‘ಸಭಾಪರ್ವ’ದಲ್ಲಿ ಕುಮಾರವ್ಯಾಸ ಎರಡು ಸಭಾಭವನಗಳನ್ನು ಪರಿಚಯಿಸುತ್ತಾನೆ. ಎರಡೂ ಭವನಗಳು ನಿರ್ದಿಷ್ಟ ಕಾಲಘಟ್ಟವೊಂದರಲ್ಲಿ, ಭಾರತದಲ್ಲಿ ವಾಸ್ತು ಕಲೆಯು ಸಾಧಿಸಿದ್ದ ಔನ್ನತ್ಯದ ಪ್ರತೀಕಗಳೆನ್ನಬಹುದು. ಮೊದಲನೆಯ ಸಭಾಭವನ, ಧರ್ಮರಾಯನ ಇಂದ್ರಪ್ರಸ್ಥದಲ್ಲಿ ದೇವಶಿಲ್ಪಿ ಮಯನಿಂದ ನಿರ್ಮಿತವಾದದ್ದು. ಈ ಸಭಾಭವನನಿರ್ಮಾಣದ ಉದ್ದೇಶ ರಾಜಸೂಯಯಾಗವನ್ನಾಚರಿಸುವ ಧಾರ್ಮಿಕ, ಸಾತ್ತ್ವಿಕ ಉದ್ದೇಶ. ಸಹಸ್ರಾರು ರಾಜರು, ಋಷಿಗಳು, ಬ್ರಾಹ್ಮಣರು ಮತ್ತು ಸಮಾಜದ ಉಳಿದ ಎಲ್ಲರೂ ಸೇರಿ, ವೇದಗೋಷ್ಠಿ, ವಿದ್ವತ್‍ಗೋಷ್ಠಿ ಮುಂತಾದ ಅನೇಕ ಸಾಂಸ್ಕೃತಿಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು, ಆದರೂ ಇದೇ ಸಭಾಭವನದಲ್ಲಿ, ಧರ್ಮಸಂಸ್ಥಾಪನೆಗೆಂದು ಕೃಷ್ಣನಿಂದ ಶಿಶುಪಾಲವಧೆಯೂ ನಡೆಯುತ್ತದೆ. ಹಾಗೂ ಈ ಸಭೆಯ ವಾಸ್ತುವಿನ್ಯಾಸದ ಗೊಂದಲಗೊಳಿಸುವ ಚಾತುರ್ಯದಿಂದಾಗಿ, ದುರ್ಯೋಧನ ದ್ರೌಪದಿ ಮತ್ತವಳ ಸಖಿಯರಿಂದ ಪರಿಹಾಸ್ಯಕ್ಕೂ ಈಡಾಗುತ್ತಾನೆ. ಈ ಸಭೆಯಲ್ಲಿನ ದ್ರೌಪದಿಯ ಕಿಲಕಿಲನಗು, ಇಂತಹುದೇ ಮತ್ತೊಂದು ಸಭೆಯ ನಿರ್ಮಾಣಕ್ಕೆ, ಮತ್ತಲ್ಲಿ ನಡೆಯುವ ಕೃತ್ಯಗಳಿಗೆ ನಾಂದಿಯಾಗುವುದು ವಿಪರ್ಯಾಸವೆನಿಸುತ್ತದೆ.
ಎರಡನೆಯ ಸಭಾಭವನ ಹಸ್ತಿನಾಪುರದಲ್ಲಿ, ದುರ್ಯೋಧನ ಕರೆಸಿದ ಶಿಲ್ಪಿಗಳಿಂದ ನಿರ್ಮಿತವಾದ ಅದ್ಭುತ ವಾಸ್ತು ವೈಭವದ ಭವನ. ಇದು ನಿರ್ಮಾಣವಾಗಿರುವ ಉದ್ದೇಶ, ಪಾಂಡವರ ಸಂಪತ್ತನ್ನು ಮೀರಿಸುವ ಸಂಪತ್ತು ತನಗೂ ಇದೆಯೆಂದು ಪ್ರದರ್ಶಿಸಲು, ಹಾಗೂ ಪಾಂಡವರನ್ನು, ಈ ಸಭಾಭವನದಲ್ಲಿ ಕಪಟದ್ಯೂತದಿಂದ ವಂಚಿಸಿ, ಸೋಲಿಸಲು. ಈ ಸಭಾಭವನದಲ್ಲಿ ನಡೆಯುವ ಕೃತ್ಯಗಳಾದರೂ ಯಾವುವು? ಕೃತ್ರಿಮ ಹಾಸಂಗಿಯಲ್ಲಿ ದ್ಯೂತ, ಶಕುನಿಯ ದಾಳಗಳ ಉರುಳಿನ ಮೋಸ, ದ್ರೌಪದಿಯಂತಹ ಅರಸಿಯ ವಸ್ತ್ರಾಪಹರಣ, ಎಲ್ಲರ ಮಾನ ಕಾಪಾಡಬೇಕಾದ ಅರಸನಿಂದಲೇ ಅಸಭ್ಯವರ್ತನೆ, ಶಾಪಗಳು, ಪ್ರತಿಜ್ಞೆಗಳು, ಉತ್ಪಾತಗಳು ಹೀಗೆ ಎಲ್ಲವೂ ಮೊದಲ ಸಭಾಭವನದಲ್ಲಿ ನಡೆದ ಕ್ರಿಯೆಗಳಿಂದ ಸಂಪೂರ್ಣ ವಿಭಿನ್ನವಾದವು. ನಿರ್ಜೀವ ಸಭಾಭವನಗಳು, ಪಾಂಡವರ ಉನ್ನತಿ ಅವನತಿಗಳಿಗೆ, ದ್ರೌಪದಿಯ ಅಳಲಿಗೆ, ದುರ್ಯೋಧನನ ಅಸೂಯೆ, ಪ್ರತೀಕಾರ, ಅಸಭ್ಯತೆಗಳಿಗೆ ಮೂಕಸಾಕ್ಷಿಯಾಗುತ್ತವೆ. ಮೊದಲ ಸಭಾಭವನದಲ್ಲಿ ಕೃಷ್ಣ ದೈಹಿಕವಾಗಿ ಉಪಸ್ಥಿತನಿರುತ್ತಾನೆ, ಹಾಗೂ ಸಭೆಯಲ್ಲಿ ನಡೆದ ಗೊಂದಲವನ್ನು ನಿಯಂತ್ರಿಸುತ್ತಾನೆ. ಎರಡನೆಯ ಸಭೆಯಲ್ಲಿ ಪರಿಸ್ಥಿತಿ ಪರಾಕಾಷ್ಠೆ ತಲುಪಿದಾಗ ಅದೃಶ್ಯನಾಗಿಯೇ, ತಾನಿರುವ ಕಡೆಯಿಂದಲೇ ಸನ್ನಿವೇಶವನ್ನು ನಿಯಂತ್ರಿಸುತ್ತಾನೆ. ಎಷ್ಟಾದರೂ ಕೃಷ್ಣನೇ ಅಲ್ಲವೇ ನಮ್ಮ ಕುಮಾರವ್ಯಾಸನ ದೂರನಿಯಂತ್ರಕ? ರೌದ್ರ, ಕರುಣೆ, ಅದ್ಭುತ, ಜುಗುಪ್ಸೆ ಮುಂತಾದ ರಸಗಳನ್ನುದ್ದೀಪಿಸುವ, ಸನ್ನಿವೇಶಗಳು, ನುಡಿಗಳು, ಕ್ರಿಯೆಗಳನ್ನೊಳಗೊಂಡು ‘ಸಭಾಪರ್ವ’ ಕಲಾತ್ಮಕವಾಗಿ ವಿಶಿಷ್ಟ ಯಶಸ್ಸು ಸಾಧಿಸುತ್ತದೆ (ಹದಿನಾರು ಸಂಧಿಗಳು ಅಡಕವಾಗಿವೆ ಈ ಪರ್ವದಲ್ಲಿ).
ನಾಗರೀಕತೆಯನ್ನು, ನಗರ ಸಂಸ್ಕೃತಿಯಲ್ಲಿ ಬದುಕುವವರ ನಡೆನುಡಿಗಳನ್ನು ಚಿತ್ರಿಸುವ ಸಭಾಪರ್ವದ ಚೌಕಟ್ಟಿನಲ್ಲಿ ಕಂಡುಬರುವ ಭೀಮನ ವ್ಯಕ್ತಿತ್ವ “ಅರಣ್ಯ ಪರ್ವ”ದಲ್ಲಿ ಮತ್ತಷ್ಟು ಶಕ್ತವಾಗಿ ಅಭಿವ್ಯಕ್ತವಾಗುತ್ತದೆ. ನಾಗರೀಕತೆಗಿಂತ, ಈ ಅರಣ್ಯ ಜೀವನವೇ ಅವನಿಗೆ ಹಚ್ಚು ಶೋಭಿಸುತ್ತದೇನೋ ಎನಿಸುತ್ತದೆ. ಅರಣ್ಯಪರ್ವದಲ್ಲಿನ ಕಿಮ್ಮೀರವಧೆ, ಜಟಾಸುರವಧೆ, ಭೀಮನನ್ನು ಹಿಡಿದ ಮಹೋರಗ, ಸೌಗಂಧಿಕಾಪುಷ್ಪಪ್ರಕರಣಗಳು ಭೀಮನ ವ್ಯಕ್ತಿತ್ವವನ್ನು ರಂಜನೀಯವಾಗಿ, ಅತ್ಯಂತ ಸಮರ್ಥವಾಗಿ ನಿರೂಪಿಸುತ್ತವೆ. ಅರಣ್ಯದಲ್ಲಿ ನಿಮಿಷಾರ್ಧದಲ್ಲಿ ಪರ್ಣಕುಟಿಗಳನ್ನು ನಿರ್ಮಿಸುವುದರಲ್ಲಿ ಭೀಮ ನಿಸ್ಸೀಮ. ಕವಿಸಮಯಕ್ಕನುಸಾರವಾಗಿ ಕುಮಾರವ್ಯಾಸ ಬೇಟೆಯ ವೈಖರಿಯನ್ನು ವರ್ಣಿಸಿದರೂ, ಅರಣ್ಯವಾಸಿಗಳಾಗಿರುವುದರಿಂದಾಗಿ ಭೀಮ ಬೇಟೆಯಾಡುವುದು ಅಸಹಜವೆನಿಸುವುದಿಲ್ಲ. ಕಾಡಿನ ಕಿರಾತರುಗಳೊಡನೆ ಭೀಮ ಕಾಡನ್ನು ಹೊಕ್ಕರೆ, ಕಾಡಿನ ಪ್ರಾಣಿಗಳು ದೆಸೆದೆಸೆಗೆ ಓಡುತ್ತವಂತೆ. ಇನ್ನು ಇವನ ಬೇಟೆಯ ವೈಖರಿಯಾದರೂ ಹೇಗೆ?
ಕೊಡಹಿ ಬಿಸುಟನು ಕೇಸರಿಯ, ಕಾ-
ಲ್ವಿಡಿದು ಸೀಳಿದ ಕರಿಗಳನು ಬೆಂ-
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ |
ಅಡಗೆಡಹಿ ಪೇರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ || (ಅರಣ್ಯ ಪರ್ವ 3.10)
ಇಂತಹ ಮಹಾಪರಾಕ್ರಮಿ ಭೀಮ ಒಂದು ಮಹೋರಗನ ಹಿಡಿತಕ್ಕೆ ಸಿಕ್ಕಾಗ “ಆ ಘೋರ ಬಂಧದ ಗಾಢದಲಿ ನುಡಿ” (ಅರಣ್ಯ ಪರ್ವ 13.41) ನೆಗ್ಗಿತಂತೆ ಭೀಮನಿಗೆ. ಆ ಮಹೋರಗ ನಹುಷನೆಂದರಿತೂ ಭೀಮನ ಮನಸ್ಸಿನಲ್ಲಿ, ಆ ಮಹೋರಗನ ಬಂಧನದಲ್ಲಿ ಸಿಲುಕಿ, ಉಸಿರಾಡಲಾಗದಂತಹ ಭಂಗ ಪಟ್ಟುದ್ದು ಬಹಳ ನೋವು, ಕೋಪ ಕೀಳರಿಮೆಗಳನ್ನುಂಟು ಮಾಡಿರುತ್ತದೆ.
ಭೀಮನ ಅಪ್ರತಿಮ ಬಲಸಾಹಸಗಳಿಗೆ, ದ್ರೌಪದಿಯ ಬಗೆಗೆ ಆತನಿಗಿರುವ ಆಳವಾದ ಸುಕುಮಾರ ಪ್ರೀತಿ ಮತ್ತು ಕೋಮಲ ಶೃಂಗಾರ ಭಾವಕ್ಕೆ, ಹಿರಿಯರ ಬಗೆಗೆ ಆತನಿಗಿರುವ ಗೌರವ, ವಿನಯ, ಬಂಧುಭಾವಕ್ಕೆ “ಸೌಗಂಧಿಕಾ ಪುಷ್ಪ ಪ್ರಕರಣ” ಸಾಕ್ಷಿಯಾಗಿದೆ. ಘಮ್ಮೆಂದು ಅರಳಿದ್ದ ಸೌಗಂಧಿಕಾ ಪುಷ್ಪದ ಪರಿಮಳದಿಂದ ಮೋಹಗೊಂಡ ದ್ರೌಪದಿಗೆ ಹೇಗಾದರೂ ಮಾಡಿ ಆ ಹೂವನ್ನು ಪಡೆಯಬೇಕೆಂಬ ಮಹದಾಸೆ ಮೂಡುತ್ತದೆ. ಆ ಕಾಡಿನಲ್ಲಿ ಹನ್ನೆರಡು ವರ್ಷ ವನವಾಸ ಮಾಡಬೇಕಾಗಿ ಬಂದ ಅರಸಿಗೆ ಮನರಂಜನೆಯಾದರೂ ಏನಿದೆ? ಈ ಸುಗಂಧವೇ ಇಷ್ಟೊಂದು ಮನಸ್ಸನ್ನಪಹರಿಸುತ್ತಿದೆ, ಇನ್ನು ಆ ಪುಷ್ಪದ ಸೌಂದರ್ಯ ಅದೆಷ್ಟು ಮನಮೋಹಕವೋ ಎನಿಸುತ್ತದೆ ದ್ರೌಪದಿಗೆ. ತನ್ನ ಈ ಕುತೂಹಲ ಆಸೆಗಳನ್ನು ಯಾರಲ್ಲಿ ಹೇಳಿಕೊಳ್ಳುವುದು? ಧರ್ಮಜ ಹಿರಿಯ, ಒಂದು ರೀತಿಯ ಸಂಸಾರಿ ಸನ್ಯಾಸಿ. ನಕುಲ ಸಹದೇವರು ಚಿಕ್ಕವರೆನಿಸುತ್ತಾರೆ. ಅರ್ಜುನ ಪಾಶುಪತಾಸ್ತ್ರ ಸಂಪಾದಿಸಲು ತಪಸ್ಸಿಗೆ ಹೋಗಿದ್ದಾನೆ. ಉಳಿದವನು ಈ ಒರಟ, ಅರಿಭಯಂಕರ ಭೀಮ. ದ್ರೌಪದಿ ಅವನನ್ನು ಸಮೀಪಿಸಿ . . . ಮಧುರವಾದ ಮಾತಿನಲ್ಲಿ ಆ ಸರಸಿಜವ ತಂದಿತ್ತು ತನ್ನ ಮನೋರಥ ವ್ಯಥೆಯ ಪರಿಹರಿಸುವಂತೆ ಕೇಳಿದಾಗ, ನಾವು ನಿರೀಕ್ಷಿಸಿದಂತೆ, ಭೀಮ ಗುಡುಗುವುದಿಲ್ಲ, ದ್ರೌಪದಿಯನ್ನು ಪರಿಹಾಸ್ಯ ಮಾಡುವುದಿಲ್ಲ, ಬದಲಿಗೆ “ಅಂಬುಜ ವದನೆಯ ಕುರುಳನುಗುರಲಿ ತಿದ್ದಿದ” (ಅರಣ್ಯ ಪರ್ವ 10.06) ನಂತೆ ! ಒರಟ, ಅರಸಿಕನೆಂದುಕೊಂಡಿದ್ದ ಭೀಮಕಾಯದಲ್ಲಿ ಸುಕುಮಾರ ಶೃಂಗಾರದ ಸೊಗಡು ಘಮ್ಮೆನ್ನುತ್ತದೆ. ಇಂಥ ಸುಕುಮಾರ ಶೃಂಗಾರದಲ್ಲಿ ತೊಡಗಿದ್ದ ಭೀಮ ಸೌಗಂಧಿಕಾ ಪುಷ್ಪತರಲು ಹೊರಟಾಗ ಅವನ ನಡಿಗೆ ಹೇಗಿದ್ದಿರಬಹುದು? “. . . ವಿಗಡ ಭೀಮನ ಕಾಲುದುಳಿ ಕಂಪಿಸಿತು ಕಾನನವ” (ಅರಣ್ಯ ಪರ್ವ 10.07). ಭೀಮ ಗರ್ಜನೆಯ ಅವನ ನಡೆದಾಟದ ಪರಿಣಾಮವೇನೆಂಬುದನ್ನು ಕುಮಾರವ್ಯಾಸ ವಿವರಿಸುತ್ತಾನೆ.
ಒದರಿದರೆ ಪರ್ವತದ ಶಿಖರದ-
ಲುದುರಿದವು ಹೆಬ್ಬಂಡೆಗಳು ಮುರಿ-
ದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು |
ಗದೆಯ ಹೊಯ್ಲಿನ ಗಂಡ ಶೈಲವೊ
ಕದಳಿಗಳೋ ತಾವರಿಯೆವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ || (ಅರಣ್ಯ ಪರ್ವ 10.07)
ಭೀಮನ ಹೂಂಕಾರಕ್ಕೆ ಹುಲಿ ಕರಡಿ ಸಿಂಹಗಳು ಯೋಜನ ದೂರಕ್ಕೆ ಹಾಯ್ದೋಡಿದವಂತೆ. ಇವನ ಬೊಬ್ಬರಿತಕೆ ಇಳೆ ಒಡೆಯಿತಂತೆ, ತೊಡೆಯ ಗಾಳಿಗೆ ಕಿರುಗಿಡ ಮರಗಳು ಹಾರಿದವು, ಇವನುಬ್ಬರದ ಬೊಬ್ಬೆಗೆ ಅದ್ರಿಗಳು ಬಿರಿದವು. ಹೀಗೆ ಆರ್ಭಟಿಸುತ್ತ ಬರುತ್ತಿದ್ದ ಭೀಮ (ರಾಮನಾಮ ಜಪಿಸುತ್ತಿದ್ದ) ಮಹಾವಾನರನನ್ನು ಕಾಣುತ್ತಾನೆ. ಆ ವಾನರನೋ ಮಹಾವೃದ್ಧ. ವಾನರನ ಪ್ರಶ್ನೆಗೆ ತಾವು ಮರ್ತ್ಯರೆಂದೂ, ಪತ್ನಿಯ ಪುಷ್ಪದಾಸೆ ತೀರಿಸಲೆಂದು ಬಂದಿರುವುದಾಗಿಯೂ ತಿಳಿಸುತ್ತಾನೆ. ಆ ಮುದಿ ವಾನರನ ಬಾಲವನ್ನು ಸರಿಸದೆ ತಾನು ಮುಂದುವರಿಯುವಂತಿಲ್ಲ. ಆದರೆ ಆ ಬಾಲ ಭೀಮನ ವಿಗಡ ಪರಾಕ್ರಮಕ್ಕೆ ಸವಾಲಾಗುತ್ತದೆ. ಕೇವಲ ಒಂದು ಮುದಿವಾನರನಿಂದ ತನಗಾದ ಭಂಗಕ್ಕೆ ನೊಂದ ಭೀಮ ಇಂಥ ದುರ್ಬಲನೊಡನೆ ಭಂಗವಾಯಿತೇ, ತನ್ನನ್ನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗುತ್ತಾನೆ. ಆ ವಾನರ ನಿಮ್ಮದಾವ ಕುಲವೆಂದು ಕೇಳಿದಾಗ ತಮ್ಮ ಕಥೆಯನ್ನು ಹೇಳಿದ್ದಲ್ಲದೇ, ತನ್ನ ಸೋಲನ್ನೂ ಮರೆತು ಭಕ್ತಿ, ವಿನಯಗಳಿಂದ ಕೈಮುಗಿದು ನೀನಾರು ಹೇಳು ಮಹಾತ್ಮ ಎನ್ನುತ್ತಾನೆ. ಆ ವಾನರ ತಾನೇ ತ್ರೇತಾಯುಗದ ಹನುಮನೆಂದಾಗ ಭೀಮನ ಮನಸ್ಸು ಸಂತಸದಿಂದ ಹೂವಾಗಿ ಅರಳುತ್ತದೆ. ಇಂತಹ ಯೋಗಾಯೋಗಕ್ಕೆ ಅಚ್ಚರಿಪಟ್ಟು, ಹನುಮನನ್ನು ತಂದೆ ಎಂದು ಸಂಬೋಧಿಸುತ್ತಾನೆ.
ಭೀಮ ಮಹಾಪರಾಕ್ರಮಿಯಾದರೂ ಅವನದು ಮುಗ್ಧ ಕುತೂಹಲ ಬಾಲಕನ ಮನಸ್ಸು. ಆ ಮಹಾಮಹಿಮನಾದ ಆಂಜನೇಯನು ಸಾಗರವನ್ನು ಲಂಘಿಸಿದಾಗ ತಾಳಿದ ಅದ್ಭುತ ರೂಪವನ್ನು ತನಗೆ ತೋರಿಸಬೇಕೆಂದು ಪ್ರಾರ್ಥಿಸುತ್ತಾನೆ. ಆ ಭವ್ಯ, ದಿಗ್ಬ್ರಮೆಗೊಳಿಸುವ ರೂಪವನ್ನು ಕಂಡು ತಾನಂಜುವುದಿಲ್ಲವೆಂದೂ ಹೇಳುತ್ತಾನೆ. ಆಗ ಹನುಮ ತನ್ನ ಆ ಅದ್ಭುತ, ದಿವ್ಯ ಮಂಗಳ ರೂಪವನ್ನು ತನ್ನನುಜನಿಗೆ ತೋರಿಸುತ್ತಾನೆ. ಹನುಮನ ಹೂಂಕಾರಕ್ಕೆ ನೆಲಬಿರಿದು ಬಾಲದ ತುದಿ ನಕ್ಷತ್ರ ಮಂಡಲವನ್ನು ಮುಟ್ಟುವಷ್ಟು ಬೃಹತ್ತಾಗಿ ಬೆಳೆದು ನಿಂತ ಆ ದಿವ್ಯಾದ್ಭುತರೂಪವನ್ನು ಕಂಡು ಭೀಮ ನಡುಗಿದನಂತೆ, ಕಂಗಳಲ್ಲಿ ಕೋಡಿ ಹರಿದು, ಮೋರೆಯನೆತ್ತಿ, ಕೈಗಳ ನೀಡಿ, “ಕಂಗಳ ಮುಚ್ಚಿ ಮರಳಿದು ನೋಡಿ ಶಿವಾಶಿವಾಯೆನುತ ಬೆಚ್ಚಿದನಡಿಗಡಿಗೆ ಭೀಮ” (ಅರಣ್ಯ ಪರ್ವ 10.38). ಭೀಮನ ಮನಸ್ಸು ಪೂರ್ವಗ್ರಹಗಳಿಂದ ಮುಕ್ತವಾಗಿ, ನಿಮಿಷಾರ್ಧದಲ್ಲಿ, ಹೇಗೆ ವಿಭಿನ್ನ ಭಾವನೆಗಳಿಗೆ ತೀವ್ರವಾಗಿ ಸ್ಪಂದಿಸುತ್ತದೆಂಬುದಕ್ಕೆ ಇದೊಂದು ಸೂಕ್ತ ಉದಾಹರಣೆ. ಕರುಣೆ, ಪ್ರೇಮ, ವಾತ್ಸಲ್ಯ, ಭಕ್ತಿ, ಕೋಪ, ರೌದ್ರ ಎಲ್ಲವೂ ಅತಿ ಶೀಘ್ರವಾಗಿ ಪರಿಣಾಮ ಬೀರುವಂತಹ ಮನಸ್ಸಿನ ಸಂವೇದನಾ ಶೀಲ ಭೀಮ. ಹನುಮನಿಗೆ ನಮಸ್ಕರಿಸಿ, ಕುಬೇರನ ಒಡೆತನದ ತಾವರೆ ಕೊಳದ ಕಾವಲಿಗಿದ್ದ ಭಟರನ್ನೀಡಾಡಿ, ತೋಳುಗಳ ತುಂಬ ತಾವರೆಯ ವನವನ್ನೇ ತುಂಬಿಕೊಂಡು ಬಂದು, ಸರಸಿಯ ಆಚೆ ನಿಂತು, ಭಟರಿಗೆ “ನಿಮ್ಮ ಕೊಳ ಇಲ್ಲಿಯೇ ಇದೆ ನೋಡಿ” (ಅರಣ್ಯ ಪರ್ವ 10.58) ಎಂದು ಹೇಳುವ ಹಾಸ್ಯ ಪ್ರಜ್ಞೆಯೂ ಇದೆ ಭೀಮನಿಗೆ. ಭೀಮನನ್ನು ಹುಡುಕಿಕೊಂಡು ಬಂದವರೆದುರು “ಅಂಬುಜವನವಿದುರು ಬಂದಂತೆ” (ಅರಣ್ಯ ಪರ್ವ 11.04) ಬಂದನಂತೆ ಭೀಮ, ಭೀಮ ತತ್ವಕ್ಕೂ, ಅಂಬುಜ ತತ್ವಕ್ಕೂ ಎಲ್ಲಿಂದೆಲ್ಲಿಗೆ? ಕುಮಾರವ್ಯಾಸ ಎರಡನ್ನೂ ಜೋಡಿಸಿಬಿಟ್ಟಿದ್ದಾನೆ. ಪತ್ನಿಗೆ ತಾವರೆ ವನವನ್ನು ತಂದು ಕೊಟ್ಟು ಸಂತೋಷ ಪಡಿಸಿದ ಭೀಮ ಮತ್ತಾಗಲೇ ಜಟಾಸುರನನ್ನು ವಧಿಸುತ್ತಾನೆ.
ಅಜ್ಞಾತ ವಾಸಕ್ಕೆಂದು ವಿರಾಟನಗರಿಯನ್ನು ಆಯ್ಕೆಮಾಡಿಕೊಂಡ ಪಾಂಡವರ ಜೀವನದಲ್ಲಿ ಆ ಹತ್ತು ತಿಂಗಳೂ ಯಾವುದೇ ಮುಖ್ಯ ಘಟನೆಗಳು ನಡೆಯುವಂತಿಲ್ಲ. ಭೀಮನ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸ್ವಭಾವದಿಂದಾಗಿ, ಧರ್ಮರಾಜ ಸುರೇಂದ್ರ, ಯಮ ವರುಣಾದಿಗಳಿಗೆ ನಮಸ್ಕರಿಸಿ ಬೇಡಿಕೊಳ್ಳುತ್ತಾನೆ. ತಾವು ಹೆಣದಾಕಾರದಲ್ಲಿ ಕಟ್ಟಿ ಮರದ ಮೇಲಿಟ್ಟಿರುವ ಕೈದುಗಳನ್ನು ಭೀಮನಿಗೆ ಮಾತ್ರ ಕೊಡಬೇಡಿ ಎಂದು. ಪಾರ್ಥನಿಗೆ ಬೇಕಾದರೆ ಕೊಡಿ, ಆದರೆ ಈ ಅಜ್ಞಾತ ವಾಸದಲ್ಲಿ ವಿಗಡ ಭೀಮನಿಗೆ ಮಾತ್ರ ಕೊಡದಿರಿ ಎಂದಾಗ ಭೀಮ ಔಡೊತ್ತಿ ಗರ್ಜಿಸುತ್ತಾನೆ. ಧರ್ಮರಾಯ ತಮ್ಮನನ್ನಪ್ಪಿ ಸಮಾಧಾನ ಪಡಿಸುತ್ತಾನೆ. ಒಂದು ವರುಷದ ಅಜ್ಞಾತವಾಸದ ಅವಧಿಯನ್ನು ಸೈರಣೆಯಿಂದ ಕಳೆಯಬೇಕಾಗಿದೆಯೆಂದು ತಿಳಿ ಹೇಳುತ್ತಾನೆ. ಆದರೂ ಕೀಚಕ ವಧೆ ನಡೆದು, ಪಾಂಡವರ ಇರವು ಪ್ರಪಂಚಕ್ಕೆ ತಿಳಿಯುತ್ತದೆ. ಭೀಮನನ್ನು ಬಿಟ್ಟು ಕೀಚಕನನ್ನು ಕೊಲ್ಲುವಂತಹ ಪರಾಕ್ರಮಿ ಬೇರೆ ಇಲ್ಲ. (ಬಲರಾಮ, ದುರ್ಯೋಧನ ಇವರುಗಳನ್ನು ಹೊರತು ಪಡಿಸಿ) ಕೀಚಕನನ್ನು ಕೊಲ್ಲುವ ಮೊದಲು ಧರ್ಮಜನ ಅನುಮತಿಗಾಗಲೀ, ಕೃಷ್ಣನ ಆಶೀರ್ವಾದಕ್ಕಾಗಲೀ ಕಾಯುವುದಿಲ್ಲ ಭೀಮ.
ಸೈರಂಧ್ರಿಯಾಗಿದ್ದ ದ್ರೌಪದಿಯ ರೂಪಕ್ಕೆ ಮೋಹಿತನಾದ ಕೀಚಕ ಅವಳನ್ನು ಕಾಡುವಾಗ, ಅಜ್ಞಾತವಾಸದಲ್ಲಿರುವ ದ್ರೌಪದಿ ಈ ಅಳಲನ್ನು ಯಾರ ಬಳಿಯಲ್ಲಿ ಹೇಳಿಕೊಳ್ಳಬೇಕು? ಅದೂ ಕೀಚಕನಂತಹ ಪರಾಕ್ರಮಿಯನ್ನು ಎದುರಿಸಬಲ್ಲವರಾರು? ಧರ್ಮರಾಜ ಕಂಕಭಟ್ಟನಾಗಿದ್ದಾನೆ. ಅರ್ಜುನ ಬೃಹನ್ನಳೆಯಾಗಿದ್ದಾನೆ. ನಕುಲ ಸಹದೇವರಿದ್ದರೂ ಯಾರ ಬಳಿಯೂ ಆಯುಧಗಳಿಲ್ಲ. ಪಂಚಪತಿಗಳು ಅರಮನೆಯಲ್ಲಿದ್ದರೂ ಪಾಂಚಾಲಿ ಅಸಹಾಯೆ. ಅವಳ ಮಾತುಗಳಲ್ಲಿ ಈ ಐವರ ಗುಣಗಳ ಮೌಲ್ಯ ನಿರ್ಧಾರ ಹೀಗಿದೆ.
ಯಮ ಸುತಂಗರುಹುವೆನೆ ಧರ್ಮ-
ಕ್ಷಮೆಯ ಗರಹೊಡೆದಿಹುದು ಪಾರ್ಥನು
ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ |
ಭ್ರಮಿತನಾಗಿಹನುಳಿದರಿಬ್ಬರು
ರಮಣರಿವರೀ ನಾಯ ಕೊಲಲ-
ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ || (ವಿರಾಟ ಪರ್ವ 3.33)
ಭೀಮನೇ ಶ್ರೇಷ್ಠನೆಂದು ನಿರ್ಧರಿಸುತ್ತಾಳೆ
ಎಲ್ಲರೊಳು ಕಲಿಭೀಮನೇ ಮಿಡು-
ಕುಳ್ಳ ಗಂಡಸು ಹಾನಿ ಹರಿಬಕೆ
ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು|
ಖುಲ್ಲನಿವನುಪಟಳವನಾತಂ-
ಗೆಲ್ಲವನು ಹೇಳುವೆನು ಬಳಿಕವ-
ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ || (ವಿರಾಟ ಪರ್ವ 3.34)
ಎಂದು ನಿಶ್ಚಯಿಸುತ್ತಾಳೆ ದ್ರೌಪದಿ. ಭೀಮನೊಂದಿಗೆ ಮುಕ್ತವಾಗಿ ಮಾತನಾಡುವ ದ್ರೌಪದಿ ಅಂದು ಕೌರವನ ಸಭೆಯಲ್ಲಿ ತನಗಾದ ಅಪಮಾನವನ್ನು ನೆನಪು ಮಾಡುತ್ತಾಳೆ ಭೀಮನಿಗೆ. ಇಂದು ಕೀಚಕನಿಂದಾಗುತ್ತಿರುವ ಅಪಮಾನವನ್ನು ತಿಳಿಸುತ್ತಾಳೆ. ಕಟಕಿಯಾಡುತ್ತಾಳೆ. ದ್ರೌಪದಿಯ ಮಾತುಗಳಿಂದ ಭೀಮ ಬೇಸರಿಸುವುದಿಲ್ಲ. ತಾನು ಈ ನಪುಂಸಕರೊಡನೆ ಹುಟ್ಟಿದೆನಲ್ಲ ಎಂದು ನೊಂದುಕೊಳ್ಳುತ್ತಾನೆ. ಧರ್ಮ-ಗಿರ್ಮ ತನಗರಿಯದೆನ್ನುತ್ತಾನೆ, ಅರ್ಜುನ, ಧರ್ಮಜ, ನಕುಲ, ಸಹದೇವರನ್ನು ಪ್ರಾರ್ಥಿಸಿ ತನ್ನ ಕಷ್ಟ ಬಗೆಹರಿಸಿಕೊಳ್ಳುವಂತೆ ಹೇಳುತ್ತಾನೆ. ದ್ರೌಪದಿ ಭೀಮನನ್ನು ಕೆರಳಿಸಿ ಕೆರಳಿಸಿ ಕೀಚಕನ ವಧೆಗೆ ಅಣಿಮಾಡುವ ರೀತಿ ಸೊಗಸಾಗಿ ಮೂಡಿ ಬಂದಿದೆ. ಭೀಮ ಕೀಚಕನ ವಧೆಗೆ ನಿಶ್ಚಯಿಸದಿದ್ದಾಗ “ಭೀಮ ಕೊಟ್ಟೈ ತನಗೆ ಸಾವಿನಾಜ್ಞೆಯ” (ವಿರಾಟ ಪರ್ವ 3.65) ಎಂದು ದ್ರೌಪದಿ ಅವನ ಚರಣಕ್ಕೆರಗಿದಾಗ ಭೀಮನ ಪ್ರೀತಿಯ ಕಟ್ಟೆ ಒಡೆಯುತ್ತದೆ. ಅವನ ಪ್ರತಿಕ್ರಿಯೆಯಲ್ಲಿ ಪ್ರೀತಿಯ ಮಹಾಪೂರ ಹರಿಯುತ್ತದೆ.
ಎನಲು ಕಂಬನಿದುಂಬಿದನು ಕಡು-
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ |
ತನು ಪುಳಕವುಬ್ಬರಿಸಿ ಮೆಲ್ಲನೆ
ವನಿತೆಯನು ತೆಗೆದಪ್ಪಿದನು ಕಂ-
ಬನಿಯನೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ || (ವಿರಾಟ ಪರ್ವ 3.66)
ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ |
ಅರಸಿ ಬಿಡುಬಿಡು ಖಾತಿಯನು ವಿ-
ಸ್ತರಿಸಲೇಕೆಮ್ಮಣ್ಣನಾಜ್ಞೆಯ
ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ || (ವಿರಾಟ ಪರ್ವ 3.67)
ಅಣ್ಣ ಧರ್ಮಜ ಮುನಿದರೆ ಅಣ್ಣತನವಿಂದು ಹರಿಯಲಿ, ಉಳಿದ ಸೋದರರು ಕನಲಿದರೆ ಕೈದೋರುವೆನು, ಕೃಷ್ಣ ಅಡ್ಡಬಂದರೆ, ಘನ ಮುರಾರಿಯ ಮೀರುವೆನು” (ವಿರಾಟ ಪರ್ವ 3.69), ಕೀಚಕನನ್ನು ತರಿವೆನು ಎಂದು ದ್ರೌಪದಿಗೆ ಆಶ್ವಾಸನೆ ಕೊಡುತ್ತಾನೆ.
This is the ninth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.