ಇಂತಿದ್ದರೂ ಶಂಕರ-ಆನಂದವರ್ಧನರು ತಮ್ಮ ಕಾಲವನ್ನಷ್ಟೇ ಅಲ್ಲ, ಎಲ್ಲ ಕಾಲವನ್ನೂ ಮೀರಿ ನಿಲ್ಲಬಲ್ಲ ಸತ್ತ್ವವನ್ನು ಹೊಂದಿದ್ದಾರೆ. ಅವರ ವಿಚಾರಗಳನ್ನು ರೂಪಮಾತ್ರದಿಂದ ಅಳೆಯುವುದು ಅವರಿಗೆ ಮಾತ್ರವಲ್ಲ, ನಮಗೂ ಮಾಡಿಕೊಳ್ಳುವ ಅನ್ಯಾಯ; ಜ್ಞಾನಜಗತ್ತಿಗೇ ಮಾಡುವ ಅನ್ಯಾಯ. ಅಭಿವ್ಯಕ್ತಿಯ ಜಟಿಲತೆಯಿಂದ, ಉದಾಹರಣೆಗಳ ಅಸುಂದರತೆಯಿಂದ, ವಾದೋಪಯೋಗಿಯಾದ ನ್ಯಾಯ-ದೃಷ್ಟಾಂತಗಳ ಏಕದೇಶೀಯತೆಯಿಂದ ಅವರ ತತ್ತ್ವಕ್ಕೆ ಯಾವುದೇ ಕೊರತೆಯಾಗಿಲ್ಲ. ಈ ಅಂಶಗಳನ್ನು ನಾವು ಅವರಿಗಿಂತ ಚೆನ್ನಾಗಿ ಆ ಪರಂಪರೆಯಿಂದಲೋ ನಮ್ಮ ಪರಿಸರದಿಂದಲೋ ತುಂಬಿಕೊಳ್ಳಬಹುದು. ಇದು ಕಷ್ಟದ ಸಂಗತಿಯೇನಲ್ಲ. ಆದರೆ ಅವರು ಕಾಣಿಸಿದ ತತ್ತ್ವವನ್ನು ಮಾತ್ರ ಯಾರೇ ಆಗಲಿ ತಾವಾಗಿ ಸಾಕ್ಷಾತ್ಕರಿಸಿಕೊಳ್ಳುವುದು ಅಸಾಧ್ಯವೆಂಬಷ್ಟರ ಮಟ್ಟಿಗೆ ದುಷ್ಕರ. ಈ ತಥ್ಯವನ್ನು ಮನಗಂಡರೆ ಅವರ ಮೇಲಣ ಆಗ್ರಹಗಳು ಇಳಿದುಹೋಗುತ್ತವೆ. ಇದರೊಟ್ಟಿಗೆ ನಾವು ಗಮನಿಸಬೇಕಾದ ಮತ್ತೂ ಒಂದು ಮಾರ್ಮಿಕವಾದ ವಾಸ್ತವವಿದೆ. ಇಂದು ನಾವು ಶಂಕರ-ಆನಂದವರ್ಧನರ ವಿಚಾರಗಳನ್ನು ಸಹಜವೂ ಸರಳವೂ ಆದ ಸತ್ಯಗಳೆಂದು ನೆಮ್ಮದಿಯಾಗಿ ಒಪ್ಪಿಕೊಂಡಿದ್ದೇವೆ. ಇದಕ್ಕೆ ಕಾರಣ ಅವು ಆ ಕಾಲದಿಂದ ಮೊದಲ್ಗೊಂಡು ಈ ಕಾಲದವರೆಗೆ ಎಷ್ಟೋ ವಿದ್ವಾಂಸರ ವಿಚಾರಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬಂದಿರುವುದು. ಅವು ಇಂಥ ಅಗ್ನಿದಿವ್ಯಗಳನ್ನು ಹಾಯ್ದುಬರುವಾಗ ತರ್ಕಕರ್ಕಶವಾದ ವಾದ-ಉಪವಾದಗಳು ಅನಿವಾರ್ಯ. ಅಷ್ಟೇಕೆ, ಯಾವುದೇ ಶಾಸ್ತ್ರ ಸರ್ವಾಂಗೀಣವಾಗಿ ಮೈದಳೆಯುವುದು ಇಂಥ ಕಠಿನೋಪಕ್ರಮಗಳಿಂದಲೇ. ಇದನ್ನು ಮನಸ್ಸಿಗೆ ತಂದುಕೊಂಡಾಗ ಎಲ್ಲ ಶಾಸ್ತ್ರಗಳ ನಿರ್ಮಾಣಸರಣಿಯಲ್ಲಿ ಪ್ರಮುಖವಾದ ಪಾತ್ರ ವಹಿಸಿದ ವಿದ್ವಾಂಸರನ್ನು ಕುರಿತು ನಮಗೆ ಗೌರವಬುದ್ಧಿಯೂ ಅವರ ಕಾಲದ ತವಕ-ತಲ್ಲಣಗಳ ವಿಷಯದಲ್ಲಿ ಸಹಾನುಭೂತಿಯೂ ಉಂಟಾಗದಿರವು. ಒಂದು ವೇಳೆ ಶಂಕರ-ಆನಂದವರ್ಧನರು ಆ ಕಾಲದ ವಿದ್ವಜ್ಜನರಿಗೆ ಸಮ್ಮತವಾದ ರೀತಿಯಲ್ಲಿ ತಮ್ಮ ಸ್ವೋಪಜ್ಞವಿಚಾರಗಳನ್ನು ಮಂಡಿಸದಿದ್ದಲ್ಲಿ ಅವು ಇಲ್ಲಿಯವರೆಗೆ ಉಳಿದುಬಂದು ನಮಗೆ ದಕ್ಕುತ್ತಲೇ ಇರಲಿಲ್ಲ. ಏಕೆಂದರೆ ಬಹುಮತವುಳ್ಳ ಯಾವುದೇ ಪದ್ಧತಿಯನ್ನು ಅನುಸರಿಸದ ಕ್ರಮಕ್ಕೆ ಆಯಾ ಕಾಲದ ಸಮಾಜ ಬೆಲೆ ಕೊಡುವುದಿಲ್ಲ. ಮಾತ್ರವಲ್ಲ, ಅದನ್ನು ಉಳಿಯಗೊಡುವುದೂ ಇಲ್ಲ. ಹೀಗಾಗಿ ಶಂಕರ-ಆನಂದವರ್ಧನರ ಇತಿ-ಮಿತಿಗಳು ಹೆಚ್ಚಾಗಿ ಅವರ ಕಾಲದ ಒಟ್ಟಂದದ ವಿದ್ವನ್ಮನೋಧರ್ಮದ ಇತಿ-ಮಿತಿಗಳೇ ಹೊರತು ಅವರವೇ ಅಲ್ಲವೆಂಬುದನ್ನು ನಾವು ಮನಗಾಣಬೇಕು.
ಒಟ್ಟಿನಲ್ಲಿ ಶಂಕರ-ಆನಂದವರ್ಧನರಲ್ಲಿ ಆಗೀಗ ತೋರುವ, ಗೌಣವೂ ಆದ ಒರೆ-ಕೋರೆಗಳಿಗೆ ಅವರಿಂದಲೇ ಪರಿಹಾರಗಳನ್ನು ಪಡೆಯಬಹುದಾದ ಕಾರಣ ಇವರನ್ನು ಅಧ್ಯಯನ ಮಾಡುವ ಜಿಜ್ಞಾಸುಗಳು ಎಚ್ಚರವಹಿಸಿ ನಡೆದಲ್ಲಿ ಯಾವುದೇ ತೊಡಕು ತಲೆದೋರುವುದಿಲ್ಲ. ಇಂಥ ಅವಧಾನವಿಲ್ಲದೆ ಆಗ್ರಹದಿಂದ ಶಂಕರ-ಆನಂದವರ್ಧನರನ್ನು ದೂಷಿಸುವುದಾಗಲಿ, ಸತೃಣಾಭ್ಯವಹಾರಿಗಳಾಗಿ ಎಲ್ಲವನ್ನೂ ಒಪ್ಪಿಕೊಂಡು ಗೊಂದಲಕ್ಕೀಡಾಗುವುದಾಗಲಿ ಸಲ್ಲದು. ಅಮುಖ್ಯವಿಷಯಗಳಲ್ಲಿ ಕಾಣುವ ಕುಂದು-ಕೊರತೆಗಳನ್ನೇ ಮುಂದುಮಾಡಿಕೊಂಡು ಮಹನೀಯರನ್ನು ನಿಂದಿಸುವುದು ತರವಲ್ಲವೆಂಬ ಆನಂದವರ್ಧನನ ಮಾತಿಲ್ಲಿ ಸ್ಮರಣೀಯ: ಸೂಕ್ತಿಸಹಸ್ರದ್ಯೋತಿತಾತ್ಮನಾಂ ಮಹಾತ್ಮನಾಂ ದೋಷೋದ್ಘಾಟನಮ್ ಆತ್ಮನ ಏವ ದೂಷಣಂ ಭವತಿ (ಧ್ವನ್ಯಾಲೋಕ, ೨.19 ವೃತ್ತಿ).
ಉಪಸಂಹಾರ
ಶಂಕರ-ಆನಂದವರ್ಧನರು ಕ್ರಮವಾಗಿ ಸತ್ಯ ಮತ್ತು ಸೌಂದರ್ಯಗಳ ಪರಮಾರ್ಥ ಎಲ್ಲಿದೆಯೆಂಬುದನ್ನು ಎಲ್ಲರ ಅರಿವಿಗೂ ದಕ್ಕಿಸಿಕೊಡುವಲ್ಲಿ ಅನನ್ಯವಾಗಿ ದುಡಿದವರು. ಇವರು ಸತ್ಯ-ಸೌಂದರ್ಯಗಳ ಸಾಕ್ಷಾತ್ಕಾರವನ್ನು ಮಾಡಿಕೊಂಡದ್ದಷ್ಟೇ ಅಲ್ಲದೆ ಮಿಕ್ಕವರೂ ಅದನ್ನು ನಿಶ್ಚಿತವಾಗಿ ದಕ್ಕಿಸಿಕೊಳ್ಳುವ ಕ್ರಮವನ್ನೂ ವ್ಯವಸ್ಥಿತರೀತಿಯಲ್ಲಿ ನಿರೂಪಿಸಿದ್ದಾರೆ. ಹೀಗೆ ಸಿದ್ಧಿ ಮತ್ತು ಸಾಧನೆಗಳೆರಡನ್ನೂ ನಿಃಸಂದಿಗ್ಧವಾಗಿ ವಿಶದೀಕರಿಸುವುದು ಜ್ಞಾನೇತಿಹಾಸದಲ್ಲಿಯೇ ವಿರಳ. ಏಕೆಂದರೆ ವಿಷಯವೆನಿಸಿದ ಭೌತಪ್ರಪಂಚದ ವಿಜ್ಞಾನ-ತಂತ್ರಜ್ಞಾನಗಳ ಪರಮರಹಸ್ಯಗಳನ್ನು ಆವಿಷ್ಕರಿಸುವುದಕ್ಕಿಂತಲೂ ವಿಷಯಿಯಾದ ಸ್ವಸಂವೇದನೆಯ ಅಂತರಾಳವನ್ನು ತೆರೆದಿಡುವುದು ಪರಮಕಷ್ಟ. ಎಷ್ಟೋ ಮಂದಿ ಜ್ಞಾನಿಗಳೂ ಕವಿಗಳೂ ಸತ್ಯ-ಸೌಂದರ್ಯಗಳನ್ನು ತಮ್ಮ ಸಾಧನೆಗಳ ಮೂಲಕ ಕಂಡಿರುತ್ತಾರೆ. ಆದರೆ ಇವನ್ನು ಮಿಕ್ಕವರಿಗೆ ಕಾಣಿಸಿಕೊಡುವಲ್ಲಿ ಅದೆಷ್ಟೋ ಬಾರಿ ಸೋಲುತ್ತಾರೆ. ಇದೇ ರೀತಿ ಅಸಂಖ್ಯವಿದ್ವಾಂಸರು ಇವನ್ನು ತರ್ಕಶುದ್ಧವಾಗಿ ವಿವರಿಸಲು ಹುರುಡುಗಟ್ಟಿ ಮುಂದುವರಿಯುತ್ತಾರೆ; ಆದರೆ ದಯನೀಯವಾಗಿ ಸೋಲುತ್ತಾರೆ. ಇಂಥ ವಿಪರ್ಯಾಸಗಳಿಗೆ ಕಾರಣ ಮೊದಲ ವರ್ಗದವರಿಗೆ ಶಾಸ್ತ್ರಶುದ್ಧವಾದ ಅಭಿವ್ಯಕ್ತಿಯ ಕೊರತೆ ಮತ್ತು ಎರಡನೆಯ ವರ್ಗದವರಿಗೆ ಪೂರ್ಣಾನುಭವದ ಅಭಾವವಲ್ಲದೆ ಬೇರಲ್ಲ.
ಶಂಕರ-ಆನಂದವರ್ಧನರು ಇಂಥ ಯಾವುದೇ ಕೊರತೆಯಿಲ್ಲದ ಪ್ರತಿಭಾ-ಪಾಂಡಿತ್ಯಶಾಲಿಗಳು. ಶಂಕರರು ಬ್ರಹ್ಮಜ್ಞಾನಿ ಮತ್ತು ಅತ್ಯುತ್ತಮವಿದ್ವಾಂಸ. ಆನಂದವರ್ಧನ ಸತ್ಕವಿ ಮತ್ತು ಪ್ರಗಲ್ಭಪಂಡಿತ. ಹೀಗೆ ಇವರಿಬ್ಬರಲ್ಲಿ ದರ್ಶನ ಮತ್ತು ವರ್ಣನಗಳು ಪರಸ್ಪರ ಪೂರಕವಾಗಿ ಪೂರ್ಣತೆಯನ್ನು ಗಳಿಸಿವೆ. ಆದುದರಿಂದಲೇ ಅವರು ಬ್ರಹ್ಮ-ರಸಗಳ ವಿವೇಚನೆಯಲ್ಲಿ ಅದ್ವಿತೀಯರು. ಇದು ಭಾರತೀಯಪರಂಪರೆಯು ವಿಶ್ವಕ್ಕೆ ಕೊಟ್ಟ ಅನ್ಯಾದೃಶವಾದ ಕೊಡುಗೆ. ಯಾವುದು ಆತ್ಯಂತಿಕವಾಗಿ ಭಾರತೀಯವೋ ಅದು ಸಹಜವಾಗಿಯೇ ವೈಶ್ವಿಕವೆಂಬ ಸಮೀಕರಣದಂತೆ ಶಂಕರ-ಆನಂದವರ್ಧನರು ವಿಶ್ವಪ್ರಜ್ಞೆಗೆ ತುಂಬುತನ ತಂದವರು. ಇವರಿಬ್ಬರ ವಿಚಾರಕ್ರಮ ಅತ್ಯಂತ ವೈಜ್ಞಾನಿಕ. ಹೀಗಾಗಿಯೇ ಭಾರತೀಯಚಿಂತನಕ್ರಮದ ಅತ್ಯುಚ್ಚವಾದ ಮಾದರಿಯನ್ನು ಇವರಲ್ಲಿ ಕಾಣಬಹುದು. ಇವರಿಬ್ಬರೂ ಸತ್ಯ ಮತ್ತು ಸೌಂದರ್ಯಗಳ ಜೀವಾಳವನ್ನು ತೆರೆದಿಟ್ಟವರೆಂದು ಕಂಡೆವಷ್ಟೆ. ಇನ್ನು ನಮಗುಳಿಯುವುದು ತಥ್ಯಜಗತ್ತಿನ—ಅಂದರೆ ವಿಜ್ಞಾನ-ತಂತ್ರಜ್ಞಾನಗಳ—ಪಾರವನ್ನು ಕಾಣುವುದಷ್ಟೇ. ಈ ನಿಟ್ಟಿನಲ್ಲಿ ಭಾರತೀಯರೂ ಮಿಕ್ಕವರೂ ದುಡಿಯಲು ಶಂಕರ-ಆನಂದವರ್ಧನರ ಬೆಳಕು ದಾರಿದೀವಿಗೆಯಾಗದಿರದು. ಏಕೆಂದರೆ ಅವರ ಅಸಾಧಾರಣವಾದ ವಿಚಾರಕ್ರಮ ಮತ್ತು ಚಿಂತನಫಲಿತಗಳಲ್ಲಿ ತಥ್ಯ-ಸತ್ಯಗಳ ಹಾಗೂ ಅಭಿವ್ಯಕ್ತಿ-ಆಸ್ವಾದಗಳ ನಡುವಣ ಎಲ್ಲ ಬಗೆಯ ಜ್ಞಾನಾನುಭವಚ್ಛಾಯೆಗಳೂ ಎಡೆಮಾಡಿಕೊಂಡಿವೆ.
ಶಂಕರ-ಆನಂದವರ್ಧನರು ಅದೆಷ್ಟು ಹೃದಯವೈಶಾಲ್ಯವುಳ್ಳವರು, ಮತ್ತೆಷ್ಟು ಭಾವಸಂಪನ್ನರೆಂಬುದಕ್ಕೆ ನಿದರ್ಶನವಾಗಿ ಅವರ ಎರಡು ಸ್ತುತಿಗಳನ್ನು ಗಮನಿಸಬಹುದು:
ಸತ್ಯಪಿ ಭೇದಾಪಗಮೇ ನಾಥ ತವಾಹಂ ನ ಮಾಮಕೀನಸ್ತ್ವಮ್ |
ಸಾಮುದ್ರೋ ಹಿ ತರಂಗಃ ಕ್ವಚನ ಸಮುದ್ರೋ ನ ತಾರಂಗಃ || (ವಿಷ್ಣುಷಟ್ಪದೀ, 3)
(ದೇವ, ಬ್ರಹ್ಮಾನುಭವದಲ್ಲಿ ಕೇವಲಾದ್ವೈತವೆಂಬುದು ಸತ್ಯವೇ ಹೌದಾದರೂ ಭಕ್ತ-ಭಗವಂತರ ಸಂಬಂಧವನ್ನು ಅನುಲಕ್ಷಿಸಿದಾಗ ನಾನು ನಿನ್ನವನೇ ಹೊರತು ನೀನು ನನ್ನವನಲ್ಲ. ಅಲೆಗಳು ಕಡಲಿಗೆ ಸೇರಿವೆ. ಆದರೆ ಕಡಲು ಅಲೆಗಳಿಗೆ ಸೇರಿಲ್ಲ.)
ಯಾ ವ್ಯಾಪಾರವತೀ ರಸಾನ್ ರಸಯಿತುಂ ಕಾಚಿತ್ಕವೀನಾಂ ನವಾ
ದೃಷ್ಟಿರ್ಯಾ ಪರಿನಿಷ್ಠಿತಾರ್ಥವಿಷಯೋನ್ಮೇಷಾ ಚ ವೈಪಶ್ಚಿತೀ |
ತೇ ದ್ವೇ ಅಪ್ಯವಲಂಬ್ಯ ವಿಶ್ವಮನಿಶಂ ನಿರ್ವರ್ಣಯಂತೋ ವಯಂ
ಶ್ರಾಂತಾ ನೈವ ಚ ಲಬ್ಧಮಬ್ಧಿಶಯನ ತ್ವದ್ಭಕ್ತಿತುಲ್ಯಂ ಸುಖಮ್ || (ಧ್ವನ್ಯಾಲೋಕ, 3.43 ವೃತ್ತಿಯಲ್ಲಿ)
(ರಸಾಸ್ವಾದನೆಗೆ ಒದಗಿಬರುವ ಕವಿಗಳ ಹೊಸಬಗೆಯ ಭಾವಗಳನ್ನೂ ವಸ್ತುವಿಚಾರವನ್ನು ಅರಿಯಲು ಬೇಕಾದ ವಿದ್ವಾಂಸರ ಪ್ರಜ್ಞಾಪಾಟವವನ್ನೂ ಆವಲಂಬಿಸಿ ಈ ಜಗತ್ತನ್ನು ಗಾಢವಾಗಿ ಅನುಭವಿಸಿ ಬಳಲಿದ್ದೇನೆ. ಸ್ವಾಮಿ, ನಿನ್ನ ಭಕ್ತಿಗೆ ಸಮನಾದ ಸುಖವನ್ನು ನಾನು ಎಲ್ಲಿಯೂ ಗಳಿಸಲಿಲ್ಲ.)
ಇವೆರಡೂ ಅವರವರ ಇಷ್ಟದೇವತೆಯಾದ ವಿಷ್ಣುವಿನ ಸ್ತುತಿಗಳು. ನಾರಾಯಣನು ಅವರ ಇಷ್ಟದೈವವೆಂಬ ಮಾತ್ರಕ್ಕೆ ಅವರು ಮಿಕ್ಕ ದೇವತೆಗಳಿಗೆ ವಿಮುಖರಾಗಿದ್ದರೆಂದು ತಾತ್ಪರ್ಯವಲ್ಲ. ಆನಂದವರ್ಧನ ರಚಿಸಿದ ದೇವೀಶತಕವಾಗಲಿ, ಶಂಕರರು ಮಾಡಿದ ವಿವಿಧದೇವತಾಸ್ತುತಿಗಳಾಗಲಿ ಅವರ ಸರ್ವದೇವತಾಸಾಮರಸ್ಯಕ್ಕೆ ಸಮರ್ಥ ನಿದರ್ಶನಗಳು. ಈ ವಿಚಾರ ಹಾಗಿರಲಿ. ಸದ್ಯದ ಪದ್ಯಗಳಲ್ಲಿರುವುದು ಸ್ವಲ್ಪ ಮಟ್ಟಿಗೆ ಅವರ ತತ್ತ್ವಕ್ಕೇ ವಿರುದ್ಧವೆನ್ನಬಹುದಾದ ನಿಲವಿನ ಕಾವ್ಯಾತ್ಮಕನಿರೂಪಣೆ. ಆದರೆ ಇಲ್ಲಿ ತೋರುವ ವೈರುದ್ಧ್ಯ ಆಪಾತವಲ್ಲದೆ ಪರಮಾರ್ಥವಲ್ಲ. ಏಕೆಂದರೆ ವಿವಿಧಾನುಭವಗಳನ್ನು ಆಯಾ ಚೌಕಟ್ಟುಗಳಲ್ಲಿ ಇರಿಸಿ ನೋಡಿ ಅವುಗಳ ಅರ್ಥವಂತಿಕೆಯನ್ನು ಆ ಮಟ್ಟದೊಳಗೆ ಗ್ರಹಿಸಬಲ್ಲ ಬಲ್ಮೆ ಶಂಕರ-ಆನಂದವರ್ಧನರಿಗೆ ತಮ್ಮ ಕಾಣ್ಕೆಗಳ ಕಾರಣ ಆತ್ಮಸಾತ್ತಾಗಿದೆ. ಇಂಥ ವಿವೇಕಕ್ಕೆ ತುಂಬ ಹೃದಯೌದಾರ್ಯ ಮತ್ತು ಧೀನೈಶಿತ್ಯಗಳು ಬೇಕು. ಇವು ಅವರಿಬ್ಬರ ವ್ಯಕ್ತಿತ್ವದಲ್ಲಿಯೇ ಮೂರ್ತಿಮತ್ತಾಗಿವೆ.
ಅದೈತತತ್ತ್ವರಸಯಜ್ಞಸಮಿಂಧನೇऽಸೌ
ಮಂತ್ರಧ್ವನಿರ್ಜಯತಿ ಶಂಕರಸಂಯಮೀಂದ್ರಃ |
ಆನಂದವರ್ಧನಸುಧೀರಪಿ ಸಾಮಧಾಮಾ
ವ್ಯಂಗ್ಯಾರ್ಥಭೂತಪರಮಾದ್ವಯತತ್ತ್ವಸತ್ರೇ||
* * *
ಆಧಾರಗ್ರಂಥಗಳು
- ಈಶಾದಿದಶೋಪನಿಷದಃ ಶಾಂಕರಭಾಷ್ಯಸಮೇತಾಃ. ದೆಹಲಿ: ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, 1964
- ಶ್ರೀಮದ್ಭಗವದ್ಗೀತಾ ಶಾಂಕರಭಾಷ್ಯಸಮೇತಾ. ದೆಹಲಿ: ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, 1981
- ಶ್ರೀಬ್ರಹ್ಮಸೂತ್ರಂ ಶಾಂಕರಭಾಷ್ಯೋಪೇತಮ್. ದೆಹಲಿ: ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, 1964
- ಶ್ರೀಮದ್ವಿದ್ಯಾರಣ್ಯಮುನಿವಿರಚಿತ ಜೀವನ್ಮುಕ್ತಿವೇವಕ. (ಕನ್ನಡ ಅನುವಾದ: ಸ್ವಾಮಿ ಹರ್ಷಾನಂದ). ಬೆಂಗಳೂರು: ಶ್ರೀರಾಮಕೃಷ್ಣ ಆಶ್ರಮ, 1990
- ಧ್ವನ್ಯಾಲೋಕ (ಇಂಗ್ಲಿಷ್ ಅನುವಾದ: ಡಾ|| ಕೆ. ಕೃಷ್ಣಮೂರ್ತಿ). ದೆಹಲಿ: ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, 1982
- ನಾಟ್ಯಶಾಸ್ತ್ರ (ಅಭಿನವಭಾರತಿಯೊಡನೆ; ಸಂ: ಡಾ|| ಆರ್. ಎಸ್. ನಾಗರ್). ದೆಹಲಿ: ಪರಿಮಲ ಪ್ರಕಾಶನ, 1988
- ಕಾವ್ಯಪ್ರಕಾಶ (ಸಂಕೇತ-ಮಧುಮತೀವ್ಯಾಖ್ಯಾನಗಳೊಡನೆ. ಸಂ: ವಿದ್ವಾನ್ ಎನ್. ಎಸ್. ವೇಂಕಟನಾಥಾಚಾರ್ಯ). ಮೈಸೂರು: ಪ್ರಾಚ್ಯವಿದ್ಯಾಸಂಶೋಧನಾಲಯ, 1974