‘ಶ್ಲೋಕ’ ಎಂಬ ಪದ್ಯಪ್ರಕಾರವು ಸಾಲಿಗೆ ಎಂಟರಕ್ಷರಗಳಂತೆ ನಾಲ್ಕು ಪಾದಗಳನ್ನುಳ್ಳ ಅನುಷ್ಟುಪ್‌ವರ್ಗದ ಛಂದಸ್ಸುಗಳಲ್ಲಿ ಒಂದು ಪ್ರಭೇದವಾದರೂ ಇದಕ್ಕೆ ಇಡಿಯ ಆ ವರ್ಗದ ಹೆಸರೇ ರೂಢವಾಗಿದೆ. ಈ ವೈಚಿತ್ರ್ಯಕ್ಕೆ ಕಾರಣ ಅದರ ಪ್ರಾಚುರ್ಯ ಮತ್ತು ವೈದಿಕಸಾಹಿತ್ಯದ ಅನುಷ್ಟುಪ್ಪಿನೊಡನೆ ಅದಕ್ಕಿರುವ ನೈಕಟ್ಯ-ಸಾದೃಶ್ಯಗಳೇ ಆಗಿವೆ. ಸಾಮಾನ್ಯವಾಗಿ ಸಮೂಹವೊಂದರಲ್ಲಿ ಹೆಚ್ಚು ಪ್ರಸಿದ್ಧವಾದ ಪ್ರಭೇದವನ್ನು ಇಡಿಯ ಗುಂಪಿನ ಹೆಸರಿನಿಂದಲೋ, ಅಥವಾ ಆ ಗುಂಪನ್ನೇ ತತ್ಸಂಭೂತವಾದ ಪ್ರಭೇದದ ಹೆಸರಿನಿಂದಲೋ ಗುರುತಿಸುವುದುಂಟು. ಗೋಡ್ರೇಜ್ ಕಪಾಟು, ಜೆ಼ರಾಕ್ಸ್ ಯಂತ್ರ, ಜಾಟರ್ ಪೆನ್ ಮುಂತಾದುವು ಮೊದಲ ಪ್ರಕಾರಕ್ಕೂ ಚಿನ್ನ (ಆಭರಣ), ಚೈನಾ (ಪಿಂಗಾಣಿಯ ವಸ್ತುಗಳು), ಅನ್ನ (ಆಹಾರ, ಊಟ) ಮುಂತಾದುವು ಎರಡನೆಯ ಪ್ರಕಾರಕ್ಕೂ ಉದಾಹರಣೆಗಳು.[1] ಈ ಲೇಖನದಲ್ಲಿ ಶ್ಲೋಕವೆಂಬ ಶಬ್ದವನ್ನೇ ಹೆಚ್ಚಾಗಿ ಬಳಸಲಾಗಿದೆಯಾದರೂ ವಿಚಾರಸ್ಪಷ್ಟತೆಗಾಗಿ ‘ಅನುಷ್ಟುಪ್‌ಶ್ಲೋಕ’ ಎಂಬ ಅಂಕಿತವನ್ನು ಮೊದಲಿಗೆ ಉಪಯೋಗಿಸಲಾಗಿದೆ. ಶಾಸ್ತ್ರೀಯವಾಗಿ ನೋಡಿದಾಗ ಇದು ಪುನರುಕ್ತಿ ಎನಿಸಬಹುದಾದರೂ ಲೋಕಪ್ರಸಿದ್ಧಿಯ ದೃಷ್ಟಿಯಿಂದ ಅನುಚಿತವೆನಿಸದು.
ಶ್ಲೋಕ ಎಂಬ ಹೆಸರು ಅನಂತರಕಾಲದಲ್ಲಿ ಯಾವುದೇ ಛಂದಸ್ಸಿನಲ್ಲಿ ರಚಿತವಾದ ಸಂಸ್ಕೃತಭಾಷೆಯ ಪದ್ಯಕ್ಕೆ ವಾಚಕವಾಯಿತೆಂಬುದನ್ನು ಮರೆಯುವಂತಿಲ್ಲ. ಬಹುಶಃ ಇನ್ನಷ್ಟು ಗೊಂದಲವಾಗಬಾರದೆಂಬ ಎಚ್ಚರದಿಂದಲೇ ‘ಅನುಷ್ಟುಪ್‌ಶ್ಲೋಕ’ ಎಂಬ ವಿವರಣಾತ್ಮಕವಾದ ಅಭಿಧಾನ ಬಂದಿರಬಹುದು. ಇದು ಸ್ಪಷ್ಟತೆಗಾಗಿ ಮಾಡಿಕೊಂಡ ಪುನರುಕ್ತಿಪ್ರಾಯವಾದ ಸಂಜ್ಞೆ. ಶ್ಲೋಕವೆಂಬ ವಿಶಿಷ್ಟವಾದ ಬಂಧಕ್ಕೆ ‘ಅನುಷ್ಟುಪ್’ ಎಂಬ ಜಾತಿಸಾಮಾನ್ಯವಾದ ಹೆಸರು ಬರಲು ಶ್ಲೋಕಶಬ್ದಕ್ಕೆ ಒದಗಿದ ಅತಿವ್ಯಾಪ್ತಿಯೇ ಕಾರಣವಾಗಿರಬಹುದು. ಯಾವುದೇ ಸಂಸ್ಕೃತಪದ್ಯಕ್ಕೆ ಶ್ಲೋಕ ಎಂಬ ಸಾಮಾನ್ಯಸಂಜ್ಞೆ ರೂಢವಾಗಿರುವುದಕ್ಕೆ ಮೂಲಹೇತು ಆ ಭಾಷೆಯಲ್ಲಿ ಇದಕ್ಕಿರುವ ಪ್ರಾಚುರ್ಯ ಮತ್ತು ಸೌಲಭ್ಯಗಳೇ ಕಾರಣವೆಂಬ ಮತ್ತೊಂದು ವಾಸ್ತವವನ್ನೂ ಇಲ್ಲಿ ನೆನೆಯಬಹುದು.
ಶ್ಲೋಕ ಎಂಬ ಶಬ್ದಕ್ಕೆ ಕೀರ್ತಿ ಎಂಬ ಮತ್ತೂ ಒಂದು ಅರ್ಥವಿದೆ. ಬಹುಶಃ ಇದು ಈ ಛಂದಸ್ಸಿನಲ್ಲಿ ರಚಿತವಾದ ಪ್ರಶಸ್ತಿಪದ್ಯಗಳ ಮೂಲಕವೇ ಲೋಕದಲ್ಲಿ ರೂಢವಾಗಿರಬಹುದು. ಅಂತೂ ಶ್ಲೋಕದ ಶ್ಲೋಕತ್ವ ಹಿರಿದು.
ಈಗಾಗಲೇ ಕನ್ನಡದ ಹಲವರು ವಿದ್ವಾಂಸರು ಶ್ಲೋಕದ ವಿಶಿಷ್ಟತೆಯನ್ನು ಕುರಿತು ವರ್ಣನಾತ್ಮಕವೂ ಮೀಮಾಂಸಾತ್ಮಕವೂ ಆದ ಅನೇಕ ಬರೆಹಗಳನ್ನು ಪ್ರಕಟಿಸಿದ್ದಾರೆ.[2] ಈ ಬಗೆಗೆ ಇಂಗ್ಲಿಷ್, ಹಿಂದಿ, ತೆಲುಗು, ಮರಾಠಿ ಮುಂತಾದ ಭಾಷೆಗಳಲ್ಲಿಯೂ ಸಾಕಷ್ಟು ಬರೆಹಗಳು ಬಂದಿವೆ. ಆದರೂ ನನ್ನರಿವಿಗೆ ಎಟುಕಿದಂತೆ ಹೇಳುವುದಾದರೆ ಶ್ಲೋಕಗತಿಮೀಮಾಂಸೆಯನ್ನು ಸರ್ವಂಕಷವೆಂಬಂತೆ ಮಾಡಿರುವವರು ಸೇಡಿಯಾಪು ಅವರು ಮಾತ್ರ. ಮಿಕ್ಕವರು ನಿರಪವಾದವೆಂಬಂತೆ ಐತಿಹಾಸಿಕ ಮತ್ತು ವರ್ಣನಾತ್ಮಕ ಅಧ್ಯಯನಗಳನ್ನು ನಡಸಿದ್ದಾರೆ. ಗತಿಯನ್ನು ಕುರಿತ ಚಿಂತನೆಯೂ ಯುಕ್ತಿಯುಕ್ತವಾಗಿ ತೋರುವುದಿಲ್ಲ; ತೃಪ್ತಿಕರವಾಗಿಲ್ಲ. ಬಲುಮಟ್ಟಿಗೆ ಎಲ್ಲರೂ ಎ. ಎ. ಮ್ಯಾಕ್‌ಡೊನಾಲ್ಡ್, ಇ. ವಿ. ಅರ್ನಾಲ್ಡ್, ಎಚ್. ಡಿ. ವೇಲಣಕರ್ ಮುಂತಾದವರ ಅಭಿಪ್ರಾಯಗಳನ್ನೇ ಮರುದನಿಸಿದ್ದಾರೆ. ಇವರೆಲ್ಲರ ಹಾಗೂ ಈ ತೆರನಾದವರ ಎಲ್ಲ ಅಧ್ಯಯನಗಳನ್ನೂ ಕ್ರೋಡೀಕರಿಸಿಕೊಂಡು ನಡೆದ ಚಿಂತನದ ಸಾರವನ್ನು ಟಿ. ವಿ. ವೆಂಕಟಾಚಲ ಶಾಸ್ತ್ರಿಗಳ ಬರೆವಣಿಗೆಯಲ್ಲಿ ಕಾಣಬಹುದು. ಹೀಗೆ ಶ್ಲೋಕಮೀಮಾಂಸೆಗೆ ಸೇಡಿಯಾಪು ಅವರ ಚಿಂತನೆ ಅನಿವಾರ್ಯ ಮತ್ತು ಅನನ್ಯ ಆಲಂಬನವಾಗುತ್ತದೆ. ಇಂತಿದ್ದರೂ ಇವರು ಕೂಡ ಹೇಳದೆ ಉಳಿಸಿದ, ಚಿಂತಿಸದೆ ಉಳಿಸಿದ ಹಲಕೆಲವು ವಿಚಾರಗಳು ಇರುವ ಕಾರಣ ಇವನ್ನೆಲ್ಲ ಪ್ರಪಂಚಿಸುವ ನಿಟ್ಟಿನಲ್ಲಿ ಸದ್ಯದ ಲೇಖನ ಹೊರಟಿದೆ.
ಶ್ಲೋಕಲಕ್ಷಣ
ಮೊದಲಿಗೆ ಶ್ಲೋಕದ ಲಕ್ಷಣವನ್ನು ಗಮನಿಸಬಹುದು:
ಶ್ಲೋಕೇ ಷಷ್ಠಂ ಗುರು ಜ್ಞೇಯಂ ಸರ್ವತ್ರ ಲಘು ಪಂಚಮಮ್ |
ದ್ವಿಚತುಷ್ಪಾದಯೋರ್ಹ್ರಸ್ವಂ ಸಪ್ತಮಂ ದೀರ್ಘಮನ್ಯಯೋಃ || (ಶ್ರುತಬೋಧ, ೧.೧೦)
ಪಂಚಮಂ ಲಘು ಸರ್ವತ್ರ ಸಪ್ತಮಂ ದ್ವಿಚತುರ್ಥಯೋಃ |
ಗುರು ಷಷ್ಠಂ ಚ ಪಾದಾನಾಂ ಶೇಷೇಷ್ವನಿಯಮೋ ಮತಃ || (ಛಂದೋಮಂಜರೀ, ೪.೭)
ಈ ಲಕ್ಷಣಗಳು ಸ್ಥೂಲದೃಷ್ಟಿಯಿಂದ ಸಮಗ್ರವೆಂಬಂತೆ ತೋರಿದರೂ ದಿಟವಾಗಿ ಸಮಗ್ರವಲ್ಲ. ಇವುಗಳ ಪ್ರಕಾರ ಶ್ಲೋಕದ ಪ್ರತಿಯೊಂದು ಪಾದದ ಮೊದಲ ನಾಲ್ಕು ಅಕ್ಷರಗಳ ಗುರುಲಘುವಿನ್ಯಾಸವು ಹೇಗೂ ಇರಬಹುದು. ಅಂದರೆ, ಅವು ಸರ್ವಲಘು ಆಗಿರಬಹುದು; ಮೂರು ಲಘುಗಳ ಬಳಿಕ ಒಂದು ಗುರುವೂ ಆಗಿರಬಹುದು. ಆದರೆ ಇಂಥ ಲಕ್ಷಣವುಳ್ಳ ಶ್ಲೋಕಗಳನ್ನು ನಾವು ಯಾವುದೇ ವೈದಿಕ-ಲೌಕಿಕ ಸಾಹಿತ್ಯದಲ್ಲಿ ನೋಡಲಾರೆವು. ವಸ್ತುತಃ ಈ ಬಗೆಯ ಛಂದೋವಿನ್ಯಾಸದಲ್ಲಿ ಶ್ಲೋಕದ ಘೋಷವೂ ಕೇಳದು; ಅದರ ಗತಿಯೂ ಉನ್ಮೀಲಿಸದು. ಇದನ್ನು ಸೋದಾಹರಣವಾಗಿ ಕಾಣೋಣ:
ಅನುಪಮವಚೋಯುಕ್ತಂ ಸರಸಗುಣಸಂಯುತಮ್ |
ಭಜತ ಹೃದಿ ಗೋವಿಂದಂ ನಮತ ಜನಜೀವನಮ್ ||
ಪ್ರಣಮತಾಂ ಪ್ರಿಯಂ ನಿತ್ಯಂ ಸುಮನಸಾಂ ವಿಭುಂ ಹರಿಮ್ |
ಹೃದಿ ಭಜೇ ಮುದಾ ಭೂತ್ಯೈ ಲಲಿತವೇಣುವಾದಕಮ್ ||
ಮೇಲ್ನೋಟಕ್ಕೇ ಇವು ಶ್ಲೋಕದ ಧಾಟಿಯನ್ನು ಹೊಂದಿಲ್ಲವೆಂದು ತಿಳಿಯುತ್ತದೆ. ಈ ಕಾರಣದಿಂದಲೇ ಕ್ಷೇಮೇಂದ್ರನು ‘ಸುವೃತ್ತತಿಲಕ’ ಎಂಬ ತನ್ನ ಕೃತಿಯಲ್ಲಿ ಒಂದಲ್ಲ ಎರಡು ಕಡೆ ಶ್ಲೋಕಕ್ಕೆ ಶ್ರವ್ಯತೆಯೇ ಪ್ರಧಾನಲಕ್ಷಣವೆಂದು ಸಾರಿದ್ದಾನೆ:
ಅಸಂಖ್ಯೋ ಭೇದಸಂಸರ್ಗಾದನುಷ್ಟುಪ್‌ಛಂದಸಾಂ ಗಣಃ |
ತತ್ರ ಲಕ್ಷ್ಯಾನುಸಾರೇಣ ಶ್ರವ್ಯತಾಯಾಃ ಪ್ರಧಾನತಾ ||
ಅನುಷ್ಟುಪ್‌ಛಂದಸಾಂ ಭೇದೇ ಕೈಶ್ಚಿತ್ ಸಾಮಾನ್ಯಲಕ್ಷಣಮ್ |
ಯದುಕ್ತಂ ಪಂಚಮಂ ಕುರ್ಯಾಲ್ಲಘು ಷಷ್ಠಂ ತಥಾ ಗುರು ||
ತತ್ರಾಪ್ಯನಿಯಮೋ ದೃಷ್ಟಃ ಪ್ರಬಂಧೇ ಮಹತಾಮಪಿ |
ತಸ್ಮಾದವ್ಯಭಿಚಾರೇಣ ಶ್ರವ್ಯತೈವ ಗರೀಯಸೀ || (ಸುವೃತ್ತತಿಲಕ ೧.೧೫; ೨.೪,೫)
ಹೀಗೆ ಶ್ಲೋಕಕ್ಕೆ ಶ್ರವ್ಯತೆಯೇ ಅಳತೆಗೋಲಾದ ಕಾರಣ ಕವಿಗಳೂ ಲಾಕ್ಷಣಿಕರೂ ಪ್ರಯೋಗಿಸಿ ಗಮನಿಸಿರುವ ‘ಲಕ್ಷಣಬಾಹ್ಯ’ ಎನ್ನಬಹುದಾದ ಹಲವು ಬಗೆಗಳೂ ಶಿಷ್ಟರ ಸಮ್ಮತಿಯನ್ನು ಗಳಿಸಿವೆ:
u – – – u u u – u – – – u – u –
ತಪಃಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್ |
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್ || (ವಾಲ್ಮೀಕಿರಾಮಾಯಣ, ೧.೧.೧)
u – u – – u u – u – – – u – u –
ತದನ್ವಯೇ ಶುದ್ಧಿಮತಿ ಪ್ರಸೂತಃ ಶುದ್ಧಿಮತ್ತರಃ |
ದಿಲೀಪ ಇತಿ ರಾಜೇಂದುರಿಂದುಃ ಕ್ಷೀರನಿಧಾವಿವ || (ರಘುವಂಶ, ೧.೧೨)
ಇವುಗಳ ಪರಿಶೀಲನೆಯಿಂದ ಓಜಪಾದ(ವಿಷಮಪಾದ)ಗಳಲ್ಲಿ ಲಕ್ಷಣೋಕ್ತವಾದ ಕಡೆಯ ಮೂರು ಗುರುಗಳಿಗೆ ಬದಲಾಗಿ (ಮ-ಗಣವೊಂದಕ್ಕೆ ಆದೇಶವಾಗಿ) ಎರಡು ಲಘುಗಳನ್ನೂ ಒಂದು ಗುರುವನ್ನೂ (ಸ-ಗಣವೊಂದನ್ನು) ಬಳಸುವುದು ಶಿಷ್ಟಸಮ್ಮತ ಎಂದು ತಿಳಿಯುತ್ತದೆ; ಇದು ಶ್ರುತಿಕಟುವಲ್ಲವೆಂದೂ ಅನುಭವಕ್ಕೆ ಬರುತ್ತದೆ. ಈ ಬಗೆಯ ಗತಿಯು ಶ್ಲೋಕದ ಧಾಟಿಯನ್ನು ಹದಗೆಡಿಸದೆಯೇ ಅದರಲ್ಲಿ ಹೃದ್ಯ ವೈವಿಧ್ಯವನ್ನು ತಂದೀಯಬಲ್ಲ ಸಾಧನವೆಂದು ಸ್ಪಷ್ಟವಾಗುತ್ತದೆ.
ಇಲ್ಲಿ ಕೆಲವು ಎಚ್ಚರಿಕೆಗಳನ್ನು ಹೇಳಬೇಕಿದೆ. ಅವನ್ನು ಹೀಗೆ ನಮೂದಿಸಬಹುದು:
೧. ಓಜಪಾದಗಳ ಕಡೆಯ ಮೂರು ಅಕ್ಷರಗಳು ಸಹಜಗುರುಗಳಾಗಿ ಇರಬೇಕು ಎಂಬುದು ಆದರ್ಶಲಕ್ಷಣ. ಆದರೆ ಪಾದಾಂತ್ಯದ ಅಕ್ಷರವು ಲಘುವಾಗಿದ್ದಾಗಲೂ ಕರ್ಷಣದ ಮೂಲಕ ಅದಕ್ಕೆ ಗುರುತ್ವ ಬರುವುದುಂಟು. ಈ ಬಗೆಯ ಸೌಲಭ್ಯವನ್ನು ಅನುಚಿತವಾಗಿ ಗ್ರಹಿಸಿ, ಬಳಿಕ ಮೇಲೆ ಕಾಣಿಸಿದಂತೆ ‘ಲಕ್ಷಣಬಾಹ್ಯ’ವಾದ ಪ್ರಯೋಗಕ್ಕೆ ತೊಡಗಿದರೆ ಶ್ಲೋಕದ ಗತಿ ಹದಗೆಡುತ್ತದೆ. ನಾವು ಈ ಮೊದಲೇ ಗಮನಿಸಿದಂತೆ ಶ್ಲೋಕದಲ್ಲಿ ನಾಲ್ಕು ಲಘುಗಳು ಅವ್ಯವಹಿತವಾಗಿ ಬರಲು ಸಾಧ್ಯವಿಲ್ಲ. ಇದು ಪ್ರತಿ ಪಾದದ ಪೂರ್ವಾರ್ಧಕ್ಕೆ ಹೇಗೋ ಹಾಗೆಯೇ ಉತ್ತರಾರ್ಧಕ್ಕೂ ಅನ್ವಯಿಸುತ್ತದೆ.
ಇಲ್ಲೊಂದು ಸ್ಪಷ್ಟೀಕರಣ ಬೇಕಿದೆ: ಓಜಪಾದದ ಕಡೆಯ ಪದವು ಯುಕ್ಪಾದ(ಸಮಪಾದ)ದ ಮೊದಲನೆಯ ಪದದೊಡನೆ ಸಮಾಸದ ರೂಪವನ್ನು ತಾಳಿದಾಗ ಎಂಟನೆಯ ಅಕ್ಷರವು ಸಹಜಲಘುವಾದರೆ ಈ ಮುನ್ನ ಕಾಣಿಸಿದ ಸಂದರ್ಭಗಳಲ್ಲಿ ಶ್ರುತಿಕಟುವಾಗುತ್ತದೆ. ಹಾಗಲ್ಲದೆ ಎಂಟನೆಯ ಅಕ್ಷರಕ್ಕೇ ಪದವು ಮುಗಿದಲ್ಲಿ ಅಲ್ಲಿಯ ಸಹಜಲಘುವು ಕರ್ಷಣಕ್ಕೆ ಒಳಗಾಗಿ ಗುರುವಿನಂತೆ ಕೇಳುವ ಮೂಲಕ ಸ್ವಲ್ಪ ಶ್ರುತಿಸಹ್ಯವೆನಿಸುತ್ತದೆ. ಉದಾಹರಣೆಗೆ:
u – – – u u u u u u – u u – u –
ಜನಾನಂದಾಯ ಭವತಿ ಭವತಾಂ ವಿಜಯೋತ್ಸವಃ |
– – u – – u u u u – – u u – u –
ಮನ್ಯೇ ಮಹಾಂತಂ ಜಗತಿ ಭವಂತಂ ಭವಿಕಪ್ರದಮ್ ||
ಶ್ಲೋಕದ ಛಂದೋಗತಿಯು ಎಷ್ಟೋ ಬಾರಿ ಪದಸಾಪೇಕ್ಷವಾಗಿ ವರ್ತಿಸುವುದೆಂಬುದನ್ನು ಈ ಮೂಲಕ ಮನಗಾಣಬಹುದು. ಪದವು ಸಮಸ್ತ ಮತ್ತು ಅಸಮಸ್ತ ಎಂದು ಎರಡು ಪ್ರಕಾರಗಳಲ್ಲಿ ಮೈದಾಳುವ ಕಾರಣ ಎರಡೂ ಬಗೆಯ ಪದಸಾಧ್ಯತೆಗಳು ಶ್ಲೋಕದ ಗತಿಯನ್ನು ಕೆಲಮಟ್ಟಿಗೆ ನಿರ್ದೇಶಿಸುತ್ತವೆನ್ನಬಹುದು. ಇದಕ್ಕೆ ಮುಖ್ಯಕಾರಣ ಯತಿಯೇ ಆಗಿದೆ. ಶ್ಲೋಕದಲ್ಲಿ ಪ್ರಾಯಶಃ ಯತಿಯೇ ಇಲ್ಲವೆಂದು ಕವಿ-ಲಾಕ್ಷಣಿಕರ ಅಭಿಮತ. ಆದರೆ ನಿಯತವಾದ ಯತಿ ಎಂಬುದು ಇಲ್ಲಿ ಇಲ್ಲದಿದ್ದರೂ ಪ್ರತಿಯೊಂದು ಸ್ವತಂತ್ರಪದದ ಬಳಿಕ ಬರುವ ವಿರಾಮವೇ ಯತಿಯ ಪಾತ್ರವನ್ನು ಕೆಲಮಟ್ಟಿಗೆ ವಹಿಸುತ್ತದೆ. ಇದನ್ನು ಅಭಿಜ್ಞರು ‘ಪದಯತಿ’ ಎಂದು ಹೆಸರಿಸಿದ್ದಾರೆ. ಇದು ಗತಿಪ್ರಜ್ಞಾವಂತರಿಗೆ ಅನುಭವವೇದ್ಯ. ಮಿಕ್ಕ ವರ್ಣವೃತ್ತಗಳಲ್ಲಿ ಹೀಗೇಕೆ ಆಗುವುದಿಲ್ಲ? ಎಂಬ ಪ್ರಶ್ನೆ ಉದಿಸಬಹುದು. ಅದಕ್ಕೆ ಸಮಾಧಾನವಿಷ್ಟೇ: ಶ್ಲೋಕದಲ್ಲಿ ಮಿಕ್ಕ ವರ್ಣವೃತ್ತಗಳಲ್ಲಿರುವಂತೆ ಗುರು-ಲಘುಗಳ ಸರ್ವದೇಶಸ್ಥಿರತೆ ಇಲ್ಲ.
ಈ ಸಂದರ್ಭದಲ್ಲಿ ಲಯಾನ್ವಿತವಾದ ಮಾತ್ರಾಜಾತಿಗಳಲ್ಲಿಯೂ ಕರ್ಷಣಜಾತಿಗಳಲ್ಲಿಯೂ ಆಯಾ ಗಣಗಳ ಬಳಿಕ ಬರುವ ಯತಿಸದೃಶ ವಿರಾಮವನ್ನು ನೆನೆಯಬಹುದು. ಶ್ಲೋಕವು ಇಂಥ ಬಂಧಗಳಂತೆ ಲಯಾನ್ವಿತವಲ್ಲದ ಕಾರಣ ಅವುಗಳಲ್ಲಿ ಪ್ರತಿಯೊಂದು ತಾಲಾವರ್ತದ ಬಳಿಕವೂ ನಿಯತವಾಗಿ ವಿರಾಮ ಬರುವಂತೆ ಇಲ್ಲಿ ಬರುವುದಿಲ್ಲ. ಹೀಗೆ ಯತಿಯಲ್ಲದಿದ್ದರೂ ಯತಿಕಲ್ಪ ಎಂಬಂತೆ ಶ್ಲೋಕದಲ್ಲಿ ತೋರಿಕೊಳ್ಳುವ ವಿರಾಮಗಳು ಅದರ ಗತಿವೈವಿಧ್ಯಕ್ಕೂ ನಿರ್ವಾಹದ ಸೌಲಭ್ಯಕ್ಕೂ ಒದಗಿಬರುತ್ತವೆ.
ಸೇಡಿಯಾಪು ಅವರು ಶ್ಲೋಕವನ್ನು ‘ಅಕ್ಷರಜಾತಿ’ ಎಂಬ ತಾವೇ ಕಲ್ಪಿಸಿದ ವರ್ಗದಲ್ಲಿ ಸೇರಿಸುತ್ತಾರೆ. ಇಲ್ಲಿ ಬಳಕೆಯಾದ ಜಾತಿಶಬ್ದದ ಏಕದೇಶಸ್ಥಿರತೆಯ ವಿಶೇಷವನ್ನೂ ಅವರು ವಿವರಿಸುತ್ತಾರೆ. ಮಾತ್ರಾಜಾತಿ ಮತ್ತು ಕರ್ಷಣಜಾತಿಗಳ ವರ್ಗಗಳಲ್ಲಿ ಪ್ರಯುಕ್ತವಾಗುವ ಪದಗಳ ಗುರು-ಲಘುವಿನ್ಯಾಸದ ಅನಿಯತತೆ ಶ್ಲೋಕದಲ್ಲಿಯೂ ತನ್ನದೇ ಆದ ರೀತಿಯಲ್ಲಿ ಇರುವುದು ಸ್ಪಷ್ಟ. ಇದರ ಮೂಲಕ ಈ ಎಲ್ಲ ಬಂಧಗಳ ನಿರ್ವಾಹದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಲಭಿಸುವುದೂ ಸ್ಪಷ್ಟ. ಎಂಥ ಸ್ವಾತಂತ್ರ್ಯಕ್ಕೂ ಅಂಟಿಬರುವ ಬಾಧ್ಯತೆಯನ್ನು ಬಲ್ಲವರಿಗೆ ಈ ಬಗೆಯ ಸೌಲಭ್ಯವನ್ನು ನಿರ್ವಹಿಸಲು ಬೇಕಾದ ಎಚ್ಚರ ಎಂಥದ್ದೆಂಬುದನ್ನು ಸ್ಪಷ್ಟಪಡಿಸಬೇಕಿಲ್ಲ.
ಸದ್ಯದ ವಿಶ್ಲೇಷಣೆಗೆ ಮತ್ತೆ ಬರುವುದಾದರೆ, ಶ್ಲೋಕದ ಗುರು-ಲಘುವಿನ್ಯಾಸದಲ್ಲಿರುವ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಯತಿಕಲ್ಪವಾದ ಪದಗಳ ವಿರತಿ ಮತ್ತು ಅಂಥ ಪದಗಳ ಗುರು-ಲಘುವಿನ್ಯಾಸದ ಸೂಕ್ಷ್ಮತೆಗಳ ಅರಿವಿರಬೇಕು.
[1] ಇಂಥ ವಾಡಿಕೆಯನ್ನು ನಮ್ಮ ಶಾಸ್ತ್ರೀಯ ಪರಿಭಾಷೆಯಲ್ಲಿ ಕ್ರಮವಾಗಿ ‘ಜಾತಿ’ಯನ್ನು ‘ವ್ಯಕ್ತಿ’ಯ ಹೆಸರಿನಿಂದಲೂ ವ್ಯಕ್ತಿಯನ್ನು ಜಾತಿಯ ಹೆಸರಿನಿಂದಲೂ ಗುರುತಿಸುವ ಪರಿ ಎಂದು ಹೇಳಬಹುದು. ಜಾತಿ ಮತ್ತು ವ್ಯಕ್ತಿಗಳನ್ನು ಜೀನಸ್ ಮತ್ತು ಸ್ಪೀಷೀಸ್ ಎಂದು ಪಾಶ್ಚಾತ್ತ್ಯರ ಪರಂಪರೆ ಹೆಸರಿಸಿದೆ.
[2] ಕನ್ನಡ ಛಂದಃಸ್ವರೂಪ, ಪು. ೧೭೦-೮೨; ಕನ್ನಡ ಛಂದಸ್ಸಿನ ಚರಿತ್ರೆ (ಸಂ. ೧), ಪು. ೩೧೯-೨೯; ಸೇಡಿಯಾಪು ಛಂದಃಸಂಪುಟ, ಪು. ೨೨೩-೩೧
To be continued.