ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ದ್ರುತವಿಲಂಬಿತವೃತ್ತದ ಅತ್ಯಧಿಕ ಪ್ರಯೋಗವನ್ನು ‘ಕವಿರಾಜಮಾರ್ಗ’ದಲ್ಲಿ ಕಾಣಬಹುದು. ಅಲ್ಲಿ ಒಟ್ಟಾರೆ ಹತ್ತು ಪದ್ಯಗಳು ಈ ವೃತ್ತದಲ್ಲಿ ನಿಬದ್ಧವಾಗಿವೆ. ಇವಲ್ಲದೆ ಇಲ್ಲಿ ಬಳಕೆಗೊಂಡ ಹಲವು ಅಪೂರ್ವ ಬಂಧಗಳ ಪೈಕಿ ‘ವೀರ’, ‘ಮಣಿಭೂಷಣ’ ಮತ್ತು ‘ಮಂಗಳ’ ಎಂಬವು ದ್ರುತವಿಲಂಬಿತವೃತ್ತವನ್ನು ಅತಿಶಯವಾಗಿ ಹೋಲುತ್ತವೆ. ಕವಿರಾಜಮಾರ್ಗವು ಉಪಲಬ್ಧ ಕನ್ನಡಗ್ರಂಥಗಳ ಪೈಕಿ ಅತ್ಯಂತ ಪ್ರಾಚೀನವಾದುದು ಮಾತ್ರವಲ್ಲದೆ ಕಾವ್ಯಲಕ್ಷಣಗ್ರಂಥವೂ ಆಗಿರುವ ಕಾರಣ ಇಲ್ಲಿ ಬಳಕೆಗೊಂಡ ಕೆಲವು ವೃತ್ತಗಳು ಹೆಚ್ಚಿನ ವಿವೇಚನೆಗೆ ಅರ್ಹವಾಗಿವೆ. ಅಲ್ಲದೆ ‘ಕವಿರಾಜಮಾರ್ಗ’ದ ವಿರಳಪ್ರಚುರ ವೃತ್ತಗಳ ಗತಿಮೀಮಾಂಸೆಯ ವಿಷಯದಲ್ಲಿ ನಮ್ಮ ವಿದ್ವಾಂಸರು ವಿಶೇಷವಾದ ಯಾವ ಚಿಂತನೆಯನ್ನೂ ನಡಸದ ಕಾರಣ ಈ ಬಗೆಯ ಉಪಕ್ರಮಕ್ಕೆ ತನ್ನದೇ ಆದ ಪ್ರಯೋಜನವೂ ಇದೆ.[1]
{ವೀರ} ವೀರವು ರ-ಸ-ಸ-ಲ-ಗಂ ಎಂಬ ಗಣವಿನ್ಯಾಸವಿರುವ ಬಂಧ. ಇದು ದ್ರುತವಿಲಂಬಿತದ ಮೊದಲ ಮೂರು ಲಘುಗಳ ಸ್ಥಾನದಲ್ಲಿ ಅದೇ ಮಾತ್ರಾಮಾನವುಳ್ಳ ‘ಗಾ-ಲ’ ಎಂಬ ವಿನ್ಯಾಸದ ಎರಡು ಅಕ್ಷರಗಳನ್ನು ಹೊಂದಿದೆಯೆನ್ನಬಹುದು:
ದ್ರುತವಿಲಂಬಿತ
[u u u] – u u – u u – u –
ವೀರ
[– u] – u u – u u – u –
ಶೂರನೀತನೆ ಪಂಡಿತನೀತನೇ
ಕ್ಷೀರಗೌರಯಶೋಽಧಿಕನೀತನೇ |
ಧಾರಿಣೀತಳದೊಳ್ ಧ್ರುವಮೆಂಬುದಾ-
ಧಾರಮಿಂತವಧಾರಣದೊಳ್ ಗುಣಂ || (ಕವಿರಾಜಮಾರ್ಗ, ೧.೧೪೦)
ಆದರೆ ಇಷ್ಟು ಸ್ವಲ್ಪದ ಮಾರ್ಪಾಟಿನಿಂದಲೇ ದ್ರುತವಿಲಂಬಿತಕ್ಕಿರುವ ದ್ರುತಾರಂಭದ ಹಿತ ಹದಗೆಟ್ಟಿದೆ. ಇದನ್ನು ಗಮನಿಸಿದಾಗ ಛಂದೋಗತಿಯ ಮರ್ಮಗಳು ಅದೆಷ್ಟು ಸೂಕ್ಷ್ಮವೆಂದು ತಿಳಿಯದಿರದು.
{ಮಣಿಭೂಷಣ} ಮಣಿಭೂಷಣವು ರ-ನ-ಭ-ಭ-ರ ಎಂಬ ಗಣವಿನ್ಯಾಸವನ್ನುಳ್ಳ ಬಂಧ. ಇದರ ಮೊದಲಿಗೆ ಬಂದಿರುವ ರ-ಗಣವನ್ನು ತೆಗೆದುಹಾಕಿದರೆ ಅಪ್ಪಟ ದ್ರುತವಿಲಂಬಿತವೇ ಉಳಿಯುತ್ತದೆ:
ದ್ರುತವಿಲಂಬಿತ
u u u – u u – u u – u –
ಮಣಿಭೂಷಣ
[– u –] u u u – u u – u u – u –
ಆಗಳುಂ ಗುರುಗಳಲ್ಲದ ತಾಣದೊಳಂ ಗುರೂ-
ದ್ಯೋಗದಿಂ ಬಗೆಗೆ ಗೌರವದೋಷಮಿದೆಂಬುದಂ |
ಬೇಗಮಾ ಲಘುಗಳಲ್ಲದ ತಾಣದೊಳಂ ಲಘೂ-
ಪಾಗಮಕ್ರಮದೆ ನಂಬುಗೆ ಲಾಘವದೋಷಮಂ || (ಕವಿರಾಜಮಾರ್ಗ, ೧.೧೨೭)
ಮೇಲ್ನೋಟಕ್ಕೇ ತಿಳಿಯುವಂತೆ ಇಲ್ಲಿ ಹೊಸತಾಗಿ ಸೇರಿಕೊಂಡಿರುವ ಆದಿಮ ರ-ಗಣದ ಕಾರಣ ಇಡಿಯ ವೃತ್ತಕ್ಕೆ ಗುರ್ವಾಧಿಕ್ಯ ಒದಗಿದೆ; ಗತಿಯಲ್ಲಿ ಪ್ಲುತಿಯೂ ಹೆಚ್ಚಿದೆ. ಮಾತ್ರವಲ್ಲ, ಪ್ರತಿ ಪಾದದ ಮೊದಲಿಗೂ ಎಂಟು ಮಾತ್ರೆಗಳ ಒಂದು ಘಟಕ ಉಂಟಾಗಿ ಸಂತುಲಿತಮಧ್ಯಾವರ್ತಗತಿ ಆದಿಯಲ್ಲಿಯೇ ವಿಜೃಂಭಿಸಿದೆ. ಈ ಬಗೆಯ ನಡಿಗೆ ದ್ರುತವಿಲಂಬಿತಕ್ಕೆ ತೀರ ವಿಜಾತೀಯ. ಅದು ಆರಂಭವಾಗುವುದೇ ಮೃದುವಾದ ಮಿಶ್ರಗತಿಯ ಮೂಲಕ; ಪಾದಾದಿಯ ನ-ಗಣ ಮತ್ತು ಭ-ಗಣಗಳ ಸಮಾಹಾರದ ಮೂಲಕ. ಒಟ್ಟಿನಲ್ಲಿ ಮಣಿಭೂಷಣದ ಆದಿ-ಅಂತ್ಯಗಳಲ್ಲಿರುವ ಎರಡು ರ-ಗಣಗಳು ಅದರ ಓಜಸ್ಸನ್ನು ಹೆಚ್ಚಿಸಿವೆ; ಗತಿವೈರಸ್ಯವನ್ನೇನೂ ತಂದಿಲ್ಲ. ಈ ಕಾರಣದಿಂದಲೇ ಪರವರ್ತಿ ಸಾಹಿತ್ಯದಲ್ಲಿ ಈ ವೃತ್ತವನ್ನು ಆಗೊಮ್ಮೆ ಈಗೊಮ್ಮೆ ಕಾಣುತ್ತೇವೆ.
{ಮಂಗಳ} ಮಂಗಳವು ನ-ಭ-ಜ-ಜ-ಜ-ಗಂ ಎಂಬ ಗಣವಿನ್ಯಾಸವುಳ್ಳ ವೃತ್ತ. ಇದರ ಮೊದಲಿಗೆ ಬಂದಿರುವ ಮೂರು ಲಘುಗಳನ್ನೂ ಅದನ್ನಂಟಿ ಬಂದಿರುವ ಒಂದು ಗುರುವನ್ನೂ ಬೇರ್ಪಡಿಸಿದರೆ ದ್ರುತವಿಲಂಬಿತವೇ ಉಳಿಯುತ್ತದೆ:
ದ್ರುತವಿಲಂಬಿತ
u u u – u u – u u – u –
ಮಂಗಳ
[u u u –] u u u – u u – u u – u –
ನೃಪನುಮಂ ಪ್ರಜೆಯುಮಂ ಪರಿವಾರಮುಮಂ ಮಹಾ-
ಕೃಪೆಯಿನಾ ಗೊರವರುಂ ಸುರರುಂ ಗುಣವೃದ್ಧರುಂ |
ವಿಪುಳರಾಗಪರರಾಗಿಸುಗೆಂದು ಸಮುಚ್ಚಯ-
ಕ್ಕುಪಚಿತೋರುಗುಣಮಂ ಮಿಗೆ ಪೇೞ್ಗಿ ಕವೀಶ್ವರರ್ || (ಕವಿರಾಜಮಾರ್ಗ, ೧.೧೩೩)
ಮಂಗಳವು ಮಣಿಭೂಷಣವನ್ನು ಮತ್ತೂ ನಿಕಟವಾಗಿ ಹೋಲುವ ವೃತ್ತ. ಇಲ್ಲಿಯ ಮೊದಲ ಎರಡು ಲಘುಗಳನ್ನು ಒಂದು ಗುರುವನ್ನಾಗಿ ಮಾಡಿದರೆ ಮಣಿಭೂಷಣ ಸಿದ್ಧವಾಗುತ್ತದೆ. ಇದರ ಪ್ರತಿ ಪಾದದ ಮೊದಲ ನಾಲ್ಕು ಅಕ್ಷರಗಳನ್ನು ನಿವಾರಿಸಿದರೆ ದ್ರುತವಿಲಂಬಿತ ಸಿದ್ಧಿಸುತ್ತದೆ. ಇಷ್ಟು ಸ್ವಲ್ಪದ ಮಾರ್ಪಾಡಿನಿಂದ ಮಂಗಳಕ್ಕೆ ಸಂದಿರುವ ಗತಿವೈಚಿತ್ರ್ಯ ಅನೂಹ್ಯವಾದುದು. ಇಲ್ಲಿ ಕೂಡ ಮಣಿಭೂಷಣವೃತ್ತದ ಹಾಗೆಯೇ ಅಪ್ಪಟ ಪಂಚಕಲಗಳ ಎರಡು ಆವರ್ತಗಳು ಪ್ರತಿಯೊಂದು ಪಾದದ ಮೊದಲಿಗೆ ಕಾಣಿಸಿಕೊಳ್ಳುತ್ತವೆ. ಇದು ಪೂರ್ವಾರ್ಧದ ಸಂಗತಿಯಾದರೆ ಉತ್ತರಾರ್ಧ ಸಂತುಲಿತದ್ರುತಾವರ್ತಗತಿಯನ್ನು ಉನ್ಮೀಲಿಸುವಂತಿದೆ. ಇಲ್ಲಿ ಬರುವ ಆರು ಮಾತ್ರೆಗಳ ಒಂದು ಪೂರ್ಣಘಟಕ ಮತ್ತು ಊನಗಣದಂತೆ ವರ್ತಿಸುವ ಒಂದು ರ-ಗಣ ಸೇರಿ ಇಂಥ ಗತಿಗೆ ಕಾರಣವಾಗಿವೆ. ಅಲ್ಲದೆ ಮಣಿಭೂಷಣವೃತ್ತದ ಹಾಗೆಯೇ ಇಲ್ಲಿ ಕೂಡ ಆರಂಭದ ಸಂತುಲಿತಮಧ್ಯಾವರ್ತಗತಿ ಮತ್ತು ಮಧ್ಯದ ಶುದ್ಧಮಧ್ಯಾವರ್ತಗತಿ ಇದರ ಗತಿವೈವಿಧ್ಯಕ್ಕೆ ಇಂಬಾಗಿದೆ. ಇಂತಿದ್ದರೂ ಸಾಹಿತ್ಯದಲ್ಲಿ ಮಂಗಳವೃತ್ತವನ್ನು ತೀರ ವಿರಳವಾಗಿ ನೋಡುತ್ತೇವೆ.
{ಖಚರಪ್ಲುತ, ಅನವದ್ಯ ಮತ್ತು ಉಜ್ಜ್ವಲ} ಸಂಸ್ಕೃತಕವಿಗಳು ಎಲ್ಲಿಯೂ ಬಳಸದ, ಕನ್ನಡಕವಿಗಳು ಆಗೀಗ ಪ್ರಯೋಗಿಸಿರುವ ವಿಶಿಷ್ಟ ವೃತ್ತಗಳು ‘ಖಚರಪ್ಲುತ’ ಮತ್ತು ‘ಅನವದ್ಯ’. ಇವೆರಡೂ ಲಯಾನ್ವಿತ ವೃತ್ತಗಳು. ಆದರೆ ಲಯನೈಯತ್ಯವು ಅಲ್ಲಲ್ಲಿ ಭಂಜಿತವಾದಂತೆ ತೋರುವ ಕಾರಣ ಇವನ್ನು ಲಯರಹಿತ ಎಂಬ ವರ್ಗದಲ್ಲಿ ಪರಿಗಣಿಸಬೇಕಿದೆ. ಇವೆರಡೂ ಯಮಳವೃತ್ತಗಳಂತಿವೆ. ಖಚರಪ್ಲುತದ ಮೊದಲ ಗುರುವನ್ನು ಎರಡು ಲಘುಗಳಾಗಿ ಸೀಳಿದರೆ ಅನವದ್ಯ ಸಿದ್ಧವಾಗುತ್ತದೆ. ಇವುಗಳ ಪ್ರಸ್ತಾರ ಹೀಗಿದೆ:
ಖಚರಪ್ಲುತ
[–] u – u u – u u – – – u u – u u – u –
ಅನವದ್ಯ
[u u] u – u u – u u – – – u u – u u – u –
ಎರಡೂ ಯತಿದುರ್ಬಲ ವೃತ್ತಗಳೇ. ಲಕ್ಷಣಕಾರರು ಯತಿಸ್ಥಾನವನ್ನು ಬೇರೆ ಬೇರೆ ಬಗೆಯಾಗಿ ನಿರ್ದೇಶಿಸಿದ್ದರೂ ಯಾವೊಂದು ನಿರ್ದೇಶನವೂ ಯುಕ್ತಿಯುಕ್ತವಾಗಿ ತೋರದು. ಧಾಟಿಗೆ ಅನುಗುಣವಾಗಿ ಪಠಿಸಿದರೆ ನಾಲ್ಕೂ ಪಾದಗಳ ನಡುವೆ ಬರುವ ಅವ್ಯವಹಿತವಾದ ಎರಡು ಗುರುಗಳ ಬಳಿಕ ಯತಿ ಉನ್ಮೀಲಿಸುವಂತೆ ತೋರುತ್ತದೆ. ಈ ವೃತ್ತಗಳ ಸಂಭಾವ್ಯ ಮಾತ್ರಾಗಣವಿಭಾಗಗಳನ್ನು ಪರಿಶೀಲಿಸೋಣ:
ಖಚರಪ್ಲುತ
– u | – u u | – u u | – – | – u u | – u u | – u –
೩ ೪ ೪ ೪ ೪ ೪ ೫
– u – | u u – | u u – | – – | u u – | u u – | u –
೫ ೪ ೪ ೪ ೪ ೪ ೩
ಅನವದ್ಯ
u u u | – u u | – u u | – – | – u u | – u u | – u –
೩ ೪ ೪ ೪ ೪ ೪ ೫
u u u – | u u – | u u – | – – | u u – | u u – | u –
೫ ೪ ೪ ೪ ೪ ೪ ೩
ಎರಡೂ ವೃತ್ತಗಳ ಎರಡು ಮಾದರಿಗಳೂ ಒಂದೇ ಬಗೆಯಾಗಿವೆ. ಹೀಗಾಗಿ ಇವುಗಳ ವಿವೇಚನೆ ಒಟ್ಟಿಗೆ ನಡೆಯಬಹುದು. ಇಲ್ಲಿಯ ಮೊದಲ ಮಾದರಿಯನ್ನು ನೋಡಿದಾಗ ಆರಂಭದಲ್ಲಿ ಮಿಶ್ರಲಯ (೩+೪) ಉನ್ಮೀಲಿಸಿದಂತೆ ಕಂಡರೂ ಬಳಿಕ ಬರುವ ನಾಲ್ಕು ಮಾತ್ರೆಗಳ ಗಣವು ಇದರ ಮುಂದುವರಿಕೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ಆದರೆ ಅನಂತರ ಅವ್ಯವಹಿತವಾಗಿ ಬರುವ ನಾಲ್ಕು ಮಾತ್ರೆಗಳ ಮೂರು ಗಣಗಳು ಚತುರ್ಮಾತ್ರಾಲಯದ ಮಧ್ಯಗತಿಯನ್ನು ದೃಢಪಡಿಸಿವೆ. ಕಡೆಗೆ ಬರುವ ಐದು ಮಾತ್ರೆಗಳ ಮಾನದ ರ-ಗಣ ವೃತ್ತದ ಗತಿಗೊಂದು ಒಳ್ಳೆಯ ಮುಗಿತಾಯವನ್ನು ನೀಡಿದೆ. ಹೀಗಾಗಿ ಈ ಮಾದರಿಯಲ್ಲಿ ಚತುರಶ್ರಲಯಪ್ರಧಾನವಾದ ಗತಿಯೇ ಇದೆ ಎಂದು ಹೇಳಬೇಕಾಗುತ್ತದೆ.
ಎರಡನೆಯ ಮಾದರಿಯಲ್ಲಿ ಆರಂಭದ ವಿಲೋಮಸಂಕೀರ್ಣಲಯವು (೫+೪) ಅನಂತರದ ಚತುರ್ಮಾತ್ರಾಗಣಗಳ ಮೂಲಕ ಭಂಜಿತವಾಗಿದ್ದು ಕಡೆಯಲ್ಲಿ ‘ಲ-ಗಂ’ ರೂಪದ ಮೂರು ಮಾತ್ರೆಗಳ ಮೂಲಕ ಮುಗಿತಾಯವನ್ನು ಕಂಡಿದೆ. ಇಲ್ಲಿಯೂ ಇರುವುದು ಚತುರಶ್ರಲಯಪ್ರಧಾನವಾದ ಗತಿಯೇ.
ಇಂತಿದ್ದರೂ ಈ ಎರಡು ಮಾದರಿಗಳ ಪೈಕಿ ಮೊದಲನೆಯ ಮಾದರಿಯೇ ಹೆಚ್ಚು ಶ್ರುತಿಹಿತವಾಗಿದೆ. ಈ ಮಾದರಿಯಲ್ಲಿ ಪ್ರತಿಪಾದದ ನಡುವೆ ತಲೆದೋರುವ ನಾಲ್ಕು ಮಾತ್ರೆಗಳ ಘಟಕಗಳು ಕ್ರಮವಾಗಿ ವಿಭಕ್ತವಾಗುವಾಗ ಯತಿಸ್ಥಾನದ ಮುನ್ನ ಬರುವ ಎರಡು ಗುರುಗಳ ನಡುವೆಯೇ ವಿಚ್ಛೇದ ಬಂದೊದಗುವುದೂ ಯತಿಸ್ಥಾನವು ಸುಲಲಿತವಾಗಿ ಪಾಲಿತವಾಗದೆ ಹೋಗುವುದೂ ಇದಕ್ಕೆ ಮುಖ್ಯಕಾರಣಗಳೆನ್ನಬೇಕು. ಅನವದ್ಯವೃತ್ತದ ಆರಂಭವನ್ನು ಗಮನಿಸಿದಾಗ ಅದು ಬಲುಮಟ್ಟಿಗೆ ದ್ರುತವಿಲಂಬಿತದ ಗುರು-ಲಘುವಿನ್ಯಾಸವೇ ಆಗಿರುವುದು ಸ್ಪಷ್ಟ. ಮಾತ್ರಾಮಾನದ ಮೂಲಕ ನೋಡಿದಾಗ ಖಚರಪ್ಲುತದ ಆರಂಭವೂ ಇದೇ ಎಂದು ತಿಳಿಯುತ್ತದೆ. ಯತಿಸ್ಥಾನಕ್ಕೆ ಮುನ್ನ ತಲೆದೋರುವ ಗುರುಯುಗ್ಮದ ಸ್ಥಾನದಲ್ಲಿ ಪಾದಾಂತ್ಯದ ರ-ಗಣವನ್ನು ಯೋಜಿಸಿದರೆ ಅಥವಾ ಈ ಗುರುಯುಗ್ಮದ ನಡುವೆ ಲಘುವೊಂದನ್ನು ಬೆಸೆದರೆ ಆಗ ಹಸನಾದ ದ್ರುತವಿಲಂಬಿತವೃತ್ತವೇ ಸೊಗಸಾಗಿ ಸಾಕ್ಷಾತ್ಕರಿಸುತ್ತದೆ. ಹಾಗಲ್ಲದೆ ಈ ಎರಡೂ ವೃತ್ತಗಳ ಪಾದಾಂತ್ಯದ ರ-ಗಣಕ್ಕೆ ಮುನ್ನ ಬರುವ ನಾಲ್ಕು ಮಾತ್ರೆಗಳ ಮಾನದ ಮೂರು ಗಣಗಳನ್ನು ಕಳೆದರೂ ಉಳಿದ ಭಾಗದಲ್ಲಿ ದ್ರುತವಿಲಂಬಿತದ ಗತಿ ಸಿದ್ಧವಾಗುತ್ತದೆ. ಹೀಗೆ ಖಚರಪ್ಲುತ ಮತ್ತು ಅನವದ್ಯ ವೃತ್ತಗಳು ದ್ರುತವಿಲಂಬಿತದಂಥ ಸುಂದರವಾದ ವೃತ್ತವನ್ನು ತಮ್ಮೊಳಗೆ ಬಲುಮಟ್ಟಿಗೆ ಗರ್ಭೀಕರಿಸಿಕೊಂಡಿರುವ ಕಾರಣ ಇವುಗಳ ಗತಿ ಸೊಗಯಿಸಿದೆ.
[1] ಕವಿರಾಜಮಾರ್ಗದ ಛಂದಸ್ಸುಗಳನ್ನು ಕುರಿತು ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು ಒಂದು ಉದ್ಬೋಧಕವಾದ ಲೇಖನವನ್ನು ಬರೆದಿದ್ದಾರೆ. ನೋಡಿ: ಶಾಸ್ತ್ರೀಯ (ಸಂ. ೨), ಪು. ೧೮೦-೮೭.
To be continued.