೨. ವಿಷಮಪಾದದ ಉತ್ತರಾರ್ಧದಲ್ಲಿ ಲಘುಬಾಹುಳ್ಯವುಳ್ಳ ಸಂದರ್ಭಗಳಲ್ಲಿ ಆಯಾ ಓಜಪಾದಗಳ ಪಂಚಮಾಕ್ಷರಗಳು ಲಘು ಅಥವಾ ಗುರುವೇ ಆಗಿರಲಿ, ಮೇಲಣ ಎಚ್ಚರಿಕೆಯನ್ನು ಪಾಲಿಸಿದ್ದೇ ಆದಲ್ಲಿ ಶ್ಲೋಕದ ಧಾಟಿ ಕೆಡುವುದಿಲ್ಲ. ಇಂತಿದ್ದರೂ ಪಂಚಮಾಕ್ಷರವು ‘ಲಕ್ಷಣವಿರುದ್ಧ’ವಾಗಿ ಗುರುವಾದಲ್ಲಿ ಒಟ್ಟಂದದ ಶ್ಲೋಕಗತಿಗೆ ಹೆಚ್ಚಿನ ಸೊಗಸು ಬರುತ್ತದೆ. ಉದಾ:
ಷಾಣ್ಮಾತುರಃ ಶಕ್ತಿಧರಃ ಕುಮಾರಃ ಕ್ರೌಂಚದಾರಣಃ || (ಅಮರಕೋಶ, ೧.೧.೪೭)
ಆದರೆ ಓಜಪಾದದ ಪೂರ್ವಾರ್ಧವು ಗುರುಗಳಿಂದಲೇ ತುಂಬಿದ್ದರೆ - ವಿಶೇಷತಃ ಮೂರು ಹಾಗೂ ನಾಲ್ಕನೆಯ ಅಕ್ಷರಗಳು ಗುರುಗಳಾಗಿದ್ದರೆ - ಐದನೆಯ ಅಕ್ಷರವು ಲಕ್ಷಣಾನುಸಾರವಾಗಿ ಲಘುವಾಗುವುದೇ ಒಳಿತು.
೩. ಕನ್ನಡ, ತೆಲುಗು, ತಮಿಳು, ತುಳು ಮತ್ತು ಮಲಯಾಳ ಭಾಷೆಗಳಲ್ಲಿದ್ದಂತೆ ಖಂಡಪ್ರಾಸವೆಂಬ ಶಬ್ದಾಲಂಕಾರಕ್ಕಾಗಿ ಪಾದಾಂತದಲ್ಲಿ ಪದಚ್ಛೇದದ ಮೂಲಕ ಯತಿವಿಲಂಘನವನ್ನು ಮಾಡುವುದು ಶ್ಲೋಕದ ಗತಿಯಲ್ಲಿ ವೈರಸ್ಯವನ್ನು ತರುತ್ತದೆ. ಈ ಮುನ್ನ ಕಾಣಿಸಿದಂತೆ ಓಜಪಾದದ ಉತ್ತರಾರ್ಧದಲ್ಲಿ ಸ-ಗಣವೋ ನ-ಗಣವೋ ಬಂದು ಆ ಬಳಿಕ ಒಂದು ಗುರುವಿರುವಂಥ ಸಂದರ್ಭಗಳಲ್ಲಂತೂ ಪಾದಾಂತದ ಯತಿಯನ್ನು ಪಾಲಿಸುವುದಲ್ಲದೆ ಅಲ್ಲಿಗೇ ಪದವು ಮುಗಿಯುವಂತೆ ಮಾಡಬೇಕು. ಪ್ರಾತಿಪದಿಕ ಮುಗಿದರೂ ಸಮಸ್ತಪದವು ಮುಗಿಯದೆ ಮುಂದಿನ ಪಾದಕ್ಕೆ ಸಾಗುವಂಥ ರಚನೆಯನ್ನು ಮಾಡುವುದು ಶ್ರುತಿಕಟುವೆನಿಸುತ್ತದೆ. ಉದಾ:
ಕಾಲಿಂದೀಪಾವನಜಲಾಲೋಕಕೌತೂಹಲೀ ಹಲೀ |
ಶೌರಿಣಾ ಸಹ ಸಾಮೋದಂ ಯಯಾವಾನಂದತುಂದಿಲಃ ||
ಇದನ್ನು ‘ಕಾಲಿಂದೀಪಾವನಜಲಂ ದ್ರಷ್ಟುಕಾಮೋಽಸಿತಾಂಬರಃ’ ಎಂದು ತಿದ್ದಿದರೆ ಶ್ರುತಿಕಟುತ್ವ ಕಡಮೆಯಾದೀತು. ಹೀಗೆಯೇ ಸಮಾಸವೊಂದು ಶ್ಲೋಕದ ಓಜಪಾದ ಮತ್ತು ಯುಕ್ಪಾದಗಳೆರಡನ್ನೂ ಬೆಸೆಯುವ ಸಂದರ್ಭ ಬಂದಾಗ ಓಜಪಾದಾಂತದ ಅಕ್ಷರ ಸಹಜಗುರುವಾಗಿಯೇ ಇರುವುದು ಒಳಿತು. ಇಲ್ಲವಾದರೆ ಪಾದಾಂತದ ಪ್ರಬಲಯತಿಯ ಕಾರಣ ಅಲ್ಲಿಯ ಲಘುವು ಗುರುವಾಗಿ ಕರ್ಷಿತವಾಗುವ ಅಪಾಯ ಉಂಟು. ಪಾದಾಂತ್ಯದಲ್ಲಿ ಪದವೂ ಮುಗಿದರೆ ಅದರ ತುದಿಯಲ್ಲಿರುವ ಲಘ್ವಕ್ಷರವು ಕರ್ಷಣಗೊಂಡಾಗ ತೋರಿಕೊಳ್ಳದ ಅಪಾರ್ಥ ಅಥವಾ ಶ್ರುತಿಕಟುತ್ವ ಸಮಸ್ತಪದದಲ್ಲಿ ಅಂತರ್ಗತವಾದ ಪ್ರಾತಿಪದಿಕವೊಂದರ ಕೊನೆಯಲ್ಲಿರುವ ಲಘ್ವಕ್ಷರದ ಕರ್ಷಣದ ಮೂಲಕ ಎದ್ದುತೋರುವಂತಾಗುತ್ತದೆ. ಉದಾ:
ಲಲಿತಾಸಹಸ್ರನಾಮದಲ್ಲಿ ಬರುವ ‘ತಾಪತ್ರಯಾಗ್ನಿಸಂತಪ್ತಸಮಾಹ್ಲಾದನಚಂದ್ರಿಕಾ’ ಎಂಬ ಶ್ಲೋಕಾರ್ಧದಲ್ಲಿ ‘ಸಂತಪ್ತ’ ಎಂಬ ಪದದ ಕೊನೆಯ ಅಕ್ಷರ ‘ಪ್ತ’ ತನ್ನ ಯತಿಸ್ಥಾನದ ಕಾರಣ ಸಹಜವಾಗಿಯೇ ಕರ್ಷಣಕ್ಕೆ ತುತ್ತಾಗಿ ‘ಸಂತಪ್ತಾ’ ಎಂದಾಗುವ ಮೂಲಕ ಅಪಾರ್ಥಕ್ಕೆ ಆಸ್ಪದವೀಯುತ್ತದೆ. ಆಗ “ತಾಪತ್ರಯವೆಂಬ ಉರಿಗೆ ಸಿಲುಕಿದ ಜನರ ಪಾಲಿಗೆ ದೇವಿಯು ಬೆಳುದಿಂಗಳಿನಂತೆ” ಎಂಬ ಸದರ್ಥವು ಮರೆಯಾಗಿ ದೇವಿಯೇ ತಾಪತ್ರಯಾಗ್ನಿಯಲ್ಲಿ ಬೇಯುತ್ತಿರುವಳೆಂಬ ಅಪಾರ್ಥ ತಲೆದೋರುತ್ತದೆ! ಆದರೆ ಮಹಾಕವಿಗಳೇ ಇಂಥ ಎಷ್ಟೋ ರಚನೆಗಳನ್ನು ಮಾಡಿದ್ದಾರೆ. ಉದಾಹರಣೆಗೆ ಬಾಣಭಟ್ಟನ ಪ್ರಸಿದ್ಧಪದ್ಯವನ್ನೇ ಗಮನಿಸಬಹುದು:
ನಮಸ್ತುಂಗಶಿರಶ್ಚುಂಬಿಚಂದ್ರಚಾಮರಚಾರವೇ |
ತ್ರೈಲೋಕ್ಯನಗರಾರಂಭಮೂಲಸ್ತಂಭಾಯ ಶಂಭವೇ || (ಹರ್ಷಚರಿತ ೧.೧)
ಧಾಟಿಯು ಉನ್ಮೀಲಿತವಾಗುವಂತೆ ದಂಡಾಕಾರವಾಗಿ ಪಠಿಸುವ ಮೂಲಕ ಇಂಥ ಶ್ಲೋಕಗಳಿಗೆ ವಾಗರ್ಥಗಳ ಸೊಗಸನ್ನು ತುಂಬಿಕೊಡಬೇಕಲ್ಲದೆ ಯತಿಸ್ಥಾನದಲ್ಲಿ ಯಾಂತ್ರಿಕವಾಗಿ ನಿಲ್ಲಿಸುವಂಥ ರೀತಿಯಿಂದ ಅಲ್ಲ. ಇಂಥ ರಚನೆಗಳ ಸಮಾಸಗುಂಫನ ವಿಶಿಷ್ಟವೂ ನಾದಮಯವೂ ಆದ ಗತಿಸುಭಗತೆಯನ್ನು ತಳೆದ ಕಾರಣ ರಸಿಕರ ಸಮ್ಮತಿ ದಕ್ಕಿದೆ.
೪. ಓಜಪಾದಗಳ ಪರಿ ಇಂತಾದರೆ ಯುಕ್ಪಾದಗಳ ಬಗೆ ಹೇಗೆಂಬುದನ್ನು ಸ್ವಲ್ಪ ಗಮನಿಸೋಣ. ಇಲ್ಲಿ ಕೂಡ ಪೂರ್ವಾರ್ಧದ ನಾಲ್ಕು ಅಕ್ಷರಗಳಿಗೆ ಲಕ್ಷಣಕಾರರು ಯಾವುದೇ ನಿಯಮಗಳನ್ನು÷ವಿಧಿಸಿಲ್ಲ. ಆದರೂ ಪಾದದ ಮೊದಲಿಗೆ ಎರಡಕ್ಕಿಂತ ಹೆಚ್ಚು ಲಘುಗಳು ಒಟ್ಟಿಗೆ ಬರುವಂತಿಲ್ಲವೆಂಬ ಸೂಕ್ಷ್ಮ ಶ್ಲೋಕದ ಗತಿಸುಭಗತೆಯನ್ನು ಬಲ್ಲವರಿಗೆ ಸುವೇದ್ಯ. ಉದಾಹರಣೆಗೆ ‘ಕಮಲಾಕರಕಂಜಾತಪ್ರೀತಂ ವಿಷ್ಣುಪದಂ ಭಜೇ’ ಎಂಬ ಈ ಸಾಲು ಶ್ರುತಿಸುಭಗವಾಗಿರುವಂತೆ ‘ಕಮಲಯಾ ಸಮಾರಾಧ್ಯಂ ಭಜೇ ವೈಕುಂಠವಾಸಿನಮ್’ ಎಂಬ ಸಾಲು ತೋರದು.
ಸರ್ವದಾ ಲಘುವಾಗುವ ಐದನೆಯ ಅಕ್ಷರಕ್ಕೆ ಮುನ್ನ ಮಾತ್ರ ಇಂಥ ಅವಕಾಶ ಉಂಟು. ಅಂದರೆ ಮೂರು ಮತ್ತು ನಾಲ್ಕನೆಯ ಅಕ್ಷರಗಳನ್ನು ಲಘುವಾಗಿಸಿಕೊಂಡು ಮೂರು ಲಘುಗಳನ್ನು ಅವ್ಯವಹಿತವಾಗಿ ಉಳಿಸಿಕೊಳ್ಳುವುದು ಈ ಎಡೆಯಲ್ಲಿ ಮಾತ್ರ ಸಾಧ್ಯ. ಉದಾ: ‘ದೇವಂ ಕುವಲಯಶ್ಯಾಮಂ ವಂದೇ ವನಧಿಶಾಯಿನಮ್’ ಎಂಬ ಸಾಲಾಗಲಿ ‘ರಮಾಸಹಚರಂ ರಮ್ಯಂ ನುಮಃ ಸುರಮುನಿಸ್ತುತಮ್’ ಎಂಬ ಸಾಲಾಗಲಿ ಶ್ರುತಿಕಟುವಾಗಿಲ್ಲ. ಮೊದಲನೆಯ ಸಾಲಿನಲ್ಲಿ ಮೂರು ಲಘುಗಳ ಮುನ್ನ ಎರಡು ಗುರುಗಳು ಅವ್ಯವಹಿತವಾಗಿ ಬಂದಿವೆ. ಎರಡನೆಯ ಸಾಲಿನಲ್ಲಿ ಮೂರು ಲಘುಗಳ ಮುನ್ನ ಒಂದೇ ಗುರು ಬಂದಿದೆ. ಇಂತಿದ್ದರೂ ಗತಿಯಲ್ಲಿ ಶ್ರುತಿಕಟುತ್ವವಿಲ್ಲ. ಈ ಎಲ್ಲ ವೈಚಿತ್ರ್ಯಗಳನ್ನು ಗಮನಿಸಿದಾಗ ಶ್ಲೋಕವು ಅದೆಷ್ಟು ಬಗೆಯ ವೈವಿಧ್ಯ-ಸ್ವಾತಂತ್ರ್ಯಗಳ ಸಾಧ್ಯತೆಗಳನ್ನು ಹೊಂದಿದೆಯೆಂದು ತಿಳಿಯುತ್ತದೆ. ಹೀಗಾಗಿಯೇ ಇದಕ್ಕೆ ವಿಶಿಷ್ಟವಾದ ಗತಿಸೌಂದರ್ಯವನ್ನು ನಿರ್ದಿಷ್ಟವಾಗಿ ಕಂಡುಕೊಳ್ಳುವ ಹಾಗೂ ಪದ್ಯರಾಚನಾಕಾಲದಲ್ಲಿ ಆ ಸೊಗಸನ್ನು ಪುನರ್ನಿರ್ಮಿಸುವ ಪ್ರಕ್ರಿಯೆಯಲ್ಲಿ ಸಂಕೀರ್ಣತೆಯುಂಟು.
ಹೀಗೆ ಮೂರು ಲಘುಗಳಿಗೆ ಅವಕಾಶವಿರುವ ಶ್ಲೋಕಗಳಲ್ಲಿ ಮೂರನೆಯ ಅಕ್ಷರ ಮುಗಿದ ಬಳಿಕ ಪದಯತಿ (ಪದದ ಮುಗಿತಾಯ) ಬರದಿದ್ದಲ್ಲಿ ಅರ್ಥನಿರಪೇಕ್ಷವಾಗಿ ಮೂರನೆಯ ಅಕ್ಷರವನ್ನು ಒತ್ತಿಹೇಳುವ ಪ್ರವೃತ್ತಿ ತಾನಾಗಿಯೇ ಉಂಟಾಗುತ್ತದೆ. ಇಂಥ ಸ್ಫುಟತರೋಚ್ಚಾರಣೆಯ ಕಾರಣ ಆ ಅಕ್ಷರವು ಸ್ವರಭಾರವನ್ನು ಹೊಂದಿ, ಗುರುಸದೃಶ ಸ್ಥಿತಿಯನ್ನು ಪಡೆದು ಶ್ಲೋಕದ ಗತಿಗೆ ಸೌಷ್ಠವವನ್ನು ತಂದೀಯುತ್ತದೆ. ಆದರೆ ಅಂಥ ಎಡೆಯಲ್ಲಿ ಅರ್ಥಕ್ಕೆ ತೊಡಕಾಗುವಂತೆ ವಿಕಾರವಾಗಿ ಪದಚ್ಛೇದವಾಗುವ ಮೂಲಕ ಯತಿಭಂಗದಂಥ ಅಹಿತಕರ ಭಾವನೆ ಶ್ರೋತೃಗಳ ಮನಸ್ಸಿನಲ್ಲಿ ಮೂಡುತ್ತದೆ. ಇದನ್ನು ಗಮನಿಸಿದಾಗ ಶ್ಲೋಕದಲ್ಲಿ ಗುರುವಿಗಿರುವ ಮಹತ್ತ್ವ ಅರಿವಾಗದಿರದು.
ದೇವಂ ಕುವಲಯಶ್ಯಾಮಂ ವಂದೇ ವನಧಿಶಾಯಿನಮ್ |
ರಮಾಸಹಚರಂ ರಮ್ಯಂ ನುಮಃ ಸುರಮುನಿಸ್ತುತಮ್ ||
ನಮಾಮಿ ಗಿರಿಜಾಕಾಂತಂ ಭಜಾಮಿ ವಿಶದಪ್ರಭಮ್ |
ಬಾಲೇಂದುಮುಕುಟಂ ಭರ್ಗಂ ಧ್ಯಾಯಾಮಿ ಯಮವೈರಿಣಮ್ ||
ಇಲ್ಲಿ ಲ-ಗಂ ಎಂಬ ತ್ರಿಮಾತ್ರಾವಿನ್ಯಾಸದ ಪಾದಾದಿಯಲ್ಲಿ ಮೂರನೆಯ ಅಕ್ಷರದ ಬಳಿಕ ಪದಯತಿಯ ಅಥವಾ ಸ್ಫುಟತರೋಚ್ಚಾರಣೆಯ ಅನಿವಾರ್ಯತೆ ಇದ್ದರೂ ಗಂ-ಗಂ ಎಂಬ ಚತುರ್ಮಾತ್ರಾವಿನ್ಯಾಸದ ಪಾದಾದಿಯಲ್ಲಿ ಇಂಥ ಅನಿವಾರ್ಯತೆ ಉಲ್ಬಣಿಸಿಲ್ಲ. ಇದಕ್ಕೆ ಕಾರಣ ಪಾದಾದಿಯ ಲ-ಗಂ ಎಂಬ ವಿನ್ಯಾಸಕ್ಕಿಂತ ಗಂ-ಗಂ ಎಂಬ ವಿನ್ಯಾಸದಲ್ಲಿ ಉಂಟಾಗಿರುವ ಒಂದು ಮಾತ್ರಾಕಾಲದ ಆಧಿಕ್ಯ ಹಾಗೂ ತತ್ಫಲಿತವಾದ ಚತುರಸ್ರತೆಗಳೇ. ಲ-ಗಂ ಎಂಬ ತ್ರಿಮಾತ್ರಾವಿನ್ಯಾಸವು ಲ-ಗಂ-ಲ ಎಂಬ ಜ-ಗಣರೂಪದ ಚತುರ್ಮಾತ್ರಾವಿನ್ಯಾಸವನ್ನು ತಾಳಿದಲ್ಲಿ ಪಾದಾದಿಗೆ ಒಂದು ಬಗೆಯ ಗತಿಸಾಮ್ಯ ದಕ್ಕುತ್ತದೆ. ಇದನ್ನು ಗಳಿಸಲೆಂದೇ ಶ್ಲೋಕದ ಛಂದೋಗತಿಯು ಸ್ವತಂತ್ರವಾಗಿಯೋ ಸ್ವರಭಾರಪ್ರಾಪ್ತಿಯಿಂದಲೋ ತೃತೀಯಾಕ್ಷರದಲ್ಲಿ ಪದಚ್ಛೇದವನ್ನು ಸಾಧಿಸಲು ಹೆಣಗುತ್ತದೆ.
ಸ್ವರಭಾರದಿಂದ ಅಕ್ಷರಗಳ ಗುರುತ್ವ-ಲಘುತ್ವಗಳು ವ್ಯತ್ಯಾಸವಾಗುವುದು ವರ್ಣವೃತ್ತಗಳಲ್ಲಿ ಇಲ್ಲದ ಪ್ರಕ್ರಿಯೆ. ಇದನ್ನು ಕರ್ಷಣಜಾತಿಗಳ ಶ್ರಾವಣರೂಪದಲ್ಲಿ ಬಲುಮಟ್ಟಿಗೆ ಕಾಣಬಹುದು. ತ್ರೈಸ್ವರ್ಯದ ಸ್ವರಿತದಲ್ಲಿ ಕೂಡ ಇದರ ಎಳೆಯನ್ನು ಗಮನಿಸಬಹುದು. ಈ ಹಂತದಲ್ಲಿ ಪ್ರಸ್ತುತ ಚರ್ಚೆಯು ಛಂದಃಶಾಸ್ತ್ರದ ಪರಿಧಿಯನ್ನು ಮೀರಿ ಶಿಕ್ಷಾಶಾಸ್ತ್ರ ಮತ್ತು ಸಂಗೀತಶಾಸ್ತ್ರಗಳತ್ತ ಚಾಚಿಕೊಳ್ಳುವಂತೆ ತೋರುತ್ತದೆ.
೫. ಸೇಡಿಯಾಪು ಅವರು ಶ್ಲೋಕದಲ್ಲಿ ಗರಿಷ್ಠಸಂಖ್ಯೆಯ ಗುರುಗಳು ಹಾಗೂ ಲಘುಗಳು ಎಷ್ಟಿರಬಹುದು, ಹೇಗಿರಬಹುದು ಎಂಬುದನ್ನು ನಿರೂಪಿಸಿದ್ದಾರೆ. ಇದನ್ನು ಹೀಗೆ ರೂಪಿಸಬಹುದು:
ಧೀರೋದಾತ್ತಂ ಹರಿಂ ವಂದೇ ಶಾಂತಸ್ಮೇರಂ ತಥಾ ಹರಮ್ |
ಕಮಲಾವದನಾದಿತ್ಯ* ಗಿರಿಜಾಹೃದಯೇಶ್ವರ* ||
ಇವು ಶ್ರುತಿಕಟುತ್ವದ ಸೋಂಕೂ ಇಲ್ಲದ ಎರಡು ಮಾದರಿಗಳು. ಮೊದಲನೆಯ ಉದಾಹರಣೆಯಲ್ಲಿ ಕೇವಲ ಮೂರು ಲಘುಗಳ ನಿರ್ಣಾಯಕ ವಿನಿಯೋಗದಿಂದ ಶ್ಲೋಕದ ಧಾಟಿ ಸೊಗಸಾಗಿ ಉನ್ಮೀಲಿತವಾಗಿದೆ. ಎರಡನೆಯ ಉದಾಹರಣೆಯಲ್ಲಿ ಐದು ಯಥಾರ್ಥಗುರುಗಳ ಮತ್ತು ಎರಡು ಸಂಭಾವ್ಯಗುರುಗಳ ನಿರ್ಣಾಯಕ ವಿನ್ಯಾಸದಿಂದ ಶ್ಲೋಕದ ಗತಿ ಚೆನ್ನಾಗಿ ಒಡಮೂಡಿದೆ.
ಚೋದ್ಯವೆಂಬಂತೆ ಎರಡೂ ಮಾದರಿಗಳಲ್ಲಿ ನಾಲ್ಕು ಮಾತ್ರೆಗಳ ಘಟಕಗಳು ಸಹಜವೆಂಬಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ:
ಧೀರೋ | ದಾತ್ತಂ | ಹರಿಂ | ವಂದೇ | ಶಾಂತ | ಸ್ಮೇರಂ | ತಥಾ ಹ | ರಮ್ |
ಕಮಲಾ | ವದನಾ | ದಿತ್ಯ* | ಗಿರಿಜಾ | ಹೃದಯೇ | ಶ್ವರ* |
ಇಂತಿದ್ದರೂ ಇಲ್ಲಿಯ ಮೊದಲ ಉದಾಹರಣೆ ಚತುಷ್ಕಲ ಧಾಟಿಯಲ್ಲಿ ಸಾಗುವ ಆರ್ಯಾಪ್ರಭೇದಗಳ ಹಾಗೆಯೋ ಪಂಜರಿಕೆಯ ಪ್ರಕಾರಗಳಂತೆಯೋ ಕೇಳುತ್ತಿಲ್ಲ. ಇದಕ್ಕೆ ಕಾರಣ ನಾಲ್ಕು ಮಾತ್ರೆಗಳ ಎರಡು ಗಣಗಳ ಬಳಿಕ ಮೂರು ಮಾತ್ರೆಗಳ ಒಂದು ಗಣ ಬರುವುದು ಮತ್ತಿದು ಲಯಾನ್ವಿತತೆಗೆ ಸ್ವಲ್ಪವೂ ಒದಗಿಬರದಂಥ ಲ-ಗಂ ರೂಪದಲ್ಲಿರುವುದು. ಇಂಥ ಲಘ್ವಾದಿಯಾದ ಗುರುಗಳು ಮಾತ್ರಾಜಾತಿಗಳ ಗತಿಗೆ ವಿರಸಪ್ರಾಯಗಳೆಂಬುದು ಛಂದೋವಿದರ ಮತ. ವಿಶೇಷತಃ ಈ ಬಗೆಯ ಗಣಗಳು ಮಾತ್ರಾಸಮತ್ವದಿಂದ ಏಕರೂಪತೆಯನ್ನು ತಾಳದಿದ್ದಾಗ ಅವು ಒಟ್ಟಂದದ ಗತಿಗೆ ತಂದೀಯುವ ತೊಡಕು ಎದ್ದುಕಾಣುವಂಥದ್ದು. ಈ ಕಾರಣದಿಂದಲೇ ಮೂಲತಃ ಲಯಾನ್ವಿತತೆಯ ಜಾಡಿಗೆ ಸಲ್ಲಬಹುದಾದ ವೃತ್ತಗಳೂ ಲಯರಹಿತ ಬಂಧಗಳಂತೆ ಕೇಳಿಸುತ್ತವೆ. ಇದನ್ನು ಕುರಿತು ಸೇಡಿಯಾಪು ಅವರು ವಿಶದವಾಗಿ ಚರ್ಚಿಸಿದ್ದಾರೆ. ಇನ್ನು ಸದ್ಯದ ಉದಾಹರಣೆಯ ‘ತಥಾ ಹರಮ್’ ಎಂಬಲ್ಲಿ ಜ-ಗಣ ಮತ್ತೊಂದು ಗುರುವಿರುವಂತೆ ತೋರಿದರೂ ಇಲ್ಲಿ ಲ-ಗಂ ಲ-ಗಂ ಎಂಬ ಮೂರು ಮೂರು ಮಾತ್ರೆಗಳ ಎರಡು ಘಟಕಗಳೇ ಉನ್ಮೀಲಿತವಾಗುವುದು ಗತಿವಿಜ್ಞರಿಗೆ ಸುವೇದ್ಯ.
ಇನ್ನು ಮತ್ತೊಂದು ಉದಾಹರಣೆಯನ್ನು ಗಮನಿಸುವುದಾದರೆ ಇಲ್ಲಿಯ ಎಲ್ಲ ಘಟಕಗಳೂ ನಾಲ್ಕು ಮಾತ್ರೆಗಳ ಗಣಗಳೇ ಆಗಿವೆ. ‘ದಿತ್ಯ’ ಮತ್ತು ‘ಶ್ವರ’ ಎಂಬಲ್ಲಿ ಪಾದಾಂತದ ಕರ್ಷಣದಿಂದ ಕಡೆಯ ಅಕ್ಷರಗಳು ಗುರುಗಳಾಗಿ ಮಾರ್ಪಟ್ಟಿವೆ. ‘ಶ್ವರ’ ಎಂಬಲ್ಲಿ ಮಾತ್ರ ಲ-ಗಂ ವಿನ್ಯಾಸದ ಮೂರು ಮಾತ್ರೆಗಳ ಗಣ ಉಳಿದಿದೆ. ಇಂತಿದ್ದರೂ ಇಲ್ಲಿ ಚತುರ್ಮಾತ್ರಾಗಣಘಟಿತವಾದ ಬಂಧಗಳ ಗತಿ ಉನ್ಮೀಲಿಸುವಂತೆ ಕಾಣದು. ಈ ಮಾದರಿಯ ಎರಡು ಪಾದಗಳೂ ಮೂರು ಮೂರು ಗಣಗಳಿಂದ ಕೂಡಿದ್ದು, ಮಾತ್ರಾಜಾತಿಯ ಬಂಧಗಳ ಗತಿಸುಭಗತೆಗೆ ತುಂಬ ಅನಿವಾರ್ಯವಾದ ಚತುರಸ್ರತೆಯಿಂದ ವಂಚಿತವಾಗಿರುವುದೇ ಇದಕ್ಕೆ ಕಾರಣ. ಎರಡನೆಯ ಪಾದದ ಕೊನೆಗೆ ಊನಗಣವು ಬಂದು ಕರ್ಷಣದ ಮೂಲಕ ಚತುರಸ್ರತೆಯನ್ನು ಹೇಗೋ ಸಂಪಾದಿಸಿಕೊಳ್ಳುವ ಅವಕಾಶವಿದ್ದಂತೆ ತೋರಿದರೂ ಇದು ಗಂ-ಲ ಎಂಬ ವಿನ್ಯಾಸದಲ್ಲಿಲ್ಲದೆ ಲ-ಗಂ ಎಂಬ ವಿನ್ಯಾಸವನ್ನುಳ್ಳ ಕಾರಣ ಚತುರ್ಮಾತ್ರಾತ್ವ ಮತ್ತು ಚತುರಸ್ರತ್ವಗಳಿಗೆ ಅಡ್ಡಿಯನ್ನು ತಂದಿದೆ. ಅಲ್ಲದೆ ಶ್ಲೋಕರಚನೆಯ ಸಹಜಧಾರೆಯಲ್ಲಿ ಇಂಥ ವಿಶಿಷ್ಟರೂಪದ ವಿನ್ಯಾಸ ಏಕಪ್ರಕಾರವಾಗಿ ತೋರಿಕೊಳ್ಳುವುದು ವಿರಳ. ಈ ಬಗೆಯ ರಚನೆಗೆ ಪ್ರತ್ಯೇಕವಾದ ಅವಧಾನ ಬೇಕಾಗುತ್ತದೆ. ಆದುದರಿಂದ ಇಂಥ ಚತುರ್ಮಾತ್ರಾಪಾರಮ್ಯದ ಗಣಗಳು ಅಮಿತವಾಗಿರುವ ಪಾದಗಳ ಏಕತ್ರ ಸಮಾವೇಶ ಅಸಂಭವ. ಯಾವುದೇ ಗತಿಯು ನಮ್ಮ ಕೇಳ್ಮೆಯಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂದರೆ ಆ ಬಗೆಯ ವಿನ್ಯಾಸದ ಸಾಲುಗಳು ಕನಿಷ್ಠಪಕ್ಷ ನಾಲ್ಕಾದರೂ ಬರಬೇಕು. ಇಂಥ ಸಂಭವತೆ ಪೂರ್ವೋಕ್ತ ವಿನ್ಯಾಸಗಳಲ್ಲಿ ಇಲ್ಲವೆಂಬಷ್ಟು ವಿರಳ ಎಂಬುದೇ ಸದ್ಯದ ನಿಗಮನಕ್ಕೆ ಆಧಾರ.
೬. ಪ್ರಸಿದ್ಧವಾದ ಲಕ್ಷಣದ ಪ್ರಕಾರ ಪಾದಾದಿಯಲ್ಲಿ ಭ-ಗಣವು ಬರಬಾರದೆಂಬ ನಿಯಮವಿಲ್ಲ. ಇಂಥ ವಿನ್ಯಾಸವು ಬಂದಾಗ ಶ್ರುತಿಕಟುವಾಗುವುದು ಸ್ವಯಂವೇದ್ಯ. ಉದಾಹರಣೆಗೆ ‘ಮಾಧವ ಮಾಧುರೀಧುರ್ಯ ಶ್ರೀಧರ ಶಾಂತಿಶೀಲಿತ’ ಎಂಬಲ್ಲಿ ಶ್ಲೋಕದ ಘೋಷ ಸ್ವಲ್ಪವೂ ಕಾಣದಿರುವುದು ಸಾಮಾನ್ಯಸ್ತರದ ಗತಿಪ್ರಜ್ಞೆ ಉಳ್ಳವರಿಗೂ ತಿಳಿಯುತ್ತದೆ.
೭. ಯುಕ್ಪಾದಗಳಲ್ಲಿಯ ಮೊದಲ ನಾಲ್ಕು ಅಕ್ಷರಗಳು ಕಡೆಯ ನಾಲ್ಕು ಅಕ್ಷರಗಳ ವಿನ್ಯಾಸವನ್ನು ಹೊಂದಿರಬಾರದೆಂಬ ನಿರ್ಬಂಧ ಪೂರ್ವೋಕ್ತ ಲಕ್ಷಣದಲ್ಲಿಲ್ಲ. ಆದರೆ ಇಂಥ ಯುಕ್ಪಾದ ಪ್ರಮಾಣಿಕಾ ಎಂಬ ಲಯಾನ್ವಿತ ವೃತ್ತದ ಸಾಲಾಗಿ ಪರಿಣಮಿಸುವ ಅಪಾಯವುಂಟು. ಇದು ಶ್ಲೋಕದ ಲಯರಹಿತ ಧಾಟಿಗೆ ವ್ಯತಿರಿಕ್ತವಾದುದು; ಹೀಗಾಗಿ ಶ್ರುತಿಕಟುವೂ ಆದುದು. ಉದಾಹರಣೆಗೆ ‘ವಂದೇ ಮುಕುಂದಮಾನಂದಂ ಸನಾತನಂ ನಿರಂತರಮ್’ ಎಂಬಲ್ಲಿ ಶ್ಲೋಕದ ಧಾಟಿಗೆ ಓಜಪಾದವು ಎಷ್ಟು ಬದ್ಧವಾಗಿದೆಯೋ ಯುಕ್ಪಾದ ಕೂಡ ಅಷ್ಟೇ ಅಬದ್ಧವಾಗಿದೆ. ಯುಕ್ಪಾದದ ‘ಸನಾತನಂ’ ಎಂಬ ಪದವನ್ನು ‘ನಿತ್ಯಸತ್ಯಂ’ ಎಂದು ಮಾರ್ಪಡಿಸಿದೊಡನೆಯೇ ಗತಿಯು ಸುಭಗವಾಗುವುದು ಸ್ಪಷ್ಟ.
To be continued.