ಇನ್ನು ಮುಂದೆ ಶ್ಲೋಕದಲ್ಲಿ ಬರಬಹುದಾದ ವಿಭಿನ್ನಸಂಖ್ಯೆಯ ಮಾತ್ರಾಗಣಗಳ ಕೆಲವು ಪ್ರಮುಖ ಸಾಧ್ಯತೆಗಳನ್ನು ಪರಿಶೀಲಿಸೋಣ.
ಅ) ಮೂರು ಮಾತ್ರೆಗಳ ಘಟಕಗಳುಳ್ಳ ರಚನೆ:
ನಾನ | ನಾನ | ನನಾ | ನಾನ/ನಾ | ನಾನ | ನಾನ | ನನಾ | ನನಾ |
ನನಾ | ನನಾ | ನನಾ | ನಾನ/ನಾ | ನನಾ | ನಾನ | ನನಾ | ನನಾ |
ತ್ರಿಮಾತ್ರಾಗಣಗಳೇ ಪ್ರಚುರವಾದ ಈ ಬಗೆಯ ಶ್ಲೋಕದಲ್ಲಿ ಮೂರು ಮಾತ್ರೆಗಳ ಪರಿಮಾಣವನ್ನೇ ಉಳ್ಳ ನ-ಗಣಕ್ಕೆ ಆಸ್ಪದವಿಲ್ಲ. ಅದು ಬಂದೊಡನೆಯೇ ಎರಡು ಗುರುಗಳು ಅವ್ಯವಹಿತವಾಗಿ ಬರಬೇಕಾಗುತ್ತದೆ; ಆಗ ಗತಿಯು ನಾಲ್ಕು ಮಾತ್ರೆಗಳ ಘಟಕಕ್ಕೆ ಅವಕಾಶ ನೀಡಬೇಕಾಗುತ್ತದೆ.[1]
ಆ) ನಾಲ್ಕು ಮಾತ್ರೆಗಳ ಘಟಕಗಳುಳ್ಳ ರಚನೆ:
ನನನಾ | ನನನಾ | ನಾನಾ/ನ | ನನನಾ | ನನನಾ | ನನಾ/ನ |
ನಾನಾ | ನಾನಾ | ನನಾ | ನಾನಾ/ನ | ನಾನಾ | ನಾನಾ | ನನಾ | ನನಾ |
ನಾಲ್ಕು ಮಾತ್ರೆಗಳ ಗಣಗಳೇ ಹೆಚ್ಚಾಗಿರುವ ಈ ಶ್ಲೋಕದಲ್ಲಿ ಸರ್ವಲಘುರೂಪದ ಚತುಷ್ಕಲವಾಗಲಿ, ಭ-ಗಣ ಮತ್ತು ಜ-ಗಣಗಳಾಗಲಿ ಬರುವಂತಿಲ್ಲ. ಅವುಗಳಿಂದ ಪದ್ಯದ ಗತಿ ಕೆಡುತ್ತದೆ. ಅಂಥ ಗತಿವೈಷಮ್ಯವನ್ನು ಪರಿಹರಿಸಲು ತ್ರಿಮಾತ್ರಾಘಟಕಗಳ ಪ್ರವೇಶ ಅನಿವಾರ್ಯ.
ಇ) ಐದು ಮಾತ್ರೆಗಳ ಘಟಕಗಳುಳ್ಳ ರಚನೆ:
ನಾನನಾ | ನಾನನಾ | ನಾನಾ/ನ | ನಾನನಾ | ನಾನನಾ | ನನಾ/ನ |
ನಾನಾನ | ನಾನನಾ | ನಾನಾ/ನ | ನಾನಾನ | ನಾನನಾ | ನನಾ/ನ |
ಐದು ಮಾತ್ರೆಗಳ ಘಟಕಗಗಳು ಹೆಚ್ಚಾಗಿರುವ ಈ ಶ್ಲೋಕದಲ್ಲಿ ಅನಿವಾರ್ಯವಾಗಿ ಪ್ರತಿ ಸಾಲಿನ ಮೂರನೆಯ ಘಟಕ ನಾಲ್ಕು ಮಾತ್ರೆಗಳದೋ ಮೂರು ಮಾತ್ರೆಗಳದೋ ಆಗಿರಬೇಕು. ಇಂಥ ರಚನೆಯಲ್ಲಿ ‘ನಾನನನ’, ‘ನನನಾನ’, ‘ನನನನಾ’, ‘ನನನನನ’ ಎಂಬ ವಿನ್ಯಾಸಗಳ ಪಂಚಕಲಗಳು ಬರುವಂತಿಲ್ಲ. ಏಕೆಂದರೆ ಇಲ್ಲಿ ಲಘುಬಾಹುಳ್ಯ ಎದ್ದುತೋರಿದೆ. ಅವ್ಯವಹಿತವಾಗಿ ಎರಡು ಲಘುಗಳಿಗಿಂತ ಹೆಚ್ಚಿನವಕ್ಕೆ ಅವಕಾಶವಿಲ್ಲದ ‘ನನನಾನ’ ಎಂಬ ವಿನ್ಯಾಸ ಬರುವ ಸಾಧ್ಯತೆ ಇದ್ದರೂ ಇಂಥ ಮತ್ತೊಂದು ಪಂಚಕಲ ಬಾರದಂತೆ ‘ಲ-ಗಂ’ ವಿನ್ಯಾಸ ಎದುರಾಗುತ್ತದೆ. ಇದು ಶ್ಲೋಕಚ್ಛಂದಸ್ಸಿನ ಲಕ್ಷಣಕ್ಕೆ ಅನಿವಾರ್ಯ.
ಈ) ಎರಡು ಮತ್ತು ನಾಲ್ಕು ಮಾತ್ರೆಗಳ ಸಂಯುಕ್ತ ಘಟಕಗಳುಳ್ಳ ರಚನೆ:
ನನ | ನಾನನ | ನಾನಾ | ನಾ | ನನ | ನಾನನ | ನಾನ | ನಾ |
ನಾ | ನಾನನ | ನನಾ | ನಾನಾ | ನಾ | ನಾನನ | ನನಾ | ನನಾ |
ನಾ | ನಾನಾ | ನನನಾ | ನಾ | ನಾ | ನಾ | ನಾನಾ | ನನನಾ | ನನಾ |
ಇದು ಸಂತುಲಿತದ್ರುತಾವರ್ತಗತಿಗೆ ಸಲ್ಲುವಂಥ ಎರಡು ಮತ್ತು ನಾಲ್ಕು ಮಾತ್ರೆಗಳ ಸಂಯುಕ್ತರಚನೆಗೆ ನಿಕಟವಾದ ಗತಿ. ಮೊದಲ ಮಾದರಿಯಲ್ಲಿ ‘ನನ-ನಾನನ’ ಎಂಬ ಘಟಕಗಳಲ್ಲಿ ಅಪ್ಪಟವಾದ ಸಂತುಲಿತದ್ರುತಾವರ್ತಗತಿ ತೋರಿದೆ. ಇದನ್ನು ಅಲ್ಲಿಯ ಯುಕ್ಪಾದದ ಮೊದಲಿಗೂ ನೋಡಬಹುದು. ಓಜಪಾದದ ‘ನಾನಾ-ನಾ’ ಎಂಬ ಮುಂದಿನ ಘಟಕಗಳು ಸಂತುಲಿತದ್ರುತಾವರ್ತಗತಿಯನ್ನು ಈ ಮಟ್ಟಕ್ಕೆ ಧ್ವನಿಸುವುದಿಲ್ಲ. ಇದಕ್ಕೆ ಕಾರಣ ಅವುಗಳ ಮೂರೂ ಅಕ್ಷರಗಳು ಗುರುಗಳೇ ಆಗಿರುವುದು. ಇನ್ನು ಯುಕ್ಪಾದದ ಕೊನೆಯಲ್ಲಿ ಬರುವ ‘ನಾನ-ನಾ’ ಎಂಬ ವಿನ್ಯಾಸ ಐದು ಮಾತ್ರೆಗಳ ರ-ಗಣವಾದ ಕಾರಣ ಇಲ್ಲಿ ಸಂತುಲಿತದ್ರುತಾವರ್ತಗತಿಗೆ ಅವಕಾಶವಿಲ್ಲ.
ಎರಡನೆಯ ಮಾದರಿಯಲ್ಲಿ ಓಜಪಾದ ಮತ್ತು ಯುಕ್ಪಾದಗಳ ‘ನಾ-ನಾನನ’ ಎಂಬ ಮೊದಲ ಘಟಕಗಳು ಅಪ್ಪಟ ಸಂತುಲಿತದ್ರುತಾವರ್ತಗತಿಗೆ ಬದ್ಧವಾಗಿವೆ. ಮಿಕ್ಕ ಘಟಕಗಳು ಹೀಗಲ್ಲ. ಓಜಪಾದದ ‘ನನಾ-ನಾನಾ’ ಎಂಬ ವಿನ್ಯಾಸ ಮೂರು ಮತ್ತು ನಾಲ್ಕು ಮಾತ್ರೆಗಳ ಮಿಶ್ರಲಯದ ಘಟಕ. ಆದರೆ ಈ ಲಯ ಸ್ಫುರಿಸದ ಹಾಗೆ ‘ನನಾ’ ಎಂಬ ವಿನ್ಯಾಸದ ಲಘ್ವಾದಿತ್ವ ವಿಸಂವಾದವೊಡ್ಡಿದೆ. ಇನ್ನುಳಿದಂತೆ ಯುಕ್ಪಾದದ ಕೊನೆಯ ಎರಡು ಘಟಕಗಳು (ನನಾ-ನನಾ) ಮೂರು ಮಾತ್ರೆಗಳ ಮಾನವನ್ನು ಹೊಂದಿದ್ದರೂ ಅವು ಸಂತುಲಿತದ್ರುತಾವರ್ತಗತಿಗೆ ಸೇರುವುದಿಲ್ಲ. ಮಾತ್ರವಲ್ಲ, ಅವು ಲಘ್ವಾದಿಯಾದ ಕಾರಣ ತ್ರಿಮಾತ್ರಾಗತಿಯ ಸಹಜಧಾಟಿಗೂ ಸ್ವಲ್ಪ ವಿಸಂವಾದಿಯಾಗಿ ತೋರುತ್ತವೆ.
ಮೂರನೆಯ ಮಾದರಿಯ ಓಜಪಾದ-ಯುಕ್ಪಾದಗಳ ಮೊದಲ ಘಟಕಗಳು ಮೂರು ಗುರುಗಳಿಂದ ರಚಿತವಾದ ಕಾರಣ ಈ ಮುನ್ನ ಹೇಳಿದ ಸಮಸ್ಯೆ ಇಲ್ಲಿಯೂ ತಲೆದೋರಿದೆ; ಸಂತುಲಿತದ್ರುತಾವರ್ತಗತಿತ್ವಕ್ಕೆ ಎರವಾಗಿದೆ. ಓಜಪಾದದ ಎರಡನೆಯ ಮತ್ತು ಮೂರನೆಯ ಘಟಕಗಳು (ನನನಾ-ನಾ) ಅಪ್ಪಟ ಸಂತುಲಿತದ್ರುತಾವರ್ತಗತಿಗೆ ಸಂದಿವೆ. ಮುಂದಿನ ಒಂದು ಗುರು ಇಂಥ ಗತಿಗೆ ಹೊರಚ್ಚಾಗಿ ನಿಂತಿದೆ. ಯುಕ್ಪಾದದ ಕೊನೆಯ ಎರಡು ಘಟಕಗಳು (ನನನಾ-ನನಾ) ನಾಲ್ಕು ಮತ್ತು ಮೂರು ಮಾತ್ರೆಗಳ ಮಾನವನ್ನು ಹೊಂದಿದ ಕಾರಣ ಮಿಶ್ರಲಯದ (೩+೪) ಪ್ರತೀಪವಾಗಿ ನಿಂತಿವೆ. ‘ನ-ನಾ’ ಎಂಬ ವಿನ್ಯಾಸ ತನ್ನ ಲಘ್ವಾದಿತ್ವದ ಮೂಲಕ ಲಯಾನ್ವಿತತೆಗೆ ಮತ್ತಷ್ಟು ಎರವಾಗಿದೆ.
ಈ ಮೂರು ಮಾದರಿಗಳನ್ನು ಪರಿಕಿಸಿದಾಗ ಮೊದಲ ಎರಡು ಮಾದರಿಗಳಲ್ಲಿ ತೋರುವ ಮಟ್ಟದ ಸಂತುಲಿತದ್ರುತಾವರ್ತಗತಿ ಮೂರನೆಯದರಲ್ಲಿ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಕನಿಷ್ಠಪಕ್ಷ ಸಂತುಲಿತದ್ರುತಾವರ್ತಗತಿಯ ಎರಡು ಗಣಗಳು ಯಾವ ಮಾದರಿಯಲ್ಲಿಯೂ ಅವ್ಯವಹಿತವಾಗಿ ಉನ್ಮೀಲಿಸುತ್ತಿಲ್ಲ. ಹೀಗಾಗಿ ಈ ಗತಿಯ ಸ್ಫುರಣೆ ನಮಗಾಗುವುದು ಕಷ್ಟ. ಒಟ್ಟಂದದ ಶ್ಲೋಕಧಾಟಿಯಲ್ಲಿ ಇಂಥ ಗತಿಯ ಸಾಧ್ಯತೆ ಒಂದು ಗಣದ ಮಟ್ಟಿಗಾದರೂ ಮಿಂಚಿ ಮಾಯವಾಗುವ ಕಾರಣ ಗತಿಪ್ರಜ್ಞಾಶಾಲಿಗಳ ಕಿವಿಗೆ ಆಗೀಗ ಕೇಳಿಸಿ ವೈವಿಧ್ಯವನ್ನು ಆ ಮಟ್ಟಿಗೆ ತಾರದಿರದು.
ಉ) ಮೂರು ಮತ್ತು ನಾಲ್ಕು ಮಾತ್ರೆಗಳ ಸಂಯುಕ್ತ ಘಟಕಗಳುಳ್ಳ ರಚನೆ:
ನಾನ | ನಾನನ | ನಾನಾನಾ | ನಾನ | ನಾನನ | ನಾನನಾ |
ನಾನ | ನಾನಾ | ನನಾ | ನಾನಾ | ನಾನ | ನಾನಾ | ನನಾ | ನನಾ |
ನನಾ | ನಾನನ | ನಾನಾನಾ | ನನಾ | ನಾನನ | ನಾನನಾ |
ಇವು ಮೂರು ಮತ್ತು ನಾಲ್ಕು ಮಾತ್ರೆಗಳ ಮಿಶ್ರಲಯವನ್ನು ಧ್ವನಿಸುವ ಘಟಕಗಳು ಹೆಚ್ಚಾಗಿರುವ ಮಾದರಿಗಳು. ಇಷ್ಟೂ ಮಾದರಿಗಳಲ್ಲಿ ಓಜಪಾದ ಮತ್ತು ಯುಕ್ಪಾದಗಳ ಮೊದಲೆರಡು ಘಟಕಗಳ ಸೇರಿಕೆಯಲ್ಲಿ ಮಾತ್ರ ಮೂರು ಮತ್ತು ನಾಲ್ಕು ಮಾತ್ರೆಗಳ ಮಿಶ್ರಲಯ ಸ್ಫುರಿಸುತ್ತದೆ. ಅನಂತರದ ಘಟಕಗಳಲ್ಲಿ ಹೆಚ್ಚೆಂದರೆ ಆರು ಮಾತ್ರೆಗಳ ಮೊತ್ತವಿರುವ ಕಾರಣ ಮಿಶ್ರಲಯಕ್ಕೆ ಆಸ್ಪದವಿಲ್ಲ. ಮಾತ್ರವಲ್ಲ, ಆರು ಮಾತ್ರೆಗಳ ಈ ಗುಂಪುಗಳಲ್ಲಿಯೂ ತ್ರ್ಯಶ್ರಗತಿ ಸ್ಫುಟವಾಗಿ ಉನ್ಮೀಲಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಯುಕ್ಪಾದಗಳ ಘಟಕಗಳ ಲಘ್ವಾದಿ ಗತಿ.
ಮೊದಲ ಮಾದರಿಯಲ್ಲಿ ಓಜಪಾದದ ಕಡೆಯ ಮೂರು ಗುರುಗಳು ಆ ಮುನ್ನ ಬಂದಿದ್ದ ಮಿಶ್ರಗತಿಗೆ ಪೂರ್ಣವಾಗಿ ವಿಸಂವಾದಿಯಾಗಿವೆ; ಹೀಗಾಗಿ ಲಯಾನ್ವಿತತೆಗೆ ಎರವಾಗಿವೆ. ಯುಕ್ಪಾದದಲ್ಲಿ ಕಡೆಯ ಮೂರು ಅಕ್ಷರಗಳ ರ-ಗಣವು ಆ ಮುನ್ನ ಬಂದ ಮಿಶ್ರಲಯಕ್ಕೆ ಪೂರಕವಾಗುವಂತೆ ಮೂರು ಮಾತ್ರೆಗಳ ಒಂದು ಘಟಕ ಮತ್ತು ಗುರುವೊಂದರ ರೂಪದ ಊನಗಣವಾಗಿ ಮೈವೆತ್ತು ತನ್ಮೂಲಕ ಮಿಶ್ರಗತಿಯನ್ನು ಅಸ್ಖಲಿತವಾಗಿ ಉನ್ಮೀಲಿಸಿದೆ. ಹೀಗೆ ಈ ಮಾದರಿಯ ಓಜಪಾದ-ಯುಕ್ಪಾದಗಳಲ್ಲಿ ಮಿಶ್ರಲಯದ ಪ್ರಾಚುರ್ಯವಿದ್ದರೂ ಕೇಳುಗರಿಗೆ ಇದು ಸ್ವಲ್ಪವೂ ಪ್ರತೀತವಾಗದಂತೆ ನಡುವಿನಲ್ಲಿ ಬಂದ ಮೂರು ಗುರುಗಳು ವರ್ತಿಸುತ್ತಿರುವುದು ಛಂದೋಗತಿಯ ವಿಸ್ಮಯಗಳಲ್ಲೊಂದು. ಒಟ್ಟಿನಲ್ಲಿ ಲಯಾನ್ವಿತವಾಗಬಲ್ಲ ಮಾದರಿ ಲಯರಹಿತವಾಗಿ ಪರಿಣಮಿಸಿದೆ.
ಎರಡನೆಯ ಮಾದರಿಯಲ್ಲಿ ಏಳು ಮಾತ್ರೆಗಳ ಘಟಕವು ಓಜಪಾದ ಮತ್ತು ಯುಕ್ಪಾದಗಳ ಆದಿಯಲ್ಲಿ ಅಸ್ಖಲಿತವಾಗಿ ಉಳಿದಿದೆ. ಬಳಿಕ ಬರುವ ಲಘ್ವಾದಿಯಾದ ‘ನ-ನಾ’ ಎಂಬ ವಿನ್ಯಾಸವು ಲಯಾನ್ವಿತತೆಗೆ ಅಡ್ಡಿಯಾಗಿದೆ. ನಾವೆಲ್ಲರೂ ಬಲ್ಲಂತೆ ಮಿಶ್ರಲಯದ ಮೊದಲ ಮೂರು ಮಾತ್ರೆಗಳು ಲಘ್ವಾದಿಯಾದರೆ ಅಲ್ಲಿಯ ಲಯವು ಹದಗೆಡುತ್ತದೆ. ಹೀಗಾಗಿ ಇಲ್ಲಿಯ ಓಜಪಾದದಲ್ಲಿ ಮಿಶ್ರಲಯದ ಎರಡು ಘಟಕಗಳಿಗೆ ಅವಕಾಶವಾಗಿದ್ದರೂ ಒಟ್ಟಂದದ ಲಯಸುಭಗತೆ ತಪ್ಪಿದೆ. ಯುಕ್ಪಾದದಲ್ಲಂತೂ ಈ ಮುನ್ನ ತಿಳಿಸಿದಂತೆ ಲಘ್ವಾದಿಯಾದ ಎರಡು ತ್ರಿಮಾತ್ರಾಘಟಕಗಳು ಬಂದ ಕಾರಣ ಮಿಶ್ರಯಲಕ್ಕೆ ಆಸ್ಪದ ದೊರೆತಿಲ್ಲ.
ಮೂರನೆಯ ಮಾದರಿ ಬಲುಮಟ್ಟಿಗೆ ಮೊದಲ ಮಾದರಿಯನ್ನೇ ಅನುಸರಿಸಿದೆ. ಓಜಪಾದ ಮತ್ತು ಯುಕ್ಪಾದಗಳ ಮೊದಲಿಗೆ ಬರುವ ‘ನನಾ’ ಎಂಬ ಲಘ್ವಾದಿಯಾದ ಘಟಕವು ಮಿಶ್ರಲಯಕ್ಕೆ ಅನುಕೂಲಿಸುತ್ತಿಲ್ಲ. ಇದನ್ನು ಈಗಷ್ಟೇ ಚರ್ಚಿಸಿದ್ದೇವೆ.
ಒಟ್ಟಿನಲ್ಲಿ ಶ್ಲೋಕದ ಗುರುಲಘುವಿನ್ಯಾಸದಲ್ಲಿ ಮಿಶ್ರಲಯಕ್ಕೆ ಅವಕಾಶವಿದ್ದರೂ ಅದು ಆದ್ಯಂತ ಸ್ಫುರಿಸುವುದೇ ಇಲ್ಲ. ಏನಿದ್ದರೂ ಗತಿಪ್ರಜ್ಞಾಶೀಲರಿಗೆ ಆಗೀಗ ಅಷ್ಟಿಷ್ಟು ಸ್ಫುರಿಸಬಹುದು. ಆದರೆ ಇದು ಶ್ಲೋಕದ ಲಯರಹಿತತೆಯನ್ನು ಮಾರ್ಪಡಿಸಲು ಶಕ್ತವಲ್ಲ.
ಊ) ಮೂರು ಮತ್ತು ಐದು ಮಾತ್ರೆಗಳ ಸಂಯುಕ್ತ ಘಟಕಗಳುಳ್ಳ ರಚನೆ:
ನಾನ | ನಾನಾನ | ನಾನಾನಾ | ನಾನ | ನಾನಾನ | ನಾನನಾ |
ನನಾ | ನಾನಾನ | ನಾನಾನಾ | ನನಾ | ನಾನಾನ | ನಾನನಾ |
ಇವು ಮೂರು ಮತ್ತು ಐದು ಮಾತ್ರೆಗಳ ಸಂತುಲಿತಮಧ್ಯಾವರ್ತಗತಿಯನ್ನು ಒಳಗೊಂಡ ಮಾದರಿಗಳು. ಇವುಗಳಲ್ಲಿ ಮೂರು ಮತ್ತು ಐದು ಮಾತ್ರೆಗಳ ಘಟಕಗಳು ಒಂದು ಪಾದಕ್ಕೆ ಒಂದೇ ಆಗಿವೆ. ಉಳಿದಂತೆ ಓಜಪಾದಗಳಲ್ಲಿ ಮೂರು ಗುರುಗಳ ಆರು ಮಾತ್ರೆಗಳೂ ಯುಕ್ಪಾದಗಳಲ್ಲಿ ರ-ಗಣರೂಪದ ಐದು ಮಾತ್ರೆಗಳೂ ಇವೆ.
ಮೊದಲ ಮಾದರಿಯಲ್ಲಿ ಯುಕ್ಪಾದದ ಕೊನೆಯ ಘಟಕ ರ-ಗಣವಾಗಿರುವ ಕಾರಣ ಅದು ಮೂರು ಮಾತ್ರೆಗಳ ಒಂದು ಗಣ ಮತ್ತು ಗುರುರೂಪದ ಊನಗಣದ ಆಕೃತಿಯನ್ನು ತಾಳಿ ಇಡಿಯ ಪಾದ ಲಯಸಮತ್ವವನ್ನು ಹೊಂದುವಂತೆ ಮಾಡಿದೆ. ಆದರೆ ನಾವು ಈ ಮುನ್ನ (ಉ) ವಿಭಾಗದಲ್ಲಿ ನೋಡಿದಂತೆ ಇಲ್ಲಿಯೂ ಕೂಡ ಸಂತುಲಿತಮಧ್ಯಾವರ್ತಗತಿಯ ಎರಡು ಘಟಕಗಳ ನಡುವೆ ಬಂದಿರುವ ಮೂರು ಗುರುಗಳ ಆರು ಮಾತ್ರೆಗಳು ಲಯಾನ್ವಿತತೆಗೆ ಅಡ್ಡಿಯಾಗಿವೆ.
ಎರಡನೆಯ ಮಾದರಿ ಬಲುಮಟ್ಟಿಗೆ ಮೊದಲ ಮಾದರಿಯದೇ ಪ್ರತಿಫಲನ. ಓಜಪಾದ ಮತ್ತು ಯುಕ್ಪಾದಗಳ ಮೊದಲಿಗೆ ಬರುವ ಮೂರು ಮಾತ್ರೆಗಳ ಘಟಕವು ‘ನನಾ’ ಎಂಬ ಲಘ್ವಾದಿವಿನ್ಯಾಸವನ್ನು ಹೊಂದಿರುವ ಕಾರಣ ಲಯಸಮತ್ವಕ್ಕೆ ಸ್ವಲ್ಪ ತೊಡಕಾಗಿದೆ. ಈ ಮೂಲಕ ಶ್ಲೋಕದ ಮೂಲಸ್ವರೂಪವಾದ ಲಯರಹಿತತೆಯನ್ನೇ ಮತ್ತುಷ್ಟು ಪೋಷಿಸಿದೆ.
ಇದಿಷ್ಟು ಚರ್ಚೆಯನ್ನು ಗಮನಿಸಿದಾಗ ಶ್ಲೋಕದಲ್ಲಿ ಯಾವುದೇ ಬಗೆಯ ಲಯಾನ್ವಿತಗತಿಯ ಸಾತತ್ಯ ಇಲ್ಲವೆಂದು ತಿಳಿಯುತ್ತದೆ. ಲಯವೊಂದು ಕೇಳುಗರ ಮನಸ್ಸಿನಲ್ಲಿ ನಿಲ್ಲಬೇಕೆಂದರೆ ಲಯಾನ್ವಿತವಾದ ಏಕರೂಪದ ಗಣಗಳು ಮತ್ತೆ ಮತ್ತೆ ಆವರ್ತಿಸಬೇಕು. ಇಂಥ ಆವರ್ತನ ಕನಿಷ್ಠ ಮೂರು ಬಾರಿಯಾದರೂ ಆಗಬೇಕು. ಇಲ್ಲವೇ ಎರಡು ಬಾರಿ ಪೂರ್ಣಘಟಕಗಳ ಆವರ್ತನ ಮತ್ತೊಮ್ಮೆ ಊನಗಣದ ಪ್ರಯೋಗವಾದರೂ ಇರಬೇಕು. ಅಲ್ಲಿ ಲಘ್ವಾದಿಯಾದ ಗಣಗಳ, ಪ್ರತೀಪಗಣಗಳ ಮೇಲಾಟ ಇರಬಾರದು. ಒಂದು ವೇಳೆ ಇದ್ದರೂ ಅದು ಒಟ್ಟಂದದ ಲಯಸಮತ್ವಕ್ಕೆ ಧಕ್ಕೆ ತಾರದಂತಿರಬೇಕು. ಇಂಥ ಯಾವೊಂದು ವ್ಯವಸ್ಥೆಯನ್ನೂ ನಾವು ಶ್ಲೋಕದಲ್ಲಿ ಕಾಣುವುದಿಲ್ಲ. ಇಲ್ಲಿ ವ್ಯವಸ್ಥಿತವಾಗಿ ಲಘ್ವಾದಿಯಾದ ಗಣಗಳೋ ಗುರುಗಳೋ ಬಂದು ಲಯಸಮತ್ವವನ್ನು ಮುರಿಯುತ್ತಿರುತ್ತವೆ. ಈ ಮೂಲಕ ಮಾತ್ರಾಜಾತಿಯಲ್ಲಿ ಕಾಣುವ ಏಕತಾನತೆಯನ್ನು ಇಲ್ಲವಾಗಿಸುತ್ತವೆ. ಹೀಗೆ ‘ನಿರೀಕ್ಷಿತವಾದ ವ್ಯವಸ್ಥೆ’ಯನ್ನು ಹಿತವಾದ ಅನಿರೀಕ್ಷಿತಗಳಿಂದ ಮುರಿಯುವ ಮೂಲಕ ಶ್ಲೋಕದ ಲಯರಹಿತಗತಿ ಉನ್ಮೀಲಿಸುತ್ತದೆ.
[1] ಇಲ್ಲಿಯ ಮೂರನೆಯ ಪಾದದ ಎರಡನೆಯ ಘಟಕವು ಪ್ರತೀಪಗಣವಾಗಿಯೋ ಲಘುಯುಗ್ಮವಾಗಿಯೋ ಪರಿಣಮಿಸಿದ್ದಲ್ಲಿ ಶ್ಲೋಕದ ಗತಿ ಮತ್ತೂ ಸೊಗಯಿಸುತ್ತಿತ್ತು. ಏಕೆಂದರೆ ಈಗಿರುವ ವಿನ್ಯಾಸದಲ್ಲಿ ವರ್ಜ್ಯವೆನಿಸಿದ ರ-ಗಣವು ತೃತೀಯಪಾದದ ಪ್ರಥಮಾಕ್ಷರದ ಬಳಿಕ ತಲೆದೋರಿದೆ. ಹೀಗಾಗಿ ಇಲ್ಲಿಯ ಮೂರನೆಯ ಪಾದದ ವಿನ್ಯಾಸವು ಸೌಂದರ್ಯಸಾಧ್ಯತೆಗಿಂತ ಮಿಗಿಲಾಗಿ ಗಣಿತೀಯ ಸಾಧ್ಯತೆಯೆನಿಸಿದೆ.
To be continued.