ನನ್ನ ಹೆಚ್ಚಿನ ಮಾತೆಲ್ಲ ಸಹಜವಾಗಿ ಅವಧಾನ, ಅವಧಾನಿ ಮತ್ತು ಅವಧಾನಕವಿತೆಗಳ ಸುತ್ತಲೇ ಸುಳಿಸುತ್ತುತ್ತಿತ್ತು. ಪ್ರಾಯಶಃ ಇದರಿಂದ ಅವರಿಗೆ ನನ್ನ ಉತ್ಕಟಾಸಕ್ತಿಯ ಅರಿವಾಗಿ ಉಲ್ಲಾಸದಿಂದ ತಮ್ಮ ಅನುಭವಗಳನ್ನೂ ವ್ಯಾಸಂಗದ ಸಂಗತಿಗಳನ್ನೂ ಹೇಳತೊಡಗಿದರು. ಮಾತ್ರವಲ್ಲ, ತಿರುಪತಿ ವೇಂಕಟಕವಿಗಳು, ಗಾಡೇಪಲ್ಲಿ ವೀರರಾಘವಶಾಸ್ತ್ರಿ, ಗೌರಿಪೆದ್ದಿ ರಾಮಸುಬ್ಬಶರ್ಮಾ, ನರಾಲ ರಾಮಿರೆಡ್ಡಿ ಮುಂತಾದ ಅವಧಾನಿಗಳ ಪ್ರಸ್ತಾವಕ್ಕೆ ತೊಡಗಿದರು. ನನಗೆ ಇವರ ಪೈಕಿ ಕೆಲವರನ್ನುಳಿದರೆ ಮಿಕ್ಕವರ ವಿವರಗಳು ಸ್ವಲ್ಪವೂ ತಿಳಿದಿರಲಿಲ್ಲ. ಅಗ ತಮ್ಮಲ್ಲಿರುವ ಕೆಲವೊಂದು ಪುಸ್ತಿಕೆಗಳನ್ನು ತೆಗೆದು ಅಲ್ಲಿಯ ಸಮಸ್ಯಾಪೂರಣ ಮತ್ತು ದತ್ತಪದಿಗಳಂಥ ಅಂಶಗಳನ್ನು ಓದಿ ಹೇಳತೊಡಗಿದರು. ಈ ಮಧ್ಯೆ ನನ್ನ ಹಲಕೆಲವು ಪದ್ಯಗಳನ್ನೂ ಕೇಳಿ ತಿಳಿದುಕೊಂಡದ್ದಲ್ಲದೆ ತಾವೇ ಕೆಲವು ವಸ್ತುಗಳನ್ನೂ ಸಮಸ್ಯೆಗಳನ್ನೂ ನೀಡಿ ಆಶುಪರಿಹಾರವನ್ನು ಕೋರಿದರು. ನಾನೂ ಸಹ ಹುಮ್ಮಸ್ಸಿನಿಂದ ಮುನ್ನುಗ್ಗಿದೆ. ಹೀಗೆ ಸುಮಾರು ಒಂದು-ಒಂದೂವರೆ ಘಂಟೆಗಳ ಮಾತಿನ ಬಳಿಕ ಅವರು ಪ್ರಭಾಕರ್ ಅವರೊಡನೆ ಮಾತಾಡುತ್ತ ಅವರ ಕುಟುಂಬಿನಿ ತಂದಿತ್ತ ಕಾಫಿ-ತಿಂಡಿಗಳ ತಟ್ಟೆಗಳನ್ನು ನಮ್ಮ ಕೈಗಿತ್ತರು.
ಕೈ-ಬಾಯಿಗಳ ಕೆಲಸ ಸಾಗುವಾಗಲೂ ನಾನು ಮಾತನ್ನು ನಿಲ್ಲಿಸಲಿಲ್ಲ. ಅಷ್ಟು ಹೊತ್ತಿಗೆ ಅವಧಾನದಿಂದ ಕವಿತ್ವದತ್ತ ಸಂಭಾಷಣೆ ತಿರುಗಿತ್ತು. ತೆಲುಗು-ಸಂಸ್ಕೃತಗಳಲ್ಲಿ ಅವರಿಗೆ ಅಭಿಮಾನಾಸ್ಪದರಾದ ಲೇಖಕರು ಯಾರೆಂದು ಪ್ರಶ್ನೆ ಮಾಡಿದಾಗ ವಾಲ್ಮೀಕಿ ಮತ್ತು ಕಾಳಿದಾಸರನ್ನು ಮೊದಲಿಗೆ ಹೇಳಿದ ಕೃಷ್ಣಮೂರ್ತಿಗಳು ತೆಲುಗಿನಲ್ಲಿ ಕವಿಬ್ರಹ್ಮ ತಿಕ್ಕನನು ತಮಗೆ ಪ್ರೀತಿಪಾತ್ರನಾದ ಕವಿಯೆಂದು ತಿಳಿಸಿದರು. ನನಗೋ ಶ್ರೀನಾಥ, ಭಟ್ಟುಮೂರ್ತಿ, ವಿಶ್ವನಾಥ ಸತ್ಯನಾರಾಯಣರಂಥ ಪ್ರೌಢಶೈಲಿಯ ವಿದ್ವತ್ಕವಿಗಳಲ್ಲಿ ಹೆಚ್ಚಿನ ಆದರ. ಲಲಿತಶೈಲಿಯ ಕವಿಗಳ ಪೈಕಿ ಪೋತನ ಮತ್ತು ಜಂಧ್ಯಾಲ ಪಾಪಯ್ಯಶಾಸ್ತ್ರಿಗಳು ಇಂದಿಗೂ ಮೆಚ್ಚಿನವರು. ಹೀಗಾಗಿ ತಿಕ್ಕನನ ಬಗೆಗೆ ನನಗಿದ್ದ ಅಭಿಪ್ರಾಯವನ್ನು ನಿಃಸಂಕೋಚವಾಗಿ ಹೇಳಿಬಿಟ್ಟೆ. ಕೃಷ್ಣಮೂರ್ತಿಗಳು ಕೆರಳಲಿಲ್ಲ. ದೃಢವಾಗಿ — ಆದರೆ ಮಿಗಿಲಾದ ತಾಳ್ಮೆಯಿಂದ — ತಿಕ್ಕನನ ವಿಶಿಷ್ಟತೆಗಳನ್ನು ಸೋದಾಹರಣವಾಗಿ ಬಣ್ಣಿಸಿದರು.
ಆಗಲೇ ಅವರು ಆ ಕವಿಯ “ನಿರ್ವಚನೋತ್ತರರಾಮಾಯಣ”ವನ್ನು ಸಂಸ್ಕೃತೀಕರಿಸುತ್ತಿರುವ ಸಂಗತಿಯನ್ನು ಪ್ರಸ್ತಾವಿಸಿ ತಮ್ಮ ಹಸ್ತಪ್ರತಿಯನ್ನು ತೋರಿಸಲಾರಂಭಿಸಿದರು. ನನಗೋ ಸಂಸ್ಕೃತದಲ್ಲಿ ಯಾರು ಕಾವ್ಯ ರಚಿಸುತ್ತಿದ್ದಾರೆಂದರೂ ಅದು ಅತಿಕುತೂಹಲದ ವಸ್ತು. ಇಂದಿಗೂ ಅಷ್ಟೇ. ಹೀಗಾಗಿ ಆತುರಾತುರವಾಗಿ ಪುಟ ತಿರುವತೊಡಗಿದೆ. ಅಲ್ಲೊಂದೆಡೆ ಹರಿಣೀವೃತ್ತದ ಪದ್ಯದಲ್ಲಿ ಸಂಧಿಯಾಗಿಲ್ಲವೆಂಬಂತೆ ನನಗೆ ತೋರಿತು. ಆದರೆ ಅದನ್ನು ಪ್ರಸ್ತಾವಿಸದೆ ಮುಂದಿನ ಪುಟಗಳನ್ನು ಮಗುಚಿಹಾಕತೊಡಗಿದೆ. ಸುಮಾರು ಹತ್ತು ನಿಮಿಷಗಳ ಬಳಿಕ ಅವರಿಗೆ ಹಸ್ತಪ್ರತಿಯನ್ನು ಹಿಂದಿರುಗಿಸಿದಾಗ ಅವರ ಮಾತು ಭಾಷಾಶುದ್ಧಿಯ ಕಡೆಗೆ ತಿರುಗಿತು. ಆಗ ನಾನು ಸುಮ್ಮನಿರಲಾರದೆ “ನಿಮ್ಮ ಕೃತಿಯಲ್ಲಿಯೇ ಈಗ ನಾನು ವಿಸಂಧಿದೋಷವನ್ನು ಕಂಡೆನಲ್ಲಾ!” ಎಂದುಬಿಟ್ಟೆ. ಅವರು ತಮ್ಮ ಅಂದಿನವರೆಗಿನ ಸಮಾಹಿತಸ್ಥಿತಿಯನ್ನು ತೊರೆದು ವ್ಯಗ್ರರಾಗಿ ಹಸ್ತಪ್ರತಿಯನ್ನೆಲ್ಲ ಜಾಲಾಡತೊಡಗಿದರು. ನನಗೆ ಆ ಪದ್ಯದ ಸಂದರ್ಭ ಗುರುತಾಗಿರಲಿಲ್ಲ. ಹೀಗಾಗಿ ಕೃಷ್ಣಮೂರ್ತಿಗಳಿಗೆ ಹುಡುಕಾಟ ತಪ್ಪಲಿಲ್ಲ. ಅವರ ಕಳವಳವನ್ನು ಕಂಡ ನಾನೂ ಪ್ರಭಾಕರ್ ಅವರೂ “ಅದು ತುಂಬ ಗೌಣ; ಈಗ ಅದಕ್ಕಾಗಿ ಪರದಾಡಬೇಕಿಲ್ಲ” ಎಂದು ಎಷ್ಟು ಹೇಳಿದರೂ ಕೇಳಿಸಿಕೊಳ್ಳದವರಂತೆ ಅನ್ವೇಷಣೆಗೆ ತೊಡಗಿದರು. ಕಡೆಗೆ ಹರಿಣೀವೃತ್ತದ ಸೂಚನೆಯನ್ನು ಹಿಡಿದು ಹುಡುಕಿದಾಗ ಅದು ಸಿಕ್ಕೇಬಿಟ್ಟಿತು. ವಸ್ತುತಃ ಅಲ್ಲಿ ಆದದ್ದು ವಿಸಂಧಿದೋಷವಲ್ಲ, ಪ್ರಕೃತಿಭಾವಸಂಧಿಯ ಒಂದಂಶವಾದ ಪ್ರಗೃಹ್ಯನಿಯಮದ ಪರಿಪಾಲನೆ. ನಾನು ನನ್ನ ಎಂದಿನ ದುಡುಕುತನದಿಂದ ಅದನ್ನು ತಪ್ಪಾಗಿ ಗ್ರಹಿಸಿದ್ದೆ. ಇಂದಿಗಾದರೂ ಈ ಅವಿವೇಕ ತಗ್ಗಿಲ್ಲ.
ತಮ್ಮ ವ್ಯಾಕರಣವು ಶುದ್ಧವಾಗಿದೆಯೆಂದು ಮನದಟ್ಟಾದ ಬಳಿಕ ಕೃಷ್ಣಮೂರ್ತಿಯವರು ನನ್ನತ್ತ ಹರಿಹಾಯಲಿಲ್ಲ, ಅಸಮಾಧಾನವನ್ನೂ ತೋರಿಸಲಿಲ್ಲ. ಇಂಥ ಯಾವುದೇ ಮನೋವಿಕಾರಗಳು ಅವರೆಡೆ ಸುಳಿಯುವಂಥವಲ್ಲ ಎಂಬುದು ನನಗೆ ಅನಂತರದ ದಿನಗಳಲ್ಲಿ ಚೆನ್ನಾಗಿ ಅನುಭವಕ್ಕೆ ಬಂತು. ಆಗ ಅವರಲ್ಲಿ ಇದ್ದದ್ದು “ತಾನು ಭಾಷೆಗೆ ಅಪಚಾರ ಮಾಡಿಲ್ಲ; ಮಹಾಕವಿಗಳ ಮಾತುಗಳನ್ನು ಅನುವಾದಿಸುವಾಗ ತಪ್ಪುಗಳಾಗಿಲ್ಲ” ಎಂಬ ಭಾವವಲ್ಲದೆ ಇಲ್ಲದ ತಪ್ಪನ್ನು ತೋರಿದ ನನ್ನ ಮೇಲೆ ಮುನಿಸಲ್ಲ. ಕೃಷ್ಣಮೂರ್ತಿಗಳ ಮನೋಧರ್ಮವೇ ಹಾಗೆ. ಮತ್ತೊಬ್ಬರ ದೋಷವನ್ನು ಅವರು ಉಪೇಕ್ಷೆ ಮಾಡುವುದಿಲ್ಲ, ಅದನ್ನು ಸರಿಯೆಂದು ಒಪ್ಪುವುದೂ ಇಲ್ಲ. ಆದರೆ ದೋಷಿಯನ್ನು ತುಂಬ ನಯವಾಗಿ ತಿದ್ದುವಲ್ಲಿ ಮಾತ್ರ — ಅವರ ಪ್ರಮಾದವನ್ನು ಅತ್ಯಂತ ಗೌರವದಿಂದ ಸೂಚಿಸುವಲ್ಲಿ ಎಂದರೆ ಮತ್ತೂ ಸರಿಯಾದೀತು — ಅವರಿಗೆ ಆಸ್ಥೆ. ಸತ್ಯ ಎಲ್ಲಕ್ಕಿಂತ ಮಿಗಿಲು; ಆದರೆ ಸತ್ಯವನ್ನು ಹೇಳುವಲ್ಲಿ ಸೌಜನ್ಯವನ್ನು ಬಿಡದಿರುವುದು ಅಷ್ಟೇ ಮಿಗಿಲು — ಇದು ಅವರ ಜೀವನಸೂತ್ರ.
ಈ ಸಂದರ್ಭವನ್ನು ಕಾಣುತ್ತಿದ್ದಂತೆಯೇ ನನಗೆ ಈ ಮಹನೀಯರೊಡನೆ ಎಚ್ಚರದಿಂದ ನಡೆದುಕೊಳ್ಳಬೇಕು, ಇವರ ಮಾತುಗಳನ್ನು ಗಂಭೀರವಾಗಿ ಗ್ರಹಿಸಬೇಕೆಂಬ ವಿವೇಕವುಂಟಾಯಿತು. ಅಂದಿನಿಂದ ಎಂದೂ ಅವರ ಸನ್ನಿಧಿಯಲ್ಲಿ ಈ ಬಗೆಯ ದುಡುಕುತನವನ್ನು ಮಾಡಲಿಲ್ಲವೆಂದು ನಂಬಿದ್ದೇನೆ.
ಅನಂತರ ಕೃಷ್ಣಮೂರ್ತಿಗಳು ವ್ಯಾಕರಣದ ಪ್ರಾಮುಖ್ಯ ಮತ್ತು ಭಾಷಾಶುದ್ಧಿಯ ಅನಿವಾರ್ಯತೆಗಳನ್ನು ಕುರಿತು ಹೇಳುತ್ತ ಆಧುನಿಕ ತೆಲುಗುಭಾಷೆ ಅದು ಹೇಗೆ ಸಾಮಾನ್ಯಶಿಷ್ಟತೆಯ ಹಳಿಯಿಂದ ಜಾರಿಹೋಗಿದೆಯೆಂದು ವಿಸ್ತರಿಸಿ ಬೇಸರಿಸಿಕೊಂಡರು: “ಅಲ್ಲಾ ಸಾರ್, ವಚ್ಚಿನಾಡು ಎನ್ನುವುದು ಸಾಧುರೂಪ. ಇದನ್ನು ವಚ್ಚಾಡು ಎಂದು ಅಪಭ್ರಂಶ ಮಾಡಿದರೆ ಕಥೆ-ಕಾದಂಬರಿ-ನಾಟಕಗಳಲ್ಲಿ ಸರಿಯಾಗಬಹುದೇನೋ; ಶಾಸ್ತ್ರ-ಕಾವ್ಯಗಳಲ್ಲಿ ಹೇಗೆ ಸರಿಯಾದೀತು? ವಚ್ಚಿನಾನು, ವಚ್ಚಾನು, ವಚ್ಚೇಶಾ ಇತ್ಯಾದಿ ಎಷ್ಟೆಷ್ಟೋ ಅಪಭ್ರಂಶಗಳು ನುಗ್ಗಿವೆ. ನಿಯಮಗಳನ್ನು ನಿರ್ಮೂಲನ ಮಾಡಿಕೊಂಡ ಯಾವ ಭಾಷೆಯಾಗಲಿ, ಸಮಾಜವಾಗಲಿ ಹೇಗೆ ತಾನೆ ಚೆನ್ನಾಗಿ ಬಾಳೀತು?” ಕಾನೂನು ಮತ್ತು ಧರ್ಮಶಾಸ್ತ್ರಗಳನ್ನು ಚೆನ್ನಾಗಿ ಬಲ್ಲ ಅವರಿಗೆ ಭಾಷೆಯ ಕಾನೂನು ಮತ್ತು ಬರೆಹದ ಧರ್ಮವಾದ ವ್ಯಾಕರಣದ ಬಗೆಗೆ ಈ ಮಟ್ಟದ ಗೌರವವಿರದಿದ್ದರೆ ಹೇಗೆ?
ಹೀಗೆ ಸಾಕಷ್ಟು ಹೊತ್ತು ಅವರಲ್ಲಿ ಮಾತುಕತೆಯಾಡಿ ಹೊರಡುವಾಗ ಹೇಳಿದರು: “ನಮ್ಮ ಸದಾನಂದಶಾಸ್ತ್ರಿಗಳು ಒಂದೆರಡು ವರ್ಷಗಳಿಂದ ಕನ್ನಡದಲ್ಲಿ ಅವಧಾನ ಮಾಡುತ್ತಿದ್ದಾರೆ. ಅವರು ಮೂಲತಃ ಕನ್ನಡಿಗರೇ. ಅನಂತಪುರದಲ್ಲಿ ತೆಲುಗಿನ ಅಧ್ಯಾಪಕರು. ಅವರೊಮ್ಮೆ ಬೆಂಗಳೂರಿಗೆ ತೆಲುಗಿನ ಅವಧಾನಕ್ಕಾಗಿ ಬಂದಾಗ ಅವರ ಹಿನ್ನೆಲೆಯನ್ನು ತಿಳಿದು “ಕನ್ನಡದಲ್ಲೇಕೆ ನೀವು ಅವಧಾನ ಮಾಡಬಾರದು?” ಎಂದು ಅನುನಯಿಸಿದೆ. “ಕನ್ನಡ ಕೈಪಿಡಿ”, “ಮಾಧ್ಯಮಿಕ-ಕನ್ನಡ-ವ್ಯಾಕರಣ”, “ಗದಾಯುದ್ಧ” ಮತ್ತು “ಜೈಮಿನಿಭಾರತ”ಗಳಂಥ ಪುಸ್ತಕಗಳನ್ನು ಕೊಟ್ಟು ಒಂದಿಷ್ಟು ಪಾಠವನ್ನೂ ಹೇಳಿದೆ. ಅವರೂ ಸಂತೋಷದಿಂದ ಒಪ್ಪಿ ಸಾಹಸ ಮಾಡಿದರು. ಈಗಾಗಲೇ ಹಲವು ಕನ್ನಡ ಅವಧಾನಗಳನ್ನು ಮಾಡಿದ್ದಾರೆ. ಮೊದಲ ಒಂದೆರಡು ಅವಧಾನಗಳಲ್ಲಿ ಕನ್ನಡದೊಡನೆ ತೆಲುಗಿನ ಅಂಶಗಳನ್ನೂ ಇಟ್ಟುಕೊಂಡಿದ್ದರು. ಈಗ ಪೂರ್ಣಪ್ರಮಾಣದ ಕನ್ನಡ ಅವಧಾನ ಅವರಿಂದ ಸಾಗಿದೆ. ಇನ್ನೊಂದೆರಡು ತಿಂಗಳಲ್ಲಿ ಅವರ ಎರಡು-ಮೂರು ಅವಧಾನಗಳು ಬೆಂಗಳೂರಿನಲ್ಲಿ ಏರ್ಪಾಟಾಗಲಿವೆ. ನೀವು ಅನ್ಯಥಾ ಭಾವಿಸದಿದ್ದಲ್ಲಿ ದಯಮಾಡಿ ಪೃಚ್ಛಕತ್ವಕ್ಕೆ ಬರಬೇಕು” ಎಂದು ಕೈಮುಗಿದರು.
ನಾನು ಸಂತೋಷದಿಂದ ಒಪ್ಪಿಕೊಂಡದ್ದಲ್ಲದೆ “ಈ ಮಾತ್ರದ ವಿಷಯಕ್ಕೆ ಇಷ್ಟು ಸಂಕೋಚ ಪಟ್ಟು ಕೇಳಬೇಕೇ? ಇದರಲ್ಲಿ ಅನ್ಯಥಾ ಭಾವಿಸುವುದಕ್ಕೆ ಏನಿದೆ? ಇದು ನೀವು ನನಗೆ ಮಾಡುತ್ತಿರುವ ಸತ್ಕಾರ” ಎಂದೆ. ಆಗ ಅವರು “ಇಲ್ಲಾ ಸಾರ್. ಅವಧಾನಿಗಳೇ ಆಗಿರುವವರನ್ನು ಪೃಚ್ಛಕತ್ವಕ್ಕೆ ಬರುವಂತೆ ಕೇಳುವುದು ಅಷ್ಟಾಗಿ ಸರಿಯಾಗದೆಂದು ಕೆಲವರು ಭಾವಿಸುತ್ತಾರೆ. ಅದೆಷ್ಟೋ ಮಂದಿ ಅವಧಾನಿಗಳು ತಮ್ಮನ್ನು ಅವಧಾನಕ್ಕಲ್ಲದೆ ಪೃಚ್ಛಕತ್ವಕ್ಕೆ ಕರೆಯುವುದು ತಮಗೆ ಮಾಡಿದ ಅಗೌರವವೆಂದೇ ತಿಳಿಯುತ್ತಾರೆ. ಅವರ ಈ ನಿಲವನ್ನು ನಾನು ಆಕ್ಷೇಪ ಮಾಡುವುದಿಲ್ಲ. ಆದರೆ ಇಂಥ ಅಭಿಮಾನ ಬಿಟ್ಟರೆ ಕಲೆಗೆ ಒಳ್ಳೆಯದೆಂದು ತಿಳಿದಿದ್ದೇನೆ” ಎಂದರು. ಇಂಥ ಗರ್ವಾನಲದುರ್ವಿದಗ್ಧ ಅವಧಾನಿಗಳೂ ಇರುವರೆಂದು ನನಗೆ ತಿಳಿದಿರಲಿಲ್ಲ. ಅನಂತರ ಈ ಅಂಶವೂ ಧಾರಾಳವಾಗಿ ಅನುಭವಕ್ಕೆ ಬಂದಿತೆನ್ನಿ. ಈ ಬಗೆಯ ಸನ್ನಿವೇಶಗಳಿಗೆ ಪ್ರತಿಕ್ರಿಯೆ ತೋರುವಲ್ಲಿ ನನಗೆ ಲಂಕಾ ಕೃಷ್ಣಮೂರ್ತಿಗಳ ಸಮಾಧಾನ ಮಾತ್ರ ಸಿದ್ಧಿಸಲಿಲ್ಲ.
ಬಳಿಕ ಅವರನ್ನು ಬೀಳ್ಗೊಟ್ಟು ಹೊರಟದ್ದಾಯಿತು. ದಾರಿಯುದ್ದಕ್ಕೂ ನಾನು ಮತ್ತು ಪ್ರಭಾಕರ್ ಕೃಷ್ಣಮೂರ್ತಿಗಳ ಗುಣಗಾನ ಮಾಡುತ್ತ ಸಾಗಿದೆವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
* * *
ಜೋಸ್ಯಂ ಸದಾನಂದಶಾಸ್ತ್ರಿಗಳ ಎರಡು ಕನ್ನಡ ಅವಧಾನಗಳಿಗೂ ನಾನು ಪೃಚ್ಛಕನಾಗಿ ಹೋಗಿದ್ದೆ. ಒಂದು ಅವಧಾನದಲ್ಲಿ ಸಮಸ್ಯೆಯನ್ನೂ ಮತ್ತೊಂದರಲ್ಲಿ ದತ್ತಪದಿಯನ್ನೂ ಕೊಟ್ಟಂತೆ ನೆನಪು. ಈ ಅವಧಾನಗಳಲ್ಲಿ ಪದ್ಮನಾಭನ್ ಅವರೂ ಪಾಲ್ಗೊಂಡಿದ್ದರು, ಪ್ರಾಯಶಃ ನ್ಯಸ್ತಾಕ್ಷರಿವಿಭಾಗದ ಪೃಚ್ಛಕರಾಗಿ. ಅಂದೇ ಅವರ ಪದ್ಯರಚನಾಕೌಶಲವನ್ನು ನಾನು ಕಂಡದ್ದು. ಅವರ ಭಾಷಾಶೈಲಿ ಡಿ.ವಿ.ಜಿ. ಅವರ ಸತ್ಪ್ರಭಾವವನ್ನು ಚೆನ್ನಾಗಿ ಬಿಂಬಿಸಿತ್ತು. ಎರಡನೆಯ ಅವಧಾನದಲ್ಲಿ ರಂಗನಾಥಶರ್ಮರು ಸಮಸ್ಯಾಪೃಚ್ಛಕರಾಗಿ ಆಗಮಿಸಿದ್ದರು. ಅವರಿಗೂ ಲಂಕಾ ಕೃಷ್ಣಮೂರ್ತಿಗಳೊಡನೆ ಬಳಕೆಯಿದ್ದಿತಷ್ಟೆ. ಹೀಗಾಗಿ ಇಬ್ಬರೂ ಪರಸ್ಪರ ಪ್ರೀತಿ-ಗೌರವಗಳಿಂದ ಮಾತನಾಡಿಕೊಳ್ಳುವಾಗ ಕೃಷ್ಣಮೂರ್ತಿಯವರ ನಮ್ರತೆಯೂ ಶರ್ಮರ ಗುಣಗ್ರಹಣವೂ ಎದ್ದುಕಂಡಿದ್ದವು. ಈ ಅವಧಾನಗಳ ಪ್ರಾಸ್ತಾವಿಕಗಳನ್ನು ಎಂದಿನಂತೆ ಲಂಕಾ ಕೃಷ್ಣಮೂರ್ತಿಯವರೇ ಮಾಡಿದರಾದರೂ ಆರು ವರ್ಷಗಳ ಹಿಂದಿನ ವೈರಸ್ಯ ನನ್ನಲ್ಲಿ ಸ್ವಲ್ಪವೂ ತಲೆದೋರಲಿಲ್ಲ! ವ್ಯಕ್ತಿಗಳ ವ್ಯಕ್ತಿತ್ವ ಮನದಟ್ಟಾದ ಬಳಿಕ ಅವೇ ಸಂಗತಿಗಳನ್ನು ನಾವು ನೋಡುವ ಬಗೆಯೇ ಬೇರ್ಪಡುವುದಷ್ಟೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಬಿಡುವಾದಾಗಲೆಲ್ಲ ಕೃಷ್ಣಮೂರ್ತಿಗಳು ನನ್ನ ಕೊನೆಯಿಲ್ಲದ ಪ್ರಶ್ನೆಗಳಿಗೆ ಉತ್ತರವೀಯುತ್ತಿದ್ದರು. ಅವರ ಮೂಲಕವೇ ಸದಾನಂದಶಾಸ್ತ್ರಿಗಳ ಸ್ನೇಹವೂ ನನಗೆ ದಕ್ಕಿತು.
* * *
ಡಿ.ವಿ.ಜಿ. ಅವರ ಜನ್ಮಶತಾಬ್ದಿಯ ಅಂಗವಾಗಿ ೨೭-೩-೧೯೮೮ ರಂದು ಕೋಲಾರದಲ್ಲಿ ನನ್ನ ಅಷ್ಟಾವಧಾನ ಏರ್ಪಟ್ಟಿತ್ತು. ಈ ಆಯೋಜನೆಯ ರೂವಾರಿ ಪದ್ಮನಾಭನ್ ಅವರ ಪುತ್ರಿ ಶ್ರೀಮತಿ ಸರೋಜಾ ಕೃಷ್ಣಮೂರ್ತಿ. ಅವರಿಗೆ ಕೋಲಾರದ ಸಂಸ್ಕೃತಸಂಘದ ಶಿಲ್ಪಿ ಶ್ರೀ. ಟಿ. ಎನ್. ಪ್ರಭಾಕರ್ ಅವರು ತುಂಬ ಒತ್ತಾಸೆಯಾಗಿದ್ದರು. ನೂರಾರು ಜನ ಸೇರಲಿದ್ದ ಆ ಕಾರ್ಯಕ್ರಮದ ಪೃಚ್ಛಕವರಣವನ್ನು ಪದ್ಮನಾಭನ್ ಅವರು ಮಾಡಿದ್ದರು. ಪೃಚ್ಛಕರ ಪಂಕ್ತಿಯಲ್ಲಿ ಲಂಕಾ ಕೃಷ್ಣಮೂರ್ತಿಗಳು ಇರದಿದ್ದರೆ ಹೇಗೆ? ಅಂದ ಹಾಗೆ “ಪೃಚ್ಛಕವರಣ” ಎಂಬ ಶಬ್ದವನ್ನು ಟಂಕಿಸಿದವರು ಕೃಷ್ಣಮೂರ್ತಿಗಳೇ. ಶ್ರೌತಯಾಗಗಳಲ್ಲಿ ಪಾಲ್ಗೊಳ್ಳುವ ಋತ್ವಿಜರನ್ನು ಆಯ್ದುಕೊಳ್ಳುವ ಕ್ರಮಕ್ಕೆ “ಋತ್ವಿಗ್ವರಣ” ಎನ್ನುತ್ತಾರೆ. ಇದೇ ಹಾದಿಯಲ್ಲಿ ರೂಪುಗೊಂಡ “ಪೃಚ್ಛಕವರಣ” ಎಂಬ ಶಬ್ದ ಅವಧಾನವು ಒಂದು ಯಜ್ಞವೆಂದು ಧ್ವನಿಸುತ್ತಿರುವುದು ಸ್ವಾರಸ್ಯಕರ. ಪ್ರಾಚೀನವೂ ಶಾಸ್ತ್ರೀಯವೂ ಆದ ಪರಿಭಾಷೆಯೊಂದನ್ನು ಸಾಂಪ್ರತಕ್ಕೆ ಅನ್ವಯಿಸಿಕೊಳ್ಳುವ ಸೊಗಸೂ ಇಲ್ಲಿದೆ. ಈ ಪ್ರಯೋಗವನ್ನು ರಂಗನಾಥಶರ್ಮರು ಮಿಗಿಲಾಗಿ ಮೆಚ್ಚಿದ್ದರು.
ನಿರ್ಣೀತವಾದ ದಿನ ನಾನು, ಪದ್ಮನಾಭನ್, ಬಿ. ಆರ್. ಪ್ರಭಾಕರ್ ಮತ್ತು ಲಂಕಾ ಕೃಷ್ಣಮೂರ್ತಿಗಳು ಕೆಂಪು ಬಸ್ಸಿನಲ್ಲಿ ಕೋಲಾರಕ್ಕೆ ತೆರಳಿದೆವು. ಅದು ಬಿರುಬೇಸಿಗೆಯ ಕಾಲ. ಹೊರಟದ್ದೋ ಅಪರಾಹ್ಣದಲ್ಲಿ. ಕಿಟಕಿಯ ಪಕ್ಕ ಬಿಸಿಲಿಗೆ ಮೈಯೊಡ್ಡಿ ಕುಳಿತ ನನ್ನನ್ನು ಕಂಡ ಕೃಷ್ಣಮೂರ್ತಿಯವರು ಅಕ್ಕರೆಯಿಂದ ಎಬ್ಬಿಸಿ, ಬೇರೆಡೆ ಕೂರಿಸಿ, ತಾವು ಬಿಸಿಲಿನ ದಿಕ್ಕಿನಲ್ಲಿ ಕುಳಿತವರೇ: “ಸಾರ್ ಮೇಮೇಮಿ, ಗೊರ್ರೆಲತೋ ತೋಲಿನಾ ಪೋತಾಮು, ಗೇದೆಲತೋ ತೋಲಿನಾ ಪೋತಾಮು. ಮೀರು ಮಟ್ಟುಕು ಚಕ್ಕುಚದರಕುಂಡ ಉಂಡಾಲಿ” (ಸಾರ್, ನಮಗೇನು ಕುರಿಗಳ ಜೊತೆ ಹೊಡೆದರೂ ಹೋಗುತ್ತೇವೆ, ಕೋಣಗಳ ಜೊತೆ ಹೊಡೆದರೂ ಹೋಗುತ್ತೇವೆ. ನೀವು ಮಾತ್ರ ಅಚ್ಚುಕಟ್ಟಾಗಿರಬೇಕು) ಎಂದರು. ಆ ಬಳಿಕ “ಅವಧಾನಿಗಳ ಆರೋಗ್ಯ ತುಂಬ ಮುಖ್ಯ; ಗಾಳಿ-ಬಿಸಿಲುಗಳಿಗೆ ಮೈಯ್ಯೊಡ್ಡಿಕೊಂಡು, ಬಳಲಿ ಬಸವಳಿದು ಹೋಗಿ ಕಾರ್ಯಕ್ರಮವನ್ನು ಕೆಡಿಸಬಾರದು. ಒಳ್ಳೆಯ ನಿದ್ರೆ, ಮನಃಸಮಾಧಾನ, ಹಿತ-ಮಿತವಾದ ಆಹಾರ — ಇವೆಲ್ಲ ಅವಧಾನಿಗೆ ಅನಿವಾರ್ಯ” ಎಂದು ಎಚ್ಚರಿಕೆ ಹೇಳಿದರು. ಅಂತೆಯೇ ನಾನು ಅವಧಾನವು ಆರಂಭವಾಗುವ ಕೊನೆಯ ಕ್ಷಣದವರೆಗೂ ಹರಟಿಕೊಂಡಿರುವುದನ್ನು ಅಚ್ಚರಿಯಿಂದ ಮೆಚ್ಚಿಕೊಳ್ಳುತ್ತಲೇ ಅವಧಾನಸಮಾಧಿಯನ್ನು ಕಾಪಾಡಿಕೊಳ್ಳುವುದರ ಬಗೆಗೆ ಎಚ್ಚರವನ್ನೂ ಹೇಳಿದರು.
ಆ ವೇಳೆಗೆ ತ್ರಿಗುಣಿತಾವಧಾನವೂ ಸೇರಿದಂತೆ ಹಲವು ಬಾರಿ ಅವಧಾನಗಳನ್ನು ಮಾಡಿದ್ದೆನಾದರೂ ಕೋಲಾರದ ಈ ಕಾರ್ಯಕ್ರಮವು ನನ್ನ ಜೀವನಗ್ರಂಥದಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸಿತು. ಇದಕ್ಕೆ ಲಂಕಾ ಕೃಷ್ಣಮೂರ್ತಿ, ಪದ್ಮನಾಭನ್, ಬಿ. ಆರ್. ಪ್ರಭಾಕರ್, ಸರೋಜಾ, ಟಿ. ಎನ್. ಪ್ರಭಾಕರ್ ಮುಂತಾದವರೆಲ್ಲ ಕಾರಣೀಭೂತರು.
ಅಂದು ಲಂಕಾ ಕೃಷ್ಣಮೂರ್ತಿಯವರದೇ ನಿಷೇಧಾಕ್ಷರ. ಅವಧಾನದಲ್ಲಿ ನಾನು ಚಿತ್ರಕವಿತೆಯನ್ನು ಅಳವಡಿಸುವವರೆಗೆ ಹೆಚ್ಚಿನ ಕಾರ್ಯಕ್ರಮಗಳಲ್ಲೆಲ್ಲ ಅವರು ಈ ವಿಭಾಗವನ್ನೇ ನಿರ್ವಹಿಸುತ್ತಿದ್ದರು. ಹಲಸೂರಿನ ಆಂಧ್ರ-ಸಾರಸ್ವತ-ವಿಜ್ಞಾನ-ಸಂಘವು ದಶಕಗಳಿಂದ ಆಯೋಜಿಸಿಕೊಂಡು ಬಂದ ತೆಲುಗಿನ ಅವಧಾನಗಳಲ್ಲಿ ಕೂಡ ಇವರದೇ ನಿಷೇಧಾಕ್ಷರ. ನಿಜವೇ, ಪೃಚ್ಛಕರಾಗಿ ಅವರು ಎಲ್ಲ ವಿಭಾಗಗಳಲ್ಲಿಯೂ ತಮ್ಮ ಯೋಗದಾನವನ್ನು ಚೆನ್ನಾಗಿ ಸಲ್ಲಿಸಿದವರೇ. ಆದರೆ ನಾನು ಅರಿತಂತೆ ಅವರಂಥ ನಿಷೇಧಾಕ್ಷರಪೃಚ್ಛಕ ಮತ್ತೊಬ್ಬನಿಲ್ಲ. ಮಿಕ್ಕ ಪೂರಣಾಂಶಗಳಿಗಿಂತ ಈ ವಿಭಾಗದಲ್ಲಿ ಹೆಜ್ಜೆಹೆಜ್ಜೆಗೂ ಪೃಚ್ಛಕ ಮತ್ತು ಅವಧಾನಿಗಳ ಸಂಘರ್ಷವಿರುತ್ತದೆ. ಸೆಣಸಾಟವೆಂದರೆ ಅದು ಸಹಜವಾಗಿಯೇ ರಜೋಗುಣದ ಸಾಮ್ರಾಜ್ಯ. ನಿಷೇಧಾಕ್ಷರದಂಥ — ಭಾವಕ್ಕೇ ಆಸ್ಪದವಿಲ್ಲದ — ಬುದ್ಧಿಪಾರಮ್ಯದ ವಿಭಾಗದಲ್ಲಿ ರಜೋಗುಣಕ್ಕೆ ಮತ್ತೂ ಹೆಚ್ಚಿನ ಅವಕಾಶವಿರುತ್ತದಷ್ಟೆ. ಅದರಲ್ಲಿಯೂ ಪೃಚ್ಛಕನು ವ್ಯಾಕರಣಾದಿಶಾಸ್ತ್ರಗಳಲ್ಲಿ ನದೀಷ್ಣನಾಗಿದ್ದರೆ ಹೇಳಲೇಬೇಕಿಲ್ಲ. ಅದೆಷ್ಟೋ ಮಂದಿ ಲಬ್ಧಪ್ರತಿಷ್ಠರಾದ ಅವಧಾನಿಗಳೂ ನಿಷೇಧಾಕ್ಷರವೆಂದರೆ ಅಂಜುತ್ತಾರೆ. ಏಕೆಂದರೆ ಪದ್ಯದ ಕೊನೆಯ ಅಕ್ಷರದವರೆಗೂ ಅವಧಾನಿಗೆ ಅನಿಶ್ಚಯ ತಪ್ಪದು.
ಇಂಥ ಸೆಣಸಿನ ಸ್ಥಳದಲ್ಲಿಯೂ ಕೃಷ್ಣಮೂರ್ತಿಗಳು ಕಲೆಯ ಘನತೆ, ಶಾಸ್ತ್ರದ ಶುದ್ಧಿ, ಸಹೃದಯರಿಗೆ ಬೇಕಾದ ರಂಜನೆ ಮತ್ತು ಸಭಾಸೌಜನ್ಯಗಳನ್ನು ಗಮನದಲ್ಲಿರಿಸಿಕೊಂಡು ತಮ್ಮ ಶಕ್ತಿಯನ್ನು ಮೆರೆಯುತ್ತಿದ್ದರು. ಅವಧಾನಿಯ ಬಲಾಬಲಗಳನ್ನು ಅರಿತೇ ಮುಂದುವರಿಯುತ್ತಿದ್ದರು. ಹಾಗೆಂದ ಮಾತ್ರಕ್ಕೆ ಅನುಚಿತವಾದ ಶೈಥಿಲ್ಯಕ್ಕಾಗಲಿ, ಪಕ್ಷಪಾತಕ್ಕಾಗಲಿ ಅವಕಾಶ ಕೊಡುತ್ತಿರಲಿಲ್ಲ. ಅವಧಾನದ ಬಿಗಿ ತಪ್ಪಬಾರದು, ಆದರೆ ಸ್ವಾರಸ್ಯ ಕುಗ್ಗಬಾರದು — ಇಂಥ ಬಿಗಿಯಾದ ಹಗ್ಗದ ಮೇಲೆ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಕೆಲವೊಮ್ಮೆ ಅವಧಾನಿಗೆ ಇವರ ಪಟ್ಟುಗಳಿಂದ ಬಿಡಿಸಿಕೊಳ್ಳಲಾಗದಂಥ ಬಿಕ್ಕಟ್ಟು ಬಂದೊದಗಿದಾಗ ಸಭೆಗೆ ಈ ತೊಡಕು ಸ್ವಲ್ಪವೂ ತಿಳಿಯದಂತೆ ಸೂಕ್ಷ್ಮವಾಗಿ ತರಣೋಪಾಯವನ್ನು ಸೂಚಿಸಬಲ್ಲ ಉದಾರತೆ ಅವರಲ್ಲಿ ಯಥೇಷ್ಟವಾಗಿತ್ತು. ಆದರೆ ಇಂಥದನ್ನು ತಾನು ಮಾಡಿದೆನೆಂಬ ಹೆಮ್ಮೆ ಸ್ವಲ್ಪವೂ ಸುಳಿಯುತ್ತಿರಲಿಲ್ಲ. ಅಷ್ಟೇಕೆ, ಅವಧಾನದ ಕಡೆಯಲ್ಲಿ ಧಾರಣವು ಸಾಗಿ ಅವಧಾನಿಯು ತನ್ನ ಪದ್ಯಗಳನ್ನು ವಿವರಿಸುವಾಗ ಕೃಷ್ಣಮೂರ್ತಿಗಳೇ ಕೆಲವೊಮ್ಮೆ ಮುಂದಾಗಿ ಅವುಗಳ ಸ್ವಾರಸ್ಯಗಳನ್ನು ಹೃದಯಂಗಮವಾಗಿ ವಿವರಿಸುತ್ತಿದ್ದರು. ಎಷ್ಟೋ ಬಾರಿ ಇವರು ಕಾಣಿಸುವ ಧ್ವನ್ಯರ್ಥಗಳು ಅವಧಾನಿಗಳ ಸ್ಫುರಣೆಯ ಪರಿಧಿಗೇ ಅತೀತವಾಗಿರುತ್ತಿದ್ದವು!