ಶಂಕರ ಮತ್ತು ಆನಂದವರ್ಧನ

This article is part 1 of 6 in the series Shankaracharya and Anandavardhana

ವೇದಾಂತಾರ್ಥತದಾಭಾಸಕ್ಷೀರನೀರವಿವೇಕಿನಮ್ |

ನಮಾಮಿ ಭಗವತ್ಪಾದಂ ಪರಹಂಸಧುರಂಧರಮ್ || (ಅಮಲಾನಂದ)

ಧ್ವನಿನಾತಿಗಭೀರೇಣ ಕಾವ್ಯತತ್ತ್ವನಿವೇಶಿನಾ |

ಆನಂದವರ್ಧನಃ ಕಸ್ಯ ನಾಸೀದಾನಂದವರ್ಧನಃ || (ರಾಜಶೇಖರ)

ಭಾರತೀಯಸಂಸ್ಕೃತಿಯು ಜ್ಞಾನಲೋಕಕ್ಕೆ ನೀಡಿದ ಕೊಡುಗೆಗಳ ಪೈಕಿ ಭಾಷೆಯ ಸ್ತರದಲ್ಲಿ ವ್ಯಾಕರಣದರ್ಶನ, ಜೀವನಕ್ರಮದಲ್ಲಿ ತ್ರಿವರ್ಗತತ್ತ್ವ ಮತ್ತು ಸ್ವಾಸ್ಥ್ಯಸಂಹಿತೆಯಲ್ಲಿ ಆಯುರ್ವೇದ ಎದ್ದುತೋರುವಂಥವು. ಈ ಸಾಲಿಗೆ ಸೇರುವ ಮತ್ತೆರಡು ಅಂಶಗಳೆಂದರೆ ಜೀವನಮೀಮಾಂಸೆಯಾದ ವೇದಾಂತ ಮತ್ತು ಸೌಂದರ್ಯಮೀಮಾಂಸೆಯಾದ ರಸಧ್ವನಿತತ್ತ್ವ. ಸದ್ಯದ ಲೇಖನವು ಈ ಎರಡು ಅಂಶಗಳನ್ನು ಕುರಿತು ಚಿಂತಿಸಿದ ಇಬ್ಬರು ಮಹನೀಯರ ಯೋಗದಾನಗಳಿಗಿರುವ ಸಾಮ್ಯವನ್ನೂ ಒಟ್ಟಂದದ ಮಹತ್ತ್ವವನ್ನೂ ಪರಿಚಯಿಸಿಕೊಡಲಿದೆ.

ಭಗವತ್ಪಾದ ಶಂಕರರಿಗೂ ಆಚಾರ್ಯ ಆನಂದವರ್ಧನನಿಗೂ ಇರುವ ಸಾಮ್ಯ ಆಶ್ಚರ್ಯ ತರಿಸುವಂಥದ್ದು. ಇದರತ್ತ ಹೆಚ್ಚಿನ ವಿದ್ವಾಂಸರ ಗಮನ ಹರಿಯದ ಕಾರಣ ಆ ನಿಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ.

ವೇದಾಂತದ ಇತಿಹಾಸವನ್ನು ಶಂಕರಪೂರ್ವ ಮತ್ತು ಶಂಕರೋತ್ತರ ಎಂದು ವಿಭಾಗಿಸುವುದುಂಟು. ಇದೇ ರೀತಿ ಸಾಹಿತ್ಯಮೀಮಾಂಸೆಯ ಇತಿಹಾಸವೂ ಧ್ವನಿಪೂರ್ವ ಮತ್ತು ಧ್ವನ್ಯುತ್ತರ ಎಂದು ವಿಭಕ್ತವಾಗಿರುವುದು ವಿದ್ವದ್ವೇದ್ಯ. ಈ ಕಾರಣದಿಂಲೇ ಶಂಕರ-ಆನಂದವರ್ಧನರ ಅನನ್ಯತೆ ಸ್ಫುರಿಸುತ್ತದೆ. ಇವರನ್ನು ಒಪ್ಪದವರು ಕೂಡ ಇವರ ತತ್ತ್ವಗಳನ್ನು ಉಪೇಕ್ಷೆ ಮಾಡಲಾಗದಷ್ಟರ ಮಟ್ಟಿಗೆ ಅವು ಪ್ರಭಾವಶಾಲಿಗಳೆಂದರೆ ಆ ಮೌಲ್ಯಗಳ ಮಹತ್ತ್ವ ಎಂಥದ್ದೆಂದು ತಿಳಿಯದಿರದು.

ಸ್ವೋಪಜ್ಞತೆ

ಶಂಕರರಿಗೆ ಮುನ್ನ ವೇದ-ಉಪನಿಷತ್ತುಗಳಲ್ಲಿ, ಇತಿಹಾಸ-ಪುರಾಣಗಳಲ್ಲಿ ಮತ್ತು ಶಾರೀರಕಸೂತ್ರಗಳಲ್ಲಿ ವೇದಾಂತತತ್ತ್ವ ನಿಕ್ಷಿಪ್ತವಾಗಿತ್ತೆಂಬುದು ಸುವೇದ್ಯ. ಆದರೆ ಒಬ್ಬ ಗೌಡಪಾದರ ಕಾರಿಕೆಗಳನ್ನುಳಿದು ಮಿಕ್ಕ ಯಾವುದೇ ವೇದಾಂತಿಯ ಕೃತಿ ನಮಗಿಂದು ಉಪಲಬ್ಧವಿಲ್ಲ. ಶಂಕರರ ಪೂರ್ವಸೂರಿಗಳ ವಿಚಾರವು ಅಲ್ಲಲ್ಲಿ ಕಂಡುಬರುವ ಪುಡಿಪುಡಿಯಾದ ಉಲ್ಲೇಖಗಳಿಂದ ಮಾತ್ರ ತಿಳಿದುಬರುತ್ತದೆ. ಹೀಗಾಗಿ ಶ್ರುತಿ-ಸ್ಮೃತಿ-ನ್ಯಾಯಪ್ರಸ್ಥಾನಗಳಲ್ಲಿ ಹರಳುಗಟ್ಟಿದ ಚಿಂತನಕ್ಕೆ ಇದಮಿತ್ಥಂ ಎಂಬ ಏಕಘನಾಕೃತಿಯನ್ನು ಹವಣಿಸಿದ ಶ್ರೇಯಸ್ಸು ಶಂಕರರಿಗೇ ಸಲ್ಲುತ್ತದೆ.

ಇದೇ ರೀತಿ ಆನಂದವರ್ಧನನಿಗಿಂತ ಹಿಂದೆ ಸೌಂದರ್ಯತತ್ತ್ವವು ನಾಟ್ಯಶಾಸ್ತ್ರದಲ್ಲಿ ಪ್ರಧಾನವಾಗಿ ನಿಕ್ಷಿಪ್ತವಾಗಿತ್ತು. ಇದರ ಒಂದಂಶವಾದ ಕಾವ್ಯಸೌಂದರ್ಯಮೀಮಾಂಸೆ ದಂಡಿ, ಭಾಮಹ, ಉದ್ಭಟ, ರುದ್ರಟ, ವಾಮನಾದಿಗಳಲ್ಲಿ ವಿವೇಚಿತವಾಗುತ್ತ ಬಂದಿತ್ತು. ಆದರೆ ಆನಂದವರ್ಧನನೇ ಹೇಳುವ ಕಾವ್ಯಸ್ಯಾತ್ಮಾ ಧ್ವನಿರಿತಿ ಬುಧೈರ್ಯಃ ಸಮಾಮ್ನಾತಪೂರ್ವಃ ಎಂಬ ಮಾತಿಗೆ ಪುರಾವೆಯಾಗಬಲ್ಲ ತತ್ತ್ವಗಳು ಮಾತ್ರ ನಮ್ಮ ಪಾಲಿಗಿಂದು ಉಳಿದುಬಂದಿಲ್ಲ. ಹೀಗಾಗಿ ಧ್ವನಿಸಿದ್ಧಾಂತವನ್ನು ಪ್ರಶ್ನಾತೀತವಾಗಿ ಸ್ಥಾಪಿಸುವ ಮೂಲಕ ರಸಾಭಿವ್ಯಕ್ತಿಗೆ ಅನುಭವನಿಷ್ಠವಾದ ವಿಚಾರಪ್ರಕ್ರಿಯೆಯನ್ನು ಒದಗಿಸಿದ ಮನ್ನಣೆ ಆನಂದವರ್ಧನನಿಗೇ ಸೇರುತ್ತದೆ.

ವಿವರ್ತವಾದ-ವ್ಯಂಜನಾವ್ಯಾಪಾರ

ಉಪನಿಷತ್ತುಗಳು ನಿರೂಪಿಸುವ ಬ್ರಹ್ಮತತ್ತ್ವ ಮತ್ತು ನಾಟ್ಯಶಾಸ್ತ್ರವು ಪ್ರತಿಪಾದಿಸುವ ರಸತತ್ತ್ವ ಅಪ್ರತಿಹತವಾದ ಮೌಲ್ಯಗಳಾಗಿ ನಿಲ್ಲುವುದು ವಿವರ್ತವಾದ ಮತ್ತು ವ್ಯಂಜನಾವ್ಯಾಪಾರಗಳ ಮೂಲಕವೇ. ಆದರೆ ಉಪನಿಷತ್ತುಗಳಲ್ಲಿ ವಿವರ್ತವಾದದ ನೇರವಾದ ನಿರೂಪಣೆಯಿಲ್ಲ. ಇದೇ ರೀತಿ ನಾಟ್ಯಶಾಸ್ತ್ರದಲ್ಲಿ ವ್ಯಂಜನಾವ್ಯಾಪಾರದ ಕಂಠೋಕ್ತಪ್ರತಿಪಾದನೆಯಿಲ್ಲ.[1] ಹೀಗಾಗಿ ಬ್ರಹ್ಮ ಮತ್ತು ರಸತತ್ತ್ವಗಳನ್ನು ಕ್ರಮವಾಗಿ ಈ ಎರಡು ಪ್ರಕ್ರಿಯೆಗಳ ಮೂಲಕ ನಿಃಸಂದಿಗ್ಧವಾಗಿ ನಿರೂಪಿಸಬಹುದೆಂಬ ಕಾಣ್ಕೆ ಎಂಥ ಮೇಧಾವಿಗೂ ಉಂಟಾಗುವುದು ಕಷ್ಟ; ಪ್ರಾಯಶಃ ಅಸಾಧ್ಯವೆಂದೇ ಹೇಳಬೇಕು. ಇಂಥ ಅನನ್ಯಸಾಧ್ಯವಾದುದನ್ನು ಸಿದ್ಧಿಸಿಕೊಂಡ ಬಲ್ಮೆ ಶಂಕರ-ಆನಂದವರ್ಧನರದು.

ಬ್ರಹ್ಮ ಮತ್ತು ರಸಗಳನ್ನು ಶಂಕರ, ಆನಂದವರ್ಧನ ಮತ್ತಿವರ ಅನುಯಾಯಿಗಳಂತೆಯೇ ಇತರ ವೇದಾಂತಿಗಳೂ ಇತರ ಆಲಂಕಾರಿಕರೂ ಒಪ್ಪುತ್ತಾರೆಂಬುದು ದಿಟ.[2] ಆದರೆ ಇವರಾರೂ ವಿವರ್ತವಾದ ಮತ್ತು ವ್ಯಂಜನಾವ್ಯಾಪಾರಗಳನ್ನು ಒಪ್ಪುವುದಿಲ್ಲ.[3] ಮಾತ್ರವಲ್ಲ, ಇವನ್ನು ಉಗ್ರವಾಗಿ ವಿರೋಧಿಸುತ್ತಾರೆ. ಇದಕ್ಕೆ ಕಾರಣ ಅವರಿಗೆ ಬ್ರಹ್ಮ ಮತ್ತು ರಸಗಳಲ್ಲಿ ಎಷ್ಟೇ ತಾತ್ಪರ್ಯವಿದ್ದರೂ ಅದು ಅನುಭವನಿಷ್ಠವಾಗದಿರುವುದು ಹಾಗೂ ಲೋಕಸ್ತರದ ಕಾರ್ಯ-ಕಾರಣಭಾವಗಳ ಸೀಮಿತತರ್ಕವನ್ನು ಮೀರಲಾಗದಿರುವುದು. ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ – ದೇಶ-ಕಾಲ-ವಸ್ತುಗಳ ಪರಿಚ್ಛೇದವನ್ನು ಮೀರಲಾಗದೆಯೇ ಸಚ್ಚಿದಾನಂದಘನವೆನಿಸಿದ ಬ್ರಹ್ಮವನ್ನು ಸಾಧಿಸಿಕೊಳ್ಳುವ ಬಯಕೆ ಶಾಂಕರೇತರರಾದ ವೇದಾಂತಿಗಳ ಹವಣು. ಇದು ಸರ್ವಾತ್ಮನಾ ಅಸಾಧ್ಯ. ಏಕೆಂದರೆ ಬ್ರಹ್ಮದ ಸ್ವರೂಪವೇ ಅನನ್ಯತೆ, ಪರಿಪೂರ್ಣತೆ. ಆದುದರಿಂದ ಜಗತ್ತು-ಜೀವಗಳನ್ನು ಪರಮಾರ್ಥತಃ ಬ್ರಹ್ಮೇತರವಾಗಿ ಕಂಡರೆ ಬ್ರಹ್ಮವೇ ಸಿದ್ಧಿಸದು. ಅಂದರೆ, ತ್ರಿಪುಟೀವಿಲಯನವಿಲ್ಲದೆ ಬ್ರಹ್ಮಸಾಕ್ಷಾತ್ಕಾರ ಅಸಾಧ್ಯ. ಇದೇ ರೀತಿ ಲೋಕಸ್ತರದ ಅಭಿಧಾ-ಲಕ್ಷಣಾವೃತ್ತಿಗಳನ್ನು ಮೀರದೆಯೇ ವಿಗಲಿತವೇದ್ಯಾಂತರ ಎನಿಸಿದ ರಸವನ್ನು ಸಾಕ್ಷಾತ್ಕರಿಸಿಕೊಳ್ಳುವ ಬಯಕೆ ಧ್ವನಿವಿರೋಧಿಗಳದು. ಇದು ಸರ್ವಥಾ ಅಸಾಧ್ಯ. ಏಕೆಂದರೆ ರಸದ ಸ್ವರೂಪವೇ ಆನಂದ. ಹೀಗಾಗಿಯೇ ಇದು ಲೋಕೋತ್ತರ. ಪ್ರತ್ಯಕ್ಷ-ಅನುಮಾನ-ಆಪ್ತವಾಕ್ಯ-ಉಪಮಾನಗಳಂಥ ಲೌಕಿಕಪ್ರಮಾಣಗಳನ್ನು ಮೀರಿ ವೈಯಕ್ತಿಕಭಾವಗಳು ಸಾಧಾರಣೀಕೃತವಾಗದೆ ಅವೈಯಕ್ತಿಕವಾದ ರಸದ ಸಿದ್ಧಿ ಊಹಾತೀತ.

ವಸ್ತುಸ್ಥಿತಿ ಹೀಗಿದ್ದರೂ ಶಂಕರ ಮತ್ತು ಆನಂದವರ್ಧನರ ವಿರೋಧಿಗಳು ವಿವರ್ತವಾದ ಮತ್ತು ವ್ಯಂಜನಾವ್ಯಾಪಾರಗಳನ್ನು ಒಪ್ಪದಿರುವುದು ಏಕೆಂಬ ಪ್ರಶ್ನೆ ಉಂಟಾಗುತ್ತದೆ. ಉತ್ತರ ಸರಳ. ಜಗದಭಿಮಾನ ಮತ್ತು ಅದಕ್ಕೂ ಮೂಲವಾದ ಅಹಂಕಾರವೇ ವಿವರ್ತವಾದವನ್ನು ನಿರಾಕರಿಸುತ್ತದೆ. ಇದೇ ರೀತಿ ಅಭಿಧಾಮಾತ್ರದಲ್ಲಿಯೇ ಅಭಿನಿವೇಶ ಮತ್ತು ಕಾರ್ಯ-ಕಾರಣಭಾವದ ಅನುಮಿತಿಯಲ್ಲಿಯೇ ನಚ್ಚು ವ್ಯಂಜನಾವ್ಯಾಪಾರವನ್ನು ಒಲ್ಲೆನೆನ್ನುತ್ತದೆ. ಒಟ್ಟಿನಲ್ಲಿ ಅಹಂಕಾರಕ್ಕೆ ಅಂಟಿಬಂದ ರಾಗ-ದ್ವೇಷಗಳೇ ಶಂಕರ ಮತ್ತು ಆನಂದವರ್ಧನರನ್ನು ವಿರೋಧಿಸುವಂತೆ ಮಾಡುವುವಲ್ಲದೆ ಮತ್ತಾವ ದಾರ್ಶನಿಕವಿಚಾರವಾಗಲಿ, ಕಾವ್ಯಮೀಮಾಂಸಾತತ್ತ್ವವಾಗಲಿ ಅಲ್ಲ.

ಜಗತ್ತು-ಜೀವ ಮತ್ತು ಅಭಿಧೆ-ಲಕ್ಷಣೆಗಳ ಅಂಗೀಕೃತಿ

ಶಂಕರ ಮತ್ತು ಆನಂದವರ್ಧನರು ಕ್ರಮವಾಗಿ ಜಗತ್ತು-ಜೀವಗಳ ಅಸ್ತಿತ್ವದಲ್ಲಾಗಲಿ, ಅಭಿಧಾ-ಲಕ್ಷಣಾವೃತ್ತಿಗಳ ಇರುವಿಕೆಯಲ್ಲಾಗಲಿ ಅಸಮಾಧಾನವನ್ನು ಹೊಂದಿಲ್ಲ.[4] ಅಷ್ಟೇಕೆ, ಇವುಗಳಲ್ಲಿ ಯಾವ ವಿರೋಧವನ್ನೂ ತಳೆದಿಲ್ಲ. ಅವರು ಹೇಳುವುದೆಲ್ಲ ದೇಶ-ಕಾಲಗಳ ಪರಿಧಿಯೊಳಗೆ ಮಾತ್ರ ಸಲ್ಲುವ ಈ ಅಂಶಗಳು ಬ್ರಹ್ಮ ಮತ್ತು ರಸಗಳ ಸಾಕ್ಷಾತ್ಕಾರಕ್ಕೆ ನೇರವಾಗಿ ಒದಗಿಬರುವುದಿಲ್ಲ; ಇವುಗಳು ಕ್ರಮವಾಗಿ ಚಿತ್ತಶುದ್ಧಿಸಂಪಾದನೆ ಮತ್ತು ವಿಭಾವ-ಅನುಭಾವಸಾಮಗ್ರಿಗಳ ಕ್ರೋಡೀಕರಣಗಳಲ್ಲಿ ನೆರವಾಗುತ್ತವೆ ಎಂದು.

ಈ ಕಾರಣದಿಂದಲೇ ಯಾವುದೇ ದರ್ಶನವು ವಿವೇಚಿಸಬೇಕಾದ ಐದು ಅಂಶಗಳೆನಿಸುವ ಜಗತ್ತು, ಜೀವ, ಈಶ್ವರ, ಬಂಧ ಮತ್ತು ಮೋಕ್ಷಗಳನ್ನು ಶಾಂಕರಾದ್ವೈತವು ಸರ್ವಸಮರ್ಪಕವಾಗಿ ನಿರೂಪಿಸಬಲ್ಲುದು. ಇದೇ ರೀತಿ ಯಾವುದೇ ಕಾವ್ಯಮೀಮಾಂಸೆ ವಿವೇಚಿಸಬೇಕಾದ ಗುಣ, ದೋಷ, ರೀತಿ, ಮಾರ್ಗ, ಅಲಂಕಾರ ಮುಂತಾದ ಎಲ್ಲ ಅಂಶಗಳನ್ನೂ ಧ್ವನಿಸಿದ್ಧಾಂತವು ಅಚ್ಚುಕಟ್ಟಾಗಿ ಲಕ್ಷಣೀಕರಿಸಬಲ್ಲುದು. ಈ ಕೆಲಸಗಳನ್ನು ಮಿಕ್ಕ ದರ್ಶನಾಚಾರ್ಯರಾಗಲಿ, ಉಳಿದ ಆಲಂಕಾರಿಕರಾಗಲಿ ಮಾಡಲಾಗುವುದಿಲ್ಲ. ಒಂದು ವೇಳೆ ಹಾಗೆ ಯತ್ನಿಸಿದಲ್ಲಿ ಅಲ್ಲಿ ಅನನ್ವಯ, ಅಂತರ್ವಿರೋಧ ಮತ್ತು ಅಸಮಗ್ರತೆಗಳು ತಲೆದೋರದಿರವು.

ಎಷ್ಟೋ ದರ್ಶನಗಳು ಜಗತ್ತೇ ಸತ್ಯವೆಂದು, ಜೀವವೇ ನಿತ್ಯವೆಂದು, ಈಶ್ವರಪಾರಮ್ಯವೇ ಶಾಶ್ವತವೆಂದು ಬಗೆಬಗೆಯಾಗಿ ಹೇಳಿವೆ. ಇವನ್ನೆಲ್ಲ ಬ್ರಹ್ಮವೊಂದರಲ್ಲಿ ಸಮನ್ವಯ ಮಾಡುವ ಶಕ್ತಿ ಶಾಂಕರತತ್ತ್ವಕ್ಕೆ ಮಾತ್ರ ಉಂಟು. ಇದೇ ರೀತಿ ಹಲವರು ಆಲಂಕಾರಿಕರು ಅಲಂಕಾರವೇ ಕಾವ್ಯದ ಜೀವಾಳವೆಂದು, ಗುಣ-ರೀತಿಗಳೇ ಕವಿತೆಯ ಆತ್ಮವೆಂದು ಬಗೆಬಗೆಯಾಗಿ ನಿರೂಪಿಸುತ್ತಾರೆ. ಇವನ್ನೆಲ್ಲ ರಸತತ್ತ್ವವೊಂದರಲ್ಲಿಯೇ ಅಡಕ ಮಾಡುವ ಬಲ್ಮೆ ಧ್ವನಿಸಿದ್ಧಾಂತಕ್ಕೆ ಮಾತ್ರ ಇದೆ. ಇಂಥ ಸೌಲಭ್ಯಕ್ಕೆ ಕಾರಣ ಶಂಕರ ಮತ್ತು ಆನಂದವರ್ಧನರು ಸಮನ್ವಯ ಮತ್ತು ಅವಿರೋಧಗಳನ್ನು ಶ್ವಾಸೋಚ್ಛ್ವಾಸಗಳಾಗಿ ಹೊಂದಿರುವುದೇ ಆಗಿದೆ. ಇವಾದರೂ ಸಾಧ್ಯವಾಗಿರುವುದು ಅವರಿಗಿರುವ ಬ್ರಹ್ಮೈಕದೃಷ್ಟಿ ಮತ್ತು ರಸೈಕದೃಷ್ಟಿಗಳಿಂದಾಗಿಯೇ. ಮಿಕ್ಕ ದಾರ್ಶನಿಕರೂ ಆಲಂಕಾರಿಕರೂ ಬ್ರಹ್ಮ ಮತ್ತು ರಸಗಳನ್ನು ಅದೆಷ್ಟು ಪ್ರಮುಖವೆಂದರೂ ಅದು ವಸ್ತುತಃ ತುಟಿಯಂಚಿನ ನುಡಿಯಾಗುವುದಲ್ಲದೆ ಅಂತರಂಗದ ದನಿಯಾಗುವುದಿಲ್ಲ.



[1] ಈ ಕಾರಣದಿಂದಲೇ ಶಬ್ದಶರಣರಾದ ಅನೇಕ ದಾರ್ಶನಿಕರೂ ಆಲಂಕಾರಿಕರೂ ವಿವರ್ತವಾದ ಮತ್ತು ವ್ಯಂಜನಾವ್ಯಾಪಾರಗಳನ್ನು ವಿರೋಧಿಸುತ್ತಾರೆ. ಆದರೆ ಇವುಗಳಿಲ್ಲದೆ ಬ್ರಹ್ಮ-ರಸಗಳ ಅನನ್ಯತೆ-ಅದ್ವಿತೀಯತೆಗಳೇ ಸಾಬೀತಾಗುವುದಿಲ್ಲವೆಂಬ ಅಂಶವನ್ನು ಮರೆಯುತ್ತಾರೆ. ನಾವೆಲ್ಲ ಬಲ್ಲಂತೆ ಜ್ಞಾನನಿರ್ಮಾಣದ ಇತಿಹಾಸದಲ್ಲಿ ಕೆಲವೊಮ್ಮೆ ಮಹಾಸತ್ಯಗಳು ಸ್ಫುರಣೆಯ ರೂಪದಲ್ಲಿ ಹುಟ್ಟಿಬಿಡುತ್ತವೆ. ಆದರೆ ಅವುಗಳನ್ನು ಪೂರ್ಣತರ್ಕದ ನೆಲೆಯಲ್ಲಿ ನಿಃಸಂದಿಗ್ಧವಾಗಿ ನಿರೂಪಿಸುವ ಪ್ರಕ್ರಿಯೆ ಇವುಗಳೊಟ್ಟಿಗೆ ಉದ್ಭವಿಸಿರುವುದಿಲ್ಲ. ಇಂಥ ಪ್ರಬುದ್ಧಪ್ರಕ್ರಿಯೆಗಳನ್ನು ಹವಣಿಸಿಕೊಡುವುದು ಮೂಲಸತ್ಯಗಳನ್ನು ಸಾಕ್ಷಾತ್ಕರಿಸಿಕೊಟ್ಟವರ ಕೊಡುಗೆಗಳಿಗಿಂತ ಯಾವ ರೀತಿಯಾಗಿಯೂ ಕಡಮೆಯಲ್ಲ. ಹೀಗಾಗಿಯೇ ಶಂಕರ ಮತ್ತು ಆನಂದವರ್ಧನರು ಯಾಜ್ಞವಲ್ಕ್ಯ ಮತ್ತು ಭರತರ ಬಳಿಕ ಆಯಾ ಕ್ಷೇತ್ರಗಳ ಶಿಖರಗಳಾಗಿ ನಿಲ್ಲುತ್ತಾರೆ. 

[2] ಸರ್ವಶಾಖೋಪನಿಷತ್ಸು ಚ ಬ್ರಹ್ಮೈಕತ್ವಂ ನಿಶ್ಚಿತೋರ್ಥಃ || (ಬೃಹದಾರಣ್ಯಕೋಪನಿಷದ್ಭಾಷ್ಯ, 1.4.10); ನ ಹಿ ರಸಾದೃತೇ ಕಶ್ಚಿದರ್ಥಃ ಪ್ರವರ್ತತೇ || (ನಾಟ್ಯಶಾಸ್ತ್ರ, 6.31 ಅನಂತರದ ಗದ್ಯ)

[3] ವಿವರ್ತವಾದದ ವಿರೋಧಿಗಳ ಪೈಕಿ ಶಂಕರಪೂರ್ವದವರಾಗಿ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸೆ ಮೊದಲಾದ ದರ್ಶನಗಳ ಪ್ರತಿಪಾದಕರು ಆಸ್ತಿಕಮತದ ಅನುಯಾಯಿಗಳಾಗಿ ಬಂದರೆ ಜೈನ-ಬೌದ್ಧ-ಚಾರ್ವಾಕರು ನಾಸ್ತಿಕಮತದ ಪ್ರತಿನಿಧಿಗಳಾಗಿ ಬರುತ್ತಾರೆ. ಈ ದರ್ಶನಗಳ ಪರಂಪರೆಯಲ್ಲಿ ಬಂದ ವಿದ್ವಾಂಸರು ಶಂಕರರ ಬಳಿಕ ಕೂಡ ವಿವರ್ತವಾದವನ್ನು ಒಪ್ಪಿಕೊಳ್ಳದೆ ತಮ್ಮ ತಮ್ಮ ಶಾಸ್ತ್ರಗಳಲ್ಲಿ ಮೊದಲಿನಿಂದ ನೆಲೆಯಾಗಿದ್ದ ಆರಂಭವಾದ, ಪರಿಣಾಮವಾದ, ಆಭಾಸವಾದ ಮುಂತಾದುವನ್ನೇ ಸಮರ್ಥಿಸುತ್ತ ಬಂದರು. ಶಂಕರೋತ್ತರದವರಾಗಿ ವೇದಾಂತಿಗಳೆಂದು ಹೇಳಿಕೊಳ್ಳುವ ಭಾಸ್ಕರ, ಯಾದವಪ್ರಕಾಶ, ರಾಮಾನುಜ, ಶ್ರೀಕಂಠ, ಮಧ್ವ, ವಲ್ಲಭ, ನಿಂಬಾರ್ಕ, ಬಲದೇವ ಮೊದಲಾದ ಎಷ್ಟೋ ಮಂದಿ ಬರುತ್ತಾರೆ. ನಿಷ್ಪಾಕ್ಷಿಕವಾಗಿ ನೋಡಿದರೆ ವೇದಾಂತವೆಂದರೆ ಶಾಂಕರದರ್ಶನವೇ ಸರಿ; ಮಿಕ್ಕವೆಲ್ಲ ವೇದಾಂತಾಭಾಸಗಳು ಮಾತ್ರ.

ವ್ಯಂಜನಾವ್ಯಾಪಾರದ ವಿರೋಧಿಗಳ ಪೈಕಿ ಮನೋರಥ, ಭಟ್ಟನಾಯಕ, ಮಹಿಮಭಟ್ಟ, ಧನಂಜಯ, ಧನಿಕ ಮತ್ತು ಕೆಲಮಟ್ಟಿಗೆ ಭೋಜ-ಕುಂತಕರು ಸಲ್ಲುತ್ತಾರೆ. ರಸನಿಷ್ಪತ್ತಿಯನ್ನು ಚರ್ಚಿಸುವ ಲೊಲ್ಲಟ ಮತ್ತು ಶಂಕುಕರು ಕೂಡ ವ್ಯಂಜನಾವ್ಯಾಪಾರವನ್ನು ತಮ್ಮ ಪ್ರತಿಪಾದನೆಗೆ ಬಳಸಿಕೊಂಡಿಲ್ಲ. ಹೀಗಾಗಿ ಅವರನ್ನೂ ಧ್ವನಿವಿರೋಧಿಗಳೆಂದು ಹೇಳಿದರೆ ತಪ್ಪಾಗಲಾರದು. ಆನಂದವರ್ಧನನಿಗಿಂತ ಮುನ್ನವಿದ್ದ ದಂಡಿ, ಭಾಮಹ, ವಾಮನಾದಿಗಳು ಧ್ವನಿತತ್ತ್ವವನ್ನೇ ಅರಿಯದವರಾದ ಕಾರಣ ಅವರನ್ನು ಧ್ವನಿವಿರೋಧಿಗಳೆಂದು ಹೇಳುವಂತಿಲ್ಲವಾದರೂ ಈ ಸಿದ್ಧಾಂತದ ಪ್ರತಿಪಾದನೆಗೆ ಅವರ ವಿಚಾರಗಳು ನೆರವಾಗುವುದಿಲ್ಲ ಎಂಬುದಂತೂ ಸತ್ಯ. ಒಟ್ಟಿನಲ್ಲಿ ರಸಧ್ವನಿತತ್ತ್ವಕ್ಕೆ ವಿರುದ್ಧವಾದ ಯಾವ ಸಿದ್ಧಾಂತವೂ ಸಾಹಿತ್ಯಶಾಸ್ತ್ರವೆಂಬ ಮನ್ನಣೆಗೆ ಪಾತ್ರವಾಗದು.    

[4]  ನ ಚ ದೃಷ್ಟೇ ಅನುಪಪನ್ನಂ ನಾಮ, ದೃಷ್ಟತ್ವಾದೇವ (ಬೃಹದಾರಣ್ಯಕೋಪನಿಷದ್ಭಾಷ್ಯ, ೧.೪.೧೦); ಪ್ರಾಗ್ಬ್ರಹ್ಮಾತ್ಮತಾಪ್ರತಿಬೋಧಾದುಪಪನ್ನಃ ಸರ್ವೋ ಲೌಕಿಕೋ ವೈದಿಕಶ್ಚ ವ್ಯವಹಾರಃ || (ಶಾರೀರಕಭಾಷ್ಯ, 2.1.14); ನ ಹಿ ವ್ಯಂಗ್ಯೇ ಪ್ರತೀಯಮಾನೇ ವಾಚ್ಯಬುದ್ಧಿರ್ದೂರೀಭವತಿ, ವಾಚ್ಯಾವಭಾಸಾವಿನಾಭಾವೇನ ತಸ್ಯ ಪ್ರಕಾಶನಾತ್ || (ಧ್ವನ್ಯಾಲೋಕ, 3.33 ವೃತ್ತಿ)

To be continued.

 

   Next>>

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Indian Perspective of Truth and Beauty in Homer’s Epics is a unique work on the comparative study of the Greek Epics Iliad and Odyssey with the Indian Epics – Rāmāyaṇa and Mahābhārata. Homer, who laid the foundations for the classical tradition of the West, occupies a stature similar to that occupied by the seer-poets Vālmīki and Vyāsa, who are synonymous with the Indian culture. The author...