ಕೃಷ್ಣಮೂರ್ತಿಗಳನ್ನು ನೆನೆದಾಗಲೆಲ್ಲ ನನಗೆ ಎದ್ದುತೋರುವುದು ಅವರ ಧರ್ಮಪ್ರಜ್ಞೆ. ಅರ್ಥ-ಕಾಮಗಳ ಕೋಲಾಹಲ ಸ್ವಲ್ಪವೂ ಇರದ ಈ ಧರ್ಮಪ್ರಜ್ಞೆಯು ನಿಶ್ಚಿತವಾಗಿ ಮೋಕ್ಷೈಕಗಾಮಿ. ಚಿಕ್ಕ ವಯಸ್ಸಿನಿಂದ ಅವರು ಆಚಾರ-ಪ್ರಾಯಶ್ಚಿತ್ತಗಳ ಮೂಲಕ ಮೈಗೂಡಿಸಿಕೊಂಡಿದ್ದ ಸತ್ತ್ವಾಭಿಮುಖತೆ ಸಾಹಿತ್ಯಸಂಸ್ಕಾರದ ಮೂಲಕ ಮತ್ತಷ್ಟು ಪಾಕಗೊಂಡಿತೆನ್ನಬೇಕು. ಮುಂದೆ ಕಾನೂನನ್ನು ಓದುವಾಗ, ಉದ್ಯೋಗ ನಿರ್ವಹಿಸುವಾಗ ಧರ್ಮಕ್ಕಿರುವ ದಂಡ-ವ್ಯವಹಾರಗಳೆಂಬ ಮತ್ತೆರಡು ಪಾದಗಳನ್ನು ಹತ್ತಿರದಲ್ಲಿ ಕಾಣುವ ಅವಕಾಶವಾಯಿತು. ಹೀಗಾಗಿ ಅವರ ಜೀವನವಿಡೀ ನಾಲ್ಕು ಪಾದಗಳುಳ್ಳ ಧರ್ಮದ ಹಲವು ತೆರನಾದ ಸೂಕ್ಷ್ಮತೆ-ಸಂದಿಗ್ಧತೆಗಳನ್ನು ಸಾವಧಾನವಾಗಿ ಗಮನಿಸಿ ಅನ್ವಯಿಸಿಕೊಳ್ಳುವ ಸಾಧನೆಯಾಯಿತು. ಈ ಕಾರಣದಿಂದ ಅವರಿಗೆ ಧರ್ಮಶಾಸ್ತ್ರವೂ ಅದರ ಪ್ರಾತಿನಿಧಿಕಗ್ರಂಥಗಳ ಪೈಕಿ ಮುಖ್ಯವಾದ ಮನುಸ್ಮೃತಿಯೂ ಅಭಿಮಾನಾಸ್ಪದವಾದುವು. ತಮ್ಮ ಕೈಚೀಲದಲ್ಲಿ ಸದಾ ಮನುಸ್ಮೃತಿಯ ಪ್ರತಿಯೊಂದನ್ನು ಹಿಡಿದಿರುತ್ತಿದ್ದರು. ಅವರು ಪ್ರಮುಖವಾದ ಮಿಕ್ಕೆಲ್ಲ ಸ್ಮೃತಿ-ಸೂತ್ರಗಳನ್ನು ಚೆನ್ನಾಗಿ ಓದಿಕೊಂಡಿದ್ದವರೇ. ಆದರೆ ಮನುವಿನಲ್ಲಿ ಬರುವ ಅನೇಕಸಂಗತಿಗಳು ಅವರ ಮನಸ್ಸನ್ನು ಮಿಗಿಲಾಗಿ ಮುಟ್ಟಿದ್ದವು.
ಈ ಹೊತ್ತು ಮನುಸ್ಮೃತಿಯೆಂದರೆ ಸಾಕು ಸುಡು, ಕಡಿ, ಕೊಚ್ಚು, ಕೊಲ್ಲು ಎಂಬಷ್ಟು ರೊಚ್ಚು ಲೋಕದಲ್ಲಿದೆ. ಈ ರೋಷ ನ್ಯಾಯವೆನ್ನಿಸುವಂಥ ಕೆಲವು ಭಾಗಗಳೂ ಆ ಕೃತಿಯಲ್ಲಿವೆಯೆನ್ನಿ. ಆದರೆ ಎಲ್ಲರಿಗೂ ಎಲ್ಲ ಕಾಲಕ್ಕೂ ಉಪಾದೇಯವಾಗಬಲ್ಲ ಮೌಲಿಕಸಂಗತಿಗಳು ಸಾಕಷ್ಟು ಅಲ್ಲಿ ನಿಕ್ಷಿಪ್ತವಾಗಿವೆ ಎಂಬ ತಥ್ಯವನ್ನು ಮರೆಯುವಂತಿಲ್ಲ. ಇವುಗಳ ಪೈಕಿ ಪರಮೋಚ್ಚವಾದುವು ಆತ್ಮತತ್ತ್ವ ಮತ್ತು ಸಾಮಾನ್ಯಧರ್ಮ. ಇವುಗಳನ್ನು ತಮ್ಮ ಬಾಳಿನುದ್ದಕ್ಕೂ ಕೃಷ್ಣಮೂರ್ತಿಗಳು ಪ್ರತಿಪಾದಿಸುತ್ತ ಬಂದರು; ಆಚರಿಸುತ್ತಲೂ ನಿಂದರು. ಈ ನಿಟ್ಟಿನಲ್ಲಿ ನಾನು ಅವರಿಗಿಂತ ಪ್ರಾಮಾಣಿಕರನ್ನು ಚರ್ಮಚಕ್ಷುಗಳಿಂದ ನೋಡಿಲ್ಲ.
ಕೃಷ್ಣಮೂರ್ತಿಗಳ ಅಂತರಂಗದಲ್ಲಿ ಧರ್ಮವು ಅದೆಷ್ಟು ಉದಾರಮನೋಹರವಾಗಿ ನೆಲೆಸಿತ್ತೆಂಬುದಕ್ಕೆ ಅವರೇ ನಿರೂಪಿಸಿದ ಒಂದು ಘಟನೆಯನ್ನು ನೆನೆದರೆ ಸಾಕಾದೀತು. ಅವರ ಬಾಲ್ಯದಲ್ಲೊಮ್ಮೆ ನಡೆದ ಸಂಗತಿಯಿದು. ಅವರ ತಾಯಿ ಅಡುಗೆಯ ಕೆಲಸಕ್ಕೆಂದು ಒಣಮೆಣಸಿನ ಕಾಯಿಗಳನ್ನುಒಂದು ಚೊಂಬಿನೊಳಗೆ ನೆನೆಸಿಟ್ಟಿದ್ದರಂತೆ. ಅವುಗಳು ಚೆನ್ನಾಗಿ ನೆನೆದ ಬಳಿಕ ತಮ್ಮ ಕೆಲಸಕ್ಕೆ ಬಳಿಸಿಕೊಂಡರಾದರೂ ಆ ಚೊಂಬಿನಲ್ಲಿದ್ದ ಘಾಟಾದ ನೀರು ಹಾಗೆಯೇ ಉಳಿದಿತ್ತು. ಈ ಸಂಗತಿಯನ್ನೇ ಅವರು ಮರತಿದ್ದರಂತೆ. ಆಗ ಬೀದಿಯ ಭಿಕ್ಷುಕನೊಬ್ಬನ ಬೇಡಿಕೆಯನ್ನು ಕೇಳಿ ಅವನಿಗೆ ಭಿಕ್ಷೆಯನ್ನು ಹಾಕಿದ ತಾಯಿ ಕುಡಿಯಲೆಂದು ಈ ನೀರನ್ನೇ ಬೊಗಸೆಗೆ ಹುಯ್ದರಂತೆ. ಆ ಭಿಕ್ಷುಕನೋ ಮಾತು ಬಾರದ ಮೂಗ. ಹಸಿದ ಹೊಟ್ಟೆ ತುಂಬಿದ ಬಳಿಕ ಮಿಗಿಲಾಗಿ ಬೇಕೆನಿಸುವ ನೀರು ಘಾಟಾಗಿ ಉರಿಯುತ್ತ ಗಂಟಲಲ್ಲಿಳಿದರೆ ಗತಿ ಹೇಗೆ? ಕಂಗಾಲಾದ ಆ ಬಡಪಾಯಿ ತನಗಾದ ಸಂಕಟವನ್ನೂ ಹೇಳಿಕೊಳ್ಳಲಾಗದೆ ಮೂಕವೇದನೆಯನ್ನು ಹಾವ-ಭಾವಗಳಿಂದ ವ್ಯಕ್ತೀಕರಿಸಿ ಒದ್ದಾಡಿದನಂತೆ. ಆಗ ತಾಯಿಯವರಿಗೆ ತಮ್ಮ ಅಚಾತುರ್ಯದ ಅರಿವಾಯಿತು. ಇದನ್ನು ಉದಾಹರಿಸಿದ ಕೃಷ್ಣಮೂರ್ತಿಗಳು ಈ ಘಟನೆಯ ಮೂಲಕ ತಮಗೆ ತೈತ್ತಿರೀಯೋಪನಿಷತ್ತು ಹೇಳುವ ಭಿಯಾ ದೇಯಂ, ಸಂವಿದಾ ದೇಯಂ (ಅಂಜಿ ಕೊಡಬೇಕು, ತಿಳಿದು ಕೊಡಬೇಕು) ಎಂಬ ಮೌಲ್ಯ ಅಂತರಂಗಕ್ಕಿಳಿಯಿತೆಂದು ಹೇಳಿದರು. ಅವರ ಪ್ರಕಾರ ನಾವು ಮತ್ತೊಬ್ಬರಿಗೆ ನೀಡುವ ನೆರವು ಪ್ರತಿಷ್ಠೆಯ ಸಂಕೇತವಾಗದೆ ಪ್ರೀತಿಯ ಅಭಿವ್ಯಕ್ತಿಯಾಗಬೇಕೆಂದರೆ ದಾನಿಯ ಉಪಕಾರ ಪ್ರತಿಗೃಹೀತೃವಿನ ಪಾಲಿಗೆ ಅಪಕಾರವಾದೀತೋ ಎಂಬ ಎಚ್ಚರದಿಂದ ಕೂಡಿರಬೇಕು; ಇದಕ್ಕೆ ದಾತೃ, ಪ್ರತಿಗೃಹೀತೃ, ದೇಯ ಮತ್ತು ಆಯಾ ದೇಶ-ಕಾಲಗಳ ತಿಳಿವಳಿಕೆಯೂ ಚೆನ್ನಾಗಿರಬೇಕು.
ಹೀಗೆ ಯಾವುದೇ ಮೌಲ್ಯದ ಹೃದಯವನ್ನು ಚಿಕಿತ್ಸಕವಾಗಿ ಹಿಡಿಯಬಲ್ಲ ಶಕ್ತಿ ಕೃಷ್ಣಮೂರ್ತಿಗಳಿಗೆ ಇದ್ದ ಕಾರಣವೇ ಎಷ್ಟೋ ಮಂದಿ ದೊಡ್ಡದೊಡ್ಡ ಪಂಡಿತರಿಗೂ ಸ್ಫುರಿಸದ ಒಳಹೊಳಹುಗಳು ಅವರಿಗೆ ದಕ್ಕುತ್ತಿದ್ದುವು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಅವರೊಮ್ಮೆ ನನಗೆ ಹೇಳಿದ ವಸ್ತುತಂತ್ರ ಮತ್ತು ಕರ್ತೃತಂತ್ರದ ವಿವರ. ನಾನು ಬಲ್ಲಂತೆ ಭಾರತೀಯದರ್ಶನಶಾಸ್ತ್ರಗಳಲ್ಲಿ ಈ ಪರಿಭಾಷೆಯನ್ನು ಮೊದಲು ಬಳಸಿದವರೂ ಅತ್ಯಂತ ಸಮರ್ಥವಾಗಿ ಬಳಸಿದವರೂ ಶಂಕರಭಗವತ್ಪಾದರೊಬ್ಬರೇ. ಕರ್ತೃತಂತ್ರವನ್ನು ಪುರುಷತಂತ್ರವೆಂದೂ ಹೇಳುವುದುಂಟು. ಇದು ನಾವು ಮಾಡಿಕೊಂಡ—ಹೀಗಾಗಿಯೇ ಕೃತಕವೂ ಆದ—ಒಡಂಬಡಿಕೆ. ನಮ್ಮ ಎಷ್ಟೋ ಮತವಿಶ್ವಾಸಗಳೂ ನೈತಿಕ-ಸಾಮಾಜಿಕಮೌಲ್ಯಗಳೂ ಕರ್ತೃತಂತ್ರದ ವಲಯದೊಳಗೇ ಬರುತ್ತವೆ. ಆದರೆ ವಸ್ತುತಂತ್ರವು ಹೀಗಲ್ಲ. ಅದು ಕಟ್ಟಲೆ-ನಂಬಿಕೆಗಳ ಪರಿಧಿಯನ್ನು ಮೀರಿದ ತ್ರಿಕಾಲಾಬಾಧಿತವಾದ ಸತ್ಯ; ಪರಮಾರ್ಥತಃ ಸಚ್ಚಿದಾನಂದ. ಅಂದರೆ, ಯಾವ ನಿರಪೇಕ್ಷಮೌಲ್ಯದ ನೆಲೆಯಲ್ಲಿ ಮಿಕ್ಕೆಲ್ಲ ಸಾಪೇಕ್ಷಮೌಲ್ಯಗಳನ್ನೂ ಒರೆಗೆ ಹಚ್ಚುತ್ತೇವೆಯೋ ಅದು ವಸ್ತುತಂತ್ರವೆಂದು ತಾತ್ಪರ್ಯ. ಈ ಎರಡು ನೆಲೆಗಳ ಪರಿಷ್ಕಾರವನ್ನು ಪ್ರತಿಯೊಂದು ವಿದ್ಯೆಯಲ್ಲಿಯೂ ನಾವು ಮನಗಾಣದಿದ್ದರೆ ಗೊಂದಲ ತಪ್ಪದು. ಇದನ್ನು ಕೃಷ್ಣಮೂರ್ತಿಗಳು ತುಂಬ ಅನೌಪಚಾರಿಕವಾಗಿ ಸಂಕ್ಷೇಪಕ್ರಮದಿಂದ ಹೇಳಿದ್ದರು. ಇದರ ಮಹತ್ತ್ವವನ್ನು ಆ ಹೊತ್ತಿಗಾಗಲೇ ಶಂಕರಭಗವತ್ಪಾದರ ಭಾಷ್ಯಗಳಲ್ಲಿ ನಾನು ಕಂಡಿದ್ದರೂ ಅದನ್ನು ಕೃಷ್ಣಮೂರ್ತಿಗಳಂಥ ಉಪಶಾಂತರ ಬಾಯಿಂದ ಕೇಳಿದಾಗ ಅದಕ್ಕೆ ಎಲ್ಲಿಲ್ಲದ ಕಾಂತಿ ಬಂದಿತ್ತು. ಏಕೆಂದರೆ ಈ ವಿಷಯವನ್ನು ನಾನು ಕನ್ನಡದ ಮಟ್ಟಿಗೆ ಹೊಳೆನರಸೀಪುರದ ಶ್ರೀಸಚ್ಚಿದಾನಂದೇಂದ್ರಸರಸ್ವತಿ ಸ್ವಾಮಿಗಳ ಬರೆವಣಿಗೆಗಳಲ್ಲಿ ಬಿಟ್ಟು ಬೇರೆಲ್ಲಿಯೂ ಕಂಡಿರಲಿಲ್ಲ. ಅಲ್ಲಿಯಾದರೂ ಇದು ಹತ್ತರೊಳಗೆ ಹನ್ನೊಂದೆಂಬಂತೆ ಶಾಸ್ತ್ರದ ಓಘದಲ್ಲಿ ಬಂದಿತ್ತು. ಕೃಷ್ಣಮೂರ್ತಿಗಳಾದರೋ ಇದನ್ನು ವ್ಯಾಪಕಾರ್ಥದಲ್ಲಿ ಗುರುತಿಸಿ ಅನ್ವಯಿಸಿಕೊಂಡಿದ್ದರು. ಇಂಥ ಒಳನೋಟ ಅವರದಾಗಿದ್ದ ಕಾರಣ ಅವರಲ್ಲಿ ಸಹಜವಾಗಿದ್ದ ಸಜ್ಜನಿಕೆಗೆ ಹೆಚ್ಚಿನ ದಾರ್ಢ್ಯ ಒದಗಿತ್ತು.
ಕೃಷ್ಣಮೂರ್ತಿಗಳು ಯಾವುದೇ ವಿಷಯದ ಮೇಲೆ ಹೊಸಬೆಳಕನ್ನು ಚೆಲ್ಲಬಲ್ಲವರಾಗಿದ್ದರು. ಆ ಬೆಳಕು ಉಪಾದೇಯವೂ ಆಗಿರುತ್ತಿತ್ತು. ಅಂಥ ಅಂಶಗಳು ಹತ್ತಾರು. ಅವುಗಳಲ್ಲೊಂದು ಒಮ್ಮೆ ಅವರು ಅಥರ್ವಸಂಹಿತೆಯ ಪೃಥ್ವೀಸೂಕ್ತದ ಮಂತ್ರವೊಂದಕ್ಕೆ ನೀಡಿದ ಸ್ವೋಪಜ್ಞವಿವರಣೆ. ಮೂಲ ಹೀಗಿದೆ:
“ಸತ್ಯಂ ಬೃಹದ್ ಋತಮುಗ್ರಂ ದೀಕ್ಷಾ ತಪೋ ಬ್ರಹ್ಮ ಯಜ್ಞಃ ಪೃಥಿವೀಂ ಧಾರಯಂತಿ” (ಅಥರ್ವವೇದ, ೧೨.೧.೧)
ಇದರ ತಾತ್ಪರ್ಯವಿಷ್ಟು: ಭೂಮಿಯನ್ನು ತಾಳಿರುವುದು ಉಗ್ರವಾದ ಋತ, ದೊಡ್ಡದಾದ ಸತ್ಯ, ದೀಕ್ಷೆ, ತಪಸ್ಸು, ಬ್ರಹ್ಮ ಮತ್ತು ಯಜ್ಞಗಳು. ಮೇಲ್ನೋಟಕ್ಕೆ ತುಂಬ ಸರಳವಾಗಿ ತೋರುವ ಈ ಮಂತ್ರಕ್ಕೆ ಸಾಂಪ್ರದಾಯಿಕಭಾಷ್ಯಗಳಲ್ಲಿ ಹೆಚ್ಚಿನ ಹೊಳಪೇನೂ ದಕ್ಕಿಲ್ಲ. ಕೃಷ್ಣಮೂರ್ತಿಗಳ ಪ್ರಕಾರ ಈ ಮಂತ್ರದಲ್ಲಿ ಎರಡು ಅಂಶಗಳಿವೆ: ಒಂದು ನೈಸರ್ಗಿಕ ಮತ್ತೊಂದು ಸಾಂಸ್ಕೃತಿಕ. ಮೊದಲನೆಯ ಅಂಶದಲ್ಲಿ ಋತ-ಸತ್ಯಗಳು ಬರುತ್ತವೆ; ಮಿಕ್ಕ ನಾಲ್ಕು ಸಾಂಸ್ಕೃತಿಕ ಅಂಶಗಳು. ಸತ್ಯವೆಂದರೆ ಅಸ್ತಿತ್ವ. ಅದು ಮೇಲ್ನೋಟಕ್ಕೇ ಪಂಚೇಂದ್ರಿಯಗಳಿಗೆ ದಕ್ಕುವಂಥದ್ದು. ಇದು ಸಹಜವಾಗಿಯೇ ಹಿರಿದಾದದ್ದು, ವಿಸ್ಮಯಾವಹವೂ ಆದದ್ದು. ಈ ಎಲ್ಲ ಅಸ್ತಿತ್ವದ ಹಿಂದಿರುವ ಚಾಲಕಶಕ್ತಿ, ವ್ಯವಸ್ಥಾಶಕ್ತಿ ಋತ. ಇದನ್ನು ಕೆಣಕುವುದು ಅಪಾಯಕರ. ಪ್ರಬುದ್ಧನಲ್ಲದವನು ಋತದಲ್ಲಿ ಹಸ್ತಕ್ಷೇಪ ಮಾಡುವುದು ಅನುಚಿತ. ಹೀಗಾಗಿಯೇ ಋತವು ಉಗ್ರ. ಇಂಥ ಜಗದ್ವ್ಯವಸ್ಥೆಯನ್ನು ಮಾನವಸಂಸ್ಕೃತಿ ಕಾಪಿಟ್ಟುಕೊಳ್ಳಬೇಕು; ಅರ್ಥವತ್ತಾಗಿ ಬಳಸಿಕೊಂಡು ಕೈವಲ್ಯವನ್ನು ಕಾಣಬೇಕು. ಈ ಬಗೆಯ ಪ್ರಜ್ಞಾಜೀವನವೇ ಭೂಮಿಯನ್ನು ತಾಳುವ ಮತ್ತೊಂದು ಆಯಾಮ. ಇದಕ್ಕೊಂದು ಸತ್ಸಂಕಲ್ಪ ಬೇಕು. ಅದೇ ದೀಕ್ಷೆ. ಇಂಥ ದೀಕ್ಷೆ ಕಷ್ಟ-ನಷ್ಟಗಳನ್ನು ತಾಳಿಕೊಳ್ಳಬಲ್ಲ ಅಂತರ್ಬಲವನ್ನು ಮೈಗೂಡಿಸಿಕೊಳ್ಳಬೇಕು. ಅದು ತಪಸ್ಸು. ಈ ಬಗೆಯ ದೀಕ್ಷೆ-ತಪಸ್ಸುಗಳಿಗೆ ಒದಗಿಬರುವ ಜ್ಞಾನವೇ ಬ್ರಹ್ಮ; ಅರ್ಥಾತ್, ವೇದ. ಹೀಗೆ ಜ್ಞಾನಪುರಃಸರವಾದ ತಪಃಸಂಕಲ್ಪದಿಂದ ಮಾಡುವ ಕೆಲಸ ಯಜ್ಞವಾಗುತ್ತದೆ. ಅದು ಜಗತ್ತನ್ನೆಲ್ಲ ತಾಳುತ್ತದೆ.
ಅವಧಾನವೊಂದರಲ್ಲಿ ನಾನು ಅವರಿಗೆ ಸಲ್ಲಿಸಿದ ಪೂಜಾಪ್ರಸೂನವಿದು:
ಶಾ || ಸೌಜನ್ಯಾಯತನಂ ಸುಧೀಸಹೃದಯಂ ಸಾಹಿತ್ಯಸತ್ತ್ವೇ ಸ್ಥಿತಂ
ನಿರ್ಲೇಪಕ್ರಿಯಯಾನ್ವಿತಂ ನಿಜಗುಣೈರ್ನವ್ಯಂ ನತಂ ನಿಸ್ತುಲಮ್ |
ಆರ್ಷಶ್ರೀಕವಿತೇವ ಬಾಹ್ಯಸರಲಂ ಭೂಮಾನಮಂತಃಪ್ರಭಂ
ಲಂಕಾಂಕಂ ತ್ವಕಲಂಕಮೇವ ಕಲಯೇ ಕೃಷ್ಣಂ ಶುಚಿಖ್ಯಾಪಕಮ್ ||
ಸೌಜನ್ಯದ ನೆಲೆ, ವಿದ್ವತ್ತೆಯ ಪರಿಪಾಕ, ಸಾಹಿತ್ಯದ ಸತ್ತ್ವ, ನಿರ್ಲೇಪಕರ್ಮದ ನಯಗಳೆಂಬ ಸದ್ಗುಣಗಳಿಂದ ಹೋಲಿಕೆಯಿಲ್ಲದೆ ಸ್ತವನೀಯರಾದವರು ಲಂಕಾ ಕೃಷ್ಣಮೂರ್ತಿಗಳು. ಅವರು ಆರ್ಷಕಾವ್ಯದಂತೆ ಬಹಿರಂಗದಲ್ಲಿ ಸರಳ, ಅಂತರಂಗದಲ್ಲಿ ಮಹೋನ್ನತ; ಹೆಸರಿಗೆ ಕೃಷ್ಣನಾದರೂ ಉಸಿರಿನಿಂದ ವಿಶುದ್ಧ.
* * *
ನನಗೆ ನೆನಪಿರುವಂತೆ ಕೃಷ್ಣಮೂರ್ತಿಗಳಿಗೆ ಸಾರ್ವಜನಿಕವಾದ ಸಮ್ಮಾನ ಸಂದದ್ದು ಒಂದೇ ಬಾರಿ. ಅದೂ ಆತ್ಮೀಯರ ಮೇರೆ ಮೀರಿದ ಒತ್ತಾಯಕ್ಕೆ ಒಪ್ಪಿಕೊಂಡದ್ದು. ಇಲ್ಲಿಯಾದರೂ ಹಾರ-ತುರಾಯಿಗಳ ಕೋಲಾಹಲ ಇಲ್ಲವೆಂಬಷ್ಟು ಕಡಮೆ. ಅವರಿಗಾಗಿ ನಾನು ರೂಪಿಸಿದ ಹಾರಬಂಧ, ಪುಷ್ಪಗುಚ್ಛಬಂಧ, ಕಂಕಣಬಂಧ ಮತ್ತು ರಾಂಕವಬಂಧದ ಪದ್ಯಗಳೇ ಅಲ್ಲಿ ಸಂದ ಹೆಚ್ಚಿನ ಆಡಂಬರಗಳು.
ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ಕೃಷ್ಣಮೂರ್ತಿಗಳು ಆಹಾರ-ವಿಹಾರಗಳಲ್ಲಿ ವ್ರತಿಷ್ಠರು. ಮಡಿ-ಮೈಲಿಗೆಗಳ, ಜಾತಿ-ಮತಗಳ ಆಗ್ರಹಗಳು ಎಳ್ಳಷ್ಟೂ ಇಲ್ಲದಿದ್ದರೂ ಸರಳವಾದ ಮಿತಾಹಾರ ಮತ್ತು ತಣ್ಣೀರಿನ ಸ್ನಾನ ಅವರ ಜನ್ಮವ್ರತಗಳಲ್ಲಿ ಸೇರಿದ್ದವು. ಕಡೆಯ ವರ್ಷಗಳಲ್ಲಿ ಏಕಭುಕ್ತಿಗೇ ಸೀಮಿತರಾಗಿದ್ದರು. ಹಾಗೆಂದ ಮಾತ್ರಕ್ಕೆ ರುಚಿರಾಸಿಕ್ಯಕ್ಕೆ ವಿಮುಖರಾಗಿರಲಿಲ್ಲ. ಯಾವುದಕ್ಕೂ ದಾಸರಾಗಬಾರದೆಂಬುದು ಅವರ ತತ್ತ್ವ. ಇಂಥ ನಿಯತಜೀವನವನ್ನು ಸಾಗಿಸಿದ್ದರೂ ಅವರ ಕೊನೆಯ ದಿನಗಳಲ್ಲಿ ಆರೋಗ್ಯದ ಏರುಪೇರಾಯಿತು. ಹಾದಿಯಲ್ಲಿ ಹೋಗುತ್ತಿದ್ದಾಗ ಯಾವುದೋ ವಾಹನ ಇವರ ಮೇಲೆ ನುಗ್ಗಿ ಪೆಟ್ಟಾಯಿತು. ಅದರ ಆಘಾತದಿಂದ ಅವರ ದೇಹಕ್ಕಿಂತ ಮನಸ್ಸು ಹೆಚ್ಚಾಗಿ ಕ್ಷೋಭೆಗೊಂಡಿತು. ಕೊನೆಯ ಆರು ತಿಂಗಳಲ್ಲಿ ಬಹುಶಃ ಅವರು ಎಲ್ಲಿಯೂ ಸಂಚರಿಸುತ್ತಿರಲಿಲ್ಲ. ನನ್ನ ಅವಧಾನಗಳಿಗೆ ಮಾತ್ರ ಬರುತ್ತಿದ್ದರು. ಅದೂ ನಗರದಲ್ಲಿ ಮಾತ್ರ.
ಅವರ ಅವಸಾನಕ್ಕಿಂತ ಮೂರು ತಿಂಗಳ ಮುನ್ನ ಭವನದಲ್ಲಿ ಆಯೋಜಿತವಾಗಿದ್ದ ಅವಧಾನಕ್ಕೆ ಅವರನ್ನು ನಾನೇ ಮನೆಯಿಂದ ಕರೆದು ತಂದೆ. ಆ ಹೊತ್ತಿಗಾಗಲೇ ಅವರಿಗೆ ಅದೊಂದು ಬಗೆಯ ಅಂತರ್ಮುಖತೆ ಮೈಗೂಡಿತ್ತು. ಮಾತು ಮತ್ತಷ್ಟು ಕಡಮೆಯಾಗಿತ್ತು. ಎಂದೂ ಮಾತು ಹೆಚ್ಚಾದ ನಾನು ಹಾದಿಯಲ್ಲಿ ಪ್ರಶ್ನಿಸಿದೆ: “ನಿಮಗೆ ಈಗ ಜಗತ್ತು ಹೇಗೆ ಕಾಣುತ್ತಿದೆ?” ಎಂದು. ಅದಕ್ಕವರು ಮೈ ಜುಮುಗುಟ್ಟಿಸುವಂಥ ಉತ್ತರವಿತ್ತರು: “ನನಗೆ ಎಲ್ಲ ಪರಮಾತ್ಮನ ಲೀಲೆಯಾಗಿ ಕಾಣುತ್ತಿದೆ. ವೈಷಮ್ಯವೇ ತೋರುತ್ತಿಲ್ಲ. ಎಲ್ಲ ಆನಂದವಾಗಿಯೇ ತೋರುತ್ತಿದೆ.” ಈ ಮಾತುಗಳನ್ನೇ ಅವರು ಹಲವು ಬಗೆಯಲ್ಲಿ ವಿಸ್ತರಿಸಿದರು. ಮಾತ್ರವಲ್ಲ, ತಮಗೊಂದು ಕನಸಾದುದನ್ನೂ ಹೇಳಿದರು. ಆ ಕನಸಿನಲ್ಲಿ ಅವರಿಗೆ ತಿರುಪತಿಯ ದೇವರು “ನಿನ್ನ ಕೆಲಸವಿನ್ನು ಮುಗಿಯಿತು” ಎಂದು ಹೇಳಿದನಂತೆ. ಇದಾದ ಮೇಲೆ ನಾನವರನ್ನು ಕಂಡದ್ದು ಅಪಶ್ಚಿಮದರ್ಶನವಾಗಿಯೇ.
೧೯೯೬ರ ದೀಪಾವಳಿಯ ಆಸುಪಾಸಿನಲ್ಲಿ ಕೃಷ್ಣಮೂರ್ತಿಯವರು ಇನ್ನಿಲ್ಲವೆಂಬ ದುರ್ವಾರ್ತೆ ಬಂದಿತು. ನವೆಂಬರ್ ೧೧ರಂದು ಅವರು ಪರಮಪದ ಸೇರಿದ್ದರು. ತೀರ ಕೊನೆಗಾಲಕ್ಕೆ ಅವರು ಕ್ಯಾನ್ಸರ್ ಪೀಡಿತರಾಗಿದ್ದರೆಂದು ತಿಳಿದುಬಂತಂತೆ. ಚಿಕಿತ್ಸೆಗೆ ಅವಕಾಶವಿಲ್ಲದೆ ಎಲ್ಲ ಕೈಮೀರಿದ ಕಾರಣ ಬೆಳಕಿನ ಹಬ್ಬದಂದು ಅವರು ಬೆಳಕಲ್ಲಿ ಸೇರಿಹೋಗಿದ್ದರು. ನಮಗಷ್ಟೇ ಕತ್ತಲು ಉಳಿದಿತ್ತು.
ಶಾಂತಾ ಮಹಾಂತೋ ನಿವಸಂತಿ ಸಂತೋ ವಸಂತವಲ್ಲೋಕಹಿತಂ ಚರಂತಃ