ಅವಧಾನ ಮರುದಿನ ಸಂಜೆ ಏರ್ಪಾಟಾಗಿತ್ತು. ಹೀಗಾಗಿ ಹಿಂದಿನ ದಿನವೆಲ್ಲ ನಮಗೆ ಬಿಡುವಿತ್ತು. ಹತ್ತಿರದ ಕೆಳದಿ, ಇಕ್ಕೇರಿ, ಬನವಾಸಿ ಮುಂತಾದ ಕ್ಷೇತ್ರಗಳಿಗೆಲ್ಲ ಶರ್ಮರು ನಮ್ಮನ್ನು ಕರೆದೊಯ್ದರು. ಎಲ್ಲೆಲ್ಲೂ ಸುಗ್ರಾಸವಾದ ಹವ್ಯಕಭೋಜನ ಸ್ವಾಗತಿಸುತ್ತಿತ್ತು. ರಾತ್ರಿ ಹೊಸಬಾಳೆಯಲ್ಲಿ ಗಮಕಿ ಸೀತಾರಾಮರಾಯರ ಮನೆಯಲ್ಲಿ ಉಳಿದದ್ದಾಯಿತು. ಅವರು ಶರ್ಮರ ಬಂಧುಗಳೂ ಹೌದು. ಜಗಲಿಯ ಮೇಲೆ ಪದ್ಮನಾಭನ್ ಅವರು ಮಲಗಿದರು. ಅವರ ಇರ್ಕೆಲಗಳಲ್ಲಿ ಕೃಷ್ಣಮೂರ್ತಿಗಳಿಗೂ ರಂಗನಾಥಶರ್ಮರಿಗೂ ಹಾಸಿಗೆ ಹಾಸಿತ್ತು. ನಾನು ಈ ಹಿರಿಯರಿಂದ ಸಾಕಷ್ಟು ದೂರದಲ್ಲಿ ಮಲಗಿದ್ದೆ. ದಿನವಿಡೀ ಸುತ್ತಿದ್ದ ಕಾರಣ ಎಲ್ಲರಿಗೂ ದಣಿವು. ಯಾವಾಗ ನಿದ್ರೆಗೆ ಜಾರಿದೆವೋ ಒಬ್ಬರಿಗೂ ನೆನಪಿಲ್ಲ. ಮುಂಜಾನೆ ಎದ್ದು ಪದ್ಮನಾಭನ್ ಅವರನ್ನು ಮಾತನಾಡಿಸಿದೆ. ಆ ಹೊತ್ತಿಗೆ ಅವರು ಸ್ನಾನ-ಸಂಧ್ಯೆಗಳನ್ನು ಮುಗಿಸಿದ್ದರು.
“ಏನು, ಸುಖವಾಗಿ ನಿದ್ರೆ ಬಂತೇ? ಈ ಪರಿಸರ ಎಷ್ಟು ಚೆನ್ನಾಗಿದೆ ಅಲ್ಲವೇ?” ಎಂದು ಸೌಖಶಾಯನಿಕನಾಗಿ ನಾನು ಕೇಳಿದೆ. ಆಗ ಅವರು “with due reverence to these great scholars ಹೇಳ್ತೀನಿ, ನನ್ನನ್ನು ಕೊಂದುಹಾಕಿಬಿಟ್ಟರು!” ಎಂದು ಉದ್ಗರಿಸಿ ತಾವು ಮಲಗಿದ್ದ ಜಗುಲಿಯತ್ತ ತಿರುಗಿ ಕೈಮುಗಿದರು. ನನಗೆ ಗಾಬರಿಯಾಗಿ ಇದೇನಾಯಿತೆಂದು ವಿಚಾರಿಸಿದೆ. ಆಗ ಅವರಿತ್ತ ಉತ್ತರ ಸ್ವಾರಸ್ಯಕರವಾಗಿತ್ತು: “ಏನು ಹೇಳೋದು ಸರ್, ಗೊರಕೆ! ಗೊರಕೆ! ಮತ್ತೂ ಗೊರಕೆ. ಮೊನ್ನೆ ರಾತ್ರಿ ನಿದ್ರೆಗೆಟ್ಟು ಬಸ್ಸಿನಲ್ಲಿ ಮಾಡಿದ ಚರ್ಚೆಯನ್ನು ನಿನ್ನೆ ರಾತ್ರಿ ಕೂಡ ನಿದ್ರೆಯಲ್ಲಿ ಮುಂದುವರಿಸಿದ್ದರು ಅಂತ ಅನ್ನಿಸುತ್ತದೆ. ಜಬಗಡದಶ್ ಅಂತ ಒಬ್ಬರು ಗೊರಕೆ ಬಿಟ್ಟರೆ ಜಭಞ್ ಅಂತ ಇನ್ನೊಬ್ಬರು ಗೊರಕೆ ಹೊಡೆಯೋದು! ಹೀಗೆ ಇಡೀ ರಾತ್ರಿ ಗೊರಕೆಗಳ ವ್ಯಾಕರಣಸೂತ್ರಗಳು!”
ನನಗೆ ನಗೆ ತಡೆಯಲಾಗಲಿಲ್ಲ. ಪುಣ್ಯವಶಾತ್ ಹಿರಿಯರಿಬ್ಬರೂ ಸ್ನಾನ-ಸಂಧ್ಯೆಗಳಿಗೆಂದು ತೆರಳಿದ್ದರು. ಇದು ವಿನೋದದ ಮಾತಾಯಿತು. ವಸ್ತುತಃ ಪದ್ಮನಾಭನ್ ಅವರಿಗೆ ಇಬ್ಬರಲ್ಲಿಯೂ ತುಂಬ ಪೂಜ್ಯಭಾವವಿದ್ದಿತು. ಶರ್ಮರಲ್ಲಂತೂ ಗುರುಭಕ್ತಿಯೇ ಇದ್ದಿತು. ಆದರೆ ಅವರು ಅಪ್ಪಟ ರಸಿಕರಲ್ಲವೇ; ಗೌರವಕ್ಕೆ ಗೌರವ, ವಿನೋದಕ್ಕೆ ವಿನೋದ. ಇದು ಸಹೃದಯಸಮಾಜದ ಸಮಯ. ಇದನ್ನೇ ಪದ್ಮನಾಭನ್ ಅವರ ಗುರುಗಳಾದ ಡಿ.ವಿ.ಜಿ. ಅವರು ಅನುಷ್ಠಿಸಿದ್ದು.
* * *
ಲಂಕಾ ಕೃಷ್ಣಮೂರ್ತಿಯವರಿಗೆ ಅವಧಾನಗಳಲ್ಲಿ ಯಾವುದೇ ರೀತಿಯ ಪ್ರಶ್ನೆಗಳು ಎದುರಾದರೂ ಅವನ್ನು ನಾನು ಕಷ್ಟವಿಲ್ಲದೆ ಉತ್ತರಿಸಬೇಕೆಂಬ ಕಾಳಜಿಯಿತ್ತು. ಹೀಗಾಗಿ ಅವರು ದುಷ್ಕರವಾದ ಬಗೆಬಗೆಯ ಸಮಸ್ಯೆಗಳನ್ನೂ ದತ್ತಪದಿಗಳನ್ನೂ ಅವಧಾನದಲ್ಲಿ ಒಡ್ಡುತ್ತಿದ್ದುದಲ್ಲದೆ ಅದರ ಆಚೆಯೂ ಹತ್ತಾರು ಬಾರಿ ಆಶುಪೂರಣಕ್ಕೆಂದು ಪ್ರಶ್ನೆಗಳನ್ನು ಮುಂದಿಡುತ್ತಿದ್ದರು. ಅಂಥ ಒಂದು ಸಂದರ್ಭ ಸೊರಬದ ಅವಧಾನ ಮುಗಿಸಿಕೊಂಡು ಬೆಂಗಳೂರಿಗೆ ಮರಳುವಾಗ ಒದಗಿತ್ತು. ಬಸ್ಸಿಗಾಗಿ ಕಾಯುತ್ತಿದ್ದಾಗ ಕೃಷ್ಣಮೂರ್ತಿಗಳು ದತ್ತಪದಿಯತ್ತ ಕಟಾಕ್ಷಿಸಿದರು. ಆ ವೇಳೆಗೆ ಆಗಲೇ ಸುಕರಪದಗಳನ್ನು, ದುಷ್ಕರಪದಗಳನ್ನು, ಅನ್ಯಭಾಷಾಪದಗಳನ್ನು, ಅನುಕರಣಶಬ್ದಗಳನ್ನು ಬಳಸಿ ದತ್ತಪದಿ ಮಾಡುವ ಕ್ರಮ ನನಗೆ ತಿಳಿದಿತ್ತು. ಆದರೆ ಇದೀಗ ಕೃಷ್ಣಮೂರ್ತಿಗಳು ನಿರರ್ಥಕವಾದ, ಒಂದೇ ವರ್ಣದ ಪುನರುಕ್ತಿಯುಳ್ಳ “ಪದ”ಗಳನ್ನು ಬಳಸಿ ಆಶುಪೂರಣ ಮಾಡುವಂತೆ ಆದೇಶಿಸಿ ವಸ್ತು ಮತ್ತು ಪದಗಳನ್ನು ಕೊಟ್ಟರು.
ಪದಗಳು: ನಾನಾನಾ, ನೀನೀನೀ, ನೇನೇನೇ ಮತ್ತು ನೋನೋನೋ; ವಸ್ತು: ಇಷ್ಟದೇವತೆಯ ಸ್ತುತಿ.
ರಂಗನಾಥಶರ್ಮರು ಇದನ್ನು ಕೇಳಿ “ಇಂಥ ದುಷ್ಕರಪ್ರಶ್ನೆಗಳಿಗೆ ಏಕಾಕ್ಷರಕೋಶಗಳ ಸಹಾಯ ಪಡೆಯದೆ ಉತ್ತರ ಕೊಡುವುದು ಕಷ್ಟ; ಹಾಗೆ ಹುಟ್ಟುವ ಉತ್ತರಗಳು ಹೃದ್ಯವೂ ಆಗಿರುವುದಿಲ್ಲ; ಅದೇತಕ್ಕೆ ಈ ಪರಿಯ ಕಸರತ್ತು?” ಎಂದು ಕೇಳಿದರು. ಆಗ ಕೃಷ್ಣಮೂರ್ತಿಗಳು “ಇಲ್ಲ ಸಾರ್. ಇಂಥ ವರಸೆಗಳನ್ನೆಲ್ಲ ತಿಳಿದುಕೊಳ್ಳದಿದ್ದರೆ ಅವಧಾನರಂಗದಲ್ಲಿ ತುಂಬ ಕಾಲ ನಿಲ್ಲುವುದಕ್ಕೆ ಸಾಧ್ಯವಿಲ್ಲ” ಎಂದರು. ಪದ್ಮನಾಭನ್ ಅವರು “ಎರಡೆರಡು ಅಕ್ಷರ ಆದರೆ ಮಾಡಬಹುದೇನೋ, ಮೂರು ಮೂರು ಅಕ್ಷರ ಆದರೆ ಕಷ್ಟವಲ್ಲವೇ?” ಎಂದು ಸಹಾನುಭೂತಿ ಸೂಚಿಸಿದರು. ಅಷ್ಟು ಹೊತ್ತಿಗೆ ನನ್ನ ಪದ್ಯ ಸಿದ್ಧವಾಗಿತ್ತು:
ಕಂ || ನಾನಾನಾಟಕಸೂತ್ರಾ!
ನೀನೀ ನೀರಸಜಗಕ್ಕೆ ರಸದಾ! ಮತ್ತಿ-
ನ್ನೇನೇ ನೇಹದೆ ಸುಖಭಾ-
ನೋ! ನೋನೋಯ್ವಾತ್ಮಕಂಜಮಂ ವಿಕಸಿಸೆಯಾ?
ಕೃಷ್ಣಮೂರ್ತಿಗಳು ತುಂಬ ಮೆಚ್ಚಿದ್ದಲ್ಲದೆ ಸಾರ್ವತ್ರಿಕವಾದ ಒಂದು ಎಚ್ಚರವನ್ನೂ ಹೇಳಿದರು: “ನೋಡಿ ಸಾರ್, ಕನ್ನಡದಲ್ಲಿ ಈಗ ಅವಧಾನಕಲೆ ತಲೆಯೆತ್ತುತ್ತಾ ಇದೆ. ಇದು ಆರಂಭದಲ್ಲಿಯೇ ಅಗ್ಗವಾಗಬಾರದು, ಜಾಳಾಗಬಾರದು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವ ಗಾದೆಯಂತೆ ಆದ್ಯರು ಮಾಡಿದ್ದನ್ನೇ ಮುಂದಿನವರು ಆದರ್ಶವಾಗಿ ಸ್ವೀಕರಿಸಿಬಿಡುತ್ತಾರೆ. ಅದಕ್ಕೇ ನೀವು ಯಾವ ಕಾರಣಕ್ಕೂ ಅವಧಾನದಲ್ಲಿ ಶೈಥಿಲ್ಯ ತರಬಾರದು.” ಅವರ ಮಾತನ್ನು ನಾನು ಕಾಪಾಡಿಕೊಂಡಿದ್ದೇನೆಂದು ಭಾವಿಸಿದ್ದೇನೆ. ಈ ಕಾರಣದಿಂದಲೇ ದೂರದರ್ಶನದಲ್ಲಿ ಅವಧಾನ ಮಾಡುವಾಗ ಕಾರ್ಯಕ್ರಮದ ಪ್ರಸಾರಕ್ಕೆ ಸಾಕ್ಷಾತ್ ಪ್ರದರ್ಶನಕ್ಕಿಂತ ರಿಹರ್ಸ್ಡ್ ಪ್ರದರ್ಶನವಾದರೆ ಒಳಿತೆಂದು ಆಯೋಜಕರು ಆಗ್ರಹಿಸಿದರೂ ಇಂಥ ಶೈಥಿಲ್ಯಕ್ಕೆ ಆಸ್ಪದವೀಯದೆ ಎಂದಿನ ರೀತಿಯಲ್ಲಿಯೇ ಅವಧಾನಿಸುವುದಾಯಿತು.
ಇಂಥದ್ದೇ ಕಿವಿಮಾತನ್ನು ಟಿ. ವಿ. ವೆಂಕಟಾಚಲಶಾಸ್ತ್ರಿಗಳು ಒಮ್ಮೆ ಹೇಳಿದ್ದರು. ಅದು ಮೈಸೂರಿನಲ್ಲಾದ ನನ್ನ ಮೊದಲ ಅವಧಾನ. ನಿಷೇಧಾಕ್ಷರಕ್ಕೆ ಪೃಚ್ಛಕರಾಗಿ ಬಂದಿದ್ದ ಅವರು ಕಾರ್ಯಕ್ರಮದ ಕಡೆಯಲ್ಲಿ ಹೇಳಿದರು: “ಲಂಕಾ ಕೃಷ್ಣಮೂರ್ತಿಗಳು ವ್ಯಾಕರಣಶುದ್ಧಿಯನ್ನು ಮರೆಯುವುದಿಲ್ಲ, ಆದರೆ ಕಂದ-ವೃತ್ತಗಳಲ್ಲಿ ನಡುಗನ್ನಡದ ರೂಪಗಳನ್ನು ಧಾರಾಳವಾಗಿ ಬಳಸುತ್ತಾರೆ. ನೀವು ಕೆ. ಕೃಷ್ಣಮೂರ್ತಿಗಳ ಹಾಗೆ ಹಳಗನ್ನಡದ ಹದವನ್ನೇ ಕಾಯ್ದುಕೊಳ್ಳುತ್ತೀರಿ. ಇದು ಒಳ್ಳೆಯದು. ಎಂದೂ ಕಂದ-ವೃತ್ತಗಳಲ್ಲಿ ಹಳಗನ್ನಡದ ಹೆಚ್ಚಳವನ್ನು ಬಿಡಬೇಡಿ.” ಇದನ್ನೂ ನಾನು ಪರಿಪಾಲಿಸಿಕೊಂಡು ಬಂದಿದ್ದೇನೆ. ಇಲ್ಲಿ ಲಂಕಾ ಕೃಷ್ಣಮೂರ್ತಿಯವರ ನಿಲವು ಬೇರೆಯ ತೆರನಾಗಿತ್ತು. ಅವರಿಗೆ ತೆಲುಗಿನ ಸಂಪ್ರದಾಯ ಆದರ್ಶವಾಗಿ ತೋರಿತ್ತು. ಅಲ್ಲಿ ನನ್ನಯ್ಯನಿಂದ ಮೊದಲ್ಗೊಂಡು (ಗರಿಕಿಪಾಟಿ) ನರಸಿಂಹರಾಯರವರೆಗೆ ಸಾವಿರ ವರ್ಷಗಳಿಂದ ಬೆಳೆದುಬಂದ ಕಂದ-ವೃತ್ತಗಳ ರಚನೆ ಆಯಾ ಕಾಲದ ವಾಗ್ರೂಢಿಗಳನ್ನು ನಿಃಸಂಕೋಚವಾಗಿ ಬಳಸಿಕೊಂಡಿದೆ. ಹೀಗಾಗಿ ಕನ್ನಡದಲ್ಲಿಯೂ ಕಂದ-ವೃತ್ತಗಳಲ್ಲಿ ಷಟ್ಪದಿ-ಸಾಂಗತ್ಯಗಳಲ್ಲಿರುವಂತೆ ನಡುಗನ್ನಡ-ಹೊಸಗನ್ನಡಗಳ ಬಳಕೆ ಹೆಚ್ಚಾದಲ್ಲಿ ಈ ಪದ್ಯಬಂಧಗಳ ರಚನೆ ಸುಲಭವಾಗುವುದು, ಜನರಿಗೆ ಅವು ಸುಬೋಧವಾಗುವುವು ಮತ್ತು ಅವುಗಳ ಪ್ರಾಚುರ್ಯವೂ ಹೆಚ್ಚುವುದೆಂಬುದು ಲಂಕಾ ಕೃಷ್ಣಮೂರ್ತಿಗಳ ಅಭಿಮತ. ನನಗೇನೋ ಕಂದ-ವೃತ್ತಗಳಿಗೆ ಹಳಗನ್ನಡವೇ ಚೆನ್ನವೆಂಬ ನಿಶ್ಚಯ ಮನದಟ್ಟಾಗಿದೆ. ಆದರೆ ಷಟ್ಪದಿ, ಸಾಂಗತ್ಯ, ರಗಳೆ, ಚೌಪದಿಗಳಿಗೆ ಎಲ್ಲ ಬಗೆಯ ಕನ್ನಡವೂ ಸಮುಚಿತವೆನಿಸಿದೆ. ಹೀಗೆಯೇ ನನ್ನ ಗೃಹಕವಿತ್ವ-ಸಭಾಕವಿತ್ವಗಳು ಸಾಗಿವೆ.
* * *
ಅವಧಾನರಂಗಕ್ಕೆ ನಾನು ಕಾಲಿಟ್ಟಾಗಿನಿಂದ ತೆಲುಗಿನ ಅವಧಾನಪರಂಪರೆಯೊಡನೆ ಹೋಲಿಸಿಕೊಂಡೇ ಬರುತ್ತಿದ್ದೆ. ಅದು ನನಗೆ ಮಾರ್ಗದರ್ಶಿಯೂ ಹೌದು, ಹೆಚ್ಚಿನದನ್ನು ಸಾಧಿಸಲು ಮೀಟುಗೋಲೂ ಹೌದು. ಗಾತ್ರದೃಷ್ಟಿಯಿಂದ ತೆಲುಗಿನಲ್ಲಿರುವಂತೆ ಅವಧಾನಿ-ಅವಧಾನಗಳ ಸಮೃದ್ಧಿಯನ್ನು ಕನ್ನಡದಲ್ಲಿ ಸಾಧಿಸಲಾಗದಿದ್ದರೂ ಗುಣದೃಷ್ಟಿಯಿಂದ ಸ್ವಲ್ಪ ಹೆಚ್ಚಳವನ್ನು ಸಾಧಿಸಬೇಕೆಂಬುದು ನನ್ನ ತಪನೆಯಾಗಿತ್ತು. ತೆಲುಗಿನ ಅವಧಾನಿಗಳು ಚಿತ್ರಕವಿತೆಯನ್ನು ಸ್ಥಿರವಾದ ಅವಧಾನಾಂಗವಾಗಿ ಮಾಡಿಕೊಂಡಿಲ್ಲ. ತಿರುಪತಿ ವೇಂಕಟಕವಿಗಳಂಥ ಯುಗಪ್ರವರ್ತಕರೂ ಇದು ಅಸಾಧ್ಯವೆಂದು ಕೈಚೆಲ್ಲಿದ್ದರು. ಹೀಗಾಗಿ ಚಿತ್ರಕವಿತೆಯನ್ನು ಅವಧಾನರಂಗಕ್ಕೆ ಅವತರಣ ಮಾಡಿಸುವ ಯತ್ನ ಮಾಡಿದೆ. ಹೇಗೂ ಆ ವೇಳೆಗೆ ಗೃಹಕವಿತ್ವವಾಗಿ ಸಾಕಷ್ಟು ವರ್ಷಗಳಿಂದ ಚಿತ್ರಕವಿತೆ ರಚಿಸುವ ಅನುಭವ ಇದ್ದೇ ಇತ್ತಷ್ಟೆ.
ಇದಕ್ಕೆ ಪೃಚ್ಛಕರಾಗಿ ಒದಗಿಬರಬಲ್ಲವರಾದರೂ ಯಾರು? ಆಗಷ್ಟೇ ಕಣ್ಣುಬಿಡುತ್ತಿದ್ದ ಕನ್ನಡ ಅವಧಾನದ ಜಗತ್ತಿನಲ್ಲಿ ಸಾಮಾನ್ಯಾಂಶಗಳ ಪೃಚ್ಛಕರಿಗೇ ತೀವ್ರವಾದ ಕೊರತೆಯಿತ್ತು. ಕನ್ನಡವಿದ್ವಾಂಸರೆನಿಸಿಕೊಂಡವರಿಗೆ ಕಂದ-ವೃತ್ತಗಳ ಸ್ಥೂಲನಿರ್ಮಾಣವೂ ಕೈಗೆಟುಕಿರಲಿಲ್ಲ. ಇಂದಾದರೂ ಈ ಪರಿಸ್ಥಿತಿ ತುಂಬ ಸುಧಾರಿಸಿದಂತೆ ತೋರದು. ಹೀಗಿರುವಾಗ ನನ್ನ ಆಶಾಲತೆ ಮಲರುವುದು ಹೇಗೆ? ತತ್ಕ್ಷಣ ನೆನಪಾದವರೇ ಕೃಷ್ಣಮೂರ್ತಿಗಳು. ಅವರಲ್ಲಿಗೆ ಹೋಗಿ ನನ್ನ ಅಪೇಕ್ಷೆ ಹೇಳಿಕೊಂಡೆ. ಅವರು ತುಂಬ ಸಂತೋಷಪಟ್ಟರಾದರೂ ತಾವು ಚಿತ್ರಕವಿತೆಯನ್ನು ಬಲ್ಲವರಲ್ಲವೆಂದು ಪ್ರಾಂಜಲವಾಗಿ ಹೇಳಿದರು. ಆದರೆ “ನೀವು ಕಲಿಸಿಕೊಟ್ಟರೆ ನಾನು ಕಲಿತು ಪೃಚ್ಛಕನಾಗಿ ಒದಗಿಬರುವೆ” ಎಂದು ಭರವಸೆಯಿತ್ತರು. ಗುರುಕಲ್ಪರಾದ ಅವರಿಗೆ ನಾನು ಹೇಳಿಕೊಡುವುದೆಂದರೆ ಏನೆಂದು ಸಂಕೋಚಪಟ್ಟೆ. ಆದರೆ ಅವರು ಹಿಂಜರಿಯಲಿಲ್ಲ; ಮುಜುಗರಕ್ಕೂ ಒಳಗಾಗಲಿಲ್ಲ.
“ಸಾರ್, ಕಲಿಯೋದಕ್ಕೆ ವಯಸ್ಸು ಎಂದಿಲ್ಲ. ಒಳ್ಳೆಯ ಕೆಲಸ ಮಾಡೊಕ್ಕೆ ಯಾರ ಕೈ-ಕಾಲೂ ಹಿಡಿಯಬಹುದು. ಅದು ಯಾವುದೂ ಸಂಕೋಚದ ಸಂಗತಿಯಲ್ಲ” ಎಂದದ್ದಲ್ಲದೆ ಅಂದೇ ಕಲಿಕೆಗೆ ಮುಂದಾದರು. ಛಂದಸ್ಸು, ವ್ಯಾಕರಣಗಳ ಮೇಲೆ ಆ ಮಟ್ಟದ ಹತೋಟಿಯಿದ್ದವರಿಗೆ ಚಿತ್ರಕವಿತ್ವ ಕಷ್ಟವೇ? ಅದೂ ಗೃಹಕವಿತ್ವವಾಗಿ! ಒಂದು ಘಂಟೆಯೊಳಗೇ ಮೂಲಭೂತವಾದ ಕೆಲವು ಚಿತ್ರಪ್ರಭೇದಗಳ ರಚನಾಮರ್ಮ ಅವರಿಗೆ ಅವಗತವಾಯಿತು. “ಇನ್ನೇನೂ ತೊಂದರೆ ಇಲ್ಲ ಸಾರ್. ಮುಂದಿನ ತಿಂಗಳಿನ ಭಾರತೀಯವಿದ್ಯಾಭವನದ ಅವಧಾನದಲ್ಲಿ ಚಿತ್ರಕವಿತ್ವವನ್ನೇ ನಿರ್ವಾಹ ಮಾಡುತ್ತೀನಿ” ಎಂದು ಬೀಳ್ಗೊಟ್ಟರು. ಅನಂತರ ಅವರು ಬದುಕಿರುವವರೆಗೂ ನಿರಪವಾದವೆಂಬಂತೆ ನನ್ನ ಅವಧಾನಗಳಲ್ಲಿ ಚಿತ್ರಕವಿತ್ವದ ವಿಭಾಗವನ್ನು ಅವರೇ ನಿರ್ವಹಿಸುತ್ತಿದ್ದರು. ಗೋಮೂತ್ರಿಕೆಯಂಥ ಸರಳಬಂಧದಿಂದ ಮೊದಲ್ಗೊಂಡು ಸರ್ವತೋಭದ್ರ, ಮಹಾಪದ್ಮ, ಕುಂಡಲಿತನಾಗ, ಚತುರಂಗತುರಂಗ ಮುಂತಾದ ಹತ್ತಾರು ದುಷ್ಕರ ಗತಿ-ಬಂಧಗಳನ್ನು ಅವರು ನನ್ನ ಮೂಲಕ ಅವಧಾನಕ್ಕೆ ತರಿಸಿದರು. ಏಕಾಕ್ಷರ, ದ್ವ್ಯಕ್ಷರ, ಸಮಾನಪಾದ, ಸ್ಥಾನಚಿತ್ರ, ಗರ್ಭಕವಿತೆ, ಬಹುಸಂಧಾನ ಮುಂತಾದ ಪ್ರಕಾರಗಳನ್ನೂ ಮಾಡಿಸಿದರು. ಇಲ್ಲೆಲ್ಲ ಅವರಿಗಿದ್ದ ಕಾಳಜಿ ಸುವ್ಯಕ್ತ.
* * *
ಲಂಕಾ ಕೃಷ್ಣಮೂರ್ತಿಗಳ ಸತ್ಯನಿಷ್ಠೆ ಮತ್ತು ವ್ರತತತ್ಪರತೆಗಳು ಗಾದೆಮಾತಾಗುವಷ್ಟು ಅಲೌಕಿಕವೆನಿಸಿದ್ದವು. ಅವರು ಯಾವ ಕೆಲಸ ಕೈಗೊಂಡರೂ ಅದನ್ನು ಮುಗಿಸಿಯೇ ತೀರಬೇಕೆಂಬ ಸಂಕಲ್ಪವನ್ನುಳ್ಳವರು. ಅವಧಾನಗಳನ್ನವರು ಆಯೋಜನೆ ಮಾಡಿದಾಗಲಂತೂ ಈ ನಿಯಮ ಮತ್ತಷ್ಟು ಉತ್ಕಟವಾಗಿ ಪಾಲಿತವಾಗುತ್ತಿತ್ತು. ತಾವು ಕಟ್ಟಿದ “ಸನಾತನ-ಧರ್ಮ-ರಕ್ಷಣ-ಸಂಸ್ಥೆ”ಯ ವತಿಯಿಂದ ಎಷ್ಟೋ ಅಷ್ಟಾವಧಾನ-ಶತಾವಧಾನಗಳನ್ನು ಆಯೋಜಿಸಿದ್ದರು. ಅವುಗಳೆಲ್ಲ ಆಡಂಬರವಿಲ್ಲದೆ, ಆಟಾಟೋಪವಿಲ್ಲದೆ ಬಡವರ ಮನೆಯ ಮುತ್ತೈದೆಯ ಬಾಳಿನಂತೆ ಸೌಭಾಗ್ಯಕ್ಕೆ ಕೊರತೆಯಿಲ್ಲದಿದ್ದರೂ ಭಾಗ್ಯದ ಬಡಿವಾರಕ್ಕೆ ಅವಕಾಶವಿಲ್ಲದೆ ಸಾಗಿಹೋಗುತ್ತಿದ್ದವು.
ನನ್ನ ಶತಾವಧಾನವು ಸಂಸ್ಥೆಯ ವತಿಯಿಂದಲೇ ವಿದ್ಯಾಭವನದ ಸಹಯೋಗದೊಡನೆ ಆಯೋಜಿತವಾದಾಗ ಹಲವರು ಹಿತೈಷಿಗಳು ಸರ್ಕಾರದ ನೆರವನ್ನು ಕೋರುವಂತೆ ಕಿವಿಮಾತು ಹೇಳಿದರು. ಲಂಕಾ ಕೃಷ್ಣಮೂರ್ತಿಗಳು ಒಪ್ಪಲಿಲ್ಲ. “ಸಾರ್, ಸರ್ಕಾರದ ನೆರವೆಂದರೆ ರಾಜಕೀಯದ ದಾಕ್ಷಿಣ್ಯಗಳಿಗೆ ಒಳಗಾಗಬೇಕಾಗುತ್ತದೆ. ಶುದ್ಧಸಾಹಿತ್ಯದ ಕಾರ್ಯಕ್ರಮದಲ್ಲಿ ಸಾಹಿತ್ಯಕ್ಕೆ ವ್ಯತಿರಿಕ್ತವಾದ ಯಾವಯಾವುದೋ ನಡೆಯಲು ಅವಕಾಶ ಕೊಟ್ಟಂತೆ ಆಗುತ್ತದೆ. ನಮಗೆ ಏನಿದೆಯೋ ಅದರಲ್ಲಿ ನಾವು ಮಾಡಿಕೊಳ್ಳೋಣ. ಅವಧಾನಿಗಳು ನೂರು ಜನ ಪೃಚ್ಛಕರೇ ಇರಬೇಕೆಂದು ಕೇಳಿಲ್ಲ. ನೂರು ಪ್ರಶ್ನೆಗಳಿರಬೇಕು ಎಂದಷ್ಟೇ ಕೇಳಿದ್ದಾರೆ. ಅವಧಾನದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನಾವು ನಡೆದರೆ ಸಾಕು” ಎಂದು ಸ್ಪಷ್ಟವಾಗಿ ಹೇಳಿದರು. ಹೀಗಾಗಿಯೇ ಅವರು ಆಯೋಜಿಸಿದ ಕಾರ್ಯಕ್ರಮಗಳೆಲ್ಲ ಶ್ರೌತಯಾಗಗಳ ಅಗ್ನಿಗಳಂತೆ ಅಬ್ಬರದ ಜ್ವಾಲೆಗಳನ್ನು ಎಬ್ಬಿಸದೆ ನಮ್ರವಾಗಿಯೇ ಸಾಗಿಹೋದವು. ಈ ಮನೋಧರ್ಮವನ್ನು ಅವರ ಎಲ್ಲ ಯೋಜನೆ-ಆಯೋಜನೆಗಳಲ್ಲಿಯೂ ಕಾಣಬಹುದು.
ಅದೊಮ್ಮೆ ಬೆಂಗಳೂರಿನ ಹಳೆಯ ವಿಮಾನಾಶ್ರಯದ ಹಾದಿಯಲ್ಲಿರುವ ದೊಮ್ಮಲೂರಿನಲ್ಲಿ ಅಷ್ಟಾವಧಾನವೊಂದು ಏರ್ಪಾಟಾಗಿತ್ತು. ಹೆದ್ದಾರಿಯ ಬದಿಯಲ್ಲಿಯೇ ಇರುವ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯುವುದಿತ್ತು. ಅಲ್ಲಿಯ ಸ್ಥಳೀಯರಾರೋ ಸಂಪರ್ಕಿಸಿ ಇದರ ಆಯೋಜನೆಯನ್ನು ಕೃಷ್ಣಮೂರ್ತಿಗಳಿಗೆ ಒಪ್ಪಿಸಿದ್ದರು. ಎಂದಿನಂತೆ ವೆಂಕ, ಶೀನ, ನಾಣಿ ಎನ್ನಬಹುದಾದ ನಾವುಗಳೇ ನಿಯುಕ್ತರಾಗಿದ್ದೆವು. ಸಂಜೆ ನಾಲ್ಕು ಘಂಟೆಗೆ ಆರಂಭವೆಂದು ಹೇಳಿದ್ದರು. ಮೂರೂವರೆಯ ವೇಳೆಗೆ ನಾವಲ್ಲಿಗೆ ತಲುಪಿದ್ದೆವು. ಕೃಷ್ಣಮೂರ್ತಿಗಳು ಇನ್ನೂ ಮೊದಲೇ ಬಂದಿದ್ದರು. ಆದರೆ ಸ್ಥಳೀಯಕಾರ್ಯಕರ್ತರು ಯಾರೊಬ್ಬರೂ ಅತ್ತ ಸುಳಿದಿರಲಿಲ್ಲ. ಇರಲಿ, ಇದೇನೂ ದೊಡ್ಡ ವಿಷಯವಲ್ಲವೆಂದು ಭಾವಿಸಿ ಆ ಅಪರಾಹ್ಣದ ಬಿಸಿಲಿನಲ್ಲಿಯೇ ಬೀದಿ ಸುತ್ತಿಕೊಂಡು ಬರಲು ಎಲ್ಲರೂ ಹೊರಟೆವು. ಬರುವ ವೇಳೆಗೆ ನಾಲ್ಕು ಘಂಟೆಗೆ ಐದು ನಿಮಿಷವಿತ್ತು. ಪ್ರೇಕ್ಷಕರು ಕಾಣಲಿಲ್ಲ; ಕಾರ್ಯಕರ್ತರ ಸುಳಿವೇ ಇರಲಿಲ್ಲ! ಧ್ವನಿವರ್ಧಕದ ವ್ಯವಸ್ಥೆ ಮಾತ್ರ ಅಣಿಯಾಗಿತ್ತು.
“ಪರಿಸ್ಥಿತಿ ಹೀಗಿದೆಯಲ್ಲಾ, ಏನು ಗತಿ?” ಎಂದು ಪ್ರಾಚಾರ್ಯ ತಾಳ್ತೆಜೆ ಕೇಶವಭಟ್ಟರು ಕೇಳಿದರು. ಹಳಗನ್ನಡದಲ್ಲಿ ಪ್ರಗಲ್ಭವೈಯಾಕರಣರೂ ಕವಿ-ವಿದ್ವಾಂಸರೂ ಆದ ಕೇಶವಭಟ್ಟರು ಬಹುಗ್ರಂಥಕರ್ತರೂ ಹೌದು. ಇವರು ನನ್ನ ಎಷ್ಟೋ ಅವಧಾನಗಳಲ್ಲಿ ಪೃಚ್ಛಕರಾಗಿ ಅನುಗ್ರಹಿಸಿದ್ದಾರೆ. ಇವರ ಪ್ರಶ್ನೆಗೆ ಪದ್ಮನಾಭನ್ ಅವರ ಮುಖದ ಸಸಂದೇಹಸ್ಮಿತವೇ ಉತ್ತರವಾಗಿತ್ತು. ಅಂದು ನನ್ನ ಮತ್ತೊಬ್ಬ ಮಿತ್ರರಾದ ರಾಜೀವಲೋಚನ ಅವರೂ ಪೃಚ್ಛಕರಾಗಿ ಬಂದಿದ್ದರು. ಇವರ ಸಾಹಿತ್ಯಪರಿಜ್ಞಾನ ಮತ್ತು ಅವಧಾನವಿದ್ಯಾಸಕ್ತಿಗಳು ತುಂಬ ಒಳ್ಳೆಯ ಮಟ್ಟದವು. ಅವರಿಗೆ ಲಂಕಾ ಕೃಷ್ಣಮೂರ್ತಿಗಳಲ್ಲಿ ಭಕ್ತಿಯೆಂದರೂ ಸರಿ. ಅವರೂ ಸಹ ಕಿಂಕರ್ತವ್ಯಮೂಢರಾಗ್ದದರು. ಬಿ. ಆರ್. ಪ್ರಭಾಕರ್ ಅವರು ತಮ್ಮ ವೇದಘೋಷಸಂಪನ್ನವಾದ ಗರಿಗರಿ ಧ್ವನಿಯಲ್ಲಿ ಸಂದೇಹಸೂಕ್ತಗಳನ್ನು ಸೊಗಸಾಗಿ ಹೊರಡಿಸುತ್ತಿದ್ದರು. ನನಗಂತೂ ಅವಧಾನ ಮಾಡುವ ಮನಸ್ಸೇ ಇರಲಿಲ್ಲ. ಬಟಾಬಯಲಿನಲ್ಲಿ, ಬಯಲು ರಂಗಮಂದಿರವಿದ್ದ ಉದ್ಯಾನದ ಅಂಚಿನ ಬೆಂಚುಗಳ ಮೇಲೆ ಮಲಗಿದ್ದ ಒಬ್ಬಿಬ್ಬರು ಸೋಮಾರಿಗಳಿಗಾಗಿ ಹೆದ್ದಾರಿಯ ವಾಹನಗಳ ಅಬ್ಬರದ ಶ್ರುತಿಯೊಡನೆ ಹೇಗೆ ಅವಧಾನಿಸುವುದು?
ಆದರೆ ಲಂಕಾ ಕೃಷ್ಣಮೂರ್ತಿಯವರು ಒಪ್ಪಲಿಲ್ಲ. “ವ್ಯುತ್ಪನ್ನರಾದ ಪೃಚ್ಛಕರಿದ್ದಾರೆ, ಅವಧಾನಿಯಾಗಿ ನೀವು ಇದ್ದೇ ಇದ್ದೀರಿ. ಧ್ವನಿವರ್ಧಕದ ವ್ಯವಸ್ಥೆ ಇದೆ. ಇದಕ್ಕಿಂತ ಮಿಗಿಲಾಗಿ ಮತ್ತೇನು ಬೇಕಿದೆ? ನಾವೇ ನಿಮಗೆ ಶ್ರೋತೃಗಳು. ಕಾರ್ಯಕ್ರಮಕ್ಕಾಗಿ ಬಂದ ಬಳಿಕ ಸುಮ್ಮನೆ ಮರಳುವುದರಲ್ಲಿ ಅರ್ಥವಿಲ್ಲ” ಎಂದವರೇ ಎಲ್ಲರನ್ನೂ ವೇದಿಕೆಗೆ ಏರಿಸಿ ತಾವೇ ಸ್ವಾಗತಕ್ಕೆ ಮುಂದಾದರು. ಸರಿ, ಮತ್ತೇನು ವಿಧಿ? ನಾನು “ಆವುದನನ್ಯಮೋ...” ಎಂದು ಪ್ರಾರ್ಥನೆಯ ಪದ್ಯಗಳನ್ನು ಎತ್ತಿಕೊಂಡೆ. ಅಂದಿನ ಅವಧಾನದ ಪೂರಣ-ಧಾರಣಗಳ ಸೊಗಸೇನೂ ಕಡಮೆಯಾಗಲಿಲ್ಲ. ಅದು ಸಂಪೂರ್ಣವಾಗಿ ನಮ್ಮಿಂದ, ನಮಗಾಗಿ, ನಾವೇ ಮಾಡಿಕೊಂಡ ಕಾರ್ಯಕ್ರಮವಾಗಿತ್ತು!