ಪರಿಷ್ಕೃತ ಲಕ್ಷಣ
ಈ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಈ ಮುನ್ನ ಹೇಳಿದ ಶ್ಲೋಕದ ಲಕ್ಷಣಗಳು ಪರ್ಯಾಪ್ತವಲ್ಲವೆಂದು ತಿಳಿಯುತ್ತದೆ. ಬಹುಶಃ ಈ ಕಾರಣದಿಂದಲೇ ಮಧ್ಯಕಾಲೀನ ಛಂದೋವಿದರು ಇನ್ನಷ್ಟು ಪರಿಷ್ಕೃತವಾದ ಲಕ್ಷಣವನ್ನು ರೂಪಿಸಿದ್ದಾರೆ. ಉದಾಹರಣೆಗೆ ‘ವೃತ್ತರತ್ನಾಕರ’ದ ನಾರಾಯಣಭಟ್ಟೀಯ ವ್ಯಾಖ್ಯೆಯು ಶ್ಲೋಕದ ಎಲ್ಲ ಪಾದಗಳ ಮೊದಲ ನಾಲ್ಕು ಅಕ್ಷರಗಳ ವಿನ್ಯಾಸಗಳಿಗೂ ಅನ್ವಯಿಸುವಂಥ ಕೆಲವೊಂದು ನಿಯಮಗಳನ್ನು ರೂಪಿಸಿದೆ (೨.೨೧). ಅವು ಹೀಗಿವೆ:
ಪ್ರತಿಯೊಂದು ಸಾಲಿನ ಮೊದಲ ಹಾಗೂ ಕೊನೆಯ ಅಕ್ಷರಗಳ ಗುರುತ್ವ ಅಥವಾ ಲಘುತ್ವಗಳಲ್ಲಿ ಐಚ್ಛಿಕತೆ ಉಂಟು. ಆದರೆ ನಡುವೆ ಬರುವ ಆರು ಅಕ್ಷರಗಳಲ್ಲಿ ಇಂಥ ಸ್ವಾತಂತ್ರ್ಯವಿಲ್ಲ. ಯಾವುದೇ ಪಾದದಲ್ಲಾಗಲಿ ಎರಡು, ಮೂರು ಮತ್ತು ನಾಲ್ಕನೆಯ ಅಕ್ಷರಗಳನ್ನು ಒಳಗೊಂಡ ಭಾಗದಲ್ಲಿ ಸ-ಗಣವಾಗಲಿ, ನ-ಗಣವಾಗಲಿ ಬರಬಾರದು. ಯುಕ್ಪಾದಗಳ ಇವೇ ಅಕ್ಷರಗಳ ಸ್ಥಾನದಲ್ಲಿ ರ-ಗಣ ಬರಬಾರದು.
ಇದು ಅನುಷ್ಟುಪ್‌ವರ್ಗದ ‘ಪಥ್ಯಾವಕ್ತ್ರ’ ಎಂಬ ಪ್ರಭೇದಕ್ಕೆ ಅನ್ವಿತವಾಗಿದೆ. ಇದನ್ನೇ ಶ್ಲೋಕದ ಸಾಮಾನ್ಯಲಕ್ಷಣವಾಗಿ ಸ್ವೀಕರಿಸಲಾಗಿದೆ. ಮೇಲೆ ಕಾಣಿಸಿದ ಲಕ್ಷಣ ಶ್ಲೋಕದ ಗತಿಯಲ್ಲಿ ತಲೆದೋರಬಹುದಾದ ಎಲ್ಲ ಬಗೆಯ ಶ್ರುತಿಕಟುತ್ವಗಳನ್ನೂ ಬಲುಮಟ್ಟಿಗೆ ನಿವಾರಿಸಿಕೊಂಡಿದೆ. ಇದರ ಅನುಸರಣೆಯಿಂದ ಪ್ರತಿಪಾದದ ಪಂಚಮಲಘುವನ್ನು ಒಳಗೊಳ್ಳದಂತೆ ಮೂರು ಲಘುಗಳ ಅವ್ಯವಹಿತ ಪ್ರಯೋಗಕ್ಕೆ ಅವಕಾಶವಿರುವುದಿಲ್ಲ. ಜೊತೆಗೆ ಆದ್ಯಂತ ಲ-ಗಂ ವಿನ್ಯಾಸವುಳ್ಳ ಪ್ರಮಾಣಿಕಾಗತಿಯು ಯುಕ್ಪಾದಗಳಲ್ಲಿ ತಲೆದೋರುವುದಿಲ್ಲ. ಪಾದಗಳು ಭ-ಗಣದಿಂದ ಆರಂಭವಾಗುವ ಮೂಲಕ ಒದಗುವ ಶ್ರುತಿಕಟುತೆಗೂ ಅವಕಾಶವಿರುವುದಿಲ್ಲ.
ಹೀಗೆ ಪರಿಷ್ಕೃತವಾದ ಲಕ್ಷಣವನ್ನು ಮತ್ತೂ ಪರಿಷ್ಕರಿಸುವುದು ಅಪೇಕ್ಷಣೀಯ.
(೧) ಯುಕ್ಪಾದಗಳ ಮೊದಲ ಅಕ್ಷರದ ಬಳಿಕ ವರ್ಜ್ಯವಾಗಿರುವ ರ-ಗಣವು ಓಜಪಾದಗಳ ಅದೇ ಎಡೆಯಲ್ಲಿ ವರ್ಜ್ಯವಾದರೆ ಒಳಿತು.
(೨) ನಾಲ್ಕನೆಯ ಅಕ್ಷರವು ಲಘುವಾಗುವ ಪಕ್ಷದಲ್ಲಿ ಆ ಪಾದದ ಆದಿಯಲ್ಲಿ ತ-ಗಣ ಮತ್ತು ಜ-ಗಣಗಳು ವರ್ಜ್ಯವಾದರೆ ಒಳಿತು.
ಗತಿಸೌಂದರ್ಯವು ಭಾಷಾಪದಗತಿ ಮತ್ತು ಛಂದಃಪದಗತಿಗಳೆಂಬ ಎರಡು ದಂಡೆಗಳ ನಡುವೆ ಹರಿಯುವ ನದಿ. ಆದುದರಿಂದ ಛಂದಃಪದಗತಿಯ ದಂಡೆಯನ್ನು ಒಡೆದುಕೊಂಡು ಹೋದಂತೆಲ್ಲ ನದಿಯ ಹರಿವು ಹದಗೆಡುತ್ತದೆ. ಛಂದಃಪದಗತಿಯಲ್ಲಿ ಹತ್ತಾರು ಸಾಧ್ಯತೆಗಳಿದ್ದಾಗಲೂ ಅವುಗಳ ಪೈಕಿ ಮಿಗಿಲಾಗಿ ಶ್ರುತಿಹಿತವಾದುವನ್ನೇ ಆಯ್ದುಕೊಂಡರೆ ಅವು ಭಾಷಾಪದಗತಿಗೆ ಕೂಡ ಅನುಕೂಲಿಗಳಾಗುತ್ತವೆ. ಏಕೆಂದರೆ ಯತಿಭಂಗವನ್ನು ತರುವಲ್ಲಿ ಭಾಷಾಪದಗತಿಯದೇ ಹೆಚ್ಚಿನ ಪಾತ್ರ. ಈ ತೊಡಕನ್ನು ನಿವಾರಿಸಿಕೊಂಡರೆ ಪದ್ಯಗತಿಯು ತನ್ನಂತೆಯೇ ಸೊಗಸಾಗುವುದು. ಹೀಗೆ ಒಳ್ಳೆಯ ಛಂದಃಪದಗತಿ, ಅದಕ್ಕೆ ಅವಿರುದ್ಧವಾದ ಭಾಷಾಪದಗತಿ ಮತ್ತು ಇವೆರಡರ ಮೂಲಕ ಸುಂದರವಾದ ಪದ್ಯಗತಿ ಎಂಬ ಅನುಕ್ರಮ ಪಾಲಿತವಾಗುತ್ತದೆ.
ಅತ್ಯುತ್ತಮ ಗತಿಸಾಧ್ಯತೆಗಳು
ಅಕ್ಷರಜಾತಿಗೆ ಸೇರುವ ಶ್ಲೋಕವು ಮಾತ್ರಾಜಾತಿ ಮತ್ತು ಕರ್ಷಣಜಾತಿಗಳ ಬಂಧಗಳಂತೆ ತನ್ನ ಗುರು-ಲಘುವಿನ್ಯಾಸದಲ್ಲಿ ಕೆಲಮಟ್ಟಿನ ಸ್ವಾತಂತ್ರ್ಯವನ್ನು ತಳೆದಿದೆ. ಆದರೆ ಮಾತ್ರಾಜಾತಿಗಳ ಹಾಗೆ ಸತಾನ ಗಣಗಳನ್ನಾಗಲಿ, ಮಾತ್ರಾಸಮತೆಯನ್ನಾಗಲಿ ಹೊಂದಿಲ್ಲ. ಜೊತೆಗೆ ಕರ್ಷಣಜಾತಿಗಳ ಹಾಗೆ ತಾಲಾನುಕೂಲವಾದ ಗಣಗಳನ್ನಾಗಲಿ, ಕಾಲಪ್ರಮಾಣದ ಸಮತೆಯನ್ನಾಗಲಿ ಪಡೆದಿಲ್ಲ. ಹೀಗಾಗಿ ಈ ಮೂರು ವರ್ಗಗಳ ನಡುವೆ ಕೆಲವಂಶಗಳಲ್ಲಿ ಸಾಮ್ಯ ಮತ್ತು ಕೆಲವಂಶಗಳಲ್ಲಿ ವೈಷಮ್ಯವಿದೆ.
ವಿಶಿಷ್ಟತೆಯನ್ನು ಗಮನಿಸುವಾಗ ವೈಷಮ್ಯಕ್ಕೆ ಸಹಜವಾಗಿಯೇ ಹೆಚ್ಚಿನ ಅವಧಾರಣೆ ಸಲ್ಲುತ್ತದೆ. ಶ್ಲೋಕದಲ್ಲಿ ಕಾಲಪ್ರಮಾಣ ಅಥವಾ ಮಾತ್ರಾಪ್ರಮಾಣದಿಂದ ಸಮಾನವಾದ ಘಟಕಗಳು ಬಂದಾಗ ಅವು ಲಯಾನ್ವಿತವಾಗದೆ, ಶ್ರುತಿಕಟುವೂ ಎನಿಸದೆ ಸಲ್ಲಬೇಕಾದ ಅನಿವಾರ್ಯತೆ ಉಂಟು. ಇಂಥ ಸೂಕ್ಷ್ಮವನ್ನು ಕಂಡುಕೊಂಡೊಡನೆಯೇ ಶ್ಲೋಕದ ಅತ್ಯುತ್ತಮ ಗತಿಸಾಧ್ಯತೆಗಳು ಉನ್ಮೀಲಿಸುತ್ತವೆ.
ಮೊದಲಿಗೆ ಗುರು-ಲಘುಗಳ ಯುಗ್ಮಕಗಳೇ ಹೆಚ್ಚಾಗಿರುವ ಶ್ಲೋಕಗತಿಯ ಪ್ರಸ್ತಾರವನ್ನು ಗಮನಿಸಬಹುದು.
ನನಾ ನಾನ ನನಾ ನಾನ ನನಾ ನಾನ ನನಾ ನನಾ ||
ನಾನ ನಾನ ನನಾ ನಾನ ನಾನ ನಾನ ನನಾ ನನಾ ||
ನಾನಾ ನಾನಾ ನನಾ ನಾನಾ ನಾನಾ ನಾನಾ ನನಾ ನನಾ ||
ನನನಾ ನನನಾ ನಾನಾ ನನನಾ ನನನಾ ನನಾ ||
ಈ ಉದಾಹರಣೆಗಳ ಪೈಕಿ ಮೊದಲನೆಯದು ಆದ್ಯಂತವಾಗಿ ಮೂರು ಮಾತ್ರೆಗಳ ಘಟಕಗಳನ್ನೇ ಹೊಂದಿದೆ. ಎರಡನೆಯದು ನಾಲ್ಕು ಮಾತ್ರೆಗಳ ಘಟಕಗಳನ್ನು ಹೆಚ್ಚಾಗಿ ಹೊಂದಿದ್ದರೂ ಮೂರು ಮಾತ್ರೆಗಳ ಮೂರು ಘಟಕಗಳನ್ನು ಪೂರ್ವಾರ್ಧದಲ್ಲಿಯೂ ಒಂದು ಘಟಕವನ್ನು ಉತ್ತರಾರ್ಧದಲ್ಲಿಯೂ ತಳೆದಿರುವುದನ್ನು ಗಮನಿಸಬಹುದು.
ಆದ್ಯಂತ ಮೂರು ಮಾತ್ರೆಗಳ ಮಾನವುಳ್ಳ ಗುರು-ಲಘುಗಳ ಯುಗ್ಮಗಳಿಂದಲೇ ಗತಿಸುಭಗತೆಯುಳ್ಳ ಶ್ಲೋಕವೊಂದು ರೂಪಿತವಾಗಲು ಸಾಧ್ಯವೆಂದು ಮೊದಲನೆಯ ಉದಾಹರಣೆಯ ಮೂಲಕ ತಿಳಿಯುತ್ತದೆ. ಜೊತೆಗೆ ಇಂಥ ಯುಗ್ಮಗಳು ಆದ್ಯಂತವಾಗಿ ಐಕರೂಪ್ಯವನ್ನು ಹೊಂದಿಲ್ಲದೆ ಅಲ್ಲಲ್ಲಿ ಪ್ರತೀಪರೂಪವನ್ನು ತಾಳಬೇಕೆಂಬ ತಥ್ಯವೂ ಗೋಚರವಾಗುತ್ತದೆ. ಮಾತ್ರವಲ್ಲ, ಇಂಥ ಪ್ರತೀಪರೂಪಗಳು ಯಾದೃಚ್ಛಿಕವಾಗಿ ಬರದೆ ವಿಶಿಷ್ಟವೂ ನಿರ್ದಿಷ್ಟವೂ ಆದ ಸ್ಥಾನಗಳಲ್ಲಿಯೇ ಬರಬೇಕೆಂಬ ಸೂಕ್ಷ್ಮವೂ ಗಮನಕ್ಕೆ ಬರುತ್ತದೆ. ಸಾವಧಾನವಾಗಿ ನೋಡಿದಾಗ ಇಂಥ ಪ್ರತೀಪರೂಪಗಳು ಮಾತ್ರಾಜಾತಿಗಳ ಬಂಧಗಳಲ್ಲಿ ಕಾಣುವಂಥ ತ್ರ್ಯಶ್ರಗತಿಯ ಲಯಾನ್ವಿತತೆಯನ್ನು ಮುರಿಯಲೆಂದೇ ನಿರ್ದಿಷ್ಟ ಸ್ಥಾನಗಳಲ್ಲಿ ಬರುವ ಮೂಲಕ ಶ್ಲೋಕಕ್ಕೇ ವಿಶಿಷ್ಟವಾದ ಲಯರಹಿತ ಗತಿಯನ್ನು ಕಾಪಾಡುತ್ತಿವೆಯೆಂದು ಸ್ಪಷ್ಟವಾಗುತ್ತದೆ. ಈ ಉದಾಹರಣೆಯ ಪೂರ್ವಾರ್ಧವನ್ನು ಕಂಡಾಗ ಯುಕ್ಪಾದದ ಕೊನೆಯ ನಾಲ್ಕು ಅಕ್ಷರಗಳಲ್ಲಿ ಇರಲೇಬೇಕಾದ ‘ಲಗಂ-ಲಗಂ’ ಎಂಬ ಶಾಶ್ವತ ವಿನ್ಯಾಸವನ್ನುಳಿದು ಮಿಕ್ಕಂತೆ ಎಲ್ಲ ಸಮಸ್ಥಾನಗಳಲ್ಲಿ ‘ಗಂ-ಲ’ ಎಂಬ ಪ್ರತೀಪವಿನ್ಯಾಸಗಳು ಬಂದಿರುವುದು ಸ್ಪಷ್ಟವಾಗುತ್ತದೆ ಮತ್ತಿವುಗಳ ಸಂಖ್ಯೆ ಮೂರು ಎಂಬ ತಥ್ಯವೂ ತಿಳಿಯುತ್ತದೆ. ಇನ್ನು ಉತ್ತರಾರ್ಧವನ್ನು ಕಂಡಾಗ ಯುಕ್ಪಾದದ ಕಡೆಯಲ್ಲಿ ಬರಲೇಬೇಕಾದ ‘ಲಗಂ-ಲಗಂ’ ಎಂಬ ವಿನ್ಯಾಸವನ್ನುಳಿದು ಮಿಕ್ಕಂತೆ ಇಡಿಯ ಪದ್ಯಾರ್ಧದಲ್ಲಿ ಕೇವಲ ಒಂದೇ ಒಂದು ಎಡೆಯಲ್ಲಿ ಮಾತ್ರ ‘ಲ-ಗಂ’ ಎಂಬ ಪ್ರತೀಪರೂಪವು ಬರುವ ಮೂಲಕ ಶ್ಲೋಕದ ಗತಿಸುಭಗತೆ ರಕ್ಷಿತವಾಗಿರುವುದು ಸ್ಪಷ್ಟ. ಒಟ್ಟಿನಲ್ಲಿ ಹೇಗೆ ನೋಡಿದರೂ ಸದ್ಯದ ಉದಾಹರಣೆಯ ಪೂರ್ವೋತ್ತರಾರ್ಧಗಳಲ್ಲಿ ಕಾಣುವ ಎರಡೂ ಮಾದರಿಗಳ ಪೈಕಿ ಎಲ್ಲಿಯೂ ಪ್ರತೀಪರೂಪದ ವಿನ್ಯಾಸಗಳು ಮೂರಕ್ಕಿಂತ ಹೆಚ್ಚಾಗಿಲ್ಲವೆಂದು ಸ್ಪಷ್ಟವಾಗುತ್ತದೆ. ಈ ಕಾರಣದಿಂದಲೇ ‘ಗಂ-ಲ’ ಎಂಬ ವಿನ್ಯಾಸವು ಓಜ ಮತ್ತು ಯುಕ್ಪಾದಗಳೆರಡರ ಮೊದಲ ನಾಲ್ಕು ಅಕ್ಷರಗಳ ಸ್ಥಾನದಲ್ಲಿ ಕೂಡ ಅವ್ಯವಹಿತವಾಗಿ ಬರಬಹುದೆಂದು ಗೊತ್ತಾಗುತ್ತದೆ.
‘ಲ-ಗಂ’ ವಿನ್ಯಾಸದ ಯುಗ್ಮಗಳು ಯುಕ್ಪಾದಗಳ ಕೊನೆಯ ನಾಲ್ಕು ಅಕ್ಷರಗಳಲ್ಲಿ ಅಳವಡಲೇ ಬೇಕಿರುವ ಕಾರಣ ಅವು ಮಿಕ್ಕಂತೆ ಎಲ್ಲಿಯೂ ಒಂದಕ್ಕಿಂತ ಹೆಚ್ಚು ಬಾರಿ ಅವ್ಯವಹಿತವಾಗಿ ಕಾಣಿಸಿಕೊಳ್ಳುವಂತಿಲ್ಲ.
ಎರಡನೆಯ ಉದಾಹರಣೆಯನ್ನು ಗಮನಿಸಿದಾಗ ಇಲ್ಲಿಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳು ಕ್ರಮವಾಗಿ ಶ್ಲೋಕವೊಂದರಲ್ಲಿ ಬರಬಹುದಾದ ಅತಿ ಹೆಚ್ಚಿನ ಹಾಗೂ ಅತಿ ಕಡಮೆಯ ಸಂಖ್ಯೆಯ ಮಾತ್ರೆಗಳಿಂದ ಕೂಡಿರುವುದು ಸ್ಪಷ್ಟವಾಗುತ್ತದೆ. ಇಲ್ಲಿ ಪ್ರತೀಪಗಣಗಳ ಪಾತ್ರವಿಲ್ಲದಿದ್ದರೂ ‘ಲ-ಗಂ’ ವಿನ್ಯಾಸವುಳ್ಳ ಗುರು-ಲಘುಯುಗ್ಮಗಳು ಪೂರ್ವಾರ್ಧದ ಗತಿಸುಭಗತೆಯನ್ನು ಕಾಪಾಡುವಲ್ಲಿ ನಿರ್ಣಾಯಕವಾಗಿರುವುದು ಸುವೇದ್ಯ. ಅಂತೆಯೇ ಉತ್ತರಾರ್ಧದ ಗತಿಸುಭಗತೆಯನ್ನು ರಕ್ಷಿಸುವಲ್ಲಿ ಗುರುಗಳ ಪಾತ್ರವೇ ಕೀಲಕವಾಗಿರುವುದು ಸ್ಪಷ್ಟ.
ಮೊದಲ ಉದಾಹರಣೆಯಲ್ಲಿ ಗುರು-ಲಘುಯುಗ್ಮಗಳ ಸಂಖ್ಯೆ ಪ್ರತಿಯೊಂದು ಪಾದದಲ್ಲಿಯೂ ನಾಲ್ಕು-ನಾಲ್ಕಾಗುವ ಮೂಲಕ ಘಟಕಗಳ ಚತುರಸ್ರತೆಯು ಚೆನ್ನಾಗಿ ರಕ್ಷಿತವಾಗಿದ್ದರೂ ಪ್ರತೀಪವಿನ್ಯಾಸದ ಘಟಕಗಳ ಕಾರಣ ಅದು ಒದಗಿಸುವ ಲಯಾನ್ವಿತತೆಯು ನಿವಾರಿತವಾಗಿದೆ; ಈ ಮೂಲಕ ಶ್ಲೋಕದ ಲಯರಹಿತ ಗತಿರಮ್ಯತೆ ಉನ್ಮೀಲಿತವಾಗಿದೆ. ಎರಡನೆಯ ಉದಾಹರಣೆಯಲ್ಲಿ ಪೂರ್ವಾರ್ಧದ ಮಟ್ಟಿಗೆ ಹೆಚ್ಚು-ಕಡಮೆ ಇದೇ ರೀತಿಯಲ್ಲಿ ಘಟಕಗಳ ಚತುರಸ್ರತೆಯು ‘ಲ-ಗಂ’ ವಿನ್ಯಾಸದ ಗುರು-ಲಘುಯುಗ್ಮಗಳ ಹಾಗೂ ಇವುಗಳಲ್ಲಿ ಅಂತರ್ಗತವಾದ ತ್ರಿಮಾತ್ರಾಮಾನದ ಮೂಲಕ ಮುರಿಯಲ್ಪಟ್ಟು ಲಯರಹಿತವಾದ ಶ್ಲೋಕಗತಿಯ ಸುಭಗತೆಯು ರಕ್ಷಿತವಾಗಿದೆ. ಆದರೆ ಉತ್ತರಾರ್ಧದಲ್ಲಿ ಆದ್ಯಂತವಾಗಿ ನಾಲ್ಕು-ನಾಲ್ಕು ಮಾತ್ರೆಗಳ ಗಣವಿನ್ಯಾಸವು ಸ್ಫುಟವಾಗಿ ಮೂಡಿದ್ದರೂ ಗಣಸಂಖ್ಯೆಯಲ್ಲಿ ಚತುರಸ್ರತೆ ಇಲ್ಲವಾಗಿದೆ. ಮಾತ್ರವಲ್ಲ, ಓಜಪಾದದಲ್ಲಿ ಊನಗಣದ ಸಾಧ್ಯತೆಯೂ ಇಲ್ಲದಂತಾಗಿ ಪಾದವು ಸಾಕಾಂಕ್ಷವಾಗಿ ಮುಗಿಯುವ ಮೂಲಕ ಲಯಾನ್ವಿತತೆಯ ಅಪಾಯ ದೂರವಾಗಿದೆ. ಇನ್ನು ಯುಕ್ಪಾದದ ಕೊನೆಗೆ ಊನಗಣ ಬಂದಂತೆ ತೋರಿದರೂ ಅದು ‘ಲ-ಗಂ’ ಎಂಬ ವಿನ್ಯಾಸವನ್ನು ತಾಳುವ ಮೂಲಕ ಮಾತ್ರಾಜಾತಿಯ ಬಂಧಗಳಿಗೆ ವಿಷಮವೆನಿಸುವ ಲಘ್ವಾದಿಯಾದ ಕಾರಣ ಇಲ್ಲಿಯೂ ಲಯರಹಿತತೆಗೇ ಮಾನ್ಯತೆ ಸಂದಿದೆ. ಅಲ್ಲದೆ ಈ ಯುಕ್ಪಾದಕ್ಕೆ ಮುನ್ನ ಬಂದಿರುವ ಓಜಪಾದದ ಲಯರಹಿತಗತಿಯು ತನ್ನ ಪ್ರಭಾವವನ್ನು ಮುಂದಿನ ಸಾಲಿಗೂ (ಯುಕ್ಪಾದಕ್ಕೂ) ಬೀರಿರುವ ಸಾಧ್ಯತೆಯೂ ಸ್ಪಷ್ಟವಾಗಿದೆ.
ಶ್ಲೋಕವು ತನ್ನ ಲಯರಹಿತತೆಯನ್ನು ಕಾಪಿಟ್ಟುಕೊಳ್ಳುವ ಮೂಲಕ ನೈಜವಾದ ಗತಿಸುಭಗತೆಯನ್ನು ಹೇಗೆಲ್ಲ ಉಳಿಸಿಕೊಳ್ಳಬಲ್ಲುದೆಂಬ ಸಂಗತಿ ಈ ಉದಾಹರಣೆಗಳ ಮೂಲಕ ಮನವರಿಕೆಯಾಗದಿರದು.
ಈ ಉದಾಹರಣೆಗಳಿಂದ ಮತ್ತೂ ಒಂದು ಅಂಶ ಸ್ಪಷ್ಟವಾಗದಿರದು. ಶ್ಲೋಕದಲ್ಲಿ ಗುರುಗಳು ಹೆಚ್ಚಾದಂತೆಲ್ಲ ಅಲ್ಲಿ ಚತುರ್ಮಾತ್ರಾಘಟಕಗಳು ಸಹಜವಾಗಿ ಹೆಚ್ಚುತ್ತವೆ. ಲಘುಗಳು ಹೆಚ್ಚಾದಂತೆಲ್ಲ ಕೂಡ ಚತುರ್ಮಾತ್ರಾಘಟಕಗಳೇ ಅಧಿಕವಾಗುತ್ತವೆ. ಇದು ಮೇಲ್ನೋಟಕ್ಕೆ ವಿಚಿತ್ರವಾಗಿ ತೋರಬಹುದು. ಲಘುಬಾಹುಳ್ಯ ಇರುವಾಗ ಶ್ಲೋಕದ ಲಯರಹಿತಗತಿಯನ್ನು ರಕ್ಷಿಸಲು ನಿರ್ಣಾಯಕ ಸ್ಥಾನಗಳಲ್ಲಿ ಗುರುಗಳು ಬರಬೇಕಿರುವ ಸಂದರ್ಭವನ್ನು ನೆನೆದಾಗ ಈ ವೈಚಿತ್ರ್ಯಕ್ಕೆ ಕಾರಣವೇನೆಂದು ಸ್ಪಷ್ಟವಾಗುತ್ತದೆ. ಗುರು ಮತ್ತು ಲಘುಗಳು ಜೋಡಿಜೋಡಿಯಾಗಿ ಬರುವಾಗ ತ್ರಿಮಾತ್ರಾಘಟಕಗಳೇ ಹೆಚ್ಚಾಗಿ ತೋರಿಕೊಳ್ಳುತ್ತವೆ. ಇದು ಸೇಡಿಯಾಪು ಕೃಷ್ಣಭಟ್ಟರು ಗುರುತಿಸುವ ಗುರುಪ್ರಧಾನವಾದ ಮಧ್ಯಾಕ್ಷರಗತಿ (ಸೇಡಿಯಾಪು ಛಂದಃಸಂಪುಟ, ಪು. ೨೭೪). ಅವರೇ ಹೇಳುವಂತೆ ಇದು ವೈದಿಕ ಮತ್ತು ಲೌಕಿಕಸಂಸ್ಕೃತಗಳೆರಡಕ್ಕೂ ಸಹಜವಾದ ಭಾಷಾಪದಗತಿ. ಈ ಕಾರಣದಿಂದಲೇ ಇಂಥ ಗತಿಗೆ ವಿಪುಲವಾದ ಅವಕಾಶ ನೀಡಿರುವ ಶ್ಲೋಕವು ಸಂಸ್ಕೃತದ ಅತ್ಯಂತ ಸಹಜ-ಸುಂದರ-ಸುಲಭರೂಪದ ಛಂದಸ್ಸಾಯಿತು.
To be continued.