ಭವಭೂತಿ “ಉತ್ತರರಾಮಚರಿತ”ದ ಕಡೆಯ ಅಂಕದಲ್ಲಿ ಗರ್ಭಾಂಕತಂತ್ರವನ್ನು ಬಳಸಿ ಸೀತಾ-ರಾಮರ ಪುನರ್ಮೇಲನವನ್ನು ಸಾಧಿಸಿದ್ದಾನೆ. ಇದನ್ನು ವಾಲ್ಮೀಕಿಮುನಿಗಳ ರಾಮಾಯಣದ ಕಡೆಯ ಭಾಗವೆಂಬಂತೆಯೂ ಕಲ್ಪಿಸಿದ್ದಾನೆ. ಅವನ ಪ್ರಕಾರ ಶ್ರವ್ಯಕಾವ್ಯವಾದ ರಾಮಾಯಣದ ಮುಗಿತಾಯವು ದೃಶ್ಯಕಾವ್ಯದ ಮೂಲಕ ಆಗಬೇಕೆಂದು ವಾಲ್ಮೀಕಿಯದೇ ಸಂಕಲ್ಪ. ಆದುದರಿಂದಲೇ ಕಡೆಯ ಭಾಗವನ್ನು ರಂಗಕ್ಕೆ ತರಲು ಭರತಮುನಿಯ ನೆರವನ್ನು ಕೋರಿ ಅವನಿಗೆ ಹಸ್ತಪ್ರತಿಯನ್ನೂ ಕೊಡಲಾಗಿತ್ತು. ಹೀಗೆ ಸಜ್ಜುಗೊಂಡ ರೂಪಕವು ರಾಮನ ಸಾನ್ನಿಧ್ಯದಲ್ಲಿ, ಅಶೇಷ ಕೋಸಲಪ್ರಜೆಗಳ ಸಮಕ್ಷದಲ್ಲಿ ಪ್ರಯುಕ್ತವಾಯಿತು. ಈ ರೂಪಕದಲ್ಲಿ ಸೀತೆಯ ಪಾತ್ರವನ್ನು ಆಕೆಯೇ ನಿರ್ವಹಿಸಿದ್ದಲ್ಲದೆ ಗಂಗೆ-ಭೂದೇವಿಯರೂ ತಮ್ಮವೇ ಭೂಮಿಕೆಗಳಲ್ಲಿ ಬರುತ್ತಾರೆ. ಇವರೆಲ್ಲ ರೂಪಕದ ಸಾಫಲ್ಯಕ್ಕಿಂತ ಮಿಗಿಲಾಗಿ ದುಡಿದದ್ದು ಪ್ರಜೆಗಳ ಮನಃಪರಿವರ್ತನೆಗಾಗಿ.
ಹೀಗೆ ಭವಭೂತಿಯು ಕಲೆಯ ಮೂಲಕ ರಸಾಸ್ವಾದಕ್ಕಿಂತ ಮಿಗಿಲಾಗಿ ಮನಃಪರಿವರ್ತನೆಯಾಗಬೇಕೆಂದು ಸೂಚಿಸಿರುವಂತೆ ಕಾಣುತ್ತದೆ. ಆದರೆ ಕಲೆಯ ಸಾಮರ್ಥ್ಯ ಈ ಮಟ್ಟದ್ದಲ್ಲ. ಏಕೆಂದರೆ, ರಸಾನಂದದ ಸ್ವರೂಪವೇ ತಾತ್ಕಾಲಿಕವಾದದ್ದು. ಇದು ಅವಿದ್ಯೆಯನ್ನು ನಿರ್ಮೂಲಿಸಲಾರದು. ಏನಿದ್ದರೂ ಕಲಾನುಭವದ ಹೊತ್ತಿನಲ್ಲಿ ಕಾಮ-ಕರ್ಮಗಳ ತೊಡಕಿಲ್ಲದಂತೆ ನೋಡಿಕೊಳ್ಳುತ್ತದೆ. ಆದರೆ ಸಂವೇದನಶೀಲನಾದ ಸಹೃದಯನು ಇಂಥ ರಸಾನಂದದಿಂದಲೇ ಸತ್ಪ್ರೇರಣೆಯನ್ನು ಹೊಂದಬಲ್ಲ. ಮಾತ್ರವಲ್ಲ, ಇದನ್ನೊಂದು ಯೋಗವಾಗಿಯೂ ಸ್ವೀಕರಿಸಿ ಉಪಾಸನಕ್ರಮದಂತೆ ರೂಪಿಸಿಕೊಳ್ಳಬಲ್ಲ. ಇದು ಉತ್ತರೋತ್ತರವಾಗಿ ಚಿತ್ತಶುದ್ಧಿಯನ್ನೊದಗಿಸಿ ಆತ್ಮಾನುಭವಕ್ಕೆ ಮಾರ್ಗವಾಗಬಲ್ಲುದು. ಆದರೆ ಇದರ ಸಂಭಾವ್ಯತೆ ತುಂಬ ವಿರಳ. ಇಂತಿದ್ದರೂ ಇದರ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಭವಭೂತಿಯು ಕಾವ್ಯದ ಈ ಪರಿಯ ಸಾಧನಮೌಲ್ಯವನ್ನು ಪ್ರತಿಪಾದಿಸಿರುವುದು ಅವನ ಸ್ವಭಾವಕ್ಕೆ ಸದೃಶವೇ ಆಗಿದೆ. ವೇದಾಂತಿಯೂ ಶಾಸ್ತ್ರಕೋವಿದನೂ ಆದ ಈ ಕವಿ ಮೂಲತಃ ಮಹಾಭಾವಗಳ ತವನಿಧಿ. ಮೌಲ್ಯಪ್ರಜ್ಞೆ ಮತ್ತು ಭಾವತೀವ್ರತೆಗಳು ಇದ್ದ ಕಾರಣದಿಂದಲೇ ಅವನಿಗೆ ಈ ಬಗೆಯ ಹಾದಿ ಹೊಳೆಯಿತು. ಸೀತೆಗಾದ ಅನ್ಯಾಯವನ್ನು ಮನಗಂಡ ಕವಿ ಆಕ್ರೋಶಿಸದೆ ರಾಮನನ್ನೂ ಕನಿಕರಿಸಿದ. ಹೀಗೆ ಸೀತಾ-ರಾಮರಿಬ್ಬರಲ್ಲಿಯೂ ಸಹಾನುಭೂತಿಯನ್ನು ತಳೆದ ಭವಭೂತಿ ರಾಮನ ವೇದನೆಯನ್ನೂ ಅವನ ಪ್ರಜೆಗಳ ಪಶ್ಚಾತ್ತಾಪವನ್ನೂ ಚಿತ್ರಿಸುವಲ್ಲಿ ಯಶಸ್ವಿಯಾದ. ಕಾವ್ಯವು ಸಮಾಜಸುಧಾರಣೆಗೆ ನೇರವಾಗಿ ಕೈಹಾಕಿದಲ್ಲಿ ಅರ್ಥಕ್ಕಿಂತ ಅನರ್ಥವೇ ಹೆಚ್ಚು. ಅದನ್ನು ಸಂವೇದನಶೀಲರ ಪಾಲಿಗೆ ಪ್ರತ್ಯಭಿಜ್ಞೆಯಾಗಿ ಬಳಸಿಕೊಂಡರೆ ಅಪಾಯ ಕಡಮೆ. ವಿಶೇಷತಃ ದೃಶ್ಯಕಾವ್ಯವನ್ನು ಬಳಸಿದಲ್ಲಿ ಸದ್ಯಃಪರಿಣಾಮ ಹೆಚ್ಚು. ಇದನ್ನೆಲ್ಲ ಈ ಗರ್ಭಾಂಕದಲ್ಲಿ ಭವಭೂತಿ ಸಾಧಿಸಿದ್ದಾನೆ.
ಪ್ರಿಯದರ್ಶಿಕೆಯ ಗರ್ಭಾಂಕದಂತೆ ಇಲ್ಲಿಯೂ ಪ್ರೇಕ್ಷಕರು ರೂಪಕವನ್ನು ಕೇವಲ ಕಲೆಯಾಗಿ ನೋಡದೆ ಭಾವಾವೇಶಕ್ಕೆ ಒಳಗಾಗುತ್ತಾರೆ.[1] ಇದು ಶುದ್ಧವಾದ ರಸಮೀಮಾಂಸೆಯ ದೃಷ್ಟಿಯಿಂದ ಅವಾಂಛಿತ. ಆದರೆ ಓದುಗರಾದ ನಮಗೆ ಗರ್ಭಾಂಕದ ಪಾತ್ರಗಳೂ ಪ್ರೇಕ್ಷಕರೂ ಅಪ್ಪಟ ರಸಾನಂದವನ್ನೇ ಕೊಡುತ್ತಾರೆ. ಈ ಸಂದರ್ಭದಲ್ಲಿ ರಾಮ-ಲಕ್ಷ್ಮಣರು ತೋರುವ ಪ್ರತಿಕ್ರಿಯೆಗಳು ಮರ್ಮಭೇದಕವಾಗಿವೆ. ರಾಮನು ಕಟ್ಟಕಡೆಗೆ ಮೂರ್ಚ್ಛಿತನಾಗುತ್ತಾನೆ. ಇವೆಲ್ಲ ಕಲೆಯನ್ನು ಮನಃಪರಿವರ್ತನೆಗೆ ದುಡಿಸಿಕೊಳ್ಳುವ ಕೌಶಲವಾಗಿ ತೋರುತ್ತವೆ. ಒಟ್ಟಿನಲ್ಲಿ ಪಾಶ್ಚಾತ್ತ್ಯಕಾವ್ಯಮೀಮಾಂಸೆ ಹೇಳುವಂತೆ ಭವಭೂತಿಯು ಸದ್ಯದ ಗರ್ಭಾಂಕದ ಮೂಲಕ ಸೀತೆಯ ಪಾಲಿಗೆ ಕಾವ್ಯನ್ಯಾಯವನ್ನು ದಕ್ಕಿಸಿಕೊಟ್ಟಿದ್ದಾನೆ. ಇದೆಷ್ಟು ಸೊಗಸೆನಿಸಿದರೂ ಆಳದ ಜೀವನದರ್ಶನದ ನೆಲೆಯಲ್ಲಿ ಹೃದಯಂಗಮವಾಗದು. ಈ ದೃಷ್ಟಿಯಿಂದ ಕಂಡಾಗ ಮಹರ್ಷಿ ವಾಲ್ಮೀಕಿ ಮತ್ತು ಕಾಳಿದಾಸರ ನಿರ್ಮಾಣಗಳಲ್ಲಿ ಹೆಚ್ಚಿನ ಘನತೆಯುಂಟೆಂದು ತಿಳಿಯದಿರದು. ಒಳ್ಳೆಯ ಕಲೆ ಬದುಕು ಹೇಗಿರಬೇಕೆಂದು ನಿರೂಪಿಸುತ್ತದೆ; ಅಗ್ಗದ ಕಲೆ ಬದುಕು ಹೇಗಿದ್ದರೂ ಅಡ್ಡಿಯಿಲ್ಲವೆಂದು ಸಾರುತ್ತದೆ. ಮಹಾಕಲೆಯು ಮಾತ್ರ ಬದುಕು ಹೀಗೆಯೇ ಇರುವುದು, ಆದರೆ ಅದರ ಬರ್ಬರವಾಸ್ತವದೊಳಗೇ ನಿರ್ಲಿಪ್ತಿಯನ್ನು ಸಾಧಿಸಿಕೊಳ್ಳಬೇಕೆಂದು ಧ್ವನಿಸುತ್ತದೆ. ಈ ಕಾರಣದಿಂದಲೇ ಬಹುಶಃ ನಮ್ಮ ಆಲಂಕಾರಿಕಶ್ರೇಷ್ಠರು ಕಲೆಯ ಸುಧಾರಣಾತ್ಮಕ ಆಯಾಮವನ್ನು ಗಂಭೀರವಾಗಿ ಗಣಿಸಲೇ ಇಲ್ಲ. ಆದರೆ ನಮ್ಮ ಸಾಹಿತ್ಯದುದ್ದಕ್ಕೂ ಮತಪ್ರಸಾರ, ರಾಜಪೂಜೆ ಮತ್ತು ಭೋಗಲಾಲಸೆಗಳಂಥ ಸಂಗತಿಗಳಿಗಾಗಿ ಸರಸ್ವತಿಯನ್ನು ದುಡಿಸಿಕೊಂಡ ಉದಾಹರಣೆಗಳನ್ನು ಕಾಣುತ್ತೇವೆ. ಇವುಗಳಿಗಿಂತ ಸಮಾಜವನ್ನು ಚಿಕಿತ್ಸಕವಾಗಿ ತಿದ್ದುವ ಹವಣು ಹದಗೆಟ್ಟಿದ್ದಲ್ಲ. ವಿಶೇಷತಃ ಭವಭೂತಿಯಂಥ ಸತ್ತ್ವಶಾಲಿಯಾದ ಕವಿ ಈ ಮಟ್ಟಕ್ಕೆ ಇಳಿದಾಗಲೂ ಅವನ ಭಾವದ ಔದಾತ್ತ್ಯ-ಗಾಂಭೀರ್ಯಗಳು ಆತನನ್ನು ಜಾಳಾಗಿಸುವುದಿಲ್ಲ. ಒಟ್ಟಿನಲ್ಲಿ ನಮ್ಮ ಕಲಾಮೀಮಾಂಸೆ ಸೋದ್ದಿಷ್ಟವಾಗಿ ಪಕ್ಕಕ್ಕಿರಿಸಿದ ಸಂಗತಿಯೊಂದನ್ನು ಪ್ರಯೋಗದ ಮೂಲಕ ಪರೀಕ್ಷಿಸಿಕೊಳ್ಳುವ ಸಾಹಸ ಇವನದು.
ಯಶೋವರ್ಮ
ಯಶೋವರ್ಮನು ಭವಭೂತಿಯ ಸಮಕಾಲೀನ. ಈತನ “ರಾಮಾಭ್ಯುದಯ”ನಾಟಕ ಇಂದು ಅನುಪಲಬ್ಧ. ಆನಂದವರ್ಧನನೇ ಮೊದಲಾದ ಆಲಂಕಾರಿಕವರೇಣ್ಯರು ಈ ಕೃತಿಯನ್ನು ಮೆಚ್ಚಿ ಉದಾಹರಿಸಿದ ಕಾರಣ ಇದರ ಮಹತ್ತ್ವ ಸ್ವಯಂವೇದ್ಯ. ಇದರ ಪ್ರಸ್ತಾವನೆಯಲ್ಲಿ ಬಂದಿರಬಹುದಾದ ಪದ್ಯವೊಂದು ವಿವೇಚನಾರ್ಹ:
ಔಚಿತ್ಯಂ ವಚಸಾಂ ಪ್ರಕೃತ್ಯನುಗತಂ ಸರ್ವತ್ರ ಪಾತ್ರೋಚಿತಾ
ಪುಷ್ಟಿಃ ಸ್ವಾವಸರೇ ರಸಸ್ಯ ಚ ಕಥಾಮಾರ್ಗೇ ನ ಚಾತಿಕ್ರಮಃ |
ಶುದ್ಧಿಃ ಪ್ರಸ್ತುತಸಂವಿಧಾನಕವಿಧೌ ಪ್ರೌಢಿಶ್ಚ ಶಬ್ದಾರ್ಥಯೋ-
ರ್ವಿದ್ವದ್ಭಿಃ ಪರಿಭಾವ್ಯತಾಮವಹಿತೈರೇತಾವದೇವಾಸ್ತು ನಃ ||[2]
ಸಮುಚಿತವಾದ ಪಾತ್ರಚಿತ್ರಣ, ಪಾತ್ರಗಳಿಗೊಪ್ಪುವ ಮಾತುಗಾರಿಕೆ, ಸಂದರ್ಭಕ್ಕೆ ಸಲ್ಲುವ ರಸಾವಿಷ್ಕಾರ, ಮೂಲಕಥೆಯನ್ನು ಮೀರದಿರುವ ಆಕರಪ್ರಾಮಾಣಿಕತೆ, ಇತಿವೃತ್ತವನ್ನು ಚೆನ್ನಾಗಿ ರೂಪಿಸುವಲ್ಲಿ ವಿವೇಕ ಹಾಗೂ ವಾಗರ್ಥಗಳ ವಿನ್ಯಾಸದಲ್ಲಿ ಪ್ರೌಢಿಮೆಗಳೆಂಬ ಇಷ್ಟನ್ನು ಮಾತ್ರ ವಿದ್ವಾಂಸರು ಇಲ್ಲಿ ಮನಗಾಣುವಂತಾಗಲಿ. ಅಷ್ಟರಿಂದಲೇ ನಾವು ಸಂತೃಪ್ತರಾಗುತ್ತೇವೆ.
ಇದು ನಿಜಕ್ಕೂ ಬೆಲೆಯುಳ್ಳ ಶ್ಲೋಕ. ಇಲ್ಲಿ ಕಾವ್ಯಮೀಮಾಂಸೆಯ ಎಲ್ಲ ಸ್ತರಗಳ ತತ್ತ್ವಗಳೂ ಸೊಗಸಾಗಿ ಹರಳುಗಟ್ಟಿವೆ. ಪಾತ್ರಪೋಷಣೆ ಮತ್ತು ಪಾತ್ರೋಚಿತವಾದ ಅಭಿವ್ಯಕ್ತಿಗಳನ್ನು ಕುರಿತು ನಮ್ಮ ಆಲಂಕಾರಿಕರು ಹೆಚ್ಚಾಗಿ ವಿವೇಚಿಸದಿರುವಾಗ ಯಶೋವರ್ಮನಂಥ ಸತ್ಕವಿಗಳು ಇವನ್ನು ಕುರಿತು ಚಿಂತಿಸಿರುವುದು ಮಿಗಿಲಾಗಿ ಮಹತ್ತ್ವದ ಸಂಗತಿ. ಭಾರತೀಯಕಾವ್ಯಪರಂಪರೆಯು ಸಾಮಾನ್ಯವಾಗಿ ಸ್ವೋಪಜ್ಞವಾದ ಪಾತ್ರಚಿತ್ರಣಕ್ಕೆ ಬೆಲೆ ಕೊಡುವುದಿಲ್ಲ; ಅದು ಸಿದ್ಧಪಾತ್ರಗಳು ಹಾಗೂ ಸಿದ್ಧಮಾತೃಕೆಗಳಲ್ಲಿಯೇ ಸಂತೃಪ್ತವಾಗುವುದೆಂಬ ಆಕ್ಷೇಪವುಂಟು. ಇದನ್ನು ಅಲ್ಲಗೆಳೆಯುವಂಥ ಕೆಲವೊಂದು ಉಲ್ಲೇಖಗಳಾದರೂ ಹೀಗೆ ಉಳಿದುಬಂದಿರುವುದು ನಮ್ಮ ಸುದೈವ. ಇದೇ ರೀತಿ ನಾಟಕದ ಸಂವಾದಗಳು ಪಾತ್ರೋಚಿತವಾಗಿ ಬರಬೇಕೆಂಬುದು ಬೆಲೆಯುಳ್ಳ ಒಳನೋಟ. ಏಕೆಂದರೆ, ದೃಶ್ಯಕಾವ್ಯದಲ್ಲಿ ಕವಿಪ್ರೌಢೋಕ್ತಿಗೆ ಅವಕಾಶವೇ ಇಲ್ಲದ ಕಾರಣ ಕವಿಯು ಕಥನ ಮತ್ತು ಪಾತ್ರಚಿತ್ರಣಗಳೆರಡನ್ನೂ ಸಂಭಾಷಣೆಗಳ ಮೂಲಕವೇ ಸಾಗಿಸಬೇಕಾದ ಅನಿವಾರ್ಯತೆಯುಂಟು. ಈ ಭಾರವನ್ನು ಹೊರುವಾಗ ಸಹಜವಾಗಿ ಅಲ್ಪಪ್ರತಿಭೆಯ ಕವಿಗಳು ಏಕರೂಪದ ಮಾತುಗಾರಿಕೆಗೆ ಶರಣಾಗುತ್ತಾರೆ. ಇದು ಅವರಿಗೆ ಸುಲಭದ ದಾರಿಯೂ ಹೌದು. ಆದರೆ ಇದು ಕಾವ್ಯಗುಣವನ್ನು ತೀವ್ರವಾಗಿ ತಗ್ಗಿಸುತ್ತದೆ. ಇಂಥ ಅಪಾಯವನ್ನು ಮೀರಲು ಕವಿಗೆ ಅಪಾರವಾದ ಪ್ರತಿಭೆ-ವ್ಯುತ್ಪತ್ತಿಗಳ ಜೊತೆಗೆ ಸೂಕ್ಷ್ಮವಾದ ಲೋಕಪರಿಜ್ಞಾನವೂ ಇರಬೇಕು.
ಸಂದರ್ಭಕ್ಕೆ ತಕ್ಕಂತೆ ರಸಸ್ಫೂರ್ತಿಯನ್ನು ಒದಗಿಸುವುದು ಕವಿಯ ಕರ್ತವ್ಯ. ಅಂದರೆ, ಕೃತಿಯ ಆದ್ಯಂತ ರಸಸ್ಫುರಣೆಗೆ ಅವಕಾಶವಿದ್ದರೂ ಎಲ್ಲೆಲ್ಲಿ ಯಾವ ಯಾವ ರಸವು ನಿಷ್ಪನ್ನವಾಗಬೇಕೋ ಅಲ್ಲಲ್ಲಿ ಅದಕ್ಕೆ ಬದಲಾಗಿ ಬೇರೊಂದನ್ನು ಎಳೆದು ತಂದರೆ ಉಭಯಥಾ ರಸಹಾನಿಯಾಗುವುದು. ಇದು ಎಲ್ಲ ಬಗೆಯ ವರ್ಣನೆಗಳಿಗೂ ಸಮಾನವಾಗಿ ಅನ್ವಿತ.[3] ಇದನ್ನು ತಪ್ಪಿಸಲೆಂದೇ ಯಶೋವರ್ಮನು ಸ್ವ-ಅವಸರೇ ರಸಸ್ಯ ಪುಷ್ಟಿಃ ಎಂದು ಸ್ಪಷ್ಟೀಕರಿಸಿದ್ದಾನೆ. ಈ ಎಚ್ಚರವನ್ನು ಎಷ್ಟೋ ಮಂದಿ ಹಿರಿಯ ಕವಿಗಳೇ ಪಾಲಿಸಿಲ್ಲ!
ಭಾರತೀಯಕವಿಗಳೆಲ್ಲ ನಿರಪವಾದವೆಂಬಂತೆ ಇತಿಹಾಸ-ಪುರಾಣಗಳಿಂದ, ಬೃಹತ್ಕಥಾಮೂಲದಿಂದ ತಮ್ಮ ತಮ್ಮ ಕೃತಿಗಳಿಗಾಗಿ ಇತಿವೃತ್ತಗಳನ್ನು ಸ್ವೀಕರಿಸಿದ್ದರೂ ಸಾಕಷ್ಟು ಸ್ವಾತಂತ್ರ್ಯ ವಹಿಸಿ ತಮ್ಮದೇ ಆದ ರೀತಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಒಳಿತಿನಷ್ಟೇ ಕೆಡಕೂ ಇದೆ. ವಿಶೇಷತಃ ಸಿದ್ಧರಸಗಳಾಗಿ ಜನಮಾನಸದಲ್ಲಿ ಅಚ್ಚೊತ್ತಿರುವ ಕಥಾ-ಪಾತ್ರಗಳನ್ನು ಮನಬಂದಂತೆ ತಿದ್ದಿಕೊಳ್ಳುವುದು ಅನರ್ಥಕರ. ಇದನ್ನು ಮೊದಲಿಗೆ ಗುರುತಿಸಿದ ಶ್ರೇಯಸ್ಸು ಯಶೋವರ್ಮನದು. ಇವನ ಮಾತನ್ನೇ ಆನಂದವರ್ಧನ ಅನ್ಯಾದೃಶವಾಗಿ ಸೂತ್ರೀಕರಿಸಿದ್ದಾನೆ.[4] ಮಿಕ್ಕ ಅಂಶಗಳಾದ ಸಂವಿಧಾನಕಶುದ್ಧಿ ಮತ್ತು ವಾಗರ್ಥಪ್ರೌಢಿಮೆಗಳ ಮಹತ್ತ್ವವನ್ನು ನಾವು ಈಗಾಗಲೇ ಗಮನಿಸಿದ್ದೇವೆ.
ಒಟ್ಟಿನಲ್ಲಿ ಯಶೋವರ್ಮನ ಮನಸ್ಸು ಔಚಿತ್ಯತತ್ತ್ವಕ್ಕೆ ತೆತ್ತುಕೊಂಡಿತ್ತೆಂದು ಚೆನ್ನಾಗಿ ತಿಳಿಯುತ್ತದೆ. ಈ ಅಂಶವನ್ನು ವಿ. ರಾಘವನ್ ಅವರಂಥ ವಿದ್ವಾಂಸರು ಗುರುತಿಸಿಯೂ ಇದ್ದಾರೆ. ರಸದ ಉಪನಿಷತ್ತೇ ಔಚಿತ್ಯವೆಂದು, ಅನೌಚಿತ್ಯಕ್ಕಿಂತ ಮಿಗಿಲಾದ ಕಾವ್ಯದೋಷವೇ ಇಲ್ಲವೆಂದು ಆನಂದವರ್ಧನನೂ ಇದೇ ಕಾವ್ಯದ ಶಾಶ್ವತಜೀವಿತವೆಂದು ಕ್ಷೇಮೇಂದ್ರನೂ ಎತ್ತಿಹಿಡಿದಿರುವ ತತ್ತ್ವವನ್ನು ಪ್ರಕೃತಪದ್ಯದ ಆದ್ಯಂತ ಗಮನಿಸಬಹುದು.[5]
[1] ಗರ್ಭಾಂಕತಂತ್ರವನ್ನು ಕುರಿತು ಮತ್ತೂ ಒಂದು ಅಂಶವನ್ನು ಇಲ್ಲಿ ಪ್ರಸ್ತಾವಿಸಬಹುದು. ಇಂಥ ಎಲ್ಲ ತಂತ್ರಗಳೂ ಕವಿಮನೋಧರ್ಮ ಮತ್ತು ಇತಿವೃತ್ತಘನತೆಗಳನ್ನು ಆಧರಿಸಿ ತಮ್ಮ ತಮ್ಮ ಸಾಫಲ್ಯದ ಮಟ್ಟವನ್ನು ಕಂಡುಕೊಳ್ಳುತ್ತವೆ. ಹರ್ಷವರ್ಧನನ ನಾಟಿಕೆಯಂಥ ಹಗುರವಾದ ರಚನೆಗೆ ತಕ್ಕ ರೀತಿಯಲ್ಲಿ ಲಲಿತವಾದ ಹಾಸ್ಯ-ಶೃಂಗಾರಗಳ ಮೇಲಾಟವಿರುವ ಗರ್ಭಾಂಕ ರೂಪುಗೊಂಡರೆ ಭವಭೂತಿಯ ಗಂಭೀರವಾದ ವ್ಯಕ್ತಿತ್ವಕ್ಕೂ ರಾಮಾಯಣದಂಥ ಮಹೇತಿವೃತ್ತಕ್ಕೂ ಯೋಗ್ಯವಾಗುವ ರೀತಿಯಲ್ಲಿ ಉತ್ತರರಾಮಚರಿತದ ಗರ್ಭಾಂಕವು ಮೈದಾಳಿದೆ. ಇದೇ ಸಂದರ್ಭದಲ್ಲಿ ಭವಭೂತಿಯ ಜಾಡನ್ನೇ ಅನುಸರಿಸಿ ಸಾಫಲ್ಯ ಕಂಡ ಕವಿ ಕ್ಷೇಮೀಶ್ವರನ “ನೈಷಧಾನಂದ”ನಾಟಕದ ಗರ್ಭಾಂಕ ಸ್ಮರಣೀಯ. ಆದರೆ ರಾಮಾಯಣದಂಥ ಇತಿವೃತ್ತವನ್ನು ಹೊಂದಿದ್ದರೂ ರಾಜಶೇಖರನ “ಬಾಲರಾಮಾಯಣ”ದ ಗರ್ಭಾಂಕವು ಹಾಸ್ಯಾಸ್ಪದವಾಗಿರುವುದನ್ನು ನೆನೆದಾಗ ವಸ್ತುಮಾಹಾತ್ಮ್ಯಕ್ಕಿಂತ ಕವಿಮನೋಧರ್ಮವೇ ಹೆಚ್ಚಾಗಿ ರಸನಿರ್ದೇಶಕವೆಂದು ತಿಳಿಯಬಹುದು.
[2] Some Old Lost Rāma Plays, p. 7
[3] ಇದನ್ನು ಕುರಿತು ಲೋಲ್ಲಟನು ಹೇಳಿರುವ ಮಾತುಗಳು ಸದಾ ಸ್ಮರಣೀಯ:
ಮಜ್ಜನಪುಷ್ಪಾವಚಯನಸಂಧ್ಯಾಚಂದ್ರೋದಯಾದಿವಾಕ್ಯಮಿಹ |
ಸರಸಮಪಿ ನಾತಿಬಹುಲಂ ಪ್ರಕೃತರಸಾನನ್ವಿತಂ ರಚಯೇತ್ ||
ಯಸ್ತು ಸರಿದದ್ರಿಸಾಗರಪುರತುರಗರಥಾದಿವರ್ಣನೇ ಯತ್ನಃ |
ಕವಿಶಕ್ತಿಖ್ಯಾತಿಫಲೋ ವಿತತಧಿಯಾಂ ನೋ ಮತಃ ಸ ಇಹ || (ಕಾವ್ಯಮೀಮಾಂಸೆಯಲ್ಲಿ ಉಲ್ಲಿಖಿತ, ಪು. ೪೫)
ಯಮಕಾನುಲೋಮತದಿತರಚಕ್ರಾದಿಭಿದೋऽತಿರಸವಿರೋಧಿನ್ಯಃ |
ಅಭಿಮಾನಮಾತ್ರಮೇತದ್ಗಡ್ಡರಿಕಾದಿಪ್ರವಾಹೋ ವಾ || (ಕಾವ್ಯಾನುಶಾಸನದಲ್ಲಿ ಉಲ್ಲಿಖಿತ, ಪು. ೩೦೭)
[4] ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ |
ಕಥಾಶ್ರಯಾ ನ ತೈರ್ಯೋಜ್ಯಾ ಸ್ವೇಚ್ಛಾ ರಸವಿರೋಧಿನೀ || (ಧ್ವನ್ಯಾಲೋಕ, ೩.೧೪ ರಲ್ಲಿಯ ಪರಿಕರಶ್ಲೋಕ)
[5] ಧ್ಯನ್ಯಾಲೋಕ, ೩.೧೪ ರಲ್ಲಿಯ ಪರಿಕರಶ್ಲೋಕ; ಔಚಿತ್ಯವಿಚಾರಚರ್ಚಾ, ೧.೫
To be continued.