚುರ್ಯ ಪಡೆಯದೆ ಹೋದುವೆಂದು ಕೆಲವರು ವಿದ್ವಾಂಸರು ಎಣಿಸುತ್ತಾರೆ. ದಿಟ, ಈ ಮಾತಿನಲ್ಲಿ ಹುರುಳಿಲ್ಲದೆ ಇಲ್ಲ. ಆದರೆ ಛಂದೋವೈವಿಧ್ಯಕ್ಕೆ ಆಸ್ಪದವುಂಟೆಂದೇ ಚಂಪೂಪ್ರಕಾರವನ್ನು ತಮ್ಮ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವಾಗಿ ಮಾಡಿಕೊಂಡ ಹಳಗನ್ನಡಕವಿಗಳು ಕಂದವೊಂದೇ ಸಾಕೆಂಬ ಸಂತೃಪ್ತಿಯಿಂದ ಇಂಥ ನಿಲವನ್ನು ತಳೆದರೆಂದು ಭಾವಿಸುವುದು ಅಷ್ಟಾಗಿ ವಿಚಾರಸಹವೆನಿಸದು. ಏಕೆಂದರೆ ನಿಡಿದಾದ ಹಲವು ವೃತ್ತಗಳನ್ನವರು ವ್ಯಾಪಕವಾಗಿ ಬಳಸಿದ್ದಾರೆ; ಕನ್ನಡಕ್ಕೆ ತುಂಬ ಒಗ್ಗುವುದೆಂದು ಹಲವರು ಪ್ರತಿಪಾದಿಸುವ ಉತ್ಪಲಮಾಲೆ-ಚಂಪಕಮಾಲೆಗಳನ್ನಷ್ಟೇ ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರೆ, ಮಹಾಸ್ರಗ್ಧರೆಗಳನ್ನೂ ಪೃಥ್ವಿ, ಮಲ್ಲಿಕಾಮಾಲೆ, ತರಳ, ಅನವದ್ಯ, ಖಚರಪ್ಲುತ ಮೊದಲಾದುವನ್ನೂ ಬಳಸಿ ನೋಡಿದ್ದಾರೆ. ಆದುದರಿಂದ ಆದಿಪ್ರಾಸದ ತ್ರಾಸದ ತಕ್ಕಡಿಯಲ್ಲಿ ತೂಗಿದಾಗ ಕಂದವೇ ತಮ್ಮ ನಿರ್ವಾಹಕ್ಕೆ ಹೆಚ್ಚು ಅನುಕೂಲಿಸುವಂತೆ ಕಂಡ ಕಾರಣ ಅದಕ್ಕೇ ಅಗ್ರಪೂಜೆ ಸಲ್ಲಿಸಿದರಲ್ಲದೆ ಇನ್ನಿತರ ಕಾರಣಗಳಿಂದ ಅಲ್ಲವೆಂದು ತರ್ಕಿಸಬಹುದು.
To be continued.