{ಮಂಜುಭಾಷಿಣಿ} ರಥೋದ್ಧತಾವೃತ್ತದ ಪ್ರತಿ ಪಾದದ ಮೊದಲಿಗೆ ಎರಡು ಲಘುಗಳನ್ನು ಬೆಸೆದರೆ ‘ಮಂಜುಭಾಷಿಣಿ’ ಸಿದ್ಧವಾಗುತ್ತದೆ:
ರಥೋದ್ಧತಾ
– u – u u u – u – u –
ಮಂಜುಭಾಷಿಣಿ
[u u] – u – u u u – u – u –
ಇದು ಸಂಸ್ಕೃತಸಾಹಿತ್ಯದಲ್ಲಿ ತಕ್ಕಮಟ್ಟಿಗೆ ನೆಲೆಗೊಂಡಿದೆ. ಮಾಘನೇ ಮೊದಲಾದ ಕವಿಗಳು ಇದನ್ನು ಕಥನಕ್ಕೆ ಕೂಡ ಬಳಸಿದ್ದಾರೆ. ಒಂದೆರಡು ಉದಾಹರಣೆಗಳನ್ನೀಗ ಕಾಣೋಣ:
ಬೆಲೆಚೀಟಿ ನಿನ್ನ ಬೆಲೆಯಂ ಪೊಗಳ್ವುದೇಂ
ತಲೆಮಾಸಿಕೊಂಡ ಬಳಿಕಲ್ತೆ ಸಲ್ವೆಯಯ್ |
ನೆಲೆನಿಂತು ಜೊಲ್ಲಿನೊಳದೆಂತೊ ಬಾಳ್ವ ನಿ-
ನ್ನೊಲವೆಂತು ಸಂಗ್ರಹರತರ್ಗೆ ದುರ್ದಮಂ || (ಕನ್ನಡದಲ್ಲಿ ಅವಧಾನಕಲೆ, ಪು. ೩೨೫)
ನ ಬರೀಭರೀತಿ ಕಬರೀಭರೇ ಸ್ರಜೋ
ನ ಚರೀಕರೀತಿ ಮೃಗನಾಭಿಚಿತ್ರಕಮ್ |
ವಿಜರೀಹರೀತಿ ನ ಪುರೇವ ಮತ್ಪುರೋ
ವಿವರೀವರೀತಿ ನ ಚ ವಿಪ್ರಿಯಂ ಪ್ರಿಯಾ || (ಪುಷ್ಪಬಾಣವಿಲಾಸ, ೧೮)
ಅರುಣಾಧರಾಮೃತವಿಶೇಷಿತಸ್ಮಿತಂ
ವರುಣಾಲಯಾನುಗತವರ್ಣವೈಭವಮ್ |
ತರುಣಾರವಿಂದದಲದೀರ್ಘಲೋಚನಂ
ಕರುಣಾಮಯಂ ಕಮಪಿ ಬಾಲಮಾಶ್ರಯೇ || (ಶ್ರೀಕೃಷ್ಣಕರ್ಣಾಮೃತ, ೩.೧೭)
ಇಲ್ಲಿಯ ಆರಂಭಿಕ ಲಘುದ್ವಯ ರಥೋದ್ಧತಾವೃತ್ತಕ್ಕಿಲ್ಲದ ಪ್ಲುತಿಯನ್ನು ತಂದಿದೆ. ಈ ಲಘುಗಳು ‘ಅತೀತಗ್ರಹ’ದಂತೆ ವರ್ತಿಸುವುದೇ ಇದಕ್ಕೆ ಮುಖ್ಯಕಾರಣ. ಅತೀತಗ್ರಹ ಅಥವಾ ಅತೀತ ಎಂಬುದು ಸಂಗೀತಶಾಸ್ತ್ರದ ಪರಿಭಾಷೆ. ತಾಳಬದ್ಧವಾಗಿ ಒಂದು ಪಾದವನ್ನು ಹಾಡಲು ಎತ್ತಿಕೊಳ್ಳುವುದನ್ನು ಗ್ರಹ ಎನ್ನುತ್ತಾರೆ. ಸಾಹಿತ್ಯವು ತಾಳದ ಜೊತೆಯಲ್ಲಿಯೇ ಆರಂಭವಾದರೆ ಅದು ಸಮಗ್ರಹ. ಹಾಗಲ್ಲದೆ ತಾಲಾಸ್ಫಾಲಕ್ಕಿಂತ ಮೊದಲೇ ಸಾಹಿತ್ಯ ಆರಂಭವಾದರೆ ಅದು ಅತೀತಗ್ರಹ. ಇದಕ್ಕೆ ವಿರುದ್ಧವಾದುದು ಅನಾಗತಗ್ರಹ. ಲಯಾನ್ವಿತವಾದ ಬಂಧಗಳಲ್ಲಿ ಅತೀತಗ್ರಹ ಆಗೀಗ ಕಾಣಿಸಿಕೊಳ್ಳುವುದುಂಟು. ಆದರೆ ಅನಾಗತಗ್ರಹ ಅಪ್ಪಟ ಗಾನದಲ್ಲಿಯೇ ಗೋಚರಿಸುತ್ತದೆ.
ಅತೀತಗ್ರಹ ಒದಗಿಸಿದ ಪ್ಲುತಿಯ ಕಾರಣ ಉಜ್ಜ್ವಲವಾಗಿ ಎದ್ದುತೋರುವ ಮಂಜುಭಾಷಿಣಿ ಈ ಕಾರಣದಿಂದಲೇ ಅತ್ಯುತ್ಸಾಹದ ಸಂದರ್ಭಗಳಲ್ಲಿ ಹೆಚ್ಚಾಗಿ ಶೋಭಿಸಬಲ್ಲುದು. ಹೀಗಾಗಿಯೇ ಇದರ ಗತಿ ಸಾಮಾನ್ಯರೂಪದ ಕಥನಕ್ಕೆ ಅಷ್ಟಾಗಿ ಹೊಂದಲಾರದು. ಉಳಿದಂತೆ ರಥೋದ್ಧತಾವೃತ್ತದ ಸೊಗಸೆಲ್ಲ ಇಲ್ಲಿದೆ. ಕನ್ನಡದಲ್ಲಿದು ವಿರಳಾತಿವಿರಳ. ‘ಛಂದೋಂಬುಧಿ’ಯAಥ ಲಕ್ಷಣಗ್ರಂಥವೂ ಇದನ್ನು ಹೆಸರಿಸದೆ ಇರುವುದು ಇದರ ವೈರಳ್ಯಕ್ಕೆ ಮತ್ತೂ ಒಂದು ಕಾರಣವಾಗಿರಬಹುದು.
{ಕಲಹಂಸ} ಸ್ವಾಗತಾವೃತ್ತದ ಪ್ರತಿ ಪಾದದ ಮೊದಲಿಗೆ ಎರಡು ಲಘುಗಳನ್ನು ಬೆಸೆದರೆ ‘ಕಲಹಂಸ’ ಸಿದ್ಧವಾಗುತ್ತದೆ:
ಸ್ವಾಗತಾ
– u – u u u – u u – –
ಕಲಹಂಸ
[u u] – u – u u u – u u – –
ಮಂಜುಭಾಷಿಣಿಯಲ್ಲಿರುವಂತೆಯೇ ಕಲಹಂಸದಲ್ಲಿ ಅತೀತಗ್ರಹದ ಪ್ಲುತಿ ಉಂಟು. ಇದನ್ನುಳಿದರೆ ಮಿಕ್ಕೆಲ್ಲ ಗುಣ-ದೋಷಗಳ ವಿಷಯದಲ್ಲಿ ಇದು ಸ್ವಾಗತಾವೃತ್ತಕ್ಕೆ ಸದೃಶ. ಸಂಸ್ಕೃತದಲ್ಲಿಯೂ ಪ್ರಚುರವಾಗಿಲ್ಲದ ಕಲಹಂಸ ಕನ್ನಡದಲ್ಲಿ ಮತ್ತಷ್ಟು ವಿರಳವಾಗಿದೆ. ಇದರ ಕೆಲವೊಂದು ಉದಾಹರಣೆಗಳು ಹೀಗಿವೆ:
ಮೊಗಮೆಂಬ ವಿಣ್ಗೆ ಸುವಿಭೂಷಣಮೆಂದುಂ
ನಗೆಯೆಂಬ ಪಾರ್ವಣಸುಧಾಂಶುಕಲಾಂಶಂ |
ಮಿಗಿಲಾದಮಕ್ಕುಮಿದನಾಂತಿರೆ ಮೈತ್ರೀ-
ಪ್ರಗುಣರ್ತವಾಕ್ಶಿವನವಾರ್ಯವಿಚಾರ್ಯಂ || (ಶತಾವಧಾನಶ್ರೀವಿದ್ಯೆ, ಪು. ೩೦)
ಬಹುವೇಗರೋಧಕವಿಲಂಘನಯುಕ್ತೌ
ಶತಗರ್ತನರ್ತನವಿಕರ್ತನಶಕ್ತೌ |
ಪ್ರತಿಕೂಲಯಾಮಿಕವಿಲೋಭನಭಕ್ತೌ
ಹರಿಣಂತಿ ಚಾಸ್ಯ ನಗರಸ್ಯ ಸವಾಹಾಃ || (ಶತಾವಧಾನಿರಚನಾಸಂಚಯನ, ಪು. ೩೦೭)
ಬೆಂಗಳೂರು ಮಹಾನಗರದ ವಾಹನಚಾಲಕರ ಪಾಡನ್ನು ಬಣ್ಣಿಸುವ ಈ ಪದ್ಯವು ಪ್ರಕೃತ ವೃತ್ತದ ಗತಿಯ ಮೂಲಕ ಇಲ್ಲಿಯ ರಸ್ತೆಗಳ ವಿಸಂಷ್ಠುಲತೆಯನ್ನು ಧ್ವನಿಸುವಲ್ಲಿ ಪರಿಣಾಮಕಾರಿಯಾಗಿದೆ. ಹೀಗೆ ಔಚಿತ್ಯವಿದ್ದಲ್ಲಿ ಯಾವುದೇ ಬಗೆಯ ಬಂಧಕ್ಕೂ ಸ್ಥಾನ ಉಂಟು. ಇದನ್ನು ಕಂಡುಕೊಳ್ಳಲು ಕವಿಗೆ ಛಂದೋಗತಿಪ್ರಜ್ಞೆ ಅತ್ಯವಶ್ಯ.
{ತರಂಗಮಾಲಿಕಾ} ರಥೋದ್ಧತಾವೃತ್ತದ ಗತಿಯನ್ನು ಹೊಂದಿ ಗುರು-ಲಘುಪ್ರಸ್ತಾರದಲ್ಲಿಯೂ ಸಾಮ್ಯ ಇರುವ ವೃತ್ತ ‘ತರಂಗಮಾಲಿಕಾ’. ಇದಕ್ಕೆ ತರಂಗ / ಸುರನರ್ತಕಿ ಎಂಬ ಹೆಸರುಗಳೂ ಇವೆ. ಇದು ಪಾದಕ್ಕೆ ಇಪ್ಪತ್ತೊಂದು ಅಕ್ಷರಗಳುಳ್ಳ ನಿಡಿದಾದ ಸಮವೃತ್ತ. ಇದರ ಪ್ರಸ್ತಾರ ಹೀಗೆ:
– u – u u u – u – u [u u] – u – u u u – u –
ಮೇಲೆ ಕಾಣಿಸಿರುವ ಪ್ರಸ್ತಾರದಲ್ಲಿ ಮೊದಲ ಹತ್ತು ಅಕ್ಷರಗಳು ರಥೋದ್ಧತಾವೃತ್ತದ ಭಾಗವೇ ಆಗಿವೆ. ಬಳಿಕ ಆವರಣದಲ್ಲಿರುವ ಎರಡು ಲಘುಗಳನ್ನು ಒಂದು ಗುರುವಾಗಿ ಮಾರ್ಪಡಿಸಿದರೆ ಇವೆರಡರ ಸಮಾಹಾರ ರಥೋದ್ಧತಾವೃತ್ತದ ಪೂರ್ಣಪಾದವೇ ಆಗುತ್ತದೆ. ಬಳಿಕ ಉಳಿದ ಭಾಗದ ಕೊನೆಗೆ ಲ-ಗಂ ವಿನ್ಯಾಸದ ಎರಡು ಅಕ್ಷರಗಳನ್ನು ಪೋಣಿಸಿದರೆ ಇದು ರಥೋದ್ಧತಾವೃತ್ತದ ಮತ್ತೊಂದು ಪಾದವೇ ಆಗುತ್ತದೆ. ತುಂಬ ನರ್ತನಶೀಲತೆಯನ್ನುಳ್ಳ ತರಂಗಮಾಲಿಕಾವೃತ್ತ ಸಂಸ್ಕೃತದಲ್ಲಿಯೂ ವಿರಳ. ಕನ್ನಡದಲ್ಲಿ ಬಳಕೆಯಾದಂತಿಲ್ಲ.
ಈ ವೃತ್ತ ಇಪ್ಪತ್ತೊಂದು ಅಕ್ಷರಗಳಷ್ಟು ದೀರ್ಘವಾಗಿದ್ದರೂ ಎಲ್ಲಿಯೂ ಮುರಿತಕ್ಕೆ ತುತ್ತಾದಂತೆ ತೋರದು. ಲಯಾನ್ವಿತ ಬಂಧವಾದ ಕಾರಣ ಆಯಾ ಗಣಗಳ ಬಳಿಕ ವಿರಾಮರೂಪದ ಯತಿ ಇದ್ದರೂ ಅದು ಪ್ರಬಲವಾಗದೆ ಕೇವಲ ಪಾದಾಂತದ ಯತಿ ಎದ್ದುಕಾಣುವಂತಾಗಿದೆ. ಇದಕ್ಕೆ ಕಾರಣ ಅಲ್ಲಿರುವ ಊನಗಣ. ಕೊನೆಯ ಮೂರು ಅಕ್ಷರಗಳ ಪೈಕಿ ಮೊದಲೆರಡು ಮೂರು ಮಾತ್ರೆಗಳ ಗಣವಾದರೆ ಕಟ್ಟಕಡೆಯ ಗುರು ಊನಗಣವಾಗಿ ಪ್ಲುತರೂಪವನ್ನು ಗಳಿಸಿ ಪಾದಕ್ಕೊಂದು ಅಂದವಾದ ಮುಗಿತಾಯ ನೀಡುತ್ತದೆ. ಪ್ರತಿ ಪಾದದ ಮೊದಲ ಒಂಬತ್ತು ಅಕ್ಷರಗಳನ್ನು ಕಡೆಯ ಒಂಬತ್ತು ಅಕ್ಷರಗಳ ಜೊತೆಗೆ ಬೆಸೆದಿರುವುದು ನಟ್ಟ ನಡುವಿನ ಮೂರು ಲಘುಗಳು (ನ-ಗಣ). ಈ ಮೂರು ಲಘುಗಳ ಸ್ಥಾನದಲ್ಲಿ ಗುರುವಿಗೇನಾದರೂ ಅವಕಾಶವಿದ್ದ ಪಕ್ಷದಲ್ಲಿ ಇಲ್ಲಿಯ ಪಾದಗಳಿಗೆ ಅಖಂಡತೆ ದಕ್ಕುತ್ತಿರಲಿಲ್ಲ. ಏಕೆಂದರೆ ಅಂಥ ಗುರು ಸ್ಫುಟವಾದ ಯತಿಸ್ಥಾನಕ್ಕೆ ಪೂರಕವಾಗುತ್ತಿತ್ತು. ಈ ಅಂಶವನ್ನು ನಾವು ‘ರಾಜಹಂಸೀ’ವೃತ್ತವನ್ನು ವಿವೇಚಿಸುವಾಗ ಗಮನಿಸಿದ್ದೇವೆ. ರಥೋದ್ಧತಾವೃತ್ತದ ನಡುವೆ ಬರುವ ಮೂರು ಲಘುಗಳು ಯಾವ ಪಾತ್ರ ವಹಿಸುವುವೋ ಅದೇ ಪಾತ್ರವನ್ನು ಇಲ್ಲಿಯ ಲಘುಗಳೂ ವಹಿಸುತ್ತಿರುವುದು ಸ್ಪಷ್ಟ. ಇದನ್ನೆಲ್ಲ ಪರಿಭಾವಿಸಿದಾಗ ಗುರು-ಲಘುಸ್ಥಿರತೆ ಇಲ್ಲವೆಂದು ಅಂಗೀಕೃತವಾದ, ಮಾತ್ರಾಜಾತಿಯ ಗೋತ್ರಕ್ಕೆ ಸಲ್ಲುವ ಲಯಾನ್ವಿತ ಬಂಧಗಳಲ್ಲಿ ಕೂಡ ಕೀಲಕ ಸ್ಥಾನಗಳಲ್ಲಿ ಗುರು-ಲಘುಗಳ ಪಾತ್ರ ನಿರ್ಣಾಯಕವೆಂದು ತಿಳಿಯುತ್ತದೆ. ಈ ಬಂಧದ ಒಂದು ಉದಾಹರಣೆ ಹೀಗಿದೆ:
ಕೇಶಪಾಶಧೃತಪಿಂಛಿಕಾವಿತತಿಸಂಚಲನ್ಮಕರಕುಂಡಲಂ
ಹಾರಜಾಲವನಮಾಲಿಕಾಲಲಿತಮಂಗರಾಗಘನಸೌರಭಮ್ |
ಪೀತಚೇಲಧೃತಕಾಂಚಿಕಾಂಚಿತಮುದಂಚದಂಶುಮಣಿನೂಪುರಂ
ರಾಸಕೇಲಿಪರಿಭೂಷಿತಂ ತವ ಹಿ ರೂಪಮೀಶ ಕಲಯಾಮಹೇ || (ನಾರಾಯಣೀಯ, ೬೯.೧)
{ಪೃಥ್ವೀ} ಪ್ರತಿಯೊಂದು ಪಾದಕ್ಕೆ ಹದಿನೇಳು ಅಕ್ಷರಗಳನ್ನುಳ್ಳ ಪೃಥ್ವೀವೃತ್ತ ಸಂತುಲಿತಮಧ್ಯಾವರ್ತಗತಿಯನ್ನು ತಳೆದಿರುವುದರಿಂದ ನಾವು ಅದನ್ನು ಇಲ್ಲಿಯೇ ವಿವೇಚಿಸಬಹುದು. ಸೇಡಿಯಾಪು ಕೃಷ್ಣ ಭಟ್ಟರು ಈ ವೃತ್ತವನ್ನು ಪರಾಮರ್ಶಿಸಿದ್ದಾರೆ (ಸೇಡಿಯಾಪು ಛಂದಃಸಂಪುಟ, ಪು. ೧೯೦). ಅವರ ವಿವೇಚನೆ ಮುಖ್ಯವಾಗಿ ಯತಿಸ್ಥಾನದ ವ್ಯತ್ಯಾಸದಿಂದ ಲಯಾನ್ವಿತ ವೃತ್ತಗಳು ಲಯರಹಿತ ಬಂಧಗಳಂತೆ ತೋರುತ್ತವೆಂಬ ವಿಷಯದ ಸ್ಪಷ್ಟೀಕರಣವಾಗಿ ಸಾಗಿದೆ. ಹೀಗಾಗಿ ಇದನ್ನು ಕುರಿತು ಇನ್ನಷ್ಟು ಚಿಂತಿಸಲು ಅವಕಾಶವಿದೆ. ಮೊದಲಿಗೆ ಇದರ ಪ್ರಸ್ತಾರವನ್ನು ನೋಡೋಣ:
u – u u u – u – | u u u – u – – u –
ಈ ವಿನ್ಯಾಸ ಮೂಲತಃ ಸಂತುಲಿತಮಧ್ಯಾವರ್ತಗತಿಯ ಮೂರು ಘಟಕಗಳೆಂದು ಸೇಡಿಯಾಪು ಕೃಷ್ಣ ಭಟ್ಟರು ನಿರೂಪಿಸಿದ್ದಾರೆ:
u – u u u – | u – u u u – | u – – u –
ನಾವೆಲ್ಲ ಬಲ್ಲಂತೆ ಇಲ್ಲಿಯ ಎಂಟೆಂಟು ಮಾತ್ರೆಗಳ ಒಂದೊಂದು ಘಟಕದ ಬಳಿಕ ವಿರಾಮವುಂಟು. ಅದು ಲಯಾನ್ವಿತ ಬಂಧಗಳಲ್ಲಿ ಯತಿಸ್ಥಾನವೂ ಹೌದು. ಹೀಗೆ ಲಯಾನ್ವಿತವಾಗಿರುವ ಬಂಧವೊಂದನ್ನು ಬರಿಯ ಯತಿಸ್ಥಾನದ ಮಾರ್ಪಾಡಿನಿಂದ ಲಯರಹಿತವಾಗಿಸಲು ಸಾಧ್ಯವಿಲ್ಲ. ಹಾಗೆ ಮಾಡಲು ಮತ್ತೂ ಕೆಲವು ಅಂಶಗಳು ಪೂರಕವಾಗಿ ಬರಬೇಕು. ಇವನ್ನು ಸೇಡಿಯಾಪು ಅವರು ಕಂಠೋಕ್ತವಾಗಿ ಇಲ್ಲಿ ಹೇಳಿಲ್ಲದಿದ್ದರೂ ಅವರ ವಿಚಾರಸರಣಿಯನ್ನು ಅನುಸರಿಸಿ ಇಂಥ ಪೂರಕಾಂಶಗಳನ್ನು ಹವಣಿಸಬಹುದು.
ಮೇಲೆ ಕಾಣಿಸಿದ ಪ್ರಸ್ತಾರದ ಮೂರು ಘಟಕಗಳಲ್ಲಿ ಪ್ರತಿಯೊಂದು ಘಟಕದ ಮೊದಲು ಬಂದಿರುವ ಮೂರು ಮಾತ್ರೆಗಳ ಗಣ ಲ-ಗಂ ರೂಪದ್ದಾಗಿದೆ. ಈ ಮುನ್ನ ಕಂಡಂತೆ ಇಂಥ ವಿನ್ಯಾಸ ಸಂತುಲಿತಮಧ್ಯಾವರ್ತಗತಿಗೆ ವಿರೋಧಿಯಲ್ಲದಿದ್ದರೂ ತನ್ನ ಪ್ಲುತಿಯ ಕಾರಣ ಸಾಮರಸ್ಯಕ್ಕಿಂತ ವೈಚಿತ್ರ್ಯವನ್ನು ಹೆಚ್ಚಾಗಿ ಬಿಂಬಿಸುತ್ತದೆ. ಇಲ್ಲಿಯ ಎಂಟು ಮಾತ್ರೆಗಳ ಘಟಕಗಳ ಸಂಖ್ಯೆ ಮೂರಾಗಿರುವ ಕಾರಣ ಧಾಟಿಯಲ್ಲಿ ಸಾಗುವಾಗ ಗಣಸಮತೆ ಗಳಿಸದೆ ಎಡವಿದಂತೆ ತೋರುತ್ತದೆ. ಮೂರನೆಯ ಘಟಕ ಊನಗಣವಾಗಿದ್ದ ಪಕ್ಷದಲ್ಲಿಯೋ ನಾಲ್ಕನೆಯ ಮತ್ತೊಂದು ಪೂರ್ಣ ಅಥವಾ ಊನ ಘಟಕವಿದ್ದ ಪಕ್ಷದಲ್ಲಿಯೋ ಇಂಥ ಎಡವು ಕೇಳುತ್ತಿರಲಿಲ್ಲ.
ಹೀಗಿರುವ ಎರಡು ವೈಷಮ್ಯಗಳ ಜೊತೆಗೆ ಯತಿಸ್ಥಾನದ ಮಾರ್ಪಾಡೆಂಬ ಮತ್ತೊಂದು ವೈಷಮ್ಯವೂ ಸೇರಿಕೊಂಡ ಬಳಿಕ ಲಯಾನ್ವಿತ ಬಂಧವು ಲಯರಹಿತ ಎಂಬಂತೆ ತೋರಿಕೊಳ್ಳುವುದರಲ್ಲಿ ಅಚ್ಚರಿಯಿಲ್ಲ.
To be continued.