ಕೋಲಾರದ ಅವಧಾನದಿಂದ ಮೊದಲ್ಗೊಂಡು ನನಗೆ ಕೃಷ್ಣಮೂರ್ತಿಯವರ ಈ ಮುಖ ಚೆನ್ನಾಗಿ ಕಾಣತೊಡಗಿತ್ತು.
ಕೃಷ್ಣಮೂರ್ತಿಗಳ ಪೃಚ್ಛಕತ್ವದ ಮತ್ತೊಂದು ಉದಾರಮುಖವೆಂದರೆ ಅವಧಾನಿಯ ಶಕ್ತಿ-ಸಾಮರ್ಥ್ಯಗಳನ್ನೂ ಸಭಾಸದರ ಅಭಿರುಚಿಯನ್ನೂ ಗಮನಿಸಿಕೊಂಡು ಸಮಸ್ಯಾಪೂರಣಾದಿಗಳಲ್ಲಿ ಹಲವು ಆಯ್ಕೆಗಳನ್ನು ಕೊಡುತ್ತಿದ್ದುದು. ಅವರ ಪರಿಚಯವಾದ ಬಳಿಕ ನಾನು ಮಾಡಿದ ಒಂದು ಸಂಪೂರ್ಣಸಂಸ್ಕೃತ ಅವಧಾನದಲ್ಲಿ ಸಮಸ್ಯಾಪೂರಣಕ್ಕೆಂದು ಅವರು ನಿಯುಕ್ತರಾಗಿದ್ದರು. ಕಾರ್ಯಕ್ರಮವು ಸಂಸ್ಕೃತಭಾರತಿಯ ವತಿಯಿಂದ ಬೆಂಗಳೂರಿನ ಕೇಶವಕೃಪಾ-ಸಭಾಂಗಣದಲ್ಲಿ ಏರ್ಪಾಟಾಗಿತ್ತು. ನಿಷೇಧಾಕ್ಷರವನ್ನು ರಂಗನಾಥಶರ್ಮರು ನಿರ್ವಹಿಸಿದ್ದರು. ಸಾಮಾನ್ಯವಾಗಿ ಶರ್ಮರು ಸಮಸ್ಯಾಪೂರಣವನ್ನೇ ಉತ್ಸಾಹದಿಂದ ಆಯ್ದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಇವರಿಬ್ಬರೂ ತಮ್ಮ ವಿಭಾಗಗಳನ್ನು ವಿನಿಮಯಿಸಿಕೊಂಡಂತಿತ್ತು. ಆಗಿನ್ನೂ ನಾನು ಎಂಟು-ಹತ್ತು ಅವಧಾನಗಳನ್ನಷ್ಟೇ ಮಾಡಿದ್ದೆ. ಅದು ಸಂಸ್ಕೃತದಲ್ಲಿ ನನ್ನ ಎರಡನೆಯ ಅವಧಾನ. ಜೊತೆಗೆ ಉದ್ದಂಡಪಂಡಿತರೇ ಪೃಚ್ಛಕವರ್ಗದಲ್ಲಿದ್ದವರು. ಇದನ್ನು ಗಮನಿಸಿಯೇ ಏನೋ, ಲಂಕಾ ಕೃಷ್ಣಮೂರ್ತಿಗಳು ಮೂರು ಸಮಸ್ಯೆಗಳನ್ನು ಹವಣಿಸಿಕೊಂಡು ಬಂದು ಮೂರನ್ನೂ ಮುಂದಿಟ್ಟರು. ಕಂಡನಾ ಪಂಡಿತಂ ಚಂಡಿಕಾದೇವಿಯಂ, ಸಾಧುಃ ಸಾಧುತ್ವಮಿಚ್ಛತೀ ಮತ್ತು ಮೂಕೀಕೃತಃ ಪುನರಹೋ ಮುಖರೀಕೃತೋऽಸ್ಮಿ ಎಂಬ ಈ ಎಲ್ಲವೂ ತೊಡಕುಳ್ಳಂಥವೇ. ಮೊದಲನೆಯದು ಭಾಷಾಶ್ಲೇಷವನ್ನು ಹೊಂದಿದ ಕಾರಣ ಹೆಚ್ಚು ದುಷ್ಕರ. ಮೇಲ್ನೋಟಕ್ಕಿದು ಕನ್ನಡದ ವಾಕ್ಯವೆಂಬಂತೆ ಕಂಡರೂ ಸಂಸ್ಕೃತಕ್ಕೂ ಸಮಾನವಾಗಿ ಅನ್ವಿತವಾಗುತ್ತದೆ. ಇದನ್ನು ಕಂಡುಕೊಂಡ ಬಳಿಕ ಸಮಸ್ಯಾಪೂರಣಕ್ಕೆ ತೊಡಗಬೇಕು. ಇದರಲ್ಲಿ ಕಷ್ಟವಿದ್ದರೂ ಚಮತ್ಕಾರ ಹೆಚ್ಚು. ಹೀಗಾಗಿ ಇದನ್ನೇ ಆಯ್ದುಕೊಂಡೆ. “ಕಂಡನ-ಅಪಂಡಿತಂ ಚಂಡಿಕಾದೇವಿ ಯಮ್” ಎಂದು ಪದಚ್ಛೇದ ಮಾಡಿಕೊಂಡರೆ ಸರಿಯಾಗುವುದು. ಇಲ್ಲಿ “ಚಂಡಿಕಾದೇವಿ” ಎಂಬ ಪದವನ್ನು ಸಂಬೋಧನೆಯಾಗಿಯೂ “ಯಮ್” ಎಂಬುದನ್ನು “ಯಾರನ್ನು” ಎಂಬರ್ಥದ ಪುಂಲಿಂಗದ ದ್ವಿತೀಯಾವಿಭಕ್ತಿಯ ಏಕವಚನವಾಗಿಯೂ ಗ್ರಹಿಸಿದರೆ ಸಮಸ್ಯೆ ಸುಕರವಾಗುವುದು. ಅನಂತರ ಪದ್ಯರಚನೆ ಸರಿಯಾಗಿ ಸಾಗಿತು. ರಂಗನಾಥಶರ್ಮರು ಅಂದು ಹೇಳಿದ್ದರು: “ನಾನು ಸಮಸ್ಯೆ ಕೊಡದೆ ಇದ್ದದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಇಂಥ ಚಮತ್ಕಾರಿಯಾದ ಸಮಸ್ಯೆ ಹುಟ್ಟುತ್ತಿರಲಿಲ್ಲ!” ಅಂತೆಯೇ ಅವರು ಕೃಷ್ಣಮೂರ್ತಿಗಳ ಔದಾರ್ಯ-ಸಮಯಪ್ರಜ್ಞೆಗಳನ್ನು ತುಂಬ ಮೆಚ್ಚಿಕೊಂಡರು.
* * *
ಇದಾದ ಒಂದೆರಡು ತಿಂಗಳುಗಳಲ್ಲಿ ಮತ್ತೆ ಹಲವಾರು ಅವಧಾನಗಳನ್ನು ಮಾಡುವ ಅವಕಾಶವೊದಗಿತು. ಎಲ್ಲೆಲ್ಲಿಯೂ ಕೃಷ್ಣಮೂರ್ತಿಗಳು ಇದ್ದೇ ಇರುತ್ತಿದ್ದರು. ಎಷ್ಟೋ ಊರುಗಳನ್ನು ಸುತ್ತುವ ಸುಸಂದರ್ಭ ಒದಗಿಬಂದಾಗ ಲಂಕಾ ಕೃಷ್ಣಮೂರ್ತಿಗಳೂ ಪದ್ಮನಾಭನ್ ಅವರೂ ಜೊತೆಗೂಡಿ ಬರುತ್ತಿದ್ದರು. ಇವರೆಲ್ಲ ಆ ವೇಳೆಗೆ ಉದ್ಯೋಗದಿಂದ ನಿವೃತ್ತರಾಗಿದ್ದ ಕಾರಣ ಕಾರ್ಯಾಲಯದ ಕ್ಲೇಶವಿರಲಿಲ್ಲ. ಇಂಥ ಸಂಚಾರಗಳ ಸ್ವಾರಸ್ಯಗಳು ಅಸಂಖ್ಯ. ಅವುಗಳಲ್ಲಿ ಕೆಲವನ್ನು ನೆನಪಿಸಿಕೊಳ್ಳಬಹುದು.
ಚಿಂತಾಮಣಿಯಲ್ಲೊಂದು ಅವಧಾನ ಏರ್ಪಾಟಾಗಿತ್ತು. ಅದನ್ನು ತುಂಬ ಉತ್ಸಾಹದಿಂದ ಆಯೋಜಿಸಿದವರು ಅಲ್ಲಿಯ ಸಾಹಿತ್ಯರಸಿಕರಾದ ಲಕ್ಷ್ಮೀನರಸಿಂಹಮೂರ್ತಿಗಳು. ಪ್ರಭಾಕರ್ ಅವರ ಕಾರಿನಲ್ಲಿ ಅವರೊಡನೆ ನಾವು ಮೂವರೂ ಹೊರಟೆವು. ಪೃಚ್ಛಕವರ್ಗದಲ್ಲಿದ್ದ ವಿದ್ವಾಂಸರೊಬ್ಬರು ವರ್ಣನಾಂಗವಾಗಿ ತೆಲುಗಿನ ಮಹಾಕವಿ ಪೋತನನ ಪದ್ಯವನ್ನು ಅನುವಾದಿಸಬೇಕೆಂದು ಮುಂದೊಡ್ಡಿದರು. ಅದು ವಾಮನಮೂರ್ತಿ ತ್ರಿವಿಕ್ರಮನಾದುದನ್ನು ಬಣ್ಣಿಸುವ ಸಂದರ್ಭ. ಮೂಲಪದ್ಯವು ಅತ್ಯಂತ ಪ್ರಸಿದ್ಧ ಮತ್ತು ಮಹೋನ್ನತ. ಅದು ಮತ್ತೇಭವಿಕ್ರೀಡಿತವೆಂಬ ವೃತ್ತದಲ್ಲಿದೆ. ಇದನ್ನವರು ಇಪ್ಪತ್ತೆರಡು ಅಕ್ಷರಗಳ ಯಾವುದಾದರೂ ಛಂದಸ್ಸಿನಲ್ಲಿ ಭಾಷಾಂತರಿಸಬೇಕೆಂದು ಕೋರಿದ್ದಲ್ಲದೆ ವನಮಂಜರೀವೃತ್ತವಾದರೆ ಒಳಿತೆಂದು ಹೇಳಿದರು. ಆದರೆ ನಾನು ಸಂದರ್ಭದ ಭವ್ಯತೆಯನ್ನು ಗಮನದಲ್ಲಿ ಇರಿಸಿಕೊಂಡು ಸತಾನವೃತ್ತವಾದ ವನಮಂಜರಿಗಿಂತ ವಿತಾನವೃತ್ತ ಮಹಾಸ್ರಗ್ಧರೆಯೇ ಮೇಲೆಂದು ಭಾವಿಸಿ ಮುಂದುವರಿದೆ. ಆಗ ಸ್ವಲ್ಪ ವಾದ-ವಿವಾದಗಳಾದವು. ಒಂದೈದು ನಿಮಿಷ ಚರ್ಚೆ ಸಾಗಿದ ಬಳಿಕ ಕೃಷ್ಣಮೂರ್ತಿಗಳು ಅಧ್ಯಕ್ಷರ ಅನುಮತಿ ಪಡೆದು ಚರ್ಚೆಯಲ್ಲಿ ಪ್ರವೇಶಿಸಿದರು:
“ಮನ್ನಿಸಬೇಕು. ನಾನು ಅನಾವಶ್ಯಕವಾಗಿ ಚರ್ಚೆಗೆ ಬಾಯಿ ಹಾಕುತ್ತಿದ್ದೇನೆಂದು ಯಾರೂ ತಪ್ಪಾಗಿ ತಿಳಿಯಬಾರದು. ಸಭಾಧ್ಯಕ್ಷರು ಈ ಸನ್ನಿವೇಶದಲ್ಲಿ ಏನನ್ನೂ ಹೇಳದಿರುವ ಕಾರಣ ನಾನು ಸ್ವಾತಂತ್ರ್ಯ ವಹಿಸಿದ್ದೇನೆ. ಅವಧಾನಿಗಳು ಪೃಚ್ಛಕರು ಕೋರಿದ ವೃತ್ತದಲ್ಲಿ ಪದ್ಯ ರಚಿಸಬೇಕೆಂಬುದು ಸಾಮಾನ್ಯನಿಯಮ. ಆದರೆ ರಸೌಚಿತ್ಯವನ್ನು ಎಲ್ಲಕ್ಕಿಂತ ದೊಡ್ಡ ನಿಯಮವಾಗಿ ಭಾವಿಸಬೇಕು. ಹೀಗಾಗಿ ಮಹಾಸ್ರಗ್ಧರೆಯಲ್ಲಿ ಪದ್ಯವನ್ನು ಹೇಳಿದರೆ ಒಳ್ಳೆಯದು” ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದರು.
ಇದು ಅವರ ಕ್ರಮ. ಎಲ್ಲವೂ ವಿಧಿವತ್ತಾಗಿ ನಡೆಯಬೇಕು, ಆದರೆ ಯಾರಲ್ಲಿಯೂ ವೈಮನಸ್ಯ ಉಳಿಯಬಾರದು.
ಅಂದು ಅವಧಾನ ಮುಗಿಸಿ ಊಟ ಮಾಡಿ ಹೊರಟಾಗ ರಾತ್ರಿಯಾಗಿತ್ತು. ನಮ್ಮೊಡನೆ ಮತ್ತೊಬ್ಬ ವಿದ್ವಾಂಸರು ಸೇರಿಕೊಂಡರು. ಐದೂ ಜನ ಒಟ್ಟಾಗಿ ಕಾರಿನಲ್ಲಿ ಬರುತ್ತಿದ್ದೆವು. ಹೊರಟಾಗಲೇ ಹತ್ತು ಘಂಟೆ. ನಮ್ಮೊಡಗೂಡಿದ ಆ ಹೊಸ ವಿದ್ವಾಂಸರು ಸ್ವಭಾವತಃ ಅಮಿತಭಾಷಿಗಳೆಂದು ತೋರುತ್ತದೆ. ಅವರ ವಾಗ್ಧೋರಣೆ ನನಗೂ ಪದ್ಮನಾಭನ್ ಅವರಿಗೂ ಇಷ್ಟವಾಗಲಿಲ್ಲ. ನಾನು ಮುಂದೆ ಕೂತದ್ದರಿಂದ ಹೇಗೋ ಬಚಾವಾಗಿದ್ದೆ. ಆದರೆ ಹಿಂದೆ ಅವರ ಬದಿಯಲ್ಲಿಯೇ ಕುಳಿತ ಕೃಷ್ಣಮೂರ್ತಿಗಳಿಗೆ ಕೊರೆತ ತಪ್ಪಲಿಲ್ಲ. ಆ ಪಂಡಿತರು ತಾವು ಭಾಗವತಕ್ಕೆ ಬರೆದ ಒಂದು ವ್ಯಾಖ್ಯಾನ, ಅದು ಜನತೆಗೆ ಇಷ್ಟವಾದ ವಿಧಾನ, ಅದರಿಂದ ತಮಗೆ ಸಂದ ಸತ್ಕಾರ ಇತ್ಯಾದಿ ಮಹತ್ತರವಾದ ಸಂಗತಿಗಳನ್ನು ಧಾರಾಳವಾಗಿ ಹೇಳಿಕೊಳ್ಳುತ್ತಿದ್ದರು. ಅದನ್ನೆಲ್ಲ ತಾಳ್ಮೆಯಿಂದ ಕೇಳಿಕೊಂಡು ಬರುತ್ತಿದ್ದ ಲಂಕಾ ಕೃಷ್ಣಮೂರ್ತಿಗಳಿಗೆ ಅವರು ಮಾಡಿದ ಪದಪ್ರಯೋಗವೊಂದು ಒಪ್ಪಿಗೆಯಾಗಲಿಲ್ಲ. ಅದೇನೆಂಬುದು ನನಗೀಗ ನೆನಪಿನಲ್ಲಿಲ್ಲ. ಯಾವುದೋ ವ್ಯಾಕರಣದ ಸಂಗತಿಯೆಂಬುದಂತೂ ನಿಶ್ಚಯ. ಸರಿ, ಇವರ ರೇಷ್ಮೆಯ ಕುಣಿಕೆ ಸಿದ್ಧವಾಯಿತು. “ಕ್ಷಮಿಸಬೇಕು ಸಾರ್...” ಎಂಬ ಉಪಕ್ರಮವನ್ನು ಕೇಳುತ್ತಿದ್ದಂತೆಯೇ ನಾನೂ ಪದ್ಮನಾಭನ್ ಅವರೂ ಇದು ಸೊಗಸಾದ ಸಂಗ್ರಾಮಕ್ಕೆ ಸಲ್ಲುವ ಪಾಂಚಜನ್ಯದ ಘೋಷವೆಂದು ಹಿಗ್ಗಿದೆವು.
“ತಾವು ಹೇಳುವ ಅರ್ಥಕ್ರಮ ವ್ಯಾಕರಣಕ್ಕೂ ಋಜುತಾತ್ಪರ್ಯಕ್ಕೂ ಸಮ್ಮತವಾಗುವುದಿಲ್ಲ. ಅದು ಛಲವಾಗುತ್ತದೆ” ಎಂದು ಹೇಳಿದರು. ಅನಂತರ ವ್ಯಾಕರಣದ ವರಸೆಗಳು ಆರಂಭವಾದವು. ಕೇವಲ ಕೆಲವೇ ಕೆಲವು ಸೂತ್ರಾಸ್ತ್ರಗಳ ಪ್ರಯೋಗದಿಂದ ಆ ಪಂಡಿತರಿಗೆ ವಾಗ್ಬಂಧನವಾಗಿತ್ತು! ಆದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ಅವರು ಭಾಗವತದ ಮಂಗಳಪದ್ಯವನ್ನು ಮುಂದಿಟ್ಟುಕೊಂಡು ಹೆಣಗತೊಡಗಿದರು. ಕೃಷ್ಣಮೂರ್ತಿಗಳು ದೃಢವಾದ ನಮ್ರಧ್ವನಿಯಲ್ಲಿ ಕೈಮುಗಿಯುತ್ತ ಹೇಳಿದರು: “ಭಾಗವತಕಾರರ ದೊಡ್ಡತನವನ್ನು ನಾನು ಪ್ರಶ್ನಿಸುತ್ತಿಲ್ಲ ಸಾರ್. ಆದರೆ ಈ ಪದ್ಯಕ್ಕೆ ಮಾತ್ರ ಯಾರೂ ಸರಿಯಾಗಿ ಅನ್ವಯ ಹೇಳುವುದಕ್ಕೆ ಸಾಧ್ಯವಿಲ್ಲ. ದಯಮಾಡಿ ಇದನ್ನು ಮುಂದಿಟ್ಟುಕೊಂಡು ಸಮರ್ಥನೆ ಮಾಡಿಕೊಳ್ಳಬೇಡಿ.” ಈ ಮಾತು ಹೊರಬಿದ್ದ ಮೇಲೆ ಆ ವಿದ್ವಾಂಸರು ತಣ್ಣಗಾದರು.
ಮುಂದೆ ಧ್ವನಿಪೂರ್ಣವಾದ ವ್ಯಾಖ್ಯಾನವನ್ನು ಹೇಗೆ ಮಾಡಬೇಕೆಂದು ನಾನು ಕೇಳಿದಾಗ ಕೃಷ್ಣಮೂರ್ತಿಗಳು ಯಾದೃಚ್ಛಿಕವಾಗಿ ಶಿವಾನಂದಲಹರಿಯ ಶ್ಲೋಕವೊಂದನ್ನು ತೆಗೆದುಕೊಂಡು ವಿವರಿಸಿದರು. ಆ ಇಡಿಯ ವ್ಯಾಖ್ಯಾನ ಸ್ಮರಣೀಯವಾಗಿದೆ:
ಅಂಕೋಲಂ ನಿಜಬೀಜಸಂತತಿರಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜವಿಭುಂ ಲತಾ ಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಮ್ |
ಪ್ರಾಪ್ನೋತೀಹ ಯಥಾ ತಥಾ ಪಶುಪತೇಃ ಪಾದಾರವಿಂದದ್ವಯಂ
ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ ||
(ಅಂಕೋಲದ ಬುಡವನ್ನು ಅದರ ಬೀಜಗಳು ಸೇರುವಂತೆ, ಅಯಸ್ಕಾಂತವನ್ನು ಕಬ್ಬಿಣವು ಅಂಟಿಕೊಳ್ಳುವಂತೆ, ಹದಿಬದೆಯು ತನ್ನ ಪತಿಯನ್ನು ಅನುಸರಿಸುವಂತೆ, ಬಳ್ಳಿಯು ಮರವನ್ನು ಬಳಸುವಂತೆ, ನದಿಯು ಶರಧಿಯಲ್ಲಿ ಕರಗುವಂತೆ, ನಮ್ಮ ಮನಸ್ಸು ಪರಮಾತ್ಮನಲ್ಲಿ ತನ್ನೆಲ್ಲ ಚಟುವಟಿಕೆಗಳನ್ನು ನೆಲೆಗೊಳಿಸುವ ಪರಿಯೇ ಭಕ್ತಿ.)
ಇದು ಮೇಲ್ನೋಟಕ್ಕೆ ಮನಸ್ಸು ಭಗವಂತನಲ್ಲಿ ಲಯವಾಗುವ ಬಗೆಯೇ ಭಕ್ತಿಯೆಂದು ಐದು ದೃಷ್ಟಾಂತಗಳ ಮೂಲಕ ವಿವರಿಸುವಂತೆ ತೋರುತ್ತದೆ. ಇದರ ಸ್ವಾರಸ್ಯ ಇಷ್ಟೇ ಅಲ್ಲ. ಇಲ್ಲಿಯ ಪ್ರತಿಯೊಂದು ದೃಷ್ಟಾಂತವೂ ಒಂದು ವಿಶಿಷ್ಟವಾದ ಉದ್ದೇಶಕ್ಕೆ ಮೀಸಲಾಗಿದೆ. ಅಂಕೋಲದ ಬೀಜಗಳು ಆ ಮರದ ಬುಡವನ್ನೇ ಸೇರುವುದು ಮಳೆಗಾಲದಲ್ಲಿ ಮಾತ್ರವೆಂದು ಕವಿಸಮಯ. (ಇದು ಪ್ರಕೃತಿನಿಯಮವೆಂದು ಕೆಲವರು ಹೇಳುವುದುಂಟು.) ಹೀಗಾಗಿ ಈ ಸಮಾಗಮವು ಕಾಲಬಾಧಿತ. ಇನ್ನು ಅಯಸ್ಕಾಂತಕ್ಕೆ ಕಬ್ಬಿಣವು ಅಂಟಿಕೊಳ್ಳುವುದು ಅದರ ಕಾಂತವಲಯದೊಳಗೆ ಬಂದಾಗ ಮಾತ್ರ. ಅಂದರೆ, ಈ ಸಂಯೋಗವು ದೇಶಬಾಧಿತ. ಪತಿವ್ರತೆಯಾದ ಪತ್ನಿ ತನ್ನ ಗಂಡನನ್ನು ಅನುಸರಿಸುವುದು ವಿವಾಹವೆಂಬ ಒಂದು ವಿಧಿಯ ಬಳಿಕವಷ್ಟೆ. ಹೀಗಾಗಿ ಈ ಅನುನಯವು ನಿಮಿತ್ತಬಾಧಿತ. ಬಳ್ಳಿಯು ಮರವನ್ನು ಬೆಸೆದುಕೊಳ್ಳುವಲ್ಲಿ ನೈಕಟ್ಯವಿದ್ದರೂ ತಾದಾತ್ಮ್ಯವಿಲ್ಲ. ಆದರೆ ನದಿಯು ಶರಧಿಯಲ್ಲಿ ಕರಗುವಾಗ ತನ್ನೆಲ್ಲ ಉಪಾಧಿಗಳನ್ನೂ ವಿಲಯಿಸಿಕೊಳ್ಳುತ್ತದೆ — ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇऽಸ್ತಂ ಗಚ್ಛಂತಿ ನಾಮರೂಪೇ ವಿಹಾಯ || (ಮುಂಡಕಶ್ರುತಿ). ನಮ್ಮ ಚಿತ್ತವೃತ್ತಿಗಳಾದರೂ ಹೀಗೆಯೇ ದೇಶ-ಕಾಲ-ನಿಮಿತ್ತಗಳ ಉಪಾಧಿಗಳನ್ನು ಮೀರಿ, ಸಾಲೋಕ್ಯ-ಸಾಮೀಪ್ಯ-ಸಾರೂಪ್ಯಗಳ ಹಂತವನ್ನು ದಾಟಿ, ಸಾಯುಜ್ಯವನ್ನು ಗಳಿಸಿದಾಗಲೇ ಭಕ್ತಿಯ ಸಾರ್ಥಕ್ಯ. ಇಂಥ ಭಕ್ತಿಯನ್ನೇ ಶಂಕರಭಗವತ್ಪಾದರು “ಪರಭಕ್ತಿ” ಎಂದು ಲಕ್ಷಣೀಕರಿಸಿದ್ದಾರೆ. ಈ ಹಂತದಲ್ಲಿ ಜ್ಞಾನ-ಭಕ್ತಿಗಳಿಗೆ ವ್ಯತ್ಯಾಸವಿಲ್ಲ.
ಹೀಗೆ ಸಾಗಿತು ಕೃಷ್ಣಮೂರ್ತಿಗಳ ವ್ಯಾಖ್ಯಾನ. ಅವರು ಬಾಯಿಬಿಟ್ಟು ಇದೇ ಧ್ವನಿಮಾರ್ಗದ ವಿವರಣೆಯೆಂದು ಹೇಳಲಿಲ್ಲ. ಆದರೆ ಇದೇ ಧ್ವನಿಮಾರ್ಗದ ವ್ಯಾಖ್ಯಾನವೆಂದು ನಿಶ್ಚಯಿಸಿಕೊಳ್ಳುವಲ್ಲಿ ನಮಗೆ ಸಂದೇಹವುಳಿಯಲಿಲ್ಲ. ಈ ಅಂಶ ಕೂಡ ಧ್ವನಿತತ್ತ್ವಕ್ಕೆ ಸಮ್ಮತವಾದದ್ದೇ.
ಪ್ರಯಾಣ ಮುಂದುವರಿಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕಾರಿನ ಚಕ್ರವೊಂದು ಪಂಕ್ಚರ್ ಆಯಿತು. ಸುತ್ತಲೂ ಕಗ್ಗತ್ತಲು. ಸಣ್ಣಗೆ ಮಳೆಯೂ ಹನಿಯತೊಡಗಿತ್ತು. ಪ್ರಭಾಕರ್ ಅವರು ಚಕ್ರವನ್ನು ಬದಲಾಯಿಸಲು ಸ್ಟೆಪ್ನಿ, ಸ್ಕ್ರೂ ಜ್ಯಾಕ್, ಸ್ಪ್ಯಾನರ್ ಎಂದು ಹವಣಿಸಕೊಳ್ಳತೊಡಗಿದ್ದರು. ನಾನೂ ಪದ್ಮನಾಭನ್ ಅವರೂ ಏನು ಗತಿ ಎಂಬಂತೆ ಪ್ರಶ್ನಾರ್ಥಕವಾಗಿದ್ದಾಗ ಕೃಷ್ಣಮೂರ್ತಿಯವರು ಸದ್ದಿಲ್ಲದೆ ಕೆಳಗಿಳಿದು ಚಕ್ರವನ್ನು ಬದಲಿಸುವುದರಲ್ಲಿ ತೊಡಗಿದರು: “ಈ ಎಲ್ಲ ಮಸಿಕೆಲಸದ ಅಭ್ಯಾಸವಿದೆ ಸಾರ್. ನೀವು ಟಾರ್ಚ್ ಬಿಡಿ ಸಾಕು” ಎಂದು ಪ್ರಭಾಕರ್ ಅವರಿಗೆ ಹೇಳಿದರು. ಬೇಗದಲ್ಲಿಯೇ ಆ ಕೆಲಸ ಮುಗಿದು ಊರು ಸೇರಿದೆವೆನ್ನಿ.
ಪದ್ಮನಾಭನ್ ಅವರಿಗೂ ನನಗೂ ಆ ಕತ್ತಲಲ್ಲಿ ಕೂಡ ಕಣ್ಣುಗಳು ಹೊಳೆಯುತ್ತಿರುವುದು ಪರಸ್ಪರ ಕಂಡಿದ್ದವು. ಏನು ಈ ಮಹಾನುಭಾವರ ವ್ಯಕ್ತಿತ್ವ! ಐದಾರು ನಿಮಿಷಗಳ ಮುನ್ನ ಸ್ವೋಪಜ್ಞವಾದ ಕಾವ್ಯಶಾಸ್ತ್ರವ್ಯಾಖ್ಯಾನವನ್ನು ಮಾಡಿದ ವಿದ್ವಾಂಸರೆಲ್ಲಿ, ಈಗ ಕಗ್ಗತ್ತಲಲ್ಲಿ ಸ್ಟೆಪ್ನಿ ಜೋಡಿಸುತ್ತಿರುವ ಕಾರ್ಮಿಕನೆಲ್ಲಿ! ಯೋಗಃ ಕರ್ಮಸು ಕೌಶಲಮ್ ಎಂಬ ಗೀತಾವಾಕ್ಯದ ಸಾಕ್ಷಾದನುಭವ ನಮಗಾಗಿತ್ತು.
* * *
ಚಿಂತಾಮಣಿಯ ಅವಧಾನದ ಬಳಿಕ ಮತ್ತೆಷ್ಟೋ ಅವಧಾನಗಳಾದವು. ಹೀಗೆ ಈ ಕಲೆಯ ಪ್ರಸಾರವನ್ನು ಗಮನಿಸಿದ ರಂಗನಾಥಶರ್ಮರು ತಮ್ಮ ಊರಾದ ಸೊರಬದಲ್ಲಿ ಅವಧಾನವಾಗಬೇಕೆಂದು ಬಯಸಿ ನಮ್ಮನ್ನೆಲ್ಲ ಕರೆದೊಯ್ದರು. ಬೆಂಗಳೂರಿನಲ್ಲಿ ರಾತ್ರಿ ಸೊರಬದ ಬಸ್ಸನ್ನು ಹತ್ತಿ ಹೊರಟೆವು. ಹಿಂದಿನ ಸೀಟಿನಲ್ಲಿ ನಾನು ಮತ್ತು ಪದ್ಮನಾಭನ್ ಕುಳಿತಿದ್ದೆವು; ಮುಂದೆ ಶರ್ಮರೂ ಕೃಷ್ಣಮೂರ್ತಿಗಳೂ ಕುಳಿತಿದ್ದರು. ಸ್ವಲ್ಪ ಹೊತ್ತಿನ ಲೋಕಾಭಿರಾಮದ ಬಳಿಕ ಅವರಿಬ್ಬರಿಗೂ ಅತ್ತಿಗೇ ಹೇಳಿ ಸಂತೋಷಂ ತಂಗೀ ತಮ್ಮನ ಸಾಹಸಂ | ಭಾವ ಕೇಳೀ ಮದೋಲ್ಲಾಸಂ ನಾದಿನೀ ಬಿಸಿನೀರ ತಾ || (ಅತ್ತಿ ಗೇಹೇऽಲಿಸಂತೋಷಂ ತಂ ಗೀತಂ ಮನಸಾಹಸಮ್ | ಭಾವ ಕೇಲೀಮದೋಲ್ಲಾಸಂ ನಾದಿನೀ ಬಿಸಿನೀರತಾ ||) ಎಂಬ ಕನ್ನಡ-ಸಂಸ್ಕೃತಗಳ ಭಾಷಾಶ್ಲೇಷದ ಶ್ಲೋಕವನ್ನು ಕುರಿತು ವ್ಯಾಪಕವಾದ ಚರ್ಚೆ ಬೆಳೆಯಿತು. ಈ ಮುನ್ನವೇ ಇವರಿಬ್ಬರಿಗೂ ಇದನ್ನು ಕುರಿತು ಪತ್ರವ್ಯವಹಾರ ಸಾಗಿತ್ತಂತೆ. ಹೆಚ್ಚಿನ ಚರ್ಚೆಗಾಗಿ ಈ ರಾತ್ರಿಯನ್ನವರು ಆಯ್ದುಕೊಂಡಂತೆ ತೋರುತ್ತದೆ. ಈ ಪದ್ಯದ ಕನ್ನಡರೂಪವೇನೋ ತನ್ನ ಅರ್ಥವನ್ನು ಸುಲಭವಾಗಿ ಬಿಟ್ಟುಕೊಡುತ್ತದೆ. ಆದರೆ ಸಂಸ್ಕೃತರೂಪದ ಅರ್ಥ ಮತ್ತು ಅದಕ್ಕಿರುವ ವ್ಯಾಕರಣಶುದ್ಧಿ ತುಂಬ ಚರ್ಚಾಸ್ಪದ. ಇದನ್ನೇ ಅವರು ರಾತ್ರಿಯೆಲ್ಲ ನಡಸಿಕೊಂಡು ಬಂದರು. ಹಿಂದಿದ್ದ ನಾವಿಬ್ಬರೂ ಸ್ವಲ್ಪ ಹೊತ್ತು ಕೇಳಿ ನಿದ್ರೆಗೆ ಜಾರಿದೆವು. ಆದರೆ ಅವರಿಗೆ “ರಾತ್ರಿರೇವ ವ್ಯರಂಸೀತ್”.
ಮುಂಜಾನೆ ಸೊರಬದಲ್ಲಿಳಿದು ಮುಖ ತೊಳೆದು ಕಾಫೀ ಕುಡಿಯುವ ಹೊತ್ತಿನಲ್ಲಿ ಕೃಷ್ಣಮೂರ್ತಿಗಳು ಅಂದು ಬೆಳಗಿನ ಜಾವವಷ್ಟೇ ತಾವು ನಿಶ್ಚಯಿಸಿದ ಅರ್ಥವನ್ನು ನಮ್ಮಿಬ್ಬರಿಗೆ ವಿವರಿಸಿದರು. ಅವರ ತಾತ್ಪರ್ಯವಿಷ್ಟು: ಭಾವ (ಪಂಡಿತನೇ), ನೀನು ದುಂಬಿಗೆ ಸಂಬಂಧಿಸಿ ರಚಿಸಿದ ಹಾಡನ್ನು ಕೇಳಿ ಸಂತೋಷಪಟ್ಟೆ. ಆ ದುಂಬಿ ತಾವರೆಯ ದೇಟನ್ನು ಕಂಡು ಮರುಳಾಗಿ ಗುಂಜಾರವ ಮಾಡುತ್ತದೆ. ಆದರೆ ಅಲ್ಲಿ ಮಧು ಸಿಗದ ಕಾರಣ ತನ್ನ ಗೂಡಿನಲ್ಲಿಯೇ ಜೇನನ್ನು ಹೀರುತ್ತದೆ. ಇದನ್ನವರು ಆ ಮುನ್ನವೇ ಶರ್ಮರಿಗೆ ಹೇಳಿ ಒಪ್ಪಿಸಿದ್ದು ಬೇರೆಯ ಮಾತು. ವಸ್ತುತಃ ಇಂಥ ಚಿತ್ರಕವಿತೆಗಳಲ್ಲಿ ಎಣೆಮೀರಿದ ಅಧ್ಯಾಹಾರ, ದೂರಾನ್ವಯ, ಅಪ್ರತೀತ ಮುಂತಾದ ಆಲಂಕಾರಿಕದೋಷಗಳು ಇರುತ್ತವೆ. ಹೀಗಾಗಿ ಇಲ್ಲಿಯ ಅರ್ಥಕ್ಕೆ ಹೆಚ್ಚಿನ ಸ್ವಾರಸ್ಯವಿಲ್ಲ. ವ್ಯಾಕರಣಸಮ್ಮತವಾಗಿ ಅದನ್ನು ಹೊರಡಿಸುವುದೇ ದೊಡ್ಡ ಸಾಹಸ. ಆ ಕೆಲಸವನ್ನು ಕೃಷ್ಣಮೂರ್ತಿಗಳು ಮಾಡಿದ ಬಗೆ ಶರ್ಮರಿಗೆ ತುಂಬ ಮೆಚ್ಚಾಯಿತು. ಅವರ ಸ್ವಯಂಕೃಷಿಯ ಪಾಂಡಿತ್ಯವನ್ನು ಮುಕ್ತಕಂಠದಿಂದ ಕೊಂಡಾಡಿದರು. ಶರ್ಮರಿಗೂ ಇಂಥ ದುಷ್ಕರಕವಿತೆಗಳನ್ನು ಬಿಡಿಸಿ ಅರ್ಥೈಸುವುದರಲ್ಲಿ ಹೆಚ್ಚಿನ ಆಸಕ್ತಿ. ಹೀಗಾಗಿ ಅವರಿಗೆ ಕೃಷ್ಣಮೂರ್ತಿಗಳ ವೈದುಷ್ಯ ಅಭಿನಂದನೀಯವಾಗಿ ತೋರಿದುದರಲ್ಲಿ ಅಚ್ಚರಿಯಿಲ್ಲ. ಲಂಕಾ ಕೃಷ್ಣಮೂರ್ತಿಗಳು ಒಂದು ಸಾಷ್ಟಾಂಗಪ್ರಣಾಮದಿಂದ ಈ ಮೆಚ್ಚುಗೆಯನ್ನು ಗ್ರಹಿಸಿ ಅಲ್ಲಿಗೆ ಮರೆತರು.