{ಜಲೋದ್ಧತಗತಿ} ಪೃಥ್ವೀವೃತ್ತದ ಪ್ರಸ್ತಾರದಲ್ಲಿ ‘ಜಲೋದ್ಧತಗತಿ’ ಎಂಬ ಪ್ರಬಲವಾದ ಲಯಾನ್ವಿತ ವೃತ್ತ ಗರ್ಭೀಕೃತವಾಗಿರುವುದು ಮತ್ತೊಂದು ವಿಶೇಷ:
ಪೃಥ್ವೀ
[u – u u u – u – u u u –] u – – u –
ಜಲೋದ್ಧತಗತಿ
u – u u u – | u – u u u –
ಪೃಥ್ವಿಯಲ್ಲಿ ಜಲೋದ್ಧತಗತಿಯ ಒಂದು ಪಾದದ ಬಳಿಕ ಉಳಿಯುವ ಐದು ಅಕ್ಷರಗಳನ್ನು ಗಮನಿಸಿದರೆ ಅಲ್ಲಿಯೂ ಸಂತುಲಿತಮಧ್ಯಾವರ್ತಗತಿಯ ಒಂದು ಘಟಕ ಇರುವುದು ಸ್ಪಷ್ಟವಾಗುತ್ತದೆ (u – – u –). ಈಗ ಈ ಸಾಲನ್ನು ಹನ್ನೆರಡು ಅಕ್ಷರಗಳ ಬಳಿಕ ಯತಿ ಇರುವಂತೆ ಪಠಿಸಿದರೆ ಅದು ಶ್ರುತಿಕಟುವಾಗಿ ತೋರದ ಲಯಾನ್ವಿತ ವೃತ್ತದಂತೆ ಭಾಸವಾಗುತ್ತದೆ:
u – u u u – u – u u u – | u – – u –
ಉಮಾಪತಿಸಖಂ ರಮಾಸಹಚರಂ ಭಜೇ ಮಾಧವಂ
ಪ್ರಮಾತ್ಮಕಪದಂ ಭ್ರಮಾಂತಕಮಹಂ ಪ್ರಭುಂ ಪಾವನಮ್ ||
ಈಗ ಲಯಾತ್ಮಕ ಗತಿಯಲ್ಲಿ ಶ್ರುತಿಕಟುತ್ವ ಕಾಣದಂತಾಗಿರಲು ಮುಖ್ಯ ಕಾರಣ ಮೊದಲ ಹನ್ನೆರಡು ಅಕ್ಷರಗಳನ್ನು ಸಂತುಲಿತಮಧ್ಯಾವರ್ತಗತಿಯಲ್ಲಿ ಪಠಿಸದೆ ಕೇವಲ ಶುದ್ಧಮಧ್ಯಾವರ್ತಗತಿಯಲ್ಲಿ ಪಠಿಸಿರುವುದೇ ಆಗಿದೆ. ಈಗ ಪ್ರಸ್ತುತ ಬಂಧದ ಕಡೆಯ ಘಟಕವು ಅಪ್ಪಟ ಸಂತುಲಿತಮಧ್ಯಾವರ್ತಗತಿಯದೇ ಆಗಿದ್ದರೂ (೩+೫) ಪಾದದ ಮಿಕ್ಕೆಲ್ಲ ಭಾಗ ಚತುಷ್ಕಲವಾಗಿ ವಿಭಕ್ತವಾಗುವ ಶುದ್ಧಮಧ್ಯಾವರ್ತಗತಿಯನ್ನೇ ತಳೆದು ಮುಂದಿನ ಭಾಗವನ್ನು ತನ್ನದೇ ಗತಿಯ ನಡುವೆ ತೋರಿಕೊಳ್ಳುವ ಗಣಪರಿವೃತ್ತಿ ಎಂಬಂತೆ ಕೇಳಿಸುವಲ್ಲಿ ಪ್ರಭಾವ ಬೀರುತ್ತದೆ. ನಾವು ಇಂಥ ಸಂದರ್ಭಗಳನ್ನು ಮಾತ್ರಾಜಾತಿಗಳಲ್ಲಿ ಸಾಕಷ್ಟು ಕಂಡಿರುವ ಕಾರಣ ಇದು ವಿಚಿತ್ರವೇನಲ್ಲ. ಇನ್ನು ಕಡೆಯ ಘಟಕದ ಮೊದಲಿಗೆ ಬರುವ ಲ-ಗಂ ವಿನ್ಯಾಸದ ಪ್ಲುತಿ ಕೂಡ ಹೊರಚ್ಚಾಗಿ ಎದ್ದುನಿಲ್ಲದು. ಏಕೆಂದರೆ ಇಂಥ ಪ್ಲುತಿಯ ಕೇಳ್ಮೆಗೆ ಶ್ರೋತೃಗಳನ್ನು ಸಜ್ಜುಗೊಳಿಸುವ ಹಾಗೆ ಪಾದದ ಮೊದಲಿಗೆ ಲಯ ತಪ್ಪದಂತೆ ಎರಡು ಜ-ಗಣಗಳು ಬಂದಿವೆ. ಇವು ಪ್ಲುತಿಯ ಪರಮಾಯತನಗಳೆಂಬುದನ್ನು ಛಂದೋವಿದರೆಲ್ಲ ಬಲ್ಲರು. ಇಷ್ಟೆಲ್ಲ ಬಗೆಯ ಗತಿಸಂತುಲನವನ್ನು ಹೊಂದಿಯೂ ಪ್ರಸ್ತುತ ವಿನ್ಯಾಸವು ಗಾಂಭೀರ್ಯಕ್ಕೆ ಎರವಾಗದ, ಉತ್ಸಾಹವನ್ನು ಬಿಂಬಿಸುವ ಪೃಥ್ವೀವೃತ್ತದ ವಿಶಿಷ್ಟ ಗತಿಯ ಮುಂದೆ ಚೆಲ್ಲುಚೆಲ್ಲಾಗಿ ತೋರುತ್ತದೆ. ಇದಕ್ಕೆ ಕಾರಣ ಪೂರ್ವೋಕ್ತ ವಿನ್ಯಾಸದಲ್ಲಿ ಎದ್ದುಕಾಣುವ ಪ್ಲುತಿಗಳು. ಇವು ಲಯಸಮತೆಯೊಡನೆ ಅದೆಷ್ಟು ಹದವರಿತು ಬಂದರೂ ತಮ್ಮ ತಾರಳ್ಯವನ್ನು ತೊರೆಯುವುದಿಲ್ಲ. ಇದನ್ನು ಕಂಡಾಗ ಲಯಾನ್ವಿತ ಮತ್ತು ಲಯರಹಿತ ಬಂಧಗಳ ನಡುವಣ ಸಂಕ್ರಮಣಸೂಕ್ಷ್ಮತೆ ಎಂಥದ್ದೆಂಬುದು ಸ್ಪಷ್ಟವಾಗುತ್ತದೆ.
{ಪ್ರಮಿತಾಕ್ಷರಾ} ಜಲೋದ್ಧತಗತಿಯನ್ನೂ ಅದರ ಉತ್ಕಟ ಪ್ಲುತಿಯನ್ನೂ ನೆನೆದಾಗ ಈ ವೃತ್ತಕ್ಕೆ ತುಂಬ ಹತ್ತಿರವಾದ ಪ್ರಮಿತಾಕ್ಷರಾ ನೆನಪಾಗುತ್ತದೆ. ಜಲೋದ್ಧತಗತಿಗೆ ಹೋಲಿಸಿದರೆ ಇದು ಸಾಕಷ್ಟು ವ್ಯಾಪ್ತಿಯನ್ನು ಹೊಂದಿರುವ ಬಂಧ. ಭಾರವಿಯಿಂದ ಮೊದಲ್ಗೊಂಡು ಹಲವರು ವಿದ್ವತ್ಕವಿಗಳು ತಮ್ಮ ಕಥನಗಳಿಗಾಗಿ ಇದನ್ನು ಬಳಸಿದ್ದಾರೆ. ಪ್ರಮಿತಾಕ್ಷರಾವೃತ್ತಕ್ಕೆ ಇಂಥ ಪ್ರಾಶಸ್ತ್ಯ ಬಂದದ್ದು ಏಕೆಂದು ಪರಿಶೀಲಿಸಿದಾಗ ಅದು ಜಲೋದ್ಧತಗತಿಗಿಂತ ಕಡಮೆಯ ಪ್ರಮಾಣದ ಪ್ಲುತಿಯನ್ನು ಹೊಂದಿರುವುದೇ ಕಾರಣವೆಂದು ತಿಳಿಯುತ್ತದೆ. ಇದು ಸಹಜವಾಗಿಯೇ ತನ್ನ ಪ್ರಸ್ತಾರದಲ್ಲಿ ಜ-ಗಣವೊಂದನ್ನು ತಗ್ಗಿಸಿಕೊಂಡು ಅದರ ಸ್ಥಾನದಲ್ಲಿ ಅವರೋಹಣಕ್ರಮದ ಗತಿಯನ್ನುಳ್ಳ ಸ-ಗಣವನ್ನು ಹೊಂದಿದೆ. ನಾವಿನ್ನು ಎರಡೂ ವೃತ್ತಗಳನ್ನು ಒಟ್ಟಿಗೆ ಪರಿಶೀಲಿಸಬಹುದು:
ಜಲೋದ್ಧತಗತಿ
u – u u u – | u – u u u –
ಪ್ರಮಿತಾಕ್ಷರಾ
u u – u – u | u u – u u –
ಜಲೋದ್ಧತಗತಿಯ ಮೊದಲನೆಯ ಸ್ಥಾನದ ಜ-ಗಣ ಪ್ರಮಿತಾಕ್ಷರಾವೃತ್ತದಲ್ಲಿ ಎರಡನೆಯ ಸ್ಥಾನಕ್ಕೆ ಬಂದಿದೆ; ಮೂರನೆಯ ಸ್ಥಾನದ ಜ-ಗಣ ಸ-ಗಣಕ್ಕೆ ಅವಕಾಶ ನೀಡಿ ಮರೆಯಾಗಿದೆ. (ಉಭಯವೃತ್ತಗಳ ಚತುಷ್ಕಲಗಣಘಟಿತವಾದ ಮಧ್ಯಾವರ್ತಗತಿಯ ಲಯಾನ್ವಿತತೆ ಅಕ್ಷತವಾಗಿ ಉಳಿದಿದೆ.) ಇದಿಷ್ಟೇ ಮಾರ್ಪಾಡಿನಿಂದ ಉಂಟಾಗಿರುವ ಪರಿಣಾಮ ಗಣನೀಯವಾದುದು. ಇದನ್ನು ಪರಿಭಾವಿಸಿದಾಗ - ಸಮಾಜದಲ್ಲಿ ತೀವ್ರಸ್ವಭಾವದ ವ್ಯಕ್ತಿಗಳು ಹೇಗೋ ಛಂದಸ್ಸಿನಲ್ಲಿ ಪ್ಲುತಿಗೆ ಎಡೆನೀಡುವ ವಿನ್ಯಾಸಗಳು ಹಾಗೆಯೇ ಎಂದು ಸ್ಪಷ್ಟವಾಗುತ್ತದೆ. ಇಂಥ ವ್ಯಕ್ತಿಗಳೂ ವೈಚಿತ್ರ್ಯಗಳೂ ಸಮಾಜ ಮತ್ತು ಛಂದಸ್ಸುಗಳಿಗೆ ಬೇಕು. ಆದರೆ ಇವುಗಳ ಸಂಖ್ಯೆಯಲ್ಲಿ ಮಿತಿ ಇರಬೇಕು.
{ಪ್ರಮಿತಾಕ್ಷರಾ ಮತ್ತು ಕಂದ} ಪ್ರಮಿತಾಕ್ಷರಾವೃತ್ತದ ಗತಿಸುಭಗತೆಗೆ ಮತ್ತೂ ಒಂದು ಉಪಪತ್ತಿಯನ್ನು ಕೊಡಬಹುದು. ಅದು ಮಾತ್ರಾಜಾತಿಯ ವರ್ಗಕ್ಕೆ ಸೇರುವ ಪ್ರಸಿದ್ಧವಾದ ಕಂದಪದ್ಯವನ್ನು ತನ್ನೊಳಗೆ ಆದ್ಯಂತ ಗರ್ಭೀಕರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೆಚ್ಚೇನು, ಎರಡೂ ಬಂಧಗಳ ಮಾತ್ರಾಸಂಖ್ಯೆ ಒಂದೇ ಆಗಿದೆ. ರಸಾಯನಶಾಸ್ತçದಲ್ಲಿ ಬರುವ ಒಂದೇ ಮೂಲವಸ್ತುವಿನ ಬಹುರೂಪಗಳಂತೆ (allotropic forms) ಈ ಬಂಧಗಳು ತೋರುತ್ತವೆ. ಗರ್ಭೀಕರಣದ ಬಗೆ ಹೀಗೆ;
ಪ್ರಮಿತಾಕ್ಷರಾ
[u u – u – u u u –] [u u –
u u – u – u u u – u u –]
[u u – u – u u u –] [u u –
u u – u – u u u – u u –]
ಕಂದ
u u – u – u u u –
u u – u u – u – u u u – u u –
u u – u – u u u –
u u – u u – u – u u u – u u –
ಇದಕ್ಕೊಂದು ಗರ್ಭಕವಿತೆಯ ಉದಾಹರಣೆಯನ್ನು ಕಾಣಬಹುದು:
ಪ್ರಮಿತಾಕ್ಷರಾ
ಕವಿತಾನುಭೂತಿಸುಖಮಂ [ಸವಿಯಂ
ಸವನಿಪ್ಪ ಕಬ್ಬಿಗನುಮಾ ಕವಿಯಂ] |
ಸ್ತವನಿಪ್ಪ ಭಾವುಕನುಮೀ [ಬುವಿಯೊಳ್
ಶಿವಶಾರದಾತ್ಮರಸತತ್ತ್ವರೆ ದಲ್] ||
ಕಂದ
ಕವಿತಾನುಭೂತಿಸುಖಮಂ
ಸವಿಯಂ ಸವನಿಪ್ಪ ಕಬ್ಬಿಗನುಮಾ ಕವಿಯಂ |
ಸ್ತವನಿಪ್ಪ ಭಾವುಕನುಮೀ
ಬುವಿಯೊಳ್ ಶಿವಶಾರದಾತ್ಮರಸತತ್ತ್ವರೆ ದಲ್ || (ಕನ್ನಡದಲ್ಲಿ ಅವಧಾನಕಲೆ, ಪು. ೨೫೧)
ಪ್ರಮಿತಾಕ್ಷರಾವೃತ್ತದಲ್ಲಿ ಕಂದವನ್ನು ಗರ್ಭೀಕರಿಸುವಾಗ ಕನ್ನಡಕ್ಕೆ ಕಟ್ಟಲೆಯಾಗಿ ಬಂದ ಆದಿಪ್ರಾಸವನ್ನು ಗಮನಿಸಿಕೊಳ್ಳಬೇಕು. ಈ ಕಾರಣದಿಂದ ಪೂರ್ವೋಕ್ತ ವೃತ್ತದ ಓಜಪಾದಗಳ ಕಡೆಯ ಗಣದಲ್ಲಿ ಆದಿಪ್ರಾಸಕ್ಕೆ ಸಂವಾದವನ್ನು ತರಲಾಗಿದೆ. ಪ್ರಮಿತಾಕ್ಷರಾ ಕಂದವಾಗಿ ಪಠಿಸಲ್ಪಟ್ಟಾಗ ಓಜಪಾದಗಳ ಕಡೆಯ ಗಣದ ಪ್ರಾಸಗಳು ಕಂದದ ಯುಕ್ಪಾದಗಳ ಆದಿಪ್ರಾಸದ ಸ್ಥಾನವನ್ನು ಗಳಿಸುವುದು ಸುವೇದ್ಯ. ಕನ್ನಡದ ಗರ್ಭಕವಿತಾರಚನೆಯಲ್ಲಿ ಈ ಎಚ್ಚರವನ್ನು ನಿಯತವಾಗಿ ತೆಗೆದುಕೊಳ್ಳಬೇಕಾದುದು ಚಿತ್ರಕವಿತಾವೇತ್ತರಿಗೆ ತಿಳಿದುದೇ ಆಗಿದೆ.
ಇನ್ನು ನಾವು ಪೃಥ್ವೀವೃತ್ತಕ್ಕೆ ಮರಳಬಹುದು. ಇದರ ವಿನ್ಯಾಸದಲ್ಲಿ ಮತ್ತೂ ಒಂದು ಬಗೆಯ ಗತಿವೈಚಿತ್ರ್ಯವಿದೆ:
[u] – u u u | – u – | [u] u u – u | – – u | –
ಆವರಣದಲ್ಲಿ ಕಾಣಿಸಿದ ಎರಡು ಲಘುಗಳನ್ನು ಅತೀತವಾಗಿ ಮಾಡಿಕೊಂಡು ಮಿಕ್ಕ ಭಾಗವನ್ನು ಐದೈದು ಮಾತ್ರೆಗಳ ಗಣಗಳ ರೂಪದಲ್ಲಿ ವಿಂಗಡಿಸಿಕೊಂಡ ಬಳಿಕ ಕಡೆಗೊಂದು ಗುರು ಊನಗಣದಂತೆ ಉಳಿಯುತ್ತದೆ. ಈ ಪ್ರಸ್ತಾರವನ್ನು ಅತೀತಗ್ರಹದ ನಿಯಮಕ್ಕನುಸಾರ ಪಠಿಸಿದರೆ ವಿಲಕ್ಷಣವಾದ ಖಂಡಗತಿ ತೋರಿಕೊಳ್ಳುತ್ತದೆ:
[ವಿ]ಭಾವರಿಯ ಶೋಭೆಯೇಂ | [ವಿ]ಬುಧಲೋಕಸಮ್ಮೋಹಕಂ
[ವಿ]ಭೂತಿಕರಭಾವಮೇ | [ವಿ]ಜಯಿಸಿರ್ಪ ಪಾಂಗಂತೆವೋಲ್ ||
ಈ ಎರಡು ಸಾಲುಗಳು ಪೃಥ್ವಿಯ ಮೂಲಧಾತುವಾದ ಲಾಲಿತ್ಯ ಮತ್ತು ಬಾಗು-ಬಳಕುಗಳನ್ನು ಮರೆಯಿಸಿದಂತೆ ಕೇಳುತ್ತವೆ; ಆವೇಶ-ಓಜಸ್ಸುಗಳನ್ನು ಒಳಗೊಂಡಂತೆ ತೋರುತ್ತವೆ. ವಿಶೇಷತಃ ಪ್ರತಿ ಪಾದದ ಪೂರ್ವೋತ್ತರಾರ್ಧಗಳ ಮೊದಲಿಗೆ ಬರುವ ಅತೀತಗ್ರಹ ಮತ್ತು ಪೂರ್ವಾರ್ಧದ ಕಡೆಯಲ್ಲಿ ಯತಿಸ್ಥಾನದ ವಿಶ್ರಾಂತಿಗಿಂತ ಹೆಚ್ಚಿನ ಕಾಲ ವಿರಮಿಸಬೇಕಾದ ಅನಿವಾರ್ಯತೆಯಿಂದ ಉಂಟಾದ ಮೌನದ ಕಾರಣ ಪ್ರಸ್ತುತ ಗತಿಗೆ ವಿಲಕ್ಷಣತೆ ಬಂದಿದೆ. ಈ ಎಲ್ಲ ಅಂಶಗಳು ಪ್ರಸ್ತುತ ಗತಿಯನ್ನು ಛಂದಃಶಾಸ್ತ್ರದ ಪಾಠ್ಯಪರಿಧಿಯಿಂದ ಸಂಗೀತಶಾಸ್ತ್ರದ ಗೇಯಪರಿಧಿಯತ್ತ ಸೆಳೆಯುತ್ತಿವೆ.
ಪೃಥ್ವಿಯಲ್ಲಿ ಇಷ್ಟೆಲ್ಲ ಬಗೆಯ ಗತಿವೈವಿಧ್ಯದ ಸಾಧ್ಯತೆ ಇರುವ ಕಾರಣದಿಂದಲೇ ಅದು ‘ಅತ್ಯಷ್ಟಿ’ವರ್ಗದ ಒಂದು ಪ್ರಮುಖ ವೃತ್ತವೆನಿಸಿದೆ. ಈ ವರ್ಗದ ಮಿಕ್ಕ ಮೂರು ನಾಲ್ಕು ಗಣ್ಯ ವೃತ್ತಗಳೆನಿಸಿದ ಹರಿಣಿ, ಶಿಖರಿಣಿ, ಮಂದಾಕ್ರಾಂತಾ ಮುಂತಾದುವುಗಳ ಜೊತೆಯಲ್ಲಿ ಪೃಥ್ವಿಯನ್ನು ಹೋಲಿಸಿದಾಗ ಅವೆಲ್ಲ ಒಂದು ನಿರ್ದಿಷ್ಟ ಗೋತ್ರಕ್ಕೆ ಸೇರಿದಂತೆಯೂ ಇದು ಮಾತ್ರ ಪ್ರತ್ಯೇಕವಾಗಿರುವಂತೆಯೂ ತೋರುತ್ತದೆ. ಇದಕ್ಕೆ ಮುಖ್ಯ ಕಾರಣ ಅವುಗಳಿಗೆ ಹೋಲಿಸಿದರೆ ಪೃಥ್ವಿಯಲ್ಲಿರುವ ಲಯಾನ್ವಿತತೆ ಮತ್ತದನ್ನು ಸತತವಾಗಿ ಮರೆಯಿಸುವುದರಲ್ಲಿರುವ ಯತಿಸ್ಥಾನದ ಪ್ರಯತ್ನ.
ಈ ಎಲ್ಲ ಚರ್ಚೆಯಿಂದ ಪೃಥ್ವೀವೃತ್ತದ ಯತಿಸ್ಥಾನ ಅದೆಷ್ಟು ನಿರ್ಣಾಯಕವೆಂದು ಸ್ಪಷ್ಟವಾಗುತ್ತದೆ. ಸೇಡಿಯಾಪು ಅವರು ನಿರೂಪಿಸಿದಂತೆ ವರ್ಣವೃತ್ತಗಳಲ್ಲಿ ವಿಭಿನ್ನ ಗತಿಗಳ ಸಂಧಿಸ್ಥಾನವೇ ಯತಿ. ಪೃಥ್ವಿಯಲ್ಲಾದರೋ ವಿಭಿನ್ನ ಗತಿಗಳಿಗೆ ಅವಕಾಶವೇ ಇಲ್ಲ. ಹೀಗಾಗಿ ವೃತ್ತವೊಂದರ ಗುರು-ಲಘುಗಳ ವಿನ್ಯಾಸದಿಂದಲೇ ಸಹಜವಾಗಿ ಉನ್ಮೀಲಿತವಾಗಬೇಕಿರುವ ಯತಿಸ್ಥಾನ ಪೃಥ್ವಿಯಲ್ಲಿ ಪ್ರಯತ್ನಗೋಚರವಾಗಿದೆ. ದಿಟವೇ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಉತ್ಪಲಮಾಲೆ, ಚಂಪಕಮಾಲೆ ಮೊದಲಾದ ಯತಿಪ್ರಬಲವಲ್ಲದ ವೃತ್ತಗಳಲ್ಲಿ ಕೂಡ ಯತಿಸ್ಥಾನ ಪ್ರಯತ್ನಗೋಚರವಾದುದು. ಆದರೆ ಅವುಗಳಲ್ಲಿ ಎಲ್ಲಿಯೂ ಪೃಥ್ವಿಯಲ್ಲಿರುವಂಥ ಲಯಾನ್ವಿತತೆ ಎದ್ದುಕಾಣದು. ನಾವೆಲ್ಲ ಬಲ್ಲಂತೆ ಲಯಾನ್ವಿತ ವೃತ್ತಗಳ ಯತಿಸ್ಥಾನಗಳು ಆಯಾ ಗಣಾವರ್ತಗಳ ಕೊನೆಯಲ್ಲಿ ಬರುತ್ತವೆ. ಇಂಥ ಸಂದರ್ಭ ಪೂರ್ವೋಕ್ತ ವೃತ್ತಗಳಲ್ಲಿಲ್ಲ. ಹೀಗಾಗಿಯೇ ಅವುಗಳಲ್ಲಿ ಯತಿಸ್ಥಾನಕ್ಕೆ ಹೆಚ್ಚಿನ ಮಹತ್ತ್ವವಿಲ್ಲ; ಪಾದಮಧ್ಯದ ಯತಿವಿಲಂಘನದಿಂದ ಶ್ರುತಿಕಟುತೆ ಉಲ್ಬಣಿಸುವುದಿಲ್ಲ.
ಪೃಥ್ವಿಯನ್ನು ಲಯಾನ್ವಿತ ವೃತ್ತವಾಗಿ ರೂಪಿಸಬಾರದೆಂಬ ಇಂಗಿತದಿಂದಲೇ ಕವಿ-ಲಾಕ್ಷಣಿಕರು ಹೊರಟ ಕಾರಣ ಗಣಾವರ್ತಗಳ ಮುಗಿತಾಯದ ಯತಿಸ್ಥಾನಕ್ಕಲ್ಲಿ ಆಸ್ಪದವಿತ್ತಿಲ್ಲ. ವಿಭಿನ್ನಗತಿಗಳ ಬೆಸುಗೆಯಿಲ್ಲದ ಕಾರಣ ಸಹಜಯತಿಗೆ ಆಸ್ಪದವಾಗಿಲ್ಲ. ಹೀಗಾಗಿ ಕವಿಕುಲ ಸಾಕಷ್ಟು ಪ್ರಯೋಗಗಳನ್ನು ನಡಸಿ ಎದ್ದುಬಿದ್ದ ಬಳಿಕವೇ ಪೃಥ್ವಿಯ ಯತಿಸ್ಥಾನ ಸಾಕ್ಷಾತ್ಕೃತವಾಯಿತು. ಸಂಸ್ಕೃತಸಾಹಿತ್ಯದಲ್ಲಿ ಪೃಥ್ವೀವೃತ್ತವು ಬೆಳೆದುಬಂದ ಹಾದಿಯೇ ಇದಕ್ಕೆ ಸಾಕ್ಷಿ. ರಾಗವೊಂದು ತನ್ನ ಆರೋಹ-ಅವರೋಹಗಳಲ್ಲಿ ವಾದಿ-ಸಂವಾದಿಗಳ, ಅಂಶ-ಗ್ರಹ-ನ್ಯಾಸಗಳ ಅಭಿಜ್ಞಾನಕ್ಕಾಗಿ ಎಷ್ಟೋ ಕಾಲ ಹೆಣಗುತ್ತ ಕಡೆಗೆ ವಿವಿಧ ಸ್ವರಗಳ ಆವಾಪ ಮತ್ತು ಉದ್ವಾಪಗಳ ಮೂಲಕ, ಶ್ರುತಿ-ಗಮಕಗಳ ಪರಿಷ್ಕಾರದ ಮೂಲಕ ಸ್ಥಿರಸುಂದರ ರೂಪವನ್ನು ಪಡೆದಿರುವುದು ನಮ್ಮ ಸಂಗೀತಪರಂಪರೆಯಲ್ಲಿ ಪ್ರಸಿದ್ಧ. ಹೀಗೆಯೇ ಪೃಥ್ವೀವೃತ್ತ ಕೂಡ ತನ್ನ ಯತಿಸ್ಥಾನವನ್ನು ಕಂಡುಕೊಂಡಿದೆ ಎನ್ನಬಹುದು.
ಈಗ ಉಪಲಬ್ಧವಿರುವ ಪೃಥ್ವಿಯ ಪ್ರಯೋಗಗಳ ಪೈಕಿ ಕಾಳಿದಾಸನ ಪದ್ಯಗಳೇ ಪ್ರಾಚೀನ. ಬಳಿಕ ಭರ್ತೃಹರಿ, ಶ್ರೀಹರ್ಷ, ಭವಭೂತಿ ಮೊದಲಾದವರು ಬರುತ್ತಾರೆ. ಕಾಳಿದಾಸ ಮತ್ತು ಭರ್ತೃಹರಿಗಳ ಪದ್ಯಗಳಲ್ಲಿ ಪೃಥ್ವಿಯ ಯತಿಸ್ಥಾನ ಸ್ಥಿರವಾಗಿಲ್ಲ. ಶ್ರೀಹರ್ಷನ ಪ್ರಯೋಗಗಳಲ್ಲಿ ಯತಿಯ ಸ್ಥಿರತೆ-ಅಸ್ಥಿರತೆಗಳೆರಡನ್ನೂ ಕಾಣುತ್ತೇವೆ. ಭವಭೂತಿಯಿಂದೀಚೆಗೆ ಸುಸ್ಥಿರವಾದ ಏಕರೂಪತೆಯನ್ನು ಗಮನಿಸುತ್ತೇವೆ. ಯತಿ ಅಸ್ಥಿರವಾದರೆ ಪೃಥ್ವೀವೃತ್ತ ಅದೆಷ್ಟು ಶ್ರುತಿಕಟುವಾಗುತ್ತದೆ ಎಂಬುದಕ್ಕೆ ಈ ಬೆಳೆವಣಿಗೆ ಸಾಕ್ಷಿ. ಇದಕ್ಕೆ ಕೆಲವೊಂದು ಉದಾಹರಣೆಗಳನ್ನು ಕಾಣಬಹುದು:
ಅನೇನ ತನುಮಧ್ಯಯಾ ಮುಖರನೂಪುರಾರಾವಿಣಾ
ನವಾಂಬುರುಹಕೋಮಲೇನ ಚರಣೇನ ಸಂಭಾವಿತಃ |
ಅಶೋಕ ಯದಿ ಸದ್ಯ ಏವ ಮುಕುಲೈರ್ನ ಸಂಪತ್ಸ್ಯಸೇ
ವೃಥಾ ವಹಸಿ ದೋಹದಂ ಲಲಿತಕಾಮಿಸಾಧಾರಣಮ್ || (ಮಾಲವಿಕಾಗ್ನಿಮಿತ್ರ, ೩.೧೭)
ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡಯನ್
ಪಿಬೇಚ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ |
ಕದಾಚಿದಪಿ ಪರ್ಯಟಞ್ಛಶವಿಷಾಣಮಾಸಾದಯೇ-
ನ್ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ || (ನೀತಿಶತಕ, ೫)
ದೃಶಃ ಪೃಥುತರೀಕೃತಾ ಜಿತನಿಜಾಬ್ಜಪತ್ತ್ರತ್ವಿಷ-
ಶ್ಚತುರ್ಭಿರಪಿ ಸಾಧು ಸಾಧ್ವಿತಿ ಮುಖೈಃ ಸಮಂ ವ್ಯಾಹೃತಮ್ |
ಶಿರಾಂಸಿ ಚಲಿತಾನಿ ವಿಸ್ಮಯವಶಾದ್ಧ್ರುವಂ ವೇಧಸಾ
ವಿಧಾಯ ಲಲನಾಂ ಜಗತ್ತ್ರಯಲಲಾಮಭೂತಾಮಿಮಾಮ್ || (ರತ್ನಾವಳಿ, ೨.೧೬)
ಮುಹೂರ್ತಮಪಿ ಸಹ್ಯತಾಂ ಬಹಲ ಏಷ ಧೂಮೂದ್ಗಮೋ
ಹಹಾ ಧಿಗಿದಮಂಶುಕಂ ಜ್ವಲತಿ ತೇ ಸ್ತನಾತ್ ಪ್ರಚ್ಯುತಮ್ |
ಮುಹುಃ ಸ್ಖಲಸಿ ಕಿಂ ಕಥಂ ನಿಗಡಸಂಯತಾಸಿ ದ್ರುತಂ
ನಯಾಮಿ ಭವತೀಮಿತಃ ಪ್ರಿಯತಮೇಽವಲಂಬಸ್ವ ಮಾಮ್ || (ರತ್ನಾವಳಿ, ೪.೧೭)
ರಣತ್ಕರಣಝಂಝಣತ್ಕ್ವಣಿತಕಿಂಕಿಣೀಕಂ ಧನು-
ರ್ಧ್ವನದ್ಗುರುಗುಣಾಟನೀಕೃತಕರಾಲಕೋಲಾಹಲಮ್ |
ವಿತತ್ಯ ಕಿರತೋಃ ಶರಾನವಿರತಂ ಪುನಃ ಶೂರಯೋ-
ರ್ವಿಚಿತ್ರಮಭಿವರ್ತತೇ ಭುವನಭೀಮಮಾಯೋಧನಮ್ || (ಉತ್ತರರಾಮಚರಿತ, ೬.೧)
ಕಾಳಿದಾಸನ ಪದ್ಯದ ಎರಡು ಪಾದಗಳಲ್ಲಿ ಯತಿಯ ಉಲ್ಲಂಘನೆಯಾಗಿದ್ದರೆ ಭರ್ತೃಹರಿಯಲ್ಲಿದು ಮೂರಕ್ಕೇರಿದೆ. ಶ್ರೀಹರ್ಷನ ಮೊದಲ ಪದ್ಯದಲ್ಲಿ ಮೂರು ಕಡೆ ಯತಿವಿಲಂಘನೆ ಇದ್ದಂತೆ ಕಂಡರೂ ಎರಡು ಕಡೆ ಅದು ಶ್ರುತಿಸಹ್ಯವಾದ ಸಂಧಿಯ ನಡುವೆ ಬಂದ ಕಾರಣ ವೈರಸ್ಯವನ್ನು ಹುಟ್ಟಿಸುತ್ತಿಲ್ಲ. ಮತ್ತೊಂದೆಡೆ ಉಪಸರ್ಗದ ಬಳಿಕ ಬಂದಿರುವುದರಿಂದ ಶ್ರುತಿಕಟುತ್ವ ತೀವ್ರವೆನಿಸಿಲ್ಲ. ಅವನದೇ ಮತ್ತೊಂದು ಪದ್ಯ ಯತಿಯನ್ನು ಸೊಗಸಾಗಿ ಪಾಲಿಸಿದೆ. ಕಡೆಯದಾದ ಭವಭೂತಿಯ ಪದ್ಯದಲ್ಲಿ ಯತಿಸ್ಥಾನದ ಮರ್ಮವನ್ನು ತಿಳಿದ ಕವಿಯೊಬ್ಬ ಅದನ್ನು ಸಂಧಿಯೊಡನೆ ಹೇಗೆ ಬೆಸೆಯುತ್ತಾನೆ, ಸಂಧಿರಹಿತವಾಗಿ ಹೇಗೆ ಉಳಿಸುತ್ತಾನೆ ಎಂಬುದನ್ನೆಲ್ಲ ಅರಿಯಲು ಅವಕಾಶವಿದೆ.
ಅನಂತರ ಪೃಥ್ವೀವೃತ್ತವು ಯತಿಸ್ಥಾನದ ಪ್ರಾಸಗಳಿಂದ, ಗತಿಯ ಬಾಗು-ಬಳುಕುಗಳಿಂದ ಹೇಗೆ ಸೊಗಯಿಸಿತೆಂಬುದಕ್ಕೆ ಸಾವಿರಾರು ಉದಾಹರಣೆಗಳಿವೆ. ಇಲ್ಲಿ ಕೇವಲ ಒಂದು ಸಂಸ್ಕೃತಪದ್ಯವನ್ನು ಗಮನಿಸಬಹುದು:
ಸ್ಮೃತಾಪಿ ತರುಣಾತಪಂ ಕರುಣಯಾ ಹರಂತೀ ನೃಣಾ-
ಮಭಂಗುರತನುತ್ವಿಷಾಂ ವಲಯಿತಾ ಶತೈರ್ವಿದ್ಯುತಾಮ್ |
ಕಲಿಂದಗಿರಿನಂದಿನೀತಟಸುರದ್ರುಮಾಲಂಬಿನೀ
ಮದೀಯಮತಿಚುಂಬಿನೀ ಭವತು ಕಾಪಿ ಕಾದಂಬಿನೀ || (ರಸಗಂಗಾಧರ, ೧.೧)
ಹೀಗೆ ಹದಗೊಂಡ ಪೃಥ್ವಿಯೇ ಕನ್ನಡದ ಕವಿಗಳಿಗೆ ಕೈಗೆ ಬಂದಿತು. ನಮ್ಮ ಹೆಚ್ಚಿನ ಚಂಪೂಕಾವ್ಯಗಳೆಲ್ಲ ಪೃಥ್ವಿಯನ್ನು ಆದರಿಸಿವೆ. ಈ ಕಾವ್ಯಗಳಲ್ಲಿ ಖ್ಯಾತಕರ್ಣಾಟಕಗಳ ಬಳಿಕ ಮಲ್ಲಿಕಾಮಾಲೆಯೊಡನೆ ಸಮದಂಡಿಯಾಗಿ ಪೃಥ್ವಿ ಮೆರೆದಿದೆ. ಇದಕ್ಕೆ ಒಂದೆರಡು ಉದಾಹರಣೆಗಳು ಹೀಗಿವೆ:
ಸುಯುಕ್ತೆ ಶಿವದೇವಿಯುಂ ನವಧೃತೀಶ್ವರಾದೇವಿಯುಂ
ಸ್ವಯಂಪ್ರಭೆಯುಮುದ್ಭವಾನ್ವಿತೆ ಸುನೀತೆಯುಂ ಸೀತೆಯುಂ |
ಪ್ರಿಯಂವದೆಯುಮಾ ಪ್ರಭಾವತಿಯುಮಂತೆ ಕಾಳಿಂದಿಯುಂ
ಕ್ರಿಯಾನಿಧಿಗಳಂತೆ ಸುಪ್ರಭೆಯುಮೆಂಬರಬ್ಜಾಕ್ಷಿಯರ್ || (ಅರ್ಧನೇಮಿಪುರಾಣ, ೪.೭೭)
ನದೀನದವಿಶೇಷದಿಂ ಹೃದಯಹಾರಿಕೇದಾರದಿಂ
ಮದಾಳಿಕುಳಝಂಕ್ರಿಯಾಮಧುರನಂದನೋದ್ಯಾನದಿಂ |
ವಿದಗ್ಧಮಹಿಳಾಮಣೀಪುರುಷರತ್ನಸಂದೋಹದಿಂ
ವಿದರ್ಭಮಣಮೊಪ್ಪುಗಂ ಸಿರಿಗದಬ್ಧಿಯಂಬಂದದಿಂ || (ದಮಯಂತೀಸ್ವಯಂವರ, ೧.೨೮)
ಅಚ್ಚಗನ್ನಡದಲ್ಲಿ ಈ ವೃತ್ತದ ಲ-ಗಂ ವಿನ್ಯಾಸಗಳನ್ನು ನಿರ್ವಹಿಸುವುದು ಸ್ವಲ್ಪ ಕಷ್ಟವೆಂದು ತೋರಿದರೂ ಇದರ ಅಸಾಧಾರಣ ಗತಿಯಿಂದ ಆಕರ್ಷಿತರಾದ ಕನ್ನಡದ ಕವಿಗಳು ಇದಕ್ಕೆ ಅಕ್ಕರೆಯಿಂದ ಕಪ್ಪ ಸಲ್ಲಿಸಿದ್ದಾರೆ.
To be continued.