ಅಭಿನವಭಾರತಿಯಲ್ಲಿ ಉಲ್ಲೇಖಗೊಂಡ ಲೇಖಕರು ಮತ್ತು ಕೃತಿಗಳು
ಅಭಿನವಭಾರತಿ ತನ್ನ ಗುಣ-ಗಾತ್ರಗಳಿಂದ ಮಿಗಿಲಾದ ಗಣ್ಯತೆಯನ್ನು ಪಡೆದ ಗ್ರಂಥವಷ್ಟೆ. ಇಂಥ ಆಚಾರ್ಯಕೃತಿಗೆ ಅಧಿಕೃತತೆಯನ್ನೂ ಅರ್ಥಪೂರ್ಣತೆಯನ್ನೂ ತರಲು ಅಭಿನವಗುಪ್ತನು ಅನೇಕಪೂರ್ವಸೂರಿಗಳ ವಿಚಾರಗಳನ್ನೂ ಕೃತಿಗಳನ್ನೂ ಉದ್ಧರಿಸಿದ್ದಾನೆ. ಇದು ಅವನ ವಿದ್ವನ್ಮತ್ತೇಭವಿಕ್ರೀಡಿತಕ್ಕೆ ಸಾಕ್ಷಿಯೂ ಹೌದು. ಈಗಿನಂತೆ ಸಂಶೋಧನೆಗೆ ಯಾವುದೇ ಸುಲಭಮಾರ್ಗಗಳಿಲ್ಲದಿದ್ದಾಗ ಪ್ರತಿಯೊಂದು ಆಕರಗ್ರಂಥವನ್ನೂ ಮೂಲದಲ್ಲಿಯೇ ಓದಿ ಅಥವಾ ಗುರೂಪಾಸನೆಯ ಮೂಲಕ ಕಲಿತು ಅವುಗಳ ವಿಚಾರಸಾರವನ್ನು ಜೀರ್ಣಿಸಿಕೊಂಡ ಬಳಿಕವಷ್ಟೇ ಗ್ರಂಥರಚನೆಗೆ ತೊಡಗಬಹುದಿದ್ದ ಕಾಲವದು. ಜೊತೆಗೆ, ಗ್ರಂಥಗಳ ಉಪಲಬ್ಧಿ ಮತ್ತು ಸಂರಕ್ಷಣಗಳೂ ಕಷ್ಟವಿದ್ದ ಆ ಹೊತ್ತಿನಲ್ಲಿ ಸಾಕಷ್ಟು ಹಾಸು-ಬೀಸಿನ ಕೃತಿಗಳನ್ನು ಅಭಿನವಗುಪ್ತನು ಉಲ್ಲೇಖಿಸಿರುವುದು ವಿಸ್ಮಯಾವಹ. ಈ ಕೃತಿಗಳ ಪೈಕಿ ಕೆಲವು ಶಾಸ್ತ್ರಗ್ರಂಥಗಳು, ಮತ್ತೆ ಕೆಲವು ಕಾವ್ಯಗಳು. ಶಾಸ್ತ್ರಗ್ರಂಥಗಳ ಪೈಕಿ ನಾಟ್ಯ, ಅಲಂಕಾರ, ವ್ಯಾಕರಣ, ಛಂದಸ್ಸು, ಶಿಲ್ಪ, ಸಂಗೀತ, ಆಗಮ, ದರ್ಶನ, ತಂತ್ರ, ಆಯುರ್ವೇದ, ಧರ್ಮಶಾಸ್ತ್ರ ಮುಂತಾದ ಅನೇಕವಿದ್ಯಾಶಾಖೆಗಳಿಗೆ ಸೇರಿದ ಕೃತಿಗಳಿವೆ. ಇದೇ ರೀತಿ ಕಾವ್ಯಗಳ ಪೈಕಿ ದೃಶ್ಯ-ಶ್ರವ್ಯಕಾವ್ಯಗಳೆರಡೂ ಸೇರಿವೆ. ಇವುಗಳಲ್ಲಿ ಮತ್ತೆ ಅನೇಕಪ್ರಕಾರಗಳುಂಟು. ಹೀಗೆ ಅಭಿನವಗುಪ್ತನ ವ್ಯುತ್ಪತ್ತಿವಿಸ್ತರ ಬಲು ಹಿರಿದು. ಹೀಗೆಯೇ ಅವನು ಅತ್ಯುತ್ತಮಕವಿಗಳನ್ನೂ ಶಾಸ್ತ್ರಜ್ಞರನ್ನೂ ಆಧರಿಸಿದ್ದನೆಂಬುದು ಸುವೇದ್ಯ. ಆದುದರಿಂದ ಅವನಿಗೆ ಯಃಕಶ್ಚಿಲ್ಲೇಖಕರ ಆಲಂಬನದೋಷ ಅಂಟಿಲ್ಲ. ಅಭಿನವಗುಪ್ತನ ಉಲ್ಲೇಖಗಳ ಕಾರಣದಿಂದಲೇ ಅವೆಷ್ಟೋ ಕವಿ-ಪಂಡಿತರ ಕೃತಿಗಳು ನಮಗಿಂದು ತಿಳಿದುಬರುತ್ತಿವೆ. ಮಾತ್ರವಲ್ಲ, ಇನ್ನೆಷ್ಟೋ ಲೇಖಕರ ಕಾಲನಿರ್ದೇಶನಕ್ಕೂ ಅವನ ಉದ್ಧರಣಗಳು ನೆರವಾಗಿವೆ. ಈ ಕಾರಣಗಳಿಂದ ಇವರುಗಳ ಸಂಕ್ಷಿಪ್ತಪಟ್ಟಿಯನ್ನಾದರೂ ಪರಿಶೀಲಿಸುವುದೊಳಿತು.
ಅಭಿನವಭಾರತಿಯಲ್ಲಿ ಮೊತ್ತಮೊದಲಿಗೆ ಭಟ್ಟತೌತನ ವಿಪುಲೋಲ್ಲೇಖವಿದೆ. ಈತ ಅಭಿನವಗುಪ್ತನ ಗುರುವಾದ ಕಾರಣ, ನಾಟ್ಯಶಾಸ್ತ್ರದ ಆಚಾರ್ಯನೂ ಆಗಿದ್ದ ಕಾರಣ, ಈ ಬಗೆಯ ಉದ್ಧರಣಗಳು ಸಹಜವೂ ಆಗಿವೆ, ಸ್ತುತ್ಯವೂ ಎನಿಸಿವೆ. ಅನಂತರ ತನ್ನ ಧ್ವನ್ಯಾಲೋಕಪಾಠನಾಚಾರ್ಯ ಭಟ್ಟೇಂದುರಾಜನ ಉಲ್ಲೇಖವನ್ನು ಮಾಡಿದ್ದಾನೆ. ಆ ಬಳಿಕ ಅವನ ಪರಮಗುರು ಉತ್ಪಲದೇವನೆಂಬ ಶೈವಾಚಾರ್ಯನ ಹೆಸರೂ ಬಂದಿದೆ. ಯೋಗಸೂತ್ರನಿರ್ಮಾತೃವಾದ ಪತಂಜಲಿ ಹಾಗೂ ನ್ಯಾಯಸೂತ್ರಗಳನ್ನು ರಚಿಸಿದ ಗೌತಮರ ಉಲ್ಲೇಖವೂ ಇಲ್ಲಿದೆ. ಧರ್ಮಶಾಸ್ತ್ರಕಾರರ ಪೈಕಿ ಯಾಜ್ಞವಲ್ಕ್ಯರನ್ನು ಉಲ್ಲೇಖಿಸಿದ್ದಾನೆ. ಆಲಂಕಾರಿಕರೂ ನಾಟ್ಯಶಾಸ್ತ್ರದ ವ್ಯಾಖ್ಯಾತೃಗಳೂ ಕೆಲಮಟ್ಟಿಗೆ ಅಭಿನವಗುಪ್ತನ ಪೂರ್ವಪಕ್ಷೀಯರರೂ ಆಗಿದ್ದ ಕೋಹಲ, ಉದ್ಭಟ, ರುದ್ರಟ, ಶ್ರೀಹರ್ಷ, ಮಾತೃಗುಪ್ತ, ಲೊಲ್ಲಟ, ಶಂಕುಕ, ಭಟ್ಟನಾಯಕ ಮುಂತಾದವರೂ ನಾಟ್ಯವಿದ್ಯೆಯ ಹಲವಂಶಗಳನ್ನು ಚರ್ಚಿಸುವ—ಅಭಿನವಭಾರತಿಯಿಂದಷ್ಟೇ ನಮಗೆ ತಿಳಿದುಬರುವ—ರಾಹುಲ, ಘಂಟಕ, ಪ್ರಿಯಾತಿಥಿ, ಶಕಲೀಗರ್ಭ, ಅಷ್ಟಾಗಮ, ಭಟ್ಟಯಂತ್ರ ಮೊದಲಾದ ಪಂಡಿತರಿಲ್ಲಿದ್ದಾರೆ. ಛಂದಶ್ಶಾಸ್ತ್ರವನ್ನು ಕುರಿತು ಅಭಿನವಗುಪ್ತನು ಜಯದೇವ, ಕಾತ್ಯಾಯನ ಮತ್ತು ಭಟ್ಟಶಂಕರರನ್ನು ಉಲ್ಲೇಖಿಸುತ್ತಾನೆ. ಸಂಗೀತವನ್ನು ಕುರಿತು ದತ್ತಿಲ, ನಾರದ, ಕಾಶ್ಯಪ, ಮತಂಗ, ಕೀರ್ತಿಧರ, ಟೀಕಾಕಾರ, ಭಟ್ಟವೃದ್ಧಿ, ಭಟ್ಟಗೋಪಾಲ, ಭಟ್ಟಸುಮನಸ ವಿಶಾಖಿಲಾಚಾರ್ಯ ಮುಂತಾದ ಪೂರ್ವಾಚಾರ್ಯರನ್ನು ಅವನು ಸ್ಮರಿಸುತ್ತಾನೆ. ಕವಿಗಳ ಪೈಕಿ ವ್ಯಾಸ, ವಾಲ್ಮೀಕಿ, ಭಾಸ, ಕಾಳಿದಾಸ, ಘಟಕರ್ಪರ, ಶ್ಯಾಮಿಲಕ, ಸುಬಂಧು, ಮಾಘ, ವಿಶಾಖದತ್ತ, ಶ್ರೀಹರ್ಷ, ಯಶೋವರ್ಮ, ಭವಭೂತಿ, ಭಟ್ಟನಾರಾಯಣ, ಭೀಮ, ಕಲಶಕ, ಮಾಯುರಾಜ, ಭಟ್ಟೇಂದುರಾಜ ಮುಂತಾದವರು ಹೆಸರಿಸಲ್ಪಟ್ಟಿದ್ದಾರೆ.
ದೃಶ್ಯ-ಶ್ರವ್ಯಕಾವ್ಯಗಳ ಪೈಕಿ ಸ್ವಪ್ನವಾಸ್ವದತ್ತ, ವಿಕ್ರಮೋರ್ವಶೀಯ, ಮಾಲವಿಕಾಗ್ನಿಮಿತ್ರ, ಅಭಿಜ್ಞಾನಶಾಕುಂತಲ, ಘಟಕರ್ಪರಕಾವ್ಯ, ಪಾದತಾಡಿತಕ, ವಾಸವದತ್ತಾನಾಟ್ಯಧಾರಾ, ಶಿಶುಪಾಲವಧ, ಮುದ್ರಾರಾಕ್ಷಸ, ಅಭಿಸಾರಿಕಾವಂಚಿತಕ, ರತ್ನಾವಳಿ, ರಾಮಾಭ್ಯುದಯ, ಮಾಲತೀಮಾಧವ, ಮಹಾವೀರಚರಿತ, ವೇಣೀಸಂಹಾರ, ತಾಪಸವತ್ಸರಾಜ, ಕೃತ್ಯಾರಾವಣ, ಮಾಯಾಪುಷ್ಪಕ, ಪ್ರದ್ಯುಮ್ನಾಭ್ಯುದಯ, ಪಾಂಡವಾನಂದ, ಪ್ರತಿಜ್ಞಾಚಾಣಕ್ಯ, ಚೂಡಾಮಣಿಡೊಂಬಿಕಾ, ರಾಘವಜಯ, ಮಾರೀಚವಧ ಮುಂತಾದವುಗಳಿಂದ ಆಯ್ದ ಭಾಗಗಳನ್ನು ನಾವಿಲ್ಲಿ ಕಾಣಬಹುದು. ಕೆಲವೊಮ್ಮೆ ಅಭಿನವಗುಪ್ತನು ಮುಕ್ತಕಗಳನ್ನೂ ಉಲ್ಲೇಖಿಸುತ್ತಾನೆ; ಸ್ವಯಂ ತನ್ನ ಪದ್ಯಗಳನ್ನೂ ಉದ್ಧರಿಸಿದ್ದಾನೆ[1].
ಅಭಿನವಭಾರತಿಯ ಭಾಷೆ-ಶೈಲಿ ಮತ್ತಿತರ ಸ್ವಾರಸ್ಯಗಳು
ಅಭಿನವಗುಪ್ತನು ಮಹಾಪಂಡಿತನೆಂಬುದರಲ್ಲಿ ಸಂದೇಹವಿಲ್ಲ. ಒಳ್ಳೆಯ ಬರೆವಣಿಗೆಗೆ ಪ್ರಧಾನವಾಗಿ ಬೇಕಾದ ಛಂದೋऽಲಂಕಾರವ್ಯಾಕರಣಗಳ ಪ್ರಗಲ್ಭವ್ಯುತ್ಪತ್ತಿ ಅವನಿಗಿತ್ತು. ಜೊತೆಗೆ ವ್ಯಾಪಕವಾದ ಓದುಗಾರಿಕೆಯೂ ಸಂದಿತ್ತು. ಪ್ರೌಢಶೈಲಿಯಲ್ಲಿ ಸಮಾಸಜಟಿಲವಾಗಿ ಬರೆಯುವಲ್ಲಿ ಅವನು ಹಿಂಜರಿದವನೇನಲ್ಲ. ಇಂತಿದ್ದರೂ ಅಭಿನವಭಾರತಿಯ ಭಾಷೆ ಹಿತವೆನ್ನುವಂತಿಲ್ಲ. ದಿಟವೇ, ಶುದ್ಧಪಾಠಗಳ ಅಭಾವ ನಮಗೆ ಅಭಿನವಭಾರತಿಯನ್ನು ಸರಿಯಾಗಿ ಅರಿಯುವಲ್ಲಿ ಮಿಗಿಲಾದ ಅಡ್ಡಿಯಾಗಿದೆ. ಅಲ್ಲದೆ, ಅದೊಂದು ಮುಟ್ಟಿನ ನುಡಿಗಟ್ಟಿನ ಸೊಬಗಿನಿಂದ, “ಪಾಂಡಿತ್ಯವೀರ”ದ ಓಜಸ್ಸಿನಿಂದ, ಪ್ರವಚನಶೈಲಿಯ ಲಾಘವದಿಂದ ಅಭಿನವಗುಪ್ತನು ಹಲವೆಡೆ ಸೊಗಸಾಗಿ ಬರೆದೂ ಇದ್ದಾನೆ. ಜೊತೆಗೆ, ಅನೇಕಸಂದರ್ಭಗಳಲ್ಲಿ ಅಂತರ್ದೃಷ್ಟಿಯಿಂದ ವಿವರಣೆಗಳನ್ನೂ ಸ್ವೋಪಜ್ಞತೆಯಿಂದ ನಿರುಕ್ತಿಗಳನ್ನೂ ನೀಡಬಲ್ಲವನಾಗಿ ಭರತಮುನಿಯ ಹೃದಯವನ್ನು ಸತ್ತ್ವಾತಿಶಯದಿಂದ ತಾನು ಅರಿತಿರುವುದಾಗಿ ಹೇಳಿಕೊಳ್ಳುವುದು ಪೊಳ್ಳುಮಾತಲ್ಲವೆಂದು ಸಾಬೀತು ಮಾಡುವಂತೆ ಬರೆವಣಿಗೆಯನ್ನು ಸಾಗಿಸಿಯೂ ಇದ್ದಾನೆ. ಇಂತಿದ್ದರೂ ಪಾತಂಜಲಮಹಾಭಾಷ್ಯಕ್ಕೋ ಶಾಂಕರಶಾರೀರಕಭಾಷ್ಯಕ್ಕೋ ಧ್ವನ್ಯಾಲೋಕಕ್ಕೋ ಹೋಲಿಸಿದರೆ ಅಭಿನವಭಾರತಿಯ ಭಾಷೆಯು ಅಷ್ಟಾಗಿ ಹಿತವೆನಿಸದು. ಅಸ್ಪಷ್ಟತೆ, ಸಂದಿಗ್ಧತೆ, ವ್ಯರ್ಥಪದಪ್ರಯೋಗ, ಅವಿಶ್ವಸನೀಯಶಬ್ದರೂಪ ಮುಂತಾದ ಹಲವಾರು ಕುಂದು-ಕೊರತೆಗಳನ್ನಿಲ್ಲಿ ಕಾಣಬಹುದು. ಇಂತಾದರೂ ಅಭಿನವಗುಪ್ತನದಾದ ಅನನ್ಯತೆ ಉಂಟೇ ಉಂಟು. ಧ್ವನ್ಯಾಲೋಕಲೋಚನಕ್ಕೆ ಹೋಲಿಸಿದರೆ ಅಭಿನವಭಾರತಿಯನ್ನು ಪೆಡಸೆನ್ನಬೇಕು. ಸಂಸ್ಕೃತದ ಸಹಜವಾಗ್ಧೋರಣೆ ಇಲ್ಲಿದ್ದರೂ ಸಮೃದ್ಧದೃಷ್ಟಾಂತಗಳ ಕೊರತೆ ಮತ್ತು ಲೌಕಿಕನ್ಯಾಯಗಳ ವಿರಳಪ್ರಾಚುರ್ಯ ಅಭಿನವಭಾರತಿಯ ಭಾಷಾಶೈಲಿಯ ಅರಕೆಗಳಲ್ಲೊಂದೆನ್ನಬಹುದು. ಇಂತಿದ್ದರೂ ಹಲಕೆಲವು ಸೂಕ್ತಿಗಳು ಹಾಗೂ ವಿನೋದವಚನಗಳು ಸ್ಮರಣೀಯವಾಗಿವೆ. ಅವುಗಳಲ್ಲಿ ಒಂದಿಷ್ಟನ್ನು ಕಾಣಬಹುದು:
“ಮುನಿಕನ್ಯಕಾನಾಮತ್ರಾಯೋಗ್ಯತ್ವಂ ತಾವದುಕ್ತಮ್” (ಸಂ.೧, ಪು.೨೧).
ಭರತಮುನಿಯು ತನ್ನ ನಾಟ್ಯಪ್ರಯೋಗಕಾಲದಲ್ಲಿ ಮುನಿಕನ್ಯೆಯರಿದ್ದಾಗಲೂ ಅಪ್ಸರೆಯರನ್ನೇಕೆ ಬಳಸಿಕೊಂಡನೆಂಬುದಕ್ಕೆ ಅಭಿನವಗುಪ್ತನು ವೈನೋದಿಕವಾಗಿ ಕೊಡುವ ಕಾರಣವಿದು—“ಆಶ್ರಮದ ಹೆಣ್ಣುಮಕ್ಕಳಿಗೆ ಶೃಂಗಾರದ ಅರಿವಿಲ್ಲ; ನರ್ತನದ ಬೆಡಗು-ಬಿನ್ನಾಣಗಳ ಪರಿಚಯವಿಲ್ಲ. ಹೀಗಾಗಿ ಅವರು ರಂಗಪ್ರಯೋಗಕ್ಕೆ ಒದಗಿಬರದವರಾದರು.”
“ಕಾಪಿ ವಿಭೀಷಿಕಾ ಕೃತಾ” (ಸಂ.೨, ಪು.೧೬೮).
ವಾಚಿಕಾಭಿನಯವನ್ನು ಮಾಡುವಾಗ “ಕಾಕು”ವನ್ನು ಆಯಾ ಪ್ರದೇಶಾನುಸಾರವಾಗಿ ಬಳಸಿಕೊಳ್ಳಲು ಸಾಧ್ಯವೇ ಇಲ್ಲವೇ ಎಂಬ ಚರ್ಚೆ ಬಂದಾಗ, “ಇಲ್ಲೆಲ್ಲ ತಗಾದೆಯ ಗುಮ್ಮನನ್ನು ಮುಂದಿರಿಸುವುದು ನಿರರ್ಥಕ”ವೆಂದು ಮೇಲಿನ ಮಾತಿನಲ್ಲಿ ವಿಡಂಬಿಸುತ್ತಾನೆ.
“ಉತ್ಸಂಗಿನಿ ಬಾಲಕೇ ತದನ್ವೇಷಣಮಿತಿ” (ಸಂ.೨, ಪು.೧೬೯).
ರಸಸೂತ್ರದಲ್ಲಿ ಶ್ರವ್ಯಕಾವ್ಯಕ್ಕೆ ಅವಕಾಶವುಂಟೇ ಎಂಬ ಚರ್ಚೆಗೆ ಅಭಿನವಗುಪ್ತನು ಪ್ರತಿಕ್ರಯಿಸುವ ಪರಿ ಇದು: ವಿಭಾವಾನುಭಾವಸಾಮಗ್ರಿಯ ವರ್ಣನೆಯೇ ದೃಶ್ಯಕಾವ್ಯಕ್ಕೆ ಮೂಲಸಾಮಗ್ರಿಯಾಗಿರುವಾಗ ರಸಸಿದ್ಧಿಗೆ ಶ್ರವ್ಯಕಾವ್ಯದ ಪ್ರಸಕ್ತಿ ಅನಿವಾರ್ಯವಾಯಿತಷ್ಟೆ. “ಮಡಿಲಿನಲ್ಲಿ ಮಗುವನ್ನಿಟ್ಟುಕೊಂಡು ಮನೆಯೆಲ್ಲಾ ಪರದಾಡಿದಂತೆ” ಇದು ಹಾಸ್ಯಾಸ್ಪದವೆಂದು ಅಭಿನವನ ಇಂಗಿತ.
“ರಾಮಾಯಣೇऽಪಿ ಮುನಿನಾ ತಥಾ ವರ್ಣಿತಮಿತಿ ಚೇತ್ಕಿಮತೋ ವೇದೇऽಪಿ ತಥಾ ವರ್ಣ್ಯತಾಂ, ನ ವಯಮತೋ ಬಿಭೀಮಃ” (ಸಂ.೩, ಪು.೭೧-೭೨).
ಧೀರೋದಾತ್ತನಾದ ನಾಯಕನು ಮೇರೆಮೀರಿದ ದೈನ್ಯಕ್ಕೆ ತುತ್ತಾಗಬಾರದು; ಇದು ನಾಟಕಸಂಪ್ರದಾಯ. ಆದರೆ ಸೀತೆಯನ್ನು ಕಳೆದುಕೊಂಡ ರಾಮನು ಅಳತೆಮೀರಿ ಹಳಹಳಿಸಿದನಷ್ಟೆ. ಇದು ಅಯುಕ್ತವೆಂದು ಅಭಿನವಗುಪ್ತನ ಅಭಿಪ್ರಾಯ. ಆದರೆ ವಾಲ್ಮೀಕಿಯೇ ಹೀಗೆ ವರ್ಣಿಸಿದ್ದಾನಲ್ಲಾ ಎಂಬ ಪ್ರಶ್ನೆಗೆ, “ಅದು ವಾಲ್ಮೀಕಿಯದೇ ಹೇಳಿಕೆಯಾಗಿರಲಿ, ವೇದದ್ದೇ ಹೇಳಿಕೆಯಾಗಲಿ, ನಮಗೇನೂ ಭಯವಿಲ್ಲ!” ಎಂಬ ಪಾಂಡಿತ್ಯವೀರಪ್ರತಿಕ್ರಿಯೆ ಅವನದು.
“ಜೈಮಿನಿರನುಸೃತ ಇತ್ಯಲಮನೇನ” (ಸಂ.೩, ಪು.೨೯೯-೩೦೦).
ನಾಟ್ಯಶಾಸ್ತ್ರದ ಮೂಲತತ್ತ್ವಗಳಲ್ಲೊಂದಾದ “ಸಿದ್ಧಿ” ರಂಗಪ್ರಯೋಗದ ಸಾಫಲ್ಯಕ್ಕೆ ಸಂಕೇತ. ಇದನ್ನು ಕುರಿತು ಮೀಮಾಂಸಕನಾದ ಭಟ್ಟನಾಯಕನು ಅಭಿಪ್ರಾಯಭೇದವನ್ನು ಹೊಂದಿದಾಗ ಅವನ ಅರಸಿಕತೆಯನ್ನು ಆಕ್ಷೇಪಿಸುತ್ತ ಅಭಿನವಗುಪ್ತನು, “ಈ ಪರಿಯ ಶುಷ್ಕನಿರ್ಧಾರಗಳು ಜೈಮಿನೀಯಶಾಸ್ತ್ರದಲ್ಲಿ ಮನ್ನಣೆ ಗಳಿಸಬಹುದಲ್ಲದೆ ಭಾರತೀಯಶಾಸ್ತ್ರದಲ್ಲಿ ಅಲ್ಲ” ಎಂದು ಗೇಲಿ ಮಾಡುತ್ತಾನೆ.
ಅಭಿನವಭಾರತಿಯ ಒಂದು ವಿಶೇಷವೆಂದರೆ ನಾಟ್ಯಶಾಸ್ತ್ರದ ಮೂವತ್ತಾರು ಅಧ್ಯಾಯಗಳನ್ನೂ ಶಿವಸ್ವರೂಪವೆಂದು ಭಾವಿಸಿ, ಪ್ರತ್ಯಭಿಜ್ಞಾಶೈವದರ್ಶನದ ಅನುಸಾರ ಇರುವ ಮೂವತ್ತಾರು ತತ್ತ್ವಗಳಿಗೆ ಇವನ್ನು ಸಂವಾದಿಯೆಂದು ಚಿತ್ರಿಸಿರುವ ಪರಿ. ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿಯೂ ಆಯಾ ಅಧ್ಯಾಯಗಳ ಪ್ರಧಾನವಿಷಯವನ್ನು ಆಯಾ ಶೈವತತ್ತ್ವದ ಜೊತೆಗೆ ಸಮೀಕರಿಸುವ ದರ್ಶನದೀಪ್ತಿಯ ಪದ್ಯಗಳು ನಿಜವಾಗಿ ಅಭಿನವಗುಪ್ತನ ವೇದಾಂತದೃಷ್ಟಿಗೆ ಸಾಕ್ಷಿ. ಇಲ್ಲಿಯ ಕೆಲವು ಪದ್ಯಗಳಂತೂ ಉದಾತ್ತರಮಣೀಯವಾಗಿವೆ. ಉದಾಹರಣೆಗೆ:
“ಸಂಸಾರನಾಟ್ಯನಿರ್ಮಾಣೇ ಯಾವಕಾಶವಿಧಾನತಃ |
ಪೂರ್ವರಂಗಾಯತೇ ವ್ಯೋಮಮೂರ್ತಿಂ ತಾಂ ಶಾಂಕರೀಂ ನುಮಃ || (ಸಂ.೧, ಪು.೨೦೯)
ಸ್ಥಾಯೀ ಪ್ರಬುದ್ಧಹೃದಯೇ ವ್ಯಭಿಚಾರಿಭೂತಃ
ಕಾಮಾಕುಲಾಸು ಜನತಾಸು ಮಹಾನುಭಾವಃ |
ಅಂತರ್ವಿಭಾವವಿಷಯೋ ರಸಮಾತ್ರಮೂರ್ತಿಃ
ಶ್ರೀಮಾನ್ ಪ್ರಸನ್ನಹೃದಯೋऽಸ್ತು ಮಮ ತ್ರಿಣೇತ್ರಃ ||” (ಸಂ.೧, ಪು.೩೩೭)
ಇಲ್ಲಿ ಶ್ಲೇಷಬಲದಿಂದಲೂ ರೂಪಕಾಲಂಕಾರಸಾಮರ್ಥ್ಯದಿಂದಲೂ ಅಭಿನವಗುಪ್ತನು ಶಿವನ ಆಕಾಶಮೂರ್ತಿತ್ವವನ್ನು ಪೂರ್ವರಂಗಪ್ರಕರಣದಲ್ಲಿಯೂ ರಸಮೂರ್ತಿತ್ವವನ್ನು ಭಾವಪ್ರಕರಣದಲ್ಲಿಯೂ ಸ್ತುತಿಸಿದ ಪರಿ ಅಮೋಘ. ಆ ಪ್ರಕಾರ ಮಹಾದೇವನು ಜಗನ್ನಾಟಕದ ಪೂರ್ವರಂಗಕ್ಕೆ ಒದಗಿಬರಬಲ್ಲ ತಾಂಡವನರ್ತನಮೂರ್ತಿಯೂ ಹೌದು; ಪ್ರಬುದ್ಧರ ಹೃದಯದಲ್ಲಿ ಸ್ಥಾಯಿಯಾಗಿ ನಿಂತು, ಆಶಾಪಾಶವಿವಶರ ಮನದಲ್ಲಿ ವ್ಯಭಿಚರಿಸುತ್ತ, ಸರ್ವತ್ರ ತನ್ನ ಮಹಾನುಭವತೆಯನ್ನು ಮೆರೆಸಿ ಜ್ಞಾನಿಗಳ ಅಂತರಂಗದಲ್ಲಿ ವಿಭಾವಿಸುವ ರಸೈಕಸ್ವರೂಪನಾಗಿದ್ದಾನೆ.
ಆದರೆ ಹೆಚ್ಚಿನ ಸ್ತುತಿಪದ್ಯಗಳು ಪ್ರಯತ್ನಸಿದ್ಧವೆಂಬಂತೆ ಗಂಟುಗಂಟಾಗಿವೆ. ಏನೇ ಇರಲಿ, ಧ್ವನ್ಯಾಲೋಕಲೋಚನದ ನಾಲ್ಕು ಉದ್ದ್ಯೋತಗಳಿಗೆ ಪರಾ, ಪಶ್ಯಂತೀ, ಮಧ್ಯಮಾ ಮತ್ತು ವೈಖರಿಗಳೆಂಬ ವಾಕ್ಪ್ರಕಾರಗಳನ್ನು ಸಮೀಕರಿಸಿ ಶಬ್ದತತ್ತ್ವವನ್ನು ದೇವೀಸ್ವರೂಪದ ಮೂಲಕ ಅಲ್ಲಿ ಧ್ವನಿಸಿದ ಅಭಿನವಗುಪ್ತನು ಇಲ್ಲಿ ಅರ್ಥತತ್ತ್ವವನ್ನು ಶಿವಸ್ವರೂಪದ ಮೂಲಕ ಚಿತ್ರಿಸಿರುವ ಪರಿ ಮೆಚ್ಚುವಂತಿದೆ.
ಅಭಿನವಭಾರತಿಯು ಪ್ರಧಾನವಾಗಿ ಶಾಸ್ತ್ರಗ್ರಂಥವೇ ಆದರೂ—ತತ್ರಾಪಿ ವಿವಿಧಪ್ರಮೇಯಗಳ ಮೀಮಾಂಸೆಯೇ ಆದರೂ—ಕಲಾತತ್ತ್ವೋನ್ಮೀಲನಕೃತಿಯಾದ ಕಾರಣ ಇಲ್ಲಿ ಪ್ರಾಯೋಗಿಕವಿಮರ್ಶೆಗೆ ಸಾಕಷ್ಟು ಅವಕಾಶವುಂಟು. ವಿಶೇಷತಃ ಸಾಹಿತ್ಯವಿಮರ್ಶೆಗೆ ಇದು ಒದಗಿಬರುವ ತಾಣ. ಇಂಥ ಅಂಶವನ್ನು ಅಭಿನವಗುಪ್ತನು ಸೊಗಸಾಗಿ ಬಳಸಿಕೊಂಡಿದ್ದಾನೆ. ಮುಖ್ಯವಾಗಿ ರಸಾಧ್ಯಾಯ (೬), ಲಕ್ಷಣಾಧ್ಯಾಯ (೧೬), ದಶರೂಪಾಧ್ಯಾಯ (೧೮) ಮತ್ತು ಇತಿವೃತ್ತಾಧ್ಯಾಯಗಳಲ್ಲಿ (೧೯) ಅನೇಕದೃಶ್ಯಕಾವ್ಯಗಳ ಪದ್ಯಗಳಿಗೆ ರಸಮಯವ್ಯಾಖ್ಯಾನವನ್ನೇ ಅಭಿನವಗುಪ್ತನು ಮಾಡಿದ್ದಾನೆ. ಈ ಮೂಲಕ ಆನಂದವರ್ಧನ, ಕುಂತಕ ಮತ್ತು ಕ್ಷೇಮೇಂದ್ರರಂಥ ಪ್ರಾಯೋಗಿಕವಿಮರ್ಶಕರ ಪಂಕ್ತಿಯಲ್ಲಿ ಇವನ ಹೆಸರು ಹಸುರಾಗಿದೆ.
ಇದೇ ರೀತಿ ಗೀತ-ನೃತ್ತಗಳನ್ನು ಕುರಿತು ತಾಂಡವಲಕ್ಷಣಾಧ್ಯಾಯ (೪), ಪೂರ್ವರಂಗಾಧ್ಯಾಯ (೫), ಸಾಮಾನ್ಯಾಭಿನಯಾಧ್ಯಾಯ (೨೨), ಚಿತ್ರಾಭಿನಯಾಧ್ಯಾಯ (೨೫), ಜಾತಿವಿಕಲ್ಪಾಧ್ಯಾಯ (೨೮), ಆತೋದ್ಯವಿಧಾನ (೨೯), ತಾಲಾಧ್ಯಾಯಗಳಲ್ಲಿ (೩೧) ನಡಸಿರುವ ಪ್ರಯೋಗಮೀಮಾಂಸೆಯೂ ಆಯಾ ಕಲಾಕೋವಿದರಿಗೆ ಮುದಾವಹವೆನಿಸದಿರದು. ಹೀಗೆ ಸಂಸ್ಕೃತಸಾಹಿತ್ಯಪ್ರಪಂಚದಲ್ಲಿ ವಿರಳವಾಗಿ ತೋರಿಕೊಳ್ಳುವ ಪ್ರಾಯೋಗಿಕಕಲಾಮೀಮಾಂಸೆಯು ಇಲ್ಲಿ ಗಣನೀಯವಾಗಿ ವಿಸ್ತರಿಸಿಕೊಂಡಿರುವುದು ಸ್ತವನೀಯ.
ಉಪಸಂಹಾರ
ಅಭಿನವಭಾರತಿಯೊಂದು ಸುಧಾಸಮುದ್ರ. ಅದನ್ನು ಮಥನ ಮಾಡುವ ಮಂದರಸಾಮರ್ಥ್ಯವಾಗಲಿ, ದೇವಾಸುರಬಲ-ಸಂಪತ್ತಿಯಾಗಲಿ ಪ್ರಕೃತಲೇಖಕನದಲ್ಲ. ಇದು ಕೇವಲ ಅಲ್ಲಿಯ ಕೆಲವೊಂದು ಮಹತ್ತ್ವದ ಪ್ರಮೇಯಗಳನ್ನು ಬೊಗಸೆಯಲ್ಲಿ ಹವಣಿಸುವ ಯತ್ನ. ಆದರೆ ಈ ಮೂಲಕ ಅಭಿನವಗುಪ್ತನ ಸರ್ವತೋಮುಖಿಯಾದ ರಂಗಕಲಾಚಿಂತನೆಯ ದಿಗ್ದದರ್ಶನವಾಗುವುದರಲ್ಲಿ ಸಂದೇಹವಿಲ್ಲ.
ಷಟ್ತ್ರಿಂಶದಾಹ್ನಿಕಮಿತಂ ಭರತೋಕ್ತನಾಟ್ಯ-
ವೇದಂ ರಸೈರುಪಚಿತಂ ನವಭಿರ್ವಿವೃಣ್ವನ್ |
ಯೋ ಭಾರತೀಮಭಿನವಾಂ ರಚಯಾಂಚಕಾರ
ತಸ್ಮೈ ನಮೋऽಭಿನವಗುಪ್ತಗುರೂತ್ತಮಾಯ ||
ಗ್ರಂಥಋಣ
೧. ನಾಟ್ಯಶಾಸ್ತ್ರ ಮತ್ತು ಅಭಿನವಭಾರತೀ (ಸಂ. ರವಿಶಂಕರ್ ನಾಗರ್). ನವದೆಹಲಿ: ಪರಿಮಲ್ ಪ್ರಕಾಶನ, ೧೯೮೮.
೨. ಧ್ವನ್ಯಾಲೋಕ (ಸಾಂಗ್ಲಾನುವಾದ ಸಂಪಾದನೆ, ಕೆ. ಕೃಷ್ಣಮೂರ್ತಿ). ನವದೆಹಲಿ: ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, ೧೯೮೨.
೩. ನೀಲಕಂಠದೀಕ್ಷಿತನ ಶತಕತ್ರಯ (ಸಟಿಪ್ಪಣಾನುವಾದ, ಆರ್. ಗಣೇಶ್). ಬೆಂಗಳೂರು: ಅಭಿಜ್ಞಾನ, ೧೯೯೭.
೪. ಕೌಟಲೀಯಾರ್ಥಶಾಸ್ತ್ರಮ್ (ಸಂ. ಎನ್. ಎಸ್. ವೆಂಕಟನಾಥಾಚಾರ್ಯ). ಮೈಸೂರು: ಪ್ರಾಚ್ಯಸಂಶೋಧನಾಸಂಸ್ಥೆ, ೧೯೬೦.
ಟಿಪ್ಪಣಿಗಳು
[1] ಈಚೆಗೆ ಅಭಿನವಗುಪ್ತನ ಉಪಲಬ್ಧಪದ್ಯಗಳ ಸಂಗ್ರಹ ಮತ್ತು ಸಮಗ್ರವಿವೇಚನೆಯನ್ನು ನಾಟ್ಯಶಾಸ್ತ್ರಶೋಧಕರಾದ ಪ್ರಾಚಾರ್ಯ ರಾಧಾವಲ್ಲಭತ್ರಿಪಾಠಿಯವರು ಮಾಡಿರುವುದಿಲ್ಲಿ ಸ್ಮರಣೀಯ (Abhinavaguptakāvyasaṅgrahaḥ: An Anthology of Abhinavagupta’s Poems. New Delhi: Sahitya Akademi).