{ವಂಶಸ್ಥ} ವಂಶಸ್ಥದ ಛಂದೋವಿನ್ಯಾಸವನ್ನು ಗಮನಿಸಿದಾಗ ನಾಲ್ಕು ಗಣಗಳನ್ನುಳ್ಳ ಇದರ ಮೊದಲ ಹಾಗೂ ಕಡೆಯ ಗಣಗಳು ಪ್ರತೀಪರೂಪದವೆಂದು ತಿಳಿಯುತ್ತದೆ. ಅಂದರೆ, ಮೊದಲಿಗೆ ಎರಡು ಲಘುಗಳ ನಡುವಣ ಗುರುವೊಂದನ್ನುಳ್ಳ ಜ-ಗಣ ಬಂದಿದ್ದರೆ ಕಡೆಗೆ ಎರಡು ಗುರುಗಳ ನಡುವಣ ಲಘುವೊಂದನ್ನುಳ್ಳ ರ-ಗಣವಿದೆ:
[u – u] – – u u – u [– u –]
ಈ ಎರಡು ಗಣಗಳಲ್ಲಿ ಎದ್ದುಕಾಣುವ ತರಂಗಿತತೆ ಇರುವುದು ಶ್ರೋತೃವೇದ್ಯ. ಇವುಗಳ ಸ್ಥಾನಗಳನ್ನುಳಿದು ಮಿಕ್ಕಂತೆ ವಂಶಸ್ಥದಲ್ಲಿ ಪ್ರಬಲವಾದ ನತೋನ್ನತ ಗತಿ ಕೇಳಿಬರುವುದಿಲ್ಲ. ಈ ವೃತ್ತದ ಯತಿಸ್ಥಾನ ಮೊದಲ ಐದು ಅಕ್ಷರಗಳ ಬಳಿಕ ಬರುವ ಕಾರಣ - ಪ್ರಸ್ತಾರದ ಪ್ರಕಾರ ಮೂರನೆಯದಾಗಿ ಜ-ಗಣ ಬಂದಿದ್ದರೂ ಅದರ ಮುನ್ನವಿರುವ ಲಘು ಅದಕ್ಕಂಟಿ ಬರುವ ಮೂಲಕ ಜ-ಗಣಕ್ಕೆ ವಿಶಿಷ್ಟವಾದ ಪ್ಲುತಿ ಇಲ್ಲವಾಗಿದೆ:
u – u – – | u [u – u] – u –
ಹೀಗೆ ವಂಶಸ್ಥದಲ್ಲಿ ಪ್ಲುತಿಯುಳ್ಳ ಆದ್ಯಂತಗಣಗಳ ನಡುವೆ ಪ್ಲುತಿಗೆ ಅವಕಾಶ ನೀಡದ ಗತಿಯು ಬರುವ ಮೂಲಕ ಒಟ್ಟಂದದ ಛಂದೋಗತಿ ಒಳ್ಳೆಯ ಹದವನ್ನು ಕಂಡಿದೆ. ಇಲ್ಲಿಯ ಗುರು-ಲಘುಗಳ ಸಂಖ್ಯೆಯೂ ಸಮಾನ; ಅವುಗಳ ಪ್ರಸ್ತಾರದ ಪರಿ ಕೂಡ ಬಲುಮಟ್ಟಿಗೆ ಸಮರಸವಾಗಿದೆ. ಒಟ್ಟಿನಲ್ಲಿ ಮಧ್ಯಾಕ್ಷರಗತಿಯನ್ನು ತಳೆದು ನಮ್ಯವಾದ ಯತಿಸ್ಥಾನವನ್ನು ಹೊಂದಿದ ವಂಶಸ್ಥ ಹ್ರಸ್ವಗಾತ್ರದ ವೃತ್ತಗಳ ವಲಯದಲ್ಲಿ ತನ್ನದಾದ ಗತಿವಿಶಿಷ್ಟತೆಯನ್ನು ಹೊಂದಿರುವುದು ಅದರ ಪ್ರಾಚುರ್ಯ-ಪ್ರಾಶಸ್ತ್ಯಗಳಿಗೆ ಪ್ರಧಾನ ಕಾರಣ.
ವಂಶಸ್ಥದ ಗತಿಯಲ್ಲೊಂದು ಗಾಂಭೀರ್ಯವಿದೆ; ಘನವಾದ ವಿಷಾದವೂ ಇದೆ. ಇದು ಅದರ ನಿಕಟವರ್ತಿಗಳಾದ ಉಪಜಾತಿಯಲ್ಲಾಗಲಿ, ಇಂದ್ರವಂಶದಲ್ಲಾಗಲಿ ಕಾಣದ ನಡೆ. ಇದಕ್ಕೆ ಬಹುಶಃ ಅದರೊಳಗೆ ಗರ್ಭೀಕೃತವಾಗಬಲ್ಲ ವಿಯೋಗಿನಿಯ ಸಮಪಾದವೂ ಕಾರಣವಾಗಿರಬಹುದು. ವಂಶಸ್ಥದ ಎರಡನೆಯ ಅಕ್ಷರವಾದ ಗುರುವನ್ನು ಇಲ್ಲವಾಗಿಸುವ ಮೂಲಕ ವಿಯೋಗಿನೀವೃತ್ತದ ಸಮಪಾದವು ಸಿದ್ಧಿಸುತ್ತದೆ:
ವಂಶಸ್ಥ:
u [–] u – – u u – u – u –
ವಿಯೋಗಿನಿಯ ಸಮಪಾದ:
u u – – u u – u – u –
ಕನ್ನಡದಲ್ಲಿ ವಂಶಸ್ಥದ ಕೆಲವಾದರೂ ಉದಾಹರಣೆಗಳಿರುವುದು ಮುದಾವಹ. ಇವನ್ನು ಗಮನಿಸಿದಾಗ ಈ ವೃತ್ತ ನಮ್ಮ ಕವಿಗಳ ಮನಸ್ಸನ್ನು ಕೆಲಮಟ್ಟಿಗಾದರೂ ಸೆಳೆದಿರುವಂತೆ ತೋರುತ್ತದೆ. ಆದಿಪ್ರಾಸದ ನಿರ್ಬಂಧವಿಲ್ಲದಿದ್ದಲ್ಲಿ ವಂಶಸ್ಥ ಕನ್ನಡಕ್ಕೆ ಮತ್ತೂ ಹತ್ತಿರವಾಗುತ್ತಿತ್ತು.
ಎನಿತ್ತೆನಿತ್ತಂಬುಜಪತ್ರನೇತ್ರೆಯಾ
ಘನಸ್ತನಂಗಳ್ ಬಳೆಗುಂ ಕಿರಾತೆಯಾ |
ಅನಿತ್ತನಿತ್ತಂ ವನದೊಳ್ ವನೇಚರಂ
ತನತ್ತು ಬಿಲ್ಲಾನದನಂತು ಕೀಸುಗುಂ || (ಕಾವ್ಯಾವಲೋಕನ, ೧.೩೫೯)
ಸ್ಫುರದ್ಧನುಃಶ್ರೀಕರಚಂಚಲೇಕ್ಷಣಂ
ಶರಧ್ಯುಪಾತ್ತೋರುಶರಂ ಘನಸ್ವರಂ |
ಹರಿಪ್ರಭಂ ನೀರದರಾಜನಟ್ಟಿದಂ
ಧರಾತಿಸಂತಾಪದನಂ ನಿದಾಘನಂ || (ರಾಜಶೇಖರವಿಳಾಸ, ೮.೧೦೪)
ಜಗುಳ್ದು ಜೋಲಲ್ ಕೊರಳಿಂದ ಜನ್ನನೂಲ್
ಪೊಗರ್ದ ಕೆಂಬಟ್ಟೆ ಸಡಿಲ್ದು ಜಾರಿರಲ್ |
ನಗುತ್ತ ಸದ್ವೀಣೆಯ ಮೀಂಟುತನ್ನವಿಲ್
ಮುಗಿಲ್ಪರಲ್ಕೇಗಿಸುವಂತೆ ಪಾಡಿದಂ || (ಗೋವಿಂದ ಪೈ ಸಮಗ್ರಕವಿತೆಗಳು, ಪು. ೨೦೨)
ಎನಿತ್ತೆನಿತ್ತುಂ ನಿಜಪುತ್ರನಂದಮಂ
ಮನಕ್ಕೆ ತಂದೂಹಿಪನೋ ಪ್ರವಾಸಿ ಮ-
ತ್ತನಿತ್ತು ಬನ್ನಂಬಡೆ ನೋಡಿ ಜಾತನಂ
ತನತ್ತು ಚಿತ್ತಾರ್ದ್ರತೆಯೊಂದುಗುಂ ದಿಟಂ || (ಕುಂದಮಾಲೆ, ೫.೧೩)
ಇದರ ಒಂದೆರಡು ಸಂಸ್ಕೃತ ಉದಾಹರಣೆಗಳು ಹೀಗಿವೆ:
ದ್ವಿಜೇನ ತೇನಾಕ್ಷತಕಂಠಕೌಂಠ್ಯಯಾ
ಮಹಾಮನೋಮೋಹಮಲೀಮಸಾಂಧಯಾ |
ಅಲಬ್ಧವೈದಗ್ಧ್ಯವಿಲಾಸಮುಗ್ಧಯಾ
ಧಿಯಾ ನಿಬದ್ಧೇಯಮತಿದ್ವಯೀ ಕಥಾ || (ಕಾದಂಬರಿ, ಪೂರ್ವಭಾಗ, ೨೦)
ಜಲಾಶಯಾ ಯತ್ರ ಹಸಂತಿ ಸಂತತಂ
ನವೇಂದ್ರನೀಲದ್ರವನಿರ್ಮಲೋದರಾಃ |
ಶರತ್ಸಮುತ್ಸಾರಿತಮೇಘಕರ್ದಮಂ
ಕಲಿಂದಕನ್ಯಾಹ್ರದಮೇಚಕಂ ನಭಃ || (ವಿಕ್ರಮಾಂಕದೇವಚರಿತ, ೨.೬)
{ಇಂದ್ರವಂಶ} ವಂಶಸ್ಥದಲ್ಲಿರುವ ಗತಿವೈಚಿತ್ರ್ಯದ ಪ್ರಮಾಣ ಇಂದ್ರವಂಶದಲ್ಲಿಲ್ಲ ಎಂಬುದನ್ನು ನಾವು ಈ ಮುನ್ನವೇ ಕಂಡಿದ್ದೇವೆ. ಈ ಕಾರಣದಿಂದಲೇ ಕವಿಗಳು ಪ್ರಸ್ತುತ ವೃತ್ತವನ್ನು ತಮ್ಮ ಬಿಡಿಗವಿತೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಳಸಿದರಲ್ಲದೆ ಕಥನಕ್ಕೆ ದುಡಿಸಿಕೊಳ್ಳಲಿಲ್ಲ. ಇಂತಿದ್ದರೂ ಲಘ್ವಾದಿಯ ಕ್ಲೇಶ ಇದರಲ್ಲಿಲ್ಲದ ಕಾರಣ ಕನ್ನಡದಂಥ ಭಾಷೆಗಳಿಗೆ ಇದು ಸ್ವಲ್ಪ ಒದಗಿಬರಬಹುದು. ಆದಿಪ್ರಾಸದ ತೊಡಕಂತೂ ಇಂಥ ಹ್ರಸ್ವಬಂಧಗಳಲ್ಲಿ ಇರುವಂಥದ್ದೇ. ವಂಶಸ್ಥದಂತೆಯೇ ಈ ವೃತ್ತವನ್ನು ಕೂಡ ಡಿ.ವಿ.ಜಿ. ಅವರು ಬಳಸಿ ಹಲವು ಚೆಲುವಾದ ಪದ್ಯಗಳನ್ನು ನಿರ್ಮಿಸಿರುವುದು ರೋಚಕ ಸಂಗತಿ. ಆ ಒಂದೆರಡು ಉದಾಹರಣೆಗಳನ್ನು ಕಾಣಬಹುದು:
ತಾನೆಲ್ಲ ವಿಶ್ವದ್ಯುತಿಶಕ್ತಿಯಾಗಿಯುಂ
ತಾನೆಲ್ಲರಕ್ಷಿಶ್ರುತಿಸೌಖ್ಯಮಾಗಿಯುಂ |
ಮಾನುಷ್ಯದಿಂ ನರ್ತನವಾಗಿಸುತ್ತೆ ತಾ-
ನಾನಂದಿಪಂ ಕೇಶವನಾದಿಚೇತನಂ || (ಶ್ರೀಚೆನ್ನಕೇಶವ ಅನ್ತಃಪುರಗೀತೆ, ಪು. ೩೧)
ಪೀರೌ ಚಕೋರಾ ಕೊರಳೆತ್ತಿ ಜೊನ್ನದೀ
ನೀರೆಲ್ಲಮಂ ಚಂಚಲಚಂಚುವಿAದೆ ನೀಂ |
ಆರಿಪ್ಪುದಿಂತಿಂದುಕರೋತ್ಕರಂಗಳಂ
ಪಾರಪ್ಪವೋಲೀ ವಿರಹಾರ್ತಜೀವನಂ || (ವಿದ್ಧಶಾಲಭಂಜಿಕೆ, ೩.೧೫)
{ಕರಂಬಜಾತಿ} ವಂಶಸ್ಥ ಮತ್ತು ಇಂದ್ರವಂಶಗಳ ಮಿಶ್ರಣವಾದ ಕರಂಬಜಾತಿಯ ಬಗೆಗೆ ಹೆಚ್ಚಾಗಿ ಹೇಳುವುದೇನೂ ಇಲ್ಲ. ಉಪಜಾತಿಗೆ ಅನ್ವಯಿಸಬಹುದಾದ ಅಂಶಗಳೆಲ್ಲ ಇದಕ್ಕೂ ಸಲ್ಲುತ್ತವೆ. ಇದರ ಉಪಾಂತ್ಯವರ್ಣದ ಲಘುತ್ವ ತಂದೀಯುವ ತರಂಗಿತತೆ ಮಾತ್ರ ಅದಕ್ಕಿಂತ ಇದನ್ನು ವಿಭಿನ್ನವಾಗಿಸಿದೆ. ಮಾಘನ ‘ಶಿಶುಪಾಲವಧ’ದ ಹನ್ನೆರಡನೆಯ ಸರ್ಗದಲ್ಲಿ ಕಥನಕ್ಕೆ ಕರಂಬಜಾತಿಯೇ ಬಳಕೆಯಾಗಿರುವುದು ನಿಜಕ್ಕೂ ಗಮನಾರ್ಹ. ಇದು ಸರ್ವವೇದಾಂತಸಿದ್ಧಾಂತಸಾರಸಂಗ್ರಹ, ವಿವೇಕಚೂಡಾಮಣಿ, ಉಪದೇಶಸಾಹಸ್ರಿಯೇ ಮುಂತಾದ ಪದ್ಯರೂಪದ ಶಾಸ್ತ್ರಗ್ರಂಥಗಳಲ್ಲಿ ಕ್ವಾಚಿತ್ಕವಾಗಿ ತಲೆದೋರಿರುವುದುಂಟು. ಇಲ್ಲಿಯೂ ಇದು ಹಲವೊಮ್ಮೆ ಉಪಜಾತಿಯ ಜೊತೆಗೆ ಬೆರೆತುಹೋಗಿ ಮತ್ತೊಂದು ಪ್ರಭೇದಕ್ಕೆ ಕಾರಣವಾದಂತೆ ತೋರಿದೆ.
ಆದಿಪ್ರಾಸದ ನಿರ್ವಾಹ ಸಾಧ್ಯವಾಗದ ಕಾರಣ ಕನ್ನಡದಲ್ಲಿ ಕರಂಬಜಾತಿ ತನ್ನ ಹಾಜರಿಯನ್ನು ಹಾಕಿಯೇ ಇಲ್ಲ.
{ರುಚಿರಾ} ಇನ್ನು ವಂಶಸ್ಥಕ್ಕೆ ನಿಕಟವಾದ ರುಚಿರಾವೃತ್ತವನ್ನು ಪರಿಶೀಲಿಸಬಹುದು. ಇದು ಸಾಲಿಗೆ ಹದಿಮೂರು ಅಕ್ಷರಗಳಗಳಿರುವ ಸಮವೃತ್ತ. ವಂಶಸ್ಥದ ಐದನೆಯ ಗುರುವನ್ನು ಎರಡು ಲಘುಗಳನ್ನಾಗಿ ಸೀಳಿದರೆ ರುಚಿರಾ ಸಾಕ್ಷಾತ್ಕರಿಸುತ್ತದೆ:
ವಂಶಸ್ಥ:
u – u – [–] u u – u – u –
ರುಚಿರಾ:
u – u – [u u] u u – u – u –
ಈ ಮಾರ್ಪಾಡು ಮೇಲ್ನೋಟಕ್ಕೆ ಸಣ್ಣದೆನಿಸಿದರೂ ಪರಿಣಾಮ ಮಾತ್ರ ದೊಡ್ಡದು. ಏಕೆಂದರೆ ಇದರಿಂದ ನಾಲ್ಕು ಲಘುಗಳು ಅವ್ಯವಹಿತವಾಗಿ ಬರುವಂತಾಗಿದೆ. ಇದು ಸಂಸ್ಕೃತದಂಥ ಭಾಷೆಯ ಸಹಜವಾದ ಪದಪದ್ಧತಿಗೆ ಪೂರ್ಣವಾಗಿ ಒಗ್ಗದ ನಡೆ. ಈ ನಾಲ್ಕು ಲಘುಗಳು ತಮ್ಮ ಗತಿಭಿನ್ನತೆಯ ಕಾರಣ ಯತಿಸ್ಥಾನವನ್ನು ತಮಗಿಂತ ಮುನ್ನ ಬರುವಂತೆ ಮಾಡಿವೆ. ವಂಶಸ್ಥದಲ್ಲಿ ಐದನೆಯ ಅಕ್ಷರದ ಬಳಿಕ ತಲೆದೋರುತ್ತಿದ್ದ ದುರ್ಬಲ ಯತಿ ಇದೀಗ ನಾಲ್ಕನೆಯ ಅಕ್ಷರದ ಬಳಿಕವೇ ಕಾಣಿಸಿಕೊಂಡಿದೆ; ಅದು ಪ್ರಬಲವೂ ಆಗಿದೆ. ವಿರುದ್ಧಗತಿಗಳ ಸಂಧಿಸ್ಥಾನದಲ್ಲಿ ಉದಿಸುವ ಯತಿಯ ಪ್ರಾಬಲ್ಯ ಛಂದೋಗತಿವೇತ್ತರಿಗೆ ಸುವೇದ್ಯ:
u – u – | u u u u – u – u –
ಹೀಗೆ ಅವ್ಯವಹಿತವಾದ ನಾಲ್ಕು ಲಘುಗಳನ್ನು ಹೊಂದಿ ಪ್ರಬಲ ಯತಿಯನ್ನೂ ಉಳ್ಳ ಲಘುಗಾತ್ರದ ವೃತ್ತವಾಗಿ ಪರಿಣಮಿಸಿದ ರುಚಿರಾ ಇವೇ ಕಾರಣಗಳಿಂದ ಉಪಜಾತಿ ಮತ್ತು ವಂಶಸ್ಥಗಳಷ್ಟು ಸುಲಭವಾಗದೆ ಹೋಗಿದೆ. ಆದುದರಿಂದಲೇ ವಿದ್ವತ್ಕವಿಗಳಾದ ಮಾಘ, ಶಿವಸ್ವಾಮಿ, ರತ್ನಾಕರ, ಅಭಿನಂದ ಮೊದಲಾದ ಕೆಲವರು ಮಾತ್ರ ಇದನ್ನು ಸರ್ಗಚ್ಛಂದಸ್ಸಾಗಿ ಸಂಸ್ಕೃತದಲ್ಲಿ ಬಳಸಿದ್ದಾರೆ. ಈ ವೃತ್ತದಲ್ಲಿ ತುಂಬ ಸ್ಮರಣೀಯವಾದ ಪದ್ಯಗಳಿಲ್ಲವೆಂಬುದನ್ನು ನೆನೆದಾಗ ಕವಿಗಳ ಪ್ರತಿಭೆ ವೃತ್ತನಿರ್ವಾಹದ ಭಾರದಿಂದ ಕುಸಿದಿರುವುದು ಅನುಮಿತವಾಗುತ್ತದೆ.
ತನ್ನ ಲಘುಪ್ರಾಚುರ್ಯದೊಡನೆ ಕನ್ನಡಕ್ಕಿರುವ ಯತಿವಿಲಂಘನದ ಸೌಲಭ್ಯವನ್ನು ಬಳಸಿಕೊಳ್ಳುವ ಸಾಧ್ಯತೆಯಿದ್ದೂ ರುಚಿರಾ ನಮ್ಮಲ್ಲಿ ನೆಲಸದಿರುವುದೊಂದು ಚೋದ್ಯ. ಈ ಹಿನ್ನೆಲೆಯಲ್ಲಿ ಲಘುಪ್ರಾಚುರ್ಯವಿರುವ ವೃತ್ತಗಳೇ ಕನ್ನಡಕವಿಗಳಿಗೆ ಪ್ರಿಯವೆಂಬ ಸಿದ್ಧಾಂತಸದೃಶವಾದ ಹೇಳಿಕೆ ಎಷ್ಟರ ಮಟ್ಟಿಗೆ ಯುಕ್ತಿಯುಕ್ತ ಎಂಬುದು ಚಿಂತನೀಯ. ರುಚಿರಾವೃತ್ತಕ್ಕಿಂತ ಮಿಗಿಲಾದ ಗತಿಸೌಂದರ್ಯವನ್ನೂ ನಿರ್ವಾಹಸೌಲಭ್ಯವನ್ನೂ ಉಳ್ಳ ರಥೋದ್ಧತಾ, ದ್ರುತವಿಲಂಬಿತ, ಪ್ರಮಿತಾಕ್ಷರಾ, ಮಂಜುಭಾಷಿಣಿ ಮುಂತಾದ ಹಲವು ಛಂದಸ್ಸುಗಳು ಗುರುಭಾರಜರ್ಜರಿತವಾಗದಿದ್ದರೂ ಕನ್ನಡಕ್ಕೆ ಏಕೆ ಒದಗಿಬರಲಿಲ್ಲ ಎಂಬುದನ್ನು ನೆನೆದಾಗ ಚಿಕ್ಕ ವೃತ್ತಗಳಿಗಿರುವ ಆದಿಪ್ರಾಸದ ತೊಡಕು ಅದೆಷ್ಟು ದೊಡ್ಡ ವಿಪರಿಣಾಮವನ್ನು ಮಾಡಿದೆ ಎಂಬುದು ಸ್ಪಷ್ಟವಾಗದಿರದು.
ರುಚಿರಾವೃತ್ತದ ಒಂದೆರಡು ಉದಾಹರಣೆಗಳನ್ನೀಗ ಕಾಣಬಹುದು:
ಪ್ರವರ್ತತಾಂ ಪ್ರಕೃತಿಹಿತಾಯ ಪಾರ್ಥಿವಃ
ಸರಸ್ವತೀ ಶ್ರುತಿಮಹತಾಂ ಮಹೀಯತಾಮ್ |
ಮಮಾಪಿ ಚ ಕ್ಷಪಯತು ನೀಲಲೋಹಿತಃ
ಪುನರ್ಭವಂ ಪರಿಗತಶಕ್ತಿರಾತ್ಮಭೂಃ || (ಅಭಿಜ್ಞಾನಶಾಕುಂತಲ, ೭.೩೫)
ಉಪಾಗತೌ ಮಿಲಿತಪರಸ್ಪರೋಪಮೌ
ಬಹುಶ್ರುತೌ ಶ್ರುತಿಮಧುರಸ್ವರಾನ್ವಿತೌ |
ವಿಚಕ್ಷಣೌ ವಿವಿಧನರೇಂದ್ರಲಕ್ಷಣೌ
ಕುಶೀಲವೌ ಕುಶಲವನಾಮಧಾರಿಣೌ || (ಚಂಪೂರಾಮಾಯಣ, ೧.೯)
{ಪ್ರಹರ್ಷಿಣಿ} ರುಚಿರಾವೃತ್ತದೊಡನೆ ಪ್ರಹರ್ಷಿಣಿಯನ್ನೂ ವಿವೇಚಿಸಲು ಇದು ಯುಕ್ತ ಸ್ಥಳ. ಇವೆರಡೂ ಸಾಲಿಗೆ ಹದಿಮೂರು ಅಕ್ಷರಗಳ ‘ಅತಿಜಗತೀ’ವರ್ಗಕ್ಕೆ ಸೇರಿವೆಯೆಂಬ ಸ್ಥೂಲಕಾರಣಕ್ಕಿಂತ ಇವೆರಡರ ಛಂದೋವಿನ್ಯಾಸದಲ್ಲಿ ಒಂದಿಷ್ಟು ಭಾಗ ಒಂದೇ ಆಗಿರುವ ಸೂಕ್ಷ್ಮತೆಯೇ ಇಲ್ಲಿ ಮುಖ್ಯವಾಗಿದೆ. ಹೀಗಾಗಿ ಗುರುಪ್ರಧಾನವಾದ ಪ್ರಹರ್ಷಿಣೀವೃತ್ತ ಲಘುಪ್ರಧಾನವಾದ ರುಚಿರಾವೃತ್ತಕ್ಕೆ ಹತ್ತಿರವೆನಿಸಿದೆ. ಪ್ರಹರ್ಷಿಣಿಯ ಗುರು-ಲಘುಗಳ ಪ್ರಸ್ತಾರ ಹೀಗೆ:
– – – | u u u u – u – u – –
ಇದು ರುಚಿರಾವೃತ್ತವನ್ನು ಹೋಲುವ ಬಗೆಯನ್ನೀಗ ಗಮನಿಸಬಹುದು:
ರುಚಿರಾ:
u – u – [u u u u – u – u –]
ಪ್ರಹರ್ಷಿಣಿ:
– – – [u u u u – u – u –] –
ರುಚಿರಾವೃತ್ತದ ಮೊದಲ ಭಾಗದಲ್ಲಿರುವ ಗುರು-ಲಘುಮಿಶ್ರಣದ ನಾಲ್ಕು ಅಕ್ಷರಗಳಿಗೆ ಬದಲಾಗಿ ಪ್ರಹರ್ಷಿಣಿಯಲ್ಲಿ ಮೂರು ಗುರುಗಳು ಬಂದಿವೆ. ಒಂದು ಗುರು ಪಾದಾಂತ್ಯದಲ್ಲಿ ಸೇರಿಕೊಂಡಿದೆ. ಹೀಗೆ ಈ ವೃತ್ತದಲ್ಲಿ ಗುರುಪ್ರಾಚುರ್ಯ ಸಿದ್ಧಿಸಿದೆ. ಪ್ರತಿಪಾದದ ಮೊದಲಿಗೆ ಒಟ್ಟಿಗೆ ಬರುವ ಗುರು-ಲಘುಘಟಕಗಳು ಪ್ರಹರ್ಷಿಣಿಯನ್ನು ರುಚಿರಾವೃತ್ತಕ್ಕಿಂತ ಯತಿಪ್ರಬಲವಾಗಿಸಿವೆ.
ಪ್ರತಿಪಾದದ ಮೊದಲಿಗೆ ಏಳೇ ಅಕ್ಷರಗಳ ವ್ಯಾಪ್ತಿಯಲ್ಲಿ ಬರುವ ಅವ್ಯವಹಿತವಾದ ಮೂರು ಗುರು ಮತ್ತು ನಾಲ್ಕು ಲಘುಗಳ ವಿನ್ಯಾಸ ಯಾವುದೇ ಭಾಷೆಯ ಸಹಜ ಪದಗತಿಗೆ ಅನುಕೂಲಿಸದು. ಈ ಕಾರಣದಿಂದಲೇ ಪ್ರಹರ್ಷಿಣಿಯು ವಿಕಟವೆನಿಸಿದೆ. ಇದರ ಮೊದಲಿಗೇ ಬರುವ ಪ್ರಬಲ ಯತಿ ಮತ್ತು ಗುರ್ವಾಧಿಕ್ಯಗಳು ಶಾಲಿನಿಯನ್ನು ಹೋಲುತ್ತವೆ. ಇಲ್ಲಿಯ ಗುರುಗಳ ಸಂಖ್ಯೆ ಶಾಲಿನಿಗೆ ಹೋಲಿಸಿದರೆ ಕಡಮೆಯಾದರೂ ಒಟ್ಟಿಗೆ ಬರುವ ಲಘುಗಳ ಸಂಖ್ಯೆ ಹೆಚ್ಚು. ಇದು ಪ್ರಹರ್ಷಿಣಿಯನ್ನು ಶಾಲಿನಿಗಿಂತ ದುಷ್ಕರವಾಗಿಸಿದೆ; ಭಾಷೆಯ ಸಹಜ ಪದಗತಿಗೆ ದೂರವಾಗಿಸಿದೆ.
ರುಚಿರಾ ಮತ್ತು ಪ್ರಹರ್ಷಿಣಿಗಳು ಕ್ರಮವಾಗಿ ಸುಕುಮಾರ ಹಾಗೂ ಉದ್ಧತವಾದ ಭಾವಗಳನ್ನು ಬಿಂಬಿಸಲು ಬಳಕೆಯಾಗಬಹುದು. ಆದರೆ ಈ ಬಗೆಯ ಭಾವಗಳನ್ನು ಬಿಂಬಿಸಲು ಇವಕ್ಕಿಂತಲೂ ಸುಲಭಸುಂದರವಾದ ಮತ್ತೂ ಹತ್ತಾರು ವೃತ್ತಗಳಿವೆ. ವೃತ್ತವೈವಿಧ್ಯಮಾತ್ರದಲ್ಲಿ ಆಗ್ರಹ ಮತ್ತು ದುಷ್ಕರವೃತ್ತಗಳ ನಿರ್ವಾಹದ ಮೂಲಕ ತಮ್ಮ ವೈದುಷ್ಯವನ್ನು ಮೆರೆಸುವಲ್ಲಿ ಅಭಿನಿವೇಶವುಳ್ಳ ಕವಿಗಳಿಗಷ್ಟೇ ಇವು ಅನಿವಾರ್ಯ ಎನಿಸಿವೆ.
ಸಂಸ್ಕೃತಕ್ಕೇ ಈ ಪಾಡೆಂದ ಬಳಿಕ ಕನ್ನಡದ ವಿಷಯದಲ್ಲಿ ಹೇಳುವುದಕ್ಕೇನಿದೆ! ಪ್ರಹರ್ಷಿಣಿಯು ನಮ್ಮಲ್ಲಿ ಬೆರಳೆಣಿಕೆಗೂ ಸಿಗುವುದು ಕಷ್ಟ. ಅಷ್ಟೇಕೆ, ವಿಶಾಲವಾದ ಸಂಸ್ಕೃತಸಾಹಿತ್ಯದಲ್ಲಿ ಕೂಡ ಇದರಲ್ಲಿ ನಿಬದ್ಧವಾದ ಸ್ಮರಣೀಯಸುಂದರ ಪದ್ಯಗಳು ತುಂಬ ಕಡಮೆ. ಭಾರವಿ, ಮಾಘ, ರತ್ನಾಕರ, ಶಿವಸ್ವಾಮಿ, ಮಂಖ, ಅಭಿನಂದ, ನೀಲಕಂಠದೀಕ್ಷಿತರಂಥ ಎಷ್ಟೋ ವಿದ್ವತ್ಕವಿಗಳ ಕಥನಕಾವ್ಯಗಳನ್ನು ಓದುವಾಗ ಈ ವೃತ್ತ ಬಳಕೆಯಾದ ಸರ್ಗಗಳಲ್ಲಿ ರಸಿಕರು ಒಳ್ಳೆಯ ಪದ್ಯಗಳಿಗಾಗಿ ಪರದಾಡಬೇಕಿದೆ! ಇದೊಂದು ಮಾತಿನಿಂದಲೇ ಪ್ರಹರ್ಷಿಣಿಯ ಹರ್ಷ ಎಷ್ಟೆಂದು ಮನಗಾಣಬಹುದು.
ಇದರ ಕೆಲವೊಂದು ಉದಾಹರಣೆಗಳು ಹೀಗಿವೆ:
ಮಾಲಿನ್ಯಂ ವಿಮಲದೊಳಾಗಲಾಗದೆಂಬಂ-
ತಾ ಲೀಲಾವಿಮಲಸರೋವರಂ ತರಂಗ-
ವ್ಯಾಲೋಲಂ ತಳೆದುದು ಕಜ್ಜಳಾಳಿಯಂ ತ-
ದ್ಬಾಲಾಲೋಚನಕುಮುದಂಗಳಿಂದಮಾಗಳ್ || (ಲೀಲಾವತೀಪ್ರಬಂಧ, ೧೪.೫)
ಉತ್ಫುಲ್ಲಸ್ಥಲನಲಿನೀವನಾದಮುಷ್ಮಾ-
ದುದ್ಧೂತಃ ಸರಸಿಜಸಂಭವಃ ಪರಾಗಃ |
ವಾತ್ಯಾಭಿರ್ವಿಯತಿ ವಿವರ್ತಿತಃ ಸಮಂತಾ-
ದಾಧತ್ತೇ ಕನಕಮಯಾತಪತ್ರಲಕ್ಷ್ಮೀಮ್ || (ಕಿರಾತಾರ್ಜುನೀಯ, ೫.೩೯)
ಯಂ ಮಾಯಾ ಕ್ವಚಿದನಿರುಧ್ಯಮಾನರೂಪಾ
ನ ಸ್ಪ್ರಷ್ಟುಂ ಪ್ರಭವತಿ ನೇತಿ ನೇತಿ ಸಂತಃ |
ಯಸ್ಮಿಂಶ್ಚ ವ್ಯವಹೃತಿಮಾಚರಂತಿ ತಂ ತ್ವಾಂ
ತಾತ್ಪರ್ಯಾದುಪನಿಷದೋ ವಿಭೋ ಗೃಣಂತಿ || (ಶ್ರೀಕಂಠಚರಿತ, ೧೭.೨೮)
To be continued.