...
 

“ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳು – 1

This article is part 1 of 2 in the series Abhinavagupta


ಸಕಲಶಾಸ್ತ್ರಸಮನ್ವಯಸೌರಭಂ
ನಿಖಿಲಚಾರುಕಲಾರುಚಿರಂ ಚಿರಮ್ |
ಅಭಿನವಾರ್ಥನಿಬೋಧನವಿಭ್ರಮಂ
ತ್ವಭಿನವಂ ಪ್ರಣತೋऽಸ್ಮಿ ಸುಮೋಪಮಮ್ ||

ಪ್ರವೇಶಿಕೆ

ಮಹಾಮಾಹೇಶ್ವರ ಅಭಿನಗುಪ್ತನು ಭಾರತೀಯಸೌಂದರ್ಯಶಾಸ್ತ್ರ ಹಾಗೂ ಕಾವ್ಯಮೀಮಾಂಸೆಗಳಿಗೆ ಕೊಟ್ಟ ಕೊಡುಗೆ ಲೋಕವಿಖ್ಯಾತ, ಸರ್ವದಾ ವಿದ್ವನ್ಮಾನಿತ ಮತ್ತು ಸಹೃದಯಶಿರೋಧಾರ್ಯ. ಮುಖ್ಯವಾಗಿ, ಇಂದು ಉಪಲಬ್ಧವಿರುವ ಆತನ “ಅಭಿನವಭಾರತೀ” ಹಾಗೂ “ಧ್ವನ್ಯಾಲೋಕಲೋಚನ”ಗಳು ಯಾವುದೇ ದೇಶ-ಕಾಲಗಳ ಕಲಾಸೌಂದರ್ಯಜಿಜ್ಞಾಸುಗಳಿಗೆ ಅನಿವಾರ್ಯಾಲಂಬನಗಳು. ಈತನು ಕಲಾಮೀಮಾಂಸೆಯನ್ನು ಕುರಿತು ಯಾವುದೇ ಸ್ವತಂತ್ರಗ್ರಂಥವನ್ನು ರಚಿಸದಿದ್ದರೂ ಭರತ ಮತ್ತು ಆನಂದವರ್ಧನರ ಮೇರುಕೃತಿಗಳಾದ ನಾಟ್ಯಶಾಸ್ತ್ರ ಮತ್ತು ಧ್ವನ್ಯಾಲೋಕಗಳ ಸ್ವೋಪಜ್ಞವ್ಯಾಖ್ಯಾಗಳಿಂದಲೇ ಶಾಶ್ವತಮಹತ್ತ್ವವನ್ನು ಗಳಿಸಿದ್ದಾನೆ. ಅವನಿಗಿಂತ ಮುನ್ನ ಈ ಎರಡು ಮಹಾಗ್ರಂಥಗಳಿಗೆ ವಿವರಣಕೃತಿಗಳಿದ್ದುವಾದರೂ ಈತನ ಬರೆಹಗಳ ಮುಂದೆ ಅವೆಲ್ಲ ಹತಪ್ರಭವಾಗಿ ನೇಪಥ್ಯಕ್ಕೆ ಸರಿದದ್ದು ಇದೀಗ ಇತಿಹಾಸ. ಯದ್ಯಪಿ ದಂಡಿ, ಭಾಮಹ, ವಾಮನ, ರುದ್ರಟ ಮುಂತಾದ ಇನ್ನಿತರ ಆಲಂಕಾರಿಕರ ವಿಶ್ರುತಗ್ರಂಥಗಳು ವ್ಯಾಖ್ಯಾನಾರ್ಹವಾಗಿದ್ದರೂ ಅಭಿನವಗುಪ್ತನು ನಾಟ್ಯಶಾಸ್ತ್ರ ಮತ್ತು ಧ್ವನ್ಯಾಲೋಕಗಳನ್ನೇ ಏಕೆ ವ್ಯಾಖ್ಯಾನಿಸಿದನೆಂಬ ಪ್ರಶ್ನೆಯನ್ನು ನಮಗೆ ನಾವು ಉತ್ತರಿಸಿಕೊಂಡಾಗಲೇ ಆತನ ಹಾಗೂ ಈ ಕೃತಿಗಳ ಮೌಲ್ಯ ಸ್ಫುಟವಾದೀತು.

ಕಲಾವಿಶ್ವಕೋಶಸದೃಶವಾದ ಭಾರತೀಯನಾಟ್ಯಶಾಸ್ತ್ರದ ಕೆಂದ್ರಬಿಂದು ರಸ. ಅಲ್ಲಿ ಆನುಷಂಗಿಕವಾಗಿ ಹಾಗೂ ವಿವಿಧಪರಿಮಾಣದಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ನಾಟ್ಯ, ಶಿಲ್ಪ, ಚಿತ್ರ ಮುಂತಾದ ಕಲೆಗಳ ರೂಪ-ರೇಖಾಪ್ರಸ್ತಾವಗಳಿದ್ದರೂ ಇವೆಲ್ಲವುಗಳ ಕಾರಣವೂ ಪರಿಣಾಮವೂ ಆದ ಆನಂದಸ್ವರೂಪದ ಸೌಂದರ್ಯಸ್ಪಂದವೆನಿಸಿದ ರಸಕ್ಕೆ ಪರಮಪ್ರಾಶಸ್ತ್ಯವಿರುವುದು ಸರ್ವವಿಧದಿಂದಲೂ ಯುಕ್ತ. ಈ ರೀತಿ ಕಂಡಾಗ ಸಕಲಕಲೆಗಳ ಪರಮಾರ್ಥ, ಅರ್ಥಾತ್ “ಅರ್ಥ” ಎಂಬುದು ರಸವೊಂದೇ ಹೌದು. ಇನ್ನುಳಿದಂತೆ ಆಯಾ ಕಲೆಗಳ ವಿಶಿಷ್ಟತೆಯೆಂಬುದೆಲ್ಲ ಅವುಗಳ ರಚನಾಶಿಲ್ಪಕ್ಕೆ ಮಾತ್ರ ಸೀಮಿತ. ಇಂಥ ರಚನೆಯ ಸ್ವಾರಸ್ಯವನ್ನು ಮುಂದಿನ ಸೌಂದರ್ಯಮೀಮಾಂಸಕರು “ವಕ್ರತೆ”ಯೆಂದು ಗುರುತಿಸಿ ಲಕ್ಷಣೀಕರಿಸಿದ್ದಾರೆ. ನಾಟ್ಯಶಾಸ್ತ್ರವು ಈ ಬಗೆಯ ಕಲಾಸಾಮಾನ್ಯದ ಆಕೃತಿಯನ್ನು ಆಯಾ ಕಲೆಗಳಿಗೆ ಅನ್ವಯಿಸುವಂತೆ ಬಗೆಬಗೆಯಾಗಿ ಹೇಳಿದೆಯಾದರೂ ಇವೆಲ್ಲವುಗಳ ಆಶಯವನ್ನು ರಸವೆಂದು ಸಾರಿ “ನ ಹಿ ರಸಾದೃತೇ ಕಶ್ಚಿದರ್ಥಃ ಪ್ರವರ್ತತೇ” ಎಂಬ ನಿರ್ಣಯಕ್ಕೆ ಬಂದಿದೆ. ಈ ದೃಷ್ಟಿಯಿಂದ ನಾಟ್ಯಶಾಸ್ತ್ರವು ಎಲ್ಲ ಕಲೆಗಳ “ಅರ್ಥ”ಕೇಂದ್ರೀಕೃತವಾದ ವಿದ್ಯಾಸಂಹಿತೆಯೆನ್ನಬೇಕು. ಆದುದರಿಂದ ಸಾಹಿತ್ಯ, ಸಂಗೀತ, ನೃತ್ಯ, ನಾಟ್ಯ, ಶಿಲ್ಪ, ಚಿತ್ರ ಮುಂತಾದ ವಿವಿಧಕಲೆಗಳ ಉಪಾಸಕರು ತಮ್ಮ ತಮ್ಮ ಕಲೆಗಳ ರಚನಾಧರ್ಮವನ್ನು ಅರಿಯಲು ಮಾತ್ರ ಈ ಮಹಾಗ್ರಂಥವನ್ನು ಸೀಮಿತಗೊಳಿಸಿಕೊಂಡರೆ ಅದು ಗುರುತರದೋಷವಾದೀತು. ಒಟ್ಟಿನಲ್ಲಿ ನಾಟ್ಯಶಾಸ್ತ್ರವು ವಿವಿಧಕಲೆಗಳ ರೂಪ-ಸ್ವರೂಪಗಳನ್ನು ಕುರಿತು ಚರ್ಚಿಸಿದ್ದರೂ ಸ್ವರೂಪದೃಷ್ಟಿಯಿಂದಲೇ ಅದು ನಿರಪೇಕ್ಷವೂ ಸಾರ್ವತ್ರಿಕವೂ ಸಾರ್ವಜನೀನವೂ ಆಗುತ್ತದೆಂಬುದು ತಾತ್ಪರ್ಯ. ಅಭಿನವಗುಪ್ತನೂ ಸೇರಿದಂತೆ ಆತನ ಪೂರ್ವಾಪರಸೂರಿಗಳೆಲ್ಲ ಈ ಸತ್ಯವನ್ನು ಮನಗಂಡ ಕಾರಣದಿಂದಲೇ ತಾವು ಮುಖ್ಯವಾಗಿ ಸಾಹಿತ್ಯದ ಹಿನ್ನೆಲೆಯಿಂದ ಬಂದವರಾದರೂ ಪ್ರಧಾನವಾಗಿ ರಂಗಭೂಮಿಗೆ ಸಂಬಂಧಿಸಿದ್ದೆಂಬ ರೀತಿ ತೋರುವ ನಾಟ್ಯಶಾಸ್ತ್ರವನ್ನು ತಮ್ಮ ವಿಚಾರಗಳ ಗೊತ್ತು-ಗುರಿಯನ್ನಾಗಿಸಿಕೊಂಡಿದ್ದರು.

ರಸವು ಸ್ವಪ್ನದಲ್ಲಿ ಕೂಡ ಸ್ವಶಬ್ದವಾಚ್ಯವಲ್ಲ, ಕೇವಲ ವಾಚ್ಯವೂ ಅಲ್ಲ. ಅದು ಸರ್ವಥಾ ವ್ಯಂಗ್ಯ. ಇದು ಸಾಧಿತವಾಗುವುದು ವಿವಿಧಕಲಾವಿದರು ತಮ್ಮ ತಮ್ಮ ಕಲಾಮಾಧ್ಯಮಗಳಲ್ಲಿ ವಿಭಾವ-ಅನುಭಾವ-ವ್ಯಭಿಚಾರಿಭಾವಾದಿಗಳ ಔಚಿತ್ಯಪೂರ್ಣಸಂಯೋಗವನ್ನು ಸಾಧಿಸುವಂಥ — ಅರ್ಥಾತ್ ವಕ್ರತಾಪರಿಪೂರ್ಣವಾದ — ಆಕೃತಿಯನ್ನು ನಿರ್ಮಿಸುವುದರಿಂದಲೇ. ವಿಭಾವಾನುಭಾವಾದಿಗಳೆಂದರೆ ಯಾವುದೇ ಕಲಾನಿರ್ಮಿತಿಯ ಕಾರ್ಯ-ಕಾರಣವ್ಯವಸ್ಥೆಯೆಂದು ತಾತ್ಪರ್ಯ. ನಾಟ್ಯಶಾಸ್ತ್ರವು ಯಾವುದೇ ಕಲಾಮಾಧ್ಯಮದಲ್ಲಿ ವಕ್ರತಾನಿರ್ಮಾಣಕ್ಕೆ ಬೇಕಾದ ವಿಭಾವಾನುಭಾವಸಾಮಗ್ರಿಯನ್ನು ಯಥೇಷ್ಟವಾಗಿ ಚರ್ಚಿಸಿದೆಯಾದರೂ ಇಂಥ ಸಾಮಗ್ರಿಯ ಸಂಯೋಗದಿಂದ ನಿಷ್ಪನ್ನವಾಗುವ ರಸವು ಅದೆಂತು ವ್ಯಂಗ್ಯೈಕಮಾತ್ರವೇದ್ಯವೆಂಬುದನ್ನು ಸ್ಪಷ್ಟಗೊಳಿಸಿಲ್ಲ. ಅಂದರೆ, ವಕ್ರತೆ (ಆಕೃತಿ, ರೂಪ) ಮತ್ತು ರಸಗಳ (ಆಶಯ, ಸ್ವರೂಪ) ನಡುವಣ ಸೇತುವೆಯನ್ನು ಸ್ಫುಟೀಕರಿಸಿಲ್ಲ. ಆದರೆ ರಸಾನುಭವವನ್ನು ಪಡೆದವರಿಗೆ, ಕಲಾನಿರ್ಮಿತಿಯನ್ನು ಪರಿಶೀಲಿಸಿದವರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಣದು. ಏಕೆಂದರೆ ಅವರು ತಮ್ಮ ಅರಿವಿಲ್ಲದೆಯೇ ರೂಪ ಮತ್ತು ಸ್ವರೂಪಗಳ ಸಂಧಿಸ್ಥಾನದಲ್ಲಿರುವ ವ್ಯಂಜನಾವ್ಯಾಪಾರವನ್ನು — ಇದೊಂದು ಬುದ್ಧಿಚಾತುರ್ಯಮಾತ್ರದ ಕಲ್ಪಿತವ್ಯವಸ್ಥೆಯಲ್ಲದೆ ಎಲ್ಲರ ಮನೋವ್ಯಾಪಾರದ ವಾಸ್ತವಸತ್ಯವೇ ಆಗಿರುವ ಕಾರಣ — ಅದು ಹೇಗೋ ಗ್ರಹಿಸಿರುತ್ತಾರೆ. ಆದರೆ, ಶಾಸ್ತ್ರವೊಂದರ ಸಮಗ್ರತೆಗೆ, ಅರಿವಿನ ಬೆಳೆವಣಿಗೆಯ ಅರ್ಥಪೂರ್ಣತೆಗೆ ಇಷ್ಟು ಮಾತ್ರದ ಸಮಾಧಾನ ಸಾಕಾಗದು. ಅದು ಸಾಂಗೋಪಾಂಗವಾದ ವಿಚಾರಕ್ರಮವನ್ನು ನಿರೀಕ್ಷಿಸುತ್ತದೆ. ಇದು ನಿಜಕ್ಕೂ ಕಷ್ಟಸಾಧ್ಯ. ಮಾತ್ರವಲ್ಲ, ಮಹತ್ಪ್ರತಿಭಾಮಾತ್ರಶಕ್ಯವೂ ಹೌದು. ಇಂಥ ಶಾಸ್ತ್ರಸಾಕ್ಷಾತ್ಕಾರವನ್ನು ನಮಗೆ ಮಾಡಿಕೊಟ್ಟವನು ಆನಂದವರ್ಧನ. ಈತನ ಮೂಲಕ ಯಾವುದೇ ಕಲೆಯ ರೂಪ-ಸ್ವರೂಪಗಳ ನಡುವಣ ಸೇತುವೆ ಸುಸ್ಥಿರವಾಯಿತು. ಇವನ ವ್ಯಂಜನಾವ್ಯಾಪಾರಮೂಲವಾದ ಧ್ವನಿಸಿದ್ಧಾಂತದ ಜೊತೆಗೇ ಔಚಿತ್ಯತತ್ತ್ವವೂ ಪ್ರಸ್ಫುಟವಾಗಿರುವ ಕಾರಣ ಭರತ ಮತ್ತು ಆನಂದವರ್ಧನರಿಬ್ಬರೂ ಭಾರತೀಯಕಲಾಮೀಮಾಂಸೆಯ ಪರಮಾಚಾರ್ಯರಾಗಿ ನಿಲ್ಲುತ್ತಾರೆ. ಮಾತ್ರವಲ್ಲ, ವಿಶ್ವಕಲಾಮೀಮಾಂಸೆಯ ಚರಮದ್ರಷ್ಟಾರರಾಗಿಯೂ ಸಲ್ಲುತ್ತಾರೆ[1].

ಶಂಕರಭಗವತ್ಪಾದರ ಪರಿಭಾಷೆಯನ್ನು ಬಳಸಿ ಹೇಳುವುದಾದರೆ, ರಸ ಮತ್ತು ಧ್ವನಿಗಳೆರಡೂ ಕಲಾಮೀಮಾಂಸೆಯ “ವಸ್ತುತಂತ್ರ”ವಲಯಕ್ಕೆ ಸೇರುತ್ತವೆ[2]. ಹೀಗಾಗಿ ಇವು ಸ್ವಯಂಸಿದ್ಧ ಮತ್ತು ಈ ಕಾರಣದಿಂದಲೇ ಸ್ವಾನುಭವಸಂವೇದ್ಯ. ಆದರೆ ಇವುಗಳ ವಿದ್ವತ್ಸಂಮತಪ್ರತಿಪಾದನೆಗೆ ಅಪಾರವಾದ ಶಾಸ್ತ್ರಪಾಂಡಿತ್ಯವೂ ಅದಕ್ಕಿಂತ ಮಿಗಿಲಾಗಿ ಕೇವಲಾನುಭವಪರಿಪಾಕವೂ ಅವಶ್ಯ. ಅದೆಷ್ಟೋ ಬಾರಿ ನಿಸ್ಸಾಮಾನ್ಯ-ನಿರ್ವಿಶಿಷ್ಟ-ಸಾರ್ವತ್ರಿಕಾನುಭವವನ್ನೂ ಆಯಾ ದೇಶ-ಕಾಲಗಳಲ್ಲಿ ಬೆಳೆದು ಬಂದ ಸಾಪೇಕ್ಷಶಾಸ್ತ್ರಗಳ (ಕೆಲವೊಮ್ಮೆ ಶಾಸ್ತ್ರಾಭಾಸಗಳ!) ನಿರೂಪಣಕ್ರಮದ ಮೂಲಕ ಪ್ರತಿಪಾದಿಸಬೇಕಾಗಿ ಬರುವುದು ಜ್ಞಾನನಿರ್ಮಾಣವೆಂಬ ಮಹಾಯಾತ್ರೆಯಲ್ಲಿ ಮತ್ತೆ ಮತ್ತೆ ಎಡತಾಕುವ ಅಗಟ-ವಿಗಟ. ವಿದ್ಯಾಕ್ಷೇತ್ರದಲ್ಲಿ ಇದೊಂದು ಬಗೆಯ ಅನಿವಾರ್ಯವಾಮಾಚಾರ, ಹಾಸ್ಯಾಸ್ಪದದ್ರಾವಿಡಪ್ರಾಣಾಯಾಮ. ಅದರೆ ಇಂಥ ಸುತ್ತುಬಳಸಾಟವು ಯಾವುದೇ ವಿದ್ಯೆಯನ್ನು ತಥಾಕಥಿತವಿದ್ವನ್ಮಾನಿತವಾಗಿ, ಸಾಂಸ್ಥಿಕರೂಪದಲ್ಲಿ ಪ್ರತಿಷ್ಠಾಪಿಸಲು ಅನಿವಾರ್ಯವೆಂಬಂತಾಗಿರುವುದು ಇತಿಹಾಸವೇದ್ಯ.  ನಮ್ಮ ಪರಂಪರೆಯು ಈ ಬಗೆಯ ಪ್ರತಿಪಾದನೆಗೆ ಬೇಕಾದ ಅರಿವನ್ನು ನ್ಯಾಯ-ಸಾಂಖ್ಯ-ವೈಶೇಷಿಕ-ಯೋಗ-ಮೀಮಾಂಸಾ-ತಂತ್ರ-ಜೈನ-ಬೌದ್ಧ-ವೇದಾಂತ ಮುಂತಾದ ದರ್ಶನಗಳ ನೆಲೆಯಲ್ಲಿ ವಿಸ್ತರಿಸಿಕೊಂಡಿದೆ. ಆದರೆ ಇಲ್ಲಿಯೂ ಸಾಕಷ್ಟು ತೊಡಕುಗಳುಂಟು. ಇಂತಿದ್ದರೂ ಭಾರತೀಯಕಲಾಮೀಮಾಂಸೆಯು ಬೆಳೆಯುವಲ್ಲಿ ನಮ್ಮ ವಿವಿಧದರ್ಶನಗಳು ಕೊಟ್ಟ ನೆರವನ್ನು ಮರೆಯುವಂತಿಲ್ಲ. ಆದರೆ ಕೇವಲಾದ್ವೈತವೇದಾಂತವೊಂದರಿಂದಲೇ ರಸ-ಧ್ವನಿಗಳ ಮಾತ್ರವಲ್ಲ, ಮತ್ತಾವುದೇ ಶಾಸ್ತ್ರದ ವಸ್ತುತಂತ್ರವನ್ನಾಗಲಿ ನಿಸ್ಸಂದಿಗ್ಧವಾಗಿ ನಿರೂಪಿಸಬಹುದೆಂಬುದು ಸರ್ವಥಾ ಸತ್ಯ. ಈ ಕಾಣ್ಕೆಯನ್ನು ಅನುಸರಿಸಿಯೇ ಪ್ರಕೃತ ನಾವೆಲ್ಲ ಸಾಗಬೇಕಿದೆ.

ರಸವು ನಮ್ಮವೇ ಆದ ಭಾವಗಳ ನಿಸ್ಸ್ವಾರ್ಥನಿರೀಕ್ಷಣೆಯ ಮೂಲಕ ಒದಗಿ ಬರುವ ಆನಂದ. ಇದು ಆತ್ಯಂತಿಕವಾಗಿ ಸ್ವಸ್ವರೂಪದ ಆಸ್ವಾದವೇ ಆಗಿರುವ ಕಾರಣ ಇದರ ಮೀಮಾಂಸೆಯಲ್ಲಿ ನಮ್ಮೆಲ್ಲರ ಸ್ವರುಪವನ್ನು ವಿವೇಚಿಸುವ ದರ್ಶನಶಾಸ್ತ್ರಗಳ ಪ್ರವೇಶ ಅನಿವಾರ್ಯವಾಯಿತು. ಇದರ ಆಧುನಿಕರೂಪಾಂತರವನ್ನು ಮನಃಶಾಸ್ತ್ರ, ಪರಮಾನಸಶಾಸ್ತ್ರ, ಚೈತನ್ಯಶಾಸ್ತ್ರ ಮುಂತಾದವುಗಳ ಮೇಲಾಟವಿರುವ ವಾರ್ತಮಾನಿಕಕಲಾಮೀಮಾಂಸೆಯಲ್ಲಿ ಕಾಣಬಹುದು. ಇನ್ನು ಧ್ವನಿಯೆಂಬುದು ರಸದ ಪ್ರತ್ಯಭಿಜ್ಞಾನವಾದ ಕಾರಣ ಅಭಿವ್ಯಕ್ತಿಮೀಮಾಂಸೆಯನ್ನು ನಡಸುವ ವ್ಯಾಕರಣದರ್ಶನದ ಆಲಂಬನವು ನಮ್ಮ ಕಲಾಮೀಮಾಂಸೆಯ ಪರಂಪರೆಯಲ್ಲಿ ಅನಿವಾರ್ಯವಾಯಿತು. ಅಭಿವ್ಯಕ್ತಿ ಮತ್ತು ಅವಗಮನಗಳ ವಿಷಯವಾಗಿ ನ್ಯಾಯ, ಮೀಮಾಂಸಾ, ತಂತ್ರ ಮತ್ತು ವೇದಾಂತಾದಿಗಳೂ ಸಾಕಷ್ಟು ಚರ್ಚಿಸುವ ಕಾರಣ ಅವುಗಳ ಪ್ರವೇಶಕ್ಕೂ ಇಲ್ಲಿ ಎಡೆಯಾಯಿತು. ದಿಟವೇ, ಕೇವಲಾದ್ವೈತಾನುಪ್ರಾಣಿತವಾದ ವ್ಯಾಕರಣದರ್ಶನವೊಂದೇ ಈ ಕೆಲಸವನ್ನು ಸಮರ್ಪಕವಾಗಿ ಮಾಡಬಲ್ಲುದಾದರೂ ವಿವಿಧದರ್ಶನಗಳ ಅಭಿನಿವೇಶವುಳ್ಳ ಆಲಂಕಾರಿಕರ ಮನೋಧರ್ಮಗಳಿಗನುಸಾರ ಆಯಾ ದರ್ಶನಗಳ ದಬ್ಬಾಳಿಕೆ ಇಲ್ಲಿ ನಡೆದಿರುವುದು ಸುವೇದ್ಯ. ಆದರೆ ಆನಂದವರ್ಧನನು ಮಾತ್ರ ಮುಖ್ಯವಾಗಿ ವೇದಾಂತಾವಿರೋಧಿಯಾದ ವ್ಯಾಕರಣದರ್ಶನವನ್ನು ನಚ್ಚಿ ಮಿಕ್ಕ ದರ್ಶನಾಭಿನಿವಿಷ್ಟರಿಗೂ ಸಮಜಾಯಿಷಿ ಹೇಳಿರುವುದಿಲ್ಲಿ ಸ್ಮರಣೀಯ. ಇಂಥ ಚರ್ಚೆಗಳ ಆಧುನಿಕಾವತಾರವನ್ನು ನಾವು ಭಾಷಾಶಾಸ್ತ್ರ ಮತ್ತು ಅವಗಮನವಿಜ್ಞಾನದ ವಿವಿಧಾಧಿಕರಣಗಳಲ್ಲಿ ಕಾಣಬಹುದು[3].

Abhinavagupta “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳು – 1 abhinavagupta22

Abhinavagupta. Courtesy: Google Image Search

ಅಭಿನವಗುಪ್ತನ ಮಹತ್ವವಿರುವುದು ರಸ ಮತ್ತು ಧ್ವನಿತತ್ತ್ವಗಳೆರಡನ್ನೂ ದೃಢವಾದ ಆದರ್ಶನಿಷ್ಠತರ್ಕಶೈಲಿಯ ಪ್ರತಿಪಾದನೆಯಲ್ಲಿ. ಈ ಮಹಾಕಾರ್ಯವನ್ನು ಸಾಧಿಸುವಾಗಲೇ ಇವುಗಳನ್ನು ಕುರಿತು ಅವನ ಕಾಲದ ವಾಸ್ತವವಾದಿವಿದ್ವಾಂಸರು ತೋರಿದ್ದ ಪ್ರತಿರೋಧವನ್ನು ಸಮರ್ಥವಾಗಿ ಉತ್ತರಿಸುವ ಆನುಷಂಗಿಕಕ್ರಿಯೆಯೂ ನಡೆಯಿತು. ಧ್ವನಿತತ್ತ್ವವನ್ನೇನೋ ಈ ಮುನ್ನ ಸ್ವಯಂ ಆನಂದವರ್ಧನನು ಪ್ರೌಢವಿದ್ವದ್ರೀತಿಯಲ್ಲಿಯೇ ತೃಪ್ತಿಕರವಾಗಿ ಪ್ರತಿಪಾದಿಸಿದ್ದನು[4]. ಆದರೆ “ವಿದ್ವಾಂಸೋ ಬ್ರಹ್ಮರಾಕ್ಷಸಾಃ” ಎಂಬ ವಾಲ್ಮೀಕಿಯ ನುಡಿಯಂತೆ ಪ್ರತಿನಿವಿಷ್ಟಮತಿಗಳಾದ ಪಂಡಿತಂಮನ್ಯರಿಗೆ ಮತ್ತೆ ಮತ್ತೆ ಪಾಠಗಳನ್ನು ಹೇಳುತ್ತಲೇ ಇರಬೇಕು. ಇದಕ್ಕಾಗಿ ಅವರೊಪ್ಪುವ ಪದ-ವಾಕ್ಯ-ಪ್ರಮಾಣಪಾರಾವಾರೀಣರೇ ಆಗಬೇಕು. ಇಂಥ ವಿದ್ವತ್ತೆಯೂ ಆಸ್ಥೆಯೂ ಇದ್ದ ವ್ಯಕ್ತಿ ಅಭಿನವಗುಪ್ತ. ಅವನ ವಾದಕೌಶಲಕ್ಕಿಂತ ಮಿಗಿಲಾಗಿ ವಿದ್ಯಾಪ್ರಗಲ್ಭತೆಯೇ ಆ ಕಾಲದ ಪ್ರತಿವಾದಿಗಳನ್ನು ಅಂಜಿಸಿತ್ತೆಂದರೂ ಸರಿ. ವಿಶ್ರುತವಾದ ವಿದ್ವದ್ವಂಶದಲ್ಲಿ ಜನನ, ಯೋಗಿನಿಯಲ್ಲಿಯೇ ಹುಟ್ಟಿದವನೆಂಬ ಹೆಚ್ಚಳ, ಬ್ರಹ್ಮಚರ್ಯಾವ್ರತಿಷ್ಠನೆಂಬ ಬಲ್ಮೆ, ಹಲವು ಹತ್ತು ವಿಖ್ಯಾತಗುರುಗಳ ಬಳಿಯಲ್ಲಿ ಅನೇಕಶಾಸ್ತ್ರಗಳ ತಲಸ್ಪರ್ಶಿಯಾದ ವ್ಯಾಸಂಗದ ಸಂಗ, ಅಸಂಖ್ಯತಂತ್ರ-ಯೋಗಸಾಧನೆಗಳ ಅಗ್ಗಳಿಕೆ, ಆತ್ಮಸಾಕ್ಷಾತ್ಕೃತನೆಂಬ ಮನ್ನಣೆ,  ನಿರಂಕುಶವಾದ ವಾದವಾಗ್ಧೋರಣೆ, ಬಹುಶಿಷ್ಯಸಮಾರಾಧನೆ, ಸಜೀವವಾಗಿಯೇ ಗುಹಾಪ್ರವೇಶದ ಮೂಲಕ ಕಣ್ಮರೆಯಾದವನೆಂಬ ಮಾಹಾತ್ಮ್ಯ ಮುಂತಾದ ಮತ್ತೆಷ್ಟೋ ಸಂಗತಿಗಳು ಈ ನಿಟ್ಟಿನಲ್ಲಿ ಸಾರ್ಥಕವಾಗಿಯೇ ದುಡಿದಿದ್ದುವೆನ್ನಬಹುದು.

“ಲೋಚನ”ವು ಧ್ವನ್ಯಾಲೋಕದ ವ್ಯಾಖ್ಯಾನಗಳಲ್ಲೊಂದೆಂದು ಹೆಸರಾಗಿದ್ದರೂ ಅದಕ್ಕೆ ಸ್ವತಂತ್ರಕೃತಿಯೊಂದರ ಸ್ಥಾನ-ಮಾನಗಳುಂಟೆಂದು ವಿದ್ವಲ್ಲೋಕದ ವಿಶ್ವಾಸ. ಇದಕ್ಕೆ ಕಾರಣ ಆನಂದವರ್ಧನನು ಅದೆಷ್ಟೋ ಕಡೆ ಸೂಚ್ಯವಾಗಿ, ವಾಚ್ಯವಾಗಿ, ಅನುಕ್ತವೆಂಬಂತೆಯೂ ಹೇಳಿದ ಏನೆಲ್ಲ ಸಂಗತಿಗಳನ್ನು ಲೋಚನವು ಸುನಿಶಿತವಾಗಿ, ಸುನಿಪುಣವಾಗಿ, ಸುವಿಸ್ತಾರವಾಗಿ ಹಾಗೂ ಸೋದಾಹರಣವಾಗಿ ಪ್ರತಿಪಾದಿಸುವುದಾಗಿದೆ. ಆದುದರಿಂದಲೇ ಇದರ ಮಹತ್ತ್ವವನ್ನು ಕೆಲಮಟ್ಟಿನ ಪ್ರತ್ಯೇಕಾವಧಾನದಿಂದ ನಿರೂಪಿಸಬೇಕಿದೆ. ಪ್ರಕೃತೋದ್ಯಮವು ಈ ನಿಟ್ಟಿನಲ್ಲೊಂದು ನಮ್ರೋಪಕ್ರಮ.

[1] ದಿಟವೇ, ಈ ಸಾಲಿಗೆ ಕುಂತಕ ಮತ್ತು ಅಭಿನವಗುಪ್ತರನ್ನೂ ಸೇರಿಸಬಹುದು. ಆದರೆ, ಅವರ ಮಹತ್ತ್ವವೆಲ್ಲ ಆನಂದವರ್ಧನ ಮತ್ತು ಭರತರ ಮೂಲಸ್ಫೂರ್ತಿಯಿಂದಲೇ ಹರಳುಗಟ್ಟಿದೆಯೆಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಅವರಿಬ್ಬರೂ ಭರತಾನಂದವರ್ಧನರ ಅಡಿಜಾಡಿನಲ್ಲಿ ನಡೆದವರೆಂದರೆ ತಪ್ಪಾಗದು. ಅಲ್ಲದೆ, ಅಭಿನವಗುಪ್ತನ ಹಿನ್ನೆಲೆಯನ್ನು ಗಮನಿಸಿದಾಗ ಆನಂದವರ್ಧನೋತ್ತರಕಾಲದ ಕಲಾಮೀಮಾಂಸಾಚಾರ್ಯರ ದೊಡ್ಡ ಪಡೆಯೇ ಆತನ ವಿದ್ಯಾಸ್ರೋತಸ್ಸಗಿತ್ತೆಂಬುದು ಸ್ಪಷ್ಟ. ಈ ಮಟ್ಟದ ಹಿನ್ನೆಲೆ ಭರತಾನಂದವರ್ಧನರದಲ್ಲ. ಇನ್ನು ಕುಂತಕನ ಬಗೆಗೆ ಹೇಳುವುದಾದರೆ ಆತನ ಗ್ರಂಥದ ತೋರಣ-ಹೂರಣಗಳ ಹೆಚ್ಚಿನ ಪಾಲು ಆನಂದವರ್ಧನನದೇ ಯೋಗದಾನ. ಹೀಗಾಗಿ ಭಾರತೀಯಕಲಾಮೀಮಾಂಸೆಯ ದೇವಾಲಯಮೂಲಮೂರ್ತಿಗಳಾಗಿ ಭರತಾನಂದವರ್ಧನರು ಮನಂಗೊಳಿಸಿದರೆ ಉತ್ಸವಮೂರ್ತಿಗಳಾಗಿ ಕುಂತಕಾಭಿನವಗುಪ್ತರು ಕಂಗೊಳಿಸುತ್ತಾರೆ.

[2] ಇವುಗಳೊಟ್ಟಿಗೆ ವಕ್ರತೆ ಮತ್ತು ಔಚಿತ್ಯಗಳೂ ಸೇರುತ್ತವೆಂಬುದು ಸತ್ಯ. ಆದರೆ ಇವೆರಡನ್ನು ಸಾಕ್ಷಾತ್ಕರಿಸಿಕೊಳ್ಳುವುದು ಸಾಮಾನ್ಯರಿಗೂ ಕೆಲಮಟ್ಟಿಗೆ ಸುಲಭ. ಏಕೆಂದರೆ, ಆಕೃತಿಸ್ತರಸೀಮಿತವಾದ ವಕ್ರತೆಯು ಬಹಿಃಪ್ರಮಾಣಗಳಿಂದಲೇ ಸ್ಥಾಪಿತವಾಗುತ್ತದೆ. ಇನ್ನು ಔಚಿತ್ಯವು ಸಾಮಾನ್ಯವಿವೇಕದ ಮೂಲಕವೇ ಅರಿವಿಗೆಟುಕುತ್ತದೆ. ಆದರೆ ರಸ-ಧ್ವನಿಗಳ ಸಂಗತಿ ಹೀಗಲ್ಲ. ಇಲ್ಲಿ ಮನಃಶಾಸ್ತ್ರ  (psychological sciences) ಮತ್ತು ಅವಗಮನಶಾಸ್ತ್ರಗಳ (cognitive sciences) ತುಂಬ ವಿಶದವಾದ ಪರಾಮರ್ಶೆ ಅತ್ಯಾವಶ್ಯಕ. ಇದಾದರೋ ಅಪಾರವಿದ್ವತ್ಪರಿಶ್ರಮಸಾಧ್ಯ. ಇಲ್ಲಿ ಸಾಮಾನ್ಯರ ಸ್ಥೂಲತರ್ಕ ಸಾಕಾಗದು. ಹಾಗೆಂದಮಾತ್ರಕ್ಕೆ, ಇದೆಲ್ಲ ಸಾಮಾನ್ಯಾನುಭವದೂರವೆಂದಾಗಲಿ, ಶಾಸ್ತ್ರಮಾತ್ರಜಾಟಿಲ್ಯಜೀವಿತವೆಂದಾಗಲಿ ತಾತ್ಪರ್ಯವಲ್ಲ. ಇಲ್ಲೆಲ್ಲ ಸಲ್ಲುವುದು ನಿಸ್ಸಾಮಾನ್ಯ-ನಿರ್ವಿಶಿಷ್ಟ-ಸಾರ್ವತ್ರಿಕಾನುಭವವೊಂದೇ ಆದರೂ ಅದನ್ನು ತುಂಬ ಸೂಕ್ಷ್ಮಮತಿಗಳಷ್ಟೇ ಪ್ರತ್ಯಭಿಜ್ಞಾನಪುರಸ್ಸರವಾಗಿ ಚರ್ಚಿಸಬಲ್ಲರು. ಇದು ಎಣೆಮೀರಿದ ಚಿತ್ತಾವಧಾನವನ್ನೂ ಧೀನೈಶಿತ್ಯವನ್ನೂ ಮಿಗಿಲಾದ ಪ್ರಾಮಾಣಿಕತೆಯನ್ನೂ ನಿರೀಕ್ಷಿಸುವ ಕಾರಣ ಪೂರ್ವೋಕ್ತಾಭಿಪ್ರಾಯವನ್ನು ಹೇಳುವುದಾಯಿತು.

[3] ವೇದಾಂತವನ್ನಾಗಲಿ, ಭಾರತೀಯಕಲಾಮೀಮಾಂಸೆಯನ್ನಾಗಲಿ ವರ್ತಮಾನಜಗತ್ತಿಗೆ ಸಂಗತಗೊಳಿಸಬೇಕೆಂಬ ಹಂಬಲವಿರುವ “ಆಧುನಿಕತಾ”ಮುಗ್ಧರು ಇವನ್ನೆಲ್ಲ ನವನವೀನವಿಜ್ಞಾನಾದಿಶಾಸ್ತ್ರಗಳ ಮೂಲಕ, ಪ್ರಯೋಗಗಳ ಮೂಲಕ ಸಾಬೀತುಮಾಡಬೇಕೆಂಬ ಹಪಹಪಿಕೆಯಲ್ಲಿರುತ್ತಾರೆ. ಆದರೆ, ಇದಾವುದೂ ಬೇಕಿಲ್ಲದ ಹೊರೆ. ಏಕೆಂದರೆ, ವೇದಾಂತದ ಆತ್ಮತತ್ತ್ವವಾಗಲಿ, ಕಲೆಯ ರಸಧ್ವನಿತತ್ತ್ವವಾಗಲಿ ಆದ್ಯಂತ ನಮ್ಮೆಲ್ಲರ ಆನುಭವಿಕಾಸ್ತಿತ್ವ ಮತ್ತದರ ಸಂವೇದನೆ-ಆನಂದಗಳನ್ನು ಕುರಿತಿದೆಯೇ ಹೊರತು ಮತ್ತಾವ ಭೌತಿಕಸತ್ತೆಯನ್ನಾಗಲಿ, ವಿಚಾರವನ್ನಾಗಲಿ, ತನ್ಮೂಲಕ ಲಭಿಸುವ ಸೌಖ್ಯವನ್ನಾಗಲಿ ಅಲ್ಲ. ವಿಜ್ಞಾನಾದಿಶಾಸ್ತ್ರಗಳು ಪ್ರಮಾಣ-ಪ್ರಮೇಯಪುರಸ್ಸರವಾದ ವ್ಯವಸ್ಥೆಯಲ್ಲಿ ಸಂಗತವಾದ ಪಾತ್ರವನ್ನು ವಹಿಸಬಲ್ಲುವಲ್ಲದೆ ಕೇವಲ ಪ್ರಮಾತೃನಿಷ್ಠವಾದ ಸಂವೇದನೆಯಲ್ಲಿ ಅಲ್ಲ. ಸೋದಾಹರಣವಾಗಿ ಹೇಳುವುದಾದರೆ, ಬಹ್ವಾಯಾಮಗಳ ಅತ್ಯಾಧುನಿಕತಾಂತ್ರಿಕಕೌಶಲದ ಚಲನಚಿತ್ರವೊಂದನ್ನು ಆಸ್ವಾದಿಸಿ ನೋಡುವವರಿಗೆ ಅದರ ವಿಜ್ಞಾನ-ತಂತ್ರಜ್ಞಾನಮೂಲದ ಅರಿವು ಅನವಶ್ಯ. ಮಾತ್ರವಲ್ಲ, ಉತ್ಕಟಾಸ್ವಾದಕಾಲದಲ್ಲಿ ಇಂಥ ಅರಿವಿನ ಅಪೇಕ್ಷೆ-ಊಹೆಗಳೂ ತಲೆದೋರುವುದಿಲ್ಲ. ಅಲ್ಲದೆ, ಈ ಬಗೆಯ ಅರಿವಿನಿಂದ ಆಸ್ವಾದಕ್ಕೆ ಮೌಲ್ಯಾತ್ಮಕವಾದ ಯಾವುದೇ ಬಗೆಯ ಹೆಚ್ಚಳ ಉಂಟಾಗುವುದಿಲ್ಲ. ಇದೇನಿದ್ದರೂ ಇಂಥ ಚಲನಚಿತ್ರನಿರ್ಮಾತೃಗಳಿಗೆ ಪ್ರಯೋಜಕಸಂಗತಿ. ರಸಿಕರಿಗೆ ಅದು ಪ್ರತ್ಯೇಕವೇ ಆದ ಕೌತುಕಾಸ್ವಾದದ ವಿಷಯವಾಗಬಹುದು. ಆದರೆ, ಎಂದಿಗೂ ಚಲನಚಿತ್ರದ ಮೂಲಕ ಪ್ರತೀತವಾಗುವ ಪಾತ್ರಗಳ ಚಿತ್ತವೃತ್ತಿಪ್ರತ್ಯಭಿಜ್ಞಾನಕ್ಕೂ ತನ್ಮೂಲಕ ತಮ್ಮ ತಮ್ಮ ಭಾವಗಳ ನಿಸ್ಸ್ವಾರ್ಥಾಸ್ವಾದಕ್ಕೂ ಉತ್ತರವಾದಿಯಾಗುವುದಿಲ್ಲ. ಮತ್ತೂ ಸರಳವಾಗಿ ಹೇಳುವುದಾದರೆ, ಭೋಜನಪದಾರ್ಥವೊಂದರ ರುಚಿ ಅದರ ತಯಾರಿಕೆಯ ಹಿಂದಿರುವ ತಂತ್ರಜ್ಞಾನವನ್ನು ಅರಿತಾಗ ಮಾತ್ರ ಎಂಬುದು ಹೇಗೆ ಅಸಂಗತವೋ ಹಾಗೆಯೇ ಇಲ್ಲಿ ಕೂಡ ಸಲ್ಲುತ್ತದೆ. ಇಂತಿದ್ದಲ್ಲಿ ರಸ-ಧ್ವನಿತತ್ತ್ವಗಳನ್ನು ವೇದಾಂತ-ವ್ಯಾಕರಣದರ್ಶನಗಳ ಹಿನ್ನೆಲೆಯಲ್ಲಾದರೂ ಏಕೆ ಚರ್ಚಿಸಬೇಕೆಂಬ ಪ್ರಶ್ನೆ ಏಳದಿರದು. ಇದಕ್ಕೆ ಉತ್ತರ ತುಂಬ ಸ್ಪಷ್ಟ ಹಾಗೂ ಸರಳ: ಈ ಶಾಸ್ತ್ರಗಳು ಪ್ರಮಾತೃನಿಷ್ಠವಾಗಿರುವುದರಿಂದಲೇ. ಅರ್ಥಾತ್, ಸಂವೇದನಮಾತ್ರವನ್ನು ಅನ್ಯಪರಿಕರಗಳಿಲ್ಲದೆ ಅನ್ಯವಿಚಾರಗಳ ಸೋಂಕೂ ಇಲ್ಲದೆ ಕೇವಲ ಸ್ವಾನುಭವಶೋಧನರೂಪವಾಗಿ — ಅದೂ ನಿರ್ವಿಶೇಷ-ಸಾರ್ವತ್ರಿಕಾನುಭವದ ಒರೆಗಲ್ಲಿಗೆ ಸಲ್ಲುವಂತಾಗಿ — ಪರಿಶೀಲಿಸಿಕೊಂಡಾಗಲಷ್ಟೇ ಈ ವಿದ್ಯೆಗಳ ಅರ್ಥಪೂರ್ಣತೆ. ಇದನ್ನು ಬಲ್ಲವರಿಗೆ ಭಾರತೀಯವಿದ್ಯೆಗಳಲ್ಲೊಂದಾಗಿ ಬೆಳೆದ ಆಯುರ್ವೇದದಂಥ ಶಾಸ್ತ್ರವಾಗಲಿ, ಗಣಿತೀಯವಾದ ಜ್ಯೋತಿರ್ವಿದ್ಯೆಯಾಗಲಿ ತತ್ತತ್ಸಂಬಂಧಿತವಾದ ಆಧುನಿಕವಿಜ್ಞಾನಸಂಶೋಧನೆಗಳ ಹೊಸಬೆಳಕಿನಲ್ಲಿ ತಮ್ಮನ್ನು ತಾವು ಪರಿಷ್ಕರಿಸಿಕೊಳ್ಳಬೇಕಿರುವಂತೆ ವೇದಾಂತ ಮತ್ತು ಸೌಂದರ್ಯಶಾಸ್ತ್ರಗಳು ವರ್ತಿಸಬೇಕಿಲ್ಲವೆಂಬುದು ಸ್ಫುಟವಾಗುತ್ತದೆ. ಆಯುರ್ವೇದ, ಗಣಿತೀಯಜ್ಯೋತಿರ್ವಿದ್ಯೆ ಮುಂತಾದ ನಮ್ಮ ಶಾಸ್ತ್ರಗಳಿರಲಿ, ಆಧುನಿಕವಿಜ್ಞಾನವಿದ್ಯೆಗಳು ಕೂಡ ಆತ್ಯಂತಿಕವಾಗಿ ಜಗನ್ನಿಷ್ಠವಾದ ಕಾರಣ, ಜಗತ್ತಿನ ಬಗೆಗೆ (ಜಗತ್ತೆಂದರೆ ಭೌತಿಕವಾದ ನಮ್ಮ ದೇಹವೂ ಹೌದು) ನಮ್ಮ ಅರಿವು ಹೆಚ್ಚಿದಂತೆ ಅವುಗಳಲ್ಲಿ ಯಥೋಚಿತಪರಿಷ್ಕಾರಗಳೂ ಅವಶ್ಯ. ಆದರೆ, ಆತ್ಮವಿದ್ಯೆ ಮತ್ತು ರಸವಿದ್ಯೆಗಳ ಜಾಡು ಹೀಗಲ್ಲ. ಇವು ನಮ್ಮೆಲ್ಲರಿಗೂ  ಸ್ವಸಂವೇದ್ಯವಾದ ಕಾರಣ ಸರ್ವದಾ ಸರ್ವಥಾ ಸ್ವಯಂಪೂರ್ಣ. ಕೇವಲ ಮನುಷ್ಯನ ಭಾವೈಕಸ್ವಭಾವವು ಮಾರ್ಪಟ್ಟಾಗಲೇ ರಸವಿದ್ಯೆಗೆ ತಿದ್ದುಪಡಿ. ಇನ್ನು ಆತ್ಮವಿದ್ಯೆಯ ವಿಷಯದಲ್ಲಂತೂ ನಮ್ಮೆಲರ ಅಸ್ತಿತ್ವವು ನಾಸ್ತಿತ್ವವಾದಾಗಲೇ ಪರಿಷ್ಕಾರಕ್ಕೆ ಪ್ರವೇಶ. ಆದರೆ ಇದು ಅಸಂಭಾವ್ಯ. ವೇದಾಂತವು ನಮ್ಮ ಆತ್ಯಂತಿಕಸ್ವರೂಪದ ಮೀಮಾಂಸೆಯಾದರೆ ಭಾರತೀಯಸೌಂದರ್ಯಶಾಸ್ತ್ರವು ಆನಂದೈಕಪ್ರವಣವಾದ ನಮ್ಮ ಆತ್ಯಂತಿಕಚಿತ್ತವೃತ್ತಿಗಳ ಮೀಮಾಂಸೆ. ಹೀಗಾಗಿ ಇಲ್ಲಿ ದೇಶ-ಕಾಲಬಾಧಿತತ್ವವು ತಲೆದೋರದು. ಇದು ಎಂದೋ ಆವಿರ್ಭವಿಸಿ ದಾಖಲೆಗೊಂಡ ಈ ವಿದ್ಯೆಗಳ ಸ್ಥಗಿತತೆಯಲ್ಲ; ಪ್ರತ್ಯುತ ಪರಿಪೂರ್ಣತೆ.

ಈ ಬಗೆಯ ಶಾಸ್ತ್ರಸದ್ಭಾವದ ಅಂತರ್ನಿಶ್ಚಯವು ಅದೆಷ್ಟೋ ಬಾರಿ ನಮ್ಮ ಅಭಿಜಾತಪರಂಪರೆಯಲ್ಲಿಯೂ ಲುಪ್ತವಾಗಿರುವುದನ್ನು ಸಖೇದಾಶ್ಚರ್ಯದಿಂದ ನಾವು ಕಾಣಬಹುದೆಂಬುದರ ಬಳಿಕ ಅಪ್ಪಟ ಭೌತವಾದಿಗಳೂ ಪ್ರಯೋಜನಮಾತ್ರಪರ್ಯಾಪ್ತರೂ ಆದ ಆತ್ಮೇತರ, ಅರ್ಥಾತ್ ರಸೇತರವಾದಿಗಳ ಬಗೆಗೆ ಹೇಳುವುದಾದರೂ ಏನಿದೆ? ಒಂದು ಉಜ್ಜ್ವಲೋದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದಾದರೆ ಅದು ಹೀಗೆ: ಸೌಂದರ್ಯಮೀಮಾಂಸೆಯನ್ನು ಕುರಿತು ಆದರ್ಶಭೂಮಿಕೆಯಲ್ಲಿ ವ್ಯವಹರಿಸುವ ಧ್ವನಿಸಿದ್ಧಾಂತವು ಮುನ್ನೆಲೆಗೆ ಬರುತ್ತಿದ್ದಂತೆಯೇ ವಾಸ್ತವಭೂಮಿಕೆಯ ದರ್ಶನಗಳಾದ ನ್ಯಾಯ-ಸಾಂಖ್ಯ-ಮೀಮಾಂಸಾ ಮುಂತಾದವು ಸ್ವಾಭಿನಿವೇಶಕ್ಕನುಸಾರವಾಗಿ ಅದರ ವಿರುದ್ಧ ತಿರುಗಿ ಬಿದ್ದ ಸಂಗತಿ ಅಲಂಕಾರಶಾಸ್ತ್ರೇತಿಹಾಸದಲ್ಲಿ ಸುವಿಶ್ರುತ. ಮುಖ್ಯವಾಗಿ, ನೈಯಾಯಿಕರು ಧ್ವನಿತತ್ತ್ವವನ್ನು ಅನುಮಿತಿವಾದದ ಮೂಲಕ ಪ್ರತ್ಯಾಖ್ಯಾನಿಸಲೆಳಸಿದರು. ಚೋದ್ಯವೇನೆಂದರೆ ಧ್ವನಿವಿರೋಧಿಗಳಾದ ನ್ಯಾಯ-ಸಾಂಖ್ಯ-ಮೀಮಾಂಸಾವಾದಿಗಳೂ ರಸಪಾರಮ್ಯವನ್ನು ಒಪ್ಪಿದವರೇ! ವಿಶೇಷತಃ ಅನುಮಿತಿವಾದದ ಪುರಸ್ಕರ್ತನೂ ಧ್ವನಿಧ್ವಂಸವನ್ನೇ ಸಾಧಿಸಲು ಹುರುಡುಗಟ್ಟಿದವನೂ ಆದ ಮಹಿಮಭಟ್ಟನು ರಸವನ್ನು ಎಣೆಯಿಲ್ಲದೆ ಕೊಂಡಾಡಿದ್ದಾನೆ. ಆದರೆ ರಸಕ್ಕೆ ರಾಜಮಾರ್ಗವಾದ ಧ್ವನಿಯ ದ್ವೇಷವನ್ನು ಮಾತ್ರ ಬಿಟ್ಟೇ ಇಲ್ಲ. ಇದು ನಿಜಕ್ಕೂ ಚೋದ್ಯ. ಏಕೆಂದರೆ, ಅನುಮಿತಿಯು ಅದೆಷ್ಟೇ ರೀತಿಯಿಂದ “ಕಾವ್ಯಾನುಮಿತಿ”ಯೆಂಬ ಸ್ತರಕ್ಕೆ ತನ್ನನ್ನು ಹಿಗ್ಗಿಸಿಕೊಂಡರೂ ಕಾರ್ಯ-ಕಾರಣಭಾವಮಾತ್ರದಿಂದ ಹುಟ್ಟುವ ಸ್ವಕೀಯಸ್ವರೂಪವನ್ನು ಮಾರ್ಪಡಿಸಿಕೊಳ್ಳಲಾರದು. ಹಾಗೆ ಮಾಡಿದಲ್ಲಿ ಅದು ಧ್ವನಿಯೇ ಆಗುತ್ತದೆ; ಮತ್ತು ತನ್ನ ಪ್ರತಿದ್ವಂದ್ವಿಯೇ ತಾನಾಗುವಂಥ ಈ ಸ್ವರೂಪಸಂಕ್ರಮಣವು ಮೊದಲಿಗೆ ಉದ್ದಿಷ್ಟವಾದ ತಥಾಕಥಿತಗಂಭೀರವಿವಾದದ ವಿಡಂಬನೆಯೇ ಆಗುತ್ತದೆ. ಹೀಗಾಗಿ ಅದು ತನ್ನ ಮೂಲಕ್ಷೇತ್ರವಾದ ವಾಸ್ತವಸತ್ತೆಯ ಕಾರ್ಯ-ಕಾರಣಭಾವಪರಿಧಿಯನ್ನು ಮೀರುವುದು ಅಸಾಧ್ಯ, ಅಸಾಧು. ಹೀಗಾಗಿಯೇ ಲೌಕಿಕಸ್ತರದ ಕಾರ್ಯ-ಕಾರಣಭಾವಕ್ಕೆ ಅತೀತವಾದ ವಿಭಾವಾನುಭಾವವ್ಯವಸ್ಥೆಯನ್ನು ತನ್ನ ಆವಿಷ್ಕಾರದ ಮೂಲಧಾತುವಾಗಿ ಹೊಂದಿದ — ಅತ ಏವ ಅಲೌಕಿಕವೆನಿಸಿದ — ರಸವನ್ನು ಕುರಿತು ಕೊಂಡಾಟದ ಮಾತಾಡುವುದು ಅಜ್ಞಾನವೋ ಅಥವಾ ಆತ್ಮವಂಚನೆಯೋ ಆಗದೆ ತಪ್ಪದು. ಆದುದರಿಂದ ಆದರ್ಶಸತ್ತೆಯ ಸ್ತರದಲ್ಲಿರುವ ವಿಭಾವಾನುಭಾವವ್ಯವಸ್ಥಾವಿಹಿತವಾದ ರಸವು ಅಂಥದೇ ಆದರ್ಶಸತ್ತಾಸ್ತರದ ವ್ಯಂಜನಾವ್ಯಾಪಾರದಲ್ಲಿ ತಾತ್ಪರ್ಯವುಳ್ಳ ಧ್ವನಿಯಲ್ಲಿಯೇ ತನ್ನ ಅಭಿವ್ಯಕ್ತಿಸಾಧ್ಯತೆಯನ್ನು ಕಾಣಬೇಕು; ಮತ್ತಿದು ಆಹಾರ್ಯಸತ್ತಾರೂಪದಲ್ಲಿ ವ್ಯವಹರಿಸುವ ವಕ್ರತಾವ್ಯಾಪಾರದ ರೂಪಸಿದ್ಧಿಯಲ್ಲಿಯೇ ಸಾಕಾರಗೊಳ್ಳಬೇಕು. ಹೀಗಲ್ಲದೆ ಅನುಮಿತಿವಾದದ ಮೂಲಕ ರಸವು ಸಾಕ್ಷಾತ್ಕರಿಸಬೇಕೆಂದರೆ ಅದು ಶಂಕುಕನ ಹಾದಿಯಲ್ಲಿ ಕೈವಲ್ಯವನ್ನು ಕಾಣಬೇಕಾದೀತು. ಆಗಲಾದರೋ ಭರತಮುನಿಯು ರಸಸೂತ್ರವನ್ನು ನಿಬಂಧಿಸುವಾಗ “ಕಾರ್ಯ-ಕಾರಣಸಂಯೋಗಾದ್ರಸನಿಷ್ಪತ್ತಿಃ” ಎಂದು ಒಕ್ಕಣಿಸದೆ “ವಿಭಾವಾನುಭಾವವ್ಯಭಿಚಾರಿಸಂಯೋಗಾದ್ರಸನಿಷ್ಪತ್ತಿಃ” ಎಂದೇ ಅವನೇಕೆ ನಿರೂಪಿಸಿದನೆಂಬ ಪ್ರಶ್ನೆ ಉದಿಸದಿರದು. ಈ ಪರಿಯ ಮುನಿಮತದ, ಆಪ್ತವಾಕ್ಯರೂಪದ ಶಬ್ದಪ್ರಮಾಣವನ್ನೇ ನಚ್ಚುವುದಿಲ್ಲವೆಂದು ಬಗೆದು — ಇವನ್ನು ನಚ್ಚಿಯೂ ಸರಿಯಾಗಿ ಅರ್ಥಮಾಡಿಕೊಳ್ಳದ ಶಂಕುಕ-ಮಹಿಮಭಟ್ಟರಂಥ ಪ್ರಾಚೀನತಾರ್ಕಿಕರ ಹಾದಿಯಲ್ಲಿ — ಇದಾವ ಚರ್ಚೆಯ ಅರಿವೂ ಇಲ್ಲದೆ ಅಹಂಬ್ರಹ್ಮೀಭವಿಸಿ ಸಾಗುವ ಆಧುನಿಕವಾಸ್ತವವಾದಿಗಳು ನಮ್ಮ ನಮ್ಮ ಜಾಗೃದಭಿನಿವಿಷ್ಟವಾದ ಇಂದ್ರಿಯಾನುಭವವೇ ಪ್ರಮಾಣವೆಂದು ಸಾರುವಂತಾದಲ್ಲಿ ಈ ಮುನ್ನ ನಾವು ಅವರನ್ನು ಕುರಿತು ಆಕ್ಷೇಪಿಸಿದ ಮಾತೇ ನಿಲ್ಲುವ ಕಾರಣ ಮುಂದಿನ ಚರ್ಚೆ ಅನವಶ್ಯವಾದೀತು. ಮಹಿಮಭಟ್ಟನ “ಕಾವ್ಯಾನುಮಾನ” ಮತ್ತು ಶಂಕುಕನ “ರಸಾನುಮಿತಿ”ವಾದಗಳು ವಸ್ತುತಃ ಸಂಭಾವ್ಯವಾದ ಲೋಕಸತ್ತೆಯ (world-order determined by probability) ಪರಿಧಿಯೊಳಗೇ ನಿಲ್ಲುವ ಹಾಗೂ ಸಲ್ಲುವ ಕಾರಣ ಸಾಧ್ಯಮಾನವಾದ ಲೋಕೋತ್ತರಸತ್ತೆಯ (meta-worldly order designated by possibility) ವಲಯದಲ್ಲಿ ಗೆಲ್ಲುವಂಥ ಆನಂದವರ್ಧನನ “ರಸಧ್ವನಿ” ಮತ್ತು ಅಭಿನವಗುಪ್ತನ “ರಸಾಭಿವ್ಯಕ್ತಿ”ವಾದಗಳ ಮುಂದೆ ದಯನೀಯವಾಗಿ ಸೋಲುತ್ತವೆ. ಯದ್ಯಪಿ ಈ ವರೆಗಿನ ಭಾರತೀಯಸೌಂದರ್ಯಶಾಸ್ತ್ರವಕ್ತಾರರು ಕಂಠೋಕ್ತವಾಗಿ ಈ ಅಂಶವನ್ನು ಹೇಳಿರದಿದ್ದರೂ ಇದು ಕಲಾಮೀಮಾಂಸಕರೆಲ್ಲರಿಗೂ ಸದಾ ನೆನಪಿರಬೇಕಾದ ಮೂಲಭೂತತತ್ತ್ವ. ಎಲ್ಲಕ್ಕಿಂತ ಮಿಗಿಲಾಗಿ ಜಾಗೃದಭಿನಿವೇಶವುಳ್ಳ, ಇಂದ್ರಿಯಾನುಭವೈಕಮಾತ್ರದ ಸತ್ತೆಯೇ ಕಲಾಸ್ವಾದದ ಸ್ಥಿತಿಯಾಗುವುದಾದರೆ ಅಂಥ ಕಲೆಗೂ ಸುಖದುಃಖವಿದೀರ್ಣವಾದ ಈ ಜಗತ್ತಿಗೂ ಯಾವುದೇ ಸಾರ್ಥಕವ್ಯತ್ಯಾಸವಿರದೆ ಕೊಚ್ಚೆಯ ರೊಚ್ಚಿಗೆ ಕೊಚ್ಚೆಯೇ ಕಲೆತುಬಂದಂತೆ ಕಲಾನಿರ್ಮಾಣ, ಕಲಾಸ್ವಾದನ ಹಾಗೂ ಕಲಾಮೀಮಾಂಸೆಗಳಂಥ ಅರ್ಥಪೂರ್ಣಪ್ರಕಲ್ಪಗಳು ನಿರರ್ಥಕವಿರಲಿ, ಅನರ್ಥಕವೇ ಆದಾವು. ಆತ್ಯಂತಕವಾಗಿ ಸತ್ಯವು ಇದೇ ಆಗಿದ್ದಲ್ಲಿ ಇಂಥ ಆನರ್ಥಕ್ಯಕ್ಕೆ ನಾವು ಹಿಂಜರಿಯಬೇಕಿಲ್ಲ, ಅಂಜಲೂ ಬೇಕಿಲ್ಲ. ಆದರೆ ಕಲಾಸ್ವಾದದ ಆನಂದಮಾತ್ರಸ್ವರೂಪವಾಗಲಿ, ಇಂಥ ಒಂದು ಅನುಭವದ ಅನಿವಾರ್ಯತೆಯಾಗಲಿ, ಹೆಜ್ಜೆಹೆಜ್ಜೆಗೂ ಅನುಭವಕ್ಕೆ ಬರುತ್ತಿರುವ ಅದರ ಲೋಕೋತ್ತರತೆಯಾಗಲಿ ಎಲ್ಲರ ಪಾಲಿಗೆ ಬಟಾಬಯಲಾದ ರಹಸ್ಯ. ಇಂತಿರಲು ಸರ್ವಾನುಭವವಿರುದ್ಧವಾದ ವಾಸ್ತವಸತ್ತಾವಾದಿಗಳ ಪ್ರತಿಪಾದನೆಯು ಯಾವ ರೀತಿಯಿಂದಲೂ ನಿಲ್ಲುವುದಿಲ್ಲ, ಸಲ್ಲುವುದಿಲ್ಲ. ಈ ಮಾತನ್ನು ಆಧುನಿಕಮನಃಶಾಸ್ತ್ರ-ಅವಗಮನಶಾಸ್ತ್ರ-ಚೈತನ್ಯಶಾಸ್ತ್ರ-ಭಾಷಾಶಾಸ್ತ್ರ-ಸಮಾಜಶಾಸ್ತ್ರ-ಅರ್ಥಶಾಸ್ತ್ರ-ರಾಜ್ಯಶಾಸ್ತ್ರ-ಸಂಸ್ಕೃತಿಶಾಸ್ತ್ರ ಮುಂತಾದ ಎಲ್ಲ ನಿಟ್ಟುಗಳಿಂದ — ವಾಸ್ತವೈಕಾಭಿನಿವೇಶನಿಷ್ಠೆಯಿಂದ — ಕಾಣಲೆಳಸುವ ಯಾವುದೇ ಮೇಧಾವಿಗಳ ಕಸರತ್ತುಗಳಿಗೂ ಚ-ತು ತಪ್ಪದೆ ಅನ್ವಯಿಸಬಹುದು. ಈ ಬಗೆಯ ದ್ರವ್ಯವಿಶ್ರಾಂತವೂ “ವಸ್ತುನಿಷ್ಠ”ವೂ ಪ್ರತೀತಿಮಾತ್ರದ್ದೂ — ಈ ಕಾರಣದಿಂದಲೇ “ವೈಜ್ಞಾನಿಕತರ್ಕಮಾರ್ಗ”ದ ಬಾಹ್ಯಪ್ರಯೋಗಾದಿಗಳ ಮೂಲಕ “ಸಾಬೀತು”ಗೊಳ್ಳುವಂಥದ್ದೂ — ಆದ ಕಲಾಸ್ವಾದನಿರ್ವಚನವು ಗಣಿತೀಯಕ್ರಮದಲ್ಲಿ ಅದೆಷ್ಟೇ ನಿಖರವಾದರೂ ನಮ್ಮ ಸಂವೇದನೆಗೆ ಲವಲೇಶವೂ ದಕ್ಕದೆ ವ್ಯರ್ಥಪ್ರಯಾಸವಾಗುತ್ತದೆ. ಸೋದಾಹರಣವಾಗಿ ಹೇಳುವುದಾದರೆ, ಅತ್ಯಾಧುನಿಕರೀತಿಯ ಉಷ್ಣತಾಮಾಪಕದಿಂದ ಯಾವುದೇ ಶಾಖವನ್ನು ನಿಖರವಾಗಿ ಅಳೆಯಬಹುದಾದರೂ ಶಾಖವೆಂದರೆ ಏನೆಂಬ ಅನುಭವವನ್ನು ನಮಗೆ ಸ್ವಲ್ಪವೂ ದಕ್ಕಿಸಿಕೊಡಲಾಗುವುದಿಲ್ಲ. ಈ ಎಲ್ಲ ಬಾಹ್ಯವಿಧಾನದ ಉಷ್ಣತಾಮಾಪನಗಳೂ ಮೊತ್ತಮೊದಲಿಗೆ ಬಿಸಿಯೆಂದರೇನೆಂದು ನಾವೇ ಕೈ-ಮೈಗಳನ್ನು ಸುಟ್ಟುಗೊಂಡು ಪಡೆದ ಅನುಭವದ ಹಿನ್ನೆಲೆಯಲ್ಲಿಯೇ ಅರ್ಥಪೂರ್ಣವಾಗುತ್ತವೆ, ಜ್ಞಾನನಿರ್ಮಾಣಸಾಧನಗಳೆನೆಸುತ್ತವೆ. ಇದಾದರೂ ಸುಸಂಗತವೆನಿಸಿರುವುದು ವಸ್ತುವೊಂದರ ಶಾಖವನ್ನಳೆದು ತನ್ಮೂಲಕ ಸಾಧಸಬೇಕೆಂದಿರುವ ಮತ್ತಾವುದೋ ಲೌಕಿಕಪ್ರಯೋಜನಕ್ಕೆ ಆಸ್ಪದವೀಯುತ್ತಿರುವುದರಿಂದಲೇ. ಹಾಗಲ್ಲದೆ ಉದ್ದಿಷ್ಟವಸ್ತುವು ಹೊಮ್ಮಿಸುತ್ತಿರುವ ಶಾಖದ ಸಂವೇದನೆಯೇ ನಮ್ಮ ಪರಮಲಕ್ಷ್ಯವಾಗಿದ್ದಲ್ಲಿ ಈ ಎಲ್ಲ ಪ್ರಕ್ರಿಯೆಗಳೂ ವ್ಯರ್ಥಪ್ರಯಾಸವಾಗುತ್ತಿದ್ದವು. ರಸಾನುಭವವಾದರೋ ಇದೇ ತೆರೆನಾದದ್ದು. ಅದು ಹೇಗೆ “ಸಕಲಪ್ರಯೋಜನಮೌಲಿಭೂತ”ವೋ ಹಾಗೆಯೇ “ಸರ್ವಪ್ರಯೋಜನಾತೀತ”ವೂ ಹೌದು. ಈ ಕಾರಣದಿಂದಲೇ ಆಚಾರ್ಯ ಹಿರಿಯಣ್ಣನವರು “The purpose of Art is to transcend all purposes” ಎಂದದ್ದು. ಭಗವದ್ಗೀತೆಯೂ ಇದನ್ನು “ಕೃಪಣಾಃ ಫಲಹೇತವಃ” ಎಂಬ ಉಕ್ತಿಯ ಮೂಲಕ ಪ್ರಕಾರಾಂತರವಾಗಿ ಧ್ವನಿಸಿದೆ. ಈ ಎಲ್ಲ ಚರ್ಚೆಯ ಮಥಿತಾರ್ಥವಿಷ್ಟು: ಸ್ವಸಂವೇದ್ಯವೂ ಆತ್ಮನಿಷ್ಠವೂ ಆದ ಯಾವುದೇ ಅನುಭವವನ್ನು ಬಾಹ್ಯವೇದ್ಯವೂ ಅನ್ಯನಿಷ್ಠವೂ ಆದ ಪ್ರತೀತಿಯ ಮೂಲಕ ನಿರ್ವಚಿಸಲಾಗದು. ಇಂಥ ಬಾಹ್ಯವೇದ್ಯ-ಅನ್ಯನಿಷ್ಠಕ್ರಮವು ತಾರ್ಕಿಕವಾಗಿ ಅದೆಷ್ಟು “ನಿರ್ದಿಷ್ಟತೆ-ನಿರ್ದುಷ್ಟತೆ”ಗಳನ್ನು ಸಾಧಿಸಿದರೂ ಅದು ಮೂಲನಾಶಪ್ರವೃತ್ತಿಯೇ ಆಗಿ ಪರಿಣಮಿಸುವುದು. ಸ್ವಸಂವೇದ್ಯ-ಆತ್ಮನಿಷ್ಠವಿಧಾನದಲ್ಲಿ ತಥಾಕಥಿತವಾದ “ನಿರ್ದಿಷ್ಟತೆ-ನಿರ್ದುಷ್ಟತೆ”ಗಳು ದಕ್ಕದಿದ್ದರೂ ವಸ್ತುಸ್ವರೂಪವು ಮಾತ್ರ ಸ್ಫುಟವಾಗಿ ದಕ್ಕುವುದು. ಪೂರ್ವೋಕ್ತದೃಷ್ಟಾಂತವನ್ನೇ ಮುಂದುವರಿಸುವುದಾದರೆ, ನಮ್ಮ ನಾಲಗೆಯು ಕಾಫಿಯ ಬಿಸಿಯನ್ನು ನಿಖರವಾಗಿ ಅಳೆಯಲಾಗದಿದ್ದರೂ ಅದು ಬಿಸಿಯೆಂದರೆಯೇನೆಂಬುದನ್ನು ಮಾತ್ರ ಸ್ಪಷ್ಟವಾಗಿ ನಮ್ಮರಿವಿಗೆ ತಂದುಕೊಡುತ್ತದೆ. ಭಾರತೀಯವೇದಾಂತದ ಆತ್ಮತತ್ತ್ವ ಮತ್ತು ಕಲಾಮೀಮಾಂಸೆಯ ರಸತತ್ತ್ವಗಳೆರಡೂ ಇಂಥ ನೆಲೆಯ ವಿದ್ಯೆಗಳು. ಇಲ್ಲಿ ಇದಕ್ಕಿಂತ ನಿರ್ದಿಷ್ಟತೆ-ನಿರ್ದುಷ್ಟತೆಗಳು ಅಸಾಧ್ಯ. ಇದು ಪೂರ್ಣದೃಷ್ಟಿಯ ವಿಜ್ಞಾನಕ್ಕೆ ಒಪ್ಪುವಂಥದ್ದೂ ಹೌದು. ಹೆಚ್ಚೇನು, ಇದೇ ದಿಟವಾದ ವಿಜ್ಞಾನ.

[4] ಭರತಮುನಿಯ ರಸಸಿದ್ಧಾಂತವು ಆನಂದವರ್ಧನನ ಧ್ವನಿತತ್ತ್ವಕ್ಕಿಂತ ಮತ್ತಷ್ಟು ಮೂಲಭೂತವೂ ಪ್ರಬುದ್ಧವೂ ಆದ ಸಂಗತಿಯಾಗಿದ್ದರೂ ನಾಟ್ಯಶಾಸ್ತ್ರದ ಪ್ರಯೋಗಪ್ರಧಾನವೂ ಸರಳವೂ ಆದ ರಚನಾಕ್ರಮದಲ್ಲಿ ಇದಕ್ಕೆ ತಕ್ಕ ವಿದ್ವದ್ವಿಶ್ಲೇಷಣೆಯು ಶಕ್ಯವಿರಲಿಲ್ಲ. ಅಲ್ಲದೆ ಆ ಕಾಲಕ್ಕಿದು ಅನವಶ್ಯವೂ ಅಚಿಂತಿತವೂ ಆಗಿತ್ತೆನ್ನಬಹುದು. ಹೀಗಾಗಿ ಮುಂದೆ ವಿವಿಧಶಾಸ್ತ್ರಗಳ ಮೂಲಕ ಅನುಭವವನ್ನು ಒರೆಗಿಕ್ಕುವೆವೆಂಬ ಹುರುಡಿನಿಂದ ಹೊರಟ ವಿದ್ವಾಂಸರ ದಾಳಿಯನ್ನು ತಡೆಯಲು ಅಭಿನವಗುಪ್ತನಂಥ ಪ್ರಗಲ್ಭಪಂಡಿತನ ವ್ಯಾಖ್ಯಾನವು ತುಂಬ ಅನಿವಾರ್ಯವೂ ಅಪೇಕ್ಷಣೀಯವೂ ಆಗಿತ್ತು. ಅಲ್ಲದೆ ಭರತನ ರಸತತ್ತ್ವಕ್ಕೆ ಆನಂದವರ್ಧನನ ಧ್ವನಿತತ್ತ್ವವನ್ನೂ ದೃಢವಾಗಿ ಬೆಸೆಯುವ ಆಧಿಕಾರಿಕಯತ್ನವೂ ಬೇಕಿತ್ತು. ಇದೆಲ್ಲವೂ ಅಭಿನವಗುಪ್ತನ “ಅಭಿನವಭಾರತೀ”ವ್ಯಾಖ್ಯಾನದ ಮೂಲಕ ನಿರತಿಶಯವಾಗಿ ಸಾಧಿತವಾದದ್ದು ಭಾರತೀಯಕಲಾಮೀಮಾಂಸೆಯ ಸುಕೃತ. ಇದಲ್ಲದೆ ಮತ್ತೂ ಹತ್ತಾರು ವೈಶಿಷ್ಟ್ಯಗಳು ಅಭಿನವಭಾರತಿಯಲ್ಲಿವೆ. ಆದರೆ ಸದ್ಯದ ಚರ್ಚೆಗವು ಅನಪೇಕ್ಷಿತ.

To be continued.

Series Navigation “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳು – 2 >>
Shatavadhani Dr. R. Ganesh Abhinavagupta “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳು – 1 r ganesh

Shatavadhani Dr. R. Ganesh

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.
Shatavadhani Dr. R. Ganesh Abhinavagupta “ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳು – 1 r ganesh