ಕಾಳಿದಾಸ ಅವರಿಗೆ ಪರಮಾರಾಧ್ಯನಾದ ಕವಿ. ಆತನ ರಘುವಂಶವನ್ನು ಸಾಂಗೋಪಾಂಗವಾಗಿ ಅವರು ಅನೇಕವರ್ಷಗಳ ಕಾಲ ಆಸಕ್ತರಿಗೆ ಪಾಠ ಹೇಳುತ್ತಿದ್ದರು. ಅವರು ಅಭಿಜ್ಞಾನಶಾಕುಂತಲವನ್ನು ಸಹಜವಾಗಿಯೇ ತುಂಬ ಮೆಚ್ಚಿಕೊಂಡಿದ್ದರು. ಇದನ್ನು ಕುರಿತು ಉಕ್ತಲೇಖನಕ್ರಮದಲ್ಲಿ ಒಂದು ಪ್ರಬಂಧವನ್ನು ತೆಲುಗಿನಲ್ಲಿ ಬರೆಸಿದ್ದರು. “ಅದ್ಭುತಶಿಲ್ಪಂಲೋ ಆರ್ಷಸಂದೇಶಂ” ಎಂಬ ಈ ಬರೆಹವನ್ನು ನಾನು ಹಸ್ತಪ್ರತಿಯಲ್ಲಿಯೇ ಓದಿದ್ದೆ. ಇದು ಕಾಳಿದಾಸನ ರೂಪಕದ ಹತ್ತಾರು ಸ್ವಾರಸ್ಯಗಳನ್ನು ಸೊಗಸಾಗಿ ವಿವರಿಸಿ ಅಲ್ಲಿಯ ಪುರುಷಾರ್ಥತತ್ತ್ವವನ್ನು ಹೃದ್ಯವಾಗಿ ನಿರೂಪಿಸಿತ್ತು. ಇದಕ್ಕೆ ಮುದ್ರಣಯೋಗ ಬರಲಿಲ್ಲ. ಈಗ ಎಲ್ಲಿದೆಯೋ ತಿಳಿಯದು. ಇದರ ನಷ್ಟ ಮಾತ್ರ ದೊಡ್ಡದೇ. ಅದರಲ್ಲೊಂದೆಡೆ ಅವರು ಶಾಕುಂತಲದ ಆರನೆಯ ಅಂಕದಲ್ಲಿ ಬರುವ ಪದ್ಯವೊಂದನ್ನು ತುಂಬ ಅಂತರ್ದೃಷ್ಟಿಯಿಂದ ವಿವರಿಸಿದ್ದರು.
ಶಕುಂತಲೆಯನ್ನು ನಿರಾಕರಿಸಿದ ಬಳಿಕ ಉಂಗುರದ ಮೂಲಕ ಮತ್ತೆ ಎಲ್ಲವನ್ನೂ ನೆನಪಿಗೆ ತಂದುಕೊಂಡ ದುಷ್ಯಂತ ತನ್ನ ಅವಿವೇಕಕ್ಕಾಗಿ ದುಃಖಿಸುತ್ತಿರುತ್ತಾನೆ. ಆಗ ಧನಮಿತ್ರನೆಂಬ ಸಾರ್ಥವಾಹನ ಸಾವಿನ ಸುದ್ದಿಯನ್ನು ದೊರೆಗೆ ಮುಟ್ಟಿಸಿದ ಮಂತ್ರಿಯು ಮಕ್ಕಳಿಲ್ಲದ ಆ ವರ್ತಕನ ಸಂಪತ್ತಿಯನ್ನು ಅರಮನೆಯ ಬೊಕ್ಕಸಕ್ಕೆ ಸೇರಿಸಿಕೊಳ್ಳಬಹುದು ಎಂದು ಸೂಚನೆ ಕೊಡುತ್ತಾನೆ. ಇದನ್ನು ಒಪ್ಪದ ದುಷ್ಯಂತ ಧನಮಿತ್ರನ ಪತ್ನಿಯರ ಪೈಕಿ ಒಬ್ಬಾಕೆ ಗರ್ಭಿಣಿಯೆಂದು ತಿಳಿದು ಅವಳಿಗೂ ಅವಳ ಸಂತಾನಕ್ಕೂ ಆ ಸೊತ್ತು ಸಲ್ಲಬೇಕೆಂದು ನಿರ್ಣಯಿಸುತ್ತಾನೆ. ಆಗ ಅವನು ಈ ಒಂದು ಪ್ರಕರಣದ ಹಿನ್ನೆಲೆಯಲ್ಲಿ ತನ್ನ ಅಶೇಷಪ್ರಜಾನೀಕಕ್ಕೆ ತನ್ನದಾದ ಭರವಸೆಯನ್ನು ಕೊಡುತ್ತಾನೆ:
ಅ || ಯೇನ ಯೇನ ವಿಯುಜ್ಯಂತೇ ಪ್ರಜಾಃ ಸ್ನಿಗ್ಧೇನ ಬಂಧುನಾ |
ಸ ಸ ಪಾಪಾದೃತೇ ತಾಸಾಂ ದುಷ್ಯಂತ ಇತಿ ಘುಷ್ಯತಾಮ್ ||
(ಕಂ || ಒಲವಿನ ಬಂಧುಗಳಾರಾ-
ರಳಿವರೊ ಜನರಿಂಗೆ ನೆರೆಯದಂತಾ ವಿರಹಂ |
ನಿಲುವಂ ಪಾಪಮನುಳಿದಾ
ನೆಲೆಯೊಳೆ ದುಷ್ಯಂತನೆಂದು ಘೋಷಣೆಗೆಯ್ಯಿಂ ||)
(ಗಣಪತಿ ಮೊಳೆಯಾರರ ಅನುವಾದ)
ಈ ಪ್ರಕರಣವಾದ ಬಳಿಕ ದೇವಕಾರ್ಯಕ್ಕಾಗಿ ಇಂದ್ರಸಾರಥಿ ಬರುತ್ತಾನೆ, ದುಷ್ಯಂತ ದೇವಾಸುರಸಂಗ್ರಾಮಕ್ಕೆ ತೆರಳುತ್ತಾನೆ, ಅನಂತರ ಮರಳಿಬರುವ ಹಾದಿಯಲ್ಲಿ ಶಕುಂತಲೆಯನ್ನು ಕಾಣುತ್ತಾನೆ, ಕಥೆ ಸುಖಾಂತವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿಗಳ ಪ್ರತಿಪಾದನೆ ಹೀಗಿತ್ತು:
ಸ್ವಾರ್ಥಮೂಲದ ಪ್ರೀತಿ ಸರ್ವದಾ ತೀಕ್ಷ್ಣವಾದುದು; ನಿಃಸ್ವಾರ್ಥಮೂಲದ ಪ್ರೀತಿ ಅತ್ಯಂತ ಕೋಮಲ. ಈ ಎರಡೂ ಬಗೆಯ ಪ್ರೀತಿಗಳ ಬೀಜ ಒಂದೇ ಆಗಿದ್ದರೂ ಆವುಗಳ ಅಭಿವ್ಯಕ್ತಿ ಮತ್ತು ಪರಿಣಾಮಗಳು ಬೇರೆಯೇ. ಹೇಗೆ ಗುಲಾಬಿಯ ಒಂದೇ ಬೇರು ಮುಳ್ಳಿಗೂ ಹೂವಿಗೂ ತನ್ನ ಸಾರವನ್ನು ಎರೆದಾಗ ಅವುಗಳಲ್ಲಿ ಬೇರೆಯೇ ಆದ ಪರಿಣಾಮಗಳು ಉಂಟಾಗುವುವೋ ಹಾಗೆಯೇ ಇದು ಕೂಡ. ಏಕಮುಖವಾದ ಮುಳ್ಳು ತಿವಿಯುವುದರಲ್ಲಿಯೇ ತನ್ನ ಸಾರ್ಥಕ್ಯ ಕಂಡರೆ ಸರ್ವತೋಮುಖವಾದ ಹೂವು ಮಾರ್ದವ-ಸೌರಭ-ಸೌಂದರ್ಯಗಳನ್ನೇ ಪರಮಾರ್ಥವಾಗಿ ಕಂಡುಕೊಳ್ಳುತ್ತದೆ. ಶಕುಂಲತೆಯಲ್ಲಿ ಮಾತ್ರ ನಿಷ್ಠವಾಗಿದ್ದ ದುಷ್ಯಂತನ ಪ್ರೀತಿಯು ಯಾವಾಗ ಪ್ರಜೆಗಳಲ್ಲೆಲ್ಲ ನಿಃಸ್ವಾರ್ಥವಾಗಿ ಪಸರಿಸಿತೋ ಆಗ ಈ ಸರ್ವಾರ್ಥದಲ್ಲಿ ಸ್ವಾರ್ಥವೂ ಫಲವನ್ನು ಕಂಡಿತು.
ಇದು ನಿಜಕ್ಕೂ ಹಿರಿದಾದ ಕಾಣ್ಕೆ, ಕಾಳಿದಾಸನೂ ಮೆಚ್ಚಿ ತಲೆದೂಗುವಂಥ ಕಾಣ್ಕೆ.
* * *
ಸನಾತನ-ಧರ್ಮ-ರಕ್ಷಣ-ಸಂಸ್ಥೆಯ ಮುಖವಾಣಿಯಾದ “ಧರ್ಮಪ್ರಭ” ಎಂಬ ಮಾಸಿಕಕ್ಕೆ ಸಂಪಾದಕೀಯವಾಗಿ ಸಾಂದರ್ಭಿಕವಿಷಯಗಳನ್ನು ಮತ್ತು ಸಾರ್ವಕಾಲಿಕಮೌಲ್ಯಗಳನ್ನು ಆಧರಿಸಿ ಚಿಕ್ಕ ಚಿಕ್ಕ ಲೇಖನಗಳನ್ನು ಅವರು ಬರೆಯುತ್ತಿದ್ದರು. ಗಾಯತ್ರೀತತ್ತ್ವವನ್ನು ಕುರಿತು ಹಲಕೆಲವು ಲೇಖನಗಳನ್ನು ಧಾರಾವಾಹಿಯಾಗಿ ಬರೆದಿದ್ದರು. ಇದರ ಆಂಗ್ಲಾನುವಾದವನ್ನು ಸಿದ್ಧಪಡಿಸುತ್ತಿದ್ದರಾದರೂ ಅದು ಮುಗಿದಂತೆ ತೋರದು. ಇದೇ ರೀತಿ ಭಾಗವತದ ದಶಮಸ್ಕಂಧದಲ್ಲಿ ಬರುವ ನಾಲ್ಕೈದು ಶ್ಲೋಕಗಳನ್ನು ಗುರುತಿಸಿ ಅದಕ್ಕೆ “ಪ್ರಥಮಗೀತೆ” ಎಂಬ ನಾಮಕರಣ ಮಾಡಿ ಸೊಗಸಾದ ಲೇಖನವನ್ನು ಅವರು ಬರೆದಿದ್ದರು. ಭಾರತ-ಭಾಗವತಗಳಲ್ಲಿ ಪ್ರಸಿದ್ಧವಾದ ಭಗವದ್ಗೀತೆ, ಅನುಗೀತೆ ಮತ್ತು ಉದ್ಧವಗೀತೆಗಳಿಗಿಂತ ಮುನ್ನ ಭಗವಂತನು ಹೇಳಿದ ಮೊದಲ ಗೀತೆಯೇ ಇದೆಂದು ಕೃಷ್ಣಮೂರ್ತಿಗಳ ಕಾಣ್ಕೆ. ಶ್ರೀಕೃಷ್ಣನ ಬಾಲ್ಯದಲ್ಲಿ ಅವನ ಗೋಕುಲದ ಗೆಳೆಯರು ತಮಗೆ ಯಾವುದಾದರೂ ಉಪದೇಶವಾಗಬೇಕೆಂದು ಬೇಡುತ್ತಾರೆ. ಆಗ ಆ ಅಬೋಧಮುಗ್ಧರಾದ ಗೋಪಾಲಬಾಲರಿಗೆ ಸ್ವಾಮಿಯು ಸುತ್ತಲಿನ ಮರಗಳನ್ನೇ ತೋರಿಸಿ ಅವುಗಳಂತೆ ಬಾಳಿದರೆ ಮಾನವರ ಜನ್ಮ ಸಫಲವಾದೀತೆಂದು ಸಾರುತ್ತಾನೆ. ಈ ದಿವ್ಯೋಪದೇಶ ತುಂಬ ಸರಳವೂ ಸಂಕ್ಷಿಪ್ತವೂ ಆಗಿದೆ; ಎಲ್ಲ ಕಾಲಕ್ಕೂ ಬೇಕಿರುವ ಮೌಲ್ಯಗಳನ್ನೊಳಗೊಂಡಿದೆ.
ಈ ಬರೆಹಗಳೆಲ್ಲ ಪ್ರತ್ಯೇಕವಾಗಿ ಅಚ್ಚಾದಂತಿಲ್ಲ. ಇವುಗಳ ಮೌಲ್ಯವಂತೂ ಅಲ್ಪದ್ದಲ್ಲ.
ಧರ್ಮಪ್ರಭ ಎಂದೊಡನೆಯೇ ಅದರ ಸ್ಥಾಪಕಸಂಪಾದಕರಾಗಿದ್ದ ಕೃಷ್ಣಮೂರ್ತಿಗಳ ಆ ನಿಟ್ಟಿನ ಸೇವೆ ನೆನಪಾಗುತ್ತದೆ. ಅವರು ಪತ್ರಿಕೆಯ ಮುಖಪುಟದಲ್ಲಿಯೇ ದಾಮ್ಯತ ದತ್ತ ದಯಧ್ವಮ್ ಎಂಬ ಬೃಹದಾರಣ್ಯಕದ ಮಾತನ್ನು (೫.೨.೩) ಧ್ಯೇಯವಾಕ್ಯವಾಗಿ ಮುದ್ರಿಸಿದ್ದರು. ಸುರರು, ನರರು ಮತ್ತು ಅಸುರರು ಪರಮಾತ್ಮನನ್ನು ಕಂಡು ಪ್ರಾರ್ಥಿಸಿದಾಗ ಮೇಘರೂಪಿಯಾದ ಆ ಪ್ರಜಾಪತಿ ಮೂರು ಬಾರಿ ದ ದ ದ ಎಂದು ಗುಡುಗಿದನಂತೆ. ಅದನ್ನು ಇವರು ಮೂವರೂ ಕ್ರಮವಾಗಿ ಕಾಮನೆಗಳ ದಮನ, ದೀನ-ದಲಿತರಿಗೆ ದಾನ ಮತ್ತು ಅಸಹಾಯಕರಿಗೆ ದಯೆ ಎಂದು ಅರ್ಥೈಸಿಕೊಂಡರಂತೆ. ಈ ಮಹೋಪದೇಶವು ಎಲ್ಲ ಕಾಲಕ್ಕೂ ಸಲ್ಲುವ ಮೂಲಭೂತಮೌಲ್ಯ. ಹೀಗಾಗಿ ಇದು ಕೃಷ್ಣಮೂರ್ತಿಯವರಿಗೆ ಇಷ್ಟವಾದುದರಲ್ಲಿ ಅಚ್ಚರಿಯೇನಿಲ್ಲ.
ಅವರ ಸಂಸ್ಥೆ ಹಾಗೂ ಪತ್ರಿಕೆಗಳು ಪ್ರಜಾಪತಿಯ ಮಹೋಪದೇಶವನ್ನು ಪ್ರಾಮಾಣಿಕವಾಗಿ ಆಚರಿಸಿಕೊಂಡು ಬಂದಿದ್ದವು. ಸನಾತನ-ಧರ್ಮ-ರಕ್ಷಣ-ಸಂಸ್ಥೆಯ ಮೂಲಕ ಅನ್ನದಾನ, ಔಷಧದಾನ, ವಿದ್ಯಾದಾನ ಮತ್ತು ಆನಂದಪ್ರದಾನಗಳು ನಿಯತವಾಗಿ ಸಾಗುತ್ತಿದ್ದವು. ಅನ್ನದಾನಕ್ಕೆ ಪ್ರತ್ಯೇಕವಾದ ದತ್ತಿಯನ್ನೇ ಏರ್ಪಡಿಸಿದ್ದರು. ಪತ್ರಿಕೆಯ ಚಂದಾದಾರರನ್ನು ಹುಡುಕಲು, ಸಂಸ್ಥೆಯ ಸದಸ್ಯತ್ವಕ್ಕಾಗಿ ಜನರನ್ನು ಹುರಿದುಂಬಿಸಲು ಲಂಕಾ ಕೃಷ್ಣಮೂರ್ತಿಗಳು ತಮ್ಮ ಗೆಳೆಯರೊಡನೆ ಸುತ್ತದ ಸ್ಥಳವಿಲ್ಲ. ಅವರ ನಿವೃತ್ತಜೀವನದ ಹೆಚ್ಚಿನ ಸಮಯ ಈ ಬಗೆಯ ಸಾಮಾಜಿಕಕಾರ್ಯಗಳಿಗಾಗಿಯೇ ವೆಚ್ಚವಾಗುತ್ತಿತ್ತು.
ಹಾಗಲ್ಲವಾದರೆ ವಕೀಲಿ ವೃತ್ತಿಯನ್ನು ಮತ್ತೆ ಆರಂಭಿಸಿ ಬೇಕಾದಷ್ಟು ದುಡಿಯಬಹುದಿತ್ತು. ಆದರೆ ಕೃಷ್ಣಮೂರ್ತಿಗಳ ಸತ್ಯನಿಷ್ಠೆ, ನಿಃಸ್ಪೃಹತೆ ಮತ್ತು ಸೇವಾಧರ್ಮಗಳು ಅವರನ್ನು ಅರ್ಥಲೋಕಕ್ಕೆ ಎಳೆಯುವಂತೆಯೇ ಇರಲಿಲ್ಲ. ಏನಿದ್ದರೂ ಪರಮಾರ್ಥಲೋಕವೇ ಅವರ ಸ್ಥಾಯಿ. ಈ ಕಾರಣಕ್ಕಾಗಿ ತಾನೆ ಅವರು ಕಾನೂನಿನ ಕಲಿಕೆಯ ಬಳಿಕ ಅತ್ಯಲ್ಪಕಾಲ ಮಾತ್ರ ವಕೀಲರಾಗಿದ್ದು ಅನಂತರ ಬೆಂಗಳೂರಿನ ಉಚ್ಚನ್ಯಾಯಾಲಯದ ಡೆಪ್ಯುಟಿ ರೆಗಿಸ್ಟ್ರಾರ್ ಆಗಿ ಉದ್ಯೋಗಸ್ಥರಾದದ್ದು? ವಕೀಲಿಯಲ್ಲಿ ಹೆಚ್ಚಿನ ಸಂಪಾದನೆಗೆ ಅವಕಾಶವಿದ್ದರೂ ಅಲ್ಲಿ ಪ್ರಸಂಗವಶಾತ್ ಸುಳ್ಳು ಹೇಳುವ ಅನಿವಾರ್ಯತೆ ಬರುತ್ತದೆ; ಅದನ್ನು ಸರ್ವಥಾ ಒಪ್ಪತಕ್ಕದ್ದಲ್ಲ — ಇದು ಅವರ ನಿಶ್ಚಯ. ಹೀಗೆ ವಕೀಲಿ ಬಿಟ್ಟು ಉದ್ಯೋಗಕ್ಕೆ ಸೇರುವ ಮೊದಲು ತಮ್ಮೆಲ್ಲ ಕಕ್ಷಿದಾರರ ಕೆಲಸಗಳನ್ನು ಸಾಧ್ಯವಾದಷ್ಟು ಪೂರೈಸಿ, ಉಳಿದವನ್ನು ಬೇರೆಯವರಿಗೆ ವಹಿಸಿಕೊಟ್ಟು, ತಮಗೆ ಕಕ್ಷಿದಾರರು ಕೊಟ್ಟ ಹಣವನ್ನು ಅವರಿಗೇ ಹಿಂದಿರುಗಿಸಿ ಎಲ್ಲರ ಅನುಮತಿ ಪಡೆದ ಬಳಿಕವೇ ತಮ್ಮ ಹಾದಿಯಲ್ಲಿ ನಡೆದದ್ದು! ಇದನ್ನು ಕಂಡಾಗ ಶ್ರೌತಯಾಗಗಳನ್ನು ಮಾಡುವವರು ಯಜ್ಞದೀಕ್ಷೆಗೆ ಮುನ್ನ ತಮ್ಮ ಎಲ್ಲ ಬಾಧ್ಯತೆಗಳನ್ನೂ ಸಾಲವೇ ಮುಂತಾದ ಲೌಕಿಕವಾದ ಹೊರೆಗಳನ್ನೂ ತೀರಿಸಿಕೊಂಡಿರಬೇಕೆಂಬ ಶಾಸ್ತ್ರವಿಧಿ ನೆನಪಾಗುತ್ತದೆ. ಕೃಷ್ಣಮೂರ್ತಿಗಳು ಬದುಕನ್ನೇ ಯಜ್ಞದಂತೆ ಕಂಡವರು: ತಸ್ಯೈವಂ ವಿದುಷೋ ಯಜ್ಞಸ್ಯಾತ್ಮಾ ಯಜಮಾನಃ.
ಧರ್ಮಪ್ರಭದ ಸಂಪಾದಕೀಯ ಬರೆಯುವುದು, ಪ್ರಕಟವಾಗಬೇಕಿದ್ದ ಲೇಖನಗಳನ್ನು ತಿದ್ದುವುದು, ಕರಡಚ್ಚು ನೋಡುವುದು, ಸದಸ್ಯರಿಗೆ ಪತ್ರಿಕೆ ನಿಯತವಾಗಿ ತಲುಪಿತೇ ಇಲ್ಲವೇ ಎಂದು ನೋಡಿಕೊಳ್ಳುವುದು ಮುಂತಾದ ಎಷ್ಟೋ ಕೆಲಸಗಳನ್ನು ಅವರು ಸಂತೋಷವಾಗಿ ಹೊರುತ್ತಿದ್ದರು. ಒಮ್ಮೆ ಕೂಡ ಆ ಬಗೆಗೆ ಗೊಣಗಿಕೊಂಡದ್ದನ್ನು ನಾನು ಕೇಳಿಲ್ಲ. ಈ ನಿಟ್ಟಿನಲ್ಲಿ ಅವರ ಧರ್ಮಪತ್ನಿ ಲಲಿತಮ್ಮನವರ ಸಹಕಾರವೂ ದೊಡ್ಡದು. ಅವರ ಮೂವರು ಮಕ್ಕಳು — ಸುಬ್ರಹ್ಮಣ್ಯ, ರಾಧಾಕೃಷ್ಣ ಮತ್ತು ನಾಗಲಕ್ಷ್ಮಿ — ಕೂಡ ತುಂಬ ನಮ್ರತೆಯಿಂದ ನಡೆದುಕೊಳ್ಳುತ್ತಿದ್ದರು.
ಸಂಸ್ಥೆಯ ದಶಮವಾರ್ಷಿಕೋತ್ಸವದ ಸಂದರ್ಭದಲ್ಲಿ ಪತ್ರಿಕೆಯ ಲೇಖಕರಿಗೆ ಸಮ್ಮಾನವನ್ನು ಇರಿಸಿಕೊಂಡಿದ್ದರು. ಆಗ ತಮಗೆ ಸಮ್ಮಾನ ಸಿಗಲಿಲ್ಲವೆಂದೋ ಸಾಕಾಗಲಿಲ್ಲವೆಂದೋ ಲೇಖಕರೊಬ್ಬರು ಸಿಟ್ಟಿಗೆದ್ದು ಕಟುವಾದ ಲೇಖನವನ್ನೇ ಪತ್ರಿಕೆಗೆ ಬರೆದಿದ್ದರು. ಲಂಕಾ ಕೃಷ್ಣಮೂರ್ತಿಗಳು ಪ್ರಾಮಾಣಿಕವಾಗಿ ಆ ನಿಡಿದಾದ ಬರೆಹವನ್ನು ಯಥಾವತ್ತಾಗಿ ಪ್ರಕಟಿಸಿದ್ದಲ್ಲದೆ ಅದರ ಕೆಳಗೆ ದೊಡ್ಡ ಅಕ್ಷರಗಳಲ್ಲಿ ನಯ-ವಿನಯಸಂಪನ್ನವಾದ ನುಡಿಯಿಂದ ಕ್ಷಮೆಯನ್ನೂ ಕೇಳಿದ್ದರು. ಅನಂತರ ಆ ಲೇಖಕರಿಗೆ ಸಮ್ಮಾನವನ್ನೂ ಸಲ್ಲಿಸಿದಂತೆ ನನ್ನ ನೆನಪು.
ವಾದ-ಉಪವಾದಗಳ ವಿಷಯಗಳಲ್ಲಿ ಲಂಕಾ ಕೃಷ್ಣಮೂರ್ತಿಯವರದು ಅಪ್ಪಟ ನ್ಯಾಯಾಧೀಶರ ನಿಲವು. ಪರ-ವಿರೋಧಿಗಳಿಬ್ಬರ ಅಭಿಪ್ರಾಯಗಳಿಗೂ ನಿಷ್ಪಕ್ಷಪಾತವಾಗಿ ಅವಕಾಶವೀಯಬೇಕು. ತಮ್ಮ ತಮ್ಮ ವಾದಗಳನ್ನು ಮಂಡಿಸುವಾಗ ಸತ್ಯಕ್ಕಷ್ಟೇ ಅಲ್ಲದೆ ಸೌಜನ್ಯಕ್ಕೂ ಚ್ಯುತಿ ಬರಬಾರದು. ಇದನ್ನವರು ಧರ್ಮಪ್ರಭದ ಎಲ್ಲ ಚರ್ಚೆಗಳಲ್ಲಿಯೂ ಅನುಸರಿಸುತ್ತಿದ್ದರು. ಅಷ್ಟೇ ಅಲ್ಲ, ಜಿಜ್ಞಾಸುಗಳಾದ ಓದುಗರು ಕೇಳುವ ಪ್ರಶ್ನೆಗಳಿಗೆ ತಾವು ಉತ್ತರಿಸುವಾಗಲೂ ನಿಷ್ಠೆಯಿಂದ ಪಾಲಿಸುತ್ತಿದ್ದರು.
ಒಮ್ಮೆ ದಕ್ಷಿಣಕನ್ನಡದ ಒಬ್ಬರು ಜೈನಮತದ ಪ್ರಾಶಸ್ತ್ಯವನ್ನು ಹೇಳುವ ಭರದಲ್ಲಿ ಸನಾತನಧರ್ಮವನ್ನು ಒರಟಾಗಿ ಹಳಿದದ್ದಲ್ಲದೆ “ಮುನಿ”ಶಬ್ದವು ಜೈನಪರಂಪರೆಯದೆಂದೂ “ಋಷಿ”ಶಬ್ದವು ವೈದಿಕಪರಂಪರೆಯದೆಂದೂ ಬಾಲಿಶವಾದ ವಾದವನ್ನು ಮಂಡಿಸಿದ್ದರು. ಅಷ್ಟೇ ಅಲ್ಲದೆ ಭರತ, ಪಾಣಿನಿ, ಕಾಮಂದಕ ಮುಂತಾದವರೆಲ್ಲ ಜೈನರೆಂದು ಕೂಡ ಸಿದ್ಧಾಂತಾಭಾಸಗಳನ್ನು ಹೊರಡಿಸಿದ್ದರು. ಸುಮಾರು ನಾಲ್ಕೈದು ಪುಟಗಳ ಈ ಕಾಡುಕಗ್ಗ ಧರ್ಮಪ್ರಭದಲ್ಲಿ ಅಚ್ಚಾಗಿತ್ತು. ಪತ್ರಿಕೆಯು ತನ್ನಂಥ ವಿಧರ್ಮೀಯರಿಗೆ ಅವಕಾಶ ಕೊಡುತ್ತಿಲ್ಲವೆಂದು ಲೇಖಕರು ಆಗ್ರಹ ಮಾಡಿದ ಕಾರಣ ಅವರ ಬರೆಹವನ್ನು ಕೃಷ್ಣಮೂರ್ತಿಗಳು ಪ್ರಕಟಿಸಬೇಕಾಯಿತು. ಮುದ್ರಿತವಾದ ಆ ಲೇಖನವನ್ನು ನೋಡಿದೊಡನೆಯೇ ನನಗೆ ಮೈಯುರಿಯಿತು. ಎಂಟು ಪುಟಗಳ ಪ್ರತಿಕ್ರಿಯೆಯನ್ನು ಸಾಧಾರವಾಗಿ ಕೊಟ್ಟದ್ದಲ್ಲದೆ ನಡುನಡುವೆ ಘಾಟಾದ ಮೂದಲಿಕೆಗಳನ್ನೂ ತಿವಿತಗಳನ್ನೂ ಸೇರಿಸಿದ್ದೆ. ಇದು ಕೃಷ್ಣಮೂರ್ತಿಗಳ ಕೈಸೇರಿದ ಬಳಿಕ ಅವರಿಂದ ನನಗೆ ದೂರವಾಣಿ ಬಂದಿತು. “ಸಾರ್, ನಿಮ್ಮ ಲೇಖನ ತುಂಬ ಚೆನ್ನಾಗಿದೆ. ಅವರ ಅನ್ಯಾಯದ ಆಕ್ಷೇಪಗಳಿಗೆಲ್ಲ ಸರಿಯಾದ ಉತ್ತರ ಕೊಟ್ಟಿದ್ದೀರ. ಸಂಪಾದಕನಾಗಿ ನಾನು ಇದರಲ್ಲಿ ಕೆಲವೊಂದು ಪರಿಷ್ಕಾರಗಳನ್ನು ಮಾಡಲು ನಿಮ್ಮ ಅನುಮತಿಯುಂಟೇ?” ಎಂದು ಕೇಳಿದರು. ಪರಿಸ್ಥಿತಿ ನನಗೆ ಅರ್ಥವಾಯಿತು. “ಧಾರಾಳವಾಗಿ ಮಾಡಿಕೊಳ್ಳಿ ಸರ್” ಎಂದು ಮಾತು ಮುಗಿಸಿದೆ. ಪತ್ರಿಕೆ ಅಚ್ಚಾಗಿ ಬಂದಾಗ ನನ್ನ ಬರೆಹದಲ್ಲಿದ್ದ ಘಾಟಾದ ಒಗ್ಗರಣೆಯ ಹೊರತಾಗಿ ಮಿಕ್ಕೆಲ್ಲ ವಿಷಯವೂ ಚ-ತು ತಪ್ಪದೆ ಮುದ್ರಿತವಾದುದನ್ನು ಕಂಡೆ. ಅನಂತರ ಕೃಷ್ಣಮೂರ್ತಿಗಳನ್ನು ಮುಖತಃ ಕಂಡಾಗ ಅವರಲ್ಲಿ ನನ್ನ ಅಲ್ಪ-ಸ್ವಲದ ಅಸಮಾಧಾವನ್ನು ಹೇಳಿಕೊಂಡೆ: “ಏನಿದು, ಆ ಮನುಷ್ಯ ಅಷ್ಟೆಲ್ಲ ಚೀರಾಡಿ ಹಾರಾಡಿರುವಾಗ ಅದಕ್ಕೆ ತಕ್ಕ ಬಿಸಿ ಮುಟ್ಟಿಸಿದ್ದರೆ ನೀವು ಅದನ್ನೆಲ್ಲ ತಣ್ಣಗೆ ಮಾಡಿಬಿಟ್ಟಿರಿ!” ಆಗ ಕೃಷ್ಣಮೂರ್ತಿಗಳು ತಮ್ಮ ಎಂದಿನ ನಿರುದ್ವಿಗ್ನಧ್ವನಿಯಲ್ಲಿ ಹೇಳಿದರು: “ಕ್ಷಮಿಸಬೇಕು ಸಾರ್. ನಮ್ಮ ವಿಚಾರಗಳಲ್ಲಿ ಬೆಳಕಿರಬೇಕೇ ಹೊರತು ಕಾವಿರಬಾರದು. ವಿದ್ಯಾವಿಷಯದಲ್ಲಿ ಇದು ಇನ್ನೂ ಮುಖ್ಯ.” ಅವರ ಈ ಮಾತಿಗೆ ನಾನು ಮರುಮಾತಾಡದೆ ಕೈಮುಗಿದೆ.
* * *
ಈ ಎಲ್ಲ ಸೇವಾಪ್ರಕಲ್ಪಗಳೊಟ್ಟಿಗೆ ಕೃಷ್ಣಮೂರ್ತಿಯವರು ಎಷ್ಟೋ ಮಂದಿಗೆ ಪಾಠಗಳನ್ನು ಹೇಳುತ್ತಿದ್ದರು. ಇವೆಲ್ಲ ನಿಃಶುಲ್ಕವಾಗಿ ಎಂಬುದನ್ನು ಪ್ರತ್ಯೇಕಿಸಿ ಹೇಳಬೇಕಿಲ್ಲ. ಅವರ ಮನೆಯಲ್ಲಿಯೇ ನಡೆಯುತ್ತಿದ್ದ ಸಾಹಿತ್ಯ ಮತ್ತು ವ್ಯಾಕರಣವರ್ಗಗಳ ಪ್ರಸ್ತಾವ ಮೊದಲೇ ಬಂದಿದೆ. ಅವರ ಮನೆಗೆ ಹತ್ತಿರವಿದ್ದ ಚಿನ್ಮಯ ಸಂಸ್ಥೆಗೆ ಸೇರಿದ ಬ್ರಹ್ಮಚಾರಿಗಳಿಗೂ ಸಂನ್ಯಾಸಿಗಳಿಗೂ ಪ್ರೌಢಸ್ತರದ ಇವೇ ಪಾಠಗಳನ್ನು ಅವರು ಮಾಡುತ್ತಿದ್ದರು. ಇಂದಿರಾನಗರದ ಆಸುಪಾಸಿನಲ್ಲೆಲ್ಲ ತಮಿಳು ಹಾಗೂ ಮಲೆಯಾಳಭಾಷಿಕರ ವಾಸ್ತವ್ಯ ಹೆಚ್ಚು. ಹೀಗಾಗಿ ಅವರಿಗೆಲ್ಲ ಕನ್ನಡ ಕಲಿಸುವ ಬಾಧ್ಯತೆಯನ್ನು ಇವರು ಹೊತ್ತಿದ್ದರು. ಇವುಗಳಲ್ಲದೆ ಹಲಕೆಲವು ವಿಶಿಷ್ಟಗ್ರಂಥಗಳ ಪಾಠಕ್ಕಾಗಿ ಆಗೀಗ ಅವರಲ್ಲಿಗೆ ಆಸಕ್ತರು ಬರುತ್ತಿದ್ದರು. ಚಿತ್ರಕಲೆಯ ವಿದ್ಯಾರ್ಥಿಗಳಿಗಾಗಿ ಅವರು “ವಿಷ್ಣುಧರ್ಮೋತ್ತರ”, “ಮಾನಸೋಲ್ಲಾಸ” ಮತ್ತು “ಶಿವತತ್ತ್ವರತ್ನಾಕರ” ಗ್ರಂಥಗಳ ಚಿತ್ರಶಿಲ್ಪಾಧ್ಯಾಯಗಳನ್ನು ಪಾಂಕ್ತವಾಗಿ ಪಾಠ ಹೇಳಿದ್ದರು. ಇನ್ನು ಭಾಗವತ, ಉಪನಿಷತ್ತು, ಧರ್ಮಶಾಸ್ತ್ರ ಮುಂತಾದವುಗಳಿಗೆ ಕೊರತೆಯೇ ಇರಲಿಲ್ಲ. ಸಿದ್ಧಾಂತಕೌಮುದಿಯನ್ನಂತೂ ಅದರ ಪ್ರಮುಖವ್ಯಾಖ್ಯಾನಗಳಾದ ಬಾಲಮನೋರಮಾ ಮತ್ತು ಪ್ರೌಢಮನೋರಮಾಗಳ ಜೊತೆ ಪಾಠ ಹೇಳುತ್ತಿದ್ದರು.
“ಗೀತ-ಸಂಗೀತ-ಪ್ರಚಾರ-ಮಂಡಲಿ” ಎಂಬ ಮತ್ತೊಂದು ಸಂಸ್ಥೆಯನ್ನು ಮಾಡಿಕೊಂಡು ಅದರ ಮೂಲಕ ಗೀತ-ನೃತ್ಯ-ವಾದ್ಯಗಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಕೃಷ್ಣಮೂರ್ತಿಗಳು ಕಟ್ಟಿದ ಸಂಸ್ಥೆಗಳೆಲ್ಲವೂ ಬಡವರ ಸಂಸ್ಥೆಗಳು; ಬೆಡಗು-ಬಿನ್ನಾಣಗಳಿಲ್ಲದ ಸಂಸ್ಥೆಗಳು. ಸಂಗೀತ-ನೃತ್ಯಕಾರ್ಯಕ್ರಮಗಳು ಸಹಜವಾಗಿಯೇ ಹೆಚ್ಚಿನ ಖರ್ಚು-ವೆಚ್ಚ ಉಳ್ಳಂಥವು. ಅವರು ಇದಕ್ಕಾಗಿ ಹಲವು ರೀತಿಯಿಂದ ಹವಣಿಸಿಕೊಳ್ಳುತ್ತಿದ್ದರು. ಬಳಿಕ ಕಲಾವಿದರನ್ನು ಆಹ್ವಾನಿಸುವಾಗ ತಮ್ಮ ಎಂದಿನ ವಿನಯ ಮತ್ತು ಸತ್ಯವ್ರತಗಳೊಡನೆ ಅವರಲ್ಲಿ ಹೀಗೆ ನಿವೇದಿಸಿಕೊಳ್ಳುತ್ತಿದ್ದರು:
“ನಮಸ್ಕಾರ. ನಮ್ಮದೊಂದು ಚಿಕ್ಕ ಸಂಸ್ಥೆಯಿದೆ. ಅಲ್ಲಿ ಕಾರ್ಯಕ್ರಮವನ್ನು ನಡಸಲು ನೀವು ಬರುವುದಾದರೆ ತುಂಬ ಸಂತೋಷ. ನಿಮ್ಮ ಕಲೆ ದೊಡ್ಡದು. ಅದಕ್ಕೆ ತಕ್ಕ ಗೌರವ ಸಲ್ಲಿಸಲಾದೀತೋ ಇಲ್ಲವೋ ನಮಗೆ ತಿಳಿಯದು. ನಮಗಿರುವ ಸಂಪನ್ಮೂಲ ಇಷ್ಟು. ಈ ಸಂಭಾವನೆಗೆ ತಾವು ಬಂದು ಕಾರ್ಯಕ್ರಮ ನಡೆಸಿಕೊಡುವುದಾದರೆ ನಾವು ಧನ್ಯರು. ಒಂದು ವೇಳೆ ತಮಗಿದು ಕಡಮೆಯೆನಿಸಿದರೆ ದಯಮಾಡಿ ಅನ್ಯಥಾ ತಿಳಿಯದೆ, ಮುಜುಗರಕ್ಕೆ ಈಡಾಗದೆ ನಿರಾಕರಿಸಬಹುದು. ಇನ್ನು ಮುಂದಿನ ವಿಷಯ ತಮ್ಮ ಚಿತ್ತಕ್ಕೆ ಬಿಟ್ಟದ್ದು.”
ಇಂಥ ನಿರಾಭರಣವಾದ ಸತ್ಯಸೌಂದರ್ಯವನ್ನು ಮೆಚ್ಚಿ ಒದಗಿಬಂದ ಕಲಾವಿದರು ಸಾಕಷ್ಟು ಮಂದಿ. ಹಾಗೆ ಬಂದವರನ್ನು ಬೆನ್ನುಬಾಗಿ ನಮಸ್ಕರಿಸಿ ಸ್ವಾಗತಿಸುವುದರಿಂದ ಮೊದಲ್ಗೊಂಡು ಅವರು ಕುಡಿದು ಕೆಳಗಿಟ್ಟ ಕಾಫೀಲೋಟಗಳನ್ನು ಎತ್ತಿಕೊಂಡು ಹೋಗಿ ತೊಳೆಯುವವರೆಗೆ ಎಲ್ಲ ಕೆಲಸಗಳನ್ನೂ ಕೃಷ್ಣಮೂರ್ತಿಗಳೇ ಮಾಡುತ್ತಿದ್ದರು. ಇದರಲ್ಲಿ ಅವರಿಗೆ ಸ್ವಲ್ಪವೂ ಸಂಕೋಚವಿರಲಿಲ್ಲ; ಕೀಳರಿಮೆ ಮೊದಲೇ ಇರಲಿಲ್ಲ. ಹಾಗೆಂದು ಇದು ಪ್ರದರ್ಶನದ ಸೋಂಕನ್ನೂ ಹೊಂದಿರಲಿಲ್ಲ. ಇವೆಲ್ಲ ಅವರ ನೈಜಧರ್ಮಗಳು.