ಸಭಾಪರ್ವದಲ್ಲಿ ದ್ರೌಪದಿ ಅನುಭವಿಸುವ ಅಪಮಾನ ಮನಃಕ್ಲೇಶಗಳು ಮಹಾಭಾರತದ ನಿರ್ದಿಷ್ಟ ಕಾಲಘಟ್ಟದಲ್ಲಿ, ಸಾಮಾನ್ಯ ಮಹಿಳೆಯರು ಅನುಭವಿಸಿರಬಹುದಾದ ದಾರುಣ ಪರಿಸ್ಥಿತಿಯನ್ನು ನಾವು ಊಹಿಸುವಂತೆ ಮಾಡುತ್ತವೆ. ದ್ರೌಪದಿ ಪಾಂಡವರಂತಹ ಮಹಾವೀರರನ್ನು ಗಂಡಂದಿರನ್ನಾಗಿ ಪಡೆದಿದ್ದು, ಅರಮನೆಯಲ್ಲಿ ವಾಸಿಸುತ್ತಿದ್ದ ಮಹಾರಾಣಿ. ಅಂತಹ ಹೆಣ್ಣನ್ನು, ಅದೂ ಅಗ್ನಿಕನ್ಯೆ ಎಂದು ಪ್ರಸಿದ್ಧಳಾಗಿದ್ದವಳನ್ನು ತುಂಬಿದ ರಾಜ ಸಭೆಗೆ ಎಳೆದುತಂದು ವಸ್ತ್ರಾಪಹರಣದ ತನಕ ಹೋದರೆಂದರೆ, ಇದೆಂಥ ಶಿಷ್ಟ ಸಮಾಜ? ಅಪಮಾನ ಮಾಡಿದವರು, ಶಸ್ತ್ರಾಸ್ತ್ರಗಳು, ಶಾಸ್ತ್ರಗಳು ಮುಂತಾದ ಸಕಲ ವಿದ್ಯೆಗಳಲ್ಲಿಯೂ ಪರಿಣತರಾಗಿದ್ದು, ನಾಗರೀಕಸಮಾಜದ ಪ್ರತಿನಿಧಿಗಳಾಗಿದ್ದ ಅರಸುಗಳು. ಸಮಾಜವೊಂದರ ಅತ್ಯುನ್ನತ ಸ್ಥಾನದ ಪ್ರತಿನಿಧಿಗಳಾಗಿದ್ದವರು ಒಂದು ಹೆಣ್ಣಿನ ಬಗೆಗೆ ಈ ಹೇಯಕೃತ್ಯಗಳನ್ನು ಕೈಗೊಂಡರೆಂದರೆ – ಅದೂ ತಮ್ಮ ಅತ್ತಿಗೆಯ ಸ್ಥಾನದಲ್ಲಿರುವ ಹೆಣ್ಣಿನೊಡನೆ - ಸಾಮಾನ್ಯ ಹೆಣ್ಣಿನ ಪರಿಸ್ಥಿತಿ ಹೇಗಿದ್ದಿರಬಹುದು ಆ ಸಮಾಜದಲ್ಲಿ ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೆ, ಒಂದು ಹೆಣ್ಣಿನೊಡನೆ ಮುಯ್ಯಿ ತೀರಿಸಿಕೊಳ್ಳುವಾಗ, ಅವಳಿಗೆ ಪ್ರತೀಕಾರ ಮಾಡಬೇಕಾದಾಗ, ಮಾನಭಂಗ, ವಿವಸ್ತ್ರಗೊಳಿಸುವುದು ಮುಂತಾದ ಹೇಯ ಕೃತ್ಯಗಳನ್ನೇ ಎಸಗಬೇಕೆಂಬ ಕೀಳು ಪ್ರವೃತ್ತಿ ಅನೇಕ ಗಂಡುಗಳ ಮನಸ್ಸಿನಲ್ಲಿ, ಪ್ರಾಚೀನಕಾಲದಿಂದಲೂ ಉಳಿದು ಬಂದಿರುವುದಕ್ಕೆ ಸಾಕ್ಷಿಯಾಗಿದೆ ಈ ಘಟನೆ. ದ್ರೌಪದಿ ಮತ್ತು ಅವಳ ಸಖಿಯರು, ದುರ್ಯೋಧನನ ಗೊಂದಲಗಳನ್ನು ಕಂಡು ಕಿಲಕಿಲನಗುವುದು ಹೆಣ್ಣಿನ ಸಹಜ ಸ್ವಭಾವವನ್ನು ಪರಿಚಯಿಸುತ್ತದೆ. ಇದರಿಂದ ಅಪಮಾನಿತನಾದ ದುರ್ಯೋಧನ ಅಪಮಾನಿತಗೊಂಡ, ಭಂಗಿತನಾದ ಪುರುಷನ ಅಹಂಗೊಂದು ನಿದರ್ಶನ. ಅವನ ಪೆಟ್ಟುತಿಂದ ಅಹಂಕಾರ, ಅಪಮಾನ, ಕೇವಲ ದ್ರೌಪದಿಯನ್ನು ಕಂಡು ನಗುವುದರಲ್ಲಿ, ಛೇಡಿಸಿ ಮಾತನಾಡುವುದರಲ್ಲಿ ತೃಪ್ತವಾಗುವುದಂಥದಲ್ಲ. ತನಗೆ ತುಂಬು ಸಭೆಯಲ್ಲಾದ ಅಪಮಾನದ ಪ್ರತೀಕಾರವನ್ನು, ತುಂಬಿದ ಸಭೆಯಲ್ಲೇ ತೀರಿಸಿಕೊಳ್ಳುವ ಕುಕೃತ್ಯದ ಯೋಜನೆ ಮಾಡುತ್ತಾನೆ. ಈ ವಿಷಯದಲ್ಲಿ ದ್ವಾಪರ ಯುಗಕ್ಕೂ ಕಲಿಯುಗಕ್ಕೂ ಅಂತಹ ಅಂತರವೇನೂ ಕಂಡುಬರುವುದಿಲ್ಲ. ಕೆನ್ನೆಗೆ ಹೊಡೆದವನಿಗೆ, ಮತ್ತೆ ಕೆನ್ನೆಗೆ ಹೊಡೆದು ಸಮಾಧಾನ ಕಾಣುವ ಪ್ರತೀಕಾರದ ಭಾವನೆಯಲ್ಲ ದುರ್ಯೋಧನನದು. ಕೆನ್ನೆಗೆ ಹೊಡೆದವನನ್ನು ಹಿಡಿದು ಬೆತ್ತಲೆ ಮಾಡಿ ಮೈಯ್ಯೆಲ್ಲ ಬಾಸುಂಡೆ ಬರಿಸಿದರೂ ಸಮಾಧಾನವಾಗದಂತಹ ಉಗ್ರಪ್ರತೀಕಾರ ಮಾಡಬೇಕೆನ್ನುವ ಪ್ರವೃತ್ತಿ ಅವನದು. ಆತನ ಮಾನಸಿಕ ಎರಕದಲ್ಲಿನ ಇರುವ ಎಲ್ಲ ಸಾತ್ತ್ವಿಕ ಗುಣಗಳನ್ನೂ ನುಂಗಿಬಿಡುವಂತಹ ತಾಮಸ – ಕೆಡುಕಿನ ಅಂಶ ಬೆಸೆದು ಕೊಂಡಿರುವುದು ಅರಿವಾಗುತ್ತದೆ. ದುರ್ಯೋಧನ ದ್ರೌಪದಿಯೊಡನೆ ವರ್ತಿಸುವ ರೀತಿ, ಹಲವು ಪುರುಷರ ಮನಸ್ಸಿನಲ್ಲಿರುವ ಹೆಣ್ಣಿನ ಬಗೆಗಿನ ಪ್ರತೀಕಾರದ ಒಂದು ಹೇಯಮುಖದ ಪರಿಚಯ ಮಾಡಿಸುತ್ತದೆ. ಪುರುಷ, ಪುರುಷನ ಮೇಲೆ ಪ್ರತೀಕಾರ ತೀರಿಸಿಕೊಳ್ಳುವಾಗಲೂ, ಆ ಪುರುಷನಿಗೆ ಸೇರಿದ ಹೆಣ್ಣನ್ನು ಅಪಮಾನಗೊಳಿಸುವುದೂ ಪ್ರತೀಕಾರದ ಒಂದು ಅಂಗವೇ ಆಗಿರುತ್ತದೆ. ಇಂತಹ ನಡವಳಿಕೆ, ನಾಗರೀಕ ಹಾಗೂ ಅನಾಗರೀಕ ಸಮಾಜಗಳಲ್ಲಿ ಅಂದಿಗೂ, ಇಂದಿಗೂ ಪ್ರಸ್ತುತವಾಗಿರುವುದು ಕಂಡಾಗ ಮನಸ್ಸು ಖಿನ್ನವಾಗುತ್ತದೆ. ದುರ್ಯೋಧನ ದುಶ್ಯಾಸನರ ಕೃತ್ಯಗಳಲ್ಲಿ, ಮಾತುಗಳಲ್ಲಿ ನಾವು ಕಾಣುವುದು, ದ್ವೇಷ, ಹಗೆತನ, ಮುಂತಾದ ಮೂಲಭೂತ ಭಾವನೆಗಳ ಅತ್ಯಂತ ಹೇಯ ಅಭಿವ್ಯಕ್ತಿಯನ್ನು.
ಸಭಾಪರ್ವದ ಘಟನೆಗಳು ಭಾರತೀಯ ರಾಜಕೀಯ ಇತಿಹಾಸದ ಅನಿರ್ದಿಷ್ಟ ಕಾಲದಲ್ಲಿದ್ದಿರಬಹುದಾದ – ಚಿತ್ರಣವನ್ನು ಸಹ ನೀಡುತ್ತವೆ. ಯಾವ ಕಾರಣದಿಂದಲೇ ಕೈಗೊಂಡಿದ್ದರೂ ರಾಜಸೂಯಯಾಗ ಅಂದಿನ ಅರಸುಗಳ ಮಹತ್ವಾಕಾಂಕ್ಷೆಯ ಕುರುಹಾಗುತ್ತದೆ. ತನ್ನ ತಂದೆ ಪಾಂಡುಮಹಾರಾಜನನ್ನು “ಸುರರಲಿ ಸುಪ್ರತಿಷ್ಠನೆನಿಸಲು” (ಸಭಾ ಪರ್ವ 2.04) ಯಾಗ ಕೈಗೊಳ್ಳುತ್ತಾನಾದರೂ, ಯಾಗ ಮಾಡಬೇಕಾದರೆ ಇಡೀ ಭರತಖಂಡದ ಅರಸುಗಳಿಂದ ಕಪ್ಪಕಾಣಿಕೆ, ಧನಕನಕಗಳನ್ನು ಸ್ನೇಹದಿಂದ ಅಥವಾ ಯುದ್ಧದಿಂದ, ಸಂಪಾದಿಸಿ ತರಬೇಕೆಂಬ ನಿಯಮವಿರುತ್ತದೆ. ಭೀಮ, ಅರ್ಜುನ, ನಕುಲ, ಸಹದೇವರು ಭಾರತದ ಮೂಲೆ ಮೂಲೆಗೆ ಹೋಗಿ, ಭರತಖಂಡದ ಅರಸುಗಳಿಂದ ಸಂಪಾದಿಸಿ ತರುವ ಧನ, ಕನಕ, ವಸ್ತು, ವಾಹನಗಳ ರಾಶಿಯನ್ನು ನೋಡುವಾಗ ಇದೂ ಒಂದು ವಿಧದ ದಂಡಯಾತ್ರೆಯಲ್ಲವೇ ಎನಿಸುವುದು. ಜೊತೆಗೇ ರಾಜರಲ್ಲಿ ಅಥವಾ ಉನ್ನತ ಅಧಿಕಾರವಿರುವವರಲ್ಲಿ, ತಮ್ಮ ಆಧಿಪತ್ಯವನ್ನು ಎಲ್ಲ ಸಣ್ಣ ಪುಟ್ಟ ಮತ್ತು ಇತರ ರಾಜರೆಲ್ಲರೂ ಒಪ್ಪಿನಡೆಯಬೇಕೆಂಬ ಪ್ರವೃತ್ತಿಯ ದ್ಯೋತಕವೂ ಅಹುದೆನಿಸುತ್ತದೆ. ಧರ್ಮಜನ ರಾಜಸೂಯಯಾಗದಿಂದಾಗಿ, ಭಾರತದ ಮೂಲೆಮೂಲೆಯಲ್ಲಿ ರಾಜ್ಯಕಟ್ಟಿಕೊಂಡಿದ್ದ ಅಸಂಖ್ಯ ರಾಜರುಗಳು, ಅವರ ಸಣ್ಣ ಪುಟ್ಟ ರಾಜ್ಯಗಳು ಮತ್ತು ಆಡಳಿತಗಳಲ್ಲಿ ಹಂಚಿಹೋಗಿದ್ದ ಭಾರತದ ರಾಜಕೀಯ ಇತಿಹಾಸದ ಪರಿಚಯವಾಗುತ್ತದೆ.
ಸಭಾಪರ್ವದಲ್ಲಿ ಕೃತ್ರಿಮದ್ಯೂತದಲ್ಲಿ ಧರ್ಮರಾಯ ಎಲ್ಲವನ್ನೂ ಸೋತು ಕಳೆದುಕೊಂಡ ಮೇಲೆ ದುರ್ಯೋಧನ ಸಭ್ಯತೆಯ ಎಲ್ಲೆಮೀರಿ ವರ್ತಿಸುತ್ತಾನೆ. ಧರ್ಮಜನ ತೋಳುಗಳನ್ನು ಸುಡುತ್ತೇನೆಂದ ಭೀಮನನ್ನು ಅರ್ಜುನ ತಡೆಯುತ್ತಾನೆ. ಆಗ ಭೀಮ ದ್ರೌಪದಿಯ ಭಂಗ ನೋಡಿಯೂ ಸುಮ್ಮನಿರುವ ತನ್ನ ತೋಳುಗಳನ್ನೇ ಸುಟ್ಟುಕೊಳ್ಳುವೆನೆನ್ನುತ್ತಾನೆ. ಇಂಥ ಭೀಮಸೇನನೆದುರಿಗೆ ಪ್ರತೀಕಾರ ವಿಷದ ನಂಜೇರಿದಂತೆ, ಅಸಭ್ಯತೆಯ ಪ್ರಮಾಣವೂ ಏರಿದ ದುರ್ಯೋಧನ ದ್ರೌಪದಿಯನ್ನು ಕುರಿತು
ಎಲಗೆ, ನಿನ್ನವರೇನು ಮಾಡುವ-
ರೊಲೆಯೊಳಡಗಿದ ಕೆಂಡವಿವರ-
ಗ್ಗಳಿಕೆ ನಂದಿದುದೆನುತ ಮುಂಜೆರಗೆತ್ತಿ ಮಾನಿನಿಗೆ |
ಖಳನು ತೊಡೆಗಳ ತೋರಿಸಿದೊಡತಿ
ಮುಳಿದು ಕೊಟ್ಟಳು ಶಾಪವನು ನಿ-
ನ್ನಳಿವು ತೊಡೆಯಲಿ ಮುಗಿವುದೆಂದಳು ಮುಗುದೆ ಖಾತಿಯಲಿ || (ಸಭಾ ಪರ್ವ 15.30)
ಆಗ ಇಡೀ ಸಭೆಯಲ್ಲಿ ದುರ್ಯೋಧನಾದಿ ದುಷ್ಟಚತುಷ್ಟಯದ ವಿರುದ್ಧ ಸಿಡಿಲಿನಂತೆ ಆರ್ಭಟಿಸುವವನು ಭೀಮನೊಬ್ಬನೆ. ಇದುವರೆಗೂ ಅವನ ರೋಷವನ್ನು ತಡೆಹಿಡಿದಿದ್ದ ಧರ್ಮಜನ ಧರ್ಮದಂಕುಶವನ್ನು ಕಿತ್ತೊಗೆದು ಪ್ರತಿಭಟಿಸುವ ಭೀಮನ ಪೌರುಷದ, ರುದ್ರಕೋಪದ ಅಭಿವ್ಯಕ್ತಿಗೆ ಕುಮಾರವ್ಯಾಸ ಉಪಯೋಗಿಸುವ ಪ್ರತಿಮೆಗಳ ರಭಸ ಅತ್ಯಂತ ಪರಿಣಾಮಕಾರಿಯಾಗಿವೆ.
ಕಡಲ ತೆರೆಗಳ ತರುಬಿ ತುಡುಕುವ
ವಡಬನಂದದಿ ಮೇಘಪಟಲವ-
ನೊಡೆದು ಸೂಸುವ ಸಿಡಿಲಿನಂದದಿ ಸಭೆಯೊಳಡಹಾಯ್ದು |
ಕುಡಿ ಕುಠಾರನ ರಕುತವನು ತಡೆ-
ಗಡಿ ಸುಯೋಧನನೂರುಗಳನಿ-
ಮ್ಮಡಿಸಿ ಮುನಿಯಲಿ ಧರ್ಮಸುತನೆನುತೆದ್ದನಾ ಭೀಮ || (ಸಭಾ ಪರ್ವ 15.31)
ಭೀಮನ ಈ ಸಿಡಿಲಿನ ಆರ್ಭಟದಿಂದ ಸಭೆಯಲ್ಲಿ ಆದ ಪರಿಣಾಮವಾದರೂ ಎಂತಹುದು?
ಹೆದರು ಹೊಕ್ಕುದು ಸಭೆಗೆ ಕೌರವ-
ನೆದೆ ಬಿರಿದುದಾಸ್ಥಾನ ಜಲನಿಧಿ
ಕದಡಿತುಕ್ಕಿದ ಬೆರಗಿನಲಿ ಬೆಳ್ಳಾದನವನೀಶ |
ಹದನಹುದು ಹಾಯೆನುತಲಿದ್ದರು
ವಿದುರ ಭೀಷ್ಮ ದ್ರೋಣರಿತ್ತಲು
ಕೆದರು ಕೇಶದ ಕಾಂತೆ ಹುದಿದಳು ಹರುಷ ಪುಳಕದಲಿ || (ಸಭಾ ಪರ್ವ 15.32)
ಭೀಮನ ಒಂದು ಸಿಂಹನಾದಕ್ಕೆ, ಸಭೆಯಲ್ಲಿದ್ದ ವ್ಯಕ್ತಿಗಳ ಮೇಲಾದ ವಿಭಿನ್ನ ಪರಿಣಾಮಗಳನ್ನು ವರ್ಣಿಸುತ್ತಾನೆ ಕುಮಾರವ್ಯಾಸ. ದ್ರೌಪದಿಗೆ ಮಾತ್ರ ಭೀಮನ ಗರ್ಜನೆಯಿಂದ ಹರ್ಷಪುಳಕಗಳೇಳುತ್ತವೆ. ಕಬ್ಬಿನ ತೋಟದ ಮಾಲಿಕ ಬಂದುದನ್ನು ಕಂಡೊಡನೆ ಬಡನರಿಗಳು ಓಡಿಹೋಗುವಂತೆ, ಭೀಮನ ಗರ್ಜನೆಯನ್ನು ಕೇಳಿದ ದುಶ್ಶಾಸನ, ದ್ರೌಪದಿಯನ್ನು ಹಿಡಿದೆಳೆಯುತ್ತಿದ್ದವನು, ತನ್ನ ಅಣ್ಣನ ಪಕ್ಕಕ್ಕೆ ಹೋಗಿ ನಿಂತನಂತೆ! ಭೀಮ ತನ್ನ ಮಡದಿಯನ್ನು ಕುರಿತು, ಅಣ್ಣನಾಜ್ಞೆಯ ತಡೆಯಿಂದ ‘ನುಗ್ಗಾಯ್ತು’ ನೀನಿನ್ನು ಹೋಗು ಎಂದು ಹೇಳುತ್ತಾನಾದರೂ, ಅವನ ಕೋಪಾಗ್ನಿ ತಣ್ಣಗಾಗುವುದಿಲ್ಲ, ಮತ್ತೆ ಗುಡುಗುತ್ತಾನೆ.
ಉರಿವ ಕೋಪಾಗ್ನಿಯಲಿ ಕರ್ಣನ
ಶಿರದಭಾಂಡದಲಿವನ ನೊರೆ ನೆ-
ತ್ತರಿನಲಿವನಗ್ರಜನ ಕೊಬ್ಬಿದ ನೆಣನ ಕೊಯ್ಕೊಯ್ದು |
ದುರುಳ ಶಕುನಿಯ ಕಾಳಿಜದೊಳೊಡೆ-
ವೆರೆಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳೆಂದನಾಭೀಮ || (ಸಭಾ ಪರ್ವ 15.34)
ಭೀಮನ ಕೋಪದ ಒಂದು ಹೊಡೆತದಲ್ಲಿ ದುಷ್ಟಚತುಷ್ಟಯವನ್ನು ನಿರ್ಮೂಲ ಮಾಡಿಸುವ ಯೋಜನಾಬದ್ಧ ಕೃತ್ಯವೆನ್ನುವಂತೆ, ಒಂದೇ ಪದ್ಯದಲ್ಲಿ ಮೂಡಿಸಿದ್ದಾನೆ ಕುಮಾರವ್ಯಾಸ. ಕರ್ಣನ ಶಿರವೇ ಭಾಂಡ, ಅದರಲ್ಲಿ ದುಶ್ಯಾಸನನ ನೆತ್ತರು, ದುರ್ಯೋಧನನ ನೆಣನ ಕೊಯ್ದುಕೊಯ್ದು, ಶಕುನಿಯ ಕಾಳಿಜದೊಡನೆ ಬೆರೆಸಿ ಮಹೋಗ್ರಭೂತದ ಗುಂಪಿಗೆ ಉಣಲಿಕ್ಕುವುದಾಗಿ ಹೇಳಿ, “ಧರ್ಮಜನ ಧರ್ಮದ ಡೊಂಬು” (ಸಭಾ ಪರ್ವ 15.35), “ಮುದುಗುರುಡನಿಕ್ಕಿದ ನಂಬುಗೆಯ ವಿಷ” (ಸಭಾ ಪರ್ವ 15.35) ಎರಡನ್ನೂ ಟೀಕಿಸುತ್ತಾ ದ್ರೌಪದಿಯ ಕುರುಳು ನೇವರಿಸುವ, ಸಂತೈಸುವ ಭೀಮ ರೌದ್ರ ಮತ್ತು ಕೋಮಲತೆಗಳು ಒಮ್ಮೆಗೇ ಹೊರಹೊಮ್ಮುವ ವೈಶಿಷ್ಟ್ಯದಿಂದ ಮೆರೆಯುತ್ತಾನೆ. ಅರ್ಜುನನ ಸಂಯಮದ ಮಾತುಗಳಿಗೆ ಮಣಿಯದ ಭೀಮ, ತನ್ನ ಗದೆಗೆ “…ದುರ್ಯೋಧನನ ತೊಡೆಗಳಿಗೆ ವಾಣಿಯವು, ದುಶ್ಯಾಸನನ ತನಿಶೋಣಿತವ ತಾ ಕುಡಿಯದಿದ್ದರೆ ನಿನ್ನಾಣೆ…” (ಸಭಾ ಪರ್ವ 15.37) ಎಂದು ಪ್ರತಿಜ್ಞೆ ಮಡುತ್ತಾನೆ. ಅಷ್ಟದಿಕ್ಪಾಲಕರನ್ನು ಹೆಸರಿಸಿ ಅವರ ಸಾಕ್ಷಿಯಾಗಿ ಭಾಷೆ ಕೊಡುತ್ತಾನೆ. ಇದರಿಂದ ಸ್ಪೂರ್ತಿಗೊಂಡ ಅರ್ಜುನ ತಾನು ಕರ್ಣನನ್ನು ಕೊಲ್ಲುವುದಾಗಿ ದೇವಾಸುರರನ್ನು ಹೆಸರಿಸಿ ಪ್ರತಿಜ್ಞೆ ಮಾಡುತ್ತಾನೆ. ಸಹದೇವ ತಾನು ಶಕುನಿಯನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಹೀಗೆ ಭೀಮ ತನ್ನ ಸ್ವಂತ ನಿರ್ಧಾರಗಳಿಂದ, ಉಳಿದವರಲ್ಲಿಯೂ ಧೈರ್ಯ, ಸಾಹಸ, ನಿರ್ಧಾರಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಇವರ ಪ್ರತಿಜ್ಞೆಗಳ ನಂತರ, ತತ್ಕ್ಷಣದಲ್ಲಿಯೇ, ಅನೇಕ ಪ್ರಾಕೃತಿಕ ಉತ್ಪಾತಗಳಾದವೆನ್ನುತ್ತಾನೆ ಕುಮಾರವ್ಯಾಸ. “ಉಗುಳಿದವು ಕುಳುಗಿಡಿಗಳು, ಅಭ್ರದಿ ಧೂಮಕೇತುಗಳು ನೆಗಳಿದವು, ಬಿರುಗಾಳಿ ಗಿರಿಗಳ ಮಗುಚಿ ಮುರಿದವು, ತೋರಣದಲುರಿ ತಳಿತು ರಾಜದ್ವಾರ ಹೊಗೆದುದು, ನಡುಗಿತಿಳೆ, ನಡುಹಗಲು ಕತ್ತಲೆಯಾವರಿಸಿತಾಕಾಶದಲಿ . . .” (ಸಭಾ ಪರ್ವ 15.41-43) ಇದುವರೆಗೂ ದುರ್ಯೋಧನನ ಅಸಭ್ಯವರ್ತನೆಯನ್ನೂ ಅನ್ಯಾಯವನ್ನೂ ಪ್ರತಿಭಟಿಸಲಾರದೇ ಊಳಿಗದ ಹಂಗಿನ ಗರ ಹಿಡಿದಿದ್ದ ಸಭೆಗೆ ಈಗ ಭೀತಿಯ ಗರಬಡಿದು ಸೆಡೆದು ಕೂಡುತ್ತದೆ.
ಈ ಪ್ರಾಕೃತಿಕ ಉತ್ಪಾತಗಳು, ಭೂಮ್ಯಾಕಾಶದಲ್ಲಿ, ಪುರದಲ್ಲಿ, ಸೈನಿಕರ ಆಯುಧಗಳಲ್ಲಿ ಕಂಡುಬಂದಾಗ, ವಿದುರ, ಕೃಪ, ದ್ರೋಣರು ಒತ್ತಾಯಿಸಿದ ನಂತರ, ಧೃತರಾಷ್ಟ್ರ ದ್ರೌಪದಿಯನ್ನು ಸಾಂತ್ವನಗೊಳಿಸಿ, ಅವಳು ಬೇಡಿದ ವರದಂತೆ ಪತಿಗಳೈವರ ದಾಸ್ಯವನ್ನು ಕಳೆಯುವಂತೆಯೂ, ವೃಕೋದರ, ನಕುಲ, ಸಹದೇವರಿಗೆ ಶಸ್ತ್ರಾಸ್ತ್ರ ಗಜ ತುರುಗಗಳನ್ನೀಯುವಂತೆಯೂ, (ತಿಳಿಸುತ್ತಾನೆ) ಅಪ್ಪಣೆ ಮಾಡುತ್ತಾನೆ. ದ್ರೌಪದಿಗೆ ಮಡಿ ವಸ್ತ್ರಗಳನ್ನಿಟ್ಟು ಪಾಂಡವರೊಡನೆ ಇಂದ್ರಪ್ರಸ್ಥಕ್ಕೆ ಕಳುಹಿಸುವ ಏರ್ಪಾಟುಮಾಡುತ್ತಾನೆ. ಆದರೆ ದುರ್ಯೋಧನನ ಉದ್ದೇಶ ಈಡೇರುವುದಿಲ್ಲ. ದುರ್ಯೋಧನನ ಇಚ್ಛೆಯಂತೆ, ಧೃತರಾಷ್ಟ್ರ ಮತ್ತೆ ದ್ಯೂತಕ್ಕೆ ವೀಳೆಯ ಕೊಟ್ಟು ಕರೆ ಕಳುಹಿಸುತ್ತಾನೆ. ಇದು ಇಬ್ಬರೂ ಅರಸುಗಳು “ಹೃದಯ ಶುದ್ಧಿಯೊಳಾಡುವ” (ಸಭಾ ಪರ್ವ 16.30) ದ್ಯೂತವಂತೆ. ಈ ದ್ಯೂತದ ಕರೆಗೆ ಭೀಮ ಹೀಗೆ ಪ್ರತಿಕ್ರಿಯಿಸುತ್ತಾನೆ. “ಕರೆಸುವವರು ಭಂಡರೋ ಮೇ | ಣ್ಮರಳಿ ಹೋಹರು ಭಂಡರೋ” (ಸಭಾ ಪರ್ವ 16.31) ಬೊಪ್ಪನ ಕರೆಯನ್ನು ಮನ್ನಿಸಿ (ಸಭಾ ಪರ್ವ 16.32) ಧರ್ಮಜ ಮತ್ತೆ ದುರ್ಯೋಧನನೊಂದಿಗೆ ಜೂಜಾಡುತ್ತಾನೆ. ಒಂದೇ ಹಲಗೆಯ ಆಟ. ಸೋತವರು ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ, ಅಜ್ಞಾತವಾಸ ಮುಗಿಯುವ ಮೊದಲೇ ಸುಳಿವು ದೊರೆತರೆ ಮತ್ತೆ ಹನ್ನೆರಡು ವರ್ಷ ವನವಾಸ, ಅಜ್ಞಾತವಾಸ ಎಂಬ ವಿಚಿತ್ರ ಪಣವಿಡುತ್ತಾನೆ ದುರ್ಯೋಧನ (ಸಭಾ ಪರ್ವ 16.21). ಈ ಮರುಜೂಜಿನಿಂದಾಗಿ ಪಾಂಡವರು ಮತ್ತೆ ಕೃಷ್ಣಾಜಿನ ಹೊದೆದು, ದ್ರೌಪದಿ ಬಿಚ್ಚೋಲೆ ಗೌರಮ್ಮನಾಗಿ, ನಿಲ್ಲುತ್ತಾರೆ. ಈ ಐವರು ಅರಸು ಕುಮಾರರೂ, ಮಹಾರಾಣಿ ದ್ರೌಪದಿ, ಕಾಲು ನಡಿಗೆಯಲ್ಲಿ ನಗರದ ರಸ್ತೆಯಲ್ಲಿ ಬರುತ್ತಿದ್ದರೆ, ಪುರಜನರು ವಿಧಿಯಾಟದ ಬಗೆಗೆ ಉದ್ಗಾರ ಹೊರಡಿಸುತ್ತಿದ್ದುದನ್ನೂ ಮತ್ತು ಅದರ ಪ್ರತಿಕ್ರಿಯೆಯ ಸಣ್ಣ ಸಣ್ಣ ವಿವರಗಳನ್ನೂ, ಕುತೂಹಲವನ್ನೂ ಸಹಜವಾಗಿ, ವಿವರವಾಗಿ ಚಿತ್ರಿಸಿದ್ದಾನೆ ಕುಮಾರವ್ಯಾಸ. ಇಂದ್ರಪ್ರಸ್ಥದ ಸಂಪತ್ತು, ಗಜ, ತುರುಗ, ರಥ ದಾಸದಾಸಿಯರೆಲ್ಲರನ್ನೂ ಸಹ, ಕೌರವನ ಹಾಗೂ ಅವನ ಸಂಬಂಧಿಕರಿಗೆ ಹಸ್ತಾಂತರಿಸಿ, ಎಲ್ಲವನ್ನೂ ಕುರುರಾಜ ಮುದ್ರೆಗೊಳಪಡಿಸುವ ಅಧಿಕಾರ ಹಸ್ತಾಂತರವನ್ನು ಸಹ ನಿಖರವಾಗಿ ವಿವರಿಸಿದ್ದಾನೆ ಕುಮಾರವ್ಯಾಸ.
ವನವಾಸಕ್ಕೆ ಹೊರಟಿರುವ ಪಾಂಡವರನ್ನು ಛೇಡಿಸುತ್ತಾ ದುಶ್ಯಾಸನ ಭೀಮನ ಹಿಂದೆ ಬಂದಾಗ ಭೀಮ ರೋಷಾಯುಕ್ತನಾದರೂ, ಧರ್ಮಜನ ಆಜ್ಞೆಗೆ ತಲೆಬಾಗಿ ಗದೆಯನ್ನು ಹಿಂದಕ್ಕೆ ತಿರುಗಿಸುತ್ತಾನೆ. ತನ್ನ ತಮ್ಮಂದಿರ ಮೇಲಿನ ಧರ್ಮಜನ ಈ ಗಾರುಡಿ ನಿಜಕ್ಕೂ ಆಶ್ಚರ್ಯಕರ.
ಅಬಲೆ, ದುರ್ಬಲೆಯೆಂದು ದುಶ್ಯಾಸನನಿಂದ ಸಭೆಯಲ್ಲಿ ಎಳೆದಾಡಿಸಿಕೊಂಡು ದುರ್ಯೋಧನನಿಂದ ಅಪಮಾನಕ್ಕೊಳಗಾದ ದ್ರೌಪದಿಯ ಧರ್ಮಸೂಕ್ಷ್ಮದ ಪ್ರಶ್ನೆಗೆ ಆ ಸಭೆಯಲ್ಲಿದ್ದ ವಯೋವೃದ್ಧ, ಜ್ಞಾನವೃದ್ಧರಾಗಿದ್ದ ಭೀಷ್ಮಾದಿಗಳಾರೂ ಉತ್ತರ ಕೊಡದಿದ್ದುದು ವೈಶಿಷ್ಟ್ಯ. ದ್ರೌಪದಿಯ ಪ್ರಶ್ನೆ, ಅತ್ಯಂತ ಸಹಜವಾದ ನ್ಯಾಯಬದ್ಧವಾದ ಪ್ರಶ್ನೆ “ತನ್ನನ್ನು ತಾನು ಸೋತಬಳಿಕ, ಪತ್ನಿಯನ್ನು ಪಣವೊಡ್ಡಿ ಸೋತರೆ ಸಲುವುದೇ?” (ಸಭಾ ಪರ್ವ 14.57) ಸಭೆ ಉತ್ತರಿಸುವುದಿಲ್ಲ. ಪ್ರತೀಕಾರ, ಸ್ಪರ್ಧೆ, ಕುತಂತ್ರಗಳ ನೆಲೆಗಟ್ಟಿನಲ್ಲಿ ನಿರ್ಮಿತವಾಗಿರುವ ಆ ಸಭೆಗೆ ಧಾರ್ಮಿಕ ನೆಲೆಗಟ್ಟಿನ ಪ್ರಶ್ನೆಗೆ ಉತ್ತರಿಸುವ ಶಕ್ತಿ ಇರುವುದಿಲ್ಲ. ಅಗ್ನಿಕನ್ಯೆ ದ್ರೌಪದಿಗೆ ಶಾಪಕೊಡುವ ಶಕ್ತಿ ಇರುವುದಾದರೂ, ಶಪಿಸಿ, ಅವಳು ಧರ್ಮರಾಜನ ಧರ್ಮಕ್ಕೆ ಹಾನಿಮಾಡಲು ಇಚ್ಛಿಸುವುದಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲವಳಾಗಿದ್ದರೂ ಕೃಷ್ಣ ಕರುಣಿಯ ಮೊರೆ ಹೋಗುತ್ತಾಳೆ.
‘ಸಭಾಪರ್ವ’ ಭೀಮನ ವ್ಯಕ್ತಿತ್ವವನ್ನು, ವೀರಾವೇಶದ ಸಂಯಮವನ್ನು ಚಿತ್ರಿಸುವುದರೊಂದಿಗೆ, ಕಥನ ಕ್ರಿಯೆಯ ದೃಷ್ಟಿಯಿಂದ, ಕಾವ್ಯ ರಸಭಾವಗಳ ಅಭಿವ್ಯಕ್ತಿಯಿಂದಲೂ ಪರಿಣಾಮಕಾರಿಯಾಗಿದೆ. ಪಾಂಡವರು ಸುಖ-ಸಿರಿಯ ಸಂಭ್ರಮದಲ್ಲಿದ್ದು ಕೀರ್ತಿಯ ಔನ್ನತ್ಯ ಸಾಧಿಸಿ, ರಾಜಸೂಯಯಾಗದಿಂದಾಗಿ ಭರತಖಂಡದಲ್ಲಿ ಅತಿ ಪ್ರಸಿದ್ಧರಾಗುವ ಘಟನೆಯಿಂದ ಆರಂಭವಾದ ಸಭಾಪರ್ವ, ಈ ವಿಖ್ಯಾತರ, ವಿಧಿವಿಡಂಬನ ಹಾಗೂ ಸ್ವಯಂಕೃತಕರ್ಮಗಳಿಂದಾಗಿ ವನವಾಸಿಗಳಾಗಬೇಕಾದ ದುರಂತ ಸ್ಥಿತಿಯಲ್ಲಿ ಮುಕ್ತಾಯವಾಗುತ್ತದೆ. ಇದಿಷ್ಟು ಘಟನೆಗಳೇ ದುರಂತನಾಟಕವೊಂದರ ವಸ್ತುವಾಗುವಂತಿದೆ. ಕಥಾನಕದ ವಿಭಿನ್ನಕ್ರಿಯೆಗಳು, ತ್ವರಿತಗತಿಯಲ್ಲಿ ನಡೆದು, ಶಾಂತರಸವೊಂದನ್ನುಳಿದು ಮಿಕ್ಕೆಲ್ಲ ರಸಭಾವಗಳನ್ನೂ ಉಕ್ಕಿಸುತ್ತಾ ನಮ್ಮ ಅಂತರಂಗವನ್ನು ವಿವಿಧರಸಗಳ ಉಯ್ಯಾಲೆಯಲ್ಲಿ ಜೀಕಿಸುತ್ತಾನೆ ಕುಮಾರವ್ಯಾಸ. ನಿರೂಪಣಾತಂತ್ರವಿನ್ಯಾಸದಲ್ಲಿಯೂ ಕುಮಾರವ್ಯಾಸ ಇಲ್ಲಿ ಪರಿಣಾಮಕಾರಿಯಾಗುತ್ತಾನೆ. ದುರ್ಯೋಧನ ಇಂದ್ರಪ್ರಸ್ಥದ ಸಭಾಭವನದಲ್ಲಿ ಅನುಭವಿಸಿದ ಪರಿಭವವನ್ನು ಅವನಿಂದಲೇ ಧೃತರಾಷ್ಟ್ರನಿಗೆ ಹೇಳಿಸುವುದು, ರಾಜಸೂಯಯಾಗದಲ್ಲಿ ಅಗ್ರಪೂಜೆಗೆ ಆಯ್ಕೆಯಾದ ಸಂದರ್ಭದಲ್ಲಿ ಕೃಷ್ಣನಿಂದ ಶಿಶುಪಾಲನ ಪೂರ್ವ ವೃತ್ತಾಂತ ತಿಳಿಸುವುದು, ಮುಂತಾದವು ಪ್ರಭಾವಶಾಲಿಯಾಗಿ ಮೂಡಿಬಂದಿವೆ.
This is the eighth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.