ಅನುಭವಪ್ರಮಾಣ
ಶಂಕರರು ತಮ್ಮ ಸಿದ್ಧಾಂತದ ಪ್ರತಿಪಾದನೆಗೆ ಸರ್ವಜನಸಮ್ಮತವಾದ, ವಿದ್ವಲ್ಲೋಕದಲ್ಲಿ ಪ್ರಸಿದ್ಧವಾದ ಶ್ರುತಿ, ಸ್ಮೃತಿ, ಪುರಾಣ, ಇತಿಹಾಸಗಳನ್ನೇ ಪ್ರಮಾಣವಾಗಿ ಬಳಸಿಕೊಳ್ಳುತ್ತಾರೆ. ಅವರು ಎಂದಿಗೂ ಅಪ್ರಸಿದ್ಧವೂ ಏಕದೇಶೀಯವೂ ಆದ ವಿವಾದಾಸ್ಪದ ಗ್ರಂಥಗಳನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಇದೇ ರೀತಿ ಆನಂದವರ್ಧನ ಕೂಡ ಪಂಡಿತ-ಪಾಮರಭೇದವಿಲ್ಲದೆ ಸಮಸ್ತರಿಗೂ ಉಪಾದೇಯವಾಗಿರುವ ವ್ಯಾಸ-ವಾಲ್ಮೀಕಿ-ಕಾಳಿದಾಸರಂಥ ಮಹಾಕವಿಗಳ ಮಹಾಕೃತಿಗಳನ್ನೇ ತನ್ನ ಸಿದ್ಧಾಂತಕ್ಕೆ ಪ್ರಮಾಣವಾಗಿ ಬಳಸಿಕೊಳ್ಳುತ್ತಾನೆ. ಇದನ್ನವನು ಕಂಠೋಕ್ತವಾಗಿಯೂ ಹೇಳಿದ್ದಾನೆ.[1] ಹೇಗೆ ಶಂಕರರು ತರ್ಕ-ವ್ಯಾಕರಣಗಳ ಅಸ್ಥಾನವಿನಿಯೋಗದಿಂದ ಪ್ರಮಾಣಗ್ರಂಥಗಳ ಆಶಯವನ್ನು ತಿರುಚುವುದಿಲ್ಲವೋ ಅದೇ ರೀತಿ ಆನಂದವರ್ಧನ ಕೂಡ ಸಿದ್ಧರಸಗಳೆನಿಸಿದ ರಾಮಾಯಣ-ಮಹಾಭಾರತಗಳಂಥ ಕಾವ್ಯಗಳನ್ನು ತಿರುಚುವುದಿರಲಿ, ಹಾಗೆ ಸಾಗುವ ಯತ್ನಗಳನ್ನೂ ಕಠೋರವಾಗಿ ಧಿಕ್ಕರಿಸುತ್ತಾನೆ.[2]
ಶಂಕರರು ಮತ್ತವರ ಪರಂಪರೆ ಮಿಕ್ಕೆಲ್ಲ ದಾರ್ಶನಿಕರು ಒಪ್ಪುವ ಪ್ರಮಾಣಗಳನ್ನು ಅಂಗೀಕರಿಸುವುದಲ್ಲದೆ ಇವೆಲ್ಲವನ್ನೂ ಒಳಗೊಂಡು ಅವನ್ನೂ ಮೀರಿ ನಿಲ್ಲುವ ಪೂರ್ಣಾನುಭವವನ್ನು ಆತ್ಯಂತಿಕಪ್ರಮಾಣವಾಗಿ ಸ್ವೀಕರಿಸುತ್ತಾರೆ.[3] ಹೀಗಾಗಿಯೇ ಅದ್ವೈತವೇದಾಂತದಲ್ಲಿ ಜೀವನ್ಮುಕ್ತರ ಅನುಭವಕ್ಕೆ ಎಲ್ಲಿಲ್ಲದ ಬೆಲೆಯಿದೆ. ಮಾತ್ರವಲ್ಲ, ಜೀವನ್ಮುಕ್ತಿಯನ್ನು ಒಪ್ಪಿರುವ ವೈದಿಕದರ್ಶನವೆಂದರೆ ಇದೊಂದೇ ಆಗಿದೆ. ಈ ಕಾರಣದಿಂದಲೇ ಇಲ್ಲಿ ಮೋಕ್ಷವೆಂಬುದು ಬರಿಯ ನಂಬಿಕೆಯಾಗಿ ಉಳಿಯದೆ ಇಲ್ಲಿಯೇ ಈಗಲೇ ಯಾರಿಗೂ ದಕ್ಕಬಹುದಾದ ಕೇವಲಾನುಭವವೆನಿಸಿದೆ.
ಇದು ಆನಂದವರ್ಧನನು ಪ್ರತಿಪಾದಿಸುವ ರಸಾನಂದಕ್ಕೆ ಸೊಗಸಾದ ಸಂವಾದಿ. ಇವನು ಮಿಕ್ಕೆಲ್ಲ ಶಾಸ್ತ್ರಗಳ ಪ್ರಾಮಾಣ್ಯಕ್ಕಿಂತ ಸಹೃದಯರ ಅನುಭವವನ್ನೇ ಕಾವ್ಯಾಸ್ವಾದಕ್ಕೆ ಒರೆಗಲ್ಲಾಗಿ ಒಡ್ಡುತ್ತಾನೆ.[4]
ಹೇಗೆ ಮುಮುಕ್ಷುಗಳಿಗೆ ನಿತ್ಯಾನಿತ್ಯವಿವೇಕ ಮುಖ್ಯವೋ ಹಾಗೆಯೇ ಸಹೃದಯರಿಗೆ ಉಚಿತಾನುಚಿತವಿವೇಕ ಮುಖ್ಯ. ಇದೇ ರೀತಿ ಮೋಕ್ಷಕ್ಕೆ ತೀವ್ರವಾದ ಮುಮುಕ್ಷುತ್ವವೊಂದೇ ಪರ್ಯಾಪ್ತವಾದ ಸಾಧನವಾಗಿರುವಂತೆಯೇ ರಸಾಸ್ವಾದಕ್ಕೆ ಉತ್ಕಟವಾದ ಸಹೃದಯತೆಯೊಂದೇ ಸ್ವಯಂಪೂರ್ಣವಾದ ಅರ್ಹತೆಯಾಗುತ್ತದೆ. ಈ ಮೂಲಕ ಶಂಕರ-ಆನಂದವರ್ಧನರು ಬ್ರಹ್ಮ-ರಸಗಳ ಸಾಕ್ಷಾತ್ಕಾರಕ್ಕೆ ಬರಿಯ ಪುಸ್ತಕಪಾಂಡಿತ್ಯ ಹೆಚ್ಚಿನ ನೆರವನ್ನು ಕೊಡದೆಂಬುದನ್ನು ಸೂಚಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಪುಸ್ತಕಪಾಂಡಿತ್ಯದ ಉಪೇಕ್ಷೆಯೂ ಇಲ್ಲ. ಅದು ತಾನಾಗಿ ಕರ್ತೃವಿನಿಂದ ಕೆಲಸ ಮಾಡಿಸದಿದ್ದರೂ ತತ್ತ್ವವನ್ನು ನೆನಪಿಸುವ ಕೆಲಸ ಮಾಡುತ್ತದೆಂಬುದು ಶಂಕರರ ನಿಲವು.[5]
ಆನಂದವರ್ಧನನಾದರೂ ಇದಕ್ಕಿಂತ ಭಿನ್ನವಲ್ಲದ ರೀತಿಯಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಈ ಪ್ರಕಾರ ಕವಿಯ ಕರ್ಮ ಶಾಸ್ತ್ರದಿಂದ ಮಾರ್ಗದರ್ಶನವನ್ನು ಗಳಿಸಿದರೂ ಅದು ಕಟ್ಟಕಡೆಗೆ ಆತನ ರಸನಿಷ್ಠೆಯಲ್ಲಿಯೇ ಪರ್ಯವಸಿಸಬೇಕು. ಅಂದರೆ, ಕವಿಯು ಶಾಸ್ತ್ರಮಾತ್ರದ ತೃಪ್ತಿಗಾಗಿ ದುಡಿಯದೆ ಅದರ ಹೃದಯವೆನಿಸಿದ ಆನಂದದ ಸಾಧನೆಗೆ ಯತ್ನಿಸಬೇಕು.[6]
ಬ್ರಹ್ಮಾನಂದ-ರಸಾನಂದ
ಬ್ರಹ್ಮಾನಂದ-ರಸಾನಂದಗಳು ತಮ್ಮ ಸ್ತರಗಳಲ್ಲಿ ಬೇರೆಯಾದರೂ ಸ್ವರೂಪದಲ್ಲಿ ಸಾಮ್ಯವನ್ನು ಹೊಂದಿವೆ. ಈ ಪ್ರಕಾರ ಅವು ಉತ್ಪಾದ್ಯವಲ್ಲ, ಸಂಸ್ಕಾರ್ಯವಲ್ಲ, ಆಪ್ಯವೂ ಅಲ್ಲ; ಜ್ಞಾಪಕವೂ ಅಲ್ಲ, ಕಾರಕವೂ ಅಲ್ಲ. ಅವು ಕೇವಲ ಸ್ವಸಂವೇದ್ಯ ಮತ್ತು ವಿಗಲಿತವೇದ್ಯಾಂತರ. ಬ್ರಹ್ಮಾನಂದಕ್ಕೆ ಬಹಿರ್ನಿಮಿತ್ತದ ಆವಶ್ಯಕತೆಯಿಲ್ಲ. ರಸಾನಂದಕ್ಕೆ ಕವಿ-ಕಲಾವಿದರು ಹವಣಿಸಿಕೊಡುವ ವಿಭಾವ-ಅನುಭಾವಸಾಮಗ್ರಿ ಎಂಬ ಹೊರಗಿನ ನಿಮಿತ್ತ ಬೇಕು. ಜೊತೆಗೆ ಬ್ರಹ್ಮಾನಂದವು ಒಮ್ಮೆ ಸ್ಫುರಿಸಿದ ಬಳಿಕ ಮತ್ತೆಂದೂ ಅಸ್ತಮಿಸುವಂಥದ್ದಲ್ಲ. ರಸಾನಂದವು ನಿಮಿತ್ತಬಾಧಿತವಾದ ಕಾರಣ ಸ್ಫುರಿಸಿ ಅಳಿಯುತ್ತಿರುತ್ತದೆ. ಆದುದರಿಂದ ಇದು ಬ್ರಹ್ಮಾಸ್ವಾದಸಹೋದರ ಎಂದೇ ಪ್ರಸಿದ್ಧ. ಈ ಅಂಶಗಳನ್ನು ಆನಂದವರ್ಧನನ ಅಡಿಜಾಡಿನಲ್ಲಿ ನಡೆದ ಅಭಿನವಗುಪ್ತ ಮತ್ತು ಮಮ್ಮಟರು ವಿಸ್ತೃತವಾಗಿ ವಿವರಿಸಿದ್ದಾರೆ. ಇವನ್ನೇ ವಿಶ್ವನಾಥನು ಚೆನ್ನಾಗಿ ಸಂಗ್ರಹಿಸಿದ್ದಾನೆ.[7] ಇವೆರಡರ ನಡುವಣ ವ್ಯತ್ಯಾಸವನ್ನು ಮತ್ತೂ ಸ್ಪಷ್ಟವಾಗಿ ಹೇಳುವುದಾದರೆ ಅವಿದ್ಯೆ, ಕಾಮ ಮತ್ತು ಕರ್ಮಗಳ ಸರಣಿಯಿಂದ ಉಂಟಾಗುವ ಜಗದ್ವ್ಯವಹಾರವನ್ನು ಮೀರಿದ ಬ್ರಹ್ಮಾನಂದವು ಅವಿದ್ಯೆಯನ್ನು ಇಲ್ಲವಾಗಿಸುವ ಕೇವಲಜ್ಞಾನದ ಫಲ. ಆದರೆ ರಸಾನಂದದಲ್ಲಿ ಅವಿದ್ಯಾನಿವೃತ್ತಿ ಆಗಿರುವುದಿಲ್ಲ. ರಸಾನಂದದ ಹೊತ್ತಿನಲ್ಲಿ ಕಾಮ-ಕರ್ಮಗಳು ಮಾತ್ರ ಅಸ್ತಂಗತಿಸಿರುತ್ತವೆ. ಈ ಕಾರಣದಿಂದಲೇ ಇದು ನಿಮಿತ್ತಬಾಧಿತ, ಪುನರಾವೃತ್ತಿಪೀಡಿತ. ಈ ಅಂಶವನ್ನು ಆಚಾರ್ಯ ಎಂ. ಹಿರಿಯಣ್ಣನವರು ತುಂಬ ಹೃದಯಂಗಮವಾಗಿ ತಿಳಿಸಿದ್ದಾರೆ.[8]
ವೇದಾಂತಯೋಗ-ಕಲಾಯೋಗ
ಶಂಕರರು ಯಾಜ್ಞವಲ್ಕ್ಯರ ಕಾಣ್ಕೆಗೆ ಅನುಸಾರವಾಗಿ ಶ್ರವಣ-ಮನನ-ನಿದಿಧ್ಯಾಸನಗಳನ್ನು ಒಳಗೊಂಡ ತ್ರ್ಯಂಗಯೋಗವನ್ನು ಪ್ರತಿಪಾದಿಸುವ ಹಾಗೆ ಆನಂದವರ್ಧನನು ವಕ್ರತೆಯಿಂದ ಕೂಡಿದ ಕಾವ್ಯದ ಶ್ರವಣ, ತನ್ಮೂಲಕ ಪ್ರತೀತವಾದ ಧ್ವನ್ಯರ್ಥಗಳ ಪರಾಮರ್ಶನ ಮತ್ತು ಇದರಿಂದ ಸಾಕ್ಷಾತ್ಕೃತವಾಗುವ ರಸದ ಚರ್ವಣವೆಂಬ ಮೂರು ಹಂತಗಳನ್ನು ತನ್ನ ಕೃತಿಯಲ್ಲಿ ಸೂಚಿಸಿದ್ದಾನೆ. ಶ್ರವಣ, ಮನನ ಮತ್ತು ನಿದಿಧ್ಯಾಸನಗಳನ್ನು ಒಳಗೊಂಡ ವೇದಾಂತಯೋಗಕ್ಕೆ ಹೊರತಾದ ಪಾತಂಜಲವೇ ಮುಂತಾದ ಯೋಗಗಳು ಎಷ್ಟು ಪ್ರಯೋಜಕವಾಗಿದ್ದರೂ ಅವುಗಳಿಂದ ಬ್ರಹ್ಮಸಾಕ್ಷಾತ್ಕಾರ ಸಾಧ್ಯವಿಲ್ಲವೆಂಬುದು ಶಂಕರರ ನಿಲವು.[9] ಇದೇ ರೀತಿ ಆನಂದವರ್ಧನನ ತತ್ತ್ವವನ್ನೂ ಅನ್ವಯಿಸಿಕೊಳ್ಳಬಹುದು. ಆ ಪ್ರಕಾರ ಕಾವ್ಯವ್ಯಾಸಂಗವನ್ನು ಕೇವಲ ವ್ಯುತ್ಪತ್ತಿಗೋ ಉಪದೇಶಕ್ಕೋ ಖ್ಯಾತಿ-ಲಾಭಗಳಿಗೋ ಸೀಮಿತಗೊಳಿಸಿ ರಸ-ಧ್ವನಿಗಳಿಗೆ ವಿಮುಖವಾದರೆ ಆನಂದ ಸಿಗುವುದಿಲ್ಲ. ಹೀಗೆ ಕಲಾಯೋಗವೆಂಬ ಹೊಸತೊಂದು ಪ್ರಕಾರಕ್ಕೆ ಆನಂದವರ್ಧನ ಪ್ರೇರಕನಾಗಿದ್ದಾನೆ.
ಮುಮುಕ್ಷು-ಕವಿಗಳಿಗೆ ಭರವಸೆ
ಬ್ರಹ್ಮಾನಂದವನ್ನು ಸಾಕ್ಷಾತ್ಕರಿಸಿಕೊಳ್ಳಲು ಜಾತಿ, ಮತ, ಕುಲ, ಲಿಂಗ, ದೇಶ, ಕಾಲಗಳ ಹಂಗಿಲ್ಲ. ಬ್ರಹ್ಮಜ್ಞಾನವು ಯಾವುದೋ ಒಂದು ಸುವರ್ಣಯುಗದಲ್ಲಿದ್ದ ಕೆಲವೇ ಕೆಲವರು ಮಹನೀಯರಿಗೆ ಮಾತ್ರ ಕಟ್ಟಿಟ್ಟ ಸೊತ್ತೆಂಬ ಭ್ರಮೆಯನ್ನು ಶಂಕರರು ಸ್ಪಷ್ಟವಾದ ಮಾತುಗಳಲ್ಲಿ ನಿವಾರಿಸುತ್ತಾರೆ.[10] ಹೇಗೆ ಬ್ರಹ್ಮಾನುಭವವೆಂಬುದು ತ್ರಿಕಾಲಾಬಾಧಿತವೋ ಬ್ರಹ್ಮಜ್ಞಾನಿಯ ಅಸ್ತಿತ್ವದ ಸಾಧ್ಯತೆಯೂ ತ್ರಿಕಾಲಾಬಾಧಿತವೆಂದು ಈ ಮೂಲಕ ತಿಳಿಯುತ್ತದೆ. ಇದು ನಿಜಕ್ಕೂ ಅಸಾಧಾರಣವಾದ ತೀರ್ಮಾನ; ಪ್ರವಾದಿಕೇಂದ್ರಿತವಾದ ಮತಗಳು ಊಹಿಸಲೂ ಸಾಧ್ಯವಿಲ್ಲದ ಸತ್ಯಸಾಕ್ಷಾತ್ಕಾರ.
ಇದೇ ರೀತಿ ಆನಂದವರ್ಧನನು ಪ್ರತಿಭೆಯ ಆನಂತ್ಯವನ್ನು ನಿರೂಪಿಸುತ್ತ—ವ್ಯಾಸ-ವಾಲ್ಮೀಕಿಗಳಂಥ ಹಿಂದಿನವರಿಗೆ ಮಾತ್ರ ಮಹಾಕೃತಿಗಳನ್ನು ರಚಿಸಲು ಸಾಧ್ಯವಾಯಿತು, ಅನಂತರದವರಿಗೆ ಅಂಥ ಪ್ರತಿಭೆಯಿಲ್ಲ—ಎಂಬ ನಿರಾಶಾವಾದವನ್ನು ತುಂಬ ಸ್ಪಷ್ಟವಾಗಿ ನಿರಾಕರಿಸುತ್ತಾನೆ. ಮಾತ್ರವಲ್ಲ, ಇಂದಿಗೂ ಎಂದಿಗೂ ಸತ್ಕವಿಗಳು ತಮ್ಮ ಪ್ರತಿಭಾವ್ಯಾಪಾರದಲ್ಲಿ ವಿಶ್ವಾಸವಿರಿಸಿ ದುಡಿದರೆ ಸರಸ್ವತಿಯೇ ಅವರಿಗೆ ಸಮೃದ್ಧವಾಗಿ ಅನುಗ್ರಹ ಮಾಡುವಳೆಂದು ತನ್ನ ತೀರ್ಮಾನವನ್ನು ಹೇಳುತ್ತಾನೆ.[11]
[1] ವಾಲ್ಮೀಕಿವ್ಯಾಸಮುಖ್ಯಾಶ್ಚ ಯೇ ವಿಖ್ಯಾತಾಃ ಕವೀಶ್ವರಾಃ | ತದಭಿಪ್ರಾಯಬಾಹ್ಯೋऽಯಂ ನಾಸ್ಮಾಭಿರ್ದರ್ಶಿತೋ ನಯಃ || (ಧ್ವನ್ಯಾಲೋಕ, 3.19 ವೃತ್ತಿಯಲ್ಲಿ ಬರುವ ಪರಿಕರಶ್ಲೋಕ); ಅಸ್ಮಿನ್ ಅತಿವಿಚಿತ್ರಕವಿಪರಂಪರಾವಾಹಿನಿ ಸಂಸಾರೇ ಕಾಲಿದಾಸಪ್ರಭೃತಯೋ ದ್ವಿತ್ರಾಃ ಪಂಚಷಾ ವಾ ಮಹಾಕವಯ ಇತಿ ಗಣ್ಯಂತೇ || (ಧ್ವನ್ಯಾಲೋಕ, ೧.೬ ವೃತ್ತಿ)
[2] ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ | ಕಥಾಶ್ರಯಾ ನ ತೈರ್ಯ್ಯೋಜ್ಯಾ ಸ್ವೇಚ್ಛಾ ರಸವಿರೋಧಿನೀ || (ಧ್ವನ್ಯಾಲೋಕ, 3.14 ವೃತ್ತಿಯಲ್ಲಿ ಬರುವ ಪರಿಕರಶ್ಲೋಕ)
[3] ನ ಧರ್ಮಜಿಜ್ಞಾಸಾಯಾಮಿವ ಶ್ರುತ್ಯಾದಯ ಏವ ಪ್ರಮಾಣಂ ಬ್ರಹ್ಮಜಿಜ್ಞಾಸಾಯಾಮ್ | ಕಿಂತು ಶ್ರುತ್ಯಾದಯೋऽನುಭವಾದಯಶ್ಚ ಯಥಾಸಂಭವಮಿಹ ಪ್ರಮಾಣಮ್, ಅನುಭವಾವಸಾನತ್ವಾದ್ ಭೂತವಸ್ತುವಿಷಯತ್ವಾಚ್ಚ ಬ್ರಹ್ಮಜ್ಞಾನಸ್ಯ || (ಶಾರೀರಕಭಾಷ್ಯ, 1.1.2)
[4] ಶಬ್ದಾರ್ಥಶಾಸನಜ್ಞಾನಮಾತ್ರೇಣೈವ ನ ವೇದ್ಯತೇ | ವೇದ್ಯತೇ ಸ ತು ಕಾವ್ಯಾರ್ಥತತ್ತ್ವಜ್ಞೈರೇವ ಕೇವಲಮ್ || (ಧ್ವನ್ಯಾಲೋಕ, 1.7); ಆನಂದವರ್ಧನನ ಸಹೃದಯಪ್ರಾಮಾಣ್ಯ ಅದೆಷ್ಟು ಮಹತ್ತ್ವದ್ದೆಂದರೆ ಅವನು ಕಾವ್ಯದ ಲಕ್ಷಣವನ್ನೇ ಸಹೃದಯರ ಅನುಭವಕ್ಕೆ ಅಧೀನವಾಗಿಸುತ್ತಾನೆ: ಸಹೃದಯಹೃದಯಾಹ್ಲಾದಿಶಬ್ದಾರ್ಥಮಯತ್ವಮೇವ ಕಾವ್ಯಲಕ್ಷಣಮ್ || (ಧ್ವನ್ಯಾಲೋಕ, 1.1 ವೃತ್ತಿ)
[5] ಜ್ಞಾಪಕಂ ಹಿ ಶಾಸ್ತ್ರಂ, ನ ತು ಕಾರಕಮಿತಿ ಸ್ಥಿತಿಃ || (ಬೃಹದಾರಣ್ಯಕೋಪನಿಷದ್ಭಾಷ್ಯ, 1.4.10)
[6] ಸಂಧಿಸಂಧ್ಯಂಗಘಟನಂ ರಸಾಭಿವ್ಯಕ್ತ್ಯಪೇಕ್ಷಯಾ | ನ ತು ಕೇವಲಯಾ ಶಾಸ್ತ್ರಸ್ಥಿತಿಸಂಪಾದನೇಚ್ಛಯಾ (ಧ್ವನ್ಯಾಲೋಕ, 3.12)
[7] ಲೋಕೇ ಪ್ರಮದಾದಿಭಿಃ ಕಾರಣಾದಿಭಿಃ ಸ್ಥಾಯ್ಯನುಮಾನೇ ಅಭ್ಯಾಸಪಾಟವವತಾಂ, ಕಾವ್ಯೇ ನಾಟ್ಯೇ ಚ ತೈರೇವ ಕಾರಣತ್ವಾದಿಪರಿಹಾರೇಣ ವಿಭಾವನಾದಿವ್ಯಾಪಾರವತ್ವಾದ್ ಅಲೌಕಿಕವಿಭಾವಾದಿಶಬ್ದವ್ಯವಹಾರ್ಯೈಃ, ಮಮೈವೇತೇ ಶತ್ರೋರೇವೈತೇ ತಟಸ್ಥಸ್ಯೈವೇತೇ; ನ ಮಮೈವೇತೇ ನ ಶತ್ರೋರೇವೈತೇ ನ ತಟಸ್ಥಸ್ಯೈವೇತೇ ಇತಿ ಸಂಬಂಧಿವಿಶೇಷಸ್ವೀಕಾರಪರಿಹಾರನಿಯಮಾನವಸಾಯಾತ್ ಸಾಧಾರಣ್ಯೇನ ಪ್ರತೀತೈಃ ಅಭಿವ್ಯಕ್ತಃ; ಸಾಮಾಜಿಕಾನಾಂ ವಾಸನಾತ್ಮತಯಾ ಸ್ಥಿತಃ; ಸ್ಥಾಯೀ ರತ್ಯಾದಿಕಃ; ನಿಯತಪ್ರಮಾತೃಗತತ್ವೇನ ಸ್ಥಿತೋऽಪಿ ಸಾಧಾರಣೋಪಾಯಬಲಾತ್ ತತ್ಕಾಲವಿಗಲಿತಪರಿಮಿತಪ್ರಮಾತೃವಶೋನ್ಮೀಲಿತಜ್ಞೇಯಾಂತರಸ್ಪರ್ಶಶೂನ್ಯಾಪರಿಮಿತಭಾವೇನ ಪ್ರಮಾತ್ರಾ ಸಕಲಹೃದಯಸಂವಾದಭಾಜಾ ಸಾಧಾರಣ್ಯೇನ ಸ್ವಾಕಾರ ಇವ ಅಭಿನ್ನೋऽಪಿ ಗೋಚರೀಕೃತಃ, ಚರ್ವ್ಯಮಾಣತೈಕಪ್ರಾಣಃ, ವಿಭಾವಾದಿಜೀವಿತಾವಧಿಃ, ಪಾನಕರಸನ್ಯಾಯೇನ ಚರ್ವ್ಯಮಾಣಃ, ಪುರ ಇವ ಪರಿಸ್ಫುರನ್, ಹೃದಯಮಿವ ಪ್ರವಿಶನ್, ಸರ್ವಾಂಗೀಣಮಿವಾಲಿಂಗನ್, ಅನ್ಯತ್ಸರ್ವಮಿವ ತಿರೋದಧತ್, ಬ್ರಹ್ಮಾನಂದಾಸ್ವಾದಮಿವಾನುಭಾವಯನ್, ಅಲೌಕಿಕಚಮತ್ಕಾರಕಾರೀ, ಶೃಂಗಾರಾದಿಕೋ ರಸಃ | ಸ ಚ ನ ಕಾರ್ಯಃ, ವಿಭಾವಾದಿವಿನಾಶೇऽಪಿ ತಸ್ಯ ಸಂಭವಪ್ರಸಂಗಾತ್ | ನಾಪಿ ಜ್ಞಾಪ್ಯಃ, ಸಿದ್ಧಸ್ಯ ತಸ್ಯಾಸಂಭವಾತ್ | ಅಪಿ ತು ವಿಭಾವಾದಿಭಿಃ ವ್ಯಂಜಿತಶ್ಚರ್ವಣೀಯಃ | ಕಾರಕಜ್ಞಾಪಕಾಭ್ಯಾಮನ್ಯತ್ ಕ್ವ ದೃಷ್ಟಮಿತಿ ಚೇನ್ನ ಕ್ವಚಿದ್ ದೃಷ್ಟಮಿತಿ; ಅಲೌಕಿಕಸಿದ್ಧೇಃ ಭೂಷಣಮೇತನ್ನ ದೂಷಣಮ್ | ಚರ್ವಣಾನಿಷ್ಪತ್ತ್ಯಾ ತಸ್ಯ ನಿಷ್ಪತ್ತಿರುಪಚರಿತೇತಿ ಕಾರ್ಯೋಪ್ಯುಚ್ಯತಾಮ್ | ಲೌಕಿಕಪ್ರತ್ಯಕ್ಷಾದಿಪ್ರಮಾಣತಾಟಸ್ಥ್ಯಾವಬೋಧಶಾಲಿಪರಿಮಿತಯೋಗಿಜ್ಞಾನವೇದ್ಯಾಂತರಸಂಸ್ಪರ್ಶರಹಿತಸ್ವಾತ್ಮಮಾತ್ರಪರ್ಯವಸಿತಪರಿಮಿತೇತರಯೋಗಿ-ಸಂವೇದನವಿಲಕ್ಷಣಲೋಕೋತ್ತರಸ್ವಸಂವೇದನಗೋಚರ ಇತಿ ಪ್ರತ್ಯಯೋऽಪ್ಯಭಿಧೀಯತಾಮ್ | ತದ್ಗ್ರಾಹಕಂ ಚ ಪ್ರಮಾಣಂ ನ ನಿರ್ವಿಕಲ್ಪಕಂ, ವಿಭಾವಾದಿಪರಾಮರ್ಶಪ್ರಧಾನತ್ವಾತ್; ನಾಪಿ ಸವಿಕಲ್ಪಕಂ, ಚರ್ವ್ಯಮಾಣಸ್ಯ ಅಲೌಕಿಕಾನಂದಮಯಸ್ಯ ತಸ್ಯ ಸ್ವಸಂವೇದನಸಿದ್ಧತ್ವಾತ್ | ಉಭಯಾಭಾವಸ್ವರೂಪಸ್ಯ ಚೋಭಯಾತ್ಮಕತ್ವಮಪಿ ಪೂರ್ವವಲ್ಲೋಕೋತ್ತರತಾಮೇವ ಗಮಯತಿ ನ ತು ವಿರೋಧಮ್ ಇತಿ ಶ್ರೀಮದ್ ಆಚಾರ್ಯಾಭಿನವಗುಪ್ತಪಾದಾಃ || (ಕಾವ್ಯಪ್ರಕಾಶ, 4.26ರಲ್ಲಿಯ ವೃತ್ತಿ)
ಸತ್ತ್ವೋದ್ರೇಕಾದಖಂಡಸ್ವಪ್ರಕಾಶಾನಂದಚಿನ್ಮಯಃ | ವೇದ್ಯಾಂತರಸ್ಪರ್ಶಶೂನ್ಯೋ ಬ್ರಹ್ಮಾಸ್ವಾದಸಹೋದರಃ ||
ಲೋಕೋತ್ತರಚಮತ್ಕಾರಪ್ರಾಣಃ ಕೈಶ್ಚಿತ್ಪ್ರಮಾತೃಭಿಃ ಸ್ವಾಕಾರವದಭಿನ್ನತ್ವೇನಾಯಮಾಸ್ವಾದ್ಯತೇ ರಸಃ || (ಸಾಹಿತ್ಯದರ್ಪಣ, 3.2,3)
[8] Hiriyanna, M. Art Experience. Bengaluru: Prekshaa Pratishtana, 2018. pp. 17–19
[9] ಆತ್ಮಾ ವೈ ಅರೇ ದ್ರಷ್ಟವ್ಯಃ ದರ್ಶನಾರ್ಹಃ, ದರ್ಶನವಿಷಯಮಾಪಾದಯಿತವ್ಯಃ; ಶ್ರೋತವ್ಯಃ ಪೂರ್ವಮ್ ಆಚಾರ್ಯತ ಆಗಮತಶ್ಚ; ಪಶ್ಚಾನ್ಮಂತವ್ಯಃ ತರ್ಕತಃ; ತತೋ ನಿದಿಧ್ಯಾಸಿತವ್ಯಃ ನಿಶ್ಚಯೇನ ಧ್ಯಾತವ್ಯಃ; ಏವಂ ಹ್ಯಸೌ ದೃಷ್ಟೋ ಭವತಿ ಶ್ರವಣಮನನನಿದಿಧ್ಯಾಸನಸಾಧನೈಃ ನಿರ್ವರ್ತಿತೈಃ; ಯದಾ ಏಕತ್ವಮೇತಾನ್ಯುಪಗತಾನಿ, ತದಾ ಸಮ್ಯಗ್ದರ್ಶನಂ ಬ್ರಹ್ಮೈಕತ್ವವಿಷಯಂ ಪ್ರಸೀದತಿ, ನ ಅನ್ಯಥಾ ಶ್ರವಣಮಾತ್ರೇಣ || (ಬೃಹದಾರಣ್ಯಕೋಪನಿಷದ್ಭಾಷ್ಯ, 2.4.5)
[10] ಸೇಯಂ ಬ್ರಹ್ಮವಿದ್ಯಯಾ ಸರ್ವಭಾವಾಪತ್ತಿರಾಸೀನ್ಮಹತಾಂ ದೇವಾದೀನಾಂ ವೀರ್ಯಾತಿಶಯಾತ್, ನೇದಾನೀಮೈದಂಯುಗೀನಾನಾಂ ವಿಶೇಷತೋ ಮನುಷ್ಯಾಣಾಮ್, ಅಲ್ಪವೀರ್ಯತ್ವಾತ್—ಇತಿ ಸ್ಯಾತ್ ಕಸ್ಯಚಿದ್ಬುದ್ಧಿಃ, ತದ್ವ್ಯುತ್ಥಾಪನಾಯಾಹ—ತದಿದಂ ಪ್ರಕೃತಂ ಬ್ರಹ್ಮ ಯತ್ಸರ್ವಭೂತಾನುಪ್ರವಿಷ್ಟಂ ದೃಷ್ಟಿಕ್ರಿಯಾದಿಲಿಂಗಮ್, ಏತರ್ಹಿ ಏತಸ್ಮಿನ್ನಪಿ ವರ್ತಮಾನಕಾಲೇ ಯಃ ಕಶ್ಚಿತ್ ವ್ಯಾವೃತ್ತಬಾಹ್ಯೌತ್ಸುಕ್ಯ ಆತ್ಮಾನಮೇವ ಏವಂ ವೇದ ಅಹಂ ಬ್ರಹ್ಮಾಸ್ಮೀತಿ —ಅಪೋಹ್ಯ ಉಪಾಧಿಜನಿತಭ್ರಾಂತಿವಿಜ್ಞಾನಾಧ್ಯಾರೋಪಿತಾನ್ ವಿಶೇಷಾನ್ ಸಂಸಾರಧರ್ಮಾನಾಗಂಧಿತಮನಂತರಮಬಾಹ್ಯಂ ಬ್ರಹ್ಮೈವಾಹಮಸ್ಮಿ ಕೇವಲಮಿತಿ—ಸಃ ಅವಿದ್ಯಾಕೃತಾಸರ್ವತ್ವನಿವೃತ್ತೇರ್ಬ್ರಹ್ಮವಿಜ್ಞಾನಾದಿದಂ ಸರ್ವಂ ಭವತಿ | ನ ಹಿ ಮಹಾವೀರ್ಯೇಷು ವಾಮದೇವಾದಿಷು ಹೀನವೀರ್ಯೇಷು ವಾ ವಾರ್ತಮಾನಿಕೇಷು ಮನುಷ್ಯೇಷು ಬ್ರಹ್ಮಣೋ ವಿಶೇಷಃ ತದ್ವಿಜ್ಞಾನಸ್ಯ ವಾಸ್ತಿ || (ಬೃಹದಾರಣ್ಯಕೋಪನಿಷದ್ಭಾಷ್ಯ, 1.4.10)
[11] ವಾಲ್ಮೀಕಿವ್ಯತಿರಿಕ್ತಸ್ಯ ಯದ್ಯೇಕಸ್ಯಾಪಿ ಕಸ್ಯಚಿತ್ | ಇಷ್ಯತೇ ಪ್ರತಿಭಾರ್ಥೇಷು ತತ್ತದಾನಂತ್ಯಮಕ್ಷಯಮ್ || (ಧ್ವನ್ಯಾಲೋಕ, 4.7 ವೃತ್ತಿಯಲ್ಲಿಯ ಸಂಗ್ರಹಶ್ಲೋಕ); ಪ್ರತಾಯಂತಾಂ ವಾಚೋ ನಿಮಿತವಿವಿಧಾರ್ಥಾಮೃತರಸಾ ನ ಸಾದಃ ಕರ್ತವ್ಯಃ ಕವಿಭಿರನವದ್ಯೇ ಸ್ವವಿಷಯೇ | ಪರಸ್ವಾದಾನೇಚ್ಛಾವಿರತಮನಸೋ ವಸ್ತು ಸುಕವೇಃ ಸರಸ್ವತ್ಯೇವೈಷಾ ಘಟಯತಿ ಯಥೇಷ್ಟಂ ಭಗವತೀ || (ಧ್ವನ್ಯಾಲೋಕ, 4.17)
To be continued.