ರಥೋದ್ಧತಾ, ಸ್ವಾಗತಾ, ಮಂಜುಭಾಷಿಣಿ ಇತ್ಯಾದಿ
ಸಂಸ್ಕೃತಸಾಹಿತ್ಯದಲ್ಲಿ ಛಂದಃಪ್ರಯೋಗಗಳು ಬೆಳೆದ ರೀತಿಯನ್ನು ಗಮನಿಸಿದಾಗ - ನಿರಾಲಂಬವೂ ಧ್ಯಾನಶೀಲವೂ ಆದ ಬಗೆಯಿಂದ ಭಾಷೆಯ ಸಹಜಸುಂದರ ಪದಗತಿಯನ್ನು ಸ್ಮರಣೀಯವಾಗಿ ಅಭಿವ್ಯಂಜಿಸುವ ಲಯರಹಿತ ಗತಿಗಳ ಆರಾಧನೆ ಒಂದು ಕಡೆ, ಉಲ್ಲಸಿತವೂ ನರ್ತನಶೀಲವೂ ಆದ ಪರಿಯಿಂದ ಭಾಷೆಯ ನಡೆಯನ್ನು ಹೃದಯಂಗಮವಾಗಿ ತೆರೆದಿಡುವ ಲಯಾನ್ವಿತ ಗತಿಗಳ ಆಕರ್ಷಣೆ ಮತ್ತೊಂದು ಕಡೆ ನಿಂತು ವರಕವಿಗಳ ಪ್ರತಿಭಾಸಾಗರವನ್ನು ಮಥಿಸಿರುವಂತೆ ತೋರುತ್ತದೆ. ಈ ಎರಡು ತುದಿಗಳಲ್ಲಿಯೂ ತಮ್ಮವೇ ಆದ ಔಚಿತ್ಯ ಮತ್ತು ಅರ್ಥವಂತಿಕೆಗಳಿವೆ. ಇವೆರಡನ್ನೂ ಸಮಾನಾಂತರವಾಗಿ ಸಾಗಿಸಿಕೊಂಡು ಹೋಗುವ ಸಾಧ್ಯತೆ ಇರುವಂತೆಯೇ ಇವುಗಳ ಕಸಿ ಮಾಡಿ ತನ್ಮೂಲಕ ಉಭಯಗುಣಗಳ ಸ್ವಾರಸ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಹವಣೂ ಕಂಡುಬರುತ್ತದೆ.
ಈವರೆಗೆ ಕಂಡ ಶ್ಲೋಕ, ಉಪಜಾತಿ, ಕರಂಬಜಾತಿ ಮುಂತಾದುವು ಅನುಷ್ಟುಪ್, ತ್ರಿಷ್ಟುಪ್ ಮತ್ತು ಜಗತಿಗಳಂಥ ವೈದಿಕಬಂಧಗಳ ನೇರವಾದ ಮುನ್ನಡೆಗಳಾಗಿ ತೋರಿದರೆ ಇದೀಗ ಚರ್ಚಿಸಲಿರುವ ರಥೋದ್ಧತಾ, ಸ್ವಾಗತಾ, ಮಂಜುಭಾಷಿಣಿ ಮುಂತಾದುವು ‘ಲೌಕಿಕ’ ಹಾಡುಗಬ್ಬಗಳ ಸ್ಫೂರ್ತಿಯಿಂದ ಹುಟ್ಟಿದಂತೆ ಕಾಣುತ್ತವೆ. ಈ ಅಂಶವನ್ನು ಎಷ್ಟೋ ಮಂದಿ ವಿದ್ವಾಂಸರು ಗುರುತಿಸಿ ನಿರೂಪಿಸುವಾಗ ಇವೆರಡೂ ಬಗೆಯ ಬಂಧಗಳ ನಡುವೆ ತೀವ್ರವಾದ ಸೆಣಸಾಟವಿದ್ದಂತೆ, ಇವುಗಳನ್ನು ಪ್ರವರ್ತಿಸಿದ ವೈದಿಕ ಮತ್ತು ಲೌಕಿಕ ಸ್ತರಗಳಲ್ಲಿ ಈ ಸಂಘರ್ಷದ ಮೂಲ ಪ್ರಬಲವಾಗಿದ್ದಂತೆ ಅನುಮಿತಿಗಳನ್ನು ಮಾಡುವಲ್ಲಿ ಹೆಚ್ಚು ಉತ್ಸಾಹ ತೋರುತ್ತಾರೆ. ಪ್ರಾಯಶಃ ಇಂಥ ವರ್ತನೆಗೆ ಅಪವಾದವೇ ಇಲ್ಲವೆನ್ನಬಹುದು. ಇದು ಆರ್ಯ-ದ್ರಾವಿಡರ ವಿವಾದ, ಮಾರ್ಗ-ದೇಶಿಗಳ ತಿಕ್ಕಾಟ, ಸಂಸ್ಕೃತ-ಪ್ರಾಕೃತಗಳ ಸೆಣಸಾಟವೇ ಮೊದಲಾದ ರಾಜಕೀಯ, ಸಾಮಾಜಿಕ ಆಯಾಮಗಳನ್ನೂ ಅವಾಂಛಿತವಾಗಿ ಪಡೆಯುವುದು ದೃಷ್ಟಚರ.
ಇದೆಲ್ಲ ಸತ್ಯವೇ ಆದಲ್ಲಿ ಒಪ್ಪಲು ಯಾವುದೇ ಹಿಂಜರಿಕೆ ಬೇಕಿಲ್ಲ; ಕಸಿವಿಸಿಯೂ ಬೇಕಿಲ್ಲ. ಆದರೆ ಸಂದರ್ಭ ಇಷ್ಟು ಸರಳವಲ್ಲ. ಸ್ವಸ್ಥವಾದ ಸಮಾಜದಲ್ಲಿ ಯಾವೊಂದು ತತ್ತ್ವವೂ ಒಂದೆಡೆ ಕೇಂದ್ರೀಕೃತವಾಗಿ ಮತ್ತೊಂದು ತತ್ತ್ವಕ್ಕೆ ಆಗರ್ಭಶತ್ರುವೆಂಬಂತೆ ನಿಲ್ಲುವುದಿಲ್ಲ. ಸಾಹಿತ್ಯದಂಥ ಪ್ರಬುದ್ಧಕಲೆಯ ವಿಷಯದಲ್ಲಿ ಇದು ಮತ್ತೂ ಸತ್ಯ. ನಾವು ಈ ಮುನ್ನ ಹೇಳಿದ ಸಿದ್ಧಾಂತಾಭಾಸವನ್ನು ಒಪ್ಪಿದರೆ ವೈದಿಕಸಾಹಿತ್ಯ ಉಲ್ಲಾಸರಹಿತವೆಂದೂ ಗೀತ-ನೃತ್ಯಗಳಂಥ ಲಯಬದ್ಧ ಕಲೆಗಳಿಗೆ ವಿಮುಖವೆಂದೂ ಭಾವಿಸಬೇಕಾಗುತ್ತದೆ. ಅಂತೆಯೇ ಲೌಕಿಕವಾಙ್ಮಯ ಗಾಂಭೀರ್ಯವಿಮುಖವೆಂದೂ ಧ್ಯಾನಶೀಲತೆಗೆ ವಿರುದ್ಧವೆಂದೂ ಹೇಳಬೇಕಾಗುತ್ತದೆ. ಆದರೆ ವಾಸ್ತವ ಹೀಗಿಲ್ಲ.
ವೇದವಾಙ್ಮಯವನ್ನು ಚೆನ್ನಾಗಿ ಪರಿಶೀಲಿಸಿದವರಿಗೆ ಅಲ್ಲಿಯ ಜೀವನೋಲ್ಲಾಸ ಎಷ್ಟು ನಿರ್ಭರವಾದುದೆಂದು ತಿಳಿಯದಿರದು. ವೇದಗಳು ಪ್ರತಿಪಾದಿಸುವ ಯಜ್ಞಗಳಲ್ಲಿ ಹಾಡು-ಕುಣಿತಗಳ ಲಯಾನ್ವಿತತೆ ಎಷ್ಟು ಸಮೃದ್ಧ ಮತ್ತು ಮುಖ್ಯ ಎಂಬುದು ಕೂಡ ಅಭಿಜ್ಞರಿಗೆ ಸುವೇದ್ಯ. ಇನ್ನು ಉಪನಿಷತ್ತುಗಳ ಆತ್ಮಾರಾಮತೆಯ ಸ್ಥಿತಿಯನ್ನು ಕಂಡಾಗಲೂ ಈ ಸತ್ಯ ಅಕ್ಷತವಾಗಿ ಉಳಿದಿದೆಯೆಂದು ಸ್ಪಷ್ಟವಾಗುತ್ತದೆ. ಬ್ರಹ್ಮವಸ್ತುವೇ ಹಾಯಾಗಿ ಹಾಡಿಕೊಂಡಿರುವ ಸಂಗತಿ ಅಲ್ಲಿ ವಿವೃತವಾಗಿದೆ: “ಏತತ್ ಸಾಮ ಗಾಯನ್ನಾಸ್ತೇ ಹಾ(೩) ವು ಹಾ(೩) ವು ಹಾ(೩) ವು ||” (ತೈತ್ತಿರೀಯೋಪನಿಷತ್ತು, ೩.೧೦). ಇದೇ ರೀತಿ ಬುದ್ಧ-ಮಹಾವೀರರಂಥ ಮಹಾತ್ಮರು ಲೋಕದ ಸಾಮಾನ್ಯಜನರಿಗಾಗಿಯೇ ಸಾರಿದ ಮಹೋಪದೇಶಗಳ ಧ್ಯಾನಶೀಲತೆ ಸುಪ್ರಸಿದ್ಧ: “ಸಬ್ಬೇಸು ಭೂತೇಸು ನಿಧಾಯ ದಂಡಂ ಅವಿಹೇಠಯಂ ಅಞ್ಞತರಂಪಿ ತೇಸಂ | ನ ಪುತ್ತಮಿಚ್ಛೇಯ್ಯ ಕುತೋ ಸಹಾಯಂ ಏಕೋ ಚರೇ ಖಗ್ಗವಿಸಾಣಕಪ್ಪೋ ||” (ಸುತ್ತನಿಪಾತ ೧.೩.೧).
ಇದನ್ನೆಲ್ಲ ನಿರಾಗ್ರಹಬುದ್ಧಿಯಿಂದ ಪರಿಶೀಲಿಸಿದಾಗ ಪ್ರವೃತ್ತಿ-ನಿವೃತ್ತಿಗಳೆಂಬ ಮಾನವನ ಮೂಲಸ್ವಭಾವಗಳೇ ಇಂಥ ಬಗೆಬಗೆಯ ಅಭಿವ್ಯಕ್ತಿಗಳಿಗೆ ಮೂಲವೆಂದು ತೋರುತ್ತದೆ. ಈ ಕಾರಣದಿಂದಲೇ ಸಾಹಿತ್ಯವೂ ಸೇರಿದಂತೆ ಕಲೆ, ಶಾಸ್ತ್ರ, ಸಮಾಜ, ರಾಜಕೀಯ, ಆರ್ಥಿಕತೆ ಮುಂತಾದ ಜೀವನದ ಎಲ್ಲ ಮುಖಗಳನ್ನೂ ನಾವು ದಾರ್ಶನಿಕ ದೃಷ್ಟಿಯಿಂದ ಸಮಗ್ರವಾಗಿ ಕಾಣಬೇಕೆಂಬ ಎಚ್ಚರ ಉಂಟಾಗುತ್ತದೆ. ಹಾಗೆ ನೋಡಿದಾಗ ಲಯರಹಿತ ವೃತ್ತಗಳಲ್ಲಿ ನಿವೃತ್ತಿಯ ಪಾರಮ್ಯವೂ ಲಯಾನ್ವಿತ ಬಂಧಗಳಲ್ಲಿ ಪ್ರವೃತ್ತಿಯ ಪಾರಮ್ಯವೂ ಗೋಚರಿಸುತ್ತದೆ. ಇವೆರಡೂ ಮಾನವನಿಗೆ ಬೇಡವಾದ ಮುಖಗಳಲ್ಲ; ಪರಕೀಯವಾದ ಮುಖಗಳೂ ಅಲ್ಲ. ಒಂದು ಮತ್ತೊಂದಕ್ಕೆ ಪೋಷಕ, ಪೂರಕ. ಇವುಗಳ ನಡುವಣ ಹದ ಏನೆಂಬುದನ್ನು ವಿವೇಕದಿಂದ ಕಂಡುಕೊಳ್ಳಬೇಕು. ಪ್ರವೃತ್ತಿಯ ಸಾರ್ಥಕ್ಯವಿರುವುದು ನಾವು ನಿವೃತ್ತಿಗೆ ಸಂತೋಷದಿಂದ ಅಣಿಯಾಗುವುದರಲ್ಲಿ. ನಿವೃತ್ತಿಯ ಪರಮಾರ್ಥವಿರುವುದು ನಾವು ಪ್ರವೃತ್ತಿಯನ್ನು ಅಂಟಿಲ್ಲದೆ ನಿರ್ವಹಿಸುವುದರಲ್ಲಿ. ಇದನ್ನು ಭಗವದ್ಗೀತೆಯ ಕರ್ಮಯೋಗದಲ್ಲಿ ಕಾಣಬಹುದು. ಅದು ಪ್ರತಿಪಾದಿಸುವ ಜ್ಞಾನನಿಷ್ಠೆಯ ನಿಲವೂ ಇದೇ: “ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ | ಸ ಬುದ್ಧಿಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮವಿತ್ ||” (೪.೧೮)
ಈ ತಿಳಿಬೆಳಕಿನಲ್ಲಿ ವೈದಿಕ-ಲೌಕಿಕಗಳ, ಮಾರ್ಗ-ದೇಶಿಗಳ ಮತ್ತು ಲಯರಹಿತತೆ-ಲಯಾನ್ವಿತತೆಗಳ ಸಮನ್ವಯವನ್ನು ಕಾಣಬೇಕು. ಇಂಥ ಪರಿಪಾಕವನ್ನು ವೈದಿಕಚ್ಛಂದಸ್ಸುಗಳು ಲೌಕಿಕವೃತ್ತಗಳಾಗುತ್ತಿರುವ ಹಂತದಲ್ಲಿ ಗಮನಿಸುತ್ತೇವೆ. ಗದ್ಯದ ಅನಿಯತತೆಯತ್ತಲೂ ಜಾರದ, ಗೀತದ ಏಕತಾನತೆಗೂ ಸೋಲದ ಸುವರ್ಣಮಧ್ಯಮದ ಹದವನ್ನು ನಾವಿಲ್ಲಿ ನೋಡಬಹುದು. ಇದೊಂದು ಬಿಂದುವಲ್ಲ; ಗೆರೆಯೂ ಅಲ್ಲ; ಸಾಕಷ್ಟು ವಿಸ್ತೃತವಾದ ಪಟ್ಟಿಕೆ. ಈ ಪಟ್ಟಿಕೆಯಲ್ಲಿ ಇಂದ್ರವಜ್ರಾ-ಉಪೇಂದ್ರವಜ್ರಾವೃತ್ತಗಳ ವಿಲೋಮಸಂಕೀರ್ಣಗತಿಯ ಛಾಯೆಗಳಿಗೆ ಅವಕಾಶ ಇರುವಂತೆಯೇ ರಥೋದ್ಧತಾ-ಸ್ವಾಗತಾವೃತ್ತಗಳ ಸಂತುಲಿತಮಧ್ಯಾವರ್ತಗತಿಯ ಸಂಪೂರ್ಣ ಪ್ರಕಟನೆಗೂ ಅವಕಾಶವುಂಟು. ಇಲ್ಲಿ ಅಪ್ಪಟ ಅಕ್ಷರಜಾತಿಯಾದ ಶ್ಲೋಕದ ಘೋಷದಂತೆಯೇ ಮಲ್ಲಿಕಾಮಾಲೆಯ ವಿಶುದ್ಧ ಮಿಶ್ರಲಯಕ್ಕೂ ಎಡೆಯುಂಟು.
{ರಥೋದ್ಧತಾ} ಸೇಡಿಯಾಪು ಕೃಷ್ಣ ಭಟ್ಟರು ಮಾತ್ರಾಜಾತಿಗಳ ಚತುಷ್ಕಲ ಗಣಗಳ ನಡೆಯನ್ನು ನಿರೂಪಿಸುತ್ತ - ಅಲ್ಲಿ ಕಾಣುವ ‘ಸಂಕಲಿತಮಧ್ಯಾವರ್ತ’[1] ಎಂಬ ಗತಿಪ್ರಭೇದವನ್ನು ವಿವರಿಸುವಾಗ - ರಥೋದ್ಧತಾವೃತ್ತದ ಒಳ-ಹೊರಗನ್ನು ಚೆನ್ನಾಗಿ ತೆರೆದಿರಿಸಿದ್ದಾರೆ.[2] ಲಯಾನ್ವಿತವಾದ ಸಂತುಲಿತಮಧ್ಯಾವರ್ತಗತಿಯು ಗುರು-ಲಘುಸ್ಥಿರವಾದ ವೃತ್ತವಾಗಿ ಹರಳುಗಟ್ಟುವಾಗ ಅದು ಆಯ್ದುಕೊಂಡ ಅತ್ಯಂತ ಆಕರ್ಷಕವೂ ಸುಸ್ಥಿರವೂ ಆದ ವಿನ್ಯಾಸವನ್ನು ರಥೋದ್ಧತಾವೃತ್ತದಲ್ಲಿ ಕಾಣಬಹುದು. ಅದರ ಪ್ರಸ್ತಾರ ಮತ್ತು ಒಂದೆರಡು ಉದಾಹರಣೆಗಳು ಹೀಗಿವೆ:
– u – u u u – u – u –
(೩+೫) – u | – u u u | – u | – u –
(೫+೩) – u – | u u u | – u – | u –
ಮುನ್ನಮಿನ್ನೆವರೆಗಂ ಜಡತ್ವದಿಂ-
ದೆನ್ನ ಕರ್ಮವಶದಿಂದಮಿರ್ದೆನಿ-
ನ್ನೆನ್ನನಾನಱಿದು ರಾಜ್ಯಮೋಹದೊಂ-
ದುನ್ನತಿಕ್ಕೆವೆರಸಿರ್ಪುದೊಪ್ಪವೇ || (ಧರ್ಮಾಮೃತ, ೮.೮೭)
ದಾನಶೂರನಪವಾದಭೀರು ವಿ-
ಜ್ಞಾನಮೂರ್ತಿ ಭುವನೈಕವತ್ಸಲಂ |
ಮಾನನೀಯಗುಣನೆಂಬ ಪೆಂಪಿನು-
ದ್ದಾನಿಯಂ ತಳೆದ ದುರ್ಗನನ್ನರಾರ್ || (ಕರ್ಣಾಟಕಪಂಚತಂತ್ರ, ೪೩೯)
ರಥೋದ್ಧತಾ ಒಂದು ಸಾಲಿಗೆ ಹನ್ನೊಂದು ಅಕ್ಷರಗಳನ್ನುಳ್ಳ ಸಮವೃತ್ತ. ಇದು ಸಂತುಲಿತಮಧ್ಯಾವರ್ತಗತಿಯಲ್ಲಿ ಸಾಗುವುದು ಸುವೇದ್ಯ. ಇಲ್ಲಿ ಎಲ್ಲಿಯೂ ಎರಡು ಗುರುಗಳು ಒಟ್ಟಾಗಿ ಬಾರದಿರುವುದೂ ಒಂದೆಡೆಯುಳಿದು ಮತ್ತೆಲ್ಲಿಯೂ ಎರಡು ಲಘುಗಳು ಕೂಡ ಅವ್ಯವಹಿತವಾಗಿ ತೋರದಿರುವುದೂ ಪ್ರಸ್ತಾರದಿಂದ ಸ್ಪಷ್ಟವಾಗುತ್ತದೆ. ಈ ಕಾರಣದಿಂದ ಅದು ಪ್ರತಿಯೊಂದು ಪಾದದಲ್ಲಿಯೂ ಮೂರು-ಐದು ಮಾತ್ರೆಗಳ ಲಯವನ್ನಲ್ಲದೆ ಐದು-ಮೂರು ಮಾತ್ರೆಗಳ ಲಯವನ್ನೂ ಶ್ರುತಿಮಧುರವಾಗಿ ಉನ್ಮೀಲಿಸುತ್ತಿದೆ. ಇದು ಧಾಟಿಯ ವೈವಿಧ್ಯಕ್ಕೆ ಪೋಷಣೆ ನೀಡಿದೆ; ಸಂಸ್ಕೃತ ಮತ್ತು ಹಳಗನ್ನಡಗಳಂಥ ಗುರುಪ್ರಚುರ ಭಾಷೆಗಳ ಪದಗತಿಗೆ ಅನುಕೂಲವೂ ಆಗಿದೆ.
ಪಾದದ ಆದ್ಯಂತಗಳಲ್ಲಿ ಬರುವ ರ-ಗಣಗಳು ಬಂಧಕ್ಕೊಂದು ಸಮತೆಯನ್ನಿತ್ತರೆ ಇವೆರಡರ ನಡುವೆ ತೋರಿಕೊಳ್ಳುವ ಮೂರು ಲಘುಗಳ ಒಂದು ಘಟಕ, ಒಂದು ಗುರು ಮತ್ತೊಂದು ಲಘುವಿನ ಇನ್ನೊಂದು ಘಟಕ ಮೂರು ಮಾತ್ರೆಗಳ ಎರಡು ಸಾಧ್ಯತೆಗಳನ್ನು ತೆರೆದಿಟ್ಟಿವೆ. ಇವೆರಡರಲ್ಲಿ ಎಲ್ಲಿಯೂ ಲ-ಗಂ ವಿನ್ಯಾಸವಿಲ್ಲದ ಕಾರಣ ಸಂತುಲಿತಮಧ್ಯಾವರ್ತಗತಿಗೆ ಸಹಜವಾದ ತ್ವರಿತತೆಗೆ ಮತ್ತಷ್ಟು ಪುಟವೀಯುವ ಪ್ಲುತಿ ಕಾಣಿಸಿಕೊಳ್ಳದೆ ಒಟ್ಟಂದದ ಛಂದೋಧಾಟಿ ಹಿತ-ಮಿತವಾದ ತರಂಗಿತತೆಯನ್ನು ಮೈಗೂಡಿಸಿಕೊಂಡಿದೆ.[3] ಹೀಗೆ ಲಯಾನ್ವಿತ ಮತ್ತು ಲಯರಹಿತ ಬಂಧಗಳ ಹಲಕೆಲವು ಗುಣವಿಶೇಷಗಳನ್ನು ತನ್ನಲ್ಲಿ ಅಳವಡಿಸಿಕೊಂಡಂತೆ ಕಾಣುವ ರಥೋದ್ಧತಾ ಉಲ್ಲಾಸಪೂರ್ಣವಾದ ಕಥನಕ್ಕೆ ಒದಗಿಬಂದಿರುವುದರಲ್ಲಿ ಅಚ್ಚರಿಯಿಲ್ಲ.
ರಥೋದ್ಧತಾವೃತ್ತದ ಜೀವಾಳವಾದ ಸಂತುಲಿತಮಧ್ಯಾವರ್ತಗತಿಯು ಎಂಟೆಂಟು ಮಾತ್ರೆಗಳ ಘಟಕಗಳಾಗಿ ಒಡೆದುಕೊಳ್ಳುವ ಮೂಲಕ ಆಯಾ ಘಟಕಗಳ ಕೊನೆಯ ಅಕ್ಷರವನ್ನು ಗುರುವಾಗಿಸಿಕೊಂಡು ಯತಿಸ್ಥಾನಕ್ಕೆ ಪುಷ್ಟಿ ನೀಡುತ್ತದೆ. ನಾವೆಲ್ಲ ಬಲ್ಲಂತೆ ಲಯಾನ್ವಿತ ಬಂಧಗಳಲ್ಲಿ ಪುನರಾವೃತ್ತವಾಗುವ ಗಣಗಳ ಮುಗಿತಾಯವೇ ಯತಿಸ್ಥಾನ. ಇದಕ್ಕೆ ಸದ್ಯದ ಗತಿಯೂ ಹೊರತಲ್ಲ. ಆದರೆ ರಥೋದ್ಧತಾವೃತ್ತದ ಪ್ರಸ್ತಾರದಲ್ಲಿ ಈ ಸ್ಥಾನ ಲಘುವಾಗಿ ಪರಿಣಮಿಸಿದೆ:
– u – u u u | – u – u –
ಈ ಕಾರಣದಿಂದ ಇಲ್ಲಿಯ ಯತಿಸ್ಥಾನ ಎದ್ದುಕಾಣದೆ ದ್ರವೀಯವಾಗಿದೆ. ಇದು ಛಂದೋಗತಿಯ ಲಯಾನ್ವಿತತೆಯ ಉಲ್ಬಣತೆಯನ್ನು ತಡೆಯುವುದರಲ್ಲಿ ಗಣನೀಯ ಪಾತ್ರ ವಹಿಸಿದೆ. ಮಾತ್ರವಲ್ಲ, ಹತ್ತಿರದಲ್ಲಿರುವ ಗುರುಗಳ ಬಳಿಕ ಯತಿಕಲ್ಪವಾದ ವಿರಾಮಗಳು ಬರುವಂತೆ ಮಾಡಿದೆ. ಇಂಥ ವ್ಯತ್ಯಾಸಗಳು ಗತಿಭಂಗವನ್ನು ತಾರದೆ ಹೃದ್ಯವಾದ ವೈವಿಧ್ಯವನ್ನು ಒದಗಿಸುತ್ತಿರುವುದು ಮಹಾಕವಿಗಳ ಪ್ರಯೋಗಗಳಿಂದ ಸುವೇದ್ಯ:
ಚಂದನೇ ವಿಷಧರಾನ್ ಸಹಾಮಹೇ
ವಸ್ತು ಸುಂದರಮಗುಪ್ತಿಮತ್ ಕುತಃ |
ರಕ್ಷಿತುಂ ವದ ಕಿಮಾತ್ಮಗೌರವಂ
ಕಂಟಕಾಃ ಖದಿರ ಸಂಚಿತಾಸ್ತ್ವಯಾ || (ಭಲ್ಲಟಶತಕ, ೩೨)
ಮಾರ ಮಾ ವಾಸ ಮದೀಯಮಾನಸೇ
ಮಾಧವೈಕನಿಲಯೇ ಯದೃಚ್ಛಯಾ |
ಹೇ ರಮಾರಮಣ ವಾರ್ಯತಾಮಸೌ
ಕಃ ಸಹೇತ ನಿಜವೇಶ್ಮಲಂಘನಮ್ || (ಶ್ರೀಕೃಷ್ಣಕರ್ಣಾಮೃತ, ೩.೮೮)
ಸರ್ವತಸ್ತ್ವದಭಿಷೇಕವಾಸರೇ
ಸಮ್ಯಗುದ್ಧೃತಸಮಸ್ತಕಂಟಕೇ |
ರಾಘವಸ್ಯ ವಿಪಿನೇಷು ಪಾದುಕೇ
ಯತ್ರ ಕಾಮಗಮತಾ ವ್ಯವಸ್ಥಿತಾ || (ಪಾದುಕಾಸಹಸ್ರ, ೨೧೫)
ತನ್ನ ಚಿತ್ರಮವನೀಪತೇಸ್ತತ-
ಶ್ಚಂದ್ರಹಾಸಪತನಂ ಚಕಾರ ಯತ್ |
ಪೋಷಿತೇಷು ವನಮಧ್ಯಚರ್ಯಯಾ
ಪುಂಡರೀಕನಿವಹೇಷು ಮೀಲನಮ್ || (ಚಂಪೂಭಾರತ, ೧.೨೪)
ಹೀಗೆ ಅಪ್ಪಟ ಲಯಾನ್ವಿತವಾದ ವೃತ್ತವು ಲಯರಹಿತವೃತ್ತಕಲ್ಪ ಎನಿಸುವುದೊಂದು ಹಿರಿದಾದ ಛಂದಃಸ್ವಾರಸ್ಯ. ಈ ಎಲ್ಲ ಕಾರಣಗಳಿಂದ ರಥೋದ್ಧತಾ ಸುಕವಿಗಳಿಗೆ ಪ್ರಿಯವಾಗಿದೆ; ಸತ್ಕಾವ್ಯಗಳಿಗೆ ಅನಿವಾರ್ಯವಾಗಿದೆ.
[1] ನಾಲ್ಕು ಮಾತ್ರೆಗಳ ಎರಡೆರಡು ಗಣಗಳು ಬೆಸೆದುಕೊಳ್ಳುವಾಗ ಅವು ಆಗೊಮ್ಮೆ ಈಗೊಮ್ಮೆ ೩+೫ ಅಥವಾ ೫+೩ ಎಂಬಂತೆ ಒಡೆದುಕೊಳ್ಳುವುದನ್ನು ಕಾಣಬಹುದು. ಈ ಕಾರಣದಿಂದಲೇ ಸೇಡಿಯಾಪು ಅವರು ಇದು ‘ಸಂಕಲಿತಮಧ್ಯಾವರ್ತಗತಿ’ ಎಂದಿದ್ದಾರೆ. ಮೂರು ಮಾತ್ರೆಗಳ ದ್ರುತಗತಿಯ ಗಣವೂ ಐದು ಮಾತ್ರೆಗಳ ವಿಲಂಬಿತಗತಿಯ ಗಣವೂ ನಾಲ್ಕು ಮಾತ್ರೆಗಳ ಮಧ್ಯಗತಿಯ ಗಣಗಳ ಮೂಲಕ ಉನ್ಮೀಲಿಸುವ ಕಾರಣ ಈ ಗತಿಯನ್ನು ‘ಸಂಕಲಿತ’ ಮತ್ತು ‘ಮಧ್ಯಾವರ್ತ’ ಎಂಬ ಎರಡು ಪರಿಭಾಷೆಗಳನ್ನು ಬೆಸೆದು ಹೆಸರಿಸಲಾಗಿದೆ. ನಾಲ್ಕು ಮಾತ್ರೆಗಳ ಎರಡು ಗಣಗಳು ಮೂರು-ಐದು ಅಥವಾ ಐದು-ಮೂರು ಮಾತ್ರೆಗಳ ಗಣಗಳಾಗಿ ಒಡೆದುಕೊಳ್ಳಬೇಕಾದರೆ ಆ ಎಂಟು ಮಾತ್ರೆಗಳ ಛಂದಃಖಂಡದ ನಾಲ್ಕನೆಯ ಮತ್ತು ಐದನೆಯ ಮಾತ್ರೆಗಳ ಸ್ಥಾನವನ್ನು ಒಂದು ಗುರು ಮಾತ್ರ ಪ್ರತಿನಿಧಿಸಬೇಕಾಗುತ್ತದೆ. ಇಲ್ಲವಾದರೆ ಅವು ಮತ್ತೆ ನಾಲ್ಕು ಮಾತ್ರೆಗಳ ಎರಡು ಗಣಗಳೇ ಆಗುತ್ತವೆ. ಹೀಗಾಗಿ ಎಂಟು ಮಾತ್ರೆಗಳ ಆ ಛಂದಃಖಂಡದಲ್ಲಿ ಮೂರು-ಮೂರು ಮಾತ್ರೆಗಳ ಎರಡು ಘಟಕಗಳ ನಡುವೆ ಒಂದು ಗುರು ಬಂದು ಇರ್ಕೆಲಗಳನ್ನು ಸಮನಾಗಿ ತೂಗಿಸುವ ಸಂದರ್ಭ ಒದಗುತ್ತದೆ. ಇಂಥ ಗತಿಗೆ ಕೀಲಕವಾದ ಆ ಗುರುವನ್ನು ಗಮನಿಸಿ ನಾನು ಪ್ರಸ್ತುತ ಧಾಟಿಯನ್ನು ‘ಸಂತುಲಿತಮಧ್ಯಾವರ್ತ’ ಎಂದು ಹೆಸರಿಸಿದ್ದೇನೆ. ಸೇಡಿಯಾಪು ಅವರು ಹೆಸರಿಸುವ ‘ಸಂಕಲಿತದ್ರುತಾವರ್ತಗತಿ’ ಎಂಬ ಎರಡು-ನಾಲ್ಕು ಅಥವಾ ನಾಲ್ಕು-ಎರಡು ಮಾತ್ರೆಗಳ ಧಾಟಿ ಕೂಡ ಈ ಕಾರಣದಿಂದಲೇ ‘ಸಂತುಲಿತದ್ರುತಾವರ್ತಗತಿ’ ಎಂಬ ಅಭಿಧಾನವನ್ನು ಹೊಂದಿದೆ. ‘ಸಂಕಲನ’ ಎಂಬ ಶಬ್ದಕ್ಕಿಂತ ‘ಸಂತುಲನ’ ಎಂಬುದು ಈ ಬಗೆಯ ವಿಶಿಷ್ಟ ಗತಿಗಳಿಗೆ ಮೂಲವಾದ ಗುರುವಿನ ನಿರ್ಣಾಯಕ ಪಾತ್ರವನ್ನು ಧ್ವನಿಸುವುದೆಂದು ನನ್ನ ಅನಿಸಿಕೆ. ಇಲ್ಲವಾದರೆ ಸಂಕಲನಶಬ್ದಕ್ಕೂ ಮಿಶ್ರಶಬ್ದಕ್ಕೂ ಅಂಥ ದೊಡ್ಡ ವ್ಯತ್ಯಾಸವಿಲ್ಲದೆ ಮೂರು-ನಾಲ್ಕು ಮಾತ್ರೆಗಳ ಮಿಶ್ರಗತಿಗಿಂತ ಸದ್ಯದ ಗತಿಗಳು ತಾತ್ತ್ವಿಕವಾಗಿ ವಿಭಿನ್ನವೆಂಬ ಛಂದಃಸೂಕ್ಷ್ಮ ಮಸಕಾಗುತ್ತದೆ.
[2] ಸೇಡಿಯಾಪು ಛಂದಃಸAಪುಟ, ಪು. ೧೪೦-೪೫
[3] ಸಂತುಲಿತಮಧ್ಯಾವರ್ತಗತಿಯಲ್ಲಿ ತಲೆದೋರಬಹುದಾದ ಪ್ಲುತಿಯ ಉದಾಹರಣೆ ಹೀಗಿದೆ:
ಚಿತ್ರಮಂದಿರಗಳಗ್ರಭಾಗದಲಿ ಸರದಿ ಸಾಲು ನಿಂತು
ಕಟೌಟ್ ಕಾಂತೆಯರ ಸಿಟೌಟ್ ಶಾಂತೆಯರ ನಟತ್ಕಟಿಯನೆಂತು | (ಧೂಮದೂತ, ಪು. ೨೫)
ಇಲ್ಲಿ ಮೊದಲ ಸಾಲು ಪ್ಲುತಿಯಿಲ್ಲದೆ ಸಾಗಿರುವುದನ್ನೂ ಅದಕ್ಕೆ ವೈಸಾದೃಶ್ಯ ತರುವಂತೆ ಎರಡನೆಯ ಸಾಲು ಎಂಟು ಮಾತ್ರೆಗಳ ಪ್ರತಿಯೊಂದು ಗಣದ ಮೊದಲಿಗೂ ಪ್ಲುತಿಯನ್ನು ಹೊಂದಿರುವುದನ್ನೂ ಗಮನಿಸಬಹುದು. ಪ್ರಸ್ತುತ ಉದಾಹರಣೆಯಲ್ಲಿ ಹೃದ್ಯವಾಗಿರುವ ಇಂಥ ಪ್ಲುತಿ ವಿಶಿಷ್ಟ ಸಂದರ್ಭಗಳಲ್ಲಿ ವ್ಯಂಜಕವಾಗಿ ಪರಿಣಮಿಸಬಹುದಾದರೂ ಪ್ರಸಾದರಮ್ಯವಾದ ಕಥನದ ವಿಸ್ತರದಲ್ಲಿ ವೆಗಟಾದೀತು. ಇಂಥ ವೈಪರೀತ್ಯದಿಂದ ರಥೋದ್ಧತಾ ಪಾರಾಗಿದೆ.
To be continued.