ಮುರಾರಿ
ಸಂಸ್ಕೃತದ ದೃಶ್ಯಕಾವ್ಯಪರಂಪರೆಯಲ್ಲಿ ಎಲ್ಲರಿಗಿಂತ ಮಿಗಿಲಾದ ವಿದ್ವತ್ಕವಿಯೆಂದು ಹೆಸರಾದವನು ಮುರಾರಿ. ಈತನ ಏಕೈಕರೂಪಕ “ಅನರ್ಘರಾಘವ”ದ ಪ್ರಸ್ತಾವನೆಯಲ್ಲಿ ಬಂದಿರುವ ಕೆಲವೊಂದು ಮಾತುಗಳು ನಮ್ಮ ಆಸಕ್ತಿಗೆ ಅರ್ಹರಾಗಿವೆ. ರಸಿಕರು ಅಪೇಕ್ಷಿಸುವುದು ವೀರ-ಅದ್ಭುತರಸಗಳನ್ನು ಒಳಗೊಂಡ ಉದಾರಗಂಭೀರವಾದ ವಸ್ತುವನ್ನುಳ ಕಾವ್ಯವನ್ನೆಂದು ಮುರಾರಿಯು ಮೊದಲಿಗೇ ಒಕ್ಕಣಿಸಿದ್ದಾನೆ:
ತಸ್ಮೈ ವೀರಾದ್ಭುತಾರಂಭಗಂಭೀರೋದಾತ್ತವಸ್ತವೇ |
ಜಗದಾನಂದಕಂದಾಯ ಸಂದರ್ಭಾಯ ತ್ವರಾಮಹೇ || (೧.೬)
ಇಲ್ಲಿ ಕವಿಯು ಧರ್ಮಾರ್ಥಸಾಧಕವಾದ ವೀರ ಮತ್ತು ಸರ್ವಜನಮನೋಹರವಾದ ಅದ್ಭುತಗಳನ್ನು ಮಿಗಿಲಾಗಿ ಆದರಿಸಿರುವುದು ರಾಮಾಯಣವನ್ನು ಕುರಿತು ಆ ಕಾಲದ ಜನರಿಗಿದ್ದ ಅಭಿಪ್ರಾಯವನ್ನೇ ಧ್ವನಿಸಿದೆ. ಏಕೆಂದರೆ, ಆದರ್ಶನಾಯಕನ ಆರಾಧನೆ ಮತ್ತು ಅವತಾರಪುರುಷನ ಉಪಾಸನೆಗಳು ಹಿರಿಯರಿಗೆ ಆಪ್ಯಾಯನವೆನಿಸಿದ್ದರೆ ಅಶೇಷಪಾಮರಲೋಕಕ್ಕೆ ರಮ್ಯಾದ್ಭುತ ಘಟನೆಗಳು ಹುಚ್ಚು ಹಿಡಿಸಿದ್ದವು. ಇಂಥ ಮನೋಧರ್ಮ ಇಂದಿಗೂ ಹೆಚ್ಚಾಗಿ ಮಾರ್ಪಟ್ಟಿಲ್ಲ. ಶಾಂತದಲ್ಲಿ ಪರ್ಯವಸಾನವಾಗುವ ಧರ್ಮವೀರ ಮತ್ತು ವಿಪ್ರಲಂಭಶೃಂಗಾರಗಳೇ ಪ್ರಧಾನವಾದ ರಾಮಕಥಾನಕವನ್ನು ಭವಭೂತಿಯೇ ಮೊದಲ ಬಾರಿಗೆ ವೀರ-ಅದ್ಭುತಗಳತ್ತ ತಿರುಗಿಸಿದಂತೆ ತೋರುತ್ತದೆ. ಅವನ “ಮಹಾವೀರಚರಿತ”ವೇ ಇಂಥ ಮಾರ್ಪಾಟಿಗೆ ಹರಿಕಾರ. ದಿಟವೇ, ವಾಲ್ಮೀಕಿ-ಕಾಳಿದಾಸರು ತೋರಿದ ಧರ್ಮವೀರ-ವಿಪ್ರಲಂಭಶೃಂಗಾರಗಳ ಮಹಾಮಾರ್ಗವನ್ನನುಸರಿಸಿ ಅವನು ಉತ್ತರರಾಮಚರಿತೆಯನ್ನು ರಚಿಸಿಯೇ ಇದ್ದಾನೆ. ಆದರೆ ಮುಂದಿನ ಸಾಹಿತ್ಯವೆಲ್ಲ ಈ ದಿವ್ಯಪಥವನ್ನು ಉಪೇಕ್ಷಿಸಿ ಮಹಾವೀರಚರಿತದ ಜಾಡಿಗೇ ಬಿದ್ದದ್ದು ವಿಷಾದನೀಯ. ಪುಣ್ಯವಶಾತ್ ರಾಮಾಯಣದಲ್ಲಿ ಉದಾರಗಂಭೀರವಾದ ವಸ್ತುಸತ್ತ್ವವಿದೆಯೆಂಬುದನ್ನು ಮುರಾರಿಯೇ ಮೊದಲಾದವರು ಕಂಡುಕೊಂಡಿದ್ದಾರೆ. ಅವರೆಲ್ಲರ ರಾಮಾಯಣಶ್ರದ್ಧೆ ಶ್ಲಾಘ್ಯ;[1] ಆದರೆ ಅದು ಬಲುಮಟ್ಟಿಗೆ ಅವಿಚಾರಿತ. ಇಂಥ ಅವಿಚಾರಿತರಮಣೀಯವಾದ ವೃತ್ತಿಯನ್ನು ಚಿಕಿತ್ಸಕವಾಗಿ ಕಾಣಬೇಕಾದುದು ಸಾಹಿತ್ಯಮೀಮಾಂಸೆಯ ಕರ್ತವ್ಯ. ಅದೂ ಇದನ್ನು ವಿಸ್ಮರಿಸಿತೆಂಬುದು ನಿಜಕ್ಕೂ ವಿಪರ್ಯಾಸ.
ಆ ಬಳಿಕ ಮುರಾರಿಯು ಸತ್ಕಾವ್ಯದಲ್ಲಿ ಉದಾತ್ತನಾಯಕನಿರಬೇಕೆಂದೂ ರಾಮಾಯಣದಂಥ ಕೃತಿಯನ್ನುಳಿದು ಮತ್ತಾವುದು ತಾನೆ ಇಂಥ ವಿಶೇಷಕ್ಕೆ ಅವಕಾಶವೀಯುವುದೆಂದೂ ಪ್ರತಿಪಾದಿಸುತ್ತಾನೆ:
ಯದಿ ಕ್ಷುಣ್ಣಂ ಪೂರ್ವೈರಿತಿ ಜಹತಿ ರಾಮಸ್ಯ ಚರಿತಂ
ಗುಣೈರೇತಾವದ್ಭಿರ್ಜಗತಿ ಪುನರನ್ಯೋ ಜಯತಿ ಕಃ |
ಸ್ವಮಾತ್ಮಾನಂ ತತ್ತದ್ಗುಣಗರಿಮಗಂಭೀರಮಧುರ-
ಸ್ಫುರದ್ವಾಗ್ಬ್ರಹ್ಮಾಣಃ ಕಥಮುಪಕರಿಷ್ಯಂತಿ ಕವಯಃ || (೧.೯)
ಪೂರ್ವಸೂರಿಗಳೆಲ್ಲ ರಾಮಕಥೆಯನ್ನು ಸೂರೆಗೊಂಡಿದ್ದಾರೆಂಬ ಕಾರಣದಿಂದ ಸತ್ಕವಿಗಳು ಅದನ್ನು ಉಪೇಕ್ಷಿಸಿದರೆ ಈ ಜಗತ್ತಿನಲ್ಲಿ ಮತ್ತಾವ ನಾಯಕ ತಾನೆ ಇಂಥ ಸದ್ಗುಣಗಳಿಂದ ಮೈದುಂಬಿಕೊಂಡು ನಮ್ಮ ಪಾಲಿಗೆ ದಕ್ಕುತ್ತಾನೆ? ಆದುದರಿಂದ ಒಳ್ಳೆಯ ಕವಿಗಳು ಇಂಥ ಗುಣಗಣ್ಯವಾದ ವಸ್ತು-ನಾಯಕರನ್ನು ಸ್ವೀಕರಿಸಿದಲ್ಲದೆ ತಮ್ಮ ತಮ್ಮ ಕವಿತ್ವದ ಸಾರ್ಥಕ್ಯವನ್ನು ಸಾಧಿಸಿಕೊಳ್ಳಲಾರರು.
ರಸತತ್ತ್ವ-ರಾಮಾಯಣತತ್ತ್ವಗಳ ನಿಶ್ಚಿತಪರಿಜ್ಞಾನವಿಲ್ಲದಿದ್ದರೂ ಮುರಾರಿಯಂಥ ಅನೇಕಕವಿಗಳು ವಾಲ್ಮೀಕಿಯನ್ನು ಆದರದಿಂದ ಅನುಸರಿಸಿದ ಸಂಗತಿ ಆ ಮಟ್ಟಿಗಾದರೂ ನಮ್ಮ ನಾಡಿನ ಭಾಗ್ಯ. ಮಹಾತತ್ತ್ವಗಳ ಅರಿವಿಲ್ಲದಿದ್ದರೂ ಅವನ್ನು ಅಲ್ಲಗೆಳೆಯದೆ ಆದರಿಸುವುದು ಎಂದಿಗೂ ಅಧಮಕಲ್ಪವಾಗದು. ಹಾಗೆಂದ ಮಾತ್ರಕ್ಕೆ ಶ್ರೇಷ್ಠ ಇತಿವೃತ್ತ-ನಾಯಕರನ್ನು ಸ್ವೀಕರಿಸಿದೊಡನೆಯೇ ಕಾವ್ಯ-ನಾಟಕಗಳು ಶ್ರೇಷ್ಠವಾಗುವುದಿಲ್ಲ. ಇಂತಿದ್ದರೂ ಉದಾತ್ತವಸ್ತು ಮತ್ತು ಸದ್ಗುಣಿನಾಯಕರ ಸ್ವೀಕಾರಕ್ಕೆ ತಮ್ಮವೇ ಆದ ಮಹತ್ತ್ವಗಳಿವೆ. ಇದನ್ನೇ ಮುರಾರಿಯ ಮಾತು ಸಮರ್ಥಿಸಿದೆ. ಈ ನಿಲವು ನಮ್ಮ ಆಲಂಕಾರಿಕರಲ್ಲಿಯೂ ಭಾಷಾನಿರಪೇಕ್ಷವಾಗಿ ಎಲ್ಲ ಕವಿಗಳಲ್ಲಿಯೂ ಇದ್ದುದಕ್ಕೆ ವಿಪುಲವಾದ ಸಾಕ್ಷ್ಯಗಳುಂಟು.[2]
ಜಿನಸೇನ
ಕನ್ನಡನಾಡಿನವನಾದ ಜಿನಸೇನಾಚಾರ್ಯ ತನ್ನ “ಪೂರ್ವಪುರಾಣ”ದ ಕಾರಣ ಸಾಹಿತ್ಯಲೋಕದಲ್ಲಿ ಸುವಿಶ್ರುತ. ಅಲಂಕಾರಶಾಸ್ತ್ರದ ಮೂಲತತ್ತ್ವಗಳ ನಿರ್ಮಾಣಯುಗದೊಳಗೇ ಈತನ ಗ್ರಂಥ ಜನಿಸಿದ ಕಾರಣ ಇಲ್ಲಿಯ ಅಭಿಪ್ರಾಯಗಳಿಗೆ ತಮ್ಮದೇ ಆದ ಮಹತ್ತ್ವವಿದೆ. ಅವುಗಳಲ್ಲಿ ಸದ್ಯಕ್ಕೆ ಸಂಗತವಾದುವನ್ನು ಕ್ರಮವಾಗಿ ಪರಿಶೀಲಿಸೋಣ.
ಜಿನಸೇನ ಕಾವ್ಯರಚನೆಯ ಪರಮೋದ್ದೇಶ ಮತಪ್ರಚಾರವೆಂದು ನಂಬಿದ್ದವನಾದ ಕಾರಣ ಅದನ್ನು ಹೀಗೆ ಪ್ರತಿಪಾದಿಸುತ್ತಾನೆ:
ತ ಏವ ಕವಯೋ ಲೋಕೇ ತ ಏವ ಚ ವಿಚಕ್ಷಣಾಃ |
ಯೇಷಾಂ ಧರ್ಮಕಥಾಂಗತ್ವಂ ಭಾರತೀ ಪ್ರತಿಪದ್ಯತೇ ||
ಧರ್ಮಾನುಬಂಧಿನೀ ಯಾ ಸ್ಯಾತ್ ಕವಿತಾ ಸೈವ ಶಸ್ಯತೇ |
ಶೇಷಾ ಪಾಪಾಸ್ರವಾಯೈವ ಸುಪ್ರಯುಕ್ತಾಪಿ ಜಾಯತೇ ||
ಕೇಚಿನ್ಮಿಥ್ಯಾದೃಶಃ ಕಾವ್ಯಂ ಗ್ರಂಥ್ನಂತಿ ಶ್ರುತಿಪೇಶಲಮ್ |
ತತ್ತ್ವಧರ್ಮಾನುಬಂಧಿತ್ವಾನ್ನ ಸತಾಂ ಪ್ರೀಣನಕ್ಷಮಮ್ || (೧.೧.೬೨–೬೪)
ಈ ಜಗತ್ತಿನಲ್ಲಿ ಯಾರ ಮಾತುಗಳು ಧರ್ಮಕಥೆಯ ಅಂಗವಾಗಿ ಹೊಮ್ಮುವುದೋ ಅಂಥವರೇ ಕವಿಗಳು, ಅಂಥವರೇ ವಿದ್ವಾಂಸರು. ಯಾವ ಕವಿತೆ ಮತಧರ್ಮಗಳಿಗೆ ಅನುಕೂಲಿಸುವುದೋ ಅದೊಂದೇ ಸ್ತುತ್ಯರ್ಹ; ಮಿಕ್ಕವೆಲ್ಲ ಎಷ್ಟು ಸೊಗಸಾಗಿ ರಚಿತವಾಗಿದ್ದರೂ ಪಾಪವನ್ನೇ ತಂದುಕೊಡುತ್ತವೆ. ಕೆಲವು ಪಾರಮಾರ್ಥಿಕದೃಷ್ಟಿಯಿಲ್ಲದ ಕವಿಗಳು ಕಿವಿಗಿಂಪಾಗುವ ಕವಿತೆಗಳನ್ನು ಬರೆಯುತ್ತಾರೆ; ಮತತತ್ತ್ವಗಳ ಸಹಯೋಗವಿಲ್ಲದ ಅಂಥ ರಚನೆಗಳು ಸಜ್ಜನರಿಗೆ ಸಂತಸವೀಯುವುದಿಲ್ಲ.
ಈ ಮಾತುಗಳೆಲ್ಲ ಬಲುಮಟ್ಟಿಗೆ ಅಶ್ವಘೋಷನ ಅಭಿಪ್ರಾಯಗಳನ್ನು ಮರುದನಿಸುವಂತೆ ತೋರುತ್ತವೆ. ಮಾತ್ರವಲ್ಲ, ಅವನ ಮಾತುಗಳಿಗಿಂತಲೂ ಇಲ್ಲಿಯ ಅಭಿವ್ಯಕ್ತಿ ತೀಕ್ಷ್ಣವಾಗಿದೆ. ಇದು ಮತಾಭಿಮಾನದಿಂದಲೇ ಸಾಹಿತ್ಯಕೃಷಿಯನ್ನು ಕೈಗೊಂಡ ಎಲ್ಲ ಲೇಖಕರ ಪಾಡು. ಭಾಮಹನೇ ಮೊದಲಾದ ಆಲಂಕಾರಿಕರು ಕಾವ್ಯವನ್ನು ಧರ್ಮವಿರುದ್ಧವಾಗಿ ರೂಪಿಸಬೇಕೆಂದು ಎಲ್ಲಿಯೂ ಹೇಳಿಲ್ಲ. ಇದಕ್ಕಿಂತ ಮಿಗಿಲಾಗಿ ಅವರು ಚತುರ್ವರ್ಗಪ್ರಾಪ್ತಿಗೆ ಪೂರಕವಾಗುವಂತೆ ಕವಿಯು ದುಡಿಯಬೇಕೆಂದೇ ವಿಧಿಸಿದ್ದಾರೆ. ಕಾಳಿದಾಸನೇ ಮೊದಲಾದ ಮಹಾಕವಿಗಳ ಮಾರ್ಗವೂ ಇದೇ. ಆದರೆ ಕೇವಲ ಮತಾಗ್ರಹದಿಂದ ತಮ್ಮ ಸಾಹಿತ್ಯವೈದುಷ್ಯವನ್ನು ದುಡಿಸಿಕೊಳ್ಳುವ ಅಶ್ವಘೋಷ-ಜಿನಸೇನರಂಥವರು ಕಾವ್ಯೋದ್ದೇಶವನ್ನೂ ಧರ್ಮಲಕ್ಷಣವನ್ನೂ ತುಂಬ ಸಂಕುಚಿತವಾಗಿ ಗುರುತಿಸಿಕೊಂಡಿದ್ದಾರೆ. ವಸ್ತುತಃ ಕಾವ್ಯವು ರಸನಿಷ್ಠ; ಧರ್ಮವು ಸಕಲಾಭ್ಯುದಯಕ್ಕೆ ನಿಷ್ಠ. ಇವೆರಡೂ ಮತವಿರುದ್ಧವಲ್ಲವಾದರೂ ಮತಾತೀತವೆಂಬುದು ಸತ್ಯ. ಪುಣ್ಯವಶಾತ್ ನಮ್ಮ ಆಲಂಕಾರಿಕರ ಪರಂಪರೆ ಈ ನಿಲವನ್ನೇ ಪ್ರಧಾನವಾಗಿ ಎತ್ತಿಹಿಡಿದಿದೆ. ಇದಕ್ಕೆ ಮಹಾಕವಿಗಳ ಸೃಷ್ಟಿಯೂ ಹೊರತಲ್ಲ.
ಜಿನಸೇನನಿಗೆ ಅವ್ಯುತ್ಪನ್ನರ ಕಾವ್ಯಕಂಡೂತಿಯನ್ನು ಕುರಿತು ಮಿಗಿಲಾದ ಕೋಪವಿದೆ:
ಅವ್ಯುತ್ಪನ್ನತರಾಃ ಕೇಚಿತ್ ಕವಿತ್ವಾಯ ಕೃತೋದ್ಯಮಾಃ |
ಪ್ರಯಾಂತಿ ಹಾಸ್ಯತಾಂ ಲೋಕೇ ಮೂಕಾ ಇವ ವಿವಕ್ಷವಃ ||
ತಸ್ಮಾದಭ್ಯಸ್ಯ ಶಾಸ್ತ್ರಾಣಿ ಉಪಾಸ್ಯ ಚ ಮಹಾಕವೀನ್ |
ಧರ್ಮ್ಯಂ ಶಸ್ಯಂ ಯಶಸ್ಯಂ ಚ ಕಾವ್ಯಂ ಕುರ್ವಂತು ಧೀಧನಾಃ || (೧.೧.೬೫,೭೪)
ಅವ್ಯುತ್ಪನ್ನರಾದ ಕೆಲವರು ಕಾವ್ಯರಚನೆಗೆ ಕೈಹಾಕಿ ನುಡಿಯಲೆಳಸುವ ಮೂಕರಂತೆ ಉಪಹಾಸಕ್ಕೆ ತುತ್ತಾಗುತ್ತಾರೆ. ಆದುದರಿಂದ ಮೇಧಾವಿಗಳು ವ್ಯುತ್ಪತ್ತಿಗಾಗಿ ಶಾಸ್ತ್ರಗಳನ್ನೂ ಮಹಾಕವಿಗಳ ಕೃತಿಗಳನ್ನೂ ಉಪಾಸಿಸಿ ಧರ್ಮಬದ್ಧವಾದ, ಕೀರ್ತಿ-ಪ್ರಶಸ್ತಿಗಳಿಗೂ ಅರ್ಹವಾದ ಕಾವ್ಯಗಳನ್ನು ರಚಿಸಲಿ.
ಇಲ್ಲಿ ಕವಿಯು ವ್ಯುತ್ಪತ್ತಿಗಿರುವ ಪ್ರಾಶಸ್ತ್ಯವನ್ನು ಮಾರ್ಮಿಕವಾಗಿ ತಿಳಿಸಿದ್ದಾನೆ. ಪಾಂಡಿತ್ಯಯುಗದ ಪ್ರಖರದಿನಗಳಲ್ಲಿ ಇದ್ದ ಜಿನಸೇನ ಈ ಮಾತುಗಳನ್ನಾಡಿರುವುದರಲ್ಲಿ ಅಚ್ಚರಿಯಿಲ್ಲ. ಆದರೆ ಪ್ರತಿಭೆಯನ್ನು ಕುರಿತು ಪ್ರಕಟವಾಗಿ ಈ ಕೃತಿಯ ಉಪಕ್ರಮದಲ್ಲೆಲ್ಲಿಯೂ ಹೇಳದಿರುವುದು ಅಚ್ಚರಿಯ ಸಂಗತಿ.
ಬಳಿಕ ಜಿನಸೇನ ಅನುಕರಣಕವಿಗಳನ್ನೂ ಕೃತಿಚೋರರನ್ನೂ ಕುರಿತು ಹೀಗೆ ಆಕ್ಷೇಪಿಸಿದ್ದಾನೆ:
ಕೇಚಿದನ್ಯವಚೋಲೇಶಾನಾದಾಯ ಕವಿಮಾನಿನಃ |
ಛಾಯಾಮಾರೋಪಯಂತ್ಯನ್ಯಾಂ ವಸ್ತ್ರೇಷ್ವಿವ ವಣಿಗ್ಬ್ರುವಾಃ ||
ಕೇಚಿದನ್ಯಕೃತೈರರ್ಥೈಃ ಶಬ್ದೈಶ್ಚ ಪರಿವರ್ತಿತೈಃ |
ಪ್ರಸಾರಯಂತಿ ಕಾವ್ಯಾರ್ಥಾನ್ ಪ್ರತಿಶಿಷ್ಟ್ಯೇವ ವಾಣಿಜಾಃ || (೧.೧.೬೬,೬೮)
ತಮ್ಮನ್ನು ಕವಿಗಳೆಂದು ಭಾವಿಸಿಕೊಂಡ ಕೆಲವರು ವರ್ತಕಾಧಮರು ಬಟ್ಟೆಗಳ ಬಣ್ಣ ಬದಲಿಸುವಂತೆ ಬೇರೆಯವರ ಮಾತುಗಳ ತುಂಡು-ತುಣುಕುಗಳನ್ನು ಹೆಕ್ಕಿ ತಂದು ತಮ್ಮ ನುಡಿಗಳಿಗೆ ಅವುಗಳ ಬಣ್ಣವನ್ನು ಕಟ್ಟುತ್ತಾರೆ. ಮತ್ತೆ ಕೆಲವರು ಬೇರೆಯವರ ಸರಕನ್ನು ಮಾರುವ ವರ್ತಕರಂತೆ ಇನ್ನೊಬ್ಬರ ಶಬ್ದ-ಅರ್ಥಗಳನ್ನು ಅಷ್ಟಿಷ್ಟು ಮಾರ್ಪಡಿಸಿಕೊಂಡು ಅವು ತಮ್ಮದೆಂಬಂತೆ ಚಲಾವಣೆಗೆ ತರುತ್ತಾರೆ.
ಶಬ್ದಾರ್ಥಗಳ ಹರಣವನ್ನು ಕುರಿತು ಆಲಂಕಾರಿಕರ ಮತವನ್ನು ನಾವು ಈಗಾಗಲೇ ಪರಿಶೀಲಿಸಿರುವ ಕಾರಣ ಹೆಚ್ಚಿನ ಚರ್ಚೆ ಅನವಶ್ಯ. ಆದರೆ ಜಿನಸೇನನಂಥ ವಿರಕ್ತರೂ ಇಂಥ ಕೃತ್ಯಗಳಿಂದ ಮುನಿದಿರುವರೆಂಬುದನ್ನು ಗಮನಿಸಿದಾಗ ನಮ್ಮ ಕವಿ-ಪಂಡಿತರು ಕಾವ್ಯನಿರ್ಮಾಣದ ಸಂದರ್ಭದಲ್ಲಿ ಪಾಲಿಸಬೇಕಾದ “ಅರ್ಥಶೌಚ”ವನ್ನು ಅದೆಷ್ಟು ಮಿಗಿಲಾಗಿ ಗಣಿಸಿದ್ದರೆಂಬ ಅರಿವಾಗುತ್ತದೆ. ಇಲ್ಲಿಯ ವಿಚಾರ ಪೂರ್ವಪರಿಚಿತವೇ ಆಗಿದ್ದರೂ ಅದನ್ನು ಕವಿಯು ಪರಿಣಾಮಕಾರಿ ದೃಷ್ಟಾಂತಗಳ ಮೂಲಕ ಹೊಸತೆಂಬಂತೆ ಹರಳುಗಟ್ಟಿಸಿರುವುದು ಪರಿಭಾವನೀಯ. ಈ ಎರಡು ಶ್ಲೋಕಗಳಲ್ಲಿ ವಾಣಿಜ್ಯದ ಪ್ರಸ್ತಾವ ತಂದಿರುವುದು ಗಮನಾರ್ಹ. ಜೈನಮತಕ್ಕೆ ವರ್ತಕರ ಬೆಂಬಲ ಹಿರಿದು. ಇಂದಿಗೂ ಅದು ಸಾಗಿಬಂದಿದೆ. ಹೀಗಾಗಿಯೇ ಅಲ್ಲಿಯ ಕವಿ-ಪಂಡಿತರು ಅದೆಷ್ಟೋ ಬಾರಿ ವಾಣಿಜ್ಯಲೋಕದ ಸಂಗತಿಗಳನ್ನು ಅಲಂಕಾರಗಳಲ್ಲಿ ಬಳಸಿಕೊಳ್ಳುತ್ತಾರೆ. ಜಿನಸೇನನಂಥ ಮುನಿಯೂ ಇದಕ್ಕೆ ಹೊರತಲ್ಲ. ಆಸಕ್ತರು ಕನ್ನಡಕವಿ ನಯಸೇನನ “ಧರ್ಮಾಮೃತ”ವನ್ನು ಪರಿಕಿಸಬಹುದು. ಇಲ್ಲಿ ಇಂಥ ಪ್ರವೃತ್ತಿ ಪರ್ವತೋಪಮವಾಗಿ ಬೆಳೆದಿದೆ.
ಬಳಿಕ ಜಿನಸೇನನು ಅರ್ಥಪುಷ್ಟಿ ಮತ್ತು ಶಬ್ದಪುಷ್ಟಿಗಳಿಲ್ಲದ ಕಾವ್ಯರಚನೆಯನ್ನು ಕ್ರಮವಾಗಿ ಆಕ್ಷೇಪಿಸುತ್ತಾನೆ:
ಕೇಚಿದ್ವರ್ಣೋಜ್ಜ್ವಲಾಂ ವಾಣೀಂ ರಚಯಂತ್ಯರ್ಥದುರ್ಬಲಾಮ್ |
ಜಾತುಷೀ ಕಂಠಿಕೇವಾಸೌ ಛಾಯಾಮೃಚ್ಛತಿ ನೋಚ್ಛಿಕಾಮ್ ||
ಕೇಚಿದರ್ಥಮಪಿ ಪ್ರಾಪ್ಯ ತದ್ಯೋಗ್ಯಪದಯೋಜನೈಃ |
ನ ಸತಾಂ ಪ್ರೀಣನಾಯಾಲಂ ಲುಬ್ಧಾ ಲಬ್ಧಶ್ರಿಯೋ ಯಥಾ || (೧.೧.೬೯,೭೦)
ಕೆಲವರು ಉಜ್ಜ್ವಲವಾದ ಪದಗಳನ್ನು ಕೂಡಿಸಿ ಬರೆಯಬಲ್ಲವರಾದರೂ ಅವರ ಕವಿತೆ ಅರ್ಥದೃಷ್ಟ್ಯಾ ದುರ್ಬಲವಾಗಿರುತ್ತದೆ. ಇದು ಅರಗಿನಿಂದ ಮಾಡಿದ ಅಡ್ಡಿಕೆಯಂತೆ ಹೊಳೆಯುತ್ತಿದ್ದರೂ ಬೆಂಕಿಯ ಝಳವನ್ನು ತಾಳಲಾರದು. ಮತ್ತೆ ಕೆಲವರು ಒಳ್ಳೆಯ ಅರ್ಥವನ್ನುಳ್ಳ ಇತಿವೃತ್ತವನ್ನು ಹೊಂದಿದ್ದರೂ ಅದನ್ನು ಅಭಿವ್ಯಕ್ತಿಸಲು ಯುಕ್ತವಾದ ಪದಸಂಪದವಿಲ್ಲದೆ ಸಹೃದಯರಿಗೆ ಸಂತೋಷ ತರುವುದಿಲ್ಲ. ಇದು ಜಿಪುಣರು ಕೂಡಿಟ್ಟುಕೊಂಡ ಹಣದಂತೆ ವೆಚ್ಚಕ್ಕೆ ಸಿಗುವುದಿಲ್ಲ.
ಇಲ್ಲಿಯ ಜಿನಸೇನನ ಪರಿಶೀಲನೆ ತುಂಬ ಪ್ರಗಲ್ಭ. ಈತನು ಶಬ್ದ ಮತ್ತು ಅರ್ಥಗಳೆಂಬ ಪದಗಳನ್ನು ಬಳಸುವಾಗ ಅವು ಕ್ರಮವಾಗಿ ವರ್ಣನೆ ಮತ್ತು ಇತಿವೃತ್ತಗಳನ್ನು ಪ್ರತಿನಿಧಿಸುತ್ತಿರುವುದು ಸ್ಪಷ್ಟವಾಗಿದೆ. ಇನ್ನೂ ಬಿಡಿಸಿ ಹೇಳುವುದಾದರೆ, ಶಬ್ದವು ಉಭಯಾಲಂಕಾರಗಳನ್ನೂ ಅರ್ಥವು ರಸವನ್ನೂ ಸಂಕೇತಿಸುತ್ತದೆ. ಇಂಥ ವ್ಯಾಪಕವಾದ ಕಾವ್ಯದೃಷ್ಟಿ ನಿಜಕ್ಕೂ ಮೆಚ್ಚುವಂತಿದೆ. ಜೊತೆಗೆ ಕವಿಯಿಲ್ಲಿ ನೀಡಿರುವ ದೃಷ್ಟಾಂತಗಳೂ ಹೃದಯಂಗಮ. ಅರಗಿನ ಒಡವೆಗಳು ಅದೆಷ್ಟು ಬೆಡಗಿನಿಂದ ಕೂಡಿದ್ದರೂ ಬೆಂಕಿ ಸೋಂಕಿದಾಗ ಕರಗಿಹೋಗುತ್ತವಷ್ಟೆ. ಹಾಗೆಯೇ ಅರ್ಥಪುಷ್ಟಿ ಇಲ್ಲದ ವರ್ಣಗಳು ಸುವರ್ಣಗಳಾಗುವುದಿಲ್ಲ! ಅವು ವಿಮರ್ಶನಾಗ್ನಿಯಲ್ಲಿ ಸುಟ್ಟುಹೋಗುವುದು ನಿಃಸಂಶಯ. ಇದೇ ರೀತಿ ಜಿಪುಣನಿಗೆ ಅದೆಷ್ಟು ಧನವಿದ್ದರೂ ದಾನ ಮತ್ತು ಭೋಗಗಳ ರೂಪದಲ್ಲಿ ಹೊರಬರದ ಕಾರಣ ಅದು ಇದ್ದೂ ಇಲ್ಲದಂತೆ. ಧರ್ಮ-ಕಾಮಗಳಿಗೆ ಒದಗಿಬರದ ಅರ್ಥ ಅನರ್ಥವೇ ತಾನೆ!
[1] ಅನರ್ಘರಾಘವದ ಪ್ರಸ್ತಾವನೆಯ ಕೆಲವೊಂದು ಮಾತುಗಳಿಲ್ಲಿ ಉಲ್ಲೇಖನೀಯ: ತತ್ರಭವತಃ ಕವಿತ್ವಾವತಾರಪ್ರಥಮತೀರ್ಥಸ್ಯ ವಲ್ಮೀಕಜನ್ಮನೋ ಮುನೇಃ ಸರಸ್ವತೀನಿರ್ಯಾಸೋ ಯಶಃಶರೀರಮಿಕ್ಷ್ವಾಕೂಣಾಮ್ ... ಅಹೋ ಸಕಲಕವಿಸಾರ್ಥಸಾಧಾರಣೀ ಖಲ್ವಿಯಂ ವಾಲ್ಮೀಕೀಯಾ ಸುಭಾಷಿತನೀವೀ ||
[2] ಭರತನಿಂದ ಮೊದಲ್ಗೊಂಡು ಎಲ್ಲ ಲಕ್ಷಣಕರ್ತರೂ ಮಹಾಕಾವ್ಯ ಮತ್ತು ನಾಟಕಗಳಿಗೆ ಪ್ರಖ್ಯಾತವಸ್ತು ಮತ್ತು ಉದಾತ್ತನಾಯಕರನ್ನು ವಿಧಿಸಿರುವುದು ಸರ್ವವೇದ್ಯ. ಕವಿಗಳಂತೂ ಇದನ್ನು ಚ-ತು ತಪ್ಪದೆ ಪಾಲಿಸಿದ್ದಾರೆ. ದೇಶಭಾಷೆಗಳಲ್ಲಿ ಕೂಡ ಈ ಪ್ರವೃತ್ತಿ ಸುಸ್ಥಿರವಾಗಿದೆ. ಸ್ಥಳಾಭಾವದ ಕಾರಣ ಕೇವಲ ಎರಡು ಉದಾಹರಣೆಗಳನ್ನು ನೆನೆಯಬಹುದು. ಒಂದು ಹನ್ನೆರಡನೆಯ ಶತಾಬ್ದದ ಕನ್ನಡಕವಿ ನಾಗಚಂದ್ರನ ಮಾತು; ಮತ್ತೊಂದು ಇಪ್ಪತ್ತನೆಯ ಶತಾಬ್ದದ ತೆಲುಗುಕವಿ ವಿಶ್ವನಾಥ ಸತ್ಯನಾರಾಯಣರ ನುಡಿ.
ನಾಯಕನನ್ಯನಾಗೆ ಕೃತಿಯಾಗದುದಾತ್ತಮುದಾತ್ತರಾಘವಂ
ನಾಯಕನಾಗೆ ವಿಶ್ರುತಮೆನಿಪ್ಪುದು ವಿಸ್ಮಯಕಾರಿಯಲ್ತು ಕಾ-
ಲಾಯಸದಿಂ ವಿನಿರ್ಮಿಸಿದ ಕಂಠಿಕೆ ಕಾಂಚನಮಾಲೆಯಂತುಪಾ-
ದೇಯಮೆನಿಕ್ಕುಮೇ ವಿಷಯಮೊಪ್ಪದೊಡಾವುದುಮೊಪ್ಪಲಾರ್ಕುಮೇ || (ರಾಮಚಂದ್ರಚರಿತಪುರಾಣ, ೧.೩೭)
ವ್ರಾಸಿನ ರಾಮಚಂದ್ರುಕಥ ವ್ರಾಸಿತಿವಂಚನಿಪಿಂಚುಕೋ ವೃಥಾ-
ಯಾಸಮುಗಾಕ ಕಟ್ಟುಕತಲೈಹಿಕಮಾ ಪರಮಾ ಯಟಂಚು ದಾ-
ಜೇಸಿನ ತಂಡ್ರಿಯಾಜ್ಞಯುನು ಜೀವುನಿ ವೇದನ ರೆಂಡುನೇಕಮೈ
ನಾ ಸಕಲೋಹವೈಭವಸನಾಥಮು ನಾಥಕಥನ್ ರಚಿಂಚೆದನ್ || (ರಾಮಾಯಣಕಲ್ಪವೃಕ್ಷ, ೧.೧.೭)