ಅತೀಂದ್ರಿಯಸಿದ್ಧಿ-ಚಿತ್ರಕವಿತೆ
ಶಂಕರ-ಆನಂದವರ್ಧನರು ಬ್ರಹ್ಮ ಮತ್ತು ರಸಗಳಲ್ಲಿಯೇ ತಾತ್ಪರ್ಯವುಳ್ಳವರಾದ ಕಾರಣ ಇವಕ್ಕೆ ಹೊರತಾಗಿ ನಿಲ್ಲಬಲ್ಲ ಯಾವ ಅಂಶವನ್ನೂ ಮಿಗಿಲಾಗಿ ಆದರಿಸುವುದಿಲ್ಲ. ಏಕೆಂದರೆ ಇಂಥ ಅಸ್ಥಾನದ ಆದರಣೆಯು ಪೂರ್ಣಾನುಭವಕ್ಕೆ ಚ್ಯುತಿಯನ್ನು ತರುತ್ತದೆ. ಇದೇ ಕಾರಣದಿಂದ ಸಿದ್ಧಪುರುಷರಲ್ಲಿಯೂ ಅವರ ಸಿದ್ಧಿಗಳಲ್ಲಿಯೂ ಗೌರವಭಾವವನ್ನು ತಳೆದಿದ್ದರೂ ಬ್ರಹ್ಮದಲ್ಲಿ ಪರ್ಯವಸಿಸದ ಯೋಗಿಪ್ರತ್ಯಕ್ಷದಂಥ ಅಂಶಗಳನ್ನೂ ಬಗೆಬಗೆಯ ಸಿದ್ಧಿಗಳನ್ನೂ ಪರಮಾರ್ಥಕ್ಕೆ ಅನಪೇಕ್ಷಿತವೆಂದು ಶಂಕರರು ಬದಿಗಿಡುತ್ತಾರೆ.[1] ಹೀಗೆಯೇ ದೇವೀಶತಕದಂಥ ಅಪೂರ್ವವಾದ ಚಿತ್ರಕಾವ್ಯವನ್ನು ರಚಿಸಿದ್ದವನಾದರೂ ರಸದಲ್ಲಿ ಪರ್ಯವಸಿಸದ ಚಿತ್ರವೆಂಬ ಕಾವ್ಯಪ್ರಕಾರವನ್ನು ಉಪಚಾರಕ್ಕಾಗಿ ಮಾತ್ರ ಕವಿತೆಯೆಂದು ಆನಂದವರ್ಧನ ಹೆಸರಿಸುತ್ತಾನೆ.[2] ಇವರಿಬ್ಬರಿಗೂ ಬ್ರಹ್ಮ ಮತ್ತು ರಸಗಳಿಗೆ ಅಧೀನವಾಗಬಲ್ಲ ಸಿದ್ಧಿ ಮತ್ತು ಚಿತ್ರಗಳ ವಿಷಯದಲ್ಲಿ ಅನುಚಿತವಾದ ಯಾವುದೇ ಆಗ್ರಹವಿಲ್ಲವೆಂಬುದಕ್ಕೆ ಸಾಕ್ಷಿಯಾಗಿ ಇವರ ಅನುಯಾಯಿಗಳಾದ ಪರವರ್ತಿ ವಿದ್ವಾಂಸರು ಇವನ್ನು ವಿಸ್ತರಿಸಿ ವಿವೇಚಿಸಿರುವುದನ್ನು ನಾವು ಕಾಣುತ್ತೇವೆ.[3]
ಮಿತಿಗಳು
ದೇಶ-ಕಾಲಗಳ ಚೌಕಟ್ಟಿನೊಳಗೆ ವ್ಯವಹರಿಸುವಾಗ ಎಂಥ ಜ್ಞಾನಿಗಾಗಲಿ, ವಿದ್ವಾಂಸನಿಗಾಗಲಿ ಕೆಲವೊಂದು ಇತಿ-ಮಿತಿಗಳು ಒದಗುತ್ತವೆ. ಇಂಥವು ಎಷ್ಟೋ ಬಾರಿ ಅವರ ಕಾಲದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕಪ್ರಭಾವಗಳಿಂದ ಮೂಡಿರುತ್ತವೆ. ಇವು ಸಹಜವಾಗಿಯೇ ವಿಭಿನ್ನ ದೇಶ-ಕಾಲಗಳಲ್ಲಿ ಅನುದಾರವೂ ಅಪ್ರಸ್ತುತವೂ ಆಗುತ್ತವೆ; ಹಲವೊಮ್ಮೆ ಉಪೇಕ್ಷಣೀಯವಾದ ಲಘುಸಂಗತಿಗಳೆನಿಸುತ್ತವೆ. ಈ ತೆರನಾದ ಅಲ್ಪ-ಸ್ವಲ್ಪದ ಓರೆ-ಕೋರೆಗಳು ಶಂಕರ ಮತ್ತು ಆನಂದವರ್ಧನರಂಥ ಮಹಾಮನೀಷಿಗಳನ್ನೂ ಬಿಟ್ಟಿಲ್ಲವೆಂಬುದು ಕಸಿವಿಸಿಯ ಸಂಗತಿ. ಆದರೂ ಹೆಚ್ಚಿನ ನೆಮ್ಮದಿಯ ವಿಚಾರವೆಂದರೆ ಈ ಕೆಲವು ಇತಿ-ಮಿತಿಗಳು ಅವರ ಮುಖ್ಯಸಿದ್ಧಾಂತದಲ್ಲಿ ಸ್ವಲ್ಪವೂ ಎಡತಾಕಿಲ್ಲ; ಗೌಣವಾದ ವಿವೇಚನೆಗಳಲ್ಲಿ ಮಾತ್ರ ಆಗೊಮ್ಮೆ ಈಗೊಮ್ಮೆ ಸುಳಿದಿವೆ. ಇವನ್ನು ನಾವು ನಿಶ್ಚಿಂತೆಯಾಗಿ ಉಪೇಕ್ಷಿಸಬಹುದು. ಏಕೆಂದರೆ ಇವುಗಳಿಗೆ ಐತಿಹಾಸಿಕವಾದ ಅಸ್ತಿತ್ವವುಂಟೇ ಹೊರತು ಸಾರ್ವತ್ರಿಕವಾದ ಅನ್ವಯವಿಲ್ಲ. ಈ ನಿಟ್ಟಿನಲ್ಲಿ ಕೆಲವೊಂದು ಅಂಶಗಳು ಹೀಗಿವೆ:
ಶಂಕರರು ವರ್ಣ ಮತ್ತು ಆಶ್ರಮಗಳ ವಿಷಯದಲ್ಲಿ ಗತಾನುಗತಿಕವಾದ ಜಾಡನ್ನೇ ತುಳಿಯುತ್ತಾರೆ. ಅವರ ಪ್ರಕಾರ ವರ್ಣಗಳು ಹುಟ್ಟಿನಿಂದಲೇ ನಿಶ್ಚಿತವಾಗುತ್ತವೆ; ವೇದಾಧಿಕಾರವು ತ್ರೈವರ್ಣಿಕರಿಗೇ ಸೀಮಿತ; ಆಶ್ರಮಗಳ ಪೈಕಿ ಸಂನ್ಯಾಸವೇ ಮೋಕ್ಷದ ಮುಖ್ಯಮಾರ್ಗ ಮತ್ತು ಬ್ರಾಹ್ಮಣನೇ ಸಂನ್ಯಾಸಕ್ಕೆ ಅಧಿಕಾರಿ. ಆದರೆ ಅವರು ಜನ್ಮಬ್ರಾಹ್ಮಣ್ಯವು ತುಂಬ ಗೌಣ, ಜ್ಞಾನದಿಂದಲೇ ದಿಟವಾದ ಬ್ರಾಹ್ಮಣ್ಯದ ಸಿದ್ಧಿ ಎಂದೂ ಸ್ಪಷ್ಟಪಡಿಸುತ್ತಾರೆ.[4] ಜೊತೆಗೆ ಶೂದ್ರರಿಗೆ ವೇದಾಭ್ಯಾಸಕ್ಕೆ ನೇರವಾಗಿ ಅವಕಾಶವಿಲ್ಲದಿದ್ದರೂ ವೇದಾರ್ಥ ಮತ್ತು ವೇದಾಂತತತ್ತ್ವಗಳನ್ನು ಅರಿತು ಜೀವನ್ಮುಕ್ತಿಯನ್ನು ಗಳಿಸಲು ಯಾವುದೇ ಅಡ್ಡಿ ಇಲ್ಲವೆಂದೂ ಸಾರುತ್ತಾರೆ.[5] ಅಷ್ಟೇಕೆ, ವಿದ್ಯೆಗೆ ಎಲ್ಲರೂ ಅಧಿಕಾರಿಗಳೆಂದು ಉದ್ಘೋಷಿಸುತ್ತಾರೆ.[6] ಸಂನ್ಯಾದಲ್ಲಿಯೂ ಬಹಿರಂಗದ ಲಾಂಛನಕ್ಕಿಂತ ಅಂತರಂಗದ ಪರಿಪಾಕವೇ ಮಿಗಿಲಾದ ಅರ್ಹತೆಯೆಂದು ಒಕ್ಕಣಿಸುತ್ತಾರೆ.[7] ಇವೆಲ್ಲವನ್ನೂ ಪರಿಕಿಸಿದಾಗ ಶಂಕರರ ಮಾತುಗಳಲ್ಲಿಯೇ ತಾತ್ಕಾಲಿಕವಾದ ಅಂಶ ಯಾವುದು, ಸಾರ್ವತ್ರಿಕವಾದ ತತ್ತ್ವ ಯಾವುದೆಂಬುದು ವಿವೇಕಿಗಳಿಗೆ ಸ್ಪಷ್ಟವಾಗದಿರದು. ಹೀಗಾಗಿ ಅವರದೇ ಮಾತುಗಳ ಆಧಾರದ ಮೇಲೆ ಅವರ ಸೀಮಿತದೃಷ್ಟಿಜನಿತವೂ ಅನುದಾರವೂ ಆದ ನಿಲವುಗಳನ್ನು ಗೌರವಪೂರ್ವಕವಾಗಿ ಪರಿಷ್ಕರಿಸಿಕೊಂಡು ಸಾಗಲು ಅವಕಾಶವುಂಟು.
ಆನಂದವರ್ಧನನು ರಸವದಲಂಕಾರವೆಂಬ ಅಂಶವನ್ನು ವಿಸ್ತರಿಸಿ ಚರ್ಚಿಸುತ್ತಾನೆ. ಅವನ ಪ್ರಕಾರ ಕವಿತೆಯೊಂದರ ಪ್ರಧಾನಾಶಯಕ್ಕಿಂತ ಬೇರೆಯಾಗಿ ಮತ್ತೆ ಕೆಲವು ರಸ-ಭಾವಾಂಶಗಳು ಬಂದಾಗ ಅವು ಅಂಗಭೂತವಾಗುವ ಕಾರಣ ’ರಸವದಲಂಕಾರ’ ಎಂಬ ವರ್ಗಕ್ಕೆ ಸಲ್ಲುತ್ತವೆ (2.5). ಇದು ವಸ್ತುತಃ ಅವನೇ ಮುಂದೆ ಸಜಾತೀಯರಸಗಳೂ ವಿಜಾತೀಯರಸಗಳೂ ಔಚಿತ್ಯಪೂರ್ಣವಾಗಿ ಹೊಂದಿಕೊಂಡು ಬಂದ ಸಂದರ್ಭಗಳಲ್ಲಿ ಅವು ಅಂಗಾಂಗಿಭಾವವನ್ನು ತಾಳುವ ಮೂಲಕ ಆದ್ಯಂತ ಆಸ್ವಾದ್ಯವೆನಿಸುತ್ತವೆಂದು ಹೇಳುವುದಕ್ಕೆ ವಿಸಂವಾದಿಯಾಗಿದೆ (3.20). ಆದುದರಿಂದ ಅವನ ರಸವದಲಂಕಾರದ ಕಲ್ಪನೆಯೇ ಅನಪೇಕ್ಷಿತ. ಔಚಿತ್ಯಪೂರ್ಣವಾಗಿ ನಿರ್ವಹಣೆಗೊಂಡ ವಿವಿಧರಸಗಳ ಅಂಗಾಂಗಿಭಾವವೇ ಯುಕ್ತಿಯುಕ್ತವಾದ ಪರಿಷ್ಕಾರ. ಈ ಬಗೆಯ ತೊಡಕಿನಲ್ಲಿ ಆನಂದವರ್ಧನ ಸಿಲುಕಿದುದಕ್ಕೆ ಕಾರಣ ಬಹುಶಃ ದಂಡಿಯೇ ಮೊದಲಾದವರು ಆ ವೇಳೆಗಾಗಲೇ ಪ್ರಚುರಪಡಿಸಿದ್ದ ರಸವದಲಂಕಾರದ ಅಂಶವನ್ನು ತನ್ನ ಗ್ರಂಥದಲ್ಲಿ ಕೂಡ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ. ವಸ್ತುತಃ ಇಂಥ ಅನಿವಾರ್ಯತೆ ಇಲ್ಲವೆಂದೂ ಇದಕ್ಕೆ ಅವನಲ್ಲಿಯೇ ಪರಿಹಾರ ಉಂಟೆಂದೂ ಇಲ್ಲಿ ನಿರೂಪಿಸಲಾಗಿದೆ.
ಹೀಗೆಯೇ ಆನಂದವರ್ಧನನು ಗುಣ ಮತ್ತು ಅಲಂಕಾರಗಳ ತರ-ತಮಭಾವವನ್ನು ವಿವೇಚಿಸುವಾಗ ಅಲಂಕಾರಗಳು ಹಾರ-ಕೇಯೂರಗಳಂತೆ ಬಹಿರಂಗದವೆಂದೂ ಗುಣಗಳು ಕಾವ್ಯದ ಅಂತರಂಗಕ್ಕೆ ನಿಕಟವೆಂದೂ ಭಾವಿಸುವುದು ಕ್ಷೋದಕ್ಷಮವಾಗಿಲ್ಲ (2.6). ಹಾಗೆ ನೋಡಿದರೆ ಗುಣಕ್ಕಿಂತ ಅಲಂಕಾರವೇ ಕಾವ್ಯಾತ್ಮಕ್ಕೆ ಹೆಚ್ಚು ಹತ್ತಿರ. ವರ್ಣಗುಣಗಳು ಶಬ್ದಾಲಂಕಾರದೊಡನೆ ಸಾಮಾನಾಧಿಕರಣ್ಯ ಹೊಂದಿದರೆ ಅರ್ಥಗುಣಗಳು ಹೆಚ್ಚೆಂದರೆ ಅಭಿವ್ಯಕ್ತಿಯ ತಿಳಿತನ ಮತ್ತು ಭಾಷಾಶುದ್ಧಿಗಳಿಗೆ ಮಾತ್ರ ಸೀಮಿತವಾಗುತ್ತವೆ. ಆದರೆ ಅರ್ಥಾಲಂಕಾರಗಳು ಹೀಗಲ್ಲ. ಅವು ಕವಿಪ್ರತಿಭೆಗೆ ನೇರವಾಗಿ ಸಂಬಂಧಿಸಿದ ಕಲ್ಪನಾಶಕ್ತಿಯನ್ನೇ ಆಶ್ರಯಿಸಿವೆ. ಇತಿವೃತ್ತವಿಲ್ಲದ ಹೆಚ್ಚಿನ ಕಾವ್ಯಸಮೂಹವೆಲ್ಲ ಗುಣ-ರೀತಿಗಳಿಗಿಂತ ಮಿಗಿಲಾಗಿ ಅರ್ಥಾಲಂಕಾರಗಳಿಂದಲೇ ತಮ್ಮ ಅಂದ-ಅಸ್ತಿತ್ವಗಳನ್ನು ದಕ್ಕಿಸಿಕೊಂಡಿವೆ. ಇದನ್ನು ನೆನೆದಾಗ ಆನಂದವರ್ಧನನು ಅಲಂಕಾರಗಳನ್ನು ಕುರಿತು ತಳೆದ ಸದ್ಯದ ಅಭಿಪ್ರಾಯ ಅಯುಕ್ತವೆಂದು ತೋರುತ್ತದೆ. ಬಹುಶಃ ದಂಡಿ-ವಾಮನರು ಗುಣಗಳಿಗೆ ಹೆಚ್ಚಿನ ಬೆಲೆಯನ್ನಿತ್ತದ್ದೇ ಅವನ ಈ ಬಗೆಯಾದ ಅಸಾಧುನಿರ್ಣಯಕ್ಕೆ ಕಾರಣವಿರಬಹುದು. ಆದರೆ ಆನಂದವರ್ಧನನೇ ಮತ್ತೊಂದೆಡೆ ಅಲಂಕಾರವನ್ನು ರೂಪಿಸುವಾಗ ಅದಕ್ಕೆ ತಕ್ಕ ಸ್ಥಾನವನ್ನು ಕೊಟ್ಟಿರುವುದಲ್ಲದೆ ಗುಣೀಭೂತವ್ಯಂಗ್ಯವೆಂಬ ಧ್ವನಿಭಾವಿತವಾದ ಕಾವ್ಯಪ್ರಕಾರದಲ್ಲಿ ಅರ್ಥಾಲಂಕಾರಗಳ ಪಾರಮ್ಯವನ್ನೇ ಕಂಡಿದ್ದಾನೆ.[8] ಹೀಗೆ ಆನಂದವರ್ಧನನ ಕೆಲವೊಂದು ಅಸಾಧುನಿಗಮನಗಳಿಗೆ ಅವನದೇ ಪರಿಹಾರಗಳೂ ಇರುವುದನ್ನು ಕಂಡಾಗ ಧ್ವನಿಸಿದ್ಧಾಂತದ ಸರ್ವಸಮರ್ಪಕತೆ ಮನದಟ್ಟಾಗದಿರದು.
ಒಟ್ಟಂದದ ವಿಚಾರಪ್ರತಿಪಾದನೆಯ ಕ್ರಮದಲ್ಲಿ ಶಂಕರ-ಆನಂದವರ್ಧನರು ತಮ್ಮ ಕಾಲದಲ್ಲಿ ವಿದ್ವನ್ಮಾತಿತವಾಗಿದ್ದ ನಿರೂಪಣವಿಧಾನಗಳನ್ನು ಆಶ್ರಯಿಸಿರುವುದು ಈ ಕಾಲದ ಓದುಗರಿಗೆ ಕಷ್ಟವೆನಿಸುವುದು ಸಹಜ. ಆದರೆ ಇದಕ್ಕೆ ಶಂಕರ-ಆನಂದವರ್ಧನರು ಹೊಣೆಯಲ್ಲ. ಇಂತಿದ್ದರೂ ತಮ್ಮ ಎದುರಾಳಿಗಳನ್ನು ಎದುರಿಸುವಾಗ ಅಥವಾ ಒಪ್ಪಿಸುವಾಗ ಅವರು ಆಯಾ ಶಾಸ್ತ್ರಗಳ ಸರಣಿಯನ್ನೇ ಹಿಡಿದು ವಾದಿಸಬೇಕಿರುವ ಕಾರಣ ಪ್ರತಿಪಾದನಕ್ರಮ ತುಂಬ ಜಟಿಲವಾಗುತ್ತದೆ, ಕೆಲವೊಮ್ಮೆ ಅಸಂಗತವೂ ಎನಿಸುತ್ತದೆ. ಇದಕ್ಕೆ ಅವರ ಪ್ರತಿಕೋಟಿಯ ಸ್ಥಾನದಲ್ಲಿರುವ ಸಾಂಖ್ಯ, ನ್ಯಾಯ, ಮೀಮಾಂಸೆ ಮುಂತಾದ ಶಾಸ್ತ್ರಗಳೂ ಅವುಗಳ ಕ್ಷೋದಕ್ಷಮವಲ್ಲದ ವಿಚಾರಗಳೂ ಪ್ರಧಾನಹೇತುಗಳೆಂದರೆ ತಪ್ಪಲ್ಲ. ಹೀಗಾಗಿಯೇ ಶಾರೀರಕಭಾಷ್ಯದ ಹೆಚ್ಚಿನ ವಾದಭಾಗ ಮತ್ತು ಧ್ವನ್ಯಾಲೋಕದ ಎರಡು-ಮೂರನೆಯ ಉದ್ದ್ಯೋತಗಳ ಬಹುಭಾಗಗಳು ಈ ಹೊತ್ತಿನ ಜ್ಞಾನಪ್ರಪಂಚಕ್ಕೆ ಅಷ್ಟಾಗಿ ಬೇಡದ ಅಂಶಗಳೇ ಆಗಿವೆ.
ಹೀಗೆ ನೋಡಿದರೆ ಅಧ್ಯಾಸಭಾಷ್ಯ ಮತ್ತು ಚತುಃಸೂತ್ರೀ (ಅಥವಾ ಪಂಚಾಧಿಕರಣೀ) ಎಂಬ ಭಾಗಗಳೇ ಶಾರೀರಕಭಾಷ್ಯದ ಸಾರವೆನಿಸಿವೆ. ಇದೇ ರೀತಿ ಗೀತಾಭಾಷ್ಯ-ಉಪನಿಷದ್ಭಾಷ್ಯಗಳಲ್ಲಿಯೂ ಸಾರ್ವಕಾಲಿಕವಾದ ಸಾರವದ್ಭಾಗಗಳನ್ನು ಹೆಕ್ಕಿ ತೆಗೆಯಬಹುದು. ಶಾಂಕರಾದ್ವೈತವು ಅಪ್ಪಟ ವಸ್ತುತಂತ್ರವನ್ನೇ ಕೇಂದ್ರೀಕರಿಸುವ ಕಾರಣ ಸಂಗ್ರಹ ಮಾಡುವುದು ಸುಲಭ. ಶಂಕರಭಾಷ್ಯಗಳ ಬೃಹದ್ಗಾತ್ರಕ್ಕೆ ಪ್ರಧಾನಕಾರಣ ಅವು ವಿಮತಿಪ್ರತಿಬೋಧನದ ಹವಣಿನಲ್ಲಿ ಬೆಳೆಸುವ ವಾದೋಪವಾದಗಳು ಮತ್ತು ಆ ಕಾಲದ ವಿದ್ವಜ್ಜಗತ್ತು ಒಪ್ಪಿದ ಸರಣಿಯಲ್ಲಿ ವಿಷಯವನ್ನು ನಿರೂಪಿಸುವುದು.
ಆನಂದವರ್ಧನನ ಪಾಡೂ ಇದೇ ಆಗಿದೆ. ಧ್ವನ್ಯಾಲೋಕದ ಸಾರ ಅದರ ಕಾರಿಕೆಗಳಲ್ಲಿಯೇ ಇದೆ. ಮತ್ತೂ ಹೆಚ್ಚಿನ ಸತ್ತ್ವವನ್ನು ಸಂಗ್ರಹಶ್ಲೋಕ-ಪರಿಕರಶ್ಲೋಕಗಳಲ್ಲಿ ಕಾಣಬಹುದು. ವೃತ್ತಿಯ ಎಷ್ಟೋ ಭಾಗಗಳು ತತ್ತ್ವನಿರೂಪಣೆಗಿಂತ ವಾದಕ್ಕೇ ಮೀಸಲಾಗಿವೆ. ಇನ್ನು ಅಲ್ಲಿಯ ಉದಾಹರಣೆಗಳನ್ನು ಕಂಡರೆ ಎಲ್ಲ ಕಾಲಕ್ಕೂ ಸಲ್ಲಬಲ್ಲ ಒಳ್ಳೆಯ ಕವಿತೆ ಸ್ವಲ್ಪದ್ದೇ; ಮಿಕ್ಕ ಹೆಚ್ಚಿನ ಭಾಗವೆಲ್ಲ ಸಿದ್ಧಾಂತದ ಸ್ಪಷ್ಟೀಕರಣಕ್ಕೆ ಬಂದಿದ್ದು ಆ ಕಾಲದ ಅಭಿರುಚಿಯನ್ನು ಅನುಸರಿಸಿ ಆಯ್ದುಕೊಂಡದ್ದಾಗಿದೆ. ಆ ಕಾಲದಲ್ಲಿ ಯಾವುದೇ ಜ್ಞೇಯಸಾಮಗ್ರಿಯನ್ನಾಗಲಿ ನ್ಯಾಯ-ಮೀಮಾಂಸೆಗಳ ಕ್ರಮದಿಂದ ವಿವೇಚಿಸುವುದು ಅನಿವಾರ್ಯ ಎಂಬಷ್ಟರ ಮಟ್ಟಿಗೆ ಈ ಶಾಸ್ತ್ರಗಳು ತಮ್ಮ ಪ್ರಭಾವವನ್ನು ಬೀರಿದ್ದ ಕಾರಣ ಆನಂದವರ್ಧನನೂ ಈ ಜಾಡನ್ನು ತುಳಿಯಬೇಕಾಯಿತು. ಇದು ಕೂಡ ಆತನ ಗ್ರಂಥದ ಕಾಠಿನ್ಯಕ್ಕೆ ಸ್ವಲ್ಪ ಕಾರಣವಾಗಿದೆ. ಶಂಕರರು ತಮ್ಮ ಕೃತಿಗಳಲ್ಲಿ (ಮುಖ್ಯವಾಗಿ ಶಾರೀರಕಭಾಷ್ಯದಲ್ಲಿ) ಮೀಮಾಂಸಾನ್ಯಾಯಗಳ ಕ್ರಮವನ್ನು ಅನುಸರಿಸಿರುವುದು ಇದಕ್ಕೆ ಸಂವಾದಿಯೆಂದು ನಾವಿಲ್ಲಿ ನೆನೆಯಬಹುದು.[9]
[1] ಯೋಗೋऽಪ್ಯಣಿಮಾದ್ಯೈಶ್ವರ್ಯಪ್ರಾಪ್ತಿಫಲಕಃ ಸ್ಮರ್ಯಮಾಣೋ ನ ಶಕ್ಯತೇ ಸಾಹಸಮಾತ್ರೇಣ ಪ್ರತ್ಯಾಖ್ಯಾತುಮ್ … ಋಷೀಣಾಮಪಿ ಮಂತ್ರಬ್ರಾಹ್ಮಣದರ್ಶಿನಾಂ ಸಾಮರ್ಥ್ಯಂ ನಾಸ್ಮದೀಯೇನ ಸಾಮರ್ಥ್ಯೇನೋಪಮಾತುಂ ಯುಕ್ತಮ್ || (ಶಾರೀರಕಭಾಷ್ಯ, 1.3.33); ಸಿದ್ಧೇರಪಿ ಸಾಪೇಕ್ಷತ್ವಾತ್ || (ಶಾರೀರಕಭಾಷ್ಯ, 2.1.1)
[2] ರಸಭಾವಾದಿವಿಷಯವಿವಕ್ಷಾವಿರಹೇ ಸತಿ | ಅಲಂಕಾರನಿಬಂಧೋ ಯಃ ಸ ಚಿತ್ರವಿಷಯೋ ಮತಃ || ರಸಾದಿಷು ವಿವಕ್ಷಾ ತು ಸ್ಯಾತ್ ತಾತ್ಪರ್ಯವತೀ ಯದಾ | ತದಾ ನಾಸ್ತ್ಯೇವ ತತ್ಕಾವ್ಯಂ ಧ್ವನೇರ್ಯತ್ತು ನ ಗೋಚರಃ || (ಧ್ವನ್ಯಾಲೋಕ, 3.42 ವೃತ್ತಿಯಲ್ಲಿರುವ ಪರಿಕರಶ್ಲೋಕಗಳು)
[3] ಯೋಗವಾಸಿಷ್ಠ, ಯೋಗಸುಧಾಕರ ಮುಂತಾದ ದರ್ಶನಗ್ರಂಥಗಳೂ ಕಾವ್ಯಪ್ರಕಾಶ, ಸಾಹಿತ್ಯದರ್ಪಣ, ರಸಗಂಗಾಧರ ಮೊದಲಾದ ಸಾಹಿತ್ಯಶಾಸ್ತ್ರಗ್ರಂಥಗಳೂ ಇಲ್ಲಿ ಸ್ಮರಣೀಯ.
[4] ಅಯಂ ತ್ವೇವಂಭೂತ ಏತಸ್ಯಾಮವಸ್ಥಾಯಾಂ ಮುಖ್ಯೋ ಬ್ರಾಹ್ಮಣಃ | ಪ್ರಾಗೇತಸ್ಮಾದ್ಬ್ರಹ್ಮಸ್ವರೂಪಾವಸ್ಥಾನಾದ್ ಗೌಣಮಸ್ಯ ಬ್ರಾಹ್ಮಣ್ಯಮ್ || (ಬೃಹದಾರಣ್ಯಕೋಪನಿಷದ್ಭಾಷ್ಯ, 4.4.23)
[5] ಏಷಾಂ ಪುನಃ ಸಂಸ್ಕಾರವಶಾದ್ ವಿದುರ-ಧರ್ಮವ್ಯಾಧಪ್ರಭೃತೀನಾಂ ಜ್ಞಾನೋತ್ಪತ್ತಿಸ್ತೇಷಾಂ ನ ಶಕ್ಯತೇ ಫಲಪ್ರಾಪ್ತಿಃ ಪ್ರತಿಷೇದ್ಧುಂ, ಜ್ಞಾನಸ್ಯ ಐಕಾಂತಿಕಫಲತ್ವಾತ್ | “ಶ್ರಾವಯೇಚ್ಚತುರೋ ವರ್ಣಾನ್” ಇತಿ ಚೇತಿಹಾಸಪುರಾಣಾಧಿಗಮೇ ಚಾತುರ್ವರ್ಣ್ಯಸ್ಯಾಧಿಕಾರಸ್ಮರಣಾತ್ || (ಶಾರೀರಕಭಾಷ್ಯ, 1.3.38)
[6] ಸರ್ವೇಷಾಂ ಚಾಧಿಕಾರೋ ವಿದ್ಯಾಯಾಮ್ || (ತೈತ್ತಿರೀಯೋಪನಿಷದ್ಭಾಷ್ಯ, 1.11)
[7] ಸರ್ವಕ್ರಿಯಾಸಾಧನಫಲಾನಾಂ ಚಾವಿದ್ಯಾವಿಷಯಾಣಾಂ ತದ್ವಿಪರೀತಾತ್ಮವಿದ್ಯಯಾ ಹಾತವ್ಯತ್ವೇನೇಷ್ಟತ್ವಾತ್ | ಯಜ್ಞೋಪವೀತಾದಿಸಾಧನಾನಾಂ ತದ್ವಿಷಯತ್ವಾತ್ … ತತ್ಸಾಧನೇಭ್ಯಶ್ಚ ಕರ್ಮಭ್ಯೋऽವಿದ್ಯಾವಿಷಯತ್ವಾತ್, ಏಷಣಾರೂಪತ್ವಾಚ್ಚ ಜಿಹಾಸಿತವ್ಯರೂಪತ್ವಾಚ್ಚ ವ್ಯುತ್ಥಾನಂ ವಿಧಿತ್ಸಿತಮೇವ … ಅವಿದ್ಯಾವಿಷಯತ್ವಾಚ್ಚೈಷಣಾಯಾಃ | ತದ್ವ್ಯತಿರೇಕೇಣ ಚಾಸ್ತ್ಯಾಶ್ರಮರೂಪಂ ಪಾರಿವ್ರಾಜ್ಯಂ ಬ್ರಹ್ಮಲೋಕಾದಿಫಲಪ್ರಾಪ್ತಿಸಾಧನಮ್ | ಯದ್ವಿಷಯಂ ಯಜ್ಞೋಪವೀತಾದಿಸಾಧನವಿಧಾನಂ ಲಿಂಗವಿಧಾನಂ ಚ || (ಬೃಹದಾರಣ್ಯಕೋಪನಿಷದ್ಭಾಷ್ಯ, 3.5.1)
ಹೀಗೆ ಇಬ್ಬಗೆಯಾದ ಸಂನ್ಯಾಸವಿಧಾನವನ್ನು ಕ್ರಮವಾಗಿ ವಿದ್ವತ್ಸಂನ್ಯಾಸ ಮತ್ತು ವಿವಿದಿಷಾಸಂನ್ಯಾಸವೆಂದು ಶಾಂಕರಪರಂಪರೆ ಮತ್ತೂ ಸ್ಪಷ್ಟತೆಯಿಂದ ವಿವೇಚಿಸಿದೆ (ಜೀವನ್ಮುಕ್ತಿವಿವೇಕ, 1.1,2)
[8] ರಸಾಕ್ಷಿಪ್ತತಯಾ ಯಸ್ಯ ಬಂಧಃ ಶಕ್ಯಕ್ರಿಯೋ ಭವೇತ್ | ಅಪೃಥಗ್ಯತ್ನನಿರ್ವರ್ತ್ಯಃ ಸೋऽಲಂಕಾರೋ ಧ್ವನೌ ಮತಃ || (ಧ್ವನ್ಯಾಲೋಕ, 2.16);
ಶರೀರೀಕರಣಂ ಯೇಷಾಂ ವಾಚ್ಯತ್ವೇ ನ ವ್ಯವಸ್ಥಿತಮ್ | ತೇऽಲಂಕಾರಾಃ ಪರಾಂ ಛಾಯಾಂ ಯಾಂತಿ ಧ್ವನ್ಯಂಗತಾಂ ಗತಾಃ || (ಧ್ವನ್ಯಾಲೋಕ, 2.28)
[9] ನವೀನನ್ಯಾಯದ ಬೆಳೆವಣಿಗೆಯಾದ ಬಳಿಕ ಎಲ್ಲ ಶಾಸ್ತ್ರಗಳೂ ಅದರ ಪರಿಷ್ಕಾರಕ್ರಮವನ್ನು ಕಣ್ಮುಚ್ಚಿ ಅವಲಂಬಿಸಿದ್ದನ್ನು ನೆನೆದಾಗ ಎಷ್ಟೋ ಬಾರಿ ವಿದ್ಯೆಗಳ ಬೆಳೆವಣಿಗೆ ಋಜುವಾದ ಪೂರ್ಣತರ್ಕದ ಪಾರದರ್ಶಕತೆಗಿಂತ ಮಿಗಿಲಾಗಿ ಆಯಾ ಕಾಲದ ಶಾಸ್ತ್ರಪ್ರವರ್ತಕರ ರುಚಿ-ಧೋರಣೆಗಳನ್ನೇ ನಚ್ಚಿಕೊಂಡು ಸಾಗಿರುವುದು ಸುವೇದ್ಯ. ಇಂಥ ಶುಷ್ಕಜಾಟಿಲ್ಯ ನಮ್ಮ ಕಾಲದ ಗ್ರಂಥಗಳಲ್ಲಿಯೂ ತುಂಬಿತುಳುಕುತ್ತಿರುವುದನ್ನು ಕಂಡಾಗ ಶಂಕರ-ಆನಂದವರ್ಧನರ ಅಭಿವ್ಯಕ್ತಿಕ್ರಮ ಎಷ್ಟೋ ತಿಳಿಯಾಗಿದೆ, ಮತ್ತೆಷ್ಟೋ ಪಾಲು ಋಜುವಾಗಿದೆ ಎಂದು ಸ್ಪಷ್ಟವಾಗುತ್ತದೆ.
To be continued.