ಇನ್ನೊಮ್ಮೆ ನಿಮ್ಹಾನ್ಸ್ ಸಂಸ್ಥೆಯವರು ಅವಧಾನಕಾಲದ ಮನೋವ್ಯಾಪಾರಗಳನ್ನು ತಿಳಿಯಲೆಂದು ರಾಜ್ಯೋತ್ಸವದ ಅಂಗವಾಗಿ ನನ್ನ ಅವಧಾನವನ್ನು ಆಯೋಜಿಸಿದ್ದರು. ಇದಕ್ಕೂ ಕೃಷ್ಣಮೂರ್ತಿಗಳೇ ಸೂತ್ರಧಾರರು. ನಿಮ್ಹಾನ್ಸ್ ಸಂಸ್ಥೆಯ ರೋಗಿಗಳನ್ನು ಕರೆದೊಯ್ಯುವ ದೊಡ್ಡ ಬಿಳಿಯ ವ್ಯಾನಿನಲ್ಲಿ ಪೃಚ್ಛಕರೊಡನೆ ಅಲ್ಲಿಗೆ ಹೊತ್ತಿಗೆ ಮುನ್ನವೇ ತಲುಪಿದ್ದಾಯಿತು. ವೇದಿಕೆಯ ಮುಂದೆ ಸಾಕಷ್ಟು ಜನರಿದ್ದರೂ ಒಬ್ಬರ ಮುಖದಲ್ಲಿ ಕೂಡ ಸ್ಪಂದನವಿರಲಿಲ್ಲ. ಇಂಥವರಿಗೆ ಹೇಗೆ ತಾನೆ ಅವಧಾನದಂಥ ಅಭಿಜಾತಕಲೆಯನ್ನು ಮುಟ್ಟಿಸುವುದೆಂಬ ಚಿಂತೆ ನನಗಾದರೆ, ಲಂಕಾ ಕೃಷ್ಣಮೂರ್ತಿಯವರು ನಿಶ್ಚಿಂತರಾಗಿ ಹೇಳಿದರು: “ಸಾರ್, ಇದು ಅವರ ಅಧ್ಯಯನಕ್ಕೆ ವಸ್ತು. ನಾವು ಅದಕ್ಕೆ ಬೇಕಾದ ಅನುಕೂಲ ಮಾಡಿಕೊಡೋಣ. ಫಲಕಾರಿಯಾದಲ್ಲಿ ಜ್ಞಾನಜಗತ್ತಿಗೆ ಉಪಕಾರವಾಗುತ್ತದೆ; ನಿಷ್ಫಲವಾದರೆ ನಮಗೆ ಯಾವ ನಷ್ಟವೂ ಇಲ್ಲ.” ಇವರೇ ಹೀಗೆ ಹೇಳಿದ ಮೇಲೆ ಮತ್ತೇನು ಮಾಡುವುದು? ಸಾಂಗೋಪಾಂಗವಾಗಿ ಕಾರ್ಯಕ್ರಮವನ್ನು ಮುಗಿಸಿದ್ದಾಯಿತು. ವಿಜ್ಞಾನಕ್ಕೆ ಯಾವ ಪ್ರಯೋಜನವಾಯಿತೋ ಪರಮಾತ್ಮನೇ ಬಲ್ಲ. ಅಂದು ಘಂಟಾವಾದನಕ್ಕಾಗಿ ಬಂದ ನನ್ನ ಗೆಳೆಯರು ಮರಳಿ ಬರುವಾಗ ಪ್ರೇಕ್ಷಕರೊಬ್ಬರ ಮಾತಾಗಿ ಹೇಳಿದರು, “ನೀವೆಲ್ಲ ವೇದಿಕೆ ಮೇಲೆ ಕೂತು ಇಸ್ಪೀಟು ಇಲ್ಲದೆಯೇ ಇಸ್ಪೀಟಾಟ ಆಡುತ್ತಿರುವ ಹಾಗಿತ್ತು. ನಮಗಂತೂ ನಿಮ್ಮ ಏನೇನೋ ಮಾತು ಬಿಟ್ಟು ಮತ್ತೆ ಯಾವುದೂ ಗೊತ್ತಾಗಲಿಲ್ಲ!” ಇದನ್ನು ಕೇಳಿದ ಲಂಕಾ ಕೃಷ್ಣಮೂರ್ತಿಗಳು ಒಂದಿಷ್ಟೂ ವಿಚಲಿತರಾಗಲಿಲ್ಲ. “ಈ ಹೊತ್ತು ಅವರಿಗೆ ಇದು ಏನೋ ಅಂತ ಅನ್ನಿಸಿರುತ್ತದೆ. ಮುಂದೆ ಯಾವತ್ತಾದರೂ ಅವರಿಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿವು ಮೂಡುತ್ತದೆ. ನಮ್ಮ ಕರ್ತವ್ಯ ನಾವು ಮಾಡಬೇಕು ಸಾರ್.”
ಮಗದೊಮ್ಮೆ ಯಾವುದೋ ಸರ್ವಧರ್ಮಸಮನ್ವಯದ ವೇದಿಕೆ. ಅಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಸಮಾವೇಶವೂ ಇತ್ತು. ಸಿ. ವಿ. ರಾಮನ್ ನಗರದಲ್ಲಿ ಇವುಗಳ ಆಯೋಜನೆ. ಇಂಥ ಪ್ರತಿಷ್ಠಿತಸಂದರ್ಭದಲ್ಲಿ ಅವಧಾನಿಸಬೇಕೆಂದು ಆಯೋಜಕರು ಕೃಷ್ಣಮೂರ್ತಿಗಳನ್ನು ಕೇಳಿಕೊಂಡಿದ್ದರು. ಸಮಯ ಮಾತ್ರ ಅರ್ಧಘಂಟೆ! ಇಷ್ಟು ಸಮಯದಲ್ಲಿ ಒಂದು ಸುತ್ತೂ ಮುಗಿಯುವುದಿಲ್ಲವಲ್ಲ ಎಂಬ ಚಿಂತೆ ನನಗಾದರೆ ಕೃಷ್ಣಮೂರ್ತಿಗಳಿಗೆ ಅದರತ್ತ ಗಮನವೇ ಇಲ್ಲ. “ನಿಮ್ಮ ಧಾರೆಯ ವೇಗ ನನಗೆ ಗೊತ್ತಿದೆ ಸಾರ್. ಹೇಗೋ ಆಗುತ್ತದೆ ಬನ್ನಿ” ಎಂದರು. ಅವರ ಮಾತಿನಂತೆ ಹೋದದ್ದಾಯಿತು. ಅದು ಹೇಗೋ ಶರವೇಗದಲ್ಲಿ ಅವಧಾನ ಮುಗಿದಿತ್ತು. ಎಲ್ಲ ಅಂಗಗಳೂ ಲೋಪವಿಲ್ಲದೆ ಸಂಪನ್ನವಾಗಿದ್ದವು. ಈ ಅನುಭವದ ಆಧಾರದ ಮೇಲೆಯೇ ರೇಡಿಯೋ, ದೂರದರ್ಶನ ಮೊದಲಾದ ಮಾಧ್ಯಮಗಳಲ್ಲಿ ಅನೇಕ ಅವಧಾನಗಳನ್ನು ಅರ್ಧಘಂಟೆ, ಮುಕ್ಕಾಲು ಘಂಟೆ, ಒಂದು ಘಂಟೆಗಳ ಅವಧಿಯೊಳಗೆ ಅಚ್ಚುಕಟ್ಟಾಗಿ ಮಾಡುವ ಧೈರ್ಯ ಬಂದಿತು. ಇಲ್ಲೆಲ್ಲ ಕೃಷ್ಣಮೂರ್ತಿಗಳ ಉಪಸ್ಥಿತಿ ಇದ್ದೇ ಇರುತ್ತಿತ್ತು.
ಇನ್ನೊಮ್ಮೆ ಬಸವನಗುಡಿಯ ಯಾವುದೋ ಶರಣರ ಮಠದಲ್ಲಿ ಅವಧಾನ. ಆಯೋಜಕರ ಅಶಕ್ತಿ, ಅಜ್ಞಾನ, ಅವ್ಯವಸ್ಥೆಗಳು ಸಾಕುಬೇಕಾಗುವಷ್ಟು ಇದ್ದವು. ಲಂಕಾ ಕೃಷ್ಣಮೂರ್ತಿಗಳು ನಿರುದ್ವಿಗ್ನಚಿತ್ತದಿಂದ ಅವಧಾನಯಜ್ಞದ ಆರ್ತ್ವಿಜ್ಯ ವಹಿಸಿದ್ದರು. ಆ ಕಾಲದಲ್ಲಿ ನನಗೂ ಅವಧಾನಗಳನ್ನು ಎಷ್ಟು ಬೇಕಾದರೂ ಮಾಡುವ ಉತ್ಸಾಹವಿತ್ತು; ತಪ್ಪು-ಸರಿಗಳ ಬಗೆಗೆ ಹಿಂಜರಿಕೆಯಿಲ್ಲದ ಹುಮ್ಮಸ್ಸಿತ್ತು. ಇಂತಿದ್ದರೂ ಕೃಷ್ಣಮೂರ್ತಿಗಳ ವ್ರತನಿಷ್ಠೆ ನನಗೆ ಅಚ್ಚರಿಯೆನಿಸುತ್ತಿತ್ತು. ಇದು ಮಿಕ್ಕ ಪೃಚ್ಛಕರಿಗೂ ಬೆರಗನ್ನು ತರುತ್ತಿತ್ತು. ಒಮ್ಮೆ ಪ್ರಾಯಶಃ ಇಂಥ ಅವಧಾನಗಳ ಎಡವಟ್ಟಿನ ನಡುವೆಯೇ ಕೃಷ್ಣಮೂರ್ತಿಗಳು ನಮ್ಮೆಲ್ಲರಿಗೆ ತಮ್ಮ ಅಂತರ್ನಿಶ್ಚಯದ ಕಾರಣವನ್ನು ಹೇಳಿದ್ದರು. ಅದರ ತಾತ್ಪರ್ಯವಿಷ್ಟು:
ಕನ್ನಡದಲ್ಲಿ ಪ್ರಾಚೀನಕಾವ್ಯಗಳ ಪರಿಚಯವೇನೋ ಕಾವ್ಯವಾಚನದಂಥ ಒಳ್ಳೆಯ ಕಲೆಯ ಮೂಲಕ ಆಗುತ್ತಿದೆ. ಆದರೆ ಇಂಥ ಕಾವ್ಯಗಳ ರಚನೆ ಆಗಿಹೋದ ಒಂದು ಸಂಗತಿಯೆಂಬ ಅಪಪ್ರಥೆ ಹೆಚ್ಚಿನ ಜನಗಳಲ್ಲಿದೆ. ಇಂಥ ಭಾವನೆಗೆ ವಿದ್ವಾಂಸರೂ ಹೊರತಲ್ಲ. ಬಿ. ಎಂ. ಶ್ರೀಕಂಠಯ್ಯನವರ ಕಾಲದಿಂದ ಮೊದಲ್ಗೊಂಡು ಕಂದ-ವೃತ್ತಗಳತ್ತ, ಷಟ್ಪದಿ-ಸಾಂಗತ್ಯಗಳತ್ತ ಲೇಖಕರ ಮನಸ್ಸು ತಿರುಗುತ್ತಿಲ್ಲ. ಡಿ.ವಿ.ಜಿ. ಅವರಂಥ ಒಬ್ಬಿಬ್ಬರು ಪ್ರಸಿದ್ಧಲೇಖಕರು ಇದಕ್ಕೆ ಅಪವಾದವಾಗಿರಬಹುದು. ಇನ್ನುಳಿದ ಹಲಕೆಲವರು ಪಂಡಿತರು ಎಲ್ಲಿಯೋ ಅಜ್ಞಾತಕೋಣಗಳಲ್ಲಿದ್ದಾರೆ. ಹೀಗಿರುವಾಗ ಅಭಿಜಾತಬಂಧಗಳಲ್ಲಿಯೂ ಕಾವ್ಯರಚನೆ ಸಾಧ್ಯ ಎಂಬುದನ್ನು ಎಲ್ಲರ ಎದುರೇ ಆಶುವಾಗಿ ಲೇಖನಸಾಮಗ್ರಿಯ ನೆರವಿಲ್ಲದೆ ಹಲವು ವಿಕ್ಷೇಪಗಳ ನಡುವೆಯೂ ತೋರಿಸಬಲ್ಲ ಅವಧಾನವಲ್ಲದೆ ಮತ್ತಾವುದು ತಾನೆ ಈ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮವನ್ನು ಬೀರಬಹುದು? ಆದುದರಿಂದ ಅಭಿಜಾತಕಾವ್ಯಮಾರ್ಗದ ಪುನರುತ್ಥಾನಕ್ಕೆ ಅವಧಾನವಲ್ಲದೆ ಪರಿಣಾಮಕಾರಿಯಾದ ಪ್ರಕಲ್ಪ ಬೇರೊಂದಿಲ್ಲ. ತೆಲುಗಿನಲ್ಲಿ ಈಗಲೂ ಅಭಿಜಾತಶೈಲಿಯ ಕಾವ್ಯಗಳ ರಚನೆ ಅವ್ಯಾಹತವಾಗಿ ಮುಂದುವರಿದಿರುವುದಕ್ಕೆ ಪ್ರಧಾನಕಾರಣ ಅವಧಾನವೇ. ಇದು ಸಾಮಾನ್ಯರಿಗೂ ಛಂದಸ್ಸು-ವ್ಯಾಕರಣ-ಅಲಂಕಾರಗಳ ಪರಿಚಯವನ್ನು ಆತ್ಮೀಯವಾಗಿ ಮಾಡಿಕೊಡುತ್ತದೆ. ಇದಕ್ಕೆ ಪರ್ಯಾಯವಿಲ್ಲ. ಹೀಗಾಗಿಯೇ “ಸನಾತನ-ಧರ್ಮ-ರಕ್ಷಣ-ಸಂಸ್ಥೆ” ಅವಧಾನಕಲೆಯನ್ನು ಉತ್ತೇಜಿಸುವುದು ಧರ್ಮರಕ್ಷಣೆಯೆಂದೇ ಭಾವಿಸಿದೆ.
ಅವರ ಈ ಅಭಿಪ್ರಾಯವನ್ನು ಕೇಳಿ ಪದ್ಮನಾಭನ್, ಪ್ರಭಾಕರ್ ಮೊದಲಾದವರು ಹನಿಗಣ್ಣಾಗಿದ್ದರು.
* * *
ಲಂಕಾ ಕೃಷ್ಣಮೂರ್ತಿಗಳು ನಿಷೇಧಾಕ್ಷರ, ಚಿತ್ರಕವಿತೆ ಮುಂತಾದ ಅಂಶಗಳಲ್ಲಿ ಅಲ್ಲದೆ ಸಮಸ್ಯಾಪೂರಣ ಮತ್ತು ದತ್ತಪದಿಗಳಲ್ಲಿಯೂ ಯಥೇಚ್ಛವಾದ ವೈವಿಧ್ಯ, ವೈಚಿತ್ರ್ಯ, ವೈಕಟ್ಯಗಳಿರುವ ಸವಾಲುಗಳನ್ನು ನನಗೆ ಒಡ್ಡುತ್ತಿದ್ದರು. ಇವುಗಳಲ್ಲಿ ಹಲವನ್ನು ಆಸಕ್ತರು “ಕನ್ನಡದಲ್ಲಿ ಅವಧಾನಕಲೆ” ಮತ್ತು “ಶತಾವಧಾನಿ-ರಚನಾ-ಸಂಚಯನಮ್” ಗ್ರಂಥಗಳ ಮೂಲಕ ಅರಿಯಬಹುದು. ದುಷ್ಕರವಾದ ಪ್ರಾಸಗಳುಳ್ಳ, ಬಿಕ್ಕಟ್ಟಾದ ಕೀಲಕಪದವುಳ್ಳ ಶಬ್ದಚ್ಛಲಸಮಸ್ಯೆಗಳನ್ನಲ್ಲದೆ ಉಭಯಚ್ಛಲಪ್ರಕಾರದ ಎಷ್ಟೋ ಸಮಸ್ಯೆಗಳನ್ನು ಅವರು ಸಂಸ್ಕೃತ-ಕನ್ನಡ-ತೆಲುಗುಗಳಲ್ಲಿ ನೀಡಿದ್ದುಂಟು. ಇದೇ ರೀತಿ ವಿಷಮಪದಗಳುಳ್ಳ ದತ್ತಪದಿಗಳನ್ನೂ ಒಡಿದ್ದರು. ಇಲ್ಲಿ ಕೆಲವು ಮಾದರಿಗಳನ್ನು ನಾಮಮಾತ್ರವಾಗಿ ಉಲ್ಲೇಖಿಸಬಹುದು.
ಸಮಸ್ಯೆಗಳು:
ಪ್ರಾಙ್ನಗದಗ್ರದೊಳ್ ತರಣಿಯಸ್ತಮಯಂ ಸಮಯಂ ಮನೋಹರಂ |
ಕವಿಕರಕಸಕಮಕದೇಕಕಕಕಕಟಾ |
ಕರಿಕರಿಸಂಗ್ರಾಮದಲ್ಲಿ ಹರಿಹರಿಯಾದಂ |
ಹನುಮತ್ಪುತ್ರನು ಭೀಷ್ಮಪುತ್ರಿಯ ಕರಂ ಕೈಕೊಂಡನುತ್ಸಾಹದಿಂ |
ಶವಲೀಲಾಕೃತಿಯಂತು ರಮ್ಯಮಲ್ತೇ |
ಕಂಗಳ್ ನೂರ್ ಚರಣಂಗಳೇಳ್ ಕರತಲಂಗಳ್ ನೂರ ಮೂವತ್ತು ಕೇಳ್ |
ಯವನರ ಧರ್ಮಮಂ ಧರೆಗೆ ಬೋಧಿಸಿದರ್ ಸುಖತೀರ್ಥರೊಲ್ಮೆಯಿಂ |
ಏಕಾಹ್ನ್ಯೇವ ಹಿ ಪಶ್ಯತಃ ಪ್ರತಿಕಲಂ ಶುಕ್ಲೇಂದುಬಿಂಬಸ್ಯ ತೌ |
ವಿಶೇಷಕಮಪಾಕುರು ಪ್ರಕಟಮಾರ್ಗಮದ್ಯಂ ದ್ರುತಮ್ |
ನಮಸ್ಕರೋ ನಮಸ್ಕರೋತ್ಯಹಸ್ಕರೋ ಹಿ ತಸ್ಕರಃ |
ಕೇಲಿಮಮೀ ಬಾದರರಮ್ಯಗಾಯನಮ್ |
ರಾವೇ ರಾವೇ ಕಮಲವದನಾ ರಾವದೇಲಾ ಲತಾಂಗೀ |
ಕಾಸೂ ಕೇಸುಕು ನೀವಿಕೇಲಯೆನಿನನ್ ಕಂಪಿಂಚೆವಾಡಪ್ಪುಡೇ |
ದತ್ತಪದಿಗಳು:
ಪಟಾಕಿ, ಮತಾಪು, ಗರ್ನಾಲು, ಬರ್ನಾಲು – ಶ್ರೀಕೃಷ್ಣಸ್ತುತಿ,
ಬನ್, ಟೋಪನ್, ಚವರಿ, ವಿಗ್ - ದ್ರೌಪದಿಯ ಮುಡಿಯನ್ನು ದುಃಶಾಸನ ಎಳೆದ ಸಂದರ್ಭ,
ಪಾರ್ಕರ್, ಹೀರೋ, ಸ್ವಾನ್, ಜಾಟರ್ - ಮಹಾಭಾರತದ ಕೂಟಶ್ಲೋಕಗಳು,
ಚಿಕನ್, ಮಟನ್, ಪೋರ್ಕ್, ಬೀಫ್ - ಬ್ರಾಹ್ಮಣಭೋಜನ,
ಮುಲ್ಲಾ, ಪಾದ್ರಿ, ಖಾಜಿ, ಪೋಪ್ - ರಾಮನನ್ನು ಮೆಚ್ಚಿದ ವಿಶ್ವಾಮಿತ್ರನ ವರ್ಣನೆ,
ಪೂತನಾ, ಪ್ರಲಂಬ, ಕಂಸ, ಕೇಶಿ - ರಾಮನ ವಿಕ್ರಮ,
ನನಮಯಯ, ಯುತೇಯಂ, ಮಾಲಿನೀ, ಭೋಗಿಲೋಕೈಃ - ಕಲ್ಪಿತವೃತ್ತಾಂತ.
ಇವುಗಳ ಪರಿಹಾರಪದ್ಯಗಳನ್ನೆಲ್ಲ ಉಲ್ಲೇಖಿಸಲು ಇದು ತಕ್ಕ ಸ್ಥಳವಲ್ಲ. ಇವುಗಳನ್ನು ನಾಮಮಾತ್ರವಾಗಿಯಾದರೂ ಇಲ್ಲಿ ಪ್ರಸ್ತಾವಿಸಿರುವ ಉದ್ದೇಶ ಲಂಕಾ ಕೃಷ್ಣಮೂರ್ತಿಗಳ ಮನಸ್ಸು ಅದೆಷ್ಟು ಅವಧಾನಕಲಾಮಗ್ನವಾಗಿತ್ತೆಂದೂ ಆ ಕಲೆಯನ್ನು ನಮ್ಮ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಗೊಳಿಸಲು ಅದೆಷ್ಟು ಬಗೆಯಲ್ಲಿ ಅವರು ಪ್ರಯತ್ನಿಸಿದರೆಂದೂ ಸೂಚಿಸಲಷ್ಟೇ ಆಗಿದೆ.
ಹೊಸ ಪೃಚ್ಛಕರನ್ನು ಅಣಿಗೊಳಿಸುವುದು, ಅವಧಾನೋತ್ಸಾಹಿಗಳನ್ನು ಪ್ರೇರಿಸುವುದು, ಅವಧಾನಿಗಳಾಗಬಲ್ಲವರಿಗೆ ಮಾರ್ಗದರ್ಶನವೀಯುವುದೇ ಮುಂತಾದ ಹತ್ತಾರು ಕೆಲಸಗಳನ್ನು ಅಕ್ಕರೆಯಿಂದ ಅವರು ಮಾಡುತಿದ್ದರು. ಕಬ್ಬಿನಾಲೆ ವಸಂತ ಭಾರದ್ವಾಜರು ಹಾಸನದಲ್ಲಿ ತಮ್ಮ ಮೊದಲ ಅವಧಾನವನ್ನು ಮಾಡಿದಾಗ ನನ್ನೊಡನೆ ಅಲ್ಲಿಗೆ ಬಂದು ನಿಷೇಧಾಕ್ಷರಪೃಚ್ಛಕರಾಗಿ ಹರಸಿದ್ದರು. ಅವೆಷ್ಟೋ ತೆಲುಗು ಅವಧಾನಿಗಳಿಗೆ ಹಲವು ಬಗೆಯ ನೆರವನ್ನು ಕೊಡುತ್ತಿದ್ದುದುಂಟು. ಇವರು ನಿಷೇಧಾಕ್ಷರಕ್ಕೆ ಕೂತರೆ ಸುಬ್ಬನ್ನ ಶತಾವಧಾನಿಯಂಥ ವ್ಯುತ್ಪನ್ನರೂ ಅಪ್ರಮತ್ತರಾಗುತ್ತಿದ್ದರು. ಸುಬ್ಬನ್ನನವರು ಏಕಾಕ್ಷರಕೋಶಗಳನ್ನು ಬಳಸಿ ದುರ್ಬೋಧವಾದ ರೀತಿಯಲ್ಲಿ ನಿಷೇಧಾಕ್ಷರವನ್ನು ಲೀಲಾಜಾಲವಾಗಿ ದಾಟಿಕೊಳ್ಳುತ್ತಿದ್ದವರು. ಅಂಥವರು ಕೂಡ ಕೃಷ್ಣಮೂರ್ತಿಗಳೆಂದರೆ ಗೌರವದಿಂದ ಕವನಿಸತೊಡಗುತ್ತಿದ್ದರು. ಇವರಂತೂ ಅವಧಾನಿ ಅದೆಷ್ಟು ಚಿಕ್ಕ ವಯಸ್ಸಿನವನಾದರೂ ಅದೆಷ್ಟು ಅನನುಭವಿಯಾದರೂ ಅನಾದರವಿಲ್ಲದೆ, ಮುಖಭಂಗ ಮಾಡದೆ, ಅವಧಾನದ ಘನತೆಗೆ ಧಕ್ಕೆ ತಾರದೆ ದಾಟಿಸುತ್ತಿದ್ದರು. ಆದರೆ ಕೆಲವೊಮ್ಮೆ ಅಹಂಬ್ರಹ್ಮೀಭವಿಸಿದ ಒಬ್ಬಿಬ್ಬರು ಅವಧಾನಿಗಳು ಠೇಂಕಾರ ತೋರಿದ್ದುಂಟು. ಉದಾಹರಣೆಗೆ ಮಾಡುಗುಲ ನಾಗಫಣಿಶರ್ಮರ ಪ್ರಸಂಗವೊಂದು ನೆನಪಾಗುತ್ತದೆ. ಲಂಕಾ ಕೃಷ್ಣಮೂರ್ತಿಗಳು ಅವರಿಗೆ ಚತುರಶ್ಚತುರಶ್ಚತುರೋऽಚತುರಃ ಎಂಬ ಸಮಸ್ಯೆಯನ್ನೊಡ್ಡಿ ಹದಹಾಕಿದ್ದರು. ಈ ಸಂದರ್ಭದ ವಿವರಗಳೆಲ್ಲ “ಕವಿತೆಗೊಂದು ಕಥೆ” ಪುಸ್ತಕದಲ್ಲಿ ದಾಖಲಾಗಿವೆ. ಇದೊಂದು ಪ್ರಸಂಗವನ್ನುಳಿದು ಕೃಷ್ಣಮೂರ್ತಿಗಳು ಎಲ್ಲಿಯೂ ಅವಧಾನಿಗಳ ನಿಗ್ರಹಕ್ಕೆ ಮುಂದಾದುದಿಲ್ಲ. ಇದಾದರೂ ಅವಧಾನಿ ಕೋರಿ ತಂದುಕೊಂಡ ಅನರ್ಥವಲ್ಲದೆ ಇವರ ಆಗ್ರಹವಲ್ಲ.
ಕೃಷ್ಣಮೂರ್ತಿಗಳು ಅವಧಾನದಲ್ಲಿ ರಚನಾತ್ಮಕವಾದ ನಾವೀನ್ಯವನ್ನು ತರಲು ಸದಾ ಚಿಂತಿಸುತ್ತಿದ್ದರು. ಹೀಗಾಗಿ ಘಂಟಾಗಣನಕ್ಕಿಂತ ಮತ್ತಷ್ಟು ಚಮತ್ಕಾರಿಯಾದ ಸಂಖ್ಯಾಬಂಧವೆಂಬ ಗಣಿತಾಂಶವನ್ನು ಅವರು ರೂಪಿಸಿದ್ದಲ್ಲದೆ ನನ್ನಿಂದ ಮೊದಲ ಬಾರಿಗೆ ರಂಗಕ್ಕೂ ಬರುವಂತೆ ಮಾಡಿದರು. ಇದನ್ನು ನಿರ್ವಹಿಸಲು ಅನುಕೂಲಿಸುವಂತೆ ಕಟಪಯಾದಿ-ಸೂತ್ರಗಳನ್ನು ಬಳಸಿದ ಶ್ಲೋಕವೊಂದನ್ನೂ ಅವರು ರೂಪಿಸಿದ್ದರು. ಇದೇ ರೀತಿ ಚಿತ್ರಲೇಖನ, ಶ್ಲೋಕಾಭಿನಯ, ಭಾಷಾಂತರ ಮುಂತಾದ ನನ್ನ ಕೆಲವು ಕಲ್ಪನೆಗಳಿಗೂ ಒತ್ತಾಸೆಯಾಗಿದ್ದರು. ಹೀಗೆ ಅವಧಾನಕ್ಷೇತ್ರದಲ್ಲಿಯ ಅವರ ಯೋಗದಾನವನ್ನು ನೆನೆಯುತ್ತ ಹೋದರೆ ಮತ್ತೂ ಹತ್ತಾರು ಪ್ರಕರಣಗಳನ್ನು ಪ್ರಸ್ತಾವಿಸಬೇಕಾದೀತು. ಆದರೆ ದಿಗ್ದರ್ಶಕವಾಗಿ ಇಷ್ಟು ಸಾಕೆಂದು ಭಾವಿಸಿದ್ದೇನೆ.
* * *
ಲಂಕಾ ಕೃಷ್ಣಮೂರ್ತಿಯವರ ಅವರ ಪೂರ್ವಜರು ಗೋದಾವರೀತೀರದವರಾದರೂ ಅನಂತರ ಬಂದು ನೆಲಸಿದ್ದು ರಾಯಲಸೀಮೆಯ ಪೆನುಗೊಂಡದಲ್ಲಿ. ಅವರ ಬಾಲ್ಯ-ತಾರುಣ್ಯಗಳು ಕಳೆದದ್ದು ಪೆನುಗೊಂಡ ಮತ್ತು ಲೇಪಾಕ್ಷಿಗಳಲ್ಲಿ. ಅವರ ತಂದೆ ಲಂಕಾ ವೆಂಕಟರಾಮಪ್ಪನವರು ಸದಾಚಾರಸಂಪನ್ನರು; ವೇದ-ಶಾಸ್ತ್ರಗಳಲ್ಲಿ ಪ್ರವೇಶವಿದ್ದವರು. ಅನುದಿನವೂ ಅವರು ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದುದಲ್ಲದೆ ಅಮರಾದಿಕೋಶಗಳನ್ನೂ ಭರ್ತೃಹರಿಯೇ ಮುಂತಾದ ಕವಿಗಳ ಸುಭಾಷಿತಗಳನ್ನೂ ಮಕ್ಕಳಿಗೆ ಹೇಳಿಕೊಟ್ಟು ಕಂಠಸ್ಥ ಮಾಡಿಸಿದ್ದರು. ತಾಯಿ ದುರ್ಗಾಲಕ್ಷಮ್ಮನವರು ಸಂಸ್ಕಾರಸಂಪನ್ನರು. ಅವರ ಮೂಲಕವಾಗಿ ಕೃಷ್ಣಮೂರ್ತಿಗಳಿಗೆ ಕನ್ನಡದ ಪರಿಜ್ಞಾನ ಚಿಕ್ಕ ವಯಸ್ಸಿನಲ್ಲಿಯೇ ಮೈಗೂಡಿತು. ಅವರು ಹುಟ್ಟಿದ್ದು ೯.೯.೧೯೨೫ ರಂದು. ಇವರು ವಸಿಷ್ಠಗೋತ್ರದ, ವೆಲನಾಡು ಪಂಗಡದ ಸ್ಮಾರ್ತಬ್ರಾಹ್ಮಣರು.
ಕೃಷ್ಣಮೂರ್ತಿಗಳಿಗೆ ಯಾವುದೇ ರೀತಿಯಿಂದ ವರ್ಣಾಭಿಮಾನವಿಲ್ಲದಿದ್ದರೂ ಹಲಕೆಲವು ಸಂದರ್ಭಗಳಲ್ಲಿ ಅವರ ವೆಲನಾಡು ಪಂಗಡದ ಮೂಲ ಹೆಚ್ಚಿನ ಮನ್ನಣೆಯನ್ನು ದೊರಕಿಸಿತ್ತೆಂಬುದು ಸ್ವಾರಸ್ಯಕರವಾದ ವೈನೋದಿಕ. ಅವರ ವಿದ್ಯಾರ್ಥಿದಶೆಯಲ್ಲೊಮ್ಮೆ ತೆಲುಗಿನ ಮಹಾಕವಿ ವಿಶ್ವನಾಥ ಸತ್ಯನಾರಾಯಣ ಅವರ ಭಾಷಣ ವಿದ್ಯಾಲಯದಲ್ಲಿ ಏರ್ಪಾಟಾಗಿತ್ತು. ಆಗ ಅವರು ಮಾತಿನ ಓಘದಲ್ಲಿ ಶಾಕುಂತಲದ ಮೊದಲನೆಯ ಅಂಕದ ಸನ್ನಿವೇಶವೊಂದನ್ನು ವಿವರಿಸತೊಡಗಿದ್ದರು. ಅಲ್ಲೊಂದೆಡೆ ದುಷ್ಯಂತನ ರಥಗಮನದ ವರ್ಣನೆ ಬರುತ್ತದೆ. ವಿಶ್ವನಾಥ ಅವರು ತತ್ಕ್ಷಣಕ್ಕೆ ಪದ್ಯವನ್ನು ಸ್ಮರಿಸಿಕೊಳ್ಳಲಾಗದೆ “ಶ್ರೋತೃಗಳಲ್ಲಿ ಯಾರಾದರೂ ಅದನ್ನು ಬಲ್ಲವರುಂಟೇ?” ಎಂದು ಕೇಳಿದರಂತೆ. ಆಗ ವಿದ್ಯಾರ್ಥಿ ಕೃಷ್ಣಮೂರ್ತಿ ಎದ್ದುನಿಂತು ಯದಾಲೋಕೇ ಸೂಕ್ಷ್ಮಂ ಭಜತಿ ಸಹಸಾ ತದ್ವಿಪುಲತಾಮ್ ಇತ್ಯಾದಿಯಾಗಿ ಶ್ರಾವ್ಯಧ್ವನಿಯಲ್ಲಿ ಪಠಿಸಿದರಂತೆ. ಅದನ್ನು ಮೆಚ್ಚಿಕೊಂಡ ವಿಶ್ವನಾಥ ಸತ್ಯನಾರಾಯಣ ಇವರ ಕುಲ-ಗೋತ್ರಗಳನ್ನು ವಿಚಾರಿಸಿಕೊಂಡು “ನುವ್ವು ಮಾ ವೆಲನಾಡುಶಾಖವಾಡೇ ಕಾಬಟ್ಟಿ ಸರಿಗ್ಗಾ ಚಪ್ಪಗಲಿಗ್ಯಾವು” (ನೀನು ನಮ್ಮ ವೆಲನಾಡು ಪಂಗಡದವನೇ ಆದ ಕಾರಣ ಸರಿಯಾಗಿ ಹೇಳಿದ್ದೀಯ) ಎಂದು ಲಘುಹಾಸ್ಯದೊಡನೆ ಮೆಚ್ಚಿಕೊಂಡರಂತೆ!
ಅದೊಮ್ಮೆ ನಾನು ಶೃಂಗೇರಿಯ ಪೀಠಾಧಿಪತಿಗಳಾದ ಶ್ರೀಭಾರತೀತೀರ್ಥರ ಸನ್ನಿಧಿಯಲ್ಲಿ ಅವಧಾನವನ್ನು ಮಾಡುವುದಾಯಿತು. ಅವರು ಹಿಂದೂ ಪತ್ರಿಕೆಯಲ್ಲಿ ಬಂದಿದ್ದ ನನ್ನ ಒಂದು ಅವಧಾನದ ವರದಿಯನ್ನು ಯಾರಿಂದಲೋ ಕೇಳಿ ಕನ್ನಡದಲ್ಲಿ ಈ ಕಲೆಯಿರುವುದು ಆಶ್ಚರ್ಯವೆಂದು ಕುತೂಹಲದಿಂದ ಮನೆಗೇ ಹೇಳಿಕಳಿಸಿ ಬೆಂಗಳೂರಿನ ಶಂಕರಮಠದಲ್ಲಿ ಅವಧಾನ ಮಾಡಿಸಿದ್ದರು. ಅವಧಾನಕ್ಕೆ ಮುನ್ನ ಎಲ್ಲರನ್ನೂ ವಿಚಾರಿಸಿಕೊಳ್ಳುವಾಗ ಲಂಕಾ ಕೃಷ್ಣಮೂರ್ತಿಗಳು ವೆಲನಾಡಿನವರೆಂದು ತಿಳಿದು ಸಂತೋಷಪಟ್ಟಿದ್ದರು. ಬಳಿಕ ಅವಧಾನದ ನಡುವೆ ನಾನು ಅಪ್ಪಯ್ಯದೀಕ್ಷಿತರ ಚಾಟುಶ್ಲೋಕ—
ಅ || ಆಂಧ್ರತ್ವಮಾಂಧ್ರಭಾಷಾ ಚ ಪ್ರಾಭಾಕರಪರಿಶ್ರಮಃ |
ತತ್ರಾಪಿ ಯಾಜುಷೀ ಶಾಖಾ ನಾಲ್ಪಸ್ಯ ತಪಸಃ ಫಲಮ್ ||
ಎಂಬುದನ್ನು ಉಲ್ಲೇಖಿಸಿದೆ. ಆಗ ಸ್ವಾಮಿಗಳು “ಇಲ್ಲ ಇಲ್ಲ. ಇದಕ್ಕೆ ಬೇರೊಂದು ಪಾಠಾಂತರವಿದೆ” ಎಂದು ವೈನೋದಿಕಗಾಂಭೀರ್ಯದಿಂದ ಹೇಳಿದರು. ಅದೇನೆಂದು ಕೇಳಿದಾಗ “ಪ್ರಾಭಾಕರಪರಿಶ್ರಮಃ” ಎಂಬ ಪಾದಕ್ಕೆ ಬದಲಾಗಿ “ವೆಲನಾಡುಕುಲೇ ಜನಿಃ” ಎಂದರು. ಆಗ ನಾನು “ಸರ್ವಸಂಗಪರಿತ್ಯಾಗಿಗಳಿಗೂ ಪೂರ್ವಾಶ್ರಮದ ಕುಲಮೋಹವೇ?” ಎಂದು ವಿನೋದವಾಗಿ ಕೇಳಿದೆ. ಅವರು “ಲಂಕಾ ಕೃಷ್ಣಮೂರ್ತಿಗಳಂಥವರು ನಮ್ಮ ಕುಲದವರೇ ಅಲ್ಲವೇ, ಇಂಥವರೆಲ್ಲ ಮತ್ತೆಲ್ಲಿ ಹುಟ್ಟಿದ್ದಾರೆ?” ಎಂದು ಚಮತ್ಕರಿಸಿದರು. ಇದನ್ನು ಕೇಳಿದ ಕೃಷ್ಣಮೂರ್ತಿಗಳಿಗೆ ಮುಜುಗರ ಮಾತ್ರ ತಪ್ಪಲಿಲ್ಲ.
ಕೃಷ್ಣಮೂರ್ತಿಗಳಿಗೆ ತೆಲುಗು-ಸಂಸ್ಕೃತಗಳಲ್ಲಿ ಗಟ್ಟಿಯಾದ ಬುನಾದಿಯನ್ನು ಹಾಕಿಕೊಟ್ಟವರು ಬುಕ್ಕಪಟ್ಟಣಂ ಅನ್ನಯ್ಯಾಚಾರ್ಯರು. ಇವರು ರಾಳ್ಲಪಲ್ಲಿ ಅನಂತಕೃಷ್ಣಶರ್ಮರಿಗೆ ತುಂಬ ಆಪ್ತರಾದವರು. ಇವರಲ್ಲದೆ ಪುಟ್ಟಪರ್ತಿ ಶ್ರೀನಿವಾಸಾಚಾರ್ಯರು ಕೂಡ ಕೃಷ್ಣಮೂರ್ತಿಗಳಿಗೆ ಸಾಹಿತ್ಯಪಾಠ ಮಾಡಿದ್ದರು. ತೆಲುಗಿನ ಪ್ರಸಿದ್ಧಕವಿಗಳೂ ಬಹುಭಾಷಾವಿದರೂ ಆದ ಪುಟ್ಟಪರ್ತಿ ನಾರಾಯಣಾಚಾರ್ಯರ ಬಳಕೆ ಕೃಷ್ಣಮೂರ್ತಿಗಳಿಗೆ ಚೆನ್ನಾಗಿತ್ತು. ಏಕೆಂದರೆ ಅವರೂ ಪೆನುಗೊಂಡೆಯವರೇ. ಶಾಲೆ-ಕಾಲೇಜುಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಕಲಿತ್ತದ್ದಲ್ಲದೆ ಹಿಂದಿಯಲ್ಲಿ ಪ್ರವೀಣ, ವಿಶಾರದ ಮುಂತಾದ ಪರೀಕ್ಷೆಗಳನ್ನು ಸ್ವೀಕರಿಸಿ ಉತ್ತೀರ್ಣರಾಗಿದ್ದರು. ಹೀಗೆ ಅವರಿಗೆ ಐದು ಭಾಷೆಗಳಲ್ಲಿ ಗಟ್ಟಿಯಾದ ಪಾಂಡಿತ್ಯವಿದ್ದುದಲ್ಲದೆ ತಮಿಳು-ಮಲಯಾಳಗಳ ಪರಿಚಯವೂ ಇದ್ದಿತು.