ನಿರ್ಗುಣಬ್ರಹ್ಮ-ಸಗುಣಬ್ರಹ್ಮ, ಧ್ವನಿ-ಗುಣೀಭೂತವ್ಯಂಗ್ಯ
ಶಂಕರ ಮತ್ತು ಆನಂದವರ್ಧನರ ಸಿದ್ಧಾಂತಗಳಿಗಿರುವ ಸರ್ವಸಮನ್ವಯದೃಷ್ಟಿ ಮತ್ತೂ ಒಂದು ಅಂಶದಲ್ಲಿದೆ. ಅದು ಬ್ರಹ್ಮಕ್ಕೆ ಸಗುಣತ್ವ ಮತ್ತು ನಿರ್ಗುಣತ್ವಗಳೆಂಬ ಎರಡು ಸ್ತರಗಳ ಕಲ್ಪಿಸುವಿಕೆ ಹಾಗೂ ವ್ಯಂಜನಾವ್ಯಾಪಾರದ ಪ್ರಾಧಾನ್ಯ ಮತ್ತು ಅಪ್ರಾಧಾನ್ಯಗಳಿಗೆ ಅನುಸಾರವಾಗಿ ವ್ಯಂಗ್ಯ ಮತ್ತು ಗುಣೀಭೂತವ್ಯಂಗ್ಯ ಎಂಬ ಎರಡು ಹಂತಗಳ ರೂಪಿಸುವಿಕೆಯನ್ನು ಕುರಿತಿದೆ.[1]
ಈ ಮೂಲಕ ಶಂಕರರು ಕರ್ಮ, ಭಕ್ತಿ, ಧ್ಯಾನಗಳಂಥ ಎಲ್ಲ ಬಗೆಯ ಆರಾಧನೆ-ಉಪಾಸನೆಗಳನ್ನೂ ತಮ್ಮ ತತ್ತ್ವಕ್ಕೆ ಅವಿರೋಧವಾಗಿ ಹವಣಿಸಿದ್ದಾರೆ. ಹೀಗಾಗಿಯೇ ಸಕಲಕಲ್ಯಾಣಗುಣಗಳುಳ್ಳ ಸಗುಣಬ್ರಹ್ಮದ ಉಪಾಸನೆಯಂಥ ಸುಲಭದ ಮಾರ್ಗ ಸಮಸ್ತರಿಗೂ ಸಿದ್ಧವಾಗಿದೆ.[2] ಆಚಾರ್ಯರ ಔದಾರ್ಯ ಇಷ್ಟಕ್ಕೇ ನಿಲ್ಲದೆ ಸಗುಣಬ್ರಹ್ಮದ ಪ್ರತೀಕವಾಗಿ ಶಿವ, ವಿಷ್ಣು, ಶಕ್ತಿ, ಸೂರ್ಯ, ಸ್ಕಂದ, ಗಣಪತಿ ಎಂಬ ಆರು ಮುಖ್ಯ ದೇವತಾಸ್ವರೂಪಗಳನ್ನು ಷಣ್ಮತವೆಂಬ ಹೆಸರಿನಿಂದ ಲೋಕದಲ್ಲಿ ಪ್ರಚುರಪಡಿಸುವ ಮಟ್ಟಕ್ಕೆ ವ್ಯಾಪಿಸಿದೆ. ಪಂಚಾಯತನಪೂಜೆ ಇದರಲ್ಲಿಯೇ ಅಡಕವಾಗುತ್ತದೆ. ಅಷ್ಟೇಕೆ, ಈ ಆರು ದೇವತೆಗಳ ಪ್ರತೀಕಗಳಿಗೆ ಹೊರತಾದ ಮಿಕ್ಕೆಲ್ಲ ದೇವತೆಗಳನ್ನೂ ಸಗುಣಬ್ರಹ್ಮವಾಗಿ ಉಪಾಸಿಸಲು ಅವಕಾಶವಿದೆ. ಅಲ್ಲದೆ ವೇದಗಳಲ್ಲಿಯೇ ಪ್ರಸಿದ್ಧವಾದ ಇಂದ್ರ, ಅಗ್ನಿ, ಮಿತ್ರ, ವರುಣ ಮುಂತಾದ ಅಸಂಖ್ಯ ದೇವತೆಗಳನ್ನು ಶ್ರೌತಯಾಗಗಳ ಮೂಲಕ ಆರಾಧನೆ ಮಾಡುವ ಅವಕಾಶವೂ ದಕ್ಕಿದೆ. ಹೀಗೆ ಒಂದೆಡೆ ಶೈವ-ಶಾಕ್ತ-ವೈಷ್ಣವಗಳಂಥ ಆಗಮಗಳಿಗೆ ಅನುಸಾರವಾಗಿ, ಮತ್ತೊಂದೆಡೆ ಋಕ್-ಯಜುಸ್-ಸಾಮಾದಿ ವೇದಗಳಿಗೆ ಅನುಸಾರವಾಗಿ ನಡಸಬಲ್ಲ ಎಲ್ಲ ಬಗೆಯ ಇಜ್ಯ-ಪೂಜೆಗಳಿಗೂ ಆಚಾರ್ಯರು ಮುಕ್ತಮನಸ್ಸಿನ ಅವಕಾಶವಿತ್ತಿದ್ದಾರೆ. ಈ ತತ್ತ್ವವನ್ನು ಅವೈದಿಕಮತಗಳ ಉಪಾಸನಕ್ರಮಕ್ಕೂ ಯಥೋಚಿತವಾಗಿ ವಿಸ್ತರಿಸಲು ಸಾಧ್ಯ. ಇದು ದಾರ್ಶನಿಕ ಮತ್ತು ಕರ್ಮಕಾಂಡೀಯವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿ ಕೂಡ ಸತ್ಪ್ರಭಾವಗಳನ್ನು ಬೆಳೆಸಿ ಸಮಾಜ ಹಾಗೂ ಜನಪದಗಳಲ್ಲಿ ಸಂತೋಷ-ಸಾಮರಸ್ಯಗಳನ್ನು ಹಬ್ಬಿಸಿದೆ.
ಇದೇ ರೀತಿ ಆನಂದವರ್ಧನನು ಗುಣ, ರೀತಿ, ಮಾರ್ಗ, ವೃತ್ತಿ, ಅಲಂಕಾರ, ವಕ್ರತೆ ಮೊದಲಾದ ಎಲ್ಲ ಕಾವ್ಯತತ್ತ್ವಗಳನ್ನೂ ಧ್ವನಿಸಿದ್ಧಾಂತಕ್ಕೆ ಅವಿರೋಧವಾಗಿ ರೂಪಿಸಿರುವುದು ಗಮನಾರ್ಹ. ವಿಶೇಷತಃ ಕುಂತಕನು ಹೆಸರಿಸುವ ಎಷ್ಟೋ ಬಗೆಯ ವಕ್ರತಾಪ್ರಕಾರಗಳು ಧ್ವನಿಪ್ರಭೇದಗಳಲ್ಲಿಯೇ ಅಡಕವಾಗುತ್ತವೆ. ಇವಕ್ಕೆ ಹೊರತಾದುವು ಗುಣೀಭೂತವ್ಯಂಗ್ಯದಲ್ಲಿ ಸಲ್ಲುತ್ತವೆ. ಇನ್ನು ದಂಡಿ-ವಾಮನಾದಿಗಳು ಪ್ರತಿಪಾದಿಸುವ ಗುಣ-ಮಾರ್ಗ-ರೀತಿಗಳು ವ್ಯಂಜಕಸಾಮಗ್ರಿಗಳಾಗಿ ಸಲ್ಲುತ್ತವೆ. ಭಾಮಹ, ರುದ್ರಟ, ಉದ್ಭಟಾದಿಗಳು ಎತ್ತಿಹಿಡಿಯುವ ಅಲಂಕಾರಗಳಂತೂ ಗುಣೀಭೂತವ್ಯಂಗ್ಯದಲ್ಲಿ ತಮ್ಮ ಸಾರ್ಥಕ್ಯವನ್ನು ಮತ್ತೂ ಸೊಗಸಾಗಿ ಕಂಡುಕೊಳ್ಳುತ್ತವೆ. ಕೋಮಲಾ, ಪರುಷಾ, ಉಪನಾಗರಿಕಾ ಮೊದಲಾದ ವರ್ಣವೃತ್ತಿಗಳಾಗಲಿ, ಬಗೆಬಗೆಯ ಛಂದಸ್ಸುಗಳಾಗಲಿ, ಪ್ರಾಸ-ಅನುಪ್ರಾಸಗಳಂಥ ಶಬ್ದಾಲಂಕಾರಗಳಾಗಲಿ, ಚೂರ್ಣಿಕಾ-ವೃತ್ತಗಂಧಿ-ಉತ್ಕಲಿಕೆಗಳಂಥ ಗದ್ಯಬಂಧದ ಬಗೆಗಳಾಗಲಿ ವ್ಯಂಜಕಸಾಮಗ್ರಿಗಳಾಗಿ ತಮ್ಮ ಅರ್ಥಪೂರ್ಣತೆಯನ್ನು ಸಾಬೀತು ಮಾಡಿಕೊಳ್ಳುತ್ತವೆ. ಒಟ್ಟಿನಲ್ಲಿ ರಸಪೋಷಕವಾದ ಯಾವುದೇ ಕಾವ್ಯತತ್ತ್ವವಾಗಲಿ ಧ್ವನಿ-ಗುಣೀಭೂತವ್ಯಂಗ್ಯಗಳಿಗೆ ಹೊರತಾಗಿ ನಿಲ್ಲುವುದಿಲ್ಲ. ರಸೈಕದೃಷ್ಟಿಯುಳ್ಳ ಗುಣೀಭೂತವ್ಯಂಗ್ಯವು ಧ್ವನಿಯದೇ ಒಂದು ಪ್ರಕಾರದಂತೆ ಕೂಡ ವರ್ತಿಸಬಲ್ಲುದೆಂದು ಹೇಳುವ ಮಟ್ಟಕ್ಕೆ ಧ್ವನಿಕಾರನ ಔದಾರ್ಯ ಪ್ರವರ್ತಿಸುತ್ತದೆ.[3] ಹೀಗಾಗಿ ಆನಂದವರ್ಧನನ ಕಾವ್ಯತತ್ತ್ವವು ಸಾಹಿತ್ಯರಚನೆಗೆ ತೊಡಗಿದ ಎಲ್ಲರನ್ನೂ ಕ್ರಮಕ್ರಮವಾಗಿ ರಸಭರಿತವಾದ ಕೃತಿಗಳ ನಿರ್ಮಿತಿಯತ್ತ ಪ್ರೇರಿಸುವುದಲ್ಲದೆ ಉತ್ತಮಸಾಹಿತ್ಯದ ಆಸ್ವಾದಕರನ್ನೆಲ್ಲ ಇದೇ ರೀತಿ ಸಜ್ಜುಗೊಳಿಸುತ್ತದೆ.
ಹೇಗೆ ಸಗುಣಬ್ರಹ್ಮದ ಉಪಾಸನೆಯನ್ನು ಕರ್ಮ-ಭಕ್ತಿಗಳ ಮೂಲಕ ಸಾಧಿಸಿಕೊಂಡವರು ಚಿತ್ತಶುದ್ಧಿಯನ್ನು ಗಳಿಸಿ ಆ ಬಳಿಕ ನಿರ್ಗುಣಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ ಮುಮುಕ್ಷುಗಳಾಗುವರೋ[4] ಹಾಗೆಯೇ ಗುಣೀಭೂತವ್ಯಂಗ್ಯಕಾವ್ಯಗಳ ವ್ಯಾಸಂಗದಿಂದ ಕ್ರಮವಾಗಿ ತಮ್ಮ ಸಾಹಿತ್ಯರುಚಿಯನ್ನು ಪರಿಷ್ಕರಿಸಿಕೊಂಡ ಓದುಗರು ವ್ಯಂಜನಾವ್ಯಾಪಾರದ ಮೂಲಕ ಸಿದ್ಧವಾಗುವ ರಸದ ಆಸ್ವಾದನೆಗೆ ಅರ್ಹರಾಗುವ ಸಹೃದಯರೆನಿಸುತ್ತಾರೆ. ಹೀಗೆ ಮುಮುಕ್ಷುಗಳಿಗೂ ಸಹೃದಯರಿಗೂ ಪರಮಲಕ್ಷ್ಯವನ್ನು ಸೋಪಾನಕ್ರಮದಲ್ಲಿ ಕಲ್ಪಿಸಿಕೊಟ್ಟ ಶ್ರೇಯಸ್ಸು ಶಂಕರ-ಆನಂದವರ್ಧನರದು.
ಅವಿರೋಧ-ಸಮನ್ವಯ
ಶಂಕರರು ಗೌಡಪಾದರ ಕಾರಿಕೆಯೊಂದಕ್ಕೆ ವಿವರಣೆ ಬರೆಯುತ್ತ ತಮ್ಮ ಆತ್ಮೈಕದರ್ಶನವು ಯಾರಿಗೂ ವಿರೋಧಿಯಾಗದೆಂಬ ನಿರ್ವೈರಸಿದ್ಧಿಯನ್ನು ಮನಮುಟ್ಟುವಂತೆ ಬಣ್ಣಿಸುತ್ತಾರೆ.[5] ಇದಕ್ಕೆ ಕಾರಣ ಸಚ್ಚಿದಾನಂದಘನವಾದ ಬ್ರಹ್ಮವಸ್ತು ಅದ್ವಿತೀಯ ಮತ್ತು ಅಪ್ರತಿದ್ವಂದ್ವ. ಇದೇ ರೀತಿ ಆನಂದವರ್ಧನನು ಸೌಂದರ್ಯದ ಹೃದಯವೆನಿಸಿದ ರಸಧ್ವನಿಯ ದೃಷ್ಟಿ ಮಾಗಿದ ಬಳಿಕ ಅಭಿವ್ಯಕ್ತಿಯ ಯಾವುದೇ ಅಂಶವೂ ತನ್ನ ಪ್ರಾಮುಖ್ಯ-ಅಪ್ರಾಮುಖ್ಯಗಳಿಗೆ ಹೊರತಾಗಿ ವ್ಯಂಜಕವಾಗಿ ಪರಿಣಮಿಸುವುದು ಎಂಬ ಕಾಣ್ಕೆಯನ್ನು ನೀಡುತ್ತಾನೆ.[6] ಉಭಯತ್ರ ತೋರುವುದು ಅವಿರೋಧ ಮತ್ತು ಸಮನ್ವಯಗಳೇ.
ಶಂಕರ-ಆನಂದವರ್ಧನರ ಸಮನ್ವಯ ಮತ್ತು ಅವಿರೋಧದೃಷ್ಟಿಗಳ ಪರಾಕಾಷ್ಠೆಯಾಗಿ ಅವರದೇ ಕೃತಿಗಳಿಂದ ಒಂದು ಸಂದರ್ಭವನ್ನು ಉಲ್ಲೇಖಿಸಬಹುದು. ಈ ಮೂಲಕ ಅವರ ಹೃದಯವೈಶಾಲ್ಯ ಮತ್ತು ಅವರಿಂದ ಪ್ರತಿಪಾದಿತವಾದ ತತ್ತ್ವಗಳ ವಿಶ್ವಜನೀನತೆ ಸ್ಪಷ್ಟವಾಗುತ್ತವೆ.
ಶಾರೀರಕಸೂತ್ರಗಳ ಕಟ್ಟಕಡೆಯ ಸೂತ್ರ “ಅನಾವೃತ್ತಿಃ ಶಬ್ದಾದನಾವೃತ್ತಿಃ ಶಬ್ದಾತ್” (4.4.22) ಎಂದು. ಇದಕ್ಕೆ ಭಾಷ್ಯ ಬರೆಯುತ್ತ ಶಂಕರರು ಸಮ್ಯಗ್ದರ್ಶನವಿಧ್ವಸ್ತತಮಸಾಂ ತು ನಿತ್ಯಸಿದ್ಧನಿರ್ವಾಣಪರಾಯಣಾನಾಂ ಸಿದ್ಧೈವ ಅನಾವೃತ್ತಿಃ | ತದಾಶ್ರಯೇಣೈವ ಹಿ ಸಗುಣಶರಣಾನಾಮಪಿ ಅನಾವೃತ್ತಿಸಿದ್ಧಿರಿತಿ || ಎನ್ನುತ್ತಾರೆ. ಈ ಪ್ರಕಾರ ನಿರ್ಗುಣಬ್ರಹ್ಮವನ್ನು ಉಪಾಸಿಸುವ ಜ್ಞಾನಿಗಳಿಗೆ ಮೋಕ್ಷವು ಜೀವನ್ಮುಕ್ತಿಯ ರೂಪದಲ್ಲಿ ಸಿದ್ಧವಾಗಿಯೇ ಇದೆ; ಸಗುಣಬ್ರಹ್ಮವನ್ನು ಆರಾಧಿಸುವ ಉಳಿದೆಲ್ಲರಿಗೆ ಕೂಡ ಕ್ರಮಮುಕ್ತಿ ಸಾಧ್ಯ. ಹೀಗೆ ತಮ್ಮ ಸಿದ್ಧಾಂತವನ್ನು ಸಾಕ್ಷಾತ್ತಾಗಿ ಹಿಡಿಯಲಾಗದವರಿಗೂ ಮೋಕ್ಷದ ಸಾಧ್ಯತೆಯನ್ನು ಕಲ್ಪಿಸಿರುವುದು ಭಗವತ್ಪಾದರ ಉದಾರತೆ.
ಧ್ವನ್ಯಾಲೋಕದ ಕಡೆಕಡೆಯಲ್ಲಿ ಆನಂದವರ್ಧನನು ಕವಿಪ್ರತಿಭೆಯ ಆನಂತ್ಯವನ್ನು ವರ್ಣಿಸುತ್ತ ಧ್ವನಿ ಮತ್ತು ಗುಣೀಭೂತವ್ಯಂಗ್ಯ ಎಂಬ ಎರಡೂ ಬಗೆಗಳನ್ನು ಆಶ್ರಯಿಸಿಕೊಂಡು ಕಾವ್ಯರಚನೆ ಮಾಡಬಲ್ಲ ಪ್ರತಿಭಾಶಾಲಿಗಳಿಗೆ ವೈವಿಧ್ಯವನ್ನು ತರಲು ಕಷ್ಟವೇ ಇಲ್ಲವೆಂದು ಸಾರುತ್ತಾನೆ. ಇಲ್ಲಿ ಅಭಿಧೆ-ಲಕ್ಷಣೆಗಳನ್ನೂ ಒಗ್ಗೂಡಿಸಿಕೊಂಡು ದೇಶ-ಕಾಲ-ವಸ್ತುಗಳ ವೈಚಿತ್ರ್ಯದ ನೆರವಿನಿಂದ ಅನಂತಪ್ರಕಾರದ ಕಾವ್ಯಗಳನ್ನು ಸೃಜಿಸಬಲ್ಲ ಸಾಧ್ಯತೆಯನ್ನೂ ನೆನಪಿಸುತ್ತಾನೆ: ಧ್ವನೇರಿತ್ಥಂ ಗುಣೀಭೂತವ್ಯಂಗ್ಯಸ್ಯ ಚ ಸಮಾಶ್ರಯಾತ್ | ನ ಕಾವ್ಯಾರ್ಥವಿರಾಮೋऽಸ್ತಿ ಯದಿ ಸ್ಯಾತ್ ಪ್ರತಿಭಾಗುಣಃ || ಅವಸ್ಥಾದೇಶಕಾಲಾದಿವಿಶೇಷೈರಪಿ ಜಾಯತೇ | ಆನಂತ್ಯಮೇವ ವಾಚ್ಯಸ್ಯ ಶುದ್ಧಸ್ಯಾಪಿ ಸ್ವಭಾವತಃ || (4.6,7). ವ್ಯಂಜನಾವ್ಯಾಪಾರವನ್ನು ಒಲ್ಲದ ಅಥವಾ ಆಂಶಿಕವಾಗಿ ಗ್ರಹಿಸುವ ಕವಿಗಳ ಕೃತಿಗಳೂ ಧ್ವನಿತತ್ತ್ವದೊಡನೆ ಬೆಸೆದುಕೊಂಡು ಆಸ್ವಾದ್ಯವಾಗುತ್ತವೆಂಬ ಈ ಕಾಣ್ಕೆ ಆನಂದವರ್ಧನನ ಹೃದಯವಂತಿಕೆಗೆ ದೊಡ್ಡ ನಿದರ್ಶನ.
ಅಧ್ಯಾರೋಪ-ಅಪವಾದ
ಶಂಕರರು ತಮ್ಮ ವೇದಾಂತಪ್ರಕ್ರಿಯೆಯನ್ನು ಅಧ್ಯಾರೋಪ-ಅಪವಾದವಿವೇಕವೆಂದು ಮತ್ತೆ ಮತ್ತೆ ಬಣ್ಣಿಸಿದ್ದಾರೆ.[7] ಇದನ್ನು ಮಹಾತರ್ಕವೆಂದೂ ಹೆಸರಿಸಿದ್ದಾರೆ.[8] ಸಚ್ಚಿದಾನಂದಘನವೆನಿಸಿದ ಬ್ರಹ್ಮದಲ್ಲಿ ಅಧ್ಯಸ್ತವಾಗಿರುವ ಬ್ರಹ್ಮೇತರವಾದ ನಾಮ-ರೂಪಗಳನ್ನು ಅಪಾಕರಿಸುತ್ತ ಬಂದಂತೆ ನಾವು ಜೀವ-ಜಗತ್ತುಗಳೆಂಬ ಸ್ಥಿತಿಯಿಂದ ಬ್ರಹ್ಮದತ್ತ ಸಾಗಿ ಬ್ರಹ್ಮವೇ ಆಗಿಬಿಡುತ್ತೇವೆ. ಇದೇ ರೀತಿ ಆನಂದವರ್ಧನನು ನಿರೂಪಿಸುವ ಧ್ವನಿಪ್ರಕ್ರಿಯೆಯು ಅಭಿಧಾವೃತ್ತಿಯಿಂದ ಹೊರಡುವ ವಾಚ್ಯಾರ್ಥವನ್ನು ಮೀರಿ, ಲಕ್ಷಣಾವೃತ್ತಿಯಿಂದ ಸ್ಫುರಿಸುವ ಲಕ್ಷ್ಯಾರ್ಥವನ್ನೂ ದಾಟಿ ವ್ಯಂಜನಾವ್ಯಾಪಾರದಿಂದ ಪ್ರತೀತವಾಗುವ ರಸವನ್ನು ನಮಗೆ ಸಾಕ್ಷಾತ್ಕರಿಸಿಕೊಡುತ್ತದೆ.[9] ಅಲ್ಲದೆ ವಸ್ತುಧ್ವನಿ ಮತ್ತು ಅಲಂಕಾರಧ್ವನಿಗಳು ಕಟ್ಟಕಡೆಗೆ ರಸಾದಿಧ್ವನಿಯಲ್ಲಿಯೇ ಪರ್ಯವಸಿಸಬೇಕೆಂಬ ಸತ್ಯವನ್ನೂ ತಿಳಿಸುತ್ತದೆ.
ಹೆಚ್ಚೇನು, ಸಾಮಾನ್ಯಸ್ತರದ ಅರ್ಥಾಲಂಕಾರದಲ್ಲಿ ಕೂಡ ಇರುವುದು ಅಧ್ಯಾರೋಪವೇ. ಇದನ್ನು ಅಪಾಕರಿಸಿದ ಬಳಿಕ ನಮಗುಂಟಾಗುವ ಆಹ್ಲಾದ ವಸ್ತುತಃ ಗುಣೀಭೂತವ್ಯಂಗ್ಯವು ತಂದೀಯುವ ರಸಸ್ಪರ್ಶವೇ ಆಗಿದೆ. ಸೋದಾಹರಣವಾಗಿ ಹೇಳುವುದಾದರೆ, “ಮುಖವು ಚಂದ್ರಬಿಂಬದಂತಿದೆ” ಎಂಬ ಸರಳವಾದ ಧರ್ಮಲುಪ್ತೋಪಮೆಯಲ್ಲಿ ಉಪಮೇಯವಾದ ಮುಖದ ಮೇಲೆ ಉಪಮಾನವೆನಿಸಿದ ಚಂದ್ರಬಿಂಬ ಅಧ್ಯಸ್ತವಾಗಿದೆ. ಆದರೆ ನಾವು ಈ ಅಧ್ಯಾಸವನ್ನೇ ಸತ್ಯವೆಂದು ಭಾವಿಸದೆ ಚಂದ್ರಬಿಂಬದಲ್ಲಿರುವ ಮುಖೇತರವಾದ ಅನೇಕಧರ್ಮಗಳನ್ನು ಅಪಾಕರಿಸಿಕೊಂಡು ಆ ಬಿಂಬದ ಜೀವಾಳವೆನಿಸಿದ ಕಾಂತಿ, ಶೈತ್ಯ ಮತ್ತು ಸಂತೋಷಕಾರಿ ಗುಣಗಳನ್ನಷ್ಟೇ ಉಳಿಸಿಕೊಂಡು ಈ ಮೂಲಕ ಮುಖದಲ್ಲಿ ಕೂಡ ಇವೇ ಧರ್ಮಗಳು ಇವೆಯೆಂದರಿತು ಅದರ ಸೌಂದರ್ಯವನ್ನು ಆಸ್ವಾದಿಸುತ್ತೇವೆ. ಹೀಗೆ ಕಾವ್ಯಾನುಭವದಲ್ಲಿ ಹೆಜ್ಜೆಹೆಜ್ಜೆಗೂ ಅಧ್ಯಾರೋಪ ಮತ್ತು ಅಪವಾದಗಳ ಸರಣಿ ಸಾಗುತ್ತಲೇ ಇರುತ್ತದೆ.
ಈ ತರ್ಕವನ್ನು ನಾಟಕದ ಪಾತ್ರಗಳಿಗೂ ಅನ್ವಯಿಸಬಹುದು. ನಾವು ರಾಮ-ಸೀತೆಯರ ಭೂಮಿಕೆಗಳನ್ನು ನಿರ್ವಹಿಸುವ ನಟ-ನಟಿಯರ ಮೇಲೆ ಆಯಾ ಪಾತ್ರಗಳ ರೀತಿ-ನೀತಿಗಳನ್ನು ಆರೋಪಿಸಿದ ಬಳಿಕ ಅಭಿನವಗುಪ್ತನು ನಿರೂಪಿಸುವ ಅಭಿವ್ಯಕ್ತಿವಾದದ ಪ್ರಕಾರ ರಸಾಸ್ವಾದನೆಯನ್ನು ಮಾಡುವಾಗ ಈ ಎಲ್ಲ ಅಧ್ಯಾಸಗಳನ್ನೂ ಅಪಾಕರಿಸಿಕೊಂಡು ನಮ್ಮದಾದ ಸ್ಥಾಯಿಭಾವಗಳನ್ನೇ ರಾಗ-ದ್ವೇಷಗಳಿಲ್ಲದೆ ಅನುಭವಿಸುತ್ತಿರುತ್ತೇವೆ. ಈ ಬಗೆಯ ಕಾಣ್ಕೆ ನಮಗೆ ಸಾಧ್ಯವಾಗುವುದು ಸಹೃದಯತೆಯೆಂಬ ಶಕ್ತಿಯಿಂದ. ಆದುದರಿಂದಲೇ ಲೋಕದಲ್ಲಿ ವ್ಯಾವಹಾರಿಕಸತ್ತೆ ಮತ್ತು ಪ್ರಾತಿಭಾಸಿಕಸತ್ತೆಗಳ ಸ್ತರದಲ್ಲಿಯೇ ಕಳೆದುಹೋದ ನಮ್ಮದೇ ಆದ ಆನಂದವು ಕಲೆ-ಸಾಹಿತ್ಯಗಳಲ್ಲಿ ಆಹಾರ್ಯಸತ್ತೆಯ ಮೂಲಕ ನಮಗೆ ದಕ್ಕುತ್ತದೆ. ಹೀಗೆ ಕಲೆಯಲ್ಲಷ್ಟೇ ನಾವು ಕಂಡುಕೊಳ್ಳಬಲ್ಲ ಆಹಾರ್ಯಸತ್ತೆಯನ್ನು ಜಗತ್ತಿನಲ್ಲಿಯೂ ಕಾಣುವಂತಾದರೆ ಅದು ನಮಗೆ ಪರಮಾರ್ಥಸತ್ತೆಯನ್ನೇ ತೋರ್ಪಡಿಸಿಕೊಟ್ಟು ತನ್ಮೂಲಕ ಬ್ರಹ್ಮಸಾಕ್ಷಾತ್ಕಾರವನ್ನು ಒದಗಿಸುತ್ತದೆ. ಇದು ಶಂಕರರ ದರ್ಶನಕ್ಕೆ ಅನುಗುಣವಾಗಿದೆ. ಹೀಗೆ ಆನಂದವರ್ಧನನು ಶಂಕರರ ತತ್ತ್ವಕ್ಕೆ ಅತ್ಯುತ್ತಮವಾದ ಉದಾಹರಣೆಯಾಗಿಯೂ ಅದನ್ನು ಅರಿಯಲು ಒಳ್ಳೆಯ ಉಪಕ್ರಮವಾಗಿಯೂ ಪರಿಣಮಿಸುತ್ತಾನೆ.
[1] ದ್ವಿರೂಪಂ ಹಿ ಬ್ರಹ್ಮಾವಗಮ್ಯತೇ ನಾಮರೂಪವಿಕಾರಭೇದೋಪಾಧಿವಿಶಿಷ್ಟಂ ತದ್ವಿಪರೀತಂ ಚ ಸರ್ವೋಪಾಧಿವಿವರ್ಜಿತಮ್ || (ಶಾರೀರಕಭಾಷ್ಯ, 1.1.12)
ಯತ್ರಾರ್ಥಃ ಶಬ್ದೋ ವಾ ತಮರ್ಥಮುಪಸರ್ಜನೀಕೃತಸ್ವಾರ್ಥೌ | ವ್ಯಂಕ್ತಃ ಕಾವ್ಯವಿಶೇಷಃ ಸ ಧ್ವನಿರಿತಿ ಸೂರಿಭಿಃ ಕಥಿತಃ || (ಧ್ವನ್ಯಾಲೋಕ, 1.13)
ಪ್ರಕಾರೋऽನ್ಯೋ ಗುಣೀಭೂತವ್ಯಂಗ್ಯಃ ಕಾವ್ಯಸ್ಯ ದೃಶ್ಯತೇ | ಯತ್ರ ವ್ಯಂಗ್ಯಾನ್ವಯೇ ವಾಚ್ಯಚಾರುತ್ವಂ ಸ್ಯಾತ್ ಪ್ರಕರ್ಷವತ್ || (ಧ್ವನ್ಯಾಲೋಕ, 3.34)
[2] ನಿರ್ಗುಣಮಪಿ ಸದ್ಬ್ರಹ್ಮ ನಾಮರೂಪಗತೈರ್ಗುಣೈಃ ಸಗುಣಮುಪಾಸನಾರ್ಥಂ ತತ್ರ ತತ್ರೋಪದಿಶ್ಯತೇ | ಸರ್ವಗತಸ್ಯಾಪಿ ಬ್ರಹ್ಮಣ ಉಪಲಬ್ಧ್ಯರ್ಥಂ ಸ್ಥಾನವಿಶೇಷೋ ನ ವಿರುದ್ಧ್ಯತೇ, ಶಾಲಗ್ರಾಮ ಇವ ವಿಷ್ಣೋಃ || (ಶಾರೀರಕಭಾಷ್ಯ, 1.2.14)
[3] ಪ್ರಕಾರೋऽಯಂ ಗುಣೀಭೂತವ್ಯಂಗ್ಯೋऽಪಿ ಧ್ವನಿರೂಪತಾಮ್ | ಧತ್ತೇ ರಸಾದಿತಾತ್ಪರ್ಯಪರ್ಯಾಲೋಚನಯಾ ಪುನಃ || (ಧ್ವನ್ಯಾಲೋಕ, 3.40)
[4] ತಾನ್ಯೇತಾನ್ಯುಪಾಸನಾನಿ ಸತ್ತ್ವಶುದ್ಧಿಕರತ್ವೇನ ವಸ್ತುತತ್ತ್ವಾವಭಾಸಕತ್ವಾತ್ ಅದ್ವೈತಜ್ಞಾನೋಪಕಾರಕಾಣಿ ಆಲಂಬನವಿಷಯತ್ವಾತ್ ಸುಸಾಧ್ಯಾನಿ || (ಛಾಂದೋಗ್ಯೋಪನಿಷದ್ಭಾಷ್ಯ, 1.1.1)
[5] ತೈರನ್ಯೋನ್ಯವಿರೋಧಿಭಿರಸ್ಮದೀಯೋऽಯಂ ವೈದಿಕಃ ಸರ್ವಾನನ್ಯತ್ವಾದ್ ಆತ್ಮೈಕದರ್ಶನಪಕ್ಷೋ ನ ವಿರುದ್ಧ್ಯತೇ, ಯಥಾ ಸ್ವಹಸ್ತಪಾದಾದಿಭಿಃ || (ಮಾಂಡೂಕ್ಯಕಾರಿಕಾಭಾಷ್ಯ, 3.17)
[6] ಸುಪ್ತಿಙ್ವಚನಸಂಬಂಧೈಸ್ತಥಾ ಕಾರಕಶಕ್ತಿಭಿಃ | ಕೃತ್ತದ್ಧಿತಸಮಾಸೈಶ್ಚ ದ್ಯೋತ್ಯೋऽಲಕ್ಷ್ಯಕ್ರಮಃ ಕ್ವಚಿತ್ || (ಧ್ವನ್ಯಾಲೋಕ, 3.16)
[7] ತಥಾ ಹಿ ಸಂಪ್ರದಾಯವಿದಾಂ ವಚನಮ್ – ಅಧ್ಯಾರೋಪಾಪವಾದಾಭ್ಯಾಂ ನಿಷ್ಪ್ರಪಂಚಂ ಪ್ರಪಂಚ್ಯತೇ || (ಭಗವದ್ಗೀತಾಭಾಷ್ಯ, 13.13)
[8] ಇದಾನೀಂ ಜಾಗ್ರತ್ಸ್ವಪ್ನಾದಿದ್ವಾರೇಣೈವ ಮಹತಾ ತರ್ಕೇಣ ವಿಸ್ತಾರಿತೋऽಧಿಗಮಃ ಕರ್ತವ್ಯಃ | (ಬೃಹದಾಣ್ಯಕೋಪನಿಷದ್ಭಾಷ್ಯ 4.3.1)
[9] ಸರ್ವಾಸು ಹ್ಯುಪನಿಷತ್ಸು ಜ್ಞೇಯಂ ಬ್ರಹ್ಮ “ನೇತಿ ನೇತಿ”, “ಅಸ್ಥೂಲಮನಣು” ಇತ್ಯಾದಿವಿಶೇಷಪ್ರತಿಷೇಧೇನೈವ ನಿರ್ದಿಶ್ಯತೇ, ನ “ಇದಂ ತತ್” ಇತಿ | ವಾಚೋऽಗೋಚರತ್ವಾತ್ | (ಭಗವದ್ಗೀತಾಭಾಷ್ಯ, 13.12).
ಯದಾ ಪುನಃ ಸ್ವರೂಪಮೇವ ನಿರ್ದಿದಿಕ್ಷಿತಂ ಭವತಿ ನಿರಸ್ತಸರ್ವೋಪಾಧಿವಿಶೇಷಂ ತದಾ ನ ಶಕ್ಯತೇ ಕೇನಚಿದಪಿ ಪ್ರಕಾರೇಣ ನಿರ್ದೇಷ್ಟುಮ್ | ತದಾ ಅಯಮೇವಾಭ್ಯುಪಾಯೋ ಯದುತ ಪ್ರಾಪ್ತನಿರ್ದೇಶಪ್ರತಿಕ್ಷೇಪದ್ವಾರೇಣ ನೇತಿ ನೇತೀತಿ ನಿರ್ದೇಶಃ || (ಬೃಹದಾರಣ್ಯಕೋಪನಿಷದ್ಭಾಷ್ಯ, 2.3.6)
ಪ್ರತೀಯಮಾನಂ ಪುನರನ್ಯದೇವ ವಸ್ತ್ವಸ್ತಿ ವಾಣೀಷು ಮಹಾಕವೀನಾಮ್ | ಯತ್ತತ್ಪ್ರಸಿದ್ಧಾವಯವಾತಿರಿಕ್ತಂ ವಿಭಾತಿ ಲಾವಣ್ಯಮಿವಾಂಗನಾಸು || (ಧ್ವನ್ಯಾಲೋಕ, 1.4).
To be continued.