ಛಂದಸ್ಸು
ನಾಟ್ಯಶಾಸ್ತ್ರವು ಛಂದೋವಿಚಿತಿಯನ್ನು ಕುರಿತು ಬೆಲೆಯುಳ್ಳ ಎಷ್ಟೋ ವಿಚಾರಗಳನ್ನು ಹೇಳಿದ್ದರೂ ಅಭಿನವಗುಪ್ತನು ತಕ್ಕ ರೀತಿಯಲ್ಲಿ ನ್ಯಾಯ ಸಲ್ಲಿಸಿದಂತೆ ತೋರದು. ಆದರೂ ಅವನ ಛಂದಸ್ಸೂಕ್ಷ್ಮಗಳ ಅರಿವು ಹಿರಿದಾದುದೆಂಬುದರಲ್ಲಿ ಸಂದೇಹವಿಲ್ಲ. ಅದಕ್ಕೆ ಕೇವಲ ಒಂದೇ ಒಂದು ನಿದರ್ಶನವನ್ನು ನಾವಿಲ್ಲಿ ಗಮನಿಸಬಹುದು. ಅದು ವಿವಿಧಚ್ಛಂದಸ್ಸುಗಳ ಪಾಠ್ಯತ್ವ ಮತ್ತು ಗೇಯತ್ವಗಳಿಗೆ ಸಂಬಂಧಿಸಿದ ವಿವೇಕ.
ಛಂದಶ್ಶಾಸ್ತ್ರವು ಹಲವು ಕೋಟಿ ಛಂದಸ್ಸುಗಳ ಸಾಧ್ಯತೆಯನ್ನು ಲೆಕ್ಕವಿಟ್ಟಿದ್ದರೂ ಸಂಸ್ಕೃತರೂಪಕಪ್ರಪಂಚದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಛಂದಸ್ಸುಗಳ ಸಂಖ್ಯೆ ಹೆಚ್ಚೆಂದರೆ ಮೂವತ್ತು-ನಲವತ್ತು. ಅಭಿನವಗುಪ್ತನೇ ಆರು ಕೋಟಿ, ಎಪ್ಪತ್ತೆಂಟು ಲಕ್ಷ, ಎಂಟು ಸಾವಿರದ ಎಂಟು ನೂರು ಛಂದಸ್ಸುಗಳ ಸಾಧ್ಯತೆಯನ್ನು ಶ್ಲೋಕವೊಂದರಲ್ಲಿ ಒಕ್ಕಣಿಸಿದ್ದರೂ (ಸಂ ೨, ಪು. ೧೭೮) ಶ್ರುತಿಸುಂದರವೂ ಪ್ರಯೋಗಸುಲಭವೂ ಆದ ವೃತ್ತಗಳ ಸಂಖ್ಯೆ ಸ್ವಲ್ಪವೇ. ಇವುಗಳ ಪೈಕಿ ಕೆಲವು ಪಾಠ್ಯಕ್ಕೆ ಚೆನ್ನ (ಶ್ಲೋಕ, ಉಪಜಾತಿ, ಶಾಲಿನೀ, ವಂಶಸ್ಥ, ಪ್ರಹರ್ಷಿಣೀ, ಮಂದಾಕ್ರಾಂತಾ, ಶಾರ್ದೂಲವಿಕ್ರೀಡಿತ, ಸ್ರಗ್ಧರಾ ಇತ್ಯಾದಿ); ಮತ್ತೆ ಕೆಲವು ಗೇಯಕ್ಕೆ ಚೆನ್ನ (ಆರ್ಯಾ, ವಿಯೋಗಿನೀ, ಪುಷ್ಪಿತಾಗ್ರಾ, ರಥೋದ್ಧತ, ದ್ರುತವಿಲಂಬಿತ, ವಸಂತತಿಲಕ, ಮಾಲಿನೀ, ಶಿಖರಿಣೀ, ಹರಿಣೀ, ಪೃಥ್ವೀ, ಕೋಕಿಲಕ ಇತ್ಯಾದಿ). ಇದನ್ನು ಛಂದಃಪ್ರಜ್ಞಾಸಂಪನ್ನರಾದ ರಸಿಕರಲ್ಲದೆ ಶುಷ್ಕಶಾಸ್ತ್ರಜ್ಞರು ತಿಳಿಯರು. ಯಾವ ಕ್ರಮದಿಂದ ಹಾಡಿದಾಗ ಛಂದೋಗತಿಸುಷಮೆಯೂ ಗೇಯಸ್ಪಂದಸೌಂದರ್ಯವೂ ಹದವಾಗಿ ಬೆಸೆದುಕೊಳ್ಳುವುವೋ ಅಂಥ ಹಾಡಿಕೆಯು ಅಪೇಕ್ಷಣೀಯ. ಈ ಬಗೆಯ ಹದವನ್ನು ಸರ್ವಥಾ ಸಾಧಿಸಲಾಗದಿದ್ದಾಗ ಛಂದೋಗತಿಗೆ ಬೆಲೆಯಿತ್ತು ಗೇಯಮಾಧುರ್ಯವನ್ನು ಬದಿಗಿರಿಸುವುದು ಶ್ರೇಯಸ್ಕರ. ಏಕೆಂದರೆ ಶ್ರುತಿ-ಲಯಮೂಲದ ಗೇಯಸೌಂದರ್ಯಕ್ಕೆ ರೂಪಕಪ್ರಯೋಗದಲ್ಲಿ “ಧ್ರುವಗೀತ”ಗಳ ಮೂಲಕ ಸಮೃದ್ಧಾವಕಾಶವಿದ್ದೇ ಇರುತ್ತದಷ್ಟೆ.
ಇಂಥ ಸೂಕ್ಷ್ಮವನ್ನು ಬಲ್ಲವನಾದ ಅಭಿನವಗುಪ್ತನು ಸ್ರಗ್ಧರೆಯಂಥ ವೀರಗಂಭೀರಗತಿಯ ಛಂದಸ್ಸು ಸರ್ವಥಾ ಗೇಯಾರ್ಹವಲ್ಲ; ಅದೆಂದೂ ಪಾಠ್ಯವೆಂದು ಪ್ರತಿಪಾದಿಸಿರುವ ಕ್ರಮ ಮೆಚ್ಚುವಂತಿದೆ. ಅವನು ಈ ನಿಗಮನವನ್ನು ಮಾಡುತ್ತ ಕಾತ್ಯಾಯನನೆಂಬ ಛಂದೋವಿದನ ಮಾತುಗಳನ್ನು ಉಲ್ಲೇಖಿಸಿ ಆ ಪ್ರಕಾರ ವೀರನ ಆಜಾನುಬಾಹುಗಳ ವರ್ಣನೆಗೆ ಸ್ರಗ್ಧರೆಯು ಸಮರ್ಥವೃತ್ತವೆನ್ನುತ್ತಾನೆ[1]; ರೂಪಗುಣಗರ್ವಿತೆಯಾದ ಭಾವೋನ್ಮತ್ತೆ ನಾಯಿಕೆಯ ವರ್ಣನೆಗೆ ವಸಂತತಿಲಕಾದಿಗಳು ಒಪ್ಪುತ್ತವೆನ್ನುತ್ತಾನೆ. ಮಾತ್ರವಲ್ಲ, ಪ್ರಾಚ್ಯಪ್ರದೇಶದವರ ಶೈಲಿಗೆ (ಗೌಡೀ ರೀತಿ) ಒದಗಿಬರುವುದು ಶಾರ್ದೂಲವಿಕ್ರೀಡಿತವೆಂದೂ ದಾಕ್ಷಿಣಾತ್ಯರ ಶೈಲಿಗೆ (ವೈದರ್ಭೀ ರೀತಿ) ಒದಗಿಬರುವುದು ಮಂದಾಕ್ರಾಂತವೆಂದೂ ಮತ್ತೆ ಕಾತ್ಯಾಯನನನ್ನೇ ಉಟ್ಟಂಕಿಸುತ್ತಾನೆ. ಇದೇ ರೀತಿ ದೇವತಾಸ್ತುತಿಗೆ ಲಯಾನ್ವಿತವೃತ್ತಗಳಾದ ತೋಟಕ, ದೋಧಕಗಳಂಥವು ಯುಕ್ತವೆಂದೂ ಅವು ಗೇಯತ್ವವನ್ನು ಚೆನ್ನಾಗಿ ಮೈಗೂಡಿಸಿಕೊಂಡಿವೆಯೆಂದೂ ತನ್ನದಾದ ಅಭಿಪ್ರಾಯವನ್ನು ಹೇಳುತ್ತಾನೆ. ಇವೆಲ್ಲ “ಸುವೃತ್ತತಿಲಕ”ದಂಥ ವಿಶಿಷ್ಟಪ್ರಕಾರದ ಛಂದೋಗ್ರಂಥಕರ್ತನಾದ ಕ್ಷೇಮೇಂದ್ರನ ಗುರುವೆನಿಸಿದ ಅಭಿನವಗುಪ್ತನಿಗೆ ಸಲ್ಲುವಂಥ ಸತ್ತ್ವಸಿದ್ಧಿಗಳು.
“ತಥೋಕ್ತಂ ಕಾತ್ಯಾಯನೇನ—ವೀರಸ್ಯ ಭುಜದಂಡಾನಾಂ ವರ್ಣನೇ ಸ್ರಗ್ಧರಾ ಭವೇತ್ | ನಾಯಿಕಾವರ್ಣನೇ ಕಾರ್ಯಂ ವಸಂತತಿಲಕಾದಿಕಮ್ | ಶಾರ್ದೂಲಲೀಲಾ ಪ್ರಾಚ್ಯೇಷು ಮಂದಾಕ್ರಾಂತಾ ಚ ದಕ್ಷಿಣೇ | ಇತ್ಯಾದಿ ... ಭಗವತೇ ಕೃತ ಇತಿ ಶ್ಲೋಕೇ ಕೇಷಾಂಚಿದ್ದೋಧಕತೋಟಕಾದೀನಾಂ ಗೀಯಮಾನತಯಾ ಶೋಭಾತಿಶಯೋ ಭವತಿ | ಸ್ರಗ್ಧರಾದೀನಾಂ ತು ಪಾಠೇನ” (ಸಂ ೨, ಪು. ೧೮೨).
ಅಭಿನವಗುಪ್ತನಿಗೆ ಸ್ರಗ್ಧರಾವೃತ್ತವು ಪಾಠ್ಯಕ್ರಮದಿಂದಲೇ ವಿನಿಕೆಯಾಗಬೇಕೆಂಬುದರ ಬಗೆಗೆ ಅದೆಷ್ಟು ಆಗ್ರಹವಿತ್ತೆಂದರೆ ಮುಂದೆ ಸಂಗೀತವನ್ನು ಕುರಿತು ಪ್ರಪಂಚಿಸುವಾಗಲೂ ಏಕಸ್ವರದಿಂದ ಸ್ರಗ್ಧರೆಯನ್ನು ಪಠಿಸಬೇಕೆಂಬ ಮಾತನ್ನಾಡುತ್ತಾನೆ.
“ಏಕಸ್ವರೇಣೈವ ಗಾಯಾಮೀತಿ ಯಾವತ್ಸ್ವರವಿಶೇಷಾನ್ ಸ್ರಗ್ಧರಾಯಾಂ ಗಾಯಾಮೀತ್ಯಭಿಸಂಧಾಯ ಗಾಯನ್ ಪ್ರಯುಕ್ತಾನಲಂಕಾರಾನ್ಪ್ರಯುಂಕ್ತೇ ತಾವತ್” (ಸಂ.೪, ಪು.೭೭).
ಛಂದಸ್ಸಿನಲ್ಲಿ ಯತಿನಿಯಮವನ್ನು ಕುರಿತು ಛಂದಶ್ಶಾಸ್ತ್ರಜ್ಞರಲ್ಲಿಯೇ ಬಗೆಬಗೆಯ ಅಭಿಪ್ರಾಯಭೇದಗಳಿವೆ. ಪ್ರಾಯಶಃ ಸೇಡಿಯಾಪು ಕೃಷ್ಣಭಟ್ಟರವರೆಗೆ ನಮ್ಮ ಛಂದೋವಿದರಲ್ಲಿ “ಯತಿ”ತತ್ತ್ವದ ಪರಮಾರ್ಥವು ತಿಳಿದೇ ಇರಲಿಲ್ಲವೆಂದರೆ ಯುಕ್ತ. ಭರತಾಭಿನವಗುಪ್ತಾದಿಗಳೂ ಇಲ್ಲಿ ಎಡವಿದ್ದಾರೆ. ಅಭಿನವಗುಪ್ತನು ಯತಿಯನ್ನು ವಿರಾಮವೆಂದೂ ಪದಚ್ಛೇದವೆಂದೂ ಹೇಳಿದ್ದಾನೆ (ಸಂ.೨, ಪು.೧೭೫). ಇದು ಛಂದೋಯತಿಗೆ ಯಾವುದೇ ರೀತಿಯಲ್ಲಿ ಸಮರ್ಪಕವಾಗಿ ಅನ್ವಯಿಸದು. ಆದರೆ ಯತಿಸ್ಥಾನವು ಶ್ರುತಿಹಿತವಾಗಿರಬೇಕೆಂಬ ಮಾತು ಮಾತ್ರ ಮನನೀಯ (ಸಂ.೨, ಪು.೧೭೫). ಇಷ್ಟಾಗಿಯೂ ಅರ್ಥದ ಅವಸಾನದಲ್ಲಿ ಯತಿಯುಂಟೆಂಬ ಭರತಾನುಸಾರಿಯಾದ ಅವನ ಅಭಿಪ್ರಾಯವಂತೂ ತೀರ ದೋಷಪೂರ್ಣವೆನ್ನದೆ ವಿಧಿಯಿಲ್ಲ (ಸಂ.೨, ಪು.೧೮೧). ಏಕೆಂದರೆ ಯತಿಯು ಛಂದೋಂऽಗ; ಛಂದಸ್ಸು ಸರ್ವಾತ್ಮನಾ ಶಬ್ದಾಂಗ. ಅಷ್ಟೇಕೆ, ಛಂದಸ್ಸನ್ನು ಅದೊಂದು ಬಗೆಯ ಶಬ್ದಾಲಂಕಾರವೆಂದೇ ಹೇಳಬೇಕು. ಅರ್ಥವಾದರೋ ಗದ್ಯ-ಪದ್ಯವಿಭಾಗನಿರ್ವಿಶೇಷವಾಗಿ ಸರ್ವತ್ರ ಭಾಷೆಯಲ್ಲಿ ಸಲ್ಲುವಂಥದ್ದು. ಈ ಕಾರಣದಿಂದ ಅರ್ಥಾವಸಾನದಲ್ಲಿ ಯತಿಯುಂಟೆಂಬ ಮತಕ್ಕೆ ಗತಿಯಿಲ್ಲ, ಮತಿಯೂ ಇಲ್ಲ. ಇಂಥ ಯತಿಯು ಛಂದೋಯತಿಯಂತೂ ಅಲ್ಲವೇ ಅಲ್ಲ. ಛಂದೋಯತಿಯು ವಸ್ತುತಃ ಪದ್ಯಪಾದವೊಂದರಲ್ಲಿ ಬರುವ ವಿಭಿನ್ನಗತಿಗಳ ಸಂಧಿಸ್ಥಾನ. ಈ ಬಗೆಗೆ ಹೆಚ್ಚಿನ ಜಿಜ್ಞಾಸೆಯುಳ್ಳವರು ಸೇಡಿಯಾಪು ಕೃಷ್ಣಭಟ್ಟರ ಮಹಾಕೃತಿ “ಛಂದೋಗತಿ”[2]ಯನ್ನೇ ನೋಡಬೇಕು.
ವಾಚಿಕಾಭಿನಯ
ವಾಚಿಕವು ಚತುರ್ವಿಧಾಭಿನಯಗಳಲ್ಲೊಂದಷ್ಟೆ. ದೃಶ್ಯಕಾವ್ಯದ ಮೂಲಮಾತೃಕೆಯೇ ಇಲ್ಲಿದೆ. ವಾಗರ್ಥಗಳಲ್ಲಿ ಹೆಚ್ಚಿನ ದುಡಿಮೆಯನ್ನು ಮಾಡಿದ ಅಭಿನವಗುಪ್ತನಿಗೆ ಈ ಅಂಶವನ್ನು ಕುರಿತು ಮಿಗಿಲಾದ ಅಭಿಮಾನವಿರುವುದು ಸಹಜ. ಅಲ್ಲದೆ, ನಾಟ್ಯಶಾಸ್ತ್ರವು ತುಂಬ ಮೌಲಿಕವಾದ ಒಳನೋಟಗಳನ್ನಿಲ್ಲಿ ಕೊಟ್ಟಿದೆ. ಹೀಗಾಗಿ ಅಭಿನವಭಾರತಿಯ ಸ್ವಾರಸ್ಯಗಳಿಲ್ಲಿ ಸರ್ವಥಾ ಮನನೀಯ.
ಮೊದಲಿಗೆ ಅಭಿನವಗುಪ್ತನು “ನಾಟ್ಯಪ್ರಯೋಗದಲ್ಲಿ ಸರ್ವೋಚ್ಚಸ್ಥಾನವನ್ನು ಗಳಿಸುವ ಸಾತ್ತ್ವಿಕಾಭಿನಯವು ತಾನೇ ತಾನಾಗಿರುವಾಗ ಮಾತಿನ ಮೇಲ್ಮೆಯಾದರೂ ಹೇಗೆ? ಏಕೆ?” ಎಂಬ ಪ್ರಶ್ನೆಯನ್ನು ಉತ್ತರಿಸತೊಡಗುತ್ತಾನೆ. “ಚಿತ್ತವೃತ್ತಿಗಳ ನಿರೂಪಣೆಯೇ ವಿಭಾವಾನುಭಾವಸಾಮಗ್ರೀಸಮಾಯೋಜನೆಯಾಗಿರುವಾಗ ವಾಕ್ಕಿನ ಪ್ರಸಕ್ತಿಯಾದರೂ ಹೇಗೆ? ಅಲ್ಲದೆ, ರಸವೆಂದೂ ಸ್ವಶಬ್ದವಾಚ್ಯವಲ್ಲದ ಕಾರಣ ಮಾತಿಗೆ ರಂಗಪ್ರಯೋಗದಲ್ಲಿ ಎಡೆಯಾದರೂ ಎಂತು?” ಎಂಬ ಪೂರ್ವಪಕ್ಷವನ್ನು ಸೊಗಸಾಗಿ ಎದುರಿಸುತ್ತಾನೆ. ಮುನಿಪ್ರಮಾಣದಂತೆ ಚತುರ್ವಿಧಾಭಿನಯಗಳಲ್ಲಿ ವಾಚಿಕಾಭಿನಯವೂ ಒಂದು. ಜೊತೆಗೆ, ರಸವನ್ನು ಅಭಿಧಾವೃತ್ತಿಯಿಂದಲ್ಲದೆಯೇ ನಿರೂಪಿಸುವ ಸಾಮರ್ಥ್ಯವೂ ಮಾತಿಗುಂಟು. ಮಾತ್ರವಲ್ಲ, ಮಾತಿನ ಮೂಲಕ ವಿಭಾವಾನುಭಾವಸಾಮಗ್ರೀನಿರ್ಮಾಣವು ಪುಷ್ಟವಾದ ಬಳಿಕ ರಸಭಾವಾದಿಶಬ್ದಗಳು ವಾಚ್ಯವೃತ್ತಿಯಿಂದ ಬಂದರೂ ಅನುಚಿತವಾಗವು. ಇವೆಲ್ಲವೂ ನಮಗೆ ಅನುಭವದಲ್ಲಿಯೇ ಸಿದ್ಧವಾಗಿ ತೋರುತ್ತಿರುವಾಗ ವಿತಂಡಾವಾದಕ್ಕೆ ಮುಂದಾಗುವುದು ಸರಿಯಲ್ಲ. ಕೇವಲ ಚಿತ್ತವೃತ್ತಿಗಳನ್ನು ನಿರೂಪಿಸುತ್ತೇವೆಂದು ಆಂಗಿಕದಿಂದಲೋ ಆಹಾರ್ಯದಿಂದಲೋ ಹರುಕು-ಮುರುಕಾಗಿ ಯತ್ನಿಸಿದ ಮಾತ್ರಕ್ಕೆ ರಸಸಿದ್ಧಿಯಾಗದು. ಇದು ಬಡಕಲುಮಾತುಗಳಿಂದಲೂ ಆಗದ ಕೆಲಸ. ಕೇವಲ ಪ್ರತಿಭಾಶಾಲಿಯೂ ವ್ಯುತ್ಪತ್ತಿಶೀಲಿಯೂ ಆದ ಕವಿಯ ವಕ್ರೋಕ್ತಿವೈಭವಕ್ಕೆ ಮಾತ್ರ ಸುಂದರಕಾವ್ಯನಿರ್ಮಾಣವು ಸಾಧ್ಯ. ಇದನ್ನೇ ಭಟ್ಟತೌತಾದಿಗಳು ಸ್ಪಷ್ಟೀಕರಿಸಿದ್ದಾರೆ. ಆ ಪ್ರಕಾರ ವಕ್ರೋಕ್ತಿಮಯವಾಗಿ ವ್ಯಂಜನಾವ್ಯಾಪಾರಪರಿಶೀಲಿತವಾದ ಬಗೆಯಲ್ಲಿ ವಾಕ್ಕು ವಿಭಾವಾನುಭಾವಸಾಮಗ್ರಿಯನ್ನು ಹವಣಿಸಿದಾಗಲೇ ರಸವು ಸಿದ್ಧವಾಗುತ್ತದೆ. ಅಲ್ಲದೆ, ಮಾತೆಂಬುದು ಸರಸ್ವತೀಸ್ವರೂಪ. ಅದು ವಾಗ್ಯೋಗರೂಪದಿಂದ ಮೋಕ್ಷಕಾರಕವೂ ಹೌದು. ಇಂತಿರಲು ರಸಾನಂದನಿರ್ಮಾಣಕ್ಕೆ ಮಾತು ಒದಗಿಬರಲಾರದೆಂಬುದು ಬುಡವಿಲ್ಲದ ವಾದ. ಹೆಚ್ಚೇನು, ಮಾತೇ ಶಬ್ದಬ್ರಹ್ಮದ ವಿವರ್ತರೂಪದಿಂದ ಸಕಲಾರ್ಥಗಳನ್ನೂ ರೂಪಿಸಿ ದೀಪಿಸುತ್ತದೆ:
“ಯತ್ತು ಕೈಶ್ಚಿದಭಿಧೀಯತೇ ಚಿತ್ತವೃತ್ತಿಂ ಪ್ರತಿ ಶಬ್ದಾನಾಂ ಬಹಿರಂಗತ್ವಂ; ತದಸತ್ | ತಥಾ ಹಿ ಯದುಚ್ಯತೇ ವ್ಯತಿರೇಕಭಾವಾನ್ನ ರಸಾದಯಃ ಶಬ್ದವಾಚ್ಯಾ ಇತಿ, ತತ್ರ ಸರ್ವೈಃ ಶಬ್ದೈರ್ವ್ಯತಿರೇಕಾಭಾವೋऽಸಿದ್ಧಃ, ಅಭಿನಯಚತುಷ್ಟಯಸಾಮಾನ್ಯಂ ಬಹಿಃ ಸರ್ವತ್ರ ಪ್ರತೀತಿಸ್ಫುಟತಾಯಾಂ ವ್ಯಾಪ್ರಿಯತ ಇತ್ಯವೋಚಾಮ ... ಯಥಾಸಂಕೇತಂ ಹಿ ಶಬ್ದಾತ್ಪ್ರವರ್ತಮಾನಾಸಿದ್ಧಂ ಸಾಧ್ಯಂ ಚಾಭಿಧಾತುಂ ಕೇನ ಪ್ರತಿಹನ್ಯತ ಇತಿ ಸಾಧ್ಯಮಾನತಾ ಕಾಪಿ ವಿಭೀಷಿಕಾ ... ಕಾವ್ಯೇಷು ಸಹೃದಯಹೃದಯಸಾಗರಸಮುಚ್ಚಲದ್ರಾಕಾಮೃಗಾಂಕಪ್ರತಿಬಿಂಬೇಷು ಜೀವಿತಭೂತಾನಾಂ ಹಾಸಾಲಸ್ಯೌತ್ಸುಕ್ಯನಿದ್ರಾಮದಾಗಮಾಭಿಲಾಷಾಗಮಾದೀನಾಂ ಶಬ್ದಸ್ಪೃಷ್ಟತ್ವೇನ ವಿಭಾವಾದ್ಯನುತ್ಸಾಧ್ಯಸ್ವಭಾವೇಷು ವೀತರಾಗತೇವ ಬಕಕಾಕಕ್ರೀಡಾಕಲ್ಪನೈವ ಸ್ಯಾತ್ | ಸಿದ್ಧಸ್ವಭಾವಾನಾಮೇವ ಪದೈರಭಿಧಾನಮ್ ... ನ ತು ಸರ್ವೋ ವಕ್ತಾ ಕವಿರಿತ್ಯತಿಪ್ರಸಂಗಿಲಕ್ಷಣಪ್ರಬಂಧಬಂಧುರಕಾವ್ಯನಿರ್ಮಾತೃತ್ವಂ ಹಿ ಕವಿತ್ವಮ್ | ನ ಚಿತ್ತವೃತ್ತಿಪ್ರತಿಪಾದಕತ್ವಮ್ ... ಉಪಾಧ್ಯಾಯೈಃ “ಕಾವ್ಯಕೌತುಕೇ” ರಸೋದ್ದೇಶಪರಕೇ ಶ್ಲೋಕೇ “ತಾಸಾಂ ತು ಪರಿಪೂರ್ಣತ್ವೇ ಸಿದ್ಧ ಏವ ರಸೋ ಮತಃ” ಇತ್ಯಾದಿ ನಿರೂಪಿತಮ್ | ತದುಕ್ತಾನ್ಯರ್ಥತ ಏವ ನ ಗೃಹೀತವ್ಯಮ್ | ನನ್ವೇವಂ ರಸಸೂತ್ರೇ ಶಬ್ದೋऽಪ್ಯುಪಾದಾತವ್ಯಃ? ತದಿದಮಾಯಾತಮ್—ಉತ್ಸಂಗಸಂಗಿನಿ ಬಾಲಕೇ ತದನ್ವೇಷಣಮಿತಿ | ಅತ್ರ ಭಾವೋಪಾದಾನೈಃ ಕಿಂ ನ ಸಂಗೃಹೀತಮ್? ಯದಯಮಾಹ[3]—“ವಾಗಂಗಾಭಿನಯೇನೇಹ ಯತ್ಸ್ವರ್ಥೋऽನುಭಾವ್ಯತೇ | ಶಾಖಾಂಗೋಪಾಂಗಸಂಯುಕ್ತಸ್ತ್ವನುಭಾವಸ್ತತಃ ಸ್ಮೃತಃ” (೭.೫) ಇತಿ ... ಚತುರ್ಥಗೋಪಾಯಭೂತಾ ಪರಮಪುರುಷಾರ್ಥಸ್ವಭಾವಾ ವಿಶ್ವಕಾರಣಭೂತಾ ಭಗವತೀ ಭಾರತೀ ... ವಾಚಿ ಫಲರೂಪಾಯಾಂ ನಿಷ್ಠಾ ... ಏವಂ ವಾಗೇವಾಭಾಸಿಕಾ ಸೈವ ಚ ನಿರ್ವಾಹಿಕ್ಯವಭಾಸನೈವ ಹಿ ಪರಮಾರ್ಥತೋ ನಿರ್ವಾಣಮ್” (ಸಂ.೨, ಪು.೨೬೭-೨೬೯).
ಇನ್ನೊಂದೆಡೆ ಮತ್ತೂ ಮುಂದುವರಿದು ಅಭಿನವಗುಪ್ತನು ರಸವೇ ಕಾವ್ಯಾರ್ಥ; ನಾಟ್ಯಾರ್ಥವೂ ರಸ. ನಾಟ್ಯಪ್ರಯೋಗಕ್ಕೆ ಮೂಲ ಶಬ್ದಮಾತೃಕೆ. ಶಬ್ದವು ವರ್ಣನಾರೂಪವನ್ನು ಸ್ವೀಕರಿಸಿದಾಗಲೇ ಕಾವ್ಯ. ಇಂಥ ವರ್ಣನೆಯೇ ಕವಿಕರ್ಮ. ಈ ಬಗೆಯ ವರ್ಣನೆಗೆ ಶಬ್ದವೃತ್ತಿಗಳು ಮೂರೂ ಸಹಕಾರಿ. ವಿಶೇಷತಃ ಮೂರನೆಯದಾದ ವ್ಯಂಜನಾವೃತ್ತಿಯೇ ಜೀವಾತು. ಅದು ಗುಣೀಭೂತವ್ಯಂಗ್ಯವಾಗಿ ಹೊಮ್ಮಿದಾಗ ಅಲಂಕಾರಾದಿರೂಪವನ್ನು ತಾಳುತ್ತದೆ. ಗುಣ-ರೀತಿಗಳದೂ ಇದೇ ದಾರಿ. ಇವೆಲ್ಲವೂ “ಲಕ್ಷಣಾಧ್ಯಾಯ”ದಲ್ಲಿ ಮೂವತ್ತೆರಡು ಲಕ್ಷಣಗಳನ್ನು ವಿವರಿಸುವಾಗ ಪ್ರಕಾರಾಂತರವಾಗಿ ಉನ್ಮೀಲಿಸಿವೆ. ಹೀಗಾಗಿ ವಾಚಿಕಾಭಿನಯಕ್ಕೆ ನಾಟ್ಯಪ್ರಯೋಗವು ಋಣಿಯಷ್ಟೇ ಅಲ್ಲ, ಅದರಿಂದಲೇ ರಸಸ್ಫೂರ್ತಿ ಕೂಡ ಎಂಬುದಾಗಿ ವಿವರಿಸಿದ್ದಾನೆ:
“ಇಹ ಕಾವ್ಯಾರ್ಥಾ ರಸಾ ಇತ್ಯುಕ್ತಂ ಪ್ರಾಕ್ | ಉಕ್ತಂ ಚ ವರ್ಣನೀಯಂ ಶಬ್ದನೀಯಂ ಕವೇಃ ಕರ್ಮೇತಿ ಚ ವ್ಯುತ್ಪತ್ತಿತ್ರಯಂ ಕವಿಮಿತಿ ಕಾವ್ಯಮಿತಿ ಚ | ಅನೇನಾಭಿಧೇಯಮಭಿಧಾನಮಭಿಧಾಂ ಚ ಸ್ವೀಕೃತ್ಯಾವಸ್ಥೀಯತೇ, ಅಪಿ ಚ ಶಬ್ದವ್ಯಾಪಾರೋऽಭಿಧಾತೃವ್ಯಾಪಾರಃ ಪ್ರತಿಪಾದ್ಯವ್ಯಾಪಾರಶ್ಚೇತಿ ತ್ರಿಗತಃ | ತತ್ರ ಶಬ್ದಸ್ಯ ರಸಾಭಿವ್ಯಕ್ತಿಕ್ಷಮಾರ್ಥಪ್ರತಿಪಾದಕತ್ವಂ ಸ್ವತಶ್ಚ ಶ್ರೋತ್ರೇ ಚ ಸಂಕ್ರಾಂತಿಮಾತ್ರಂ ನಾಂತರೀಯಕತಯಾ ತದ್ರಸದರ್ಶನಯೋಗ್ಯತಾಪಾದನಸಾಮರ್ಥ್ಯಾದ್ಗುಣವಾಚ್ಯಂ, ಆವರ್ತಮಾನೋ ದ್ವಿತೀಯೋ ವರ್ಣಃ ಪದಂ ವಾ ಪ್ರಾಕ್ತನವರ್ಣಪದಶೋಭಾಹೇತುರಲಂಕಾರಃ | ಏಮಮರ್ಥಸ್ಯಾಪಿ, ಯದ್ರಸಾಭಿವ್ಯಕ್ತಿಹೇತುತ್ವಂ ಸೋऽರ್ಥಗುಣಃ | ಯಸ್ತು ವಸ್ತ್ವಂತರಂ ವದನಸ್ಯೇವ ಚಂದ್ರಃ ಸೋऽಲಂಕಾರಃ, ಯಸ್ತು ತ್ರಿವಿಧೋऽಪ್ಯಭಿಧಾವ್ಯಾಪಾರಃ ಸ ಲಕ್ಷಣಾನಾಂ ವಿಷಯಃ” (ಸಂ.೨, ಪು.೨೧೫).
ವಾಚಿಕಾಭಿನಯದ ಸಾಫಲ್ಯವಿರುವುದೇ ಶಬ್ದಾರ್ಥನಿರ್ಮಾಣಪ್ರವಣನಾದ ಕವಿಯ ಪ್ರತಿಭೆಯಲ್ಲಿ. ಈತನ ಮಾತಿನಲ್ಲಿ ಹೊಮ್ಮುವ ಗುಣಾಲಂಕಾರಗಳಿಗೆಲ್ಲ ರಸಾಭಿವ್ಯಂಜಕತೆಯು ಸಿದ್ಧಿಸುವುದೇ ಪ್ರತಿಭಾಪಾರಮ್ಯದಿಂದ. ಇದು ಸಾಮಾನ್ಯಕವಿಯ ಕಲ್ಪನೆಗೂ ದಕ್ಕದ ಸ್ಥಿತಿ.
“ಕವೇರ್ಯಃ ಪ್ರತಿಭಾತ್ಮಾ ಪ್ರಥಮಪರಿಸ್ಪಂದಸ್ತದವ್ಯಾಪಾರಬಲೋಪನತಾ ಗುಣಾಃ, ಪ್ರತಿಭಾವತ ಏವ ಹಿ ರಸಾಭಿವ್ಯಂಜನಸಾಮರ್ಥ್ಯಂ ಮಾಧುರ್ಯಾದೇರುಪನಿಬಂಧನಸಾಮರ್ಥ್ಯಂ, ನ ಸಾಮಾನ್ಯಕವೇಃ” (ಸಂ.೨, ಪು.೨೧೪).
ಮಾತಿನ ಮಹಿಮೆಯನ್ನು ವಿಸ್ತರಿಸುತ್ತ, ಅಲ್ಲಿಯ ವ್ಯಂಜಕಸಾಮಗ್ರಿಯ ಸ್ವಾರಸ್ಯವನ್ನು ಮನದಟ್ಟುಮಾಡಿಸುವ ಅಭಿನವಗುಪ್ತನು ಧ್ವನ್ಯಾಲೋಕದ ಸಾರವನ್ನೇ ಸಂಗ್ರಹಿಸಿಕೊಡುತ್ತಾನೆ. ಅವನ ಪ್ರಕಾರ ಉಪಸರ್ಗಾದಿಗಳು, ಲಿಂಗ-ವಚನ-ವಿಭಕ್ತಿ-ನಾಮಪದ-ಕ್ರಿಯಾಪದಾದಿಗಳು, ತದ್ಧಿತ-ಕೃದಂತಾದಿಗಳು, ಸಂಧಿ-ಸಮಾಸಗಳು ಕೂಡ ದೃಶ್ಯಕಾವ್ಯದ ಸ್ವಾರಸ್ಯವನ್ನು ಹೆಚ್ಚಿಸುತ್ತವೆ. ಇದಕ್ಕಾಗಿ ವಿಪುಲವಾದ ಉದಾಹರಣೆಗಳ ಮೂಲಕ ಪುಷ್ಟಿಯನ್ನೂ ತಂದೀಯುತ್ತಾನೆ. ಒಟ್ಟಿನಲ್ಲಿ ಕುಂತಕ ಮತ್ತು ಆನಂದವರ್ಧನರ ಸಾರಸಂಗ್ರಹವೇ ಇಲ್ಲಿದೆಯೆಂದರೆ ತಪ್ಪಲ್ಲ (ಸಂ.೨, ಪು.೧೬೯-೧೭೧). ಇದರ ಸ್ವಾರಸ್ಯವನ್ನೆಲ್ಲ ಮನಗಾಣಲು ಸಹೃದಯರು ಸುವಿಸ್ತೃತವಾದ ಅಭಿನವಭಾರತೀ ಮೂಲವನ್ನೇ ಪರಾಂಬರಿಸಬೇಕು.
ವಾಚಿಕಾಭಿನಯರೂಪದ ವಾಗರ್ಥಪರಿನಿಷ್ಠಿತವಾದ ಸಾಹಿತ್ಯವನ್ನು ಸಮರ್ಥಿಸಲು ಅಭಿನವಗುಪ್ತನು ತೊಡಗಿಕೊಂಡ ಪರಿಯು ಸರ್ವಥಾ ಸ್ತವನೀಯ. ಅವನಂಥ ಸರ್ವತಂತ್ರಸ್ವತಂತ್ರನಿಗೆ ಇದೇನೂ ದೊಡ್ಡ ಸಂಗತಿಯಲ್ಲ. ಅಲ್ಲದೆ, ಅವನ ಪೂರ್ವಸೂರಿಗಳೆಷ್ಟೋ ಮಂದಿ ಈ ಕಾರ್ಯವನ್ನು ಸಮರ್ಥವಾಗಿ ಮಾಡಿ ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿಯೇ ಇದ್ದಾರೆ. ಆದರೆ ಎಲ್ಲಿಯೂ ರಸ-ಧ್ವನಿ-ವಕ್ರತೆಗಳ ಮಹಾಮೌಲ್ಯಗಳಿಂದ ವಿರಹಿತನಾಗದೆ ಇರುವ ಸ್ವಲ್ಪಾವಕಾಶದಲ್ಲಿಯೂ ಕಾವ್ಯಮೀಮಾಂಸೆಯ ಮೂಲತತ್ತ್ವಗಳನ್ನು ಮನದಟ್ಟಾಗಿಸುವ ಆತನ ಔಚಿತ್ಯಪ್ರಜ್ಞೆ ಮತ್ತು ಶಾಸ್ತ್ರಸದ್ಭಾವಪರಿಜ್ಞಾನ ಯಾರಿಗೂ ವಂದನೀಯ. ಆದರೆ ಅಭಿನವಭಾರತಿಯ ಭಾಷೆಯೇ ತೊಡಕು, ಪೆಡಸು ಮತ್ತು ಕೆಲಮಟ್ಟಿಗೆ ಸಂದಿಗ್ಧ. ಈ ಕ್ಲೇಶಗಳಿಗೆ ಮುಕುಟವಿಟ್ಟಂತೆ ಅಶುದ್ಧಪಾಠಗಳ ಸಮಸ್ಯೆ ಹೇಳತೀರದ ಕಷ್ಟವನ್ನುಂಟುಮಾಡುತ್ತದೆ. ಹೀಗಾಗಿ ಪ್ರಕೃತಪ್ರಸಂಗವೂ ಸೇರಿದಂತೆ ಇನ್ನೆಷ್ಟೋ ಪ್ರಕರಣಗಳಲ್ಲಿ ಇಡಿಯ ಗ್ರಂಥತಾತ್ಪರ್ಯವನ್ನೂ ಕರ್ತೃಹೃದಯವನ್ನೂ ಸಮಗ್ರಶಾಸ್ತ್ರಪರಂಪರೆಯನ್ನೂ ಗಮನದಲ್ಲಿರಿಸಿಕೊಂಡು ನಿಗಮನಗಳನ್ನು ಅರ್ಥೈಸಲಾಗಿದೆ.
ಈ ಸಂದರ್ಭದಲ್ಲಿ ದೃಶ್ಯಕಾವ್ಯದ ಚರಮರೂಪವಾದ ರಂಗಪ್ರಯೋಗದ ಬಗೆಗೆ ಅದೆಷ್ಟೇ ಅಭಿಮಾನವನ್ನು ಹೊಂದಿದ್ದರೂ ಅಭಿನವಗುಪ್ತನು ಅಲ್ಲಿರುವ ಮೂಲಮಾತೃಕೆಯೆನಿಸಿದ ಶ್ರವ್ಯಕಾವ್ಯದ ಮಹತ್ತ್ವವನ್ನು ಮನಗಂಡು ಮಿಕ್ಕವರಿಗೂ ಮನಗಾಣಿಸಿದ ಬಗೆ ಸುತರಾಂ ಪ್ರಶಂಸನೀಯ. ಏಕೆಂದರೆ ಅವನಂಥ ರಸಪಕ್ಷಪಾತಿವರೇಣ್ಯನು ಬಹಳ ಸುಲಭವಾಗಿ ಗುಣಾಲಂಕಾರರೀತಿಗಳ ಮೌಲ್ಯವನ್ನು ಅಧಃಕರಿಸಿ ವಿಭಾವಾನುಭಾವಸಾಮಗ್ರೀಮಾತ್ರವನ್ನೇ ಮುಂದಿಟ್ಟು ಮೆರೆಸಬಹುದಿತ್ತು. ಈ ಬಗೆಯ ಅವಿಚಾರಿತಪಕ್ಷಪಾತವನ್ನು ಆಧುನಿಕವಿದ್ವಾಂಸರೆಷ್ಟೋ ಮಂದಿ ಮಾಡಿದ್ದಾರೆ ಕೂಡ. ಆದರೆ ಅಭಿನವಗುಪ್ತನು ಈ ದೋಷಕ್ಕೆ ಪಕ್ಕಾಗದೆ ವಾಗರ್ಥಮಯವಾದ ಸಾಹಿತ್ಯಕ್ಕೆ ಸಲ್ಲಬೇಕಾದ ಪ್ರಾಶಸ್ತ್ಯವನ್ನು ಸಲ್ಲಿಸಿದ್ದಾನೆ. ಏಕೆಂದರೆ ಎಲ್ಲ ಕಲಾಮಾಧ್ಯಮಗಳೂ ರಸದಲ್ಲಿಯೇ ಪರ್ಯವಸಿಸಲು ಮೀಸಲಾಗಿವೆ. ಇಲ್ಲಿ ವಿವಿಧಕಲಾಮಾಧ್ಯಮಗಳ ಮೇಲು-ಕೀಳುಗಳು ಅವಿವಕ್ಷಿತ. ಆದುದರಿಂದ ವಾಗರ್ಥಮಾಧ್ಯಮವೂ ಒಂದು ಕಲಾಪ್ರಕಾರ. ಇದರ ಪರಮಗಂತವ್ಯವೂ ರಸವೇ. ಇಂತಿರಲು ಈ ಮಾಧ್ಯಮದಿಂದ ರಸಸಿದ್ಧಿಯಾಗದೆಂದರೆ ಅದು ಶಾಸ್ತ್ರಸದ್ಭಾವಕ್ಕೇ ಅಪಚಾರವಾದೀತು. ಧ್ವನಿಮಾರ್ಗದಿಂದ ಗುಣಾಲಂಕಾರಾದಿಗಳು ರಸತ್ವಕ್ಕೆ ಸಲ್ಲುವುದೇ ವಕ್ರತಾವ್ಯಾಪಾರದ ಉಪನಿಷತ್ತು. ಹೀಗಾಗಿ “ಅಭಿನಯ”ವೆಂಬ ಶಬ್ದದಿಂದಲೇ ಧ್ವನಿಸುವಂತೆ (ಅಭಿ+ನಯ; ಅರ್ಥಾತ್, ರಸಿಕರತ್ತ ಕೊಂಡೊಯ್ಯುವಿಕೆ) ವಿಭಾವಾನುಭಾವಸಾಮಗ್ರಿಯನ್ನು ಸಹೃದಯರತ್ತ ಸಾಗಿಸುವುದೇ ಇಲ್ಲಿಯ ಪರಮೋದ್ದೇಶ. ಇಂತಿರಲು ವಾಚಿಕಾಭಿನಯವೂ ಆ ಕಾಯಕದಲ್ಲಿ ತನ್ನ ಯೋಗದಾನವನ್ನು ನೀಡುತ್ತಿದೆ. ಇದನ್ನು ಮನಗಾಣದಿದ್ದಲ್ಲಿ ನಾಟ್ಯಕಲೆಯಂಥ (ಆಧುನಿಕಪರಿಭಾಷೆಯಲ್ಲಿ ಹೇಳುವುದಾದರೆ ರಂಗಭೂಮಿ ಅಥವಾ ಚಲನಚಿತ್ರದಂಥ) ಸಂಕೀರ್ಣಮಾಧ್ಯಮದಲ್ಲಿ ಸಾಹಿತ್ಯದ ನೆಲೆ-ಬೆಲೆಗಳು ಸ್ಫುಟವಾಗವು.
ಅಲ್ಲದೆ, ಸಾಹಿತ್ಯವು ಗೀತ-ನೃತ್ಯ-ಚಿತ್ರ-ಶಿಲ್ಪಗಳಂತೆ ವ್ಯಾಪಕವಾದ ಹವಣಿಕೆಯ ಹಂಗಿಲ್ಲದೆ ಸ್ವತಂತ್ರವಾಗಿ ನಿಂತಿದೆ. ಜೊತೆಗೆ, ಜ್ಞಾಪಕವಿಶ್ರಾಂತವಾಗಿ ಅದು ಎಂದಿಗೂ ಯಾರಿಗೂ ಸಂವಹನಸುಲಭವಾಗಿದೆ. ಇದು ಮಿಕ್ಕ ಕಲೆಗಳಿಗೆ ದಕ್ಕದ ಸಿದ್ಧಿ. ಮಾತ್ರವಲ್ಲ, ಆ ಮಾಧ್ಯಮಗಳಿಗಿಲ್ಲದ ಮಾಹಿತಿಯ ರೂಪದ ವ್ಯುತ್ಪತ್ತಿಯನ್ನು ಕೊಡುವ ಸಾಮರ್ಥ್ಯವೂ ಇದರಲ್ಲಿ ಅಪಾರವಾಗಿದೆ. ಈ ಎಲ್ಲ ಗುಣವಿಶೇಷಗಳನ್ನು ಕಂಡಾಗ ಸಾಹಿತ್ಯದ ಸಾರ್ವಭೌಮಿಕತೆ ಸೂರ್ಯಸ್ಪಷ್ಟ. ಯದ್ಯಪಿ ದೃಶ್ಯಕಲೆಗಳಿಗೂ ಗಾನದಂಥ ಆಪಾತಮಧುರಕಲೆಗೂ ಇರುವ ತತ್ಕ್ಷಣದ ರಂಜನಸಾಧ್ಯತೆ ಮತ್ತು ತನ್ಮೂಲಕವಾಗಿಯೇ ಉಂಟಾಗುವ ವಿಪುಲವ್ಯಾಪ್ತಿಗಳು ಸಾಹಿತ್ಯಕ್ಕೆ ಸಾಧ್ಯವಿಲ್ಲದಿದ್ದರೂ ಸಂಕೀರ್ಣತೆ, ಧ್ವನಿಸೂಕ್ಷ್ಮತೆ (ಮಿಕ್ಕ ಕಲೆಗಳಂತೆ ಕೇವಲ ರಸಾದಿದ್ವನಿಯಷ್ಟೇ ಅಲ್ಲದೆ ವಸ್ತ್ವಲಂಕಾರಧ್ವನಿಗಳ ವಿಪುಲಸಾಧ್ಯತೆಗಳೂ—ಭಾಷೆಗಿರುವ ಲೋಕೋಪಯೋಗಿತೆಯ ಕಾರಣ ತಾನಾಗಿ ಒದಗಿಬರುವ—ಲಕ್ಷಣಾಮೂಲದ ಅನೇಕಧ್ವನಿಗಳೂ ಇಲ್ಲಿ ವಿಜೃಂಭಿಸುತ್ತವೆ), ಕಾರಕಸಿದ್ಧಿ, ನಿಶ್ಚಿತಾನ್ವಯ, ಮಹಾತಾತ್ಪರ್ಯ, ಅಭಿಧಾದಾರ್ಢ್ಯ ಮತ್ತು ವಾಕ್ಯಸ್ಫೋಟಗಳ ಕಾರಣದಿಂದ ಒದಗಿಬರುವ ಅಭಿವ್ಯಕ್ತಿ ಮತ್ತು ಅಭಿಜ್ಞಾನಗಳ ಸ್ಫುಟತೆ ಮಿಕ್ಕೆಲ್ಲ ಕಲೆಗಳಿಗಿಂತ ಇದನ್ನು ಸಮರ್ಥವಾಗಿಸಿದೆ. ಅಷ್ಟೇಕೆ, ಉಳಿದೆಲ್ಲ ಕಲೆಗಳ ಸೊಗಸುಗಳನ್ನು ಹೇಳಿಕೊಳ್ಳಲೂ ವಿಮರ್ಶಿಸಲೂ ಕಲಿಸಿ ಕಲಿಯಲೂ ಸಾಹಿತ್ಯವೇ ತನ್ನ ವಿವಿಧಸ್ತರಗಳಲ್ಲಿ ಸಹಕಾರಿಯೆನಿಸಿದೆ. ಇದನ್ನೆಲ್ಲ ಗಮನಿಸಿದರೆ ವಾಚಿಕಾಭಿನಯದ ಮಹತ್ತ್ವ ಮನದಟ್ಟಾದೀತು. ಈ ನಿಟ್ಟಿನಲ್ಲಿ ಭಾರತೀಯಕಾವ್ಯಮೀಮಾಂಸಕರು ಕೊಟ್ಟಿರುವ ಕೊಡುಗೆ ಅಪಾರ. ಈ ಕೊಡುಗೆಯ ಹಿಂದೆ ಸಂಸ್ಕೃತಸಾಹಿತ್ಯವು ತನ್ನ ವಾಗರ್ಥವಿಸ್ಮಯಲೋಕದ ಮೂಲಕ ನೀಡಿದ ಪ್ರೇರಣೆಯ ಮಹತ್ತ್ವವನ್ನು ಮರೆಯುವಂತಿಲ್ಲ.
ಟಿಪ್ಪಣಿಗಳು
[1] ಛಂದೋವಿನಿಯೋಗವೊಂದು ಸ್ವಾರಸ್ಯಕರಕಾವ್ಯಶಾಸ್ತ್ರಭೂಮಿ. ಆದರೆ ಇಲ್ಲಿ ಔಚಿತ್ಯವಿವೇಕ ತುಂಬ ಮುಖ್ಯ. ಇಂಥ ವರ್ಣನೆಗೆ ಇಂಥದ್ದೇ ಛಂದಸ್ಸೆಂಬ ಯಮನಿಯಮವು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಆದರೆ, ಕೆಲವೊಂದು ವಸ್ತು-ಸಂನಿವೇಶಗಳಿಗೆ, ಭಾವ-ಭಣಿತಿಗಳಿಗೆ ಕೆಲವೊಂದು ವೃತ್ತಗಳು ಹೆಚ್ಚು ಸೊಗಯಿಸುತ್ತವೆಂಬುದರಲ್ಲಿ ಸಂದೇಹವಿಲ್ಲ. ಇಂಥ ಸ್ವಾರಸ್ಯಕರಸಂದರ್ಭವನ್ನು ನಾವಿಲ್ಲಿ ಕಾಣುತ್ತಿದ್ದೇವೆ. ಇಪ್ಪತ್ತೊಂದು ಅಕ್ಷರಗಳ ಪಾದಪ್ರಮಾಣವುಳ್ಳ ಸ್ರಗ್ಧರೆಯು ಯತಿಪ್ರಬಲವೂ ಗುರುಪ್ರಚುರವೂ ಆದ ಬಂಧ. ವಿಶೇಷತಃ ಪಾದಾಂತದ್ದೂ ಸೇರಿದಂತೆ ಮೂರು ಯತಿಗಳುಳ್ಳ ಈ ವೃತ್ತದಲ್ಲಿ ಗುರುಪ್ರಚುರವಾದ ಏಳೇಳು ಅಕ್ಷರಗಳ ಎರಡು ಖಂಡಗಳ ನಡುವೆ ಲಘುಪ್ರಚುರವಾದ ಏಳಕ್ಷರಗಳ ಒಂದು ಖಂಡವು ಬರುತ್ತದೆ. ವೀರನೊಬ್ಬನ ನಿಡಿದಾದ ಪ್ರಬಲಮಾಂಸಲಬಾಹುಗಳ ಸಪ್ರಮಾಣ-ಸಾಮರ್ಥ್ಯವನ್ನು ಧ್ವನಿಸುವಂತೆ ಸ್ರಗ್ಧರೆಯ ಪಾದಗಳ ಆದ್ಯಂತಖಂಡಗಳು ತೋರಿದರೆ ಆತನ ಸಿಂಹಕಟಿಯನ್ನು ಸೂಚಿಸುವಂತೆ ಲಘುಬಹಲವಾದ ಮಧ್ಯಮಖಂಡವು ಕಾಣುತ್ತದೆ. ಹೀಗಾಗಿ ವೀರಾಗ್ರಣಿಯೊಬ್ಬನ ತೋಳುಗಳ ಬಣ್ಣನೆಗೆ ಸ್ರಗ್ಧರೆಯು ಒದಗಿಬರುವುದೆಂದಾಗ ಅದು ಈ ಒಂದು ಸಂದರ್ಭದ ಅನನ್ಯಸುಂದರವಾದ ಔಚಿತ್ಯಕ್ಕೆ ದೃಷ್ಟಾಂತವಲ್ಲದೆ ಇಂಥ ಸಂದರ್ಭದಲ್ಲಿ ಮಾತ್ರ ಈ ವೃತ್ತದ ವಿನಿಯೋಗವೆಂದು ಸೀಮಿತಾರ್ಥವಲ್ಲ. ಮುಖ್ಯವಾಗಿ, ವೀರ-ರೌದ್ರ-ಭಯನಕ-ಅದ್ಭುತಾದಿಗಳ ಪ್ರಸಂಗದಲ್ಲಿ ಸ್ರಗ್ಧರೆಯು ಸಮುಚಿತ; ಮತ್ತಿದು ವಿಚಿತ್ರಮಾರ್ಗದ, ಗೌಡೀ ಶೈಲಿಯ, ಓಜಃಪೂರ್ಣಪದಪದ್ಧತಿಗೆ ಯುಕ್ತತಮವೆಂದು ತಾತ್ಪರ್ಯ. ಇಂಥ ಗಂಡುಗಲಿ ಛಂದಸ್ಸಿಗೆ ಪರುಷಪದ್ಧತಿಯ ಪಾಠ್ಯವಲ್ಲದೆ ಸುಕುಮಾರಸುಂದರವಾದ ಗೇಯಕ್ರಮವು ಸಲ್ಲದೆಂಬುದು ಸ್ರಗ್ಧರೆಯ ಜಾಡನ್ನು ಬಲ್ಲವರೆಲ್ಲ ಬಲ್ಲರು.
[2] ಸೇಡಿಯಾಪು ಛಂದಸ್ಸಂಪುಟ (ಸಂ. ಪಾದೇಕಲ್ಲು ವಿಷ್ಣುಭಟ್ಟ). ಉಡುಪಿ: ರಾಷ್ಟ್ರಕವಿ ಗೋವಿಂದಪೈ ಸಂಶೋಧನಕೇಂದ್ರ, ೨೦೦೬.
[3] ರವಿಶಂಕರ್ ನಾಗರ್ ಅವರು ಸಂಪಾದಿಸಿದ ಅಭಿನವಭಾರತೀ ಆವೃತ್ತಿಯಲ್ಲಿ ಈ ಸಂದರ್ಭದ ಪಾಠವು ಸಂದಿಗ್ಧವಾಗಿದೆ. ಅದು ಹೀಗೆ: “ಅನುಭಾವ್ಯತುऽನೇನ ವಾಗಂಗಸತ್ತ್ವಕೃತಃ” (ಸಂ.೨, ಪು.೧೬೯). ಇದು ಸರ್ವಥಾ ದೋಷಪೂರ್ಣವೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅಲ್ಲಿಯೇ ಅವರು ಕೊಟ್ಟ ನಾಟ್ಯಶಾಸ್ತ್ರಮೂಲದ ಆಕರಸೂಚಿಯನ್ನು ಅವಲಂಬಿಸಿ ಅವರದೇ ಆವೃತ್ತಿಯ ಸಪ್ತಮಾಧ್ಯಾಯದಲ್ಲಿ ಬರುವ “ವಾಗಂಗಾಭಿನಯೇನೇಹ ...” ಶ್ಲೋಕವನ್ನಿಲ್ಲಿ ಉದ್ಧರಿಸಲಾಗಿದೆ. ಇದು ಸಂದರ್ಭಕ್ಕೆ ಸಮುಚಿತವೆಂಬುದರಲ್ಲಿ ಸಂದೇಹವಿಲ್ಲ.