ವಸ್ತುತಂತ್ರ-ಪುರುಷತಂತ್ರ
ತಮ್ಮ ಶಾಸ್ತ್ರಗಳಲ್ಲಿ ಯಾವುದು “ವಸ್ತುತಂತ್ರ” ಮತ್ತಾವುದು “ಪುರುಷತಂತ್ರ” ಎಂದು ಸ್ಪಷ್ಟವಾಗಿ ವಿಂಗಡಿಸಿಕೊಡುವಲ್ಲಿಯೇ ಶಂಕರ ಮತ್ತು ಆನಂದವರ್ಧನರ ಕೊಡುಗೆ ಮುಖ್ಯವಾಗಿ ಸಲ್ಲುತ್ತದೆ. ಈ ಎರಡು ದಿಗ್ದರ್ಶಕವಾದ ಪರಿಭಾಷೆಗಳನ್ನು ನಮಗೆ ಹವಣಿಸಿಕೊಟ್ಟ ಶ್ರೇಯಸ್ಸು ಶಂಕರರಿಗೇ ಸಲ್ಲುತ್ತದೆನ್ನಬೇಕು.[1] ಆ ಪ್ರಕಾರ ಯಥಾವತ್ತಾದ ಜ್ಞಾನವೇ ವಸ್ತುತಂತ್ರ. ಹಾಗಲ್ಲದೆ ನಾವು ಮಾಡಿಕೊಂಡ ತಾತ್ಕಾಲಿಕವಾದ ತಿಳಿವು ಪುರುಷತಂತ್ರ. ಅಂದರೆ, ವ್ಯಕ್ತಿಗಳ ಇಷ್ಟಾನಿಷ್ಟಗಳಿಗೆ ಅನುಸಾರವಾಗಿ ಅಣಿಗೊಂಡ ಕಟ್ಟು-ಕಟ್ಟಲೆಗಳು ಪುರುಷತಂತ್ರ; ಸ್ವತಃಸಿದ್ಧವಾದ ಸಂಗತಿಯ ಅರಿವು ವಸ್ತುತಂತ್ರ. ಹೀಗೆ ನೋಡಿದಾಗ ವೇದಾಂತದಲ್ಲಿ ಬ್ರಹ್ಮಜ್ಞಾನವೂ ಕಲಾಮೀಮಾಂಸೆಯಲ್ಲಿ ರಸಪ್ರಜ್ಞೆಯೂ ವಸ್ತುತಂತ್ರದ ಕಕ್ಷೆಗೆ ಬರುತ್ತವೆ. ಉಳಿದಂತೆ ವೇದಾಂತವು ಆಗೀಗ ಪರಾಮರ್ಶಿಸುವ ಕರ್ಮ, ಉಪಾಸನೆ ಮೊದಲಾದವು ಪುರುಷತಂತ್ರದ ವಲಯಕ್ಕೆ ಸಲ್ಲುತ್ತವೆ. ಇದೇ ಸಾಲಿಗೆ ಕಲಾಮೀಮಾಂಸೆಯು ಚರ್ಚಿಸುವ ರೀತಿ, ಪಾಕ, ಅಲಂಕಾರ ಮುಂತಾದುವು ಸೇರುತ್ತವೆ.
ಸಾಮಾನ್ಯವಾಗಿ ಶಂಕರರನ್ನು ವಿರೋಧಿಸುವ ವರ್ಗಗಳು ಅವರ ಬರೆಹಗಳಲ್ಲಿ ಅಸಮಗ್ರತೆಯನ್ನು ಹಲವು ಬಗೆಯಿಂದ ಕಾಣಿಸುತ್ತಾರೆ. ಇವರ ಪೈಕಿ ಭೌತವಾದಿಗಳಾದ ಆಧುನಿಕರು ಹೀಗೆ ಆಕ್ಷೇಪಿಸುತ್ತಾರೆ: ಶಂಕರರು ತಮ್ಮ ಭಾಷ್ಯಗಳಲ್ಲಿ ಮಾನವಸಮಾಜ ಮತ್ತದರ ಸುಧಾರಣೆಯನ್ನು ಕುರಿತು ಏನನ್ನೂ ಹೇಳಿಲ್ಲ; ಜಗತ್ತಿನ ಅನೇಕ ಮುಖಗಳನ್ನು ತೆರೆದಿಡುವ ಪ್ರಯತ್ನ ಮಾಡಿಲ್ಲ ಇತ್ಯಾದಿ. ಕರ್ಮವಾದಿಗಳೂ ಈಶ್ವರವಾದಿಗಳೂ ಆದ ದ್ವೈತಿಗಳು ಮತ್ತೊಂದು ಬಗೆಯ ಆಕ್ಷೇಪವನ್ನು ಮಾಡುತ್ತಾರೆ: ಶಂಕರರು ವೇದಸಂಹಿತೆಗಳನ್ನು ವಿಶ್ಲೇಷಿಸಿಲ್ಲ; ಪುರಾಣ-ಇತಿಹಾಸಗಳನ್ನು ವ್ಯಾಖ್ಯಾನಿಸಿಲ್ಲ; ಸ್ಮೃತಿಗಳನ್ನು ವಿವೇಚಿಸುವ ಮೂಲಕ ಧರ್ಮಶಾಸ್ತ್ರದ ಆಚಾರ-ವಿಚಾರಗಳನ್ನು ವ್ಯವಸ್ಥಾಪಿಸಿಲ್ಲ ಇತ್ಯಾದಿ. ಒಟ್ಟಿನಲ್ಲಿ ಇವರಿಬ್ಬರೂ ಹೇಳುವುದೆಂದರೆ – ಶಂಕರರು ಜಗತ್ತು-ಜೀವಗಳ ವಿಷಯದಲ್ಲಿ ನಿರಾಸಕ್ತಿಯನ್ನು ತಳೆದು ಜಗನ್ಮಿಥ್ಯಾವಾದವನ್ನು ಮುಂದಿಡುವ ಮೂಲಕ ಜಗತ್ತು-ಜೀವಗಳಿಗೆ ವಿರೋಧಿಗಳೇ ಆಗಿದ್ದಾರೆ. ಆದರೆ ಈ ಆಕ್ಷೇಪಗಳು ನಿಲ್ಲುವಂಥವಲ್ಲ. ಏಕೆಂದರೆ ದೇಶ-ಕಾಲಗಳಿಗೆ ಅಧೀನವಾದ ಜಗತ್ತು-ಜೀವಗಳ ವ್ಯವಸ್ಥೆ ಸದಾ ಮಾರ್ಪಡುತ್ತಲೇ ಇರುತ್ತದೆ. ಎಂಥ ಬ್ರಹ್ಮಜ್ಞಾನಿಯಾಗಲಿ, ಸಾಕ್ಷಾತ್ ಚತುರ್ಮುಖಬ್ರಹ್ಮನೇ ಆಗಲಿ ಇವುಗಳ ವಿಷಯದಲ್ಲಿ ಸಾರ್ವತ್ರಿಕವಾದ ಲಕ್ಷಣ-ಭರಣವ್ಯವಸ್ಥೆಗಳನ್ನು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಲು ಹೊರಟರೆ ಇವು ಜಗತ್ತು-ಜೀವಗಳಾಗಿ ಉಳಿಯದೆ ನಿರುಪಾಧಿಕವಾದ ಬ್ರಹ್ಮವೇ ಆಗಿ ನಿಲ್ಲುತ್ತವೆ. ಶಂಕರರು ಇಂಥ ಶಾಶ್ವತಸ್ವರೂಪವನ್ನು ಕುರಿತೇ ಚಿಂತಿಸಿರುವುದು. ಹೀಗಲ್ಲದೆ ಅವರು ಬರಿಯ ಜಗತ್ತು ಮತ್ತು ಜೀವಗಳ ಹಂತದಲ್ಲಿಯೇ ಉಳಿದಿದ್ದಲ್ಲಿ ಎಂದೋ ಅಪ್ರಸ್ತುತರಾಗುತ್ತಿದ್ದರು. ನಿರಂತರವಾಗಿ ಮಾರ್ಪಡುವ ಜಗತ್ತಿನ ವಿಷಯಗಳನ್ನು ಕುರಿತು ಚಿಂತಿಸುವುದು ತಪ್ಪಲ್ಲ; ಈ ಕೆಲಸಗಳನ್ನು ಮಾಡಲು ಆಯಾ ವಿಷಯಗಳ ತಜ್ಞರು ಇದ್ದೇ ಇದ್ದಾರೆ. ಆದರೆ ತತ್ತ್ವಶಾಸ್ತ್ರದ ಮುಖ್ಯೋದ್ದೇಶವೇ ಜ್ಞೇಯಪ್ರಪಂಚಕ್ಕಿಂತ ಹೊರತೂ ಶಾಶ್ವತವೂ ಆದ ಜ್ಞಾತೃವನ್ನು ಅರಿಯುವುದು. ಮತ್ತೂ ಶಾಸ್ತ್ರೀಯವಾಗಿ ಹೇಳುವುದಾದರೆ ವಿಷಯಕ್ಕಿಂತ ವಿಷಯಿಯಲ್ಲಿ ಹೆಚ್ಚಿನ ಅವಧಾರಣೆ ಹಾಕುವುದು ದರ್ಶನಗಳ ಆದ್ಯ ಕರ್ತವ್ಯ.[2] ಇದನ್ನು ಶಂಕರರಂತೆ ಪರಿಪೂರ್ಣವಾಗಿ, ಸರ್ವಸಮರ್ಪಕವಾಗಿ ನಿರ್ವಹಿಸಿದವರು ಮತ್ತೊಬ್ಬರಿಲ್ಲ. ಹೀಗಾಗಿ ಭೌತವಾದಿಗಳಾದ ಸಮಾಜಸುಧಾರಕರಂತೆಯೋ ಈಶ್ವರವಾದಿಗಳಾದ ಮತಪ್ರಚಾರಕರಂತೆಯೋ ಅವರು ದುಡಿದಿದ್ದ ಪಕ್ಷದಲ್ಲಿ ಇಂಥ ಸುಧಾರಕ-ಪ್ರಚಾರಕರ ವಾದಗಳಿಗಾದ ಗತಿಯೇ ಅವರಿಗೂ ಒದಗುತ್ತಿತ್ತು. ಉದಾಹರಣೆಗೆ ಸಮಾಜಸುಧಾರಕರ ಪೈಕಿ ಕಮ್ಯೂನಿಸ್ಟ್ಗಳ ಮತ್ತು ಈಶ್ವರವಾದಿಗಳ ಪೈಕಿ ಅಬ್ರಹಾಮಿಕ್ ಪ್ರವಾದಿಗಳ ಮೂಲಕ ಜಗತ್ತಿಗಾಗಿರುವ ಕಷ್ಟವನ್ನು ಕಂಡಾಗ ಶಂಕರರ ನಿಲವು ಎಷ್ಟು ಸಮರ್ಪಕ ಮತ್ತೆಷ್ಟು ಉಪಾದೇಯ ಎಂದು ತಿಳಿಯದಿರದು.
ಶಂಕರರಂತೆ ಆನಂದವರ್ಧನನನ್ನು ಅವನ ಪರವರ್ತಿಗಳು ಆಕ್ಷೇಪಿಸದಿದ್ದರೂ ನಾವು ವಾದಮಾತ್ರವಾಗಿ ಕೆಲವೊಂದು ಕೊರತೆಗಳನ್ನು ಎತ್ತಾಡಬಹುದು: ರಸಧ್ವನಿಸಿದ್ಧಾಂತವನ್ನು ಸ್ಥಾಪಿಸಿದ ಆನಂದವರ್ಧನ ತನ್ನ ತತ್ತ್ವದ ಬೆಳಕಿನಲ್ಲಿ ಗುಣ, ರೀತಿ ಮತ್ತು ಮಾರ್ಗಗಳ ಮೀಮಾಂಸೆಯನ್ನು ಕ್ರಮವಾಗಿ ನಡಸಿಲ್ಲ; ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳ ಪ್ರಭೇದಗಳನ್ನು ಸಲಕ್ಷಣವಾಗಿ ನಿರೂಪಿಸಿಲ್ಲ; ಕಾವ್ಯದೋಷಗಳನ್ನು ಪಟ್ಟಿ ಮಾಡಿಲ್ಲ; ಅಷ್ಟೇಕೆ, ಕಾವ್ಯಸಾಮಾನ್ಯದ ಲಕ್ಷಣವನ್ನೂ ನಿಷ್ಕೃಷ್ಟವಾಗಿ ತಿಳಿಸಿಲ್ಲ; ದೃಶ್ಯಕಾವ್ಯ-ಶ್ರವ್ಯಕಾವ್ಯಾದಿಗಳ ಪ್ರಕಾರಗಳನ್ನೂ ಅವುಗಳ ಲಕ್ಷಣಮೀಮಾಂಸೆಯನ್ನೂ ಕೈಗೊಂಡಿಲ್ಲ ಇತ್ಯಾದಿ. ಈ ಆಕ್ಷೇಪಗಳೊಂದೂ ಗಟ್ಟಿಯಾಗಿ ನಿಲ್ಲುವುದಿಲ್ಲ. ಏಕೆಂದರೆ ಇವುಗಳಲ್ಲಿ ಹಲವನ್ನವನು ತನ್ನ ಕೃತಿಯಲ್ಲಿ ದಿಗ್ದರ್ಶಕವಾಗಿ ಮಾಡಿಯೇ ಇದ್ದಾನೆ. ಈ ಬೆಳಕಿನಲ್ಲಿ ಮತ್ತಷ್ಟು ವಿಸ್ತರಣಕ್ಕೆ ಮಾರ್ಗದರ್ಶನವನ್ನೂ ನೀಡಿದ್ದಾನೆ. ಹೆಚ್ಚೇನು, ಕೇವಲ ಧ್ವನಿ, ವ್ಯಂಜನಾವ್ಯಾಪಾರ, ಗುಣೀಭೂತವ್ಯಂಗ್ಯ, ವ್ಯಂಜಕಸಾಮಗ್ರಿ ಎಂಬ ಹಲಕೆಲವು ಪರಿಕಲ್ಪನೆಗಳಿಂದಲೇ ಗುಣ, ರೀತಿ, ಮಾರ್ಗ, ಅಲಂಕಾರ, ವಕ್ರತೆ ಮುಂತಾದ ಎಲ್ಲ ಅಂಶಗಳ ವಿಶದವಿವೇಚನೆಗೆ ಭದ್ರವಾದ ತಳಹದಿ ದಕ್ಕಿದೆ. ಔಚಿತ್ಯ ಎಂಬ ಒಂದೇ ತತ್ತ್ವದಿಂದ ಗುಣ-ದೋಷವಿವೇಚನೆಯೆಲ್ಲ ಮುಗಿದುಹೋಗಿದೆಯೆಂದರೆ ತಪ್ಪಲ್ಲ. ಇದೇ ತೆರನಾದದ್ದು ವ್ಯಂಜಕಸಾಮಗ್ರಿ ಮತ್ತು ಗುಣೀಭೂತವ್ಯಂಗ್ಯಗಳ ಸಾಮರ್ಥ್ಯ. ಇವು ಛಂದಸ್ಸು, ವ್ಯಾಕರಣ, ಅಲಂಕಾರ ಮೊದಲಾದ ಎಲ್ಲ ಅಂಶಗಳೂ ಕಾವ್ಯಸೌಂದರ್ಯಕ್ಕೆ ಹೇಗೆ ಒದಗಿಬರುತ್ತವೆಂಬುದನ್ನು ಅನಿತರಸಾಧಾರಣವಾಗಿ ದ್ಯೋತಿಸಿವೆ. ಇದೇ ರೀತಿ ಕಾವ್ಯದ ತರ-ತಮಗಳನ್ನು ಕುರಿತ ವಿವೇಚನೆಗೂ ಧ್ವನಿಪ್ರಕಾರಗಳು, ಗುಣೀಭೂತವ್ಯಂಗ್ಯ ಮತ್ತು ಶಬ್ದಾರ್ಥಚಿತ್ರಗಳು ಒದಗಿಬರುತ್ತವೆ. ಇಷ್ಟಕ್ಕಿಂತ ಹೆಚ್ಚಿನ ಹವಣಿಗೆ ಆನಂದವರ್ಧನನು ತೊಡಗಿದ್ದೇ ಆದಲ್ಲಿ ಆತನ ಕೃತಿಯ ಸಾರ್ವತ್ರಿಕತೆಗೆ ಸ್ವಲ್ಪ ಲೋಪವೇ ಆಗುತ್ತಿತ್ತೇನೋ. ನಾವು ಮೊದಲು ನಿರೂಪಿಸಿದ ಆಕ್ಷೇಪದ ಅಂಶಗಳನ್ನೆಲ್ಲ ಆನಂದವರ್ಧನನ ಪರವರ್ತಿಗಳಾದ ಮಮ್ಮಟ, ಹೇಮಚಂದ್ರ, ವಿಶ್ವನಾಥ, ಅಪ್ಪಯ್ಯದೀಕ್ಷಿತ, ಜಗನ್ನಾಥ ಮೊದಲಾದವರು ತಮ್ಮ ಕೃತಿಗಳ ಮೂಲಕ ನಿರಾಸ ಮಾಡಿಯೇ ಇದ್ದಾರೆ. ಆದರೆ ಇವೆಲ್ಲ ಬಲುಮಟ್ಟಿಗೆ ಕಾವ್ಯದ ಬಹಿರಂಗವನ್ನು ಕುರಿತ ಕಾರಣ ಕಾಲಕಾಲಕ್ಕೆ ಆಯಾ ಅಂಶಗಳ ಮಟ್ಟಿಗೆ ಅಪ್ರಸ್ತುತವಾಗುತ್ತ ಬಂದಿವೆ. ಇಂಥ ಅಪಾಯ ಆನಂದವರ್ಧನನಿಗಿಲ್ಲ.
ಒಟ್ಟಿನಲ್ಲಿ ಶಂಕರ-ಆನಂದವರ್ಧನರು ತಮ್ಮ ತಮ್ಮ ಶಾಸ್ತ್ರಗಳ ವಸ್ತುತಂತ್ರವನ್ನೇ ಕೇಂದ್ರೀಕರಿಸಿದ ಕಾರಣ ಪುರುಷತಂತ್ರದ ಅಂಶಗಳ ವಿವೇಚನೆ ಅವರಲ್ಲಿ ಸಾಗಿಲ್ಲವೆಂಬ ಆಕ್ಷೇಪ ನಿಲ್ಲುವಿದಿಲ್ಲ. ಈ ಬಗೆಯ ವಿವೇಚನೆಗಳನ್ನು ಅವರ ತತ್ತ್ವಗಳ ಬೆಳಕಿನಲ್ಲಿ ವಿವೇಕಿಗಳು ದೇಶ-ಕಾಲಗಳಿಗೆ ತಕ್ಕಂತೆ ಮಾಡಿಕೊಳ್ಳಲು ಯಾವ ಅಡ್ಡಿಯೂ ಇಲ್ಲ. ಅಂಥ ಕೆಲಸಗಳು ನಡೆಯುತ್ತ ಕೂಡ ಬಂದಿವೆ.
ಪ್ರತ್ಯಕ್ಷ-ಪರೋಕ್ಷಗಳಿಗೆ ಅತೀತವಾದ ಅಪರೋಕ್ಷಾನುಭವ
ಶಂಕರ ಮತ್ತು ಆನಂದವರ್ಧನರು ಎರಡು ವರ್ಗದ ವಿರೋಧಿಗಳನ್ನು ಎದುರಿಸಬೇಕಿತ್ತು. ಹೀಗೆ ಎದುರಿಸುವಾಗಲೇ ಅವರಿಗೆ ತಕ್ಕ ಸ್ಥಾನವನ್ನೂ ಕೊಟ್ಟದ್ದು ಇವರ ಉದಾರತೆ.
ವೇದಾಂತಕ್ಕೆ ನಾಸ್ತಿಕರೂ ಕರ್ಮ-ಈಶ್ವರವಾದಿಗಳೂ ವಿರೋಧಿಗಳು. ನಾಸ್ತಿಕರು ಇಂದ್ರಿಯಪ್ರತ್ಯಕ್ಷವನ್ನಷ್ಟೇ ಆದರಿಸಿ ಶ್ರುತಿಯನ್ನಾಗಲಿ ಸಾರ್ವತ್ರಿಕಾನುಭವವನ್ನಾಗಲಿ ಲೆಕ್ಕಿಸುವುದಿಲ್ಲ. ಕರ್ಮವಾದಿಗಳೂ ಈಶ್ವರವಾದಿಗಳೂ ಆಗಮಮಾತ್ರದಲ್ಲಿ ಶ್ರದ್ಧೆಯನ್ನಿರಿಸಿ ತರ್ಕಶುದ್ಧಿಗಾಗಲಿ, ಸಾರ್ವತ್ರಿಕಾನುಭವಕ್ಕಾಗಲಿ ಬೆಲೆ ಕೊಡುವುದಿಲ್ಲ. ಹೀಗೆ ಒಂದು ಕಡೆ ಪ್ರತ್ಯಕ್ಷ-ಅನುಮಾನಗಳಿಗೆ ಮಾತ್ರ ಸೀಮಿತವಾದ ಶುಷ್ಕತರ್ಕದ ಕರ್ಕಶತೆ ಮೆರೆದರೆ ಮತ್ತೊಂದು ಕಡೆ ಶಬ್ದಶಾರಣ್ಯದ ಅಂಧವಿಶ್ವಾಸ ಮಾತ್ರ ಅಬ್ಬರಿಸುತ್ತದೆ. ವಸ್ತುತಃ ಇವೆರಡೂ ಅಜ್ಞಾನ-ಅಹಂಕಾರಗಳಿಂದಲೇ ಪ್ರವೃತ್ತವಾಗಿವೆ. ನಿಜವಾದ ವಿಚಾರವಾದವು ಬುದ್ಧಿಪಾರಮ್ಯದ ಹೆಸರಿನಲ್ಲಿ ಪೂರ್ಣಾನುಭವಕ್ಕೆ ವಿರೋಧಿಯಾಗಬಾರದು; ಇದೇ ರೀತಿ ಪ್ರಾಮಾಣಿಕವಾದ ಶ್ರದ್ಧೆಯು ನಮ್ರತೆಯ ಸೋಗಿನಲ್ಲಿ ಆಗ್ರಹಗಳನ್ನು ಪ್ರತಿಪಾದಿಸಬಾರದು. ಇವೆರಡೂ ದೃಷ್ಟಿಗಳು “ತಮ್ಮತನ”ವನ್ನು ಕಾಪಾಡಿಕೊಳ್ಳಬೇಕೆಂಬ ಹುರುಡಿನಿಂದ ಹೊರಟಿವೆಯಲ್ಲದೆ ನಿಜವಾದ ಅರ್ಥದಲ್ಲಿ ಸತ್ಯಾನ್ವೇಷಣೆಗೆ ತೊಡಗಿಲ್ಲ. ಹೀಗಾಗಿಯೇ ಇವಕ್ಕೆ ಬ್ರಹ್ಮಾನುಭವವು ತಮ್ಮ ಪ್ರತ್ಯೇಕತೆಯನ್ನು ನುಂಗಿಬಿಡುವುದೆಂಬ ಭಯವೂ ಇದೆ. ತಾತ್ಪರ್ಯತಃ ಭಯ-ಶೋಕಗಳೂ ರಾಗ-ದ್ವೇಷಗಳೂ ಅಜ್ಞಾನ-ಅಹಂಕಾರಗಳ ನೆಲೆಯಿಂದ ಮೇಲೆದ್ದು ಇವುಗಳಲ್ಲಿ ದ್ವೈತಭಾವವನ್ನು ತುಂಬಿವೆ. ಮಥಿತಾರ್ಥವಾಗಿ ಹೇಳುವುದಾದರೆ – ನಾಸ್ತಿಕ್ಯದ ತರ್ಕಪಾರಮ್ಯವು ಅಂತರಂಗದಲ್ಲಿ ವಿಚಾರವಿರುದ್ಧವಾದ ಆಗ್ರಹವೇ ಆಗಿದೆ; ಈಶ್ವರವಾದಿಗಳ ಶ್ರದ್ಧಾ-ವಿಶ್ವಾಸಗಳು ಆಳದಲ್ಲಿ ಪರಭಕ್ತಿಗೆ ವಿರುದ್ಧವಾದ ಅಹಂಕಾರವೇ ಆಗಿವೆ. ಒಟ್ಟಿನಲ್ಲಿ ಈ ಎರಡು ಮಾರ್ಗಗಳೂ ತಾವು ಯಾವುದನ್ನು ಪ್ರತಿಪಾದಿಸಲು ಹೊರಟಿವೆಯೋ ಅದಕ್ಕೇ ಕುಠಾರಪ್ರಾಯವಾಗುವಂಥ ನೆಲೆಗೆ ಬಂದು ನಿಲ್ಲುವ ಸ್ಥಿತಿ ಒದಗಿದೆ.
ಹೀಗೆ ಪ್ರತ್ಯಕ್ಷಪ್ರಮಾಣ ಮತ್ತು ಪರೋಕ್ಷ(ಶಬ್ದ)ಪ್ರಮಾಣಗಳ ಎರಡು ತುದಿಗಳಲ್ಲಿ ತುಯ್ದಾಡುತ್ತಿರುವ ದರ್ಶನಗಳ ಕೋಲಾಹಲದ ನಡುವೆ ಶಾಂಕರಾದ್ವೈತವು ಅಪರೋಕ್ಷಪ್ರಮಾಣವನ್ನು ವಿನೂತನವಾದ ರೀತಿಯಲ್ಲಿ ಮುಂದಿಟ್ಟು ಜಗದ್ವ್ಯವಹಾರಗಳ ಮಟ್ಟಿಗೆ ಪ್ರತ್ಯಕ್ಷ-ಅನುಮಾನಗಳಿಗೂ ಕರ್ಮಾಚರಣೆ ಮತ್ತು ನಂಬಿಕೆಗಳ ವಲಯದ ಮಟ್ಟಿಗೆ ಶಬ್ದಪ್ರಮಾಣಕ್ಕೂ ಅರ್ಥವಂತಿಕೆಯನ್ನು ಕಲ್ಪಿಸಿದೆ. ಈ ಕಾರಣದಿಂದಲೇ ಶಾಂಕರಾದ್ವೈತಕ್ಕೆ ಸರ್ವದರ್ಶನಗಳನ್ನೂ ಸಮನ್ವಯ ಮಾಡಬಲ್ಲ ಬಲ್ಮೆ ದಕ್ಕಿದೆ. ಮಿಕ್ಕ ದರ್ಶನಗಳಾದರೋ ಇಂಥ ಸಮನ್ವಯಕ್ಕೆ ಯತ್ನಿಸಿದಲ್ಲಿ ಅದು ಅವುಗಳ ಮಟ್ಟಿಗೆ ಆತ್ಮಹತ್ಯಾಪ್ರಾಯವೇ ಆಗುತ್ತದೆ. ಆದುದರಿಂದ ಅವು ಸಮನ್ವಯಕ್ಕೆ ಎಂದೂ ಯತ್ನಿಸುವುದಿಲ್ಲ. ಮಾತ್ರವಲ್ಲ, ಅಂಥ ಸಮನ್ವಯದ ಪ್ರಯತ್ನಗಳನ್ನೆಲ್ಲ ಹಠ ತೊಟ್ಟಂತೆ ವಿರೋಧಿಸುತ್ತಲೇ ಇರುತ್ತವೆ. ಹೀಗೆ ಅವಿರೋಧ-ಸಮನ್ವಯಗಳೇ ಜೀವಾತುವಾದ ಪ್ರಾಮಾಣಿಕ ದರ್ಶನಶಾಸ್ತ್ರದ ಮೂಲೋದ್ದೇಶವೇ ಇವುಗಳ ಮೂಲಕ ವಂಚಿತವಾಗುತ್ತದೆ.
ಧ್ವನ್ಯಾಲೋಕದ ಮೊದಲಿಗೇ ಆನಂದವರ್ಧನನು ಧ್ವನಿವಿರೋಧಿಗಳನ್ನು ಮೂರು ಬಗೆಯಾಗಿ ವಿಂಗಡಿಸುವನಷ್ಟೆ. ಇವರಲ್ಲಿ ಧ್ವನ್ಯಭಾವವಾದಿಗಳೂ ಭಾಕ್ತವಾದಿಗಳೂ (ವ್ಯಂಜನೆಯನ್ನು ಲಕ್ಷಣೆಯಲ್ಲಿಯೇ ಅಡಗಿಸಬಹುದೆಂಬ ಮತವುಳ್ಳವರು) ಒಂದು ಗುಂಪಾದರೆ ಅನಿರ್ವಚನೀಯತಾವಾದಿಗಳು ಮತ್ತೊಂದು ಗುಂಪಿಗೆ ಸೇರುತ್ತಾರೆ. ಇವೆರಡು ಗುಂಪುಗಳೂ ಬಲುಮಟ್ಟಿಗೆ ಈ ಮುನ್ನ ನಿರೂಪಿಸಲ್ಪಟ್ಟ ಪ್ರತ್ಯಕ್ಷವಾದ ಮತ್ತು ಪರೋಕ್ಷವಾದಗಳಿಗೆ ಸಂವಾದಿಗಳೆನಿಸುತ್ತವೆ. ಶಂಕರರ ಹಾಗೆಯೇ ಆನಂದವರ್ಧನನೂ ವ್ಯಂಜನೆಯನ್ನು ಅಪರೋಕ್ಷವಾದದ ಕ್ರಮದಂತೆ ರಸಾನುಭವದಲ್ಲಿ ತಾತ್ಪರ್ಯವುಳ್ಳ ತತ್ತ್ವವೆಂದು ನಿರೂಪಿಸುತ್ತಾನೆ. ಇದು ಅವನ ವಿರೋಧಿಗಳೆಲ್ಲ ಪ್ರತಿಪಾದಿಸುವ ಗುಣ, ರೀತಿ, ಮಾರ್ಗ, ಅಲಂಕಾರ, ವಕ್ರತೆ ಮುಂತಾದ ಎಲ್ಲ ಕಾವ್ಯತತ್ತ್ವಗಳನ್ನೂ ಸಮನ್ವಯಗೊಳಿಸುತ್ತದೆ. ತನ್ಮೂಲಕ ಈ ಎಲ್ಲ ಅಂಶಗಳೂ ರಸನಿಷ್ಠವಾಗುತ್ತವೆ. ಇದು ಮಹತ್ತ್ವದ ಕಾಣ್ಕೆ. ಏಕೆಂದರೆ ಸಹೃದಯನ ದೃಷ್ಟಿಯಿಂದ ಕಾವ್ಯವ್ಯಾಸಂಗದ ಪರಮಪ್ರಯೋಜನವೇ ರಸಾನುಭವ; ಮಿಕ್ಕ ಎಲ್ಲ ಅಂಶಗಳೂ ಅವನ ಮಟ್ಟಿಗೆ ಅಪ್ರಸ್ತುತ ಅಥವಾ ಗೌಣ.[3]
[1] ವಿಕಲ್ಪನಾಸ್ತು ಪುರುಷಬುದ್ಧ್ಯಪೇಕ್ಷಾ ನ ವಸ್ತುಯಾಥಾತ್ಮ್ಯಜ್ಞಾನಂ ಪುರುಷಬುದ್ಧ್ಯಪೇಕ್ಷ್ಯಂ, ಕಿಂ ತರ್ಹಿ ವಸ್ತುತಂತ್ರಮೇವ ತತ್ | … ಏವಂಭೂತವಸ್ತುವಿಷಯಾಣಾಂ ಪ್ರಾಮಾಣ್ಯಂ ವಸ್ತುತಂತ್ರಮ್ | ತತ್ರೈವಂ ಸತಿ ಬ್ರಹ್ಮಜ್ಞಾನಮಪಿ ವಸ್ತುತಂತ್ರಮೇವ | ಭೂತವಸ್ತುವಿಷಯತ್ವಾತ್ | (ಶಾರೀರಕಭಾಷ್ಯ, 1.1.2) … ನ ಪುರುಷವ್ಯಾಪಾರತಂತ್ರಾ ಬ್ರಹ್ಮವಿದ್ಯಾ | ಕಿಂ ತರ್ಹಿ ಪ್ರತ್ಯಕ್ಷಾದಿಪ್ರಮಾಣವಿಷಯವಸ್ತುಜ್ಞಾನವದ್ವಸ್ತುತಂತ್ರಾ | … ಜ್ಞಾನಂ ತು ಪ್ರಮಾಣಜನ್ಯಮ್ | ಪ್ರಮಾಣಂ ಚ ಯಥಾ ಭೂತವಸ್ತುವಿಷಯಮ್ | ಅತೋ ಜ್ಞಾನಂ ಕರ್ತುಮಕರ್ತುಮನ್ಯಥಾ ವಾ ಕರ್ತುಮಶಕ್ಯಮ್ | ಕೇವಲಂ ವಸ್ತುತಂತ್ರಮೇವ ತನ್ನ ಚೋದನಾತಂತ್ರಂ ನಾಪಿ ಪುರುಷತಂತ್ರಮ್ || (ಶಾರೀರಕಭಾಷ್ಯ, 1.1.4)
[2] ನ ಪ್ರಮಾತೃತ್ವಮಂತರೇಣ ಪ್ರಮಾಣಪ್ರವೃತ್ತಿರಸ್ತಿ | ತಸ್ಮಾದವಿದ್ಯಾವದ್ವಿಷಯಾಣ್ಯೇವ ಪ್ರತ್ಯಕ್ಷಾದೀನಿ ಪ್ರಮಾಣಾನಿ ಶಾಸ್ತ್ರಾಣಿ ಚ || (ಅಧ್ಯಾಸಭಾಷ್ಯ)
[3] ಮಮ್ಮಟಾದಿಗಳು ಹೇಳುವ ಕಾವ್ಯಪ್ರಯೋಜನಗಳಲ್ಲಿ ನಮೂದಿತವಾದ ಯಶಸ್ಸು ಮತ್ತು ಸಂಪತ್ತಿಗಳು ಕವಿಗೆ ಮಾತ್ರ ಸಲ್ಲುತ್ತವೆ. ವ್ಯವಹಾರಜ್ಞಾನ ಅಥವಾ ವ್ಯುತ್ಪತ್ತಿ ಕಾವ್ಯೇತರವಾದ ಶಾಸ್ತ್ರ-ವಿದ್ಯೆಗಳಿಂದಲೂ ಮತ್ತಷ್ಟು ಚೆನ್ನಾಗಿ ಸಹೃದಯರಿಗೆ ದಕ್ಕಬಹುದಾದ ಕಾರಣ ಇದು ಅನನ್ಯವಲ್ಲ. ಇನ್ನುಳಿದ ಶಿವೇತರಕ್ಷತಿ ನಂಬಿಕೆಯ ವಲಯದ್ದು. ಅದಕ್ಕೆ ಲೋಕಪ್ರಮಾಣವಿಲ್ಲ. ಹೀಗಾಗಿ ಕಡೆಗೆ ನಿಲ್ಲುವ ಸದ್ಯಃಪರನಿರ್ವೃತಿ ಅಥವಾ ರಸಾಸ್ವಾದ ಮಾತ್ರ ಸಹೃದಯನ ಸೊತ್ತು. ಹೀಗೆ ಕಾವ್ಯವನ್ನು ತತ್ತ್ವತಃ ಸಹೃದಯನ ಸೊತ್ತಾಗಿಸಿದ ಆನಂದವರ್ಧನನ ಕೊಡುಗೆ ಮಿಗಿಲಾದುದು.
ಇದೇ ರೀತಿ ವೇದಾಂತಶಾಸ್ತ್ರವನ್ನು ಕರ್ಮಕಾಂಡಿಗಳಿಂದ, ಶ್ರದ್ಧಾಜಡರಿಂದ, ಶುಷ್ಕತಾರ್ಕಿಕರಿಂದ ದೂರವಾಗಿಸಿ ನಿಜವಾದ ಮುಮುಕ್ಷುಗಳಿಗೆ ದಕ್ಕಿಸಿದ ಶಂಕರರ ಕಾಣ್ಕೆಯೂ ಹಿರಿದು. ಮಾತ್ರವಲ್ಲ, ಬ್ರಹ್ಮಜ್ಞಾನವು ಮಿಕ್ಕ ಯಾವುದೇ ಪ್ರಯೋಜನಗಳನ್ನು ನೀಡದೆ ಭಯ-ಶೋಕ-ಮೋಹಗಳ ನಿವೃತ್ತಿಯನ್ನಷ್ಟೇ ಮಾಡುವುದೆಂದು ನಿರೂಪಿಸಿರುವುದು ಆನಂದವರ್ಧನನು ನಿರೂಪಿಸಿರುವ ಸಹೃದಯರ ರಸನಿಷ್ಠೆಗೆ ಸಂವಾದಿ.
To be continued.