ಯತ್ಸಾರಸ್ವತರಸಸಿದ್ಧ ಏವ ಶುದ್ಧಃ ಸರ್ವೋऽದ್ಧಾ ವಿಲಸತಿ ವಾಚ್ಯವಾಚಕಾತ್ಮಾ | ಕಾಶ್ಮೀರೀ ಜಯತಿ ಜಗದ್ಧಿತಾವತಾರಃ ಸ ಶ್ರೀಮಾನಭಿನವಗುಪ್ತದೇಶಿಕೇಂದ್ರಃ ||
—ಗುರುನಾಥಪರಾಮರ್ಶಃ
ಈ ಮುನ್ನವೇ ನಾವು “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳನ್ನು ಗಮನಿಸುವಾಗ “ಅಭಿನವಭಾರತಿ” ಅಥವಾ “ನಾಟ್ಯವೇದವಿವೃತಿ”ಯ ಕೇಂದ್ರಭೂತಮಹತ್ತ್ವವನ್ನೂ ಪರಾಮರ್ಶಿಸಿದ ಕಾರಣ ವಿಷಯಕ್ಕೆ ನೇರವಾಗಿ ಪ್ರವೇಶಿಸಬಹುದು. ಭರತಮುನಿಯ “ನಾಟ್ಯಶಾಸ್ತ್ರ”ಕ್ಕೆ ಅವೆಷ್ಟೋ ವ್ಯಾಖ್ಯಾನಗಳು ಇದ್ದುವಾದರೂ ಸದ್ಯಕ್ಕೆ ಉಳಿದಿರುವುದು ಅಭಿನವಗುಪ್ತನ ವಿವೃತಿಯೊಂದೇ. ಇದು ಮೂಲಗ್ರಂಥದ ಸರಳವಿವರಣೆಯಷ್ಟೇ ಆಗದೆ ಸ್ವತಂತ್ರಮಹಾಗ್ರಂಥವೊಂದರ ಎಲ್ಲ ಆಯಾಮಗಳನ್ನೂ ತಳೆದ ಉದ್ಘಕೃತಿ. ಇದರ ಗುಣ-ಗಾತ್ರಗಳ ಘನತೆ ಎಷ್ಟೆಂದರೆ ಇಂದಿಗೂ—ಪ್ರಕೃತಲೇಖಕನೂ ಸೇರಿದಂತೆ—ಯಾವೊಬ್ಬ ವಿದ್ವಾಂಸನೂ ಇದರ ಎಲ್ಲ ಮಗ್ಗುಲುಗಳನ್ನು ಇದಮಿತ್ಥಮೆಂಬ ತತ್ತ್ವ-ಪ್ರಯೋಗದಾರ್ಢ್ಯದಿಂದ ಆವಿಷ್ಕರಿಸಲಾಗಿಲ್ಲ. ಆದುದರಿಂದ ಯಾವನೇ ಸಂಶೋಧಕನಾಗಲಿ, “ಅಭಿನವಭಾರತಿ” ಎಂಬ ದಿಗ್ದಂತಿಯನ್ನು ಕುರುಡರು ಆನೆಯನ್ನು ಕಂಡಂತೆ ತನ್ನಳವಿನೊಳಗೆ ಪರಿಚಯಿಸಿಕೊಳ್ಳಬೇಕಾದೀತು. ಮುಖ್ಯವಾಗಿ ಸಾಹಿತ್ಯ-ಸಂಗೀತ-ನೃತ್ಯ-ನಾಟ್ಯ-ದರ್ಶನ-ವ್ಯಾಕರಣ-ಛಂದಸ್ಸು-ಅಲಂಕಾರಗಳೇ ಮುಂತಾದ ಅನೇಕಶಾಸ್ತ್ರಗಳಲ್ಲಿ ಪ್ರಯೋಗಪರಿಣತಿಯನ್ನುಳ್ಳವನಾಗಿದ್ದ ಅಭಿನವಗುಪ್ತನ ಪರಂಪರಾಪ್ರಾಪ್ತವೂ ಸ್ವೋಪಜ್ಞವೂ ಆದ ಚಿಂತನಗಳ ಸಂಕೀರ್ಣಾಭಿವ್ಯಕ್ತಿಯ ಗ್ರಹಣೆಯೇ ಎಂಥ ಪಂಡಿತನಿಗಾಗಲಿ ದೊಡ್ಡ ಸವಾಲು. ಇಲ್ಲಿ ಅಭಿನವಗುಪ್ತನ ಇತಿ-ಮಿತಿಗಳ ಹಾಗೂ ಗುಣ-ದೋಷಗಳ ಅರಿವನ್ನೂ ನಿಶ್ಚಯಪಡಿಸಿಕೊಳ್ಳುವುದು ಮತ್ತೂ ಜಟಿಲಕಾರ್ಯ. ಈ ಎಲ್ಲ ಕಾರಣಗಳಿಂದಲೇ ಇಂದಿಗೂ “ಅಭಿನವಭಾರತಿ”ಯ ಸಮಗ್ರವೂ ಸಂತೃಪ್ತಿಕರವೂ ಆದ ಸಟಿಪ್ಪಣಭಾಷಾಂತರ ಕೂಡ ಸಾಧ್ಯವಾಗಿಲ್ಲ. ಅಷ್ಟೇಕೆ, ಈ ನಿಟ್ಟಿನಲ್ಲಿ ಹಲವು ವಿದ್ವಾಂಸರ ಹಲಕೆಲವು ತಂಡಗಳು ಯತ್ನಿಸಿಯೂ ಈವರೆಗೆ ಸಫಲವಾಗಿಲ್ಲವೆಂದರೆ ಪ್ರಕೃತೋದ್ಯಮದ ದುಸ್ಸಾಧ್ಯತೆ ಸ್ಪಷ್ಟವಾದೀತು. ಹೀಗಾಗಿ ಸದ್ಯದ ಲೇಖನವು ಯಾವುದೇ ರೀತಿಯಲ್ಲಿ ಮಹತ್ತ್ವಾಕಾಂಕ್ಷಿಯಾಗಿಲ್ಲ. ಕೇವಲ ಪ್ರಕೃತಲೇಖಕನು ತನ್ನರಿವಿಗೆಟುಕಿದ ವ್ಯಾಪ್ತಿಯೊಳಗೆ ಕಂಡ ಹತ್ತಾರು ಅಂಶಗಳಲ್ಲಿ ಕೆಲವೊಂದರ ಸ್ವಾರಸ್ಯ-ವೈಶಿಷ್ಟ್ಯಗಳನ್ನು ಮಾತ್ರ ಗುರುತು ಮಾಡಿಕೊಡುವುದಾಗಿದೆ. ಮುಖ್ಯವಾಗಿ ಇಲ್ಲಿರುವುದು ಬಿಡಿಯಾದ ವಿವರಗಳಿಗಿಂತ ಇಡಿಯಾದ ತತ್ತ್ವವನ್ನು ಹಿಡಿಯುವ ಹವಣು. ಏಕೆಂದರೆ ಯಾವುದೇ ವಿದ್ಯೆಯ—ವಿಶೇಷತಃ ಅಭಿಜಾತವೂ ಪರಂಪರಾಪ್ರಾಪ್ತವೂ ಆದ ವಿದ್ಯೆಯ—ಮೌಲ್ಯವು ಪರವರ್ತಿಕಾಲದವರಿಗೆ ಮಿಗಿಲಾಗಿ ಅರ್ಥಪೂರ್ಣವೆನಿಸುವುದು ಅದರ “ರೂಪ”ಕ್ಕಿಂತ “ಸ್ವರೂಪ”ದಲ್ಲಿ. ದಿಟವೇ, ರೂಪಕ್ಕೂ ಅದರದೇ ಆದ ಮಹತ್ತ್ವವಿದೆ. ಆದರೆ ಅದೆಂದಿಗೂ ಸ್ವರೂಪವನ್ನು ಮೀರಲಾರದು. ಇಂತಾದರೂ ಸ್ವರೂಪಕ್ಕೆ ಮಿಗಿಲಾದ ಅವಧಾರಣೆಯನ್ನು ಹಾಕಿದಾಗ ರೂಪದ ಕೆಲವೊಂದು ಸೂಕ್ಷ್ಮಗಳು ಸೊರಗಿಯಾವು. ವಿಶೇಷತಃ ಇದು ಆಯಾ ವಿದ್ಯೆಗಳ ರಾಚನಿಕಮಹತ್ತ್ವವನ್ನು ಅನಿವಾರ್ಯವಾಗಿ ಪಕ್ಕಕ್ಕಿರಿಸುತ್ತದೆ. ಅಭಿಜಾತಕಲೆಗಳಲ್ಲಿದು ಕೆಲಮಟ್ಟಿಗೆ ಹಾನಿಕರವೂ ಹೌದು. ಏಕೆಂದರೆ ಇವುಗಳಲ್ಲಿ ರೂಪವು ಸ್ವರೂಪವನ್ನು ಗಣನೀಯವಾಗಿ ಪ್ರಭಾವಿಸುವಂಥ ಗಟ್ಟಿತನವನ್ನು ಹಲವೊಮ್ಮೆ ತಳೆದಿರುವುದೂ ಉಂಟು. ಆಗ ಇಲ್ಲಿ ಒಟ್ಟಂದದ ಶಾಸ್ತ್ರಪರಿಷ್ಕಾರಕ್ಕೆ ಸ್ವಲ್ಪ ತೊಂದರೆಯಾಗುತ್ತದೆ. ಆಗ ಮತ್ತೂ ಹೆಚ್ಚಿನ ವಿವೇಕದಿಂದ ರೂಪ-ಸ್ವರೂಪಗಳ ಚಂದ್ರ-ಚಂದ್ರಿಕಾನ್ಯಾಯವನ್ನು ಅರಿತು ನಿರ್ವಹಿಸಬೇಕು. ಇದು ಮನೋಬುದ್ಧಿಗಳಿಗೆ ಸಾಕಷ್ಟು ಶ್ರಮವೀಯುವ ಸ್ಪರ್ಧಾಹ್ವಾನ. ಆದುದರಿಂದ ವಿದ್ವದ್ರಸಿಕರು ಈ ಪರಿಯ ಸಾಧನಾವಸರದಲ್ಲಿ ತೋರಬಹುದಾದ ಕುಂದು-ಕೊರತೆಗಳನ್ನು ಸಹಾನುಭೂತಿಯಿಂದ ಕಾಣಬೇಕೆಂದು ಪ್ರಾರ್ಥನೆ.
ನಾಟ್ಯಶಾಸ್ತ್ರ-ನಾಟ್ಯವೇದ
ಭರತಮುನಿಯ “ನಾಟ್ಯಶಾಸ್ತ್ರ”ವು ಆರುಸಾವಿರ ಶ್ಲೋಕಗಳಿಗೂ ಮಿಕ್ಕ, ಮೂವತ್ತಾರು ಅಧ್ಯಾಯಗಳ ಮಹಾಗ್ರಂಥವಾದರೂ ಅದರ ಸ್ವರೂಪ ಸರಳ ಮತ್ತು ಸುಬೋಧ. ಹಾಗೆಂದ ಮಾತ್ರಕ್ಕೆ ವಿಷಯದ ವೈಪುಲ್ಯ-ಗಾಂಭೀರ್ಯಗಳಿಗೆ ಕೊರತೆಯೇನೂ ಆಗಿಲ್ಲ. ಆದರೆ “ಅಭಿನವಭಾರತಿ” ಹೆಜ್ಜೆಹೆಜ್ಜೆಗೂ ತನ್ನ ಪ್ರೌಢತೆಯ ಕಾರಣ ಓದುಗರನ್ನು ದಿಗ್ಭ್ರಮೆಗೊಳಿಸುತ್ತದೆ. ಇಂತಿದ್ದರೂ ಅಲ್ಲಲ್ಲಿ ಮಿಂಚುವ ಸ್ವೋಪಜ್ಞವೂ ಮೌಲಿಕವೂ ಆದ ಸಂಗತಿಗಳು ಈ ಶಾಸ್ತ್ರವನ್ನೊಂದು ದರ್ಶನದ ಮಟ್ಟಕ್ಕೆ ಏರಿಸುತ್ತವೆ. ವಿಶೇಷತಃ ಮೊದಲನೆಯ ಅಧ್ಯಾಯದಲ್ಲಿಯೇ ಅಭಿನವಗುಪ್ತನು “ನಾಟ್ಯಶಾಸ್ತ್ರ”ಕ್ಕೆ ಹವಣಿಸಿಕೊಡುವ ಹಿರಿಮೆ ಅನೂಹ್ಯ. ಅಭಿನವಗುಪ್ತನು ನಾಟ್ಯಶಾಸ್ತ್ರವನ್ನು “ನಾಟ್ಯವೇದ”ವೆಂದೂ ಹೆಸರಿಸುತ್ತಾನೆ. ಆದರೆ ಇವೆರಡೂ ಪರ್ಯಾಯಪದಗಳೆಂಬಂತೆ ಸ್ವೀಕಾರ್ಯವಲ್ಲವೆಂದು ಅವನ ಇಂಗಿತ: “ನಾಟ್ಯವೇದೋ ನಾಟ್ಯಶಾಸ್ತ್ರಮಿತಿ ಹಿ ಪರ್ಯಾಯೌ—ಏತದಪ್ಯಮನೋಹರಮ್” (ಸಂ.೧, ಪು.೩). ಏಕೆಂದರೆ ನಾಟ್ಯವೇದವು ಅವ್ಯಾಕೃತ; ಅದೊಂದು ಅನುಭೂತಿ, ಸಾಕ್ಷಾತ್ಕಾರ. ಆದರೆ ನಾಟ್ಯಶಾಸ್ತ್ರವು ವ್ಯಾಕೃತ; ಅದೊಂದು ಅಭಿವ್ಯಕ್ತಿ, ನಿರೂಪಣ. ಈ ತತ್ತ್ವವು ನಾಟ್ಯಶಾಸ್ತ್ರಾಧ್ಯಯನಕ್ಕೆ ನೇರವಾಗಿ ಅನಿವಾರ್ಯವೆಂಬಂತೆ ತೋರದಿದ್ದರೂ ಯಾವುದೇ ವಿದ್ಯೆಯ ಮೂರ್ತಾಮೂರ್ತಗಳ ಸ್ತರದಿಗ್ದರ್ಶನಕ್ಕೂ ಭಾರತೀಯದೃಷ್ಟಿಕೋನದ ಶಾಸ್ತ್ರಾಭಿಜ್ಞಾನಕ್ಕೂ ದೊಡ್ಡ ದಿಕ್ಸೂಚಿಯಾಗಿದೆ. ಬಹುಶಃ ಅಭಿನವಗುಪ್ತನು ನಾಟ್ಯವೇದದ ಮೂಲಕ ಸಾರ್ವಜನೀನವಾದ—ದೇಶ-ಕಾಲಾತೀತವೂ ಆದ—ಸೌಂದರ್ಯನಿರ್ಮಾಣ ಮತ್ತು ಸೌಂದರ್ಯಮೀಮಾಂಸೆಯ ಶಾಸ್ತ್ರಗಳ ಸಾಧ್ಯತೆಯನ್ನಿಲ್ಲಿ ಧ್ವನಿಸುತ್ತಿದ್ದಾನೆ. ಅದರ ಒಂದು ನಿರ್ದಿಷ್ಟಾಭಿವ್ಯಕ್ತಿಯೇ ಭರತೋದಿತವಾದ ನಾಟ್ಯಶಾಸ್ತ್ರವೆಂದು ತನ್ನಂತೆಯೇ ಸ್ಫುರಿಸುತ್ತದೆ. ಹೀಗೆಯೇ ಮುಂದುವರಿದು ಈ ವಿದ್ಯೆಯು ಕಲಾಜೀವಿಗಳಿಗೆ ಸ್ವಧರ್ಮಬೋಧಕಶಾಸ್ತ್ರವಾಗಿ ತತ್ತ್ವ-ಪ್ರಯೋಗಾನುಕೂಲಿಯೆಂದು ಕೂಡ ಒಕ್ಕಣಿಸುತ್ತಾನೆ: “ನಟಾನಾಂ ತಾವದೇತತ್ ಸ್ವಧರ್ಮಾಮ್ನಾಯತಯಾ ಅನುಷ್ಠೇಯಮೇವ” (ಸಂ.೧, ಪು.೩). ಈ ಮೂಲಕ ಕಲಾನಿರ್ಮಾಣ ಮತ್ತು ಕಲಾಸ್ವಾದನಗಳು ಸ್ವಧರ್ಮದ ಮಟ್ಟಕ್ಕೇರದಿದ್ದರೆ ಈ ವಿದ್ಯೆ ಅಷ್ಟಾಗಿ ಶೋಭಿಸದೆಂಬ ಧ್ವನಿಯೂ ಹೊರಡುತ್ತದೆ. ಎಲ್ಲ ಕಾಲದಲ್ಲಿಯೂ ಕಲಾವಿದರೆಂದೆನಿಸಿಕೊಳ್ಳುವರೂ ಕಲಾಸ್ವಾದಕರೆಂದು ಹೇಳಿಕೊಳ್ಳುವರೂ ಇಂಥ ಸ್ವಧರ್ಮನಿಷ್ಠೆಯನ್ನು ಕಲೆಯಲ್ಲಿ ಕಾಣಲಾಗದೆ ತಾವೂ ಸೋತು ಇತರರನ್ನೂ ನಿರಾಶೆಗೊಳಿಸುತ್ತಾರೆಂಬುದು ಕಲಾಜಗತ್ತಿನ ಕಠೋರವಾಸ್ತವ. ಇಲ್ಲಿ ಸ್ವಧರ್ಮವೆಂಬುದು ರಸನಿಷ್ಠೆಯಲ್ಲದೆ ಬೇರೆಯಲ್ಲ. ರಸವಾದರೋ ಆತ್ಯಂತಿಕವಾಗಿ ಸ್ವಸ್ವರೂಪವೇ. ಹೀಗೆ ಭಾರತೀಯವಿದ್ಯೆಗಳಿಗೆ ಅನಿವಾರ್ಯವಾದ ಬ್ರಹ್ಮವಿದ್ಯೆ ತಾನೇ ತಾನಾಗಿ ತನ್ನೆಡೆಯನ್ನು ತೋರಿಕೊಳ್ಳುತ್ತದೆ. ಇಲ್ಲಿಯೇ ಅಭಿನವಗುಪ್ತನು ರಸಾನುಭವವು ಉಂಟುಮಾಡುವ ಅರಿವು ಸಮ್ಯಗ್ಜ್ಞಾನ-ಸಂಶಯಜ್ಞಾನ-ಭ್ರಾಂತಿಜ್ಞಾನ-ಅಜ್ಞಾನಗಳೇ ಮುಂತಾದ ವಲಯಕ್ಕೆ ಸೇರದೆ “ಆಹಾರ್ಯಜ್ಞಾನ”ದ ಮಟ್ಟದ್ದೆಂದು ಸೂಚಿಸುವ ಮೂಲಕ ರಸವು ಜೀವನ್ಮುಕ್ತನ ಜಗದ್ದರ್ಶನದ ಆನಂದವನ್ನು ಹೋಲುವಂಥದ್ದೆಂದು ಧ್ವನಿಸಿರುವ ಪರಿ ಅನ್ಯಾದೃಶ:
“ತತ್ರ ನಾಟ್ಯಂ ನಾಮ ಲೌಕಿಕಪದಾರ್ಥವ್ಯತಿರಿಕ್ತಂ ತದನುಕಾರಪ್ರತಿಬಿಂಬಾಲೇಖ್ಯಸಾದೃಶ್ಯಾರೋಪಾಧ್ಯವಸಾಯೋತ್ಪ್ರೇಕ್ಷಾಸ್ವಪ್ನಮಾಯೇಂದ್ರಜಾಲಾದಿವಿಲಕ್ಷಣಂ ತದ್ಗ್ರಾಹಕಸ್ಯ ಸಮ್ಯಗ್ಜ್ಞಾನಭ್ರಾಂತಿಸಂಶಯಾನವಧಾರಣಾನಧ್ಯವಸಾಯವಿಜ್ಞಾನಭಿನ್ನವೃತ್ತಾಂತಾಸ್ವಾದನರೂಪಸಂವೇದನಸಂವೇದ್ಯವಸ್ತು ರಸಸ್ವಭಾವಮಿತಿ ವಕ್ಷ್ಯಾಮಃ” (ಸಂ.೧, ಪು.೩).
ಮುಂದೆ ನಾಟ್ಯವೇ ವೇದವೆಂದು ಹೇಳವ ಮೂಲಕ ಜ್ಞಾಪಕರೂಪದ ಶಾಸ್ತ್ರಕ್ಕಿಂತ ಅನುಭವರೂಪದ ಕಲೆಯೇ ವೇದವೆಂಬ ಧ್ವನಿಯನ್ನು ಹೊಮ್ಮಿಸಿರುವುದಂತೂ ಅವಿಸ್ಮಾರ್ಯ. ಏಕೆಂದರೆ ಯಾವುದೇ ಶಾಸ್ತ್ರವು ಅನುಭವವನ್ನು ಹಿಂಬಾಲಿಸಿ ಅನುಶಾಸನವಾಗಿ ಬರಬೇಕಲ್ಲದೆ ಗತ್ಯಂತರವಿಲ್ಲ: “ನಾಟ್ಯಮೇವ ವೇದ ಇತಿ ವ್ಯಾಖ್ಯಾಸ್ಯಾಮಃ” (ಸಂ.೧, ಪು.೪). ಅನಂತರ ದಶರೂಪಕಾತ್ಮತೆಯೇ ನಾಟ್ಯವೆಂದು ತಿಳಿಸುವ ಅಭಿನವಗುಪ್ತನು ಕವಿಯ ಕರ್ಮವು ದಶರೂಪಕನಿರ್ಮಾಣವೆಂದೂ ಇದು ಪರಮಾರ್ಥತಃ ನಟನೀಯವೇ ಆಗಿದೆಯೆಂದೂ ಒಕ್ಕಣಿಸುತ್ತಾನೆ[1]. ಈ ಮೂಲಕ ಎಲ್ಲ ಕಲಾಸೃಷ್ಟಿಯೂ ದೃಶ್ಯ-ಶ್ರವ್ಯಮಾಧ್ಯಮಗಳ ಸಂಕೀರ್ಣಾಭಿವ್ಯಕ್ತಿಯೆಂಬ ತತ್ತ್ವ ಸ್ಫುರಿಸುತ್ತದೆ. ಜೊತೆಗೆ, ಶ್ರವ್ಯಕಾವ್ಯದ ಲೇಖಕನೂ ತನ್ನ ಅಂತರಂಗದೊಳಗೆ ಅದನ್ನು ದೃಶ್ಯವಾಗಿಯೇ ರೂಪಿಸಿಕೊಂಡು ಮುಂದುವರಿಯುತ್ತಾನೆ; ಇದರ ಆಸ್ವಾದಕನೂ ಅದೇ ರೀತಿ ತನ್ನೊಳಗೆ ಚಿತ್ರಿಸಿಕೊಳ್ಳುತ್ತಾನೆಂಬ ತತ್ತ್ವವು ಕಟಾಕ್ಷಿತವಾಗಿದೆ: “ದಶರೂಪಕಮೇವ ನಾಟ್ಯಂ ... ಏವಂ ದಶರೂಪಕಂ ಕವಿನಾ ಕಾರ್ಯಮ್. ಏವಂ ಚ ನಟನೀಯಮಿತಿ” (ಸಂ.೧, ಪು. ೫). ಇಂಥ ತಥ್ಯವನ್ನು ವಾಮನಾದಿಗಳು ಈ ಮುನ್ನವೇ ಹೇಳಿದ್ದರೆಂಬುದು ಸ್ಮರಣೀಯ. ಆದರೆ ಅಭಿನವಗುಪ್ತನು ಮತ್ತೂ ಮುಂದುವರಿದು ನಾಟ್ಯವೇದಾನುಸಂಧಾನವು ಮೋಕ್ಷೋಪಾಯಗಳಲ್ಲಿ ಒಂದೆಂಬುದರ ಮಟ್ಟಿಗೆ ಕಲೆಯ ಎತ್ತರವನ್ನು ಗುರುತಿಸಿರುವುದು ಗಮನಾರ್ಹ: “ತದನೇನ ಪಾರಮಾರ್ಥಿಕಂ ಪ್ರಯೋಜನಮುಕ್ತಮ್” (ಸಂ.೧, ಪು.೫).
ಅನುಕರಣ-ಅನುಕೀರ್ತನ
ಭರತನು ನಾಟ್ಯವೆಂಬುದು ಮೂಜಗದ ಭಾವಗಳ ಅನುಕೀರ್ತನೆಯೆಂದು ಹೇಳಿಯೇ ಇದ್ದಾನೆ: “ತ್ರೈಲೋಕ್ಯಸ್ಯ ಸರ್ವಸ್ಯ ನಾಟ್ಯಂ ಭಾವಾನುಕೀರ್ತನಂ” (೧.೧೦೭). ಭರತಮುನಿಯ ರಂಗಪ್ರಯೋಗ “ಅಮೃತಮಥನ”ವನ್ನು ಕಂಡು ಅಲ್ಲಿ ತಮ್ಮ ಸೋಲಿನ ಚಿತ್ರಣವಿದೆಯೆಂದು ಕನಲಿದ ಅಸುರರಿಗೆ ಬ್ರಹ್ಮನು ಸಮಾಧಾನ ಹೇಳುವ ಮಾತಾಗಿ ಮೇಲಣ ವಾಕ್ಯವು ಬಂದಿದೆ. ಇದು ಕಲೆಯನ್ನು ಹೇಗೆ ಕಾಣಬೇಕೆಂಬ ವಿವೇಕವೂ ಆಗಿದೆ. ಇದನ್ನು ವಿಶೇಷವಾಗಿ ವ್ಯಾಖ್ಯಾನಿಸುವ ಅಭಿನವಗುಪ್ತನು ಕಲೆಯೆಂಬುದೆಂದೂ ಜಗತ್ತಿನ ಅನುಕರಣ ಮಾತ್ರವಲ್ಲ, ಅದು ಅನುಕೀರ್ತನ. ಅರ್ಥಾತ್, ಧ್ವನಿಪೂರ್ಣವಾದ, ವಿಶದವಾದ, ಉದಾತ್ತೀಕೃತವಾದ ರೂಪ. ಅನುಕರಣದಲ್ಲಿಯಾದರೋ ರೂಪಸ್ತರದ ವಕ್ರತಾನಿರ್ಮಾಣವೂ ಸ್ವರೂಪದತ್ತ ಕೊಂಡೊಯ್ಯುವ ಧ್ವನನಶೀಲತೆಯೂ ಅನಿವಾರ್ಯವಲ್ಲ. ಆದರೆ ಅನುಕೀರ್ತನಕ್ಕಿದು ಪರಮಾವಶ್ಯ. ಈ ಕಾರಣದಿಂದಲೇ ಅನುಕಾರಣಮಾತ್ರದ ಕಲೆಯು (ವಸ್ತುತಃ ಇದನ್ನು ಕಲಾಭಾಸವೆಂಬುದೇ ಯುಕ್ತ) ಸಹೃದಯನಲ್ಲಿ ರಾಗ-ದ್ವೇಷಗಳನ್ನುಂಟುಮಾಡುತ್ತದೆ; ಲೌಕಿಕವಾದ ಅರ್ಥ-ಕಾಮಗಳ ಕೆರಳು-ಹೊರಳುಗಳನ್ನು ಎಬ್ಬಿಸುತ್ತದೆ. ಆದರೆ ಅನುಕೀರ್ತನದಲ್ಲಿ ಇಂಥ ವಿಪರಿಣಾಮಗಳಿರುವುದಿಲ್ಲ. ಈ ಬಗೆಯ ವಿವೇಕವು ರುಚಿಶುದ್ಧಿಯುಳ್ಳವರಿಗೆ ಕುಶಲಕಲೆಗಳ (Craft) ಹಾಗೂ ಲಲಿತಕಲೆಗಳ (Fine Art) ನಡುವಣ ವ್ಯತ್ಯಾಸವನ್ನು ಮನಮುಟ್ಟಿಸದಿರದು:
“ತದಿದಮನುಕೀರ್ತನಮನುವ್ಯವಸಾಯವಿಶೇಷೋ ನಾಟ್ಯಾಪರಪರ್ಯಾಯಃ | ನಾನುಕಾರ ಇತಿ ಭ್ರಮಿತವ್ಯಂ ... ತಸ್ಮಾದನುವ್ಯವಸಾಯಾತ್ಮಕಂ ಕೀರ್ತನಂ ರೂಷಿತವಿಕಲ್ಪಸಂವೇದನಂ ನಾಟ್ಯಮ್ | ತದ್ವೇದನವೇದ್ಯತ್ವಾತ್ | ನ ತ್ವನುಕರಣರೂಪಮ್ ” (ಸಂ.೧, ಪು.೩೫-೩೬).
ಅಭಿನವಗುಪ್ತನು ಈ ವಿಷಯದಲ್ಲಿ ಇಂಥ ನಿಲವಿಗೆ ಬರಲು ತನ್ನ ಗುರುವಾದ ಭಟ್ಟತೌತನ “ಕಾವ್ಯಕೌತುಕ”ದ ಒಳನೋಟಗಳೇ ಕಾರಣವೆಂದು ಕಂಠೋಕ್ತವಾಗಿ ಹೇಳಿರುವುದೂ ಸ್ತವನೀಯ. ಅಭಿನವಗುಪ್ತನು ಭಾವಾನುಕೀರ್ತನವನ್ನು “ಅನುವ್ಯವಹರಣ”, “ಅನುವ್ಯವಸಾಯ” ಮತ್ತು “ಅನುದರ್ಶನ”ಗಳೆಂಬ ಪದಗಳಿಂದ ಪರ್ಯಾಯರೂಪವಾಗಿ ಹೇಳಿರುವುದೂ ಸ್ಮರಣೀಯ. ಇಲ್ಲೆಲ್ಲ ಸತತವಾಗಿ ಬಂದಿರುವ “ಅನು” ಎಂಬ ಉಪಸರ್ಗ ತುಂಬ ಅರ್ಥಪೂರ್ಣ. ಏಕೆಂದರೆ, ಕಲಾನುಭವವೆಂಬುದು ಒಂದು ಬಿಂದುಮಾತ್ರದ ಸಂಗತಿಯಲ್ಲ; ಅದೊಂದು ದೇಶ-ಕಾಲ-ವಸ್ತುಪರಿಚ್ಛೇದಗಳ ಅಖಂಡತೆಯಲ್ಲಿ ಸಾಗುವ ನಿರಂತರಕ್ರಿಯೆ. ಈ ಮಟ್ಟದ ತೊಡಗಿಕೊಳ್ಳುವಿಕೆಗೆ ರಸಿಕನು ಸಾಕಷ್ಟು ಪರಿಪಾಕಗೊಂಡಿರಬೇಕು ಮತ್ತು ಈ ಮಗ್ನತೆಯು ಅತಿರೇಕಾವರೇಕಗಳಿಂದ ಮುಕ್ತವೂ ಆಗಿರಬೇಕು. ಮುಂದೆ “ರಸವಿಘ್ನ”ಗಳನ್ನು ಕುರಿತು ಅಭಿನವಗುಪ್ತನು ವಿಸ್ತರಿಸುವ ಹಿನ್ನೆಲೆಯಲ್ಲಿ ಈ ಸಂಗತಿ ಪರಿಭಾವನೀಯ.
ಟಿಪ್ಪಣಿಗಳು
[1] ಅರಿಸ್ಟಾಟಲನಿಗೆ ಭೂಮಕಾವ್ಯಕ್ಕಿಂತ (Epic) ಗಂಭೀರನಾಟಕವು (Tragedy) ಹೇಗೆ ಪ್ರಿಯತರವಾಗಿತ್ತೋ ಹಾಗೆಯೇ ಅಭಿನವಗುಪ್ತನಿಗೆ ದೃಶ್ಯಕಾವ್ಯದ ಬಗೆಗೆ ಮಿಗಿಲಾದ ಅಭಿಮಾನವಿತ್ತು. ಅಭಿನವಭಾರತಿಯಲ್ಲಿ ಹಲವು ಕಡೆ ಅವನು ತನ್ನ ರೂಪಕಪಕ್ಷಪಾತವನ್ನು ಮೆರೆದಿದ್ದಾನೆ: “ಯಶ್ಚ ನಾಟಕಂ ಕುರ್ಯಾತ್ಸ ಏವ ಕವಿಃ” (ಸಂ.೩, ಪು.೭೬). “ಯೋ ಯಸ್ಮಿನ್ ಸಂಧೌ ಯೋಗ್ಯ ಇತಿ ... ಯೋಗ್ಯತಾಂ ಚ ಕವಿರೇವ ಜಾನಾತಿ | ನ ಚ ಮುಕ್ತಕಕವಿಃ, ಕಿಂ ತು ಪ್ರಬಂಧಯೋಜನಸಮರ್ಥಃ” (ಸಂ. ೩, ಪು. ೬೦). ಈ ವಿಚಾರವನ್ನು ನಾವು ಪ್ರಕೃತಲೇಖನದಲ್ಲಿಯೇ ಮುಂದೆ ವಿಶದವಾಗಿ ನೋಡುವ ಕಾರಣ ಸದ್ಯದಲ್ಲಿ ವಿಸ್ತರವು ಅನಪೇಕ್ಷಿತ.