ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 5

This article is part 5 of 7 in the series ಅನುಷ್ಟುಪ್ ಶ್ಲೋಕ

ಈ ಮುನ್ನ ಕಾಣಿಸಿದ ಮಾದರಿಗಳಲ್ಲಿ ಹ್ರಸ್ವ ಮತ್ತು ಮಧ್ಯಮಗಾತ್ರದ ಬಗೆಬಗೆಯ ಅಕ್ಷರ / ಮಾತ್ರಾಘಟಕಗಳನ್ನು ಪರಿಶೀಲಿಸಿದಾಗ ‘ಇವೇ ಪರಿಮಾಣಗಳಲ್ಲಿ ಹೆಚ್ಚಿನ ಭಾಷಾಪದಗಳು ರೂಪುಗೊಳ್ಳುವುವೇ?’ ಎಂಬ ಸಂದೇಹ ಕೆಲವರಲ್ಲಿ ಮೂಡಬಹುದು. ಭಾಷಾಪದಗಳು ತಮ್ಮ ಪರಿಮಾಣದಲ್ಲಿ ಲಯಾನ್ವಿತವಾದ ಛಂದಃಪದಗಳಿಗಿಂತ ಹೆಚ್ಚು-ಕಡಮೆಗಳನ್ನು ಹೊಂದಿರುತ್ತವೆ ಎಂಬುದು ಅವರ ಸಂದೇಹಕ್ಕೆ ಕಾರಣ. ಆದರೆ ಇಂಥ ಸಂಶಯ ನಿಲ್ಲುವಂಥದ್ದಲ್ಲ.

ಭಾರತೀಯಭಾಷೆಗಳು ಪ್ರಾಯಿಕವಾಗಿ ಒಂದೇ ಬಗೆಯ ಪದಪದ್ಧತಿಯನ್ನು ಹೊಂದಿವೆ. ಈ ಮಾತು ಅವುಗಳ ಅಭಿಜಾತಸಾಹಿತ್ಯದ ಮಟ್ಟಿಗಂತೂ ಸತ್ಯ. ನಮ್ಮ ಭಾಷೆಗಳ ಯಾವುದೇ ಅಸಮಸ್ತಪದವಾಗಲಿ ಎರಡು ಮಾತ್ರೆಗಳ ಅಥವಾ ಒಂದು ಗುರುವಿನ ಅಳತೆಯಿಂದ ಮೊದಲ್ಗೊಂಡು ಆರು ಮಾತ್ರೆಗಳ ಅಥವಾ ಐದು ಅಕ್ಷರಗಳ ವ್ಯಾಪ್ತಿಯ ಒಳಗೆ ಬರುವುದು ವಿಜ್ಞವೇದ್ಯ. ಇವಕ್ಕಿಂತ ಹೆಚ್ಚಿನ ಪರಿಮಾಣದ ಪದಗಳು ಎರಡು ಅಥವಾ ಮೂರು ಪದಗಳಾಗಿ ಒಡೆದುಕೊಳ್ಳುವುದೂ ಸುವಿದಿತ. ಹೀಗಾಗಿ ಈಗ ಕಾಣಿಸಿದ ಮಾದರಿಗಳ ಹಾಗೆ ಶ್ಲೋಕದ ಛಂದಃಪದಗಳನ್ನು ವಿಭಜಿಸಿಕೊಂಡರೆ ಅವು ನಮ್ಮ ಅಭಿಜಾತಭಾಷೆಗಳ ಭಾಷಾಪದಗಳಿಗೆ ತುಂಬ ಸಂವಾದಿಗಳಾದ ಮಾತೃಕೆಗಳಾಗಿ ವರ್ತಿಸುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಈ ಬಗೆಯ ವಿಂಗಡಣೆ ಒಟ್ಟಂದದ ಪದ್ಯಗತಿಗೆ ಪೂರಕವಲ್ಲದೆ ಮಾರಕವಲ್ಲ. ಜೊತೆಗೆ ನಾವಿಲ್ಲಿ ಕಾಣಿಸಿರುವ ವಿನ್ಯಾಸಗಳಲ್ಲಿರುವ ಚಿಕ್ಕ ಚಿಕ್ಕ ಗುರು-ಲಘು ಘಟಕಗಳ ವ್ಯಾಪ್ತಿಯೊಳಗೇ ಪದ್ಯದ ಪ್ರತಿಯೊಂದು ಭಾಷಾಪದವೂ ಅಡಗಬೇಕೆಂಬ ಆಗ್ರಹವೇನಿಲ್ಲ. ಇಂಥ ಆಗ್ರಹ ಅಸಾಧುವೂ ಅಸಿಂಧುವೂ ಹೌದು. ಏಕೆಂದರೆ ಇಲ್ಲಿ ಸೂಚಿತವಾದ ಘಟಕಗಳು ವೃತ್ತಗಳ ಲಕ್ಷಣಗಳಲ್ಲಿ ಬಳಕೆಯಾಗುವ ಯ-ಮ-ತ-ರ-ಜ-ಸ-ಭ-ನ-ಗಳಂಥ ಗಣಗಳ ವಿನ್ಯಾಸದ ಹಾಗೆ. ಇವು ಛಂದಃಪದಗಳೆನಿಸಿದ ಗುರು-ಲಘುಗಳ ವಿನ್ಯಾಸಗಳನ್ನು ಸೂಚಿಸಲು ಮಾತ್ರ ಇವೆಯಲ್ಲದೆ ಭಾಷಾಪದಗಳ ವ್ಯಾಪ್ತಿ-ವಿಸ್ತರಗಳನ್ನು ನಿರ್ದೇಶಿಸಲು ಅಲ್ಲ. ಇದನ್ನೊಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು: ‘ನನಮಯಯಯುತೇಯಂ ಮಾಲಿನೀ ಭೋಗಿಲೋಕೇ’ ಎಂಬ ಮಾಲಿನೀವೃತ್ತದ ಲಕ್ಷಣವು ಅದರ ಗುರು-ಲಘುಗಳ ವಿನ್ಯಾಸವನ್ನು ಸೂಚಿಸಲಷ್ಟೇ ಇರುವುದು. ಹಾಗಲ್ಲದೆ ಈ ವೃತ್ತದಲ್ಲಿ ರಚಿತವಾದ ಯಾವುದೇ ಪದ್ಯದ ಮೊದಲ ಪದವು ಮೂರು ಲಘುಗಳಿಗೇ ಮುಗಿದು, ಎರಡನೆಯ ಪದ ಕೂಡ ಅಂತೆಯೇ ಇರಬೇಕು; ಮೂರನೆಯ ಪದ ಮೂರು ಗುರುಗಳಷ್ಟರ ಪ್ರಮಾಣದಲ್ಲಿಯೇ ಇರಬೇಕು ಎಂಬಿತ್ಯಾದಿ ನಿಯಂತ್ರಣವನ್ನು ಅದು ಮಾಡುವುದಿಲ್ಲ. ಸದ್ಯದ ಸೂಚನೆಗಳು ಹೀಗೆಯೇ ಇವೆ. ಮಾತ್ರವಲ್ಲ, ಇಂಥ ನಿರ್ದೇಶನದಿಂದ ಪದ್ಯದ ಭಾಷಾಪದಗಳ ವೈವಿಧ್ಯ, ಸೌಲಭ್ಯ ಮತ್ತು ಸೌಂದರ್ಯಗಳೇ ಹಾಳಾಗುವುವೆಂಬ ಅರಿವನ್ನೂ ಹೊಂದಿವೆ. ಛಂದಃಶಾಸ್ತ್ರದ ಸೂಕ್ಷ್ಮಗಳನ್ನು ಸ್ವಲ್ಪವೂ ತಿಳಿಯದೆ, ಪದ್ಯರಚನೆಯ ಕೌಶಲವನ್ನು ಸ್ವಲ್ಪವೂ ಹೊಂದಿರದೆ ವೃತ್ತವೊಂದರ ಲಕ್ಷಣವನ್ನು ತಿಳಿಯಲು ಯಾಂತ್ರಿಕವಾಗಿ ಮೂರು-ಮೂರು ಅಕ್ಷರಗಳ ವಿಭಾಗ ಮಾಡಿ, ಗುರು-ಲಘುಪ್ರಸ್ತಾರವನ್ನು ಹಾಕಿ, ಹೇಗೋ ಹೆಣಗಿ ಗಣಗಳನ್ನು ಗುರುತಿಸಿ ಗೆದ್ದಂತೆ ನಿಟ್ಟುಸಿರು ಬಿಡುವ ಶಾಲಾಬಾಲಕರ ಹಂತದಲ್ಲಿರುವ ಪಂಡಿತಂಮನ್ಯರಿಗೆ ಮಾತ್ರ ಈ ಬಗೆಯ ಭ್ರಾಂತಿಗಳಿರುತ್ತವೆ.

ತೌಲನಿಕ ವಿವೇಚನೆ

ವರ್ಣವೃತ್ತಗಳು, ಮಾತ್ರಾಜಾತಿಗಳು ಮತ್ತು ಕರ್ಷಣಜಾತಿಗಳೆಂದು ಮುಬ್ಬಗೆಯಾಗಿ ವಿಭಕ್ತವಾದ ಛಂದೋವರ್ಗಗಳೊಡನೆ ಶ್ಲೋಕವನ್ನು ತೌಲನಿಕವಾಗಿ ನೋಡಬಹುದು. ಇಂಥ ಕೆಲವು ಅಂಶಗಳನ್ನು ಈಗಾಗಲೇ ನಾವು ನೋಡಿಯೂ ಇದ್ದೇವೆ. ಆದರೂ ಮತ್ತಷ್ಟು ಆಳವಾಗಿ ಪರಿಶೀಲಿಸಬೇಕಾದ ಅನಿವಾರ್ಯತೆ ಉಂಟು.

ವರ್ಣವೃತ್ತಗಳು ಸರ್ವದೇಶಸ್ಥಿರಗಳಾದ ಕಾರಣ ಇವುಗಳ ಗತಿವಿವೇಚನೆ ಅಷ್ಟು ಕಷ್ಟವಲ್ಲ. ಯತಿಪ್ರಬಲವಾದ ವೃತ್ತಗಳಲ್ಲಿ ಯತಿಸ್ಥಾನ ಯಾವುದೆಂಬ ಗೊಂದಲವೂ ಇರುವುದಿಲ್ಲ. ಆದರೆ ಶ್ಲೋಕವು ಹೀಗಲ್ಲ. ಸೇಡಿಯಾಪು ಅವರು ಹೇಳುವಂತೆ ಇದು ‘ಅಕ್ಷರಜಾತಿ’ ಎಂಬ ವರ್ಗಕ್ಕೆ ಸೇರುವ ಕಾರಣ ಗುರು-ಲಘುಗಳ ಸರ್ವದೇಶಸ್ಥಿರತೆ ಇಲ್ಲಿಲ್ಲ. ಹೀಗಾಗಿಯೇ ಯತಿಸ್ಥಾನದ ನಿಶ್ಚಯ ಇಲ್ಲಿಲ್ಲ. ಒಟ್ಟಂದದ ಛಂದೋಗತಿಯ ಘೋಷವನ್ನು ಗಮನಿಸಿಕೊಂಡೇ ಯತಿಕಲ್ಪವಾದ ವಿರಾಮಗಳನ್ನು ಮಾಡಿಕೊಳ್ಳಬೇಕು. ಆದುದರಿಂದ ಇಲ್ಲಿ ಪದಯತಿಗೆ ಪ್ರಾಮುಖ್ಯವಿದೆ. ಯಾವಾಗ ಛಂದೋಬಂಧವೊಂದು ಪದಯತಿಗೆ ಪ್ರಾಶಸ್ತ್ಯ ನೀಡಬೇಕಾಗಿ ಬರುವುದೋ ಆಗ ಅದು ಆಯಾ ಭಾಷೆಯ ಸಹಜವಾದ ಪದಗತಿಗೆ ಬದ್ಧವಾಗಿರಬೇಕಾಗುತ್ತದೆ. ಈ ಮೂಲಕ ಛಂದಸ್ಸು ಮತ್ತು ಭಾಷೆಗಳಿಗೆ ಘನಿಷ್ಠವಾದ ಸಂಬಂಧ ಒದಗುತ್ತದೆ. ಸಂಸ್ಕೃತಪದ್ಯವೆಂದರೆ ಅದು ಶ್ಲೋಕ ಎಂದೇ ಪ್ರಸಿದ್ಧಿ ಬರಲು ಇಂಥ ಸಂಬಂಧವೂ ಒಂದು ಕಾರಣ.

ಮಾತ್ರಾಜಾತಿಗಳು ಲಯಾನ್ವಿತವಾದ ನಿರ್ದಿಷ್ಟ ರೂಪದ ಮಾತ್ರಾಗಣಗಳಿಗೆ ಮಾತ್ರ ಬದ್ಧವಾಗಿರುತ್ತವೆ. ಹೀಗಾಗಿ ಇಲ್ಲಿ ಅಕ್ಷರಗಳ ಗುರುಲಘುಸ್ಥಿರತೆಗೆ ಪ್ರಾಮುಖ್ಯವಿಲ್ಲವೆಂಬ ಭಾವನೆ ಹಲವರದು. ಈ ಸಂಗತಿ ಅಷ್ಟು ಸರಳವಲ್ಲ. ಬಂಧವನ್ನು ಸುಕುಮಾರವಾಗಿ ರೂಪಿಸುವಾಗ ಗುರು-ಲಘುಗಳ ಪ್ರಾಮುಖ್ಯ ಅಷ್ಟಾಗಿ ತೋರದಿದ್ದರೂ ನಿಬಿಡವಾಗಿ ಶಿಲ್ಪಿಸುವಾಗ ಮಾತ್ರಾಗಣಗಳ ವರ್ಣಗಳು ಗುರುತ್ವ ಅಥವಾ ಲಘುತ್ವಗಳ ನಿಟ್ಟಿನಿಂದ ನಿರ್ದಿಷ್ಟವಾಗಿರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಮಾತ್ರಾಜಾತಿಯ ಪದ್ಯವು ನಿಬಿಡಬಂಧವಾದಂತೆಲ್ಲ ಗುರುಗಳ ಸ್ಥಾನ ನಿರ್ಣಾಯಕವಾಗುತ್ತದೆ. ಪಂಚಕಲ, ಷಟ್ಕಲ, ಸಪ್ತಕಲ ಮತ್ತು ಅಷ್ಟಕಲಗಳಲ್ಲಿ ಪದ್ಯಬಂಧವು ಸಾಗುವಾಗಲಂತೂ ಈ ತಥ್ಯ ಮತ್ತಷ್ಟು ಮನದಟ್ಟಾಗದಿರದು. ಪದ್ಯದ ಭಾಷಾಪದಗಳು ಛಂದಃಪದಗಳಲ್ಲಿ ನೆಲಸಿದ ಗಣಗಳಿಗೆ ತಮ್ಮಲ್ಲಿರುವ ಗುರು-ಲಘುರೂಪದ ಅಕ್ಷರಗಳನ್ನು ಹಂಚಿಕೊಡುವಾಗ ಪ್ರತಿಯೊಂದು ಗಣವೂ ಯತಿಭಂಗಕ್ಕೆ ಆಸ್ಪದವಿಲ್ಲದಂತೆ ಇದನ್ನು ಗ್ರಹಿಸಬೇಕು. ನಿಬಿಡಬಂಧಗಳಲ್ಲಿ ನಿರಪವಾದವೆಂಬಂತೆ ಗಣಕ್ಕೊಂದು ಪದವೆಂಬ ‘ಸರಳನ್ಯಾಯ’ವಿಲ್ಲದೆ ಪ್ರತಿಯೊಂದು ಅಖಂಡಪದವೂ ಅಕ್ಕಪಕ್ಕದ ಗಣಗಳಿಗೆ ಹಂಚಿಹೋಗುವಂಥ ‘ಸಂಕೀರ್ಣನ್ಯಾಯ’ ಇರುತ್ತದೆ. ಇದರ ಸೂಕ್ಷ್ಮತೆ ಪ್ರಬುದ್ಧರಿಗೆ ಮಾತ್ರ ವೇದ್ಯ. ಅವಿಭಕ್ತಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರೂ ತಮ್ಮ ಬಾಧ್ಯತೆಗಳಿಗೆ ಚ್ಯುತಿಯಾಗದಂತೆ ಹಕ್ಕುಗಳನ್ನು ಗಳಿಸಿ, ಇಡಿಯ ಮನೆಯ ಹಿತವನ್ನು ಸಾಧಿಸಿ ತಮ್ಮ ತಮ್ಮ ಹಿತಗಳನ್ನೂ ಕಾಣುವಂತೆ ಇದು ಸಲ್ಲುತ್ತದೆ. ಇದನ್ನು ಸೋದಾಹರಣವಾಗಿ ನಿರೂಪಿಸಬಹುದು:

ಮುರಳಿ | ಕರದೊಳು | ನಲಿಯೆ | ಮುದದಲಿ

ಹರಿವ | ಯಮುನೆಯು | ಲಯವ | ಕಲ್ಪಿಸೆ

ಪರಮ- | ಪುರುಷನು | ಮರುಳು- | ಗೊಳಿಸಿದ | ಜಗವ- | ನೆಲ್ಲವ- | ನು |

ಇದು ಭಾಮಿನೀಷಟ್ಪದಿಯ ಪೂರ್ವಾರ್ಧ. ರಚನೆ ಲಕ್ಷಣಶುದ್ಧವಾಗಿದೆ. ಇದು ಸುಕುಮಾರಬಂಧವನ್ನು ಆಶ್ರಯಿಸಿದ ಕಾರಣ ಒಂದೊಂದು ಗಣಕ್ಕೆ ಒಂದೊಂದು ಪದ ಎಂಬಂತೆ ರಚನೆ ಸಾಗಿದೆ. ಪದ್ಯದಲ್ಲಿ ತೊಂಬತ್ತೈದು ಭಾಗಕ್ಕಿಂತ ಹೆಚ್ಚಾಗಿ ಲಘುಗಳೇ ಇದ್ದರೂ ಬಂಧವು ಸುಕುಮಾರವಾಗಿರುವ ಕಾರಣ ಪದಯತಿ ಪಾಲಿತವಾಗಿದೆ; ಪದ್ಯ ಶ್ರುತಿಹಿತವೆನಿಸಿದೆ. ಇಂಥ ರಚನೆಗಳನ್ನು ಅರ್ಥಸ್ವಾರಸ್ಯವಿರುವಂತೆ ಬಹುಸಂಖ್ಯೆಯಲ್ಲಿ ಮಾಡುವುದು ಕಷ್ಟ. ಒಂದು ವೇಳೆ ಹಾಗೆ ಮಾಡಿದಲ್ಲಿ ಪದ್ಯದ ಲಯವು ತುಂಬ ಯಾಂತ್ರಿಕವಾಗಿ ಪರಿಣಮಿಸಿ ಶ್ರೋತೃಗಳಿಗೆ ವೈರಸ್ಯವನ್ನು ಮೂಡಿಸುತ್ತದೆ.

ಪೂರ್ವದ ಮಹಾಕವಿಗಳು ಒಂದೇ ಛಂದಸ್ಸಿನ ಸಾವಿರಾರು ಪದ್ಯಗಳ ಕಥನವನ್ನು ನಿರ್ಮಿಸುವಾಗ ನಿಬಿಡಬಂಧಕ್ಕೆ ಶರಣಾಗಬೇಕಾಯಿತು. ಇದನ್ನು ಕುಮಾರವ್ಯಾಸನಂಥ ಒಬ್ಬ ಮಹಾಕವಿಯ ಒಂದು ಪದ್ಯದಿಂದ ಮನಗಾಣಬಹುದು:

ಕ್ಷಮಿಸು- | ವುದು ಸ- | ರ್ವೇಶ | ಸರ್ವೋ-

ತ್ತಮ ವೃ- | ಥಾ ಸುಭ- | ಟಾಭಿ- | ಮಾನ-

ಭ್ರಮಿತ- | ನನು ಮೋ- | ಹಾಂಧ- | ಕೂಪಜ- | ಲಾವ- | ಗಾಹದ- | ಲಿ |

ಸ್ತಿಮಿತ- | ನನು ದು- | ರ್ಬೋಧ- | ವೇದ-

ಭ್ರಮಿತ- | ನನು ಕ- | ಲ್ಯಾಣ- | ಪದನಿ-

ರ್ಗಮಿತ- | ನನು ಕಾ- | ರುಣ್ಯ- | ನಿಧಿ ಕೈ- | ಗಾಯ- | ಬೇಕೆಂ- | ದ || (ಕರ್ಣಾಟಭಾರತಕಥಾಮಂಜರಿ, ೩.೬.೮೦)

ಇಲ್ಲಿ ಸಪ್ರತ್ಯಯವಾದ ಯಾವೊಂದು ಪದವೂ ಗಣಕ್ಕೆ ಸರಿಯಾಗಿ ವಿಭಕ್ತವಾಗಿಲ್ಲ. ಇಂತಿದ್ದರೂ ಶ್ರುತಿಸುಭಗತೆಗೆ ಎರವಾಗಿಲ್ಲ. ಇಡಿಯ ಪದ್ಯ ತನ್ನ ಲಯಸಂಕೀರ್ಣತೆಯ ಮೂಲಕ ಮತ್ತಷ್ಟು ಶ್ರವಣಾಭಿರಾಮವೆನಿಸಿದೆ. ಏಕತಾನತೆಯಂತೂ ಇಂಥ ಪದ್ಯಗಳ ಆಸುಪಾಸಿನಲ್ಲಿಯೂ ಸುಳಿಯುವುದಿಲ್ಲ. ಸಂದರ್ಭೌಚಿತ್ಯ, ಅರ್ಥಗಾಂಭೀರ್ಯ ಮತ್ತು ಧ್ವನಿಶೀಲತೆಗಳಿಂದ ಪ್ರಸ್ತುತ ಬಂಧ ಇನ್ನಷ್ಟು ರಸಾವಹವಾಗಿದೆ. ನಮ್ಮ ಆಲಂಕಾರಿಕರು ಸಾಹಿತ್ಯದ ಶಬ್ದಗುಣ ಮತ್ತು ಅರ್ಥಗುಣಗಳನ್ನು ವಿವರಿಸುವಾಗ ‘ಶ್ಲೇಷ’ ಎಂಬ ಗುಣವನ್ನು ಗುರುತಿಸುತ್ತಾರೆ. ವರ್ಣಗಳ ಪರಸ್ಪರ ಹೊಂದಾಣಿಕೆಯೇ ಶಬ್ದಶ್ಲೇಷ. ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಸ್ತುತ ಪದ್ಯಬಂಧದ ಶ್ಲಿಷ್ಟತೆಗೆ ಗುರುಗಳೇ ಕಾರಣವೆಂದು ಸ್ಪಷ್ಟವಾಗುತ್ತದೆ. ನಿರ್ಣಾಯಕಸ್ಥಾನದ ಗುರುಗಳನ್ನು ಹೀಗೆ ಗುರುತಿಸಬಹುದು:

ಕ್ಷಮಿಸುವುದು ಸರ್ವೇಶ ಸರ್ವೋ-

ತ್ತಮ ವೃಥಾ ಸುಭಟಾಭಿಮಾನ-

ಭ್ರಮಿತನನು ಮೋಹಾಂಧಕೂಪಜಲಾವಗಾಹದಲಿ

ಸ್ತಿಮಿತನನು ದುರ್ಬೋಧವೇದ-

ಭ್ರಮಿತನನು ಕಲ್ಯಾಣಪದನಿ-

ರ್ಗಮಿತನನು ಕಾರುಣ್ಯನಿಧಿ ಕೈಗಾಯಬೇಕೆಂದ ||

ಮಾತ್ರಾಜಾತಿಗಳ ಪದ್ಯಗಳಲ್ಲಿ ಗುರುಗಳ ಸ್ಥಾನದ ನಿರ್ಣಾಯಕತೆಯನ್ನು ಮತ್ತಷ್ಟು ಉದಾಹರಣೆಗಳ ಮೂಲಕ ಮನಗಾಣಲು ಸೇಡಿಯಾಪು ಅವರ ಬರೆವಣಿಗೆಯನ್ನು ಪರಿಶೀಲಿಸಬಹುದು (ಸೇಡಿಯಾಪು ಛಂದಃಸಂಪುಟ, ಪು. ೧೪೨-೫೩).

ಇದನ್ನು ಶ್ಲೋಕದಲ್ಲಿ ಕೂಡ ಕಾಣಬಹುದು. ಸಾಮಾನ್ಯಲಕ್ಷಣದಲ್ಲಿ ಕಂಠೋಕ್ತವಾಗಿ ಹೇಳದಿದ್ದರೂ ಕೆಲವೊಮ್ಮೆ ಗುರುಲಘುಗಳು ನಿರ್ದಿಷ್ಟವಿನ್ಯಾಸದಲ್ಲಿ ಬರಬೇಕಾಗುತ್ತವೆ. ಇವನ್ನು ವಿಶೇಷವಾಗಿ ‘ಲ-ಗಂ’, ‘ಗಂ-ಲ’ ಮತ್ತು ‘ಗಂ’ ಎಂಬ ಮುಬ್ಬಗೆಯ  ರೂಪಗಳಲ್ಲಿ ಗುರುತಿಸಬಹುದು. ಇಂಥ ಸೂಕ್ಷ್ಮಗಳನ್ನು ಗಮನಿಸಿಕೊಂಡು ನಡಸಿದ ಪ್ರಯೋಗಗಳೇ ಶ್ಲೋಕಲಕ್ಷಣಪರಿಷ್ಕಾರಕ್ಕೆ ಕಾರಣವಾಗಿವೆ. ‘ವೃತ್ತರತ್ನಾಕರ’ದ ವ್ಯಾಖ್ಯೆ ನಾರಾಯಣಭಟ್ಟೀಯವು ಇಂಥ ಪರಿಷ್ಕೃತ ಲಕ್ಷಣವನ್ನು ನೀಡಿದೆ. ಇದು ಶ್ಲೋಕದ ಸ್ವರೂಪವನ್ನು ಸಮಗ್ರವೆಂಬಷ್ಟರ ಮಟ್ಟಿಗೆ ನಿರ್ವಚಿಸಿದೆ. ಮಾತ್ರಾಜಾತಿಗಳಲ್ಲಿ ಮಾತ್ರೆಗಳ ಸಂಖ್ಯಾಸಮತ್ವ ಇದ್ದರೂ ಅಕ್ಷರಗಳ ಸಂಖ್ಯಾಸಮತ್ವ ಇರುವುದಿಲ್ಲ. ಇದಕ್ಕೆ ಸಂವಾದಿ ಎನಿಸಬಲ್ಲಂತೆ ಶ್ಲೋಕದಲ್ಲಿ ಅಕ್ಷರಸಂಖ್ಯಾಸಮತ್ವವಿದ್ದರೂ ಮಾತ್ರಾಸಂಖ್ಯಾಸಮತ್ವ ಇಲ್ಲ. ಇಂತಿದ್ದರೂ ಉಭಯವರ್ಗಗಳಲ್ಲಿ ಛಂದೋಗತಿಯ ಸೊಗಸಿಗೆ ಕೊರತೆಯಿರುವುದಿಲ್ಲ. ಏಕತಾನತೆಯ ಅಪಾಯವೂ ಕಡಮೆ. ಇದನ್ನೆಲ್ಲ ಅನುಲಕ್ಷಿಸಿದಾಗ ಸಂಸ್ಕೃತದಲ್ಲಿ ಶ್ಲೋಕದಂತೆಯೇ ಆರ್ಯಾಪ್ರಭೇದಗಳು ವ್ಯಾಪಕವಾಗಿರುವುದರ ಔಚಿತ್ಯ ತಿಳಿಯುತ್ತದೆ.

To be continued.

 

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...