ನಾನು ಮತ್ತೆ ಮತ್ತೆ ನೆನೆಯುವ ಮಹನೀಯರ ಪೈಕಿ ಶ್ರದ್ಧೇಯರಾದ ಲಂಕಾ ಕೃಷ್ಣಮೂರ್ತಿಯವರೂ ಒಬ್ಬರು. ಸತ್ಯನಿಷ್ಠೆ, ಪ್ರತಿಷ್ಠಾಪರಾಙ್ಮುಖತೆ, ಸಮಾಜಸೇವೆ, ಸಾಹಿತ್ಯ-ಸಂಸ್ಕೃತಿಗಳ ಸಕ್ರಿಯಾರಾಧನೆಗಳನ್ನು ಕುರಿತ ಯಾವ ಪ್ರಸ್ತಾವ ಬಂದಾಗಲೂ ನನಗೆ ತತ್ಕ್ಷಣ ನೆನಪಾಗುವುದು ಲಂಕಾ ಕೃಷ್ಣಮೂರ್ತಿಗಳ ವ್ಯಕ್ತಿತ್ವ-ಕೃತಿತ್ವಗಳೇ. ನನ್ನ ಸ್ವಭಾವಕ್ಕಿಂತ ಅವರದ್ದು ಅದೆಷ್ಟೋ ಬಗೆಯಲ್ಲಿ ಭಿನ್ನ ಮತ್ತು ಸಮುನ್ನತ. ವಯಸ್ಸು, ತಪಸ್ಸು, ಅನುಭವಗಳ ದೃಷ್ಟಿಯಿಂದಲಂತೂ ನನಗೂ ಅವರಿಗೂ ಅಜ-ಗಜಾಂತರ. ಇಂತಿದ್ದರೂ ಅವರು ನನ್ನನ್ನು ಪ್ರೀತಿಯಿಂದ ಆದರಿಸಿದರು, ವಾತ್ಸಲ್ಯದಿಂದ ಅನುಗ್ರಹಿಸಿದರು. ಅಷ್ಟೇ ಅಲ್ಲ, ಆಗ್ರಹ-ಅನುಶಾಸನಗಳ ಸ್ಪರ್ಶವೂ ಜಗತ್ತಿಗೆ ಕಾಣದಂತೆ ಆದರ-ಅಭಿಮಾನಗಳನ್ನು ನನ್ನ ಮೇಲೆ ಸುರಿಸಿದರು. ಇಂಥವರನ್ನು ನಾನು ಹಿಂದೆ ಕಾಣಲಿಲ್ಲ, ಮುಂದೆ ಕಾಣಬಲ್ಲೆನೆಂಬ ನಚ್ಚಿಕೆಯೂ ಇಲ್ಲ. ಆದರೆ ಕಾಣುವಂತಾಗಲೆಂಬ ಅಪೇಕ್ಷೆ ಮಾತ್ರ ಹಸುರಾಗಿದೆ.
ನಾನು ಲಂಕಾ ಕೃಷ್ಣಮೂರ್ತಿಗಳನ್ನು ಮೊದಲ ಬಾರಿ ಕಂಡದ್ದು ೮.೧೧.೧೯೮೧ರ ಅಪರಾಹ್ಣದ ಹೊತ್ತಿನಲ್ಲಿ, ಬೆಂಗಳೂರಿನ ಚಾಮರಾಜೇಂದ್ರ-ಸಂಸ್ಕೃತ-ಮಹಾಪಾಠಶಾಲೆಯ ವೇದಿಕೆಯ ಮೇಲೆ. ಈ ದೇಶ-ಕಾಲಗಳು ಇಷ್ಟು ಚೆನ್ನಾಗಿ ನೆನಪಿನಲ್ಲಿರುವುದಕ್ಕೆ ಮುಖ್ಯಕಾರಣ ನನ್ನ ಜ್ಞಾಪಕಶಕ್ತಿಯಲ್ಲ. ವಸ್ತುತಃ ಇಂಥ ವಿಷಯಗಳಲ್ಲಿ ನನ್ನ ಮರೆವು ನಿರುಪಮ. ಲಂಕಾ ಕೃಷ್ಣಮೂರ್ತಿಯವರನ್ನು ಕಂಡ ಮರುದಿನವೇ ಮಿತ್ರಗೋಷ್ಠಿಯಲ್ಲಿ ನನ್ನ ಮೊದಲ ಅವಧಾನವನ್ನು ಕನ್ನಡದಲ್ಲಿ ಮಾಡಿದ ಕಾರಣ ಈ ದಿನಾಂಕ ನೆನಪಿನಲ್ಲಿ ಹಸುರಾಗಿದೆ. ಅಂದು ಅವಧಾನವೊಂದರ ಏರ್ಪಾಟಿಗೆಂದೇ ಅವರು ಬಂದಿದ್ದರು. ಮುಂದೆ ಕನ್ನಡ ಅವಧಾನಕ್ರತುವಿನ ಶಾಶ್ವತಾಧ್ವರ್ಯುವಾಗಿ ಲಂಕಾ ಕೃಷ್ಣಮೂರ್ತಿಗಳು ನೆಲೆಯಾದುದಕ್ಕೆ ಆ ವೇಳಾವಿಶೇಷವೂ ಕೂಡಿಬಂದಿತ್ತೆನ್ನಬೇಕು. ಆ ಮುನ್ನ ನಾನು ಅವರನ್ನು ನಾಮತಃ ಕೂಡ ತಿಳಿದಿರಲಿಲ್ಲ.
ಸಂಸ್ಕೃತಭಾರತಿಯು ಆಗಿನ್ನೂ ಹುಟ್ಟಿರಲಿಲ್ಲ. ಅದು ತನ್ನ ಪೂರ್ವರೂಪವಾದ ಹಿಂದು-ಸೇವಾಪ್ರತಿಷ್ಠಾನದ ಅಂಗವಾಗಿ ಮಾತ್ರ ಕೆಲಸ ನಡಸಿತ್ತು. ಅದರ ಚಟುವಟಿಕೆ ನನ್ನನ್ನು ಮುಟ್ಟಿದ್ದು ಬಹುಶಃ ೧೯೮೦ರ ವಸಂತದಲ್ಲಿ. ಆ ಹೊತ್ತಿನ ಸಾಪ್ತಾಹಿಕಮಿಲನಗಳ, ಚಿಂತನಚಕ್ರಗಳ ವಲಯದಲ್ಲಿ ನಾನಿದ್ದಾಗಲೇ ಅದು ಹೇಗೋ ಸಂಸ್ಕೃತ ಅವಧಾನವೊಂದರ ಆಹ್ವಾನಪತ್ರಿಕೆ ಕೈಗೆಟುಕಿತ್ತು. ಅಲ್ಲಿಯವರೆಗೆ ನಾನು ಅವಧಾನವನ್ನು ಕುರಿತು ಅಲ್ಪ-ಸ್ವಲ್ಪ ಕೇಳಿದ್ದೆ ಮತ್ತು ಒಂದಿಷ್ಟು ಓದಿದ್ದೆನಲ್ಲದೆ ಅದನ್ನು ಕಣ್ಣಾರೆ ಕಂಡಿರಲಿಲ್ಲ. ಕಾಣಬೇಕೆಂಬ ಉತ್ಕಂಠತೆ ಮಾತ್ರ ತೀವ್ರವಾಗಿತ್ತು. ಅಷ್ಟೇಕೆ, ಅದರ ವಿವರಗಳು ಮನದಟ್ಟಾದರೆ ಕೂಡಲೆ ಅವಧಾನವನ್ನೇ ಮಾಡಬೇಕೆಂಬ ಹುರುಪೂ ಬಹಳಷ್ಟಿತ್ತು. ಏನು ಮಾಡುವುದು, ಈ ಉತ್ಸಾಹಕ್ಕೆ ದಿಕ್ಕು-ದೆಸೆಗಳನ್ನು ಕಲ್ಪಿಸಬಲ್ಲವರು ಯಾರೂ ಇರಲಿಲ್ಲ. ಇಂಥ ಹೊತ್ತಿನಲ್ಲಿ ಲೇಪಾಕ್ಷಿಯ ವಿದ್ವಾಂಸರಾದ ಮೇಡವರಂ ಮಲ್ಲಿಕಾರ್ಜುನಶರ್ಮಾ ಎಂಬವರ ಸಂಸ್ಕೃತ ಅವಧಾನವು ಪಾಠಶಾಲೆಯಲ್ಲಿ ನಡೆಯಲಿದೆ ಎಂಬ ಸುದ್ದಿಯೇ ನನಗೆ ಸಮ್ಮೋಹಕವಾಗಿತ್ತು.
ಅವಧಾನ ಮತ್ತು ಅವಧಾನಿಗಳ ಬಗೆಗೆ ನಾನು ಏನೇನೋ ಕಲ್ಪನೆ ಮಾಡಿಕೊಂಡು ಹೋಗಿದ್ದೆ. ಆ ಅಪರಾಹ್ಣದಲ್ಲಿಯೂ ಪಾಠಶಾಲೆಯ ಸಭಾಂಗಣ ಗಿಜುಗುಟ್ಟುತ್ತಿತ್ತು. ವೇದಿಕೆಯ ಮೇಲೆ ಸುಮಾರು ನಲವತ್ತರ ವಯಸ್ಸಿನ ಅವಧಾನಿ ಕುಳಿತಿದ್ದರು. ಅವರು ತೆಲುಗಿನಲ್ಲಿ ಹಲವಾರು ಅವಧಾನಗಳನ್ನು ಮಾಡಿದ್ದರೂ ಅಂದಿನದ್ದೇ ಅವರ ಮೊದಲ ಸಂಸ್ಕೃತ ಅವಧಾನವಂತೆ. ಅವರ ಸುತ್ತ ಘಟಾನುಘಟಿಗಳಾದ ವಿದ್ವಾಂಸರೇ ಪೃಚ್ಛಕರಾಗಿ ಕುಳಿತಿದ್ದರು. ಪಾಠಶಾಲೆಯ ಪಂಡಿತರೇ ಆದ ಎನ್. ಟಿ. ಶ್ರೀನಿವಾಸ ಅಯ್ಯಂಗಾರ್, ಎನ್. ರಂಗನಾಥಶರ್ಮಾ, ಶೇಷಾಚಲಶರ್ಮಾ, ಮಂಜುನಾಥಶರ್ಮಾ, ಜಿ. ಮಹಾಬಲೇಶ್ವರಭಟ್ಟ, ಎಸ್. ಟಿ. ನಾಗರಾಜ್ ಮುಂತಾದವರು ಅಲ್ಲದೆ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಎ. ರಾಮಸ್ವಾಮಿ ಅಯ್ಯಂಗಾರ್ ಅವರೂ ಇದ್ದಂತೆ ನೆನಪು. ಇವರೆಲ್ಲ ಅವಧಾನಿಯನ್ನು ಸಾಕುಬೇಕಾಗುವಂತೆ ಮಾಡಿದ್ದೂ ಚೆನ್ನಾಗಿ ನೆನಪಿನಲ್ಲಿದೆ. ಇಂಥ ಸಭೆಯಲ್ಲಿ ಅವಧಾನಿ ಮತ್ತು ಅವಧಾನಕಲೆಗಳ ಪರಿಚಯವನ್ನು ಮಾಡಿಕೊಡಲೆಂದು ಲಂಕಾ ಕೃಷ್ಣಮೂರ್ತಿಯವರು ವೇದಿಕೆಯನ್ನೇರಿದ್ದರು. ಅನಂತರ ತಿಳಿಯಿತು, ಅಂದಿನ ಆಯೋಜನೆಯಲ್ಲಿ ಅವರದ್ದೇ ಪ್ರಮುಖಪಾತ್ರವಾಗಿತ್ತೆಂದು.
ವೇದಿಕೆಯ ಮೇಲೆ ತಮ್ಮ ಟಿಪ್ಪಣಿಯ ಹಾಳೆಯನ್ನು ಮುಖಕ್ಕೆ ಅಡ್ಡವೇ ಆಗುವಂತೆ ಇಟ್ಟುಕೊಂಡು ನಿಂತಿದ್ದ ಲಂಕಾ ಕೃಷ್ಣಮೂರ್ತಿಯವರ ಅಂದಿನ ಚಿತ್ರ ನನಗೆ ಈ ಕ್ಷಣದಲ್ಲಿಯೂ ಕಣ್ಣಿಗೆ ಕಟ್ಟಿದಂತಿದೆ. ಬಿಳಿಯ ಪಂಚೆ ಮತ್ತು ಜುಬ್ಬ ಧರಿಸಿದ್ದ ಎತ್ತರದ ಆಳ್ತನ ಅವರದ್ದು. ಸಾದುಗಪ್ಪು ಮೈಬಣ್ಣ, ನೆರೆತ ಕೆದರು ತಲೆಗೂದಲು, ಸ್ವಲ್ಪ ಬಾಗಿದ ಭಂಗಿ, ಆಳವಾದ ಕಂಠ, ಅನಾಕರ್ಷಕವಾದ ಮುಖ. ಅಷ್ಟೇ ಅನಾಕರ್ಷಕವಾದ ವಿಳಂಬಗತಿಯಲ್ಲಿ ಅವರು ತಮ್ಮ ಟಿಪ್ಪಣಿಯನ್ನು ಓದಲಾರಂಭಿಸಿದ್ದರು. ನಾನೂ ಸೇರಿದಂತೆ ನನ್ನ ಸುತ್ತಮುತ್ತಲು ಕುಳಿತವರೆಲ್ಲ “ಯಾರಪ್ಪಾ ಇವರು, ಇದು ಯಾಕೆ ಇಲ್ಲಿಗೆ ಬಂದಿದ್ದಾರೆ! ಮೊದಲೇ ತಡವಾಗುತ್ತ ಇರುವ ಕಾರ್ಯಕ್ರಮವನ್ನು ಮತ್ತೂ ತಡ ಮಾಡುವಂತೆ ಇಷ್ಟು ನಿಧಾನವಾಗಿ ಪರಿಚಯ ಮಾಡಿಕೊಡುತ್ತಿದ್ದಾರೆ! ಈ ಮುನ್ನವೇ ಆಹ್ವಾನಪತ್ರಿಕೆಯಲ್ಲಿ ಕಾರ್ಯಕ್ರಮದ ಪರಿಚಯ ಬಂದಿರುವಾಗ ಮತ್ತೊಮ್ಮೆ ಯಾಕೆ ಅದನ್ನು ಬೆಳಸಬೇಕು?” ಎಂಬಿತ್ಯಾದಿ ಮಂತ್ರಾಕ್ಷತೆಗಳನ್ನು ಹಾಕುತ್ತಲೇ ಇದ್ದರು. ವೇದಿಕೆಯ ಮೇಲಿದ್ದವರಿಗೆ ಇದು ಹೇಗೆ ತಾನೆ ತಿಳಿಯಬೇಕು? ಲಂಕಾ ಕೃಷ್ಣಮೂರ್ತಿಯವರು ಸಾವಕಾಶವಾಗಿ ಹದಿನೈದು-ಇಪ್ಪತ್ತು ನಿಮಿಷಗಳ ತಮ್ಮ ಕೆಲಸವನ್ನು ತಮ್ಮ ರೀತಿಯಲ್ಲಿಯೇ ಮಾಡಿ ಮುಗಿಸಿದರು. ಆ ಬಳಿಕ ಅವಧಾನ ಆರಂಭವಾಯಿತು. ಅದರ ವಿವರಗಳು ಇಲ್ಲಿ ಅಪ್ರಕೃತ.
ಅಂದು ನಾನು ಕಂಡ ಲಂಕಾ ಕೃಷ್ಣಮೂರ್ತಿಯವರು ನನ್ನ ಪಾಲಿಗೆ ತೀರ ನೀರಸವಾಗಿ ತೋರಿದ್ದರು. ಎಷ್ಟರ ಮಟ್ಟಿಗೆಂದರೆ, ಅವಧಾನವನ್ನು ಕುರಿತು ಅದೆಷ್ಟು ಅದಮ್ಯ ಆಸಕ್ತಿಯಿದ್ದರೂ — ಆ ಬಳಿಕ ಅವರನ್ನು ಕಾಣುವ ಹೊತ್ತಿಗೆ ಐದಾರು ಅವಧಾನಗಳನ್ನು ಮಾಡಿದ್ದರೂ — ಒಮ್ಮೆ ಕೂಡ ಅವರನ್ನು ನೆನೆದಿರಲಿಲ್ಲ, ಪರಿಚಯ ಮಾಡಿಕೊಳ್ಳಬೇಕೆಂಬ ಕಲ್ಪನೆಯೂ ಬಂದಿರಲಿಲ್ಲ. ಹೀಗೆ ಆರು ವರ್ಷಗಳೇ ಕಳೆದಿದ್ದವು. ಅನಂತರದ ಅನುಭವದ ಮೇಲೆ ಪರ್ಯಾಲೋಚಿಸಿದಾಗ ನಾನು ಮಾಡಿಕೊಂಡ ನಷ್ಟ ಎಂಥದ್ದೆಂಬುದು ಸ್ಪಷ್ಟವಾಯಿತು. ಸಾಮಾನ್ಯವಾಗಿ “first impression is the best impression” ಎಂಬ ಮಾತನ್ನು ಪ್ರಮಾಣವೆಂಬಂತೆ ಮುಂದಿಡುವುದುಂಟು. ಎಂಥ ಪ್ರಮಾಣಗಳಿಗೂ ಅಪವಾದಗಳಿರುವಂತೆ ಈ ಮಾತಿಗೂ ಅಪವಾದವಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
* * *
೧೯೮೪ರ ಕೊನೆಯಿಂದ ಬೆಂಗಳೂರಿನ ಭಾರತೀಯವಿದ್ಯಾಭವನದಲ್ಲಿ ಎಚ್. ಕೆ. ರಂಗನಾಥ್ ಅವರ ನೇತೃತ್ವದಲ್ಲಿ ಸಾಹಿತ್ಯ-ಸಂಸ್ಕೃತಿಗಳನ್ನು ಕುರಿತ ಬಗೆಬಗೆಯ ಕಾರ್ಯಕ್ರಮಗಳು ಹೊಸ ಹೊಳಪಿನಿಂದ ಆರಂಭವಾಗಿದ್ದವು. ಆಗಷ್ಟೇ ಎಂಜಿನಿಯರಿಂಗ್ ಮುಗಿಸಲಿದ್ದ ನಾನು ಭವನದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದೆ. ೧೯೮೫ರ ಮೇ ತಿಂಗಳಿನಲ್ಲಿ ನನ್ನ ಅವಧಾನ ಏರ್ಪಾಟಾಗಿತ್ತು. ಅದೇ ಹೊತ್ತಿಗೆ ನಾನು ಟಯ್ಫಾಯ್ಡ್ ಪೀಡಿತನಾಗಿದ್ದ ಕಾರಣ ಆ ಕಾರ್ಯಕ್ರಮ ರದ್ದಾಗಿತ್ತು. ರಂಗನಾಥ್ ಅವರು ಒಮ್ಮೆ ಕಲಾವಿದರ ಕಾರಣದಿಂದ ಕಾರ್ಯಕ್ರಮವೊಂದು ರದ್ದಾದರೆ ಅದನ್ನು ಮತ್ತೆ ಒಂದೆರಡು ವರ್ಷಗಳವರೆಗಾದರೂ ಮುಂದೆ ತಳ್ಳುತ್ತಿದ್ದರು. ಆಗ ಅವರ ಕೈಮೇಲಿನ ಕಾರ್ಯಕ್ರಮಗಳ ಒತ್ತಡ ಹಾಗಿತ್ತು. ಕಲಾವಿದರ ಬಗೆಗೆ ಅವರಿಗೆ ಉಂಟಾಗುತ್ತಿದ್ದ ಅಷ್ಟಿಷ್ಟು ಅಸಮಾಧಾನವೂ ಇಂಥ ನಿರ್ಧಾರಕ್ಕೆ ಒತ್ತಾಸೆ ನೀಡುತ್ತಿತ್ತು. ಜೊತೆಗೆ ನಾನು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಉದ್ಯೋಗಪ್ರಯತ್ನ, ಸ್ಪರ್ಧಾತ್ಮಕಪರೀಕ್ಷೆಗಳ ಸಿದ್ಧತೆ ಮುಂತಾದ ಜೀವಿಕಾವಿಕ್ಷೇಪಗಳಲ್ಲಿ ಕಳೆದುಹೋಗಿದ್ದೆ. ಹೀಗಾಗಿ ಮತ್ತೆ ನಾನು ಭವನದಲ್ಲಿ ಅವಧಾನಿಸಿದ್ದು ೧೯೮೮ರ ಜುಲೈ ತಿಂಗಳಿನಲ್ಲಿಯೇ. ಈ ನಡುವೆ — ಬಹುಶಃ ೧೯೮೬ರ ಆರಂಭದಲ್ಲಿ — ಡಿ.ವಿ.ಜಿ. ಅವರ ಪ್ರಿಯಶಿಷ್ಯರಾದ ಟಿ. ಎನ್. ಪದ್ಮನಾಭನ್ ಮತ್ತು ಅವರಿಗೆ ಆತ್ಮೀಯರಾದ ಬಿ. ಆರ್. ಪ್ರಭಾಕರ್ ಅವರ ಪರಿಚಯವಾಯಿತು.
ನನಗೆ ಪ್ರಭಾಕರ್ ಅವರ ಪರಿಚಯವಾದದ್ದು ಭರತೀಯವಿದ್ಯಾಭನದಲ್ಲಿಯೇ. ಡಿ.ವಿ.ಜಿ. ಅವರ ಜನ್ಮಶತಾಬ್ದಿ ಉತ್ಸವವನ್ನು ಭವನ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ವರ್ಷವಿಡೀ ನಡಸಿತು. ಪ್ರತಿಯೊಂದು ಬುಧವಾರವೂ ಒಂದೊಂದು ಕಾರ್ಯಕ್ರಮವಿರುತ್ತಿತ್ತು. ಆರಂಭದಲ್ಲಿಯೇ “ಶ್ರೀರಾಮಪರೀಕ್ಷಣಂ” ಮತ್ತು “ಶ್ರೀಕೃಷ್ಣಪರೀಕ್ಷಣಂ” ಕಾವ್ಯಗಳನ್ನು ಕುರಿತು ಆದರಣೀಯರಾದ ಎನ್. ರಂಗನಾಥಶರ್ಮರ ಭಾಷಣಗಳು ಏರ್ಪಟ್ಟಿದ್ದವು. ಅವುಗಳನ್ನು ಕೇಳಲು ಅನೇಕರು ಬಂದಿದ್ದರು. ಅವರಲ್ಲಿ ಪ್ರಭಾಕರ್ ಅವರೂ ಒಬ್ಬರು. ಅವರೇ ನನ್ನನ್ನು ಪರಿಚಯಿಸಿಕೊಂಡಾಗ ಅವರನ್ನು ಬಹುಕಾಲದಿಂದ ಬಲ್ಲ ಪದ್ಮನಾಭನ್ ಅವರು “ಈಯನ ಇಂತ ಪಿನ್ನವಯಸ್ಸುಲೋನೇ ಅವಧಾನಂ ಚೇಸ್ತಾರಶ್ಶ. ನೇನೂ ಇಂಕಾ ಚೂಡಲೇದು” (ಈತ ಇಷ್ಟು ಚಿಕ್ಕ ವಯಸ್ಸಿಗೇ ಅವಧಾನ ಮಾಡುತ್ತಾರಂತೆ. ನಾನೂ ಇನ್ನೂ ನೋಡಿಲ್ಲ) ಎಂದು ನನ್ನ ಬಗ್ಗೆ ತೆಲುಗಿನಲ್ಲಿ ವರ್ಣಿಸಿದ್ದರು. ಅವಧಾನವೆಂಬ ಮಾತು ಪ್ರಭಾಕರ್ ಅವರ ಕಿವಿಗೆ ಬಿದ್ದೊಡನೆಯೇ ಅವರು ನನ್ನನ್ನು ಆಸ್ಥೆಯಿಂದ ಪ್ರಶ್ನಿಸಿದರು: “ನಿಮಗೆ ಲಂಕಾ ಕೃಷ್ಣಮೂರ್ತಿಗಳ ಪರಿಚಯ ಆಗಿರಬೇಕಲ್ಲವೇ?” ನಾನು ಇಲ್ಲವೆಂದು ಉತ್ತರಿಸಿದೆ. ಕೂಡಲೆ “ಅಯ್ಯೋ ಹೌದೇ, ಅವರನ್ನು ಬಿಟ್ಟರೆ ಬೆಂಗಳೂರಿನಲ್ಲಿ ಮತ್ತೆ ಯಾರು ತಾನೆ ಅವಧಾನವನ್ನು ಕುರಿತ ಅಧಿಕಾರಿಗಳಿದ್ದಾರೆ? ನಾನೇ ನಿಮ್ಮನ್ನು ಅವರ ಹತ್ತಿರ ಕರೆದುಕೊಂಡು ಹೋಗುತ್ತೀನಿ” ಎಂದು ಸ್ನೇಹದಿಂದ ಹೇಳಿದರು. ಪದ್ಮನಾಭನ್ ಅವರೂ ತಲೆಯೊಲಿದು “ಹೌದು ಹೌದು. ಲಂಕಾ ಕೃಷ್ಣಮೂರ್ತಿಯವರ ನಿಕಟಪರಿಚಯ ನನಗೆ ಇಲ್ಲವಾದರೂ ಅವರ ತಿಳಿವಳಿಕೆ ಮತ್ತು ಅವಧಾನಕುತೂಹಲಗಳ ಬಗ್ಗೆ ತುಂಬ ಕೇಳಿದ್ದೀನಿ. ನೀವು ಅವರನ್ನು ಅವಶ್ಯವಾಗಿ ಕಾಣಬೇಕು” ಎಂದರು. ನನಗಾದರೂ ಅವರನ್ನು ಆದಷ್ಟು ಬೇಗ ಕಾಣಬೇಕೆಂಬ ಆಸೆಯಿದ್ದಿತು. ಆದರೆ ಅದಕ್ಕೆ ಸಂದರ್ಭವೊದಗಿದ್ದು ೧೯೮೭ರ ಏಪ್ರಿಲ್ ತಿಂಗಳಲ್ಲಿ.
* * *
ಪ್ರಭಾಕರ್ ಅವರು ಇಂದಿರಾನಗರದಲ್ಲಿದ್ದ ಕೃಷ್ಣಮೂರ್ತಿಗಳ ಮನೆಗೆ ಒಂದು ಮುಸ್ಸಂಜೆ ನನ್ನನ್ನು ಕರೆದೊಯ್ದರು. ವಿಶಾಲವಾದರೂ ನಿರಾಡಂಬರವಾದ ಅವರ ಮನೆಯಲ್ಲಿ ಕಾಲಿಡುತ್ತಿದ್ದಂತೆಯೇ ನನಗೆ ಕಂಡದ್ದು ಲಂಕಾ ಕೃಷ್ಣಮೂರ್ತಿಯವರ ತಂದೆ-ತಾಯಿಗಳ ವರ್ಣಚಿತ್ರ, ಕೃಷ್ಣ-ಕುಚೇಲರ ಚಿತ್ರ ಮತ್ತು ನಡುಮನೆಯಲ್ಲಿ ಅವರನ್ನೂ ಒಳಗೊಂಡಂತೆ ಅವರ ಇಡಿಯ ಕುಟುಂಬ ತುಂಬ ಅನೌಪಚಾರಿಕವಾಗಿ ಹಲವು ತೆರದ ಕೆಲಸಗಳಲ್ಲಿ ಮಗ್ನರಾಗಿ ಕುಳಿತ್ತಿದ್ದಂತೆ ತೋರುವ ಮತ್ತೊಂದು ವರ್ಣಚಿತ್ರ. ಇವೆಲ್ಲವನ್ನೂ ಚಿತ್ರಿಸಿದವರು ಸ್ವಯಂ ಕೃಷ್ಣಮೂರ್ತಿಗಳೆಂದು ಆ ಬಳಿಕ ತಿಳಿಯಿತು. ಅವರ ಕೋಣೆಯಲ್ಲಿ ಪುಸ್ತಕಸಂಗ್ರಹವಲ್ಲದೆ ಹೋಮಿಯೋಪತಿ ಔಷಧಗಳ ದಾಸ್ತಾನೂ ಸಾಕಷ್ಟಿತ್ತು. ಅವರ ಸೇವಾಕಲ್ಪಗಳಲ್ಲಿ ಇದೂ ಒಂದೆಂದು ಅನಂತರ ಗೊತ್ತಾಯಿತು. ಗೋಡೆಯ ಮೇಲಿದ್ದ ಕಪ್ಪು ಹಲಗೆಯು ಪಾಣಿನಿಸೂತ್ರಗಳಿಂದ ಮೈದುಂಬಿಕೊಂಡಿತ್ತು. ಒಡನೆಯೇ ಇವರು ವ್ಯಾಕರಣವನ್ನು ಪರಿಷ್ಕಾರವಾಗಿ ಪಾಠ ಮಾಡುತ್ತಿದ್ದಿರಬೇಕೆಂಬ ಸ್ಫುರಣೆ ನನಗಾಯಿತು.
ನಾವು ಬರುವುದನ್ನು ಮುನ್ನವೇ ತಿಳಿಸಿದ್ದೆವು. ಕೃಷ್ಣಮೂರ್ತಿಯವರು ಪ್ರೀತಿಯಿಂದ ಆಹ್ವಾನಿಸಿದರು. ಅವರನ್ನು ನೋಡುತ್ತಿದ್ದಂತೆಯೇ ಆರು ವರ್ಷಗಳ ಮುನ್ನ ಕಂಡದ್ದು ಇದೇ ಆಸಾಮಿಯನ್ನು ಎಂಬ ಅರಿವಾಗಿ ಅದೊಂದು ಬಗೆಯಲ್ಲಿ ಉತ್ಸಾಹಭಂಗವೇ ಆಯಿತು! ಆದರೆ ಮಾತುಕತೆಗಳಿಗೆ ತೊಡಗಿದಂತೆ ಅವರ ಗಂಭೀರವಿದ್ವತ್ತೆ ಮತ್ತು ಪ್ರಾಮಾಣಿಕವರ್ತನೆಗಳ ಸ್ವರೂಪ ವಿಶದವಾಯಿತು.
ಸಾರ್ವಜನಿಕವಾದ ಸಮಾರಂಭಗಳಲ್ಲಿಯೇ ಅವರ ವೇಷ-ಭೂಷಣ ಬಡತನಕ್ಕೆ ಜಾರುವಷ್ಟು ಸರಳವೆಂದ ಬಳಿಕ ಮನೆಯುಡುಪಿನಲ್ಲಿ ಮತ್ತಾವ ವಿಶೇಷವಿದ್ದೀತು? ಎಂದೂ ಅಷ್ಟೆ; ಅಡ್ಡಾದಿಡ್ಡಿಯಾಗಿ ಉಟ್ಟ ಮಾಸಲು ದಟ್ಟಿಯ ಪಂಚೆ, ಒಪ್ಪವಿಲ್ಲದ ಜುಬ್ಬ ಅಥವಾ ಅಂಗಿ, ಹೇಗೋ ಹೊದ್ದ ಜರಿಯಿಲ್ಲದ ಉತ್ತರೀಯ, ಅಪಸವ್ಯವಾಗಿ ಹೆಗಲಿಗೇರಿಸಿದ ಶಾಲೆಯ ಚೀಲ — ಇವು ಅವರ ಅಲಂಕಾರಗಳು. ಮನೆಯಲ್ಲಿ ಅಂಗಿ-ಚೀಲಗಳು ಇಲ್ಲವಾಗುತ್ತಿದ್ದವು, ಅಷ್ಟೇ. ಜಗದ್ಗುರುಗಳೇ ಜರಿಯ ಶಾಲು ಹೊದ್ದಿಸಿದ್ದರೂ ಅದನ್ನು ತಾವಾಗಿ ಮೆರೆಸಿದವರಲ್ಲ. ಇನ್ನು ತಲೆಗೂದಲೋ ಜಟಾಕಟಾಹಸಂಭ್ರಮ ... ಎಂಬಂತೆ! ಮುಂದೊಮ್ಮೆ ವಯಸ್ಸು ಎಪತ್ತನ್ನು ಮೀರಿದ ಬಳಿಕ ಅವರು ಇದ್ದ ಶಿಖೆಯನ್ನೂ ತೆಗಿಸಿಬಿಟ್ಟರು! ಅದನ್ನು ಕಂಡು ಎಲ್ಲರಿಗಿಂತ ಹೆಚ್ಚು ಕಂಗಾಲಾದವರು ಬಿ. ಆರ್. ಪ್ರಭಾಕರ್. ಪದೇ ಪದೇ ಅವರು ನನ್ನಲ್ಲಿ ಪೇಚಾಡುತ್ತಿದ್ದುದುಂಟು: “ಅವಧಾನಿಗಳೇ, ಇದು ಯಾಕೋ ಗೊತ್ತಾಗುತ್ತಿಲ್ಲ ... ಲಂಕಾ ಕೃಷ್ಣಮೂರ್ತಿಗಳು ಶಿಖಾತ್ಯಾಗ ಮಾಡಿದ್ದು ನನಗಿನ್ನೂ ಆಶ್ಚರ್ಯ! ಅದೂ ಈ ವಯಸ್ಸಿನಲ್ಲಿ!” ಆದರೆ ನಾವು ಯಾರೂ ಅವರನ್ನು ಕಾರಣ ಕೇಳುವ ಸಾಹಸ ಮಾಡಲಿಲ್ಲ. ಪ್ರಾಯಶಃ ಶಿಖಾ ಜ್ಞಾನಮಯೀ ಸ್ಮೃತಾ ಎಂಬ ಆರ್ಷವಾಣಿ ಅವರಿಗೆ ಅಂತರ್ವಾಣಿಯಾಗಿ ಇದ್ದಿರಬೇಕು.
ಅಂದು ಅವರೊಡನೆ ಮಾತನಾಡಿದ ಬಹ್ವಂಶಗಳು ನನಗೆ ನೆನಪಿನಲ್ಲುಂಟಾದರೂ ಇಲ್ಲಿ ಆ ಎಲ್ಲ ವಿವರಗಳನ್ನೂ ಕೊಡುವುದು ಅನಪೇಕ್ಷಿತ. ಕೇವಲ ಸ್ಥೂಲಾಂಶಗಳನ್ನಷ್ಟೇ ನಿವೇದಿಸಬಹುದು. ಅವರು ನನ್ನ ಹಿನ್ನೆಲೆ, ಆಸಕ್ತಿ ಮತ್ತು ವಿದ್ಯಾಭ್ಯಾಸಗಳನ್ನು ಚುಟುಕಾಗಿ ಕೇಳಿ ತಿಳಿದುಕೊಂಡರು. ಅವಧಾನದಲ್ಲಿ ನನಗಿರುವ ಆಸಕ್ತಿಯನ್ನರಿತು ತುಂಬ ಸಂತಸಗೊಂಡರೆಂಬುದಂತೂ ಸ್ಪಷ್ಟ.
ಆಗ ನಾನು ಮಾತಾಡಿದ್ದೇ ಹೆಚ್ಚು. ಅವರ ಪೂರ್ವೋತ್ತರ, ಅಧ್ಯಯನ, ಆಸಕ್ತಿಯ ಕ್ಷೇತ್ರ ಇತ್ಯಾದಿಗಳನ್ನು ಕುರಿತ ಹತ್ತಾರು ಪ್ರಶ್ನೆಗಳನ್ನು ಕುಮ್ಮರಿಸಿದೆ. ಇವುಗಳ ಪೈಕಿ “ನೀವು ಅವಧಾನ ಮಾಡಿದ್ದೀರಾ? ಎಷ್ಟು ಅವಧಾನಗಳನ್ನು ಮಾಡಿದ್ದೀರಿ?” ಎಂಬುದೂ ಒಂದು. ಇದಕ್ಕವರು ಸ್ವಲ್ಪವೂ ಕಸಿವಿಸಿಗೊಳ್ಳದೆ ತಾವು ಮಾಡಿರುವುದು ಒಂದೆರಡು ಅವಧಾನಗಳಷ್ಟೇ ಎಂದದ್ದಲ್ಲದೆ ಆಗ ಪಟ್ಟ ಕಷ್ಟವನ್ನೂ ಹೇಳಿಕೊಂಡರು. ವಸ್ತುತಃ ಕೃಷ್ಣಮೂರ್ತಿಗಳ ಸ್ವಭಾವ ಅವಧಾನದಂಥ ಪ್ರದರ್ಶನಕಲೆಗೆ (performing art) ಒಗ್ಗುವಂಥದ್ದಲ್ಲ; ಸ್ವಸ್ಥವಾಗಿ ಕುಳಿತು ಗೃಹಕವಿತ್ವಕ್ಕೆ ತೊಡಗುವಂಥದ್ದು, ಇದಕ್ಕೂ ಮಿಗಿಲಾಗಿ ಶಾಸ್ತ್ರಚಿಂತನೆ ಮತ್ತು ಸಂಸ್ಕೃತಿಪ್ರಸಾರಗಳ ದಿಶೆಯಲ್ಲಿ ಹೆಚ್ಚು ಸಮರ್ಥವಾಗಿ ದುಡಿಯುವಂಥದ್ದೆಂದು ನನಗೆ ಆ ಬಳಿಕ ತೋರಿತ್ತು. ಅವರು ಒಂದೆರಡು ಹರಿಕಥೆಗಳನ್ನು ಮಾಡಿದವರು, ಸ್ವಯಮಾಚಾರ್ಯಪದ್ಧತಿಯಿಂದ ಹಾರ್ಮೋನಿಯಂ ಕಲಿತವರು. ಆದರೆ ಎಲ್ಲಿಯೂ ಮುನ್ನುಗ್ಗುವ ಸ್ವಭಾವ ಅವರದಲ್ಲ. ಅಂತೂ ನನ್ನ ಜಿಜ್ಞಾಸೆಗೆಲ್ಲ ಸ್ಪಷ್ಟವಾಗಿ — ಆದರೆ ನಿಧಾನವಾಗಿ — ಆಳದ ದನಿಯಿಂದ ಉತ್ತರವಿತ್ತರು. ತಮ್ಮ ಮಗನಿಗಿಂತ ಕಿರಿಯ ವಯಸ್ಸಿನ ಹುಡುಗನೊಬ್ಬ ಮೊದಲ ಬಾರಿಗೆ ತಮಗೆ ಎದುರಾಗಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿರುವನೆಂಬ ಇರುಸು-ಮುರುಸು ಸ್ವಲ್ಪವೂ ಇಲ್ಲದೆ ತಾಳ್ಮೆಯಿಂದ ಉತ್ತರವಿತ್ತದ್ದು ನನಗೆ ಮೆಚ್ಚಾಯಿತು. ಆಗಲೇ ಇವರು ತುಂಬ ಬಾಧ್ಯತೆಯುಳ್ಳ ವ್ಯಕ್ತಿಯೆಂದು ತೋರಿತು.