ರಸಪಾರಮ್ಯ
ರಸವನ್ನು ಕುರಿತು ಅಭಿನವಗುಪ್ತನ ಒಳನೋಟಗಳು ಅಪಾರ, ಅಮೋಘ. ಈ ಬಗೆಗೆ ಸುವಿಪುಲವಾದ ಚರ್ಚೆ-ಸಂಶೋಧನೆಗಳೂ ಕಳೆದ ನೂರು ವರ್ಷಗಳಲ್ಲಿ ಜಗತ್ತಿನಾದ್ಯಂತ ಸಾಗಿವೆ. ಹೀಗಾಗಿ ನಾವಿಲ್ಲಿ ಹೆಚ್ಚಿನ ವಿಸ್ತರವನ್ನು ಮಾಡಬೇಕಿಲ್ಲ. ಆದರೆ, ರಸದ ಮಹತ್ತ್ವವನ್ನು ಅದೆಷ್ಟೆಲ್ಲ ಬಗೆಯಲ್ಲಿ ಅಭಿನವಗುಪ್ತನು ವಿಸ್ತರಿಸಿದ್ದಾನೆಂಬುದನ್ನು ಸ್ವಲ್ಪವಾದರೂ ಮನಗಾಣದಿದ್ದಲ್ಲಿ ಪ್ರಸ್ತುತಲೇಖನವೇ ಅಪ್ರಸ್ತುತವಾದೀತೆಂಬ ಅಂಜಿಕೆಯಿಂದ ಸ್ವಲ್ಪ ಚರ್ಚಿಸಬೇಕಾಗಿದೆ. ಕೇವಲ “ರಸಾಧ್ಯಾಯ”ದಲ್ಲಿ ಮಾತ್ರವಲ್ಲದೆ ಅಭಿನವಭಾರತಿಯ ಆದ್ಯಂತ ಅಲ್ಲಲ್ಲಿ ರಸಮಾಹಾತ್ಮ್ಯವನ್ನು ಅಭಿನವಗುಪ್ತನು ಸಾರುತ್ತಲೇ ಬಂದಿದ್ದಾನೆ. ನಾಟ್ಯೋತ್ಪತ್ತಿ, ತಾಂಡವಲಕ್ಷಣ ಮತ್ತು ಅದಕ್ಕೆ ಬೇಕಾದ ಆಂಗಿಕಪರಿಷ್ಕಾರ, ಪೂರ್ವರಂಗವಿಧಾನ, ಗತಿಪ್ರಚಾರ, ಛಂದೋವಿಚಿತಿ, ವಾಚಿಕಾಭಿನಯ, ಇತಿವೃತ್ತನಿರ್ಮಾಣ, ಸಂಧಿ-ಸಂಧ್ಯಂಗವಿವೇಚನೆ, ಲಕ್ಷಣವಿಮರ್ಶನ, ವೃತ್ತಿ-ಪ್ರವೃತ್ತಿಗಳ ಮೀಮಾಂಸೆ, ಆಹಾರ್ಯಲಕ್ಷಣ, ಸಾಮಾನ್ಯಾಭಿನಯ, ಗೀತ-ವಾದ್ಯಪ್ರಪಂಚನ, ಶ್ರುತಿ-ಜಾತಿ-ತಾಳವಿವೇಚನೆ ಮುಂತಾದ ಅಸಂಖ್ಯಸಂದರ್ಭಗಳಲ್ಲಿ ರಸಪಾರಮ್ಯವನ್ನು ಎತ್ತಿಹಿಡಿಯುತ್ತಲೇ ಬಂದ ಅಭಿನವಗುಪ್ತನ ರಸೈಕದೃಷ್ಟಿ ತುಂಬ ಶ್ಲಾಘನೀಯ. ಇದು ಸರ್ವಥಾ ಸ್ವಯಂಸಿದ್ಧ ಮತ್ತು ಸ್ವಯಂವೇದ್ಯತತ್ತ್ವವೇ ಆಗಿದ್ದರೂ ಇಂಥ ವಸ್ತುತಂತ್ರವನ್ನು ಪ್ರಾಚಿನರೂ ನವೀನರೂ ಅದೆಷ್ಟೋ ಬಾರಿ ಅವಗಣಿಸುತ್ತ ಬಂದಿರುವುದನ್ನು ಕಂಡಾಗ ಅಭಿನವಭಾರತಿಯ ರಸನಿಷ್ಠೆ ಮಿಗಿಲಾಗಿ ಪ್ರಸ್ತುತವೆನಿಸದಿರದು.
ರಸದ ನಾಯಕಾಶ್ರಯತೆ
ಯದ್ಯಪಿ ಸರ್ವಪಾತ್ರಗಳಲ್ಲಿಯೂ ರಸಸ್ಫುರಣೆಗೆ ಅವಕಾಶವುಂಟಾದರೂ ಯಾವುದೇ ದೃಶ್ಯ ಅಥವಾ ಶ್ರವ್ಯಕಾವ್ಯದಲ್ಲಿ ನಾಯಕಾಶ್ರಿತವಾಗಿ ರಸವು ಪ್ರಾಧಾನ್ಯವನ್ನು ಪಡೆಯುವುದೆಂದು ಅಭಿನವಗುಪ್ತನ ಮತ:
“ಸ ಚ ಯದ್ಯಪ್ಯನಂತವಿಭಾವಾತ್ಮಾ ... ಪ್ರಧಾನೇ ಭೋಕ್ತರಿ ಪರ್ಯವಸಾನಾನ್ನಾಯಕಾಭಿಧಾನಭೋಕ್ತೃವಿಶೇಷಸ್ಥಾಯಿಚಿತ್ತವೃತ್ತಿಸ್ವಭಾವಃ” (ಸಂ.೧, ಪು.೨೬೫).
ಇದು ಬಲುಮಟ್ಟಿಗೆ ಸತ್ಯ. ತತ್ರಾಪಿ “ನಾಯಕ” ಎನ್ನುವುದನ್ನು ಮುಖ್ಯಪಾತ್ರ ಅಥವಾ ಪಾತ್ರಗಳೆಂಬುದಾಗಿ ಸವರಿಸಿಕೊಂಡರಂತೂ ಮತ್ತಷ್ಟು ಸತ್ಯವೆನಿಸುತ್ತದೆ. ಏಕೆಂದರೆ ಕವಿ-ಕಲಾವಿದರು ತಮ್ಮ ಶ್ರವ್ಯ-ದೃಶ್ಯಕಾವ್ಯಗಳಲ್ಲಿ ಅದೆಷ್ಟೇ ಸರ್ವಪಾತ್ರಸಹಾನುಭೂತಿಯುತರಾಗಿದ್ದರೂ ಇತಿವೃತ್ತವನ್ನು ಮುನ್ನಡಸುವಾಗ, ಪುರುಷಾರ್ಥಕೇಂದ್ರಿತವಾಗಿ ಅವಸ್ಥೆ-ಅರ್ಥಪ್ರಕೃತಿ-ಸಂಧಿಗಳ ಚೌಕಟ್ಟಿನಲ್ಲಿ ಕಲಾಪೂರ್ಣವಾಗಿ ಕಥೆಯನ್ನು ಹೆಣೆಯುವಾಗ, ಪ್ರಧಾನಪಾತ್ರಗಳ ಚಿತ್ತವೃತ್ತಿಗಳನ್ನು ಕೇಂದ್ರೀಕರಿಸದೆ ಗತ್ಯಂತರವಿಲ್ಲ. ಹೀಗೆ ಮಾಡಿದೊಡನೆಯೇ ತನ್ನಿಷ್ಠವಾಗಿ ರಸವೂ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ನಿರಾಗ್ರಹದಿಂದ ಸಕಲಪಾತ್ರಗಳನ್ನು ಗಮನಿಸಿಕೊಳ್ಳಬೇಕಾದ ಬಾಧ್ಯತೆ ಕಾವ್ಯಪ್ರಯೋಗಕರ್ತರಿಗೆ ಉಂಟು. ಇದನ್ನು ಉಪೇಕ್ಷಿಸಿದಲ್ಲಿ ಕಲಾಕೃತಿಯು ಯಾಂತ್ರಿಕವಾಗುತ್ತದೆ; ಪೂರ್ವಾಭಿನಿವಿಷ್ಟವ್ಯವಸ್ಥೆಯೊಳಗೆ ಅಡಗುವ ತಂತ್ರಮಾತ್ರಮಹಿತವಾದ ಅನುಕರಣಶೀಲಪ್ರಕಲ್ಪವಾಗುತ್ತದೆ. ಇದನ್ನೇ ಮಾತೃಕೀಕರಣದ (Typification) ಅವಾಂಛಿತಪಾರ್ಶ್ವಪರಿಣಾಮಗಳಾಗಿ ಗುರುತಿಸಬಹುದು. ಅವೆಷ್ಟೋ ಅಭಿಜಾತಕಲೆಗಳ ರೂಪಮಾತ್ರನಿಷ್ಠಪ್ರಯೋಗಗಳಲ್ಲಿ ಈ ಸಮಸ್ಯೆ ಎದ್ದುತೋರುತ್ತದೆ. ಅಂತೆಯೇ ಎಲ್ಲಿಯೂ ರಸಕ್ಕವಕಾಶವಿಲ್ಲದಂತೆ ಶುಷ್ಕತರ್ಕದ ಮೇಧಾಭಾಸಗಳನ್ನು ಮುನ್ನೆಲೆಗೆ ತರುವ ವಿಪ್ಲವಕಲೆಗಳಲ್ಲಿ (Art forms that revolt against classical models) ಇಂಥ ಅನರ್ಥಗಳ ಮತ್ತೊಂದು ಮುಖವನ್ನು ಇನ್ನೂ ಸಮೃದ್ಧವಾಗಿ ಕಾಣಬಹುದು. ಸ್ವರೂಪನಿಷ್ಠವಾದ ಅಪ್ಪಟ ಅಭಿಜಾತಕಲೆ ಇವೆರಡಕ್ಕಿಂತ ಭಿನ್ನವಾದದ್ದು; ಕೆಲಮಟ್ಟಿಗೆ ರೂಪಮಾತ್ರನಿಷ್ಠವಾದ ಅಭಿಜಾತಕಲೆಗೆ ಸಹಾನುಭೂತಿಯುಳ್ಳದ್ದು.
ರಸಪ್ರಭೇದಗಳ ವಿಕಾಸಕ್ರಮ ಮತ್ತು ರಸ-ಪುರುಷಾರ್ಥಸಂಬಂಧ
ನಾಟ್ಯಶಾಸ್ತ್ರವೇನೋ “ಶೃಂಗಾರಾದ್ಧಿ ಭವೇದ್ಧಾಸ್ಯಃ” (೬.೩೯) ಇತ್ಯಾದಿಯಾಗಿ ವಿವಿಧರಸಗಳ ಜನ್ಯ-ಜನಕಭಾವವನ್ನು ಹೇಳಿದ್ದರೂ ಅದಕ್ಕೆ ಹೆಚ್ಚಿನ ತರ್ಕಪುಷ್ಟಿಯನ್ನೇನೂ ಒದಗಿಸಿರಲಿಲ್ಲ. ಅಭಿನವಗುಪ್ತನು ಮೊದಲ ಬಾರಿಗೆ ಅಂಥ ಮಹೋದ್ಯಮವನ್ನು ಕೈಗೊಂಡಿದ್ದಾನೆ. ಅವನ ಪ್ರಕಾರ ಕಾಮವು ಸಕಲಜೀವರಾಶಿಗಳ ಮೂಲಭೂತಚೋದಕದ್ರವ್ಯವಾದ ಕಾರಣ ಅದನ್ನು ಕಟಾಕ್ಷಿಸುವ ಶೃಂಗಾರ ಮೊದಲಿಗೆ ಬರುತ್ತದೆ. ಇದನ್ನು ಹಿಂಬಾಲಿಸಿ ಹಾಸ್ಯ ಸಲ್ಲುತ್ತದೆ. ಅನಂತರ ಹಾಸ್ಯಕ್ಕೆ ವಿರುದ್ಧದಿಕ್ಕಿನಲ್ಲಿ ನಿಲ್ಲುವುದು ಕರುಣ. ಕರುಣಸ್ಥಿತಿಗೆ ಕಾರಣವಾಗುವುದು ರೌದ್ರ, ಏಕೆಂದರೆ ಮುನಿಸೇ ಇಲ್ಲಿ ಪ್ರಧಾನ. ಆ ಬಳಿಕ ಕಾಮದ ಈಡೇರಿಕೆಗೆ ಬೇಕಾದ ಅರ್ಥ ಹಾಗೂ ಅರ್ಥ-ಕಾಮಗಳ ವ್ಯವಸ್ಥಾಪನೆಗಾಗಿ ಅನಿವಾರ್ಯವಾದ ಧರ್ಮದ ಸತ್ತ್ವವನ್ನು ಒಳಗೊಂಡ ವೀರವು ತಲೆದೋರುತ್ತದೆ. ವೀರದ ಪರಿಣಾಮವಾಗಿ ವೀರವಿರೋಧಿಗಳಲ್ಲಿ ಭಯಾನಕವೂ ವೀರಸಹಕಾರಿಗಳಲ್ಲಿ ಅದ್ಭುತವೂ ವೀರದ ಪರಿಪಂಥಿವರ್ಗದಲ್ಲಿ ನಿರ್ಮಿತವಾದ ಸನ್ನಿವೇಶದ ಮೂಲಕ ಬೀಭತ್ಸವೂ ಮೈದೋರುತ್ತವೆ. ಕಡೆಗೆ ಧರ್ಮದ ಪರಿಪಾಕವಾಗಿ ಮೋಕ್ಷಾಭಿಮುಖಿಯಾದ ಶಾಂತವು ಸ್ಫುರಿಸುತ್ತದೆ. ಇಲ್ಲಿ ಸ್ವಸ್ವರೂಪವೇ ರಸವೆನಿಸುತ್ತದೆ[1]:
“ತತ್ರ ಕಾಮಸ್ಯ ಸಕಲಜಾತಿಸುಲಭತಯಾತ್ಯಂತಪರಿಚಿತತ್ವೇನ ಸರ್ವಾನ್ ಪ್ರತಿ ಹೃದ್ಯತೇತಿ ಪೂರ್ವಂ ಶೃಂಗಾರಃ | ತದನುಗಾಮೀ ಚ ಹಾಸ್ಯಃ, ನಿರಪೇಕ್ಷಭಾವತ್ವಾತ್ | ತದ್ವಿಪರೀತಸ್ತತಃ ಕರುಣಃ | ತತಸ್ತಸ್ಮಿನ್ನಿಮಿತ್ತೇ ರೌದ್ರಃ | ಸ ಚಾಮರ್ಷಪ್ರಧಾನಃ | ತತಃ ಕಾಮಾರ್ಥಯೋರ್ಧರ್ಮಮೂಲತ್ವಾದ್ವೀರಃ | ಸ ಹಿ ಧರ್ಮಪ್ರಧಾನಃ | ತಸ್ಯ ಚ ಭೀತಾಭಯಪ್ರದಾನಸಾರತ್ವಾತ್ | ತದನಂತರಂ ಭಯಾನಕಃ | ತದ್ವಿಭಾವಸಾಧಾರಣ್ಯಸಂಭಾವನಾತ್ | ತತೋ ಬೀಭತ್ಸ ಇತಿ ಯದ್ವೀರೇಣಾಕ್ಷಿಪ್ತಮ್ | ವೀರಸ್ಯ ಪರ್ಯಂತೇऽದ್ಭುತಃ ಫಲಮಿತ್ಯನಂತರಂ ತದುಪಾದಾನಮ್ ... ತತಸ್ತ್ರಿವರ್ಗಾತ್ಮಕಪ್ರವೃತ್ತಿಧರ್ಮವಿಪರೀತನಿವೃತ್ತಿಧರ್ಮಾತ್ಮಕೋ ಮೋಕ್ಷಫಲಃ ಶಾಂತಃ | ತತ್ರ ಸ್ವಾತ್ಮಾವೇಶೇನ ರಸಚರ್ವಣೇತ್ಯುಕ್ತಮ್” (ಸಂ.೧, ಪು.೩೬೬-೨೬೭).
ಟಿಪ್ಪಣಿಗಳು
[1] ಅಭಿನವಗುಪ್ತನು ತಕ್ಕಮಟ್ಟಿಗೆ ತೃಪ್ತಿಕರವೆನಿಸುವಂಥ ರೀತಿಯಲ್ಲಿ ಮೇಲಣ ಕ್ರಮವನ್ನು ನಿರೂಪಿಸಿದ್ದರೂ ಇಲ್ಲಿ ಹಲಕೆಲವು ಓರೆ-ಕೋರೆಗಳಿವೆ. ಕಾರಣ, ಅವನು ಮನುಷ್ಯಪ್ರಾಣಿಯ ಮೂಲಚೋದನೆಗಳನ್ನೂ ವಿವಿಧಭಾವ-ರಸಗಳ ಜನ್ಯ-ಜನಕಸ್ವರೂಪವನ್ನೂ ಸರಿಯಾಗಿ ಸಮೀಕರಿಸಿಕೊಳ್ಳದಿರುವುದೇ ಆಗಿದೆ. ಈ ನಿಟ್ಟಿನಲ್ಲಿ ಪ್ರಕೃತಲೇಖಕನ ಅಲ್ಪಾರಂಭವನ್ನು ಕಾಣಬಹುದು: ಮನುಷ್ಯನಿಗೂ ಪ್ರಾಣಿಗೂ ಸಾಮಾನಾಧಿಕರಣ್ಯವಿರುವುದು ಆಹಾರ-ನಿದ್ರಾ-ಭಯ-ಮೈಥುನಗಳೆಂಬ ನಾಲ್ಕು ಮೂಲಭೂತಚೋದನೆಗಳಲ್ಲಿ. ಇವುಗಳ ಪೈಕಿ ಆಹಾರ-ಮೈಥುನಪ್ರಾಪ್ತಿ ಮತ್ತು ಭಯನಿವೃತ್ತಿಗಳು ನಿರಪವಾದವಾಗಿ ಅನ್ಯಾಶ್ರಯಸಿದ್ಧ. ಅರ್ಥಾತ್, ಆಹಾರವೆಂಬ ನಮ್ಮಿಂದ ಭಿನ್ನವಾದ ವಸ್ತುವೊಂದಿಲ್ಲದೆ ಭೋಜನವು ಅಸಾಧ್ಯ. ಎಷ್ಟೋ ವೇಳೆ ಆಹಾರವನ್ನು ಸಜ್ಜೀಕರಿಸುವವರೂ ಅನಿವಾರ್ಯ. ಇದೇ ರೀತಿ ಸಫಲಸಮೃದ್ಧಮೈಥುನಕ್ಕೆ ಸಂಗಾತಿ ಅವಶ್ಯ. ಹೀಗಾಗಿ ಇದೂ ಪರಾಶ್ರಿತ. ಇನ್ನು ಭಯಕಾರಣವು ಸರ್ವಥಾ ಪರಾಯತ್ತ ಹಾಗೂ ಅದೆಷ್ಟೋ ವೇಳೆ ಇದರ ನಿವಾರಣೆಯೂ ಪರರ ನೆರವಿನಿಂದಲೇ. ಕೆಲವೊಮ್ಮೆ ವ್ಯಕ್ತಿಗಳಿಲ್ಲದಿದ್ದರೂ ಆಯುಧಾದಿಪರಿಕರಗಳಂತೂ ಬೇಕೇ ಬೇಕು. ಒಟ್ಟಿನಲ್ಲಿ ಆಹಾರ-ಮೈಥುನ-ಭಯನಿರ್ವಾಹಗಳು ಬಲುಮಟ್ಟಿಗೆ ಪರಾಯತ್ತ. ಆದರೆ ನಿದ್ರೆ ಹೀಗಲ್ಲ. ಎಷ್ಟೋ ಸಂದರ್ಭಗಳಲ್ಲಿ ಹಾಸಿಗೆ-ಹೊದಿಕೆಗಳಂಥ ಪರಿಕರಗಳಿಲ್ಲದೆಯೂ ಇದು ಲಭ್ಯ. ಹೀಗಾಗಿಯೇ ನಿದ್ರೆ ಸಂಪೂರ್ಣವಾಗಿ ಆತ್ಮಾಲಂಬನದ್ವಾರಾ ಲಭಿಸುವ ಆನಂದ. ಹೀಗಿರಲು ಎಲ್ಲ ಬಗೆಯ ಅರ್ಥಪ್ರಾಪ್ತಿಯ ಪ್ರತೀಕವಾಗಿ ಆಹಾರಸಂಚಯನವನ್ನು ಪರಿಗಣಿಸಿದರೆ ಇಲ್ಲಿ ಎದ್ದುತೋರುವ ಭಾವವು ಅರ್ಥಸಾಧಕವಾದ ಉತ್ಸಾಹ. ಕಾಮದ ಜೀವಾಳವಾದ ಮೈಥುನದಲ್ಲಂತೂ ರತಿಭಾವದ ಪ್ರಾಧಾನ್ಯ ನಿರ್ವಿವಾದ. ಇವೆರಡರಲ್ಲಿಯೂ ಒಂದು ನಚ್ಚಬಲ್ಲ ವ್ಯವಸ್ಥೆ ಬೇಕೆಂದರೆ ಧರ್ಮವನ್ನು ಗುರುತಿಸಿಕೊಳ್ಳಬೇಕು. ಇದು ಮತ್ತೆ ಉತ್ಸಾಹಾಧೀನ. ಇನ್ನು ಭಯನಿವೃತ್ತಿಗೆಂದು ತೊಡಗುವಾಗ ಅನಿವಾರ್ಯವಾಗುವುದು ಪುನಃ ಉತ್ಸಾಹವೇ. ಹೀಗೆ ಇಷ್ಟಪ್ರಾಪ್ತಿ ಮತ್ತು ಅನಿಷ್ಟನಿವೃತ್ತಿಗಳಿಗೆ ಮಿಗಿಲಾಗಿ ಒದಗಿಬರುವುದು ಉತ್ಸಾಹ. ಇದೇ ಸಕಲಸಾಧನಭೂತವಾದ ಅರ್ಥ. ನಿದ್ರೆಯ ಸಂಗತಿ ಹೀಗಲ್ಲ; ಅದು ಆನಂದವೇ. ಆದರೆ ನಿದ್ರಾಕಾಲದಲ್ಲಿ ಅಯತ್ನವಾಗಿಯೇ ಒದಗುವ ನಿರುಪಾಧಿಕತೆಯು ಜಾಗ್ರತ್ತಿಗೂ ಮತ್ತೆ ವಿಸ್ತರಿಸಿಕೊಳ್ಳದ ಕಾರಣ ಇದು ಮೋಕ್ಷದ ಒಂದು ಹೋಲಿಕೆಯಾದರೂ ತತ್ತ್ವತಃ ಮೋಕ್ಷವಲ್ಲ. ಹೀಗಾಗಿ ಗಾಢನಿದ್ರೆಯ ನಿರ್ಯತ್ನಸಿದ್ಧನಿರುಪಾಧಿಕತೆಯನ್ನು ಜಾಗ್ರತ್ತಿನಲ್ಲಿಯೂ ಪ್ರಯತ್ನಪೂರ್ವಕವಾಗಿ ಸಾಧಸಿಕೊಂಡಾಗ ಅದು ಜೀವನ್ಮುಕ್ತಿಯೆನಿಸುತ್ತದೆ. ಹೀಗೆ ಪುರುಷಾರ್ಥಚತುಷ್ಟಯದ ನಿಷ್ಪಾದನವನ್ನು ಸಕಲಪ್ರಾಣಿಗಳ ಮೂಲಭೂತಚೋದನೆಗಳಿಂದಲೇ ಸಾಧಿಸಬಹುದಾಗಿದೆ. ಜೀವನದಲ್ಲಿ ಎಲ್ಲರಿಗೂ ಇಷ್ಟ ಮತ್ತು ಅನಿಷ್ಟಗಳೆಂಬ ಎರಡು ವರ್ಗಗಳಿದ್ದೇ ಇರುತ್ತವೆ. ಇಷ್ಟವು ಭೋಗರೂಪ; ಅನಿಷ್ಟವು ಭೀತಿರೂಪ. ಭೋಗವೇ ತನ್ನ ಉತ್ಕಟದಶೆಯಲ್ಲಿ ರತಿ. ಇದು ಪುರುಷಾರ್ಥವಾದಾಗ ಕಾಮ. ಇದೇ ಕಲಾನುಭವಕಾಲದಲ್ಲಿ ಶೃಂಗಾರ. ಇನ್ನು ಅನಿಷ್ಟವೆನಿಸಿದ ಭೀತಿಯು ಕ್ರೋಧಮೂಲದ್ದಾಗಿ ನಮ್ಮ ಮೇಲೊದಗಿ ನಮ್ಮನ್ನು ಸದಾ ಶೋಕದಲ್ಲಿ ಕೆಡವುತ್ತಿರುತ್ತದೆ. ಇಷ್ಟವರ್ಗದಲ್ಲಿ ರತಿ, ಉತ್ಸಾಹ, ಹಾಸ, ವಿಸ್ಮಯ, ಕುತೂಹಲ, ವಾತ್ಸಲ್ಯ ಅಥವಾ ದಯೆಗಳೆಂಬ ಭಾವಗಳು ನಮ್ಮಲ್ಲಿ ನಿರಂತರವಾಗಿ ಹುಟ್ಟುತ್ತಿರುತ್ತವೆ. ದ್ವಿಷ್ಟವರ್ಗದಲ್ಲಿ ಭಯ, ಜುಗುಪ್ಸೆ, ಕ್ರೋಧ ಮತ್ತು ಶೋಕಗಳೆಂಬ ಭಾವಗಳು ನಮ್ಮೊಳಗೆ ತಾಂಡವಿಸುತ್ತಿರುತ್ತವೆ. ಇಂಥ ಯಾವುದೇ ಭಾವವಿಕಾರಗಳಿಲ್ಲದ “ಉದಾಸೀನ”ಸ್ಥಿತಿಯೇ ಶಾಂತಕ್ಕೆ ಮೂಲಧಾತು. ಇಷ್ಟವುಳ್ಳ ವಸ್ತುವಿನಲ್ಲಿ ಭೋಗವು ರತಿಯಾದರೆ ಅದನ್ನು ದಕ್ಕಿಸಿಕೊಳ್ಳುವ ಹುಮ್ಮಸ್ಸು ಉತ್ಸಾಹ. ರತ್ಯುತ್ಸಾಹಗಳ ಹಿಗ್ಗಿನ ಒಂದು ಆಯಾಮವೇ ಹಾಸ. ನಾವು ಇಷ್ಟಪಟ್ಟ ವಸ್ತು-ವ್ಯಕ್ತಿಗಳಲ್ಲಿ ತೋರುವ ಪ್ರೀತಿಯ ಲಾಲನಸ್ವರೂಪವೇ ವಾತ್ಸಲ್ಯ ಅಥವಾ ಸ್ನೇಹವಾದರೆ, ಅಂಥ ವಸ್ತು-ವ್ಯಕ್ತಿಗಳಿಗೆ ಸಂಕಟವೊದಗಿದಾಗ ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳದೆ ಸಹಾನುಭೂತಿಯ ನೆರೆವೀಯುವಾಗ ಮೊದಲು ಮೂಡುವ ಭಾವವೇ ದಯೆ ಅಥವಾ ಕೃಪೆ. ನಾವು ನೆಮ್ಮದಿಯಲ್ಲಿದ್ದಾಗ ಅದಕ್ಕೆ ಭಂಗವೊದಗದ ರೀತಿಯಲ್ಲಿಯೇ ನಮ್ಮ ಬಗೆಯನ್ನು ಕೆಣಕುವ ವಸ್ತು-ವಿಚಾರ-ವ್ಯಕ್ತಿಗಳನ್ನು ಕುರಿತು ನಡಸುವ ಹುಡುಕಾಟದ ಮೂಲವೇ ಕುತೂಹಲದಲ್ಲಿದೆ. ಒಟ್ಟಿನಲ್ಲಿ ಈ ಎಲ್ಲ ಭಾವಗಳೂ ನಮ್ಮ ಅಸ್ತಿತ್ವವೆಂಬ ಅಹಂಕಾರವನ್ನು ಹಿಗ್ಗಿಸಿ, ಹಿರಿದಾಗಿಸಿ ತನ್ಮೂಲಕ ಸಂತೋಷವನ್ನು ತಂದುಕೊಡುತ್ತವೆ. ಆದರೆ ವಿಸ್ಮಯವು ಹಾಗಲ್ಲ. ಇದು ಪ್ರಕೃತಿ-ಸಂಸ್ಕೃತಿಗಳೊಡನೆ ನಾವು ತೊಡಗಿಕೊಂಡಾಗ ಸ್ವಯಂಪ್ರೇರಣೆಯಿಂದಲೇ ನಮ್ಮ ಅಹಂಕಾರವನ್ನು ಕುಗ್ಗಿಸಿಕೊಳ್ಳುವ, ಕಿರಿದಾಗಿಸಿಕೊಳ್ಳುವ ಪರಿಣಾಮವನ್ನುಂಟುಮಾಡಿಯೂ ನಮ್ಮ ಪಾಲಿಗೆ ಸಂತೋಷ-ಸಾರ್ಥಕ್ಯಗಳನ್ನು ಉಳಿಸಿಕೊಡುತ್ತದೆ. ಇದೊಂದು “ವಿಸ್ಮಯಾವಹ”ಚೋದ್ಯ! ಇದಕ್ಕೆ ಕಾರಣ ನಾವಿಲ್ಲಿ ಸ್ವಯಂಪ್ರೇರಣೆಯಿಂದ ನಮ್ಮ ಅಹಂಕಾರವನ್ನು ತಾತ್ಕಾಲಿಕವಾಗಿಯಾದರೂ ಇಳಿಸಿಕೊಳ್ಳುವುದಕ್ಕೆ ಒಪ್ಪಿರುವುದು. ಒಂದು ಪಕ್ಷ ಇದು ಬಲವಂತದ್ದಾಗಿದ್ದರೆ ಅಂಥ ವಿಸ್ಮಯದಲ್ಲಿ ಸುಖವಿರುತ್ತಿರಲಿಲ್ಲ. ಈ ಕಾರಣದಿಂದಲೇ ವಿಸ್ಮಯವನ್ನೊಂದು ಬಗೆಯ ವಿಭೂತಿಪೂಜಾಪರಿಣಾಮವೆಂದು ಹೇಳಬಹುದು. ಮಾತ್ರವಲ್ಲ, ವಿಸ್ಮಯವನ್ನು ಪರಿಭಾವಿಸಿದಂತೆ ಉತ್ಸಾಹವು ಗರಿಗೆದರುತ್ತದೆ. ಇಂಥ ಉತ್ಸಾಹವು ವಿಸ್ಮಯಕಾರಕಗಳಾದ ವಸ್ತು-ವಿಚಾರ-ವ್ಯಕ್ತಿ-ಸನ್ನಿವೇಶಗಳ ಒಳಗುಟ್ಟನ್ನು ಒಡೆಯಬೇಕೆಂದು ತೊಡಗುವ ಕುತೂಹಲಕ್ಕೆ ಆಸ್ಪದವಾಗುತ್ತದೆ. ಹೀಗೆ ಉತ್ಸಾಹ-ಕುತೂಹಲಗಳು ತಮ್ಮ ಯತ್ನದಲ್ಲಿ ಸಫಲವಾದಾಗ ಅವು ಮತ್ತೆ ಭೋಗವೆಂಬ ರತಿಯಲ್ಲಿ ಪರ್ಯವಸಿಸುತ್ತವೆ. ಒಂದು ವೇಳೆ ವಿಫಲವಾದರೆ ಅವು ಮತ್ತೆ ಭಯ-ಶೋಕಗಳಿಗೆ ಹಾದಿಯಾಗುತ್ತವೆ. ಅದೆಷ್ಟೋ ಬಾರಿ ಭಕ್ತಿಯು ತನ್ನ ತಿರ್ಯಗ್ರೂಪದಲ್ಲಿ ಭಯ-ಶೋಕಮೂಲದ್ದಾಗಿರುತ್ತದೆ. ಹಾಗಲ್ಲದ ವಿಕಸಿತಭಕ್ತಿಯು ದಯಾ-ವಾತ್ಸಲ್ಯಮಯವೂ ರತ್ಯುತ್ಸಾಹಪೂರ್ಣವೂ ಆಗುತ್ತದೆ. ಇನ್ನು ಭಾವಗಳ ಕೋಟಿ-ಪ್ರತಿಕೋಟಿರೂಪದ ಜನ್ಯ-ಜನಕಸಂಬಂಧವನ್ನು ಕಾಣುವುದಾದರೆ, ರತಿ-ಜುಗುಪ್ಸೆಗಳೂ ಉತ್ಸಾಹ-ಭಯಗಳೂ ಕ್ರೋಧ-ಶೋಕಗಳೂ ಹಾಸ-ವಿಸ್ಮಯಗಳೂ ಜೊತೆಗೂಡುತ್ತವೆನ್ನಬಹುದು. ನಮ್ಮೆಲ್ಲರ ಇಷ್ಟದ ಅತ್ಯುತ್ಕಟರೂಪ ರತಿಯಾದರೆ ದ್ವಿಷ್ಟದ ಅಂಥ ರೂಪವು ಜುಗುಪ್ಸೆ. ಹೀಗಾಗಿಯೇ ರಾಗದ ವಿರುದ್ಧಕೋಟಿಯಲ್ಲಿರುವ ವಿರಾಗಕ್ಕೆ ಜಗತ್ತನ್ನು ಕುರಿತೂ ಜಗದ್ಭೋಗಗಳನ್ನು ಕುರಿತೂ ಜುಗುಪ್ಸೆಯುಂಟಾಗಬೇಕೆಂದು ವೇದಾಂತಾದಿಶಾಸ್ತ್ರಗಳು ವಿಧಿಸಿವೆ. ಅಂತೆಯೇ ಜಗತ್ತಿನ ಸಕಲವಸ್ತುಗಳಲ್ಲಿ, ಸಕಲಾನುಭವಗಳಲ್ಲಿ ರತಿಯುಂಟಾದರೆ ಅದು ಪರಿಣಾಮತಃ ಪರಮಪ್ರೀತಿಯೇ ಆಗಿ ತನ್ಮೂಲಕವೂ ಚಿತ್ತಪರಿಪಾಕದ ವೈರಾಗ್ಯಾರ್ಹತೆ ಒಡಮೂಡುತ್ತದೆಂಬುದು ವಿಚಿತ್ರವಾದರೂ ಸತ್ಯ. ಈ ಕಾರಣದಿಂದಲೇ ನೀಲಕಂಠದೀಕ್ಷಿತನು “ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ | ಕರ್ತವ್ಯೋ ಮಮಕಾರಃ ಕಿಂ ತು ಸ ಸರ್ವತ್ರ ಕರ್ತವ್ಯಃ ||” (ವೈರಾಗ್ಯಶತಕ, ೭೬) ಎಂದು ಒಕ್ಕಣಿಸಿದ್ದು. ಉತ್ಸಾಹವು ವಿಕಾಸರೂಪಿ, ಧೈರ್ಯಶಾಲಿ ಮತ್ತು ಉದ್ಯಮೋನ್ಮುಖಿ. ಆದರೆ ಭಯವು ಸಂಕೋಚರೂಪಿ, ಅಧೈರ್ಯಶಾಲಿ ಮತ್ತು ಕರ್ತವ್ಯವಿಮುಖಿ. ಹೀಗಾಗಿಯೇ ಉತ್ಸಾಹವನ್ನು ಉತ್ತಮಪ್ರಕೃತಿಗಳ ಒಂದು ಪ್ರಧಾನಲಕ್ಷಣವಾಗಿ ನಾಟ್ಯಶಾಸ್ತ್ರಾದಿಗಳು ತಿಳಿಸಿವೆ. ಅಂತೆಯೇ ಭಯವನ್ನು ಅಧಮಪ್ರಕೃತಿಗಳಲ್ಲಿ ಹೆಚ್ಚಾಗಿ ತೋರಿಕೊಳ್ಳುವ ಭಾವವೆಂದೂ ಹೇಳಿವೆ. ಆದರೆ ಎಲ್ಲರಲ್ಲಿಯೂ ಎಲ್ಲ ಭಾವಗಳೂ ವಿಭಿನ್ನಪ್ರಮಾಣಗಳಲ್ಲಿ ಇದ್ದೇ ಇರುವುವೆಂಬುದನ್ನು ಸಾಮಾನ್ಯವಾಗಿ ಒಪ್ಪಲೇಬೇಕು. ಇಲ್ಲವಾದರೆ ಮಾತೃಕೀಕರಣದ ಅತಿರೇಕ ತಲೆದೋರುತ್ತದೆ; ಕಲೆಯಲ್ಲಿ ವೈವಿಧ್ಯವೂ ನಶಿಸುತ್ತದೆ. ಸಮರ್ಥನ ಅತೃಪ್ತಕಾಮವು ಕ್ರೋಧವಾಗಿ ಪರಿಣಮಿಸುವುದು ಸುವೇದ್ಯ. ಅಂತೆಯೇ ಅಸಮರ್ಥನ ಅತೃಪ್ತಕಾಮವು ಶೋಕವೇ ಆಗುತ್ತದೆ. ಅಷ್ಟೇ ಅಲ್ಲದೆ ಸಮರ್ಥನ ಕ್ರೋಧದ ಎದುರು ಅಸಮರ್ಥನು ನಿಂತಾಗ ಅವನಿಗೆ ಶೋಕವೇ ಗತಿ. ಈ ಕಾರಣದಿಂದಲೇ ಇವುಗಳ ಜನ್ಯ-ಜನಕಭಾವ ಸ್ಪಷ್ಟ. ಇಷ್ಟನಾಶದ ಚಿಂತೆಯೂ ಸಾಮರ್ಥ್ಯದ ಕೊರತೆಯೂ ಇಲ್ಲದಿದ್ದಾಗ ಶೋಕವು ಕೆಲಮಟ್ಟಿಗೆ ರತಿ ಅಥವಾ ಪ್ರೀತಿಯ ಛಾಯೆಯನ್ನೂ ಒಡಗೂಡಿಕೊಂಡು ಸ್ನೇಹ, ವಾತ್ಸಲ್ಯ, ದಯೆಗಳಂಥ ಭಾವಗಳಾಗಿ ಹರಳುಗಟ್ಟುತ್ತದೆ (ಅಮರಕೋಶವು ಕರುಣಕ್ಕೆ ಪರ್ಯಾಯವಾಗಿ ಘೃಣೆ, ಕೃಪೆ, ದಯೆ, ಅನುಕಂಪಾದಿಗಳನ್ನು ಹೆಸರಿಸುವುದು ಗಮನಾರ್ಹ (೧.೨೨೬). ಇಂಥ ಸಮೀಕರಣವು ಅಷ್ಟಾಗಿ ಯುಕ್ತವಲ್ಲವಾದರೂ ಸರ್ವಾತ್ಮನಾ ದುಷ್ಟವನ್ನುವಂತಲ್ಲ). ಈ ಕಾರಣದಿಂದಲೇ ಇವುಗಳನ್ನು ಸ್ವತಂತ್ರವಾಗಿ ರಸಸ್ಥಿತಿಗೆ ಏರಬಲ್ಲ ಚಿತ್ತವೃತ್ತಿಗಳೆಂದೂ ಹೇಳಬಹುದು. ಇದೇ ವಾತ್ಸಲ್ಯ ಅಥವಾ ಪ್ರೇಯೋರಸದ ಮೂಲ. ಹಾಗೆ ನೋಡಿದರೆ ಅಪ್ಪಟ ಶೋಕ ಮತ್ತು ತಜ್ಜನ್ಯವಾದ ಕರುಣಗಳಿಗಿಂತ ಇವುಗಳ ರಚನೆ ವಿಭಿನ್ನವೇ ಆಗಿದೆಯೆಂದು ಗುರುತಿಸಿಕೊಳ್ಳಬಹುದು. ರಸಸಂಖ್ಯೆಯನ್ನು ಕುರಿತು ಆಲೋಚಿಸುವಾಗ ಇಂಥ ಅಂಶಗಳನ್ನೆಲ್ಲ ವಿಶ್ವಜನೀನಾನುಭವದ ಹಿನ್ನೆಲೆಯಲ್ಲಿ ಚೆನ್ನಾಗಿ ಪರಿಶೀಲಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಕುತೂಹಲವು ಸ್ಥಾಯಿಯಾಗಿ ಉಳ್ಳ ಸ್ವೋಪಜ್ಞವಾದ “ಧೀರರಸ”ವನ್ನು ಸ್ಮರಿಸಬೇಕು. ಕುತೂಹಲವೇ ತನ್ನ ಪರ್ಯಂತಭೂಮಿಯಲ್ಲಿ ಲೋಕಹಿತ ಮತ್ತು ಆತ್ಮಹಿತಗಳನ್ನು ಸಾಧಿಸಬಲ್ಲ ಅನ್ವೇಷಣೆಯಾಗಿ, ಜಿಜ್ಞಾಸೆಯಾಗಿ ಕೂಡ ಬೆಳೆಯುವುದನ್ನು ರಸಿಕರು ಕಾಣಬಹುದು. ಇದನ್ನೇ ಸ್ವತಂತ್ರವಾಗಿ ಪ್ರಕೃತಲೇಖಕನು ಪ್ರತಿಪಾದಿಸಿರುವುದನ್ನು ಆಸಕ್ತರು ಅನ್ಯತ್ರ ನೋಡಬಹುದು (“ಧೀರೋ ವಿಶಿಷ್ಟೋ ರಸಃ”. ವಾಗರ್ಥವಿಸ್ಮಯಾಸ್ವಾದಃ (ಸಂಸ್ಕೃತ). ಬೆಂಗಳೂರು: ಪ್ರೇಕ್ಷಾಪ್ರತಿಷ್ಠಾನ, ೨೦೧೮). ಹಾಸವು—ಮುಖ್ಯವಾಗಿ ಪರಸ್ಥರೂಪದಲ್ಲಿ—ಪ್ರವೃದ್ಧಾಹಂಕಾರವನ್ನೇ ಮೂಲವಾಗಿ ಹೊಂದಿರುವ ಭಾವ. ಆದರೆ ವಿಸ್ಮಯವು ಸ್ವಯಂಪ್ರೇರಣೆಯ ಅಹಂಕಾರವಿಲಯನವನ್ನೇ ನೆಮ್ಮಿದ ಭಾವ. ಹಾಸದಲ್ಲಿ ಹೆಚ್ಚಾಗಿ ತೋರಿಕೊಳ್ಳುವ ಬೌದ್ಧಿಕಪ್ರಾಬಲ್ಯ ವಿಸ್ಮಯದಲ್ಲಿ ಸ್ವಲ್ಪವೂ ಇರುವುದಿಲ್ಲ. ಆದರೆ ಹಾಸವು ಆತ್ಮಸ್ಥವಾದಾಗ (ಇಲ್ಲಿ ಭರತಾದಿಗಳು ಆತ್ಮಸ್ಥ ಮತ್ತು ಪರಸ್ಥಹಾಸಗಳಿಗೆ ಯಾವ ವಿವರಣೆಯನ್ನು ಕೊಟ್ಟಿರುವರೋ ಅದಕ್ಕಿಂತ ಭಿನ್ನವಾದ ನಿಲವು ಪ್ರಕೃತಲೇಖಕನದೆಂಬುದನ್ನು ಸ್ಪಷ್ಟೀಕರಿಸಬೇಕು. ಈ ಪ್ರಕಾರ ಆತ್ಮಸ್ಥಹಾಸವು ತನ್ನನ್ನೇ ಸ್ವಪ್ರೇರಣೆಯಿಂದ ಹಾಸ್ಯಕ್ಕೆ ಗುರಿಮಾಡಿಕೊಳ್ಳುವ ಪರಿ; ಪರಸ್ಥಹಾಸವು ಹೀಗಲ್ಲದೆ ಇನ್ನೊಬ್ಬರನ್ನೋ ಮತ್ತೊಂದನ್ನೋ ಕಂಡು ಅಲ್ಲಿಯ ಲಘುಲೋಪ-ದೋಷಗಳಿಗೆ ಪ್ರತಿಕ್ರಿಯೆಯೆಂಬಂತೆ ಹಗುರವಾದ ಹಾಸ್ಯವನ್ನು ಹೊಮ್ಮಿಸುವ ಬಗೆ. ಈ ದಿಕ್ಕಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಸಹೃದಯರು “ಹಾಸ್ಯರಸ: ಒಂದು ಸ್ವೋಪಜ್ಞಟಿಪ್ಪಣಿ. ಬನಸಿರಿ. ಬೆಂಗಳೂರು: ಭುವನೇಶ್ವರೀ ಹೆಗಡೆ ಅಭಿನಂದನಸಮಿತಿ, ೨೦೧೭. ಪು. ೨೫-೩೪” ಲೇಖನವನ್ನು ಪರಿಕಿಸಬಹುದು.) ಅಹಂಕಾರಖಂಡನೆಯೇ ಅದರ ಜೀವಾತುವಾಗುತ್ತದೆ. ವಿಸ್ಮಯವೂ ತನ್ನ ಪರ್ಯಂತಭೂಮಿಯಲ್ಲಿ ಇದನ್ನೇ ಉದ್ದೇಶಿಸಿದೆ. ವಿಶೇಷತಃ ವಿಭೂತಿದರ್ಶನದಿಂದಾಗುವ ವಿಸ್ಮಯವು ಆತ್ಮಸಮರ್ಪಣರೂಪದ್ದೇ ಆಗುತ್ತದೆ. ಒಟ್ಟಿನಲ್ಲಿ ಎಲ್ಲ ಮೂಲಭೂತಭಾವಗಳೂ ಒಂದು ಹಂತದವರೆಗೆ ಕೋಟಿ-ಪ್ರತಿಕೋಟಿಗಳೆಂಬಂತೆ ತೋರಿದರೂ ಅತ್ಯುತ್ಕಟರಸಸ್ಥಿತಿಯಲ್ಲಿ ಅಖಂಡತೆಯನ್ನೇ ಬಿಂಬಿಸಿ “ಅಧಿರಸ”ವೆಂಬ ಶಾಂತದ ಪದವನ್ನು ಮುಟ್ಟುವುದು ಸೌಂದರ್ಯಮೀಮಾಂಸೆಯ ಸ್ವಾರಸ್ಯತಮಸ್ತರ. ಮೊದಲ ಹಂತದಲ್ಲಿ ಈ ಭಾವಗಳಿಗಿರುವ ಅನನ್ಯತೆಯು ಎರಡನೆಯ ಹಂತದಲ್ಲಿ ಕೋಟಿ-ಪ್ರತಿಯೋಗಿಗಳ ನಡುವಣ ಭೇದದ ವಿಲಯದಲ್ಲಿ ಪರಿಣಮಿಸಿದರೆ ಕಟ್ಟಕಡೆಯ ಹಂತದಲ್ಲಿ ಇವೆಲ್ಲ ಏಕಘನವಾಗಿ ಪರಿಣಮಿಸುವುದು ರಸಸಿದ್ಧಾಂತದ ಅನನ್ಯಸಿದ್ಧಿ.