ಗಾನಕ್ರಮದ ಕರ್ಷಣದ ಮೂಲಕ ಇಂದ್ರವಜ್ರಾವೃತ್ತದ ಪಾದಗಳಿಗೆ ಒದಗಿದ ಪಂಚಕಲಗತಿ ಮತ್ತಷ್ಟು ದೃಢವಾಗಿ ಗುರು-ಲಘುವಿನ್ಯಾಸದಲ್ಲಿಯೇ ನಿಕ್ಷಿಪ್ತವಾದ ಬೆಳೆವಣಿಗೆಯನ್ನು ‘ಶ್ಯೇನಿ’ ಅಥವಾ ‘ಲಯಗ್ರಾಹಿ’ ಎಂಬ ಬಂಧದಲ್ಲಿ ನೋಡುತ್ತೇವೆ. ಇದು ಪ್ರತಿಪಾದಕ್ಕೆ ಮೂರು ತ-ಗಣ ಮತ್ತೆರಡು ಗುರುಗಳನ್ನು ಒಳಗೊಂಡ ಸಮವೃತ್ತ. ಅದರ ವಿನ್ಯಾಸ ಹೀಗೆ:
– – u – – u – – u – –
ಇದು ಐದೈದು ಮಾತ್ರೆಗಳ ಮೂರು ಗಣ ಮತ್ತು ನಾಲ್ಕು ಮಾತ್ರೆಗಳ ಒಂದು ಗಣವನ್ನು ಒಳಗೊಂಡ ಖಂಡಗತಿಯಲ್ಲಿ ಸಾಗುವ ಲಯಾನ್ವಿತ ವೃತ್ತ. ಕೊನೆಯ ಗಣವು ಒಂದು ಮಾತ್ರಾಕಾಲದ ಕರ್ಷಣಕ್ಕೆ ತುತ್ತಾಗಿ ಸಹಜವಾಗಿಯೇ ಲಯಸಮತೆಯನ್ನು ಪಡೆಯುವುದು ಸುವೇದ್ಯ.
ಶ್ಯೇನಿ ಅಥವಾ ಲಯಗ್ರಾಹಿಯು ಸಂಸ್ಕೃತಕ್ಕೆ ಅನುಕೂಲಿಸುವಂತೆ ಗುರುಪ್ರಚುರವಾಗಿ ಸ್ಫುಟವಾದ ಲಯಪ್ರತೀತಿಯನ್ನು ಹೊಂದಿದ್ದರೂ ಹೆಚ್ಚಿನ ಪ್ರಾಚುರ್ಯ ಗಳಿಸದಿದ್ದುದಕ್ಕೆ ಕಾರಣ ಅದರ ಇವೇ ಗುಣಗಳೆಂದರೆ ಚೋದ್ಯವೆನಿಸದಿರದು! ನಾವು ಈ ಮುನ್ನ ಕಂಡಂತೆ ಗುರು-ಲಘುಸ್ಥಿರವಾದ ಲಯಾನ್ವಿತ ವೃತ್ತಗಳಿಗಿಂತ ಆ ಬಗೆಯ ಲಯಪ್ರತೀತಿಯುಳ್ಳ ಮಾತ್ರಾಜಾತಿಗಳೇ ರಚನಾಸೌಲಭ್ಯ ಮತ್ತು ಶ್ರಾವಣವೈವಿಧ್ಯಗಳನ್ನು ಹೊಂದಿರುತ್ತವೆ. ಈ ಅಳತೆಯಿಂದ ಪ್ರಸ್ತುತ ವೃತ್ತ ತೇರ್ಗಡೆಯಾಗದ ಕಾರಣ ಅದು ಪ್ರಾಚುರ್ಯ-ಪ್ರಾಶಸ್ತ್ಯಗಳನ್ನು ಗಳಿಸಲಿಲ್ಲ. ಇದನ್ನು ಪರಿಭಾವಿಸಿದಾಗ ಜನಾದರಣೆಯನ್ನು ಗಳಿಸಬೇಕಾದ ಛಂದೋಗತಿಯ ಹದ ಎಂಥದ್ದೆಂಬ ಸೂಕ್ಷ್ಮತೆ ಸಾಕ್ಷಾತ್ಕರಿಸದಿರದು. ಇದನ್ನು ಮತ್ತೂ ಒಂದು ಉದಾಹರಣೆಯ ಮೂಲಕ ಇನ್ನಷ್ಟು ಚೆನ್ನಾಗಿ ಮನಗಾಣಬಹುದು.
ಮಹೇಂದ್ರವಜ್ರಾವೃತ್ತವು ಸಾಲೊಂದಕ್ಕೆ ಹನ್ನೆರಡು ಅಕ್ಷರಗಳ ಮೊತ್ತವಿರುವ ಜಗತೀವರ್ಗಕ್ಕೆ ಸೇರಿದೆ. ಸ-ಯ-ಸ-ಯ ಎಂಬುದು ಇಲ್ಲಿಯ ಗಣವಿನ್ಯಾಸ. ಇಂದ್ರವಜ್ರಾವೃತ್ತದ ಮೊದಲ ಗುರುವನ್ನು ಎರಡು ಲಘುಗಳನ್ನಾಗಿ ಒಡೆದ ಬಳಿಕ ಈ ವೃತ್ತವು ಉನ್ಮೀಲಿಸುತ್ತದೆ. ಹೀಗಾಗಿ ಇದು ಇಂದ್ರವಜ್ರಾವೃತ್ತಕ್ಕಿಂತ ಮಿಗಿಲಾದ ಸಮತ್ವವನ್ನು ಗುರು-ಲಘುವಿನ್ಯಾಸದಲ್ಲಿ ಹೊಂದಿದೆ. ಅಂದರೆ ವಿಲೋಮಸಂಕೀರ್ಣಗತಿಗೆ ಮತ್ತಷ್ಟು ಪುಟವೀಯುವಂತೆ, ಯತಿಸ್ಥಾನದ ಇರ್ಕೆಲದಲ್ಲಿ ೫+೪ ಮಾತ್ರೆಗಳ ಹಂಚಿಕೆಯು ಹೀಗಿದೆ:
u u – u | – – | u u – u | – –
ಈ ರೀತಿ ಅತ್ಯಂತ ಸ್ಫುಟವಾದ ಲಯಪ್ರತೀತಿ ಮತ್ತು ಐಕರೂಪ್ಯದ ಗುರು-ಲಘುವಿನ್ಯಾಸದ ಕಾರಣದಿಂದಲೇ ಈ ಬಂಧವು ಬಲುಬೇಗ ಏಕತಾನತೆಯನ್ನು ತರುತ್ತದೆ. ಅಲ್ಲದೆ ಇಲ್ಲಿಯ ಲಘ್ವಾಧಿಕ್ಯವೂ ಇದು ಸಂಸ್ಕೃತದಂಥ ಭಾಷೆಗೆ ಒದಗಿಬರದಂತೆ ತಡೆದಿದೆ. ಒಟ್ಟಿನಲ್ಲಿ ವೃತ್ತವೊಂದು ಎದ್ದುಕಾಣುವಂತೆ ಲಯಾನ್ವಿತವಾಗಿದ್ದು ಏಕತಾನತೆಗೆ ಕಾರಣವಾಗಲೂ ಬಾರದು; ಲಯಸಾಮ್ಯದ ಅಂಶವಿಲ್ಲದೆ ಗದ್ಯಪ್ರಾಯವೂ ಆಗಬಾರದು. ಹೀಗೆ ಈ ಎರಡು ಅಂಚುಗಳ ನಡುವೆ ಆದರ್ಶಪ್ರಾಯ ಛಂದೋಗತಿ ಸಾಗಬೇಕು. ಹೇಗೆ ಕಾವ್ಯಾತ್ಮವೆನಿಸಿದ ಧ್ವನಿಯು ವಾಚ್ಯತಾದೋಷವುಳ್ಳ ಅತಿಸ್ಪಷ್ಟತೆ ಮತ್ತು ನಿಗೂಢತಾದೋಷವುಳ್ಳ ಪ್ರಹೇಲಿಕಾಪ್ರಾಯತೆ ಎಂಬ ಎರಡು ಪ್ರಪಾತಗಳ ನಡುವಣ ಹಾದಿಯಲ್ಲಿ ಸಾಗಿ ರಸವನ್ನು ಸಾಕ್ಷಾತ್ಕರಿಸಿಕೊಡಬೇಕಿದೆಯೋ ಹಾಗೆಯೇ ಛಂದಸ್ಸು ಕೂಡ ಏಕತಾನತಾಧಿಕ್ಯ ಮತ್ತು ಗದ್ಯಪ್ರಾಯತ್ವಗಳೆಂಬ ಎರಡು ಅತಿರೇಕಗಳ ನಡುವೆ ತನ್ನ ಗತಿಸುಭಗತೆಯನ್ನು ಕಂಡುಕೊಳ್ಳಬೇಕು.
{ಉಪೇಂದ್ರವಜ್ರಾ} ಇಂದ್ರವಜ್ರಾದಂತೆಯೇ ಉಪೇಂದ್ರವಜ್ರಾ ಸಾಲಿಗೆ ಹನ್ನೊಂದು ಅಕ್ಷರಗಳನ್ನು ಉಳ್ಳ ಸಮವೃತ್ತ. ಇವೆರಡು ಮೊದಲ ಗಣದಲ್ಲಿ ಮಾತ್ರ ಭಿನ್ನೈಸುತ್ತವೆ. ಅಲ್ಲಿಯ ತ-ಗಣ ಇಲ್ಲಿ ಜ-ಗಣವಾಗಿದೆ. ಅದರ ಪ್ರಸ್ತಾರ ಹೀಗಿದೆ:
u – u – – | u u – u – –
ಈ ಬಂಧದ ಮೊದಲ ಮೂರು ಅಕ್ಷರಗಳು ಜ-ಗಣವಾಗುವ ಮೂಲಕ ಎಲ್ಲ ಪಾದಗಳ ಎತ್ತುಗಡೆಗೂ ಅನನ್ಯವಾದ ಪ್ಲುತಿ ಅಥವಾ ನೆಗೆತವನ್ನು ದಕ್ಕಿಸಿದೆ. ಇದರಿಂದ ಪದ್ಯದ ಆರಂಭಕ್ಕೊಂದು ಆರೋಹಣಗತಿ ಒದಗಿದೆ. ಇಂದ್ರವಜ್ರಾವೃತ್ತದಲ್ಲಿ ಇದಕ್ಕೆ ವಿರುದ್ಧವಾಗಿ ಅವರೋಹಣಗತಿಯನ್ನು ಕಾಣಬಹುದು. ಅದರ ಮೊದಲಿಗೆ ಬರುವ ತ-ಗಣವೇ ಇದಕ್ಕೆ ಕಾರಣ. ಇಂದ್ರವಜ್ರಾವೃತ್ತಕ್ಕಿಂತ ಉಪೇಂದ್ರವಜ್ರಾ ಹೀಗೆ ವಿಭಿನ್ನ ಎನಿಸಿದರೂ ಯತಿಸ್ಥಾನದ ಮಟ್ಟಿಗೆ ಒಂದೇ ಆಗಿದೆ. ಇದೊಂದು ಛಂದಶ್ಚೋದ್ಯ. ಇದರ ಧಾಟಿಯಲ್ಲಿ ಕೇವಲ ಪಾಟಾಕ್ಷರಗಳನ್ನು ಗುನುಗಿಕೊಳ್ಳುವ ಮೂಲಕ ಯತಿಯ ಸ್ಥಾನವನ್ನು ನಿಶ್ಚಯಿಸಿಕೊಳ್ಳಬಹುದು. ಇದರ ಯತಿ ಕೂಡ ದುರ್ಬಲವೇ.
ಉಭಯವೃತ್ತಗಳ ಎತ್ತುಗಡೆಗಳು ಪರಸ್ಪರ ವಿರುದ್ಧವಾಗಿದ್ದರೂ ಪಾದದ ಉಳಿದೆಲ್ಲ ಗುರು-ಲಘುವಿನ್ಯಾಸ ಒಂದೇ ಆದ ಕಾರಣ ಯತಿಸ್ಥಾನ ಮಾರ್ಪಟ್ಟಿಲ್ಲವೆಂದು ನಾವು ಹೇಳಬಹುದು. ಆದರೆ ಸ್ವಲ್ಪ ಆಳವಾಗಿ ಪರಿಶೀಲಿಸಿದರೆ ಇದರೊಳಗೆ ಇನ್ನೊಂದು ಛಂದೋಗತಿಸೂಕ್ಷ್ಮ ಅಡಗಿರುವುದು ಸ್ಪಷ್ಟವಾಗುತ್ತದೆ. ಛಂದೋಗತಿಗೆ ಅನುಸಾರವಾಗಿ ಉಪೇಂದ್ರವಜ್ರಾವೃತ್ತವನ್ನು ಪಠಿಸುವಾಗ ಅದರ ಮೊದಲ ಜ-ಗಣದ ಗುರು ತನ್ನ ಎರಡು ಮಾತ್ರೆಗಳ ಮಾನಕ್ಕಿಂತ ಹೆಚ್ಚಾಗಿ ಕರ್ಷಿತವಾಗುವುದು ಛಂದಃಪ್ರಜ್ಞಾಶಾಲಿಗಳ ಅನುಭವಕ್ಕೆ ಬರುವ ಸತ್ಯ. ಹೀಗಾಗಿ ಐದು ಮಾತ್ರೆಗಳ ವ್ಯಾಪ್ತಿಯುಳ್ಳ ತ-ಗಣಕ್ಕಿಂತ ಅಷ್ಟಾಗಿ ಭಿನ್ನವಲ್ಲದ ವ್ಯಾಪ್ತಿಯೇ ಇಲ್ಲಿಯ ಜ-ಗಣಕ್ಕೆ ಸಿದ್ಧಿಸಿದೆ. ಅಂದರೆ ಈ ವೃತ್ತದ ವಿಲೋಮಸಂಕೀರ್ಣಗತಿಗೆ ಚ್ಯುತಿ ಒದಗಿಲ್ಲ. ಈ ಕಾರಣದಿಂದಲೇ ಇದರ ಯತಿಸ್ಥಾನ ಮಾರ್ಪಟ್ಟಿಲ್ಲ. ಜ-ಗಣದ ಸಹಜಗುರುವೇ ಕರ್ಷಣಕ್ಕೆ ತುತ್ತಾದ ಕಾರಣ ಅಲ್ಲಿಯ ಪ್ಲುತಿ ಮತ್ತಷ್ಟು ಪ್ರಬಲವಾಗಿ ಜ-ಗಣತ್ವ ಮತ್ತಷ್ಟು ರಕ್ಷಿತವಾಗಿದೆ. ಅಂದರೆ ಈ ವೃತ್ತದ ಆರೋಹಣಗತಿ ಇನ್ನಷ್ಟು ಪ್ರಖರವಾಗಿದೆ. ‘ಹಿಮಾಲಯೋ ನಾಮ ನಗಾಧಿರಾಜಃ’ ಎಂಬ ಸಾಲಿನಲ್ಲಿ ‘ಮಾ’ ಎಂಬ ಗುರು ಎರಡು ಮಾತ್ರೆಗಳ ಅಳತೆಯನ್ನು ಮೀರುವ ಹಾಗೆ ಕರ್ಷಿತವಾಗುವುದನ್ನು ಗಮನಿಸಬಹುದು.[1]
ಆರಂಭಿಕ ಗಣವೊಂದರ ವ್ಯತ್ಯಾಸದಿಂದ ಉಭಯವೃತ್ತಗಳಿಗೆ ಅನೂಹ್ಯವಾದ ಆರೋಹಣ-ಅವರೋಹಣಾತ್ಮಕ ಗತಿವೈಚಿತ್ರ್ಯವು ಸಿದ್ಧಿಸಿ ತನ್ಮೂಲಕವಾಗಿ ಇವುಗಳ ಮಿಶ್ರಣವೆನಿಸಿದ ಉಪಜಾತಿಗೆ ಎಲ್ಲಿಲ್ಲದ ವೈವಿಧ್ಯವನ್ನು ತಂದಿದೆ. ಮಿಕ್ಕ ಕೆಲವೊಂದು ಕಾರಣಗಳ ಜೊತೆಗೆ ಈ ಕಾರಣವೂ ಸೇರಿಕೊಂಡು ಕೇವಲ ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳಿಗಿಂತ ಉಪಜಾತಿಯೇ ಹೆಚ್ಚಿನ ಪ್ರಾಚುರ್ಯ-ಪ್ರಾಶಸ್ತ್ಯಗಳನ್ನು ಗಳಿಸಿದೆ.
ಇಂದ್ರವಜ್ರಾ ತನ್ನ ಗುರುಪ್ರಧಾನವಾದ ಅವರೋಹಣಗತಿಯಿಂದ ಅದೊಂದು ಬಗೆಯ ಗಾಂಭೀರ್ಯವನ್ನು ಧ್ವನಿಸಿದರೆ ಉಪೇಂದ್ರವಜ್ರಾ ತನ್ನ ಪ್ರಸ್ಫುಟವಾದ ಆರೋಹಣಗತಿಯಿಂದ ಮತ್ತೊಂದು ಬಗೆಯ ತಾರಳ್ಯವನ್ನು ಸೂಚಿಸಿದೆ. ಹೀಗಾಗಿ ಇವುಗಳ ವಿನಿಯೋಗವು ವಿಭಿನ್ನ ಸಂದರ್ಭಗಳಿಗೆ ಒದಗಿಬರುವಂತಾಗಿದೆ.
{ಉಪಜಾತಿ} ಈವರೆಗಿನ ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳ ಗತಿಮೀಮಾಂಸೆಯಿಂದಲೇ ಉಪಜಾತಿಯ ಗತಿಸೌಂದರ್ಯ ಕೂಡ ವಿವೃತವಾದಂತೆ ಆಗಿದೆ. ಪೂರ್ವೋಕ್ತ ವೃತ್ತಗಳ ಮಿಶ್ರಣದಿಂದ ಸಾಧಿಸಬಹುದಾದ ವೈವಿಧ್ಯವನ್ನು ಸ್ವಲ್ಪ ಗಮನಿಸುವುದಷ್ಟೇ ಉಳಿದಿದೆ. ಈ ಮುನ್ನ ಹೇಳಿದಂತೆ ಉಪಜಾತಿ ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳ ಕ್ರಮವಾದ ಅವರೋಹಣ ಮತ್ತು ಆರೋಹಣಗಳ ಸುಂದರ ಸಮ್ಮಿಶ್ರಣ. ಇಂಥ ಸಮ್ಮಿಶ್ರಣದ ಮೂಲಕ ಉಪಜಾತಿಯು ಛಂದಃಶಾಸ್ತ್ರಜ್ಞರು ಹೇಳುವ ಹದಿನಾಲ್ಕು ಬಗೆಗಳನ್ನು ಹೊಂದುತ್ತದೆ (ವೃತ್ತರತ್ನಾಕರ, ೩.೩೦). ಈ ಎಲ್ಲ ಗಣಿತೀಯ ಪ್ರಭೇದಗಳ ವಿವೇಚನೆ ನಮಗೆ ಸದ್ಯಕ್ಕೆ ಅನವಶ್ಯ. ಕೇವಲ ಒಂದು ಮಾದರಿಯಿಂದ ಉಪಜಾತಿಯ ಪರಿಣಾಮವನ್ನು ಅರಿಯಬಹುದು:
ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ
ಹಿಮಾಲಯೋ ನಾಮ ನಗಾಧಿರಾಜಃ |
ಪೂರ್ವಾಪರೌ ತೋಯನಿಧೀ ವಗಾಹ್ಯ
ಸ್ಥಿತಃ ಪೃಥಿವ್ಯಾ ಇವ ಮಾನದಂಡಃ || (ಕುಮಾರಸಂಭವ, ೧.೧)
ಇದು ‘ಭದ್ರಾ’ ಎಂಬ ಉಪಜಾತಿಪ್ರಭೇದದ ಉದಾಹರಣೆ. ಇಲ್ಲಿಯ ನಾಲ್ಕು ಸಾಲುಗಳಲ್ಲಿ ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾವೃತ್ತಗಳ ಪಾದಗಳು ಒಂದರ ಬಳಿಕ ಮತ್ತೊಂದರ ಹಾಗೆ ಬಂದಿವೆ. ಈ ಸಾಧ್ಯತೆಯನ್ನು ಕವಿ ಅದೆಷ್ಟು ಧ್ವನಿಪೂರ್ಣವಾಗಿ ಬಳಸಿಕೊಂಡಿದ್ದಾನೆಂಬುದನ್ನು ಕಂಡಾಗ ನಮಗೆ ಛಂದೋಗತಿಯ ಅರ್ಥವಂತಿಕೆ ಮನದಟ್ಟಾಗುತ್ತದೆ.
ಮೊದಲ ಪಾದದ ಅವರೋಹಣಾತ್ಮಕ ಗತಿ ಇರುವಿಕೆಯೊಂದನ್ನು ಶಾಂತವಾಗಿ ಸೂಚಿಸಿದೆ. ಎರಡನೆಯ ಪಾದವು ಅಂಥ ಇರುವಿಕೆ ಹಿಮಾಲಯದ್ದೆಂದು ಹೇಳಲು ಇದೇ ಪದವನ್ನು ಮೊದಲಿಗೆ ತರುವ ಮೂಲಕ ಆರೋಹಣಗತಿಯನ್ನು ಅವಲಂಬಿಸಿ ಆ ಪರ್ವತಶ್ರೇಣಿಯ ಉನ್ನತಿಯನ್ನು ಅನನ್ಯವಾಗಿ ಧ್ವನಿಸಿದೆ. ಈ ಗಿರಿಶ್ರೇಣಿಯ ವಿಸ್ತಾರವನ್ನು ವರ್ಣಿಸುವ ಮುಂದಿನ ಸಾಲು ಮತ್ತೆ ಇಂದ್ರವಜ್ರಾವೃತ್ತದ ಪಾದವಾಗಿದ್ದು ವ್ಯಾಪ್ತಿಯನ್ನು ಧ್ವನಿಸಿದೆ. ಇಂಥ ಹಿಮಾಲಯ ಭೂಮಿಯ ಮಾನದಂಡದಂತೆ ಇಂದೂ ಇದೆಯೆಂಬ ಇಂಗಿತದ ನಾಲ್ಕನೆಯ ಸಾಲು ‘ಸ್ಥಿತಃ’ ಎಂಬ ಪದದಲ್ಲಿರುವ ಉಪಧ್ಮಾನೀಯದ ಮೂಲಕ ಪ್ಲುತಿಯನ್ನಷ್ಟೇ ಅಲ್ಲದೆ ಅವಧಾರಣೆಯನ್ನೂ ಧ್ವನಿಸಿ ಉಪಮಾನದ ಮಹತ್ತ್ವವನ್ನು ಸಾರಿದೆ. ಹೀಗೆ ಪದ್ಯಶಿಲ್ಪದ ಸೌಂದರ್ಯಕ್ಕೆ ಛಂದಸ್ಸು ಸೊಗಸಾಗಿ ಒದಗಿದೆ. ಇಂಥ ಸ್ವಾರಸ್ಯಗಳು ಉಪಜಾತಿಯಲ್ಲಿ ಹತ್ತಾರು.
ಐತಿಹಾಸಿಕ ವಿಕಾಸದ ದೃಷ್ಟಿಯಿಂದ ಇದು ವೈದಿಕ ತ್ರಿಷ್ಟುಪ್ಪಿಗೆ ನಿಕಟವಾದ ಕಾರಣ ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳಿಗಿಂತ ಮೊದಲೇ ಆರ್ಷಕವಿಗಳ ಮೂಲಕ ಅಭಿಜಾತಕವಿಗಳಿಗೆ ಹಸ್ತಾಂತರಗೊಂಡಿತು. ತಥ್ಯ ಹೀಗಿದ್ದರೂ ಅದು ತನ್ನ ಸೌಲಭ್ಯಕ್ಕೆ ಹೆಗಲೆಣೆಯಾದ ಸೌಂದರ್ಯದ ಕಾರಣ ನೆಲೆನಿಂತಿತೆಂದರೆ ಅತಿಶಯವಲ್ಲ. ಕೇವಲ ಪಾದಾದಿಯ ಒಂದು ಅಕ್ಷರದ ಸ್ವಾತಂತ್ರ್ಯದ ಮೂಲಕ ವಶ್ಯವಾಕ್ಕುಗಳಾದ ಸಂಸ್ಕೃತದ ವರಕವಿಗಳಿಗೆ ರಚನಾದೃಷ್ಟಿಯಿಂದ ಹೆಚ್ಚಿನ ಅನುಕೂಲವೇನೂ ಆಗದಷ್ಟೆ. ಅವರು ಇಂಥ ಸ್ವಲ್ಪದ ಅನುಕೂಲಕ್ಕೆ ಸೋಲುವಷ್ಟು ಅವ್ಯುತ್ಪನ್ನರೂ ಅಲ್ಲ. ಇದಕ್ಕಿಂತ ಹೆಚ್ಚಾಗಿ ಗತಿವೈಚಿತ್ರ್ಯದ ಆಕರ್ಷಣೆಯೇ ಅವರು ಉಪಜಾತಿಯನ್ನು ವ್ಯಾಪಕವಾಗಿ ಬಳಸುವಂತೆ ಮಾಡಿತೆಂದರೆ ತಪ್ಪಾಗದು. ಗತಿವೈಚಿತ್ರ್ಯಕ್ಕಾಗಿ ವಿಕಟವಾದ ಎಷ್ಟೆಷ್ಟೋ ಛಂದಸ್ಸುಗಳನ್ನು ಬಳಸಿದ ಆ ಕವಿಗಳ ರಚನೆಗಳನ್ನು ಬಲ್ಲವರಿಗೆ ನಮ್ಮೀ ಅನುಮಾನ ಅಯುಕ್ತವೆನಿಸದು.
[1] ಹೀಗೆ ಗುರುವೊಂದು ತನ್ನ ಪಾಠ್ಯರೂಪದ ಎರಡು ಮಾತ್ರೆಗಳ ಅಳತೆಗಿಂತ ಹೆಚ್ಚಾದ ಪ್ಲುತಕಲ್ಪ ಕರ್ಷಣವನ್ನು ಪಡೆಯುವ ಮೂಲಕ ವೃತ್ತದ ಸ್ಥಿರತೆಗೆ ಧಕ್ಕೆ ಬರುವುದಿಲ್ಲವೇ? ಇದು ವರ್ಣವೃತ್ತಗಳನ್ನು ಕರ್ಷಣಜಾತಿಗಳತ್ತ ಸೆಳೆದಂತೆ ಆಗುವುದಿಲ್ಲವೇ? ಎಂಬ ಪ್ರಶ್ನೆ ಹುಟ್ಟಲು ಸಾಧ್ಯ. ಒಂದು ಗುರುವಿನ ಕರ್ಷಣವನ್ನುಳಿದು ಪಾದದ ಮಿಕ್ಕೆಲ್ಲ ಗುರು-ಲಘುವಿನ್ಯಾಸವು ಸ್ಥಿರವಾಗಿರುವ ಕಾರಣ ಈ ಬಗೆಯ ಕಳವಳಕ್ಕೆ ಅವಕಾಶವಿಲ್ಲ.
To be continued.